ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾವ್ಯ ಗುರುವಿಗೊಂದು ನಮನ

ಶ್ರೀದೇವಿ ಕೆರೆಮನೆ
ಇತ್ತೀಚಿನ ಬರಹಗಳು: ಶ್ರೀದೇವಿ ಕೆರೆಮನೆ (ಎಲ್ಲವನ್ನು ಓದಿ)

“ಬಳಕೆಯಾಗಲಿ ಪೂರ್ತಿ ಮಾನವನ ಈ ಜನುಮ
ಬೆಳಕು ಮೂಡಲಿ ಸಂಧಿ ಸಂಧಿಯಲ್ಲಿ
ಸರ್ವರಿಗು ಸಮಬಾಳು, ಸರ್ವರಿಗೂ ಸಮಪಾಲು ಸಿಗುವನಕ ನನ ಪಾಲು ನನದಲ್ಲ ಎಂದೆನುವ ಎಚ್ಚರಿರಲಿ”

ವಿಷ್ಣು ನಾಯ್ಕರ ಮನೆಯ ಪರಿಮಳದಂಗಳದಲ್ಲಿ ಯಾವುದೇ ಕಾರ‍್ಯಕ್ರಮವಾಗಲಿ ಅಲ್ಲಿ ಸ್ವತಃ ವಿಷ್ಣು ನಾಯ್ಕರೇ ಬರೆದ ಈ ಗೀತೆಯನ್ನು ಆಶಯ ಗೀತೆಯಂತೆ ಹಾಡಲಾಗುತ್ತದೆ. ಇದೊಂದು ಸಾಲು ಸಾಕು ವಿಷ್ಣು ನಾಯ್ಕರ ಘನ ವ್ಯಕ್ತಿತ್ವವನ್ನು ಎತ್ತಿ ತೋರಿಸುವುದಕ್ಕೆ.

ಇಂದು ಉತ್ತರ ಕನ್ನಡದ ಸಾಹಿತ್ಯ ಕ್ಷೇತ್ರವು ವಿಷ್ಣು ನಾಯಕರನ್ನು ಕಳೆದುಕೊಂಡು ಒಂದು ರೀತಿಯ ಅನಾಥಪ್ರಜ್ಞೆಯನ್ನು ಅನುಭವಿಸುತ್ತಿದೆ. ಇಡೀ ಜಿಲ್ಲೆಯ ಸಾಕ್ಷಿ ಪ್ರಜ್ಞೆಯಂತಿದ್ದವರು ಅವರು. ಕವಿಯಷ್ಟೇ ಅಲ್ಲ, ಕಥೆಗಾರ, ಕಾದಂಬರಿಕಾರರಾಗಿಯೂ ಹೆಸರು ಮಾಡಿದವರು. ಅದ್ಭುತ ನಾಟಕಕಾರರೂ ಆಗಿದ್ದರು. ಹಲವಾರು ಬೀದಿ ನಾಟಕಗಳನ್ನು ಆಡಿ, ಆಡಿಸಿದವರು. ಅವರ ಪರಿಮಳದಂಗಳ ಇಂತಹ ನಾಟಕಗಳಿಗೆ ಪ್ರಯೋಗಶಾಲೆ. ಅವರ ಸಂಘಟನಾ ಕೌಶಲ್ಯವಂತೂ ಅದ್ಭುತ. ಅದರಲ್ಲಿಯೂ ಅವರು ನಡೆಸುತ್ತಿದ್ದ ಕಾವ್ಯ ಕಮ್ಮಟಗಳು ಆ ಕಾಲದಲ್ಲಿ ಒಂದೆರಡು ತಲೆಮಾರಿನ ಯುವಜನತೆಯನ್ನು ಪ್ರಭಾವಿಸಿ ಸಾಹಿತ್ಯದ ಹಾದಿಗೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಅಂಕೋಲಾದ ಅಂಬಾರಕೊಡ್ಲ ಅಂದರೆ ವಿಷ್ಣು ನಾಯ್ಕ ಎನ್ನುವಷ್ಟು ಊರಿಗೆ ಪ್ರಸಿದ್ಧಿಯನ್ನು ತಂದವರು ಅವರು. ಅವರ ತಂದೆ ನಾಗಪ್ಪ, ತಾಯಿ ಬುಧವಂತಿ. ಅಕ್ಷರದ ಹಂಗಿಲ್ಲದ ದುಡಿಮೆಯೇ ಪ್ರಧಾನವಾಗಿದ್ದ ಕುಟುಂಬದಲ್ಲಿ ಜನಿಸಿದವರು. ಐದು ಜನ ಗಂಡುಮಕ್ಕಳಲ್ಲಿ ಎರಡನೆಯವನು ತಾನು ಎಂದು ಬಹಳಷ್ಟು ಸಲ ಮಾತಿನ ಮಧ್ಯೆ ಹೇಳಿಕೊಂಡಿದ್ದನ್ನು ಕೇಳಿದ್ದೆನಾದರೂ ನನಗೆ ಅವರ ಕುಟುಂಬ ನಿರ್ವಹಣೆಯನ್ನು ನೋಡಿದಾಗಲೆಲ್ಲ ಇವರೇ ಮನೆಯ ಹಿರಿಯಣ್ಣ ಎನ್ನಿಸುತ್ತಿತ್ತು. ನಮ್ಮ ತುಂಟಾಟ, ಗದ್ದಲ ಕೇಳಿದಾಗಲೆಲ್ಲ ನಮ್ಮೊಂದಿಗೆ ನಮ್ಮ ಸಮವಯಸ್ಕರಂತಾಗುತ್ತಿದ್ದ ಅವರು ತಮ್ಮ ಬಾಲ್ಯದ ದಿನಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ತಮ್ಮಂದಿರ ಬಳಿ ಊಟ ಕೊಟ್ಟರೆ ಹೊದ್ದುಕೊಳ್ಳಲು ಗೋಣಿತಾಟಿನ ಒಳಗೆ ಮಲಗಿಸಿಕೊಳ್ಳುವುದಾಗಿ ಹೇಳುತ್ತಿದ್ದರಂತೆ. ಹುಕಿ ಬಂದರೆ ಇಂತಹ ಅದೆಷ್ಟೋ ವಿಷಯಗಳನ್ನು ತಮ್ಮ ಎಂದಿನ ಮೆಲುವಾದ ನಿಧಾನಗತಿಯ ಮಾತಿನಲ್ಲಿ ಹೇಳುತ್ತ ಹೋಗುತ್ತಿದ್ದರು. ತಮ್ಮಂದಿರಿಗೆ ರಾತ್ರಿ ಹೊದೆಯಲು ಗೋಣಿತಾಟು ಕೊಡುವುದಾಗಿ ಹೇಳಿ ಅವರ ಪಾಲಿನ ಊಟ ತೆಗೆದುಕೊಳ್ಳುವುದು ಮುಂತಾದ ಚಿಕ್ಕಪುಟ್ಟ ವಿಷಯ ಹೇಳುವಾಗ ಮುಖದಲ್ಲಿ ಒಂದುರೀತಿಯ ಹುಸಿನಗು.

ವಿಷ್ಣು ನಾಯ್ಕ ಮತ್ತು ನನ್ನ ಆತ್ಮೀಯ ಬಾಂಧವ್ಯಕ್ಕೆ ಸುಮಾರು ಇಪ್ಪತ್ತೈದು ವರ್ಷಗಳ ನಂಟು. ನಾನು ಬಿ ಎ ಪ್ರಥಮ ವರ್ಷದಲ್ಲಿದ್ದಾಗ ಯಾವುದೋ ಪತ್ರಿಕೆಯಲ್ಲಿ ಬಂದ ಕವನವೊಂದನ್ನು ಓದಿ ಅವರು ನಡೆಸುತ್ತಿರುವ ಕಾವ್ಯಕಮ್ಮಟಕ್ಕೆ ಬರಬೇಕೆಂದು ಪತ್ರ ಕಳಿಸಿದ ದಿನಗಳವು.ಹೋಗುವುದೋ ಬೇಡವೋ ಎಂಬ ಗೊಂದಲದಲ್ಲಿಯೇ ನಾನು ಮತ್ತು ನನ್ನ ಶಿರಸಿಯ ಕೆಲವು ಗೆಳತಿಯರು ಸೇರಿ ಹೋಗಿದ್ದೆವು. ಆ ದಿನಗಳಿಂದ ಅದೇ ವಾತ್ಸಲ್ಯ, ಅದೇ ಆತ್ಮೀಯತೆ ಹಾಗೂ ಅಂದಿನಿಂದ ನಾನು ಅವರ ಮನೆಯ ಮಗಳು ಎಂಬಂತೆಯೇ ನಡೆಸಿಕೊಂಡಿದ್ದರು. ಪರಿಮಳದಂಗಳ ಅವರ ಮನೆಯವರಿಗೆ ಹೇಗೆ ಸದಾ ತೆರೆದಿರುತ್ತದೆಯೋ ಹಾಗೆ ನಮ್ಮಂಥ ಕಿರಿಯರಿಗೂ ಮುಕ್ತವಾಗಿಯೇ ತೆರೆದಿತ್ತು. ಯಾವ ಕ್ಷಣದಲ್ಲಿ ಬೇಕಾದರೂ ಆ ಮನೆಗೆ ಹೋಗಿ ಬರಬಹುದಾದ ಸ್ವಾತಂತ್ರ್ಯ ಇತ್ತು. ವಿಷ್ಣು ನಾಯ್ಕರ ಪತ್ನಿ ಕವಿತಕ್ಕ ಕೆಲವು ದಿನ ಅವರ ಮನೆಗೆ ಹೋಗದಿದ್ದರೂ, ಎಲ್ಲೋ ಅಪರೂಪಕ್ಕೆ ಒಂದೊಂದು ಕಾರ‍್ಯಕ್ರಮ ತಪ್ಪಿಸಿಕೊಂಡಾಗಲೂ ನೀ ನಮ್ಮನೆಗೆ ಬರೂದೇ ಬಿಟ್ಟು ಬಿಟ್ಯಪ. ದೊಡ್ಡೋಳಾಗೋದೇ ನೀನು.. ಎಂದು ಹುಸಿಮುನಿಸು ತೋರುವಷ್ಟು ವಾತ್ಸಲ್ಯಮಯಿ. ಭಾರತಿ ಅಮಿತಾ ಎಂಬ ಇಬ್ಬರು ಮಕ್ಕಳು ಆತ್ಮೀಯರಾಗಿದ್ದುದಷ್ಟೇ ಅಲ್ಲ ಅಳಿಯ ಉಮೇಶ ನಮ್ಮೊಂದಿಗೆ ಕಾವ್ಯದಲ್ಲಿ ತೊಡಗಿಸಿಕೊಂಡ ಅನುಗಾಲದ ಸ್ನೇಹಿತ. ಇನ್ನೊಬ್ಬ ಅಳಿಯ ಪ್ರಕಾಶ ಚಿಕ್ಕಂದಿನಲ್ಲಿ ನನ್ನ ತವರು ಮನೆಯಾದ ಹಿರೇಗುತ್ತಿಯಲ್ಲಿ ತನ್ನ ಅಕ್ಕಂದಿರ ಜೊತೆಯಲ್ಲಿ ಮನೆಗೆ ಬರುತ್ತ, ನಮ್ಮೊಂದಿಗೆ ಆಡುತ್ತ ಬೆಳೆದ ತಮ್ಮನಂತಹ ಹುಡುಗ. ಹೀಗಾಗಿ ಇಡೀ ಕುಟುಂಬ ನಮ್ಮದೇ ಎಂಬಷ್ಟು ಆತ್ಮೀಯ. ಇನ್ನು ವಿಷ್ಣು ನಾಯಕರ ತಮ್ಮಂದಿರಾದ ರಾಮಾ ನಾಯ್ಕ, ಅನಂತ ನಾಯ್ಕ ಹಾಗೂ ಅವರ ಪತ್ನಿಯರೂ ಆತ್ಮೀಯರೇ ಆಗಿದ್ದರಿಂದ ಪರಿಮಳದಂಗಳದ ಹೊಕ್ಕು ಬಳಕೆ ನನಗೆ ಸಲೀಸು.

ಕಾವ್ಯಕಮ್ಮಟದ ನಂತರ ಕಮ್ಮಟದಿಂದ ಹೊರಬಿದ್ದ ಶಿಬಿರಾರ್ಥಿಗಳ ಕುರಿತು ಆಯೋಜಕರು ಯೋಚಿಸುವುದು ಕಡಿಮೆ. ಆದರೆ ಕಮ್ಮಟದಿಂದ ಹೊರಬಿದ್ದ ನಂತರವೂ ನಾನು ಏನು ಬರೆಯುತ್ತೇನೆ, ಏನು ಓದುತ್ತೇನೆ ಎಂಬುದರ ಕಡೆ ಸದಾ ನಿಗಾ ಇಟ್ಟವರು ವಿಷ್ಣು ನಾಯ್ಕರು. ನಿಜಾರ್ಥದಲ್ಲಿ ಗುರುವಾಗಿದ್ದವರು. ಅವಳು ಹಾಗೆ ಮುಕ್ತವಾಗಿ ಕವನ ಬರೆಯಲು, ಕಥೆ ಅಂಕಣ ಬರೆಯಲು ಅವಳನ್ನು ಹೊಗಳಬೇಕಾಗಿದ್ದಲ್ಲ. ಅದು ಅವಳಲ್ಲಿರುವ ಪ್ರತಿಭೆ ಮತ್ತು ಅದನ್ನು ಅವಳು ರೂಢಿಸಿಕೊಳ್ಳುವ ರೀತಿ. ಆದರೆ ಸಾಹಿತ್ಯ ಕ್ಷೇತ್ರದಿಂದ ದೂರವಿದ್ದರೂ ಹೆಂಡತಿಯ ಮುಕ್ತ ಬರವಣಿಗೆಗೆ, ಅದರಲ್ಲೂ ಅಂಕೋಲೆಯಂಥಹ ಪುಟ್ಟ ಊರಲ್ಲಿ ಕೆಮ್ಮಿದರೂ, ಸೀನಿದರೂ ಸುದ್ದಿಯಾಗುವ ಸ್ಥಳದಲ್ಲಿದ್ದುಕೊಂಡು ಅದನ್ನು ಬೆಂಬಲಿಸುವ ಪ್ರವೀರನಿಗೆ ಎಲ್ಲಾ ಕ್ರೆಡಿಟ್ ಕೊಡಬೇಕು. ಎನ್ನುತ್ತಿದ್ದರು ಸದಾ.
ವಿಷ್ಣು ನಾಯ್ಕರು ಸಂಘಟಿಸುವ ಎಲ್ಲ ಕಾರ‍್ಯಕ್ರಮಗಳಲ್ಲಿ ನಾನು ಅವರ ಜೊತೆ ಇರಲೇಬೇಕಿತ್ತು. ತಾಲೂಕಾ ಸಮ್ಮೇಳನಗಳು ಹಾಗೂ ಜಿಲ್ಲಾ ಸಮ್ಮೇಳನಗಳನ್ನು ನಡೆಸುವಾಗ ಶ್ರೀದೇವಿ, ಕವಿಗೋಷ್ಠಿಯನ್ನು ಆಯೋಜಿಸುವ ಜವಾಬ್ಧಾರಿ ನಿನ್ನದು ಎಂದು ಬಿಡುತ್ತಿದ್ದರು. ನಾನು ಅವರ ಜೊತೆಗೆ ಕೆಲಸ ಮಾಡಿದ್ದ ಅಂಕೋಲಾ ಸಮ್ಮೇಳನ ಅದು. ಕವಿಗೋಷ್ಠಿಯಲ್ಲಿದ್ದ ಕವಯಿತ್ರಿಯೊಬ್ಬರು ವಿಷ್ಣು ನಾಯ್ಕರ ಬಳಿ ಕವನ ತೋರಿಸಿದರಂತೆ. ಅಲ್ನೋಡು, ಶ್ರೀದೇವಿ ಕಾಲಾಡಿಸಿಕೊಂಡು ಸುಮ್ನೆ ಕೂತಿದ್ದಾಳೆ. ಹೋಗಿ ಅವಳ ಹತ್ತಿರ ತಿದ್ದಿಸಿಕೊ. ಎಂದರಂತೆ. ನಾನಾಗ ಇನ್ನೂ ಚಿಕ್ಕವಳು. ಇಪ್ಪತ್ತೇಳೋ ಇಪ್ಪತ್ತೆಂಟೋ ವರ್ಷ. ಒಂದೆರಡು ಸಂಕಲನ ಪ್ರಕಟವಾಗಿತ್ತಷ್ಟೇ. ವಯಸ್ಸಿನಲ್ಲಿ ಹಿರಿಯರಾಗಿದ್ದ ಆ ಕವಯತ್ರಿಗೆ ಸಹಜವಾಗಿ ನನ್ನ ಬಳಿ ಕವನ ತೋರಿಸಿಕೊಳ್ಳಲು ಮುಜುಗರ. ಆದರೆ ವಿಷ್ಣು ನಾಯ್ಕರು ಹೇಳಿದ್ದಾರೆಂದ ಮೇಲೆ ಇಲ್ಲ ಎನ್ನುವಂತಿಲ್ಲ. ಹೀಗಾಗಿ ಕವನ ಕೊಟ್ಟು ನೋಡು ಎಂದರು. ಒಂದೆರಡು ಶಬ್ದ ತಿದ್ದಿದ ನಾನು ಕವನ ಇಲ್ಲಿಗೇ ಮುಗಿದು ಹೋಗುತ್ತದೆ. ಕೊನೆಯ ನಾಲ್ಕು ಸಾಲು ಬೇಡ. ಬಿಟ್ಟು ಬಿಡಬಹುದು ಅಕ್ಕಾ ಎಂದಿದ್ದೆ. ಕವನ ಬರೆದವರಿಗೆ ತಮ್ಮ ಸಾಲುಗಳ ಮೇಲೆ ಯಾವತ್ತಿಗೂ ತೀರದ ಮಮತೆ. ನನ್ನ ಬಳಿ ಏನೂ ಹೇಳದೆ ಅವರು ಮತ್ತೊಮ್ಮೆ ವಿಷ್ಣು ನಾಯ್ಕರ ಬಳಿಯೇ ಹೋದರು. ಸುಮ್ನೆ ಕೂತಿದ್ದಾಳೆ. ಕವನ ಓದಿ ಏನೂ ಹೇಳಲಿಲ್ವಾ? ಬರೀ ಆಲಸಿ ಎಂದು ಬೈಯ್ದುಕೊಳ್ಳುತ್ತ ನಾನು ಹೇಳಿದಂತೆ ಕೊನೆಯ ನಾಲ್ಕು ಸಾಲು ಬಿಡಲು ಹೇಳಿದರಂತೆ. ಶ್ರೀದೇವಿಯೂ ಅದೇ ಸಾಲು ಬಿಡಲು ಹೇಳಿದ್ದಳು. ಎಂದರಂತೆ ಆ ಹಿರಿಯ ಕವಯತ್ರಿ. ನೋಡಿದ್ರಾ? ಅದಕ್ಕೇ…. ಅದಕ್ಕೇ….ನಾನು ಅವಳಿಗೆ ತೋರಿಸಲು ಹೇಳಿದ್ದು. ನಾನು ಬೆಳೆಸಿದ ಸಸಿ ಅದು. ನನಗೆ ಗೊತ್ತು, ಅವಳ ಆಲಸಿತನ ಬಿಟ್ಟರೆ ತುಂಬಾ ಬೆಳಿತಾಳೆ. ಎಂದರಂತೆ ಅವರ ಯಾವತ್ತಿನ ಹುಸಿನಗೆಯಲ್ಲಿ. ನನ್ನ ಕಾವ್ಯಗುರು ಎಂದು ನಾನು ಯಾವಾಗಲೂ ಆರಾಧಿಸುವ ವಿಷ್ಣು ನಾಯ್ಕರಿಗೆ ತಮ್ಮ ಶಿಷ್ಯಂದಿರ ಕುರಿತು ಅಷ್ಟೊಂದು ವಿಶ್ವಾಸ ನಂಬಿಕೆ. ಇಂತಹುದ್ದೇ ಒಂದು ಕಾರ‍್ಯಕ್ರಮದಲ್ಲಿ ಈ ಶ್ರೀದೇವಿ ಅದೆಷ್ಟು ಬರಿತಾಳೆ, ಪ್ರಿಂಟಿಂಗ್ ಮಷಿನ್ ಎಂದು ಯಾರೋ ಹೇಳಿದಾಗ ದೊಡ್ಡದಾಗಿ ನಕ್ಕಿದ್ದರು. ಜಗತ್ತಿನ ಅತಿದೊಡ್ಡ ಆಲಸಿ ಅದು. ಅವಳಿಗೆ ಬೆನ್ನು ತಟ್ಟುವುದಲ್ಲ, ಬೆನ್ನು ಬಡಿಯಬೇಕು. ಅವಳಿಗೆ ಈ ದಿನ ಇಂಥದ್ದು ಬರೆಯಬೇಕು ಎಂದು ಅವಳ ಗಂಡ ನೆನಪು ಮಾಡುವುದು. ಇಲ್ಲದಿದ್ದರೆ ಅವಳೇನು ಬರಿತಾಳೆ? ಎಂದು ನನ್ನ ಗುಟ್ಟನ್ನು ರಟ್ಟು ಮಾಡಿದ್ದರು.

ಅದೊಮ್ಮೆ ಅಂಕೋಲಾದಲ್ಲಿ ಸಾಹಿತ್ಯ ಸಮ್ಮೇಳನ. ಊಟದ ಸಮಯ. ಊಟ ಮುಗಿದ ನಂತರದ ಗೋಷ್ಠಿಗೆ ಜಯಂತ ಕಾಯ್ಕಿಣಿಯವರ ಅಧ್ಯಕ್ಷತೆ. ಶ್ರೀದೇವಿ ಬಾ…… ಒಂದು ಚಾ ಕುಡ್ಕಂಡು ಬರುವಾ. ಇಲ್ಲಾ ಅಂದ್ರೆ ವೇದಿಕೆ ಮೇಲೆ ನಿದ್ದೆ ಮಾಡಬೇಕಾಗುದು ಜಯಂತ ಕಾಯ್ಕಿಣಿ ತಮ್ಮ ಎಂದಿನ ಹಾಸ್ಯದಲ್ಲಿ ಹೇಳಿದ್ದರು. ನಾನು ಅವರು ಮತ್ತು ಪ್ರಕಾಶ ಕಡಮೆ ಚಹಾದ ಅಂಗಡಿ ಹುಡುಕುತ್ತ ಹೊರಟೆವು. ಸ್ವಲ್ಪವೇ ದೂರದ ಅಂಕೋಲಾ ಬಸ್ ನಿಲ್ದಾಣದ ಎದುರಿನ ಹೊಟೆಲಲ್ಲಿ ಕುಳಿತು ಚಾ ಕುಡಿದು ಹರಟೆ ಹೊಡೆಯುತ್ತ ಕುಳಿತಿದ್ದಾಗ ಸಮ್ಮೇಳನ ನಡೆಯುತ್ತಿದ್ದ ಸ್ವಾತಂತ್ರ್ಯ ಭವನದಿಂದ ಏನೋ ಅನೌನ್ಸ್ ಮಾಡುತ್ತಿರುವುದು ಗೊತ್ತಾಗುತ್ತಿದ್ದರೂ ಸರಿಯಾಗಿ ಏನೂ ಕೇಳುತ್ತಿರಲಿಲ್ಲ. ಆದರೂ ನಾವು ಎದ್ದು ಸಮ್ಮೇಳನದ ಸ್ಥಳಕ್ಕೆ ಹೊರಟೆವು. ಆದರೆ ಸಮ್ಮೇಳನದ ಸ್ಥಳದಲ್ಲಿ ಮುಂದಿನ ಗೋಷ್ಠಿಯ ಅಧ್ಯಕ್ಷತೆ ವಹಿಸುವವರೇ ಕಾಣುತ್ತಿಲ್ಲವೆಂಬ ಗಡಿಬಿಡಿ. ಸಮ್ಮೇಳನದ ಜವಾಬ್ದಾರಿ ಹೊತ್ತಿದ್ದ ವಿಷ್ಣು ನಾಯ್ಕರು ಕೋಪದಲ್ಲಿ ಕಿಡಿಕಿಡಿಯಾಗಿದ್ದರು. ಮೊದಲು ಶ್ರೀದೇವಿಯನ್ನು ಕರೀರಿ. ಅವಳದ್ದೇ ಕಿತಾಪತಿ ಇದು. ಎಂದು ಹೇಳಿ ನಾವು ಸ್ಥಳಕ್ಕೆ ಬರುವಷ್ಟರಲ್ಲಿ ಶ್ರೀದೇವಿ ಕೆರೆಮನೆ ಎಲ್ಲಿದ್ದರೂ ವೇದಿಕೆಯ ಬಳಿ ಬರಬೇಕು. ಎಂದು ಎರಡು ಸಲ ಅನೌನ್ಸ್ ಮಾಡಿಯಾಗಿತ್ತು. ವೇದಿಕೆಯ ಬಳಿ ಬಂದೊಡನೆಯೆ ವಿಷ್ಣು ನಾಯ್ಕರ ತೀಕ್ಷ್ಣ ನೋಟಕ್ಕೆ ಹೆದರಿ ನಾನು ಸಭಾಂಗಣದ ಹಿಂದೆ ಹೋಗಿ ಕುಳಿತುಬಿಟ್ಟಿದ್ದೆ.

ಅಂಕೋಲಾದಂತಹ ಪುಟ್ಟ ತಾಲೂಕು ಸ್ಥಳದಿಂದ ಜಿಲ್ಲೆಯ ಹಲವು ಭಾಗಗಳಿಗೆ ಸಾಹಿತ್ಯದ ಕಾರ‍್ಯಕ್ರಮಗಳಿಗೆ ಹೋಗಿಬರುವುದೆಂದರೆ ಅದು ಮಹಿಳೆಯರಿಗೆ ತುಸು ಕಷ್ಟದ ಕೆಲಸ. ಆದರೆ ನಾನು ಅಂಕೋಲಾದಲ್ಲಿ ಇದ್ದ ಹತ್ತು ವರ್ಷಗಳ ಕಾಲವೂ ಜಿಲ್ಲೆಯ ಒಳಗೆ ಅಥವಾ ಜಿಲ್ಲೆಯ ಹೊರಗೆ ಯಾವುದೇ ಕಾರ‍್ಯಕ್ರಮಕ್ಕೆ ವಿಷ್ಣು ನಾಯ್ಕರು ಹೋಗಲಿ, ಅವರ ಕಾರಿನಲ್ಲಿ ನನಗೊಂದು ಸೀಟ್ ಮೀಸಲಾಗಿರುತ್ತಿತ್ತು. ಅವರು ಕನ್ನಡಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದಾಗ, ಗಡಿ ಪ್ರಾಧಿಕಾರದ ಸದಸ್ಯರಿದ್ದಾಗಲೂ ಅವರ ಜೊತೆ ಬಹಳಷ್ಟು ಕಾರ‍್ಯಕ್ರಮಗಳಿಗೆ ಓಡಾಡಿದ್ದೇನೆ. ಕಾರಿನಲ್ಲಿ ಹೋಗುವಾಗಲೆಲ್ಲ ಸಾಹಿತ್ಯ ಕ್ಷೇತ್ರದ ಕುರಿತು ಹೇಳುತ್ತ ಹೋಗುತ್ತಿದ್ದರು. ಅದು ನಾನು ಬರೆದ ಕಥೆ ಕವನಗಳ ಕುರಿತಾಗಿರಬಹುದು, ನಾನು ಓದಲೇ ಬೇಕಾದ ಒಳ್ಳೆಯ ಪುಸ್ತಕದ ಕುರಿತಾಗಿರಬಹುದು, ಯಾವುದೋ ಹಿರಿಯ ಸಾಹಿತಿಯೊಬ್ಬರ ಸಂಕಲನಗಳ, ಬರಹಗಳ ಕುರಿತಿರಬಹುದು, ಸಾಹಿತ್ಯ ಕ್ಷೇತ್ರದ ಗುಂಪುಗಾರಿಕೆ, ರಾಜಕಾರಣದ ಕುರಿತೂ ಆಗಿರಬಹುದು ಹೀಗೆ ಹಲವಾರು ವಿಷಯಗಳನ್ನು ಹೇಳುತ್ತ ಇದು ದಾರಿ ಖರ್ಚಿನ ಮಾತು ಎಂದು ತಮಾಷೆ ಮಾಡುತ್ತ ಸಾಗುತ್ತಿದ್ದರು. ಈ ಕಾರಣದಿಂದಾಗಿಯೇ ನನಗೆ ಸ್ವಲ್ಪ ಮಟ್ಟಿಗಾದರೂ ಸಾಹಿತ್ಯ ಕ್ಷೇತ್ರದ ಒಳಹೊರಗನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದ್ದು. ಕೆಲವೊಮ್ಮೆ ತಮ್ಮ ಕುಟುಂಬದ ಸದಸ್ಯರನ್ನೂ ಬೇಡ ಎಂದು ನನ್ನನ್ನು ಕರೆದುಕೊಂಡು ಹೋಗಿದ್ದು ನನಗೆ ನೆನಪಿದೆ. ‘ನಿನಗೋಸ್ಕರ ಕಾರ ಇಟ್ಕಂಡಂಗಾಗದೆ. ಮುಂದಿನ ಸಲ ನೀನೇ ಖರ್ಚು ಕೊಡುದೆಯಾ. ‘ಎನ್ನುತ್ತ ತಮಾಷೆ ಮಾಡುತ್ತಿದ್ದರು. ಅವರ ಕಾರ್ ಚಾಲಕನಾಗಿದ್ದ ರಿಯಾಜ್ ನಾನು ಎಲ್ಲೇ ಕಂಡರೂ ನನ್ನನ್ನು ಬಿಟ್ಟು ಬರಲು ಹೊರಟುಬಿಡುವಷ್ಟು ಆತ್ಮೀಯನಾಗಿದ್ದ. ಯಾಕೆಂದರೆ ಅಂಕೋಲಾದಿಂದ ಹನ್ನೊಂದು ಕಿ.ಮಿ ದೂರವಿರುವ ಅವಾರ್ಸಾಕ್ಕೆ ಪ್ರತಿ ಸಲವೂ ನನ್ನನ್ನು ಬಿಟ್ಟು ಬರಲು ಅವನನ್ನು ಕಳುಹಿಸಿಕೊಡುತ್ತಿದ್ದರು.

ಅವರ ಪುಸ್ತಕಗಳು ಪ್ರಕಟವಾಗಿ ಕೈ ಸೇರಿದ ತಕ್ಷಣ ಕೊಡಬೇಕಾದವರ ಹೆಸರಿನ ಒಂದು ಲಿಸ್ಟ್ ತಯಾರಿಸಿಟ್ಟುಕೊಳ್ಳುತ್ತಿದ್ದರು. ಆ ಲಿಸ್ಟ್ ನಲ್ಲಿ ನನ್ನ ಹೆಸರೂ ಕಡ್ಡಾಯವಾಗಿ ಇರುತ್ತಿತ್ತು ಎಂಬುದೇ ನನಗೊಂದು ಹೆಮ್ಮೆಯ ವಿಷಯ. ಅವರ ಅಂಬಾರ ಪ್ರಕಟವಾದಾಗ ಬಹಳ ದಿನಗಳವರೆಗೆ ನಾನು ಅವರ ಮನೆಗೆ ಹೋಗಲಾಗಿರಲಿಲ್ಲ. ನಂತರ ಯಾವುದೋ ಕಾರ‍್ಯಕ್ರಮಕ್ಕೆ ಹೊರಟವರು ನನಗೆ ಕೊಡಬೇಕಾದ ಪುಸ್ತಕ ತಂದು ದೊಡ್ಡ ಮನಷ್ಯಳಾಗೋದ್ಯೆ. ನಾನೇ ಪುಸ್ತಕ ಹಿಡ್ಕಂಡು ಬರಬೇಕು. ಎಂದು ತಮಾಷೆ ಮಾಡುತ್ತ ಕೊಟ್ಟಿದ್ದರು. ಅಂತಹ ಹಿರಿಯ ಸಾಹಿತಿಗಳು ನನ್ನಂತಹ ಕಿರಿಯಳನ್ನೂ ನೆನಪಿಟ್ಟುಕೊಳ್ಳುತ್ತಾರಲ್ಲ ಎಂಬುದೇ ನನಗೆ ಕೋಡು ಮೂಡಿಸುತ್ತಿತ್ತು.

ಜಿಲ್ಲೆಯ ಹಿರಿಯ ಕವಿ ದಿನಕರ ದೇಸಾಯಿಯವರನ್ನು ಜಿಲ್ಲೆಯಲ್ಲಿ ಮರುಸ್ಥಾಪಿಸಿದವರೇ ವಿಷ್ಣು ನಾಯ್ಕರು. ಅವರ ಕುರಿತಾದ ಬೃಹತ್ ಗ್ರಂಥಗಳ ಎಂಟು ಸಂಪುಟಗಳನ್ನು ಪ್ರಕಟಿಸಿದರು. ಗೌರೀಶ ಕಾಯ್ಕಿಣಿ ಸಮಗ್ರ ಕೂಡ ವಿಷ್ಣು ನಾಯ್ಕರ ಶ್ರಮದ ಫಲ. ಜಿಲ್ಲೆಯ ಹೊರಗಿದ್ದ ನಾಡಿನ ತುಂಬ ಖ್ಯಾತ ವಿಮರ್ಶಕರೆಂದು ಹೆಸರು ಮಾಡಿದ್ದ ಜಿ ಎಚ್ ನಾಯಕರನ್ನು ಪದೇ ಪದೇ ಜಿಲ್ಲೆಯ ಕಾರ‍್ಯಕ್ರಮಗಳಿಗೆ ಆಹ್ವಾನಿಸಿ ಜಿಲ್ಲೆಯ ಜನತೆಗೆ ಪರಿಚಯ ಮಾಡಿಸಿದ್ದು ವಿಷ್ಣು ನಾಯ್ಕರು. ಅಂತೆಯೇ ತಮ್ಮ ಸಕಾಲಿಕ ವಾರ ಪತ್ರಿಕೆಯಲ್ಲಿ ಜಿಲ್ಲೆಯ ಅದೆಷ್ಟೋ ಹೊಸ ಬರಹಗಾರರಿಗೆ ವೇದಿಕೆ ಒದಗಿಸಿಕೊಟ್ಟಿದ್ದರು. ಒಟ್ಟಿನಲ್ಲಿ ತಮ್ಮೊಂದಿಗೆ ಎಲ್ಲರನ್ನೂ ಸೇರಿಸಿಕೊಂಡು ಮುಂದುವರೆಯುವುದರಲ್ಲಿ ವಿಷ್ಣು ನಾಯ್ಕರಷ್ಟು ನಿಸ್ವಾರ್ಥತೆ ಹಾಗೂ ಕ್ಷಮತೆ ಬೇರೆ ಯಾರಲ್ಲೂ ಕಾಣುವುದಿಲ್ಲ. ಯಾವತ್ತಿಗೂ ಅಂಕೋಲೆಯ ಹಾಗೂ ಉತ್ತರ ಕನ್ನಡದ ಸಾಹಿತ್ಯ ಕ್ಷೇತ್ರ ಇಬ್ಭಾಗವಾಗದಂತೆ ಸಾಮರಸ್ಯದ ಸೂತ್ರದಿಂದ ಕಟ್ಟಿ ಹಾಕಿದ್ದರು. ಅವರ ಕ್ರಿಯಾಶೀಲತೆ ಕುಂದಿದ ಗಳಿಗೆಯಲ್ಲಿಯೇ ಸಾಹಿತ್ಯ ಕ್ಷೇತ್ರದಲ್ಲಿ ಒಡಕುಂಟಾದದ್ದು ವಿಪರ‍್ಯಾಸವೇ ಸರಿ.

ಎಷ್ಟು ಒಳ್ಳೆಯ ಕವಿಯೋ ಅಷ್ಟೇ ಅದ್ಭುತ ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ಸಂಘಟನಾಕಾರ, ವರದಿಗಾರ, ಸಂಪಾದಕ, ಪುಸ್ತಕ ಪ್ರಕಾಶಕ ಹೀಗೆ ಹಲವು ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾದ ಕೆಲವೆ ಕೆಲವು ವ್ಯಕ್ತಿಗಳಲ್ಲಿ ಇವರು ಅಗ್ರಗಣ್ಯರು. ನನ್ನನ್ನೂ ಒಳಗೊಂಡಂತೆ ಜಿಲ್ಲೆಯ ಬಹುತೇಕರ ಕವನ ಸಂಕಲನಗಳನ್ನು ಪ್ರಕಟಿಸಲು ಹಾಗೂ ಸಾಹಿತ್ಯದ ಹೆದ್ದಾರಿಯಲ್ಲಿ ಹೊಸಬರನ್ನು ಕರೆದೊಯ್ಯಲೆಂದೇ ಸ್ಥಾಪಿಸಿಕೊಂಡ ಅವರ ಕನಸಿನ ಕೂಸಾದ ರಾಘವೇಂದ್ರ ಪ್ರಕಾಶನದ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ಧಾರಿ ಉತ್ತರಕನ್ನಡದ ಸಾಹಿತ್ಯಕ್ಷೇತ್ರದ ಮೇಲಿದೆ. ಇದರೊಂದಿಗೆ ಅವರ ಕಾವ್ಯ ಕಮ್ಮಟದಿಂದ ನಾವು ಪ್ರಯೋಜನ ಪಡೆದು ಬೆಳೆದಂತೆ ನಮ್ಮ ಮುಂದಿನ ಪೀಳಿಗೆಯೂ ಆ ಪ್ರಯೋಜನವನ್ನು ಮುಂದುವರಿಸಿದರೆ ಮಾತ್ರ ನಮ್ಮ ಮೇಲಿರುವ ಅವರ ಅಪಾರವಾದ ಋಣವನ್ನು ತುಸುವಾದರೂ ಸಂದಾಯ ಮಾಡಬಹುದು ಎನ್ನುವ ಅಭಿಪ್ರಾಯ ನನ್ನದು.

ಮೊದಲ ಸಾಲಲ್ಲಿ ಹೇಳಿದ ಆಶಯ ಗೀತೆಗಿಂತ ನನಗೆ ಅವರ ‘ನನ್ನ ನೆರೆಮನೆಯಲ್ಲಿ ಹಸಿದವರು ಇರುವಾಗ ಉಣಲಾರನೆಂಬುದೆ ನನ್ನ ಬಯಕೆ ‘ಎಂಬ ಸಾಲು ತುಂಬ ಇಷ್ಟ. ಸಮಸಮಾಜದ ಕನಸು ಕಾಣುತ್ತ, ನಮ್ಮ ಒಂದು ಇಡೀ ತಲೆಮಾರು ಹಾದಿತಪ್ಪಿ ನಡೆಯದಂತೆ ಕಟ್ಟೆಚ್ಚರ ವಹಿಸಿದ ವಿಷ್ಣು ನಾಯ್ಕರಿರದ ಪರಿಮಳದ ಅಂಗಳದಲ್ಲಿ ಮತ್ತೆ ಮತ್ತೆ ಅವರ ನೆನಪಿಗೋಸ್ಕರವಾದರೂ ಕಾರ‍್ಯಕ್ರಮಗಳು ನಡೆಯುತ್ತಿರಲಿ.

ಶ್ರೀದೇವಿ ಕೆರೆಮನೆ