- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
- ಜೂಲಿಯಸ್ ಸೀಸರ್ ಅಂಕ -೫ - ಜನವರಿ 30, 2022
ಅಂಕ 2 ಆರಂಭ
ದೃಶ್ಯ 1
ಬಹುಶಃ ಸಿಸಿಲಿ
ಪಾಂಪಿ, ಮೆನೆಕ್ರೆಟಿಸ್, ಮತ್ತು ಮೆನಾಸ್ ಯುದ್ಧ ಶೈಲಿಯಲ್ಲಿ ಪ್ರವೇಶ
ಪಾಂಪಿ. ಮಹಾದೈವಗಳು ನ್ಯಾಯವಂತರಾಗಿದ್ದರೆ, ಅವು ನ್ಯಾಯವಂತ ಮನುಷ್ಯರಿಗೆ ಸಹಾಯಮಾಡಬೇಕು.
ಮೆನಾಸ್. ಪಾಂಪಿ, ಅವು ಯಾವುದನ್ನು ತಡಮಾಡುತ್ತವೋ ಅದನ್ನು ಕೊಡದಿರುತ್ತವೆ ಎಂದು ಅರ್ಥವಲ್ಲ.
ಪಾಂಪಿ. ಆದರೆ ಇಲ್ಲಿ ನಾವವುಗಳ ಪೀಠಕ್ಕೆ ಪ್ರಾರ್ಥಿಸುತ್ತಿರುವ ವೇಳೆ, ಅಲ್ಲಿ ನಾವು ಕೋರುವ ವಸ್ತು ಜೀರ್ಣವಾಗಿರುತ್ತದೆ.
ಮೆನಾಸ್. ನಮ್ಮನ್ನು ತಿಳಿಯದ ನಾವು ಹಲವು ಸಲ ನಮ್ಮ ಕೆಡುಕನ್ನೆ ಕೋರುತ್ತೇವೆ, ಎಲ್ಲಾ ತಿಳಿದಿರುವ ಶಕ್ತಿಗಳು ಅದನ್ನು ನಿರಾಕರಿಸಿದರೆ, ಅದು ನಮ್ಮ ಒಳಿತಿಗೇ ಅಲ್ಲವೇ? ಆದ್ದರಿಂದ ಪ್ರಾರ್ಥನೆಯಲ್ಲಿ ನಷ್ಟವಾದ್ದು ನಮ್ಮ
ಲಾಭವಾಗುತ್ತದೆ.
ಪಾಂಪಿ. ನಾನು ಗೆಲ್ಲುವುದು ಖಂಡಿತ. ಜನ ನನ್ನನ್ನು ಪ್ರೀತಿಸುತ್ತಾರೆ; ಸಮುದ್ರ ನನ್ನ ವಶವಿದೆ; ನನ್ನ ಸೈನ್ಯಕ್ಕೆ ಈಗ ಶುಕ್ಲಪಕ್ಷ, ಎಲ್ಲಾ ಲಕ್ಷಣಗಳೂ ಹೇಳುತ್ತವೆ ಅದು ಹುಣ್ಣಿಮೆಯ ತಲಪುವುದು. ಈಜಿಪ್ಟಿನಲ್ಲಿ ಮಾರ್ಕ್ ಆಂಟನಿ ಮೇಜವಾನಿಗೆ ಕೂತಿದ್ದಾನೆ, ದೇಶದ ಹೊರಗೆ ಯಾವ ಯುದ್ಧಗಳನ್ನೂ ಅವನು ಎಸಗನು. ಸೀಸರ್ ಮನಸೋತಲ್ಲಿ ಹಣಗಳಿಸುತ್ತಾನೆ. ಲೆಪಿಡಸ್
ಇಬ್ಬರನ್ನೂ ಉಬ್ಬಿಸುವವ, ಇಬ್ಬರಿಂದಲೂ ಉಬ್ಬಿಸಲ್ಪಡುವವ; ಆದರೆ ಅವನು ಯಾರನ್ನೂ ಪ್ರೀತಿಸುವುದಿಲ್ಲ, ಯಾರ ಬಗ್ಗೆಯೂ ಅವನಿಗೆ ಕಾಳಜಿಯಿಲ್ಲ.
ಮೆನಾಸ್. ಸೀಸರ್ ಮತ್ತು ಲೆಪಿಡಸ್ ಯುದ್ಧರಂಗದಲ್ಲಿದ್ದಾರೆ. ಭಾರೀ ಬಲವಿದೆ ಅವರ ಬಳಿ.
ಪಾಂಪಿ. ಈ ಸುದ್ದಿ ನಿನಗೆ ಎಲ್ಲಿಂದ ಸಿಕ್ಕಿತು? ಇದು ಶುದ್ಧ ಸುಳ್ಳು.
ಮೆನಾಸ್. ಸಿಲ್ವಿಯಸ್ ಹೇಳಿದ್ದು.
ಪಾಂಪಿ. ಅವನು ಕನಸು ಕಾಣುತ್ತಿರಬೇಕು. ಇಬ್ಬರೂ ಸೇರಿ ಆಂಟನಿಗೆ ಕಾಯುತ್ತ ರೋಮಿನಲ್ಲಿದ್ದಾರೆಂದು ನನಗೆ ಗೊತ್ತಿದೆ.
ಆದರೆ ಕಾಮಿನಿ ಕ್ಲಿಯೋಪಾತ್ರ, ಬೇಟದ ಎಲ್ಲಾ ಯಕ್ಷಿಣಿಗಳೂ ನಿನ್ನ ಒಣದುಟಿಗಳನ್ನು ಮಿದುಗೊಳಿಸಲಿ! ಮೈಮಾಟದ ಜತೆ ಮಂತ್ರಮಾಟ, ಎರಡರ ಸಂಗ ಅತಿಕಾಮ ರಸಗವಳದಲ್ಲಿ ಲಂಪಟನ ಬಂಧಿಸಲಿ, ಮದ್ಯದ ಬಿಸಿಗೆ ಹೊಗೆಯಾಡಲಿ ತಲೆ.
ಸಾಕೆನಿಸದ ರುಚಿಯ ಸಾಧನಗಳಿಂದ ಅವನ ಹಸಿವ ಹೆಚ್ಚಿಸಲಿ ಪಾಕವಿದ್ಯಾಪ್ರವೀಣರು, ನಿದ್ದೆ ಮತ್ತು ಭೋಜನ ಮರೆಯಿಸಲಿ ಅವನ ಆತ್ಮಗೌರವವ — ವೈತರಣೀ ನದಿಯಲ್ಲಿ ಮುಳುಗುವವರೆಗೆ.
ವೇರಿಯಸ್ನ ಪ್ರವೇಶ
ಏನು ವೇರಿಯಸ್, ಏನು ವಿಷಯ?
ವೇರಿಯಸ್. ಈ ವಿಷಯವಂತೂ ನಾನು ಹೇಳಲೇಬೇಕು: ಮಾರ್ಕ್ ಆಂಟನಿ ಯಾವ ಗಳಿಗೆಯಲ್ಲಾದರೂ ರೋಮಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಈಜಿಪ್ಟ್ ಬಿಟ್ಟು ಸಾಕಷ್ಟು ಕಾಲವಾಯಿತು.
ಪಾಂಪಿ. ಇದಕ್ಕಿಂತ ಲಘುವಾದ ವಿಷಯಕ್ಕೆ ನಾನು ಹೆಚ್ಚು ಕಿವಿಗೊಡುತ್ತಿದ್ದೆ. ಮೆನಾಸ್, ಇಂಥ ಚಿಲ್ಲರೆ ಕಾದಾಟಕ್ಕೆ ಈ ವಿಟಪುರುಷ ತನ್ನ ಶಿರಸ್ತ್ರಾಣ ತೊಡುತ್ತಿದ್ದ ಎಂದು ನಾನು ಅಂದುಕೊಂಡಿರಲಿಲ್ಲ. ತನ್ನ ಎದುರಾಳಿಗಿಂತ
ಇಮ್ಮಡಿ ಇದೆ ಅವನ ಸೈನಿಕ ಶಕ್ತಿ. ಆದರೆ ನಾವು ನಮ್ಮ ಸ್ವಾನುಮತವನ್ನು ಮೇಲೇರಿಸೋಣ, ಆ ಮೂಲಕ
ಈಜಿಪ್ಟಿನ ವಿಧವೆಯ ಮಡಿಲಿಂದ ಅತೃಪ್ತ ಕಾಮಿ ಆಂಟನಿಯನ್ನು ಕಿತ್ತು ತೆಗೆಯೋಣ.
ಮೆನಾಸ್. ಸೀಸರ್ ಮತ್ತು ಆಂಟನಿ ಎಂದೂ ಪರಸ್ಪರ ಸ್ವಾಗತಿಸುತ್ತಾರೆಂದು ನನಗನಿಸುವುದಿಲ್ಲ. ಅವನ ಸತ್ತ
ಹೆಂಡತಿ ಸೀಸರನನ್ನು ಉಲ್ಲಂಘಿಸಿದ್ದು ಇದೆ; ಅವನ ಸೋದರ ಸೀಸರನ ವಿರುದ್ಧ ದಂಡೆತ್ತಿದ — ಆದರೆ
ಆಂಟನಿಯ ಪ್ರೇರಣೆಯಿಂದ ಇರಲಾರದು ಬಹುಶಃ.
ಪಾಂಪಿ. ನನಗೆ ಗೊತ್ತಿಲ್ಲ, ಮೆನಾಸ್, ಸಣ್ಣ ಜಗಳಗಳು ದೊಡ್ಡ ಕಲಹಗಳಿಗೆ ಹೇಗೆ ಎಡೆಮಾಡುತ್ತವೆ ಎನ್ನುವುದು.
ನಾವು ಎಲ್ಲರ ವಿರುದ್ಧ ಎದ್ದು ನಿಲ್ಲದಿದ್ದರೆ, ಅವರು ಪರಸ್ಪರ ಹೊಡೆದಾಡಿಕೊಳ್ಳುವುದು ಖಂಡಿತ, ಯಾಕೆಂದರೆ ಕತ್ತಿ ಹಿರಿಯುವ ಕಾರಣಗಳನ್ನು ಅವರೇ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಈಗ ನಮ್ಮ ಕುರಿತಾದ ಭಯ ಅವರ ಒಡಕುಗಳನ್ನು ಕೂಡಿಸಿ ಸಣ್ಣ ವ್ಯತ್ಯಾಸಗಳಿಗೆ ತೇಪೆ ಹಾಕಬಹುದು, ನಮಗಿನ್ನೂ ಗೊತ್ತಿಲ್ಲ. ದೇವರು ಕಂಡ ಹಾಗಿರಲಿ ಅದೆಲ್ಲ! ನಮ್ಮ ಸಕಲ ಶಕ್ತಿಯ ಮೇಲೆ ನಿಂತಿದೆ ಈಗ ನಮ್ಮ ಆಯುಸ್ಸು. ಬಾ, ಮೆನಾಸ್.
[ಎಲ್ಲರೂ ನಿಷ್ಕ್ರಮಣ]
ದೃಶ್ಯ 2
ರೋಮಿನಲ್ಲಿ
ಈನೋಬಾರ್ಬಸ್ ಮತ್ತು ಲೆಪಿಡಸ್ ಪ್ರವೇಶ
ಲೆಪಿಡಸ್. ಜಾಣ ಈನೋಬಾರ್ಬಸ್, ನಿನ್ನ ನಾಯಕನಿಗೆ ಮಿದುಭಾಷಿಯಾಗಿರಲು ಕೇಳಿಕೋ, ಅದಕ್ಕೆ ನೀನೇ ಸರಿ,
ಮತ್ತು ಹಾಗೆ ಕೇಳಿಕೊಳ್ಳುವುದೂ ಸರಿಯಾಗಿರುತ್ತೆ.
ಈನೋ. ತನ್ನ ಯೋಗ್ಯತೆಗೆ ಸರಿಯಾಗಿ ಮಾತಾಡಲು ನಾನವರನ್ನು ಕೇಳಿಕೊಳ್ಳುವೆ. ಸೀಸರ್ ಅವರನ್ನು ಕೆಣಕಿದರೆ, ಸೀಸರನ ತಲೆಮೇಲೆ ನೋಡಿ ಮಾತಾಡಲಿ ಆಂಟನಿ ಅಂಗಾರಕನಂತೆ ದೊಡ್ಡ ಸ್ವರದಲ್ಲಿ. ಜುಪಿಟರನ ಆಣೆ, ಅಂಟೋನಿಯೋನ ಗಡ್ಡ ನಾನು ಧರಿಸುತ್ತಿದ್ದರೆ ಈ ದಿನ ನಾನು ಹೆರೆದುಕೊಳ್ಳುತ್ತಿರಲಿಲ್ಲ.
ಲೆಪಿಡಸ್. ಇದು ಖಾಸಗಿ ಜಗಳಕ್ಕೆ ಸಮಯವಲ್ಲ.
ಈನೋ. ಪ್ರತಿಯೊಂದು ಸಮಯವೂ ಆಯಾ ಸಮಯದ ಸಮಸ್ಯೆಗೆ ತಕ್ಕುದೇ.
ಲೆಪಿಡಸ್. ಆದರೆ ಸಣ್ಣ ಸಮಸ್ಯೆಗಳು ದೊಡ್ಡ ಸಮಸ್ಯೆಗಳಿಗೆ ದಾರಿ ಬಿಡಬೇಕು.
ಈನೋ. ಸಣ್ಣವು ಮೊದಲಿದ್ದರೆ ಅಲ್ಲ.
ಲೆಪಿಡಸ್. ನಿನ್ನ ಭಾಷೆ ಭಾವೋದ್ರೇಕದ್ದು; ಆದರೆ ಅದು ಬೆಂಕಿಯೆಬ್ಬಿಸದೆ ಇರಲಿ. ಇಲ್ಲಿ ಬರುತ್ತಿದ್ದಾರೆ ಮಹಾಶಯ
ಆಂಟನಿ.
ಆಂಟನಿ ಮತ್ತು ವೆಂಟೀಡಿಯಸ್ ಮಾತಾಡಿಕೊಂಡು ಪ್ರವೇಶ
ಈನೋ. ಮತ್ತು ಆ ಕಡೆಯಿಂದ ಸೀಸರ್.
ಸೀಸರ್, ಮೆಸೆನ್ನಾಸ್, ಮತ್ತು ಅಗ್ರಿಪಾ ಇನ್ನೊಂದು ಬಾಗಿಲಿನಿಂದ, ಅವರೂ ಮಾತಾಡಿಕೊಳ್ಳುತ್ತ ಪ್ರವೇಶ
ಆಂಟನಿ. ಇಲ್ಲಿ ನಾವೊಂದು ಒಪ್ಪಂದಕ್ಕೆ ಬಂದರೆ, ನಂತರ ಪಾರ್ಥಿಯಾಕ್ಕೆ. ವೆಂಟೀಡಿಯಸ್, ನಾನು ಹೇಳುವುದನ್ನು ಕೇಳು.
[ಅವರು ಪ್ರತ್ಯೇಕ ವಿಚಾರವಿನಿಮಯದಲ್ಲಿ]
ಸೀಸರ್. ನನಗೆ ಗೊತ್ತಿಲ್ಲ, ಮೆಸೆನ್ನಾಸ್. ಅಗ್ರಿಪಾನ್ನ ಕೇಳು.
ಲೆಪಿಡಸ್. ಮಿತ್ರ ಮಹೋದಯರೇ: ನಮ್ಮನ್ನು ಒಂದುಗೂಡಿಸಿದ ಧ್ಯೇಯ ಮಹತ್ವದ್ದು, ಕ್ಷುಲ್ಲಕ ಕಾರ್ಯ ಬೇರ್ಪಡಿಸದಿರಲಿ ಅಂಥವರನ್ನು. ಎಲ್ಲಿ ಎಡವಟ್ಟಾಗಿದೆ ಎನ್ನುವುದನ್ನು ಸಮಾಧಾನದಿಂದ ವಿಚಾರಿಸೋಣ. ಅಲ್ಪ ಭಿನ್ನತೆಯನ್ನು ಜೋರಾಗಿ ಚರ್ಚಿಸಿದಾಗ, ಗಾಯ ಗುಣಪಡಿಸುವುದರಲ್ಲಿ ನಾವು ಕೊಲೆಯೆಸಗುತ್ತೇವೆ. ಆದ್ದರಿಂದ, ಸಹಭಾಗಿ ಮಹಾಶಯರೆ, ನಾನು ಹೃತ್ಪೂರ್ವಕ ನಿಮ್ಮನ್ನು ಕೇಳಿಕೊಳ್ಳುವುದು, ಹೆಚ್ಚು ಹುಳಿಯಾದ್ದನ್ನು ಹೆಚ್ಚು ಸಿಹಿಯಿಂದ ತಟ್ಟುವುದು, ವಿಷಯದಲ್ಲಿ ಕಟುತ್ವ ಬೆಳೆಸದೆ ಇರುವುದು.
ಆಂಟನಿ. ಚೆನ್ನಾದ ಮಾತು. ನಾವು ನಮ್ಮ ಸೇನೆಯ ಎದುರಿದ್ದರೂ, ಕಾದಲು ತಯಾರಿದ್ದರೂ, ನಾನು ಹೀಗೆ ಮಾಡುವೆ.
[ಸೀಸರನಿಗೆ ಹಸ್ತಲಾಘವ ಅಥವಾ ಆಲಿಂಗನ]
ಸೀಸರ್. ರೋಮಿಗೆ ಸ್ವಾಗತ.
ಆಂಟನಿ. ಕೃತಜ್ಞತೆ.
ಸೀಸರ್. ಕೂತುಕೊಳ್ಳಿ.
ಆಂಟನಿ. ನೀವೂ.
ಸೀಸರ್. ಸರಿ, ಹಾಗಿದ್ದರೆ.
[ಇಬ್ಬರೂ ಕೂತುಕೊಳ್ಳುವರು]
ಆಂಟನಿ. ಕೆಲವು ವಿಷಯಗಳು ನಿಮಗೆ ಹಿಡಿಸುತ್ತಿಲ್ಲವೆಂದು ಕೇಳಿದ್ದೇನೆ, ಆದರೆ ವಿಷಯಗಳು ಹಾಗಿಲ್ಲ, ಅಥವ ಇದ್ದರೂ ಅವು ನಿಮಗೆ ಸಂಬಂಧಿಸಿದ್ದಲ್ಲ.
ಸೀಸರ್. ನನಗೆ ಹಾಗನಿಸಿದ್ದರೆ, ಯಾವುದೇ ಕಾರಣವಿಲ್ಲದೆ, ಅಥವ ಅತ್ಯಲ್ಪ ಕಾರಣಕ್ಕೆ, ನನಗೆ ಅನಿಸಿದ್ದಾಗಿದ್ದರೆ, ಎಲ್ಲಾ ಬಿಟ್ಟು ನಿಮ್ಮ ಬಗ್ಗೆ, ಹಾಗಿದ್ದರೆ ನನಗೆ ಹುಚ್ಚೆಂದು ಲೆಕ್ಕ; ನನಗೆ ಸಂಬಂಧಿಸಿರದ ಸಂಗತಿಯಲ್ಲಿ ನಿಮ್ಮ ಹೆಸರನ್ನು ನಾನು
ಒಮ್ಮೆಯಾದರೂ ಎತ್ತಿ ಹೀನೈಸಿದ್ದರೆ, ಅದು ಇನ್ನಷ್ಟು ಹುಚ್ಚು.
ಆಂಟನಿ. ನಾನು ಈಜಿಪ್ಟಿನಲ್ಲಿರುವುದು ನಿಮಗೇನು, ಸೀಸರ್?
ಸೀಸರ್. ನಾನಿಲ್ಲಿ ರೋಮಿನಲ್ಲಿರುವ ಹಾಗೇ ಇರಬಹುದು ನಿಮಗೆ ನೀವು ಈಜಿಪ್ಟಿನಲ್ಲಿರುವುದು. ಆದರೂ ನನ್ನ ರಾಜ್ಯದ ಬಗ್ಗೆ ಸಂಚು ಹೂಡಿದರೆ, ನೀವು ಈಜಿಪ್ಟಿನಲ್ಲಿರುವುದು ನನ್ನ ಪ್ರಶ್ನೆಯಾಗುತ್ತದೆ.
ಆಂಟನಿ. ಸಂಚು ಹೂಡಿದರೆ’ ಎಂಬುದರ ಅರ್ಥವೇನು?
ಸೀಸರ್. ಇಲ್ಲಿ ನನಗೇನಾಯಿತು ಎಂದು ತಿಳಿದರೆ ನನ್ನ ಮಾತಿನ ಅರ್ಥ ತಾನಾಗಿ ಗೊತ್ತಾಗುತ್ತದೆ. ನಿಮ್ಮ ಪತ್ನಿ ಹಾಗೂ ಸೋದರ ನನ್ನ ಮೇಲೆ ಯುದ್ಧ ಸಾರಿದರು, ಅವರ ಪಂಥಕ್ಕೆ ನೀವು ವಸ್ತುವಾಗಿದ್ದಿರಿ. ಯುದ್ಧದ ಘೋಷಣಾಪದ ನೀವೇ.
ಆಂಟನಿ. ತಪ್ಪು ತಿಳಿದುಕೊಂಡಿದ್ದೀರಿ ನೀವು ನಿಮ್ಮ ತಂದೆಯ ಹಾಗೆಯೇ. ನನ್ನ ತಮ್ಮ ತನ್ನ ಕೆಲಸಕ್ಕೆ ನನ್ನ ಹೆಸರೆತ್ತಿದ್ದೆ ಇಲ್ಲ. ನಾನು ಆ ಕುರಿತು ವಿಚಾರಿಸಿ ತಿಳಿದಿದ್ದೇನೆ, ನಿಮ್ಮ ಪರ ಕತ್ತಿಯೆತ್ತಿದ ಕೆಲವರು ಖುದ್ದಾಗಿ ನನಗೆ ಹೇಳಿದ್ದು. ನಿಮ್ಮ ಅಧಿಕಾರದಂತೆ ನನ್ನದನ್ನೂ ಅವನು ಪ್ರಶ್ನಿಸಿದಹಾಗಲ್ಲವೇ, ನಿಮ್ಮ ಕಾರಣವೆ ನನ್ನದೂ ಆಗಿರುತ್ತ, ಅದು ನನ್ನ ಮನಸ್ಸಿಗೆ ವಿರುದ್ಧ ಅವನೆಸಗಿದ ಯುದ್ಧವಲ್ಲವೇ? ಈ ಬಗ್ಗೆ ನನ್ನ ಮೊದಲಿನ ಪತ್ರಗಳು ಸಂಪೂರ್ಣ ವಿವರಗಳನ್ನು ನಿಮಗೆ ನೀಡಿದ್ದುವು. ನೀವು ಜಗಳಕ್ಕೆ ತೇಪೆಹಾಕಿ ಅಖಂಡತೆ ಸ್ಥಾಪಿಸಬೇಕೆಂದಿದ್ದರೆ, ಅದು ಇದರಿಂದ ಆಗುವುದಿಲ್ಲ.
ಸೀಸರ್. ನಿರ್ಣಯದ ತಪ್ಪನ್ನು ನನಗೆ ಆರೋಪಿಸಿ, ನೀವು ನಿಮ್ಮನ್ನೆ ಪ್ರಶಂಸಿಸಿಕೊಳ್ಳುವಿರಿ, ಆದರೆ ನೀವು ಮಾತ್ರ ನಿಮ್ಮ ತಪ್ಪುಗಳಿಗೆ ತೇಪೆಹಾಕಿದಿರಿ.
ಆಂಟನಿ. ಹಾಗಲ್ಲ, ಹಾಗಲ್ಲ. ನನಗೆ ಖಂಡಿತಾ ಗೊತ್ತು — ಈ ಕಾರಣದಲ್ಲಿ ನಿಮ್ಮ ಸಹಭಾಗಿಯಾಗಿರುತ್ತ, ಅದರ ವಿರುದ್ಧ ಆತ ಹೂಡಿದ ಯುದ್ಧಗಳನ್ನು ನಾನು ಕೃಪಾಕಟಾಕ್ಷದಿಂದ ಹೇಗೆ ನೋಡಲಿ, ಅವು ನನ್ನ ಶಾಂತಿಗೂ ಸವಾಲು ಎಂಬ ವಿಚಾರ ನಿಮಗೆ ಅತ್ಯಗತ್ಯ ಬಂದಿರಬೇಕು. ಇನ್ನು ನನ್ನ ಪತ್ನಿಯ ವಿಷಯ, ನಿಮಗಂಥ ಧೈರ್ಯದ ಪತ್ನಿಯಿದ್ದರೆ ಅಂದುಕೊಳ್ಳುತ್ತೇನೆ. ಜಗತ್ತಿನ ಮೂರನೇ ಒಂದು ಭಾಗ ನಿಮ್ಮದು, ಅದನ್ನು ಜಗ್ಗಿಸಿ ಮುನ್ನಡೆಸುವುದು ನಿಮಗೆ ಸಾಧ್ಯ, ಆದರೆ ಅಂಥ ಪತ್ನಿಯನ್ನಲ್ಲ.
ಈನೋ. ನಮಗೆಲ್ಲರಿಗೂ ಅಂಥ ಪತ್ನಿಯರಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಗಂಡಸರು ಹೆಂಗಸರ ಜತೆ ಯುದ್ಧಕ್ಕೆ ಹೋಗಬಹುದಿತ್ತು!
ಆಂಟನಿ. ಅಂಕಮೀರಿದ ಅವಳ ಗೊಂದಲಗಳು ಅಸಹನೆಯಿಂದ ಹುಟ್ಟಿದವು, ಸೀಸರ್ — ಅವಕ್ಕೆ ಧೋರಣೆಯ ಜಾಣತನ ಗೊತ್ತಿಲ್ಲ — ನಿಮಗದರಿಂದ ಭಾರೀ ಅಸಮಾಧಾನ ಉಂಟಾಯಿತೆನ್ನುವುದನ್ನು ಖೇದದಿಂದಲೇ ಒಪ್ಪಿಕೊಳ್ಳುತ್ತೇನೆ. ಅದು ನನ್ನ ಕೈಯಲ್ಲಿ ಇರಲಿಲ್ಲ.
ಸೀಸರ್. ನೀವು ಅಲೆಕ್ಝಾಂಡ್ರಿಯಾದಲ್ಲಿ ಖುಷಿಪಡುತ್ತಿದ್ದಾಗ ನಾನು ನಿಮಗೆ ಬರೆದಿದ್ದೆ; ನನ್ನ ಪತ್ರಗಳನ್ನು ಜೇಬಿನಲ್ಲಿ ಹಾಕಿ ಸುಮ್ಮನಾದಿರಿ, ಮತ್ತು ಕಟಕಿ ಮಾತುಗಳಿಂದ ನನ್ನ ದೂತನನ್ನು ಹೊರದಬ್ಬಿದಿಸಿದಿರಿ.
ಆಂಟನಿ. ಸ್ವಾಮಿ, ಹೇಳಿಕಳಿಸುವ ಮೊದಲೇ ಆತ ನನ್ನ ಮೈಮೇಲೆ ಬಂದು ಬಿದ್ದ; ಮೂರು ರಾಜರಿಗೆ ಆಗಷ್ಟೇ ಭೋಜನ ನೀಡಿ ಸುಸ್ತಾಗಿದ್ದೆ, ಮುಂಜಾನೆ ನಾನು ನಾನಾಗಿರಲಿಲ್ಲ. ಆದರೆ ಮರುದಿವಸ ನಾನವನಿಗೆ ನನ್ನ ಬಗ್ಗೆ ಹೇಳಿದ್ದೆ, ಎಂದರೆ ಅವನ ಕ್ಷಮೆ ಯಾಚಿಸಿದ ಹಾಗೆಯೇ. ಆ ವ್ಯಕ್ತಿ ನಮ್ಮ ಕಲಾಪದಲ್ಲಿ ವಸ್ತುವಾಗುವುದು ಬೇಡ; ನಾವು ಚರ್ಚಿಸುವುದಿದ್ದರೆ, ಚರ್ಚೆಯಿಂದ ಅವನನ್ನು ಹೊಸಕಿಬಿಡಿ.
ಸೀಸರ್. ನಿಮ್ಮ ವಚನವನ್ನು ನೀವು ಮುರಿದಿರಿ. ಇದೇ ಆಪಾದನೆಯನ್ನು ನನ್ನ ವಿರುದ್ಧ ಮಾಡುವುದಕ್ಕೆ ನಿಮಗೆ ನಾಲಿಗೆ ಎಂದೂ ಇರದು.
ಲೆಪಿಡಸ್. ಸಮಾಧಾನ, ಸೀಸರ್!
ಆಂಟನಿ. ಇಲ್ಲ ಲೆಪಿಡಸ್, ಆತ ಮಾತಾಡಲಿ. ನನಗಿಲ್ಲವೆಂದು ಆತ ಆಪಾದಿಸುವ ಆತ್ಮಗೌರವ ನನಗೆ ಪವಿತ್ರವಾದ್ದು. ಆದರೆ, ಸೀಸರ್ — ಅದೇನು ನನ್ನ ವಚನದ ಬಗ್ಗೆ —
ಸೀಸರ್. ಅದೇ, ನಾ ಬೇಕೆಂದಾಗ ಸೇನೆ ಮತ್ತು ಸಹಾಯ ಒದಗಿಸುವುದು. ಇವೆರಡನ್ನೂ ನೀವು ನಿರಾಕರಿಸಿದಿರಿ.
ಆಂಟನಿ. ಅಲಕ್ಷಿಸಿದ್ದು ಎನ್ನಿ; ವಿಷಗಳಿಗೆಯಲ್ಲಿ ನಾನು ಸಿಲುಕಿದ್ದೆ ಆಗ, ಏನು ಮಾಡುತ್ತಿದ್ದೇನೆಂದು ನನಗೇ ಗೊತ್ತಿರಲಿಲ್ಲ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಾಯಶ್ಚಿತ್ತ ನಾನು ಮಾಡಿಕೊಂಡರೂ, ನನ್ನ ಋಜುತ್ವ ನನ್ನ ಗರಿಮೆಯ ಕಡಿಮೆ ಮಾಡದು, ಹಾಗೆಯೇ ನನ್ನ ಸಾಮರ್ಥ್ಯಕ್ಕೆ ಧಕ್ಕೆ ನೀಡದು. ನಿಜವೇನೆಂದರೆ, ಈಜಿಪ್ಟಿನಿಂದ ನನ್ನನ್ನು ಎಬ್ಬಿಸುವುದಕ್ಕೆ ಫುಲ್ವಿಯಾ ಇಲ್ಲಿ ಯುದ್ಧ ಸಾರಿದಳು, ಅದಕ್ಕೋಸ್ಕರ, ತಿಳಿಯದೆ ಕಾರಣನಾದ ನಾನು, ಇಂಥ ಸಂದರ್ಭದಲ್ಲಿ ನನ್ನ ಆತ್ಮಗೌರವಕ್ಕೆ ಚ್ಯುತಿಯಾಗದಂತೆ ಎಷ್ಟು ಮಣಿಯಬಹುದೋ ಅಷ್ಟು ಮಣಿದು ಕ್ಷಮೆ ಕೋರುತ್ತೇನೆ.
ಲೆಪಿಡಸ್. ಚೆನ್ನಾದ ಮಾತು.
ಮೆಸೆನ್ನಾಸ್. ನಿಮ್ಮ ನಿಮ್ಮ ಆರೋಪಗಳನ್ನು ಇನ್ನಷ್ಟು ನೀವು ಮುಂದೊತ್ತದಿದ್ದರೆ ಸಾಕು. ಅವನ್ನು ಮರೆಯುವುದೆಂದರೆ ಸದ್ಯದ ಜರೂರಿ ನಿಮ್ಮ ರಾಜಿಯೆನ್ನುವುದನ್ನು ನೆನಪಿಗೆ ತರುವುದು.
ಲೆಪಿಡಸ್. ಚೆನ್ನಾಗಿ ಹೇಳಿದಿರಿ, ಮೆಸೆನ್ನಾಸ್.
ಈನೋ. ಅಥವಾ, ನೀವು ತತ್ಕಾಲಕ್ಕೆ ಒಬ್ಬರು ಇನ್ನೊಬ್ಬರ ಮಮತೆ ಕಡಪಡೆದರೆ, ಪಾಂಪಿಯ ಮಾತು ಕೇಳಿಸದಿದ್ದಾಗ, ಅದನ್ನು ವಾಪಸು ಮಾಡಬಹುದು. ಇನ್ನೇನೂ ಮಾಡುವುದಕ್ಕೆ ಇಲ್ಲದಿದ್ದಾಗ, ಮಾತಿನ ವರಸೆಗೆ ನಿಮಗೆ ವೇಳೆಯಿರುತ್ತದೆ.
ಆಂಟನಿ. ನೀನೊಬ್ಬ ಯೋಧ ಮಾತ್ರ. ಮಾತಾಡಬೇಡ.
ಈನೋ. ಸತ್ಯಕ್ಕೆ ಮಾತಿಲ್ಲ ಅನ್ನೋದನ್ನ ನಾನು ಮರೆತುಬಿಟ್ಟಿದ್ದೆ.
ಆಂಟನಿ. ನೀನೀ ಸಭೆಗೆ ಅನ್ಯಾಯ ಮಾಡುತ್ತಿರುವಿ, ಆದ್ದರಿಂದ ಮಾತಾಡಬೇಡ.
ಈನೋ. ಆಯ್ತು, ಹಾಗಿದ್ದರೆ, ಮುಂದುವರಿಸಿ. ಇತಿ ನಿಮ್ಮ ಶ್ರೇಯಾಕಾಂಕ್ಷಿ, ಮೌನಿ.
ಸೀಸರ್. ಅವನ ಮಾತಿನ ವಿಷಯದ ಬಗ್ಗೆ ನನಗೆ ತಕರಾರಿಲ್ಲ, ಮಾತಿನ ವಿಧಾನದ ಬಗ್ಗೆ ಮಾತ್ರ; ಯಾಕೆಂದರೆ, ನಮ್ಮ ನಮ್ಮ ಮನೋಧರ್ಮಗಳು ಕಾರ್ಯದಲ್ಲಿ ಬೇರೆಯಾಗಿರುತ್ತ, ನಾವು ಸ್ನೇಹಿತರಾಗಿ ಉಳಿಯುತ್ತೇವೆಂದು ಹೇಳಲಾಗುವುದಿಲ್ಲ. ಆದರೂ ಕೂಡ, ಯಾವ ಮುಚ್ಚಳಬಳೆ ನಮ್ಮನ್ನು ಭದ್ರವಾಗಿ ಜೋಡಿಸುವುದೆಂದು ಗೊತ್ತಾದರೆ, ಲೋಕದ ಉದ್ದಗಲಕ್ಕೂ ನಾನದರ ಹಿಂದೆಬಿದ್ದೇನು.
ಅಗ್ರಿಪಾ. ನಾನೊಂದು ಮಾತು ಆಡಬಹುದೇ, ಸೀಸರ್?
ಸೀಸರ್. ಮಾತಾಡು, ಅಗ್ರಿಪಾ.
ಅಗ್ರಿಪಾ. ತಾಯಿಯ ವರಸೆಯಲ್ಲಿ ನಿಮಗೊಬ್ಬಳು ಮಲತಂಗಿಯಿದ್ದಾಳೆ, ಚೆಲುವೆ ಒಕ್ಟೇವಿಯಾ. ಆಂಟನಿ ಈಗ ವಿಧುರ.
ಸೀಸರ್. ಹಾಗನ್ನಬೇಡ, ಅಗ್ರಿಪಾ. ಕ್ಲಿಯೋಪಾತ್ರ ಕೇಳಿದರೆ ನಿನ್ನೀ ದುಡುಕು ಮಾತಿಗೆ ಸಿಗುವುದು ಸರಿಯಾದ ಛೀಮಾರಿ.
ಆಂಟನಿ. ನಾನು ವಿವಾಹಿತನಲ್ಲ, ಸೀಸರ್. ಅಗ್ರಿಪಾ ಏನು ಹೇಳುತ್ತಾನೋ ಕೇಳಬಯಸುತ್ತೇನೆ.
ಅಗ್ರಿಪಾ. ಶಾಶ್ವತ ಸ್ನೇಹದಲ್ಲಿ ನಿಮ್ಮನ್ನು ಬೆಸೆಯುವುದಕ್ಕೆ, ಭ್ರಾತೃಗಳನ್ನಾಗಿ ಮಾಡುವುದಕ್ಕೆ, ಮತ್ತು ದಾರದ ಕಟ್ಟಿನಲ್ಲಿ ನಿಮ್ಮಗಳ ಹೃದಯಗಳನ್ನು ಹೊಸೆಯುವದಕ್ಕೆ, ಆಂಟನಿ ಒಕ್ಟೇವಿಯಾಳನ್ನು ಹೆಂಡತಿಯಾಗಿ ಸ್ವೀಕರಿಸಲಿ. ಅವಳ ಸೌಂದರ್ಯವಾದರೋ ಉತ್ತಮರಲ್ಲಿ ಉತ್ತಮರಿಗಿಂತ ಕಡಿಮೆ ಯಾರನ್ನೂ ಪತಿಯಾಗಿ ಕೋರದು. ಅವಳ ಸದ್ಗುಣ ಮತ್ತು ಒಟ್ಟಾರೆ ಲಾವಣ್ಯ ಇನ್ನು ಯಾರೂ ಹೇಳುವುದಕ್ಕಿಂತ ತಾವೇ ಹೇಳುತ್ತವೆ ಅದನ್ನು. ಈ ವಿವಾಹದಿಂದ ಈಗ ಬೃಹತ್ತಾಗಿ ಕಾಣಿಸುವ ಎಲ್ಲಾ ದೊಡ್ಡ ಭಯಗಳೂ ಏನೂ ಅಲ್ಲವೆಂದೆನಿಸುವುವು. ಈಗ ಕತೆಗಳೇ ನಿಜವಾಗಿರುವಲ್ಲಿ ಆಮೇಲೆ ನಿಜವೇ ಕತೆಯಾದೀತು. ನಿಮ್ಮಿಬ್ಬರ ಕುರಿತಾದ ಅವಳ ಪ್ರೀತಿ ಒಬ್ಬರಿಂದೊಬ್ಬರಿಗೆ ಹರಿದೀತು ಮತ್ತು ಎಲ್ಲಾ ಪ್ರೀತಿ ಅವಳನ್ನು ಸೇರೀತು. ನನ್ನ ಮಾತಿಗೆ ಕ್ಷಮೆಯಿರಲಿ, ಇದು ತಟ್ಟನೆ ಮನಸ್ಸಿಗೆ ಬಂದ ವಿಚಾರವಲ್ಲ, ಕರ್ತವ್ಯ ಕಾರಣ ಸಾಕಷ್ಟು ಮಥಿಸಿ ಹೊಮ್ಮಿದುದು.
ಆಂಟನಿ. ಸೀಸರ್ ಮಾತಾಡುವರೆ?
ಸೀಸರ್. ಆಂಟನಿಯ ಮನಸ್ಸು ಅರಿತಮೇಲೆಯೇ ಸೀಸರ್ ಮಾತಾಡುವುದು.
ಆಂಟನಿ. ಒಂದು ವೇಳೆ ನಾನು ಅಗ್ರಿಪಾ, ಹಾಗೇ ಆಗಲಿ’ ಎಂದರೆ, ಅದನ್ನು ಕೈಗೂಡಿಸುವುದಕ್ಕೆ ಅಗ್ರಿಪಾನಿಗೇನು
ಅಧಿಕಾರ?
ಸೀಸರ್. ಸೀಸರನ ಅಧಿಕಾರ ಮತ್ತು ಒಕ್ಟೇವಿಯಾಳ ಕುರಿತು ಸೀಸರನಿಗಿರುವ ಅಧಿಕಾರ.
ಆಂಟನಿ. ವ್ಯಕ್ತವಾಗಿಯೂ ಉತ್ತಮವಾಗಿರುವ ಇಂಥ ಉದ್ದೇಶಕ್ಕೆ ತಡೆಯಾಗುವುದು ನನ್ನ ಕನಸಿಗೂ ಬರದಿರಲಿ!
ಈ ಶುಭ ಕಾರ್ಯ ಶೀಘ್ರಗೊಳ್ಳುವುದಕ್ಕೆ ಎಲ್ಲಿ ನಿಮ್ಮ ಕೈನೀಡಿ; ಹಾಗೂ ಈ ಗಳಿಗೆಯಿಂದ ನಮ್ಮ ಪ್ರೀತಿಯಲ್ಲಿ ಸೋದರ ಹೃದಯಗಳು ನೆಲೆಯಿರಲಿ, ಮತ್ತು ಅವೇ ನಮ್ಮ ಘನೋದ್ದೇಶಗಳನ್ನು ನಿರ್ಧರಿಸಲಿ!
ಸೀಸರ್. ಇದೋ ನನ್ನ ಕೈ. [ಅವರಿಬ್ಬರೂ ಹಸ್ತಲಾಘವ ಮಾಡಿಕೊಳ್ಳುವರು] ಯಾವ ಸೋದರನೂ ಪ್ರೀತಿಸದಷ್ಟು ಪ್ರೀತಿಸುವ ಸೋದರಿಯನ್ನು ನಿಮಗೀಯುವೆನು. ನಮ್ಮ ರಾಜ್ಯಗಳನ್ನೂ ಹೃದಯಗಳನ್ನೂ ಅವಳು ದೀರ್ಘಕಾಲ ಬೆಸೆಯಲಿ; ನಮ್ಮ ಪ್ರೀತಿಯೂ
ಇನ್ನೆಂದಿಗೂ ಹಾರಿಹೋಗದಿರಲಿ!
ಲೆಪಿಡಸ್. ಆಮೆನ್!
ಆಂಟನಿ. ಪಾಂಪಿಯ ವಿರುದ್ಧ ಕತ್ತಿಯೆತ್ತುವ ವಿಚಾರ ನಾನು ಮಾಡಲಿಲ್ಲ, ಯಾಕೆಂದರೆ ಈಚೆಗಷ್ಟೆ ಆತ ನನ್ನ ಮೇಲೆ ಹೊರಿಸಿದ್ದ ಮಹತ್ವದ ಉಪಕಾರಗಳನ್ನು ನಾನು ಮರೆಯುವಂತಿಲ್ಲ. ನನ್ನ ಕೃತಜ್ಞತೆ ಔಪಚಾರಿಕ ಮಾತ್ರ, ಇಲ್ಲದಿದ್ದರೆ ನಾನು ಮರೆತಿದ್ದೇನೆಂಬ ಅಪವಾದ ಬಂದೀತು; ಅದರ ಬೆನ್ನಹಿಂದೆಯೇ ನಾನವನನ್ನು ಧಿಕ್ಕರಿಸಲೂ ಬೇಕು.
ಲೆಪಿಡಸ್. ಕಾಲ ಕರೆಯುತ್ತಿದೆ ನಮ್ಮನ್ನು. ಪಾಂಪಿಯನ್ನು ನಾವು ಹುಡುಕಿಹಿಡಿಯತಕ್ಕದ್ದು. ಇಲ್ಲದಿದ್ದರೆ ಅವನೇ ನಮ್ಮನ್ನು ಹುಡುಕಿ ಹಿಡಿಯುತ್ತಾನೆ.
ಆಂಟನಿ. ಎಲ್ಲಿ ಅಡಗಿದ್ದಾನೆ ಅವನು?
ಸೀಸರ್. ಮಿಸೆನ್ನಾದ ಪರ್ವತ ಪ್ರದೇಶದಲ್ಲಿ.
ಆಂಟನಿ. ಅವನ ಭೂಸೇನೆ ಎಷ್ಟು?
ಸೀಸರ್. ಬಲಿಷ್ಠವಾಗಿದ್ದು ಜಾಸ್ತಿಯಾಗುತ್ತಲೇ ಇದೆ. ಸಮುದ್ರದ ಮೇಲಾದರೆ ಅವನು ಸಂಪೂರ್ಣ ಪ್ರಭುತ್ವ
ಪಡೆದಿದ್ದಾನೆ.
ಆಂಟನಿ. ಹಾಗೆಂದು ಪ್ರಸಿದ್ಧಿ. ಮಾತುಕತೆಯಾಗಿದ್ದರೆ ಚೆನ್ನಾಗಿರುತ್ತಿತ್ತು! ಇನ್ನು ತಡಮಾಡುವುದು ಬೇಡ.
ಆದರೂ, ಶಸ್ತ್ರಾಸ್ತ್ರ ತೊಡುವ ಮೊದಲು, ನಾವೀಗ ಮಾತಾಡಿದ ವಿಷಯ ಮುಗಿಸಿದರೆ ಒಳ್ಳೆಯದು.
ಸೀಸರ್. ಖಂಡಿತಾ. ಅಲ್ಲದೆ ನನ್ನ ತಂಗಿಯ ಭೇಟಿಗೆ ನಿಮಗಿದೋ ಸ್ವಾಗತ, ನಾನೇ ನಿಮ್ಮನ್ನು ನೇರ ಕರೆದೊಯ್ಯುವೆ ಅಲ್ಲಿಗೆ.
ಆಂಟನಿ. ಲೆಪಿಡಸ್, ನಮಗೆ ನಿಮ್ಮ ಸಂಗಾತ ತಪ್ಪದಿರಲಿ.
ಲೆಪಿಡಸ್. ಓ ಆಂಟನಿ, ನಾನು ಜಡ್ಡುಬಿದ್ದರೂ ನಿಮ್ಮ
ಜತೆ ಬಿಡಲಾರೆ.
[ಮೇಳಸಂಗೀತ. ಸೀಸರ್, ಆಂಟನಿ, ಲೆಪಿಡಸ್, ಮತ್ತು ವೆಂಟೀಡಿಯಸ್ ನಿಷ್ಕ್ರಮಣ. ಈನೋಬಾರ್ಬಸ್, ಆಗ್ರಿಪಾ, ಮೆಸೆನ್ನಾಸ್ ರಂಗದ ಮೇಲೆ ಉಳಿಯುವರು]
ಮೆಸೆನ್ನಾಸ್. ಈಜಿಪ್ಟಿನಿಂದ ಬಂದ ನಿಮಗೆ ಸ್ವಾಗತ, ಸ್ವಾಮಿ.
ಈನೋ. ಸೀಸರನ ಹೃದಯಾರ್ಥವಾದ ಮೆಸೆನ್ನಾಸ್!
ನನ್ನ ಮಾನ್ಯ ಸ್ನೇಹಿತ ಅಗ್ರಿಪಾ!
ಅಗ್ರಿಪಾ. ಈನೋಬಾರ್ಬಸ್!
ಮೆಸೆನ್ನಾಸ್. ವಿಷಯಗಳೆಲ್ಲಾ ಸರಿಯಾಗಿ ಪಚನವಾದ್ದಕ್ಕೆ ನಾವು ಸಂತೋಷಪಡಬೇಕು. ನೀವಂತೂ ಈಜಿಪ್ಟಿನಲ್ಲಿ ಸಾಕಷ್ಟು ಪಾನೀಯ ಇಳಿಸಿಕೊಂಡಂತಿದೆ.
ಈನೋ. ಹೌದಯ್ಯ, ಹಗಲಲ್ಲಿ ನಿದ್ದೆ, ರಾತ್ರಿಯಲ್ಲಿ ಕುಡಿತ.
ಮೆಸೆನ್ನಾಸ್. ಬೆಳಿಗ್ಗೆ ತಿಂಡಿ ಹನ್ನೆರಡು ಜನಕ್ಕೆ ಎಂಟು ಸುಟ್ಟ ಹಂದಿಗಳಂತೆ, ಹೌದಾ?
ಈನೋ. ಅದೇನು ಮಹಾ? ಹದ್ದಿನ ಹೊಟ್ಟೆಗೆ ಹಾತೆ ಬಿದ್ದಂತೆ. ಟಿಪ್ಪಣಿ ಮಾಡಬೇಕಾದ ಇದಕ್ಕಿಂತಲೂ ಭಯಂಕರ ಭಕ್ಷ್ಯಗಳನ್ನು ನಾವು ತಿಂದೆವು.
ಮೆಸೆನ್ನಾಸ್. ಜನ ಹೇಳುವುದು ಸರಿಯಿದ್ದರೆ, ಬಹಳ ಶೋಭಾಯಮಾನ ಮಹಿಳೆ ಅವಳು.
ಈನೋ. ಪ್ರಥಮ ಭೇಟಿಯಲ್ಲೇ ಅವಳು ಸಿಡ್ನೆಸ್ನ ನದೀಮೇಲೆ ಆಂಟನಿಯ ಹೃದಯವನ್ನು ಹಾರಿಸಿಬಿಟ್ಟಳು.
ಅಗ್ರಿಪಾ. ಅವಳಲ್ಲಿ ಕಾಣಿಸಿಕೊಂಡುದು ನಿಜವಾಗಿರಬಹುದು, ಅಥವಾ ನನ್ನ ವರದಿಗಾರ ಕತೆ ಕಟ್ಟಿದ್ದಾನೋ ಏನೋ.
ಈನೋ. ನಾನು ಹೇಳುತ್ತೇನೆ. ಅವಳು ಕುಳಿತಿದ್ದ ನೌಕೆ, ದೇದೀಪ್ಯಮಾನ ಸಿಂಹಾಸನದಂತೆ, ಜಲದಲ್ಲಿ ಪ್ರಜ್ವಲಿಸುತ್ತಿತ್ತು. ನೌಕೆಯ ಬೆನ್ನು ಬಡಿದ ಚಿನ್ನದ ತಗಡು; ಹಾಯಿ ನೇರಳೆ ವರ್ಣ, ಅವುಗಳ ಅಗರು ಎಷ್ಟಿತ್ತೆಂದರೆ ಗಾಳಿಗೂ ಬಂದಿತ್ತು ಪ್ರೇಮದ ತಲೆಸುತ್ತು. ಚುಕ್ಕಾಣಿಗಳು ಬೆಳ್ಳಿ, ಕೊಳಲ ನಾದಕ್ಕೆ ಅವು ತಾಳಹಾಕುತ್ತಿದ್ದುವು, ಮತ್ತು ತಾವು ಹೊಡೆದ ನೀರು ತೀವ್ರಗತಿಯಲ್ಲಿ ಹಿಂಬಾಲಿಸುವಂತೆ ಮಾಡುತ್ತಿದ್ದುವು, ಆ ಹೊಡೆತಗಳಿಗೇ ಅವು ಪ್ರೀತಿಪರವಶವಾದುವೋ ಎಂಬಂತೆ.
ಇನ್ನು ಅವಳ ವಿಷಯ ಹೇಳುವುದೇನು, ಅದು ಎಲ್ಲಾ ವರ್ಣನೆಯನ್ನೂ ಯಾಚಕನ ಮಾಡುವುದು;
ಅವಳು ಒರಗಿಕೊಂಡಿದ್ದಳು ತನ್ನ ಮಂಟಪದಲ್ಲಿ — ಚಿನ್ನದ ಜರಿಯಿರುವ ರೇಶಿಮೆಯುಡುಗೆ — ಎಲ್ಲಿ ಕಲ್ಪನೆ ನಿಸರ್ಗವನ್ನು ಹಿಂದಿಕ್ಕುವುದೊ ಅಂಥ ಸಾಕ್ಷಾತ್ ರತೀದೇವಿಯ ಚಿತ್ರವನ್ನೂ ಮೀರಿಸುವ ದೃಶ್ಯ. ಗುಳಿಬಿದ್ದ ಉಬ್ಬುಗೆನ್ನೆಯ ಹುಡುಗರು ಅವಳ ಎರಡೂ ಬದಿಯಲ್ಲಿ, ನಸುನಗುವ ಮನ್ಮಥರ ಹಾಗೆ, ಅವರ ಕೈಯಲ್ಲಿ ಬಣ್ಣಬಣ್ಣದ ಬೀಸಣಿಗೆ, ಅವುಗಳ ಗಾಳಿ
ಕೋಮಲ ಕದಪುಗಳ ತಂಪಾಗಿಸುತ್ತಲೇ ಬೆಳಗಿಸುವಂತೆಯೂ ಇತ್ತು, ತಾವು ನೀಗಿದುದನ್ನು ಅವು ಆಗಿಸುತ್ತಲು ಇದ್ದುವು.
ಅಗ್ರಿಪಾ. ಆಹಾ ಆಂಟನಿಯ ಅದೃಷ್ಟವೇ!
ಈನೋ. ಅವಳ ಸಖಿಯರು ಜಲದೇವತೆಗಳ ತರ, ಎಷ್ಟೊಂದು ಜಲಕನ್ನಿಕೆಯರು, ಅವಳ ಮನವರಿತು ಚಲಿಸುವರು, ಅಲಂಕಾರವಾಗಿ ಬಳುಕುವರು. ಜಲಕನ್ನಿಕೆಯ ವೇಷ ತೊಟ್ಟಿರುವ ಒಬ್ಬಾಕೆ ಚುಕ್ಕಾಣಿ ಹಿಡಿದಿರುವಳು. ವಹಿಸಿದ ಕೆಲಸಕ್ಕೆ ಆ ಕೈಗಳು ಸದಾ ಸಿದ್ಧ. ಹೂವಿನಷ್ಟು ಮಿದುವಾದ ಆ ಅಂಥ ಕೈಯ ಸ್ಪರ್ಶಕ್ಕೆ ಅರಳುತ್ತವೆ ಹಾಯಿಗಳು ಗಾಳಿತುಂಬಿ. ಆ ನೌಕೆಯಿಂದ ಅದಾವುದೋ ಕಣ್ಣಿಗೆ ಕಾಣಿಸದ ಪರಿಮಳವೊಂದು ಹತ್ತಿರದ ಬಂದರುಗಳಿಗೆ ಬಂದು ಹೊಡೆಯುತ್ತದೆ. ನಗರಕ್ಕೆ ನಗರವೇ
ಅಲ್ಲಿ ಬಂದು ಸೇರುತ್ತಿತ್ತು ಅವಳ ನೋಡುವುದಕ್ಕೆ; ಮತ್ತು ಸಂತೆಮಾಳದಲ್ಲಿಆಂಟನಿ ಒಬ್ಬನೇ ಕುಳಿತಿದ್ದು ಗಾಳಿಯಲಿ
ಸಿಳ್ಳುಹಾಕುತ್ತಿದ್ದರು, ಆ ಗಾಳಿಯೂ ಬಹುಶಃ ಹೋಗಿಬಿಡುತ್ತಿತ್ತು ಕ್ಲಿಯೋಪಾತ್ರಾಳ ನೋಡುವುದಕ್ಕೆ, ನಿಸರ್ಗದಲಿ ನಿರ್ವಾತ-
ವುಂಟಾಗುವ ಭಯ ಇಲ್ಲದಿರುತ್ತಿದ್ದರೆ,
ಅಗ್ರಿಪಾ. ಅಪೂರ್ವ ಐಗುಪ್ತೆ!
ಈನೋ. ನೌಕೆ ಕರೆಯಣೆದಾಗ, ಆಂಟನಿ ಅವಳಿಗೆ ಕರೆಕಳಿಸಿ ಊಟಕ್ಕೆ ಕರೆದರು. ಅವಳಂದಳು, ದಯವಿಟ್ಟು ಆತನೇ ಅವಳ ಅತಿಥಿಯಾದರೆ ಒಳ್ಳೆಯದು ಎಂದು. ನಮ್ಮ ಉದಾರ ಗುಣಸಂಪನ್ನ ಆಂಟನಿ ಯಾವ ಹೆಂಗಸಿಗಾದರೂ `ಇಲ್ಲ’ ಅಂದದ್ದುಂಟೇ? ಹತ್ತು ಸಲ ಕ್ಷೌರ ಮಾಡಿಸಿಕೊಂಡು ಊಟಕ್ಕೆ ಹೋಗುತ್ತಾರೆ, ಮತ್ತು ಕಣ್ಣುಗಳು ಉಂಡದ್ದಕ್ಕೆ ಹೃದಯದ ಬೆಲೆ ತೆರುತ್ತಾರೆ.
ಅಗ್ರಿಪಾ. ದೊರೆಸಾನಿ! ಅವಳು ಸೀಸರನ ಕತ್ತಿಯನ್ನೆ ಹಾಸಿಗೆಯಲ್ಲಿ ಮಲಗಿಸಿದಳು; ಅವನು ಗುಳೆಹೊಡೆದ,
ಅವಳು ಫಸಲಿತ್ತಳು.
ಈನೋ. ಸಾರ್ವಜನಿಕ ರಸ್ತೆಯಲ್ಲೊಮ್ಮೆ ಅವಳು ನಲುವತ್ತು ಗಜ ಕುಪ್ಪಳಿಸುವುದನ್ನು ನೋಡಿದೆ, ಉಸಿರುಗಟ್ಟಿ ಅಷ್ಟಕ್ಕೇ ಏದುಸಿರುಬಿಟ್ಟು ಹೇಗೆ ಮಾತಾಡಿದಳೆಂದರೆ ಅವಳ ಕುಂದೇ ಕುಂದಣವೆನಿಸಿತು, ಕಟ್ಟಿದುಸಿರೇ ಮೋಡಿ ಮಾಡಿತು.
ಮೆಸೆನ್ನಾಸ್. ಈಗ ಆಂಟನಿ ಅವಳನ್ನು ಸಂಪೂರ್ಣ ತ್ಯಜಿಸಬೇಕು.
ಈನೋ. ಎಂದಿಗೂ ಇಲ್ಲ. ತ್ಯಜಿಸುವುದಿಲ್ಲ ಅವರು. ವಯಸ್ಸು ಅವಳನ್ನು ಸೊರಗಿಸುವುದಿಲ್ಲ, ಬಳಕೆ
ಹಳತಾಗಿಸುವುದೂ ಇಲ್ಲ ಅವಳ ಅನಂತ ವೈವಿಧ್ಯವನ್ನು. ಬೇರೆ ಹೆಂಗಸರು ತಾವು ಉಣಿಸುವ ರುಚಿಯನ್ನು ತಣಿಸಿ
ಸಾಕೆನ್ನಿಸುತ್ತಾರೆ, ಆದರೆ ಅವಳೋ ತಾನೆಲ್ಲಿ ಅತಿಯಾಗಿ ಸಂತೃಪ್ತಿಗೊಳಿಸುತ್ತಾಳೋ ಅಲ್ಲಿ ಇನ್ನಷ್ಟು ಬೇಕೆನ್ನಿಸುತ್ತಾಳೆ.
ಯಾಕೆಂದರೆ ಕೆಟ್ಟ ಸಂಗತಿಗಳೂ ಅವಳಲ್ಲಿ ಒಪ್ಪಾಗಿರುತ್ತವೆ, ಪೂಜ್ಯ ಪುರೋಹಿತರು ಕೂಡ ಅವಳನ್ನು ಆಶೀರ್ವದಿಸುವುದು ಅವಳು ಕುಟಿಲೆಯಾಗಿದ್ದಾಗಲೇ.
ಮೆಸೆನ್ನಾಸ್. ಸೌಂದರ್ಯ, ಬುದ್ಧಿ ಮತ್ತು ಗುಣ
ಆಂಟನಿಯ ಹೃದಯ ತಣಿಸಬಹುದಾದರೆ, ಒಕ್ಟೇವಿಯಾ
ಆತನಿಗೆ ನಿಧಿ ಸಿಕ್ಕಿದ ಹಾಗೆ.
ಅಗ್ರಿಪಾ. ಹೋಗೋಣ. ಈನೋಬಾರ್ಬಸ್,
ನೀವಿಲ್ಲಿರುವ ತನಕ ನನ್ನ ಅತಿಥಿ.
ಈನೋ. ಅಪ್ಪಣೆ, ಸ್ವಾಮಿ. ತುಂಬಾ ಉಪಕಾರ.
[ಎಲ್ಲರೂ ನಿಷ್ಕ್ರಮಣ]
ದೃಶ್ಯ 3
ರೋಮ್ನಲ್ಲಿ
ಆಂಟನಿ, ಸೀಸರ್, ಮತ್ತು ಅವರಿಬ್ಬರ ನಡುವೆ ಒಕ್ಟೇವಿಯಾ, ಪ್ರವೇಶ
ಆಂಟನಿ. ಜಗತ್ತು, ಮತ್ತು ನನ್ನ ಮಹತ್ವದ ಕೆಲಸಕಾರ್ಯ, ಕೆಲವು ಸಲ ಬೇರ್ಪಡಿಸಬಹುದು ನಿನ್ನೆದೆಯಿಂದ ನನ್ನನ್ನು.
ಒಕ್ಟೇವಿಯಾ. ಹಾಗಾದಾಗಲೆಲ್ಲಾ ನಾನು ದೇವರ ಮುಂದೆ ಮಂಡಿಯೂರಿ ಪ್ರಾರ್ಥಿಸುವೆ ನಿಮಗೋಸ್ಕರ.
ಆಂಟನಿ. ಶುಭರಾತ್ರಿ, ಸ್ವಾಮಿ. ನನ್ನ ಒಕ್ಟೇವಿಯಾ, ಜನರ ವದಂತಿಯಲ್ಲಿ ನನ್ನ ತಪ್ಪುಗಳನ್ನು ಓದಬೇಡ. ನಾನು ಬದುಕನ್ನು ಸರಿಯಾಗಿ ಇಟ್ಟಿಲ್ಲ, ಆದರೆ ಮುಂದೆ ಬರುವುದೆಲ್ಲ ನಿಯಮಾನುಸಾರ ಇರುತ್ತದೆ. ಶುಭರಾತ್ರಿ ನಿನಗೆ.
ಒಕ್ಟೇವಿಯಾ. ಶುಭರಾತ್ರಿ, ಸ್ವಾಮಿ.
ಸೀಸರ್. ಶುಭರಾತ್ರಿ.
[ಒಕ್ಟೇವಿಯಾಳ ಜತೆ ಸೀಸರ್ ನಿಷ್ಕ್ರಮಣ]
ಒಬ್ಬ ಕಾಲಜ್ಞಾನಿಯ ಪ್ರವೇಶ
ಆಂಟನಿ. ಲೋ, ಈಜಿಪ್ಟಿನಲ್ಲಿ ಇದ್ದಿದ್ದರೆ ಚೆನ್ನಾಗಿತ್ತು
ಅನ್ನುವಿಯ?
ಕಾಲಜ್ಞಾನಿ. ನಾನಲ್ಲಿಂದ ಬರದೆ ಇದ್ದರೇ ಚೆನ್ನಾಗಿತ್ತು,
ಅದೇ ರೀತಿ ನೀವೂ ಅಲ್ಲಿಗೆ!
ಆಂಟನಿ. ಕಾರಣ ಹೇಳಬಹುದೇ?
ಕಾಲಜ್ಞಾನಿ. ನನ್ನ ಗತಿಯಲ್ಲಿ ನನಗದು ಕಾಣಿಸುತ್ತದೆ, ಆದರೆ ನಾಲಿಗೆಯಲ್ಲಲ್ಲ; ಹಾಗಿದ್ದರೂ, ಈಜಿಪ್ಟಿಗೆ ತಮಗೆ
ಇನ್ನೊಮ್ಮೆ ಸ್ವಾಗತ.
ಆಂಟನಿ. ಹೇಳು, ಯಾರ ಅದೃಷ್ಟ ಜಾಸ್ತಿ ಖುಲಾಯಿಸುತ್ತದೆ, ಸೀಸರನದೋ ನನ್ನದೋ?
ಕಾಲಜ್ಞಾನಿ. ಸೀಸರನದು. ಆದ ಕಾರಣ, ಓ ಆಂಟನಿ, ಅವನ ಸಮೀಪ ನಿಲ್ಲುವುದು ಬೇಡ.
ನಿಮ್ಮ ದೈವ — ಯಾವುದು ನಿಮ್ಮ ಚೇತನವನ್ನು ಕಾಪಾಡುತ್ತದೋ ಅದು — ಶ್ರೇಷ್ಠವೂ, ಧೀಮಂತವೂ,
ಅಸದೃಶವೂ ಆಗಿದ್ದರೆ, ಸೀಸರನದು ಹಾಗಿಲ್ಲ. ಆದರೆ ಸೀಸರನ ಹತ್ತಿರ ಮಾತ್ರ ನಿಮ್ಮ ದೇವದೂತ ಭಯಪಡುತ್ತಾನೆ, ಸೋತುಹೋದವನಂತೆ; ಆದ್ದರಿಂದ ನಿಮ್ಮಿಬ್ಬರ ಮಧ್ಯೆ ಸಾಕಷ್ಟು ಜಾಗ ಇರಲಿ.
ಆಂಟನಿ. ಸಾಕು ಇಂಥ ಮಾತು ಹೇಳಬೇಡ ಇನ್ನು.
ಕಾಲಜ್ಞಾನಿ. ನಿಮಗಲ್ಲದೆ ಇನ್ನು ಬೇರೆ ಯಾರಿಗೂ ಇಲ್ಲ, ನೀವಿಲ್ಲದಿದ್ದಾಗ ಇನ್ನು ಯಾರಿಗೂ ಇಲ್ಲ. ಅವನ ಜತೆ ನೀವು ಯಾವುದೇ ಆಟ ಆಡಿದರೂ ನೀವು ಸೋಲುವುದು ಖಚಿತ; ಭಾಗ್ಯವಶದಿಂದ ಅವನು ಎಲ್ಲಾ ಎಡರುಗಳನ್ನೂ ತೊಡೆದು ಸೋಲಿಸುತ್ತಾನೆ
ನಿಮ್ಮನ್ನು. ಅವನು ಬೆಳಗುತ್ತಿರುವಾಗ ನಿಮ್ಮ ಕಾಂತಿ ಕುಂದುತ್ತದೆ. ನಾನು ಇನ್ನೊಮ್ಮೆ ಹೇಳುವೆ, ಆತನ ಸಮೀಪ ನಿಮ್ಮ ಚೈತನ್ಯ ಬೆದರಿ ತಬ್ಬಿಬ್ಬಾಗುತ್ತದೆ; ಅವನಿಲ್ಲದಿದ್ದಾಗ ಅದುವೇ ಧೀರ.
ಆಂಟನಿ. ಹೋಗಿಲ್ಲಿಂದ. ವೆಂಟೀಡಿಯಸ್ಗೆ ಹೇಳು ನಾನು ಅವನ ಜತೆ ಮಾತಾಡುವುದಿದೆ ಎಂದು.
[ಕಾಲಜ್ಞಾನಿಯ ನಿಷ್ಕ್ರಮಣ]
ಅವನು ಪಾರ್ಥಿಯಾಕ್ಕೆ ತೆರಳತಕ್ಕದ್ದು. — ಕಲೆಯೋ ಆಕಸ್ಮಿಕವೋ, ಇವ ಸತ್ಯವನ್ನೇ ನುಡಿದಿದ್ದಾನೆ. ದಾಳ
ಕೂಡ ಸೀಸರನ ಪರವಾಗಿದೆ, ನನ್ನ ಕೈಚಳಕ ಆತನ ಭಾಗ್ಯದ ಮುಂದೆ ಕುಸಿಯುತ್ತಿದೆ. ಚೀಟಿಯೆತ್ತಿದರೂ
ಅವನೇ ಮುಂದೆ; ಗೆಲ್ಲುವ ಸಂದರ್ಭ ನೂರಕ್ಕೆ ಸೊನ್ನೆಯಾಗಿದ್ದರೂ ಅವನ ಹುಂಜಗಳೇ ಪ್ರತಿ
ಸಲವು ಗೆಲ್ಲುವುದು, ಅಂಕದೊಳಗೆ ಅವನ ಪುರಲೆಗಳೆ ಎಂಥ ಪರಿಸ್ಥಿತಿಯಲ್ಲೂ ನನ್ನವುಗಳನ್ನು ಸೋಲಿಸುವುದು.
ನಾನು ಈಜಿಪ್ಟಿಗೆ ಹೋಗುವೆ; ಈ ಮದುವೆಯನ್ನು ನಾನು ಶಾಂತಿಗೋಸ್ಕರ ಮಾಡಿಕೊಂಡರೂ, ನನ್ನ ಸುಖವಿರುವುದು ಪೌರಾತ್ಯದಲ್ಲಿ.
ವೆಂಟೀಡಿಯಸ್ ಪ್ರವೇಶ
ಬಾ, ಬಾರಯ್ಯ, ವೆಂಟೀಡಿಯಸ್.
ನೀನು ಪಾರ್ಥಿಯಾಕ್ಕೆ ಹೋಗಬೇಕು; ನಿನ್ನ ಆದೇಶ
ತಯಾರಾಗಿದೆ. ನನ್ನ ಜತೆ ಬಂದು ತೆಗೆದುಕೋ ಅದನ್ನು.
[ಅವರ ನಿಷ್ಕ್ರಮಣ]
ದೃಶ್ಯ 4
ರೋಮ್
ಲೆಪಿಡಸ್, ಮೆಸೆನ್ನಾಸ್, ಮತ್ತು ಅಗ್ರಿಪಾ ಪ್ರವೇಶ
ಲೆಪಿಡಸ್. ನೀವಿನ್ನು ತೊಂದರೆ ತೆಗೊಳ್ಳುವುದು ಬೇಡ. ನಿಮ್ಮ ದಳಪತಿಯನ್ನು ನೀವು ತ್ವರೆಯಿಂದ ಹೋಗಿ ಸೇರಿಕೊಳ್ಳಿ.
ಅಗ್ರಿಪಾ. ಅಯ್ಯಾ, ಮಾರ್ಕ್ ಆಂಟನಿ ಒಕ್ಟೇವಿಯಾಳನ್ನು ಒಮ್ಮೆ ಚುಂಬಿಸಿದರೂ ಸಾಕು ಕನಿಷ್ಟ, ನಾವು ತೆರಳುವೆವು.
ಲೆಪಿಡಸ್. ನಿಮ್ಮನ್ನು ಸೈನಿಕ ಉಡುಗೆಯಲ್ಲಿ ಕಾಣುವ ವರೆಗೆ ನಿಮಗೆ ವಿದಾಯ. ಆ ಉಡುಗೆ ನಿಮಗೆ ಹಿಡಿಸುತ್ತದೆ.
ಮೆಸೆನ್ನಾಸ್. ನನ್ನ ಲೆಕ್ಕದ ಪ್ರಕಾರ, ನಾವು ನಿಮಗಿಂತ ಮೊದಲೇ ಬೆಟ್ಟದಲ್ಲಿರುವೆವು, ಲೆಪಿಡಸ್.
ಲೆಪಿಡಸ್. ನಿಮ್ಮ ದಾರಿ ಹತ್ತಿರದ್ದು; ನನ್ನ ಕರ್ತವ್ಯಗಳು ನನ್ನನ್ನು ಆಚೀಚೆ ಸುತ್ತಾಡಿಸುತ್ತವೆ. ನೀವು ನನಗಿಂತ ಎರಡು ದಿನ ಮೊದಲೇ ತಲಪುತ್ತೀರಿ.
ಮೆಸೆನ್ನಾಸ್ ಸ್ವಾಮಿ, ನಿಮಗೆ ಜಯವಾಗಲಿ!
ಅಗ್ರಿಪಾ [ಇಬ್ಬರೂ ಬೇರೆ ಬೇರೆ ನಿಷ್ಕ್ರಮಣ]
ದೃಶ್ಯ 5
ಅಲೆಕ್ಸಾಂಡ್ರಿಯಾ, ಒಂದನೇ ಅಂಕದ ದೃಶ್ಯ 1-3 ಮತ್ತು 5ರಲ್ಲಿದ್ದ ಹಾಗೆ
ಕ್ಲಿಯೋಪಾತ್ರ, ಚಾರ್ಮಿಯಾನ್, ಇರಾಸ್, ಅಲೆಕ್ಸಾಸ್ ಪ್ರವೇಶ
ಕ್ಲಿಯೋ. ಎಲ್ಲಿ ಸ್ವಲ್ಪ ಸಂಗೀತ ಕೊಡಿ ನನಗೆ;
ಪ್ರೇಮ ವ್ಯವಹಾರಿಗಳಾದ ನಮಗದೇ ಆಹಾರ.
ಎಲ್ಲರೂ. ಸಂಗೀತ, ಓಹೋಯ್!
ಮಾರ್ಡಿಯಾನ್ ಪ್ರವೇಶ
ಕ್ಲಿಯೋ. ಸಂಗೀತ ಬೇಡ. ನಾವು ಬಿಲಿಯಡ್ರ್ಸ್ ಆಡೋಣ. ಬಾ, ಚಾರ್ಮಿಯಾನ್.
ಚಾರ್ಮಿ. ನನ್ನ ಕೈ ನೋಯುತ್ತಿದೆ. ನೀವು ಮಾರ್ಡಿಯಾನ್ ಜತೆ ಆಡುವುದು ಒಳ್ಳೆಯದು.
ಕ್ಲಿಯೋ. ಹಿಜಡಾಗಳೊಂದಿಗೆ ಹೆಣ್ಣು ಆಡುವುದೆಂದರೆ, ಹೆಣ್ಣಿನೊಂದಿಗೆ ಆಡಿದಹಾಗೇ. ಬನ್ನಿ, ಆಡ್ತೀರೇನು ಸ್ವಾಮಿ
ನನ್ನ ಜತೆ?
ಮಾರ್ಡಿ. ನನ್ನ ಕೈಲಾದಷ್ಟು ಆಡ್ತೀನಿ.
ಕ್ಲಿಯೋ. ಕೆಲಸ ಕಡಿಮೆಯಾದರೇನು, ಮನಸ್ಸಿದ್ದರೆ ಸಾಕು, ಆಮೇಲೆ ನಟ ನೆಪ ಹೇಳಿ ತಪ್ಪಿಸಿಕೊಳ್ಳಬಹುದು.
ನನಗೀಗ ಏನೂ ಬೇಡ. ನನಗೆ ನನ್ನ ಗಾಳ ಕೊಡಿ; ನಾವೀಗ ನದಿಗೆ ಹೋಗೋಣ. ಅಲ್ಲಿ ದೂರದ ಹಿನ್ನೆಲೆಯಿಂದ ಸಂಗೀತ ಕೇಳಿಸುತ್ತಾ ಇರಲು, ಕಂದು ಬಣ್ಣದ ಈಜುರೆಕ್ಕೆಗಳಿರುವ ಮೀನುಗಳನ್ನು ನಾನು ಹಿಡಿಯುವೆನು. ನನ್ನ ಬಗ್ಗಿರುವ ಕೊಂಡಿ
ಅವುಗಳ ಲೋಳೆದವಡೆಗಳ ಚುಚ್ಚೀತು, ಹಾಗೂ ಅವನ್ನು ಮೇಲಕ್ಕೆ ಎಳೆಯುತ್ತ, ಒಂದೊಂದೂ ಒಬ್ಬ ಆಂಟನಿಯೆಂದು ತಿಳಿದು ಹೇಳುವೆನು, `ಆಹಾ! ನೀ ಸಿಕ್ಕಿಬಿದ್ದಿ.’
ಚಾರ್ಮಿ. ನೀವು ಮೀನು ಹಿಡಿಯುವ ಪಂದ್ಯ ಕಟ್ಟಿದಾಗ ಮಜವಿತ್ತು, ನಿಮ್ಮ ಮುಳುಗುಗಾರ ಕೊಂಡಿಗೆ ಉಪ್ಪುಮೀನನ್ನು ಕಟ್ಟಿ ಆಸೆಯಿಂದ ಮೇಲೆಳೆದಾಗ.
ಕ್ಲಿಯೋ. ಆ ಕಾಲವೇ? — ಓ ಕಾಲಗಳೇ! — ಅವರ ತಾಳ್ಮೆಕೆಡಿಸುವಷ್ಟು ತಮಾಷೆ ಮಾಡಿದ್ದೆ ನಾನು; ಆವತ್ತು ರಾತ್ರಿ ತಮಾಷೆ ಮಾಡಿ ಅವರಿಗೆ ತಾಳ್ಮೆ ತರಿಸಿದೆ, ಮತ್ತೆ ಮುಂಜಾನೆ, ಮೂರರ ಮೊದಲು, ಅವರಿಗೆ ಕುಡಿಸಿ ಮಲಗಿಸಿದೆ; ನನ್ನ ಉಡುಗೆತೊಡುಗೆಗಳನ್ನು ಅವರ ಮೇಲಿರಿಸಿದೆ, ಅವರ ಫಿಲಿಪನ್ ಖಡ್ಗವ ನಾನು ಝಳಪಿಸಿದೆ.
ಒಬ್ಬ ದೂತನ ಪ್ರವೇಶ
ಓ, ಇಟೆಲಿಯಿಂದ!
ದೀರ್ಘಕಾಲ ಬಂಜೆಯಾದ ನನ್ನ ಕಿವಿಗಳಿಗೆ ನಿನ್ನ ಫಲದಾಯಕ ವಾರ್ತೆಗಳನ್ನು ತುರುಕು.
ದೂತ. ಅಮ್ಮಾ, ಅಮ್ಮಾ —
ಕ್ಲಿಯೋ. ಅಂಟೋನಿಯೋ ಸತ್ತರು! ದುಷ್ಟನೇ,
ನೀನೆಲ್ಲಾದರೂ ಹಾಗಂದೀ, ನಿನ್ನೊಡತಿಯನ್ನು ಕೊಂದಹಾಗೇ ಸರಿ; ಆದರೆ ಅವರು ಚೆನ್ನಾಗಿದ್ದಾರೆ, ಸ್ವಂತಂತ್ರವಾಗಿದ್ದಾರೆ ಅಂದೀ, ಚಿನ್ನವಿದೆ ನಿನಗೆ, ಮತ್ತು ಚುಂಬಿಸುವುದಕ್ಕೆ ಅಚ್ಚ ನೀಲಿ ನರಗಳ ಕೈ —
ರಾಜಮಹಾರಾಜರುಗಳು ತುಟಿಯಿರಿಸಿದ್ದು, ಚುಂಬಿಸಿ ಮೈ ಜುಮ್ಮೆಂದದ್ದು.
ದೂತ. ಮೊತ್ತಮೊದಲನೇ ಸಂಗತಿಯೆಂದರೆ, ಆಂಟನಿ ಚೆನ್ನಾಗಿದ್ದಾರೆ.
ಕ್ಲಿಯೋ. ಆಹಾ, ಇನ್ನಷ್ಟು ಚಿನ್ನವಿದೆ. ಆದರೆ, ಲೋ, ಒಂದು ವಿಷಯ, ಸತ್ತವರು ಚೆನ್ನಾಗಿರುತ್ತಾರೆ ಎನ್ನುತ್ತೇವೆ
ನಾವು. ಹಾಗಂದಿಯೋ, ನಿನಗೀಯುವ ಚಿನ್ನವ ಕರಗಿಸಿ ನಿನ್ನ ಕೆಟ್ಟ ಮಾತಿನ ಗಂಟಲೊಳಕ್ಕೆ ಎರೆಯಿಸುವೆ.
ದೂತ. ಅಮ್ಮಾ, ನನ್ನ ಮಾತು ಕೇಳಿ.
ಕ್ಲಿಯೋ. ಸರಿ, ಸರಿ, ಹೇಳು, ಕೇಳುತ್ತೇನೆ. ಆದರೆ ನಿನ್ನ ಮುಖದಲ್ಲಿ ಸಂತೋಷವಿಲ್ಲ — ಆಂಟನಿ
ಸ್ವತಂತ್ರರೂ ಆರೋಗ್ಯವಂತರೂ ಆಗಿರುವಲ್ಲಿ — ಅಂಥ ಶುಭವಾರ್ತೆಯನ್ನು ಹೇಳುವುದಕ್ಕೆ ಇಂಥ ಮುಖವೇ!
ಅವರು ಚೆನ್ನಾಗಿಲ್ಲ ಎಂದಾದರೆ ನೀನು ಸಾಧಾರಣ ಮನುಷ್ಯನಂತೆ ಬರಬಾರದು, ಕೂದಲ ಬದಲು
ಸರ್ಪಗಳಿರುವ ಅಗ್ನಿಮುಖಿಯಂತೆ ಬರಬೇಕು.
ದೂತ. ದಯವಿಟ್ಟು ನನ್ನ ಮಾತು ಕೇಳುವಿರಾ?
ಕ್ಲಿಯೋ. ನೀನು ಬಾಯಿಬಿಡುವ ಮೊದಲೇ ನಿನಗೊಂದು ಇಕ್ಕೋಣವೆನಿಸುತ್ತದೆ ನನಗೆ. ಆದರೂ ಆಂಟನಿ ಬದುಕಿದ್ದಾರೆ, ಚೆನ್ನಾಗಿದ್ದಾರೆ, ಅಥವಾ ಸೀಸರನ ಜತೆ ಸ್ನೇಹದಿಂದಿದ್ದಾರೆ, ಅಥವಾ ಸೀಸರನ ಸೆರೆಯಾಳಾಗಿಲ್ಲ ಎಂದು ನೀನಂದರೆ ನಿನ್ನನ್ನು ಚಿನ್ನದ ಮಳೆಯಲ್ಲಿ ತೊಯ್ಯಿಸುವೆ, ಅಮೂಲ್ಯ ಮುತ್ತುಗಳನ್ನು ನಿನ್ನ ಮೇಲೆ ಸುರಿಸುವೆ.
ದೂತ. ಅಮ್ಮಾ, ಅವರು ಚೆನ್ನಾಗಿದ್ದಾರೆ.
ಕ್ಲಿಯೋ. ಚೆನ್ನಾಗಿ ಹೇಳಿದಿ.
ದೂತ. ಸೀಸರನ ಜತೆ ಸ್ನೇಹದಿಂದಿದ್ದಾರೆ.
ಕ್ಲಿಯೋ. ನೀನೊಬ್ಬ ಸ್ವಾಮಿಭಕ್ತ.
ದೂತ. ಸೀಸರ್ ಮತ್ತು ಆಂಟನಿ ಮೊದಲಿಗಿಂತಲೂ ಈಗ ಹೆಚ್ಚು ಸ್ನೇಹಿತರಾಗಿದ್ದಾರೆ.
ಕ್ಲಿಯೋ. ನಿನಗೇನು ಬೇಕು ಕೇಳಿಕೋ.
ದೂತ. ಆದರೆ, ಅಮ್ಮಾ —
ಕ್ಲಿಯೋ. ನನಗಿಷ್ಟವಿಲ್ಲ ಈ ಆದರೆ' ಎನ್ನುವುದು; ಅದು ಈ ಹಿಂದಿನದೆಲ್ಲವ ದಮನಿಸುತ್ತದೆ.
ಆದರೆ’ಗೆ ಧಿಕ್ಕಾರ!
ಆದರೆ’ಯೆನ್ನೋದು ದೈತ್ಯ ಪಾತಕಿಯೊಬ್ಬನನ್ನು ಹಾಜರು- ಪಡಿಸುವ ಬಂದೀಖಾನೆಯ ಆರಕ್ಷಕನೆ ಸರಿ. ಸ್ನೇಹಿತನೆ, ದಯವಿಟ್ಟು, ಅದೇನಿದೆಯೋ ಅದೆಲ್ಲವನ್ನೂ ಹಾಕಿಬಿಡು ನನ್ನ ಕಿವಿಗೆ, ಒಳ್ಳೇದನ್ನು ಕೆಟ್ಟದ್ದನ್ನು ಒಟ್ಟಿಗೇ: ಅವರು ಸೀಸರನ ಜತೆ ಸ್ನೇಹದಿಂದಿದ್ದಾರೆ ಎನ್ನುತ್ತೀ, ಆರೋಗ್ಯದಿಂದಿದ್ದಾರೆ ಎನ್ನುತ್ತೀ, ಮತ್ತು ಸ್ವತಂತ್ರರಾಗಿದ್ದಾರೆ ಎನ್ನುತ್ತೀ.
ದೂತ. ಸ್ವತಂತ್ರರೇ, ತಾಯೀ? ಇಲ್ಲ! ನಾನಂಥ ವರದಿ ಮಾಡಿಲ್ಲ. ಅವರು ಒಕ್ಟೇವಿಯಾಳಿಗೆ ಬದ್ಧರಾಗಿದ್ದಾರೆ.
ಕ್ಲಿಯೋ. ಯಾವ ಕೆಲಸಕ್ಕೆ?
ದೂತ. ಹಾಸಿಗೆಯ ಅತ್ಯುತ್ತಮ ಕೆಲಸಕ್ಕೆ.
ಕ್ಲಿಯೋ. ಚಾರ್ಮಿಯಾನ್, ನಾನು ಕುಸಿದೆ.
ದೂತ. ಅಮ್ಮಾ, ಅವರಿಗೆ ಒಕ್ಟೇವಿಯಾ ಜತೆ ಮದುವೆಯಾಗಿದೆ.
ಕ್ಲಿಯೋ. ಮಾರಿ ಬಡಿಯಲಿ ನಿನಗೆ! [ದೂತನನ್ನು ಹೊಡೆದು ಬೀಳಿಸುತ್ತಾಳೆ]
ದೂತ. ಅಮ್ಮಾ, ಸಮಾಧಾನದಿಂದಿರಿ.
ಕ್ಲಿಯೋ. ಏನಂದೀ? [ಮತ್ತೆ ಹೊಡೆಯುತ್ತಾಳೆ] ಮಹಾ ಧೂರ್ತನೆ, ನಡಿ ಇಲ್ಲಿಂದ, ಇಲ್ಲದಿದ್ದರೆ ನಿನ್ನ ಕಣ್ಣು ಕಿತ್ತು ಚೆಂಡಾಡುತ್ತೇನೆ! ನಿನ್ನ ಕೂದಲು ಕಿತ್ತು ಮಂಡೆ ಮಾಡುತ್ತೇನೆ! [ಕೂದಲು ಹಿಡಿದು ಆಚೀಚೆ ಎಳೆದುಕೊಂಡು ಹೋಗುತ್ತಾಳೆ] ಸಂಕಲೆಯಿಂದ ಹೊಡೀಬೇಕು ನಿನ್ನ, ಉಪ್ಪುನೀರಲ್ಲಿ ಹಾಕಿ ಉಪ್ಪಿನಕಾಯಿ ಮಾಡಬೇಕು: — ಅದರಲ್ಲಿ ನೀನು ಉರೀಬೇಕು ಕೊನೇವರೆಗೆ!
ದೂತ. ದಯಾಮಯಿ ತಾಯಿಯೆ, ನಾನು ಸುದ್ದಿ ತಂದವನು, ಜೋಡಿಮಾಡಿದವನಲ್ಲ.
ಕ್ಲಿಯೋ. ಹಾಗಲ್ಲ ಅನ್ನು, ನಿನಗೊಂದು ಇಲಾಖೆಯನ್ನೇ ಕೊಟ್ಟು, ನಿನ್ನ ಅದೃಷ್ಟ ಖುಲಾಯಿಸುವೆ. ನಿನಗೆ ಸಿಕ್ಕಿದ ಹೊಡೆತ ನನಗೆ ಕೋಪ ತರಿಸಿದ್ದಕ್ಕೆ ಸರಿಹೋಯ್ತು, ಈಗ ಇದರ ಮೇಲೆ ನಿನ್ನ ದೀನಾವಸ್ಥೆ ಏನು ಬೇಡುತ್ತದೋ ಅದನ್ನು ಕೊಡಲು ನಾನು ತಯಾರು.
ದೂತ. ಅವರಿಗೆ ಮದುವೆಯಾಗಿದೆ, ಅಮ್ಮ.
ಕ್ಲಿಯೋ. ದುಷ್ಟ, ನೀನು ಬದುಕಿದ್ದು ಸಾಕು! [ಖಡ್ಗ ಎತ್ತಿಕೊಳ್ಳುತ್ತಾಳೆ]
ದೂತ. ಬೇಡ, ಬೇಡ, ನಾನು ಓಡಿಬಿಡುತ್ತೇನೆ. ಇದೇನಮ್ಮ, ನಾನೇನೂ ಮಾಡಿಲ್ಲ. [ದೂತನ ನಿಷ್ಕ್ರಮಣ]
ಚಾರ್ಮಿ. ಅಮ್ಮಾ, ತಡಕೊಳ್ಳಿ. ಈ ಮನುಷ್ಯ ಮುಗ್ಧ.
ಕ್ಲಿಯೋ. ಕೆಲವು ಮುಗ್ಧರು ತಪ್ಪಿಸಿಕೊಳ್ಳುವಂತಿಲ್ಲ ಮಿಂಚಿನ ಬಡಿತದಿಂದ. ನೈಲ್ ನದಿಯಲ್ಲಿ ಕರಗಲಿ ಈಜಿಪ್ಟ್, ಸಾಧು ಪ್ರಾಣಿಗಳೆಲ್ಲ ಸರ್ಪಗಳಾಗಲಿ! ಆ ದೂತನನ್ನು ವಾಪಸು ಕರೆ. ನನಗೆ ಹುಚ್ಚು ಹಿಡಿದಿದ್ದರೂ, ಅವನನ್ನು ಕಚ್ಚುವುದಿಲ್ಲ. ಕರೆ!
ಚಾರ್ಮಿ. ಅವನಿಗೆ ಬರೋದಕ್ಕೆ ಭಯ.
ಕ್ಲಿಯೋ. ನಾನವನನ್ನು ನೋಯಿಸುವುದಿಲ್ಲ. [ದೂತನಿಗೆ ಕರೆಕಳಿಸಲಾಗುತ್ತದೆ] ಇಲ್ಲಿ ಬಾರಯ್ಯ. ಕೆಟ್ಟ ಸುದ್ದಿ ತರುವುದು ಯಾವತ್ತೂ ಒಳ್ಳೆಯದಲ್ಲ, ಅದು ನಿಷ್ಠೆಯಾಗಿದ್ದರೂ. ಒಳ್ಳೆಯ ಸಂದೇಶಕ್ಕೆ ಎಷ್ಟು ಬೇಕಾದರೂ ನಾಲಿಗೆಯ ಆತಿಥ್ಯ ಕೊಡು, ಆದರೆ ಕೆಟ್ಟ ವಾರ್ತೆಗಳನ್ನು ಅವು ತಾವಾಗಿಯೇ ಅರಿವಾಗುವುದಕ್ಕೆ ಬಿಡು.
ದೂತ. ನಾನು ನನ್ನ ಕರ್ತವ್ಯ ಮಾಡಿದೆ.
ಕ್ಲಿಯೋ. ಅವರು ಮದುವೆಯಾಗಿದ್ದಾರೆಯೇ? ಹೌದೆ’ಂದು ನೀನು ಪುನಃ ಹೇಳಿದರೆ ಇದಕ್ಕಿಂತಲೂ ಹೆಚ್ಚು ನಾನು ನಿನ್ನನ್ನು ದ್ವೇಷಿಸುವಹಾಗಿಲ್ಲ.
ದೂತ. ಅವರು ಮದುವೆಯಾಗಿದ್ದಾರೆ, ಒಡತಿ.
ಕ್ಲಿಯೋ. ಹಾಳಾಗಿಹೋಗು, ಅದೇ ಕತೆಯೆ ಇನ್ನೂ?
ದೂತ. ನಾನು ಸುಳ್ಳು ಹೇಳಬೇಕೆ?
ಕ್ಲಿಯೋ. ಆಹಾ, ಹಾಗಿದ್ದರೆ ಎಷ್ಟು ಚೆನ್ನಾಗಿತ್ತು, ಅರ್ಧ ಈಜಿಪ್ಟೇ ಮುಳುಗಿ ಹಾವುಗಳ ತೊಟ್ಟಿಯಾಗಿದ್ದರೂ
ಚಿಂತಿರಲಿಲ್ಲ! ಹೋಗು, ಹೊರಟುಹೋಗು ಇಲ್ಲಿಂದ. ನಿನ್ನ ಮುಖದಲ್ಲಿ ನಾರ್ಸಿಸಸ್ಸೇ ಇದ್ದರೂ, ನನಗೆ ನೀನು
ಅತಿ ಕುರೂಪಿಯಾಗಿ ಕಾಣಿಸುವಿ. ಅವರು ಮದುವೆಯಾಗಿದ್ದಾರೆ?
ದೂತ. ಮಹಾರಾಣಿಯ ಕ್ಷಮೆ ಕೋರುತ್ತೇನೆ.
ಕ್ಲಿಯೋ. ಅವರು ಮದುವೆಯಾಗಿದ್ದಾರೆ!
ದೂತ. ನಿಮ್ಮನ್ನು ನೋಯಿಸಲು ಹಿಂಜರಿಯುವುದಕ್ಕೆ ನೊಂದುಕೊಳ್ಳದಿರಿ; ನನ್ನಿಂದ ಹೇಳಿಸಿ ಆಮೇಲೆ ಶಿಕ್ಷಿಸುವುದು ಅದೆಂಥ ನ್ಯಾಯ? ಅವರು ಒಕ್ಟೇವಿಯಾಳನ್ನು ಮದುವೆ-ಯಾಗಿದ್ದಾರೆ.
ಕ್ಲಿಯೋ. ಓ, ನಿನ್ನ ಸುದ್ದಿಯ ವಾಸ್ತವ ನೀನಲ್ಲದಿದ್ದರೂ, ಅವರ ತಪ್ಪು ನಿನ್ನ ಧೂರ್ತನ ಮಾಡಿದೆ ನನ್ನ ಕಣ್ಣಲ್ಲಿ.
ತೊಲಗು ಇಲ್ಲಿಂದ. ನೀನು ರೋಮಿನಿಂದ ತಂದ ಸರಕು ಬಹಳ ದುಬಾರಿಯಾಯಿತು. ಅವು ನಿನ್ನ ಕೈಯಲ್ಲೇ ಇರಲಿ,ಅವುಗಳಿಂದಲೆ ನೀನು ಹಾಳಾಗಿಹೋಗು!
[ದೂತನ ನಿಷ್ಕ್ರಮಣ]
ಚಾರ್ಮಿ. ಮಹಾರಾಣಿ, ಸಹನೆಯಿರಲಿ.
ಕ್ಲಿಯೋ. ಆಂಟನಿಯ ಹೊಗಳುವುದರಲ್ಲಿ ನಾನು ಸೀಸರನ ತೆಗಳಿದ್ದೇನೆ.
ಚಾರ್ಮಿ. ಹಲವು ಸಲ.
ಕ್ಲಿಯೋ. ಅದಕ್ಕೀಗ ಕೂಲಿ ಸಿಕ್ಕಿತು ನನಗೆ. ನನ್ನನ್ನು ಇಲ್ಲಿಂದ ಕರೆದೊಯ್ಯಿ; ತಲೆ ಸುತ್ತಿ ಬರುತ್ತಿದೆ ನನಗೆ. ಓ ಇರಾಸ್,ಚಾರ್ಮಿಯಾನ್, — ಪರವಾಯಿಲ್ಲ. ಅಲೆಕ್ಸಾಸ್, ಆ ಮನುಷ್ಯನಲ್ಲಿಗೆ ಹೋಗಿ ಒಕ್ಟೇವಿಯಾಳ ರೂಪು, ಅವಳ ವಯಸ್ಸು, ಅವಳ ಅಭಿರುಚಿ ವಿವರಿಸಲು ಹೇಳು. ಅವಳ ಕೂದಲ ಬಣ್ಣವನ್ನು ತಿಳಿಸಲು ಅವನು ಮರೆಯದಿರಲಿ.
ಹೋಗಿ ತಿಳಿದುಕೊಂಡು ಬಾ. ಬೇಗ.
[ಅಲೆಕ್ಸಾಸ್ ನಿಷ್ಕ್ರಮಣ]
ಆಂಟನಿ ಹೋಗಲಿ ಎಂದೆಂದಿಗೂ! — ಬೇಡ, ಆಂಟನಿ ಹೋಗುವುದು ಬೇಡ, ಚಾರ್ಮಿಯಾನ್. ಒಂದು ಬದಿಯಿಂದ ಆತ ರಕ್ಕಸನಂತೆ ಕಂಡರೂ ಇನ್ನೊಂದು ಬದಿಯಿಂದ ದೇವತೆ.
[ಮಾರ್ಡಿಯಾನ್ಗೆ] ಅಲೆಕ್ಸಾಸ್ಗೆ ಹೇಳಿ ಅವಳ ಎತ್ತರ ತಿಳಿದುಕೊಂಡು ಬರುವಂತೆ ಅನ್ನು. — ದಯೆಯಿರಲಿ
ನನ್ನ ಕುರಿತು, ಚಾರ್ಮಿಯಾನ್, ಆದರೆ ಏನೂ ಹೇಳಬೇಡ ನನಗೆ. ನನ್ನ ಕೋಣೆಗೆ ಕರೆದುಕೊಂಡು ಹೋಗು ನನ್ನನ್ನು.
[ಎಲ್ಲರ ನಿಷ್ಕ್ರಮಣ]
ದೃಶ್ಯ 6
ಮಿಸೆನ್ನಾ ಬೆಟ್ಟದ ಬಳಿ. ಸಂಗೀತ ವಾದ್ಯ
ಪಾಂಪಿ, ಮೆನಾಸ್ ಒಂದು ಬಾಗಿಲಿನಿಂದ ಪ್ರವೇಶ, ತಮ್ಮಟೆ, ಕಹಳೆ ವಾದ್ಯದವರ ಸಮೇತ;
ಇನ್ನೊಂದು ಬಾಗಿಲಿನಿಂದ ಸೀಸರ್, ಲೆಪಿಡಸ್, ಆಂಟನಿ, ಈನೋಬಾರ್ಬಸ್, ಮೆಸೆನ್ನಾಸ್, ಅಗ್ರಿಪಾ ಪ್ರವೇಶ,
ಅವರ ಹಿಂದಿನಿಂದ ಹೆಜ್ಜೆ ಹಾಕುತ್ತಿರುವ ಯೋಧರು
ಪಾಂಪಿ. ನಿಮ್ಮ ಒತ್ತೆಯಾಳುಗಳು ನನ್ನ ಬಳಿಯಿದ್ದಾರೆ, ಅದೇ ರೀತಿ ನಮ್ಮ ಒತ್ತೆಯಾಳುಗಳು ನಿಮ್ಮ ಬಳಿಯಿದ್ದಾರೆ.
ಹೋರಾಡುವ ಮೊದಲು ಮಾತುಕತೆ ನಡೆಸೋಣ.
ಸೀಸರ್. ಮೊದಲು ನಾವು ಮಾತಿಗೆ ಬಂದಿರುವುದೇ
ಅತ್ಯಂತ ಉಚಿತ, ಆದ್ದರಿಂದಲೇ ನಾವು ನಮ್ಮ ಸೂಚನೆಗಳನ್ನು ಮುಂಚಿತವಾಗಿ ಬರೆದು ಕಳಿಸಿದೆವು, ನೀವವನ್ನು ಓದಿದ್ದರೆ ತಿಳಿಸೋಣಾಗಲಿ, ನಿಮ್ಮ ಅತೃಪ್ತ ಖಡ್ಗವ ಒರೆಗೆ ಸೇರಿಸಿ ಅನೇಕ ತರುಣರನ್ನು ಸಿಸಿಲಿಗೆ ವಾಪಸು ಒಯ್ಯಲು ಅಷ್ಟು ಸಾಕೆ
ಎನ್ನುವುದನ್ನು; ಅದಲ್ಲದಿದ್ದರೆ ಅವರೆಲ್ಲ ಇಲ್ಲಿ ನಾಶವಾಗುವುದು ಖಂಡಿತ.
ಪಾಂಪಿ. ಈ ಮಹಾಸಾಮ್ರಾಜ್ಯದ ಶಾಸಕರೂ ದೇವತೆಗಳ ಕಾರ್ಯಭಾರಿಗಳೂ ಆದ ನಿಮಗೆ ಮೂವರಿಗೂ ನಾನು ಹೇಳುವುದು: ನನ್ನ ತಂದೆಯ ಸಾವಿನ ಪ್ರತೀಕಾರಕ್ಕೆ ಜನರಿಲ್ಲವೇ — ಮಗನಾದ ನಾನಿದ್ದೇನೆ, ಅವರ ಸ್ನೇಹಿತರಿದ್ದಾರೆ, ಫಿಲಿಪ್ಪಿಯಲ್ಲಿ ಭೂತವಾಗಿ ಬ್ರೂಟಸಿಗೆ ಕಾಣಿಸಿಕೊಂಡ ಜೂಲಿಯಸ್ ಸೀಸರನ ಸಾವನ್ನು ನೀವು ಬೀಡಿಕೊಂಡ ಅದೇ ರೀತಿ. ಸಾಧು ಕ್ಯಾಸಿಯಸ್ನನ್ನು ಪಿತೂರಿ ನಡೆಸುವಂತೆ ಮಾಡಿದ್ದು ಯಾವುದು? ಹಾಗೂ ಎಲ್ಲರ ಗೌರವಕ್ಕೆ ಪಾತ್ರನಾದ ಮರ್ಯಾದಸ್ತ ರೋಮನ್ ಪ್ರಜೆ ಬ್ರೂಟಸ್ ಅನ್ಯಾದೃಶ ಸ್ವಾತಂತ್ರ್ಯದ ಸಶಸ್ತ್ರ ಸೇನಾನಿಗಳ ಸೇರಿಸಿ ರಾಜಧಾನಿಯನ್ನು ತೊಯ್ಯಿಸುವಂತೆ ಮಾಡಿದ್ದು?
ಒಬ್ಬ ಮನುಷ್ಯ ತಾನೊಬ್ಬ ಅಮಾನುಷನಾಗುವುದನ್ನು ತಡೆಯುವುದಲ್ಲದೆ ಇನ್ನೇನು? ನನ್ನ ನೌಕೆಗಳ ಹಾಯಿ ಬಿಚ್ಚಿದ ಕಾರಣವೂ ಅದುವೇ; ಈ ನೌಕೆಗಳ ಭಾರಕ್ಕೆ ಈಗ ಸಮುದ್ರ ಸಿಟ್ಟೆದ್ದು ನೊರೆ ಕಾರುತ್ತಿದೆ, ಈ ನೌಕೆಗಳ ಬಲದಿಂದಲೆ ದ್ವೇಷಾರ್ಹ ರೋಮ್ ನನ್ನ ತಂದೆಗೆಸಗಿದ ಕೃತಘ್ನತೆಯ ಹಗೆ ಬೀಡಲು ನಾನು ಬಯಸುವೆ.
ಸೀಸರ್. ಇನ್ನಷ್ಟು ಯೋಚಿಸಿ.
ಆಂಟನಿ. ಹಾಯಿಗಳಿಂದ ನೀವು ನನ್ನನ್ನು ಬೆದರಿಸರಾರಿರಿ, ಪಾಂಪಿ. ಸಾಗರಕ್ಕೆ ಸಾಗರದ ಉತ್ತರ ನೀಡುತ್ತೇನೆ. ನೆಲದ ಮೇಲಾದರೆ ನಿಮಗೇ ಗೊತ್ತಿದೆ ನಮ್ಮ ಬಲಾಬಲಗಳ ಲೆಕ್ಕ.
ಪಾಂಪಿ. ನಿಜ, ನೆಲದ ಮೇಲೆ ನನ್ನ ತಂದೆಯ ಮನೆಯನ್ನು ನಿಮ್ಮ ಲೆಕ್ಕಕ್ಕೆ ಸೇರಿಸಿದ್ದೀರಿ; ಆದರೆ ಕೋಗಿಲೆ ಅದರದೇ ಗೂಡು ಕಟ್ಟುವುದಿಲ್ಲವಾದ ಕಾರಣ, ಅದರೊಳಗೇ ಇರಿ ನಿಮಗೆ ಅನಿಸಿದಷ್ಟೂ ಕಾಲ.
ಲೆಪಿಡಸ್. ದಯವಿಟ್ಟು ಹೇಳಿ — ಯಾಕೆಂದರೆ ಇದು ಪ್ರಕೃತಕ್ಕೆ ಸ್ವಲ್ಪ ದೂರ — ನಾವು ಕಳಿಸಿದ ಕೊಡುಗೆಗಳನ್ನು
ನೀವು ಸ್ವೀಕರಿಸಿದ್ದೀರಾ?
ಸೀಸರ್. ಅದು ಮಾತು.
ಪಾಂಪಿ. ಒಂದು ಕೋರಿಕೆಯೆಂದಲ್ಲ, ಆದರೆ ಸ್ವೀಕರಿಸಿದರೆ ಉಂಟಾಗುವ ಲಾಭ ಎಂದು.
ಸೀಸರ್. ಮತ್ತು ಇದಕ್ಕಿಂತ ಹೆಚ್ಚಿನ ಅದೃಷ್ಟವನ್ನು ಯತ್ನಿಸಿದರೆ ಆಗುವ ಪರಿಣಾಮ.
ಪಾಂಪಿ. ನೀವು ನನಗೆ ಸಿಸಿಲಿ ಮತ್ತು ಸಾರ್ಡೀನಿಯಾ ಕೊಡಲು ತಯಾರಿದ್ದೀರಿ; ಅದಕ್ಕೆ ನಾನು ಸಾಗರವನ್ನು
ಕಡಲ್ಗಳ್ಳರಿಂದ ಮುಕ್ತಗೊಳಿಸಬೇಕು; ಆಮೇಲೆ ರೋಮಿಗೆ ಗೋಧಿಯ ಕಪ್ಪ ಕಳಿಸಬೇಕು. ಇದಕ್ಕೆ ಒಪ್ಪಿದರೆ, ನಾವು ನಿಮ್ಮ ಖಡ್ಗದ ಬಾಯಿ ಬಡ್ಡಾಗಿಸದೆ, ನಮ್ಮ ಗುರಾಣಿಗಳು ನಜ್ಜಾಗದೆ, ತೆರಳಬಹುದು.
ಸೀಸರ್ ಆಂಟನಿ ಅದೇ ನಮ್ಮ ಕೊಡುಗೆ. ಲೆಪಿಡಸ್
ಪಾಂಪಿ. ಹಾಗಿದ್ದರೆ ಕೇಳಿ. ಈ ಕೊಡುಗೆ ಸ್ವೀಕರಿಸುವುಕ್ಕೆಂದೇ ನಾನಿಲ್ಲಿಗೆ ಬಂದುದು. ಆದರೆ ಮಾರ್ಕ್ ಆಂಟನಿ, ಸ್ವಲ್ಪ
ತಾಳ್ಮೆಗೆಡಿಸಿದರು. ಮಾಡಿದುದರ ಫಲ ಮಾತಲ್ಲಿ ಕಳಕೊಂಡರೂ, ನಿಮಗೆ ಗೊತ್ತಿರಬೇಕು, ಸೀಸರ್ ಮತ್ತು ನಿಮ್ಮ ಸೋದರ
ಕಾದಾಡುತ್ತಿದ್ದಾಗ, ನಿಮ್ಮ ತಾಯಿ ಸಿಸಿಲಿಗೆ ಬಂದಿದ್ದರು, ಅವರಿಗಲ್ಲಿ ಚೆನ್ನಾದ ಆತಿಥ್ಯ ದೊರಕಿತು.
ಆಂಟನಿ. ಆ ಕುರಿತು ನಾನು ಕೇಳಿದ್ದೇನೆ, ಪಾಂಪಿ, ಮತ್ತು ಯೋಗ್ಯ ಮರು ಉಪಕಾರ ಹೇಳಲು ತಯಾರಿದ್ದೇನೆ.
ಪಾಂಪಿ. ಎಲ್ಲಿ, ಕೈ ನೀಡಿ.
[ಪಾಂಪಿ ಮತ್ತು ಆಂಟನಿ ಪರಸ್ಪರ ಕೈ ಕುಲುಕುತ್ತಾರೆ]
ಇಲ್ಲಿ ನೀವು ಸಿಗುತ್ತೀರೆಂದು ಗೊತ್ತಿರಲಿಲ್ಲ, ಸ್ವಾಮಿ.
ಆಂಟನಿ. ಪೂರ್ವದೇಶದ ಹಾಸಿಗೆ ಮೆತ್ತಗಿರುತ್ತದೆ; ಮತ್ತು ನಿಮಗೆ ನಾನು ಉಪಕಾರಿ — ನಾನು ಉದ್ದೇಶಿಸಿದ್ದಕ್ಕಿಂತಲೂ ಮೊದಲೇ ನನ್ನನ್ನಿಲ್ಲಿಗೆ ಬರಮಾಡಿದ್ದಕ್ಕೆ, ಕಾರಣ ನಾನು ಗಳಿಸಿದ್ದೇ ಜಾಸ್ತಿ.
ಸೀಸರ್. ಕಳೆದ ಸಲ ನಾವು ಕಂಡದ್ದಕ್ಕಿಂತ ಬದಲಾಗಿದ್ದೀರಿ ನೀವು.
ಪಾಂಪಿ. ನನಗೆ ಗೊತ್ತಿಲ್ಲ, ಯಾವ ದುರದೃಷ್ಟ ದೇವತೆ ನನ್ನ ಮುಖದ ಮೇಲೆ ಗುಣಾಕಾರದ ಬರೆ ಹಾಕುತಿದ್ದಾಳೆ
ಎಂದು, ಆದರೆ ನನ್ನ ಹೃದಯವನ್ನು ಗೆದ್ದು ತನ್ನ ಮಾಂಡಳೀಕನ ಮಾಡಿಕೊಳ್ಳುವುದು ಅವಳಿಂದ ಸಾಧ್ಯವಿಲ್ಲ.
ಲೆಪಿಡಸ್. ಈ ಭೇಟಿ ಸಾರ್ಥಕವಾಯಿತು.
ಪಾಂಪಿ. ನಾನು ಹಾಗೆಂದುಕೊಳ್ಳುತ್ತೇನೆ, ಲೆಪಿಡಸ್. ಇದರಲ್ಲಿ ನಾವು ಸಹಮತಿಗಳು. ನಮ್ಮ ಒಪ್ಪಂದಕ್ಕೆ ಒಕ್ಕಣೆ ಕೊಟ್ಟು ಮುದ್ರೆಯೊತ್ತಬೇಕೆಂದು ನನ್ನ ಕೋರಿಕೆ.
ಸೀಸರ್. ಅದೀಗ ಮುಂದಿನ ಹೆಜ್ಜೆ.
ಪಾಂಪಿ. ನಾವು ಬೀಳ್ಕೊಳ್ಳುವ ಮೊದಲು, ಪರಸ್ಪರ ಔತಣ ನೀಡಬೇಕು, ಯಾರು ಮೊದಲೆಂದು ಚೀಟಿಯೆತ್ತೋಣ.
ಆಂಟನಿ. ಮೊದಲು ನಾನೇ, ಪಾಂಪಿ.
ಪಾಂಪಿ. ಇಲ್ಲ, ಆಂಟನಿ. ಚೀಟಿಯೆತ್ತುವುದೆ. ಆದರೆ, ಮೊದಲಿರಲಿ, ಕೊನೆಯಿರಲಿ, ನಿಮ್ಮ ಈಜಿಪ್ಶಿಯನ್
ರಸೋಯಿಗೇ ಖ್ಯಾತಿ. ಜೂಲಿಯಸ್ ಸೀಸರ್ ಅಲ್ಲಿ ಊಟಮಾಡಿ ದಪ್ಪಗಾದರು ಎಂದು ನಾನು ಕೇಳಿದ್ದೇನೆ.
ಆಂಟನಿ. ಬಹಳ ಕೇಳಿದ್ದೀರಿ ನೀವು.
ಪಾಂಪಿ. ನನ್ನ ಮಾತಿಗೆ ಅರ್ಥ ಸರಿಯಾದ್ದು, ಸ್ವಾಮಿ.
ಆಂಟನಿ. ಸರಿಯಾದ ಅರ್ಥಕ್ಕೆ ಸರಿಯಾದ ಶಬ್ದ.
ಪಾಂಪಿ. ಹಾಗಿದ್ದರೆ ನಾನು ಕೇಳಿದ್ದು ಅಷ್ಟೇ. ಹಾಗೂ ಅಪೋಲ್ಲೋಡೋರಸ್ ಹೊತ್ತದ್ದೂ ನಾನು ಕೇಳಿದ್ದೇನೆ —
ಈನೋ. ಅದೆಲ್ಲ ಬೇಡ ಈಗ. ಅವನು ಹೊತ್ತ. ಮುಗಿಯಿತು.
ಪಾಂಪಿ. ಏನು ಹೊತ್ತ, ಹೇಳು?
ಈನೋ. ಸೀಸರಿಗೆ ಚಾಪೆಸುರುಳಿಯಲ್ಲಿ ಒಬ್ಬಳು ರಾಣಿಯನ್ನು.
ಪಾಂಪಿ. ನಿನ್ನ ಗುರುತು ಹತ್ತಿತು ಈಗ. ಹೇಗೆ ಸಾಗಿದೆ, ಸೈನಿಕನೆ?
ಈನೋ. ನಾನು ಚೆನ್ನಾಗಿ ಸಾಗುವ ಲಕ್ಷಣವಿದೆ, ಯಾಕೆಂದರೆ ನಾಲ್ಕು ಔತಣಕೂಟಗಳು ಬರುತ್ತಿವೆ.
ಪಾಂಪಿ. ಎಲ್ಲಿ ನಿನ್ನ ಕೈ ಕುಲುಕುತ್ತೇನೆ. ನಾನೆಂದೂ ನಿನ್ನ ದ್ವೇಷಿಸಿದ್ದಿಲ್ಲ. ನಿನ್ನ ಗುಣನಡತೆ ನನಗೆ ಹಿಡಿಸದೆ ಇರಬಹುದು,
ಆದರೆ ನೀನು ಹೋರಾಡುವುದನ್ನು ನಾನು ನೋಡಿದ್ದೇನೆ.
ಈನೋ. ಸ್ವಾಮಿ, ನಾನು ನಿಮ್ಮನ್ನೆಂದೂ ಬಹಳ ಮೆಚ್ಚಿದವನಲ್ಲ, ಆದರೆ ನಾನು ಹೊಗಳಿದಾಗ ನನ್ನ ಮಾತಿಗಿಂತ ಹತ್ತು ಪಟ್ಟು ತಮಗೆ ದಕ್ಕಬೇಕಿತ್ತು.
ಪಾಂಪಿ. ನೇರವಾಗಿಯೆ ಇರು; ಅದೇ ನಿನಗೆ ಒಪ್ಪುವುದು.ನನ್ನ ಹಡಗದ ಮೇಲ್ಛಾವಣಿಗೆ ತಮಗೆಲ್ಲ ನನ್ನ ಆಮಂತ್ರಣ.ಬನ್ನಿ, ಸ್ವಾಮಿ.
ಸೀಸರ್ ಆಂಟನಿ ದಾರಿ ತೋರಿಸಿ.
ಲೆಪಿಡಸ್ ಪಾಂಪಿ. ಬನ್ನಿ.
[ಎಲ್ಲರೂ ನಿಷ್ಕ್ರಮಣ, ಈನೋಬಾರ್ಬಸ್ ಮತ್ತು ಮೆನಾಸ್ ಉಳಿದು]
ಮೆನಾಸ್. [ಸ್ವಗತ] ನಿನ್ನ ತಂದೆಯಾಗಿದ್ದರೆ ಈ ಸಂಧಾನ
ಎಂದೂ ಮಾಡುತ್ತಿರಲಿಲ್ಲ, ಪಾಂಪಿ. — [ವ್ಯಕ್ತ] ನಾವಿಬ್ಬರೂ ಹಿಂದೆ ಕಲೆತಿದ್ದೇವಲ್ಲವೇ, ಸ್ವಾಮಿ?
ಈನೋ. ಸಮುದ್ರದಲ್ಲಿ ಅಂತ ಕಾಣುತ್ತದೆ.
ಮೆನಾಸ್. ಹೌದು.
ಈನೋ. ನೀರಲ್ಲಿ ನೀವು ಸಾಮಥ್ರ್ಯ ಮೆರೆದಿದ್ದೀರಿ.
ಮೆನಾಸ್. ನೆಲದಲ್ಲಿ ನೀವೂ.
ಈನೋ. ನನ್ನನ್ನು ಹೊಗಳುವ ಯಾರನ್ನೂ ನಾನು ಹೊಗಳುವೆ, ಇದರರ್ಥ ನೆಲದಲ್ಲಿ ನಾವು ಮೆರೆದದ್ದನ್ನು
ನಿರಾಕರಿಸುವುದೆಂದಲ್ಲ.
ಮೆನಾಸ್. ನಾವು ಜಲದಲ್ಲಿ ಮೆರೆದುದನ್ನೂ ಅಲ್ಲ.
ಈನೋ. ನಿಜ, ಕೆಲವನ್ನು ಸ್ವರಕ್ಷಣೆಗೋಸ್ಕರ ನಿರಾಕರಿಸಬಹುದು ನೀವು; ಕಡಲಲ್ಲಿ ನೀವು ಕಡಲುಗಳ್ಳರಾಗಿದ್ದು.
ಮೆನಾಸ್. ನೆಲದಲ್ಲಿ ನೀವೂ.
ಈನೋ. ಅಲ್ಲಿ ಮಾತ್ರ ನಾನು ಭೂಸೇವೆ ಸಲ್ಲಿಸಿಲ್ಲ. ಆದರೆ ನಿಮ್ಮ ಕೈ ಕೊಡಿ, ಮೆನಾಸ್. ನಮ್ಮ ಕಣ್ಣುಗಳು
ಕೊತವಾಲರಾಗಿದ್ದರೆ, ಇಲ್ಲಿ ಮಿಸಲಾಯಿಸುವ ಚೋರ-ದ್ವಯರನ್ನು ಅವು ಹಿಡಿಯುತ್ತಿದ್ದುವು.
ಮೆನಾಸ್. ಗಂಡಸರ ಕೈ ಹೇಗಿದ್ದರೂ ಮುಖಮಾತ್ರ ನಿಜವಾಗಿರುತ್ತದೆ.
ಈನೋ. ಆದರೆ ನಿಜಮುಖದ ಚೆಲುವೆ ಹೆಣ್ಣು ಎಂದೂ ಇರಲಿಲ್ಲ.
ಮೆನಾಸ್. ಚಾಡಿ ಮಾತಲ್ಲ, ಅವರು ಹೃದಯ ಕದಿಯುತ್ತಾರೆ.
ಈನೋ. ನಾವಿಲ್ಲಿ ಬಂದುದು ನಿಮ್ಮ ಜತೆ ಹೋರಾಡುವುದಕ್ಕೆ.
ಮೆನಾಸ್. ಇದೀಗ ಪಾನಕೂಟವಾದ್ದಕ್ಕೆ ನನಗೆ ದುಃಖವಿದೆ.
ಪಾಂಪಿ ಈವತ್ತು ನಕ್ಕು ನಕ್ಕೇ ತನ್ನ ಸೌಭಾಗ್ಯ ಕಳಕೊಳ್ಳುತ್ತಿದ್ದಾನೆ.
ಈನೋ. ನಕ್ಕು ಕಳಕೊಂಡದ್ದನ್ನು ಅತ್ತು ಗಳಿಸುವುದು ಸಾಧ್ಯವಿಲ್ಲ.
ಮೆನಾಸ್. ಎಂಥ ಮಾತು ಹೇಳಿದಿರಿ. ನಾವಿಲ್ಲಿ ಮಾರ್ಕ್ ಆಂಟನಿಗೋಸ್ಕರ ಬಂದಿಲ್ಲ. ಆದರೆ ನಿಜ ಹೇಳಿ, ಅವರು
ಕ್ಲಿಯೋಪಾತ್ರಾಳನ್ನು ಮದುವೆಯಾಗಿದ್ದಾರೆಯೇ?
ಈನೋ. ಸೀಸರನ ತಂಗಿಯ ಹೆಸರು ಒಕ್ಟೇವಿಯಾ.
ಮೆನಾಸ್. ನಿಜ, ಸ್ವಾಮಿ. ಅವಳು ಕೈಯುಸ್ ಮಾರ್ಸೆಲಸ್ನ ಮಡದಿ.
ಈನೋ. ಆದರೆ ಈಗವಳು ಮಾರ್ಕಸ್ ಅಂಟೋನಿಯಸ್ನ ಮಡದಿ.
ಮೆನಾಸ್. ನಿಜವಾಗಿಯೂ?
ಈನೋ. ನಿಜವಾಗಿಯೂ.
ಮೆನಾಸ್. ಹಾಗಿದ್ದರೆ ಸೀಸರ್ ಮತ್ತು ಆಂಟನಿ ಒಟ್ಟಿಗೇ ಬೆಸೆದ ಹಾಗಾಯ್ತು.
ಈನೋ. ಈ ಸಂಬಂಧದ ಬಗ್ಗೆ ನಾನು ಭವಿಷ್ಯ ನುಡಿಯಲು ಬದ್ಧನಾದರೆ, ನಾನು ಹಾಗೆ ಹೇಳಲಾರೆ.
ಮೆನಾಸ್. ನನಗನಿಸುತ್ತದೆ ಈ ಮದುವೆಯ ಕಾರಣ ಎರಡೂ ಕಡೆಯ ಪ್ರೀತಿಗಿಂತಲೂ ಹೆಚ್ಚು ರಾಜಕಾರಣ.
ಈನೋ. ನನಗೂ ಹಾಗನಿಸುತ್ತಿದೆ. ಯಾವ ದಾರ ಅವರನ್ನು ಸ್ನೇಹದಿಂದ ಜೋಡಿಸುವ ಹಾಗೆ ತೋರುವುದೋ ಅದೇ ಮುಂದೆ ಕುತ್ತಿಗೆಗೆ ಹಗ್ಗವಾಗುವುದನ್ನೂ ನೀವು ಕಾಣುವಿರಿ: ಒಕ್ಟೇವಿಯಾ ಮಾತು ಶುದ್ಧ, ಶೀತಲ ಮತ್ತು ನಿಶ್ಚಲ.
ಮೆನಾಸ್. ಅಂಥಾ ಹೆಂಡತಿ ಯಾರಿಗೆ ತಾನೇ ಬೇಡ?
ಈನೋ. ತಾನೇ ಹಾಗಲ್ಲದ ವ್ಯಕ್ತಿಗೆ ಬೇಡ, ಎಂದರೆ ಮಾರ್ಕ್ ಆಂಟನಿಗೆ. ಅವರು ತಮ್ಮ ಈಜಿಪ್ಶಿಯನ್
ಭೋಜನಕ್ಕೇ ಮತ್ತೆ ಮರಳುತ್ತಾರೆ, ಹಾಗೂ, ನಾನಾಗಲೇ ಹೇಳಿದಂತೆ, ಇವರ ಸ್ನೇಹಸಂಬಂಧದ ಮೂಲವೇ ಇವರ
ಮನಸ್ತಾಪಕ್ಕೂ ಕಾರಣವಾದೀತು. ಆಂಟನಿಯ ಒಲವು ಬೆಳೆಯುವುದು ಅದೀಗ ಇರುವಲ್ಲಿ. ಅವರು ಮದುವೆಯಾದ್ದು ಇಲ್ಲಿನ ಅನುಕೂಲಕ್ಕೆ.
ಮೆನಾಸ್. ಹಾಗೇ ಇರಬಹುದು. ಬನ್ನಿ, ಸ್ವಾಮಿ, ಹಡಗಿಗೆ ಹೋಗೋಣವೇ? ನಿಮ್ಮ ಆರೋಗ್ಯಕ್ಕೆ ಸ್ವಲ್ಪ ನನ್ನಲ್ಲಿದೆ.
ಈನೋ. ಧಾರಾಳವಾಗಿ, ಸ್ವಾಮಿ. ಈಜಿಪ್ಟಿನಲ್ಲಿ ನಮ್ಮ ಗಂಟಲು ಸುಮ್ಮನಿರಲಿಲ್ಲ.
ಮೆನಾಸ್. ಬನ್ನಿ, ಹೋಗೋಣ.
[ಇಬ್ಬರೂ ನಿಷ್ಕ್ರಮಣ]
ದೃಶ್ಯ 7
ಪಾಂಪಿಯ ಹಡಗಿನ ಮೇಲೆ, ಮಿಸ್ನೆಯಮ್ ಸಮೀಪ, ಒಂದು ಮೇಜು, ಕೆಲವು ಪೀಠಗಳನ್ನು ಸೇವಕರು ತರುತ್ತಾರೆ ಸಂಗೀತ. ಇಬ್ಬರೋ ಮೂವರೋ ಸೇವಕರು ಪಾನಪಾತ್ರೆಗಳೊಂದಿಗೆ ಪ್ರವೇಶ…
ಸೇವಕ 1. ಲೋ, ಬರ್ತಿದ್ದಾರೋ ಅವರು. ಕೆಲವರು ಈಗಾಗಲೇ ಬುಡ ಕಳಚಿದ್ದಾರೆ; ಒಂದು ಗಾಳಿ ಬಂದರೆ ಸಾಕು, ಬಿದ್ದುಬಿಡುತ್ತಾರೆ.
ಸೇವಕ 2. ಲೆಪಿಡಸ್ನ ಮುಖ ಕೆಂಪಾಗಿದೆ.
ಸೇವಕ 1. ಕುಡಿಸಿ ಕುಡಿಸಿ ಅವನನ್ನು ಹರಕೆಯ ಕುರಿಯಾಗಿ ಮಾಡಿಬಿಟ್ಟಿದ್ದಾರೆ.
ಸೇವಕ 2. ಅವರವರ ಬುದ್ಧಿಗೆ ಸರಿಯಾಗಿ ಅವರು ಒಬ್ಬರನ್ನೊಬ್ಬರು ಚಚ್ಚುತ್ತಿದ್ದರೆ, ಅವನು “ಬೇಡ ಬೇಡ” ಅನ್ನೋನು, ತನ್ನ ಕೋರಿಕೆಗೆ ಅವರನ್ನು ಒಪ್ಪಿಸೋನು, ಹಾಗೂ ಪಾನಕ್ಕೆ ತನ್ನನ್ನೂ.
ಸೇವಕ 1. ಆದರೆ ಇದರಿಂದ ಅವನಿಗೂ ಅವನ ಬುದ್ಧಿಗೂ ಇದಕ್ಕಿಂತ ದೊಡ್ಡ ಯುದ್ಧವೇ ಉಂಟಾಗುತ್ತದೆ.
ಸೇವಕ 3. ದೊಡ್ಡ ಜನರ ಕೂಟದಲ್ಲಿ ಇದೆಲ್ಲ ಬರೇ ಬೂಟಾಟಿಕೆ ಮಾತ್ರ. ಒಂದು ಹುಲ್ಲಿನ ದಂಟು ಕೂಡಾ ಭಾರೀ ಭಾರೀ ಗಾತ್ರದ ಇಬ್ಬಾಯಿಯ ಖಡ್ಗವಾಗುತ್ತದೆ.
ಸೇವಕ 1. ದೊಡ್ಡ ಮಂದಿಯ ವರ್ತುಲ ಸೇರುವುದು, ಆದರೆ ಹಾಗೆ ವರ್ತಿಸದೆ ಇರುವುದು ಕಣ್ಣಿಗೆ ಬದಲು ತೂತುಗಳಿರುವಂತೆ, ಮೋರೆಗೆ ಅದು ಭಯಂಕರ.
ಕಹಳೆಯ ಕೂಗು. ಸೀಸರ್, ಆಂಟನಿ, ಪಾಂಪಿ, ಲೆಪಿಡಸ್, ಅಗ್ರಿಪಾ, ಮೆಸೆನ್ನಾಸ್, ಈನೋಬಾರ್ಬಸ್, ಮೆನಾಸ್, ಇತರ ಕಪ್ತಾನರ ಜತೆ ಪ್ರವೇಶ,ಒಬ್ಬ ಹುಡುಗ ಸಹಿತ
ಆಂಟನಿ. [ಸೀಸರನಿಗೆ] ಅವರು ಹೀಗೆ ಮಾಡುತ್ತಾರೆ; ಅವರು ನೈಲ್ ನದಿಯ ನೀರಿನ ಮಟ್ಟವನ್ನು ಪಿರಮಿಡ್ಡಿನ ಚೆಡಿಗಳಿಂದ ಅಳೆಯುತ್ತಾರೆ; ಅದರ ಎತ್ತರ, ಆಳ, ಸಮತಟ್ಟುಗಳಿಂದ ಸುಭಿಕ್ಷವೋ, ಕ್ಷಾಮವೋ ಎನ್ನುವುದು ಗೊತ್ತಾಗುತ್ತದೆ ಅವರಿಗೆ. ನೈಲ್ ಅದೆಷ್ಟು ಎತ್ತರಕ್ಕೆ ಹರಿಯುತ್ತದೋ ಅಷ್ಟೂ ಸುಭಿಕ್ಷೆ; ಅದರ ನೆರೆ ಇಳಿಯುತ್ತಿರುವಂತೆ ಆ ಆವೆ ಮಣ್ಣಿನಲ್ಲಿ ರೈತರು ಬೀಜ ಬಿತ್ತುತ್ತಾರೆ, ಆಮೇಲೆ ಬೆಳೆ ಬೇಗನೆ ಬರುತ್ತದೆ.
ಲೆಪಿಡಸ್. ಅಲ್ಲಿ ವಿಚಿತ್ರ ಹಾವುಗಳಿವೆಯಲ್ಲವೇ?
ಆಂಟನಿ. ಹೌದು, ಲೆಪಿಡಸ್.
ಲೆಪಿಡಸ್. ಈಗ ಸೂರ್ಯ ಕೆಸರುಮಣ್ಣು ಒಣಗಿಸಿಬಿಡುತ್ತಾನೆ, ನಿಮ್ಮೀ ಒಣಮಣ್ಣಿನಿಂದ ಹುಟ್ಟುತ್ತವೆ ನಿಮ್ಮ ಈಜಿಪ್ತದ ಹಾವು;
ಹಾಗೇನೇ ನಿಮ್ಮ ಮೊಸಳೆಗಳೂ.
ಆಂಟನಿ. ನಿಜ.
ಪಾಂಪಿ. ಆಸೀನರಾಗಿ — ಸ್ವಲ್ಪ ಮದಿರೆ. ಲೆಪಿಡಸ್ನ ಆರೋಗ್ಯಕ್ಕೆ!
[ಎಲ್ಲರೂ ಕೂತು ಕುಡಿಯುತ್ತಾರೆ]
ಲೆಪಿಡಸ್. ನನಗೆ ಅಷ್ಟು ಹುಶಾರಿಲ್ಲ, ಆದರೂ ನಾನು ಹೊರಬೀಳುವವ ಅಲ್ಲ.
ಈನೋ. ನಿದ್ದೆ ಬೀಳುವ ತನಕವೂ ನೀವು ಹೊರಬೀಳುವುದಿಲ್ಲ; ಅಷ್ಟರ ತನಕ ಒಳಬೀಳುವವರು.
ಲೆಪಿಡಸ್. ಅಲ್ಲಾ, ನಾನು ನಿಜವಾಗ್ಲೂ ಕೇಳಿದ್ದೇನೆ
ಟಾಲೆಮಿಯರ ಪಿರಮಿಡುಗಳು ಉಪಯುಕ್ತ ವಸ್ತುಗಳು ಅಂತ. ಯಾರೂ ಅಲ್ಲ ಅಂದಿಲ್ಲ ಇದುವರೆಗೆ.
ಮೆನಾಸ್. [ಪಾಂಪಿಯ ಕಿವಿಯಲ್ಲಿ] ಪಾಂಪಿ, ಒಂದು ಮಾತು.
ಪಾಂಪಿ. [ಮೆನಾಸ್ನ ಕಿವಿಯಲ್ಲಿ] ಕಿವಿಯಲ್ಲಿ ಹೇಳು, ಏನದು?
ಮೆನಾಸ್. [ಗುಟ್ಟಾಗಿ] ಸ್ವಲ್ಪ ಎದ್ದು ಈ ಕಡೆ ಬನ್ನಿ, ಸ್ವಾಮಿ,
ದಯವಿಟ್ಟು. ನಾನು ಹೇಳೋ ಮಾತು ಕೇಳಿ.
ಪಾಂಪಿ. [ಮೆನಾಸ್ನ ಕಿವಿಯಲ್ಲಿ] ಬಿಟ್ಟಿರಯ್ಯಾ ನನ್ನನ್ನು ಒಂದು ಗಳಿಗೆ. — ಈ ಮದಿರೆ ಲೆಪಿಡಸ್ಗೆ!
ಲೆಪಿಡಸ್. ಈ ನಿಮ್ಮ ಮೊಸಳೆ ಎಂಥಾ ಪ್ರಾಣಿ?
ಆಂಟನಿ. ಅಯ್ಯಾ, ಅದರ ಆಕಾರ ಅದರ ಹಾಗೇ, ಮತ್ತು ಅಗಲ ಅಗಲದಷ್ಟೇ, ಎತ್ತರ ಎತ್ತರದಷ್ಟೇ, ಹಾಗೂ ಅದು ಸರಿಯುವುದು ಸ್ವಂತ ಅಂಗಗಳ ಮೇಲೆ. ಏನು ಪೌಷ್ಟಿಕವೋ ಅದನ್ನು ಅದು ತಿನ್ನುತ್ತದೆ, ಒಮ್ಮೆ ಪಂಚ ಭೂತಗಳು ಕಳಚಿದ್ದೇ ಅದರ ಜೀವ ಇನ್ನೊಂದು ದೇಹವನ್ನು ಹುಡುಕಿಕೊಂಡು ಹೋಗುತ್ತದೆ.
ಲೆಪಿಡಸ್. ಅದರ ಬಣ್ಣ?
ಆಂಟನಿ. ಅದೂ ಅದರದ್ದೇ.
ಲೆಪಿಡಸ್. ವಿಚಿತ್ರವಾದ ಸರ್ಪ!
ಆಂಟನಿ. ನಿಜ, ಮತ್ತು ಅದರ ಕಣ್ಣೀರು ನೀರು ನೀರು.
ಸೀಸರ್. ಈ ವಿವರಣೆಯಿಂದ ಅವನಿಗೆ ಸಮಾಧಾನವಾದೀತೆ?
ಆಂಟನಿ. ಪಾಂಪಿ ಅವನಿಗೆ ಕುಡಿಸುವುದು ನೋಡಿದರೆ
ಆಗಲೇಬೇಕು, ಅಲ್ಲದಿದ್ದರೆ ಅವನೊಬ್ಬ ನಾಸ್ತಿಕನೇ ಸರಿ!
[ಮೆನಾಸ್ ಪಾಂಪಿಯ ಕಿವಿಯಲ್ಲಿ ಮತ್ತೊಮ್ಮೆ ಏನೋ
ಪಿಸುಗುಟ್ಟುತ್ತಾನೆ]
ಪಾಂಪಿ. [ಮೆನಾಸ್ಗೆ ಮಾತ್ರ] ಹೋಗಯ್ಯ, ಹೋಗು! ಮತ್ತದನ್ನೇ
ಹೇಳ್ತೀಯಾ ನನಗೆ? ದೂರ ಸರಿ! ನಾ ಅಂದ ಹಾಗೆ ಮಾಡು. —
ಎಲ್ಲಿದೆ ನಾ ಹೇಳಿದ ಮದಿರೆ?
ಮೆನಾಸ್. [ಪಾಂಪಿಗೆ ಮಾತ್ರ] ಹಿಂದಿಂದು ನೆನೆಸಿಕೊಂಡಾದರೂ ನನ್ನ ಮಾತನ್ನು ಕೇಳಿ, ಸ್ವಲ್ಪ ಈಚೆಗೆ ಬನ್ನಿ.
ಪಾಂಪಿ. [ಮೆನಾಸ್ಗೆ ಮಾತ್ರ] ನಿನಗೆ ತಲೆ ಸರಿಯಿಲ್ಲ ಅಂತ ನನ್ನ ಭಾವನೆ.
[ಏಳುತ್ತಾನೆ; ಮೆನಾಸ್ ಮತ್ತು ಪಾಂಪಿ ನಡೆದುಕೊಂಡು]
ಹೇಳು, ಏನದು ವಿಷಯ?
ಮೆನಾಸ್. ಯಾವಾಗಲೂ ನಿಮ್ಮ ಏಳಿಗೆಯನ್ನೇ ನಾನು
ಬಯಸಿದ್ದೇನೆ.
ಪಾಂಪಿ. ನೀನು ವಿಶ್ವಾಸದಿಂದ ನನ್ನ ಸೇವೆ ಮಾಡಿದ್ದೀ.
ಇನ್ನೇನಿದೆ ಹೇಳುವುದು? —
[ಅತಿಥಿಗಳಿಗೆ, ವ್ಯಕ್ತವಾಗಿ] ತಗೊಳ್ಳಿ, ಸ್ವಾಮಿ, ತಗೊಳ್ಳಿ.
ಆಂಟನಿ. ಈ ಉಸುಕಿನ ಸುಳಿಗಳಿವೆಯಲ್ಲಾ, ಲೆಪಿಡಸ್,
ಅವುಗಳಿಂದ ದೂರ ಇರಬೇಕು, ಇಲ್ಲದಿದ್ದರೆ ನಾವು
ಕುಸಿದುಹೋಗುತ್ತೇವೆ ಅವುಗಳ ಒಳಗೆ.
[ಮೆನಾಸ್ ಮತ್ತು ಪಾಂಪಿ ಪರಸ್ಪರ ಮಾತ್ರ ಮಾತಾಡಿಕೊಳ್ಳುತ್ತಾರೆ]
ಮೆನಾಸ್. ಇಡೀ ಜಗತ್ಪತಿ ಆಗ್ತೀರಾ?
ಪಾಂಪಿ. ಏನು ಹೇಳ್ತಾ ಇದ್ದೀ?
ಮೆನಾಸ್. ಇಡೀ ಜಗತ್ಪತಿ ಆಗ್ತೀರಾ ಅಂತ? ಅಂದರೆ ಇಮ್ಮಡಿ.
ಪಾಂಪಿ. ಅದು ಹೇಗೆ?
ಮೆನಾಸ್. ಆಗ್ಬೇಕು ಅಂದುಕೊಳ್ಳಿ, ಸಾಕು, ಮತ್ತು, ನಿಮ್ಮ ದೃಷ್ಟಿಯಲ್ಲಿ ನಾನೆಷ್ಟೇ ಪಡಪೊಶಿಯಾದರೂ, ಜಗತ್ತನ್ನು ನಿಮಗೆ ಕೊಡುವವನು ನಾನು.
ಪಾಂಪಿ. ಎಷ್ಟು ಕುಡಿದಿದ್ದೀಯಾ?
ಮೆನಾಸ್. ಇಲ್ಲ, ಪಾಂಪಿ, ನಾನು ಪಾನಪಾತ್ರೆಯಿಂದ ದೂರ ಇದ್ದೇನೆ. ನಿಮಗೆ ಬೇಕಿದ್ದರೆ, ನೀವು ಭೂಲೋಕದ
ದೇವರಾಗಬಹುದು. ಸಮುದ್ರ ಬಳಸಿದ್ದು, ಆಕಾಶ ತಬ್ಬಿದ್ದು ಎಲ್ಲವೂ ಬೇಕಿದ್ದರೆ ನಿಮ್ಮದೇ.
ಪಾಂಪಿ. ಅದರ ದಾರಿ ತೋರಿಸು.
ಮೆನಾಸ್. ಈ ಮೂವರು ಪಾಲುದಾರರು, ಈ ಪ್ರತಿ-ಸ್ಪರ್ಧಿಗಳು, ನಿಮ್ಮ ಹಡಗಿನಲ್ಲಿದ್ದಾರೆ. ನಾನು ಲಂಗರದ
ಸರಪಣಿ ಕಡಿದು ಬಿಡ್ತೇನೆ, ಹಡಗ ಚಲಿಸುವಾಗ ಅವರ ಕುತ್ತಿಗೆ ಮೇಲೆ ಬಿದ್ದರಾಯಿತು. ಉಳಿದುದೆಲ್ಲಾ ನಿಮ್ಮದೇ.
ಪಾಂಪಿ. ಹಾ, ಇದನ್ನು ನೀನು ಮಾಡಬೇಕಿತ್ತು, ಹೇಳುವುದಲ್ಲ! ನಾನು ಮಾಡಿದರೆ ಅದು ನೀಚತನ, ನೀನು ಮಾಡಿದರೆ ಸ್ವಾಮಿಕಾರ್ಯ. ನಿನಗೆ ಗೊತ್ತಿರಬೇಕು, ನನ್ನ ಲಾಭವಲ್ಲ ನನಗೆ ಗೌರವ ತರೋದು, ನನ್ನ ಗೌರವ ನನಗೆ ಲಾಭ ತರೋದು. ನಾಲಿಗೆ ನಿನ್ನ ದುಷ್ಕøತ್ಯವನ್ನು ಹೀಗೆ ಬಿಟ್ಟುಕೊಟ್ಟಿತಲ್ಲ, ಅದಕ್ಕೆ ಪಶ್ಚಾತ್ತಾಪಪಟ್ಟುಕೋ. ನನಗೆ ಅರಿವಿಲ್ಲದೆ ಆಗಿದ್ದಿದ್ದರೆ, ಆಮೇಲೆ ಅದು ಚೆನ್ನಾಗಿಯೇ ಆಯಿತೆಂದು ಅಂದುಕೊಳ್ಳುತ್ತಿದ್ದೆ, ಆದರೆ ಈಗ ನಾನದನ್ನು ಖಂಡಿಸಲೇಬೇಕು. ಈಗ ಸುಮ್ಮನೆ ಹೋಗಿ ಕುಡಿ.
[ಪಾಂಪಿ ಮೇಜಿಗೆ ಹಿಂದಿರುಗುತ್ತಾನೆ]
ಮೆನಾಸ್. [ತನ್ನಲ್ಲೇ] ಇನ್ನು ನಿಮ್ಮ ಇಳಿಗಾಲದ ಅದೃಷ್ಟವನ್ನು ನಾನು ಹಿಂಬಾಲಿಸುವ ಪ್ರಶ್ನೆಯೇ ಇಲ್ಲ. ಎಣ್ಣೆ ಬಂದಾಗ ಬೇಕೆಂದೇ ಕಣ್ಣುಮುಚ್ಚುವವನಿಗೆ ಆಮೇಲೆ ಬೇಕೆಂದಾಗ ಎಣ್ಣೆ ಇಲ್ಲ. ಪಾಂಪಿ. ಇದೀಗ ಲೆಪಿಡಸ್ಗೆ!
ಆಂಟನಿ. ಅವನನ್ನು ದಡಕ್ಕೆ ಒಯ್ಯಿರಿ. ಅವನಿಗೋಸ್ಕರ ನಾನು ನಿಲ್ಲುವೆ, ಪಾಂಪಿ.
ಈನೋ. ಇದು ನಿಮಗೋಸ್ಕರ, ಮೆನಾಸ್!
[ಈನೋಬಾರ್ಬಸ್ ಮತ್ತು ಮೆನಾಸ್ ಕುಡಿಯುತ್ತಾರೆ]
ಮೆನಾಸ್. ಈನೋಬಾರ್ಬಸ್, ಸ್ವಾಗತ!
ಈನೋ. ಅಲ್ಲಿ ನೋಡಿದೆಯ, ಒಬ್ಬ ಗಟ್ಟಿ ಮನುಷ್ಯ, ಮೆನಾಸ್! [ಲೆಪಿಡಸ್ನನ್ನು ಸೇವಕರು ಹೊತ್ತುಕೊಂಡೊಯ್ಯುತ್ತಿರುವುದನ್ನು
ತೋರಿಸುತ್ತಾನೆ]
ಮೆನಾಸ್. ಯಾಕೆ?
ಈನೋ. ಅವ ಜಗತ್ತಿನ ಮೂರನೇ ಒಂದು ಭಾಗ ಹೊತ್ತವ, ಕಣೋ; ಕಾಣಿಸೋದಿಲ್ವೇ?
ಮೆನಾಸ್. ಆ ಮೂರನೇ ಭಾಗ ಕುಡಿದು ನೆತ್ತಿಗೇರಿದೆ. ಅಷ್ಟೇ ಆಗಿದ್ದರೆ ಅದನ್ನು ಚಕ್ರಗಳ ಮೇಲೆ ಇರಿಸಿದ್ದರೆ ಜೋರಾಗಿ ಚಕ್ರ ಸುತ್ತುತ್ತಿತ್ತು.
ಈನೋ. ಕುಡಿ ನೀನು; ಇನ್ನಷ್ಟು ಚಕ್ರ ಸುತ್ತಿಸು.
ಮೆನಾಸ್. ಸರಿ, ಸರಿ.
ಪಾಂಪಿ. ಇದಿನ್ನೂ ಅಲೆಕ್ಝಾಂಡ್ರಿಯಾದ ಔತಣಕ್ಕೆ ಸಮವಲ್ಲ.
ಆಂಟನಿ. ಅದರ ಕಡೆ ಹೊರಳುತ್ತಿದೆ. ಪಿಪಾಯಿಗಳನ್ನ ಒಡೆಯಿರಿ, ಲೋ! ಇದೀಗ ಸೀಸರಿಗೆ!
ಸೀಸರ್. ನನಗಿಷ್ಟು ಸಾಕು. ನನ್ನ ಮಿದುಳು ತೊಳೆದಷ್ಟೂ ಕೊಳಕಾಗುತ್ತದೆ, ಇದೊಂದು ಅಸಹಜ ಪ್ರಸವ.
ಆಂಟನಿ. ಕಾಲದ ಶಿಶುವಾಗಿರಿ.
ಸೀಸರ್. ಕುಡಿದು ಮುಗಿಸಿ, ಆಮೇಲೆ ನಾನು; ಆದರೆ ಒಂದೇ ದಿವಸ ಕುಡಿದು ಮುಗಿಸೋದಕ್ಕಿಂತ ನಾಲ್ಕು ದಿವಸ ಏನನ್ನೂ
ಮುಟ್ಟದಿರೋದೇ ಒಳ್ಳೇದು, ನನ್ನ ಮಟ್ಟಿಗೆ.
ಈನೋ. [ಆಂಟನಿಗೆ] ಹಾ, ನನ್ನ ಮಹಾಪ್ರಭೂ, ನಾವೀಗ ಈಜಿಪ್ಶಿಯನ್ ಮುಕ್ತನರ್ತನ ಮಾಡಿ, ಕುಡಿತಕ್ಕೆ ಕಳೆ ಕಟ್ಟೋಣವೇ?
ಪಾಂಪಿ. ಅದೂ ಆಗಲಿ, ಯೋಧ ಮಹಾಶಯ.
ಆಂಟನಿ. ಬನ್ನಿ, ಕೈ ಹಿಡಿಯಿರಿ, ಮದಿರೆ ನಮ್ಮ ಪ್ರಜ್ಞೆಯನ್ನು ಮೃದುಮಧುರ ವೈತರಣಿಯಲ್ಲಿ ಮೆಲ್ಲಮೆಲ್ಲಗೆ ಮುಳುಗಿಸಲಿ.
ಈನೋ. ಎಲ್ಲರೂ ಕೈ ಕೈ ಹಿಡಿಯಿರಿ. ಎಲ್ಲಿ ನಮ್ಮ ಕಿವಿ ಕೊರೆಯುವ ಸಂಗೀತ ನುಡಿಸಿರಿ, ಅಷ್ಟರಲ್ಲಿ ನಿಮ್ಮನ್ನೆಲ್ಲ ಬೇಕು ಬೇಕಾದಲ್ಲಿ ನಿಲ್ಲಿಸುತ್ತೇನೆ; ಆಮೇಲೆ ಹುಡುಗ ಹಾಡುತ್ತಾನೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಶಕ್ತ್ಯನುಸಾರ ಪಲ್ಲವಿ ಕೂಗಬೇಕು.
[ಸಂಗೀತ. ಈನೋಬಾರ್ಬಸ್ ಎಲ್ಲರನ್ನೂ ಕೈ ಕೈ ಹಿಡಿದು ನಿಲ್ಲಿಸುವನು]
ಹುಡುಗ. [ಹಾಡುವನು]
ಮದ್ಯದ ದೊರೆಯೇ, ಬಾ, ನಸುಗೆಂಪಿನ ಕಣ್ಣಿನ ದುಂಡನೆ ಕಾಮನೆ ಬಾ!
ನಿನ್ನ ಪಿಪಾಯಿಗಳಲ್ಲಿ
ಮುಳುಗಲಿ ನಮ್ಮಯ ಚಿಂತೆಗಳು
ನಮ್ಮೀ ತಲೆಗಳ ಮೇಲೆ
ಕಿರೀಟವಾಗಲಿ ದ್ರಾಕ್ಷಿಗಳು
ಎಲ್ಲರೂ. ಕುಡಿಯಿಸು ನಮಗೆ
ಜಗ ತಿರುಗುವ ವರೆಗೆ
ಕುಡಿಯಿಸು ನಮಗೆ
ಜಗ ತಿರುಗುವ ವರೆಗೆ
ಸೀಸರ್. ಇನ್ನೇನು? ಪಾಂಪಿ, ಶುಭರಾತ್ರಿ. ಸೋದರನೆ, ಇನ್ನಿದು ಸಾಕೆಂದು ನನ್ನ ವಿನಂತಿ. ಈ ಕುಶಾಲುಗಾರಿಕೆಯನ್ನು ನಮ್ಮ ಘನಕಾರ್ಯ ದುರುಗುಟ್ಟಿ ನೋಡುತ್ತಿದೆ. ಮಹಾಶಯರೆ, ಇನ್ನು ತೆರಳೋಣ; ನೋಡಿದಿರ, ನಮ್ಮ ಕೆನ್ನೆ ರಂಗೇರಿದೆ.
ಗಟ್ಟಿಯಾದ ಈನೋಬಾರ್ಬಸ್ ಕೂಡಾ ಮದಿರೆಗಿಂತ ದುರ್ಬಲ, ಹಾಗೂ ನನ್ನ ನಾಲಿಗೆ ಸರಿಯಾಗಿ ಹೊರಳ್ತ ಇಲ್ಲ. ಈ ವೇಷ ಕಟ್ಟಿ ನಾವು ಹಾಳಾದೆವು. ಇದಕ್ಕಿಂದ ಹೆಚ್ಚು ಹೇಳಬೇಕೇ? ಶುಭ ರಾತ್ರಿ. ಆಂಟನಿ, ಕೈ ಕೊಡಿ.
ಪಾಂಪಿ. ನಾನು ನೆಲದ ಮೇಲೆ ನಿಮ್ಮನ್ನೊಂದು ಕೈ ನೋಡುವೆ.
ಆಂಟನಿ. ಹಾಗೇ ಆಗಲಿ, ಸ್ವಾಮಿ. ಕೈ ಕೊಡಿ.
ಪಾಂಪಿ. ಓ ಆಂಟನಿ, ನಿಮಗೆ ನನ್ನ ತಂದೆಯ ಮನೆಯಿದೆ. ಆದರೇನಾಯಿತು? ನಾವೀಗ ಗೆಳೆಯರು. ದೋಣಿಗೆ ಬನ್ನಿ.
ಈನೋ. ಬೀಳದ ಹಾಗೆ ನೋಡ್ಕೊಳ್ಳಿ.
[ಈನೋಬಾರ್ಬಸ್ ಮತ್ತು ಮೆನಾಸ್ ಹೊರತು ಉಳಿದವರೆಲ್ಲರ ನಿಷ್ಕ್ರಮಣ]
ಮೆನಾಸ್, ನಾನು ದಡಕ್ಕೆ ಹೋಗೋದಿಲ್ಲ.
ಮೆನಾಸ್. ಬೇಡ, ನನ್ನ ಕೋಣೆಗೆ ಹೋಗೋಣ.
ಈ ತಮಟೆಗಳು, ಈ ಕಹಳೆಗಳು, ಈ ಕೊಳಲುಗಳು! ಎಲ್ಲಿ, ಬಾರಿಸಿರೋ! ಸಗರ ರಾಜನಿಗೆ ಗೊತ್ತಾಗಲಿ ನಾವೀ ದೊಡ್ಡ ಆಸಾಮಿಗಳಿಗೆ ಎಂಥಾ ದೊಡ್ಡ ವಿದಾಯ ನೀಡುತ್ತಿದ್ದೇವೆ ಎನ್ನೋದು. ಹೊಡೀರಿ ಇಲ್ಲಾ ಮಡೀರಿ, ಹೊಡೆದು ಕಳಿಸಿಬಿಡಿ!
[ಸಂಗೀತದ ಶಬ್ದ, ತಮಟೆಗಳೊಂದಿಗೆ]
ಈನೋ. ಹ್ಹೂ! ಅಂತೀನಿ. ಇದೋ ನನ್ನ ಟೊಪ್ಪಿ!
[ಟೊಪ್ಪಿಯನ್ನು ಮೇಲಕ್ಕೆಸೆಯುತ್ತಾನೆ]
ಮೆನಾಸ್. ಹ್ಹೂ! ಬನ್ನಿ, ಕಪ್ತಾನ್ರೆ.
[ಇಬ್ಬರೂ ನಿಷ್ಕ್ರಮಣ]
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು