- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
- ಜೂಲಿಯಸ್ ಸೀಸರ್ ಅಂಕ -೫ - ಜನವರಿ 30, 2022
ಅಂಕ 3
ದೃಶ್ಯ 1
ಮಧ್ಯಪೂರ್ವ ದೇಶ
ವೆಂಟೀಡಿಯಸ್ ಪ್ರವೇಶ, ವಿಜಯದುಂದುಭಿಯವರು, ಸಿಲಿಯಸ್, ಮತ್ತಿತರ ರೋಮನರು, ಅಧಿಕಾರಿಗಳು, ಮತ್ತು ಸೈನಿಕರ ಜತೆ, ಅವನ ಮುಂದೆ ಪಕೋರಸನ ಶವ ಎತ್ತಿಕೊಂಡವರು.
ವೆಂಟೀಡಿಯಸ್. ಇತರರ ತಿವಿಯುವ ಪಾರ್ಥಿಯವೇ, ಈಗ ನಿನಗೇ ತಿವಿತ ಸಿಕ್ಕಿತು, ಮಾರ್ಕಸ್ ಕ್ರಾಸಸ್ನ ಸಾವಿನ ಹಗೆಗೆ
ಅದೃಷ್ಟ ನನ್ನನ್ನು ಪ್ರತೀಕಾರ ಮಾಡಿತು. ದೊರೆಮಗನ ಹೆಣವನ್ನು ನಮ್ಮ ಸೇನೆಯ ಮುಂದೆ ಕೊಂಡೊಯ್ಯಿರಿ. ಒರೋಡಿಸ್, ನಿನ್ನ
ಪಕೋರಸ್ ಮಾರ್ಕಸ್ ಕ್ರಾಸಸ್ನ ಬೆಲೆ ತೆತ್ತಿದ್ದಾನೆ.
ಸಿಲಿಯಸ್. ವೆಂಟೀಡಿಯಸ್, ಪಾರ್ಥಿಯನ್ ರಕ್ತ ನಿನ್ನ ಖಡ್ಗದಲ್ಲಿ ಇನ್ನೂ ಆರುವ ಮೊದಲೇ, ದಿಕ್ಕೆಟ್ಟ ಪಾರ್ಥಿಯನರ
ಹಿಂಬಾಲಿಸು. ಮೀಡಿಯಾ, ಮೆಸಪೆÇಟೇಮಿಯಾ, ಹಾಗೂ ಅವರು ಅಡಗುವುದಕ್ಕೆ ಧಾವಿಸುವ ತಾಣಗಳ ಮೂಲಕ ದೌಡಾಯಿಸು.
ಮಹಾ ಸೇನಾಧಿಪತಿ ಆಂಟನಿ ನಿನ್ನನ್ನು ವಿಜಯರಥದಲ್ಲಿ ಕುಳ್ಳಿರಿಸಿ ನಿನ್ನ ಶಿರವನ್ನು ಹಾರಗಳಿಂದ ಅಲಂಕರಿಸುವಂತಾಗಲಿ.
ವೆಂಟೀಡಿಯಸ್. ಓ ಸಿಲಿಯಸ್, ಸಿಲಿಯಸ್,ನಾನು ಸಾಕಷ್ಟು ಮಾಡಿದ್ದೇನೆ. ಸ್ವಲ್ಪ ಕೆಳಗಿನ ಅಧಿಕಾರಿಯೇ ಅತ್ಯಂತ ಶ್ರೇಷ್ಠ ಕಾರ್ಯವನ್ನು ಎಸಗುವವ. ಒಂದು ವಿಷಯ ತಿಳಿದುಕೋ, ಸಿಲಿಯಸ್. ನಮ್ಮ ಒಡೆಯರು ದೂರವಿರುತ್ತ,
ಎಲ್ಲಾ ಮಾಡಿ ಅತಿ ಖ್ಯಾತಿ ಗಳಿಸುವುದಕ್ಕಿಂತ, ಸ್ವಲ್ಪ ಇನ್ನೂ ಮಾಡದೆ ಉಳಿಸುವುದೇ ಒಳ್ಳೆಯದು. ಸೀಸರ್ ಮತ್ತು ಆಂಟನಿ
ಯಾವತ್ತೂ ತಾವಾಗಿ ಗಳಿಸಿದ್ದಕ್ಕಿಂತ ತಮ್ಮ ಕೀಳಧಿಕಾರಿಗಳ ಮೂಲಕ ಗಳಿಸಿದ್ದೇ ಜಾಸ್ತಿ. ಸಿರಿಯಾದಲ್ಲಿ ನನ್ನದೇ ಸ್ಥಾನದ
ಸೋಸಿಯಸ್, ಆಂಟನಿಯ ಉಪಾಧಿಕಾರಿ, ಕ್ಷಣ ಕ್ಷಣದ ತನ್ನ ತ್ವರೆಯಿಂದ ಗಳಿಸಿದ ತನ್ನ ಪ್ರಸಿದ್ಧಿಗೋಸ್ಕರ ದೊರೆಯ ಆದರವ
ಕಳಕೊಂಡ. ಯುದ್ಧದಲ್ಲಿ ಯಾರು ನಾಯಕನಿಗಿಂತ ಹೆಚ್ಚು ಗೆಲುವು ಗಳಿಸುತ್ತಾನೆ, ಆತ ನಾಯಕನ ನಾಯಕನಾಗುತ್ತಾನೆ;
ಮತ್ತು ಯೋಧರ ಸಹಜ ಗುಣವಾದ ಮಹತ್ವಾಕಾಂಕ್ಷೆ ಕೊನೆಗೂ ಆರಿಸುವುದು ಗೆಲುವನ್ನಲ್ಲ, ಅಪಖ್ಯಾತಿ ತರುವ
ಸೋಲನ್ನು. ಅಂಟೋನಿಯಸ್ನ ಏಳಿಗೆಗೋಸ್ಕರ ನಾನು ಇನ್ನಷ್ಟು ಮಾಡಬಲ್ಲೆ, ಆದರೆ ಅದರಿಂದ ಅವರಿಗೆ ಸಿಟ್ಟು
ಬರುತ್ತದೆ, ಮತ್ತು ಅವರ ಸಿಟ್ಟಿನಲ್ಲಿ ನನ್ನ ಸಾಧನೆ ನೆಲಕಚ್ಚುತ್ತದೆ.
ಸಿಲಿಯಸ್. ವೆಂಟೀಡಿಯಸ್, ನಿನಗೆ ಸತ್ಯಾಸತ್ಯದ ಅರಿವಿದೆ, ಅದಿಲ್ಲದಿದ್ದರೆ ಒಬ್ಬ ಯೋಧನಿಗೂ ಅವನ ಆಯುಧಕ್ಕೂ ಏನು
ವ್ಯತ್ಯಾಸ? ಆಂಟನಿಗೆ ಬರೆಯುತ್ತೀಯಾ?
ವೆಂಟೀಡಿಯಸ್. ವಿನಮ್ರತೆಯಿಂದ ಬರೆಯುತ್ತೇನೆ. ಅವರ ಹೆಸರಲ್ಲಿ ನಾವು ಹೇಗೆ ಯುದ್ಧವೆಂಬ ಈ ಮಾಂತ್ರಿಕ ಪದವನ್ನು
ಕಾರ್ಯರೂಪಕ್ಕೆ ಇಳಿಸಿದೆವು; ಅವರ ಸ್ವಜನರ ಮತ್ತು ಸಂತುಷ್ಟ ಸೈನಿಕರ ಸಹಿತ ಹೇಗೆ ಇದುವರೆಗೆ ಸೋಲರಿಯದ ಪಾರ್ಥಿಯಾದ ಅಶ್ವದಳವನ್ನು ರಂಗದಿಂದ ಹಿಮ್ಮೆಟ್ಟಿಸಿದೆವು ಎಂದು ತಿಳಿಸುವೆ.
ಸಿಲಿಯಸ್. ಅವರೀಗ ಎಲ್ಲಿದ್ದಾರೆ?
ವೆಂಟೀಡಿಯಸ್. ಏಥೆನ್ಸಿಗೆ ಹೋಗಬೇಕೆಂದಿದ್ದಾರೆ, ಅಲ್ಲಿಗೆ ನಾವೂ ನಮ್ಮ ಸರಂಜಾಮುಗಳನ್ನು ಕಟ್ಟಿಕೊಂಡು, ಆದಷ್ಟು
ಶೀಘ್ರವೇ ಹೋಗತಕ್ಕದ್ದು. — ಹೊರಡಿ, ಲೋ;
ಮುಂದುವರಿಯಿರಿ!
[ಎಲ್ಲರೂ ನಿಷ್ಕ್ರಮಣ]
ದೃಶ್ಯ 2
ರೋಮಿನಲ್ಲಿ
ಒಂದು ಬಾಗಿಲಿನಿಂದ ಅಗ್ರಿಪಾ, ಇನ್ನೊಂದರಿಂದ ಈನೋಬಾರ್ಬಸ್ ಪ್ರವೇಶ
ಅಗ್ರಿಪಾ. ಏನು, ಬಂಧುಗಳು ಬೀಳ್ಕೊಟ್ಟರೇ?
ಈನೋ. ಪಾಂಪಿಯನ್ನು ಅವರು ಕಳಿಸಿಯಾಯ್ತು; ಆತ ಹೋಗಿದ್ದಾನೆ. ಉಳಿದ ಮೂವರು ಮೊಹರು ಹಾಕುತ್ತಿದ್ದಾರೆ.
ರೋಮಿನಿಂದ ತೆರಳುವುದಕ್ಕೆ ಒಕ್ಟೇವಿಯಾ ಅಳುತ್ತಿದ್ದಾಳೆ;ಸೀಸರನಿಗೆ ದುಃಖ; ಮತ್ತು ಮೆನಾಸ್ ಹೇಳುವುದೆಂದರೆ,
ಪಾಂಪಿಯ ಔತಣದ ನಂತರ ಲೆಪಿಡಸ್ಗೆ ಹಸಿರು ವ್ಯಾಧಿ.
ಅಗ್ರಿಪಾ. ಲೆಪಿಡಸ್ ಜಾಣ.
ಈನೋ. ಭಾಳ ಒಳ್ಳೆಯವ. ಅಹಹಾ! ಹೇಗೆ ಅವ ಸೀಸರನನ್ನು ಪ್ರೀತಿಸುತ್ತಾನೆ!
ಅಗ್ರಿಪಾ. ಅಲ್ಲಲ್ಲ, ಎಷ್ಟು ಗಾಢವಾಗಿ ಮಾರ್ಕ್ ಆಂಟನಿಯನ್ನು ಆರಾಧಿಸುತ್ತಾನೆ!
ಈನೋ. ಸೀಸರ್? ಮನುಷ್ಯರಲ್ಲಿ ಅವನು ಜ್ಯೂಪಿಟರಿಗೆ ಸಮ.
ಅಗ್ರಿಪಾ. ಆಂಟನಿ ಯಾರು? ಜ್ಯೂಪಿಟರಿನ ದೇವತೆ.
ಈನೋ. ಸೀಸರನ ಬಗ್ಗೆ ಹೇಳಿದಿಯಾ? ಅವನು ಉಪಮಾತೀತ!
ಅಗ್ರಿಪಾ. ಓ ಆಂಟನಿಯೆ, ಅರೇಬಿಯಾದ ಹಕ್ಕಿಯೇ!
ಈನೋ. ಸೀಸರನ್ನ ನೀನು ಹೊಗಳುವುದಿದ್ದರೆ, `ಸೀಸರ್’ ಎಂದರೆ ಸಾಕು, ಅದಕ್ಕೂ ಮುಂದಕ್ಕೆ ಹೋಗುವುದು ಬೇಡ.
ಅಗ್ರಿಪಾ. ನಿಜ, ಇಬ್ಬರಿಗೂ ಬೆಣ್ಣೆ ಹಚ್ಚಿದ್ದಾನೆ.
ಈನೋ. ಆದರೆ ಸೀಸರನೆ ಅವನಿಗೆ ಜಾಸ್ತಿ ಇಷ್ಟ; ಆದರೂ ಆಂಟನಿಯನ್ನು ಪ್ರೀತಿಸುತ್ತಾನೆ; ಹ್ಹೂ! ಹೃದಯಗಳು,
ಜಿಹ್ವೆಗಳು, ಸಂಖ್ಯೆಗಳು, ಲೆಕ್ಕಣಿಗರು, ಗೀತಕಾರರು, ಕವಿಗಳು, ಯೋಚಿಸಲಾರರು, ಮಾತಾಡಲಾರರು, ಚಿತ್ರಿಸಲಾರರು,
ಬರೆಯಲಾರರು, ಹಾಡಲಾರರು, ಎಣಿಸಲಾರರು, ಹ್ಹೂ!
ಆಂಟನಿಗೆ ಅವನ ಪ್ರೀತಿ. ಸೀಸರನಿಗಾದರೆ,
ಮಂಡಿಯೂರು, ಮಂಡಿಯೂರು, ಅಚ್ಚರಿಪಡು.
ಅಗ್ರಿಪಾ. ಇಬ್ಬರನ್ನೂ ಪ್ರೀತಿಸುತ್ತಾನೆ ಅವನು.
ಈನೋ. ಅವರು ಅವನಿಗೆ ಸೆಗಣಿ, ಅವನು ಅವರ ಹುಳ.
[ಒಳಗಿನಿಂದ ಕಹಳೆವಾದ್ಯ] ಸರಿ; ಇದೀಗ ಕುದುರೆಯೇರುವುದಕ್ಕೆ ಸೂಚನೆ. ವಿದಾಯ,ಅಗ್ರಿಪಾ.
ಅಗ್ರಿಪಾ. ಒಳ್ಳೇದಾಗಲಿ ನಿಮಗೆ, ಯೋಧಮಹಾಶಯ, ವಿದಾಯ.
ಸೀಸರ್, ಆಂಟನಿ, ಲೆಪಿಡಸ್, ಮತ್ತು ಒಕ್ಟೇವಿಯಾ ಪ್ರವೇಶ..
ಆಂಟನಿ. ಇಷ್ಟು ಸಾಕು, ಸ್ವಾಮಿ.
ಸೀಸರ್. ನೀವು ನನ್ನಿಂದ ನನ್ನ ಬಹುದೊಡ್ಡ ಭಾಗವೊಂದನ್ನು ತೆಗೆದೊಯ್ಯುತ್ತಿದ್ದೀರಿ; ಅಲ್ಲಿ ನನ್ನ ಸದುಪಯೋಗವಾಗಲಿ. —
ತಂಗೀ, ನನ್ನ ಮನ ಕಲ್ಪಿಸಿದಂಥ ಪತ್ನಿಯಾಗಿರು, ಮತ್ತು ನಿನ್ನ ನಿಷ್ಕಳಂಕತೆಗೆ ನಾನು ಎಲ್ಲವನ್ನೂ ಪಣವಿಡುವೆ. — ಶ್ರೇಷ್ಠನಾದ
ಆಂಟನಿಯೇ, ನಮ್ಮ ಪ್ರೀತಿಯನ್ನು ಕಟ್ಟಲು ನಮ್ಮಿಬ್ಬರ ಮಧ್ಯೆ ಗಾರೆಯಂತಿರಿಸಿದ ಈ ಸದ್ಗುಣ ರತ್ನ ಕೋಟೆಯೊಡೆಯುವ
ದಿಮ್ಮಿಯಾಗದಿರಲಿ; ಎರಡೂ ಕಡೆ ಇದನ್ನ ಲಾಲಿಸದೆ ಇದ್ದರೆ, ಇದಿಲ್ಲದೆಯೂ ವಾವು ಪ್ರೀತಿಸುವುದೇ ಒಳ್ಳೆಯದಿತ್ತು
ಅನಿಸಬಹುದು.
ಆಂಟನಿ. ಇಂಥ ಅಪನಂಬಿಕೆಯಿಂದ ನನ್ನನ್ನು ಅವಮಾನಿಸದಿರಿ.
ಸೀಸರ್. ನಾನು ಹೇಳುವುದನ್ನು ಹೇಳಿದೆ.
ಆಂಟನಿ. ನಿಮ್ಮ ಭೀತಿಗೆ ಎಷ್ಟೇ ಹುಡುಕಿದರೂ ಕಾರಣ ಸಿಗದು. ದೇವರು ನಿಮ್ಮನ್ನು ರಕ್ಷಿಸಲಿ, ರೋಮನರ ಪ್ರೀತಿ
ನಿಮ್ಮ ಗುರಿ ಸಾಧಿಸುವಂತೆ ಮಾಡಲಿ! ಈಗಿನ್ನು ನಾವು ನಮ್ಮ ದಾರಿ ಹಿಡಿಯೋಣ.
ಸೀಸರ್. ನನ್ನ ಪ್ರಿಯ ತಂಗಿ, ನಿನ್ನ ಪ್ರಯಾಣ ಶುಭವಾಗಲಿ.
ದೇವರ ದಯೆ ನಿನ್ನ ಮೇಲಿರಲಿ, ನಿನಗೆಲ್ಲವೂ ಹಿತವಾಗಿರಲಿ!
ವಿದಾಯ.
ಒಕ್ಟೇವಿಯಾ. ಅಣ್ಣ! [ರೋಧಿಸುವಳು]
ಆಂಟನಿ. ಇವಳ ಕಣ್ಣಲ್ಲಿ ವರ್ಷ; ಇದು ಪ್ರೀತಿಯ ವಸಂತ,
ಈ ಕಂಬನಿಗಳು ಅದರ ಸೂಚನೆ. — ಹರ್ಷದಿಂದಿರಿ.
ಒಕ್ಟೇವಿಯಾ. [ಸೀಸರನಿಗೆ] ಸ್ವಾಮಿ, ನನ್ನ ಪತಿಯ ಮನೆಯನ್ನು ಚೆನ್ನಾಗಿ ನೋಡಿಕೊಳ್ಳಿ; ಮತ್ತು —
ಸೀಸರ್. ಏನದು, ಒಕ್ಟೇವಿಯಾ?
ಒಕ್ಟೇವಿಯಾ. ನಿಮ್ಮ ಕಿವಿಯಲ್ಲಿ ಹೇಳುವೆ.
[ಸೀಸರನ ಕಿವಿಯಲ್ಲಿ ಏನೋ ಹೇಳುತ್ತಾಳೆ]
ಆಂಟನಿ. ಅವಳ ನಾಲಿಗೆ ಹೃದಯ ಹೇಳಿದಂತಿಲ್ಲ, ಹೃದಯ ನಾಲಿಗೆಗೆ ಹೇಳುವಂತಿಲ್ಲ — ಭರತದ ವೇಳೆ
ತೆರೆಯ ಮೇಲಿನ ಹಂಸತೂಲಿಕೆ ಆಚೆಗೂ ಅಲ್ಲ ಈಚೆಗೂ ಅಲ್ಲ.
ಈನೋ. [ಅಗ್ರಿಪಾಗೆ ಮಾತ್ರ] ಸೀಸರ್ ಅಳುವರೇ?
ಅಗ್ರಿಪಾ. [ಈನೋಬಾರ್ಬಸ್ಗೆ ಮಾತ್ರ] ಅವರ ಮೋರೆಯ ಮೇಲೆ ಮೋಡವಿದೆ.
ಈನೋ. [ಅಗ್ರಿಪಾಗೆ ಮಾತ್ರ] ಅವರು ಅಶ್ವವಾಗಿದ್ದರೆ ಈ ಕಪ್ಪು ಚುಕ್ಕಿ ಕಳಂಕವಾಗುತ್ತಿತ್ತು. ಮನುಷ್ಯನಾಗಿರುವುದರಿಂದ
ಪರವಾಯಿಲ್ಲ.
ಅಗ್ರಿಪಾ. [ಈನೋಬಾರ್ಬಸ್ಗೆ ಮಾತ್ರ] ಯಾಕೆ,ಈನೋಬಾರ್ಬಸ್, ಜೂಲಿಯಸ್ ಸೀಸರ್ ಸತ್ತಾಗ ಆಂಟನಿ
ಅಳಲಿಲ್ವೆ, ಎದೆಬಿರಿಯುವಷ್ಟು ಅತ್ತರು; ಆಮೇಲೆ ಫಿಲಿಪ್ಪಿಯಲ್ಲಿ ಬ್ರೂಟಸ್ನ ಹತ್ಯೆಯಾದಾಗಲೂ ಅತ್ತರು.
ಈನೋ. [ಅಗ್ರಿಪಾಗೆ ಮಾತ್ರ] ಆ ವರ್ಷ ಆಂಟನಿ ನಿಜಕ್ಕೂ ಶೀತದಿಂದ ನರಳುತ್ತಿದ್ದರು; ತಾವು ಬೇಕೆಂದೇ ನಾಶಮಾಡಿ
ಆಮೇಲೆ ಗೋಳಿಟ್ಟರು, ನೀವು ನಂಬುವುದಾದರೆ ನಂಬಿ, ನಾನೂ ಅತ್ತೆ.
ಸೀಸರ್. ಇಲ್ಲ, ಒಕ್ಟೇವಿಯಾ, ನಾನು ಯಾವಾಗಲೂ ಸುದ್ದಿ ಕಳಿಸುತ್ತಲೇ ಇರುತ್ತೇನೆ; ಕಾಲ ಬೇಕಾದರೆ ನಿಂತೀತು, ಆದರೆ
ನಿನ್ನ ಕುರಿತಾಗಿ ನನ್ನ ಯೋಚನೆ ನಿಲ್ಲುವುದಿಲ್ಲ.
ಆಂಟನಿ. ಬನ್ನಿ, ಸ್ವಾಮಿ, ಬನ್ನಿ, ನನ್ನ ಪ್ರೀತಿಯ ಶಕ್ತಿಯನ್ನು ಕುಸ್ತಿಯಲ್ಲಿ ತೋರಿಸುವೆ. ನೋಡಿದಿರ, ಹೇಗೆ ಹಿಡಿದಿದ್ದೇನೆ
[ಆಲಂಗಿಸುತ್ತ]; ಈಗ ಬಿಡುತ್ತೇನೆ, ನಿಮ್ಮ ಭಾರ ದೇವರ ಮೇಲೆ ಹಾಕುತ್ತೇನೆ.
ಸೀಸರ್. ವಿದಾಯ. ಸಂತೋಷದಿಂದಿರಿ!
ಲೆಪಿಡಸ್. ನಕ್ಷತ್ರಕೋಟಿ ನಿಮಗೆ ದಾರಿಬೆಳಕಾಗಲಿ!
ಸೀಸರ್. ವಿದಾಯ, ವಿದಾಯ!
[ಒಕ್ಟೇವಿಯಾಳನ್ನು ಚುಂಬಿಸುತ್ತಾನೆ]
ಆಂಟನಿ. ವಿದಾಯ!
[ಬೇರೆ ಬೇರೆ ಗುಂಪುಗಳಲ್ಲಿ ಎಲ್ಲರ ನಿಷ್ಕ್ರಮಣ]
ದೃಶ್ಯ 3
ಈಜಿಪ್ಟಿನಲಿ, 2.5.ರ ಮುಂದರಿಕೆ
ಕ್ಲಿಯೋಪಾತ್ರ, ಚಾರ್ಮಿಯಾನ್, ಮತ್ತು ಅಲೆಕ್ಸಾಸ್ ಪ್ರವೇಶ
ಕ್ಲಿಯೋ. ಎಲ್ಲಿದ್ದಾನೆ ಅವನು?
ಅಲೆಕ್ಸಾಸ್. ಬರೋದಕ್ಕೆ ಭಯ ಅವನಿಗೆ.
ಕ್ಲಿಯೋ. ಛೀ, ಛೀ.
ಮೊದಲಿನ ತರವೇ ದೂತನ ಪ್ರವೇಶ…
ಇಲ್ಲಿ ಬಾರಯ್ಯ.
ಅಲೆಕ್ಸಾಸ್. ಮಹಾರಾಣಿ, ನೀವು ಸಿಟ್ಟಿಗೆದ್ದರೆ, ಯೆಹೂದಿಗಳ ರಾಜ ಹೆರೋಡ್ ಕೂಡ ನಿಮ್ಮ ಮುಖ ನೋಡುವ ಧೈರ್ಯ
ಮಾಡುವುದಿಲ್ಲ.
ಕ್ಲಿಯೋ. ಆ ಹೆರೋಡ್ ತಲೆ ನಾನು ತೆಗೆಯುವೆ; ಆದರೆ ಈಗ ಆಂಟನಿ ಹೋದಮೇಲೆ, ಯಾರಿಗೆ ಹೇಳಿ ತೆಗೆಸಲಿ? —
ಹತ್ತಿರ ಬಾ.
ದೂತ. ದಯಾಮಯಿ ಮಹಾರಾಣಿ!
ಕ್ಲಿಯೋ. ನೀನು ಒಕ್ಟೇವಿಯಾಳನ್ನು ನೋಡಿದ್ದೀಯಾ?
ದೂತ. ನೋಡಿದ್ದೇನೆ, ಸಿಟ್ಟುಮಾಡಬೇಡಿ.
ಕ್ಲಿಯೋ. ಎಲ್ಲಿ?
ದೂತ. ರೋಮಿನಲ್ಲಿ, ತಾಯಿ. ಅವಳ ಮೋರೆ ನೋಡಿದೆ, ತನ್ನ ಅಣ್ಣನ ಮತ್ತು ಆಂಟನಿಯವರ ನಡುವೆ ನಡೆದು
ಹೋಗುತ್ತಿದ್ದಳು.
ಕ್ಲಿಯೋ. ನನ್ನಷ್ಟು ಎತ್ತರ ಇದ್ದಾಳಾ?
ದೂತ. ಇಲ್ಲ, ತಾಯಿ.
ಕ್ಲಿಯೋ. ಅವಳು ಮಾತೋಡೋದು ಕೇಳಿದ್ದೀಯಾ? ಅವಳ ಸ್ವರ ಕೀರಲೇ ಅಥವ ಸಣ್ಣದೇ?
ದೂತ. ಅಮ್ಮಾ, ಅವಳು ಮಾತಾಡೋದು ಕೇಳಿದೆ. ಸಣ್ಣ ಸ್ವರ.
ಕ್ಲಿಯೋ. ಇದು ಅಷ್ಟು ಚೆನ್ನಾಗಿಲ್ಲ. ಅವಳನ್ನು ಅವರು ಹೆಚ್ಚು ಕಾಲ ಇಷ್ಟಪಡಲಾರರು.
ಚಾರ್ಮಿ. ಅವಳನ್ನು ಇಷ್ಟಪಡೋದೇ? ಓ ಐಸಿಸ್! ಅದು ಸಾಧ್ಯವೇ ಇಲ್ಲ.
ಕ್ಲಿಯೋ. ನನಗೂ ಹಾಗನಿಸುತ್ತದೆ, ಚಾರ್ಮಿಯಾನ್. ನಾಲಿಗೆ ದಡ್ಡು, ಎತ್ತರ ಕುಳ್ಳು. — ಅವಳ ನಡೆಯ ಗತ್ತೇನು? ಗತ್ತಿನ
ಬಗ್ಗೆ ನಿನಗೆ ಅನುಭವ ಇದ್ದರೆ ಹೇಳು.
ದೂತ. ಹರೆಯುತ್ತಾಳೆ. ಅವಳ ಚಲನೆ ಮತ್ತು ನಿಶ್ಚಲನೆ ಎರಡೂ ಒಂದೇ. ಅವಳಿಗೆ ದೇಹವಿದೆ ಆದರೆ ಜೀವ ಇಲ್ಲ,
ಒಂದು ಗೊಂಬೆ, ಉಸಿರಾಡುವ ಜೀವವಲ್ಲ.
ಕ್ಲಿಯೋ. ಇದು ಖಂಡಿತವೇ?
ದೂತ. ಅಲ್ಲದಿದ್ದರೆ ನನಗೆ ವೀಕ್ಷಣಾಶಕ್ತಿ ಇಲ್ಲವೆಂದು ಅರ್ಥ.
ಚಾರ್ಮಿ. ಈಜಿಪ್ಟಿನಲ್ಲಿ ಮೂರು ಜನ ನೋಡುವುದನ್ನು ನೀನೊಬ್ಬನೇ ನೋಡುವಿ.
ಕ್ಲಿಯೋ. ಈತ ಒಳ್ಳೆ ಸೂಕ್ಷ್ಮದರ್ಶಿ, ನನಗದು ಗೊತ್ತಾಗುತ್ತದೆ. ಅವಳಲ್ಲಿ ಏನೂ ಇಲ್ಲ. ಈ ವ್ಯಕ್ತಿಯ ನಿರ್ಣಯ ಗುಣ ಚೆನ್ನಾಗಿದೆ.
ಚಾರ್ಮಿ. ಅತ್ಯುತ್ತಮವಾಗಿದೆ.
ಕ್ಲಿಯೋ. ಅವಳ ವಯಸ್ಸು ಹೇಳುವಿಯಾ, ದಯವಿಟ್ಟು?
ದೂತ. ಅಮ್ಮಾ, ಆಕೆ ವಿಧವೆಯಾಗಿದ್ದವಳು —
ಕ್ಲಿಯೋ. ವಿಧವೆ? ಚಾರ್ಮಿಯಾನ್, ಕೇಳಿದಿಯಾ?
ದೂತ. ನನಗನಿಸುತ್ತದೆ ಮೂವತ್ತು ಇರಬಹುದು.
ಕ್ಲಿಯೋ. ಅವಳ ಮುಖ ನೆನಪಿದೆಯೆ? ಸಪೂರವೇ, ಉರುಟೇ?
ದೂತ. ಉರುಟು ಮುಖ, ಉರುಟೆಂದರೆ ತೀರಾ ಉರುಟು.
ಕ್ಲಿಯೋ. ಅಂಥ ಮುಖದವರು ಹೆಚ್ಚಿನವರೂ ಮೊದ್ದುಗಳು. –ಅವಳ ತಲೆಗೂದಲು ಯಾವ ಬಣ್ಣ?
ದೂತ. ಕಂದು ಬಣ್ಣ, ಮತ್ತು ಅವಳ ಹಣೆ ತಗ್ಗು. –ಅದಕ್ಕಿಂತ ತಗ್ಗು ಸಾಧ್ಯವೇ ಇಲ್ಲ.
ಕ್ಲಿಯೋ. ಇದೋ ಚಿನ್ನ, ನಿನಗೆ. ನನ್ನ ಮೊದಲಿನ ಕಠೋರತನವನ್ನ ತಪ್ಪುತಿಳಿಯಬೇಡ. ನಿನ್ನ ಸಹಾಯ ಇನ್ನೊಮ್ಮೆ ಬೇಕಾಗಿದೆ ನನಗೆ; ಈ ಕೆಲಸಕ್ಕೆ ನೀನು ಅತ್ಯಂತ ಯೋಗ್ಯ. ಹೋಗಿ ತಯಾರಾಗು; ಆಗ ನಮ್ಮ ಪತ್ರಗಳು ಸಿದ್ಧವಾಗಿರುತ್ತವೆ.
[ದೂತನ ನಿಷ್ಕ್ರಮಣ]
ಚಾರ್ಮಿ. ಒಳ್ಳೇ ಮನುಷ್ಯ.
ಕ್ಲಿಯೋಪಾತ್ರ. ನಿಜ, ಒಳ್ಳೇ ಮನುಷ್ಯ. ಅವನನ್ನು ಗೋಳಾಡಿಸಿದ್ದಕ್ಕೆ ನನಗೀಗ ತಪ್ಪೆನಿಸುತ್ತದೆ. ಅವ ಹೇಳಿದ್ದನ್ನು
ಕೇಳಿದರೆ ಈ ಪ್ರಾಣಿ ಅಷ್ಟೇನೂ ಇಲ್ಲ ಅನಿಸುತ್ತದೆ.
ಚಾರ್ಮಿ. ಏನೂ ಇಲ್ಲಮ್ಮ.
ಕ್ಲಿಯೋ. ಈ ಮನುಷ್ಯ ಸ್ವಲ್ಪ ರಾಜಮರ್ಯಾದೆ ಕಂಡಿದ್ದಾನೆ, ಅವನಿಗೆ ಗೊತ್ತಿರಬೇಕು.
ಚಾರ್ಮಿ. ರಾಜಮರ್ಯಾದೆ ಕಂಡು ಗೊತ್ತೆ? ಇಷ್ಟೂ ವರ್ಷ ನಿಮ್ಮ ಸೇವೆಯಲ್ಲಿದ್ದು! ಅದಲ್ಲದಿದ್ದರೆ ಐಸಿಸ್ಸೇ ಕಾಪಾಡಬೇಕು
ಅವನನ್ನು!
ಕ್ಲಿಯೋ. ಏ ಚಾರ್ಮಿಯಾನೇ, ಅವನನ್ನು ಇನ್ನೂ ಒಂದು ಕೇಳೋದಿದೆ ಕಣೇ ನಾನು — ಆದರೆ ಪರವಾಯಿಲ್ಲ; ನಾನೀಗ
ಬರೆಯಬೇಕಾಗಿದೆ. ನೀನವನನ್ನು ಅಲ್ಲಿಗೆ ಕರೆದುಕೊಂಡು ಬಾ.
ಎಲ್ಲಾ ಒಳ್ಳೆಯದೇ ಆಗಬಹುದು.
ಚಾರ್ಮಿ. ಖಂಡಿತಾ, ತಾಯಿ.
[ಎಲ್ಲರೂ ನಿಷ್ಕ್ರಮಣ]
ದೃಶ್ಯ 4
ಏಥೆನ್ಸ್
ಆಂಟನಿ ಮತ್ತು ಒಕ್ಟೇವಿಯಾ ಪ್ರವೇಶ..
ಆಂಟನಿ. ಇಲ್ಲ, ಇಲ್ಲ. ಒಕ್ಟೇವಿಯಾ, ಕ್ಷಮಿಸಬಹುದಾದ ಈ ಸಂಗತಿಗಳಷ್ಟೇ ಅಲ್ಲ, ಇಂಥವೇ ಸಾವಿರ ಸಂಗತಿಗಳಿವೆ —
ಪಾಂಪಿಯ ವಿರುದ್ಧ ಹೊಸ ಯುದ್ಧಗಳನ್ನು ಮಾಡಿದ್ದಾನೆ, ವೀಲುನಾಮೆ ಬರೆದು ಅದನ್ನು ಜನರಿಗೆ ಓದಿಹೇಳಿದ್ದಾನೆ, ನನ್ನ
ಕುರಿತು ಲಘುವಾಗಿ ಮಾತಾಡಿದ್ದಾನೆ. ಕೆಲವು ಸಲ, ಬೇರೆ ವಿಧಿಯಿಲ್ಲದೆ, ನನಗೆ ನನ್ನ ಗೌರವದ ಹಕ್ಕುಗಳ
ಸಲ್ಲಿಸಬೇಕಾಗಿ ಬಂದಾಗ, ಅವನ್ನು ತೀರ ನೀರಸವಾಗಿ ನಿಸ್ತೇಜವಾಗಿ ನುಡಿದಿದ್ದಾನೆ, ಜಿಪುಣತನ ತೋರಿದ್ದಾನೆ;
ಅತ್ಯುತ್ತಮ ಅವಕಾಶ ಬಂದಾಗಲೂ, ಅದನ್ನವನು ಸ್ವೀಕರಿಸಲಿಲ್ಲ, ಬದಲು ಹಲ್ಲುಕಡಿದು ಹೇಳಿದ.
ಒಕ್ಟೇವಿಯಾ. ನನ್ನ ಪ್ರೀತಿಯ ಸ್ವಾಮಿಯೆ, ಎಲ್ಲವನ್ನೂ ನಂಬಬೇಡಿ. ನೀವು ವಿಭಾಗವಾದರೆ, ಒಂದೊಂದು ಭಾಗಕ್ಕೂ
ದೇವರಿಗೆ ಮೊರೆಯಿಡುತ್ತ ಮಧ್ಯೆ ನಿಲ್ಲುವ ನನ್ನಂಥ ಪಾಪಿ ಹೆಂಗಸು ಇನ್ನೊಬ್ಬಳಿಲ್ಲ. ಓ, ನನ್ನ ಪತಿಯನ್ನು ಹರಸಿ!' ಎನ್ನುತ್ತಲೇ ಆ ಪ್ರಾರ್ಥನೆಯನ್ನು ಇಲ್ಲದಾಗಿಸುವ
ಓ, ನನ್ನ ಅಣ್ಣನನ್ನು ಹರಸಿ!’ ಎಂಬ ಗೋಳು ಕೇಳಿದರೆ, ದೇವರುಗಳು
ಸಹಾ ನನ್ನ ಗೇಲಿಮಾಡುತ್ತಾರೆ. ಗಂಡ ಗೆಲ್ಲಬೇಕು ಎಂಬ ಪ್ರಾರ್ಥನೆ ಆ ಪ್ರಾರ್ಥನೆಯನ್ನು ನಾಶಗೊಳಿಸುತ್ತದೆ; ಈ ಅತಿಗಳ
ಮಧ್ಯೆ ಮಧ್ಯಮವೆ ಇಲ್ಲ.
ಆಂಟನಿ. ಮಿದುಭಾಷಿಣಿ ಒಕ್ಟೇವಿಯಾ, ನಿನ್ನ ಪ್ರೀತಿ ಎಲ್ಲಿ ರಕ್ಷಿಸುತ್ತದೋ ಅಲ್ಲಿಗೆ ಹೋಗಿ ಸೇರಲಿ. ನಾನು ನನ್ನ
ಗೌರವ ಕಳೆದುಕೊಂಡರೆ ನನ್ನನ್ನೇ ಕಳೆದುಕೊಂಡಂತೆ; ಕೊಂಬೆ ಕತ್ತರಿಸಿಕೊಂಡು ನಾನು ನಿನ್ನವನಾಗುವುದಕ್ಕಿಂತ, ಆಗದಿರುವುದೆ
ಒಳ್ಳೆಯದು. ಆದರೆ, ನೀನೇ ಬಯಸಿದಂತೆ, ನಮ್ಮಿಬ್ಬರ ನಡುವೆ ನೀನೇ ಮಧ್ಯವರ್ತಿ. ಈ ಮಧ್ಯೆ ನಾನು ಯುದ್ಧದ ತಯಾರಿ
ನಡೆಸುವೆ, ಅದು ನಿನ್ನ ಅಣ್ಣನ ಸಿದ್ಧತೆಗೆ ಗ್ರಹಣ ಹಿಡಿಸುವುದು. ತ್ವರೆ ಮಾಡು, ನಿನ್ನ ಬಯಕೆಗಳನ್ನು ಸಾಧಿಸುವುದಕ್ಕೆ.
ಒಕ್ಟೇವಿಯಾ. ತುಂಬಾ ಸಂತೋಷ, ಸ್ವಾಮಿ. ಶಕ್ತಿದೇವತೆಯಾದ ಜುಪಿಟರ್, ಅಬಲೆ ತೀರಾ ಅಬಲೆಯಾದ ನನ್ನನ್ನು
ಸಂಧಾನಕಾರಳನ್ನಾಗಿ ಮಾಡಲಿ! ಯುಗಳಗಳು ನೀವು, ನಿಮ್ಮಿಬ್ಬರ ನಡುವಣ ಯುದ್ಧ ಜಗವ ಕಿತ್ತು ಬೇರ್ಪಡಿಸಿದಂತೆ, ಆಮೇಲೆ
ಸೇರಿಸುವುದು ಸತ್ತವರಿಗೆ ಬೆಸುಗೆ ಹಾಕಿದ ಹಾಗೆ.
ಆಂಟನಿ. ಇದೆಲ್ಲಿ ಆರಂಭವಾಗುತ್ತದೆ ಎಂದು ನಿನಗೆ ಅನಿಸುತ್ತದೋ, ಆ ಕಡೆಗೆ ನಿನ್ನ ಅಸಾಮಾಧಾನ ಹರಿಸಿದರೆ ಸಾಕು,
ಯಾಕೆಂದರೆ ನಿನ್ನ ಪ್ರೀತಿ ಸಮನಾಗಿ ಹರಿಯುವಷ್ಟು ನಮ್ಮ ತಪ್ಪುಗಳು ಸಮನಾಗಿ ಇರಲಾರವು. ಪ್ರಯಾಣಕ್ಕೆ ಸಿದ್ಧತೆ ನಡೆಸು;
ನಿನಗೆ ಬೇಕಾದವರ ಕರೆದುಕೋ, ಮತ್ತು ಎಷ್ಟು ಹಣ ಬೇಕೋ ಅಪ್ಪಣೆ ಮಾಡು.
[ಇಬ್ಬರೂ ನಿಷ್ಕ್ರಮಣ]
ದೃಶ್ಯ 5
ಹಿಂದಿನ ಸ್ಥಳವೇ, ಏಥೆನ್ಸ್
ಈನೋಬಾರ್ಬಸ್ ಮತ್ತು ಈರೋಸ್ ಪ್ರವೇಶಿಸುತ್ತ ಭೇಟಿಯಾಗುತ್ತಾರೆ.
ಈನೋ. ಓಹೋ, ಈರೋಸ್, ಏನು ವಿಶೇಷ?
ಈರೋಸ್. ವಿಚಿತ್ರ ಸುದ್ದಿ ಕೇಳಿದೆ, ಸ್ವಾಮಿ.
ಈನೋ. ಏನಯ್ಯ, ಅದು ವಿಚಿತ್ರ ಸುದ್ದಿ?
ಈರೋಸ್. ಸೀಸರ್ ಮತ್ತು ಲೆಪಿಡಸ್ ಪಾಂಪಿಯ ಮೇಲೆ ಯುದ್ಧ ಸಾರಿದ್ದಾರೆ.
ಈನೋ. ಇದು ಹಳೇ ಸುದ್ದಿ. ಫಲಿತಾಂಶ ಏನು?
ಈರೋಸ್. ಪಾಂಪಿಯ ವಿರುದ್ಧ ಯುದ್ಧಗಳಲ್ಲಿ ಸಾಕಷ್ಟು ಬಳಸಿಕೊಂಡ ಮೇಲೆ ಸೀಸರ್ ಲೆಪಿಡಸ್ಗೆ ಅವನ ಪಾಲು
ಕೊಡಲಿಲ್ಲ; ಅಲ್ಲಿಗೂ ಸುಮ್ಮನಿರದೆ, ಆತ ಪಾಂಪಿಗೆ ಮೊದಲು ಬರೆದ ಕಾಗದಗದ ಕುರಿತು ಆರೋಪಿಸುತ್ತಾರೆ; ಮಾತಿಗೂ
ಅವಕಾಶ ಕೊಡದೆ ಅವನನ್ನು ಬಂಧಿಸಿ ಸೆರೆಮನೆಯಲ್ಲಿ ಇಡಲಾಗಿದೆ. ಹೀಗೆ, ಪಾಪ, ತ್ರಿಮೂರ್ತಿಗಳಲ್ಲಿ ಒಬ್ಬ
ಸರಳುಗಳ ಹಿಂದೆ ಇದ್ದಾನೆ. ಮರಣವೇ ಅವನ ಬಿಡುಗಡೆ.
ಈನೋ. ಹಾಗಿದ್ದರೆ, ಜಗವೇ, ನಿನಗೀಗ ಒಂದು ಜತೆ ದವಡೆಗಳು, ಹೆಚ್ಚಿಲ್ಲ; ನಿನ್ನಲ್ಲಿರುವ ಆಹಾರವನ್ನೆಲ್ಲಾ ಅವುಗಳ
ಮಧ್ಯೆ ಎಸೆ, ಅವು ಒಂದನ್ನೊಂದು ಅರೆದಾವು. ಆಂಟನಿ ಎಲ್ಲಿ?
ಈರೋಸ್. ಉದ್ಯಾನದಲ್ಲಿ ನಡೆಯುತ್ತ ಇದ್ದಾರೆ — ಈ ರೀತಿ — ಮುಂದಿರುವ ಜೊಂಡಿಗೆ ಒದೆಯುತ್ತಾರೆ; `ಮೂರ್ಖ
ಲೆಪಿಡಸ್!’ ಎಂದು ಅರಚುತ್ತಾರೆ. ಪಾಂಪಿಯನ್ನು ಕೊಂದ ತನ್ನ ಅಧಿಕಾರಿಯ ಜೀವ ತೆಗೆಯುವುದಾಗಿ ಬೆದರಿಕೆ ಹಾಕುತ್ತಾರೆ.
ಈನೋ. ನಮ್ಮ ಮಹಾ ನೌಕಾಸೇನೆ ಸಿದ್ಧವಾಗಿದೆ.
ಈರೋಸ್. ಇಟೆಲಿಗೆ, ಸೀಸರನಲ್ಲಿಗೆ. ಡೊಮಿಟಿಯಸ್, ಇನ್ನೂ ಇದೆ: ಪ್ರಭುಗಳು ನಿಮ್ಮನ್ನು ಕಾಣಬೇಕಂತೆ. ಇಲ್ಲದಿದ್ದರೆ
ಬಾಕಿ ಸುದ್ದಿ ಹೇಳಬಹುದಾಗಿತ್ತು ನಾನು.
ಈನೋ. ಇದೆಲ್ಲ ಆತಂಕಕಾರಿ; ಈಗ ಇರಲಿ. ಆಂಟನಿಯಲ್ಲಿಗೆ ಹೋಗೋಣ ನಡೆ.
ಈರೋಸ್. ಬನ್ನಿ, ಸ್ವಾಮಿ.
[ಇಬ್ಬರೂ ನಿಷ್ಕ್ರಮಣ]
ದೃಶ್ಯ 6
ರೋಮ್ನಲ್ಲಿ..
ಅಗ್ರಿಪಾ, ಮೆಸೆನಾಸ್, ಮತ್ತು ಸೀಸರ್ ಪ್ರವೇಶ
ಸೀಸರ್. ರೋಮನ್ನು ಬಯ್ಯೋದು; ಇದೂ ಇದಕ್ಕಿಂತ ಹೆಚ್ಚಿನದೂ ಅವನು ಅಲೆಕ್ಝಾಂಡ್ರಿಯಾದಲ್ಲಿ ಮಾಡಿದ್ದಾನೆ.
ಏನು ಮಾಡಿದ ಅಂದರೆ: ಸಂತೆಕಟ್ಟೆಯಲ್ಲಿ, ರಜತ ವೇದಿಕೆಯ ಮೇಲೆ, ಸ್ವರ್ಣಸಿಂಹಾಸನದಲ್ಲಿ ಕ್ಲಿಯೋಪಾತ್ರಾಳೂ ಅವನೂ
ಪಟ್ಟಾಭಿಷೇಕ ಮಾಡಿಸಿಕೊಂಡರು; ಅವನ ಕಾಲ ಬುಡದಲ್ಲಿ, ನನ್ನ ಸಾಕುತಂದೆಯ ಮಗನೆಂದು ಅವನು ಅನ್ನುವ ಸಿಸೇರಿಯನ್
ಕೂತಿದ್ದ, ಮತ್ತು ಅವರ ಈ ವರೆಗಿನ ಅನೈತಿಕ ಸಂಬಂಧದ ಎಲ್ಲಾ ಕುಡಿಗಳೂ ಇದ್ದವು. ಈಜಿಪ್ಟಿನ ಅಧಿಕಾರ ಅವಳಿಗೆ ಬಿಟ್ಟುಕೊಟ್ಟು,
ಅದರ ಕೆಳಗಿನ ಸಿರಿಯಾ, ಸೈಪ್ರಸ್ ಮತ್ತು ಲಿಡಿಯಾಗಳಿಗೆ ಅವಳನ್ನು ಸ್ವತಂತ್ರ ಸಾಮ್ರಾಜ್ಞಿಯಾಗಿ ಮಾಡಿದ.
ಮೆಸೆನಾಸ್. ಇದೆಲ್ಲ ಸಾರ್ವಜನಿಕರ ಮುಂದೆ?
ಸೀಸರ್. ಸಾರ್ವಜನಿಕ ರಂಗಸ್ಥಳದಲ್ಲಿ, ಜನ ಮನರಂಜನೆ ನೀಡುವಲ್ಲಿ. ತನ್ನ ಮಕ್ಕಳನ್ನಲ್ಲಿ ರಾಜಾಧಿರಾಜರೆಂದು
ಘೋಷಣೆ ಮಾಡಿದ. ಮೀಡಿಯಾ, ಪಾರ್ಥಿಯಾ, ಮತ್ತು ಆರ್ಮೇನಿಯಾಗಳನ್ನು ಅಲೆಕ್ಝಾಂಡರನಿಗೆ ನೀಡಿದ; ಟಾಲೆಮಿಗೆ
ಸಿರಿಯಾ, ಸಿಲೀಸಿಯಾ ಮತ್ತು ಫಿನೀಶಿಯಾಗಳನ್ನು ತೆಗೆದಿರಿಸಿದ.
ಅವಳು ಆ ದಿವಸ ಐಸಿಸ್ ದೇವತೆಯ ವೇಷದಲ್ಲಿ ಪ್ರತ್ಯಕ್ಷಳಾದಳು, ಮತ್ತು ವರದಿಗಳ ಪ್ರಕಾರ, ಈ ಮೊದಲು
ಹಲವು ಸಲ ಅವಳು ಜನರಿಗೆ ಹೀಗೆ ಭೇಟಿ ನೀಡಿದ್ದುಂಟು.
ಮೆಸೆನಾಸ್. ರೋಮಿಗೆ ಇದನ್ನು ತಿಳಿಸಬೇಕು.
ಅಗ್ರಿಪಾ. ಜನರಿಗೆ ಅವನ ಸೊಕ್ಕು ಸಾಕಾಗಿದೆ. ಅವರು ಅವನಿಂದ ತಮ್ಮ ಬೆಂಬಲ ಹಿಂತೆಗೆಯುವುದು ಖಂಡಿತ.
ಸೀಸರ್. ಜನರಿಗೆ ಇದು ಗೊತ್ತಿದೆ, ಅವನ ಆಪಾದನೆಗಳೂ ಅವರನ್ನು ತಲುಪಿವೆ.
ಅಗ್ರಿಪಾ. ಅವನು ಆಪಾದಿಸೋದು ಯಾರನ್ನು?
ಸೀಸರ್. ಸೀಸರನನ್ನು, ಸಿಸಿಲಿಯಲ್ಲಿ ನಾವು ಸೆಕ್ಸ್ಟಸ್ ಪಾಂಪಿಯನ್ನು ಸೋಲಿಸಿದ ನಂತರ, ಆ ದ್ವೀಪದಲ್ಲಿ ಅವನಿಗೆ
ಅವನ ಪಾಲು ಕೊಡಲಿಲ್ಲ ಎಂದು. ಆಮೇಲೆ ಹೇಳುತ್ತಾನೆ. ನನಗವನು ಕಡ ನೀಡಿದ ಕೆಲವು ಹಡಗುಗಳನ್ನು
ನಾನು ವಾಪಸು ಮಾಡಲಿಲ್ಲ ಎಂಬುದಾಗಿ. ಕೊನೇದಾಗಿ,ತ್ರ್ಯಾಧಿಕಾರಿಗಳಲ್ಲಿ ಒಬ್ಬನಾದ ಲೆಪಿಡಸ್ನ ಅಧಿಕಾರ ಕಿತ್ತು,
ಅವನ ಕಂದಾಯವನ್ನೆಲ್ಲ ನಾವು ಇಟ್ಟುಕೊಂಡಿದ್ದೇವೆ ಎಂದು ಕೂಗಾಡುತ್ತಿದ್ದಾನೆ.
ಅಗ್ರಿಪಾ. ಸ್ವಾಮಿ, ಇದಕ್ಕೆ ಉತ್ತರ ಕೊಡಲೇಬೇಕು.
ಸೀಸರ್. ಈಗಾಗಲೇ ಕೊಟ್ಟಿದೆ, ದೂತನೂ ಹೋಗಿಯಾಯಿತು. ಲೆಪಿಡಸ್ ಅತ್ಯಂತ ಕ್ರೂರಿಯಾಗಲು ತೊಡಗಿದ್ದ, ತನ್ನ ಉನ್ನತ
ಅಧಿಕಾರವನ್ನು ದುರುಪಯೋಗಪಡಿಸಿದ್ದ, ಹಾಗೂ ಈ ಬದಲಾವಣೆ ಅಗತ್ಯವಾಗಿತ್ತು ಎಂದು ಆಂಟನಿಗೆ ಹೇಳಿದ್ದೇನೆ. ನಾನು ಗೆದ್ದುದಕ್ಕೆ ಒಂದು ಭಾಗ ಅವನಿಗೆ ನೀಡುತ್ತೇನೆ; ಆದರೆ ಅವನ ಆರ್ಮೇನಿಯಾದಲ್ಲಿ ಮತ್ತು ಅವನು ಗೆದ್ದ ಇತರ ರಾಜ್ಯಗಳಲ್ಲಿ
ನನ್ನ ಭಾಗಕ್ಕೆ ಒತ್ತಾಯಿಸುತ್ತೇನೆ.
ಮೆಸೆನಾಸ್. ಅದಕ್ಕವನು ಎಂದೂ ಒಪ್ಪುವುದಿಲ್ಲ.
ಸೀಸರ್. ಒಪ್ಪದಿದ್ದರೆ ಇದಕ್ಕೂ ಅವನಿಗೆ ಒಪ್ಪಿಗೆ ಸಿಗುವುದಿಲ್ಲ.
ಒಕ್ಟೇವಿಯಾ ಮತ್ತು ಅವಳ ಸಂಗಾತಿಯರ ಪ್ರವೇಶ…
ಒಕ್ಟೇವಿಯಾ. ಜಯವಾಗಲಿ ಸೀಸರಿಗೆ, ನನ್ನ ಪ್ರಭುವಿಗೆ, ಜಯವಾಗಲಿ, ನನ್ನ ಪ್ರೀತಿಯ ಸೀಸರಿಗೆ!
ಸೀಸರ್. ತಿರಸ್ಕøತಳೆಂದು ನಾನು ಕರೆಯದಿರಲಿ ನಿನ್ನ!
ಒಕ್ಟೇವಿಯಾ. ನೀವು ಹಾಗೆ ಕರೆದಿಲ್ಲ, ಕರೆಯುವ ಕಾರಣವೂ ಇಲ್ಲ.
ಸೀಸರ್. ಈ ರೀತಿ ಕದ್ದು ಬಂದಿದ್ದೀಯಾ? ನೀನು ಸೀಸರನ ತಂಗಿಯಂತೆ ಬರಲಿಲ್ಲ. ಆಂಟನಿಯ ಹೆಂಡತಿಗೆ ಪ್ರತೀಹಾರಿಯಾಗಿ
ಒಂದು ಸೇನೆಯಿರಬೇಕು, ಅವಳು ಕಾಣಿಸಿಕೊಳ್ಳುವುದಕ್ಕೆ ಬಹಳ ಮೊದಲೇ ಕುದುರೆಗಳ ಹೇಷಾರವ ಅವಳ ಆಗಮನವ ಸೂಚಿಸಬೇಕು. ಮಾರ್ಗದಲ್ಲಿರುವ ಮರಗಳ ಮೇಲೆ ಜನ ಕುಳಿತು ನಿರೀಕ್ಷಿಸಬೇಕು, ನಿರೀಕ್ಷೆ ತಾನು ನಂಬಲಾರದೆ ತಲೆಸುತ್ತಿ ಬೀಳಬೇಕು. ಅಷ್ಟೂ ಅಲ್ಲ, ನಿನ್ನ ಹಿಂಗಾವಲಿನವರ ನಿಬಿಡ ಪಾದಧೂಳಿ ಆಕಾಶದ ಛಾವಣಿಯ ತಲುಪಬೇಕಿತ್ತು. ಆದರೆ ನೀನೀಗ ಸಂತೆಯ ಹುಡುಗಿಯ ಹಾಗೆ ರೋಮಿಗೆ ಬಂದಿರುವಿ, ಹಾಗೂ ನಮ್ಮ ಪ್ರೀತಿಯ ಪ್ರದರ್ಶನವ ತಪ್ಪಿಸಿರುವಿ. ತೋರಿಸದ ಪ್ರೀತಿ ಹಲವು ಸಲ ಇಲ್ಲದಂತೆಯೇ ಸರಿ.
ನಾವು ನಿನ್ನನ್ನು ಕಡಲಲ್ಲಿ ಮತ್ತು ನೆಲದಲ್ಲಿ ಬಂದು ಸ್ವಾಗತಿಸಬೇಕಿತ್ತು,ಪ್ರತಿಯೊಂದು ಹಂತದಲ್ಲೂ ಸ್ವಾಗತ ವರ್ಧಿಸುತ್ತ.
ಒಕ್ಟೇವಿಯಾ. ಸ್ವಾಮಿ, ಈ ರೀತಿ ಬರುವುದಕ್ಕೆ ನನ್ನನ್ನು ಯಾರೂ ಒತ್ತಾಯಿಸಲಿಲ್ಲ, ನಾನಾಗಿಯೇ ಬಂದೆ. ನೀವು ಯುದ್ಧಕ್ಕೆ ತಯಾರಿ ನಡೆಸುತ್ತಿದ್ದೀರಿ ಎಂದು ಕೇಳಿ, ನನ್ನ ಪತಿ ಮಾರ್ಕ್ ಆಂಟನಿ ನನಗಿದೆಲ್ಲ ತಿಳಿಸಿದರು. ಬಹಳ ಬೇಸರವಾಯಿತು. ನಾನಿಲ್ಲಿಗೆ ಬರಲು ಅಪ್ಪಣೆ ಕೇಳಿದೆ.
ಸೀಸರ್. ನಾನವನ ಮೇಲೆ ಕಣ್ಣಿಟ್ಟಿದ್ದೇನೆ, ಅವನ ಸುದ್ದಿಗಳು ನನಗೆ ಗಾಳಿ ಮೂಲಕ ಬರುತ್ತಿವೆ. ಈಗವನು ಎಲ್ಲಿದ್ದಾನೆ?
ಒಕ್ಟೇವಿಯಾ. ಏಥೆನ್ಸ್ನಲ್ಲಿ.
ಸೀಸರ್. ಇಲ್ಲ, ನನ್ನ ನತದೃಷ್ಟ ಸೋದರಿಯೆ, ಕ್ಲಿಯೋಪಾತ್ರ ಕರೆಸಿಕೊಂಡಿದ್ದಾಳೆ ಅವನನ್ನು. ತನ್ನ ಸಾಮ್ರಾಜ್ಯವನ್ನೊಂದು ಸೂಳೆಯ ಕೈಗೆ ಹಾಕಿದ್ದಾನೆ. ಈಗವಳು ರಾಜರುಗಳನ್ನು ಯುದ್ಧಕ್ಕೆ ಎತ್ತಿಕಟ್ಟುತ್ತಿದ್ದಾಳೆ. ಲಿಬಿಯಾದ ರಾಜ ಬೋಖಸ್;
ಕಪ್ಪಡೋಚಿಯಾದ ರಾಜ ಆರ್ಕೆಲೌಸ್; ಪಾಫ್ಲಗೋರಿಯಾದ ರಾಜ ಫಿಲಡೆಲ್ಫೋಸ್; ಥ್ರೇಸಿಯಾದ ರಾಜ ಅಡಲ್ಲಾಸ್;
ಅರೇಬಿಯಾದ ರಾಜ ಮಂಕಸ್; ಪೋ ರಿಟ್ನ ರಾಜ; ಯೆಹೂದಿಗಳ ಹೆರೋಡ್; ಕೊಮಜೀನಿನ ರಾಜ ಮಿಥ್ರಿಡೇಟಿಸ್; ಮೀಡ್ ಮತ್ತು ಲಿಕೋನಿಯಾದ ರಾಜ ಪೋಲೆಮೋನ್ ಮತ್ತು ಅಮಿಂತಾಸ್, ಇನ್ನೂ ಜಾಸ್ತಿ ಸಂಖ್ಯೆಯ ಮಾಂಡಳಿಕರ ಜತೆ.
ಒಕ್ಟೇವಿಯಾ. ಅಯ್ಯೋ, ನನ್ನ ದುರದೃಷ್ಟವೇ– ಒಬ್ಬರನ್ನೊಬ್ಬರು ಬಾಧಿಸುವ ಎರಡು ಗೆಳೆಯರ ನಡುವೆ
ಹರಿಹಂಚಾಯ್ತು ನನ್ನ ಹೃದಯ.
ಸೀಸರ್. ನಿನಗಿಲ್ಲಿ ಸ್ವಾಗತ. ನಿನ್ನ ಪತ್ರಗಳ ಕಾರಣ ನಾವು ಮುಂದರಿಯೋದಕ್ಕೆ ತಡೆಯಾಯಿತು. ಆಮೇಲೆ ನಮಗೇ
ಗೊತ್ತಾಯಿತು ನೀನೆಷ್ಟು ವಂಚನೆಗೆ ಒಳಗಾಗಿದ್ದಿ, ಮತ್ತು ನಾವು ಕರ್ತವ್ಯವ ಕಡೆಗಣಿಸಿ ಎಷ್ಟು ಅಪಾಯದಲ್ಲಿದ್ದೆವು
ಎನ್ನುವುದು. ನೀನು ಉಲ್ಲಾಸದಿಂದಿರು; ಕಾಲಗತಿಗೆ ಮರುಗಬೇಡ — ಅದರ ಅಗತ್ಯಗಳೀಗ ನಿನ್ನ ಖುಷಿಯನ್ನು
ಮೆಟ್ಟಿ ತುಳಿಯುತ್ತಿವೆ; ವಿಧಿ ವಿಧಿಸಿದ ಸಂಗತಿಗಳು ನಿಷ್ಠುರವಾಗಿ ಸೇರಲಿ ತಮ್ಮ ಗುರಿಯನ್ನು. ರೋಮಿಗೆ ಸ್ವಾಗತ, ಇದಕ್ಕಿಂತ
ಹೆಚ್ಚಿನದು ನನಗೆ ಬೇರೇನೂ ಇಲ್ಲ. ನಿನ್ನನ್ನು ಇಷ್ಟೊಂದು ಹೀನಾಯವಾಗಿ ಕಾಣಲಾಗಿದೆ ಎನ್ನುವುದು ಯೋಚನೆಗೂ
ಮೀರಿದ್ದು; ನಿನಗೆ ನ್ಯಾಯ ದೊರಕಿಸಲು ದೇವತೆಗಳು ನಿರ್ವಾಹಕರ ಮಾಡಿದ್ದಾರೆ ನನ್ನನ್ನೂ ನಿನ್ನ ಪ್ರೀತಿಸುವ
ಎಲ್ಲರನ್ನೂ. ಎಲ್ಲ ಖುಷಿಯೂ ನಿನಗಿರಲಿ, ನಿನಗಿಲ್ಲಿ ಸದಾ ಸ್ವಾಗತ, ಒಕ್ಟೇವಿಯಾ.
ಅಗ್ರಿಪಾ. ಸ್ವಾಗತ, ತಾಯಿ.
ಮೆಸೆನಾಸ್. ಸ್ವಾಗತವಮ್ಮಾ. ರೋಮಿನ ಪ್ರತಿಯೊಂದು ಹೃದಯವೂ ತುಡಿಯುತ್ತಿದೆ ನಿಮಗೋಸ್ಕರ; ತನ್ನ ನೀಚ
ಕೃತ್ಯಗಳಲ್ಲಿ ಕಣ್ಣು ಕಾಣದ ಆಂಟನಿ ಮಾತ್ರವೇ ನಿಮ್ಮನ್ನು ಹೊರಹಾಕಿ, ತನ್ನ ರಾಜ್ಯಾಡಳಿತವನ್ನು ಒಬ್ಬಾಕೆ ಬೆಲೆವೆಣ್ಣಿಗೆ
ಕೊಟ್ಟಿದ್ದಾನೆ — ಅದೀಗ ನಮ್ಮ ವಿರುದ್ಧ ಕೂಗಾಡುತ್ತಿದೆ.
ಒಕ್ಟೇವಿಯಾ. ಹಾಗನ್ನುವಿರ?
ಸೀಸರ್. ಅದರಲ್ಲಿ ಸಂದೇಹವೇ ಇಲ್ಲ. ಬಾ, ತಂಗೀ.
ಯಾವಾಗಲೂ ನೀನು ಸಹನೆಯ ಮೂರ್ತಿಯಾಗಿರು. ನನ್ನ ಪ್ರೀತಿಯ ಸೋದರಿ!
[ಎಲ್ಲರೂ ನಿಷ್ಕ್ರಮಣ]
ದೃಶ್ಯ 7
ಆಕ್ಟಿಯಮ್, ಗ್ರೀಸಿನ ಪಶ್ಚಿಮ ತೀರದಲ್ಲಿ ಕ್ಲಿಯೋಪಾತ್ರ ಮತ್ತು ಈನೋಬಾರ್ಬಸ್ ಪ್ರವೇಶ
ಕ್ಲಿಯೋ. ನಾನು ನಿನ್ನನ್ನು ಸರಿಯಾಗಿ ನೋಡಿಕೊಳ್ಳುತ್ತೇನೆ, ನಿನಗೆ ಸಂದೇಹ ಬೇಡ.
ಈನೋ. ಆದರೆ ಯಾಕೆ, ಯಾಕೆ, ಯಾಕೆ?
ಕ್ಲಿಯೋ. ನಾನು ಈ ಯುದ್ಧಗಳಲ್ಲಿ ಭಾಗವಹಿಸುವುದರ ವಿರುದ್ಧ ನೀನು ಮಾತಾಡಿದ್ದೀ. ಅದು ನನಗೆ ಹಿಡಿಸಿದ್ದಲ್ಲ ಎನ್ನುತ್ತೀ.
ಈನೋ. ಸರಿ, ಸರಿ, ನಿಮಗೆ ಹಿಡಿಸುವಂಥದೇ ಮತ್ತೆ?
ಕ್ಲಿಯೋ. ನಮ್ಮ ವಿರುದ್ಧ ಸಾರಿದ ಯುದ್ಧವಲ್ಲ ಎಂದಿದ್ದರೂ, ನಾವು ಯಾಕೆ ಖುದ್ದಾಗಿ ಅಲ್ಲಿ ಇರಬಾರದು?
ಈನೋ. [ಸ್ವಗತ] ಅದಕ್ಕೆ ಉತ್ತರವಿದೆ.
ಗಂಡುಗುದುರೆ ಮತ್ತು ಹೆಣ್ಣುಗುದುರೆಗಳನ್ನು ಒಟ್ಟಿಗೇ ನಾವು ಕಣಕ್ಕಿಳಿಸಿದರೆ, ಗಂಡುಗುದುರೆ ಹೋದಂತೆಯೇ ಲೆಕ್ಕ;
ಹೆಣ್ಣು ಕುದುರೆ ಒಬ್ಬ ಸೈನಿಕನನ್ನೂ ಹೊತ್ತೀತು, ಅವನ ಕುದುರೆಯನ್ನೂ ಹೊತ್ತೀತು.
ಕ್ಲಿಯೋ. ಏನೆನ್ನುತ್ತೀ?
ಈನೋ. ನಿಮ್ಮ ಹಾಜರಿ ಆಂಟನಿಗೊಂದು ಸಮಸ್ಯೆಯಾಗುತ್ತದೆ, ಅವರ ಹೃದಯ ಕೇಳುತ್ತದೆ, ಮಿದುಳು ಕೇಳುತ್ತದೆ, ವೇಳೆ ಕೇಳುತ್ತದೆ, ಇದು ಯಾವುದೂ ಕೇಳಬಾರದ ಸಮಯ. ಈಗಾಗಲೆ ಅವರ ವಿಲಾಸ ಜೀವನಕ್ಕೆ ಜನ ಬಯ್ಯುತ್ತಿದ್ದಾರೆ, ಈ ಯುದ್ಧ ನೋಡಿಕೊಳ್ಳುತ್ತಿರುವುದು ಫೆÇೀಂಟಿಯಸ್ ಎಂಬ ಹಿಜಡಾ ಮತ್ತು ನಿಮ್ಮ ಚಾಕರಿ ಹೆಣ್ಣುಗಳೆಂದು
ರೋಮಿನಲ್ಲಿ ಮಾತಾಡುತ್ತಿದ್ದಾರೆ.
ಕ್ಲಿಯೋ. ರೋಮ್ ಮುಳುಗಲಿ, ನಮ್ಮನ್ನು ತೆಗಳುವ ನಾಲಿಗೆಗಳು ಕೊಳೆತು ಹಾಳಾಗಲಿ! ಈ ಯುದ್ಧದಲ್ಲಿ ನಮಗೊಂದು ಹೊಣೆಯಿದೆ, ಹಾಗೂ ನನ್ನ ಸಾಮ್ರಾಜ್ಯದ ಮುಖ್ಯಸ್ಥೆಯಾಗಿ ನಾನಲ್ಲಿ ಇರಬೇಕು.
ಅದಕ್ಕೆ ವಿರೋಧ ಹೇಳಬೇಡ; ನಾನು ಹಿಂದುಳಿಯುವಾಕೆಯಲ್ಲ.
ಆಂಟನಿ ಮತ್ತು ಕೆನಿಡಿಯಸ್ ಪ್ರವೇಶ
ಈನೋ. ಇಲ್ಲ, ನಾನು ಹೇಳುವುದಾಯಿತು. ಮಹಾರಾಜರು ಬರುತ್ತಿದ್ದಾರೆ ಈ ಕಡೆ.
ಆಂಟನಿ. ಟರೆಂಟಮ್ ಮತ್ತು ಬ್ರುಂಡೂಸಿಯಮ್ನಿಂದ ಆತ ಅಯೋನಿಯನ್ ಸಾಗರವನ್ನು ತ್ವರೆಯಾಗಿ ದಾಟಿ
ಟೋರಿನೋವನ್ನು ಕೈವಶಮಾಡಿದ್ದು ವಿಲಕ್ಷಣವಲ್ಲವೆ, ಕೆನಿಡಿಯಸ್?
ನೀನಿದು ಕೇಳಿದ್ದೀಯಾ, ಪ್ರಿಯೆ?
ಕ್ಲಿಯೋ. ಚುರುಕುತನವನ್ನು ಅಲಕ್ಷ್ಯವಂತರಿಗಿಂತ ಮಿಗಿಲಾಗಿ ಇನ್ನು ಯಾರೂ ಕರುಬುವುದಿಲ್ಲ.
ಆಂಟನಿ. ಒಳ್ಳೆಯ ತರಾಟೆ, ಗಂಡಸು ಹೇಳುವಂಥ ಮಾತು, ಅಲಕ್ಷ್ಯವನ್ನು ಹಂಗಿಸುವುದಕ್ಕೆ. ಕೆನಿಡಿಯಸ್, ನಾವು ಅವನನ್ನು
ಸಾಗರದಲ್ಲಿ ಎದುರಿಸೋಣ.
ಕ್ಲಿಯೋ. ಸಾಗರದಲ್ಲೆ, ಇನ್ನೇನು?
ಕೆನಿಡಿಯಸ್. ಪ್ರಭುಗಳು ಯಾಕೆ ಹಾಗೆ ಮಾಡಬೇಕು?
ಆಂಟನಿ. ಆತ ಅದಕ್ಕೆ ನಮ್ಮನ್ನು ಕೆಣಕುವ ಕಾರಣ.
ಈನೋ. ದೊರೆಗಳು ಹಾಗಿದ್ದರೆ ಅವನನ್ನು ದ್ವಂದ್ವ ಯುದ್ಧಕ್ಕೆ ಆಹ್ವಾನಿಸಿದ್ದೀರಿ.
ಕೆನಿಡಿಯಸ್. ಹೌದು, ಈ ಕಾಳಗವನ್ನು ಫಾರ್ಸಾಲಿಯಾದಲ್ಲಿ ನಡೆಸುವುದಕ್ಕೂ — ಸೀಸರ್ ಪಾಂಪಿಯ ಜತೆ ಹೋರಾಡಿದ್ದು
ಅಲ್ಲಿಯೇ. ಆದರೆ ತನಗೆ ಅನುಕೂಲವಲ್ಲದ ಈ ಆಹ್ವಾನಗಳನ್ನು ಅವನು ತಿರಸ್ಕರಿಸುತ್ತಾನೆ, ತಾವೂ ಹಾಗೆ ಮಾಡಬೇಕು.
ಈನೋ. ತಮ್ಮ ನೌಕೆಗಳಿಗೆ ಸರಿಯಾದ ಸೈನಿಕರಿಲ್ಲ. ನಿಮ್ಮ ನಾವಿಕರು ಕತ್ತೆ ಮೇಯಿಸುವವರು, ಕೊಯ್ಲಿನವರು,
ಬಲವಂತದಿಂದ ಭರ್ತಿಯಾದವರು; ಬದಲು ಸೀಸರನ ನೌಕಾದಳದಲ್ಲಾದರೆ, ಪಾಂಪಿಯ ವಿರುದ್ಧ ಅನೇಕ ಸಲ
ಹೋರಾಡಿದವರಿದ್ದಾರೆ. ಅವರ ನೌಕೆಗಳು ಚುರುಕಾಗಿವೆ, ನಿಮ್ಮವು ಭಾರವುಳ್ಳವು. ಸಮುದ್ರಯುದ್ಧವನ್ನು
ನಿರಾಕರಿಸಿದ್ದರಿಂದ ನಿಮಗೆ ಅವಮಾನವೇನೂ ಆಗುವುದಿಲ್ಲ, ಭೂಸಮರಕ್ಕೆ ತಯಾರಾದರೆ ಸಾಕು.
ಆಂಟನಿ. ಸಮುದ್ರವೇ ಸರಿ, ಸಮುದ್ರವೇ ಸರಿ.
ಈನೋ. ಮಹಾಪ್ರಭೂ, ಆ ಮೂಲಕ ತಾವು ಧರೆಯ ಮೇಲೆ ಸಾಧಿಸಿದ ಪರಿಪೂರ್ಣ ದಂಡನಾಯಕತ್ವವನ್ನು
ಕಳೆದುಕೊಳ್ಳುವಿರಿ, ಸೇನೆಯನ್ನು ಹರಿಹಂಚುತ್ತೀರಿ — ಅದು ಗಾಯಗೊಂಡ ಕಾಲ್ದಳದಿಂದಲೇ ಹೆಚ್ಚಾಗಿ ತುಂಬಿದೆ —
ನಿಮ್ಮದೇ ವಿಖ್ಯಾತ ಪ್ರಾವೀಣ್ಯತೆಯನ್ನು ಕಾರ್ಯಗತಗೊಳಿಸದೆ ಇರುವಿರಿ, ಗೆಲುವು ಸೂಚಿಸುವ ಮಾರ್ಗವನ್ನು ಪೂರ್ತಿಯಾಗಿ
ಕೈ ಬಿಡುವಿರಿ, ಹಾಗೂ ಭದ್ರವಾದ ಸುರಕ್ಷಿತತೆಯನ್ನು ಬಿಟ್ಟು ವಿಧಿಗೆ ಮತ್ತು ಗಂಡಾಂತರಕ್ಕೆ ನೀವು ನಿಮ್ಮನ್ನೆ
ಒಪ್ಪಿಸುವಿರಿ.
ಆಂಟನಿ. ಸಮುದ್ರದಲ್ಲೇ ನಾನು ಯುದ್ಧ ಮಾಡುವುದು.
ಕ್ಲಿಯೋ. ನನ್ನ ಬಳಿ ಅರುವತ್ತು ಹಾಯಿಹಡಗಗಳಿವೆ, ಇದಕ್ಕಿಂತ ಚೆನ್ನಾದ್ದು ಸೀಸರನ ಬಳಿ ಇಲ್ಲ.
ಆಂಟನಿ. ಲೆಕ್ಕಕ್ಕಿಂತ ಹೆಚ್ಚಾದ ನೌಕೆಗಳನ್ನು ನಾವು ಸುಟ್ಟುಬಿಡುತ್ತೇವೆ. ಉಳಿದ ನೌಕೆಗಳನ್ನು ಸರಿಯಾಗಿ ನಡೆಸಿ,
ಆಕ್ಟಿಯಮ್ನ ಭೂಶಿಖರದಿಂದ ಸೀಸರನ ಆಗಮನವನ್ನು ಹಿಮ್ಮೆಟ್ಟಿಸುತ್ತೇವೆ. ಅಲ್ಲಿ ನಾವು ಸೋತರೆ, ಭೂಯುದ್ಧವಂತೂ
ಇದ್ದೇ ಇದೆ.
ದೂತನ ಪ್ರವೇಶ
ಏನು ವಿಷಯ?
ದೂತ. ಸುದ್ದಿ ನಿಜ, ಮಹಾಪ್ರಭೂ; ಸೀಸರ್ ಕಾಣಿಸಿಕೊಂಡಿದ್ದಾರೆ. ಟೊರೀನೆಯನ್ನು ವಶಪಡಿಸಿಕೊಂಡಿದ್ದಾರೆ.
ಆಂಟನಿ. ಆತ ಖುದ್ದಾಗಿ ಅಲ್ಲಿರೋದು ಸಾಧ್ಯವೇ? ಅಸಾಧ್ಯ ಅದು; ಅವನ ಸೇನೆ ಅಲ್ಲಿರುವುದೇ ಆಶ್ಚರ್ಯ. ಕೆನಿಡಿಯಸ್,
ನೀನು ನಮ್ಮ ಹತ್ತೊಂಭತ್ತು ಪದಾತಿ ದಳಗಳನ್ನು, ಹನ್ನೆರಡುನೂರು ಅಶ್ವಗಳನ್ನು ಮುನ್ನಡೆಸು. ನಾವು ನಮ್ಮ ನೌಕೆಗಳಿಗೆ ಹೋಗುತ್ತೇವೆ. ಹೋಗೋಣ, ನನ್ನ ಜಲದೇವಿ!
ಒಬ್ಬ ಸೈನಿಕನ ಪ್ರವೇಶ
ಏನಯ್ಯಾ, ಸೈನಿಕನೇ? ಏನು ಸಂಗತಿ?
ಸೈನಿಕ. ಓ ಸಾಮ್ರಾಟರೇ, ಸಮುದ್ರ ಯುದ್ಧ ಬೇಡ; ಜೀರ್ಣಕಾಷ್ಠಗಳ ನಂಬುವುದು ಬೇಡ. ಈ ಖಡ್ಗ ಮತ್ತೀ ನನ್ನ
ಗಾಯಗಳ ಮೇಲೆ ನಿಮಗೆ ನಂಬಿಕೆಯಿಲ್ಲವೇ? ಈಜಿಪ್ಟಿನವರೂ ಫಿನೀಶಿಯನರೂ ಬೇಕಾದರೆ ನೀರಲ್ಲಿ ಬೀಳಲಿ; ನಮಗೆ ನೆಲದಲ್ಲಿ
ನಿಂತು ಹೋರಾಡಿ ಅಭ್ಯಾಸ, ಕಾಲಿಗೆ ಕಾಲು ಕೊಟ್ಟು.
ಆಂಟನಿ. ಸರಿ, ಸರಿ, ಹೋಗು!
[ಆಂಟನಿ, ಕ್ಲಿಯೋಪಾತ್ರ, ಮತ್ತು ಈನೋಬಾರ್ಬಸ್ ನಿಷ್ಕ್ರಮಣ]
ಸೈನಿಕ. ಹಕ್ರ್ಯುಲಿಸ್ನ ಆಣೆ, ನಾನೇ ಸರಿಯೆಂದು ನನಗನಿಸುತ್ತದೆ.
ಕೆನಿಡಿಯಸ್. ಸೈನಿಕನೆ, ನೀನೇ ಸರಿ; ಆದರೆ ಅವರ ಇಡೀ ಕಾರ್ಯಗತಿ ಬಲದ ಮೇಲೆ ಸಾಗುತ್ತಿಲ್ಲ. ನಮ್ಮ ನಾಯಕರಿಗೆ
ಮೂಗುದಾರವಿದೆ, ನಾವು ಹೆಂಗಳೆಯರ ಆಳುಗಳು.
ಸೈನಿಕ. ಸೇನಾದಳಗಳನ್ನೂ ಅಶ್ವಗಳನ್ನೂ ನೀವು ನೆಲದ ಮೇಲೆ ಕಾದಿರಿಸುತ್ತೀರಿ ಅಲ್ಲವೇ?
ಕೆನಿಡಿಯಸ್. ಮಾರ್ಕಸ್ ಒಕ್ಟೇವಿಯಸ್, ಮಾರ್ಕಸ್ ಜಸ್ಟಿಯಸ್, ಪಬ್ಲಿಕೋಲಾ, ಮತ್ತು ಕೆಲಿಯಸ್ ಸಮುದ್ರಕ್ಕೆ
ಹೋಗುತ್ತಾರೆ, ಆದರೆ ನಾವು ನೆಲದಲ್ಲಿ ತಯಾರಿರುತ್ತೇವೆ.
ಸೀಸರನ ಈ ವೇಗ ಊಹೆಗೂ ನಿಲುಕದ್ದು.
ಸೈನಿಕ. ಅವರು ರೋಮಿನಲ್ಲಿದ್ದಾಗ, ಅವರ ಸೈನ್ಯದ ತುಕಡಿಗಳು ಎಷ್ಟು ತ್ವರಿತಗತಿಯಿಂದ ಧಾವಿಸಿದುವೆಂದರೆ,
ಗೂಢಚಾರರ ಕಣ್ಣಿಗೂ ಅವು ಮಣ್ಣೆರಚಿದುವು.
ಕೆನಿಡಿಯಸ್. ಅವರ ದಂಡನಾಯಕ ಯಾರು, ನಿನಗೆ ಗೊತ್ತಿದೆಯೇ?
ಸೈನಿಕ. ಯಾರೋ ಟೌರಸ್ ಎನ್ನುತ್ತಾರೆ.
ಕೆನಿಡಿಯಸ್. ಸರಿ, ನನಗೆ ಗೊತ್ತು ಆ ಮನುಷ್ಯನನ್ನು.
ದೂತನ ಪ್ರವೇಶ
ದೂತ. ಮಹಾಪ್ರಭುಗಳು ಕೆನಿಡಿಯಸ್ನ್ನ ಕರೆಯುತ್ತಿದ್ದಾರೆ.
ಕೆನಿಡಿಯಸ್. ಕಾಲ ವದಂತಿಗಳಿಂದ ತುಂಬಿದೆ, ಪ್ರತಿನಿಮಿಷ ಒಂದನ್ನು ಹೆರುತ್ತಿದೆ.
[ಎಲ್ಲರೂ ನಿಷ್ಕ್ರಮಣ]
ದೃಶ್ಯ 8
ಆಕ್ಟಿಯಮ್ನಲ್ಲಿ..
ಸೀಸರ್ ಮತ್ತು ಟೌರಸ್, ದಂಡಿನೊಂದಿಗೆ ಪ್ರವೇಶ
ಸೀಸರ್. ಟೌರಸ್!
ಟೌರಸ್. ಮಹಾಪ್ರಭೂ?
ಸೀಸರ್. ಭೂಯುದ್ಧ ಬೇಡ; ದಂಡು ಒಟ್ಟಿಗೇ ಇರಲಿ. ನಾವು ಸಮುದ್ರದಲ್ಲಿ ಮುಗಿಸುವ ವರೆಗೆ ಯುದ್ಧ ಕೆಣಕುವುದು ಬೇಡ.
ಈ ಪತ್ರಸುರುಳಿಯಲ್ಲಿರೋದನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.
[ಪತ್ರಸುರುಳಿಯನ್ನು ಕೊಡುತ್ತಾನೆ]
ನಮ್ಮ ಅದೃಷ್ಟ ಈ ಸಾಹಸದಲ್ಲಿದೆ.
[ಎಲ್ಲರೂ ನಿಷ್ಕ್ರಮಣ]
ದೃಶ್ಯ 9
ಆಕ್ಟಿಯಮ್, ಅದೇ ಆಂಟನಿ ಮತ್ತು ಈನೋಬಾರ್ಬಸ್ ಪ್ರವೇಶ
ಆಂಟನಿ. ನಾವು ನಮ್ಮ ತುಕಡಿಗಳನ್ನು ಆ ಪರ್ವತದ ಆಚೆ ನಿಲ್ಲಿಸತಕ್ಕದ್ದು, ಸೀಸರನ ದಂಡು ಗೋಚರಿಸುವಲ್ಲಿ,
ಅಲ್ಲಿಂದ ನಾವು ನೌಕೆಗಳ ಸಂಖ್ಯೆ ಕಂಡುಕೊಳ್ಳಬೇಕು, ಅದಕ್ಕೆ ಅನುಸಾರ ಮುಂದರಿಯಬೇಕು.
[ಇಬ್ಬರೂ ನಿಷ್ಕ್ರಮಣ]
ದೃಶ್ಯ 10
ಆಕ್ಟಿಯಮ್, ಅದೇ ಕೆನಿಡಿಯಸ್ ತನ್ನ ಭೂಸೇನೆಯೊಂದಿಗೆ ರಂಗದ ಒಂದು ಕಡೆಯಿಂದ ಪ್ರವೇಶ, ಸೀಸರನ
ಅಧಿದಂಡನಾಯಕನಾದ ಟೌರಸ್ ಇನ್ನೊಂದು ಕಡೆಯಿಂದ ಪ್ರವೇಶ. ಅವರು ಹೋದ ನಂತರ ನೌಕಾಯುದ್ಧದ ಸದ್ದು ಕೇಳಿಸುವುದು.
ಸದ್ದು. ಈನೋಬಾರ್ಬಸ್ ಪ್ರವೇಶ
ಈನೋ. ಸರ್ವನಾಶ, ಸರ್ವನಾಶ, ಎಲ್ಲಾ ಸರ್ವನಾಶ! ನಾನಿನ್ನು ನೋಡಲಾರೆ. ಅಂಟೋನಿಯಾಡ್, ಈಜಿಪ್ಟಿನ ನೌಕಾದಳ,
ಇಡೀ ಅರುವತ್ತು ಯುದ್ಧಹಡಗ, ಚಲ್ಲಾಪಿಲ್ಲಿ ಓಡುತ್ತಿವೆ. ಅದನ್ನು ನೋಡಿಯೇ ನನ್ನ ಕಣ್ಣುಗಳು ಸಿಡಿಯುತ್ತಿವೆ.
ಸ್ಕಾರಸ್ ಪ್ರವೇಶ
ಸ್ಕಾರಸ್. ದೈವಗಳು, ದೈವಗಳು, ಅವುಗಳ ಸಮಸ್ತ ಒಕ್ಕೂಟ!
ಈನೋ. ಅದೇನು ನಿನ್ನ ಗೋಳಾಟ?
ಸ್ಕಾರಸ್. ಜಗತ್ತಿನ ಬಹುದೊಡ್ಡ ಭಾಗ ಬರೇ ಮೂರ್ಖತನಕ್ಕೆ ಹೊರಟು ಹೋಯಿತು. ರಾಜ್ಯಗಳನ್ನೂ ಪ್ರದೇಶಗಳನ್ನೂ ನಾವು
ಮುತ್ತಿಟ್ಟು ಕಳಿಸಿದೆವು.
ಈನೋ. ಯುದ್ಧ ಹೇಗೆ ನಡೆದಿದೆ?
ಸ್ಕಾರಸ್. ನಮ್ಮ ಪಕ್ಷದಲ್ಲಾದರೆ, ಮಾರಿ ಬಂದ ಹಾಗೆ, ಸಾವು ನಿಶ್ಚಿತ. ಆ ಈಜಿಪ್ಟಿನ ಭೋಸುಡಿ — ತೊನ್ನು ಹಿಡಿಯಲಿ
ಅವಳನ್ನು — ಕಾಳಗದ ನಡುವೆ ಗೆಲುವು ಅವಳಿ ಜವಳಿಯ ಹಾಗೆ ಒಂದೇ ತರ ಕಾಣಿಸಿದಾಗ ಎರಡೂ ಕಡೆ, ಅಥವಾ ನಮ್ಮದೇ
ಹಿರಿಯಣ್ಣನ ತರ — ಜೂನ್ನಲ್ಲಿ ನೊರಚು ಕಡಿದ ಹಸುವಿನ ಹಾಗೆ ಅವಳು ಹಾಯಿಯೆಬ್ಬಿಸಿ ತೆರಳೇ ಬಿಡುತ್ತಾಳೆ.
ಈನೋ. ನಾನದನ್ನು ನೋಡಿದೆ. ನೋಡಿ ನನ್ನ ಕಣ್ಣು ಕೆರವಾಯಿತು, ಮುಂದೆ ನೋಡುವುದಕ್ಕೇ ಆಗಲಿಲ್ಲ.
ಸ್ಕಾರಸ್. ಅವಳು ಹೊರಟದ್ದೇ, ಅವಳ ಯಕ್ಷಿಣಿಗೆ ಬಲಿಯಾದ ಆಂಟನಿ, ತಾನೂ ರೆಕ್ಕೆ ಬಿಚ್ಚಿ, ಕಾಡು
ಬಾತುಕೋಳಿಯ ಹಾಗೆ, ಅವಳ ಬೆನ್ನುಹತ್ತುತ್ತಾನೆ, ಯುದ್ಧವ ಹಿಂದೆ ಬಿಟ್ಟು. ಇಂಥ ಇನ್ನೊಂದು ನಾಚಿಕೆಗೇಡು
ಕೃತ್ಯ ನಾನು ಕಂಡಿದ್ದೇ ಇಲ್ಲ. ಅನುಭವವಾಗಲಿ,ಪುರುಷತ್ವವಾಗಲಿ, ಆತ್ಮಗೌರವವಾಗಲಿ, ಇದಕ್ಕಿಂತ
ಮೊದಲು ಕುಲಗೆಡಿಸಿಕೊಂಡದ್ದಿಲ್ಲ ಈ ರೀತಿ.
ಈನೋ. ದೇವರೆ, ದೇವರೆ!
ಕೆನಿಡಿಯಸ್ ಪ್ರವೇಶ
ಕೆನಿಡಿಯಸ್. ಸಾಗರದ ಮೇಲೆ ನಮ್ಮ ಅದೃಷ್ಟಕ್ಕೆ ಉಸಿರುಗಟ್ಟಿದೆ, ಮುಳುಗುತ್ತಿದೆ ಅದು ಅತ್ಯಂತ
ದಯನೀಯವಾಗಿ. ನಮ್ಮ ದಂಡನಾಯಕರು ತಮ್ಮನ್ನು ತಾವು ಸರಿಯಾಗಿ ತಿಳಿದಿರುತ್ತಿದ್ದರೆ ಅದು ಸರಿಯಾಗಿರುತ್ತಿತ್ತು.
ಖುದ್ದು ಪಲಾಯನದಿಂದ ಅವರು ನಮಗೊಂದು ಕೆಟ್ಟ ಮಾದರಿಯಾಗಿದ್ದಾರೆ!
ಈನೋ. ಸರಿ, ನೀನೂ ಈಗ ಪಲಾಯನ ಮಾಡುವವನೋ? ಹಾಗಿದ್ದರೆ ನಿನಗೆ ನಿಜಕ್ಕೂ ಶುಭರಾತ್ರಿ.
ಕೆನಿಡಿಯಸ್. ಪೆಲೊಪೋನ್ನೀಸಸ್ ಕಡೆಗೆ ಅವರು ಓಡಿದ್ದಾರೆ.
ಸ್ಕಾರಸ್. ಅಲ್ಲಿ ತಲುಪೋದು ಸುಲಭ, ಅಲ್ಲಿ ನಾನೂ ಕಾಯುವೆ, ಮುಂದಾಗುವುದನ್ನು.
ಕೆನಿಡಿಯಸ್. ನನ್ನ ಕಾಲ್ದಳವನ್ನು ಮತ್ತು ರಾವುತರನ್ನು ಸೀಸರನಿಗೆ ಅರ್ಪಿಸುವೆ. ಆರು ಮಂದಿ ಅರಸರು ಈಗಾಗಲೇ
ನನಗೆ ಶರಣಾಗತಿಯ ದಾರಿ ತೋರಿಸಿಕೊಟ್ಟಿದ್ದಾರೆ.
ಈನೋ. ನಾನಿನ್ನೂ ಆಂಟನಿಯ ಜರ್ಜರಿತ ಅವಕಾಶವ ಹಿಂಬಾಲಿಸುವೆ, ನನ್ನ ವಿವೇಕವೀಗ ನನಗೆ ವಿರುದ್ಧವಾಗಿದ್ದರೂ.
[ಬೇರೆ ಬೇರೆ ನಿಷ್ಕ್ರಮಣ]
ದೃಶ್ಯ 11
ಇಲ್ಲಿಂದ ನಾಟಕದ ಕೊನೆತನಕ ದೃಶ್ಯ ಅಲೆಕ್ಝಾಂಡ್ರಿಯಾದ ಪರಿಸರ
ಆಂಟನಿ ಸೇವಕರೊಂದಿಗೆ ಪ್ರವೇಶ.
ಆಂಟನಿ. ಕೇಳಿ! ನೆಲ ನುಡಿಯುತ್ತಿದೆ ನನಗೆ ತನ್ನ ಮೇಲಿನ್ನು ಕಾಲಿರಿಸದಂತೆ; ನನ್ನ ಹೊರುವುದಕ್ಕೆ ಅದಕ್ಕೆ ನಾಚಿಕೆಯಾಗುತ್ತಿದೆ.
ಮಿತ್ರರೇ, ಇಲ್ಲಿ ಬನ್ನಿ. ನಾನು ತಡವಾದ ಯಾತ್ರಿಕ, ದಾರಿಯನ್ನು ಎಂದೆಂದಿಗೂ ಕಳೆದುಕೊಂಡವನು. ಬಂಗಾರ ತುಂಬಿಸಿದ ನೌಕೆಯಿದೆ ನನ್ನ ಬಳಿ. ಅದನ್ನು ತೆಗೆದು ಹಂಚಿಕೊಳ್ಳಿ; ಓಡಿಹೋಗಿ, ಸೀಸರನ ಜತೆ ರಾಜಿಮಾಡಿಕೊಳ್ಳಿ.
ಎಲ್ಲರೂ. ಓಡುವುದೇ? ನಾವಲ್ಲ.
ಆಂಟನಿ. ನಾನೇ ಓಡಿಬಂದಿದ್ದೇನೆ, ಹೇಡಿಗಳಿಗೆ ಓಡಿ ಬೆನ್ನು ತೋರಿಸುವುದು ಹೇಗೆಂದು ತೋರಿಸಿಕೊಟ್ಟಿದ್ದೇನೆ. ಮಿತ್ರರೇ,
ಹೊರಟುಹೋಗಿ. ನಾನೇ ಈಗೊಂದು ಯೋಜನೆ ಹಾಕಿದ್ದೇನೆ, ಅದಕ್ಕೆ ನಿಮ್ಮ ಅಗತ್ಯವಿಲ್ಲ. ಹೊರಟುಹೋಗಿ. ಬಂದರದಲ್ಲಿದೆ
ನನ್ನ ನಿಧಿ. ಅದನ್ನು ತೆಗೆದುಕೊಳ್ಳಿ. ಓಹ್! ನೋಡಬಾರದ್ದನ್ನ ಹಿಂಬಾಲಿಸಿ ನಾನು ಮೂರ್ಖನಾದೆ! ನನ್ನ ಕೂದಲುಗಳೇ
ದಂಗೆಯೆದ್ದಿವೆ, ಬಿಳಿಗೂದಲು ಬಿಳಿಗೂದಲನ್ನ ಛೇಡಿಸುತ್ತಿದೆ ಅದರ ದುಡುಕಿಗೆ, ಕೆಂಗೂದಲು ಕೆಂಗೂದಲನ್ನ ಛೇಡಿಸುತ್ತಿದೆ
ಅದರ ಭೀತಿಗೆ. ಮಿತ್ರರೆ, ಹೊರಟುಹೋಗಿ. ನನ್ನ ಕೆಲವು ಸ್ನೇಹಿತರಿಗೆ ಪತ್ರ ಬರೆದುಕೊಡುವೆ, ಅದರಿಂದ ನಿಮ್ಮ ದಾರಿ
ಸುರಕ್ಷಿತವಾಗುತ್ತದೆ. ದಯವಿಟ್ಟು ದುಃಖಿಸಬೇಡಿ, ಅಸಮ್ಮತಿಯ ಉತ್ತರಗಳನ್ನೂ ಕೊಡಬೇಡಿ. ನನ್ನ ಹತಾಶೆ ಉದ್ಘೋಷಿಸುವ
ಅವಕಾಶವನ್ನು ಉಪಯೋಗಿಸಿಕೊಳ್ಳಿ. ತನ್ನನ್ನೇ ಬಿಟ್ಟವನನ್ನು ಹಾಗೇ ಬಿಟ್ಟುಬಿಡಿ. ಸಮುದ್ರತೀರಕ್ಕೆ ತೆರಳಿ ಈ ಕೂಡಲೇ!
ನಾನಂದ ನೌಕೆ ಮತ್ತು ಧನ ಅಲ್ಲಿ ನಿಮಗೆ ನೀಡುತ್ತೇನೆ. ಈಗ ಸ್ವಲ್ಪ ನನ್ನನ್ನು ನನ್ನಷ್ಟಕ್ಕೇ ಬಿಡಿ, ದಯವಿಟ್ಟು. ನಿಮ್ಮಲ್ಲಿ ನನ್ನ
ಪ್ರಾರ್ಥನೆ, ದಯವಿಟ್ಟು ಹಾಗೆ ಮಾಡಿ, ಯಾಕೆಂದರೆ ನಾನೀಗ ನಿಯಂತ್ರಣ ಕಳಕೊಂಡಿದ್ದೇನೆ. ಆದ್ದರಿಂದ ನಿಮ್ಮನ್ನು
ವಿನಂತಿಸುವೆ. ಸ್ವಲ್ಪ ಹೊತ್ತಿನಲ್ಲೇ ನಾನು ನಿಮ್ಮನ್ನು ಬಂದು ಕಾಣುವೆ.
[ಎಲ್ಲ ಹಿಂಬಾಲಕರೂ ನಿಷ್ಕ್ರಮಣ. ಆಂಟನಿ ಕೂತುಕೊಳ್ಳುತ್ತಾನೆ]
ಕ್ಲಿಯೋಪಾತ್ರ, ಅವಳನ್ನು ಕರೆದುಕೊಂಡು ಚಾರ್ಮಿಯಾನ್, ಇರಾಸ್ ಮತ್ತು ಈರೋಸ್ ಪ್ರವೇಶ
ಈರೋಸ್. ಇಲ್ಲಮ್ಮ, ಅವರನ್ನು ಹೋಗಿ ಸಾಂತ್ವನಗೊಳಿಸಬೇಕು ನೀವು.
ಇರಾಸ್. ದಯವಿಟ್ಟು ಹಾಗೆ ಮಾಡಬೇಕು, ಮಹಾರಾಜ್ಞಿ.
ಚಾರ್ಮಿ. ಹಾಗೇ ಮಾಡಬೇಕು. ಯಾಕೆ, ಬೇರೇನಿದೆ?
ಕ್ಲಿಯೋ. ನಾನು ಕೂತುಕೊಳ್ಳುತ್ತೇನೆ. ಓ ದೇವರೇ!
ಆಂಟನಿ. ಛೇ, ಛೇ, ಛೇ, ಛೇ, ಛೇ.
ಈರೋಸ್. ಇಲ್ಲಿ ನೋಡುತ್ತಿದ್ದೀರ, ಸ್ವಾಮಿ?
ಆಂಟನಿ. ಓ ಧಿಕ್ಕಾರ, ಧಿಕ್ಕಾರ, ಧಿಕ್ಕಾರ!
ಚಾರ್ಮಿ. ಅಮ್ಮಾ!
ಇರಾಸ್. ಅಮ್ಮಾ, ಓ ಮಹಾರಾಜ್ಞಿ!
ಈರೋಸ್. ಮಹಾಸ್ವಾಮಿ! ಮಹಾಸ್ವಾಮಿ!
ಆಂಟನಿ. ನಿಜ, ಮಹಾಸ್ವಾಮಿ, ನಿಜ. ಫಿಲಿಪ್ಪಿಯಲ್ಲಿ ಆತ ಖಡ್ಗವನ್ನು ಒರೆಯಲ್ಲಿ ಧರಿಸಿದ ಅಲಂಕಾರದ ಹಾಗೆ, ಆ
ಸಣಕಲ ಕಾಸ್ಸಿಯಸ್ಗೆ ಹೊಡೆತ ಹಾಕಿದ್ದು ನಾನು, ಆ ತಲೆಹೋಕ ಬ್ರೂಟಸ್ನ ಮುಗಿಸಿದ್ದೂ ನಾನೇ. ಆತ ಬರೇ
ಸಹಾಯಕರ ಮೇಲೆ ಅವಲಂಬಿಸಿದ, ಸೈನ್ಯ ಶತರಂಜದಲ್ಲಿ ಅವನಿಗೆ ಯಾವ ಅಭ್ಯಾಸವೂ ಇರಲಿಲ್ಲ. ಆದರೂ ಈಗ —
ಇರಲಿ.
ಕ್ಲಿಯೋ. ಆಹ್, ಸ್ವಲ್ಪ ಆಧರಿಸಿ.
ಈರೋಸ್. ರಾಜ್ಞಿಯವರು, ಮಹಾಸ್ವಾಮಿ, ರಾಜ್ಞಿಯವರು. ಇರಾಸ್. ಅವರ ಸಮೀಪ ಹೋಗಿ, ತಾಯಿ, ಮಾತಾಡಿಸಿ.
ಅವರಿಗೆ ಅವಮಾನದಿಂದ ಇನ್ನಿಲ್ಲ ಎಂದಾಗಿದೆ.
ಕ್ಲಿಯೋಪಾತ್ರ. ಸರಿ, ಹಾಗಿದ್ದರೆ, ನನ್ನನ್ನು ಹಿಡಿದುಕೊಳ್ಳಿ. ಓ!
ಈರೋಸ್. ಮಹಾಸ್ವಾಮಿಯವರೇ, ಎದ್ದೇಳಿ, ಮಹಾರಾಣಿಯವರು ಬರುತ್ತಿದ್ದಾರೆ. ಆಕೆಯ ಶಿರ ಬಾಗಿದೆ,
ನಿಮ್ಮ ಸಮಾಧಾನ ಕಾಪಾಡದಿದ್ದರೆ ಸಾವು ಆಕೆಯ´ಸೆರೆಹಿಡಿಯುವುದು ಖಂಡಿತ.
ಆಂಟನಿ. ನಾನು ಗೌರವ ಕಳಕೊಂಡವ. ಅತ್ಯಂತ ಹೀನಾಯ ಅಪರಾಧವೆಸಗಿದವ.
ಈರೋಸ್. ಸ್ವಾಮಿ, ರಾಣಿಯವರು.
ಆಂಟನಿ. ಓ, ಈಜಿಪ್ಟಿನ ರಾಜ್ಞಿಯೇ, ನನ್ನನ್ನು ಎತ್ತ ಕರೆದೊಯ್ದೆ? ನಿನ್ನ ಕಣ್ಣುಗಳಿಂದ ಹೇಗೆ ಅವಮಾನದ
ಹನಿಗಳನ್ನು ರವಾನಿಸಿಕೊಂಡಿದ್ದೇನೆ ನೋಡು, ಅವಮರ್ಯಾದೆಯಲ್ಲಿ ನಾನು ನಾಶವಾಗಲು ಬಿಟ್ಟುದನ್ನೆಲ್ಲ
ಮತ್ತೆ ಕಣ್ಣಿಗೆ ತಂದುಕೊಂಡಿದ್ದೇನೆ.
ಕ್ಲಿಯೋ. ಓ ನನ್ನ ದೊರೆಯೆ, ನನ್ನ ದೊರೆಯೆ, ನಾನು ಬೆದರಿ ಹಿಂದೆಗೆದುದಕ್ಕೆ ಕ್ಷಮಿಸಿ. ನೀವು ಹಿಂಬಾಲಿಸುವಿರೆಂದು
ನಾನು ಅಂದುಕೊಂಡಿರಲಿಲ್ಲ.
ಆಂಟನಿ. ರಾಣಿ, ನನ್ನ ಹೃದಯದ ತಂತಿ ನಿನ್ನ ಚುಕ್ಕಾಣಿಗೆ ಕಟ್ಟಿದೆಯೆಂದು ನಿನಗೆ ಚೆನ್ನಾಗಿ ಗೊತ್ತಿತ್ತು, ನೀನು ಹೋದಲ್ಲಿ
ನನ್ನ ಎಳೆಯುತ್ತೀ. ನನ್ನ ಚೇತನದ ಮೇಲೆ ನಿನ್ನ ಸಂಪೂರ್ಣ ಒಡೆತನವೂ ನಿನಗೆ ಗೊತ್ತು, ನಿನ್ನ ಕಣ್ಸನ್ನೆ ಸಾಕು
ದೈವಗಳನ್ನೂ ಧಿಕ್ಕರಿಸಿ ನಾನದನ್ನು ಪಾಲಿಸುವುದಕ್ಕೆ.
ಕ್ಲಿಯೋ. ಓ, ನನ್ನ ಕ್ಷಮಿಸಿ!
ಆಂಟನಿ. ಈಗ ನಾನು ಈ ಯುವಕನಿಗೆ ದಾರುಣ ವಿನಂತಿಗಳ ಕಳಿಸಬೇಕು, ನನ್ನೀ ಕೀಳು ಅವಸ್ಥಾಂತರದಲ್ಲಿ
ಚೌಕಾಶಿ ಮಾಡಿಕೊಳ್ಳಬೇಕು, ಅರ್ಧ ಜಗತ್ತು ನನ್ನ ಕೈಯಲ್ಲಿದ್ದು ನನಗೆ ಬೇಕಾದ್ದು ಮಾಡಿದವ ನಾನು,
ಅದೃಷ್ಟಗಳ ನಿರ್ಮಿಸಿದಂತೆಯೇ ತೆಗೆದವ ಕೂಡ. ನನ್ನ ಮೇಲೆಷ್ಟು ಜಯಗಳಿಸಿದಿ ನೀನೆಂದು ನಿನಗೆ ಗೊತ್ತು, ನನ್ನ
ರಾಗದುರ್ಬಲ ಖಡ್ಗ ಆಮೇಲೆ ಯಾವ ಸ್ಥಿತಿಯಲ್ಲೂ ಅನುರಾಗ ನುಡಿದಂತೆ ಕೇಳಿತು.
ಕ್ಲಿಯೋ. ಮಾಫಿಯಿರಲಿ, ಮಾಫಿಯಿರಲಿ!
ಆಂಟನಿ. ಒಂದು ಕಂಬನಿ ಕೂಡ ಉದುರದೆ ಇರಲಿ; ಒಂದು ಹನಿಯೆಂದರೆ ಅದು ಎಲ್ಲ ಗಳಿಸಿದ್ದಕ್ಕೆ, ಎಲ್ಲ
ಕಳೆದದ್ದಕ್ಕೆ ಸಮ. ನನಗೊಂದು ಮುತ್ತು ಕೊಡು.
[ಪರಸ್ಪರ ಚುಂಬಿಸುತ್ತಾರೆ]
ಇದಿಷ್ಟೇ ಸಾಕು — ನನಗೆ ಎಲ್ಲ ಬಂದಂತಾಯಿತು. —
ನಾವು ನಮ್ಮ ಶಿಕ್ಷಕರನ್ನು ಕಳಿಸಿದ್ದೆವು. ಅವರು ಬಂದರೇ?
ಪ್ರಿಯೆ, ನನ್ನ ತಲೆ ಸೀಸದಷ್ಟು ಭಾರವಾಗಿದೆ. — ಯಾವುದೋ ಮದ್ಯ ಮತ್ತು ನಮ್ಮ ಭಕ್ಷ್ಯಭೋಜ್ಯ! ವಿಧಿಗೆ ಗೊತ್ತು ಅದು
ಹೆಚ್ಚು ಹೊಡೆತ ಹಾಕುತ್ತಿರುವಾಗಲೇ ನಾವದನ್ನು ಜಾಸ್ತಿ ಧಿಕ್ಕರಿಸುವುದು.
[ಎಲ್ಲರೂ ನಿಷ್ಕ್ರಮಣ]
ದೃಶ್ಯ 12
ಈಜಿಪ್ಟು, ಸೀಸರನ ಬಿಡದಿ..
ಸೀಸರ್, ಅಗ್ರಿಪಾ, ಥಿಡಿಯಾಸ್, ಮತ್ತು ಡೋಲಾಬೆಲ್ಲಾ, ಇತರರೊಂದಿಗೆ ಪ್ರವೇಶ
ಸೀಸರ್. ಆಂಟನಿ ಕಡೆಯಿಂದ ಬಂದವ ಈಗ ಬರಲಿ. ನಿನಗವನನ್ನು ಗೊತ್ತಿದೆಯೇ?
ಡೋಲಾಬೆಲ್ಲಾ. ಸೀಸರ್, ಅದು ಅವರ ಶಾಲಾಶಿಕ್ಷಕ –ಇಲ್ಲಿಗವನು ತನ್ನ ಪುಂಖದ ಇಷ್ಟೊಂದು ದುರ್ಬಲ ಎಳೆಯನ್ನು
ಕಳಿಸಬೇಕಾದರೆ, ಅವನೀಗ ಗರಿಕಿತ್ತ ಹಕ್ಕಿಯಂತೇ ಆಗಿರುವನೆಂದು ಲೆಕ್ಕ. ಕೆಲವೇ ತಿಂಗಳ ಹಿಂದೆ ಅವನಿಗೆ
ರಾಜರುಗಳೇ ಜಾಸ್ತಿಯಾಗಿದ್ದರು ದೂತರಾಗುವುದಕ್ಕೆ.
ಆಂಟನಿಯ ರಾಯಭಾರಿಯ ಪ್ರವೇಶ
ಸೀಸರ್. ಮುಂದೆ ಬಂದು ಮಾತಾಡು.
ರಾಯಭಾರಿ. ಆಂಟನಿಯ ಕಡೆಯಿಂದ ಬಂದವ ನಾನು.
ಇದುತನಕ ನಾನು ಅವರ ಉದ್ದೇಶಗಳಿಗೆ ಕ್ಷುಲ್ಲಕನಾಗಿದ್ದೆ, ಪೊದರಿನ ಮೇಲೆ ಮುಂಜಾವಿನ ಇಬ್ಬನಿ ಹೇಗೆ ಮಹಾಸಾಗರಕ್ಕೆ
ಕ್ಷುಲ್ಲಕವಾಗಿರುತ್ತದೋ — ಹಾಗೆ.
ಸೀಸರ್. ಅದೇನೇ ಇರಲಿ, ನೀನು ಬಂದ ಉದ್ದೇಶ ಹೇಳು.
ರಾಯಭಾರಿ. ಅವರ ವಿಧಾತರು ತಾವು, ತಮಗವರು ವಂದಿಸುತ್ತಾರೆ, ಹಾಗೂ ಈಜಿಪ್ಟಿನಲ್ಲಿ ನೆಲಸಲು ಅಪ್ಪಣೆ
ಕೋರುತ್ತಾರೆ, ಅದಲ್ಲವೆಂದಾದರೆ ತನ್ನ ಕೋರಿಕೆಯನ್ನು ತಗ್ಗಿಸಿ ಏಥೆನ್ಸ್ನಲ್ಲಿ ಒಬ್ಬ ಸಾಮಾನ್ಯ ಮನುಷ್ಯನಂತೆ, ಬುವಿ ಮತ್ತು
ಬಾನಿನ ನಡುವೆ, ಬಾಳಲು ಬಿಡಬೇಕೆಂದು ಯಾಚಿಸುತ್ತಾರೆ.
ಇದು ಅವರ ಮಟ್ಟಿಗೆ. ಇನ್ನು ಕ್ಲಿಯೋಪಾತ್ರ ತಮ್ಮ ಹಿರಿಮೆಯನ್ನು ಒಪ್ಪುತ್ತಾಳೆ, ತಮ್ಮ ಅಧಿಕಾರಕ್ಕೆ ತನ್ನನ್ನು
ಒಪ್ಪಿಸುತ್ತಾಳೆ, ಟಾಲೆಮಿಗಳ ಕೂಟ ತನ್ನ ವಾರಸುದಾರರು ಎನ್ನುವುದಕ್ಕೆ ತಾವು ಒಪ್ಪಬೇಕೆನ್ನುತ್ತಾಳೆ — ಆ
ಟಾಲೆಮಿಗಳ ಭವಿಷ್ಯ ಈಗ ತಮ್ಮ ಕೃಪೆಯಲ್ಲಿದೆ.
ಸೀಸರ್. ಆಂಟನಿಯ ಮಟ್ಟಿಗೆ, ಅವನ ಕೋರಿಕೆ ನನ್ನ ಕಿವಿಗೆ ಬಿದ್ದಿಲ್ಲವೆಂದು ಲೆಕ್ಕ. ರಾಣಿಯ ಮಟ್ಟಿಗೆ, ಅವಳ ಮನವಿಯಾಗಲಿ,
ಕೋರಿಕೆಯಾಗಲಿ ಸೋಲಬೇಕಾದ್ದಿಲ್ಲ, ಈಜಿಪ್ಟಿನಿಂದ ಅವಳು ತನ್ನ ಮರ್ಯಾದೆಹೋಕ ಮಿತ್ರನನ್ನು ಹೊರಗಟ್ಟಿದರೆ, ಅಥವಾ
ಅಲ್ಲೇ ಅವನ ಜೀವ ತೆಗೆದರೆ. ಇದನ್ನವಳು ಮಾಡಿದರೆ, ಅವಳ ವಿನಂತಿ ನಿಷ್ಫಲವಾಗುವುದಿಲ್ಲ. ಆದ್ದರಿಂದ ಅವರಿಬ್ಬರ
ಬಳಿಗೆ ತೆರಳು.
ರಾಯಭಾರಿ. ನಿಮಗೆ ಶುಭವಾಗಲಿ.
ಸೀಸರ್. ಹಗ್ಗ ಕಟ್ಟಿ ಎಳೆದು ತಾ ಅವನನ್ನು.
[ರಾಯಭಾರಿಯ ನಿಷ್ಕ್ರಮಣ]
ನಿನ್ನ ವಾಕ್ಚಾತುರ್ಯವನ್ನು ಪರೀಕ್ಷಿಸುವದಕ್ಕೆ ಇದು ಸಮಯ, ಹೊರಡು, ಆಂಟನಿಯ ಕೈಯಿಂದ ಕ್ಲಿಯೋಪಾತ್ರಾಳನ್ನು ಗೆಲ್ಲು,
ನಮ್ಮ ಹೆಸರಲ್ಲಿ ಅವಳು ಬಯಸಿದ್ದು ನೀಡು ವಾಗ್ದಾನವಾಗಿ, ನಿನ್ನದೇ ಬುದ್ಧಿ ಉಪಯೋಗಿಸಿ ಇನ್ನಷ್ಟು ಕೊಡುಗೆಗಳ ಅದಕ್ಕೆ
ಸೇರಿಸು. ಭಾಗ್ಯದ ಉತ್ಕರ್ಷದಲ್ಲಿ ಹೆಂಗಸರು ದುರ್ಬಲರಾಗಿರುತ್ತಾರೆ; ಇನ್ನಷ್ಟು ಬೇಕೆನ್ನುವ ಆಸೆ ಇದುವರೆಗೆ ಯಾರೂ ಮುಟ್ಟಿರದ
ಕನ್ಯಾಮಣಿಯನ್ನು ಕೂಡ ವ್ರತಭಂಗಗೊಳಿಸುತ್ತದೆ. ನಿನ್ನ ಚಾತುರ್ಯ ಉಪಯೋಗಿಸು, ಥಿಡಿಯಾಸ್, ನಿನ್ನೀ ಶ್ರಮಕ್ಕೆ
ನಿನಗೇನು ಬೇಕೋ ನೀನೇ ತೀರ್ಮಾನಿಸು — ಅದನ್ನು ನಾವು ಶಾಸನದಂತೆ ಪಾಲಿಸುತ್ತೇವೆ.
ಥಿಡಿಯಾಸ್. ಸೀಸರ್, ನಾನು ಹೋಗುತ್ತೇನೆ.
ಸೀಸರ್. ಆಂಟನಿ ಈ ಸ್ಥಿತಿಯಲ್ಲಿ ಹೇಗೆ ವರ್ತಿಸುತ್ತಾನೆ ನೋಡಿಕೋ, ಮತ್ತು ಅವನ ಪ್ರತಿಯೊಂದು ಚಲನೆಯಲ್ಲಿ ಆ
ವರ್ತನೆ ಏನು ಹೇಳುತ್ತದೆ ಎನ್ನುವುದನ್ನು ನನಗೆ ತಿಳಿಸು.
[ಎಲ್ಲರೂ ನಿಷ್ಕ್ರಮಣ]
ದೃಶ್ಯ 13
ಈಜಿಪ್ಟ್, ಕ್ಲಿಯೋಪಾತ್ರಳ ಅರಮನೆ…
ಕ್ಲಿಯೋಪಾತ್ರ, ಈನೋಬಾರ್ಬಸ್, ಚಾರ್ಮಿಯಾನ್, ಮತ್ತು ಇರಾಸ್ ಪ್ರವೇಶ…
ಕ್ಲಿಯೋ. ಏನು ಮಾಡೋಣ, ಈನೋಬಾರ್ಬಸ್?
ಈನೋ. ಚಿಂತಿಸುವುದು, ಮತ್ತು ಸಾಯುವುದು.
ಕ್ಲಿಯೋ. ಆಂಟನಿಯ ತಪ್ಪೆ, ಅಥವಾ ನಮ್ಮದೆ?
ಈನೋ. ಆಂಟನಿಯದೇ ತಪ್ಪು, ಅವರು ತಮ್ಮ ವಿವೇಕವನ್ನು ತನ್ನಿಚ್ಛೆಯ ಗುಲಾಮನಾಗಿ ಮಾಡಿದರು. ಆ ಯುದ್ಧರಂಗದಿಂದ
ನೀವು ಓಡಿದರೇನಾಯಿತು — ಅದರ ವಿವಿಧ ಮುಖಗಳು ಒಂದನ್ನೊಂದು ಗಾಬರಿಗೊಳಿಸಲಿಲ್ಲವೇ? ಅವರು ಯಾಕೆ
ಹಿಂಬಾಲಿಸಬೇಕಿತ್ತು? ಜಗತ್ತು ಅರ್ಧಕ್ಕೆ ಅರ್ಧ ವಿರೋಧಿ-ಸುತ್ತಿದ್ದಾಗ, ಅದರ ಏಕೈಕ ಕಾರಣ ಅವರೇ ಆಗಿರುತ್ತ,
ಅಂಥ ಸಮಯದಲ್ಲಿ ಮಮತೆಯ ತುರಿಕೆ ಅವರ ನಾಯಕತ್ವವನ್ನು ಚಿವುಟಬಾರದಾಗಿತ್ತು. ಓಡುವ ನಿಮ್ಮ ನೌಕೆಗಳ
ಹಿಂಬಾಲಿಸುವುದು, ತನ್ನ ನೌಕಾದಳವನ್ನು ದಿಕ್ಕೆಡಿಸುವುದು –ಇದು ಅವರ ನಷ್ಟಕ್ಕಿಂತ ಕಡಿಮೆಯ ನಾಚಿಕೆಗೇಡಲ್ಲ.
ಕ್ಲಿಯೋ. ಶ್, ಸುಮ್ಮನಿರು.
ರಾಯಭಾರಿಯೊಂದಿಗೆ ಆಂಟನಿಯ ಪ್ರವೇಶ
ಆಂಟನಿ. ಇದೇ ಏನು ಅವನ ಉತ್ತರ?
ರಾಯಭಾರಿ. ಹೌದು, ಮಹಾಪ್ರಭೂ.
ಆಂಟನಿ. ರಾಜ್ಞಿ ನನ್ನ ಬಿಟ್ಟುಕೊಟ್ಟರೆ ಆಕೆ ಕೋರಿದ್ದು ಸಿಗುತ್ತದೆ.
ರಾಯಭಾರಿ. ಹಾಗನ್ನುತ್ತಿದ್ದಾರೆ.
ಆಂಟನಿ. ಆಕೆಗೆ ಗೊತ್ತಾಗಲಿ ಇದು. ಈ ನರೆಗೂದಲ ಶಿರವನ್ನು ಆ ಗಡ್ಡಮೂಡದ ಸೀಸರನಲ್ಲಿಗೆ ಕಳಿಸು, ಆತ
ನಿನ್ನ ಕೋರಿಕೆಗಳನ್ನು ತುಂಬಿ ತುಳುಕುವ ತರ ಪೂರೈಸುತ್ತಾನೆ, ಬೇಕಾದ ಸಂಸ್ಥಾನಗಳನ್ನು ನೀಡುತ್ತಾನೆ.
ಕ್ಲಿಯೋ. ಆ ಶಿರವನ್ನೇ, ಮಹಾಸ್ವಾಮಿ?
ಆಂಟನಿ. ವಾಪಸು ಹೋಗು ಅವನಲ್ಲಿಗೆ, ಅವನ ತಲೆಯನ್ನೀಗ ತಾರುಣ್ಯದ ಗುಲಾಬಿ ಅಲಂಕರಿಸಿದೆಯೆಂದು
ಹೇಳು: ಇದರಿಂದ ಜನ ತಿಳಕೊಳ್ಳಬೇಕಾದ್ದು ಇಷ್ಟು: ಅವನ ಧನ, ನೌಕೆ, ಸೇನಾಬಲ, ಹೇಡಿಯದ್ದೇ ಇರಬಹುದು,
ಆದರೂ ಮಂತ್ರಿಗಳು ಒಬ್ಬ ಮಗುವಿನ ಕೈಕೆಳಗೆ ಗೆಲ್ಲುವರು,ಸೀಸರನ ಆಜ್ಞಾನುಸಾರ ಎಂಬಂತೆ. ಆದ್ದರಿಂದ ನಾನವನಿಗೆ ಸವಾಲೆಸೆಯುತ್ತೇನೆ — ಅವನು ಯೌವನದ ಚಿಹ್ನೆಗಳನ್ನು ಒತ್ತಟ್ಟಿಗಿರಿಸಲಿ, ನನ್ನೀ ಅಧೋಗತಿಯಲ್ಲಿ ನನ್ನ ಜತೆ ಕತ್ತಿಗೆ ಕತ್ತಿ ತಾಗಿಸಿ ಉತ್ತರ ನೀಡಲಿ, ಅದಕ್ಕೆ ನಾವಿಬ್ಬರೇ ಸಾಕು: ಹೀಗೆ ನಾನೇ ಬರೆಯುತ್ತೇನೆ: ಬಾ ನನ್ನ ಜತೆಗೆ.
[ಆಂಟನಿ ಮತ್ತು ರಾಯಭಾರಿ ನಿಷ್ಕ್ರಮಣ]
ಈನೋ. ಸರಿ, ಇನ್ನೇನು? ಸೇನಾಪ್ರಬಲ ಸೀಸರ್ ತನ್ನ ಬಲ ಒತ್ತಟ್ಟಿಗಿರಿಸುವನು, ಒಬ್ಬ ಹವ್ಯಾಸಿಯಂತೆ ಕತ್ತೀವರಸೆ ಪ್ರವೀಣನ
ವಿರುದ್ಧ ರಂಗಪ್ರದರ್ಶನಕ್ಕೆ ಬರುವನು. ಮನುಷ್ಯರ ಬುದ್ಧಿ ಅವರ ಅದೃಷ್ಟದ ಒಂದು ಅಂಶವೆಂಬಂತೆ ನನಗೆ ತೋರುತ್ತದೆ, ಹೊರಗಿನ ವಿದ್ಯಮಾನಗಳು ಒಳಗಿನ ಗುಣವನ್ನು ತಮ್ಮ ಕೂಡೆ ಸೆಳೆಯುತ್ತವೆ — ಸಕಲವೂ ಒಟ್ಟಿಗೇ ನವೆಯುತ್ತವೆ — ಎಲ್ಲಾ ಗೊತ್ತಿದ್ದೂ, ಸಂಪನ್ನ ಸೀಸರ್ ತನ್ನ ಶೂನ್ಯತೆಗೆ ಉತ್ತರಿಸುವನೆಂದು ಗೊತ್ತಿದ್ದೂ, ಆಂಟನಿ ಕನಸು ಕಾಣುವುದೆಂದರೇನು? ಸೀಸರ್, ನೀನವರ ಬುದ್ಧಿಯನ್ನೂ ಕೂಡ ಅಣಗಿಸಿರುವಿ.
ಒಬ್ಬ ಸೇವಕನ ಪ್ರವೇಶ
ಸೇವಕ. ಸೀಸರನಿಂದ ಬಂದ ದೂತ ನಾನು.
ಕ್ಲಿಯೋ. ಏನು, ಯಾವುದೇ ರಾಜಮರ್ಯಾದೆ ಗೊತ್ತಿಲ್ಲವೇ ಇವನಿಗೆ? ನನ್ನ ಸೇವಕಿಯರನ್ನು ನೋಡು, ಗುಲಾಬಿ ಮೊಗ್ಗೆಗೆ
ಮಂಡಿಯೂರಿ ಮುಟ್ಟಿದ ಅವರ ಮೂಗು ಮೊಗ್ಗೆ ಬಿರಿದರೂ ಕದಲಲಾರದು. ಕರಿ ಅವನನ್ನು.
ಈನೋ. ನನ್ನ ಸೇವಾನಿಷ್ಠೆ ಮತ್ತು ನಾನು ಈಗ ಪರಸ್ಪರ ಹೊಂದಿಕೊಳ್ಳುತ್ತಿದ್ದೇವೆ. ಮೂರ್ಖರಿಗೆ ತೋರಿಸಿದ ನಿಷ್ಠೆ ನಮ್ಮ
ನಿಷ್ಠೆಯನ್ನು ಬರೇ ಮೂರ್ಖತನ ಮಾಡಿಬಿಡುತ್ತದೆ: ಆದರೂ ಒಬ್ಬ ಪದಚ್ಯುತ ಮಾಲಿಕನನ್ನು ಹಿಂಬಾಲಿಸುವ ತಾಳ್ಮೆಯುಳ್ಳ
ಮನುಷ್ಯ, ತನ್ನ ಮಾಲಿಕನನ್ನು ಗೆದ್ದವನ ಗೆಲ್ಲುತ್ತಾನೆ, ಗೆದ್ದು ಕತೆಯಲ್ಲೊಂದು ಸ್ಥಾನ ಪಡೆಯುತ್ತಾನೆ.
ಥಿಡಿಯಾಸ್ ಪ್ರವೇಶ
ಕ್ಲಿಯೋ. ಏನು ಸೀಸರನ ಇಚ್ಛೆ?
ಥಿಡಿಯಾಸ್. ಇಲ್ಲಿ ಬೇಡ.
ಕ್ಲಿಯೋ. ಇಲ್ಲಿರೋರೆಲ್ಲ ಮಿತ್ರರೇ. ನಿರ್ಭಯವಾಗಿ ಹೇಳಿ.
ಥಿಡಿಯಾಸ್. ಅವರು ಆಂಟನಿಯ ಮಿತ್ರರಿರಬಹುದು.
ಈನೋ. ಸೀಸರನಿಗಿರುವಷ್ಟೇ ಮಿತ್ರರು ಆಂಟನಿಗೂ ಬೇಕು, ಸ್ವಾಮಿ, ಇಲ್ಲದಿದ್ದರೆ ನಾವಾದರೂ ಯಾತಕ್ಕೆ ಇರುವುದು?
ಸೀಸರನಿಗೆ ಮನಸ್ಸಿದ್ದರೆ ನಮ್ಮ ಒಡೆಯರು ಅವರ ಮಿತ್ರರಾಗಲು ಧಾವಿಸುವರು: ನಮ್ಮನ್ನು ನಿಮಗೆ ಗೊತ್ತು, ಯಾರು ಆಂಟನಿಯವರು, ಯಾರು ಸೀಸರನವರು ಎನ್ನುವುದು.
ಥಿಡಿಯಾಸ್. ಅದಿರಲಿ, ವಿಖ್ಯಾತ ರಾಣಿಯೇ, ಸೀಸರ್ ನಿಮ್ಮನ್ನು ಕೇಳಿಕೊಳ್ಳುವುದೆಂದರೆ: ಅವರು ತಮ್ಮ ನೆಲೆಯಲ್ಲಿ
ಹೇಗೆ ಸೀಸರರೋ ಹಾಗೇ ತಾವು ತಮ್ಮ ನೆಲೆಯಲ್ಲಿ ಸಾಮ್ರಾಜ್ಞಿ.
ಕ್ಲಿಯೋ. ಮುಂದೆ ಹೇಳಿರಿ, ಆಸ್ಥಾನಿಕರೆ.
ಥಿಡಿಯಾಸ್. ನಿಮ್ಮ ಮಾನದ ಮೇಲಿನ ಗಾಯಗಳಿಗೋಸ್ಕರ ಅವರಿಗೆ ಮರುಕವಿದೆ — ಅವು ನಿರುಪಾಯದ ತಪ್ಪುಗಳು,
ಬೇಕೆಂದೆ ತಂದುಕೊಂಡದ್ದಲ್ಲ.
ಕ್ಲಿಯೋ. ಅವರೊಬ್ಬ ದೇವರು, ಯಾವುದು ನಿಶ್ಚಿತವಾಗಿ ಸರಿಯೆನ್ನುವುದು ಅವರಿಗೆ ಗೊತ್ತಿದೆ. ನನ್ನ ಮಾನವನ್ನು ನಾನು
ಕೊಟ್ಟದ್ದಲ್ಲ, ಆಂಟನಿ ಬರೇ ಆಕ್ರಮಿಸಿಕೊಂಡದ್ದು.
ಈನೋ. ಅದನ್ನು ಖಚಿತಪಡಿಸಿಕೊಳ್ಳುವುದಕ್ಕೆ, ನಾನು ಆಂಟನಿಯ ವಿಚಾರಿಸುವೆ. [ಆಂಟನಿಯ ಕುರಿತು] ಸ್ವಾಮಿ, ಸ್ವಾಮಿ,
ನೀವು ಮೈಯೆಲ್ಲ ತೂತು, ನಾವು ನಿಮ್ಮನ್ನು ಮುಳುಗಲು ಬಿಡಬೇಕೀಗ, ಯಾಕೆಂದರೆ ನಿಮ್ಮ ಪ್ರೀತಿಪಾತ್ರರು ಬಿಟ್ಟು
ಹೋಗುತ್ತಿದ್ದಾರೆ.
[ಈನೋಬಾರ್ಬಸ್ ನಿಷ್ಕ್ರಮಣ]
ಥಿಡಿಯಾಸ್. ತಾವು ಸೀಸರನಿಂದ ಬಯಸುವುದೇನೆಂದು ನಾನವರಿಗೆ ಹೇಳಲೇ? ತಾವು ಕೇಳಬೇಕೆಂದು ಅವರು ಭಾಗಶಃ
ಯಾಚಿಸುತ್ತಿದ್ದಾರೆ. ತನ್ನ ಸಂಪತ್ತು ನಿಮಗೊಂದು ಆಸರೆಗೋಲು ಆಗಬೇಕೆನ್ನುವುದು ಅವರ ಪ್ರೀತಿ. ಆದರೆ ತಾವು ಆಂಟನಿಯನ್ನು
ಬಿಟ್ಟು ಚಕ್ರಾಧಿಪತಿಯಾದ ಸೀಸರನ ಛತ್ರದ ಕೆಳಗೆ ಬಂದಿದ್ದೀರಿ ಎಂದು ನನ್ನ ಬಾಯಿಯಿಂದ ಕೇಳಿದರೆ ಅವರಿಗೆ ಖುಷಿಯಾಗುತ್ತದೆ.
ಕ್ಲಿಯೋ. ನಿಮ್ಮ ಹೆಸರೇನು?
ಥಿಡಿಯಾಸ್. ಥಿಡಿಯಾಸ್.
ಕ್ಲಿಯೋ. ದಯಾಳುವಾದ ರಾಜದೂತರೇ, ಮಹಾ ಸೀಸರಿಗೆ ನನ್ನ ಪರವಾಗಿ ಹೇಳಿರಿ, ಆ ಜಯಪ್ರದ ಹಸ್ತವನ್ನು ನಾನು
ಚುಂಬಿಸುತ್ತೇನೆ: ನನ್ನ ಕಿರೀಟವನ್ನು ಅವರ ಪದತಲದಲ್ಲಿ ಇರಿಸಿ, ಮಣಿಯುವುದಕ್ಕೆ ನಾನು ಸಿದ್ಧನಿದ್ದೇನೆ ಎಂದು ಹೇಳಿ.
ಸರ್ವರೂ ಮಣಿಯುವ ಅವರ ಉಸಿರಲ್ಲಿ ನನಗೆ ಈಜಿಪ್ಟಿನ ವಿನಾಶ ಕೇಳಿಸುತ್ತಿದೆಯೆಂದು ತಿಳಿಸಿ.
ಥಿಡಿಯಾಸ್. ತeóïÀ್ಮು ಅತ್ಯಂತ ಗೌರವಾನ್ವಿತ ಮಾರ್ಗ ಅದು.
ವಿವೇಕ ಮತ್ತು ವಿಧಿ ಪರಸ್ಪರ ತಾಕಿದಾಗ, ವಿವೇಕ ತನ್ನ ಕೈಲಾಗದ್ದಕ್ಕೆ ಕೈಹಾಕದಿದ್ದಲ್ಲಿ, ಯಾವ ವಿಧಿಯೂ ಅದನ್ನು ಅಲುಗಿಸಲಾರದು.
ತಮಗೆ ನನ್ನ ಗೌರವ ಸಲ್ಲಿಸುವುದಕ್ಕೆ ಅಪ್ಪಣೆಯಾಗಲಿ.
[ಕ್ಲಿಯೋಪಾತ್ರಳ ಮುಂಗೈಯನ್ನು ಚುಂಬಿಸುತ್ತಾನೆ]
ಕ್ಲಿಯೋ. ನಿಮ್ಮ ಸೀಸರನ ತಾತ, ಆಗಾಗ ರಾಜ್ಯಗಳ ಕೈವಶಪಡಿಸಬೇಕೆಂದು ಯೋಚಿಸಿದಾಗಲೆಲ್ಲ, ಆ ದುರದೃಷ್ಟ
ಸ್ಥಳದಲ್ಲಿ ತಮ್ಮ ತುಟಿಗಳನ್ನಿರಿಸುತ್ತಿದ್ದರು, ಅದು ಮುತ್ತುಗಳ ಮಳೆಗರೆಯುತ್ತಿತ್ತೋ ಎನ್ನುವಂತೆ.
ಆಂಟನಿ ಮತ್ತು ಈನೋಬಾರ್ಬಸ್ ಪ್ರವೇಶ
ಆಂಟನಿ. ಜುಲುಮೆಗಳು? ಸಿಡಿಲ ದೈವದ ಆಣೆ! ಯಾರಯ್ಯ ನೀನು?
ಥಿಡಿಯಾಸ್. ಸಂಪೂರ್ಣ ಮನುಷ್ಯನ ಆಜ್ಞಾಧಾರಕ, ಹಾಗೂಆಜ್ಞಾಧಾರಕರಲ್ಲಿ ಸರ್ವಶ್ರೇಷ್ಠ.
ಈನೋ. [ಪ್ರೇಕ್ಷಕರಿಗೆ] ನಿನಗೆ ಛಡಿಯೇಟು ಬೀಳುತ್ತದೆ.
ಆಂಟನಿ. [ಸೇವಕರ ಕರೆಯುತ್ತ] ಯಾರಲ್ಲಿ? — ಆಹ್, ಕಾಕಪಕ್ಷಿಯೆ! — ದೇವರೇ, ಪಿಶಾಚಗಳೇ, ಅಧಿಕಾರ ಕರಗುತ್ತಿದೆ
ನನ್ನಿಂದ. ತೀರ ಈಚಿನ ತನಕ ನಾನು ಹೋ!' ಅಂದಾಗ ಕವಡೆಗೆ ಕವಿಯುವ ಹುಡುಗರ ಹಾಗೆ ರಾಜರುಗಳೇ ಮುಂದೆ ಬಂದು
ಏನಪ್ಪಣೆ?’ ಎಂದು ಅರಚುತ್ತಿದ್ದರು. ಕಿವಿಯಿಲ್ಲವೇ ನಿಮಗೆ?
ನಾನಿನ್ನೂ ಆಂಟನಿ.
ಸೇವಕರ ಪ್ರವೇಶ
ಈ ಆಸಾಮಿಯನ್ನು ಎಳೆದುಕೊಂಡುಹೋಗಿ ಥಳಿಸಿರಿ.
ಈನೋ. [ಪ್ರೇಕ್ಷಕರಿಗೆ] ಸಿಂಹದ ಮರಿಯೊಂದಿಗೆ ಆಡುವುದು ಒಳ್ಳೆಯದು ಸಾಯುವ ಮುದಿಸಿಂಹದ ಜತೆ ಆಡುವುದಕ್ಕಿಂತ.
ಆಂಟನಿ. ಚಂದ್ರತಾರೆಯರ ಆಣೆ! ಥಳಿಸಿರಿ ಅವನನ್ನು.
ಇಪ್ಪತ್ತು ಬಹುದೊಡ್ಡ ಸಂಸ್ಥಾನಗಳು ಬೇಕಿದ್ದರೆ ಸೀಸರನ ಸಮ್ಮತಿಸಲಿ, ಆದರೆ ಈ ಇವಳ ಕೈಯ ಜತೆ ಆಡುವ
ಅಹಂಕಾರವೇ ಅವರಿಗೆ — ಏನವಳ ಹೆಸರು ಒಮ್ಮೆ ಕ್ಲಿಯೋಪಾತ್ರಾ ಆಗಿದ್ದವಳ? ಹೊಡೆಯಿರಿ ಅವನಿಗೆ,
ಅತ್ತು ಕರೆಯುವ ಹುಡುಗರ ಹಾಗೆ ಕ್ಷಮೆ ಯಾಚಿಸುವ ವರೆಗೆ ಇಕ್ಕಿರಿ. ಒಯ್ಯಿರಿ ಅವನನ್ನು.
ಥಿಡಿಯಾಸ್. ಮಾರ್ಕ್ ಆಂಟನಿ —
ಆಂಟನಿ. ಎಳೆದುಕೊಂಡು ಹೋಗಿ! ಥಳಿಸಿದ ಮೇಲೆ ಕರಕೊಂಡು ಬನ್ನಿ ಮತ್ತೆ, ಈ ಆಸಾಮಿಯ ಮೂಲಕ
ಸೀಸರನಿಗೊಂದು ಸಂದೇಶ ಕಳಿಸುವುದಿದೆ.
[ಸೇವಕರು ಥಿಡಿಯಾಸ್ನನ್ನು ಕರೆದೊಯ್ಯುವರು]
[ಕ್ಲಿಯೋಪಾತ್ರಳಿಗೆ] ನನಗೆ ನಿನ್ನ ಪರಿಚಯವಾಗುವುದಕ್ಕೆ ಮೊದಲೇ ನೀನು ಅರ್ಧ ಮುಗಿದಿದ್ದಿ. ಹ? ಸ್ತ್ರೀಯರಲ್ಲಿ
ಸ್ತ್ರೀರತ್ನವಾದ ಒಬ್ಬಾಕೆಯಲ್ಲಿ ನ್ಯಾಯಸಮ್ಮತವಾದ ಸಂತಾನ ಪಡೆಯದೆ ರೋಮಿನಲ್ಲಿ ನಾನು ದಿಂಬಿನ ಮೇಲೆ
ತಲೆಯಿರಿಸದೆ ಬಿಟ್ಟದ್ದು ದಾಸೋಹಕ್ಕೆ ಕಾಯುವವಳಿಂದ ಹೀನಾಯಿಸಲ್ಪಡಲೆಂದೆ?
ಕ್ಲಿಯೋ. ನನ್ನ ಸ್ವಾಮಿ —
ಆಂಟನಿ. ನೀನು ಯಾವತ್ತೂ ನಿಂತಲ್ಲಿ ನಿಲ್ಲದವಳು.
ಆದರೆ ನಮ್ಮ ಪಾಪದ ಕೊಡ ತುಂಬಿದಾಗ — ಆಮೇಲೆ ಯಾರಿಗೆ ಬೇಕು! — ನಮ್ಮ ಕಣ್ಣುಗಳನ್ನು ದೇವತೆಗಳು
ಮುಚ್ಚುತ್ತಾರೆ, ನಮ್ಮ ವಿವೇಕ ನಮ್ಮದೇ ಹೇಸಿಗೆಯಲ್ಲಿ ಬಿದ್ದು ಹೊರಳುವಂತೆ ಮಾಡುತ್ತಾರೆ, ನಮ್ಮ ತಪ್ಪುಗಳನ್ನು ನಾವೇ
ಆರಾಧಿಸುವಂತೆ ಮಾಡುತ್ತಾರೆ, ನಾವು ಅಧೋಗತಿಯತ್ತ ಹೆಜ್ಜೆಯಿರಿಸುತ್ತಿದ್ದರೆ ಅವರು ನೋಡಿ ನಗುತ್ತಾರೆ.
ಕ್ಲಿಯೋ. ಓ, ಇದು ಇಲ್ಲಿಗೆ ಬಂತೆ?
ಆಂಟನಿ. ಸತ್ತ ಸೀಸರನ ತಟ್ಟೆಯ ಮೇಲೊಂದು ಹಳಸಿದ ತುತ್ತಾಗಿದ್ದೆ ನೀನು; ಇಲ್ಲ, ಕ್ನೇಯಸ್ ಪಾಂಪಿಯ ಎಂಜಲು,
ಇದರ ಹೊರತು ಜನಕ್ಕೆ ಗೊತ್ತಿಲ್ಲದ ಅದೆಷ್ಟು ಬಿಸಿಗಳಿಗೆಗಳನ್ನು ನೀನು ಮಸ್ತಿಗೋಸ್ಕರ ಹೆಕ್ಕಿಕೊಂಡಿದ್ದಿಯೋ ನಿನಗೇ ಗೊತ್ತು.
ನನಗೆ ಖಂಡಿತವಿದೆ, ಆತ್ಮನಿಯಂತ್ರಣ ಹೇಗಿರಬೇಕೆಂದು ನೀನು ಊಹಿಸಬಲ್ಲಿ, ಆದರೆ ಅದೇನೆಂದು ನಿನಗೆ ಗೊತ್ತಿಲ್ಲ.
ಕ್ಲಿಯೋ. ಇದೆಲ್ಲ ಯಾಕೆ?
ಆಂಟನಿ. ಚೆಲ್ಲಿದ ಕಾಸು ಹೆಕ್ಕಿ `ದೇವರು ನಿಮಗೆ ಒಳ್ಳೇದು ಮಾಡಲಿ!’ ಎನ್ನುವ ವ್ಯಕ್ತಿಗೆ ನನ್ನ ಜತೆಗಾರನಾದ ನಿನ್ನೀ ಕೈಯ
ಸಲಿಗೆ ನೀಡುವುದೆಂದರೇನು — ಎರಡು ಹೃದಯಗಳ ಪ್ರೇಮಗಳ ಒತ್ತೆಯಿರಿಸಿ ರಾಜಮುದ್ರೆಯೊತ್ತಿದ ಕೈ ಅದು! ಓ,
ನಾನು ಬಸಾನಿನ ಬೆಟ್ಟದ ಮೇಲಿನ ಗೂಳಿಯಾಗಿದ್ದರೆ, ಇತರ ಸ್ಪರ್ಧಾಳುಗಳ ಹೂತ್ಕರಿಸಿ ಓಡಿಸುತ್ತಿದ್ದೆ! ಯಾಕೆಂದರೆ, ನನಗೆ
ಕಡು ಕಾರಣವಿದೆ, ಅದನ್ನು ನಯವಾಗಿ ನುಡಿಯುವುದೆಂದರೆ, ನೇಣು ಬಿಗಿದ ಕೊರಳು ಕೊಲೆಗಡುಕನ ನೈಪುಣ್ಯಕ್ಕೆ ಕೃತಜ್ಞತೆ
ಸಮರ್ಪಿಸಿದಂತೆ.
ಥಿಡಿಯಾಸ್ನೊಂದಿಗೆ ಒಬ್ಬ ಸೇವಕನ ಪ್ರವೇಶ
ಥಳಿಸಿ ಆಯಿತೆ?
ಸೇವಕ. ಚೆನ್ನಾಗಿ, ಮಹಾಪ್ರಭೂ.
ಆಂಟನಿ. ಕೂಗಿದನೆ? ಮಾಫಿ ಬೇಡಿದನೆ?
ಸೇವಕ. ಉಪಕಾರ ಬೇಡಿದ್ದು ನಿಜ.
ಆಂಟನಿ. [ಥಿಡಿಯಾಸ್ಗೆ] ನಿನ್ನ ಅಪ್ಪ ಬದುಕಿದ್ದರೆ, ನೀನು ಹೆಣ್ಣಾಗಿ ಹುಟ್ಟದ್ದಕ್ಕೆ ಮರುಗಲಿ; ಸೀಸರನ ಜೈತ್ರಯಾತ್ರೆಯಲ್ಲಿ
ಅವನನ್ನು ಹಿಂಬಾಲಿಸಿದ್ದಕ್ಕೆ ನೀನು ಪಶ್ಚಾತ್ತಪಿಸು, ಯಾಕೆಂದರೆ ಅದಕ್ಕೇ ನಿನ್ನ ಥಳಿಸಿದ್ದು. ಇನ್ನು ಮುಂದೆ ಮಹಿಳೆಯರ ಶ್ವೇತಹಸ್ತ
ನಿನಗೆ ಜ್ವರ ಹುಟ್ಟಿಸಬೇಕು; ಅದನ್ನ ನೋಡಿದರೇ ನಿನ್ನ ಮೈ ನಡುಗಬೇಕು. ಸೀಸರನಲ್ಲಿಗೆ ತೆರಳು. ನಿನಗಿಲ್ಲಿ ಸಿಕ್ಕಿದ ಸ್ವಾಗತದ
ಬಗ್ಗೆ ಅವನಿಗೆ ಹೇಳು. ನನಗವನು ಸಿಟ್ಟು ಬರಿಸುತ್ತಿದ್ದಾನೆಂದು ಹೇಳು; ಯಾಕೆಂದರೆ, ಅವನಿಗೆ ಗೊತ್ತಿದ್ದ ನನ್ನ ಬಿಟ್ಟು, ನಾನೀಗ
ಏನಾಗಿದ್ದೇನೆ ಎಂದು ಊದಿದ್ದನ್ನೇ ಊದುತ್ತ ಅವನು ಗರ್ವಿಷ್ಠನೂ ಅಹಂಕಾರಿಯೂ ಆಗಿದ್ದಾನೆ; ನನಗೆ ಸಿಟ್ಟು ಬರಿಸುತ್ತಿದ್ದಾನೆ, ನನ್ನ
ಕೈ ಹಿಡಿದು ನಡೆಸಿದ್ದ ಈ ಹಿಂದಿನ ಅದೃಷ್ಟ ಗ್ರಹಗತಿಗಳು ತಮ್ಮ ವಲಯಗಳನ್ನು ಖಾಲಿಮಾಡಿ ನರಕಕೂಪಕ್ಕೆ ತಮ್ಮ ಬೆಂಕಿಗಳ
ತಳ್ಳಿರುವಾಗ, ಅದು ಬಹಳ ಸುಲಭ. ಅವನಿಗೆ ನನ್ನ ಮಾತು ಮತ್ತು ನಡತೆ ಸರಿಕಾಣದಿದ್ದಲ್ಲಿ, ಅವನ ಬಳಿ ನಾನು ಬಿಡುಗಡೆಗೊಳಿಸಿದ ಜೀತದವ ಹಿಪ್ಪಾರ್ಕಸ್ ಇದ್ದಾನೆಂದು ಹೇಳು. ಬೇಕಿದ್ದರೆ ಸೀಸರ್ ಅವನನ್ನು ಹಿಡಿಯಬಹುದು, ಶೂಲಕ್ಕೇರಿಸಬಹುದು, ಹಿಂಸಿಸಬಹುದು,
ಲೆಕ್ಕಕ್ಕೆ ಲೆಕ್ಕ ಚುಕ್ತಾಯಿಸಲು ಅವನು ಬಯಸಿದ ಹಾಗೆ ಮಾಡಬಹುದು.
ಒತ್ತಾಯಿಸಿ ತಿಳಿಸು. ಈಗ ಬಾಸುಂಡೆಗಳ ಸಹಿತ ಇಲ್ಲಿಂದ ತೊಲಗು!
[ಸೇವಕನ ಜತೆ ಥಿಡಿಯಾಸ್ ನಿಷ್ಕ್ರಮಣ]
ಕ್ಲಿಯೋ. ಮುಗಿಯಿತಾ?
ಆಂಟನಿ. ಅಯ್ಯೋ, ನಮ್ಮ ಉಪಗ್ರಹದ ಚಂದ್ರನಿಗೆ ಈಗ ಗ್ರಹಣ ಹಿಡಿದಿದೆ, ಅದೊಂದೇ ಆಂಟನಿಯ ಪತನವ
ಸೂಚಿಸುವುದು.
ಕ್ಲಿಯೋ. ಇವರ ಸಿಟ್ಟು ಇಳಿಯುವ ವರೆಗೆ ನಾನು ತಾಳ್ಮೆಯಿಂದಿರಬೇಕು.
ಆಂಟನಿ. ಸೀಸರನ ಮೆಚ್ಚಿಸುವುದಕ್ಕೆ ಸೀಸರನ ಚಾಕರಿಯವನ ಜತೆ ದೃಷ್ಟಿ ಬೆರೆಸುವಿಯಾ?
ಕ್ಲಿಯೋ. ಇನ್ನೂ ನನ್ನ ತಿಳಿದಿಲ್ವೆ?
ಆಂಟನಿ. ಶೈತ್ಯ ಹೃದಯದವಳೆ.
ಕ್ಲಿಯೋ. ಹಾ, ಸ್ವಾಮಿ, ಅದು ಹಾಗಿದ್ದ ಪಕ್ಷ, ನನ್ನ ಶೈತ್ಯ ಹೃದಯದಿಂದ ಆಕಾಶ ಆಲಿಕಲ್ಲುಗಳ ಮಳೆ ಸುರಿಸಲಿ,ಹುಟ್ಟುವಾಗಲೇ ಅವಕ್ಕೆ ವಿಷ ಬೆರೆಸಲಿ, ಮೊದಲ ಕಲ್ಲೇ ನನ್ನ ಕುತ್ತಿಗೆ ಮೇಲೆ ಬೀಳಲಿ; ಅದು ಕರಗುತ್ತಿರುವ ಹಾಗೇ ಕರಗಲಿ
ನನ್ನ ಜೀವವೂ! ಆಮೇಲೆ ಸಿಸೇರಿಯನ್ ಹೊಡೆದು ಹಾಕಲಿ, ನನ್ನ ಗರ್ಭದ ನೆನಪು ನನ್ನ ಧೀರ ಈಜಿಪ್ಶಿಯನರ ಜತೆಗೆ
ಒಂದೊಂದಾಗಿ ಅಳಿಸಿಹೋಗುವ ವರೆಗೆ — ಕರಗುವ ಈ ಬಿರುಮಳೆಯ ಕಲ್ಲುಗಳ ಪಕ್ಕ ಗೋರಿಗಳಿಲ್ಲದೆ ಮಲಗಿ
ನೊಣಗಳೂ ನೈಲ್ ನದಿಯ ಮಿಡಿತೆಗಳೂ ಅವರನ್ನು ತಿಂದು ಮುಗಿಸುವ ವರೆಗೆ!
ಆಂಟನಿ. ಈಗ ಸಮಾಧಾನವಾಯಿತು ನನಗೆ. ಸೀಸರ್ ಅಲೆಕ್ಝಾಂಡ್ರಿಯಾಕ್ಕೆ ಮುತ್ತಿಗೆ ಹಾಕಿ ಕೂತಿದ್ದಾನೆ, ಅಲ್ಲೇ ನಾನು
ಅವನ ಭವಿಷ್ಯವ ಕೆಣಕುವೆ. ನಮ್ಮ ಭೂಸೈನ್ಯವಾದರೆ ಸರಿಯಾಗಿಯೇ ಇದೆ; ಚದುರಿದ ನೌಕಾದಳ ಕೂಡ ಈಗ
ಒಂದಾಗಿ, ಸಮುದ್ರದಂತೆಯೇ ಗರ್ಜಿಸುತ್ತಿದೆ. ನೀನೆಲ್ಲಿ ಹೋದಿ, ನನ್ನ ಹೃದಯವೇ? ಕೇಳುತ್ತಿದ್ದೀಯಾ, ನನ್ನ ರಾಣಿ?
ರಣರಂಗದಿಂದ ನಾನೀ ತುಟಿಗಳನ್ನು ಚುಂಬಿಸಲು ಇನ್ನೊಮ್ಮೆ ಮರಳಿದರೆ ರಕ್ತರಂಜಿತನಾಗಿ ಬರುತ್ತೇನೆ; ನಾನೂ ನನ್ನ ಖಡ್ಗವೂ
ಇತಿಹಾಸದಲ್ಲಿ ನಮ್ಮ ಸ್ಥಾನ ಪಡೆದೇವು. ಹತಾಶೆಗೆ ಕಾರಣವಿಲ್ಲ ಈಗಲೇ.
ಕ್ಲಿಯೋ. ಇದೀಗ ನನ್ನ ಧೀರ ದೊರೆ!
ಆಂಟನಿ. ಮುಪ್ಪುರಿಗೊಳ್ಳುವುದು ನನ್ನ ಸ್ನಾಯು, ನನ್ನ ಹೃದಯ, ನನ್ನ ಉಸಿರು, ಘೋರವಾಗಿ ಹೋರಾಡುವೆ.
ಯಾಕೆಂದರೆ, ನನ್ನ ದಿನಗಳು ಉತ್ತಮವಿದ್ದಾಗ, ನಾನು ಹಿಡಿದವರನ್ನು ಸುಮ್ಮನೇ ಬಿಟ್ಟುಕೊಟ್ಟದ್ದಿದೆ; ಆದರೆ ಈಗ
ನನ್ನ ತಡೆದವರನ್ನು ಹಲ್ಲು ಕಚ್ಚಿ ಕತ್ತಲೆಗೆ ಕಳಿಸುವೆ. ಬಾ, ಇನ್ನೊಂದು ಉತ್ಸವರಾತ್ರಿ ಅನುಭವಿಸೋಣ. ನನ್ನೆಲ್ಲಾ
ಮ್ಲಾನವದನದ ಸೇನಾನಾಯಕರನ್ನು ಕರೆಯಿರಿ. ಪಾನ ಪಾತ್ರೆಗಳನ್ನು ಮತ್ತೊಮ್ಮೆ ತುಂಬಿರಿ; ಮಧ್ಯರಾತ್ರಿ
ಘಂಟಾನಾದವನ್ನು ಗೇಲಿಮಾಡೋಣ.
ಕ್ಲಿಯೋ. ಈ ದಿನ ನನ್ನ ಹುಟ್ಟಿದ ದಿನ. ಲಘುವಾಗಿ ಆಚರಿಸಬಯಸಿದ್ದೆ; ಆದರೆ ನನ್ನ ಸ್ವಾಮಿ ಪುನಃ ಆಂಟನಿಯಾದ
ಕಾರಣ, ನಾನು ಕ್ಲಿಯೋಪಾತ್ರಳಾಗುವೆ.
ಆಂಟನಿ. ಚೆನ್ನಾಗಿಯೇ ಆಚರಿಸೋಣ.
ಕ್ಲಿಯೋ. [ಪರಿಚಾರಿಕ ಬಳಗಕ್ಕೆ] ದೊರೆಯ ಸನ್ನಿಧಿಗೆ ಅವರ ಸಮಸ್ತ ಸೇನಾನಾಯಕರನ್ನೂ ಕರೆಯಿರಿ.
ಆಂಟನಿ. ಹಾಗೇ ಮಾಡಿರಿ; ಅವರ ಜತೆ ಮಾತಾಡೋಣ, ಮತ್ತು ಈ ರಾತ್ರಿ ಅವರ ಗಾಯಗಳಿಂದ ದ್ರಾಕ್ಷಾರಸ
ಹರಿಯಿಸುವುದು ನನ್ನ ಕೆಲಸ. ಬಾ, ನನ್ನ ರಾಣಿಯೆ, ಜೀವರಸ ಇನ್ನೂ ಇದೆ. ಮುಂದಿನ ಬಾರಿ ನಾನು ಹೋರಾಡುವಾಗ
ಮರಣ ಕೂಡಾ ನನ್ನ ಪ್ರೀತಿಸುವ ಹಾಗೆ ಮಾಡುವೆ, ಯಾಕೆಂದರೆ ಅದರ ಮಾರಿಗತ್ತಿಯ ಜತೆ ಕೂಡ ನಾನು ಸ್ಪರ್ಧಿಸುವೆ.
[ಈನೋಬಾರ್ಬಸ್ ಉಳಿದು ಎಲ್ಲರ ನಿಷ್ಕ್ರಮಣ]
ಈನೋ. ಈಗ ಆಂಟನಿ ಮಿಂಚನ್ನು ನೋಡಿ ನಾಚಿಸುವರು. ಕೋಪದಿಂದ ಕನಲುವುದೆಂದರೆ ಭಯ ಬಿಟ್ಟುಹೋಗುವುದು,
ಅಂಥ ಮನಃಸ್ಥಿತಿಯಲ್ಲಿ, ಪಾರಿವಾಳ ಕುಕ್ಕುವುದು ಉಷ್ಟ್ರಪಕ್ಷಿಯ; ಹಾಗೂ ನಮ್ಮ ದಂಡನಾಯಕರ ಮಿದುಳ ಕುಗ್ಗುವಿಕೆ ಕ್ರಮವಾಗಿ
ಅವರ ಧೈರ್ಯವನ್ನು ವರ್ಧಿಸುತ್ತದೆ. ಬುದ್ಧಿಯ ಮೇಲೆ ಪರಾಕ್ರಮ ಆಕ್ರಮಣ ನಡೆಸಿದಾಗ ಅದು ತನ್ನ ಖಡ್ಗವನ್ನೇ ತಿಂದುಹಾಕುತ್ತದೆ.ಇವರನ್ನು ಬಿಟ್ಟುಹೋಗುವುದಕ್ಕೆ ನಾನೇನಾದರೂ ದಾರಿ ಹುಡುಕಬೇಕು.
[ನಿಷ್ಕ್ರಮಣ]
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು