- ಅರ್ಧ ಶತಮಾನದಿಂದ ಈ ಕಾದಂಬರಿ ನನ್ನನ್ನು ಹಿಂಬಾಲಿಸಿದೆ. - ಜನವರಿ 29, 2025
- ಫೋಟೋ ವಲಸೆ - ಸೆಪ್ಟೆಂಬರ್ 18, 2022
ಪುರಾತನ ಕಾಲದ ಹೆಂಗಸರ ಕುರಿತು ಎನ್ನುವ ಕುತೂಹಲ ಹುಟ್ಟಿಸುವ ಉಪಶೀರ್ಷಿಕೆಯೊಂದಿಗೆ ಲೋಕಾರ್ಪಣೆಗೊಂಡ ಕೆ ಸತ್ಯನಾರಾಯಣರ “ಅಂಪೈರ್ ಮೇಡಂ ” ಎನ್ನುವ ಕಾದಂಬರಿ ಈಗಾಗಲೇ ಓದುಗರಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಕಾದಂಬರಿ ಮೂಡಿದ ಬಗೆಯ ಬಗ್ಗೆ ಸ್ವತಃ ಲೇಖಕರು ಅಭಿವ್ಯಕ್ತಿಸಿದ್ದು ಹೀಗೆ ..
ಸುಮಾರು 52 ವರ್ಷಗಳ ಹಿಂದೆ ಮಂಡ್ಯದ ಸಮೀಪದಲ್ಲಿರುವ ಹಳ್ಳಿಯೊಂದಕ್ಕೆ ಗೆಳೆಯರೊಬ್ಬರನ್ನು ನೋಡಲು ಹೋಗಿದ್ದೆ.ಭೇಟಿಯ ನಂತರ ಇಬ್ಬರೂ ವಾಪಸ್ ಬರುತ್ತಿದ್ದಾಗ, ಗ್ರಾಮದ ಪ್ರವೇಶ ಭಾಗದಲ್ಲಿ ನಡುವಯಸ್ಸನ್ನು ಮೀರಿದ ಹೆಂಗಸರೊಬ್ಬರು ಎದುರಾದರು. ಗೆಳೆಯ ಅವರನ್ನು ಪರಿಚಯಿಸಿದ. ಆಕೆ ದಣಿದಿದ್ದರು.ಮುಖದಲ್ಲಿ ಆಯಾಸವಿತ್ತು, ವ್ಯಗ್ರತೆಯಿತ್ತು. ಅವರಿಗೇ ಅವರ ಬಗ್ಗೆ ಯಾವ ರೀತಿಯ ಆಸಕ್ತಿಯೂ ಇರಲಿಲ್ಲವೆಂದು ಅವರ ವೇಶಭೂಷಣ, ಕೇಶವಿನ್ಯಾಸ, ಉಸಿರಾಟಕ್ಕಿಂತ ನಿಟ್ಟುಸಿರೇ ಮುಖ್ಯವಾದ ಆಂಗಿಕಭಾಷೆಯಿಂದ ವ್ಯಕ್ತವಾಗುತ್ತಿತ್ತು. ಬೆಂಗಳೂರಿನ ಪ್ರಸಿದ್ಧ ಕುಟುಂಬವೊಂದಕ್ಕೆ ಸೇರಿದ್ದ ಆಕೆ ತುಂಬಾ ಆಯಾಸದ ಧ್ವನಿಯಲ್ಲಿ ಎರಡು ಮೂರು ವಾಕ್ಯಗಳಲ್ಲಿ ತಮ್ಮ ಒಂಟಿತನದ ಬದುಕನ್ನು ಕುರಿತು ಹೇಳಿಕೊಂಡರು. ಏಕೆ ಅವರು ನನಗೆ ಆವತ್ತು ಸಿಕ್ಕಿದರು? ಏಕೆ ಎರಡು ಮೂರು ವಾಕ್ಯಗಳಲ್ಲೇ ತಮ್ಮ ಬದುಕನ್ನು ಕುರಿತು ಹೇಳಿಕೊಂಡರು?
ಎಂಟು ಹತ್ತು ವರ್ಷಗಳ ನಂತರ ಬೆಂಗಳೂರಿನಲ್ಲಿ ಆಕೆಯ ಕುಟುಂಬದ, ಸಮಾಜದ ಬೇರೆ ಬೇರೆ ವಲಯಗಳೊಡನೆ ನನಗೆ ಹಲವು ಸ್ತರಗಳ ಒಡನಾಟ ಬಂತು. ನನ್ನ ತಂಗಿ ಮತ್ತು ತಮ್ಮನ ಕುಟುಂಬ ಕೂಡ ಇವರೆಲ್ಲ ವಾಸಿಸಿದ, ವಾಸಿಸುತ್ತಿದ್ದ (ಕ್ರಮೇಣ ಕಣ್ಮರೆಯಾದ) ನಗರದ ಭಾಗದಲ್ಲೇ ವಾಸಿಸುತ್ತಿದ್ದರು. ಈ ಬಡಾವಣೆಗಳ ಸುತ್ತ ಬದುಕು ಕಟ್ಟಿಕೊಂಡಿದ್ದ, ಕಟ್ಟಿಕೊಳ್ಳಲಾಗದೇ ಹೋದ ಬೇರೆ ಸಮುದಾಯಗಳ ಜನ ಕೂಡ ಒಡನಾಟಕ್ಕೆ ಸಿಕ್ಕಿದರು. ಇವರೆಲ್ಲರ ಬದುಕಿಗೂ, ನನ್ನ ಬದುಕಿಗೂ ಪರಸ್ಪರ ಸಂಬಂಧ ಇದೆ, ಇವರೆಲ್ಲ ಅಸಾಮಾಜಿಕವಾಗಿ ಆದರೆ ಸಾಂಸಕೃತಿಕವಾಗಿ ಮತ್ತು ಮಾನವೀಯವಾಗಿ ನನ್ನ ಜ್ಞಾತಿಗಳು ಎಂಬುದು ಕಾದಂಬರಿಯನ್ನು ಬರೆಯುವಾಗ ತಿಳಿದು, ಮನಸ್ಸು ತುಂಬಿ ಬಂತು.
ಹನ್ನೆರಡು ಹದಿನೈದು ವರ್ಷಗಳ ನಂತರ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದಾಗ, ಎರಡು ಮೂರು ನಿಮಿಷದಲ್ಲಿ ತನ್ನ ಬದುಕಿನ ಬಗ್ಗೆ ಹೇಳಿಕೊಂಡಾಕೆಯ ಸಮುದಾಯದವರ ಒಡನಾಟ ಮತ್ತೆ ಸಿಕ್ಕಿತು. ಇವರೆಲ್ಲ ಬೆಂಗಳೂರಿಗೆ, ಕರ್ನಾಟಕಕ್ಕೆ, ಮೈಸೂರಿಗೆ ಆಗಾಗ್ಗೆ ಬಂದು ಹೋಗಿದ್ದರು. ಈ ಕಾದಂಬರಿಯಲ್ಲಿ ಬರುವ ಎಲ್ಲರನ್ನೂ ಭೇಟಿ ಮಾಡಿದ್ದರು.
ವಿವಾಹ, ಕುಟುಂಬ ವ್ಯವಸ್ಥೆಯಿಂದ ಹೊರಬಂದು, ಕಲಾವಿದೆಯಾಗಿ ತನ್ನ ಬದುಕನ್ನು, ತನ್ನ ಮಗಳ, ಮೊಮ್ಮಗಳ ಬದುಕನ್ನು ಕಟ್ಟಿಕೊಳ್ಳಲು ಹೋಗಿ ಹೈರಾಣಾಗಿದ್ದ, ಆದರೆ ಗೆಲ್ಲುತ್ತಿದ್ದ ಹಿರಿಯಾಕೆಯೊಬ್ಬರು ಇವರೆಲ್ಲರ ಬದುಕಿನಲ್ಲಿ ಪ್ರವೇಶಿಸಿಯೂ ಪ್ರವೇಶಿಸದ ಹಾಗೆ ನಿರ್ದೇಶಿಸುತ್ತಿದ್ದರು. “ನೋಡಿ ನನ್ನ ಮಗಳನ್ನು. ಮದುವೆ, ಮಕ್ಕಳು, family ಅಂತ ಅಡ್ಡದಾರಿ ಹಿಡಿಯಲು ಹೊರಟಿದ್ದಾಳಲ್ಲ” ಎಂದು ನನ್ನ ಬಳಿ ಒಮ್ಮೆ ಅಲವತ್ತುಕೊಂಡಾಗ, ಆ ಧೀಮಂತ ಮಹಿಳೆ, ನಾವೆಲ್ಲ ಬದುಕುತ್ತಿರುವ ರೀತಿಯನ್ನು ವ್ಯಾಖ್ಯಾನಿಸುತ್ತಿರುವಂತೆಯೂ, ಈ ಬರವಣಿಗೆಗೂ ಮುಂದಿನ ಬರವಣಿಗೆಗೂ ಬೇಕಾದ ದೃಷ್ಟಿಕೋನ, ಪ್ರಬುದ್ಧತೆಯನ್ನು ದಾನ ಮಾಡುತ್ತಿರುವಂತೆಯೂ ಕಂಡಿತು. ಸುಂದರಮ್ಮ ಎಂಬ ಕಲ್ಪಿತ ಹೆಸರಿರುವ ಆಕೆಗೂ, ಆಕೆ ಸೇರಿದ ನರಸೀಪುರ, ಮೂಗೂರು ಸೀಮೆಗೂ, ಅವರೆಲ್ಲರ ಕಳೆದು ಹೋದ ಬದುಕಿನ ವಿನ್ಯಾಸಕ್ಕೂ ಈ ಬರವಣಿಗೆ ನಾನಾ ರೀತಿಯಲ್ಲಿ ಋಣಿಯಾಗಿದೆ.
ಇದೆಲ್ಲ ಸೇರಿ ಒಂದು ಕಾದಂಬರಿಯಾಗುತ್ತದೆ ಎಂದು ಹಲವು ವರ್ಷಗಳಿಂದ ನನಗೆ ನಾನೇ ಹೇಳಿಕೊಂಡಿದ್ದರೂ, ಬರೆಯಲು ಧೈರ್ಯ ಬಂದಿರಲಿಲ್ಲ. ಈ ವರ್ಷದ ಮೊದಲ ಆರೇಳು ತಿಂಗಳು ಸಿಯಾಟಲ್ನಲ್ಲಿ ಮಗನ ಮನೆಯಲ್ಲಿ ಇದ್ದಾಗ ಬರೆಯುವ ಹೆಣಗಾಟ ಶುರುವಾಯಿತು. ಮೊದ ಮೊದಲ ಪುಟಗಳೊಡನೆ ಹೋರಾಡುತ್ತಿದ್ದಾಗ ನನ್ನ ಮಗ ಚಂದನ್, ಕಾದಂಬರಿ ಯಾತರ ಬಗ್ಗೆ, ಯಾರ ಬಗ್ಗೆ ಎಂದು ಕೇಳಿದ. ಅರ್ಧ ಶತಮಾನದ ಹಿಂದಿನ ನೆನಪು ಹೇಳಿದೆ. ಅಷ್ಟು ಹಿಂದಿನ ನೆನಪು ಈಗ ಬರವಣಿಗೆಯಲ್ಲಿ ರೂಪಾಂತರಗೊಳ್ಳುವಾಗ, ನೆನಪಿನ ಹಿಂದೆಯೇ ಬರವಣಿಗೆಗೆ ಬೇಕಾದ ಒತ್ತಡ ಮತ್ತು ಜೀವಂತಿಕೆಯನ್ನು ಕೂಡ ತಾನೇ ತಾನಾಗಿ ಎಳೆದುಕೊಂಡುಬರುತ್ತದೆ, ಪಟ್ಟು ಹಿಡಿದು ಬರಿ ಎಂದು ಪ್ರೋತ್ಸಾಹಿಸಿದ. ಅವನು ಹೇಳಿದ ಹಾಗೆಯೇ ಆಯಿತು. ಪ್ರಾರಂಭದ ಪ್ರಸವ ವೇದನೆಯ ನಂತರ ಬರವಣಿಗೆ ಕೈ ಹಿಡಿಯಿತು. ಬರವಣಿಗೆಯ ಜೊತೆಯಲ್ಲೇ ಇದ್ದ ಸುಮಿತ್ರ, ಧೃತಿ ಮತ್ತು ಇಶಾನಿಗೆ ಪ್ರೀತಿ.
ಬರೆಯುವುದಕ್ಕೆ ನಾನೇ ಬದ್ಧಗೊಳಿಸಿಕೊಳ್ಳಲು ಪ್ರಕಾಶ ನಾಯಕ್, ನರೇಂದ್ರ ಪೈ, ವಿಕಾಸ ಹೊಸಮನಿ, ಗುರುಪ್ರಸಾದ್ ಕಾಗಿನೆಲೆ, ಸುಧಾಕರ ದೇವಾಡಿಗ, ವಿನಾಯಕ ಕುಲಕರ್ಣಿ, ವಿದ್ಯಾಶಂಕರ್, ರಘುನಾಥ್, ಇವರಿಗೆಲ್ಲ ಹೇಳಿದೆ. ಕರಡನ್ನು ನಾಲ್ಕನೇ ಬಾರಿ ತಿದ್ದುತ್ತಿದ್ದಾಗ ಎಚ್.ಎಸ್.ಆರ್ ಅವರಿಗೂ ಹೇಳಿದೆ.
ಹೆಚ್.ಆರ್. ಪ್ರಕಾಶ್ ಬರವಣಿಗೆಯನ್ನು ಮುದ್ರಣಕ್ಕೆ ಸಿದ್ಧಗೊಳಿಸಿದರು. ನರೇಂದ್ರ ಪೈ ಮತ್ತು ಅನು ಬೆಳ್ಳೆ ರಾಘವೇಂದ್ರರಾವ್ ಪ್ರಕಟಣೆಗೆ ಒತ್ತಾಸೆಯಾಗಿ ಮುಂದೆ ಬಂದರು. “ಪುಸ್ತಕ ಮನೆ”ಯವರು ಪ್ರಕಟಿಸುತ್ತಿದ್ದಾರೆ.
ಇವರೆಲ್ಲರಿಗೂ ನನ್ನ ವಂದನೆಗಳು.
Thanks for sharing your thoughts. I really appreciate your efforts and I am waiting
for your next post thanks once again.