ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚೊಕ್ಕಾಡಿ-೮೦ ರ ಸಂಭ್ರಮ

ಗೋವಿಂದ್ ಹೆಗಡೆ ಅವರು ಸುಬ್ರಾಯ ಚೊಕ್ಕಾಡಿಯರಿಗೆ ಎಂಬತ್ತು ತುಂಬಿದ ಸಂಭ್ರಮದಲ್ಲಿ ಬರೆದ ನುಡಿ ನಮನ
ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ನಮ್ಮೆಲ್ಲರ ಪ್ರೀತಿಯ ಕವಿ ಮಾರ್ಗದರ್ಶಕ ಸುಬ್ರಾಯ ಚೊಕ್ಕಾಡಿ ಅವರಿಗೆ ಎಂಬತ್ತು ತುಂಬುತ್ತಿರುವ, ಅಂದರೆ ಸಹಸ್ರಚಂದ್ರದರ್ಶನದ ಈ ಶುಭ ಸಂದರ್ಭದಲ್ಲಿ ಅವರಿಗೆ ಅಭಿವಂದನೆಗಳನ್ನು ಸಲ್ಲಿಸುತ್ತ, ಎಲ್ಲ ಶುಭವನ್ನು ಕೋರುತ್ತೇನೆ.

ಈ ಸಂದರ್ಭದಲ್ಲಿ ಅವರೊಂದಿಗಿನ ಒಡನಾಟದ ಕೆಲವು ನೆನಪುಗಳನ್ನು ಹಂಚಿಕೊಳ್ಳಬಹುದು.

ಚೊಕ್ಕಾಡಿ ಸರ್ ನನಗೆ ಮೊದಲು ಪರಿಚಯವಾಗಿದ್ದು ಅವರ ಕವಿತೆಗಳ ಮೂಲಕ. ಪತ್ರಿಕೆ, ವಿಶೇಷಾಂಕ ಇವುಗಳಲ್ಲಿ ಓದಿದ್ದು. ಅವರ ಸಂಕಲನಗಳನ್ನು ಇಡಿಯಾಗಿ ಅಥವಾ ಅವರ ಇತರ ಬರಹಗಳನ್ನು ಓದಿದ ನೆನಪಿಲ್ಲ.
೨೦೧೭ರಲ್ಲಿ ಕಾವ್ಯ ಕೇಳಿ ವಾಟ್ಸಾಪ್ ಗುಂಪನ್ನು ಆರಂಭಿಸಿದ ಮೇಲೆ ಗುಂಪಿಗೆ ಬಂದ ಶ್ರೀಮತಿ ಮಾಲಿನಿ ಗುರುಪ್ರಸನ್ನ, ಅಲ್ಲಿ ಚೊಕ್ಕಾಡಿಯವರ ಧ್ಯಾನಸ್ಥ ಕವಿತೆಯನ್ನು ಹಂಚಿಕೊಂಡರೆಂದು ಕಾಣುತ್ತದೆ. ತುಂಬ ಸೊಗಸಾದ ಕವಿತೆ ಅದು.ನನಗೆ ಇಷ್ಟವಾಗಿ ಆ ಕವಿತೆಯನ್ನು ನಾನು ವಾಚಿಸಿ ಕೇಳಿಯಲ್ಲಿ ಹಂಚಿಕೊಂಡೆ.
ಅದನ್ನು ಮಾಲಿನಿಯವರು ಚೊಕ್ಕಾಡಿಯವರಿಗೆ ತಲುಪಿಸಿ, ಅವರು ಅದನ್ನು ಇಷ್ಟಪಟ್ಟು ಆ ಮೂಲಕ ಕೇಳಿಗೆ ಬರುವಂತಾದುದು… ಅದು ಒಂದು ದಿವ್ಯ ಕ್ಷಣವೇ ಇರಬೇಕು!

ಕೇಳಿಯಲ್ಲಿ ಸಹಜವಾಗಿ ಅವರು ನಮ್ಮ ಮಾರ್ಗದರ್ಶಕ. ಅಲ್ಲಿ ಹಾಕಿದ ಕವಿತೆಗಳ ಬಗ್ಗೆ ಅವರ ಅಭಿಪ್ರಾಯ, ಮಾರ್ಗದರ್ಶನ ನಿರಂತರ. ಜೊತೆಗೆ ಚರ್ಚೆಗೆ ಯಾವ ವಿಷಯವೇ ಬರಲಿ- ಒಂದು ಶಬ್ದದ ನೆಲೆ-ಬೆಲೆ ಗಳ ಮಾತಿರಬಹುದು, ಅನುವಾದದ ವಿಷಯವಿರಬಹುದು, ವಿಮರ್ಶೆಯ ಮಾತಿರಬಹುದು, ಕನ್ನಡ-ಸಂಸ್ಕೃತ ಛಂದಸ್ಸುಗಳು, ಅಲಂಕಾರಗಳು, ಶೈಲಿ, ಗದ್ಯ-ಪದ್ಯ, ಹಳಗನ್ನಡ-ಹೊಸಗನ್ನಡ, ಯಾವುದೇ ಇರಲಿ- ಅಲ್ಲೆಲ್ಲ ಅವರ ಮಾರ್ಗದರ್ಶನ, ಅನುಭವದ ಮಾತು, ಅದರ ಲಾಭ ನಮಗೆ ಸಿಕ್ಕಿತೆಂದೇ ಲೆಕ್ಕ.
ಅವರ ವಿಶಿಷ್ಟತೆಯೆಂದರೆ ಅದ್ಭುತ ಹಾಸ್ಯಪ್ರಜ್ಞೆ. ಕಿರಿಯರೊಂದಿಗೆ ಕಿರಿಯರಾಗಿ ಯಾವ ಬಿಂಕ ಬಿಗುಮಾನಗಳಿಲ್ಲದೆ ಬೆರೆಯುವಿಕೆ… ಅವರು ಯಾವುದೇ ಸಂದರ್ಭದಲ್ಲಿ ಯಾರದೂ ಕಾಲೆಳೆಯಲು ತಯಾರು.ತಾವು ಎಳೆಸಿಕೊಳ್ಳಲೂ ಸಿದ್ಧ. ಅಷ್ಟು ತಮಾಷೆಯಾಗಿ ಚಟಾಕಿಗಳಲ್ಲಿ ಮುಳುಗಿದರೂ ಅಲ್ಲೇನಾದರೂ ಸಾಹಿತ್ಯದ ವಿಷಯ ಬಂದ ಕೂಡಲೇ ಅವರಲ್ಲಿನ ಸಾಹಿತ್ಯದ ಮೇಷ್ಟ್ರು, ಸಾಹಿತ್ಯದ ಗಂಭೀರ ವಿದ್ಯಾರ್ಥಿ ಕೂಡಲೇ ಅನಾವರಣಗೊಳ್ಳುವುದು ನಿಶ್ಚಿತ.
ಕಾವ್ಯ ಕೇಳಿ ಈವರೆಗೆ ಎರಡು ಕೂಟಗಳನ್ನು ಏರ್ಪಡಿಸಿದೆ. ಸದಸ್ಯರು ಒಂದೆಡೆ ಸೇರಿ ಇಡೀ ದಿನ ವಿವಿಧ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಕಾರ್ಯಕ್ರಮ ಅದು. ಮೊದಲ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದರೆ ಎರಡನೆಯದು ಶಿರಸಿಯಲ್ಲಿ.ಈ ಎರಡೂ ಸಂದರ್ಭಗಳಲ್ಲಿ ಚೊಕ್ಕಾಡಿಯವರ ಭಾಗವಹಿಸುವಿಕೆ ಎಲ್ಲ ಸದಸ್ಯರಿಗೆ, ಎಲ್ಲರಿಗೆ ಮಾದರಿ. ಇಡೀ ದಿನ ಕುಳಿತು ಕಲಾಪಗಳಲ್ಲಿ ಭಾಗವಹಿಸಿ, ಮಾರ್ಗದರ್ಶನ ಮಾಡಿ, ಕೆಲವೊಂದನ್ನು ತಾವೇ ನಡೆಸಿಕೊಟ್ಟು… ಈ ಎಲ್ಲದರಲ್ಲಿ ಅವರು ಒಮ್ಮೆಯಾದರೂ ಆಕಳಿಸಲಿಲ್ಲ. ಸುಸ್ತಾಯ್ತು ಎನ್ನಲಿಲ್ಲ. ಯಾರಾದರೂ ಮಾತನಾಡುತ್ತಿದ್ದರೆ ಅದನ್ನು ಹೇಗೆ ಕೇಳಿಸಿಕೊಳ್ಳಬೇಕು, ಗ್ರಹಿಸಬೇಕು ಎಂಬುದನ್ನು, ಅವರನ್ನು ನೋಡಿ ಕಲಿಯಬೇಕು. ಇತರರೊಡನೆ ಕೂಡಿ ಕಲೆತು ಕೆಲಸ ಮಾಡುವ ಅವರ ರೀತಿ ಅನ್ಯಾದೃಶ.
ಈ ಕಾರಣದಿಂದಾಗಿಯೇ ಅವರಿಗೆ ದಶಕಗಳ ಕಾಲ, “ಸುಮನಸಾ ವಿಚಾರ ವೇದಿಕೆ”ಯ ಮೂಲಕ, ನಿರಂತರವಾಗಿ ಸಾಹಿತ್ಯಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು,ಆ ಮೂಲಕ ಹಲವಾರು ಲೇಖಕರನ್ನು ಬೆಳೆಸುತ್ತ ತಾವೂ ಬೆಳೆಯಲು ಸಾಧ್ಯವಾಯಿತು ಎಂದೆನಿಸುತ್ತದೆ.
ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಅನುವಾದಕ, ಪ್ರಕಾಶಕ, ಸಾಹಿತ್ಯ ಸಂಘಟಕ- ಚೊಕ್ಕಾಡಿಯವರು ಯಾವುದಲ್ಲ?!
ಈ ಲೇಖನದ ಮಿತಿಯಲ್ಲಿ ಚೊಕ್ಕಾಡಿಯವರ ಸಾಹಿತ್ಯದ ನೆಲೆ ಬೆಲೆಗಳನ್ನು ಪರಿಚಯಿಸುವುದಾಗಲೀ, ಅವುಗಳನ್ನು ಒರೆಗಲ್ಲಿಗೆ ಹಚ್ಚುವುದಾಗಲೀ ಸಾಧ್ಯವಿಲ್ಲ. ಅದು ಇಲ್ಲಿನ ಉದ್ದೇಶವಲ್ಲ. ಚೊಕ್ಕಾಡಿಯವರ ಆವರೆಗಿನ ಸಮಗ್ರ ಕವಿತೆಗಳ ಸಂಕಲನ “ಚೊಕ್ಕಾಡಿಯ ಹಕ್ಕಿಗಳು” ಇದರ ಬೆನ್ನು ಪುಟದಲ್ಲಿನ ಪ್ರೊ. ಯು ಆರ್ ಅನಂತಮೂರ್ತಿಯವರ ಮತ್ತು ಪ್ರಸಿದ್ಧ ಲೇಖಕ ಜೋಗಿಯವರ ನುಡಿಗಳನ್ನು ಇಲ್ಲಿ ಉಲ್ಲೇಖಿಸಿದರೆ ಸಾಕು.

ಅನಂತಮೂರ್ತಿಯವರು ಬರೆಯುತ್ತಾರೆ-
“ಹಲವು ವರ್ಷಗಳ ಕಾಲ ನಾನು ಓದುತ್ತಾ ಬಂದಿರುವ ಚೊಕ್ಕಾಡಿಯವರ ಯಾವ ಪದ್ಯವೂ ನನಗೆ ಕಳಪೆ ಎನ್ನಿಸಿದ್ದಿಲ್ಲ . ಅವರಿಂದ ನಾನು ಹಿಗ್ಗುತ್ತಲೇ ಬೆಳೆದಿದ್ದೇನೆ. ಚೊಕ್ಕಾಡಿಯವರ ಎಲ್ಲ ಪದ್ಯಗಳಲ್ಲೂ ಸ್ಪಷ್ಟತೆಗಾಗಿ ಕೆಲಸ ಮಾಡುವ ಕಸುಬುಗಾರಿಕೆ ಇರುತ್ತದೆ. ತಾನು ಹೇಳಿದ್ದು ಕೊನೆಯ ಪಕ್ಷ ತನಗಾದರೂ ಸ್ಪಷ್ಟವಾಗಿ ಇರಬೇಕೆಂದು ಬಯಸುವುದು ಶಿಷ್ಟಾಚಾರದ ಒಂದು ಅಗತ್ಯ ನಡವಳಿಕೆ ಎಂದು ನಾನು ತಿಳಿದಿದ್ದೇನೆ. ಚೊಕ್ಕಾಡಿ ಈ ಶಿಷ್ಟಾಚಾರವನ್ನು ಎಲ್ಲಿಯೂ ಬಿಡುವುದಿಲ್ಲ. ಇದಕ್ಕೆ ಕಾರಣ ಅವರಲ್ಲಿ ನಾವು ಕಾಣುವ ಎರಡು ದೊಡ್ಡ ಗುಣಗಳು: ಅವು ವಿನಯ ಮತ್ತು ಪ್ರಾಮಾಣಿಕತೆ. ಈ ಎರಡು ಗುಣಗಳು ಇವೆ ಎಂದು ಗ್ಯಾರಂಟಿ ಆದ ಮೇಲೆಯೇ ನಾವು ಕವಿಯನ್ನು ನಮ್ಮ ಒಳಗಿನಿಂದ ಆಲಿಸಲು ತಯಾರಾಗುತ್ತೇವೆ. ಹೀಗೆ ನಾವು ಆಲಿಸಬಹುದಾದ ನಮ್ಮ ನಡುವಿನ ಕವಿ ಚೊಕ್ಕಾಡಿಯವರು. ಅಡಿಗರ ನಂತರ ಬರೆಯುತ್ತಿರುವ ಮುಖ್ಯ ಕವಿಗಳಲ್ಲಿ ಒಬ್ಬರೆಂದು ಈ ಟಿಪ್ಪಣಿಗಳ ಮುಖಾಂತರ ಗುರುತಿಸಲು ನನಗೆ ಸಂತೋಷವಾಗುತ್ತದೆ.”

“ಕವಿತೆ ಜ್ಞಾನೋದಯದ ಹಾಗೆ, ಅವರವರಿಗೆ ಅರ್ಥವಾಗಬೇಕು. ಅದು ಕೇವಲ ಕವಿಯಷ್ಟೇ ಅಲ್ಲ, ಓದುಗರ ಪಾಲಿಗೂ ಭರವಸೆಯ ವ್ಯವಸಾಯ… ಚೊಕ್ಕಾಡಿಯವರು ಭರವಸೆ ಮತ್ತು ನಂಬಿಕೆಗಳನ್ನು ಸುಳ್ಳಾಗಿಸಿಲ್ಲ. ಕಾವ್ಯದ ವಿಚಾರದಲ್ಲಿ ಆಗಲೀ, ಮಾನವೀಯತೆಯ ವಿಚಾರದಲ್ಲೇ ಆಗಿರಲಿ, ಪ್ರೀತಿಯಲ್ಲೇ ಆಗಿರಲಿ, ಆ ಕಾರಣಕ್ಕೆ ಅವರು ದಕ್ಷಿಣಕನ್ನಡದ ಮೌನ ಮತ್ತು ಧ್ಯಾನದ ಅಪೂರ್ವ ಸಮಾಗಮ” ಎನ್ನುತ್ತಾರೆ ಜೋಗಿ.
ನಾನು ಅವರ ಸಂಪರ್ಕಕ್ಕೆ ಬಂದಾಗಿನಿಂದ ಅವರು ನನ್ನನ್ನು ತಮ್ಮ ಒಬ್ಬ ಕಿರಿಯ ಸೋದರನಂತೆ ಪಾಲಿಸಿದ್ದಾರೆ. (ಅವರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಅವರ ಈ ವಾತ್ಸಲ್ಯ ದೊರೆತಿದೆ. ಅದರಲ್ಲಿ ಸಂಶಯವಿಲ್ಲ.)ನನ್ನ ಮುಂಬರುವ ಕವನ ಸಂಕಲನ- ” ಪೇಟೆ ಬೀದಿಯ ತೇರು“ವಿಗೆ ಮುನ್ನುಡಿಯನ್ನು ಬರೆದು ಹರಸಿದ್ದಾರೆ. ಕಾರಣಾಂತರಗಳಿಂದ ಅದು ಬರುವುದು ತಡವಾಗಿದ್ದಕ್ಕೆ, ಆತಂಕದಿಂದ ಆಗಾಗ ವಿಚಾರಿಸಿದ್ದಾರೆ. ನಾನು ಸಂಕಲನದ ‘ನನ್ನ ಮಾತು’ಗಳಲ್ಲಿ ಬರೆದಿರುವಂತೆ ದೊಡ್ಡವರು ಹೇಗಿರುತ್ತಾರೆ ಎಂಬುದನ್ನು ತಿಳಿಯಲು ಚೊಕ್ಕಾಡಿಯವರನ್ನು ನೋಡಿದರೆ ಸಾಕು!
ಅದ್ಭುತ ಹಾಸ್ಯಪ್ರಜ್ಞೆಯ, ಸಾಹಿತ್ಯ ವಿವೇಕದ, ಜೀವನಪ್ರೀತಿಯ ಈ ಹಿರಿಯರು ನೂರು ಕಾಲ ನಮ್ಮೊಂದಿಗಿರಲಿ; ಇನ್ನೂ ದಶಕಗಳ ಕಾಲ ಅವರ ಪ್ರೀತಿ, ಮಾರ್ಗದರ್ಶನ ನಮಗೆ, ನಾಡಿಗೆ ಸಿಗುತ್ತಿರಲಿ ಎಂದು ಆಶಿಸುತ್ತ, ಅವರಿಗೆ ನನ್ನ ಪ್ರೀತಿಯ ನುಡಿ ನಮನಗಳನ್ನು ಸಲ್ಲಿಸುತ್ತೇನೆ.

★ ಡಾ. ಗೋವಿಂದ ಹೆಗಡೆ
ಅಡ್ಮಿನ್, ‘ಕಾವ್ಯ-ಕೇಳಿ’