- ಕೃತಿಗೆ ಮಾತಿಲ್ಲ - ಆಗಸ್ಟ್ 1, 2021
- ಆತ್ಮಜ್ಞಾನದ ಅರಿವಿಗೆ ಅನುಭಾವ ದರ್ಶನವೇ ದಾರಿಯು - ಆಗಸ್ಟ್ 9, 2020
ಪ್ರಸ್ತುತ ವರ್ತಮಾನ, ಪರಮಾತ್ಮನ ಅನಂತ ಅಖಂಡ ಇರುವಿಕೆಯ ಮೇಲ್ಮೈಯಾಗಿದೆ. ನಾನಿದ್ದೇನೆ ಎಂಬ ಅರಿವು (ಜ್ಞಾನ) ವರ್ತಮಾನದ ಮೂಲಕ ಪ್ರತಿಯೊಬ್ಬರಲ್ಲಿ ನಿತ್ಯ ನಿರಂತರವೂ ಸ್ಫುರಿಸುತ್ತಿರುವ ವಾಸ್ತವತೆಯ ಸತ್ವವಾಗಿದೆ. ಈ ಕ್ಷಣದೊಳಗೆ ನಮ್ಮೊಳಗೆ ಹರಿಯುತ್ತಿರುವ ಈ ಸತ್ವವನ್ನು ಆ ಕ್ಷಣದಲ್ಲೇ ಗಮನಿಸುತ್ತಾ ಅನುಭವಿಸುವುದನ್ನು ಬಿಟ್ಟು ನಾವು ಅಜ್ಞಾನದಿಂದ ಭೂತ ಮತ್ತು ಭವಿಷತ್‍ಗಳಲ್ಲಿ ಹರಿದಾಡುವಂತೆ ಮಾಡಿಬಿಡುತ್ತೇವೆ. ಇದಕ್ಕೆ ಬಹುಮುಖ್ಯ ಕಾರಣವೇ ನಾವು ನಮ್ಮತನವನ್ನು ಉಳಿಸಿಕೊಳ್ಳಲಾಗದೇ, ಒಳಗಿರುವ ಭಗವಂತನ ಸ್ಪಷ್ಟ ಅರಿವನ್ನು ನಾವು ಗುರುತಿಸಿಕೊಳ್ಳದೇ ಇರುವುದಾಗಿದೆ. ಇದರ ಅರಿವನ್ನು/ಜ್ಞಾನವನ್ನು ಮಾಡಿಸುವಂತಹ ಆತ್ಮೋನ್ನತಿಯ ದಾರಿಯನ್ನು ತೋರಿಸುವಂತಹ ಅನುಭಾವಿ ಸಂತರ ಮಾರ್ಗದರ್ಶನ ನಮ್ಮೆಲ್ಲರಿಗೂ ಅವಶ್ಯಕತೆ ಇದೆ. ಅಂತಹ ಸದ್ಗುರು ಎಲ್ಲರಿಗೂ ಸಿಗುವುದು ಕಷ್ಟ. ಒಮ್ಮೆ ಸಮರ್ಥ ಅನುಭಾವಿ ಸಂತ/ಸದ್ಗುರು ಸಿಕ್ಕರೆ ನಮ್ಮ ಆತ್ಮೋನ್ನತಿಯ ದಾರಿ ಸುಗಮವಾಗಿ ಈ ಜನ್ಮವು ಪಾವನವಾಗುವುದು. ನಾನು' ಎನ್ನುವ ಭಾವದ ನಿಜವಾದ ಸ್ವರೂಪ ಅರಿವಾಗಿ ಸತ್ಯದ ಮಹಾದರ್ಶನವಾಗುತ್ತದೆ. ತಮ್ಮ ಜೀವಿತಾವಧಿಯಲ್ಲಿ ವ್ಯಕ್ತಿತ್ವ ನಿರ್ಮಾಣದ ಮೂಲಕ ಜಗತ್ತಿಗೆ ಆತ್ಮೋನ್ನತಿಯ ದಾರಿಯನ್ನು ಬೋಧಿಸಿದ ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರು
ಈ ಮಾನವ ಜನ್ಮದ ಸಾಫಲ್ಯತೆಯನ್ನು ಕಾಣಬೇಕಾದರೆ ಹೃದಯಸ್ಥನಾದ ಒಳಗಿನ ಭಗವಂತನ ಸ್ಪಷ್ಟ ಅರಿವನ್ನು ನಾವು ಪಡೆಯಲೇಬೇಕು ಎಂದು ತಿಳಿಸುತ್ತಾರೆ. ಮಾನವ ಜನ್ಮ ತಳೆಯುವ ಮುನ್ನ/ತಾಯಿಯ ಗರ್ಭದಲ್ಲಿ ನಮ್ಮ ಜೀವಕಣ ಅವತರಿಸುವ ಮುನ್ನ, ನಾವು ಅನೇಕಾನೇಕ ಜನ್ಮಗಳ ಸುದೀರ್ಘ ಪಯಣದಲ್ಲಿ ನಾನು-ನನ್ನದು-ನನ್ನಿಂದಲೇ-ನನಗೋಸ್ಕರವೆಂತಲೇ ಅನ್ನುವ ಹಲವು ಕೊಳೆಗಳನ್ನು ಮೆತ್ತಿಕೊಂಡು ಬಂದಿರುತ್ತೇವೆ. ಅಂದರೆ ಆತ್ಮದ ನೈಜ ಸ್ವರೂಪಕ್ಕೆ ಧೂಳು, ಮಣ್ಣು, ಹೊಲಸು ಅಂಟಿ ಅದರ ಮೂಲ ರೂಪವೇ ನಮಗೆ ಕಾಣದಂತೆ ಮಾಯಾಲೋಕವೆಂಬ ಕತ್ತಲೆಯು ಒಳಗೆ ತುಂಬಿರುತ್ತದೆ. ಭಗವಂತನಿಗೆ ದೈನ್ಯನಾಗಿ `ಆತ್ಮದ ಸ್ವರೂಪವನ್ನು ತೋರಿಸು, ನಿನ್ನ ನಿಜವಾದ ವಿರಾಟ ದರ್ಶನವನ್ನು ಮಾಡಿಸು’ ಎಂದು ಆರ್ತ, ದೀನ ಭಾವದಿಂದ ಬೇಡಿದರೆ, ಭಗವಂತ ಒಬ್ಬ ಸಮರ್ಥ ಸದ್ಗುರುವಿನ ಕಡೆಗೆ ದಾರಿ ತೋರಿಸಬಹುದು, ಕೃಪೆ ಹರಿಸಬಹುದು ಅಥವಾ ಒಬ್ಬ ಸದ್ಗುರುವಿಗೆ ನಮ್ಮ ಬಗ್ಗೆ ಕರುಣೆ ಹರಿಸುವಂತೆ ಸೂಚಿಸಬಹುದು. ಆ ನಂತರ ಜೀವನದಲ್ಲಿ ಆತ್ಮೋನ್ನತಿಯ ದಾರಿಯಲ್ಲಿ ಸುಲಭವಾಗಿ ಸಾಗಬಹುದು.
ಒಮ್ಮೆ ನಾವು ಆತ್ಮಜ್ಞಾನದ ಹಂಬಲ ಹೊತ್ತು ಗುರುವಿನ ಸಂಪರ್ಕಕ್ಕೆ ಬಂದರೆ, ಆ ಸದ್ಗುರು ಮೆಚ್ಚುವಂತೆ ನಾವು ಸೇವೆ, ಸಾಧನೆಯಲ್ಲಿ ನೂರಕ್ಕೆ ನೂರರಷ್ಟು ವಿಧೇಯರಾಗಿಬಿಟ್ಟರೆ, ಗುರು ನಮ್ಮನ್ನು ಪಶುತ್ವದಿಂದ ಮಾನವತ್ವದೆಡೆಗೆ ತಂದು ಮಾನವತ್ವದಿಂದ ದೈವತ್ವದ ಕಡೆಗೆ ಕೊಂಡೊಯ್ದು ಭಗವಂತನ ವಿರಾಟ ದರ್ಶನದ ಸ್ವರೂಪವನ್ನು ತೋರಿಸುತ್ತಾನೆ. ಈ ಒಂದು ಅರಿವು ನಮ್ಮಲ್ಲಿ ಮೂಡಲು ನಾವು ಅನೇಕ ಜೀವರಾಶಿಗಳ ಜನ್ಮಗಳನ್ನು ಹೊತ್ತು ಬರಬೇಕಾಗಬಹುದು. ಪ್ರತಿ ಮಾನವ ಜನ್ಮದಲ್ಲೂ ಸದ್ಗುರು, ಸಜ್ಜನ, ಸದ್ಗ್ರಂಥಗಳ ಸಹವಾಸದೊಂದಿಗೆ ಇದ್ದರೆ ಆತ್ಮೋನ್ನತಿಯ ಪಯಣ ಅತ್ಯಂತ ಸುಲಭವಾಗುವುದು. ಹೇಗೆ ಒಂದು ತರಗತಿಯಿಂದ ಇನ್ನೊಂದು ತರಗತಿಗೆ ನಾವು ಉತ್ತೀರ್ಣರಾಗುತ್ತ ಹೋಗುತ್ತೇವೆಯೋ ಹಾಗೆ ಈ ಆತ್ಮೋನ್ನತಿಯ ಮೂಲಕ ಭಗವಂತನ ದರ್ಶನದ ಕಡೆಗೆ ನಮ್ಮ ಪಯಣ ಸಾಗುತ್ತದೆ. ಹಾಗಾಗಿ ನಮ್ಮೆಲ್ಲರ ಜನ್ಮದ ಮುಖ್ಯ ಗುರಿಯೇ ನಮ್ಮೊಳಗಿರುವ ಹೃದಯಸ್ಥನಾದ ಭಗವಂತನನ್ನು ಕಾಣುವುದಾಗಿದೆ. ಇದಕ್ಕೆ ಸದ್ಗುರುವಿನ ಮಾರ್ಗದರ್ಶನದಂತೆ ಭಕ್ತಿ, ಶ್ರದ್ಧೆ, ವ್ಯಾಕುಲತೆಯಿಂದ ನೀನೇ ಬೇಕು, ನೀನೊಬ್ಬನೇ ಸಾಕು' ಎಂಬ ಭಾವದಿಂದ ಬೇಡಿ ಕಾಡಿ ನಮ್ಮ ಹುಟ್ಟನ್ನು ಸಾರ್ಥಕಪಡಿಸಿಕೊಳ್ಳಬೇಕು. ಕೇವಲ ವರ್ತಮಾನ ಒಂದರಲ್ಲೇ ಹರಿಯುವ
ನಾನೆಂಬ ಅರಿವಿನ-ನಾನಿದ್ದೇನೆ’ ಎಂಬ ಭಾವದ ಮೂಲಕ ಮನದ ಅಂತರಾಳಕ್ಕಿಳಿದಾಗ ವರ್ತಮಾನದ ಮಹಾದ್ವಾರವು ತೆರೆದು ಪರಮಾಸ್ತಿತ್ವದ ಹೊಂಬೆಳಕು ದೃಗ್ಗೋಚರವಾಗುತ್ತದೆ, ಇದನ್ನೆ ಸಾಕ್ಷಾತ್ಕಾರವೆನ್ನುತ್ತಾರೆ. ಇದೇ ಸಚ್ಚಿದಾನಂದ ಸ್ವರೂಪದ ಮೂಲ ತತ್ವವೆಂದು ಜ್ಞಾನಿಗಳು ಬೋಧಿಸುತ್ತಾರೆ. ಈ ಅಧ್ಯಾತ್ಮಿಕ ತತ್ವವನ್ನು ಸಮರ್ಥ ಸದ್ಗುರುಗಳಾದ ಶ್ರೀಧರ ಸ್ವಾಮಿಗಳು ಈ ರೀತಿ ವ್ಯಾಖ್ಯಾನಿಸುತ್ತಾರೆ.
“ನಾನು ನಾನೆಂಬ ಇರವಿನ ಭಾವ, ದೇಹದಿಂದ ಸಂಪೂರ್ಣವಾಗಿ ಹೊರತಾಗಿದೆ, ವಿಧಿವತ್ತಾಗಿ ಪ್ರತ್ಯೇಕವಾಗಿದೆ. ಹಾಗಾಗಿ, ಈ ಭಾವ ದೇಹದ ಯಾವುದೇ ಭಾಗಕ್ಕೆ ಅಂಟದು; ಯಾವುದೇ ಅಂಗಾಂಗಗಳಿಗೆ ಅಂಟದು; ಮನದ ಯಾವುದೇ ನೆನಪು/ನಿರೀಕ್ಷೆ/ಕಲ್ಪನೆಗಳಿಗೂ ಇದು ಅಂಟದು. ಈ ಪತಿತಪಾವನ ಭಾವದಲ್ಲಿರುವುದರಿಂದ ನೀನು, ಸಂಕಲ್ಪವಿಲ್ಲದೇ ಸ್ವಯಂ ಚಲಿತ್ವದಿಂದ ದೇಹದಿಂದ ಹೊರತಾಗಿರುವಂತಾಗುತ್ತದೆ. ಸಾಧನೆಯ ಮೊದಮೊದಲು, ಈ ಭಾವವೂ ದೇಹದೊಳಗಿರುವಂತೆ, ಮನದಿಂದ ಚಿಮ್ಮುವಂತೆ ಭಾಸವಾಗುತ್ತದೆ. ಆದರೆ ವಾಸ್ತವಿಕತೆಯ ಅರಿವಾಗುತ್ತಿದ್ದಂತೆ ಈ ಭಾವದಲ್ಲಿರುವ ಮಹತ್ವದ ಅರಿವು ನಿನಗುಂಟಾಗುತ್ತದೆ. ಈ ಭಾವವೊಂದು ಬಿಟ್ಟು, ಇನ್ಯಾವುದೂ ನಿನ್ನನ್ನು ದೇಹಾತ್ಮ ಭಾವದಿಂದ ಹೊರಗೆ ನಿಲ್ಲ್ಲಿಸಬಾರದು. ದೇಹಕ್ಕಂಟಿರುವ ದೇಹಾತ್ಮ ಭಾವದಿಂದ ಮತ್ತು ಜೀವಕ್ಕಂಟಿರುವ ಜೀವಾತ್ಮ ಭಾವದಿಂದ ಸಾಕ್ಷಿಯಾದ ನಿನ್ನನ್ನು ಬಿಡಿಸಬಲ್ಲ ಏಕೈಕ ಮಹಾಮಂತ್ರವೇ ಇರುವನೆಂಬ ಭಾವ. ಈ ಭಾವದಲ್ಲಿರುವ ಮಾತ್ರದಿಂದಲೇ ದೇಹ ತಟಸ್ಥವಾಗುವುದು, ಮನಸ್ಸು ನಿರ್ಲಿಪ್ತವಾಗುವುದು. ವಿವೇಕ ಜಾಗೃತವಾಗುವುದು. ಪ್ರಜ್ಞೆ ತೀಕ್ಷ್ಮವಾಗುವುದು, ಸಾಕ್ಷಿತ್ವ ತೀವ್ರವಾಗಿ, ಸಾಕ್ಷಿ ಸಮತ್ವದಲ್ಲಿದ್ದು ತನ್ನಲ್ಲೇ ತಾನಿರುವನು” (ಗ್ರಂಥ: ತತ್ ತ್ವಂ ಅಸಿ-ಲೇ: ಶ್ರೀ ಸದ್ಗುರು).
ಈ ಆತ್ಮಜ್ಞಾನದ ಸ್ವರೂಪವನ್ನು ತಿಳಿಯುವ ವಿಧಾನಗಳು, ಮಾರ್ಗಗಳು ಆಯಾಯ ಧರ್ಮದವರಿಗೆ ಬೇರೆ ರೀತಿ ಇದ್ದರೂ, ಎಲ್ಲ ಧರ್ಮಗಳ ಸಾಧನೆಗಳು ಸೇರುವುದು ಒಂದೇ ಪಥವನ್ನು. ಅದರಂತೆ ಕಳೆದ ಶತಮಾನ ಕಂಡ ಮಹಾನ್ ವಿರಕ್ತ ಸ್ವರೂಪಿ ಭಗವಾನ್ ಶ್ರೀರಾಮಕೃಷ್ಣರು, ಇಂತಹ ನಾನಾ ಸಾಧನೆಯ ಮಾರ್ಗಗಳನ್ನು ಅನುಸರಿಸಿ ಭಗವಂತನ ಸ್ವರೂಪವನ್ನು ಅರಿತು ಈ ಜಗತ್ತಿಗೆ ಏಕನಿಷ್ಠೆ, ದೇವನೊಬ್ಬ ನಾಮ ಹಲವು, ರೂಪ ಹಲವು ಎಂಬುದನ್ನು ಬೋಧಿಸಿದರು. ಹಿಂದು, ಜೈನ, ಬೌದ್ಧ, ಕ್ರೈಸ್ತ, ಮುಸ್ಲಿಂ ಎಲ್ಲ ಧರ್ಮಗಳಲ್ಲಿನ ಸಾಧನೆಗಳ ಮೂಲಕ ಭಗವಂತನ ಸಾಕ್ಷಾತ್ಕಾರವನ್ನು ಕಂಡಂತ ಏಕೈಕ ಜಗದ್ಗುರುಗಳೆಂದರೆ ಶ್ರೀ ರಾಮಕೃಷ್ಣ ಪರಮಹಂಸರು ಮಾತ್ರ.
ಇಂತಹ ಸಮರ್ಥ ಸದ್ಗುರುಗಳು ಅಂದಿನಿಂದ ಇಂದಿಗೂ ಈ ಪುಣ್ಯ ನೆಲದಲ್ಲಿ ಜನ್ಮವೆತ್ತುತ್ತಲೇ ಇದ್ದಾರೆ. ನಮ್ಮದು ಇಡೀ ವಿಶ್ವಕ್ಕೆ ಗುರು ಪರಂಪರೆಯನ್ನು ನೀಡಿದಂತಹ ಪುಣ್ಯನೆಲ. ಹಾಗಾಗಿ ಈ ಪುಣ್ಯಭೂಮಿಯಲ್ಲಿ ಇಂತಹ ಮಹಾನ್‍ಸಂತರು ಭಗವಂತನ ಸ್ವರೂಪಿಯಾಗಿ ಜನ್ಮತಾಳುತ್ತಲೇ ಇದ್ದಾರೆ. ತಾವು ನಿಷ್ಠ ಸಾಧಕರಾಗಿ ಆತ್ಮಜ್ಞಾನವನ್ನು ಹೊಂದಿ ಭಗವಂತನ ಸಾಕ್ಷಾತ್ಕಾರವನ್ನು ಪಡೆದು, ಆತನ ರೂಪ ಲಾವಣ್ಯ, ಮಧುರ ಮಾರ್ದನಿ ಎಲ್ಲವನ್ನು ಕೇಳಿ ಈ ಆತ್ಮಸ್ವರೂಪದ ಸಿಹಿಸಾಗರದಲ್ಲಿ ತೇಲಿ ಅದರ ಸ್ವಾದವನ್ನು ಅನುಭವಿಸಿ ಈ ಜಗತ್ತಿಗೆ ಮಾನವಕೋಟಿಗೆ ಆತ್ಮೋನ್ನತಿಯ ಜ್ಞಾನವನ್ನು ನೀಡುತ್ತಲೇ ಬಂದಿದ್ದಾರೆ. ಶಂಕರ-ಮಧ್ವ-ರಾಮಾನುಜ ಈ ಆಚಾರ್ಯತ್ರಯರು, ಬಸವೇಶ್ವರ, ಅಲ್ಲಮಪ್ರಭು ಈ ಮಹಾಶಿವಶರಣರು, ಮಹಾನ್‍ಸಂತರಾದ ರಾಮಕೃಷ್ಣ ಪರಮಹಂಸರು, ಸಮರ್ಥ ರಾಮದಾಸರು, ಸ್ವಾಮಿ ವಿವೇಕಾನಂದರು, ತಾಯಿ ಶಾರದಾಮಾತೆಯ ಮೂಲಕ ಗುರುಪರಂಪರೆಯನ್ನು ಹುಟ್ಟುಹಾಕಿದ್ದಾರೆ.
ಈ ಶತಮಾನ ಕಂಡ ಇನ್ನೊಬ್ಬ ಅನುಭಾವಿ ಸಂತರಾದ ರಮಣ ಮಹರ್ಷಿಗಳು, ನಾವೇಕೆ ಭಗವಂತನ ಮಾರ್ದನಿಯನ್ನು, ಆತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಲು ಕಷ್ಟಪಡುತ್ತಿದ್ದೇವೆ ಅನ್ನುವ ಭಕ್ತರೊಬ್ಬರ ಪ್ರಶ್ನೆಗೆ ಈ ರೀತಿ ಉತ್ತರಿಸುತ್ತಾರೆ.
`ನಮ್ಮೊಳಗಿನ ಆತ್ಮದ ವಿಚಾರವು ಭಕ್ತಿ, ಯೋಗ, ಬೌದ್ಧಿಕ ಚರ್ಚೆಯಂಥ ಎಲ್ಲಾ ವಿಧಾನಗಳನ್ನು ಒಳಗೊಂಡಿದೆ. ಆದರೆ ಜ್ಞಾನವು ಉದಯಿಸುವ ಮುನ್ನ ನಮ್ಮೊಳಗಿರುವ ವಾಸನೆಗಳನ್ನು ತ್ಯಜಿಸಬೇಕು, ಸತ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧವಾಗಿರಬೇಕು. ತ್ಯಾಗದ ಮಟ್ಟವೇ ನಮ್ಮ ಪ್ರಗತಿಯ ಅಳತೆ. ತುಪ್ಪ ಸುರಿದು ಬೆಂಕಿಯನ್ನು ಆರಿಸಲಾಗದಂತೆ, ಆಸೆ-ಕಾಮನೆಗಳಿಗೆ ವಶವಾಗಿ ಅವನ್ನು ದುರ್ಬಲಗೊಳಿಸಲಾಗುವುದಿಲ್ಲ. ಅದಕ್ಕೆ ಆತ್ಮಸಂಯಮ ಬೇಕು. ಈ ಸಂಯಮವನ್ನು ಜ್ಞಾನ ಬಲಗೊಳಿಸುತ್ತದೆ. ನೀವು ಮನಸ್ಸಲ್ಲ ಮತ್ತು ಕಾಮನೆಗಳಿರುವುದು ಮನಸ್ಸಿನಲ್ಲಿ ಎಂಬುದನ್ನು ಅರಿತುಕೊಳ್ಳಿ. ಇದನ್ನು ಅರಿತರೆ ಅವನ್ನು ನಿಯಂತ್ರಿಸುವುದಕ್ಕೆ ಸಹಾಯವಾಗುತ್ತದೆ. ಕಾಮನೆಗಳಿಗೆ ವಶವಾಗದಿರಲು ಪದೇ ಪದೇ ಪ್ರಯತ್ನ ಮಾಡಿದಲ್ಲಿ ಕಾಲಕ್ರಮೇಣ ಅವು ದುರ್ಬಲವಾಗುತ್ತವೆ. ನಿಮ್ಮ ನಿಜವಾದ ಸ್ವರೂಪ ಶುದ್ಧಚೈತನ್ಯ ಎಂಬುದನ್ನು ಎಂದಿಗೂ ಮರೆಯಬೇಡಿ. ಇತರರ ಒಳಿತಿಗಾಗಿ ಅಥವಾ ಯಾವುದೋ ನಿಸ್ವಾರ್ಥ ಉದ್ದೇಶಕ್ಕಾಗಿ ಮಾಡುವ ನಿಷ್ಕಾಮ ಕರ್ಮ ನಮ್ಮ ದೃಷ್ಟಿಯನ್ನು ವಿಶಾಲಗೊಳಿಸುತ್ತದೆ. ಮನಸ್ಸನ್ನು ಶುದ್ಧಿಗೊಳಿಸುತ್ತದೆ ಮತ್ತು ಅಹಂಕಾರವನ್ನು ತಗ್ಗಿಸುತ್ತದೆ. ಈ ನಿಟ್ಟಿನಲ್ಲಿ ದೇವರನ್ನು ಕಾಣುವ ಭಕ್ತಿಗೆ ಶರಣಾಗಬೇಕು. ಹೀಗೆ ಭಕ್ತಿ ಮತ್ತು ಶರಣಾಗತಿ ನಮ್ಮಲ್ಲಿ ಇದ್ದರೆ ಅದು ನಮ್ಮನ್ನು ವಿಶಿಷ್ಟ ಅಧ್ಯಾತ್ಮ ಕಲ್ಪನೆಗೋ, ಯಾವುದೋ ದೇವತಾರೂಪಕ್ಕೋ ಅಥವಾ ಒಂದು ಸದ್ಗುರುವಿನ ಸನ್ನಿಧಿಗೋ ನಮ್ಮನ್ನು ಕೊಂಡೊಯ್ಯುತ್ತದೆ” (ಗ್ರಂಥ: ರಮಣ ಮಹರ್ಷಿ-ಲೇ: ಕೆ. ಸ್ವಾಮಿನಾಥನ್).
ಹೀಗೆ ರಮಣ ಮಹರ್ಷಿಗಳು ಆತ್ಮಜ್ಞಾನದ ವಿಚಾರಗಳ ಮೂಲಕ ಜ್ಞಾನಮಾರ್ಗವನ್ನು ಬೋಧಿಸಿದ ಮಹಾಮುನಿಗಳು. ಆಧುನಿಕ ಯುಗದಲ್ಲಿ ಇಹಲೋಕದ ಜಂಜಾಟದಲ್ಲಿ ತೊಳಲುತ್ತಿರುವ ಮಾನವನಿಗೆ ಮಹರ್ಷಿಗಳ ಜೀವನಪರಿಕ್ರಮ ಹಾಗೂ ಉಪದೇಶಗಳು ಆಶಾದಾಯಕವಾಗಿವೆ.
ಭಗವಂತನ ಮಧುರ ಮಾರ್ದನಿಯನ್ನು ಕೇಳಬೇಕೆಂಬ ಹೋರಾಟ ಇಂದು ನಿನ್ನೆಯದಲ್ಲ, ಅದು ಶತಶತಮಾನ,
ಸಹಸ್ರ ವರುಷಗಳಿಂದ ನಡೆಯುತ್ತಲೇ ಬಂದಿದೆ. ಒಳಗಿರುವ ಭಗವಂತನ ಮಾರ್ದನಿಯನ್ನು ಕೇಳುವಂತಹ ಸುಯೋಗ ಎಲ್ಲರಿಗೂ ಸಿಕ್ಕಿದ್ದರೆ, ಅದೆಂತಹ ಪಾವನ ಬದುಕು ನಮ್ಮೆಲ್ಲರದ್ದು. ಆದರೂ ಈ ಪವಿತ್ರ ಬದುಕನ್ನು ಅನುಭವಿಸಲು ಸೋಲುತ್ತಲೇ ಇದ್ದೇವೆ. ಕಾರಣವಿಷ್ಟೇ, ಇಂದ್ರಿಯಗಳ ಐಹಿಕ ಸುಖಕ್ಕೆ ನಾವು ದಾಸರಾಗಿರುವುದು. ಮಾಯೆ, ಮೋಹ, ಜಗತ್ತಿನೊಳಗೆ ಸಿಲುಕಿ ಆ ಬಂಧನದೊಳಗೆ ಸೇರಿಕೊಂಡ ಮೇಲೆ `ಭಗವಂತ ಬೇಕು’ ಎಂಬ ಭಾವನೆ ಅಷ್ಟೇ ಬೇಗ ಮಾಯವಾಗಿಬಿಡುತ್ತದೆ. ಇಂದ್ರಿಯ ಲೌಕಿಕ ಸುಖಭೋಗಗಳು ಒಳಗಿನ ಮಾರ್ದನಿಯನ್ನು ಕೇಳಲು ಆರಂಭದ ತೊಡಕುಗಳಾಗಿವೆ. ಮಾನವ ಬಯಕೆಗಳ ಬೆನ್ನೆತ್ತಿ ಹೋದಷ್ಟು ಆತನಲ್ಲಿ ಅಂಧಕಾರ ಬೆಳೆಯುತ್ತಲೇ ಹೋಗುತ್ತದೆ. ಒಮ್ಮೆ ಆ ರುಚಿಯನ್ನು ಕಂಡರೆ ಮತ್ತೆ ಆತ ದೇವರ ಸಾಮ್ರಾಜ್ಯಕ್ಕೆ ಬರಲು ಸಾಧ್ಯವಾದೀತೇ? ಆತ್ಮೋನ್ನತಿಯ ಜ್ಞಾನವನ್ನು ಹೊತ್ತಂತಹ ಭಾಗವತದ ಈ ಒಂದು ಶ್ಲೋಕ, ನಾವು ಹೇಗೆ ಭೋಗ ಮತ್ತು ಬಯಕೆಗಳಿಗೆ ಶರಣಾಗಿ ನಮ್ಮನ್ನು ನಾವು ಮರೆಯುತ್ತಿದ್ದೇವೆ ಅನ್ನುವುದನ್ನು ತುಂಬಾ ಸರಳವಾಗಿ ತಿಳಿಸುತ್ತದೆ.
ಯತ್ ಪ್ರಥಿವ್ಯಾಂ ವ್ರೀಹಿಯವಂ ಹಿರಣ್ಯಂ ಪಶಣ್ಯಂ ಪಶವಃ ಸ್ತ್ರೀಯ:|
ನ ದುಹ್ಯಂತಿ ಮನಃ ಪ್ರೀತಿಂ ಪುಂಸಃ ಕಾಮಹತಸ್ಯ ವೈ||
ಈ ಜಗತ್ತಿನಲ್ಲಿ ಯಾರು ಆಸೆ ಬಯಕೆ, ಭೋಗಗಳ ಬೆನ್ನು ಹತ್ತಿ ಸಾಗುತ್ತಾರೋ ಅಂತವರು ಜೀವನದಲ್ಲಿ ಎಂದು ತೃಪ್ತಿಯ ಸುಖವನ್ನು ಅನುಭವಿಸುವುದಿಲ್ಲ. ಒಬ್ಬನಿಗೆ ಧಾರೆಯೆರೆದರೂ ಆತ ಮಾತ್ರ ಸಾಕೆನ್ನುವುದಿಲ್ಲ. ಹೆಚ್ಚು ಭೋಗಿಸಿದಷ್ಟು ಹೆಚ್ಚು ಅತೃಪ್ತಿ ಬೆಳೆಯುತ್ತಲೇ ಇರುತ್ತದೆ ‘
ಈ ಶ್ಲೋಕದ ತಾತ್ಪರ್ಯದಂತೆ ನಾವು ಭೋಗಿಸಿದಷ್ಟು ಇನ್ನಷ್ಟು ಭೋಗಿಸುವ ಆಸೆ ಬೆಳೆಯುತ್ತದೆಯೇ ಹೊರತು ಎಂದೂ ನಮಗೆ ಸಂತೃಪ್ತಿಯೆಂಬುದು ದೊರೆಯುವುದಿಲ್ಲ. ಅದೊಂಥರ ಹೋಮದ ಬೆಂಕಿಗೆ ತುಪ್ಪ ಸುರಿದಂತೆ. ತುಪ್ಪ ಸುರಿದಷ್ಟು ಇಂದ್ರಿಯಗಳೆಂಬ ಕಟ್ಟಿಗೆಗಳು ಉರಿಯುತ್ತಲೇ ಇರುತ್ತವೆ. ಇನ್ನಷ್ಟು ಬೇಕು ಎಂದು ಹಪಹಪಿಸುತ್ತಲೇ ಇರುತ್ತವೆ. ಹೇಗೆ ಕಟ್ಟಿಗೆಗಳನ್ನು ಸೇರಿಸುತ್ತಾ ಅದಕ್ಕೆ ತುಪ್ಪವನ್ನು ಹಾಕುತ್ತಾ ಹೋದರೆ ಬೆಂಕಿಯನ್ನು ನಂದಿಸಲಾಗುವುದಿಲ್ಲವೋ, ಅದೇ ರೀತಿ ನಮ್ಮ ಇಂದ್ರಿಯಗಳಿಗೆ ಭೋಗವಸ್ತುಗಳನ್ನು ನೈವೇದ್ಯ ಇಟ್ಟು ಅರ್ಪಿಸುತ್ತಾ ಹೋದರೆ ನಮ್ಮಲ್ಲಿರುವ ಬಯಕೆಗಳನ್ನು ದಮನಿಸುವುದು ಸಾಧ್ಯವಾಗುವುದೇ ಇಲ್ಲ. ಬೆಂಕಿ ಆರಬೇಕಾದರೆ ಕಟ್ಟಿಗೆ ಹಾಕುವುದನ್ನು ನಿಲ್ಲಿಸಬೇಕು, ಇಲ್ಲವೇ ಎಣ್ಣೆ/ತುಪ್ಪವನ್ನು ದೂರ ಮಾಡಬೇಕು. ಇವೆರಡು ಸಾಧ್ಯವಾಗದಿದ್ದರೆ ನಮ್ಮ ನಿಯಂತ್ರಣಕ್ಕೆ ಸಿಗುವುದು ನಮಗೆ ಕಷ್ಟವಾಗುತ್ತದೆ. ನಮ್ಮ ಬಯಕೆ ತಣಿಯಬೇಕಾದರೆ ಭೋಗಕ್ಕೆ ಕಡಿವಾಣ ಹಾಕಬೇಕು. ಒಟ್ಟಾರೆಯಾಗಿ ಭಾಗವತದ ಸಾರವು ಬಯಕೆಯಿಂದ ದುಃಖ, ಬಯಕೆಯನ್ನು ಗೆದ್ದರೆ ಒಳಬಗೆಯ ಸುಖದ ಬಾಗಿಲು ತೆರೆದಂತೆ' ಎಂದು ತಿಳಿಸುತ್ತದೆ. ಆಸೆ, ಭೋಗಗಳಿಗೆ ಮಿತಿ ಇರಬೇಕೆಂದು, ಆಸೆಯೇ ನಮ್ಮೆಲ್ಲರ ದುಃಖಕ್ಕೆ ಮೂಲ ಎಂಬುದನ್ನು ಭಗವಾನ್ ಬುದ್ಧ ಕೂಡ ಜಗತ್ತಿಗೆ ಸಾರಿದ್ದಾನೆ.
ಈ ಸೃಷ್ಟಿಯ ಆರಂಭದಿಂದ ಇಂದಿನವರೆಗೆ ಬಯಕೆಗಳು ಬೆನ್ನೆತ್ತಿ ಹೋದವರು ಎಲ್ಲರೂ ಸರ್ವನಾಶ ಕಂಡವರೇ. ಇಂತಹ ಅಸಂಖ್ಯ ಉದಾಹರಣೆಗಳನ್ನು ನಮ್ಮ ಪುರಾಣದ ಕತೆಗಳಲ್ಲಿ ಕೇಳಿದ್ದೇವೆ, ಓದಿದ್ದೇವೆ. ಭಕ್ತಿ, ಶಕ್ತಿ, ಯುಕ್ತಿ ಮುಖದ ಎಲ್ಲ ದೇವರುಗಳ ಅವತಾರದ ಹಿಂದೆ ಅಧರ್ಮವನ್ನು ಹೋಗಲಾಡಿಸಿ ಸತ್ಯ-ಧರ್ಮದ ಪತಾಕೆಯನ್ನು ಸ್ಥಾಪಿಸುವುದೇ ಆಗಿದೆ. ಈ ಜಗತ್ತಿಗೆ ಒಡೆಯನು ಭಗವಂತನೇ ಆಗಿರುವಾಗ ಆ ಸತ್ಯವ ಮರೆತು,
ನಾನೇ ಜಗತ್ತಿನ ಒಡೆಯನಾಗುವೆ, ಸಾಮ್ರಾಟನಾಗುವೆ’ ಎಂದು ಹೊರಟ ದೇಶಗಳು, ಅಲೆಗ್ಸಾಂಡರ್, ಹಿಟ್ಲರ್, ಸದ್ದಾಂ ಹುಸೇನ್‍ರಂತಹ ಅನೇಕ ಸರ್ವಾಧಿಕಾರಿಗಳ ಅಂತ್ಯ ಹೇಗೆ ಆಯಿತು ಎಂಬುದನ್ನು ನಾವೆಲ್ಲಾ ಇತಿಹಾಸದ ಪುಟಗಳಲ್ಲಿ ಓದಿದ್ದೇವೆ. ಈ ನಿಟ್ಟಿನಲ್ಲಿ ಜಗತ್ತಿಗೆ ಭಗವಂತನ ಇರುವಿಕೆಯನ್ನು ತೋರಿಸಲು ಸದ್ಗುರುಗಳು ಪುನಃ ಪುನಃ ಜನ್ಮವೆತ್ತಿ ಬರುತ್ತಿದ್ದಾರೆ. ಅದಕ್ಕೆಲ್ಲಾ ಮುಖ್ಯ ಕಾರಣ-ನಮ್ಮನ್ನು ಇಂತಹ ಆಸೆ ಕಾಮನೆ, ಭೋಗಗಳಿಂದ ಹೊರತಂದು ನಮ್ಮೊಳಗಿರುವ ಚೈತನ್ಯಸ್ವರೂಪವಾದ ಆ ಶಕ್ತಿಯ ಸುಖವನ್ನು ಉಣಬಡಿಸುವುದೇ ಆಗಿದೆ. ಗುರುಗಳ ಅವತಾರವೆತ್ತುವ ಹಿಂದಿನ ಉದ್ದೇಶ ಇದೆ ಆಗಿದೆ.
ಹೃದಯಸ್ಥನಾದ ಒಳಗಿರುವ ಪರಮಾತ್ಮನ ದರ್ಶನ ನಮಗೆ ಏಕೆ ಆಗುತ್ತಿಲ್ಲ ಎಂಬುವುದನ್ನು ದಾರ್ಶನಿಕ ಕವಿ ರವೀಂದ್ರನಾಥ ಟಾಗೋರರು ತಮ್ಮ ಒಂದು ಕವಿತೆಯಲ್ಲಿ ಹೃದಯಸ್ಪರ್ಶಿಯಾಗಿ ವರ್ಣಿಸಿದ್ದಾರೆ. ಅವರ ಪದ್ಯದ ಭಾವ ಈ ರೀತಿಯಾಗಿದೆ.
“ಭಗವಂತನೇ ನಿನ್ನ ಕಾಣಬೇಕೆಂದು ನನ್ನ ಮನಸ್ಸು ಹಂಬಲಿಸುತ್ತಿದೆ. ಆದರೆ ನನ್ನ ಅಭಿಮಾನವೇ ನನಗೆ ಅಡ್ಡಿಯಾಗಿದೆ. ಅದು ನಿನ್ನನ್ನು ಅರಿಯಲು ನಿನ್ನ ಬಳಿ ಸಾರಲು ಬಿಡುತ್ತಿಲ್ಲ. ಆದರೆ ನೀನು ಎಲ್ಲಿರುವೆ ಎಂದರೆ-ಯಾರಲ್ಲಿ ಸಂಪತ್ತಿಲ್ಲ, ಸಾಮಾಜಿಕ ಸ್ಥಾನಮಾನಗಳಿಲ್ಲ, ಘನತೆ ಗೌರವಗಳಿಲ್ಲ. ಅವರಲ್ಲಿ ನೀನಿರುವಿ, ಇನ್ನೊಂದರ್ಥದಲ್ಲಿ ಯಾರಿಗೆ ಸಿರಿ-ಸಂಪದ, ಸ್ಥಾನ-ಮಾನಗಳತ್ತ ಲಕ್ಷ್ಯವಿಲ್ಲವೋ ಅದರ ಅಭಿಮಾನವಿಲ್ಲವೋ ಅಂಥ ಸಂತರ-ಶರಣರ ಹೃದಯದಲ್ಲಿ ನೀನಿರುವೆ. ಮೈಗೆ ಬಟ್ಟೆಯಿಲ್ಲದ ಬಡವರ
ರಟ್ಟೆಯಲ್ಲಿ ನೀನಿರುವೆ. ಬಂಧುಬಾಂಧವರೇ ಇಲ್ಲದವರಿಗೆ ನೀನೇ ದೀನಬಂಧುವಾಗಿರುವೆ. ಜಗತ್ತು ಯಾರನ್ನು ಉಪೇಕ್ಷಿಸಿದೆಯೋ ಅವರನ್ನೇ ನೀನು ಹೆಚ್ಚಾಗಿ ಅಪೇಕ್ಷಿಸುವೆ. ಅವರ ಬಳಿಯಲ್ಲಿಯೇ ನೀನಿರುವೆ. ಅಲ್ಲಿಗೆ ಬಂದು ನಿನ್ನನ್ನು ನಾನು ವಂದಿಸಬೇಕು ಎನ್ನುತ್ತೇನೆ. ಆದರೆ ನನ್ನ ಒಣಪ್ರತಿಷ್ಠೆ, ಅಭಿಮಾನ ನನ್ನನ್ನು ನಿನ್ನ ಬಳಿಗೆ ಎಂದಿಗೂ ಬಿಡಲಾಗದು. ಆ ದುರಭಿಮಾನವನ್ನು ನೀಗಲು ಒಂದು ಸುಲಭ ಸಾಧನ ನಮ್ಮ ನಿಜವಾದ ಸ್ವರೂಪಜ್ಞಾನ”
ಮುಳ್ಳಿನ ಬೇಲಿಯ ಮೇಲೆ ಹರಡಿರುವ ನಮ್ಮ ಬಟ್ಟೆಯನ್ನು ಎಚ್ಚರಿಕೆಯಿಂದ, ಏಕಾಗ್ರತೆಯಿಂದ ನಿಧಾನವಾಗಿ ಬಿಡಿಸಿಕೊಳ್ಳುವಂತೆ ಜನ್ಮಜನ್ಮಾಂತರಗಳಿಂದ ಶತಶತಮಾನಗಳಿಂದ ಮನವೆಂಬ ಬೇಲಿಯ ಸಂಸ್ಕಾರ, ವಾಸನೆಗಳೆಂಬ ಮುಳ್ಳಿನ ಮೇಲೆ ಯಥೇಚ್ಛವಾಗಿ ಹರಡಿ ಈಗಲೂ ಅವಿವೇಕ ಅಜ್ಞಾನದಿಂದ ಹರಡುತ್ತಿರುವ ಸಾಕ್ಷಿತ್ವದ ನಮ್ಮನ್ನು ಶ್ರದ್ಧಾಗಮನದ ಜಾಗರೂಕತೆಯಿಂದ ಬಿಡಿಸಿಕೊಳ್ಳಲು ಸಾಧನೆ ಅಗತ್ಯ. ನಿರಂತರ ಸಾಧನೆಯಿಂದ ಮಾತ್ರ ನಮ್ಮನ್ನು ನಾವು ದೈವತ್ವದೆಡೆಗೆ ಸಾಗಿ ದೇವಮಾನವರಾಗುವ ಹಾದಿ ತುಳಿಯಬಹುದು. ರಾಮಕೃಷ್ಣ ಪರಮಹಂಸರು ತಿಳಿಸುವಂತೆ `ಮಾನವ ಜನ್ಮದ ಸಾಫಲ್ಯವೇ ಭಗವಂತನನ್ನು ಕಾಣುವುದು. ಆತನ ಸಾಕ್ಷಾತ್ಕಾರವನ್ನು ಪಡೆಯುವುದು. ಹೃದಯಸ್ಥನಾದ ಆತನ ಸಾಕ್ಷಾತ್ಕಾರವನ್ನು ಪಡೆದು ಆತನ ಮಾರ್ದನಿಯನ್ನು ಕೇಳುವ ಭಾಗ್ಯವಂತರಾಗುವುದು’ – ಈ ಆತ್ಮಜ್ಞಾನದ ಅರಿವು ಮೂಡುವುದು ದುರ್ಲಭ ಹಾಗೂ ಅತ್ಯಂತ ಕಠಿಣ. ಈ ಪುಣ್ಯನೆಲದ ಅನುಭಾವಿಗಳು ಮಾತ್ರ ಇದನ್ನು ನಿರಂತರವಾದ ತಪಸ್ಸಿನಿಂದ ಸಾಧಿಸಿಕೊಂಡಿದ್ದರೆ. ಯಾರು ದೇವರ ನಿಜವಾದ ಅಸ್ತಿತ್ವದ ಅನುಭವವನ್ನು ಪಡೆದಿರುವನೋ ಅಂತವನು ಮಾತ್ರ ಆತ್ಮೋನ್ನತಿಯ ಮಾರ್ಗದ ಬಗ್ಗೆ ಸ್ಪಷ್ಟವಾದ ದಾರಿಯಲ್ಲಿ ನಡೆಸಬಲ್ಲ. ಅಂತಹ ಅನುಭಾವಿಗಳು ಸಾಧಿಸಿದ ಮಾರ್ಗವೇ ಅನುಭಾವ ದರ್ಶನ. ಈ ಜ್ಞಾನವನ್ನು ಪಡೆದ ಅನೇಕ ಅನುಭಾವಿಗಳು ಹಲವು ಯುಗಗಳಿಂದಲೂ ಈ ಪುಣ್ಯನೆಲದಲ್ಲಿ ಜನ್ಮವೆತ್ತುತ್ತಲೇ ಬಂದಿದ್ದಾರೆ. ಇಂದಿಗೂ ಅಂತಹ ಸಂತರು ನಮ್ಮ ನಡುವೆ ತಮ್ಮನ್ನು ತಾವು ತೋರ್ಪಡಿಸಿಕೊಳ್ಳದೆ ಬದುಕುತ್ತಿದ್ದಾರೆ. ಅಂತವರನ್ನು ಕಂಡು ಆತ್ಮೋನ್ನತಿಯ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಷ್ಟೇ!
ಹೆಚ್ಚಿನ ಬರಹಗಳಿಗಾಗಿ
ಶಿಕಾಗೋ ಸಂದೇಶದ ಭ್ರಾತೃತ್ವ ಕಥನ
.
ಲಕ್ಷ್ಮೀಶ ತೋಳ್ಪಾಡಿ ವಾಕ್ಝರಿ