ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಯಂತರೊಂದಿಗೆ ಆತ್ಮೀಯ ಸಂವಾದ

ಮಮತಾ ರಾವ್
ಇತ್ತೀಚಿನ ಬರಹಗಳು: ಮಮತಾ ರಾವ್ (ಎಲ್ಲವನ್ನು ಓದಿ)

ನವ್ಯ ಮುಗಿಯುತ್ತ ಬಂದು ಬಂಡಾಯದ ಗಾಳಿ ಬೀಸತೊಡಗಿದಾಗ ನಾನು ಬರೆಯಲಿಕ್ಕೆ ಪ್ರಾರಂಭಿಸಿದ್ದು. ನವ್ಯದ ಕೊನೆಯ ಸ್ಯಾಂಪಲ್ ನಾನು. ಸಾಮಯಿಕ ಚಳುವಳಿಯಿಂದ ದೂರ ಮುಂಬಯಿಯಲ್ಲಿ ಇದ್ದುದರಿಂದಲೇ ನನ್ನದೇ ಆದ ಲೋಕವೊಂದನ್ನು ತೀವ್ರವಾಗಿ ಕಟ್ಟಿಕೊಳ್ಳುವ ಹಟ ನನ್ನದಾಯಿತು. ಒಬ್ಬ ಸೃಜನಶೀಲ ಬರಹಗಾರ ನಿತ್ಯದ ಬದುಕಿನಿಂದ ಸದಾ ಹೊಸ ಸ್ಪಂದನವನ್ನು, ಪ್ರೇರಣೆಯನ್ನು ಪಡೆಯುತ್ತಲೇ ಇರುತ್ತಾನೆ. ಅಂತೆಯೇ ಬರವಣಿಗೆಯಲ್ಲಿ ಆತ ಹೊಸತಿಗಾಗಿ ಹವಣಿಸುತ್ತಾನೆ. ಅಂದಾಗ ವಿಮರ್ಶೆ ಕೂಡ ತನ್ನ ಸಂವೇದನೆಯಲ್ಲಿ ನಿತ್ಯದ ಹೊಸ ಸೂಕ್ಷ್ಮಗಳಿಗೆ update ಆಗಬೇಕು. ಅದು ಆಗದೆ ವಿಶ್ವವಿದ್ಯಾಲಯಗಳ ಲೈಬ್ರರಿಯಲ್ಲಿ ಕುಳಿತು ಕನ್ನಡದಲ್ಲಿ ಹೊಸತೇನೂ ಬಂದಿಲ್ಲ ಎಂದು ಚರ್ಚಿಸಿದರೆ ಆಗುವುದಿಲ್ಲ.

ಜಯಂತ್ ಕಾಯ್ಕಿಣಿ, ಮಮತಾ ರಾವ್ ಜೊತೆಗಿನ ಸಂದರ್ಶನದಲ್ಲಿ

ಸಂದರ್ಶನದ ಪೂರ್ಣಪಾಠ

ಮಮತಾ ರಾವ್ನಮಸ್ಕಾರ. ವಿಜ್ಞಾನದ ವಿದ್ಯಾರ್ಥಿ ನೀವು, ಓರ್ವ ಸೃಜನಶೀಲ ಬರಹಗಾರರಾಗಿ ರೂಪುಗೊಳ್ಳುವಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದವರ ಕುರಿತು ಸ್ವಲ್ಪ ಹೇಳುತ್ತೀರಾ?

ಜಯಂತ ಕಾಯ್ಕಿಣಿ-ತಂದೆ ಸಾಹಿತಿ ಅಂದಮೇಲೆ ಮಕ್ಕಳು ಸಾಹಿತ್ಯವನ್ನು ದ್ವೇಷಿಸುವುದು ಸಹಜ. ನನಗೂ ಹಾಗೆ. ನನ್ನ ತಂದೆ ಸಾಹಿತಿ. ಮನೆಯಲ್ಲಿ ಅಲರ್ಜಿ ಆಗುವಷ್ಟು ರಾಶಿ ರಾಶಿ ಪುಸ್ತಕಗಳು. ಸಾಹಿತಿಗಳು ಬರೋದು, ಬರೀ ಮಾತಾಡೋದು; ಅಪ್ಪನ ಜೊತೆ ಸಭೆ-ಸಮಾರಂಭಗಳಿಗೆ ಹೋಗೋದು, ಭಾಷಣ ಕೇಳೋದು… .ಇತ್ಯಾದಿ. ನಾನು ಕುಮಟಾದ ಹಾಸ್ಟಲಿನಲ್ಲಿದ್ದಾಗ ಅಸೌಖ್ಯದಿಂದ ಹೋಮ್‍ಸಿಕ್ ಆಗಿ ಮನೆಗೆ ಬಂದೆ. ಆವಾಗ ಮನೆಯಲ್ಲಿ ತಂದೆಯವರಿಂದ ಮುನ್ನುಡಿಯನ್ನು ಬರೆಸಲಿಕ್ಕಾಗಿ ಬಂದಿದ್ದ ಜಿ.ಎಸ್.ಅವಧಾನಿಗಳ ‘ಬೆಂಕಿಬಳ್ಳಿ’ ಎಂಬ ಕವನಸಂಗ್ರಹದ ಹಸ್ತಪ್ರತಿ ಕೈಗೆ ಬಿತ್ತು. ಅಲ್ಲಿಯತನಕ ‘ದೋಣಿಸಾಗಲಿ ಮುಂದೆ ಹೋಗಲಿ’, ‘ನನ್ನ ಹರಣ ನಿನಗೆ ಶರಣ’ ಮುಂತಾದ ಸುಕುಮಾರ ಭಾವನೆಗಳಿಂದ ಕೂಡಿದ ಲಯಬದ್ಧವಾದ ರಚನೆಯಷ್ಟೇ ಕಾವ್ಯ ಎಂದು ತಿಳಿದಿದ್ದ ನನಗೆ, ‘ಬೆಂಕಿಬಳ್ಳಿ’ಯನ್ನು ಓದಿ ಇದು ಸ್ವಲ್ಪ ಬೇರೆ ತರಹ ಇದೆ ಅಂತ ಅನಿಸ್ತು. ಮಾತ್ರೆ, ಗಣ, ಲಯ, ಛಂದಸ್ಸು ಇಲ್ಲದಿದ್ದರೂ ಏನನ್ನೋ ಉದ್ದೀಪಿಸುವಂತಿದ್ದ ಇದು ಕಾವ್ಯವಾದರೆ ನಾನೂ ಬರೆಯಬಹುದಲ್ಲ ಅನಿಸ್ತು. ಅಂದರೆ ಕಾವ್ಯ ಅನ್ನುವುದು ನಮ್ಮನ್ನು ಬಿಡುಗಡೆ ಮಾಡುವಂತಹ ಒಂದು ಎಲಿಮೆಂಟ್ ಎನ್ನುವುದು ಮೊದಲಬಾರಿಗೆ ಅರಿವಾಯಿತು. ಹಾಗೆಯೇ ಬರೆಯಲು ನೋಡಿದೆ. ಒಂದೆರಡು ಕವನಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿದೆ. ಅದು ದುರ್ದೈವದಿಂದ ಪ್ರಕಟವೂ ಆಯಿತು. ‘ಕಸ್ತೂರಿ’ಯಲ್ಲಿ ಒಂದು, ಮತ್ತೊಂದು ‘ಉದಯವಾಣಿ’ಯಲ್ಲಿ. ಪತ್ರಿಕೆಗೆ ಕಳುಹಿಸುವುದು ಮತ್ತು ಅದು ಬರುವತನಕ ಯಾರಿಗೂ ಗೊತ್ತಿರದ ಮಹಾರಹಸ್ಯವೊಂದು ನನಗೆ ಮಾತ್ರ ಗೊತ್ತಿದೆ ಎಂಬಂತೆ ಕಾಯುವುದು. ಇದೆಲ್ಲ ಶುರುವಾಯಿತು.
ನನ್ನ ಮೇಲೆ ಪ್ರಭಾವ ಬೀರಿದ್ದು ಗೋಪಾಲಕೃಷ್ಣ ಅಡಿಗರು ಪ್ರಕಟಿಸುತ್ತಿದ್ದ ‘ಸಾಕ್ಷಿ’ ಎಂಬ ಸಾಹಿತ್ಯಿಕ ಪತ್ರಿಕೆ. ಅದರಲ್ಲಿ ಚಿತ್ತಾಲರು, ಲಂಕೇಶ್, ಅನಂತಮೂರ್ತಿ, ಏ.ಕೆ ರಾಮಾನುಜನ್, ಕೀರ್ತಿನಾಥ ಕುರ್ತುಕೋಟಿ, ಗಿರಡ್ಡಿ ಗೋವಿಂದರಾಜ್ ಹೀಗೆ ಎಲ್ಲರೂ ಬರೆಯುತ್ತಿದ್ದರು. ಅದಕ್ಕೆ ಕವಿತೆ ಬರೆದು ಕಳುಹಿಸಿದೆ. ಅದರಲ್ಲಿ ಪ್ರಕಟವಾದ ನನ್ನ ಕವಿತೆಯ ಹಿಂದಿನ ಪುಟದಲ್ಲಿ ಅನಂತಮೂರ್ತಿಯವರ ಲೇಖನ ಇದೆ; ಮುಂದಿನಪುಟದಲ್ಲಿ ಕುರ್ತುಕೋಟಿಯವರ ಲೇಖನ ಇದೆ. ಅದು ಹೇಗಿತ್ತು ಅಂದರೆ ಹಿರಿಯರು ಒಬ್ಬ ಪುಟ್ಟಹುಡುಗನನ್ನು ಕೈ ಹಿಡಿದುಕೊಂಡು ಮನೆಯೊಳಗೆ ಕರೆತಂದಂತಿತ್ತು. ಒಂದು ತರಹ ತುಂಬಾ ಸುರಕ್ಷಿತ ಅನುಭವ. ‘ಸಾಕ್ಷಿ’ ಪತ್ರಿಕೆಯಿಂದ ನಾನು ತುಂಬಾ ಪ್ರಭಾವಿತನಾದೆ. ಅಡಿಗರು ಹೊಸ ಜನಾಂಗದ ಕಣ್ಣು ತೆರೆಯಿಸಿದರು ಅನ್ನುತ್ತಾರಲ್ಲ; ಅಡಿಗರು ನನ್ನ ಮೇಲೆ ಪ್ರಭಾವ ಬೀರಿದ್ದು ಅವರ ಕಾವ್ಯದಿಂದಲ್ಲ, ‘ಸಾಕ್ಷಿ’ಯಿಂದ.

‘ಸಾಕ್ಷಿ’ಯಲ್ಲಿ ಬಹಳ ಅರ್ಥಪೂರ್ಣವಾದ ಚರ್ಚೆಗಳು, ವಾಗ್ವಾದಗಳು ನಡೆಯುತ್ತಿದ್ದವು. ಬೇರೆಬೇರೆ ಮನೋಭೂಮಿಕೆಗಳಿದ್ದವು, ಬೇರೆಬೇರೆ ಅಭಿಪ್ರಾಯಗಳಿದ್ದವು. ಈ ಚರ್ಚೆಗಳು ನನ್ನನ್ನು ಪೋಷಿಸಿದವು ಎನ್ನಬಹುದು. ಉದಾಹರಣೆಗೆ ರಾಮಾನುಜನ್ ಕಾವ್ಯದ ಲಕ್ಷಣಗಳ ಕುರಿತ ವಾಗ್ವಾದ.
ಇನ್ನು, ಗಂಗಾಧರ ಚಿತ್ತಾಲ, ಕೆ.ವಿ.ತಿರುಮಲೇಶ್ ಹಾಗೂ ಏ.ಕೆ.ರಾಮಾನುಜನ್ ಈ ಮೂವರ ಕಾವ್ಯ ನಾನು ಓದದೇ ಇರುತ್ತಿದ್ದರೆ ನನಗೆ ಖಂಡಿತವಾಗಿಯೂ ಕವಿತೆಯ ರುಚಿ ಹತ್ತುತ್ತಿರಲಿಲ್ಲ. ಕವಿತೆ ಅಂದರೆ ಅರ್ಥ ಅಲ್ಲ; ಕವಿತೆ ಅಂದರೆ ಒಂದು ಅನುಭವ. ಒಂದಿಷ್ಟು ಸಾಲು, ಪ್ರತಿಮೆ, ಚಿತ್ರಗಳ ಮೂಲಕ ನನ್ನ ಮನಸ್ಸಿನ ಯಾವುದೋ ಫೈಲ್ ಒಂದು ಓಪನ್ ಆಗಿ ನನ್ನದೇ ಖಾಸಾ ಅನುಭವಕ್ಕೆ ಬರುವ ಒಂದು ಸಂಗತಿ ಎನ್ನುವುದನ್ನು ತೋರಿಸಿಕೊಟ್ಟದ್ದು ಈ ಮೂವರ ಕಾವ್ಯಗಳು.
ನಿಮ್ಮ ತಂದೆಯವರ ಜೀವನಶೈಲಿ ಹಾಗೂ ವೈಚಾರಿಕತೆ ನಿಮ್ಮನ್ನು ರೂಪಿಸಿದ ಬಗೆ?
ಒಂಥರಾ ಪರೋಕ್ಷ ಪ್ರಭಾವ. ಮುಖ್ಯವಾಗಿ ಅವರ ಸರಳತೆ. ಬಿಳಿಯ ಪೈರಾಣ್ ಹಾಕುತ್ತಿದ್ದರು. ಅವರ ಆ ಬಿಳಿಯ ಮಲ್ ಪೈರಾಣಿನಷ್ಟು ಅವರ ಬದುಕಿನ ರೀತಿ, ನಿಲುವು, ಒಲವುಗಳು ಸರಳ ಮತ್ತು ಪಾರದರ್ಶಕ. ಅವರು ಶಿಕ್ಷಕರಾಗಿದ್ದರು.

ಡಾ.ಗೌರೀಶ್ ಕಾಯ್ಕಿಣಿ

ಬದುಕಿನ ಕುರಿತು ಅವರಿಗೆ ತುಂಬಾ ರುಚಿ ಮತ್ತು ಜಿಜ್ಞಾಸೆ ಇತ್ತು. ಮನುಷ್ಯನಾಗಿ ಅರಳುವುದಕ್ಕೆ ಏನೇನು ಬೇಕೋ ಅದರಲ್ಲೆಲ್ಲ ಅವರಿಗೆ ಆಸಕ್ತಿ ಇತ್ತು. ಸಂಗೀತ, ನಾಟಕ, ಸಾಹಿತ್ಯ; ಅವರು ನಾಸ್ತಿಕರು ಆದರೂ ಅವರಿಗೆ ಹರಿಕಥೆಯಲ್ಲಿ ಆಸಕ್ತಿ ಇತ್ತು. ಯಾಕೆಂದರೆ ಅವರಿಗೆ ಹರಿಕಥೆಯ ಕಥನಶೈಲಿ ತುಂಬಾ ಹಿಡಿಸುತ್ತಿತ್ತು. ಹಾಡಿನ ಮೂಲಕ ಉಪಕಥೆಗಳ ಮೂಲಕ ಹರಿಕಥೆಯನ್ನು ಅದ್ಭುತವಾಗಿ ಬೆಳೆಸುವ ಕಲೆ; ಕೇಳುಗರೊಡನೆ ಸಂವಹನ ಮಾಡುವುದು; ಎಲ್ಲವೂ ಅವರ ಆಸಕ್ತಿಯ ಕೇಂದ್ರವಾಗಿತ್ತು. ಜಾನಪದ, ಯಕ್ಷಗಾನ ಇನ್ನು ವಿಜ್ಞಾನದ ಬಗ್ಗೆನೂ ಆಸಕ್ತಿ ಇತ್ತು. ಆ ಕಾಲಕ್ಕೆ ಪಶ್ಚಿಮದಿಂದ ತಿಳಿಯಬೇಕಾದದ್ದು ಬಹಳಷ್ಟಿದೆ ಎಂದು ನಂಬಿದವರು. ಅವರ ಸಮಗ್ರ ಸಂಪುಟದಲ್ಲಿ ಒಂದು ಸಂಪುಟ ಪಾಶ್ಚಾತ್ಯ ಪ್ರತಿಭೆ ಅಂತಲೇ ಇದೆ. ಅದನ್ನು ನಾನು ಆವಾಗ ಓದಿರಲಿಲ್ಲ. ಈಗ ನೋಡಿದರೆ ಅದರಲ್ಲಿ ಮೋಝಾರ್ಟ್ ಮೇಲೆ ಬರೆದಿದ್ದಾರೆ; ಸಾಕ್ರೆಟಿಸ್ ಬಗ್ಗೆ, ಎಡಿಸನ್ ಬಗ್ಗೆ, ಹೀಗೆ ದಾರ್ಶನಿಕರ ಬಗ್ಗೆ, ಸಂಗೀತ ಕಲಾವಿದರ ಬಗ್ಗೆ, ಚಿತ್ರಕಲಾವಿದರ ಬಗ್ಗೆ, ವಿಜ್ಞಾನಿಗಳ ಬಗ್ಗೆ ಬರೆದಿದ್ದಾರೆ. ಆ ಕಾಲದಲ್ಲಿ ಈಗಿನ ತರಹ ವಿಕಿಪಿಡೀಯಾ ಎನ್ನುವುದು ಇರಲಿಲ್ಲ ನೋಡಿ. ಆ ಸಣ್ಣ ಊರಿನಲ್ಲಿ ಕುಳಿತು ಎಲ್ಲಿಂದ ಓದಿ ಬರೆದಿದ್ದಾರೋ . . ಕನ್ನಡದಲ್ಲಿ ಕಾರ್ಲ್ ಮಾರ್ಕ್ಸ್ ಬಗ್ಗೆ ಮೊದಲು ಬರೆದವರು ಅವರು. ಅವರದು ಸರ್ವಗ್ರಾಹೀ ಬಹುಮುಖಿ ಸಂವೇದನೆ. ಇಡಿಯಾದ ಬದುಕಿನ ಎಲ್ಲಾ ಬಿಡಿಗಳಲ್ಲಿ ಅವರಿಗೆ ಆಸಕ್ತಿ. ಪ್ರತಿಯೊಂದು ಬಿಡಿಯನ್ನು ಸಹ ಅನುಭವಿಸಬೇಕು. ಅದಕ್ಕಾಗಿ ಅವರು ಸ್ಪೆಷಲಿಸ್ಟ್ ಆಗಲಿಲ್ಲ. ಕವಿ ಅಥವಾ ಕಾದಂಬರಿಕಾರನಾಗ ಬಯಸಲಿಲ್ಲ. ‘ಜನಸೇವಕ’ ಎಂಬ ಪತ್ರಿಕೆಗೆ ಪ್ರತಿವಾರ ಮೂರು ಬೇರೆ ಬೇರೆ ಹೆಸರಿನಲ್ಲಿ ಅಂಕಣ ಬರೆಯುತ್ತಿದ್ದರು. ಒಂದು-ಗೌರೀಶ್ ಕಾಯ್ಕಿಣಿ ಅಂತ ವೈಚಾರಿಕ ಲೇಖನಗಳನ್ನು, ಎರಡು-ಅಡಿಗೆ ಭಟ್ಟ ಅಂತ ಹಾಸ್ಯ ಲೇಖನಗಳನ್ನು, ಮೂರು-ಜಿವಿಕೆ ಅಂತ ರಾಜಕೀಯ ಟಿಪ್ಪಣಿಯನ್ನು ಬರೆಯುತ್ತಿದ್ದರು. ದಿನಕರ ದೇಸಾಯಿಯವರು ನಡೆಸುತ್ತಿದ್ದ ಆ ಪತ್ರಿಕೆಯಲ್ಲಿ ನಾಲ್ಕರಲ್ಲಿ ಮೂರರಷ್ಟು ಭಾಗ ಇವರ ಬರಹಗಳಿಂದ ತುಂಬಿರುತ್ತಿದ್ದವು. ಅಲ್ಲಿ ಆರ್ಥಿಕ ಸಂಪಾದನೆ ಬಿಲ್‍ಕುಲ್ ಇರಲಿಲ್ಲ. ಹೊಸತನ್ನು ಸಹಜೀವಿಗಳೊಂದಿಗೆ ಹಂಚಿಕೊಳ್ಳುವುದೇ ಅವರ ಅರಿವಿನ ದಾರಿ. ಊರಿನಲ್ಲಾಗುವ ಸಮಾರಂಭಕ್ಕೆ ಸ್ವಾಗತ ಗೀತೆ ಬರೆದು ಕೊಡುವುದು; ಭಾಷಣ ಬರೆದು ಕೊಡುವುದು(ವಿಜ್ಞಾನ ವರ ಹಾಗೂ ವಿಜ್ಞಾನ ಶಾಪ ಎಂದು ಉಭಯಪಕ್ಷಕ್ಕೂ ಬರೆದು ಕೊಡುವುದು ಅವರೇ).

ಅವರನ್ನು ಒಮ್ಮೆ ಬೆಂಗಳೂರಿಗೆ ಸಾಹಿತ್ಯ ಪರಿಷತ್ತಿನ ಸನ್ಮಾನ ಕಾರ್ಯಕ್ರಮಕ್ಕೆ ಆಮಂತ್ರಿಸಲಾಗಿತ್ತು. ‘ಕ್ಷಮಿಸಿ, ನನ್ನ ವಿದ್ಯಾರ್ಥಿಯೊಬ್ಬನ ದೋಣಿಯೊಂದರ ಬಿಡುಗಡೆಯ ಕಾರ್ಯಕ್ರಮಕ್ಕೆ ಹೋಗಲು ಒಪ್ಪಿರುವುದರಿಂದ ಬರಲಾಗುವುದಿಲ್ಲ’ ಎಂದು ಬರೆದು ಕಾರ್ಡು ಪೋಸ್ಟ್ ಮಾಡಲು ನನ್ನ ಕೈಗೆ ಕೊಟ್ಟಿದ್ದರು. ಅದನ್ನು ಓದಿ ನನಗೆ ತುಂಬಾ ಸಿಟ್ಟು ಬಂದು ಅವರೊಂದಿಗೆ ಜಗಳಾಡಿದ್ದೆ. ಬೆಂಗಳೂರಿಗೆ ಹೋಗುವ ಅವಕಾಶವಿತ್ತು, ಸಿನೆಮಾ ನೋಡಬಹುದಿತ್ತು ಎಂದೆಲ್ಲಾ ಆಶಿಸಿದ್ದ ಕಾರಣ. ಆದರೆ ಈಗ ಯೋಚಿಸಿ ನೋಡುವಾಗ ಅವರ ಆಯ್ಕೆಯ ಅರಿವಾಗುತ್ತದೆ. ಅವರೆಂದೂ ಪಟ್ಟಣದ ಕಡೆಗೆ ಮುಖಮಾಡಲಿಲ್ಲ. ಗೋಕರ್ಣದಲ್ಲಿ ಕುಳಿತುಕೊಂಡೇ ಓದು ಬರಹ ಮಾಡಿದ್ದು. ತಮ್ಮಿಂದ ಸಾಧ್ಯವಾದಷ್ಟು ಓದುತ್ತಿದ್ದರು. ಮುಂಬಯಿಯಿಂದ ಬಂದ ದೂರದ ಸಂಬಂಧಿಕರು ಏನಾದರೂ ಸ್ವೀಟ್ಸ್ ಬಾಕ್ಸ್ ತಂದರೆ ಅದನ್ನು ಸುತ್ತಿದ್ದ ವಾರ್ತಾ ಪತ್ರಿಕೆಗಳ ಕಾಗದವನ್ನು ಕಾದಿರಿಸಿಕೊಂಡು ಓದುತ್ತಿದ್ದರು. ಕೊನೆಯಗಳಿಗೆಯ ತನಕ ಬರೆಯುತ್ತಲೇ ಇದ್ದರು. ರಾತ್ರಿ ಸಂಯುಕ್ತ ಕರ್ನಾಟಕಕ್ಕೆ ಅಂಕಣ ಬರೆದಿಟ್ಟು, ಮಲಗಿದ್ದಲ್ಲೇ ಅವರು ತೀರಿಕೊಂಡರು.
ಅವರ ಬಹುಮುಖ ಪ್ರತಿಭೆಯ ಪರೋಕ್ಷ ಪ್ರಭಾವ ನಿಮ್ಮಲ್ಲಿ ಆಗುತ್ತಾ ಇತ್ತು.
ಬದುಕನ್ನು ತೀವ್ರವಾಗಿ ಬದುಕಬೇಕು ಮತ್ತು ಬರೆಯುವುದು ಲೇಖಕನಾಗುವುದಕ್ಕಾಗಿ ಅಲ್ಲ ಬದುಕನ್ನು ಅರಿತು ಹಂಚಿಕೊಳ್ಳುವುದಕ್ಕಾಗಿ ಎನ್ನುವುದನ್ನು ಮನಗಂಡೆ.
ಪ್ರಾರಂಭದಲ್ಲಿ ಕವನ ಬರೆದ ನೀವು ಕಥೆಗಾರರಾದ ಕುರಿತು ಸ್ವಲ್ಪ ಬೆಳಕು ಚೆಲ್ಲುವಿರಾ?

ಅಂಥದ್ದೇನು ಗಹನವಾದ ವಿಷಯವಲ್ಲ ಅದು. ನಮ್ಮ ಕ್ಲಾಸ್‍ಮೇಟ್ ಹುಡುಗಿಯರು ಕವನಗಳನ್ನು ಓದುತ್ತಿರಲಿಲ್ಲ(ನಗುತ್ತಾ). ಕಥೆಗಳನ್ನಾದರೆ ಹುಡುಗಿಯರು ಓದಬಹುದು ಎಂದು ಕಥೆಗಳನ್ನು ಬರೆದು ಸುಧಾಕ್ಕೆ ಕಳುಹಿಸಿದೆ. ಅದು ಪ್ರಕಟಾನೂ ಆಯ್ತು. ಅಂಥದ್ದೇನು ವಿಶೇಷ ಕಥೆಗಳಲ್ಲ ಅವು. ಪಿಯುಸಿಯಲ್ಲಿದ್ದಾಗ ಬರೆದವುಗಳು. ಓದು ಮುಗಿಸಿ ಮುಂಬಯಿಗೆ ಬರುವ ಹಂತದಲ್ಲಿದ್ದಾಗ ಉದಯವಾಣಿ ಕಥಾಸ್ಪರ್ಧೆಗೆ ಬರೆದ ಕಥೆ ‘ಇದ್ದಾಗ ಇದ್ಧಾಂಗ’ಕ್ಕೆ ಇಲ್ಲಿಗೆ ಬಂದಮೇಲೆ ಎರಡು ಬಹುಮಾನ ಬಂತು. ಮುಂಬಯಿಗೆ ಬಂದು ತಾಡದೇವನಲ್ಲಿದ್ದೆ. ಕೆಲಸ ಹುಡುಕುವುದು, ಇಂಟರ್‍ವ್ಯೂ ಕೊಡುವುದು, ಯಾರದೋ ಮನೆಯಲ್ಲಿದ್ದ ಆ ಸಂದರ್ಭದಲ್ಲಿ ನನ್ನ ಕಥೆಗೆ ಬಹುಮಾನ ಬಂದ ವಿಷಯ ಹೊತ್ತು ನನಗೊಂದು ಕಾರ್ಡು ಬಂತು. ನಾನು ಚರ್ಚ್‍ಗೇಟ್‍ಗೆ ಹೋಗಿ ಅಲ್ಲಿಯ ಮಾರುತಿಲೇನ್‍ನಲ್ಲಿದ್ದ ಕೋಟ್ಯಾನ್‍ರ ವಿದ್ಯಾನಿಧಿ ಬುಕ್ ಡಿಪೋ ಗೆ ಹೋಗಿ ಉದಯವಾಣಿಯ ಪ್ರತಿ ತಕ್ಕೊಂಡು ಹುತಾತ್ಮನಂತೆ ನಾರಿಮನ್ ಪಾಯಿಂಟ್‍ನಲ್ಲಿ ಓದುತ್ತ ಮೈಮರೆತ ಕ್ಷಣಗಳು ಈಗಲೂ ಜೀವಂತ.
ಇದ್ದಾಗ ಇದ್ಧಾಂಗ’ ವನ್ನು ನಿಮ್ಮ ಮೊದಲ ಕಥೆ ಅಂತ ನೀವು ಗುರುತಿಸಿಕೊಳ್ಳುತ್ತೀರಾ?
ಹೌದು. ಒಂದು ಸೇತುವೆ ಕಟ್ಟುವುದರಿಂದ ಊರು ಹಾಳಾಗುವುದು, ಮಾನವೀಯ ವಿನ್ಯಾಸಗಳು ಹದಗೆಡುವುದು-ಇಂಥದೊಂದು ತುಸು ವ್ಯಾಪಕ ಕಾಳಜಿಯನ್ನು ಹೊಂದಿದ್ದ ನನ್ನ ಮೊದಲ ಕಥೆ.
ನಿಮ್ಮ ‘ಕಾಯೋ ಆಟ’ ಕಥೆ ಜಯಂತ್ ಕಾಯ್ಕಿಣಿಯವರ ಕಥೆ ಅಲ್ಲವೇ ಅಲ್ಲ ಅನ್ನುವಷ್ಟು ಬೇರೆ ಇದೆ.
ಸರಿಯಾಗಿ ಹೇಳಿದಿರಿ. Waiting for Godot ಎನ್ನುವ ಸುಪ್ರಸಿದ್ಧ ನಾಟಕವನ್ನು ನೋಡಿದ ಪ್ರೇರಣೆಯಿಂದ ಬರೆದ ಕಥೆ ಅದು. ನನ್ನ ಕಥೆ ಅಲ್ಲ. ನಾನು ಬರೆಯುವುದಕ್ಕೆ ಮೊದಲು ಕಥೆ ಗೊತ್ತಿರುವುದಿಲ್ಲ. ಬರೀತಾ ಬರೀತಾನೆ ಕಥೆ ಗೊತ್ತಾಗೋದು. ಉದಾ:- ನಾನು ಕರ್ನಾಟಕ ಸಂಘಕ್ಕೆ ಬಂದೆ. ಅಲ್ಲಿಗೆ ಮಮತಾ ರಾವ್ ಬರುತ್ತಾರೆ ಎಂದು ಹೇಳಿದ್ದರು. ಆಫೀಸಿಗೆ ಹೋದೆ. ಮಮತಾ ರಾವ್ ಕಾಣಿಸಲಿಲ್ಲ. ಹೊರಗಡೆ ಬಂದೆ. ಅಲ್ಲಿ ಸಿಕ್ಕಿದವರೊಬ್ಬರು ಈಗಷ್ಟೇ ಮಮತಾ ರಾವ್ ಹೋದರೆಂದು ಹೇಳಿದರು. ನನಗೆ ಮಮತಾ ರಾವ್ ಯಾರೂಂತ ಪರಿಚಯವಿರಲಿಲ್ಲ. ಈಗ ನಾನು ಏನು ಮಾಡಲಿ ? ಅವರನ್ನು ಹುಡುಕಿಕೊಂಡು ಹೋಗುವುದೇ ಏನು ಅಂತ ಯೋಚಿಸಲಿಕ್ಕೆ ಪ್ರಾರಂಭಿಸಿದೆ. . . ಹೀಗೆ ಬರೆಯುತ್ತಾ ಹೋಗುತ್ತೇನೆ. ವಾಕ್ಯಗಳು ತಾಗಿತಾಗಿ ಶುರುವಾಗುವುದು. ಚಕಮಕಿ ಕಲ್ಲು ಉಜ್ಜಿದಂತೆ. ಯಾವತ್ತೂ ನಾನು ಕಥಾನಕವನ್ನು ಕಣ್ಣಮುಂದಿಟ್ಟು ಬರೆಯುವುದಿಲ್ಲ. ‘ಕಾಯೋ ಆಟ’ ಮಾತ್ರ ಪ್ಲಾನ್ ಮಾಡಿ ಬರೆದದ್ದು. Waiting for Godot ನ ಪ್ರಭಾವ. . . ಯಾರಿಗಾಗಿಯೋ ಕಾಯುತ್ತಾ ಇರುವುದು. . ಕೊನೆಗೂ ಆತ ಬರುವುದೇ ಇಲ್ಲ. ‘ಸಾಕ್ಷಿ’ಯಲ್ಲಿ ಈ ನಾಟಕದ ಕುರಿತು ಬರೆದ ಒಂದು ಲೇಖನವನ್ನು ಓದಿದ್ದೆ. ಮೀಸೆ ಮೂಡುತ್ತಿರುವ ಆ ಕಾಲದಲ್ಲೂ ಸ್ವಲ್ಪ ವಯಸ್ಸಿಗೆ ಮೀರಿದ ಗಾಂಭೀರ್ಯ ತೋರಿಸುವ ಎಳಸು ಯತ್ನ ಅದು. ಅದರಲ್ಲಿ ಎಲ್ಲಾ ಇಲ್ಲೇ ಆಗುವುದು(ತಲೆಯ ಕಡೆಗೆ ಬೆರಳುಮಾಡಿ) ಇಲ್ಲಿ (ಹೃದಯದ ಕಡೆಗೆ ಬೆರಳುಮಾಡಿ)ಏನೂ ಆಗುವುದೆ ಇಲ್ಲ.
ನಿಮ್ಮ ಮೇಲೆ ಪ್ರಭಾವ ಬೀರಿದ ಕನ್ನಡ ಕಥೆಗಾರರು ಯಾರು?
ನನ್ನನ್ನು ತೀವ್ರವಾಗಿ ಪ್ರಭಾವಿಸಿದ ಕನ್ನಡದ ಕತೆಗಾರರು ಮತ್ತು ಅವರ ಕತೆಗಳಲ್ಲಿ ಮುಖ್ಯವಾಗಿ- ರಾಘವೇಂದ್ರ ಖಾಸನೀಸ(ತಬ್ಬಲಿಗಳು), ಕೆ.ಸದಾಶಿವ(ಮತ್ತೆ ಮಳೆ ಹೊಯ್ಯುತಿದೆ), ಯಶವಂತ ಚಿತ್ತಾಲ(ಛಲ), ಪಿ. ಲಂಕೇಶ್( ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ), ಪೂರ್ಣಚಂದ್ರ ತೇಜಸ್ವಿ( ನಿಗೂಢ ಮನುಷ್ಯರು), ಶಾಂತಿನಾಥ ದೇಸಾಯಿ(ಕ್ಷಿತಿಜ).
ಮುಂಬಯಿ ಬದುಕು ನಿಮ್ಮ ಬರಹದ ಕ್ಷಿತಿಜವನ್ನು ವಿಸ್ತರಿಸಿದ ಬಗೆ?

ಅದೆಲ್ಲ ನನ್ನ ಕಥೆಯಲ್ಲಿ ಬರುತ್ತದಲ್ಲ. . ಮುಂಬಯಿ ಬಗ್ಗೆ ದೊಡ್ಡ chauvinist ನಾನು. ಮುಂಬಯಿಯನ್ನು ಪ್ರವಾಸಿಯಾಗಿ ನೋಡಿದವರಿಗೆ ಇಲ್ಲಿ ಬರೇ ಟ್ರಾಫಿಕ್ಕು, ಗಲೀಜು, ಧಾರಾವಿ, ಧೂಳು, ಬಿಸಿಲು, ಬೆವರು ಗರ್ದಿ ಅಷ್ಟೇ ಕಾಣುತ್ತದೆ. ನನಗಂತೂ ಮುಂಬಯಿ ದೊಡ್ಡ ಕಾಯಕದ ಕೈಲಾಸ. ಅದಕ್ಕಾಗಿ ಮುಂಬಯಿ ಬಹುವಚನದ ನಗರವಾಗಿದ್ದೂ ಏಕವಚನದಲ್ಲಿ ಮಾತನಾಡುತ್ತದೆ. ತೇರೆಕೊ. . ಮೇರೆಕೊ. .(ನಿನಗೆ. . ನನಗೆ) ಅಂತ. ಯಾಕೆಂದರೆ ನಾವೆಲ್ಲರೂ ಒಂದು ದೊಡ್ಡ ಕಾರ್ಖಾನೆಯ ಕಾರ್ಮಿಕರು. ಅವನ ನಸೀಬು ಏನೋ ಚೆನ್ನಾಗಿದೆ ಅಂತ M.D. ಆಗಿದ್ದಾನೆ. ನನ್ನ ನಸೀಬು ಏನೋ ಸ್ವಲ್ಪ ಎಡವಟ್ಟಾಗಿದೆ. . ನಾನು ಚಪರಾಸಿ ಆಗಿದ್ದೇನೆ. ಆದರೆ ಒಟ್ಟಿನಲ್ಲಿ ನಾವೆಲ್ಲರೂ ಕಾರ್ಮಿಕರು. ಈ ತರಹದ ಒಂದು ಸಲಿಗೆ ಮುಂಬಯಿ ಜೀವನಕ್ಕಿದೆ. ಕಾಯಕದಿಂದಾಗಿಯೇ ಈ ನಗರ ಜಾತಿ, ಮತ, ಧರ್ಮ, ಅಂತಸ್ತುಗಳ ಗೋಡೆಗಳನ್ನು ದಾಟಿಸುತ್ತದೆ.
ಮುಂಬಯಿ ಒಂದು ಜೀವಂತ ಜಾಗವಾಗಿ ನನ್ನನ್ನು ತುಂಬಾ ಮುಕ್ತ ಗೊಳಿಸಿತು. ಸಣ್ಣ ಊರಿನ ಸಣ್ಣ ಸಮಾಜದ ಸಂಕೋಲೆಗಳಿಂದ ಬಿಡುಗಡೆ ಮಾಡಿತು. ಒಬ್ಬ ಸಂಗೀತಕಾರ ತನ್ನ ಸಂಗೀತದಲ್ಲಿ, ಒಬ್ಬ ಕಲಾವಿದ ತನ್ನ ಪೈಂಟಿಂಗ್‍ನಲ್ಲಿ, ಒಬ್ಬ ಕಥೆಗಾರ ತನ್ನ ಕಥೆಯಲ್ಲಿ, ಕವಿ ತನ್ನ ಕವಿತೆಯಲ್ಲಿ ಯಾವ ಪರಿಸರವನ್ನು ಸೃಷ್ಟಿಸಲು ಯತ್ನಿಸುತ್ತಾನೋ ಆ ಜಾಗ ಇದೇ ಅಂತ ನನಗನ್ನಿಸುತ್ತದೆ. ನಮ್ಮ ತಾಯಿ ಇಳಿವಯಸ್ಸಿನಲ್ಲಿ ಇಲ್ಲಿ ಬಂದಿದ್ದರು. ಅವರಿಗೆ ಕೂಡ ಮುಂಬಯಿ ತುಂಬಾ ಖುಷಿಯಾಗುತ್ತಿತ್ತು. ಯಾಕೆಂದರೆ ಯಾವುದೇ ಹೆಣ್ಣಿಗೂ ಮುಂಬಯಿ liberating. ಕಾಮಾಟಿಪುರದ ಪಂಜರಗಳಲ್ಲಿ ಸಿಕ್ಕಿಬಿದ್ದ ನತದೃಷ್ಟೆ ಹೆಣ್ಣುಗಳನ್ನು ಹೊರತುಪಡಿಸಿ.! ಮುಂಬಯಿ ನನಗೆ ಒಂದು ಜೀವನಧರ್ಮವಾಗಿ ಕಂಡಿದೆ.

ಮುಂಬಯಿ ಎಂದರೆ ಜೀವನಮೌಲ್ಯಗಳನ್ನು ಕಳೆದುಕೊಳ್ಳಬೇಕಾದ ತಾಣ ಎನ್ನುವ ಪರಿಕಲ್ಪನೆಯನ್ನು ನಿಮ್ಮ ಬರಹದ ಮೂಲಕ ಸುಳ್ಳುಗೊಳಿಸಿದ್ದೀರಿ. ಒಂದು ಮಗುವಿನ ಮುಗ್ಧತೆಯನ್ನು, ಕುತೂಹಲತೆಯನ್ನು ಈ ಕಾಂಕ್ರೀಟ್ ಕಾಡಿನಲ್ಲಿ ಹೇಗೆ ಕಾಪಾಡಿಕೊಂಡಿರಿ?
ಮುಂಬಯಿ ಆವರಣಕ್ಕೇ ಆ ಮುಗ್ಧತೆ ಇದೆ. ನಾವು collective space ಆಗಿ ನೋಡಿದರೆ ಈ ಇಡೀ ಊರಿಗೆ ಕಳೆದುಕೊಂಡ ಮಗುವಿನ ಮುಗ್ಧತೆ ಇದೆ. ಮೇಲ್ಮೇಲೆ ನೋಡಿದರೆ ಗೊತ್ತಾಗುವುದಿಲ್ಲ. ಸ್ವಲ್ಪ ಆಳವಾಗಿ ನೋಡಿದರೆ ಎಲ್ಲರೂ ಎಲ್ಲರಿಗೂ ಸಂಬಂಧ ಪಡುತ್ತಾ ಹೋಗುತ್ತಾರೆ, ನನ್ನ ‘ನೀರು’ ಕಥೆಯಲ್ಲಿ ಅದನ್ನು ಒತ್ತಿಯೇ ಹೇಳಲು ಯತ್ನಿಸಿದ್ದೇನೆ. ಮುಗ್ಧತೆ ಅಂದರೆ ಏನು? ಮುಗ್ಧತೆ ಅಂದರೆ it is non judgemental state of mind.
ಬರವಣಿಗೆಯಲ್ಲಿ ಅದು ನಿಮಗೆ ಹೇಗೆ ಸಾಧ್ಯವಾಗುತ್ತದೆ?
ಬರೆಯುವಾಗ ನಾನು ನನ್ನ ಬರವಣಿಗೆಗೆ ಶರಣಾಗಿ ಹೋದರೇನೇ ಅದು ಸಾಧ್ಯವಾಗುವುದು. ಒಬ್ಬ ಗಾಯಕ ರಾಗದಲ್ಲಿ ಹೇಗೆ ಮುಳುಗುತ್ತಾನೋ ಹಾಗೇ ನಾನು ಸಹ ಮುಳುಗಿದ ವಿನಾಃ ನನಗೇನೂ ದಕ್ಕುವುದಿಲ್ಲ. ನಾನು ಉಳಿದವರಿಗಿಂತ ಶಾಣಾ ಆಗಿದ್ದೇನೆ; ನನಗೆ ಅವರಿಗಿಂತ ಬೇರೆಯೇ ಆದ ಜೀವನದರ್ಶನ ಸಿಕ್ಕಿದೆ. ಅವರಿಗೆಲ್ಲ ಪ್ರಸಾದ ವಿತರಣೆ ಮಾಡುತ್ತೇನೆ ಎಂದುಕೊಂಡು ಬಿಟ್ಟರೆ you loose the world. ಬರವಣಿಗೆಯ ರುಚಿಯೇ ಅದರಲ್ಲಿ involve ಆಗೋದು. ರಸ ಸಿದ್ಧಾಂತ ಅಂತ ಮಾತನಾಡುತ್ತಾರಲ್ಲ; ಅದಕ್ಕೆ ಒಳ್ಳೆಯ ವ್ಯಾಖ್ಯಾನ ಅಂದರೆ ಡಿವಿಜಿ ಅವರ ಮಾತು-‘ಅಂತರಂಗದ ವಿಕಾಸದಿಂದ ಉಂಟಾಗುವ ಭಾವೋತ್ಕರ್ಷವೇ ರಸ.’ ಇದಕ್ಕಿಂತ ಚೆನ್ನಾಗಿ ಇದನ್ನು ಹೇಳೋದು ಸಾಧ್ಯವಿಲ್ಲ. ಅನಾಮಿಕನಾಗಬೇಕು, ಅಜ್ಞಾತನಾಗಬೇಕು. ಆಗ ಈ ಅಂತರಂಗದ ವಿಕಾಸ ಸಾಧ್ಯ. ಮುಂಬಯಿ ಎಲ್ಲರಿಗೂ ಇಂಥ ಅನಾಮಿಕತೆಯನ್ನು ಕೊಡುತ್ತದೆ ಅನ್ನುವುದು ಅದರ ಅಂತಃಸತ್ವಗಳಲ್ಲಿ ಒಂದು. ಪ್ರತಿಸಲ ಬರೆಯಲು ಕೂತಾಗಲೂ ಅದು ಎದುರಿನ ಹಾಳೆಯಷ್ಟೇ ಶೂನ್ಯವಾದ ಸ್ಥಿತಿಯಿಂದ ಆರಂಭ. You are naked, you are exposed, you are vulnerable.
ಮುಂಬಯಿ ಬದುಕಿನ ಸಂಕೀರ್ಣತೆಯಿಂದ ಅಸ್ವಸ್ಥರಾಗದ-ನಿರಾಶೆಗೊಳ್ಳದ ಪಾತ್ರಗಳು ನಿಮ್ಮ ಕಥೆಗಳಲ್ಲಿವೆ. ಮುಖ್ಯವಾಗಿ ಯುವ ಮನಸ್ಸುಗಳ, ಒಂಟಿಜೀವಿಗಳ ತವಕ-ತಲ್ಲಣಗಳನ್ನು ನವಿರಾಗಿ ತಟ್ಟಿ ಸಕಾರಾತ್ಮಕವಾಗಿ ಕಥೆಗಳನ್ನು ಬರೆಯಲು ಹೇಗೆ ಸಾಧ್ಯವಾಯಿತು?
ಸು. ರಂ. ಎಕ್ಕುಂಡಿಯವರು ಒಂದು ಕಡೆ ಹೇಳುತ್ತಾರೆ. ಅಣ್ಣತಮ್ಮಂದಿರು/ದಾಯಾದಿಗಳು ಜಗಳಾಡಿ ತಮ್ಮ ಮನೆಗೆ ಪಾಗಾರ(ಗೋಡೆ)ಯನ್ನು ಹಾಕುತ್ತಾರೆ. ಆದರೆ ಒಂದು ಮಳೆ ಬಿದ್ದರೂ ಸಾಕು. ಆ ಪಾಗಾರ ಹಸುರಾಗಿ ಅಲ್ಲಿಯೂ ಹೂ ಅರಳುತ್ತದೆ ! ಇಟ್ಟಿಗೆ ನೋಡಿ ಹೆಂಗ್ ಮಾಡ್ತಾರೆ? ಬೆಂಕಿಯಲ್ಲಿ ಸುಟ್ಟು ತಯಾರಿಸುತ್ತಾರೆ. ಆದರೆ ಮಳೆಗೆ ನೆಂದ ತಕ್ಷಣ ಇಟ್ಟಿಗೆ ಕೂಡ ಹಸುರಾಗುತ್ತದೆ. ಬೆಳಕಿನ ಕಡೆ ಚಿಗುರುವುದು ಈ planet ನ ಲಕ್ಷಣ ಅದು. ಮುಂಬಯಿ ಒಂದು ಕರ್ಮಯೋಗದ ಪ್ರತ್ಯಕ್ಷ ಶಾಲೆ. ಇಲ್ಲಿ ಶೇಖರಿಸಿಡುವುದಕ್ಕೆ ಜಾಗಾನೇ ಇಲ್ಲ. ಸಣ್ಣಸಣ್ಣ ಜೋಪಡಿಗಳನ್ನು ನೋಡಿ. ಕೆ.ಕೆ. ಹೆಬ್ಬಾರರ ರೇಖಾಚಿತ್ರಗಳಷ್ಟು ನಗ್ನ, ಸರಳ. ಹಾಗಾಗಿ ಶೇಖರಣೆ ಮಾಡಲಿಕ್ಕೆ physical ಜಾಗವೇ ಇಲ್ಲದಿರುವುದರಿಂದ ಒಂಥರ mental space ಜಾಸ್ತಿ.

ಇಲ್ಲಿಯ ಅಪರಿಚಿತ ಮುಖಗಳಲ್ಲಿ ಪರಿಚಿತ ಸಂಬಂಧಗಳನ್ನು ಸಲೀಸಾಗಿ ಕಟ್ಟಿಕೊಡುವ ನಿಮ್ಮ ಪರಿ ವಿಶಿಷ್ಟವಾದುದು. ಅದರ ಬಗ್ಗೆ ಸ್ವಲ್ಪ ಹೇಳುತ್ತೀರಾ ?
ಸಾಹಿತ್ಯ ಎಂದರೆ ಪರಿಚಿತದಲ್ಲಿ ಅಪರಿಚಿತವನ್ನು ಹಾಗೂ ಅಪರಿಚಿತದಲ್ಲಿ ಪರಿಚಿತವನ್ನು ಕಾಣುವುದು. ಇಲ್ಲಿ ಒಂದು ಹತ್ತು ವರ್ಷ ಇದ್ದರೆ ಪ್ರತಿಯೊಂದು ಹೊಸಮುಖವೂ ನಿಮಗೆ ಪರಿಚಿತ ಅನಿಸಲು ತೊಡಗುತ್ತದೆ. ಹೊಸದಾಗಿ ಕಂಡ ಮುಖದಲ್ಲೂ ಅದರ ಕಥೆ ಗೊತ್ತಾಗುವಂಥ ಒಂದು ಸಂತೆಯ ಸಖ್ಯ ನಿಮ್ಮದಾಗುತ್ತದೆ.
ಸೂಕ್ಷ್ಮಗ್ರಾಹಿಯಾದ ನೀವು ಉತ್ತರ ಕರ್ನಾಟಕದ ಗೋಕರ್ಣ ಮತ್ತು ಮಹಾನಗರ ಮುಂಬಯಿ ಎರಡೂ ಜೀವನಮೌಲ್ಯಗಳನ್ನು ನಿಮ್ಮ ಕಥೆಗಳಲ್ಲಿ ಒತ್ತೊಟ್ಟಿಗೇ ಬರೆಯುತ್ತ ಬಂದಿದ್ದೀರಿ ಅದು ಹೇಗೆ ?

ಯಾಕೆಂದರೆ they co exist. ಕೆಲವರು ವಲಸೆ ಪದ ಬಳಸುತ್ತಾರೆ. ಊರನ್ನು ಬಿಟ್ಟು ಬಂದೆವು ಅನ್ನುತ್ತಾರೆ ಕೆಲವರು. ನನ್ನ ಮಟ್ಟಿಗೆ ಯಾವುದನ್ನೂ ಬಿಟ್ಟು ಬರಲಿಕ್ಕೆ ಆಗುವುದಿಲ್ಲ. ಅದು ನಾವು ಹೋದಲ್ಲಿ ಇರುತ್ತದೆ. ನಾನು ಹೋದಲ್ಲಿ ನನ್ನೊಡನೆ ಗೋಕರ್ಣ ಇರುತ್ತದೆ. ನೆನಪಿನ ಬಗ್ಗೆಯೂ ಒಂದು ವಿಷಯ ಹೇಳಬೇಕು. ಹಳೆಯ ನೆನಪು ಅನ್ನುತ್ತಾರೆ ಅದು ತಪ್ಪು. ನೆನಪು ಯಾವಾಗಲೂ ಹೊಸತು. ನೆನಪು ಈವತ್ತು ಆಗುವಂತದ್ದು. ಹಳೇ ಮರದಲ್ಲಿ ಬಿಡುವ ಹೊಸ ಹೂವಿನಂತೆ. ಯಾಕೆಂದರೆ ಈವತ್ತಿನ ಬೆಳಕು, ಈವತ್ತಿನ ಗಾಳಿ ಈವತ್ತಿನ ತೇವದಿಂದ ಅರಳಿದ ಹೂವು ಅದು. ಅಂತೆಯೇ ಅದು ಸದಾ ಹೊಸತು. ನೆನಪಿಗೆ ಇಂದಿನ ಹಂಗು ಅನಿವಾರ್ಯ.
ಮುಂಬಯಿಯ ಬಹಳಷ್ಟು ಬರಹಗಾರರು ಮುಂಬಯಿಯ ಬದುಕಿಗೆ ಪ್ರತಿರೋಧವೆಂಬಂತೆ ಹುಟ್ಟೂರಿನ ನೆನಪಿನಲ್ಲಿಯೇ ಮುಳುಗಿರುವುದನ್ನು ಕಾಣುತ್ತೇವೆ. ಆದರೆ ನಿಮ್ಮ ಕಥೆಗಳಲ್ಲಿ ಅದು ಇಲ್ಲ.
‘ಪಟ್ಟಣದಲ್ಲಿರುವವರೆಲ್ಲ ಹಾಳು. ಹಳ್ಳಿಯಲ್ಲಿರುವುದೆಲ್ಲ ಒಳ್ಳೆಯದು’ ಎನ್ನುವ stereotyping ಅಪಾಯಕಾರಿ. ನೀವು ಪ್ರತ್ಯಕ್ಷ ಹೋಗಿ ನೋಡಿದರೆ ಎಲ್ಲಾ ಸ್ಥಳದಲ್ಲಿಯೂ ಮನುಷ್ಯನ ಮನಸ್ಥಿತಿ ಅಷ್ಟೇ ವಿಶಿಷ್ತವೂ, ವ್ಯಗ್ರವೂ ಆಗಿರುತ್ತದೆ. ದಕ್ಷಿಣ ಕನ್ನಡದ ಕರಾವಳಿಯ ಕೆಲಭಾಗಗಳು ಮೌಢ್ಯ ಮತ್ತು ಮತೀಯ ದ್ವೇಷಗಳ ಮೂಸೆಯಾಗಿರುವುದನ್ನು ನೋಡಿದರೆ ಆತಂಕವಾಗುತ್ತದೆ. ಸ್ವಾತಂತ್ರ ಸೇನಾನಿಗಳು, ರೈತ ಚಳವಳಿಗಾರರು, ಚಿಂತಕರು, ಸಾಹಿತಿಗಳು, ಕಾರ್ನಾಡ ಸದಾಶಿವರಾಯರಂತವರು, ಸ್ತ್ರೀ ಶಿಕ್ಷಣ, ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಿದಂತಹ ವಿಚಾರವಂತರ ಬೀಡು ಇದು. ಇಂದು ಜಾತೀಯ ಮತೀಯ ಸಂಘರ್ಷಗಳಿಗೆ ಕೇಂದ್ರಸ್ಥಾನವಾಗಿ ಮಾರ್ಪಟ್ಟಿರುವುದು ವಿಷಾದನೀಯ ಸಂಗತಿ. ಹೀಗಿದ್ದಾಗ ಒಳ್ಳೆಯದು, ಕೆಟ್ಟದು ಎನ್ನುವುದನ್ನು ಪ್ರಾದೇಶಿಕವಾಗಿ ಹೇಗೆ ಗ್ರಹಿಸುತ್ತೀರಿ!
ಮುಂಬಯಿಯ ಹಿನ್ನೆಲೆಯಲ್ಲಿ ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ ಮುಂತಾದ ಕಥೆಗಾರರು ಬರೆದಿದ್ದರೂ ನಿಮ್ಮ ಕಥೆಗಳು ವಸ್ತು, ಶೈಲಿ, ವಿವರ ಭಾಷೆಯ ದೃಷ್ಟಿಯಿಂದ ವಿಶಿಷ್ಟವಾಗಿವೆ. ಆದರೂ ಕನ್ನಡದ ವಿಮರ್ಶೆ ನಿಮ್ಮ ಯತ್ನಗಳನ್ನು ಗಂಭೀರವಾಗಿ ಗ್ರಹಿಸಿಲ್ಲ ಎನ್ನುವ ಬೇಸರ ನಿಮಗಿದೆಯೇ?
ಬೇಸರ ಅಲ್ಲ. ಒಂದು ಬಗೆಯ ಅಪೂರ್ಣಭಾವ. ಯಾಕೆಂದರೆ ವಿಮರ್ಶೆ ಅಂದರೆ ಲೇಖಕನ ಯತ್ನಗಳ ರಚನಾತ್ಮಕ ವಿಸ್ತರಣೆ ಎಂದು ತಿಳಿದವನು ನಾನು. ಚಿತ್ತಾಲರನ್ನು ಒಮ್ಮೆ ನಾನು ಕೇಳಿದ್ದೆ ‘ನೀವು ಇಷ್ಟು ಸೆನ್ಸಿಟಿವ್ ಆದರೆ ಹೇಗೆ?’ ಅಂತ. ಅದಕ್ಕೆ ಅವರಂದಿದ್ದರು-‘ಆಲ್ವೋ ಕಥೆಯಲ್ಲಿ ನಾನು ಸೆನ್ಸಿಟಿವ್ ಆಗಬೇಕೂಂತ ಬಯಸುತ್ತೀರಿ. ಉಳಿದಂತೆಯೂ ನಾನು ಸೆನ್ಸಿಟಿವ್ ಅಂತ ನಿಮಗೆ ಯಾಕೆ ತಿಳಿಯೂದಿಲ್ಲ? ಸೆನ್ಸಿಟಿವ್ ಆಗಿರುವುದರಿಂದಲೇ ಕಥೆಗಳನ್ನು ಬರೆಯಲಿಕ್ಕೆ ಸಾಧ್ಯವಾಯಿತು.’
ನವ್ಯ ಮುಗಿಯುತ್ತ ಬಂದು ಬಂಡಾಯದ ಗಾಳಿ ಬೀಸತೊಡಗಿದಾಗ ನಾನು ಬರೆಯಲಿಕ್ಕೆ ಪ್ರಾರಂಭಿಸಿದ್ದು. ನವ್ಯದ ಕೊನೆಯ ಸ್ಯಾಂಪಲ್ ನಾನು. ಸಾಮಯಿಕ ಚಳುವಳಿಯಿಂದ ದೂರ ಮುಂಬಯಿಯಲ್ಲಿ ಇದ್ದುದರಿಂದಲೇ ನನ್ನದೇ ಆದ ಲೋಕವೊಂದನ್ನು ತೀವ್ರವಾಗಿ ಕಟ್ಟಿಕೊಳ್ಳುವ ಹಟ ನನ್ನದಾಯಿತು. ಒಬ್ಬ ಸೃಜನಶೀಲ ಬರಹಗಾರ ನಿತ್ಯದ ಬದುಕಿನಿಂದ ಸದಾ ಹೊಸ ಸ್ಪಂದನವನ್ನು, ಪ್ರೇರಣೆಯನ್ನು ಪಡೆಯುತ್ತಲೇ ಇರುತ್ತಾನೆ. ಅಂತೆಯೇ ಬರವಣಿಗೆಯಲ್ಲಿ ಆತ ಹೊಸತಿಗಾಗಿ ಹವಣಿಸುತ್ತಾನೆ. ಅಂದಾಗ ವಿಮರ್ಶೆ ಕೂಡ ತನ್ನ ಸಂವೇದನೆಯಲ್ಲಿ ನಿತ್ಯದ ಹೊಸ ಸೂಕ್ಷ್ಮಗಳಿಗೆ update ಆಗಬೇಕು. ಅದು ಆಗದೆ ವಿಶ್ವವಿದ್ಯಾಲಯಗಳ ಲೈಬ್ರರಿಯಲ್ಲಿ ಕುಳಿತು ಕನ್ನಡದಲ್ಲಿ ಹೊಸತೇನೂ ಬಂದಿಲ್ಲ ಎಂದು ಚರ್ಚಿಸಿದರೆ ಆಗುವುದಿಲ್ಲ. ನಾನು ಮುಂಬಯಿಗೆ ಹೊಸತಾಗಿ ಬಂದಿದ್ದಾಗ ಟ್ರೇನಿನಲ್ಲಿ ಗರ್ಭಪಾತಕ್ಕೆ 35 ರೂಪಾಯಿ ಎನ್ನುವ ಜಾಹಿರಾತು ನೋಡಿದ್ದೆ. ಆನಂತರ ಅದು 75 ರೂಪಾಯಿ ಆಯಿತು. ಈಗ ಎಷ್ಟೋ ಗೊತ್ತಿಲ್ಲ. ನನ್ನ ಕವಿತೆಯಲ್ಲಿ ಅದು ಬಂದರೆ ಮುಂಬಯಿಯಲ್ಲಿರುವ non-critic ಗಳಿಗೂ ಅರ್ಥವಾಗುತ್ತದೆ. ಅದು ಮುಂಬಯಿಯಲ್ಲಿರದ ಸಾಹಿತ್ಯದ ವಿದ್ಯಾರ್ಥಿಗೆ ತಿಳಿಯುವುದು ಕಷ್ಟ.
ಹಾಗೆ ನೋಡಿದರೆ ನನ್ನ ಕಥೆಗಳಲ್ಲಿ ಬರುವ ಯಾವ ಪಾತ್ರಗಳೂ ಹೆಸರಿನಿಂದ ಕನ್ನಡದವರಲ್ಲ. ಆಸಾವರಿ ಲೋಖಂಡೆ, ಮುಚ್ಛೀಮಿಯಾ, ಏಕಾಂತ್ ಭಾವೆ, ದಗಡೂ ಪರಬ ಇತ್ಯಾದಿ. ಈ city ನನ್ನ liberate ಮಾಡುವಂತೆ ಈ ಪಾತ್ರಗಳೂ ಕೂಡ ನನ್ನ liberate ಮಾಡುತ್ತವೆ. ಗೋಕರ್ಣದ ಕೆಲವು ಪಾತ್ರಗಳು ಬರುತ್ತವೆ. ಆದರೆ ಅವು ನನ್ನ ಭಾವನಾತ್ಮಕ ಜಗತ್ತಿಗೆ ಸಂಬಂಧ ಪಟ್ಟವು. ಅದನ್ನು ಬಿಟ್ಟರೆ ಅನಾಮಿಕವಾದ ಮಾನವೀಯ ಜಗತ್ತಿನ ಮುಕ್ತ ಕಥನಕ್ಕೆ ಕನ್ನಡೇತರ ಪಾತ್ರಗಳೇ ಹೆಚ್ಚಿನ ಇಂಬು ಕೊಟ್ಟಿವೆ.

ಮುಂಬಯಿ ಬಿಟ್ಟು ಹತ್ತು ವರ್ಷಗಳು ಕಳೆದವು. ಆದರೂ ಇತ್ತೀಚೆಗೆ ಪ್ರಕಟಗೊಂಡ ‘ಚಾರ್ ಮಿನಾರ್’ ಕಥಾಸಂಕಲನದಲ್ಲಿರುವ ಅನೇಕ ಕಥೆಗಳು ಮುಂಬಯಿಗೆ ನೇರವಾಗಿ ಸಂಬಂಧ ಪಟ್ಟವು. ಮುಂಬಯಿಯ ಹಿಡಿತದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಅಂತ ಅನಿಸುತ್ತಿದೆಯೇ?
ಖಂಡಿತವಾಗಿಯೂ. ಮುಂಬಯಿಗೆ ಮೊದಲು ಬಂದಾಗ ನಾನು ಬೃಹತ್ ಮುಂಬಯಿಯ ಸಣ್ಣಭಾಗವಾದಂತೆ ಅನಿಸಿತ್ತು ಆದರೆ ಈಗ ಇಡೀ ಮುಂಬಯಿ ನನ್ನ ಭಾಗವಾಗಿದೆ ಅಂತ ಅನಿಸುತ್ತದೆ. ಪರಸ್ಥಳದಿಂದ ಮುಂಬಯಿಗೆ ಬರುತ್ತೇವಲ್ಲ ನಮಗೆ ಸಿಗುವ ಮುಂಬಯಿ ಇಲ್ಲಿ ಹುಟ್ಟಿ ಬೆಳೆದವರಿಗೆ ಸಿಕ್ಕುವುದಿಲ್ಲ. ಯಾಕೆಂದರೆ ಅವರು ಅವರ ಉಪನಗರಗಳ ಆವರಣಕ್ಕಷ್ಟೆ ಸೀಮಿತವಾಗಿರುತ್ತಾರೆ. . ವಲಸೆ ಬಂದವರಿಗಿರುವ ಮಾನಸಿಕ ಸ್ವಾತಂತ್ರ್ಯ ಅವರಿಗಿರುವುದಿಲ್ಲ.
ನೀವು ಮುಂಬಯಿಯ ಸಂದಿ-ಗೊಂದಿಗಳನ್ನು ತಿರುಗಿ ನಗರದ ನರನಾಡಿಗಳನ್ನು ಮಿಡಿದವರು.
ನಾನು ಮೊದಲು ತಾಡದೇವ್‍ನಲ್ಲಿದ್ದೆ. ನಂತರ ಗಿರ್‍ಗಾಂವ್, ಗೋರಾಯಿ, ಮುಲುಂಡ್, ಅಂಧೇರಿ, ಡೊಂಬಿವಲಿ ಹೀಗೆ ಹತ್ತಾರು ವಿಳಾಸಗಳಿದ್ದವು ನನಗೆ. ಈ ತರಹದ ಬ್ಯಾಚುಲರ್ ಬದುಕು ಕೂಡ ನನಗೆ ಮುಂಬಯಿಯನ್ನು ಪರಿಚಯಿಸಿತು. ಹೊರಗಿನವನಾಗಿ ತಿರುಗಾಡುವಾಗ ಒಂದುತರಹದ adventure ಇರುತ್ತೆ.. ಈ ತರಹದ anonymity and outsider element ನನ್ನನ್ನು ತುಂಬಾ enrich ಮಾಡಿದೆ.

ನಿಮ್ಮ ಕಥೆಗಳಲ್ಲಿ ಅದ್ಭುತವಾದ ರೂಪಕಗಳನ್ನು ಬಳಸುತ್ತೀರಿ. ಅದು ನಿಮಗೆ ಹೇಗೆ ಸಾಧ್ಯವಾಗುತ್ತದೆ. ಉದಾ-‘ಗೇಟ್ ವೇ’ ಕಥೆಯಲ್ಲಿ-ಕಮ್ಯೂನಿಕೇಶನ್ ಟಾವರ್ ಬಗ್ಗೆ ಹೇಳುವಾಗ- ರಜೆಯಲ್ಲಿದ್ದ 30 ಮಹಡಿಗಳ ಆ ಶಿಖರ ಒಂದು ಸ್ತಬ್ಧ ಸಾಮೂಹಿಕ ಬೃಹತ್ ಗೋರಿಯಂತೆ ನಿಂತಿತ್ತು.; ಇನ್ನು ರಜಾ ದಿನವಾದ ಕಾರಣ ಖಾಲಿಖಾಲಿಯಾಗಿ ಕಾಣುವ ಫ್ಲೋರಾ ಫೌಂಟನ್ನಿನ ಭಾಗ ಮುಂಬಯಿ ಶಹರವು ತನ್ನ ಖಾಸಗಿ ಕೌಟುಂಬಿಕ ಕ್ಷಣದಲ್ಲಿ ಬನಿಯನ್ನು ಹಾಕಿಕೊಂಡು ಕೂತಂತಿತ್ತು.; ಇನ್ನು ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕಥೆಯಲ್ಲಿ ಮಧ್ಯಾಹ್ನದ ಸೂರ್ಯ ರೇಲ್ವೇ ಹಳಿಗಳ ಮೇಲೆ ಉದ್ದಕ್ಕೂ ಆತ್ಮಹತ್ಯೆ ಮಾಡುವಂತೆ ಮಲಗಿದ್ದ.; ‘ಮೋಗ್ರಿಯ ಸತ್ಸಂಗ’ ಕಥೆಯಲ್ಲಿ ಹಳೆಯ ಕಟ್ಟಡಕ್ಕೆ ಕಂಬ ಕೊಟ್ಟಿರುತ್ತಾರಲ್ಲ ಅದನ್ನು -ಹೊಸದಾಗಿ ನೋಡಿದವರಿಗೆ ಊರುಗೋಲು ಹಿಡಿದು ‘ನನ್ನ ಆಯಸ್ಸು ಇನ್ನೇನು ಮುಗೀತಪ್ಪಾ’ ಎನ್ನುವ ಅಜ್ಜನಂತೆ ಕಾಣುತ್ತಾನೆ ಎಂದು ವಿವರಿಸುತ್ತೀರಿ. ಅದರ ಕುರಿತು ಸ್ವಲ್ಪ ಹೇಳುತ್ತೀರಾ?
Intensely experienced. .ಅದೆಲ್ಲ ಅನುಭವದ ಪಾತಳಿಯಲ್ಲಿಯೇ ಆಗಬೇಕು. ಹಾಗಾದಾಗ ಮಾತ್ರ ಅದು ಬರಹದಲ್ಲಿ ಇಳಿಯುತ್ತದೆ. ಅದನ್ನೇ ಬರೆಯಬೇಕೆಂದು ಕೂತರೆ ಅದು ಬರುವುದಿಲ್ಲ. ಒಂದು ಅನುಭವ ನಿಮ್ಮನ್ನು ಆಳವಾಗಿ ಕಲಕಿದ್ದರೆ ಖಂಡಿತ ಅದು ಒಂದಲ್ಲಾ ಒಂದು ದಿನ ಬರವಣಿಗೆಯಲ್ಲಿ ಬಂದು ಬಿಡುತ್ತದೆ.
ಮಕ್ಕಳ ಕುರಿತಾದ ಮನೋವೈಜ್ಞಾನಿಕ ಚಿತ್ರಣಗಳನ್ನು ನಿಮ್ಮ ಕಥೆಗಳು ನೀಡಿವೆ. ಅದು ‘ಹಾಲಿನ ಮೀಸೆ’ಯ ಪುಂಡೂ ಇರಬಹುದು, ‘ಬಣ್ಣದ ಕಾಲು’ಕಥೆಯ ಚಂದೂ ಇರಬಹುದು ಅಥವಾ ಅಸಂಖ್ಯಾತ ಅನಾಮಿಕ ಪುಟಾಣಿಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದೀರಿ. ನಿಮ್ಮ ಬಾಲ್ಯವನ್ನು ಮುಂಬಯಿಯಲ್ಲಿ ಕಳೆದಿಲ್ಲ ನೀವು. ಆದರೂ ಅದು ಹೇಗೆ ಸಾಧ್ಯವಾಯಿತು? ಮುಖ್ಯವಾಗಿ ನಿಮ್ಮ ಕಥೆಗಳಲ್ಲಿ ಮನೆಯಲ್ಲಿ ಕೆಲಸಮಾಡಲಿಕ್ಕೆ ಕರೆತರುವ ಸಣ್ಣಮಕ್ಕಳ ಕುರಿತಾಗಿ ಬಹಳ ಮಾರ್ಮಿಕ ಚಿತ್ರಣವನ್ನು ನೀಡುತ್ತೀರಿ.
ಮನೆಕೆಲಸಕ್ಕೆಂದು ಸಣ್ಣ ಮಕ್ಕಳನ್ನು ಊರಿನಿಂದ ಕರೆತರುತ್ತಾರಲ್ಲ ಅದು ನನ್ನನ್ನು ತುಂಬಾ ಕಾಡುವ ವಿಷಯ. ಹಾಗೆ ತಂದ ಮಗು ಆ ಮನೆಯಲ್ಲಿರುವ ಮಗುವಿಗಿಂತ ಒಂದೆರಡು ವರ್ಷ ಮಾತ್ರ ದೊಡ್ಡದಿರುತ್ತದೆ. ಗೆಳೆಯ ಮಾರುತಿ ಶಾನುಭಾಗರ ಮನೆಗೆ ಹೋದಾಗ ನಡೆದ ನಿಜಘಟನೆಯಿಂದ ಪ್ರೇರಿತನಾಗಿ ಬರೆದ ಕಥೆ ಅದು(ಹಾಲಿನ ಮೀಸೆ). ಆ ಎರಡು ಪುಟಾಣಿ ಮಕ್ಕಳ ನಡುವಿನ ಮೌನ ಇನ್ನೂ ನನ್ನನ್ನು ಕಾಡುತ್ತದೆ. ಅದೇ ರೀತಿ-‘ಸೇವಂತಿ ಹೂವಿನ ಟ್ರಕ್ಕು’. ನಮ್ಮ ಗೋಕರ್ಣದಲ್ಲಿ ನಡೆದ ಘಟನೆ. ನಮ್ಮ ಪರಿಚಿತರ ಮನೆಯಲ್ಲಿ ಮನೆತುಂಬಾ ಹೆಣ್ಮಕ್ಕಳು. ಮನೆಯಲ್ಲಿದ್ದ ಹಿರಿಯ ಸಂಬಂಧಿಕರಿಗೆ ಬಿಳಿತೊನ್ನು ಆಗಿತ್ತು. ತಮ್ಮ ಹೆಣ್ಮಕ್ಕಳ ಮದುವೆ ಇದರಿಂದ ಕಷ್ಟ ಎಂದು ನಿಶ್ಚಯಿಸಿ ಮನೆಯವರು ಅವರ ಊಟ-ತಿಂಡಿ ಎಲ್ಲಾ ಕಡಿಮೆ ಮಾಡುತ್ತಾರೆ. ಆಕೆ ಕಿಟಕಿಯಿಂದ ನಾನು ಆಚೀಚೆ ಹೋಗುವಾಗ ‘ಆನೂ’ ಎಂದು ಕರೆದು ಮಾತಾಡಿದ್ದುಂಟು. ಡಾಕ್ಟರರ ಹತ್ತಿರ ತಮ್ಮ ಕಷ್ಟವನ್ನು ಹೇಳಿಕೊಂಡು ಅವರು ಕೊಟ್ಟ ಗುಳಿಗೆಯನ್ನು ಆಕೆಗಿತ್ತು ನೀನೆ ತೆಗೆದುಕೋ ಅಂತ ಹೇಳಿದರೆ ಆಕೆ ಅದನ್ನು ನಾಳೆ ತಗೋತೇನಿ ಅಂತ ಹೇಳುತ್ತಾರೆ ಎನ್ನುವುದನ್ನು ನನ್ನ ತಾಯಿಯ ಬಳಿ ಆ ಮನೆಯವರೊಬ್ಬರು ಹೇಳುವುದನ್ನು ನಾನು ಕೇಳಿದ್ದೆ. ನಾನಿನ್ನೂ ಶಾಲೆಯಲ್ಲಿದ್ದ ದಿನಗಳು ಅವು. ಆದರೆ ‘ನಾಳೆ ತಗೋತೇನಿ’ ಅಂತ ಹೇಳಿದ ಮಾತು ನನ್ನ ತಲೆಯಲ್ಲಿ ಕುಳಿತು ಬಿಟ್ಟಿತ್ತು. ಅದನ್ನೇ ಬರೀಬೇಕು ಅಂತ ಕುಳಿತುಕೊಂಡರೆ ಅದು ಬರುವುದಿಲ್ಲ. ಮತ್ತೇನೋ ಮತ್ತೆಂದೋ ಬರೆಯಲಿಕ್ಕೆ ಹೊರಟಾಗ ಅದು ಹೊರಬೀಳುತ್ತದೆ. ನಾವು ಅನುಭವಿಸಿದ್ದೆಲ್ಲ ಒಳಗಡೆನೇ ಇರುತ್ತದೆ. ಕೊನೆಗೂ ನನ್ನ ಮುಂಬಯಿಯ ಕಥೆಯಲ್ಲಿ ಅದು ಹೊಮ್ಮಿದ್ದು ಹಾಗೆ.
ನಿಮ್ಮ ಕಥೆಗಳಲ್ಲಿ ಅತ್ಯಂತ ಸತ್ವಪೂರ್ಣವಾದ ಸ್ತ್ರೀಜಗತ್ತನ್ನು ಕಟ್ಟಿಕೊಟ್ಟಿದ್ದೀರಿ. ನನಗೆ ತುಂಬಾ ಇಷ್ಟವಾದ ಪಾತ್ರಗಳೆಂದರೆ, ‘ಸಮುದ್ರ’ ಕಥೆಯ ಸೀತಮ್ಮ, ‘ತನ್ಮಯಿಯ ಸೂಟಿ’ಯ ಕುಶೀಕಾಕಿ, ‘ಅಮೃತಬಳ್ಳಿ ಕಷಾಯ’ದ ಮಾಯೀ; ಮಾತ್ರವಲ್ಲದೆ ಆಸಾವರಿ ಲೋಖಂಡೆ, ಭಾಮಿನಿ, ಮಧುಬಾಲಾ . . ನೀವು ಸೃಷ್ಟಿಸಿರುವ ಎಲ್ಲಾ ಮಹಿಳೆಯರಿಗೆ ಯಾರ ಹಂಗಿನ ಅವಶ್ಯಕತೆಯೇ ಇಲ್ಲ. ಬಹಳ ಸಶಕ್ತ ಮಹಿಳೆಯರ ಚಿತ್ರಣವನ್ನು ನಿಮ್ಮ ಕಥೆಯಲ್ಲಿ ಕಾಣಬಹುದು.
ಇಡೀ ಸಂಸಾರದ ಭಾರ ಗೋವರ್ಧನ ಪರ್ವತದಂತೆ ಸ್ತ್ರೀಯ ಮೇಲೆ ಇಡಲಾಗಿದೆ. ಬೆಳಗಿನಿಂದ ಆಕೆಯ ಕಾಯಕ ಪ್ರಾರಂಭವಾಗುತ್ತದೆ. ನನ್ನ ತಾಯಿ ಬೆಳಗ್ಗೆ ಎದ್ದು ಒಲೆ ಉರಿಸುವ ದೃಶ್ಯ ಕಣ್ಣಿಗೆ ಕಟ್ಟುವಂತಿದೆ. ದಿನವನ್ನು ಪ್ರಾರಂಭಿಸುವಾಗಿನ, ಒಲೆಯ ಪ್ರಕಾಶದಲ್ಲಿ ಕಾಣುವ ಅವಳ ನಿರ್ವಿಕಾರವಾದ ಮುಖ.! ಈ ಒಲೆಯ ಕಾವೇ ಇಡಿ ವಿಶ್ವವನ್ನು ಬೆಚ್ಚಗಿರಿಸಿದೆ. ಸ್ವಲ್ಪ ಕಣ್ಣುಜ್ಜಿಕೊಂಡು ನೋಡಿದರೆ, ಅಕ್ಕಪಕ್ಕ ಸುತ್ತಮುತ್ತ ಅಸಾಮಾನ್ಯ ಅಗಣಿತ ಅನಾಮಿಕ ಸೀತಮ್ಮ, ಮೋಗ್ರಿ, ಮಧುಬಾಲಾ, ಆಸಾವರಿ, ಭಾಮಿನಿ, ಮಂಜರಿ, ಪುನರ್ವಸು. . . ಇವರೆಲ್ಲಾ ಕಾಣುತ್ತಾರೆ. ಇಂಥ ಕೆಲವರು ನನ್ನ ಕಥೆಗಳಿಗೂ ಬಂದು ಹೋಗಿರುವುದು ನನ್ನ ಅದೃಷ್ಟ. ನನ್ನ ‘ಚಂದ್ರಶಾಲೆ’ಯಲ್ಲಿ ಬರುವ ಕಾಯಕ್ಕ ತನ್ನ ಸಂಕೋಲೆಯನ್ನೇ ಆಟಿಗೆ ಮಾಡಿಕೊಂಡು ಇಡಿ ಸಮಾಜವನ್ನೇ ಆಟಕ್ಕೆ ಕರೆಯುವಂಥವಳು. ‘ಒಪೆರಾ ಹೌಸ್’ನಲ್ಲಿ ಬರುವ ಕೆನಡಿ ಬ್ರಿಜ್ಜ್‍ನ ಪೋರಿಯರಲ್ಲಿರುವ ಲವಲವಿಕೆಯ ಜೀವಂತ ಅಧ್ಯಾತ್ಮ ಎಲ್ಲರನ್ನೂ ಬಿಡುಗಡೆ ಮಾಡುವಂತದ್ದು. ಇವು ಯಾವ ಪುಸ್ತಕದ ಕಪಾಟಿನಲ್ಲಿ ಸಿಗುವುದಿಲ್ಲ. ನಮ್ಮ ರೂಢಿಗ್ರಸ್ತ ‘ಸಂಕೋಲೆ’, ‘ಹಂಗು’, ‘ಗೋಡೆ’ಗಳ ಪರಿಕಲ್ಪನೆಯನ್ನೇ ಬುಡಮೇಲು ಮಾಡಿ ನಿವಾಳಿಸಿ ನಗುವ ಶಕ್ತಿ ಈ ಮಹಿಳೆಯರಿಗಿದೆ.
ತೆರೆದಷ್ಟೇ ಬಾಗಿಲು, ಕೊಂಡಿ, ಚಂದಿರನೇತಕ್ಕೆ ಓಡುವನಮ್ಮಾ? ಮುಂತಾದ ಕಥೆಗಳಲ್ಲಿ ಮತ್ತೆ ಮತ್ತೆ ಬರುವ ತಂದೆ-ಮಗನ ಸಂಬಂಧಗಳ ಕುರಿತು ವಿವರಿಸುತ್ತೀರಾ?
ನನ್ನ ಸೋದರಮಾವ ತದಡಿಯಲ್ಲಿರುವ ವೆಂಟೇಕರ್ ಮಾಸ್ತರ್-ನನ್ನ ತಾಯಿಯ ಅಣ್ಣ. ಅವರ ಹೆಂಡತಿ ಬಹಳ ಬೇಗ ಅಂದರೆ ಮೂವತ್ತು ವರ್ಷ ಪ್ರಾಯದಲ್ಲಿ ತೀರಿಕೊಂಡಿದ್ದರು. ಮಾವ ಶಿಕ್ಷಕರು. ಮಕ್ಕಳಿನ್ನೂ ಚಿಕ್ಕವರು ಶಾಲೆಗೆ ಹೋಗುವವರು. ಆ ಹೆಣ್ಣಿಲ್ಲದ ಮನೆಯಲ್ಲಿ ತಂದೆ ಕೈಲಾದಷ್ಟು ಅಡುಗೆ ಮಾಡುವರು. ಆದರೆ ಅವರ ನೆರೆಹೊರೆಯ ಹೆಂಗಸರು, ಮಕ್ಕಳನ್ನು ಚುಚ್ಚಿ ‘ಇವತ್ತೇನೋ ಊಟಕ್ಕೆ?’ ಎಂದು ಕೊಂಕಿನಿಂದ ಕೇಳುತ್ತಿದ್ದರು. ಈ ಚಿತ್ರಣ ನನ್ನ ಮನಸ್ಸಿನಲ್ಲಿ ಉಳಿದಿತ್ತು. Very nasty and annoying. And sad too. ಏಕೆಂದರೆ ಅದರಲ್ಲಿ ಆ ಹೆಂಗಸರ ನಿತ್ಯದ ಪಾಡಿನ rebel ಕೂಡ ಇತ್ತು!
ಬೆಂಗಳೂರಿಗೆ ಹೋದನಂತರ ನಿಮ್ಮ ಅನುಭವದ ಕ್ಷೇತ್ರ ಇನ್ನಷ್ಟೂ ವಿಸ್ತ್ರತಗೊಂಡಿದೆ(ಟಿ.ವಿ.,ಸಿನೆಮಾ ಹೀಗೆ) ಕಥೆಗಳಲ್ಲಿ ಈ ಹೊಸ ಅನುಭವಗಳ ಪ್ರಭಾವವನ್ನು ನಿಮ್ಮ ಮುಂದಿನ ಸಂಕಲನದಲ್ಲಿ ಕಾಣಬಹುದೇ?
ಬರಬಹುದು. ನನ್ನನ್ನು ಹಿಗ್ಗಿಸಬಲ್ಲ ಅನುಭವದ ಭಾಗವಾದಾಗ ಮಾತ್ರ ಬರಬಹುದು. ನೀವು ಯಾವುದೇ ಆತ್ಮಕಥೆಗಳನ್ನು ತೆಗೆದುಕೊಳ್ಳಿ . . ಅದರಲ್ಲಿ ಬಾಲ್ಯ ಮತ್ತು ಯೌವನದ ಅನುಭವಗಳಷ್ಟೇ ಗಾಢವಾಗಿರುತ್ತವೆ. ಪ್ರೌಢತನಕ್ಕೆ ಕಾಲಿಟ್ಟಹಾಗೆ ಅನುಭವದ ತೀವ್ರತೆ ಕಡಿಮೆಯಾಗತ್ತಾ ಹೋಗುತ್ತದೆ. ನಾವು ತೀವ್ರವಾಗಿ ಮನಗಂಡಿದ್ದಷ್ಟೇ ಮುಖ್ಯವಾಗಿ ಬರವಣಿಗೆಯಲ್ಲಿ ಬರುತ್ತದೆ.
ಬಹುಮುಖ ಪ್ರತಿಭೆಯ ಜಯಂತ ಕಾಯ್ಕಿಣಿ ಇಂದು ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ವ್ಯಕ್ತಿ ಎಂದು ನಿರ್ವಿವಾದವಾಗಿ ಹೇಳಬಹುದು. ಹಾಗಾಗಿ ಕವಿ ಜಯಂತ ಅಥವಾ ಕಥೆಗಾರ ಜಯಂತ ಎನ್ನುವುದನ್ನು ಜನರು ಮರೆತುಬಿಡುತ್ತಾರೆ ಎನ್ನುವ ಭಯ ನಿಮ್ಮನ್ನು ಕಾಡುತ್ತದೆಯೇ?
ನಿಮ್ಮನ್ನು ಇವತ್ತು ಭೇಟಿಯಾದ ಮೇಲೆ ಅಂತೂ ಇಲ್ಲವೇ ಇಲ್ಲ(ನಗುತ್ತಾ). ಖಂಡಿತಾ ಇಲ್ಲ. ನನ್ನ ಕಥೆಗಳನ್ನು ಎಷ್ಟೊಂದು ವಾತ್ಸಲ್ಯದಿಂದ ಓದಿ ಅನುಭಸಿದ್ದೀರಲ್ಲ. ಇನ್ನೇನು ಬೇಕು!
ಬಹಳ ರೋಮಾಂಟಿಕ್ ಆದ ಚಿತ್ರಗೀತೆಗಳನ್ನು ಬರೆಯುವ ಜಯಂತರ ಕಥೆ-ಕವನಗಳಲ್ಲಿ ರೋಮಾಂಟಿಸಮ್ ಯಾಕೆ ಇಲ್ಲ ? ಅಂತ ಕೇಳಬಹುದೇ?
ಜೀವನದ ಹಲವು ವಿನ್ಯಾಸಗಳಲ್ಲಿ ರಮ್ಯತೆ ಕೂಡ ಒಂದು. ಸಿನಿಮಾದಲ್ಲಿ ಅದು ಮಾತ್ರ ಪ್ರಾಮುಖ್ಯವಾಗಿ ಬೇಕು. ಸಾಹಿತ್ಯದ ಬಹುಚಿಕ್ಕ ಭಾಗ ಅದು. ಅವರಿಗೆ ನನ್ನ ಜೀವನದರ್ಶನ ಬೇಡ. ನಾನು ‘ಸಮುದ್ರ’ದ ಸೀತಮ್ಮನ ಬಗ್ಗೆ, ಸೇವಂತಿ ಟ್ರಕ್ಕಿನ ಕುರಿತು, ಜೀವನದರ್ಶನದ ಹಾಡು ಬರೆದರೆ ಅದು ಅಲ್ಲಿ ಬೇಕಾಗಿಲ್ಲ. ಸಿನೇಮಾದಲ್ಲಿ ಅದು ಪೂರಕ ಸಾಹಿತ್ಯ. ನನ್ನ ಸಾಹಿತ್ಯ ಅಲ್ಲ ಅದು. ಯಾರೋ ಬರೆದ ಕಥೆ-ಯಾವುದೋ ಪಾತ್ರ-ಯಾರೋ ಹಾಕಿದ ರಾಗಕ್ಕೆ ಸರಿಯಾಗುವಂತೆ ಬರೆಯುವುದಷ್ಟೇ. ಹೆಚ್ಚಿನವು ಎಲ್ಲ ಪ್ರೇಮಗೀತೆಗಳೇ. ಮತ್ತು ಆ ರೀತಿಯ ಬರೆವಣಿಗೆಗೆ ಬೇಕಾದ sಞiಟಟ, ಕಸುಬುಗಾರಿಕೆಯೇ ಬೇರೆ ಥರದ್ದು. ಅದಕ್ಕೆ ಬೇಕಾದ ಸೃಜನಶೀಲತೆಯೇ ಬೇರೆ. ಅದು ಕೊಡುವ ಖುಷಿಯೂ ಬೇರೆ.
ನಿಮ್ಮ ಕಥೆಗಳಲ್ಲಿ ಗಂಡು-ಹೆಣ್ಣಿನ ಸಂಬಂಧಗಳ ಕುರಿತಾಗಿ ಬಹಳ ವಾಸ್ತವವಾದಿ ಚಿತ್ರಣವಿರುತ್ತದೆ. ‘ನೋ ಪ್ರೆಂಸೆಟ್ಸ್ ಪ್ಲೀಸ್’ನಲ್ಲಿಯ ಪ್ರೇಮ ಪ್ರಕರಣವಿರಬಹುದು, ಅಥವಾ ‘ಗೇಟ್ ವೇ’ಯಲ್ಲಿ ಬರುವ ಪಾಲಿ ಮತ್ತು ಸುಧಾಂಶು ಪಾತ್ರವಿರಬಹುದು. ಪಾಲಿ ಅವನಿಗಾಗಿ ಉಟ್ಟಿದ್ದ ಮ್ಯಾಕ್ಸಿಯಲ್ಲಿ ಮನೆಬಿಟ್ಟು ಬಂದಳು ಎನ್ನುವ ಸೂಚ್ಯವಾದ ವಿವರಣೆ ಕೊಡುತ್ತೀರಿ. ಅಷ್ಟೇ, . .ಹೊರತು ಅನಾವಶ್ಯಕ ರಂಗು ಹಚ್ಚುವುದಿಲ್ಲ.
ವಾಸ್ತವಕ್ಕಿಂತ ಉಜ್ವಲವಾದುದು ಇನ್ನೊಂದಿಲ್ಲ. . ಕ್ಷೀಣ ಬೆಳಕಿನಲ್ಲಿ ಒಂದು ಸೆಕಂಡಿನಲ್ಲಿ ಕಂಡ ಒಂದು ಆರ್ತಮುಖ ಆಯುಷ್ಯವಿಡೀ ನಿಮ್ಮನ್ನು ಕಾಡಬಲ್ಲುದು.
ನಿಮ್ಮ ಕೃತಿಗಳ ಅಥವಾ ನಿಮ್ಮ ಬರಹದ (ಕಥೆ-ಕವನ-ಗದ್ಯ ಹೀಗೆ) ಸಮಗ್ರವಾದ ಓದು, ಆ ಕುರಿತು ಚಿಂತನೆ ಆಗಬೇಕು ಅಂತ ನಿಮಗನ್ನಿಸುತ್ತಿದೆಯೇ?
ಚಿಂತನೆ ಗೊತ್ತಿಲ್ಲ. . ಓದುಬೇಕು. ಸಮಗ್ರವಾಗಿ ಓದಿದಾಗ ಒಂದು ಪಾತ್ರ ಇನ್ನೊಂದರಲ್ಲಿ ಬರುವುದನ್ನು ಗಮನಿಸಬಹುದು. ಯಾವುದೋ ಒಂದು ಪಾತ್ರ ನನ್ನ ಮತ್ತೊಂದು ಕಥೆಯಲ್ಲಿ ಬರುತ್ತದೆ. ನಾನು ಉಪಯೋಗಿಸುವ ‘ಬೇಬಿ’ ಎನ್ನುವ ಪದ. ನಮ್ಮಲ್ಲಿ ಸಣ್ಣಮಕ್ಕಳಿಗೆ ಬೇಬಿ ಎಂದು ಕರೆಯುವ ಪರಿಪಾಠವಿದೆ. ಆ ಮಗು ಬೆಳೆದು ದೊಡ್ದದಾದ ಮೇಲೆಯೂ ಆ ಹೆಸರು ಖಾಯಂ ಆಗಿ ಹಾಗೆಯೇ ಉಳಿಯುತ್ತದೆ. ‘ಬೇಬಿ’ ಎಂದ ತಕ್ಷಣ ಬಿಳಿ ಬಣ್ಣದ ಪೆಟಿಕೋಟ್ ಹಾಕಿದ ಪುಟ್ಟ ಹೆಣ್ಮಗುವಿನ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ‘ಬೇಬಿ’ ಎನ್ನುವ ಪದದಲ್ಲಿಯೇ ಒಂದು ಭಾವಾರ್ಥ ಇದೆ. ಶುಭ್ರ ಮುಗ್ಧ ಒಡುಪೆÇಂದು ಒಡೆದು ಹೋದ ನೋವನ್ನು ದನಿಸುವ ಶಕ್ತಿಯೂ ಆಗಿದೆ. . ಇನ್ನು ಆಸ್ಪತ್ರೆ . .
ಹೌದು ನಿಮ್ಮ ಬಹುತೇಕ ಕಥೆಗಳಲ್ಲಿ ಆಸ್ಪತ್ರೆಯ ಆವರಣ ಬರುತ್ತದೆ.
ಅದೊಂದೇ ಜಾಗದಲ್ಲಿ ಒಬ್ಬನು ಮತ್ತೊಬ್ಬನ ಯಾತನೆ, ಕಾಯಿಲೆ ಕಡಿಮೆ ಮಾಡಲು ಪ್ರಯತ್ನಿಸುತ್ತಾನೆ. Very pure and religious place ಆಗಿ ಕಾಣುತ್ತದೆ. ಸಾಹಿತ್ಯಕ್ಕೂ ವೈದ್ಯಕೀಯಕ್ಕೂ ಮೂಲ ಉದ್ದೇಶದಲ್ಲಿ ಹೃದಯಂಗಮವಾದ ಸಾಮ್ಯವಿದೆ.
ಮಮತಾ ರಾವ್ -ಸ್ನೇಹಮಯಿ, ಸೃಜನಶೀಲ ವ್ಯಕ್ತಿ ನೀವು. ಮುಂಬಯಿಯ ಅಭಿಮಾನಿಗಳು ನಿಮ್ಮ ಬರುವಿಕೆಯನ್ನು ಯಾವಾಗಲೂ ಎದುರುನೋಡುತ್ತಿರುತ್ತಾರೆ. ನಿಮ್ಮಿಂದ ಇನ್ನಷ್ಟು ಸೃಜನಶೀಲ ಬರಹಗಳು ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಲಿ. ನಮ್ಮ-ನಿಮ್ಮ ನಡುವಿನ ಸ್ನೇಹತಂತು ಇನ್ನಷ್ಟು ಗಟ್ಟಿಯಾಗಲಿ; ನಿಮಗೆ, ನಿಮ್ಮ ಪರಿವಾರದವರಿಗೆ ಶುಭವಾಗಲಿ. ನಿಮ್ಮ ಅಮೂಲ್ಯ ವೇಳೆಯನ್ನು ನೀಡಿ ಸಹಕರಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.


(ಮುಂಬಯಿ ವಿಶ್ವ ವಿದ್ಯಾಲಯ ಹಾಗೂ ಕರ್ನಾಟಕ ಸಂಘ ಮುಂಬಯಿ ಇವರು ಜಂಟಿಯಾಗಿ ಆಯೋಜಿಸಿದ್ದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಯಂತ ಕಾಯ್ಕಿಣಿಯವರೊಂದಿಗೆ ನಡೆಸಿದ ಸಂವಾದ- ದಿನಾಂಕ-02-06-2012 ಬೆಳಿಗ್ಗೆ 11 ಗಂಟೆ ಸ್ಥಳ-ಕರ್ನಾಟಕ ಸಂಘ – ವಿಶ್ವೇಶ್ವರಯ್ಯ ಸಭಾಗೃಹ, ಮುಂಬಯಿ.)