- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
- ಜೂಲಿಯಸ್ ಸೀಸರ್ ಅಂಕ -೫ - ಜನವರಿ 30, 2022
ಅಂಕ ೧ : https://nasuku.com/ಜೂಲಿಯಸ್-ಸೀಸರ್-ಅಂಕ-೧/
ಅಂಕ ೨ : https://nasuku.com/ಜೂಲಿಯಸ್-ಸೀಸರ್/ ಅಂಕ
ಅಂಕ ೩: https://nasuku.com/ಜೂಲಿಯಸ್-ಸೀಸರ್-ಅಂಕ-3/
ಅಂಕ ೪ ಆರಂಭ
ಅಂಕ 4
ಅಂಕ 4
ದೃಶ್ಯ 1
ರೋಮಿನಲ್ಲೊಂದು ಮನೆ.
ಆಂಟನಿ, ಒಕ್ಟೇವಿಯಸ್ ಮತ್ತು ಲೆಪಿಡಸ್ ಪ್ರವೇಶ
ಆಂಟನಿ. ಇಷ್ಟು ಜನ ಹಾಗಿದ್ದರೆ ಸಾಯಬೇಕು, ಅವರ ಹೆಸರುಗಳನ್ನು ಗುರುತುಮಾಡಿದೆ.
ಒಕ್ಟೇವಿಯಸ್. ನಿಮ್ಮ ಸೋದರ ಕೂಡಾ ಸಾಯುತ್ತಾನೆ: ಒಪ್ಪಿಗೆಯೇ ಲೆಪಿಡಸ್?
ಲೆಪಿಡಸ್. ಒಪ್ಪಿಗೆ.
ಒಕ್ಟೇವಿಯಸ್. ಅವನ ಹೆಸರಿಗೆ ಬರೆ ಹಾಕಿ ಆಂಟನಿ.
ಲೆಪಿಡಸ್. ಪುಬ್ಲಿಯಸ್ ಕೂಡಾ ಬದುಕುಳಿಯಬಾರದು ಎಂಬ ಶರತ್ತಿನ ಮೇಲೆ, ಆತ ನಿಮ್ಮ ಸೋದರಿಯ ಮಗ, ಮಾರ್ಕ್ ಆಂಟನಿ.
ಆಂಟನಿ. ಅವನು ಬದುಕುವುದಿಲ್ಲ: ನೋಡಿ ಒಂದು ಗೆರೆಹಾಕಿ ನಾನವನಿಗೆ ಗತಿಕಾಣಿಸುತ್ತೇನೆ. ಆದರೆ ಲೆಪಿಡಸ್, ನೀವು ಸೀಸರನ ಮನೆಗೆ ಹೋಗಿ ವೀಲ್ನಾಮೆ ತೆಗೆದುಕೊಂಡು ಬನ್ನಿ, ಬಳುವಳಿಗಳನ್ನು ಹೇಗೆ ಪಾಲುಮಾಡಬೇಕೆನ್ನುವುದನ್ನು ನಾವು ತೀರ್ಮಾನಿಸೋಣ.
ಲೆಪಿಡಸ್. ಏನು, ನೀವಿಲ್ಲೇ ಇರುತ್ತೀರ? ಒಕ್ಟೇವಿಯಸ್. ಒಂದೋ ಇಲ್ಲಿ, ಇಲ್ಲದಿದ್ದರೆ ಪುರಭವನದಲ್ಲಿ.
[ಲೆಪಿಡಸ್ ನಿಷ್ಕ್ರಮಣ
ಆಂಟನಿ. ಈತ ಸ್ವಲ್ಪ ಅಯೋಗ್ಯ ಮನುಷ್ಯ, ಸಣ್ಣಪುಟ್ಟ ಕೈಕೆಲಸ ಮಾಡಿಸಬಹುದು ಅಷ್ಟೆ: ಮುಮ್ಮಡಿ ಜಗತ್ತನ್ನು ಭಾಗಿಸಿ, ಇವನಿಗೆ ಮೂರರಲ್ಲಿ ಒಂದು ಭಾಗ ದೊರಕುವುದು ಸರಿಯೆನಿಸುವುದೆ?
ಒಕ್ಟೇವಿಯಸ್. ನೀವು ಹಾಗೆ ಅಂದುಕೊಂಡಿರಿ, ಮತ್ತು ನಮ್ಮ ಕರಾಳ ನ್ಯಾಯ ತೀರ್ಮಾನದಲ್ಲಿ ಯಾರು ಯಾರು ಸಾಯಬೇಕೆನ್ನುವುದಕ್ಕೆ ಅವನ ಸ್ವರ ಎತ್ತಿಕೊಂಡಿರಿ.
ಆಂಟನಿ. ಒಕ್ಟೇವಿಯಸ್, ನಾನು ನಿಮಗಿಂತ ಹೆಚ್ಚು ದಿನಗಳನ್ನು ನೋಡಿದವ, ಈ ಗೌರವಗಳನ್ನು ನಾವೀ ಮನುಷ್ಯನ ಮೇಲೆ ಹೊರಿಸುತ್ತೇವಾದರೂ, ವಿವಿಧ ದೋಷಾರೋಪಗಳ ಭಾರಗಳಿಂದ ನಮ್ಮನ್ನು ಹಗುರಗೊಳಿಸುವುದಕ್ಕೆ, ಅವನು ಈ ಭಾರವನ್ನು ಹೊರುತ್ತಾನೆ, ಕತ್ತೆ ಚಿನ್ನವನ್ನು ಹೊರುವಂತೆ, ಹೊರುತ್ತ ಏದುಸಿರುಬಿಟ್ಟು ಬೆವರುವುದಕ್ಕೆ, ನಾವು ಹೇಳಿದ ದಿಕ್ಕಿನಲ್ಲಿ ಒಂದೋ
ಹಿಂಬಾಲಿಸುವುದಕ್ಕೆ, ಇಲ್ಲವೇ ಚಡಿಯೇಟು ತಿಂದು ಮುಂದೆ ಸಾಗುವುದಕ್ಕೆ: ನಮ್ಮ ನಿಧಿಯನ್ನು ನಾವು ಬಯಸಿದಲ್ಲಿಗೆ
ತಂದ ನಂತರ, ಹೊರೆ ಇಳಿಸಿ ಅವನನ್ನು ಸಾಗಹಾಕಿದರಾಯ್ತು,
ಆಮೇಲೆ ಖಾಲಿ ಕತ್ತೆ ಕಿವಿಯಾಡಿಸಿ ಬಯಲಲ್ಲಿ ಮೇದುಕೊಂಡಿರುತ್ತದೆ.
ಒಕ್ಟೇವಿಯಸ್. ನೀವು ಏನು ಬೇಕಾದರೂ ಮಾಡಿ. ಆದರೆ ಆತನೊಬ್ಬ ಅನುಭವೀ ಹಾಗೂ ಧೀರ ಯೋಧ.
ಆಂಟನಿ. ಹಾಗೇನೇ ನನ್ನ ಕುದುರೆಯೂ, ಒಕ್ಟೇವಿಯಸ್, ಅದಕ್ಕೆಂದೇ ನಾನು ಒಣಹುಲ್ಲು ಜೋಪಾನ ಮಾಡುತ್ತಿದ್ದೇನೆ.
ಸೆಣಸಲು, ಸುತ್ತಲು, ನಿಲ್ಲಲು, ನೇರ ಓಡಲು ನಾನು ಕಲಿಸುವ ಪ್ರಾಣಿ ಅದು; ನನ್ನ ಇಚ್ಛಾನಿಯಂತ್ರಿತ ಅದರ ನೈಸರ್ಗಿಕ ಚಲನೆ, ಹಾಗೂ ಕೆಲವು ವಿಷಯದಲ್ಲಿ ಲೆಪಿಡಸ್ ಹಾಗೆಯೇ: ಅವನಿಗೆ ಕಲಿಸಬೇಕು, ಪಳಗಿಸಬೇಕು, ಮತ್ತು ಮುಂದೆ ಹೋಗಲು ಆಜ್ಞಾಪಿಸಬೇಕು, ಅಂಥ ಇಚ್ಛಾಶಕ್ತಿಯಿಲ್ಲದ ಮನುಷ್ಯ ಆತ: ಕೀಳು ವಸ್ತುಗಳ ಮೇಲೆ, ಚಿಂದಿಚೂರುಗಳ ಮೇಲೆ, ಮತ್ತು ನಕಲಿಗಳ ಮೇಲೆ ಅವನ ಶೈಲಿ ಮೊದಲಾಗುತ್ತದೆ, ಅವು ಬಳಕೆಯಲ್ಲಿಲ್ಲದೆ, ಇತರ ಮನುಷ್ಯರಿಂದ ತ್ಯಾಜ್ಯಕ್ಕೊಳಗಾಗಿ ಕಾಲ ಕಳೆದಿರುತ್ತದೆ. ಅವನ ಬಗ್ಗೆ ಮಾತಾಡುವುದು ಬೇಡ, ಬರೇ ಒಂದು ವಸ್ತುವಿಗಿಂತ ಹೆಚ್ಚಿನ ರೀತಿಯಲ್ಲಿ: ಈಗ ಗಹನ ಸಂಗತಿಗಳನ್ನು ಕೇಳಿ,
ಒಕ್ಟೇವಿಯಸ್. ಬ್ರೂಟಸ್ ಮತ್ತು ಕೇಸಿಯಸ್ ಸೈನ್ಯ ಸಂಗ್ರಹ ಮಾಡುತ್ತಿರುವರು; ನಾವು ಕೂಡಲೇ ಮುಂದರಿಯಬೇಕು: ಆದ್ದರಿಂದ ನಮ್ಮ ಬಲಗಳನ್ನು ಒಂದಾಗಿಸೋಣ, ನಮ್ಮ ಅತ್ಯುತ್ತಮ ಮಿತ್ರರನ್ನು ಸಂಪಾದಿಸಿ, ನಮ್ಮ ಸಾಧನಗಳನ್ನು ವಿಸ್ತರಿಸಿ, ಕೂಡಲೇ
ಸಭೆ ಸೇರೋಣ, ಪ್ರಚ್ಛನ್ನ ಸಂಗತಿಗಳನ್ನು ಪ್ರಕಟ ಮಾಡುವುದು ಹೇಗೆ, ಮತ್ತು ಪ್ರಕಟ ಗಂಡಾಂತರಗಳನ್ನು ಉತ್ತರಿಸುವುದು ಹೇಗೆಂದು ಚರ್ಚಿಸುವುದಕ್ಕೆ.
ಒಕ್ಟೇವಿಯಸ್. ಹಾಗೇ ಮಾಡೋಣ: ಯಾಕೆಂದರೆ ನಾವು ಮುಳ್ಳ ಮೇಲೆ ನಿಂತಿದ್ದೇವೆ, ಹಾಗೂ ಹಲವು ಶತ್ರುಗಳ ಕೇಕೆಗೆ ಗುರಿಯಾಗಿ, ಮತ್ತು ಮುಗುಳ್ನಗುವ ಕೆಲವರ ಹೃದಯಗಳಲ್ಲಿ ಸಹಸ್ರ ಕುಟಿಲಗಳು ಇವೆಯೆಂದು ನನಗೆ ಭೀತಿ.
[ನಿಷ್ಕ್ರಮಣ
ದೃಶ್ಯ 2
ಸಾರ್ಡಿಸ್‍ನ ಹತ್ತಿರ ಪಾಳಯ. ಬ್ರೂಟಸ್‍ನ ಡೇರೆಯೆದುರು.
ನಗಾರಿ. ಬ್ರೂಟಸ್, ಲೂಸಿಲಿಯಸ್, ಲೂಸಿಯಸ್, ಮತ್ತು ಸೈನಿಕರ ಪ್ರವೇಶ. ಅವರನ್ನು ಟಿಟಿನಿಯಸ್ ಮತ್ತು ಪಿಂಡಾರಸ್ ಭೇಟಿಯಾಗುತ್ತಾರೆ.
ಬ್ರೂಟಸ್. ಯಾರದು, ನಿಲ್ಲಿ!
ಲೂಸಿಲಿಯಸ್. ಯಾರು, ಸಂಕೇತ ಕೊಟ್ಟು ನಿಲ್ಲಿ!
ಬ್ರೂಟಸ್. ಯಾರು, ಲೂಸಿಲಿಯಸ್ಸಾ? ಕೇಸಿಯಸ್ ಇದ್ದಾನೆಯೇ ಹತ್ತಿರದಲ್ಲಿ?
ಲೂಸಿಲಿಯಸ್. ಹತ್ತಿರವೇ ಇದ್ದಾನೆ, ಅಲ್ಲದೆ ಪಿಂಡಾರಸ್ ಬಂದಿದ್ದಾನೆ ನಿಮಗೆ ತನ್ನ ಯಜಮಾನರ ವಂದನೆಗಳನ್ನು ತಿಳಿಸುವುದಕ್ಕೆ.
ಬ್ರೂಟಸ್. ಅವನ ವಂದನೆಗಳು ಸಕಾಲಿಕ. ಪಿಂಡಾರಸ್, ನಿನ್ನ ಯಜಮಾನ ತಾನಾಗಿಯೇ ಬದಲಾಗಿ, ಅಥವಾ ಕೆಟ್ಟ
ಅಧಿಕಾರಿಗಳಿಂದ ಹಾಗಾಗಿ, ನನಗೆ ಚಿಂತೆ ಹಚ್ಚಿದ್ದಾನೆ, ಆದುದನ್ನು ಆಗದಿದ್ದರೇ ಚೆನ್ನಾಗಿತ್ತೆಂದು ಪರಿತಪಿಸುವುದಕ್ಕೆ:
ಆದರೆ ಅವನೂ ಪಕ್ಕದಲ್ಲಿದ್ದರೆ ನನಗೆ ಸಮಾಧಾನವಾದೀತು.
ಪಿಂಡಾರಸ್. ನಮ್ಮ ಮಹಾನ್ ಯಜಮಾನರು ನಿಮ್ಮ ಕುರಿತು ಗೌರವಾದರಗಳಿಂದ ತುಂಬಿದವರು, ಅವರು ಬಂದೇ ಬರುತ್ತಾರೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ.
ಬ್ರೂಟಸ್. ಯಾರೂ ಅದನ್ನು ಸಂದೇಹಿಸುವುದಿಲ್ಲ. ನೀನೊಂದು ಮಾತು ಹೇಳಿದರೆ ಸಾಕು, ಲೂಸಿಲಿಯಸ್, ಅವನು ನಿನ್ನನ್ನು ಹೇಗೆ ಸ್ವೀಕರಿಸಿದ ಎಂದು: ನಾನು ನಿಶ್ಚಿಂತನಾಗುತ್ತೇನೆ.
ಲೂಸಿಲಿಯಸ್. ಆದರ ಮತ್ತು ಸಾಕಷ್ಟು ಅಭಿಮಾನದಿಂದ, ಆದರೆ ಮುಂಚಿನಷ್ಟು ಮುಕ್ತ ಹಾಗೂ ಆತ್ಮೀಯ ಮಾತುಕತೆಯಿಂದ ಅಲ್ಲ.
ಬ್ರೂಟಸ್. ನೀನೊಬ್ಬ ಆತ್ಮೀಯ ಮಿತ್ರ ತಣ್ಣಗಾಗುವುದನ್ನು ವರ್ಣಿಸಿದಿ. ಯಾವಾಗಲೂ ನೆನಪಿಟ್ಟುಕೋ, ಲೂಸಿಲಿಯಸ್, ಪ್ರೀತಿ ಹಳಸಿ ಕೊಳೆಯಲು ಸುರುವಾದಾಗ ಅದೊಂದು ಒತ್ತಾಯದ ನಡಾವಳಿಯನ್ನು ಉಪಯೋಗಿಸುತ್ತದೆ. ನೇರ ಹಾಗೂ ಸರಳ ವಿಶ್ವಾಸದಲ್ಲಿ ತಂತ್ರಗಳಿಲ್ಲ: ಆದರೆ ಟೊಳ್ಳು ಮನುಷ್ಯರು ಪಕ್ಕದಲ್ಲಿರುವ ಕುದುರೆಗಳಂತೆ
ವೀರಾವೇಷ ಹಾಗೂ ಶಕ್ತಿಪ್ರದರ್ಶನ ಮಾಡುತ್ತಾರೆ.
[ನೇಪಥ್ಯದಲ್ಲಿ ಪಥಚಲನೆಯ ಕ್ಷೀಣ ಸದ್ದು]
ಆದರೆ ನಿಜವಾಗಿ ಕಾರ್ಪಣ್ಯ ಸಹಿಸಬೇಕೆಂದಾಗ ಅವು ತಲೆ ತಗ್ಗಿಸುತ್ತವೆ, ಹಾಗೂ ಕಪಟ ವಜ್ರಗಳಂತೆ ಪರೀಕ್ಷೆಯಲ್ಲಿ ಕುಸಿಯುತ್ತವೆ. ಅವನ ಸೇನೆ ಬರುತ್ತಿದೆಯೇ?
ಲೂಸಿಲಿಯಸ್. ಅವರು ಈ ರಾತ್ರಿ ಗಾರ್ಡಿಸ್‍ನಲ್ಲಿ ತಂಗುವವರಿದ್ದಾರೆ: ಹೆಚ್ಚಿನ ಭಾಗ ಕುದುರೆ ರಾವುತರು ಕೇಸಿಯಸ್‍ನ ಜತೆ ಬಂದಿದ್ದಾರೆ.
ಕೇಸಿಯಸ್ ಮತ್ತು ಅವನ ಸೈನಿಕರ ಪ್ರವೇಶ
ಬ್ರೂಟಸ್. ನೋಡು, ಬಂದುಬಿಟ್ಟ. ಅವನನ್ನು ಮೆಲ್ಲಗೆ ಹೋಗಿ ಕಾಣು.
ಕೇಸಿಯಸ್. ನಿಲ್ಲಿ!
ಬ್ರೂಟಸ್. ನಿಲ್ಲಿ, ಸಂಕೇತ ಪದ ನುಡಿಯಿರಿ!
ಸೈನಿಕ 1. ನಿಲ್ಲಿ.
ಸೈನಿಕ 2. ನಿಲ್ಲಿ.
ಸೈನಿಕ 3. ನಿಲ್ಲಿ.
ಕೇಸಿಯಸ್. ಶ್ರೇಷ್ಠ ಸೋದರ, ನೀವು ನನಗೆ ಅನ್ಯಾಯ ಮಾಡಿರುವಿರಿ.
ಬ್ರೂಟಸ್. ದೈವಗಳೇ, ನನ್ನ ನ್ಯಾಯ ನಿರ್ಣಯ ಮಾಡಿ; ನಾನು ನನ್ನ ಶತ್ರುಗಳಿಗೆ ಅನ್ಯಾಯ ಮಾಡುವೆನೆ? ಅದಲ್ಲದಿದ್ದರೆ
ನಾನೊಬ್ಬ ಸೋದರನಿಗೆ ಹೇಗೆ ಅನ್ಯಾಯ ಮಾಡಲಿ?
ಕೇಸಿಯಸ್. ಬ್ರೂಟಸ್, ಈ ನಿಮ್ಮ ನಿರ್ವಂಚನೆಯ ಭಂಗಿ ತಪ್ಪುಗಳನ್ನು ಬಚ್ಚಿಡುತ್ತಿದೆ, ಹಾಗೂ ನೀವದನ್ನು ತೆಗೆದುಕೊಂಡಾಗ—
ಬ್ರೂಟಸ್. ಕೇಸಿಯಸ್, ಸಮಾಧಾನ ತಾಳು, ನಿನ್ನ ದೂರುಗಳನ್ನು ಮೆತ್ತಗೆ ಹೇಳು, ನನಗೆ ನಿನ್ನನ್ನು ಚೆನ್ನಾಗಿ ಗೊತ್ತು. ನಮ್ಮಿಬ್ಬರ ಸೇನೆಗಳ ಮುಂದೆಯೇ ನಾವು ಜಗಳಾಡುವುದು ಬೇಡ. ಯಾಕೆಂದರೆ ನಮ್ಮ ಸೇನೆಗಳು ನಮ್ಮಿಂದ ಪ್ರೀತಿಯನ್ನಲ್ಲದೆ ಇನ್ನೇನನ್ನೂ ಕಾಣಬಯಸುವುದಿಲ್ಲ. ಅವರನ್ನು ದೂರ ಕಳಿಸು. ಆಮೇಲೆ ನನ್ನ ಡೇರೆಯಲ್ಲಿ ನಿನ್ನ ವೇದನೆಗಳನ್ನು ವಿವರಿಸು, ಕೇಸಿಯಸ್,
ನಾನು ಕಿವಿಗೊಡುವೆ.
ಕೇಸಿಯಸ್. ಪಿಂಡಾರಸ್, ನಮ್ಮ ಸೇನಾಧಿಪತಿಗಳಿಗೆ ಹೇಳು ಸೈನಿಕರನ್ನು ಸ್ವಲ್ಪ ಹಿಂದಕ್ಕೆ ಸರಿಸುವುದಕ್ಕೆ.
ಬ್ರೂಟಸ್. ಲೂಸಿಲಿಯಸ್, ನೀನೂ ಅದೇ ರೀತಿ ಮಾಡು, ನಮ್ಮ ಡೇರೆಗೆ ಯಾರೂ ಬಾರದಿರಲಿ, ನಮ್ಮ ಮಾತುಕತೆ
ಮುಗಿಯುವ ತನಕ ಲೂಸಿಯಸ್ ಮತ್ತು ಟಿಟಿನಿಯಸ್ ಬಾಗಿಲು ಕಾಯುತ್ತಿರಲಿ.
[ಎಲ್ಲರ ನಿಷ್ಕ್ರಮಣ
ದೃಶ್ಯ 3
ಬ್ರೂಟಸ್‍ನ ಡೇರೆ
ಬ್ರೂಟಸ್ ಮತ್ತು ಕೇಸಿಯಸ್ ಪ್ರವೇಶ
ಕೇಸಿಯಸ್. ನೀವು ನನಗೆ ಅನ್ಯಾಯವೆಸಗಿದ್ದು ಇದರಿಂದ ತಿಳಿಯುತ್ತದೆ: ನೀವು ಲೂಸಿಯಸ್ ಪೆಲ್ಲಾನಿಗೆ ಛೀಮಾರಿ ಹಾಕಿದಿರಿ, ಹಾಗೂ ಅವನ ಹೆಸರಿಗೆ ಗುರುತು ಹಾಕಿದಿರಿ, ಇಲ್ಲಿ ಪಾರ್ಥೀನಿಯರಿಂದ ಲಂಚ ಪಡೆದ ಎಂದು; ತನ್ಮೂಲಕ ಅವನ ಪರ ನನ್ನ ವಿಜ್ಞಪ್ತಿ ಪತ್ರಗಳಿಗೂ ಗೆರೆ ಬಿತ್ತು, ಯಾಕೆಂದರೆ ನನಗೆ ಗೊತ್ತಿದೆ ಆ ಮನುಷ್ಯನಿಗೆ ಆದ ಅವಮಾನ.
ಬ್ರೂಟಸ್. ಅಂಥ ವಿಷಯದಲ್ಲಿ ಪತ್ರ ಬರೆದು ನಿನಗೆ ನೀನೇ ಅನ್ಯಾಯ ಮಾಡಿದೆ.
ಕೇಸಿಯಸ್. ಈ ಕಾಲದಲ್ಲಿ ಪ್ರತಿಯೊಂದು ಸಣ್ಣಪುಟ್ಟ ತಪ್ಪಿಗೂ ಶಿಕ್ಷೆ ವಿಧಿಸಬೇಕೆಂದಿಲ್ಲ.
ಬ್ರೂಟಸ್. ನಾ ನಿನಗೆ ಹೇಳುತ್ತೆನೆ ಕೇಸಿಯಸ್, ನೀನೂ ಸಾಕಷ್ಟು ಅಪರಾಧಿಯೇ, ನಿನಗೆ ಕೈ ತುರಿಕೆ ಜಾಸ್ತಿ, ಚಿನ್ನದ ಆಸೆಯಿಂದ ಯೋಗ್ಯರಲ್ಲದವರಿಗೆ ಶಿಫಾರಸು ಮಾಡುತ್ತೀ.
ಕೇಸಿಯಸ್. ನನಗೆ ಕೈ ತುರಿಕೆಯೇ? ನಿಮಗೆ ಗೊತ್ತು ನೀವು ಬ್ರೂಟಸ್ ಈ ಮಾತು ಹೇಳುತ್ತಿರುವುದು, ಇಲ್ಲದಿದ್ದರೆ ದೇವರಾಣೆ ಈ ಮಾತು ನಿಮ್ಮ ಕೊನೇ ಮಾತಾಗುತ್ತಿತ್ತು.
ಬ್ರೂಟಸ್. ಕೇಸಿಯಸ್‍ನ ಹೆಸರು ಈ ಭ್ರಷ್ಟಾಚಾರಕ್ಕೆ ಮಾನ ತರುತ್ತದೆ. ಆದ್ದರಿಂದ ಛೀಮಾರಿ ಅವನ ಶಿರವನ್ನು ಅಡಗಿಸುತ್ತದೆ.
ಕೇಸಿಯಸ್. ಛೀಮಾರಿ?
ಬ್ರೂಟಸ್. ನೆನಪಿಟ್ಟುಕೋ ಮಾರ್ಚ್ ಹದಿನೈದು ನೆನಪಿಟ್ಟುಕೋ, ಮಹಾನ್ ಸೀಸರನೆ ನ್ಯಾಯಕ್ಕಾಗಿ ರಕ್ತ ಸುರಿಸಲಿಲ್ಲವೇ? ಅವನನ್ನು ತಿವಿದ ಯಾವ ದುಷ್ಟ ತಾನೆ ಅವನ ದೇಹ ಮುಟ್ಟಿದ, ನ್ಯಾಯಕ್ಕಾಗಿಯಲ್ಲದೆ? ಏನು? ಕೊಳ್ಳೆಗಾರರ ಬೆಂಬಲಿಸಿದ್ದಕ್ಕಲ್ಲದೆ ಈ ಜಗದ ಅಗ್ರಗಣ್ಯನೊಬ್ಬನಿಗೆ ನಮ್ಮಲ್ಲೊಬ್ಬ ಹೊಡೆದನೇ? ಅಂಥ ನಾವೀಗ ನೀಚ ರುಶುವತ್ತುಗಳಿಂದ ನಮ್ಮ ಬೆರಳುಗಳನ್ನು ಕೊಳೆಮಾಡಿಕೊಳ್ಳುವುದೆ? ಹಾಗೂ ಆ ಮೂಲಕ ಗಳಿಸಬಹುದಾದ ಅಷ್ಟೊಂದು ಕಸಕ್ಕಾಗಿ ನಮ್ಮ ಬಹು ದೊಡ್ಡ ಗೌರವಗಳ ಮಹಾಸ್ಥಾನವನ್ನು ಮಾರಲೆ? ಅಂಥ ರೋಮನ್ ಆಗಿರುವುದಕ್ಕಿಂತ ನಾನೊಂದು ಶ್ವಾನವಾಗಿ ಚಂದ್ರನ ನೋಡಿ ಬೊಗಳುವುದು ಒಳ್ಳೆಯದು.
ಕೇಸಿಯಸ್. ಬ್ರೂಟಸ್, ನನ್ನನ್ನು ಕೆಣಕದಿರಿ, ನಾನದನ್ನು ಸಹಿಸಲಾರೆ: ನನ್ನನ್ನು ಹೀಗೆ ಬದಿಗೆ ತಳ್ಳುತ್ತ, ನಿಮ್ಮನ್ನು ನೀವು ಮರೆತೀರಿ? ನಾನೊಬ್ಬ ಯೋಧ, ಅನುಭವಗಳಲ್ಲಿ ಹಿರಿಯ, ನಿಮಗಿಂತ ನುರಿತವ, ಈ ರೀತಿ ನಿಯತ್ತುಗಳ ವಿಧಿಸುವುದಕ್ಕೆ.
ಬ್ರೂಟಸ್. ಹೋಗು, ಹೋಗು, ನೀನು ಕೇಸಿಯಸ್ ಅಲ್ಲ.
ಕೇಸಿಯಸ್. ನಾನು ಕೇಸಿಯಸ್ಸೇ.
ಬ್ರೂಟಸ್. ನಾನು ಹೇಳ್ತೇನಲ್ಲ, ನೀನು ಕೇಸಿಯಸ್ ಅಲ್ಲ.
ಕೇಸಿಯಸ್. ನನ್ನನ್ನು ಹೆಚ್ಚು ಬಲವಂತ ಮಾಡುವುದು ಬೇಡ, ನಾನು ನನ್ನನ್ನೇ ಮರೆತೇನು: ನಿಮ್ಮ ಆರೋಗ್ಯದ ಕಡೆ ಗಮನ
ಹರಿಸಿ: ಮುಂದಕ್ಕೆ ನನ್ನ ಕೆಣಕುವುದು ಬೇಡ.
ಬ್ರೂಟಸ್. ಹೋಗಯ್ಯ, ಸಣ್ಣ ಮನುಷ್ಯ.
ಕೇಸಿಯಸ್. ಇದು ಸಾಧ್ಯವೇ?
ಬ್ರೂಟಸ್. ಇಲ್ಲಿ ಕೇಳು, ಯಾಕೆಂದರೆ ಈಗ ನಾನು ಮಾತಾಡುತ್ತೇನೆ. ನಿನ್ನ ಮುಂಗೋಪಕ್ಕೆ ನಾನು ದಾರಿ ಬಿಡಬೇಕೆ? ಹುಚ್ಚನೊಬ್ಬ ದಿಟ್ಟಿಸಿ ನೋಡುತ್ತಾನೆಂದು ನಾನು ಭಯಪಡಬೇಕೆ?
ಕೇಸಿಯಸ್. ಓ ದೇವರೆ, ದೇವರೆ, ನಾನಿದನ್ನೆಲ್ಲ ಸಹಿಸುವುದೆ?
ಬ್ರೂಟಸ್. ಇದನ್ನೆಲ್ಲಾ? ಇದಕ್ಕಿಂತಲೂ ಜಾಸ್ತಿ: ನಿನ್ನ ಅಹಂಕಾರದ ಎದೆ ಒಡೆಯುವ ತನಕ ಗೋಳಾಡು. ಹೋಗಿ ತೋರಿಸು ನಿನ್ನ ತೊತ್ತುಗಳಿಗೆ ನೀನೆಷ್ಟು ಕೋಪಾವಿಷ್ಟನೆಂದು,ಹಾಗೂ ನಿನ್ನ ಜೀತದಾಳುಗಳು ತತ್ತರಿಸುವಂತೆ ಮಾಡು. ನಾನು ಕದಲಬೇಕೆ? ನಾ ನಿನ್ನ ಗಮನಿಸಬೇಕೆ? ನಿನ್ನ ಸಿಟ್ಟು ಸೆಡವುಗಳಿಗೆ ನಾನು ನಿಂತು ಬಾಗಬೇಕೆ? ದೈವದಾಣೆಗೂ ನೀ ನಿನ್ನ ಪಿತ್ಥದ ನಂಜನ್ನು ನುಂಗುವಿ, ಅದು ನಿನ್ನನ್ನು ಇಬ್ಭಾಗ ಮಾಡಿದರೂ. ಯಾಕೆಂದರೆ ಇಂದಿನಿಂದ ನಿನ್ನನ್ನು ನಾನು ನನ್ನ ವಿನೋದಕ್ಕೆ ಬಳಸುವೆ,
ಹೌದಯ್ಯಾ, ನೀನು ಕಡಿಯುವ ವೇಳೆ ನಾನು ನಗುತ್ತೇನೆ.
ಕೇಸಿಯಸ್. ಇದು ಇಲ್ಲಿಗೆ ಬಂತೇ?
ಬ್ರೂಟಸ್. ನೀನನ್ನುತ್ತೀ ನೀನು ನನಗಿಂತ ಉತ್ತಮ ಯೋಧನೆಂದು; ಅದು ಹಾಗೇ ಅನಿಸಲಿ; ನೀನು ನಿನ್ನ ಆತ್ಮಪ್ರಶಂಸೆಯನ್ನು ನಿಜವಾಗಿಸಿದರೆ, ಉತ್ತಮರಿಂದ ಕಲಿಯುವುದು ಸಂತೋಷದ ವಿಚಾರ.
ಕೇಸಿಯಸ್. ನೀವು ಪ್ರತಿಯೊಂದು ವಿಷಯದಲ್ಲೂ ನನಗೆ ತಪ್ಪು ಮಾಡುತ್ತಿರುವಿರಿ, ಬ್ರೂಟಸ್: ನಾನಂದುದು ಹಿರಿಯ ಯೋಧನೆಂದು, ಉತ್ತಮನೆಂದಲ್ಲ. ಉತ್ತಮನೆಂದೆನೆ ನಾನು?
ಬ್ರೂಟಸ್. ಅಂದರೂ ನನಗದು ಏನೂ ಅಲ್ಲ.
ಕೇಸಿಯಸ್. ಸೀಸರ್ ಬದುಕಿದ್ದಾಗ ಸ್ವತಃ ಆತನೇ ನನ್ನನ್ನು ಈ ರೀತಿ ಉದ್ರೇಕಿಸಲು ಧೈರ್ಯ ಮಾಡಿದವನಲ್ಲ.
ಬ್ರೂಟಸ್. ಸಾಕು, ಸಾಕು, ನೀನವನ ಕೆಣಕಲು ಧೈರ್ಯ ಮಾಡಿದವನೂ ಅಲ್ಲ.
ಕೇಸಿಯಸ್. ಧೈರ್ಯ ಮಾಡಿದವನಲ್ಲ?
ಬ್ರೂಟಸ್. ಅಲ್ಲ.
ಕೇಸಿಯಸ್. ಏನು, ಅವನನ್ನು ಕೆಣಕುವ ಧೈರ್ಯ ನನಗಿಲ್ಲ?
ಬ್ರೂಟಸ್. ಜೀವ ಹೋದರೂ ನೀನು ಧೈರ್ಯ ಮಾಡುವವನಲ್ಲ.
ಕೇಸಿಯಸ್. ನನ್ನ ಸ್ನೇಹದ ಮೇಲೆ ಮಿತಿ ಮೀರಿ ಈ ರೀತಿ ಒತ್ತಡ ಹೇರುವುದು ಬೇಡ, ನಾನು ಪಶ್ಚಾತ್ತಪಿಸುವ
ಕೆಲಸ ಮಾಡಬಹುದು.
ಬ್ರೂಟಸ್. ನೀನು ಪಶ್ಚಾತ್ತಪಿಸುವ ಕೆಲಸ ಮಾಡಿಯಾಗಿದೆ. ನಿನ್ನ ಬೆದರಿಕೆಗಳಲ್ಲಿ ಭೀತಿಯೇ ಇಲ್ಲ, ಕೇಸಿಯಸ್: ಯಾಕೆಂದರೆ ಋಜುತ್ವದಲ್ಲಿ ನಾನೆಷ್ಟು ಸಾಯುಧನೆಂದರೆ ನಾನು ಗೌರವಿಸದ ಅವು ಸೋಮಾರಿ ಗಾಳಿಯ ತರ ನನ್ನ ಬದಿಯಿಂದ ಹಾದು ಹೋಗುತ್ತವೆ.
ಒಂದಷ್ಟು ಮೊತ್ತದ ಚಿನ್ನಕ್ಕಾಗಿ ನಾನು ಹೇಳಿಕಳಿಸಿದೆ ನಿನಗೆ, ನೀನದನ್ನು ನನಗೆ ನಿರಾಕರಿಸಿದಿ, ಯಾಕೆಂದರೆ ನಾನು ಕೆಟ್ಟ ವಿಧಾನಗಳಿಂದ ಹಣ ಶೇಖರಿಸಲಾರೆ: ದೇವರೆ, ಕೃಷಿಕರ ಕಾರ್ಪಣ್ಯದ ಕೈಗಳಿಂದ, ಅವರ ಚೂರುಪಾರುಗಳನ್ನು ಯಾವುದೇ ನೆಪದಲ್ಲಿ ಹಿಂಡಿ ತೆಗೆಯುವುದಕ್ಕಿಂತ, ನನ್ನ ಹೃದಯದಲ್ಲಿ ನಾಣ್ಯಗಳಿದ್ದು ನೆತ್ತರ ಬದಲು ನಾನು ಪವನುಗಳನ್ನು ಸುರಿಸಬಹುದಾಗಿದ್ದರೆ ಎಂದುಕೊಳ್ಳುತ್ತೇನೆ. ನನ್ನ ಸೈನ್ಯಕ್ಕೆ ಸಂಬಳ ಕೊಡಲೆಂದು ನಾನು ಚಿನ್ನಕ್ಕಾಗಿ ನಿನಗೆ ಹೇಳಿಕಳಿಸಿದ್ದು, ನೀನದನ್ನು ನನಗೆ ನಿರಾಕರಿಸಿದಿ: ಅದು ಕೇಸಿಯಸ್ ಮಾಡುವ ಕೆಲಸವೇ? ಕೈಯುಸ್ ಕೇಸಿಯಸಿಗೆ ನಾನದೇ ರೀತಿ ಉತ್ತರಿಸಬೇಕಿತ್ತೆ? ಮಾರ್ಕಸ್ ಬ್ರೂಟಸ್ ತನ್ನ ಮಿತ್ರರಿಂದ ಖಜಾನೆ ಪೆಟಾರಿಗಳಿಗೆ ಬೀಗ ಜಡಿಸುವಷ್ಟು ಲಾಲಸಿಯಾದಂದು, ದೈವಗಳೇ, ನೀವು ನಿಮ್ಮೆಲ್ಲ ವಜ್ರಾಯುಧಗಳಿಂದ ಅವನನ್ನು ಚೂರು ಚೂರಾಗುವಂತೆ ಹೊಡೆಯಿರಿ.
ಕೇಸಿಯಸ್. ನಾನು ನಿಮಗೆ ನಿರಾಕರಿಸಿಲ್ಲ.
ಬ್ರೂಟಸ್. ನೀನು ನಿರಾಕರಿಸಿದಿ.
ಕೇಸಿಯಸ್. ಇಲ್ಲ, ನನಗೆ ಉತ್ತರ ತಂದವನೊಬ್ಬ ಮೂರ್ಖ. ಬ್ರೂಟಸ್ ನನ್ನ ಹೃದಯ ಸೀಳಿದ್ದಾನೆ: ಒಬ್ಬ ಗೆಳೆಯ ತನ್ನ ಗೆಳೆಯನ ದೌರ್ಬಲ್ಯಗಳನ್ನು ತಾಳಿಕೊಳ್ಳಬೇಕು; ಆದರೆ ಬ್ರೂಟಸ್ ಅವುಗಳನ್ನು ಅವು ಇರುವುದಕ್ಕಿಂತಲೂ ಹೆಚ್ಚುಮಾಡುತ್ತಾನೆ.
ಬ್ರೂಟಸ್. ನಾನು ಮಾಡಿಲ್ಲ, ನೀನು ಅವುಗಳನ್ನು ನನ್ನ ಮೇಲೆ ಪ್ರಯೋಗಿಸುವ ವರೆಗೆ.
ಕೇಸಿಯಸ್. ನಿಮಗೆ ನನ್ನ ಮೇಲೆ ಪ್ರೀತಿಯಿಲ್ಲ.
ಬ್ರೂಟಸ್. ನಿನ್ನ ತಪ್ಪುಗಳನ್ನು ನಾನು ಮನ್ನಿಸುವುದಿಲ್ಲ.
ಕೇಸಿಯಸ್. ಸ್ನೇಹದ ಕಣ್ಣಿಗೆ ಅಂಥಾ ತಪ್ಪುಗಳು ಕಾಣಿಸುವುದೇ ಇಲ್ಲ.
ಬ್ರೂಟಸ್. ಭಟ್ಟಂಗಿಯ ಕಣ್ಣಿಗೆ ಕಾಣಿಸವು ಅವು, ಒಲಿಂಪಸ್ ಬೆಟ್ಟದಷ್ಟು ದೊಡ್ಡದಾಗಿದ್ದರೂ.
ಕೇಸಿಯಸ್. ಬಾ ಆಂಟನಿ, ಬಾ ಯುವ ಒಕ್ಟೇವಿಯಸ್, ಕೇಸಿಯಸ್‍ನ ಮೇಲೆ ಮಾತ್ರವೇ ನಿಮ್ಮ ಹಗೆ ತೀರಿಸಿಕೊಳ್ಳಿ,
ಯಾಕೆಂದರೆ ಕೇಸಿಯಸ್‍ಗೆ ಈ ಲೋಕ ಸಾಕಾಗಿಹೋಗಿದೆ: ತಾನು ಮೆಚ್ಚುವವನಿಂದ ದ್ವೇಷಿಸಲ್ಪಟ್ಟು, ತನ್ನ ಸೋದರನಿಂದಲೆ ಎದುರಿಸಲ್ಪಟ್ಟು, ಒಬ್ಬ ಜೀತದವನಂತೆ ತಡೆಯಲ್ಪಟ್ಟು, ಎಲ್ಲಾ ತಪ್ಪುಗಳೂ ಗಮನಿಸಲ್ಪಟ್ಟು, ಟಿಪ್ಪಣಿ ಪುಸ್ತಕದಲ್ಲಿ ದಾಖಲಿಸಲ್ಪಟ್ಟು, ಕಲಿಯಲ್ಪಟ್ಟು, ನನ್ನ ಮುಖಕ್ಕೇ ಒಗೆಯುವುದಕ್ಕೆ ಕಂಠಪಾಠ ಮಾಡಲ್ಪಟ್ಟು, ಓ ನಾನು ಅತ್ತು ಕರೆದು ನನ್ನ ಕಣ್ಣುಗಳಿಂದ ಉಸಿರು ನೀಗುವುದಾಗಿದ್ದರೆ!
ಇಲ್ಲಿ ನನ್ನ ಕತ್ತಿಯಿದೆ, ಹಾಗೂ ಇಲ್ಲಿ ನನ್ನ ಬೆತ್ತಲೆ ಎದೆಯಿದೆ: ಒಳಗೊಂದು ಹೃದಯ ಕುಬೇರನ ಖನಿಗಿಂತ ಪ್ರಿಯವಾದ್ದು, ಸ್ವರ್ಣಕ್ಕಿಂತ ಶ್ರೀಮಂತವಾದ್ದು: ನೀವು ರೋಮನ್ ಆಗಿದ್ದರೆ ಕಿತ್ತು ತೆಗೆದುಕೊಳ್ಳಿ ಇದನ್ನು. ನಿಮಗೆ ಸ್ವರ್ಣ ನಿರಾಕರಿಸಿದ ಈ ನಾನು ನನ್ನ ಹೃದಯವನ್ನೇ ನೀಡುತ್ತಿದ್ದೇನೆ: ನೀವು ಸೀಸರಿಗೆ ಇರಿದಂತೆ ನನಗೂ ಇರಿದುಬಿಡಿ: ಯಾಕೆಂದರೆ ನನಗೆ ಗೊತ್ತಿದೆ ನೀವವನನ್ನು ಅತ್ಯಂತ ದ್ವೇಷಿಸಿದಾಗಲೂ, ನೀವು ಕೇಸಿಯಸ್ಸನ್ನ ಎಂದೂ ಪ್ರೀತಿಸಿದ್ದಕ್ಕಿಂತ ಜಾಸ್ತಿ ಸೀಸರನ ಪ್ರೀತಿಸಿದಿರಿ.
ಬ್ರೂಟಸ್. ಒರೆಗೆ ಸೇರಿಸು ನಿನ್ನ ಕತ್ತಿಯನ್ನು: ನಿನಗೆ ಬೇಕೆನಿಸಿದಾಗ ಸಿಟ್ಟಿಗೇಳು, ಅದಕ್ಕೆ ಆಸ್ಪದವುಂಟು. ನಿನಗೆ ಬೇಕಾದ್ದು ಮಾಡು, ಅವಮಾನ ಮನೋವಿಕಾರವಾಗುತ್ತದೆ. ಓ ಕೇಸಿಯಸ್, ನಿನ್ನ ಹೆಗಲಿಗೆ ಹೆಗಲು ಕೊಟ್ಟಿರುವುದೊಂದು ಕುರಿಮರಿ, ಅದು ಸಿಟ್ಟನ್ನು ಹೊರುವುದು ಬೆಣಚುಕಲ್ಲು ಬೆಂಕಿಯನ್ನು ತೊಟ್ಟಂತೆ, ಬಲವಂತ ಮಾಡಿದ ತಕ್ಷಣ ಒಂದು ಕಿಡಿ ಹಾರಿಸುತ್ತದೆ, ಒಡನೆಯೇ ಮತ್ತೆ ತಣ್ಣಗೂ ಆಗುತ್ತದೆ.
ಕೇಸಿಯಸ್. ಕೇಸಿಯಸ್ ಬದುಕಿದ್ದು ಶೋಕ ಮತ್ತು ಕುದಿರಕ್ತ ಮನ ಕದಕಿದ ವೇಳೆ ಬ್ರೂಟಸಿಗೆ ಮುದ ಮತ್ತು ಹಾಸ್ಯ ಒದಗಿಸುವುದಕ್ಕೆಂದೆ?
ಬ್ರೂಟಸ್. ನಾನು ಹಾಗಂದಾಗ ನನಗೂ ಮನ ಕದಕಿತ್ತು.
ಕೇಸಿಯಸ್. ಅಷ್ಟೊಂದು ಒಪ್ಪಿಕೊಳ್ಳುವಿರಾ? ಎಲ್ಲಿ, ನಿಮ್ಮ ಕೈ ಕೊಡಿ.
ಬ್ರೂಟಸ್. ನನ್ನ ಹೃದಯ ಕೂಡ.
ಕೇಸಿಯಸ್. ಓ ಬ್ರೂಟಸ್!
ಬ್ರೂಟಸ್. ಯಾಕೆ?
ಕೇಸಿಯಸ್. ನನ್ನನ್ನು ಸಹಿಸಿಕೊಳ್ಳುವಷ್ಟೂ ಪ್ರೀತಿಯಿಲ್ಲವೆ ನಿಮಗೆ, ನನ್ನಮ್ಮ ನನಗಿತ್ತ ಆ ಮುಂಗೋಪ ನನ್ನ ಮರೆವಳಿಸಿದಾಗ?
ಬ್ರೂಟಸ್. ಇದೆ ಕೇಸಿಯಸ್. ಮತ್ತು ಇನ್ನು ಮೇಲೆ ನೀನು ನಿನ್ನ ಬ್ರೂಟಸಿನ ಜತೆ ಜಗಳ ತೆಗೆದಾಗ, ನಿನ್ನಮ್ಮ ನಿನ್ನನ್ನು
ಬಯ್ಯುತ್ತಿದ್ದಾಳೆಂದು ತಿಳಿದುಕೊಂಡು ಆತ ನಿನ್ನನ್ನು ನಿನ್ನಷ್ಟಕ್ಕೆ ಬಿಡುತ್ತಾನೆ.
ಕವಿ. [ನೇಪಥ್ಯದಲ್ಲಿ] ನನಗೆ ದಂಡನಾಯಕರನ್ನ ಭೇಟಿಮಾಡಲು ಬಿಡಿ, ಅವರುಗಳ ನಡುವೆ ವೈಷಮ್ಯ ಉಂಟು, ಅವರು ತಾವಾಗಿಯೇ ಇರೋದು ಒಳ್ಳೇದಲ್ಲ.
ಲೂಸಿಲಿಯಸ್. [ನೇಪಥ್ಯದಲ್ಲಿ] ನೀನು ಅವರಲ್ಲಿಗೆ ಬರಕೂಡದು.
ಕವಿ. [ನೇಪಥ್ಯದಲ್ಲಿ] ಸಾವಲ್ಲದೆ ಮತ್ತೆ ಯಾವುದೂ ನನ್ನನ್ನು ತಡೆಯಲಾರದು.
ಕವಿಯೊಬ್ಬನ ಪ್ರವೇಶ, ಲೂಸಿಲಿಯಸ್, ಟಿಟಿನಿಯಸ್, ಮತ್ತು
ಲೂಸಿಯಸ್ ಹಿಂಬಾಲಿಸುತ್ತ
ಕೇಸಿಯಸ್. ಏನೀಗ? ಏನು ಸಂಗತಿ?
ಕವಿ. ನಾಚಿಕೆಯಾಗಬೇಕು, ನಿಮಗೆ, ದಂಡನಾಯಕರೆ, ಯಾರೇ ಇಬ್ಬರು ಮನುಷ್ಯರಿಗೂ ಆಗಬೇಕಾದ ಹಾಗೆ, ನನಗೆ ಖಂಡಿತಾ ಗೊತ್ತಿದೆ ಯಾಕೆಂದರೆ, ವರ್ಷಗಳ ಕಂಡಿರುವೆ ನಿಮಕಿಂತ ಹೆಚ್ಚಿಗೆ.
ಕೇಸಿಯಸ್. ಹ್ಹ, ಹ್ಹ, ಎಷ್ಟು ಶಾಣೆಯಾಗಿ ಈ ಕುಕವಿ ಪ್ರಾಸ ಹೊಸೆಯುತ್ತಾನೆ.
ಬ್ರೂಟಸ್. ನಡಿ ಇಲ್ಲಿಂದ, ಲೋ! ಅಧಿಕಪ್ರಸಂಗಿ, ತೊಲಗಾಚೆ.
ಕೇಸಿಯಸ್. ತಾಳಿಕೊಳ್ಳಿ, ಬ್ರೂಟಸ್, ಅದು ಅವನ ರೀತಿ.
ಬ್ರೂಟಸ್. ಅವನಿಗೆ ಸಮಯದ ಪರಿವೆಯಿದ್ದಾಗ ನನಗವನ ರೀತಿಯ ಪರಿವೆಯೂ ಇದ್ದೀತು.ಯುದ್ಧಗಳಿಗೇನಿದೆ ಈ ಗೆಜ್ಜೆಕುಣಿತದ ಮೂರ್ಖರ ಜತೆ?ಆಸಾಮಿಯೇ, ತೆರಳು.
ಕೇಸಿಯಸ್. ಸರಿ, ಸರಿ, ಹೊರಟುಹೋಗು.
[ಕವಿಯ ನಿಷ್ಕ್ರಮಣ
ಬ್ರೂಟಸ್. ಲೂಸಿಲಿಯಸ್, ಟಿಟಿನಿಯಸ್, ಸೇನಾನಾಯಕರಿಗೆ ಹೇಳಿ, ಈ ರಾತ್ರಿ ತಂತಮ್ಮ ದಳಗಳಿಗೆ ವಿಶ್ರಾಂತಿ ನೀಡಲು.
ಕೇಸಿಯಸ್. ನಂತರ ನೀವು ಬನ್ನಿ, ಮೆಸಲನನ್ನು ಕೂಡಲೇ ನಮ್ಮಲ್ಲಿಗೆ ಕರೆತನ್ನಿ.
[ಲೂಸಿಲಿಯಸ್ ಮತ್ತು ಟಿಟಿನಿಯಸ್ ನಿಷ್ಕ್ರಮಣ
ಬ್ರೂಟಸ್. ಲೂಸಿಯಸ್, ಸ್ವಲ್ಪ ದ್ರಾಕ್ಷಾರಸ.
[ಲೂಸಿಯಸ್ ನಿಷ್ಕ್ರಮಣ
ಕೇಸಿಯಸ್. ನೀವು ಇಷ್ಟೊಂದು ಸಿಟ್ಟಾಗುತ್ತೀರಿ ಎಂದು ನಾನು ಯೋಚಿಸಿರಲಿಲ್ಲ.
ಬ್ರೂಟಸ್. ಓ ಕೇಸಿಯಸ್, ಹಲವು ಚಿಂತೆಗಳಿಂದ ಸೊರಗಿ ಹೋಗಿದ್ದೇನೆ ನಾನು.
ಕೇಸಿಯಸ್. ಆಕಸ್ಮಿಕದ ಕೆಡುಕುಗಳಿಗೆ ಜಾಗ ಬಿಟ್ಟರೆ ನೀವು ನಿಮ್ಮ ತತ್ವಜ್ಞಾನದ ಉಪಯೋಗ ಪಡೆಯುತ್ತಿಲ್ಲ ಎಂದಾಯಿತು.
ಬ್ರೂಟಸ್. ನನಗಿಂತ ಜಾಸ್ತಿ ದುಃಖ ಯಾರೂ ಸಹಿಸುತ್ತಿಲ್ಲ,
ಪೋರ್ಶಿಯಾ ತೀರಿಕೊಂಡಳು.
ಕೇಸಿಯಸ್. ಹ್ಹಾ! ಪೋರ್ಶಿಯಾ?
ಬ್ರೂಟಸ್. ಅವಳು ಇನ್ನಿಲ್ಲ.
ಕೇಸಿಯಸ್. ನಾನು ಸಾವಿನಿಂದ ತಪ್ಪಿಸಿಕೊಂಡದ್ದು ಹೇಗೆ, ನಾನು ನಿಮಗೆ ಆ ರೀತಿ ಎದುರಾದಾಗ? ಯಾವ ರೋಗದಿಂದ ಸತ್ತಳು?
ಬ್ರೂಟಸ್. ನನ್ನ ಗೈರುಹಾಜರಿಯಿಂದ, ಯುವ ಒಕ್ಟೇವಿಯಸ್ ಮಾರ್ಕ್ ಆಂಟನಿಯೊಂದಿಗೆ ಸೇರಿ ತಮ್ಮನ್ನು ತಾವು ಬಲಿಷ್ಠರನ್ನಾಗಿ
ಮಾಡಿಕೊಂಡುದರ ಚಿಂತೆಯಿಂದ: ಅವಳ ಮೃತ್ಯುವಿನ ಜೊತೆ ಆ ಸುದ್ದಿಗಳೂ ಬಂದುವು. ವಿಚಲಿತಳಾದಳು. ದಾಸಿಗಳೂ
ಇಲ್ಲದ ಸಮಯ ಬೆಂಕಿ ನುಂಗಿದಳು.
ಕೇಸಿಯಸ್. ಆ ರೀತಿ ಸತ್ತಳೇ?
ಬ್ರೂಟಸ್. ಆ ರೀತಿ.
ಕೇಸಿಯಸ್. ಓ ಅಮರ ದೇವತೆಗಳೇ!
ಲೂಸಿಯಸ್ ದ್ರಾಕ್ಷಾರಸ ಮತ್ತು ಕಂದೀಲು ಸಮೇತ ಪ್ರವೇಶ..
ಬ್ರೂಟಸ್. ಅವಳ ಬಗ್ಗೆ ಇನ್ನಷ್ಟು ಮಾತಾಡಬೇಡ: ಇಲ್ಲಿ ಕೊಡು ನನಗೆ ದ್ರಾಕ್ಷಾರಸದ ಬಟ್ಟಲು, ಇದರಲ್ಲಿ ನಾನು ಎಲ್ಲಾ ನಿಷ್ಕರುಣೆಯನ್ನು ಮುಳುಗಿಸುವೆ, ಕೇಸಿಯಸ್. [ಕುಡಿಯುತ್ತಾನೆ]
ಕೇಸಿಯಸ್. ನನ್ನ ಹೃದಯ ಬಾಯಾರುತ್ತದೆ ಆ ಶ್ರೇಷ್ಠ ವಚನಕ್ಕೆ, ತುಂಬಿಸು, ಲೂಸಿಯಸ್, ಪಾತ್ರೆಯಲ್ಲಿ ದ್ರಾಕ್ಷಾರಸ ತುಳುಕುವ ವರೆಗೆ: ಬ್ರೂಟಸ್‍ನ ಪ್ರೀತಿಯನ್ನು ನಾನು ಎಷ್ಟು ಕುಡಿದರೂ ಸಾಲದು.
[ಲೂಸಿಯಸ್ ನಿಷ್ಕ್ರಮಣ
ಟಿಟಿನಿಯಸ್ ಮತ್ತು ಮೆಸಲ ಪ್ರವೇಶ
ಬ್ರೂಟಸ್. ಒಳಗೆ ಬಾ ಟಿಟಿನಿಯಸ್: ಸುಸ್ವಾಗತ ಪ್ರಿಯ ಮೆಸಲ: ಈಗೆ ನಾವಿಲ್ಲಿ ಈ ದೀಪದ ಸುತ್ತ ಹತ್ತಿರ ಕೂಡೋಣ, ಮತ್ತು ನಮ್ಮ ಅಗತ್ಯಗಳ ಕುರಿತು ವಿಚಾರ ಮಾಡೋಣ.
ಕೇಸಿಯಸ್. ಪೋರ್ಶಿಯಾ, ನೀನು ಹೋದೆಯಾ?
ಬ್ರೂಟಸ್. ಬೇಡ, ದಯವಿಟ್ಟು,ಮೆಸಲ, ಇದೋ ನನಗಿಲ್ಲಿ ಪತ್ರಗಳು ತಲಪಿವೆ, ಯುವ ಒಕ್ಟೇವಿಯಸ್ ಮತ್ತು ಮಾರ್ಕ್ ಆಂಟನಿ ನಮ್ಮ ಮೇಲೆ ಭಾರೀ ಸೇನೆ ಜಮಾಯಿಸಿ ಬಂದಿದ್ದಾರೆ, ಫಿಲಿಪ್ಪಿ ಕಡೆಗೆ ತಮ್ಮ ದಂಡಯಾತ್ರೆಯನ್ನು ತಿರುಗಿಸಿ.
ಮೆಸಲ. ನನಗೂ ಪತ್ರಗಳು ಬಂದಿವೆ ಅದೇ ಅರ್ಥದಲ್ಲಿ.
ಬ್ರೂಟಸ್. ಬೇರೆ ಏನಿದೆ ಅವುಗಳಲ್ಲಿ?
ಮೆಸಲ. ಬಹಿಷ್ಕಾರ ಮತ್ತು ಕಾನೂನುಬಾಹಿರ ಮಾಡಿ ಒಕ್ಟೇವಿಯಸ್, ಆಂಟನಿ ಮತ್ತು ಲೆಪಿಡಸ್ ನೂರು ಜನ ಸಂಸದರನ್ನು ಕೊಂದು ಹಾಕಿದ್ದಾರೆ.
ಬ್ರೂಟಸ್. ಆ ವಿಷಯದಲ್ಲಿ ಮಾತ್ರ ನಮ್ಮ ಪತ್ರಗಳು ಹೊಂದುವುದಿಲ್ಲ: ನನಗೆ ಬಂದ ಪತ್ರಗಳ ಪ್ರಕಾರ ಅವರ ಬಹಿಷ್ಕಾರಕ್ಕೆ ಸತ್ತ ಸಂಸದರ ಸಂಖ್ಯೆ ಎಪ್ಪತ್ತು, ಅವರಲ್ಲಿ ಒಬ್ಬ ಸಿಸಿರೋ.
ಕೇಸಿಯಸ್. ಸಿಸಿರೋ ಒಬ್ಬ?
ಮೆಸಲ. ಸಿಸಿರೋ ಸತ್ತಿದ್ದಾನೆ, ಹಾಗೂ ಆ ಬಹಿಷ್ಕಾರದಿಂದಲೇ ಅವನು ಸತ್ತದ್ದು. ನಿಮ್ಮ ಪತ್ನಿಯಿಂದ ಬಂದ ಪತ್ರಗಳೇ ಅವು,
ಮಹಾಸ್ವಾಮಿ?
ಬ್ರೂಟಸ್. ಅಲ್ಲ, ಮೆಸಲ.
ಮೆಸಲ. ಆಕೆ ಬಗ್ಗೆ ಪತ್ರಗಳಲ್ಲಿ ಏನೂ ಬರೆದಿಲ್ಲವೇ?
ಬ್ರೂಟಸ್. ಏನೂ ಇಲ್ಲ, ಮೆಸಲ.
ಮೆಸಲ. ಅದು ವಿಚಿತ್ರ ಅನಿಸುತ್ತದೆ ನನಗೆ.
ಬ್ರೂಟಸ್. ಯಾಕೆ ಕೇಳುತ್ತಿದ್ದೀಯಾ?
ನಿನ್ನ ಪತ್ರಗಳಲ್ಲಿ ಆಕೆ ಬಗ್ಗೆ ಏನಾದರೂ ಇದೆಯೇ?
ಮೆಸಲ. ಇಲ್ಲ, ಮಹಾಸ್ವಾಮಿ.
ಬ್ರೂಟಸ್. ನೀನೊಬ್ಬ ರೋಮನ್ ಆಗಿದ್ದು ನನಗೆ ನಿಜ ಹೇಳು.
ಮೆಸಲ. ಹಾಗಿದ್ದರೆ, ರೋಮನ್ ಆಗಿದ್ದು, ನಾನು ಹೇಳುವ ನಿಜ ಸಹಿಸಿಕೊಳ್ಳಿ, ಯಾಕೆಂದರೆ ಅವಳೀಗ ಸತ್ತಿದ್ದಾಳೆ ಖಂಡಿತ,
ಅದೂ ವಿಲಕ್ಷಣ ರೀತಿಯಲ್ಲಿ.
ಬ್ರೂಟಸ್. ವಿದಾಯ, ಪೋರ್ಶಿಯಾ: ನಾವು ಸಾಯಲೇಬೇಕು ಮೆಸಲ: ಒಂದಲ್ಲ ಒಂದು ದಿನ ಅವಳು ಸಾಯಲೇಬೇಕೆಂದು
ಯೋಚಿಸುತ್ತ, ನನಗದನ್ನು ತಾಳಿಕೊಳ್ಳುವ ಸಹನೆಯಿದೆ ಈಗ.
ಮೆಸಲ. ಎಷ್ಟು ದೊಡ್ಡ ಮನುಷ್ಯರೋ ಅಷ್ಟೂ ದೊಡ್ಡ ನಷ್ಟಗಳನ್ನು ಸಹಿಸಬೇಕು.
ಕೇಸಿಯಸ್. ನನ್ನ ಕಲಿಕೆಯಲ್ಲಿ ಅದು ನಿಮ್ಮಷ್ಟೆ ಇದೆ, ಆದರೆ ನನ್ನ ಪ್ರಕೃತಿ ಮಾತ್ರ ಸಹಿಸದು ಈ ರೀತಿ.
ಬ್ರೂಟಸ್. ಇರಲಿ, ನಮ್ಮ ಜೀವಂತ ಕಾರ್ಯದ ಕಡೆಗಾಗಿ ಫಿಲಿಪ್ಪಿಯತ್ತ ಈಗ ದಂಡೆತ್ತುವ ಬಗ್ಗೆ ನಿಮ್ಮ ವಿಚಾರವೇನು?
ಕೇಸಿಯಸ್. ಅದು ಒಳ್ಳೆಯದೆಂದು ನನಗನಿಸುವುದಿಲ್ಲ.
ಬ್ರೂಟಸ್. ಕಾರಣ?
ಕೇಸಿಯಸ್. ಇದು: ವೈರಿ ನಮ್ಮನ್ನು ಹುಡುಕುವುದೇ ಒಳ್ಳೆಯದು, ಹುಡುಕುತ್ತ ಆತ ತನ್ನ ಸಾಧನಗಳನ್ನು ಮುಗಿಸುತ್ತಾನೆ, ಸೈನಿಕರನ್ನ ದಣಿಸುತ್ತಾನೆ, ತಾನಾಗಿ ಆಕ್ರಮಿಸುತ್ತ, ಹಾಗೂ ನಾವು ಸುಮ್ಮನಿರುತ್ತೇವೆ,ಪೂರ್ತಿ ವಿಶ್ರಾಂತಿಯಲ್ಲಿ, ಸ್ವರಕ್ಷಣೆಯಲ್ಲಿ, ಮತ್ತು ಎಚ್ಚರಿಕೆಯಲ್ಲಿ.
ಬ್ರೂಟಸ್. ಉತ್ತಮ ಕಾರಣಗಳು ಅತ್ಯುತ್ತಮ ಕಾರಣಗಳಿಗೆ ಬಲವಂತವಾಗಿ ದಾರಿ ಕೊಡಬೇಕಾಗುತ್ತವೆ: ಫಿಲಿಪ್ಪಿ ಮತ್ತು
ಈ ಜಾಗದ ಜನ ಒತ್ತಾಯದ ಸ್ನೇಹದಲ್ಲಿ ನಿಂತಿದ್ದಾರೆ, ಯಾಕೆಂದರೆ ನಾವೆತ್ತಿದ ತೆರಿಗೆಗೆ ಅವರು ಸಿಡಿಮಿಡಿಗೊಂಡಿದ್ದಾರೆ.
ಅವರ ಪಕ್ಕದಿಂದ ದಂಡೆತ್ತಿ ಬರುವ ವೈರಿ, ಅವರಿಂದಲೇ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾನೆ, ಸಂತುಷ್ಟಿಗೊಂಡು,
ಹೊಸತು ಸೇರಿಸಿಕೊಂಡು, ಹಾಗೂ ಉತ್ತೇಜನಗೊಂಡು. ಈ ಜನವನ್ನು ನಾವು ನಮ್ಮ ಬೆನ್ನ ಹಿಂದಕ್ಕೆ ಒಗೆದು,ಫಿಲಿಪ್ಪಿಯಲ್ಲಿಯೇ ನಾವವರನ್ನು ಎದುರಿಸಿದರೆ, ಈ ಲಾಭದಿಂದ ನಾವವರನ್ನು ತುಂಡರಿಸಬಹುದು.
ಕೇಸಿಯಸ್. ನಾನು ಹೇಳುವುದನ್ನು ಕೇಳಿರಿ.
ಬ್ರೂಟಸ್. ನಿನ್ನ ಕ್ಷಮೆ ಬೇಡುವೆ. ಆದರೆ ನೀವುಗಳು ಗಮನಿಸಬೇಕು, ನಾವು ನಮ್ಮ ಮಿತ್ರರನ್ನು ಮಿತಿತನಕ ಪ್ರಯತ್ನಿಸಿದ್ದಾಗಿದೆ: ನಮ್ಮ ದಳಗಳು ಭರ್ತಿಯಾಗಿವೆ, ನಮ್ಮ ಕಾರಣವು ಪಕ್ವವಾಗಿದೆ, ವೈರಿ ವರ್ಧಿಸುತ್ತಿದ್ದಾನೆ ಪ್ರತಿ ದಿವಸ, ನಾವು ನಮ್ಮ ಶಿಖರ ತಲಪಿದ್ದೇವೆ; ಕ್ಷೀಣಿಸಲು ತಯಾರಾಗಿದ್ದೇವೆ. ಮನುಷ್ಯರ ವಿಷಯದಲ್ಲೊಂದು ಅಲೆಯೊಸಗೆಯುಂಟು, ನೆರೆಯಲ್ಲಿ ತೆಗೆದುಕೊಂಡದ್ದು
ಅದೃಷ್ಟದ ಕಡೆ ಕೊಂಡೊಯ್ಯುತ್ತದೆ: ಕೈಬಿಟ್ಟರೆ ಇಡೀ ಜೀವಮಾನದ ಯಾನ ಮೊಣಕಾಲ ನೀರಲ್ಲಿ ಹಾಗೂ ಸಂಕಷ್ಟದಲ್ಲಿ ಕಟ್ಟಿಬಿದ್ದಿರುತ್ತದೆ. ನಾವೀಗ ಅಂಥ ಭರತ ಸಮುದ್ರದಲ್ಲಿ ತೇಲುತ್ತಿದ್ದೇವೆ, ಮತ್ತು ಪ್ರವಾಹ ಅನುಕೂಲವಿರುವಾಗ ನಾವು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ನಮ್ಮ ಪ್ರಯತ್ನಗಳು ನಷ್ಟವಾಗುತ್ತವೆ.
ಕೇಸಿಯಸ್. ಹಾಗಿದ್ದರೆ ನಿಮ್ಮ ನಿರ್ಧಾರದೊಂದಿಗೆ ಮುಂದುವರಿಯಿರಿ. ನಾವು ನಮ್ಮವರ ಜತೆ ಬರುತ್ತೇವೆ, ಫಿಲಿಪ್ಪಿಯಲ್ಲಿ ಅವರನ್ನು ಎದುರಾಗೋಣ.
ಬ್ರೂಟಸ್. ನಾವು ಮಾತಾಡುತ್ತಿರುವಂತೆಯೇ ಮಧ್ಯರಾತ್ರಿಯಾಗಿಬಿಟ್ಟಿದೆ, ಅಗತ್ಯಕ್ಕೆ ಪ್ರಕೃತಿ ತಲೆಬಾಗಬೇಕು, ತುಸು ವಿಶ್ರಾಂತಿಯನ್ನು ಅದರ ಹೊಟ್ಟೆಗೆ ಹಾಕೋಣ: ಇನ್ನು ಹೇಳುವುದಕ್ಕೇನೂ ಇಲ್ಲ.
ಕೇಸಿಯಸ್. ಏನೂ ಇಲ್ಲ, ಶುಭರಾತ್ರಿ. ನಾಳೆ ನಸುಕಿಗೇ ಇಲ್ಲಿಂದ ಎದ್ದು ಹೊರಡೋಣ.
ಲೂಸಿಯಸ್ ಪ್ರವೇಶ
ಲೂಸಿಯಸ್, ನನ್ನ ನಿಲುವಂಗಿ: ವಿದಾಯ ಮೆಸಲಾ.
[ಲೂಸಿಯಸ್ ನಿಷ್ಕ್ರಮಣ
ಶುಭರಾತ್ರಿ ಟಿಟಿನಿಯಸ್: ಪ್ರಿಯ, ಪ್ರಿಯ ಕೇಸಿಯಸ್, ಶುಭರಾತ್ರಿ ಹಾಗೂ ಶುಭವಿಶ್ರಾಂತಿ.
ಕೇಸಿಯಸ್. ಓ ನನ್ನ ಪ್ರೀತಿಯ ಸೋದರ: ಇದೊಂದು ರಾತ್ರಿಯ ಕೆಟ್ಟ ಆರಂಭವಾಗಿತ್ತು: ನಮ್ಮ ಆತ್ಮಗಳ ನಡುವೆ ಇಂಥ ಬಿರುಕು ಎಂದೂ ಬಂದದ್ದಿಲ್ಲ: ಇನ್ನದು ಬರದಿರಲಿ, ಬ್ರೂಟಸ್.
ಲೂಸಿಯಸ್ ನಿಲುವಂಗಿ ತೆಗೆದುಕೊಂಡು ಪ್ರವೇಶ
ಬ್ರೂಟಸ್. ಎಲ್ಲಾ ಸರಿಯಾಗಿದೆ.
ಕೇಸಿಯಸ್. ಶುಭರಾತ್ರಿ, ನನ್ನ ಸ್ವಾಮಿ.
ಬ್ರೂಟಸ್. ಶುಭರಾತ್ರಿ, ನನ್ನ ಸೋದರ.
ಟಿಟಿಯಸ್ ಮತ್ತು ಮೆಸಲ. ಶುಭರಾತ್ರಿ, ಬ್ರೂಟಸ್.
ಬ್ರೂಟಸ್. ಶುಭರಾತ್ರಿ ಪ್ರತಿಯೊಬ್ಬರಿಗೂ.
[ಕೇಸಿಯಸ್, ಟಿಟಿನಿಯಸ್, ಮತ್ತು ಮೆಸಲ ನಿಷ್ಕ್ರಮಣ
ಇಲ್ಲಿ ಕೊಡು ನಿಲುವಂಗಿ. ಎಲ್ಲಿದೆ ನಿನ್ನ ವಾದ್ಯ?
ಲೂಸಿಯಸ್. ಇಲ್ಲಿ, ಡೇರೆಯೊಳಗೆ.
ಬ್ರೂಟಸ್. ಏನು, ಮಂಪರಿನಲ್ಲಿ ಮಾತಾಡುತ್ತಿದ್ದೀ? ಪಾಪದ ಹುಡುಗ, ನಿನ್ನ ತಪ್ಪಿಲ್ಲ, ನಿನಗೆ ಸುಸ್ತಾಗಿದೆ. ಕ್ಲಾಡಿಯಸನ್ನ ಕರೆ, ಮತ್ತು ನನ್ನ ಬೇರೆ ಕೆಲವು ಜನರನ್ನ, ಅವರು ನನ್ನ ಡೇರೆಯಲ್ಲಿ ಮೆತ್ತೆಯ ಮೇಲೆ ಮಲಗಲಿ.
ಲೂಸಿಯಸ್. ವಾರೋ ಮತ್ತು ಕ್ಲಾಡಿಯಸ್.
ವಾರೋ ಮತ್ತು ಕ್ಲಾಡಿಯಸ್ ಪ್ರವೇಶ
ವಾರೋ. ಕರೆದಿರಾ ಸ್ವಾಮಿ?
ಬ್ರೂಟಸ್. ದಯವಿಟ್ಟು ನೀವು ನನ್ನ ಡೇರೆಯೊಳಗೆ ಬಂದು ಮಲಗಿರಿ, ಬೇಕಾದಾಗ ನಾನು ನಿಮ್ಮನ್ನು ಎಬ್ಬಿಸಿ ಸೋದರ ಕೇಸಿಯಸ್‍ನಲ್ಲಿಗೆ ಕಳಿಸಬಹುದು.
ವಾರೋ. ನಿಮ್ಮಿಷ್ಟದಂತೆ, ನಾವು ನಿಮ್ಮ ಸೇವೆಗೆ ನಿಂತುಕೊಳ್ಳುವೆವು.
ಬ್ರೂಟಸ್. ನನಗದು ಬೇಡ: ಮಲಕ್ಕೊಳ್ಳಿ, ಸ್ವಾಮಿ, ಯಾಕೆಂದರೆ ನಾನು ಬೇರೆ ಯೋಚಿಸಬಹುದು. ನೋಡು, ಲೂಸಿಯಸ್, ನಾನು ಅಷ್ಟೊಂದು ಹುಡುಕುತ್ತಿದ್ದ ಪುಸ್ತಕ ಇಲ್ಲಿದೆ ಕಣೋ, ನಾನಿದನ್ನು ನಿಲುವಂಗಿ ಜೇಬಿನಲ್ಲಿ ಹಾಕಿದ್ದೆ.
ಲೂಸಿಯಸ್. ತಾವು ನನಗದನ್ನು ಕೊಟ್ಟಿರಲಿಲ್ಲ ಅನ್ನೋದು ಖಂಡಿತ.
ಬ್ರೂಟಸ್. ನನ್ನನ್ನು ಸಹಿಸಿಕೋಪ್ಪಾ, ನನಗೆ ಮರೆವು ಜಾಸ್ತಿ. ನಿನ್ನ ನಿದ್ದೆತೂಗುವ ಕಣ್ಣುಗಳನ್ನು ಸ್ವಲ್ಪ ಹೊತ್ತು ತೆರೆದಿಟ್ಟು,
ನಿನ್ನ ವಾದ್ಯದಿಂದ ಒಂದೆರಡು ರಾಗಗಳ ನುಡಿಸುವುದಕ್ಕೆ ಆಗುತ್ತದೆಯೇ?
ಲೂಸಿಯಸ್. ಆಗುತ್ತೆ ಅಯ್ಯ, ನಿಮಗೆ ಇಷ್ಟವಿದ್ದರೆ.
ಬ್ರೂಟಸ್. ಇಷ್ಟವಿದೆ ಕಣೋ:ನಾನು ನಿನಗೆ ತುಂಬಾ ತೊಂದರೆ ಕೊಡುತ್ತಿದ್ದೇನೆ, ಆದರೂ ನೀನು ಒಪ್ಪುತ್ತೀ.
ಲೂಸಿಯಸ್. ಅದು ನನ್ನ ಕೆಲಸ ಅಯ್ಯ.
ಬ್ರೂಟಸ್. ನಿನ್ನ ಶಕ್ತಿಗಿಂತಲು ಜಾಸ್ತಿ ನಾನು ನಿನ್ನ ಮೇಲೆ ಕೆಲಸ ಹೇರಲಾರೆ, ಯುವ ರಕ್ತಗಳು ವಿಶ್ರಾಂತಿ ಸಮಯಕ್ಕೆ
ಕಾಯುತ್ತವೆ ನನಗೆ ಗೊತ್ತು.
ಲೂಸಿಯಸ್. ನಾನು ಈಗಾಗಲೇ ನಿದ್ರಿಸಿ ಆಗಿದೆ ಅಯ್ಯ.
ಬ್ರೂಟಸ್. ಆಗಿದ್ದು ಒಳ್ಳೆಯದೇ ಅಯಿತು, ಮತ್ತು ನೀನೀಗ ಮತ್ತೆ ನಿದ್ರಿಸುವಿ: ನಾನು ನಿನ್ನನ್ನು ಹೆಚ್ಚು ಕಾಯಿಸುವುದಿಲ್ಲ.
ನಾನು ಬದುಕಿದ್ದರೆ ನಿನಗೇನಾದರೂ ಒಳ್ಳೆಯದು ಮಾಡುತ್ತೇನೆ.
[ಸಂಗೀತ ಮತ್ತು ಹಾಡು]
ಇದೊಂದು ನಿದ್ದೆತೂಗುವ ರಾಗ. ಓ ಕೊಲೆಗಡುಕ ನಿದ್ದೆಯೇ! ನಿನ್ನ ಘನವಾದ ಗದೆಯನ್ನು ನಿನಗೆ ಸಂಗೀತ ಹಾಡುವ
ನನ್ನ ಹುಡುಗನ ಮೇಲೆ ಇರಿಸುತ್ತಿದ್ದೀಯ; ಬಡ ಹೈದನೇ ನಿನಗೆ ಶುಭರಾತ್ರಿ: ನಿನ್ನ ಎಬ್ಬಿಸುವಂಥ ತಪ್ಪನ್ನು ನಾನು ಮಾಡಲಾರೆ.
ನೀನು ನಿದ್ದೆತೂಗಿದರೆ ನಿನ್ನ ತಂತಿವಾದ್ಯವನ್ನು ಒಡೆಯುತ್ತೀಯಾ, ನಾನದನ್ನು ನಿನ್ನ ಕೈಯಿಂದ ತೆಗೆಯುವೆ, ಗುಣವಂತ ಹುಡುಗನೇ ನಿನಗೆ ಶುಭರಾತ್ರಿ.
ನೋಡೋಣ, ನೋಡೋಣ, ನಾನು ಓದುತ್ತಿದ್ದ ಪುಟದ ಮೂಲೆ ಮಡಚಿಟ್ಟಿದ್ದೆನಲ್ಲ? ಇಲ್ಲಿದೆಯೆಂದು ಕಾಣುತ್ತದೆ.
ಸೀಸರನ ಪ್ರೇತದ ಪ್ರವೇಶ
ಈ ದೀಪ ಎಷ್ಟು ಬಡವಾಗಿ ಉರಿಯುತ್ತಿದೆ. ಹ್ಹ! ಯಾರಿದು ಬರುತ್ತಿರುವುದು! ಇದು ನನ್ನ ಕಣ್ಣುಗಳ ದೌರ್ಬಲ್ಯವೆಂದು ತೋರುತ್ತದೆ ಈ ಭಾರೀ ಮಾಯಕದ ರೂಪ. ಇದು ನನ್ನ ಮೇಲೇ ಬರುತ್ತಿದೆ: ಯಾರು ನೀನು ಏನಾದರೂ ವಸ್ತುವೇ? ಒಬ್ಬ ದೇವತೆಯೇ? ದೇವದೂತನೇ, ಅಥವ ಪಿಶಾಚವೇ, ಈ ತರ ನನ್ನ ರಕ್ತವನ್ನು ಹೆಪ್ಪುಗಟ್ಟಿಸುತ್ತಿರುವುದು, ನನ್ನ ರೋಮ ಎದ್ದುನಿಲ್ಲುವಂತೆ
ಮಾಡುವುದು? ಮಾತಾಡು, ಯಾರು ನೀನು?
ಪ್ರೇತ. ನಿನ್ನ ಕೆಟ್ಟ ಆತ್ಮ, ಬ್ರೂಟಸ್.
ಬ್ರೂಟಸ್. ಯಾಕೆ ಬಂದಿರುವಿ ನೀನು?
ಪ್ರೇತ. ಫಿಲಿಪ್ಪಿಯಲ್ಲಿ ನೀನು ನನ್ನ ನೋಡುವಿ ಅನ್ನುವುದಕ್ಕೆ.
ಬ್ರೂಟಸ್. ಸರಿ: ಹಾಗಿದ್ದರೆ ನಿನ್ನನ್ನು ನಾನು ಮತ್ತೆ ನೋಡುವುದಿದೆಯೇ?
ಪ್ರೇತ. ಹೌದು, ಫಿಲಿಪ್ಪಿಯಲ್ಲಿ.
ಬ್ರೂಟಸ್. ಸರಿ ಮತ್ತೆ, ನಿನ್ನನ್ನು ಫಿಲಿಪ್ಪಿಯಲ್ಲೇ ನೋಡುವೆ:
[ಪ್ರೇತದ ನಿಷ್ಕ್ರಮಣ]
ಈಗ ನನಗೆ ಧೈರ್ಯ ಬಂದದ್ದೇ ನೀನು ಮಾಯವಾದಿ. ದುಷ್ಟ ಶಕ್ತಿಯೇ, ನಾನು ನಿನ್ನ ಜತೆ ಇನ್ನಷ್ಟು ಮಾತಾಡುವೆ.ಹುಡುಗ ಲೂಸಿಯಸ್, ವಾರೋ, ಕ್ಲಾಡಿಯಸ್, ಎಲ್ಲರೂ.
ಏಳು ಕ್ಲಾಡಿಯಸ್.
ಲೂಸಿಯಸ್. ಅಯ್ಯಾ, ತಂತಿಗಳು ನಿಜವಾದ್ದಲ್ಲ.
ಬ್ರೂಟಸ್. ಇವನು ಅಂದುಕೊಂಡಿದ್ದಾನೆ ಇವನ ಹತ್ತಿರ ವಾದ್ಯ ಇನ್ನೂ ಇದೆಯೆಂದು.
ಲೂಸಿಯಸ್, ಏಳೋ.ಲೂಸಿಯಸ್. ಅಯ್ಯಾ.
ಬ್ರೂಟಸ್. ಕನಸು ಬಿತ್ತೇ ಲೂಸಿಯಸ್? ಯಾಕೆ ಹೀಗೆ ಅರಚುತ್ತೀ?
ಲೂಸಿಯಸ್. ಅಯ್ಯಾ, ನಾನು ಅರಚಿದೆ ಅಂತಲೆ ನನಗೆ ಗೊತ್ತಿಲ್ಲ.
ಬ್ರೂಟಸ್. ಹೌದು, ಅರಚಿದಿ: ಏನಾದರೂ ನೋಡಿದಿಯಾ?
ಲೂಸಿಯಸ್. ಏನೂ ಇಲ್ಲ, ಅಯ್ಯ.
ಬ್ರೂಟಸ್. ನಿದ್ದೆ ಮಾಡು, ಲೂಸಿಯಸ್: ಲೋ ಕ್ಲಾಡಿಯಸ್, ಹೈದಾ, ನೀನು ಕಣೋ, ಏಳು.
ವಾರೋ. ಅಯ್ಯಾ.
ಕ್ಲಾಡಿಯಸ್. ಅಯ್ಯಾ.
ಬ್ರೂಟಸ್. ಯಾಕೆಂದರೆ ನಿದ್ದೆಯಲ್ಲಿ ಕಿರುಚಾಡಿದಿರಿ. ಇಬ್ಬರೂ. ಕಿರುಚಾಡಿದೆವೇ?
ಬ್ರೂಟಸ್. ಹೌದು: ಏನಾದರೂ ನೋಡಿದಿರ?
ವಾರೋ. ಇಲ್ಲ ಅಯ್ಯ, ನಾನೇನೂ ನೋಡಿಲ್ಲ.
ಕ್ಲಾಡಿಯಸ್. ನಾನೂ ನೋಡಿಲ್ಲ, ಅಯ್ಯ.
ಬ್ರೂಟಸ್. ಹೋಗಿ ನನ್ನ ಸೋದರ ಕೇಸಿಯಸಿಗೆ ಹೇಳಿ,ನಾನು ವಿಚಾರಿಸಿದೆ ಎಂದು: ತನ್ನ ಸೇನೆಯನ್ನು ಸ್ವಲ್ಪ ಬೇಗನೆ
ಹೊರಡಿಸುವಂತೆ ಹೇಳಿ, ನಾನು ಹಿಂದಿನಿಂದ ಬರುತ್ತೇನೆ.
ಇಬ್ಬರೂ. ಹಾಗೇ ಆಗಲಿ ಅಯ್ಯ.
[ನಿಷ್ಕ್ರಮಣ
ಹೆಚ್ಚಿನ ಬರಹಗಳಿಗಾಗಿ
ನೈನವೆ
ಜೂಲಿಯಸ್ ಸೀಸರ್ ಅಂಕ -೫
ಜೂಲಿಯಸ್ ಸೀಸರ್ -ಅಂಕ ೩