ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ಈಗೆಲ್ಲಿ ಅಡಿಗರು… ಅಡಿಗಡಿಗೆ ಇದ್ದರು
ಚಂಡೆ ಮದ್ದಳೆ ಹಿಡಿದು
ಬಾರಿಸಿದವರು..

ಈಗೆಲ್ಲಿ ಅನಂತಮೂರ್ತಿ… ಅನನ್ಯ ಅನೂಹ್ಯ
ಅಜ್ಜನ ಹೆಗಲ ಸುಕ್ಕುಗಳ
ತಡವಿ ಬಿಡಿಸಿದವರು

ಈಗೆಲ್ಲಿ ರಾಮಾನುಜನ್…
ಪದ ಪದವನ್ನೂ
ಕುಂಟೋ ಬಿಲ್ಲೆಯಂತೆ ಆಡಿ
ಗೆದ್ದವರು

ಇಗೆಲ್ಲಿ ಶರ್ಮರು… ತಮ್ಮ ಅಣಕು
ನಗೆಯನ್ನು
ಸಿಗರೇಟಿನ ಹೊಗೆ ಸುರುಳಿಯಲ್ಲಿ
ಮರೆಸಿದವರು

ಈಗೆಲ್ಲಿ ಲಂಕೇಶ್ … ಬಿಚ್ಚಿದಷ್ಟೂ ಮತ್ತೆ ಸುತ್ತಿ
ಕೊಳ್ಳುತಿದ್ದವರು

ಒಬ್ಬೊಬ್ಬರು ಒಂದೊಂದು ತರ
ಆದರೂ ಎಲ್ಲರೂ ಒಂದೆ ತರ

ಇದೆಲ್ಲವ ನೋಡುತ್ತ ಅಪ್ರತಿಭರಾಗಿ
ನೋಡುತ್ತಲೇ ಕುಳಿತವರೆಷ್ಟು ಜನ
ಈಗೆಲ್ಲಿ ಅವರು?