ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ಅಂಕ 5

ದೃಶ್ಯ 1
ಫಿಲಿಪ್ಪಿಯ ಬಯಲು ಪ್ರದೇಶ.
ಒಕ್ಟೇವಿಯಸ್, ಆಂಟನಿ, ಮತ್ತು ಅವರ ಸೈನಿಕರ ಪ್ರವೇಶ…

ಒಕ್ಟೇವಿಯಸ್. ಈಗ, ಆಂಟನಿ, ನನ್ನ ಕೋರಿಕೆಗಳಿಗೆ ಫಲ ಸಿಕ್ಕಿದೆ, ವೈರಿಗಳು ಆಕ್ರಮಿಸುವುದಿಲ್ಲ ಎಂದಿರಿ ನೀವು, ಬೆಟ್ಟಗಳಲ್ಲಿ ಹಾಗೂ ಎತ್ತರದ ಪ್ರದೇಶಗಳಲ್ಲಿ ಇರುತ್ತಾರೆ ಎಂದಿರಿ: ಆದರೆ ಅದು ಹಾಗಾಗಿಲ್ಲ: ಅವರ ದಂಡುಗಳು ಹತ್ತಿರದಲ್ಲೇ ಇವೆ, ಅವರು ಇಲ್ಲಿ ಫಿಲಿಪ್ಪಿಯಲ್ಲೇ ನಮ್ಮನ್ನು ಎದುರಿಸುವ ಹಾಗಿದೆ: ನಾವು ಸವಾಲೆಸೆಯುವ ಮೊದಲೇ ನಮ್ಮನ್ನು ಎದುರಿಸುವ ತರ.
ಆಂಟನಿ. ನಾನವರ ಅಂತರಂಗದೊಳಗಿದ್ದೇನೆ, ಅವರು ಯಾಕೆ ಅದನ್ನು ಮಾಡುತ್ತಾರೆನ್ನುವುದು ನನಗೆ ಗೊತ್ತು: ಬೇರೆ ಜಾಗಗಳನ್ನು ಆಕ್ರಮಿಸಿದ ತೃಪ್ತಿಯಲ್ಲಿ ನಮ್ಮ ಮೇಲೆ ಭೀಕರ ಧೈರ್ಯದಲ್ಲಿ ಎರಗುವುದು: ಈ ಮುಖ ಪ್ರದರ್ಶಿಸಿ, ಅವರಿಗೆ ಧೈರ್ಯವಿದೆಯೆನ್ನುವುದನ್ನು ನಮ್ಮ ವಿಚಾರಗಳಿಗೆ ಜೋಡಿಸುವುದಕ್ಕೆ: ಆದರೆ ಅದು ಹಾಗಿಲ್ಲ.

ಒಬ್ಬ ದೂತನ ಪ್ರವೇಶ

ದೂತ. ದಂಡನಾಯಕರೇ, ನೀವು ಸಿದ್ಧರಾಗಿ, ವಿರೋಧಿ ದಳ ಬರುತ್ತಿದೆ ಧೀರತೆಯ ಮೆರೆದು: ಅವರುಗಳ ಆರಕ್ತ ಯುದ್ಧಪತಾಕೆ ಹಾರುತ್ತಿದೆ, ಈಗ ಏನಾದರೂ ಮಾಡಲೇಬೇಕು ಕೂಡಲೇ.
ಆಂಟನಿ. ಒಕ್ಟೇವಿಯಸ್, ನಿಮ್ಮ ದಳಗಳನ್ನು ಬಯಲ ಎಡಗಡೆಯಿಂದ ಮೆತ್ತಗೆ ಮುಂದರಿಸಿ.
ಒಕ್ಟೇವಿಯಸ್. ಬಲಗಡೆಯಿಂದ ನಾನು, ಎಡಗಡೆ ನಿಮಗೇ ಇರಲಿ.
ಆಂಟನಿ. ಈ ಕ್ರಮದಲ್ಲಿ ಯಾಕೆ ನನ್ನನ್ನು ವಿರೋಧಿಸುವಿರಿ?
ಒಕ್ಟೇವಿಯಸ್. ನಾನು ನಿಮ್ಮನ್ನು ವಿರೋಧಿಸುವುದಿಲ್ಲ, ಆದರೆ ನಾನು ಮಾಡುವುದು ಹಾಗೆ.

ನೇಪಥ್ಯದಲ್ಲಿ ಪಥಚಲನೆ, ನಗಾರಿ ಸದ್ದು. ಬ್ರೂಟಸ್, ಕೇಸಿಯಸ್ ಮತ್ತು ಅವರ ಸೈನಿಕರ ಪ್ರವೇಶ

ಬ್ರೂಟಸ್. ಅವರು ನಿಂತಿದ್ದಾರೆ, ಮಾತುಕತೆ ಆಗಬೇಕು.
ಕೇಸಿಯಸ್. ಟಿಟಿನಿಯಸ್, ದೃಢವಾಗಿ ನಿಲ್ಲು, ನಾವು ಮುಂದೆ ಹೋಗಿ ಮಾತಾಡಬೇಕಿದೆ.
ಒಕ್ಟೇವಿಯಸ್. ಮಾರ್ಕ್ ಆಂಟನಿ, ಸಂಗ್ರಾಮದ ಸೂಚನೆ ನೀಡೋಣವೇ?
ಆಂಟನಿ. ಬೇಡ, ಸೀಸರ್, ಅವರ ಆಕ್ರಮಣಕ್ಕೆ ಉತ್ತರಿಸಿದರೆ ಸಾಕು. ಮುಂದೆ ಬನ್ನಿ, ನಾಯಕರಿಗೆ ಸ್ವಲ್ಪ ನಮ್ಮ ಜತೆ ಮಾತಾಡಬೇಕಿದೆ.
ಒಕ್ಟೇವಿಯಸ್. ಸೂಚನೆ ನೀಡುವ ತನಕ ಕದಲದೆ ಇರಿ.
ಬ್ರೂಟಸ್. ಬರೆಗೆ ಮುನ್ನ ಮಾತು, ಹಾಗೇನು ದೇಶವಾಸಿಗಳೆ?
ಒಕ್ಟೇವಿಯಸ್. ಮಾತನ್ನು ನಾವು ಹೆಚ್ಚು ಪ್ರೀತಿಸುತ್ತೇವೆಂದಲ್ಲ, ನಿಮ್ಮಂತೆ.
ಬ್ರೂಟಸ್. ಕೆಟ್ಟ ಬರೆಗಳಿಗಿಂತ ಒಳ್ಳೇ ಮಾತುಗಳು ಒಳಿತು, ಒಕ್ಟೇವಿಯಸ್.
ಆಂಟನಿ. ನಿಮ್ಮ ಕೆಟ್ಟ ಬರೆಗಳಲ್ಲಿ, ಬ್ರೂಟಸ್, ನೀವು ಒಳ್ಳೇ ಮಾತುಗಳನ್ನು ಕೊಡುತ್ತೀರಿ: ನೀವು ಸೀಸರನ ಹೃದಯದಲ್ಲಿ ಮಾಡಿದ ತೂತು ನೋಡಿರಿ, ಹೇಗೆ ಕೂಗುತ್ತದೆ `ಚಿರಾಯುವಾಗಲಿ ಸೀಸರ್! ವಿಜಯೀಭವ ಸೀಸರ್!’
ಕೇಸಿಯಸ್. ಆಂಟನಿ, ನಿಮ್ಮ ಹೊಡೆತಗಳ ಭಂಗಿ ಇನ್ನೂ ತಿಳಿದಿಲ್ಲ; ಆದರೆ ನಿಮ್ಮ ಶಬ್ದಗಳು ಹೈಬ್ಲಾದ ಜೇನ್ನೊಣಗಳನ್ನು ದೋಚಿ ಅವುಗಳಿಗೆ ಜೇನಿಲ್ಲದಂತೆ ಮಾಡುತ್ತವೆ.
ಆಂಟನಿ. ಆದರೆ ಮುಳ್ಳಿಲ್ಲದಂತೆ ಅಲ್ಲ.
ಬ್ರೂಟಸ್. ಓ ಹೌದು, ಹಾಗೂ ಶಬ್ದವಿಲ್ಲದೆ ಕೂಡ: ಯಾಕೆಂದರೆ ನೀನವುಗಳ ಝೇಂಕಾರ ಕದ್ದಿರುವಿ ಆಂಟನಿ. ಹಾಗೂ ಕಡಿಯುವ ಮುನ್ನ ತುಂಬ ಜಾಣತನದಿಂದ ಬೆದರಿಕೆಹಾಕುತ್ತಿರುವಿ.
ಆಂಟನಿ. ದುಷ್ಟರೇ, ನೀವದನ್ನು ಮಾಡಲಿಲ್ಲ ನಿಮ್ಮ ವಂಚಕ ಖಡ್ಗಗಳು ಸೀಸರನ ಪಕ್ಕೆಯಲಿ ಒಂದನ್ನೊಂದು ಕೊಚ್ಚಿದಾಗ: ನೀವು ವಾನರರಂತೆ ಹಲ್ಲು ಕಿರಿದಿರಿ, ಬೇಟೆನಾಯಿಗಳಂತೆ ಕುಂಯಿಗುಟ್ಟಿದಿರಿ, ಜೀತದಾಳುಗಳಂತೆ ತಲೆಬಾಗಿದಿರಿ, ಸೀಸರನ ಕಾಲು ನೆಕ್ಕುತ್ತ; ಕಾಸ್ಕಾ, ನಾಯಿಕುನ್ನಿಯಂತೆ ಹಿಂದಿನಿಂದ ಸೀಸರನ ಕುತ್ತಿಗೆಗೆ ಹೊಡೆಯುವ ವೇಳೆ. ಓ ನೀವು ಭಟ್ಟಂಗಿಗಳೆ ಸರಿ.
ಕೇಸಿಯಸ್. ಭಟ್ಟಂಗಿಗಳು? ನೀವು ಕಾರಣ, ಬ್ರೂಟಸ್, ಈ ನಾಲಿಗೆ ಹೀಗೆ ಹೊರಳುತ್ತಿರಲಿಲ್ಲ ಈ ದಿನ, ಕೇಸಿಯಸ್‍ನ ಕೈಯಲ್ಲಿ ಅಧಿಕಾರವಿರುತ್ತಿದ್ದರೆ.
ಒಕ್ಟೇವಿಯಸ್. ಬನ್ನಿ, ಬನ್ನಿ, ನಮ್ಮ ಗುರಿ: ವಾದವಿವಾದ ನಮಗೆ ಬೆವರು ಸುರಿಸಿದರೆ, ಅದರ ಸಾಧನೆ ಇನ್ನಷ್ಟು ಕೆಂಪು ಬಿಂದುಗಳಾಗಿ ಮಾರ್ಪಟ್ಟೀತು: ಇದೋ, ನಾನು ಪಿತೂರಿಕೋರರ ವಿರುದ್ಧ ಖಡ್ಗ ಎತ್ತುತ್ತೇನೆ, ಇನ್ನದು ಮತ್ತೆ ಮೇಲೇರುವುದು ಯಾವಾಗ ಎಂದುಕೊಳ್ಳುವಿರಿ? ಸೀಸರನ ಮೂವತ್ತಮೂರು ಗಾಯಗಳ ಪ್ರತೀಕಾರ ತೀರುವ ತನಕವಲ್ಲದೆ ಎಂದಿಗೂ ಇಲ್ಲ; ಅಥವಾ ಇನ್ನೊಬ್ಬ ಸೀಸರ್ ವಿದ್ರೋಹಿಗಳ ಖಡ್ಗಕ್ಕೆ ಇನ್ನೊಂದು ಮಾರಣಹತ್ಯೆ ಸೇರಿಸುವ ವರೆಗೆ.
ಬ್ರೂಟಸ್. ಸೀಸರ್, ವಿದ್ರೋಹಿಗಳ ಕೈಯಲ್ಲಿ ಸಾಯಲಾರಿ ನೀನು, ಜತೆಯಲ್ಲಿ ನೀನವರನ್ನು ತರದ ತನಕ.
ಒಕ್ಟೇವಿಯಸ್. ಹಾಗೆಂದು ನಾನು ಆಶಿಸುವೆ. ಬ್ರೂಟಸಿನ ಖಡ್ಗಕ್ಕೆ ಸಾಯಲು ಹುಟ್ಟಿದವನಲ್ಲ ನಾನು.
ಬ್ರೂಟಸ್. ಓ! ನೀನು ನಿನ್ನ ಕುಲದಲ್ಲಿ ಅತ್ಯುತ್ತಮನಾಗಿದ್ದರೆ, ಯುವಕನೇ, ನೀನು ಅದಕ್ಕಿಂತಲೂ ಕುಲೀನನಾಗಿ ಸಾಯಲಾರಿ.
ಕೇಸಿಯಸ್. ಹಟಮಾರಿ ಹೈದಾ, ಒಬ್ಬ ಮೋಜುಗಾರನ ಜತೆ ಸೇರಿ ನೀನಂಥ ಗೌರವಕ್ಕೆ ಅಪಾತ್ರನಾಗಿರುವಿ.
ಆಂಟನಿ. ಅದೇ ಹಳೇ ಕೇಸಿಯಸ್ ಈಗಿನ್ನೂ.
ಒಕ್ಟೇವಿಯಸ್. ಬನ್ನಿ ಆಂಟನಿ, ಹೋಗೋಣ: ವಿದ್ರೋಹಿಗಳಿರಾ, ನಿಮ್ಮ ಧಿಕ್ಕಾರವನ್ನು ನಿಮ್ಮ ಮುಖಕ್ಕೇ ಒಗೆಯುತ್ತೇನೆ, ಈ ದಿನ ನೀವು ಹೋರಾಡಲು ಧೈರ್ಯ ಮಾಡುವುದಾದರೆ, ರಣರಂಗಕ್ಕೆ ಬನ್ನಿ; ಅದಲ್ಲವಾದರೆ ನಿಮಗೆ ಧೈರ್ಯ ಬಂದಾಗ ಬನ್ನಿ.

[ಒಕ್ಟೇವಿಯಸ್, ಆಂಟನಿ ಮತ್ತು ಅವರ ಸೈನಿಕರ ನಿಷ್ಕ್ರಮಣ

ಕೇಸಿಯಸ್. ಯಾಕೀಗ ಬೀಸು ಮಾರುತನೇ, ಅಬ್ಬರಿಸು ಸಮುದ್ರವೇ, ತೇಲು ನೌಕೆಯೇ: ಬಿರುಗಾಳಿ ಸಿದ್ಧವಾಗಿದೆ, ಮತ್ತು
ಎಲ್ಲವೂ ಗಂಡಾಂತರದಲ್ಲಿದೆ.
ಬ್ರೂಟಸ್. ಹೋ ಲೂಸಿಯಸ್, ಇಲ್ಲಿ ಕೇಳು, ನಿನ್ನ ಹತ್ತಿರ ಒಂದು ಮಾತು.
ಲೂಸಿಯಸ್. ಅಯ್ಯಾ.
(ಲೂಸಿಯಸ್ ಮತ್ತು ಮೆಸಲ ಮುಂದೆ ಬರುವರು)
ಕೇಸಿಯಸ್. ಮೆಸಲ.
ಮೆಸ್ಸಲ. ಏನಪ್ಪಣೆ ನನ್ನ ನಾಯಕರದು?
ಕೇಸಿಯಸ್. ಮೆಸಲ, ಈವತ್ತು ನನ್ನ ಜನ್ಮದಿನ: ಯಾಕೆಂದರೆ ಇದೇ ದಿನ ಕೇಸಿಯಸ್ ಜನಿಸಿದ್ದು. ಎಲ್ಲಿ ನಿನ್ನ ಕೈ ನೀಡು, ಮೆಸಲ:
ನನಗೆ ಸಾಕ್ಷಿಯಾಗು, ಏನೆಂದರೆ ನನ್ನ ಇಚ್ಛೆಗೆದುರಾಗಿ, ಪಾಂಪಿಗೂ ಆದಂತೆ, ಒಂದು ಯುದ್ಧದ ಮೇಲೆ ನಮ್ಮೆಲ್ಲ ಸ್ವಾತಂತ್ರ್ಯವನ್ನು
ಖಾತ್ರಿಗೊಳಿಸಲು ನಿರ್ಬಂಧಿತನಾಗಿದ್ದೇನೆ; ನಿನಗೆ ಗೊತ್ತೇ, ನಾನು ಎಪಿಕ್ಯೂರಸ್‍ನ ಗಟ್ಟಿ ನಂಬಿದ್ದೆ ಹಾಗೂ ಅವನ ಮಾತನ್ನು: ಈಗ ನಾನು ಮನಸ್ಸು ಬದಲಿಸಿದ್ದೇನೆ, ಮತ್ತು ಶಕುನಸೂಚಕ ವಸ್ತುಗಳನ್ನು ಭಾಗಶಃ ನಂಬುತ್ತೇನೆ. ಸಾರ್ಡಿಸ್‍ನಿಂದ ಬರುತ್ತ ನಮ್ಮ ಮುಂದಣ ಧ್ವಜದ ಮೇಲೆ ಎರಡು ಭಾರೀ ರಣಹದ್ದುಗಳು ಎರಗಿ ಕುಳಿತುವು, ಇಲ್ಲಿ ಫಿಲಿಪ್ಪಿಗೆ ನಮ್ಮ ಜತೆಯಾಗಿ ಬಂದಿದ್ದ ಸೈನಿಕರನ್ನು ಮುಕ್ಕಳಿಸಿ ತಿನ್ನುತ್ತ: ಈ ದಿನ ಮುಂಜಾನೆ ಅವು ಹಾರಿ ಕಾಣಿಸದಾದುವು, ಅವುಗಳ ಜಾಗದಲ್ಲಿ ಕಬ್ಬಕ್ಕಿಗಳು,
ಕಾಗೆಗಳು ಮತ್ತು ಡೇಗೆಗಳು ನಮ್ಮ ತಲೆಮೇಲೆ ಹಾರಾಡುತ್ತಿವೆ, ಮತ್ತು ನಾವುಗಳು ರೋಗಿಷ್ಠ ಪ್ರಾಣಿಗಳೆನ್ನುವ ಹಾಗೆ
ಮೇಲಿಂದ ನೋಡುತ್ತಿವೆ; ಅವುಗಳ ನೆರಳುಗಳೊಂದು ಅತಿ ಮಾರಣಾಂತಿಕ ಹಂದರದಂತಿವೆ, ಅದರ ಕೆಳಗೆಯೇ ನಮ್ಮ ಸೈನ್ಯಗಳಿರುವುದು, ಪ್ರಾಣ ತೆರುವುದಕ್ಕೆ ಸನ್ನದ್ಧವಾಗಿ.
ಮೆಸಲ. ಹಾಗೆ ನಂಬಬೇಡಿ.
ಕೇಸಿಯಸ್. ನಾನು ಭಾಗಶಃ ನಂಬುವವ, ಯಾಕೆಂದರೆ ನನ್ನ ಚೈತನ್ಯ ಇನ್ನೂ ಉನ್ಮೇಷದಿಂದಿದೆ, ಹಾಗೂ ಅದು ಸಕಲ ಗಂಡಾಂತರಗಳನ್ನೂ ಎದುರಿಸಲು ಬದ್ಧವಾಗಿದೆ.
ಬ್ರೂಟಸ್. ಲೂಸಿಲಿಯಸ್ ಕೂಡ ಹಾಗೆಯೇ.
ಕೇಸಿಯಸ್. ಈಗಲಾದರೆ, ಶ್ರೇಷ್ಠ ಬ್ರೂಟಸ್, ದೇವತೆಗಳು ಈವತ್ತು ಸ್ನೇಹದಿಂದಿದ್ದಾರೆ, ಶಾಂತಿಯಲ್ಲಿ ಪ್ರೇಮಿಗಳಾದ ನಾವು ನಮ್ಮ ದಿನಗಳನ್ನು ವೃದ್ಧಾಪ್ಯದ ವರೆಗೆ ಕಳೆಯಲಿ ಎಂದು. ಆದರೆ ಮನುಷ್ಯರ ಸಂಗತಿಗಳು ಇನ್ನೂ ಅನಿಶ್ಚಿತವಾಗಿರುವ ಕಾರಣ, ಹೆಚ್ಚೆಂದರೆ ಸಂಭವಿಸಬಹುದಾದ ಗರಿಷ್ಠ ದುರಂತದ ಕುರಿತು ಆಲೋಚಿಸೋಣ. ನಾವೀ ಯುದ್ಧ ಸೋತರೆ, ನಾವು ಪರಸ್ಪರ ಮಾತಾಡುವುದು ಇದೇ ಕೊನೆಯ ಸಲ. ಹಾಗಿದ್ದರೆ ನೀವೇನು ಮಾಡಲು ನಿರ್ಧರಿಸಿದ್ದೀರಿ?
ಬ್ರೂಟಸ್. ತನಗೆ ತಾನೇ ಮರಣ ನೀಡಿದ ಯಾವ ಕೇಟೋನನ್ನು ನಾನು ಜರೆದೆನೋ, ಅವನ ಆ ತತ್ವದ ಪ್ರಕಾರವೂ, ನನಗದು ಗೊತ್ತಿಲ್ಲ: ಆದರೆ ಏನಾಗುವುದೋ ಎಂಬ ಭಯದಲ್ಲಿ ಜೀವಾವಧಿಯನ್ನು ಕುಂಠಿತಗೊಳಿಸುವುದು– ನನ್ನನ್ನು ನಾನು ಸಹನೆಯಿಂದ ಸಾಯುಧಗೊಳಿಸಿ, ಈ ಕೆಳಗಿನ ನಮ್ಮನ್ನಾಳುವ ಉನ್ನತ ಶಕ್ತಿಗಳ ನಿಯಮವನ್ನು ತಡೆಯುವುದಿದೆಯಲ್ಲ–ನನಗದು ಹೇಡಿತನವಾಗಿಯೂ ಕೆಟ್ಟುದಾಗಿಯೂ ಕಾಣಿಸುತ್ತದೆ.
ಕೇಸಿಯಸ್. ಎಂದರೆ ನಾವೀ ಯುದ್ಧ ಸೋತರೆ, ನೀವು ರೋಮಿನ ಬೀದಿಗಳಲ್ಲಿ ಜೈತ್ರಯಾತ್ರೆಯ ರಥಕ್ಕೆ ಕಟ್ಟಿ ಎಳೆಯಲ್ಪಡಲು ಸಿದ್ಧರಿದ್ದೀರಿ ಎಂದಾಯ್ತು.
ಬ್ರೂಟಸ್. ಇಲ್ಲ, ಕೇಸಿಯಸ್, ಇಲ್ಲ: ಒಬ್ಬ್ ಕುಲವಂತ ರೋಮನನಾದ ನೀನು ಯೋಚಿಸಬೇಡ ಬ್ರೂಟಸ್ ಎಂದಾದರೂ ಕೈಕಟ್ಟಿ ರೋಮಿಗೆ ಒಯ್ಯಲ್ಪಡುತ್ತಾನೆ ಎಂದು, ಅವನ ಮನಸ್ಸು ಅದಕ್ಕಿಂತ ಶ್ರೇಷ್ಠವಾದದ್ದು. ಆದರೆ ಈ ದಿನವೇ ಮುಗಿಸಬೇಕು, ಮಾರ್ಚ್ ಮಧ್ಯೆ ಆರಂಭಿಸಿದ ಕೆಲಸವನ್ನು. ಹಾಗೂ ನಾವು ಮತ್ತೊಮ್ಮೆ ಭೇಟಿಯಾಗುತ್ತೇವೋ ಇಲ್ಲವೋ ನನಗೆ ತಿಳಿಯದು: ಆದ್ದರಿಂದ ನಮ್ಮ ಶಾಶ್ವತ ವಿದಾಯ ಸ್ವೀಕರಿಸು: ಯಾವತ್ತಿಗೂ ಇನ್ನು ಯಾವತ್ತಿಗೂ ವಿದಾಯ,
ಕೇಸಿಯಸ್. ನಾವು ಪುನಃ ಭೇಟಿಯಾದರೆ ಖಂಡಿತಾ ನಸುನಗುತ್ತೇವೆ; ಆಗದೆ ಇದ್ದರೆ, ಈ ವಿದಾಯ ಸರಿಯಾಗಿಯೇ ಇರುತ್ತದೆ.
ಕೇಸಿಯಸ್. ಎಂದಿಗೂ, ಎಂದೆಂದಿಗೂ ವಿದಾಯ, ಬ್ರೂಟಸ್.
ನಾವು ಪುನಃ ಭೇಟಿಯಾದರೆ, ಖಂಡಿತಾ ನಕ್ಕೇವು; ಆಗದಿದ್ದರೆ, ನಿಜ ಈ ವಿದಾಯ ಸರಿಯಾಗಿಯೇ ಇರುತ್ತದೆ.
ಬ್ರೂಟಸ್. ಹಾಗಿದ್ದರೆ ತಡವೇಕೆ, ಮುಂದೆ ನಡೆ: ಆಹಾ ಮನುಷ್ಯನಿಗೆ ದಿನದ ಕಾರ್ಯದ ಕೊನೆ ಅದು ಆಗುವ ಮೊದಲೇ
ಗೊತ್ತಿರುತ್ತಿದ್ದರೆ! ಆದರೆ ದಿನ ಕೊನೆಗೊಳ್ಳುತ್ತದೆ, ಆಗ ಕೊನೆ ಗೊತ್ತಾಗುತ್ತದೆ, ಇಷ್ಟು ಸಾಕು. ಬನ್ನಿರೋ, ಹೋಗೋಣ.
(ನಿಷ್ಕ್ರಮಣ)

ದೃಶ್ಯ 2
ಅದೇ ಜಾಗ. ರಣರಂಗ.
ಸೂಚನಾಧ್ವನಿ. ಬ್ರೂಟಸ್ ಮತ್ತು ಮೆಸಲ ಪ್ರವೇಶ

ಬ್ರೂಟಸ್. ಕುದುರೆಯೇರಿ ಹೋಗು, ಹೋಗು ಮೆಸಲ, ಹೋಗಿ ಈ ಪತ್ರಗಳನ್ನು ಆಚೆ ಬದಿಯಲ್ಲಿರುವ ಸೇನೆಗಳಿಗೆ ಕೊಡು.

[ದೊಡ್ಡ ಸೂಚನಾಧ್ವನಿ]

ಅವರು ಈ ಕೂಡಲೇ ತಯಾರಾಗಲಿ: ಯಾಕೆಂದರೆ ಒಕ್ಟೇವಿಯಸ್‍ನ ದಂಡಿನಲ್ಲಿ ನಿರುತ್ಸಾಹದ ಚಹರೆ ಕಾಣಿಸುತ್ತಿದೆ ನನಗೆ:
ಕುದುರೆಯೇರು ಮೆಸಲ, ಹೋಗು, ಅವರು ಧಾಳಿಗಿಳಿಯಲಿ.
[ಇಬ್ಬರೂ ನಿಷ್ಕ್ರಮಣ ]

ದೃಶ್ಯ 3

[ಸೂಚನಾಧ್ವನಿ. ಕೇಸಿಯಸ್ ಮತ್ತು ಟಿಟಿನಿಯಸ್ ಪ್ರವೇಶ]

ಕೇಸಿಯಸ್. ಓ ನೋಡು, ಟಿಟಿನಿಯಸ್, ನೋಡು, ದುಷ್ಟರು ಪಲಾಯನ ಹೇಳುತ್ತಿರುವರು: ನನ್ನವರೇ ನನ್ನವರ ವಿರುದ್ಧ ವೈರಿಗಳಾಗಿದ್ದಾರೆ: ಈ ನನ್ನ ಧ್ವಜಧಾರಿ ಕಾಲು ಹಿಂದಕ್ಕೆ ಕಿತ್ತಿದ್ದ, ಹೇಡಿಯನ್ನು ಕೊಂದು ಧ್ವಜವನ್ನು ಕಿತ್ತುಕೊಂಡೆ.
ಟಿಟಿನಿಯಸ್. ಓ ಕೇಸಿಯಸ್, ಬ್ರೂಟಸ್ ಅಪ್ಪಣೆ ಕೊಟ್ಟದ್ದು ಬಹಳ ಬೇಗನೆ ಆಯ್ತು, ಒಕ್ಟೇವಿಯಸ್ ವಿರುದ್ಧ ಸ್ವಲ್ಪ ಮೇಲುಗೈ ಇರುತ್ತ, ಅವನದನ್ನು ಲೆಕ್ಕಕ್ಕಿಂತ ಜಾಸ್ತಿ ಉತ್ಸಾಹದಲ್ಲಿ ತೆಗೆದುಕೊಂಡ: ನಾವೆಲ್ಲರೂ ಆಂಟನಿಯಿಂದ ಸುತ್ತುವರಿಯಲ್ಪಟ್ಟಾಗ, ಬ್ರೂಟಸಿನ ಸೈನಿಕರು ಕೊಳ್ಳೆಹೊಡೆಯುವುದಕ್ಕೆ ಉದ್ಯುಕ್ತರಾದರು.

ಪಿಂಡಾರಸ್ ಪ್ರವೇಶ

ಪಿಂಡಾರಸ್. ದೂರ ಓಡಿ ಸ್ವಾಮಿ, ದೂರ ಓಡಿ, ಮಾರ್ಕ್ ಆಂಟನಿ ನಿಮ್ಮ ಡೇರೆಗಳಲ್ಲಿದ್ದಾನೆ ಸ್ವಾಮಿ: ಆದ್ದರಿಂದ ಓಡಿ, ಕೇಸಿಯಸ್, ಬಹುದೂರ ಓಡಿ.
ಕೇಸಿಯಸ್. ಈ ಬೆಟ್ಟ ಸಾಕಷ್ಟು ದೂರ ಇದೆ. ನೋಡು, ನೋಡು ಟಿಟಿನಿಯಸ್, ಅವೇ ಏನು ನನ್ನ ಡೇರೆಗಳು ಬೆಂಕಿಯಲ್ಲಿ ಉರಿಯುತ್ತಿರುವುದು?
ಟಿಟಿನಿಯಸ್. ಅವೇ, ಮಹಾಸ್ವಾಮಿ.
ಕೇಸಿಯಸ್. ಟಿಟಿನಿಯಸ್, ನಿನಗೆ ನನ್ನ ಮೇಲೆ ಪ್ರೀತಿಯಿದ್ದರೆ, ನನ್ನ ಕುದುರೆಯನ್ನೇರು, ದೌಡಾಯಿಸು, ಓ ಅಲ್ಲಿರುವ ದಳಗಳ ತನಕ ನಿನ್ನನ್ನೊಯ್ದು ಮರಳಿ ಇಲ್ಲಿಗೆ ಕರೆತರುವ ವರೆಗೆ, ಆ ದಳಗಳು ಮಿತ್ರರೋ ಶತ್ರುಗಳೊ ಎಂದು ನನಗೆ ಖಚಿತವಾಗುವಂತೆ.
ಟಿಟಿನಿಯಸ್. ಇದೋ ಯೋಚಿಸುವ ಮೊದಲೆ ನಾನಿಲ್ಲಿಗೆ ಮರಳುವೆ. [ನಿಷ್ಕ್ರಮಣ ]
ಕೇಸಿಯಸ್. ಹೋಗು ಪಿಂಡಾರಸ್, ಆ ಗುಡ್ಡದ ಮೇಲಕ್ಕೆ ಹೋಗು, ನನ್ನ ದೃಷ್ಟಿ ಯಾವತ್ತೂ ಮಂದ. ಟಿಟಿನಿಯಸ್‍ನ ಗಮನಿಸು, ಹಾಗೂ ಕ್ಷೇತ್ರದಲ್ಲಿ ನಿನಗೇನು ಗೋಚರಿಸುತ್ತದೋ ನನಗೆ ತಿಳಿಸು.

[ಪಿಂಡಾರಸ್ ಮೇಲೆ ಹೋಗುತ್ತಾನೆ]

ನಾನು ಮೊದಲು ಉಸಿರಾಡಿದ್ದು ಈ ದಿವಸ, ಕಾಲಚಕ್ರ ತಿರುಗಿದೆ, ನಾನೆಲ್ಲಿ ಸುರುಮಾಡಿದೆನೊ ಅಲ್ಲಿ ಕೊನೆಗೊಳ್ಳಬೇಕು, ನನ್ನ ಜೀವನಗತಿ ಪೂರ್ಣಗೊಂಡಿದೆ. ಲೋ ಎನು ಸುದ್ದಿ?
ಪಿಂಡಾರಸ್. [ಮೇಲಿಂದ] ಟಿಟಿನಿಯಸ್‍ನ ಸುತ್ತುಗಟ್ಟಿದ್ದಾರೆ ಧಾವಿಸುವ ಕುದುರೆ ರಾವುತರು, ಆದರೂ ಆತ ಮುಂದುವರಿಯುತ್ತಿದ್ದಾನೆ. ಈಗ ಇನ್ನೇನು ಅವರು ಅವನನ್ನು ತಲುಪಬೇಕು: ಈಗ ಟಿಟಿನಿಯಸ್. ಈಗ ಇಳಿಯುತ್ತಾರೆ ಕೆಲವರು, ಅವನೂ ಇಳಿಯುತ್ತಾನೆ.
ಬಂಧಿಸಲ್ಪಡುತ್ತಾನೆ. [ಕೂಗಾಟ] ಅದೋ ಕೇಳಿ, ಅವರು ಖುಷಿಯಿಂದ ಕೂಗಾಡುತ್ತಿದ್ದಾರೆ.
ಕೇಸಿಯಸ್. ಇಳಿದು ಬಾ, ಇನ್ನು ನೋಡುವುದು ಬೇಡ: ಓ ನಾನೆಂಥ ಭೀರು, ಇಷ್ಟೂ ಕಾಲ ಬದುಕುವುದಕ್ಕೆ, ನನ್ನ ಮಿತ್ರಶ್ರೇಷ್ಠನನ್ನು ನನ್ನ ಕಣ್ಣೆದುರಿಗೇ ಕೊಂಡೊಯ್ಯುವುದನ್ನು ನೋಡುವುದಕ್ಕೆ.

[ಪಿಂಡಾರಸ್ ಇಳಿದು ಬರುವನು]

ಇಲ್ಲಿ ಬಾರಯ್ಯ: ಪಾರ್ಥಿಯಾದಲ್ಲಿ ನಿನ್ನನ್ನು ನಾನು ಸೆರೆಹಿಡಿದಿದ್ದೆನಾ, ಹಾಗೂ ನಂತರ ನಿನಗೆ ಜೀವದಾನವಿತ್ತು, ನಿನ್ನಿಂದ ವಚನ ತೆಗೆದುಕೊಂಡಿದ್ದೆ, ನಾನು ನಿನಗೇನು ಅಪ್ಪಣೆ ಕೊಟ್ಟೆನೋ ಅದನ್ನು ನೀನು ನೆರವೇರಿಸಬೇಕೆಂದು. ಬಾ ಈಗ, ನಿನ್ನ ವಚನ ಪರಿಪಾಲಿಸು, ಈಗ ಜೀತವಿಮುಕ್ತನಾಗು, ಹಾಗೂ ಸೀಸರನ ಹೊಟ್ಟೆಯನ್ನು ಹಾದ ಇದೇ ಖಡ್ಗದಿಂದ ನನ್ನ ಹೃದಯವನ್ನು ಶೋಧಿಸು. ಉತ್ತರಿಸುತ್ತ ತಡಮಾಡಬೇಡ, ಇದೋ ಹಿಡಿಯನ್ನು ತೆಗೆದುಕೋ, ಮತ್ತು ನಾನು ಮುಖ ಮುಚ್ಚಿದಾಗ, ಈಗ ಮುಚ್ಚಿದ ಹಾಗೆ, ಖಡ್ಗವೂರು—ಸೀಸರ್, ನಿನ್ನ ಹಗೆ ನೀಗಿತು,

[ಪಿಂಡಾರಸ್ ಇರಿಯುತ್ತಾನೆ] ನಿನ್ನನ್ನು ಕೊಂದ

ಆ ಅದೇ ಖಡ್ಗದಿಂದ.
ಪಿಂಡಾರಸ್. ಹಾಗಿದ್ದರೆ ನಾನು ಮುಕ್ತ, ಆದರೂ ಹಾಗಿರುತ್ತಿರಲಿಲ್ಲ ನನ್ನದೇ ಇಚ್ಛೆಯಾಗಿದ್ದರೆ.
ಓ ಕೇಸಿಯಸ್, ಪಿಂಡಾರಸ್ ಈ ದೇಶದಿಂದ ಬಹುದೂರ ಓಡಿಹೋಗುತ್ತಾನೆ, ಎಲ್ಲಿ ಯಾವನೇ ರೋಮನ್‍ನ ಕಣ್ಣು ಅವನ ಮೇಲೆ ಬೀಳದಿರುವುದೋ ಅಲ್ಲಿಗೆ. [ನಿಷ್ಕ್ರಮಣ ]

ಟಿಟಿನಿಯಸ್ ಮತ್ತು ಮೆಸಲ ಪ್ರವೇಶ

ಮೆಸಲ. ಇದೊಂದು ಅದಲುಬದಲು, ಟಿಟಿನಿಯಸ್: ಯಾಕೆಂದರೆ ಶ್ರೇಷ್ಠ ಬ್ರೂಟಸಿನ ಬಲ ಒಕ್ಟೇವಿಯಸನ ಮಣಿಸಿದರೆ, ಕೇಸಿಯಸಿನ ದಳಗಳು ಆಂಟನಿಯಿಂದ ಪರಾಭವಗೊಂಡಿವೆ.
ಟಿಟಿನಿಯಸ್. ಈ ಸುದ್ದಿ ಕೇಸಿಯಸಿಗೆ ಸಾಕಷ್ಟು ಸಮಾಧಾನ ತಂದೀತು.
ಮೆಸಲ. ನೀನವನನ್ನು ಎಲ್ಲಿ ಬಿಟ್ಟೆ?
ಟಿಟಿನಿಯಸ್. ತೀರಾ ವಿಷಣ್ಣನಾಗಿ ಅವನ ಜೀತದಾಳು ಪಿಂಡಾರಸ್‍ನ ಜತೆ, ಈ ಬೆಟ್ಟದಲ್ಲಿ.
ಮೆಸ್ಸಲ. ನೆಲದ ಮೇಲೆ ಬಿದ್ದಿರುವುದು ಅವನೇ ಅಲ್ಲವೇ?
ಟಿಟಿನಿಯಸ್. ಜೀವ ಇರುವವನ ಹಾಗೆ ಅವನು ಮಲಗಿಲ್ಲ. ಓ ಹೃದಯವೇ!
ಮೆಸಲ. ಅದು ಅವನೇ ಅಲ್ಲವೇ?
ಟಿಟಿನಿಯಸ್. ಅಲ್ಲ, ಅವನಾಗಿದ್ದ, ಮೆಸಲ. ಆದರೆ ಕೇಸಿಯಸ್ ಇನ್ನಿಲ್ಲ. ಓ ಅಸ್ತಮಯ ಸೂರ್ಯನೇ:
ನಿನ್ನ ಕೆಂಪು ಕಿರಣಗಳಲ್ಲಿ ನೀನೀ ರಾತ್ರಿ ಮುಳುಗುವಂತೆಯೇ, ತನ್ನ ಕೆಂಪು ರಕ್ತದಲ್ಲಿ ಕೇಸಿಯಸಿನ ದಿನವೂ ಕಂತಿತು. ರೋಮಿನ ಸೂರ್ಯ ಕಂತಿದ. ನಮ್ಮ ದಿನ ಕಳೆಯಿತು, ಮೋಡಗಳು, ಮಂಜುಗಳು, ಮತ್ತು ಗಂಡಾಂತರಗಳು ಬಂದುವು; ನಮ್ಮ ಕಾರ್ಯ ಮುಗಿಯಿತು: ಗೆಲುವಿನ ಕುರಿತ ನನ್ನ ಅಪನಂಬಿಕೆ ಈ ಕೆಲಸವನ್ನು ಮಾಡಿದೆ.
ಮೆಸಲ. ಒಳ್ಳೇ ಗೆಲುವಿನ ಕುರಿತ ಅಪನಂಬಿಕೆ ಈ ಕೆಲಸ ಮಾಡಿತು. ಓ ಕಟು ಪರಮೋಸವೇ, ವ್ಯಸನದ ಮಗುವೆ: ಮನುಷ್ಯರ ಸರಿಯಾದ ಯೋಚನೆಗಳಿಗೆ ಇಲ್ಲದ ಸಂಗತಿಗಳನ್ನು ಯಾಕೆ ತೋರಿಸುವಿ ನೀನು? ಗರ್ಭಕ್ಕೆ ಬರಲು ಆತುರ ನಿನಗೆ, ಸುಖಪ್ರಸವಕ್ಕೆ ಎಂದೂ ಬರಲಾರಿ, ಆದರೆ ಹಡೆದ ತಾಯಿಯನ್ನೆ ಕೊಲ್ಲುವಿ.
ಟಿಟಿನಿಯಸ್. ಏನು ಪಿಂಡಾರಸ್? ಎಲ್ಲಿದ್ದೀ ಪಿಂಡಾರಸ್?
ಮೆಸಲ. ಅವನನ್ನು ಕಂಡುಹುಡುಕು. ಟಿಟಿನಿಯಸ್, ನಾನು ಹೊರಡುವೆ ಶ್ರೇಷ್ಠ ಬ್ರೂಟಸ್‍ನನ್ನು ನೋಡುವುದಕ್ಕೆ, ಈ ಸುದ್ದಿಯವನ್ನವನ ಕಿವಿಗೆ ಇರಿಯಬೇಕು; ಇರಿಯಬೇಕೆಂದು ಅನ್ನುವೆ ನಾನು: ಯಾಕೆಂದರೆ ಇರಿಯುವ ಉಕ್ಕಿನಷ್ಟೇ, ವಿಷಲೇಪಿತ ಬಾಣಗಳಷ್ಟೇ ಈ ದೃಶ್ಯದ ಸುದ್ದಿಯೂ ಬ್ರೂಟಸನ ಕಿವಿಗೆ ಸ್ವಾಗತವೆನಿಸೀತು.
ಟಿಟಿನಿಯಸ್. ಸರಿ, ಹೋಗು ಮೆಸಲ, ಈ ಮಧ್ಯೆ ನಾನೂ ಪಿಂಡಾರಸ್‍ನನ್ನು ಹುಡುಕುವೆ.
[ಮೆಸಲ ನಿಷ್ಕ್ರಮಣ ]
ನನ್ನನ್ನು ಯಾಕೆ ದೂರ ಕಳಿಸಿದಿರಿ ಶೂರ ಕೇಸಿಯಸ್? ನಾನು ನಿಮ್ಮ ಮಿತ್ರರನ್ನು ಹೋಗಿ ಕಂಡಿಲ್ಲವೇ, ಅವರು ನನ್ನ ಹಣೆಮೇಲೆ ಈ ವಿಜಯ ಮಾಲೆ ತೊಡಿಸಿಲ್ಲವೇ, ಹಾಗೂ ನಿಮಗಿದನ್ನು ಕೊಡಲು ನನಗೆ ಅಂದಿಲ್ಲವೇ? ನೀವವರ ಕೂಗಾಟ ಕೇಳಿಲ್ಲವೇ? ದೈವವೆ, ನೀವು ಪ್ರತಿಯೊಂದನ್ನೂ ತಪ್ಪಾಗಿ ತಿಳಿದಿರಿ. ಆದರೆ ತಡೆಯಿರಿ, ಈ ಮಾಲೆಯನ್ನು ಹಣೆಮೇಲೆ ತೊಟ್ಟುಕೊಳ್ಳಿರಿ,
ನಿಮ್ಮ ಬ್ರೂಟಸ್ ಹೇಳಿದ್ದು ನನಗೆ ನಿಮಗಿದನ್ನು ಕೊಡುವುದಕ್ಕೆ, ನಾನವರ ಮಾತು ಪಾಲಿಸಬೇಕು.
ಬ್ರೂಟಸ್, ಬೇಗನೆ ಬನ್ನಿ, ಕೈಯುಸ್ ಕೇಸಿಯಸ್‍ನನ್ನು ನಾನು ಹೇಗೆ ಗೌರವಿಸಿದೆನೆಂದು ನೀವು ನೋಡಿರಿ: ನಿಮ್ಮ ಒಪ್ಪಿಗೆಯಂತೆ, ದೈವಗಳೇ: ಇದೊಂದು ರೋಮನ್ ನೀತಿ, ಬಾ ಕೇಸಿಯಸ್‍ನ ಖಡ್ಗವೇ, ಟಿಟಿನಿಯಸ್‍ನ ಹೃದಯವ ಹುಡುಕು.

[ಇರಿದುಕೊಂಡು ಸಾಯುವನು]

ಸೂಚನಾವಾದ್ಯ. ಬ್ರೂಟಸ್, ಮೆಸಲ, ಯುವ ಕೇಟೋ, ಸ್ಟ್ರಾಟೋ,ವೊಲೂಮ್ನಿಯಸ್, ಲೂಸಿಲಿಯಸ್, ಫ್ಲೇವಿಯಸ್ ಮತ್ತು ಲಬಿಯೋ ಪ್ರವೇಶ

ಬ್ರೂಟಸ್. ಎಲ್ಲಿದೆ, ಎಲ್ಲಿದೆ, ಮೆಸಲಾ ಅವನ ದೇಹ?
ಮೆಸಲ. ಓ ಅಲ್ಲಿ, ಟಿಟಿನಿಯಸ್ ಶೋಕಿಸುತ್ತಿರುವಲ್ಲಿ.
ಬ್ರೂಟಸ್. ಟಿಟಿನಿಯಸ್‍ನ ಮೋರೆ ಮೇಲ್ಮುಖಿಯಾಗಿದೆ.
ಕೇಟೋ. ಅವನು ಸತ್ತಿದ್ದಾನೆ.
ಬ್ರೂಟಸ್. ಓ ಜೂಲಿಯಸ್ ಸೀಸರ್, ನೀನಿನ್ನೂ ಬಲವಂತನಿದ್ದೀಯಾ, ನಿನ್ನ ಚೈತನ್ಯ ಇನ್ನೂ ಆಚೀಚೆ ಸುಳಿದಾಡುತ್ತಿದೆ, ನಮ್ಮ ಆಯುಧಗಳನ್ನು ಅದು ನಮ್ಮ ಕರುಳುಗಳತ್ತಲೇ ತಿರುಗಿಸುತ್ತಿದೆ.

[ಕ್ಷೀಣವಾಗಿ ಸೂಚನಾವಾದ್ಯ]

ಕೇಟೋ. ಧೈರ್ಯವಂತ ಟಿಟಿನಿಯಸ್, ನೋಡಿ, ಸತ್ತ ಕೇಸಿಯಸನ್ನ ಅವನೆಂತು ಅಭಿಷಿಕ್ತನಾಗಿ ಮಾಡಿದ್ದಾನೆ!
ಬ್ರೂಟಸ್. ಈ ಇವರಂತೆ ಇಬ್ಬರು ರೋಮನರು ಇನ್ನು ಬದುಕಿದ್ದಾರೆಯೇ? ಎಲ್ಲ ರೋಮನರಲ್ಲಿ ಕೊನೆಯವ, ವಿದಾಯ ನಿನಗೆ: ರೋಮ್ ಇನ್ನೆಂದೂ ನಿನ್ನಂಥ ಇನ್ನೊಬ್ಬನನ್ನು ಹುಟ್ಟಿಸುವುದು ಅಸಾಧ್ಯ. ಗೆಳೆಯರೆ, ನಾನೀ ಸತ್ತ ಮನುಷ್ಯನಿಗೆ ನೀವು ಕಾಣುವುದಕ್ಕಿಂತಲೂ ಹೆಚ್ಚು ಕಣ್ಣೀರು ನೀಡಬೇಕು: ನಾನು ಸಮಯ ಮಾಡುತ್ತೇನೆ, ಕೇಸಿಯಸ್, ಸಮಯ ಮಾಡುತ್ತೇನೆ. ಬನ್ನಿ, ಹಾಗಾದರೆ, ಥಾರ್ಸ್‍ಗೆ ಕಳಿಸಿ ಅವನ ದೇಹವನ್ನು, ಅವನ ಶವ ದಫನ ನಮ್ಮ ಪಾಳಯದಲ್ಲಿ ಬೇಡ, ಅದನ್ನು ಸಹಿಸುವುದು
ನಮ್ಮಿಂದಾಗದು. ಲೂಸಿಯಸ್, ಬಾ, ಯುವ ಕೇಟೋ, ಬಾ, ಯುದ್ಧರಂಗಕ್ಕೆ ತೆರಳೋಣ, ಲಬಿಯೋ ಮತ್ತು ಫ್ಲೇವಿಯಸ್,
ಯುದ್ಧ ಸುರುಮಾಡಿ, ಈಗ ಮೂರು ಗಂಟೆ, ರಾತ್ರಿ ಇನ್ನೂ ಮುಗಿಯುವ ಮೊದಲೆ ಎರಡನೇ ಹೋರಾಟದಲ್ಲಿ ನಮ್ಮ ಅದೃಷ್ಟವನ್ನು ಪರೀಕ್ಷೆಗಿಡೋಣ.
[ನಿಷ್ಕ್ರಮಣ ]

ದೃಶ್ಯ 4
ಬಯಲ ಇನ್ನೊಂದು ಭಾಗ.
ಸೂಚನಾವಾದ್ಯ. ಬ್ರೂಟಸ್, ಮೆಸ್ಸಲ, ಕೇಟೋ, ಲೂಸಿಯಸ್ ಮತ್ತು ಫ್ಲೇವಿಯಸ್ ಪ್ರವೇಶ

ಬ್ರೂಟಸ್. ದೇಶವಾಸಿಗಳೆ ಇನ್ನೂ: ಓ ಇನ್ನೂ,
ತಲೆಯೆತ್ತಿ ನಿಲ್ಲಿ.
[ಮೆಸಲ, ಫ್ಲೇವಿಯಸ್ ಮತ್ತು ಲಬಿಯೋ ಜತೆ ನಿಷ್ಕ್ರಮಣ ]
ಕೇಟೋ. ಯಾವ ತಂದೆಗೆ ಹುಟ್ಟಿದವ ಇಲ್ಲ? ಯಾರು ಬರುತ್ತಾರೆ ನನ್ನ ಜತೆ? ನಾನು ಕೂಗಿ ಹೇಳುವೆ ನನ್ನ ಹೆಸರನ್ನು ರಣರಂಗದಲ್ಲಿ ಎಲ್ಲೆಲ್ಲು. ಮಾರ್ಕಸ್ ಕೇಟೋನ ಮಗ ನಾನು, ಹೋಯ್, ಸರ್ವಾಧಿಕಾರಿಗಳ ವೈರಿ, ಹಾಗೂ ನನ್ನ ದೇಶದ
ಪ್ರೇಮಿ, ಮಾರ್ಕಸ್ ಕೇಟೋನ ಮಗ ನಾನು, ಹೋಯ್..

ವಿರೋಧಿ ಸೈನಿಕರ ಪ್ರವೇಶ, ಯುದ್ಧ…

ಲೂಸಿಲಿಯಸ್. ಹಾಗೂ ಬ್ರೂಟಸ್ ನಾನು, ಮಾರ್ಕಸ್ ಬ್ರೂಟಸ್, ನನ್ನ ದೇಶದ ಮಿತ್ರ: ಬ್ರೂಟಸ್ ನಾನೆಂದು ತಿಳಿಯಿರಿ.
[ಯುದ್ಧದಲ್ಲಿ ಯುವ ಕೇಟೋ ಸತ್ತುಬೀಳುತ್ತಾನೆ ]
ಓ ಯುವ ಕೇಟೋ, ನೀನು ಬಿದ್ದಿಯಾ? ಆಹಾ ನೀನೀಗ ಸಾಯುತ್ತಿರುವಿ, ಟಿಟಿನಿಯಸಿನ ಹಾಗೇ ವೀರಮರಣ ನಿನಗೆ, ಕೇಟೋನ ಮಗನಾಗಿ ನೀನೂ ಸನ್ಮಾನ್ಯ.
ಸೈನಿಕ 1. ಶರಣಾಗು, ಇಲ್ಲದಿದ್ದರೆ ಸಾಯುವಿ.
ಲೂಸಿಲಿಯಸ್. ನಾನು ಶರಣಾಗುವುದು ಸಾಯಲೆಂದೇ: ಅಷ್ಟೊಂದಿದೆ, ನೀನು ಕೊಲ್ಲುವುದೇ ಒಳ್ಳೆಯದು ನನ್ನನ್ನು ಈ ಕೂಡಲೇ: ಬ್ರೂಟಸ್‍ನ ಕೊಲ್ಲು, ಅವನ ಸಾವಲ್ಲಿ ಕೀರ್ತಿ ಗಳಿಸು.
ಸೈನಿಕ 1. ಅವನನ್ನು ಕೊಲ್ಲಬಾರದು: ಶ್ರೇಷ್ಠ ಸೆರೆಯಾಳು ಅವನು!

ಆಂಟನಿ ಪ್ರವೇಶ

ಸೈನಿಕ 2. ದಾರಿ ಬಿಡಿ: ಆಂಟನಿಗೆ ಅನ್ನಿ, ಬ್ರೂಟಸ್ ಸೆರೆಸಿಕ್ಕ.
ಸೈನಿಕ 1. ನಾನನ್ನುವೆ. ದಂಡನಾಯಕರು ಇದೋ ಇಲ್ಲಿ ಬರುತ್ತಿದ್ದಾರೆ, ಬ್ರೂಟಸ್ ಸೆರೆಸಿಕ್ಕ, ಬ್ರೂಟಸ್ ಸೆರೆಸಿಕ್ಕ, ಮಹಾಸ್ವಾಮಿ.
ಆಂಟನಿ. ಎಲ್ಲಿದ್ದಾರೆ ಅವರು?
ಲೂಸಿಲಿಯಸ್. ಸುರಕ್ಷಿತವಾಗಿದ್ದಾರೆ, ಆಂಟನಿ, ಬ್ರೂಟಸ್ ಸಾಕಷ್ಟು ಸುರಕ್ಷಿತವಾಗಿದ್ದಾರೆ. ನಾನು ನಿಮಗೆ ಖಂಡಿತ ಹೇಳುತ್ತೇನೆ, ಯಾವನೇ ವೈರಿ ಶ್ರೇಷ್ಠ ಬ್ರೂಟಸ್‍ನನ್ನು ಜೀವಂತ ಸೆರೆಹಿಡಿಯಲಾರ: ಅಂಥ ಹೀನಾಯ ಅವಮಾನದಿಂದ ದೇವತೆಗಳೇ ಅವರನ್ನು
ಕಾಪಾಡುತ್ತಾರೆ, ನೀವವರನ್ನು ಕಂಡಾಗ, ಜೀವಂತವಾಗಿಯೋ ನಿರ್ಜೀವವಾಗಿಯೋ, ಬ್ರೂಟಸ್ ಇರುತ್ತಾರೆ ಬ್ರೂಟಸರೆ ಆಗಿ.
ಆಂಟನಿ. ಇದು ಬ್ರೂಟಸ್ ಅಲ್ಲ, ಮಿತ್ರನೇ, ಆದರೆ ನಾ ನಿನಗೆ ಮಾತು ಕೊಡುತ್ತೇನೆ, ಬೆಲೆಯಲ್ಲಿ ಆತನಿಗೆ ಕಡಿಮೆಯೇನಲ್ಲ ; ಈ ಮನುಷ್ಯನನ್ನು ಸುರಕ್ಷಿತವಾಗಿರಿಸಿಕೋ, ಅತನಿಗೆ ಎಲ್ಲಾ ದಯ ನೀಡು. ಅಂಥಾ ಮನುಷ್ಯರು ನನಗೆ ವೈರಿಗಳಾಗಿರುವುದಕ್ಕಿಂತ ಮಿತ್ರರಾಗಿರುವುದೆ ಬೇಕಾದ್ದು. ಹೋಗು, ಬ್ರೂಟಸ್ ಎಲ್ಲಿದ್ದಾರೆ ನೋಡು, ಜೀವಸಹಿತವೋ ಜೀವರಹಿತವೋ, ಬಂದು ನಮಗೆ ತಿಳಿಸು, ಒಕ್ಟೇವಿಯಸ್‍ನ ಡೇರೆಯಲ್ಲಿ: ಹೇಗೆ ಪ್ರತಿಯೊಂದೂ ಆಕಸ್ಮಿಕದ ಮೇಲೆ ನಿಂತಿದೆ.
[ನಿಷ್ಕ್ರಮಣ ]

ದೃಶ್ಯ 5

ಬ್ರೂಟಸ್, ಡಾರ್ಡೇನಿಯಸ್, ಕ್ಲಿಟಸ್, ಸ್ಟ್ರಾಟೋ ಮತ್ತು ವೊಲೂಮ್ನಿಯಸ್ ಪ್ರವೇಶ

ಬ್ರೂಟಸ್. ಬನ್ನಿ ಅಳಿದುಳಿದ ಮಿತ್ರರೇ, ಈ ಕಲ್ಲಿನ ಮೇಲೆ ಕೂತುಕೊಳ್ಳೋಣ.
ಕ್ಲಿಟಸ್. ಸ್ಟೇಟಿಯಸ್ ಪಂಜಿನ ಬೆಳಕು ತೋರಿಸಿದ, ಆದರೆ, ಮಹಾಸ್ವಾಮಿ, ಆತ ಮರಳಲಿಲ್ಲ: ಅವನನ್ನು ಒಂದೋ ಬಂಧಿಸಿದ್ದಾರೆ, ಇಲ್ಲವೇ ಕೊಂದುಹಾಕಿದ್ದಾರೆ.
ಬ್ರೂಟಸ್. ಇಲ್ಲಿ ಕೂತುಕೋ ಕ್ಲಿಟಸ್, ಕೊಂದುಹಾಕಿದ್ದಾರೆ ಎನ್ನುವುದೇ ಸರಿ, ಅದೀಗ ಚಾಲ್ತಿಯಲ್ಲಿರುವ ಕಾರ್ಯ. ಇಲ್ಲಿ ಕೇಳು, ಕ್ಲಿಟಸ್. [ಕಿವಿಮಾತು ಹೇಳುತ್ತಾನೆ]
ಕ್ಲಿಟಸ್. ಏನು, ನಾನೇ, ಮಹಾಸ್ವಾಮಿ? ಇಲ್ಲ, ಇಡೀ ಲೋಕ ಕೊಟ್ಟರೂ ಇಲ್ಲ.
ಬ್ರೂಟಸ್. ಸುಮ್ಮನಿರು, ಹಾಗಿದ್ದರೆ, ಮಾತು ಬೇಡ.
ಕ್ಲಿಟಸ್. ಅದಕ್ಕಿಂತ ನಾನು ನನ್ನನ್ನೇ ಕೊಂದುಕೊಂಡೇನು.
ಬ್ರೂಟಸ್. ಡಾರ್ಡೇನಿಯಸ್, ನನ್ನ ಮಾತಿಗೆ ಕಿವಿಗೊಡು. [ಕಿವಿಮಾತು ಹೇಳುತ್ತಾನೆ]
ಡಾರ್ಡೇನಿಯಸ್. ನಾನು ಮಾಡಬೇಕೇ ಅಂಥಾ ಕೆಲಸ?
ಕ್ಲಿಟಸ್. ಓ ಡಾರ್ಡೇನಿಯಸ್.
ಡಾರ್ಡೇನಿಯಸ್. ಓ ಕ್ಲಿಟಸ್.
ಕ್ಲಿಟಸ್. ಬ್ರೂಟಸ್ ನಿನ್ನಲ್ಲಿ ಮಾಡಿದ ಅಂಥಾ ಕೋರಿಕೆಯೇನು?
ಡಾರ್ಡೇನಿಯಸ್. ಅವರನ್ನು ಕೊಲ್ಲುವುದಕ್ಕೆ: ನೋಡು ಅವರು ಯೋಚನೆಯಲ್ಲಿದ್ದಾರೆ.
ಕ್ಲಿಟಸ್. ಈಗ ಆ ಮಹಾಜೀವ ದುಃಖದಿಂದ ತುಂಬಿದೆ, ಅದು ಅವರ ಕಣ್ಣುಗಳಿಂದ ಹರಿಯುತ್ತಿದೆ.
ಬ್ರೂಟಸ್. ಜಾಣ ವೊಲೂಮ್ನಿಯಸ್, ಇಲ್ಲಿ ಬಾ, ಒಂದು ಮಾತು.
ವೊಲೂಮ್ನಿಯಸ್. ಮಹಾಸ್ವಾಮಿ ಹೇಳುವುದೇನು.
ಬ್ರೂಟಸ್. ಯಾಕೆ, ಇಷ್ಟೆ, ವೊಲೂಮ್ನಿಯಸ್:
ಸೀಸರನ ಪ್ರೇತ ನನ್ನ ಮುಂದೆ ಕಾಣಿಸಿಕೊಂಡಿದೆ ರಾತ್ರಿ ಎರಡು ಮೂರು ಸಲ: ಸಾರ್ಡಿಸ್‍ನಲ್ಲಿ ಒಮ್ಮೆ; ಮತ್ತು ನಿನ್ನೆ ರಾತ್ರಿ ಇಲ್ಲಿ ಈ ಫಿಲಿಪ್ಪಿಯ ಬಯಲುಗಳಲ್ಲಿ ಕೂಡ: ನನ್ನ ಸಮಯ ಬಂತೆಂದು ನನಗೆ ಗೊತ್ತಿದೆ.
ವೊಲೂಮ್ನಿಯಸ್. ಹಾಗಿಲ್ಲ, ಮಹಾಸ್ವಾಮಿ.
ಬ್ರೂಟಸ್. ಅಲ್ಲ, ಅದು ಹಾಗೆಯೇ, ನನಗೆ ಖಂಡಿತಾ ಗೊತ್ತಿದೆ, ವೊಲೂಮ್ನಿಯಸ್. ನೀನು ಲೋಕ ನೋಡುತ್ತಿರುವಿ,
ವೊಲ್ಯೂಮ್ನಿಯಸ್, ಅದು ಹೇಗೆ ಸಾಗುತ್ತಿದೆ, ವೈರಿಗಳು ನಮ್ಮನ್ನು ಹಳ್ಳಕ್ಕೆ ಕೆಡವುತ್ತಿದ್ದಾರೆ:

[ಸೂಚನಾವಾದ್ಯ ಕ್ಷೀಣ ದನಿಯಲ್ಲಿ]

ನಾವಾಗಿ ಹಾರುವುದೇ ಒಳ್ಳೆಯದು, ಅವರು ದೂಡುವ ವರೆಗೆ ಕಾಯುವುದಕ್ಕಿಂತ. ಜಾಣ ವೊಲೂಮ್ನಿಯಸ್, ನಿನಗೆ ಗೊತ್ತಿದೆ
ನಾವಿಬ್ಬರೂ ಒಟ್ಟಿಗೇ ಶಾಲೆಗೆ ಹೋದ್ದು: ಆ ನಮ್ಮ ಹಳೇ ಸ್ನೇಹಕ್ಕಾದರೂ, ನಾನು ಬೇಡುವುದೆಂದರೆ, ನನ್ನೀ ಖಡ್ಗವ ಹಿಡಿದುಕೋ,
ನಾನದಕ್ಕೆ ಧಾವಿಸುವುದಕ್ಕೆ.
ವೊಲೂಮ್ನಿಯಸ್. ಅದು ಸ್ನೆಹಿತನಿಗೆ ಮಾಡುವ ಸೇವೆಯಲ್ಲ, ಮಹಾಸ್ವಾಮಿ.

[ಸೂಚನಾವಾದ್ಯ ಇನ್ನೂ]

ಕ್ಲಿಟಸ್. ತಪ್ಪಿಸಿಕೊಳ್ಳಿರಿ, ಮಹಾಸ್ವಾಮಿ, ಇದು ಕಾಯುವ ಜಾಗವಲ್ಲ.
ಬ್ರೂಟಸ್. ವಿದಾಯ ನಿನಗೆ, ಹಾಗೂ ನಿನಗೆ, ಹಾಗೂ ನಿನಗೆ, ವೊಲ್ಯೂಮ್ನಿಯಸ್. ಸ್ಟ್ರಾಟೋ, ನೀನು ಇಷ್ಟೂ ವೇಳೆ ನಿದ್ರುಸುತ್ತಿದ್ದಿಯಾ: ನಿನಗೂ ವಿದಾಯ ಸ್ಟ್ರಾಟೋ, ದೇಶವಾಸಿಗಳೇ: ನನ್ನ ಹೃದಯ ಆಹ್ಲಾದಿಸುತ್ತಿದೆ, ನನ್ನ ಇಡೀ ಜೀವನದಲ್ಲಿ ನನಗೆ ನಿಷ್ಠರಲ್ಲದ ಯಾರನ್ನೂ ನಾನು ಕಂಡಿಲ್ಲ ಎನ್ನುವುದಕ್ಕೆ. ಈ ಅಪಜಯದ ದಿನ ನನಗೆ ಸಿಗುವ ಕೀರ್ತಿ ಒಕ್ಟೇವಿಯಸಿಗಾಗಲಿ ಮಾರ್ಕ್ ಆಂಟನಿಗಾಗಲಿ ಈ ದುರಾಕ್ರಮಣದಿಂದ ಸಿಗುವುದಕ್ಕಿಂತ ಹೆಚ್ಚಿನದು. ಆದ್ದರಿಂದ ಇದೋ ಶೀಘ್ರ ವಿದಾಯ, ಯಾಕೆಂದರೆ
ಬ್ರೂಟಸಿನ ಮಾತು ಅವನ ಜೀವನ ಚರಿತ್ರೆಯನ್ನು ಇನ್ನೇನು ಮುಗಿಸಿದ ಹಾಗೆಯೇ: ರಾತ್ರಿ ನನ್ನ ಕಣ್ಣಿನ ಮೇಲೆ ತೂಗುತ್ತಿದೆ, ನನ್ನ ಅಸ್ಥಿಗಳಿಗೆ ವಿಶ್ರಾಂತಿ ಬೇಕು,ಅವು ಈ ಗಳಿಗೆಗೋಸ್ಕರ ಶ್ರಮಿಸಿವೆ.

[ಸೂಚನಾವಾದ್ಯ; ಓಡಿ, ಓಡಿ, ಓಡಿ ಎಂಬ ಕೂಗು ನೇಪಥ್ಯದಲ್ಲಿ]

ಕ್ಲಿಟಸ್. ತಪ್ಪಿಸಿಕೊಳ್ಳಿ, ನನ್ನ ದೊರೆಯೇ.
ಬ್ರೂಟಸ್. ನೀವು ಹೋಗಿ, ನಾನು ಹಿಂಬಾಲಿಸುವೆ.

[ಕ್ಲಿಟಸ್, ಡಾರ್ಡೇನಿಯಸ್, ಮತ್ತು ವೊಲೂಮ್ನಿಯಸ್ ನಿಷ್ಕ್ರಮಣ]

ಸ್ಟ್ರಾಟೋ ನಿನ್ನನ್ನು ಬೇಡಿಕೊಳ್ಳುವೆ, ನಿನ್ನ ಯಜಮಾನನ ಬಳಿ ನಿಲ್ಲು. ನೀನೊಬ್ಬ ಯೋಗ್ಯ ಮನುಷ್ಯ: ನಿನ್ನ ಬದುಕಿನಲ್ಲಿ
ನೀನೂ ಸ್ವಲ್ಪ ಮರ್ಯಾದೆಯ ರುಚಿ ಕಂಡಿರುವಿ, ಹಾಗಿದ್ದರೆ ಇನ್ನು ಈ ಕರವಾಳ ಹಿಡಿದುಕೋ, ಮುಖ ಪಕ್ಕಕ್ಕೆ ತಿರುಗಿಸು,
ನಾನದಕ್ಕೆ ಬಿದ್ದು ಇರಿದುಕೊಳ್ಳುವೆ. ಹಾಗೆ ಮಾಡುವಿಯಾ, ಸ್ಟ್ರಾಟೋ?
ಸ್ಟ್ರಾಟೋ. ನಿಮ್ಮ ಕೈನೀಡಿ ಮೊದಲು. ವಿದಾಯ, ನನ್ನ ದೊರೆಯೇ.
ಬ್ರೂಟಸ್. ವಿದಾಯ, ಪ್ರಿಯ ಸ್ಟ್ರಾಟೋ. —ಸೀಸರ್, ಈಗಿನ್ನು ಸುಮ್ಮನಿರು, ನಾನು ನಿನ್ನನ್ನು ಇದಕ್ಕಿಂತ ಅರ್ಧದಷ್ಟೂ
ಸಂತೋಷದಲ್ಲಿ ಕೊಂದುದಲ್ಲ. [ಸಾಯುವನು]

ಆತ್ಮ ಹತ್ಯೆ ಗೈಯ್ಯುತ್ತಿರುವ ಬ್ರೂಟಸ್ ಬ್ರುತಸ್ (ಚಿತ್ರ ಕೃಪೆ ವಿಕಿ ಮೀಡಿಯಾ )

ಸೂಚನಾವಾದ್ಯ. ಹಿಂಪಥಚಲನೆ. ಒಕ್ಟೇವಿಯಸ್, ಆಂಟನಿ, ಮೆಸಲ, ಲೂಸಿಲಿಯಸ್, ಮತ್ತು ಸೇನೆಯ ಪ್ರವೇಶ

ಒಕ್ಟೇವಿಯಸ್. ಯಾರೀ ಮನುಷ್ಯ?
ಮೆಸಲ. ನನ್ನೊಡೆಯನ ಜನ: ಸ್ಟ್ರಾಟೋ, ಒಡೆಯರೆಲ್ಲಿ? ಸ್ಟ್ರಾಟೋ. ನೀವಿರುವ ಬಂಧನದಿಂದ ಮುಕ್ತರಾಗಿದ್ದಾರೆ, ವಿಜಯಿಗಳು ಅವರನ್ನು ಬೆಂಕಿ ಮಾತ್ರ ಮಾಡಬಲ್ಲರು: ಯಾಕೆಂದರೆ ಬ್ರೂಟಸ್ ತಮ್ಮ ಮೇಲೆ ತಾವೇ ವಿಜಯ ಗಳಿಸಿದ್ದಾರೆ, ಮತ್ತೆ ಇನ್ನು ಯಾರಿಗೂ ಅವರ ಸಾವಿನ ಹೆಗ್ಗಳಿಕೆಯಿಲ್ಲ.
ಲೂಸಿಲಿಯಸ್. ಹಾಗೆ ಕಾಣಿಸಬೇಕು ಬ್ರೂಟಸ್. ವಂದನೆಗಳು ನಿಮಗೆ ಬ್ರೂಟಸ್, ಲೂಸಿಲಿಯಸ್‍ನ ಮಾತು ನಿಜವಾಗಿಸಿದ್ದಕ್ಕೆ.
ಒಕ್ಟೇವಿಯಸ್. ಬ್ರೂಟಸ್‍ನ ಹಿಂಬಾಲಕರನ್ನೆಲ್ಲ ನಾನು ನೇಮಿಸಿಕೊಳ್ಳುವೆ. ಏನಯ್ಯಾ, ನಿನ್ನ ವೇಳೆ ನನಗೆ ನೀಡುವಿಯಾ?
ಸ್ಟ್ರಾಟೋ. ಮೆಸಲಾ ನನ್ನನ್ನು ನಿಮಗೆ ಒಪ್ಪಿಸಿದರೆ.
ಒಕ್ಟೇವಿಯಸ್. ಮೆಸಲಾ, ಹಾಗೇ ಮಾಡು ದಯವಿಟ್ಟು.
ಮೆಸಲ. ನನ್ನೊಡೆಯರು ಸತ್ತುದು ಹೇಗೆ, ಸ್ಟ್ರಾಟೋ?
ಸ್ಟ್ರಾಟೋ. ನಾನು ಖಡ್ಗ ಹಿಡಿದೆ, ಅವರು ಅದನ್ನು ಹಾಯ್ದರು.
ಮೆಸಲ. ಒಕ್ಟೇವಿಯಸ್, ಹಾಗಿದ್ದರೆ ಇವನನ್ನು ನೇಮಿಸಿಕೊಳ್ಳಿ, ನಿಮ್ಮ ಹಿಂಬಾಲಕನಾಗಿ, ಯಾಕೆಂದರೆ ಈತ ನನ್ನೊಡೆಯರ
ಅಂತಿಮ ಸೇವೆ ಮಾಡಿದವ.
ಆಂಟನಿ. ಎಲ್ಲ ರೋಮನರಲ್ಲಿ ಬ್ರೂಟಸ್‍ನೇ ಶ್ರೇಷ್ಠ: ಇವನ ಹೊರತು ಉಳಿದೆಲ್ಲ ಬಂಡುಕೋರರೂ ತಾವೇನು ಮಾಡಿದರೋ ಅದನ್ನು ಸೀಸರನ ಮತ್ಸರದಲ್ಲಿ ಮಾಡಿದರು: ನಿಸ್ವಾರ್ಥ ಸಾರ್ವಜನಿಕ ನಿಷ್ಠೆಯಲ್ಲಿ, ಸರ್ವಜನ ಹಿತದಲ್ಲಿ, ಈತ ಇತರರ ಜತೆ ಸೇರಿದ್ದು. ಸಾಧು ಜೀವನ್ ಇವನ ಜೀವನ, ಹಾಗೂ ಪಂಚಭೂತಗಳು ಇವನಲ್ಲಿ ಹೇಗೆ ಸಮ್ಮಿಳಿಸಿದ್ದುವೆಂದರೆ, ನಿಸರ್ಗವೇ ಎದ್ದುನಿಂತು ಇಡೀ ಜಗತ್ತಿಗೆ ಸಾರಬಹುದು; ಇವನೇ ಮನುಷ್ಯ.
ಒಕ್ಟೇವಿಯಸ್. ಅವನ ಗುಣಕ್ಕೆ ತಕ್ಕಂತೆ ಅವನನ್ನು ಗೌರವಿಸಬೇಕು, ಸಕಲ ಗೌರವ ಮತ್ತು ಸಂಸ್ಕಾರ ಕ್ರಿಯೆಗಳೊಂದಿಗೆ. ಈ ರಾತ್ರಿ ನನ್ನ ಡೇರೆಯಲ್ಲಿರಲಿ ಅವನ ದೇಹ, ಎಲ್ಲಾ ಸೈನಿಕ ಮರ್ಯಾದೆಗಳೊಂದಿಗೆ: ಆದ್ದರಿಂದ ಸೇನೆಗೆ ಕರೆನೀಡಿ ವಿಶ್ರಾಂತಿಗೆ, ಹೋಗೋಣ,ಹೋಗಿ ಈ ಶುಭದಿನದ ಕೀರ್ತಿಗಳನ್ನು ಹಂಚಿಕೊಳ್ಳೋಣ.
[ನಿಷ್ಕ್ರಮಣ ]