- ವರಕವಿ - ಜನವರಿ 31, 2021
- ಚಲನಚಿತ್ರ ಶೀರ್ಷಿಕೆಗಳ ಸಿಂಹಾವಲೋಕನ : ಪುಸ್ತಕ ಪರಿಚಯ - ಡಿಸಂಬರ್ 31, 2020
- ಕೆ ಎಸ್ ನ ಅವರ ದೇವರ ಕಲ್ಪನೆ - ಆಗಸ್ಟ್ 13, 2020
ದೇವರ ಪರಿಕಲ್ಪನೆಯನ್ನು ಚಿಂತಿಸುವ ಕೆ ಎಸ್ ನ ಅವರ ಮೊದಲಿನ ಕವನಗಳಿಗೂ ಮತ್ತು ಕೊನೆಯ ದಿನಗಳ ರಚನೆಗಳಿಗೂ ಗಮನಾರ್ಹ ಅಂತರವಿದೆ.ದೇವರನ್ನು ಕುರಿತ ಕವಿಯ ನಿಲುವು ಅನುಭಾವದ ವ್ಯಾಪ್ತಿಯಲ್ಲಿ ಬರುವುದೇ ಎಂಬುದನ್ನು ವಿಶ್ಲೇಷಿಸದೆ,ದೇವರ ಬಗ್ಗೆ ಕವಿಯ ಚಿಂತನೆಯನ್ನು ಅವರ ಹಲವು ಮಹತ್ವದ ಕವನಗಳ ಮೂಲಕ ,ನನ್ನ ಸೀಮಿತ ಅಧ್ಯಯನದ ವ್ಯಾಪ್ತಿಯಲ್ಲಿ ನಿರೂಪಿಸಲು ಯತ್ನಿಸುತ್ತೇನೆ.
ಕೆ ಎಸ್ ನ ಅವರು ಬಹಳ ಹಿಂದೆ ರಾಮಚಂದ್ರಶರ್ಮ ಅವರಿಗೆ ನೀಡಿದ ಸಂದರ್ಶನದಲ್ಲಿ, “ನನ್ನ ದೇವರ ಕಲ್ಪನೆಯೇ ವಿಚಿತ್ರವಾಗಿದೆ.ಬಾಳಿನ ಸುಖ ದುಃಖಗಳ ಅಧಿಪತಿಯಾಗಿ ದೇವರಿದ್ದಾನೆ ಎನ್ನುವುದು ನನ್ನ ನಂಬಿಕೆಯಲ್ಲ.ಸೃಷ್ಟಿಗೆ ಕಾರಣನಾದ ದೇವರು ಈ ಲೋಕವನ್ನು ಮನುಷ್ಯರಿಗೊಪ್ಪಿಸಿ ತಾನು ದೂರ ನಿಂತ.ನಾಳೆಯ ಕತೆ ಮನುಷ್ಯನಿಗೆ ಸೇರಿದ್ದು.ದೇವರೆತ್ತರಕ್ಕೆ ಬೆಳೆದು ನಿಲ್ಲುವ ಆಸೆ ನಮ್ಮದಾಗಬೇಕು” ಎಂದಿದ್ದರು.
ಸೃಷ್ಟಿಗೆ ದೇವರು ಕಾರಣನಿರಬಹುದು.ಆದರೆ ಅದರ ಪಾಲನೆ ಮನುಷ್ಯನಿಗೆ ಸೇರಿದ್ದು ಎಂದು ಪ್ರತಿಪಾದಿಸುವ ತಾರ್ಕಿಕ ದೈವವಾದ(deism)ಕ್ಕೆ ಸಂವಾದಿಯಾದುದು ಈ ಬಗೆಯ ಚಿಂತನೆ ಎನಿಸುತ್ತದೆ.
ಇದಕ್ಕೆ ಸಮರ್ಥನೆಯಾಗಿ ಅವರ ಹಲವು ಕವನಗಳನ್ನು ಉದಾಹರಿಸಬಹುದು.
“ರಂಗನಾಥನ ಕಂಡು”,”ಏನ ಬೇಡಲಿ”,”ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ”,”ಬಿಳಿಯ ಹೂಗಳ ಕವಿತೆ ಗೋರಿಗಳ ಮೇಲೆ”,”ಅಹೋರಾತ್ರಿಗಳಲಿ ಬಿಡದು ನಿನ್ನ ದನಿ”,ಪ್ರಥಮ ರಾಜನಿಗೆ” ಮುಂತಾದುವು.
ಮೈಸೂರ ಮಲ್ಲಿಗೆ ಕವನ ಸಂಕಲನದಲ್ಲಿ ಇರುವ “ಏನ ಬೇಡಲಿ” ಕವನದ ಕೊನೆಯ ನುಡಿಯಲ್ಲಿ ಕವಿ ಹೇಳುವುದು:
“ಎಲ್ಲವನ್ನು ಕೊಟ್ಟಿರುವೆ
ಏನ ಬೇಡಲಿ!
ಜಗವನೆನಗೆ ಬಿಟ್ಟಿರುವೆ
ಏಕೆ ಕಾಡಲಿ!”
ದೇವರು ಮನುಷ್ಯನಿಗೆ ಎಲ್ಲವನೂ ಸೃಷ್ಟಿಸಿ ಕೊಟ್ಟಿದ್ದಾನೆ,ಈಗ ಯಾವ ಸಹಾಯವೂ ಅಗತ್ಯವಿಲ್ಲ ಎಂಬ ದನಿ ,ದೇವರ ಬಗ್ಗೆ ಕವಿ ಈ ಮೊದಲು ನೀಡಿದ ವ್ಯಾಖ್ಯೆಗೆ ಕನ್ನಡಿ ಹಿಡಿದಂತಿದೆ.
.”ರಂಗನಾಥನ ಕಂಡು ” ಕವನದ ಈ ಸಾಲುಗಳಲ್ಲಿ ದೇವರು ತಮಗೆ ದಾರಿ ತೋರಿಸಬೇಕಾಗಿಲ್ಲ ಎಂಬುದು ಕವಿಯ ನಿಶ್ಚಯವಾಗಿದೆ:
“ಕಾವೇರಿಯಂಚಿನಲಿ ಕಲ್ಲು ದೇವರು ಮಲಗಿ
ಕನಸ ಕಾಂಬುದ ಕಂಡೆ!
ಏಳು ಏಳೆನ್ನಲೆನಗಿಲ್ಲ ಧೈರ್ಯ’
ಪ್ರಥಮ ರಾಜನಿಗೆ ಕವನದಲ್ಲಿ ಈ ಜಗತ್ತನ್ನು ಸೃಷ್ಟಿ ಮಾಡಿದ ದೇವರು ಅದನ್ನು ಮನುಷ್ಯನಿಗೊಪ್ಪಿಸಿದ ಎನ್ನುವುದನ್ನು ವಿವರಿಸುವ ರೀತಿ ಇದು:
“ಪ್ರಜೆಗಳನು ಕರೆದು ಇದೊ ರಾಜ್ಯವಿಹುದು;
ಆಳಬಹುದೆಂದು ನುಡಿದೆ;
ಅರಮನೆಯ ತೊರೆದು ಬಾಗಿಲನು ತೆರೆದು
ತಿರುಗಿ ನೋಡದೆಯೆ ನಡೆದನಂತೆ!”
ಕವಿಗೆ ದೇವರು ಕಲ್ಲಿನ ವಿಗ್ರಹವಲ್ಲ. ಲೋಕೋದ್ದಾರಕೆ ಜನ್ಮವೆತ್ತ ಮಹಾಪುರುಷರ ರೂಪದಲ್ಲಿದ್ದಾನೆ .ಜಗವನ್ನೇ ಬಿಟ್ಟು ಕೊಟ್ಟ ದೇವರು ಮನುಷ್ಯನ ಹೃದಯದಲ್ಲೇ ಇರುವುದಾಗಿ ಕೋರಿಕೆ ಸಲ್ಲಿಸುವುದೂ ಈ ಸಾಲುಗಳಲ್ಲಿ ಧ್ವನಿತವಾಗಿದೆ:
“ಲೋಕ ಮೊದಲು ನನ್ನದಿತ್ತು!
ಈಗ ಅದುವೆ ನಿನ್ನದಾಯ್ತು,
ಬಿಟ್ಟುಕೊಟ್ಟ ರಾಜ್ಯಗಳಲಿ
ನಾನದೆಂತು ಅಡಿಯಿಡಲಿ?
ನಿನ್ನ ಹೃದಯಮಂದಿರವೇ ನಂದನವೆನಗಿಳೆಯಲಿ.”
ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ ಕವನದಲ್ಲಿ ಮನುಷ್ಯ ತನ್ನ ಸ್ವಶಕ್ತಿಯಿಂದ ಮುಂದೆ ಬರಲು ತೀರ್ಮಾನಿಸಿದ್ದಾನೆ ದೇವರು ತನ್ನ ಸಿಂಹಾಸನವನ್ನು ಮನುಷ್ಯನಿಗೆ ಒಪ್ಪಿಸುವುದಕ್ಕೆ ಬಂದಾಗ ಮಗನಾದ ಮನುಷ್ಯ:
“ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ;
ತೊಡಿಸದಿರು ಚಂದ್ರ ಕಿರೀಟವನು.
ಕೊರಳಿಗೆ ಭಾರ ನನಗೆ ನಕ್ಷತ್ರಮಾಲಿಕೆ;
ನಾನೊಲ್ಲೆ ದೊರೆತನವನು.”
ಎಂದು ಬಿನ್ನವಿಸುತ್ತಾನೆ.
ಆದರೆ 2000ದ ವರ್ಷದಲ್ಲಿ ಪ್ರಕಟಗೊಂಡ ಸಂಜೆ ಹಾಡು ಕವನ ಸಂಕಲನದಲ್ಲಿ’ ನನಗೆ ನಂಬಿಕೆ” ಎಂಬ ಕವನದಲ್ಲಿ ಕವಿಯ ದೇವರ ಕುರಿತಾದ ನಿಲುವಿನಲ್ಲಿ ಗಮನಾರ್ಹವಾದ ಸ್ಥಿತ್ಯಂತರವನ್ನು ಕಾಣಬಹುದು.ಇದುವರೆಗೆ ದೇವರು ತನ್ನ ಪಾಡಿಗೆ ನನ್ನನ್ನು ಬಿಡಬೇಕೆಂದು ಹೇಳುತ್ತಿದ್ದ ಕವಿ ಈಗ ದೇವರು ತನ್ನನ್ನು ಸಂರಕ್ಷಿಸುತ್ತ ಬರುತ್ತಿದ್ದಾನೆ.ತಾನು ವಿಧ್ಯುಕ್ತವಾಗಿ ಪೂಜಿಸದಿದ್ದರೂ ಅವನ ಬತ್ತಲ ಮೂರ್ತಿಯನ್ನು ನೋಡುವುದರಲ್ಲಿ ತನಗೆ ಆನಂದವಿದೆ ಎಂಬ ನಿಲುವಿಗೆ ತಲುಪುತ್ತಾನೆ.
“ಹೊರಗಣ್ಣು ಮುಚ್ಚಿದರೆ ಒಳಗಣ್ಣು ತೆರೆಯುವುದು
ಕಾಣುವುದು ಎಲ್ಲೆಲ್ಲು ವಿಶ್ವರೂಪ;
……….
………
ನಿನ್ನೊಲವು ನನ್ನ ಸಂರಕ್ಷಿಸುತ ಬರುತಿಹದು,
ನನಗೆ ನಂಬಿಕೆ ನಿನ್ನ ಶಕ್ತಿಯಲ್ಲಿ.
“2002ರಲ್ಲಿ ದೇವರ ಪರಿಕಲ್ಪನೆ ಕುರಿತ ಚೆಲುವು ದೇವರು ,ನಾ ಕಂಡ ದೇವರು ಮುಂತಾದ ಕವನಗಳನ್ನು ಬರೆಯುತ್ತಾರೆ.
ನೀನೆ ನಾನು ಕವನದಲ್ಲಿ ಕನಸಿನ ತುಂಬ ದೇವರು ಕವಿಯ ಕಣ್ಣನ್ನು ಮುಚ್ಚಿದ ಅನುಭವವಾಗಿ ದೇವರಿಲ್ಲ ಎನ್ನುವುದು ಕವಿಗೆ ಅಸಾಧ್ಯವಾಗುತ್ತದೆ ಎನ್ನುತ್ತಾರೆ ಸುಮತೀಂದ್ರ ನಾಡಿಗ ಅವರು.
“ಕತ್ತಲೆಗೆ ಬತ್ತಲೆಗೆ ನಾನು ಹೆದರುವುದಿಲ್ಲ,
ಬಿಂಬ ಪ್ರತಿಬಿಂಬಗಳ ನಡುವೆ ನಿಂತಿದ್ದೇನೆ;
ನೀನು ನಾನೇ ಪ್ರಭುವೇ ,ನೀನು ನಾನು,
ನೀನು ಯಾರೂ ಅಲ್ಲ ,ನೀನೇ ನಾನು !”
ದೇವರ ಕುರಿತ ಕವಿಯ ಹಾದಿಯನ್ನು ಗಮನಿಸಿದವರಿಗೆ ಈ ಬಗೆಯ ಅಭೇದ ದರ್ಶನ ಅಚ್ಚರಿ ಉಂಟು ಮಾಡುತ್ತದೆ.
ನಿಜಜೀವನದಲ್ಲೂ ಅಂದಿನ ದಿನಗಳಲ್ಲಿ ಆಪ್ತರೊಂದಿಗೋ ಕುಟುಂಬದವರೊಡನೆಯೋ ಮಾತನಾಡುವಾಗ ಇದೇ ಬಗೆಯ ಅಭಿಮತಗಳು ಮನೆಯಲ್ಲಿ ನಮ್ಮ ತಾಯಿಯೋ,ಅಣ್ಣನೋ ಪೂಜೆ ಮಾಡುತ್ತಿದ್ದಾಗ ಸುಮ್ಮನೆ ಅವಲೋಕಿಸುತ್ತಿದ್ದರು.ಆದರೆ ಎಂದೂ ಅದನ್ನು ಟೀಕಿಸುವುದಾಗಲೀ ,ವಿರೋಧಿಸುವುದಾಗಲೀ ಮಾಡುತ್ತಿರಲಿಲ್ಲ.”ಸ್ವರ್ಗ-ನರಕ,ಪಾಪ –ಪುಣ್ಯ ಇವೆಲ್ಲ ಮನುಷ್ಯ ಈ ಜನ್ಮದಲ್ಲಿ ಸಜ್ಜನನಾಗಿರಲಿ ಎಂಬ ಉದ್ದೇಶದಿಂದ ರೂಪಿಸಿದ ಸಾಧನಗಳು” ಎನ್ನುತ್ತಿದ್ದರು.
ಒಮ್ಮೆ ಮಿತ್ರರೊಬ್ಬರು ನಮ್ಮ ತಂದೆಯವರಿಗೆ “ನೀವು ಮಂತ್ರಾಲಯ ,ಉಡುಪಿ ಇಂಥ ಕ್ಷೇತ್ರಗಳಿಗೆ ಹಲವಾರು ಬಾರಿ ಹೋಗಿದ್ದೀರಲ್ಲ? ಎಂದು ಕುತೂಹಲದಿಂದ ಕೇಳಿದಾಗ ಕವಿ ” ಆ ಸ್ಥಳಗಳ ಸಾಹಿತ್ಯ ಕಾರ್ಯಕ್ರಮದ ಸಂಘಟಕರು ವಿಶ್ವಾಸದಿಂದ ಕರೆದುಕೊಂಡು ಹೋಗಲು ಉತ್ಸಾಹ ತೋರಿದಾಗ ಇಲ್ಲವೆನ್ನುದು ಸೌಜನ್ಯವಲ್ಲ.ಅಲ್ಲಿನ ವಿದ್ಯಮಾನ ಕುತೂಹಲದಿಂದ ಗಮನಿಸುತ್ತೇನೆ.ಬಂದ ಜನ ದೇವರಲ್ಲಿ ತಮ್ಮ ಕಷ್ಟ ಸುಖ ಹೇಳಿಕೊಳ್ಳುತ್ತಾರೆ.ಅದೊಂದು ಬಗೆಯ faithcure ಎಂದಿದ್ದರು.
ಕವಿಯನ್ನು ಪ್ರೇಮ ಕವನ ಹಾಗೂ ನವ್ಯಶೈಲಿಯ ಕವನಗಳಿಗಷ್ಟೇ ಸೀಮಿತಗೊಳಿಸದೆ ಅವರ ದೇವರ ಪರಿಕಲ್ಪನೆ ಕುರಿತ ಕವನಗಳ ಅಧ್ಯಯನವೂ ಅಷ್ಟೇ ಕುತೂಹಲಕರವಾದುದು.
ಹೆಚ್ಚಿನ ಬರಹಗಳಿಗಾಗಿ
ಶಿಕಾಗೋ ಸಂದೇಶದ ಭ್ರಾತೃತ್ವ ಕಥನ
.
ಲಕ್ಷ್ಮೀಶ ತೋಳ್ಪಾಡಿ ವಾಕ್ಝರಿ