ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಫೋಟೋ ವಲಸೆ

ಕೆ. ಸತ್ಯನಾರಾಯಣ
ಇತ್ತೀಚಿನ ಬರಹಗಳು: ಕೆ. ಸತ್ಯನಾರಾಯಣ (ಎಲ್ಲವನ್ನು ಓದಿ)

     

ಫೋಟೋದಲ್ಲಿರುವವರು ಸತ್ತು ಹೋಗಿರುವುದಕ್ಕೂ, ನಾನು, ನಾವೆಲ್ಲ ಬದುಕಿ ಉಳಿದಿರುವುದಕ್ಕೂ ಏನು ವ್ಯತ್ಯಾಸವಿದೆ ಎನ್ನುವುದೇ ಪ್ರಶ್ನೆ. ಕಾಲ ಅಲ್ಲೇ ನಿಂತು ಹೋಗಿದೆಯಲ್ಲವೇ? ಎಲ್ಲವೂ ಮುಂದೆ ಹೋಗಿ, ಬದಲಾಗಿದೆ ಅನ್ನುವುದು ನಮ್ಮ ಮನಸ್ಸಿನ ಬಯಕೆಯೇ, ಭ್ರಮೆಯೇ?

ಡಾ.ಕೆ. ಸತ್ಯನಾರಾಯಣ ಅವರ “ಫೋಟೋ ವಲಸೆ” ಕಥೆಯಿಂದ

ಕಥೆ

ಒಂದು ಫೋಟೋ.

      ನಾನು ಅರವತ್ತು ವರ್ಷಗಳಿಂದ ನೋಡುತ್ತಾ ಬಂದದ್ದು. ಅದೇ ಮನೆ. ಅದೇ ಊರು. ಅದೇ ಗೋಡೆಯ ಮೇಲೆ.

      ಫೋಟೋದಲ್ಲಿರುವವರು ೧೯೬೦ರಲ್ಲಿ ತೀರಿಹೋದರು. ಆ ಫೋಟೋ ಮೊದಲಿನಿಂದಲೂ ನನಗೆ ಇಷ್ಟ. ಹಾಗೆಂದು ಯಾರಲ್ಲೂ ಹೇಳಲು ಹೋಗಿಲ್ಲ.

      ನನ್ನೊಳಗೆ ನನ್ನಿಷ್ಟವನ್ನು ಇಟ್ಟುಕೊಂಡು ಊರಿಗೆ ಹೋದಾಗಲೆಲ್ಲ ಅದರ ಮುಂದೆ ನಿಲ್ಲುವೆ. ಹಾಗೆ ನಿಲ್ಲುವುದು ಕೆಲವು ನಿಮಿಷಗಳು ಮಾತ್ರ. ಹಾಗೆ ನಿಲ್ಲುವುದಕ್ಕೆ ಸಾಧ್ಯವಾಗದೆ ಹೋದಾಗಲೂ ನನ್ನ ಮನಸ್ಸು, ದೃಷ್ಟಿ ಯಾವಾಗಲೂ ಫೋಟೋವನ್ನೇ ಧ್ಯಾನಿಸುತ್ತಿರುವುದು.

      ಫೋಟೋದಲ್ಲಿರುವವರು ಸತ್ತು ಹೋಗಿರುವುದಕ್ಕೂ, ನಾನು, ನಾವೆಲ್ಲ ಬದುಕಿ ಉಳಿದಿರುವುದಕ್ಕೂ ಏನು ವ್ಯತ್ಯಾಸವಿದೆ ಎನ್ನುವುದೇ ಪ್ರಶ್ನೆ. ಕಾಲ ಅಲ್ಲೇ ನಿಂತು ಹೋಗಿದೆಯಲ್ಲವೇ? ಎಲ್ಲವೂ ಮುಂದೆ ಹೋಗಿ, ಬದಲಾಗಿದೆ ಅನ್ನುವುದು ನಮ್ಮ ಮನಸ್ಸಿನ ಬಯಕೆಯೇ, ಭ್ರಮೆಯೇ? ಈ ಫೋಟೋ ಇಷ್ಟು ವರ್ಷಗಳ ಕಾಲವೂ ನನ್ನನ್ನು ಕನಸಿನಲ್ಲಿ, ನಿದ್ದೆಯಲ್ಲಿ, ಎಚ್ಚರದಲ್ಲಿ ಕಾಡಿದೆ. ವಿದೇಶಗಳಿಗೆ ಹೋದಾಗಲೂ ಮಧ್ಯ ರಾತ್ರಿಯಲ್ಲಿ ಎದುರಾಗಿ ತಟಕ್ಕನೆ ಎದ್ದು ಕುಳಿತುಬಿಡುತ್ತಿದ್ದೆ.

*****

      ಈ ಸಲ ಊರಿಗೆ ಹೋದಾಗ ಈ ಫೋಟೋ ಇರಬೇಕಾದ ಜಾಗದಲ್ಲಿ ಅಥವಾ ಇದುವರೆಗೆ ಇದ್ದ ಜಾಗದಲ್ಲಿ ಇರಲಿಲ್ಲ. ಹಾಗೆ ಅದು ಅಲ್ಲಿ ಇಲ್ಲದೆ ಇರುವುದನ್ನು ಯಾರೂ ವಿಶೇಷವಾಗಿ ಗಮನಿಸಿದಂತೆ, ಭಾವಿಸಿದಂತೆ ಕಾಣಲಿಲ್ಲ. ಫೋಟೋ ಇದ್ದ ಜಾಗ ಖಾಲಿಖಾಲಿಯಾಗಿತ್ತು. ಆದರೆ ಹಾಗೆ ಖಾಲಿಖಾಲಿಯಾದ ಜಾಗ ಕೂಡ ಫೋಟೋ ಇಲ್ಲದೆ ಇರುವುದಕ್ಕೆ ಹೊಂದಿಕೊಂಡಂತೆ ಕಾಣುತ್ತಿತ್ತು. ಗೋಡೆಯ ಒಂದು ಭಾಗ ಸ್ವಲ್ಪ ಉಬ್ಬಿದಂತೆ ಕಂಡಿತು. ಇನ್ನೊಂದು ಭಾಗ ಸ್ವಲ್ಪ ಮಸುಕಾಗಿತ್ತು.

      ನಾನು ಫೋಟೋ ಇಲ್ಲದ ಜಾಗವನ್ನು ಮತ್ತೆ ಮತ್ತೆ ನೋಡುತ್ತಿದ್ದೆ. ನೋಡುತ್ತಲೇ ಇದ್ದೆ. ಹಿಂದೆ ಫೋಟೋ ಇದ್ದಾಗ ನಾನು ಫೋಟೋ ನೋಡುವುದನ್ನು ಯಾರೂ ಗಮನಿಸಬಾರದೆಂಬ ಹಿಂಜರಿಕೆ, ಸಂಕೋಚದಿಂದ ನೋಡುತ್ತಿದ್ದೆ. ಈಗ ಹಾಗೇನೂ ಮಾಡದೆ, ಧೈರ್ಯವಾಗಿಯೇ ದೃಷ್ಟಿಸಿ, ದೃಷ್ಟಿಸಿ ನೋಡುತ್ತಿದ್ದೆ. ಅದನ್ನು ಕೂಡ ನನ್ನ ಬಂಧುಗಳು ಗಮನಿಸಲು ಹೋಗಲಿಲ್ಲ.

      ಫೋಟೋ ಒಳಗಿದ್ದವರ ಮಗನನ್ನು ಕೂಗಿದೆ. ಆತ ನನ್ನ ಸಮಕಾಲೀನ. ಫೋಟೋದಲ್ಲಿದ್ದವರು ನಿಮ್ಮ ಸ್ವಂತ ತಂದೆಯಲ್ಲವೇ? ಏಕೆ ಆ ಜಾಗದಿಂದ ಫೋಟೋ ತೆಗೆದಿರಿ? ನಾನು ಕೇಳಿದ ರೀತಿಯಲ್ಲೇ ಗಾಬರಿಯಿತ್ತು.

      ಎಡಗಣ್ಣನ್ನು ಒಂದು ಪಕ್ಕಕ್ಕೆ ಸರಿಸಿದಂತೆ ಮಾಡಿ ನನ್ನನ್ನು ನೋಡಿದ ಅವನ ದೃಷ್ಟಿಯಲ್ಲಿ ತಿರಸ್ಕಾರ, ಅಸಹನೆ ಎರಡೂ ಮಡುಗಟ್ಟಿತ್ತು. ಮುಂದೆ ನನಗೆ ಕೇಳಿಸಿದ ಧ್ವನಿಯಲ್ಲಿ ಗಡಸುತನ, ಮಾತೇ ತಲೆಯ ಮೇಲೆ ಮಟುಕಿದ ಹಾಗಾಯಿತು. ಇನ್ನೊಂದು ಫೋಟೋ ಪಕ್ಕದಲ್ಲೇ ಇದೆ ನೋಡಿ. ಗ್ರೂಪ್ ಫೋಟೋ . ಪಂಕ್ತಿಯಲ್ಲಿ ನಮ್ಮಪ್ಪನೂ ಇದ್ದಾರಲ್ಲ ಸಾಕು ಬಿಡಿ ಅಷ್ಟೇ ಅಂದ.

      ಮುಂದೆ ಮಾತನಾಡಲು ಅವನಿಗೆ ಇಷ್ಟವಿರಲಿಲ್ಲವೆಂದು ಕಾಣುತ್ತದೆ. ನನಗೆ ದುರ್ದಾನ ಕೊಟ್ಟು ಬಂಧುಗಳ ಗುಂಪಿನಲ್ಲಿ ಕರಗಿ ಹೋದ. ಖೇದವೆನಿಸಿತು. ಹಾಗೆ ನನಗೆ ದುರ್ದಾನ ಕೊಟ್ಟು ಹೋದವನ ಮೊಮ್ಮಗನ ನಾಮಕರಣದ ಶುಭ ಸಮಾರಂಭವದು. ಸಮಾರಂಭದ ಮಧ್ಯೆ ಆಗಾಗ್ಗೆ ಆತ ಬಂದು, ಫೋಟೋ ಇಲ್ಲದ ಖಾಲಿ ಜಾಗವನ್ನು, ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದ. ಒಂದು ಹಂತದ ನಂತರ ನಾನೇ ಅವನ ದೃಷ್ಟಿಯನ್ನು ತಪ್ಪಿಸಬೇಕಾಯಿತು.

*****

      ಶುಭ ಸಮಾರಂಭ ಇವನ ಮನೆಯಲ್ಲಿದ್ದರೂ, ನಮಗೆಲ್ಲ ಮಲಗಲು ವ್ಯವಸ್ಥೆಯಿದ್ದದ್ದು ಊರೊಳಗಿನ ಇನ್ನೊಬ್ಬ ಬಂಧುವಿನ ದೊಡ್ಡ ತೊಟ್ಟಿ ಮನೆಯಲ್ಲಿ.

      ಅಷ್ಟು ದೊಡ್ಡ ತೊಟ್ಟಿ ಮನೆಯಲ್ಲಿ ಮಲಗಲೆಂದೇ ಪ್ರತ್ಯೇಕ ಕೋಣೆಗಳಿರಲಿಲ್ಲ. ಇದ್ದ ಒಂದು ಕೋಣೆಯನ್ನು ಕೂಡ ಉಗ್ರಾಣವಾಗಿ ಉಪಯೋಗಿಸಿ ಎಲ್ಲ ರೀತಿಯ ಸಾಮಾನುಗಳನ್ನು ಅಲ್ಲಿ ರಾಶಿ ಹಾಕುತ್ತಿದ್ದರು. ನಮ್ಮ ಹಾಗೆ ಅತಿಥಿಗಳಾಗಿ ಬಂದವರಿಗೆಲ್ಲ ತೊಟ್ಟಿ ಎದುರಿಗೆ ಒಂದು ದೊಡ್ಡ ಜಮಖಾನ ಹಾಸಿಕೊಡುತ್ತಿದ್ದರು. ಹಾಗೆ ಜಮಖಾನದ ಮೇಲೆ ಮಲಗಿ ಆಕಾಶದಲ್ಲಿ ಕಾಣುವ ನಕ್ಷತ್ರಗಳ ಲೆಕ್ಕ ಹಿಡಿಯುತ್ತಾ, ಕನಸು ಕಾಣುತ್ತಾ ಮಲಗುವುದು ನನಗೆ ತುಂಬಾ ಇಷ್ಟ. ಇನ್ನೇನು ಮಲಗಬೇಕು, ಹಳೆ ಕಾಲದ ದೊಡ್ಡ ಗಡಿಯಾರ ಮನೆಗೆಲ್ಲ ಕೇಳಿಸುವಂತೆ ಟಿಕ್‌ಟಿಕ್‌ ಶಬ್ದ ಮಾಡುತ್ತಾ ಮಲಗಲು ಸಮಯ ಎಂದು ಸೂಚಿಸುತ್ತಿತ್ತು. ಎಲ್ಲರೂ ಒಬ್ಬೊಬ್ಬರಾಗಿ ಮಲಗುತ್ತಿದ್ದರು. ನಾನು ಕೂಡ ಇನ್ನೇನು ಮಲಗಬೇಕು ಎಂದುಕೊಳ್ಳುತ್ತಿದ್ದಾಗ ಫೋಟೋದವನ ಮಗ ತಲೆಗೆ ಒಂದು ಟವೆಲ್‌ ಸುತ್ತಿಕೊಂಡು ಬಂದು ಗಡಿಬಿಡಿಯಲ್ಲಿ ನನ್ನ ಪಕ್ಕ ಕುಳಿತ. ಕಣ್ಣು ಮತ್ತು ಮೂಗು ಮಾತ್ರ ಹೊರಗೆ ಇಣುಕಿದಂತಿತ್ತು. ಏದುಸಿರು, ತುಟಿ ಕಂಪಿಸುತ್ತಿರುವುದು ಕಾಣುತ್ತಿತ್ತು.

      ನಂಜನಗೂಡು ಜಯಮ್ಮ ಗೊತ್ತಲ್ಲ. ಎರಡು ತಿಂಗಳ ಹಿಂದೆ ಬಂದಿದ್ದಳು. ಫೋಟೋ ಬೇಕೆಂದು ಕೇಳಿದಳು. ಪದೇ ಪದೇ ಕೇಳಿದಳು. ಕೊಟ್ಟೆ. ಇಟ್ಟುಕೊಳ್ಳಲಿ ಬಿಡಿ ಎಂದು ಆಳವಾಗಿ ನನ್ನನ್ನು ದೃಷ್ಟಿಸಿದ.

      ಇದ್ಯಾವುದಕ್ಕೂ ನಾನು ಸಿದ್ಧನಿರಲಿಲ್ಲ. ಫೋಟೋ ಇಲ್ಲದ ಖಾಲಿ ಗೋಡೆ ಕಣ್ಣೆದುರಿಗೆ ಬಂತು. ಸಮಾಧಾನವಾಗಿಯೇ ಬಿಡಿಸಿ ಹೇಳಿದೆ.

      ಹಾಗಲ್ಲ, ಹಿರಿಯರು, ನಿಮ್ಮ ತಂದೆಯವರ ಫೋಟೋ ಅಲ್ಲವೇ. ನಿಮ್ಮ ಮನೆಯಲ್ಲಿರಬೇಕಾದ್ದು. ಎಲ್ಲವನ್ನೂ ಫೋಟೋ ಒಳಗಡೆಯಿಂದಲೇ ಗಮನಿಸಿ ಆಶೀರ್ವದಿಸುವುದು ಭೂಷಣವಲ್ಲವೇ. ನಿಮಗೂ ಶ್ರೇಯಸ್ಸಲ್ಲವೇ.

      ಸ್ವಲ್ಪ ಹೊರಗೆ ಬನ್ನಿ ಎಂದು ನನ್ನ ಎರಡೂ ಕೈಗಳನ್ನು ಮುಟ್ಟಿದ. ಸ್ಪರ್ಶದಲ್ಲಿ ಅಂಗಲಾಚುವಿಕೆ ಇತ್ತು. ಮುಖದಲ್ಲಿ ದೈನ್ಯವಿತ್ತು. ಎರಡಕ್ಕೂ ನಾನು ಸೋತೆ.

      ಹೊರಗೆ ಬಂದೆವು. ಇಡೀ ಬೀದಿಯಲ್ಲಿ ಒಂದೇ ದೀಪ ಉರಿಯುತ್ತಿದ್ದುದು. ಎಲ್ಲವೂ ಮಸುಕು ಮಸುಕಾಗಿತ್ತು.

      ನೋಡಿ, ನೀವು ಆಗಾಗ್ಗೆ ಬರತೀರಿ. ಫೋಟೋ ಮುಂದುಗಡೆ ನಿಂತುಕೋತೀರಿ. ಗಮನಿಸುತ್ತೀರಿ. ಗೌರವ ತೋರಿಸುತ್ತೀರಿ. ಇಲ್ಲೇ ಇರುವವರು, ಮತ್ತೆ ಮತ್ತೆ ನಮ್ಮ ಮನೆಗೆ ಬರುವವರು ಫೋಟೋವನ್ನು ನೋಡುವುದೂ ಇಲ್ಲ. ಗಮನಿಸುವುದೂ ಇಲ್ಲ. ನೋಡಿದವರ ಮುಖಭಾವದಲ್ಲೂ ಒಂದು ರೀತಿಯ ಉದಾಸೀನತೆ, ತಾತ್ಸಾರವನ್ನು ಕಂಡಿದ್ದೇನೆ. ಒಂದಿಬ್ಬರಂತೂ ತೀಕ್ಷ್ಣವಾಗಿ ದೃಷ್ಟಿಸಿ, ಮುಖ ಕೊಂಕು ಮಾಡಿ ಲೊಚಗುಟ್ಟಿದ್ದನ್ನು ಕೂಡ ಕೇಳಿಸಿಕೊಂಡು ಇನ್ನೇನು ಅವರ ಕಪಾಳಕ್ಕೆ ಹೊಡಿಯಬೇಕು ಎಂದು ಕೂಡ ಹೊರಟು ಬಲವಂತವಾಗಿ ಸಿಟ್ಟನ್ನು ಅದುಮಿಟ್ಟುಕೊಂಡಿದ್ದೇನೆ.

      ಫೋಟೋದಲ್ಲಿದ್ದವರು ನಮ್ಮ ಅಪ್ಪ ಅಂತೆ. ಆದರೇನು? ನನ್ನ ಜೀವನವನ್ನು, ನಮ್ಮ ಮನೆಯವರ ಬದುಕನ್ನೇ ಮುರಿದು ಹೋದರು. ನನ್ನ ಬಲಗೈ ನೋಡಿ. ಈ ವಯಸ್ಸಿನಲ್ಲೂ ಚೆನ್ನಾಗಿದೆ, ಸ್ವಾಧೀನದಲ್ಲಿದೆ. ನಮ್ಮಪ್ಪನಿಗೆ ಬಲಗೈ ಸ್ವಾಧೀನದಲ್ಲಿರಲಿಲ್ಲವಂತೆ. ಅದಕ್ಕೆ ನಾನು ಬಲಗೈನ ಬಳಸಲೇಬಾರದು, ಎಡಗೈನೂ ತಿರುಚಿಕೊಂಡೇ ಬಳಸಬೇಕೆಂದು ಬಂಧುಗಳು, ಊರಿನವರೆಲ್ಲ ನಿರೀಕ್ಷಿಸಿ, ನಿರೀಕ್ಷಿಸಿ, ನಾನು ಹಾಗೇ ಮಾಡಿಕೊಂಡು ಜೀವನ ಸವೆಸಿದ್ದೇನೆ. ಕಾಲಿನ ವಿಷಯಕ್ಕೂ ಹಾಗೇ ಮಾಡಿದರು. ನಮ್ಮಪ್ಪ ಎಡಗಾಲು ಎಳೆದು ಹಾಕುತ್ತಿದ್ದರಂತೆ. ನನಗೆ ಬಲಗಾಲು ಎಳೆದು ಹಾಕೋಕೆ ಇಷ್ಟ. ಇಲ್ಲ, ಎಡಗಾಲನ್ನೇ ಎಳೆದು ಹಾಕಲೇಬೇಕು ಅಂತ ನನಗೆ ಅರವತ್ತು ವರ್ಷ ಶಿಕ್ಷೆ ಕೊಟ್ಟರು. ನಮ್ಮಪ್ಪನಿಗೆ ಮಾಡಿದ ಮೋಸವನ್ನೆಲ್ಲ ನನಗೂ ಮಾಡಿದರು. ನಿಮ್ಮಪ್ಪ ಸಹಿಸ್ಕೋತಿರಲಿಲ್ಲವೇ? ನೀನೂ ಸಹಿಸಿಕೋ ಅಂದರು. ಈಗಲೂ ನೋಡಿ, ನಾನು ಈ ಗ್ರಾಮದಲ್ಲಿದ್ದಾಗ ನಮ್ಮಪ್ಪನ ತರನೇ ತೊದಲುತ್ತೀನಿ. ಊರಿಂದ ಹೊರಗಡೆ ಹೋದಾಗ ಮಾತಿನಲ್ಲಿ ತೊದಲಿರುವುದಿಲ್ಲ. ನಾನೊಂದು ಪೆಟ್ಟಿ ಅಂಗಡಿ ಇಟ್ಟುಕೊಂಡು ಸ್ವತಂತ್ರವಾಗಿ ಇರೋಕೆ ಹೊರಟಾಗಲೂ ನಮ್ಮಪ್ಪನ ಹೆಸರು ಹೇಳಿ, ಹೇಳಿ, ಸಾಲ ಉಳಿಸಿಕೊಂಡು ನನಗೆ ಮೋಸ ಮಾಡಿದರು.

      ಈಗ ನನ್ನ ಮಕ್ಕಳು ಓದಿ ಆಯಿತು. ಮಗನ ಮಗ ಎಂಜಿನಿಯರ್‌ ಕೂಡ ಆದ. ಈಗ ನಾನು ಬೆಂಗಳೂರು, ಮೈಸೂರಿಗೆ ಹೋಗಬೇಕಾದರೆ ಮೊದಲ ತರ ಬಸ್‌ಗೆ, ರೈಲಿಗೆ ಕಾಯೋಲ್ಲ. ಮೊಮ್ಮಗನ ಕಾರಲ್ಲೇ ಹೋಗ್ತೀನಿ. ಡ್ರೈವರನ್ನು ಕೂಡ ಇಟ್ಟುಕೊಂಡಿದ್ದೇವೆ. ನಮ್ಮಪ್ಪ ದೇವಸ್ಥಾನದಲ್ಲಿ ಈಡಗಾಯಿ ಒಡೆಯುವಾಗ ಕಾಯಿ ಚೂರಿಗೆ ಪೈಪೋಟಿಗೆ ಬಿದ್ದು, ನೆಲದ ಮೇಲೆಲ್ಲಾ ಹೊರಳಾಡಿ, ಮೈಯೆಲ್ಲಾ ಗಾಯ ಮಾಡಿಕೊಳ್ಳುತ್ತಿದ್ದನಂತೆ. ಈಗ ನಮ್ಮ ಮನೆ ಕಡೆಯಿಂದಲೇ ಒಂದಲ್ಲ, ಎರಡಲ್ಲ ಅಂತ ವರ್ಷಕ್ಕೆ ಏಳೆಂಟು ಅಭಿಷೇಕ ಮಾಡಿಸ್ತೀವೆ. ಇದೆಲ್ಲ ಯಾಕೆ ನಮ್ಮಪ್ಪನಿಗೆ ಗೊತ್ತಾಗಬೇಕು ಹೇಳಿ?

ನಮ್ಮಪ್ಪ ನನಗೇನೂ ಮಾಡಿಲ್ಲ ಅಂತ ನಾನು ಹೇಳ್ತಿಲ್ಲ. ನನಗೆ ಒಂದೂವರೆ ವರ್ಷ ಆಗಿದ್ದಾಗಲೇ ತೀರಿಹೋದರಂತೆ. ನನಗೆ ಅವನ ಮುಖದ ನೆನಪು ಕೂಡ ಇಲ್ಲ. ನಮ್ಮಣ್ಣ ಹದಿನೈದು ವರ್ಷದ ಹಿಂದೆ ತೀರಿಹೋದನಲ್ಲ, ಅವನಿಗೂ ಅಷ್ಟೇ, ಮೂರು ವರ್ಷವಾಗಿತ್ತಂತೆ ನಮ್ಮಪ್ಪ ತೀರಿಹೋದಾಗ. ಅವನಿಗೂ ಅಪ್ಪನನ್ನು ನೋಡಿದ ನೆನಪಿಲ್ಲ. ತಂದೆ ಇಲ್ಲದ ಮಕ್ಕಳು ಅಂತಾನೇ ನಮ್ಮನ್ನು ಕರೀತಾ ಇದ್ದದ್ದು ನಿಮಗೇ ಗೊತ್ತಿದೆ. ಅಮ್ಮ ಊರಲ್ಲಿರುವ ಬ್ರಾಹ್ಮಣರ ಮನೇಲೆಲ್ಲ ಅಡುಗೆ ಕೆಲಸ, ಸುತ್ತುಗೆಲಸ ಮಾಡುತ್ತಿದ್ದಳು. ಅವಳ ಜೊತೆ ನಾವೂ ಹೋಗಿ ತಿಂಡಿ ಸಾಮಾನು ಕದ್ದು ತಿಂದುಬಿಡುತ್ತಿದ್ದೆವು. ಬಾಸುಂಡೆ ಬರುವ ಹಾಗೆ ಊರ ತೋಟಿ ಕೈಲಿ ಹೊಡಿಸ್ತಾ ಇದ್ದಳು. ನನಗೆ ಪಂಚಾಯಿತಿ ಆಫೀಸಿನಲ್ಲಿ, ಅಣ್ಣನಿಗೆ ಹೈಸ್ಕೂಲ್‌ನಲ್ಲಿ ಜವಾನರ ಕೆಲಸ ಸಿಗುವ ತನಕ ಸುತ್ತಮುತ್ತಲ ಊರಿನ ತೆಂಗಿನ ತೋಟಗಳಲ್ಲಿ ಕಾಯಿ ಕದ್ದು ಸಿಕ್ಕಿ ಹಾಕಿಕೊಂಡು ಊರ ಪಂಚಾಯಿತೀಲಿ ದುಡ್ಡು ಕಟ್ಟಿ, ಅಮ್ಮ ನಮ್ಮನ್ನು ಮನೆ ಒಳಗೆ ಸೇರಿಸದೆ ಇಬ್ಬರನ್ನೂ ಜಗುಲಿ ಮೇಲೆಯೇ ತಿಂಗಳಾನುಗಟ್ಟಲೆ ಮಲಗಿಸುತ್ತಿದ್ದಳು. ಕೆಲಸ ಸಿಕ್ಕಿದ ಮೇಲೆ ಇಬ್ಬರೂ ಕಳ್ಳತನ ಬಿಟ್ಟೆವು. ನಮ್ಮಮ್ಮ ಊರೂರು ತಿರುಗಿ, ಕಂಡ ಕಂಡವರ ಕೈ ಕಾಲು ಕಟ್ಟಿ, ಹೆಣ್ಣು ತಂದು ನಮ್ಮಿಬ್ಬರಿಗೂ ಮದುವೆ ಮಾಡಿಸಿದಳು. ದೇವರು ಕೈ ಬಿಡಲಿಲ್ಲ. ಮಕ್ಕಳಿಗೆ ಚೆನ್ನಾಗಿ ವಿದ್ಯೆ ಹತ್ತಿತು. ಮೊಮ್ಮಕ್ಕಳು ಇನ್ನೂ ಚೆನ್ನಾಗಿ ಓದಿದರು. ಆದರೆ ಗ್ರಾಮದವರಾಗಲೀ, ಹಾಳು ನೆಂಟರಿಷ್ಟರಾಗಲೀ ಇದನ್ನೆಲ್ಲ ಒಪ್ಪೋಲ್ಲ. ನಮಗೆ ಮರ್ಯಾದೆ ಕೊಡೋಲ್ಲ. ಯಾವಾಗಲೂ ನಾವು ಕಾಣದ, ನಮ್ಮನ್ನು ಸಾಕದ, ಬೆಳೆಸದ ಅಪ್ಪನ ಹೆಸರನ್ನೇ ಹಿಡಿದು ಹಂಗಿಸ್ತಾರೆ, ಅವಹೇಳನ ಮಾಡ್ತಾರೆ. ನಲವತು ಐವತ್ತು ವರ್ಷ ಬಗ್ಗು ಬಡಿದರು. ಸಾವಿರ ಸಲ ಅನ್ನಿಸಿದೆ, ಹಾಳಾದ್ದು ನಮ್ಮಪ್ಪನ ಫೋಟೋ ತೆಗೆದು ಎಸೀಬೇಕು ಅಂತ. ಧೈರ್ಯ ಬರುತ್ತಿರಲಿಲ್ಲ. ನಂಜನಗೂಡಿನಿಂದ ಜಯಮ್ಮ ಬಂದು ಕೇಳಿದಳು ನೋಡಿ. ಕೈ ಮುಗಿದು ಕೊಟ್ಟೇಬಿಟ್ಟೆ. ಜಯಮ್ಮನ್ನು ಕೂಡ ನಮ್ಮಪ್ಪನಿಗೆ ಮದುವೆಗೆ ಕೇಳಿದ್ದರಂತೆ. ಗತಿಯಿಲ್ಲದೋರ ಮನೆಗೆ ಹೆಣ್ಣು ಕೊಡೋಲ್ಲ ಅಂತ ನಮ್ಮಜ್ಜಿಗೆ ಮುಖಕ್ಕೆ ಉಗಿದು ಕಳಿಸಿದ್ದರಂತೆ. ನಂಜನಗೂಡಿನವರ ದುರಹಂಕಾರಕ್ಕೆ ಮಟ್ಟ ಹಾಕಿದ ಹಾಗೆ ಜಯಮ್ಮನ ಗಂಡ ಮದುವೆಯಾದ ಒಂದು ವರ್ಷಕ್ಕೇ ಹಾವು ಕಡಿದು ಸತ್ತು ಹೋದನಂತೆ. ಆಮೇಲೆ ಜಯಮ್ಮ ಒಂದೆರಡು ಸಲ ಬಂದು ನಮ್ಮಪ್ಪನನ್ನು ಕಂಡಿದ್ದಳಂತೆ. ನಿನಗೆ ಮರ್ಯಾದೆ ಇಲ್ಲವೆ ಅಂತ ಎಲ್ಲರೂ ಬೈದದ್ದಕ್ಕೆ ಮತ್ತೆ ಬರಲೇ ಇಲ್ಲವಂತೆ. ಶ್ರೀಕಂಠೇಶ್ವರ ದೇವಸ್ಥಾನದ ಅಡುಗೆ ಮನೇಲಿ ಕೆಲಸ ಮಾಡಿಕೊಂಡು ಇದ್ದುಬಿಟ್ಟಳಂತೆ. ಅವಳೇ ಮೊನ್ನೆ ಬಂದು ಫೋಟೋ ಬೇಕು ಕೊಡಿ ಅಂತ ಕೇಳಿದಾಗ ಶನಿ ತೊಲಗಿ ಹೋಗಲಿ ಅಂತ ಕೊಟ್ಟುಬಿಟ್ಟೆ.

*****

ಇಷ್ಟು ಹೇಳಿದವನು ನನ್ನ ಎರಡೂ ಕೈಗಳನ್ನು ಬಲವಾಗಿ ಹಿಡಿದು ಹಣೆಗೆ ಒತ್ತಿಕೊಂಡು, ಇನ್ನು ನೀವು ನಮ್ಮ ಮನೆಗೆ ಬರಬೇಡಿ. ನೀವು ಬರುವುದೂ ಇಲ್ಲ. ಹೇಗಿದ್ದರೂ ನಿಮಗೆ ಫೋಟೋ ಇಲ್ಲವಲ್ಲ. ಎರಡೂ ಕೈಗಳನ್ನು ಮತ್ತೆ ಮತ್ತೆ ಹಣೆಗೆ ಒತ್ತಿಕೊಂಡು ನಮಸ್ಕಾರ ಮಾಡಿ, ಮಾಡುತ್ತಾ ದಡದಡನೇ ಹೊರಟೇಬಿಟ್ಟ.

      ಮಸುಕು ಬೆಳಕಿನ ಬೀದಿಯ ಕೊನೆಯಲ್ಲಿ ಮರೆಯಾಗುವ ತನಕ ಹಾಗೇ ನಿಂತಿದ್ದೆ. ದೂರದ ಬಂಧುಗಳೇ ಆಗಿದ್ದರೂ ಆ ಕುಟುಂಬದ ಇಷ್ಟೊಂದು ವಿವರಗಳು, ನೋವು, ಹತಾಶೆ ನನಗೆ ಗೊತ್ತೇ ಇರಲಿಲ್ಲ. ಪೋಟೋದಲ್ಲಿದ್ದ ನಮ್ಮ ಬಂಧು ಕೈಕಾಲು ಸ್ವಾಧೀನದಲ್ಲಿಲ್ಲದಿದ್ದರೂ, ಮಾತಿನಲ್ಲಿ ತೊದಲಿದ್ದರೂ, ಸುತ್ತಲಿನ ಎಂಟು ಹತ್ತು ಗ್ರಾಮಗಳಿಗೆ ನಾಟಕದ ಮೇಷ್ಟರಾಗಿ ಹೆಸರು ಸಂಪಾದಿಸಿದ್ದೇ ನನಗೆ ದೊಡ್ಡ ಆಶ್ಚರ್ಯ. ಕ್ಷಯ ರೋಗಕ್ಕೆ ಔಷಧಿ, ಮದ್ದು ತೆಗೆದುಕೊಳ್ಳಲು ತ್ರಾಣವಿಲ್ಲದೆ ಅಕಾಲ ಮರಣಕ್ಕೆ ತುತ್ತಾದವನು. ಆ ಕಾಲದಲ್ಲೇ ಕಲಾವಿದನಾಗಿ ಅಷ್ಟೊಂದು ಪ್ರಸಿದ್ಧಿಯಾಗಿದ್ದವನು ನಮ್ಮ ಫಿರ್ಕಾದಲ್ಲಿ ಇವನೊಬ್ಬನೇ ಎಂದು ಆರಾಧನಾ ಭಾವ ಬೆಳೆಸಿಕೊಂಡು ಬಂದಿದ್ದ ನನಗೆ ಆತನ ಫೋಟೋ ಬಗ್ಗೆ ಇನ್ನಿಲ್ಲದ ಆಕರ್ಷಣೆ, ಗೌರವ ಮೂಡಿತ್ತು.

      ಮತ್ತೆ ಮನೆ ಪ್ರವೇಶಿಸಿ ಜಮಖಾನದ ಮೇಲೆ ಉರುಳಿಕೊಳ್ಳುವ ಹೊತ್ತಿಗೆ ಎಲ್ಲರಿಗೂ ನಿದ್ದೆ ಬಂದಿತ್ತು. ಬಂಧುವು ಹೇಳಿ ಹೋದ ವಿವರಗಳಿಂದಾಗಿ ನನಗೆ ತಕ್ಷಣ ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ನಂಜನಗೂಡಿಗೆ ವಲಸೆ ಹೋದ ಫೋಟೋ ಒಳಗಿದ್ದ ಕಲಾವಿದನ ಮುಖಭಾವವೇ ಎದುರಿಗೆ ಬರುತ್ತಿತ್ತು. ಬಂಧುವು ಹೇಳಿ ಹೋದ ವಿವರದ ಹಿನ್ನೆಲೆಯಲ್ಲಿ ಈಗ ಫೋಟೋದಲ್ಲಿದ್ದವನ ಕೋಲು ಮುಖ, ಹುಬ್ಬಲ್ಲು, ಚಪ್ಪಟೆ ಮೂಗು, ಎಲ್ಲಿಂದೆಲ್ಲಿಗೋ ಬಾಚಿಕೊಂಡಿರುವ ಕೂದಲ ಜೊಂಪೆ, ನಗುವ ಪ್ರಯತ್ನ ಎಲ್ಲವೂ ನಿಚ್ಚಳವಾಗಿ ಕಾಣಿಸಿತು. ಅದನ್ನೆಲ್ಲ ಮತ್ತೆ ಮತ್ತೆ ಮನಸ್ಸಿನಲ್ಲಿ ಒಟ್ಟುಗೂಡಿಸಿಕೊಳ್ಳುತ್ತಾ ನಿದ್ದೆ ಬಂದದ್ದೇ ತಿಳಿಯಲಿಲ್ಲ.

*****

ಮತ್ತೆ ಬೆಳಿಗ್ಗೆ ಏಳುವ ಹೊತ್ತಿಗೆ ಫೋಟೋದವನ ಮಗ ಆಗಲೇ ಬಂದು ತಲೆಯ ಬದಿ ಕುಳಿತಿದ್ದ. ಇಬ್ಬರಿಗೂ ದೊಡ್ಡ ಸೋದರತ್ತೆ ಕಾಫಿ ತಂದುಕೊಟ್ಟರೂ, ಆತನಿಗೆ ಕಾಫಿ ಕೊಟ್ಟರೇ ಹೊರತು ಮಾತನಾಡಿಸಲಿಲ್ಲ.

ಚೆನ್ನಾಗಿ ನಿದ್ದೆ ಬಂತೇ ಎಂದು ಆತ ಕೇಳಿದಾಗ ಧ್ವನಿಯಲ್ಲಿ ಸ್ವಲ್ಪ ನಿರಾಳ ಇತ್ತು. ಮುಖಭಾವದಲ್ಲಿ ಸ್ನೇಹದ ಕಳೆ ಇತ್ತು.

      ಬನ್ನಿ ಹಾಗೇ ಕೆರೆ ಕಡೆ ಹೋಗಿ ಬರೋಣ ಎಂದು ಆಹ್ವಾನಿಸಿದ.

ಇಲ್ಲ, ಬಯಲು ಶೌಚದ ಬಳಕೆ ನನಗೆ ಎಂದೋ ತಪ್ಪಿ ಹೋಗಿದೆ ಎಂದು ನಾನು ಸಂಕೋಚದಲ್ಲಿ ಹೇಳಿದೆ.

      ಹಾಗೇನೂ ಬೇಡ, ಸುಮ್ಮನೆ ಒಂದು ಸುತ್ತು ಹೊಡೆದು ಬರೋಣ ಬನ್ನಿ ಎಂದು ಹೇಳುತ್ತಾ ಎದ್ದೇಬಿಟ್ಟ, ನಾನು ಅವನೊಡನೆ ಹೊರಟೇ ಹೊರಡುತ್ತೇನೆ ಎಂಬ ಭರವಸೆಯೊಡನೆ.

*****

      ಕೆರೆ ಬಯಲಿಗೆ ಕರೆದುಕೊಂಡು ಹೋಗಲಿಲ್ಲ. ಬಿರಬಿರನೆ ಹೆಜ್ಜೆಗಳನ್ನು ಹಾಕುತ್ತಾ ವಿರುದ್ಧ ದಿಕ್ಕಿನಲ್ಲಿದ್ದ ಗ್ರಾಮದೇವಸ್ಥಾನದ ಆಚೆಕಡೆಯಿದ್ದ ಸ್ಮಶಾನದೆಡೆಗೆ ನಡೆದ. ನಾನು ಕುತೂಹಲದಿಂದಲೇ ಹಿಂಬಾಲಿಸಿದೆ.

      ಹೆಣವನ್ನು ಸುಡುವವರ ಜಾತಿಗಳದ್ದು ನಾಲ್ಕೈದು ಮನೆಗಳು ಮಾತ್ರ ನಮ್ಮೂರಲ್ಲಿ ಇದ್ದದ್ದು. ಉಳಿದವರೆಲ್ಲ ಹೂಳುವವರು, ಸಮಾಧಿ ನಿರ್ಮಿಸುವವರು, ತುಳಸಿ ಕಟ್ಟೆ ಕಟ್ಟುವವರು. ಹೀಗೆ ಕಟ್ಟಿದ ಸಮಾಧಿ ಕಟ್ಟೆಗಳ ಮುಂದೆ ಇದ್ದ ಜಾಗದಲ್ಲಿ ಹೆಣ ಸುಡುವವರ ಜಾತಿಯವರಿಗಾಗಿ ಒಂದಿಷ್ಟು ಜಾಗ. ಅಲ್ಲಲ್ಲಿ ಮಡಕೆ ಚೂರು, ಗಳು, ಸೌದೆಯ ತುಂಡು ಕಾಣಿಸಿದವು. ಒಂದು ಬದಿಯಲ್ಲಿ ಕಟ್ಟಿಗೆಯನ್ನು ಜೋಡಿಸಲಾಗಿತ್ತು. ಅದರ ಮೇಲೆ ಚಾಪೆ-ದಿಂಬು ಕೂಡ ಇತ್ತು.

      ನೀವು ಇಲ್ಲೇ ನಿಂತಿರಿ. ಒಂದು ನಿಮಿಷ ಬಂದೆ ಎಂದವನೇ ಸ್ಮಶಾನದ ಆಚೆ ಕಡೆಗಿದ್ದ ಪಾಳುಗುಡಿ ಕಡೆಗೆ ನಡೆದ. ಪಾಳುಗುಡಿಯೊಳಗೆ ಹೋದವರು ಯಾರೂ ಇಲ್ಲ. ಬರೀ ಹುತ್ತ, ಗೆದ್ದಲು, ಮುಳ್ಳು, ಲಂಟಾನಾ. ನೂರಿನ್ನೂರು ವರ್ಷಗಳ ಹಿಂದೆ ನೇಣು ಹಾಕಿಕೊಂಡಿದ್ದವರನ್ನು ಮಾತ್ರ ಅಲ್ಲಿ ಹೂಳುತ್ತಿದ್ದರಂತೆ. ಇಲ್ಲ, ನಮಗೂ ಕೂಡ ಉಳಿದವರಂತೆ ಊರಿನ ಸ್ಮಶಾನದಲ್ಲೇ ಶಾಸ್ತ್ರಾಚಾರದ ಪ್ರಕಾರ ಒಪ್ಪ ಮಾಡಬೇಕು ಅಂತ ನೇಣು ಹಾಕಿಕೊಂಡು ಸತ್ತವರ ದೆವ್ವಗಳೆಲ್ಲ ಯಾವಾಗಲೂ ಗಲಾಟೆ ಮಾಡುತ್ತಾ ಪಾಳುಗುಡಿಯ ಸುತ್ತ ಅಲೆದಾಡುತ್ತಿದ್ದು, ಗುಡಿಯ ಹತ್ತಿರ ಬಂದವರನ್ನೆಲ್ಲ ದೆವ್ವವಾಗಿ ಹಿಡಿದುಕೊಂಡು ಅವರೆಲ್ಲ ರಕ್ತ ಕಾರಿ ಸಾಯುತ್ತಿದ್ದರಂತೆ. ಹೀಗಾಗಿ ಯಾರೂ ಎಂದೂ ಗುಡಿಯೊಳಗೆ ಹೋಗುತ್ತಲೇ ಇರಲಿಲ್ಲ. ಈ ಬಂಧು ಏಕೆ ಹೀಗೆ ಒಳಗೆ ಹೋದ?

      ಸ್ವಲ್ಪ ಹೊತ್ತಾಯಿತು. ಉದ್ವೇಗದಿಂದ ಓಡಿ ಬಂದ. ಒಂದು ಗೂಡೆ, ಗೂಡೆ ಒಳಗಡೆ ಕಂದು, ಕಪ್ಪು ಬಣ್ಣಕ್ಕೆ ತಿರುಗಿರುವ ಹತ್ತಿಯ ಉಂಡೆ, ಹರಕಲು ಬಟ್ಟೆ, ಬಾಚಣಿಗೆ ಚೂರು.

      ನನ್ನೆದುರಿಗೆ ಇಟ್ಟು ನಮಸ್ಕಾರ ಮಾಡಿದ. ಈಗ ಮುಖದಲ್ಲಿ ವಿನಯವಿತ್ತು, ಪ್ರಶಾಂತಿಯೂ ಇತ್ತು.

      ನೋಡಿ, ನಮ್ಮ ತಂದೆ ಹೆಣವನ್ನು ಇಲ್ಲೇ ಸ್ಮಶಾನದಲ್ಲಿ ಸುಟ್ಟರಂತೆ. ನನಗೇನೂ ನೆನಪಿಲ್ಲ. ಇಲ್ಲೇ ಮೇಲುಗಡೆ ಇರುವ ದೊಡ್ಡಿಯಲ್ಲಿ ಸ್ಕೂಲಿಗೆ ಹೋಗುತ್ತಿದ್ದೆ. ಸುಟ್ಟು ಕರಕಲಾಗಿರುವ ನೆಲದ ಮೇಲೆ ಇದೊಂದು ದಿಂಬು ಬಿದ್ದಿತ್ತು. ಇದು ನಿಮ್ಮಪ್ಪನದೇ ದಿಂಬು. ಹೆಣಾನ ಚಟ್ಟದ ಮೇಲೆ ಮಲಗಿಸಿಕೊಂಡು ಬರುವಾಗ ತಲೆಗೆ ದಿಂಬು ಇಟ್ಟುಕೊಂಡು ಬಂದಿದ್ದರು. ಹಾಗೇ ಹೆಣವನ್ನು ಚಟ್ಟದ ಮೇಲೆ ಮಲಗಿಸಬೇಕು ಅಂತ ನಿಮ್ಮಪ್ಪ ಆಣೆ, ಭಾಷೆ ಮಾಡಿಸಿಕೊಂಡಿದ್ದನಂತೆ. ಇಲ್ಲೇ ಎದುರುಗಡೆ ಗದ್ದೆಯಲ್ಲಿ ಕಬ್ಬು ಕೊಯ್ಯುತ್ತಿದ್ದವರು ನನ್ನನ್ನು ಕೂರಿಸಿಕೊಂಡು ಒಂದು ದಿನ ಹೇಳಿದರು. ಆಮೇಲೆ ಪ್ರತಿದಿನವೂ ಸ್ಕೂಲಿಗೆ ಹೋಗುವಾಗ, ಬರುವಾಗ ಈ ದಿಂಬನ್ನೇ ನೋಡುತ್ತಿದ್ದೆ., ಬಿಸಿಲಿಗೆ, ಮಳೆಗೆ, ಎಲ್ಲದಕ್ಕೂ ಒಡ್ಡಿಕೊಂಡು ಒಂದೇ ಕಡೆ ಬಿದ್ದಿರುತ್ತಿತ್ತು. ಯಾವುದಾದರೂ ಹೊಸ ಹೆಣ ಸುಡೋಕ್ಕೆ ಬಂದಾಗ ದಿಂಬನ್ನು ತೆಗೆದು ಆ ಕಡೆಗೆ, ಈ ಕಡೆಗೆ ಎಸೆಯುತ್ತಿದ್ದರು. ಯಾರಿಗೂ ಗೊತ್ತಾಗದ ಹಾಗೆ ನಾನು ಆಗಾಗ್ಗೆ ಬಂದು ದಿಂಬನ್ನು ನೋಡ್ತಾ ಕೂತುಕೊಳ್ಳುತ್ತಿದ್ದೆ. ನನಗೊಬ್ಬನಿಗೆ ಬಿಟ್ಟರೆ ಕ್ಲಾಸಿನಲ್ಲಿ ಎಲ್ಲ ಮಕ್ಕಳಿಗೂ ಅಪ್ಪ ಇದ್ದರು. ಅವರೆಲ್ಲ ಸ್ಕೂಲಿಗೆ ಆಗಾಗ್ಗೆ ಬಂದು ವಿಚಾರಿಸುತ್ತಿದ್ದರು. ಈ ದಿಂಬೇ ನನ್ನಪ್ಪ ಅನಿಸಿ ದಿನಾ ಎದುರಿಗೆ ಬಂದು ಕೂತುಕೊಳ್ಳುತ್ತಿದ್ದೆ. ಪಾಪ, ನಮ್ಮಪ್ಪನಿಗೆ ಯಾಕೆ ಇಷ್ಟೊಂದು ಬಿಸಿಲು ಕಾಟ ಏಕೆ ಕೊಡಬೇಕು, ಯಾಕೆ ಅನಾಥವಾಗಿ ಬಿದ್ದಿರಬೇಕು ಎನಿಸಿ, ಎನಿಸಿ, ಪಾಳುಗುಡಿ ಒಳಗಡೆ ತಗೊಂಡೋಗಿ ಗರ್ಭಗುಡಿಯಲ್ಲಿ ಇಟ್ಟೆ. ಇಲಿಗಳು ಕಚ್ಚಿ ಹಾಕುತ್ತಿದ್ದವು. ಗರ್ಭಗುಡಿಯಿಂದ ತೆಗೆದು ಮರದ ಕೊಂಬೆಯ ಮೇಲಿಟ್ಟೆ. ಇದೆಲ್ಲ ಯಾರಿಗೂ ಗೊತ್ತಿಲ್ಲ. ಯಾರಿಗೂ ಹೇಳೋಕೂ ಹೋಗಿಲ್ಲ, ಈವತ್ತಿನವರೆಗೂ.

      ಎರಡು-ಮೂರು ವರ್ಷ ನಾನು, ನನ್ನಣ್ಣ ಸ್ಕೂಲಿಗೆ ಹೋಗಿರಬೇಕು. ಅಮ್ಮ ಸ್ಕೂಲು ಬಿಡಿಸಿಬಿಟ್ಟಳು. ಅವಳ ಹಿಂದೆ ತಿರುಗುವುದು, ಅವಳು ಕೆಲಸ ಮಾಡುತ್ತಿದ್ದ ಮನೆಗಳಲ್ಲೇ ತಿಂಡಿ, ಸಣ್ಣ-ಪುಟ್ಟ ಸಾಮಾನು ಕದಿಯುವುದು, ತೆಂಗಿನಮರದಿಂದ ಕದ್ದು ಕಾಯಿ ಕೀಳುವುದು ಎಲ್ಲ ಕಲಿತುಕೊಂಡದ್ದು ಆವಾಗಲೇ. ನೆಂಟರಿಷ್ಟರು, ಊರವರು, ಪಕ್ಕದ ಗ್ರಾಮಸ್ಥರು ಎಲ್ಲ ಆವಾಗಲೇ ನಮ್ಮಪ್ಪನನ್ನು ಅವಹೇಳನ ಮಾಡಿ ಮಾತಾಡ್ತಾ ಇದ್ದರು. ಅವನ ಮಕ್ಕಳಾದ ನಾವೂ ಕೂಡ ಗತಿಗೆಟ್ಟವರೆಂದು, ಕೆಲಸಕ್ಕೆ ಬಾರದವರೆಂದು, ಯಾವ ರೀತಿಯ ಏಳಿಗೆಯನ್ನು ಸಾಧಿಸುವುದಿಲ್ಲವೆಂದು ಪ್ರತಿ ದಿನವೂ, ಪ್ರತಿ ಕ್ಷಣವೂ ನಮಗೆ ಶಾಪದ ಮೊಳೆ ಹೊಡೆಯುತ್ತಿದ್ದರು. ಇಷ್ಟೆಲ್ಲದರ ಮಧ್ಯೆಯೂ ಅಮ್ಮ ಮಾತ್ರ ಆಗಾಗ್ಗೆ ಅಪ್ಪನ ಫೋಟೋನ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಡೋಳು. ಯಾವಾಗಲಾದರೂ ಒಂದೊಂದು ಸಲ ಅರಿಷಿನ ಕುಂಕುಮ ಇಟ್ಟು ಪೂಜೆ ಮಾಡೋಳು. ಕಣ್ಣೀರು ಹಾಕುತ್ತಾ ಕೂರುವಳು.

      ಜನರೆಲ್ಲ ಅಪ್ಪನ್ನ ಎಷ್ಟು ಅವಹೇಳನ ಮಾಡ್ತಾ ಇದ್ದರು ಅಂದರೆ, ನನಗೆ ಯಾವಾಗಲೂ ಅಪ್ಪನ ಮೇಲೆ ಸಿಟ್ಟು ಬರೋದು. ಹೇಗಿದ್ದರೂ ಅಷ್ಟು ಬೇಗ ಸಾಯುತ್ತಿದ್ದ, ನಮ್ಮನ್ನೆಲ್ಲ ಯಾಕೆ ಹುಟ್ಟಿಸಿದ, ಯಾಕೆ ಬಿಟ್ಟು ಹೋದ ಎಂದು ಯಾರಲ್ಲೂ ಕೇಳುವ ಹಾಗಿಲ್ಲ. ಎಷ್ಟೋ ವರ್ಷ ಈ ದಿಂಬನ್ನು ನಾನು ಬಂದು ನೋಡಿರಲೂ ಇಲ್ಲ. ಆದರೆ ಅಪ್ಪನ ಅವಹೇಳನ ಹೆಚ್ಚಾದಷ್ಟೂ ನಮ್ಮ ದಿಕ್ಕು, ದೆಸೆ ಗೊತ್ತಾಗದೆ ಕಷ್ಟಗಳು ಹೆಚ್ಚಾಗುತ್ತಾ ಬಂದು ಕಡೆಗೆ ಹಾಳಾದದ್ದು ಅವನ ಫೋಟೋ ತೆಗೆದುಕೊಂಡು ಹೋಗಿ ಎಲ್ಲಾದರೂ ಎಸೀಬೇಕು ಅಂತಲೂ ಅನ್ನಿಸೋದು. ಹಾಗೆಯೇ ಯಾರಿಗೂ ಗೊತ್ತಾಗದ ಹಾಗೆ ಮತ್ತೆ ಈ ಪಾಳುಗುಡಿಯ ಹತ್ತಿರ ಬಂದು ದಿಂಬನ್ನು ಮುಂದೆ ಇಟ್ಟುಕೊಂಡು ನಾನು ಕೂಡ ಊರಿನ ಎಲ್ಲ ಜನರಂತೆ ಅಪ್ಪನನ್ನು ಬೈಯುತ್ತಾ ಕೂತಿರುತ್ತಿದ್ದೆ. ಈಗ ನಮ್ಮಮ್ಮ ಇಲ್ಲ. ಅಣ್ಣ ಕೂಡ ತೀರಿ ಹೋಗಿದ್ದಾನೆ. ನಂಜನಗೂಡು ಜಯಮ್ಮ ಕೂಡ ನಮ್ಮಪ್ಪನ್ನ ಮದುವೆ ಆಗದೆ ತಪ್ಪು ಮಾಡಿದೆ ಅಂತ ಒಪ್ಪಿಕೊಂಡು ಮೊನ್ನೆ ಮೊನ್ನೆ ಫೋಟೋ ತಗೊಂಡ್ಹೋಗಿದ್ದಾಳೆ. ನನ್ನ ಮಕ್ಕಳಿಗಾಗಲಿ, ಸೊಸೆಯರಿಗಾಗಲಿ, ಯಾರಿಗೂ ಈ ದಿಂಬು, ಹರಿದು ಹೋದ ಬಟ್ಟೆ, ಚಿಂದಿ ಚಿಂದಿಯಾಗಿರುವ ಹತ್ತಿಯ ಬಗ್ಗೆ ಏನೂ ಗೊತ್ತಿಲ್ಲ.

      ನೀವು ನನ್ನನ್ನು ಆ ಫೋಟೋ ಎಲ್ಲಿ ಅಂತ ಮತ್ತೆ ಮತ್ತೆ ಕೇಳಿದ ಮೇಲೆ, ನಿಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದು ಇದನ್ನೆಲ್ಲ ಹೇಳಿ ನಿಮಗೆ ತೋರಿಸಬೇಕು ಎನ್ನಿಸಿತು.

      ಇದನ್ನೆಲ್ಲ ಹೇಳ್ತಾ ಹೇಳ್ತಾ, ಹೇಳಿಕೋತಾ ಈ ಹರಿದ ಬಟ್ಟೆ, ಹತ್ತಿಯ ಚೂರು ಎಲ್ಲ ತಗೊಂಡ್ಹೋಗಿ ಮನೇನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಪೆಟ್ಟಿಗೆ ಒಳಗೇ ಇಟ್ಟಕೋಬೇಕು ಅಂತ ಅನ್ನಿಸುತ್ತಾ ಇದೆ.

ಹಾಗೆಂದು ಹೇಳಿದ್ದು ಮಾತ್ರವಲ್ಲ ನಿರ್ಧಾರ ಕೂಡ ಮಾಡಿಕೊಂಡಂತೆ ಆತ್ಮವಿಶ್ವಾಸದಿಂದ ನನ್ನನ್ನು ಸ್ಮಶಾನದಿಂದ ಬಂಧುಗಳ ಮನೆಗೆ ಕರೆದುಕೊಂಡು ಬಂದುಬಿಟ್ಟ. ಬರ‍್ತೀನಿ, ನಿಮಗೆ ಬೆಂಗಳೂರಿಗೆ ಹೊರಡಲು ತುಂಬಾ ತಡಮಾಡಿದೆ ಎಂದ. ಆತನ ಮುಖದ ಸಮಾಧಾನ, ಪ್ರಸನ್ನ ಭಾವ ನನಗೂ ಇಷ್ಟವಾಯಿತು.

      ಮನೆ ಕಡೆ ಹೋಗಲು ನಾಲ್ಕು ಹೆಜ್ಜೆ ಹಾಕಿದವ ಮತ್ತೆ ನನ್ನ ಬಳಿಗೆ ಬಂದು ನಿಂತುಕೊಂಡು, ಪಿಸುಮಾತಿನಲ್ಲೆಂಬಂತೆ, ಆದರೂ ಸ್ಪಷ್ಟವಾಗಿ ಹೇಳಿದ್ದು –

      “ಹರಿದ ಬಟ್ಟೆ, ಹತ್ತಿಯ ಚೂರುಗಳನ್ನೆಲ್ಲ ಯಾರಿಗೂ ಗೊತ್ತಾಗದ ಹಾಗೆ ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಕೋತೀನಿ ಅಂದೆನಲ್ಲ, ಹೌದು, ಖಂಡಿತವಾಗಿ ಇಟ್ಕೋತೀನಿ. ನಂಜನಗೂಡು ಕಡೆ ಹೋದಾಗ ಜಯಮ್ಮನ ಮನೆಗೂ ಹೋಗಿ ಫೋಟೋದು ಕೂಡ ಒಂದು ಪ್ರತಿ ಮಾಡಿಸಿಕೊಂಡು ಬಂದು ಹಿಂದೆ ಇದ್ದ ಕಡೇನೇ ಹಾಕ್ತೀನಿ. ನೀವು ಮುಂದಿನ ಸಲ ಬಂದಾಗ ನೋಡುವಿರಂತೆ.”