- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
- ಜೂಲಿಯಸ್ ಸೀಸರ್ ಅಂಕ -೫ - ಜನವರಿ 30, 2022
ಅಂಕ 2
ದೃಶ್ಯ 1
ರೋಮ್. ಬ್ರೂಟಸ್ನ ಹಣ್ಣಿನ ತೋಪು.
ಬ್ರೂಟಸ್ ಪ್ರವೇಶ…
ಬ್ರೂಟಸ್. ಲೋ ಲೂಸಿಯಸ್!
ನಕ್ಷತ್ರಗಳ ಗತಿ ನೋಡಿ ಬೆಳಗಾಗುವುದಕ್ಕೆ ಎಷ್ಟು ವೇಳೆಯಿದೆಯೆಂದು ನಾನು ಊಹಿಸಲಾರೆ—ಲೂಸಿಯಸ್, ಎಲ್ಲಿದ್ದೀಯೋ? ಒಳ್ಳೇ ಸುಖವಾಗಿ ನಿದ್ರಿಸುವುದು ನನ್ನ ದುರ್ಗುಣವಾಗಬಾರದಿತ್ತೇ? ಯಾವಾಗ, ಲೂಸಿಯಸ್, ಯಾವಾಗ! ಏಳಯ್ಯ, ಲೋ ಲೂಸಿಯಸ್!
ಲೂಸಿಯಸ್ ಪ್ರವೇಶ..
ಲೂಸಿಯಸ್. ಕರೆದಿರಾ ಅಯ್ಯ?
ಬ್ರೂಟಸ್. ನನ್ನ ಅಧ್ಯಯನ ಕೊಠಡಿಯಲ್ಲೊಂದು ಕಂದೀಲು ಹಚ್ಚಿಡು, ಲೂಸಿಯಸ್. ಹಚ್ಚಿಟ್ಟ ಮೇಲೆ ಇಲ್ಲಿ ಬಂದು ನನ್ನ ಕರಿ.
ಲೂಸಿಯಸ್. ಹಾಗೇ ಆಗಲಿ, ಅಯ್ಯ. [ನಿಷ್ಕ್ರಮಣ ಬ್ರೂಟಸ್. ಅವನ ಸಾವಿನಿಂದಲೇ ಆಗಬೇಕಾದ್ದು ಅದು: ನನ್ನ ಮಟ್ಟಿಗಾದರೆ ಅವನನ್ನು ದ್ವೇಷಿಸುವುದಕ್ಕೆ ಯಾವ ವೈಯಕ್ತಿಕ ಕಾರಣವೂ ಇಲ್ಲ, ಸಾರ್ವಜನಿಕವಾದ್ದಲ್ಲದೆ. ಅವನು ಪಟ್ಟಾಭಿಷಿಕ್ತನಾಗುತ್ತಾನೆ: ಅದು ಯಾವ ರೀತಿ ಅವನ ಸ್ವಭಾವ ಬದಲಿಸುತ್ತದೆ ಎನ್ನುವುದೇ ಪ್ರಶ್ನೆ. ಹಾವನ್ನು ಹೊರಡಿಸುವುದು ಪರಿಶುಭ್ರ ದಿನ, ನಡೆವಾಗ ಕಾಳಜಿ ಅಪೇಕ್ಷಿಸುವುದೂ ಅದೇ: ಅವನಿಗೆ ಪಟ್ಟಾಭಿಷೇಕ ಮಾಡಿದೆವೋ ನಾವವನಿಗೆ ವಿಷದ ದಂಷ್ಟ್ರ ನೀಡುವುದು ಖಚಿತ, ಆಮೇಲೆ ಅವನು ಬೇಕೆನಿಸಿದಾಗ ಕಡಿಯುತ್ತಾನೆ.
ಶ್ರೇಷ್ಠತೆಯ ದುರುಪಯೋಗ ಅದು ಪ್ರಾಬಲ್ಯದಿಂದ ದಯಯನ್ನು ಕಳಚಿದಾಗ: ಹಾಗೂ ಸೀಸರನ ಬಗ್ಗೆ ನಿಜ ಹೇಳಬೇಕೆಂದರೆ, ಅವನ ತರ್ಕಕ್ಕಿಂತ ಅವನ ಭಾವಗಳು ಮೇಲುಗೈಯಾದ್ದನ್ನು ನಾನು ಕಂಡಿಲ್ಲ. ಆದರೆ ವಿನೀತತೆ ಯುವ ಮಹತ್ವಾಕಾಂಕ್ಷೆಯ ಏಣಿಯನ್ನುವುದು ಸಾಮಾನ್ಯ ಸತ್ಯ, ಏರುವವನ ಮುಖ ಉನ್ಮುಖವಾಗಿರುತ್ತದೆ: ಒಮ್ಮೆ ಮೇಲಿನ ಚಡಿ ತಲಪಿತು ಎಂದರೆ ಆಮೇಲೆ ಅವನು ಏಣಿಯ ಕಡೆ ತಿರುಗಿ ಕೂಡ ನೋಡುವುದಿಲ್ಲ, ಮುಗಿಲುಗಳ ಕಡೆ ನೋಡುತ್ತಾನೆ, ತಾನು ಹತ್ತಿ ಬಂದ ಕೆಳ ಹಂತಗಳನ್ನೆಲ್ಲ ಅಳಿಸಿಹಾಕುತ್ತ: ಅದನ್ನೇ ಮಾಡಬಹುದು ಸೀಸರ್. ಹಾಗಿದ್ದರೆ ಅವನದನ್ನು ಮಾಡದಂತೆ ತಡೆಯುವುದು, ಹಾಗೂ ಈ ವಿವಾದಕ್ಕೆ ರೂಪವಿಲ್ಲದ ಕಾರಣ, ಅವನೇನಿದ್ದಾನೋ ಆ ಕಾರಣಕ್ಕೆ ಅದನ್ನು ಈ ರೀತಿ ಬಗೆಯಬಹುದು; ಅವನೇನಿದ್ದಾನೋ ಅದನ್ನು ಮುಂದರಿಯಲು ಬಿಟ್ಟಲ್ಲಿ ಈ ತರ ಬೆಳೆಯುತ್ತದೆ, ಈ ತರದ ಅತಿರೇಕಗಳು ಉಂಟಾಗುತ್ತವೆ: ಆದ ಕಾರಣ ಒಂದು ಹಾವಿನ ಮೊಟ್ಟೆಯಂತೆ ಕಲ್ಪಿಸುವುದು ಅವನನ್ನು, ಒಡೆದಾಗ ಅದು ತನ್ನ ಸ್ವಭಾವಕ್ಕೆ ಸರಿಯಾಗಿ ಅಪಾಯಕಾರಿಯಾಗುತ್ತದೆ; ಆದ್ದರಿಂದ ಅವನನ್ನು ಚಿಪ್ಪಿನಲ್ಲೇ ಕೊಲ್ಲುವುದು.
ಲೂಸಿಯಸ್ ಪ್ರವೇಶ…
ಲೂಸಿಯಸ್. ನಿಮ್ಮ ಕೋಣೆಯಲ್ಲಿ ದೀಪ ಬೆಳಗಿಸಿದೆ, ಅಯ್ಯ: ಬೆಣಚು ಕಲ್ಲಿಗಾಗಿ ಕಿಟಿಕಿಯಲ್ಲಿ ಹುಡುಕುತ್ತಿದ್ದಾಗ, ನನಗೀ ಕಾಗದ ಸಿಕ್ತು, ಈ ತರ ಮೊಹರು ಹಾಕಿದ್ದು, ನಾನು ಮಲಗಲು ಹೋದಾಗ ಅದು ಅಲ್ಲಿ ಇರಲಿಲ್ಲ ಖಂಡಿತ.
(ಬ್ರೂಟಸ್ಗೆ ಪತ್ರ ಕೊಡುತ್ತಾನೆ.)
ಬ್ರೂಟಸ್. ನೀನು ಹೋಗಿ ಮಲಕ್ಕೋ ಮತ್ತೆ, ಇನ್ನೂ ಬೆಳಗಾಗಿಲ್ಲ. ನಾಳೆ ಮಾರ್ಚ್ ಹದಿನೈದು ಅಲ್ವೇನೋ ಹುಡುಗ?
ಲೂಸಿಯಸ್. ನಂಗೆ ಗೊತ್ತಿಲ್ಲ ಅಯ್ಯ.
ಬ್ರೂಟಸ್. ಪಟ್ಟಿ ನೋಡಿಬಂದು ಹೇಳು.
ಲೂಸಿಯಸ್. ಹಾಗೇ ಮಾಡುತ್ತೇನೆ ಅಯ್ಯ.
(ನಿಷ್ಕ್ರಮಣ)
ಬ್ರೂಟಸ್. ನಿಶ್ವಾಸಗಳು, ಗಾಳಿಹುಲ್ಲಿನ ಸುಯಿಲು ಎಷ್ಟೊಂದು ಬೆಳಕು ಕೊಡುತ್ತಿವೆಯೆಂದರೆ, ಅವುಗಳಿಂದಲೇ ನಾನು ಓದಬಲ್ಲೆ. [ಪತ್ರ ಬಿಡಿಸಿ ಓದುತ್ತಾನೆ]
ಬ್ರೂಟಸ್, ನೀನು ನಿದ್ರಿಸುತ್ತಿದ್ದೀಯಾ, ಏಳು, ಎದ್ದು ಸ್ವಂತ ನೋಡಿಕೋ: ರೋಮ್ ಇತ್ಯಾದಿ ಇತ್ಯಾದಿ. ನಾನಿದನ್ನು ಈ ತರ ಅರ್ಥಮಾಡಬೇಕು: ರೋಮ್ ಏಕ ವ್ಯಕ್ತಿಯ ಅಧಿಕಾರಿಯ ಕೆಳಗೆ ಇರಬೇಕೇ? ಎಂಥಾ ರೋಮ್? ನನ್ನ ಪೂರ್ವಜರು ರೋಮಿನ
ಬೀದಿಗಳಿಂದ ಟಾರ್ಕ್ವಿನ್ನನ್ನು ಒದ್ದೋಡಿಸಿದವರು, ಅವನನ್ನು ರಾಜನೆಂದು ಕರೆದಾಗ. ಧ್ವನಿಯೆತ್ತು, ಖಡ್ಗವೆತ್ತು, ಪರಿಹರಿಸು. ನಾನು ಧ್ವನಿಯೆತ್ತಲು, ಖಡ್ಗವೆತ್ತಲು ವಿನಂತಿಯೆ? ಓ ರೋಮ್, ನಾ ನಿನಗೆ ಮಾತು ಕೊಡುತ್ತೇನೆ, ಪರಿಹಾರ ದೊರಕುವುದಾದರೆ
ಬ್ರೂಟಸ್ನ ಕೈಯಿಂದ ನಿನಗೆ ನಿನ್ನ ಪೂರ್ತಿ ಹಕ್ಕು ದೊರಕುವುದು.
ಲೂಸಿಯಸ್ ಪ್ರವೇಶ…
ಲೂಸಿಯಸ್. ಅಯ್ಯಾ, ಮಾರ್ಚ್ನ ಹದಿನಾಲ್ಕು ದಿವಸಗಳು ಕಳೆದಿವೆ.
[ಒಳಗಿನಿಂದ ಬಾಗಿಲ ಬಡಿತ]
ಬ್ರೂಟಸ್. ಸರಿ. ಹೊರಬಾಗಿಲಿಗೆ ಹೋಗು, ಯಾರೋ ಬಡಿಯುತ್ತಿದ್ದಾರೆ. [ಲೂಸಿಯಸ್ ನಿಷ್ಕ್ರಮಣ…
ಕೇಸಿಯಸ್ ನನ್ನನ್ನು ಸೀಸರನ ವಿರುದ್ಧ ಎತ್ತಿಕಟ್ಟಿದ ಲಾಗಾಯ್ತು ನಾನು ನಿದ್ರಿಸಿಲ್ಲ. ಭೀಕರ ಕೃತ್ಯವೊಂದರ ಕ್ರಿಯೆ ಮತ್ತು ಅದರ ಆರಂಭದ ಚಲನೆಯ ಮಧ್ಯೆ ಮಧ್ಯಂತರವೆಲ್ಲ ಒಂದು ಭ್ರಮಾಲೋಕ, ಅಥವ ಒಂದು ಭೀಭತ್ಸ ಸ್ವಪ್ನ: ಬುದ್ಧಿ ಮತ್ತು ಭೌತಿಕ ಉಪಕರಣಗಳು ಪರಸ್ಪರ ಸಮಾಲೋಚನೆಯಲ್ಲಿರುತ್ತವೆ; ಹಾಗೂ ಮನುಷ್ಯನ ಅವಸ್ಥೆ ಆಗ ಚಿಕ್ಕದೊಂದು ರಾಜ್ಯದಂತೆ ಬಂಡಾಯದ ಗುಣ ತಳೆಯುತ್ತದೆ.
ಲೂಸಿಯಸ್ ಪ್ರವೇಶ….
ಲೂಸಿಯಸ್. ಅಯ್ಯಾ, ಬಾಗಿಲಲ್ಲಿರೋದು ನಿಮ್ಮ ಸೋದರ ಕೇಸಿಯಸ್, ನಿಮ್ಮನ್ನು ನೋಡಬೇಕಂತೆ.
ಬ್ರೂಟಸ್. ಅವನೊಬ್ಬನೇ ಇದ್ದಾನೆಯೇ?
ಲೂಸಿಯಸ್. ಇಲ್ಲ ಅಯ್ಯಾ, ಬೇರೆಯವರೂ ಇದ್ದಾರೆ.
ಬ್ರೂಟಸ್. ನಿನಗವರನ್ನು ಗೊತ್ತೇ?
ಲೂಸಿಯಸ್. ಇಲ್ಲ ಅಯ್ಯಾ, ಅವರ ಟೊಪ್ಪಿಗಳು ಕಿವಿಮುಚ್ಚಿವೆ,ಮತ್ತೆ ಮುಖ ಅರ್ಧದಷ್ಟು ನಿಲುವಂಗಿಯಲ್ಲಿ ಹುಗಿದಿವೆ, ಆದ್ದರಿಂದ ಯಾವುದೇ ಮುಖಲಕ್ಷಣದಿಂದ ನಾನವರ ಗುರುತು ಹಿಡಿಯುವ ಹಾಗಿಲ್ಲ.
ಬ್ರೂಟಸ್. ಅವರು ಒಳಕ್ಕೆ ಬರಲಿ.
(ಲೂಸಿಯಸ್ ನಿಷ್ಕ್ರಮಣ)
ಅವರು ಅದೇ ದಳದವರು. ಓ ಪಿತೂರಿಯೇ,ರಾತ್ರಿಯಲ್ಲಿ ಮುಖ ತೋರಿಸುವುದಕ್ಕೆ ನಿನಗೆ ಲಜ್ಜೆಗೇಡೇ, ಕೆಟ್ಟ ಗುಣಗಳು ಅತ್ಯಂತ ಮುಕ್ತವಾಗಿರುವ ಸಮಯ? ಓಹ್, ಹಾಗಾದರೆ ಹಗಲು ನೀನೆಲ್ಲಿ ಕಾಣುವಿ ಸಾಕಷ್ಟು ಕತ್ತಲಿರುವ ಗುಹೆಗಳನ್ನು, ನಿನ್ನ ಭಯಾನಕ ಚಹರೆಯನ್ನು ಮರೆಸುವುದಕ್ಕೆ? ಏನನ್ನೂ ಹುಡುಕದಿರು ಪಿತೂರಿಯೇ, ಅಡಗಿಸಿಕೊ ಅದನ್ನು ನಸುನಗೆಗಳಲ್ಲಿ, ಮತ್ತು ಸ್ನೇಹ ಭಾವದಲ್ಲಿ: ಯಾಕೆಂದರೆ ನೀ ನಿನ್ನ ನಿಜ ಗುಣವ ನಡೆಸಿದರೆ ನರಕ ಕೂಡಾ ಸಾಕಷ್ಟು ಮಬ್ಬಾಗಿರದು ನೀನು ಸಿಕ್ಕಿಬೀಳದ ಹಾಗೆ ತಪ್ಪಿಸಿಕೊಳ್ಳುವುದಕ್ಕೆ.
ತಲೆಯನ್ನು ಆವರಿಸುವ ನಿಲುವಂಗಿ ಧರಿಸಿಕೊಂಡು ಪಿತೂರಿಗಾರರ ಪ್ರವೇಶ, ಕೇಸಿಯಸ್, ಕಾಸ್ಕಾ, ಡೆಸಿಯಸ್, ಸಿನ್ನಾ, ಮೆಟಲಸ್, ಮತ್ತು ಟ್ರೆಬೋನಿಯಸ್…
ಕೇಸಿಯಸ್. ನಿಮ್ಮ ವಿಶ್ರಾಂತಿಗೆ ನಾವು ಭಂಗ ತಂದೆವೆಂದು ತೋರುತ್ತದೆ: ಶುಭೋದಯ ಬ್ರೂಟಸ್, ನಿಮಗೆ ನಾವು ತೊಂದರೆ ಕೊಡುತ್ತಿದ್ದೇವೆಯೇ?
ಬ್ರೂಟಸ್. ನಾನು ಎದ್ದು ಒಂದು ಗಂಟೆಯಾಯಿತು, ಇಡೀ ರಾತ್ರಿ ಎಚ್ಚರವಿದ್ದೆ: ನಿನ್ನ ಜತೆಯಿರುವ ಈ ಮಹನೀಯರನ್ನು ನನಗೆ ಗೊತ್ತೇ?
ಕೇಸಿಯಸ್. ಹೌದು, ಪ್ರತಿಯೊಬ್ಬರನ್ನೂ; ಪ್ರತಿಯೊಬ್ಬರೂ ನಿಮ್ಮನ್ನು ಗೌರವಿಸುತ್ತಾರೆ: ಮತ್ತು ಪ್ರತಿಯೊಬ್ಬರೂ ಆಶಿಸುತ್ತಾರೆ ಪ್ರತಿಯೊಬ್ಬ ಶ್ರೇಷ್ಠ ರೋಮನಿಗೂ ನಿಮ್ಮ ಕುರಿತಿರುವ ಭಾವನೆ ನಿಮಗೆ ನಿಮ್ಮ ಬಗ್ಗೆ ಇರುತ್ತಿದ್ದರೆ ಎಂದು. ಇವನು ಟ್ರೆಬೋನಿಯಸ್.
ಬ್ರೂಟಸ್. ಅವನಿಗೆ ಸ್ವಾಗತ.
ಕೇಸಿಯಸ್. ಈತ ಡೆಸಿಯಸ್ ಬ್ರೂಟಸ್.
ಬ್ರೂಟಸ್. ಅವನಿಗೂ ಸ್ವಾಗತ.
ಕೇಸಿಯಸ್. ಈತ ಕಾಸ್ಕಾ, ಈತ ಸಿನ್ನಾ, ಹಾಗೂ ಇವನು ಮೆಟೆಲಸ್ ಸಿಂಬರ್.
ಬ್ರೂಟಸ್. ಸರ್ವರಿಗೂ ಸ್ವಾಗತ.
ಅದೆಂಥಾ ಜಾಗೃತ ಕಾರ್ಯಗಳು ನಿಮ್ಮ ಕಣ್ಣುಗಳ ಹಾಗೂ ಇರುಳ ನಡುವೆ ಬಂದು ನಿಂತುವು?
ಕೇಸಿಯಸ್. ನಾನೊಂದು ಕೇಳಬಹುದೇ?
[ಅವರು ಪಿಸುಮಾತಿನಲ್ಲಿ ಮಾತಾಡುವರು]
ಡೆಸಿಯಸ್. ಪೂರ್ವ ದಿಕ್ಕು ಇಲ್ಲಿ: ಬೆಳಗಾಗುವುದು ಇಲ್ಲೇ ಅಲ್ಲವೇ?
ಕಾಸ್ಕಾ. ಅಲ್ಲ.
ಸಿನ್ನಾ. ಓ ಕ್ಷಮಿಸಿ ಸ್ವಾಮಿ, ಅಲ್ಲಿಯೇ; ಮತ್ತೆ ಆ ಬೂದು ಬಣ್ಣದ ಗೆರೆಗಳು, ಮೋಡಗಳಿಗೆ ಪಟ್ಟಿ ಹಾಕುವ ಅವು ದಿನದ ಹರಿಕಾರರು.
ಕಾಸ್ಕಾ. ನೀವಿಬ್ಬರೂ ಮೋಸಹೋದಿರಿ ಎಂದು ಒಪ್ಪಿಕೊಳ್ಳಿ: ಇಲ್ಲಿ, ನಾನು ಕತ್ತಿ ತೋರಿಸುವಲ್ಲಿ, ಸೂರ್ಯ ಉದಯಿಸುತ್ತಾನೆ,ಅದು ದಕ್ಷಿಣದಲ್ಲಿ ಬೆಳೆಯುವ ಮಹಾಪಥ, ಸಂವತ್ಸರದ ತರುಣ ಋತುವನ್ನು ಹೊತ್ತು. ಇನ್ನು ಸುಮಾರು ಎರಡು ತಿಂಗಳ ನಂತರ, ಉತ್ತರದ ಎತ್ತರಕ್ಕೆ ಸೂರ್ಯ ತನ್ನ ಬೆಂಕಿಯನ್ನು ಮೊದಲು ತೋರಿಸುತ್ತಾನೆ, ಹಾಗೂ ಉನ್ನತವಾದ ಪೂರ್ವ ದಿಶೆ ಪುರಭವನದಂತೆ ನಿಲ್ಲುತ್ತದೆ, ನೇರವಾಗಿ ಈ ಕಡೆ.
ಬ್ರೂಟಸ್. ಎಲ್ಲಿ, ಎಲ್ಲರೂ ಇನ್ನೊಮ್ಮೆ ನನಗೆ ಕೈ ನೀಡಿ, ಒಬ್ಬೊಬ್ಬರೇ.
ಕೇಸಿಯಸ್. ಮತ್ತು ನಾವು ನಮ್ಮ ನಿರ್ಧಾರದ ಆಣೆ ಹಾಕೋಣ.
ಬ್ರೂಟಸ್. ಆಣೆ ಬೇಡ: ಮನುಷ್ಯರ ಮುಖ, ನಮ್ಮ ಆತ್ಮಗಳ ಸಂತ್ರಸ್ತತೆ, ಕಾಲದ ದುರ್ಬಳಕೆ–ಈ ಕಾರಣಗಳು ದುರ್ಬಲವಾಗುವುದಾದರೆ, ಕ್ರಮೇಣ ಮುರಿಯುವುದಾದರೆ, ಹಾಗೂ ಪ್ರತಿಯೊಬ್ಬ ಮನುಷ್ಯನೂ ಇಲ್ಲಿಂದ ತನ್ನ ಆಲಸ್ಯದ ಹಾಸಿಗೆಗೆ ತೆರಳುವುದಾದರೆ: ಹಾಗಿದ್ದ ಪಕ್ಷ ಉನ್ಮುಖ ದೃಷ್ಟಿಯ ಸರ್ವಾಧಿಕಾರ ಮುನ್ನಡೆಯಲಿ, ಚೀಟಿಯತ್ತಿದ ಹಾಗೆ ಒಬ್ಬೊಬ್ಬ ಮನುಷ್ಯನೂ ನೆಗೆದುಬೀಳುವ ತನಕ.
ಆದರೆ ಈ ಇವರು ಹೇಡಿಗಳನ್ನು ಬಡಿದೆಬ್ಬಿಸುವುದಕ್ಕೆ,ಮತ್ತು ಕರಗುವ ಹೆಣ್ಣು ಚೈತನ್ಯಗಳನ್ನು ಧರ್ಯದಿಂದ ಕಠಿಣಗೊಳಿಸುವುದಕ್ಕೆ ಸಾಕಷ್ಟು ಬೆಂಕಿಯನ್ನು ಕೊಂಡಿದ್ದರೆ ನನಗದರಲ್ಲಿ ಖಂಡಿತ ನಂಬಿಕೆಯಿದೆ. —ಹಾಗಿದ್ದರೆ, ದೇಶವಾಸಿಗಳೆ, ನಮಗೆ ಇನ್ನೇನು ಪ್ರೇರಣೆ ಬೇಕು, ಪ್ರತೀಕಾರದತ್ತ ಪ್ರಚೋದಿಸುವುದಕ್ಕೆ, ನಮ್ಮದೇ ಕಾರಣಗಳ ಹೊರತು? ಮಾತಿತ್ತ ಮತ್ತು ಅದರಿಂದ ಸರಿಯದ ಗುಪ್ತರೋಮನರಲ್ಲದೆ ಬೇರೆ ಮುಚ್ಚಳಿಕೆಯೇನು ಬೇಕು?
ನಿಷ್ಠೆ ನಿಷ್ಠೆಗೆ ಬದ್ಧ, ಇದಾಗಬೇಕು ಇಲ್ಲವೇ ಅಳಿವವರು ನಾವೆಂಬ ಮೌನವಲ್ಲದೆ ಇನ್ನೇನು ಆಣೆ? ಆಣೆ ಹಾಕುತ್ತಾರೆ ಪೂಜಾರಿಗಳು ಮತ್ತು ಪುಕ್ಕಲರು,ಮತ್ತು ವಂಚಕಮಹಾಶಯರು, ಕೆಟ್ಟ ಮುದಿ ಕೆರಗಳು, ಮತ್ತು ಅನ್ಯಾಯಗಳ ಸ್ವಾಗತಿಸುವ ಸಂಕಟಪೂರ್ಣ
ಜೀವಗಳು: ಆಣೆ ಹಾಕುತ್ತಾರೆ ದುಷ್ಟ ಕಾರಣಗಳಿಗೋಸ್ಕರ, ಜನ ಸಂದೇಹಪಡುವ ಪ್ರಾಣಿಗಳು; ಆದರೆ ನಮ್ಮ ಗುರಿಗಾಗಲಿ, ಅಥವ ಕಾರ್ಯಕ್ಕಾಗಲಿ ಅಂಥಾ ಆಣೆ ಅಗತ್ಯವೆಂದು ಭಾವಿಸಿ ನಮ್ಮ ಉದ್ಯಮದ ಗುಣಶೀಲತೆಗೆ ಅಥವ ನಮ್ಮ ಚೇತನದ ಅದಮ್ಯ ಶಕ್ತಿಗೆ ಕಳಂಕ ಬಳಿಯಬೇಡಿ.
ಪ್ರತಿಯೊಬ್ಬ ರೋಮನ್ ತೊಟ್ಟಿರುವ ಪ್ರತಿ ನೆತ್ತರ ಬಿಂದು, ಅದು ಕುಲೀನವಾಗಿ ತೊಟ್ಟಿರುವಂಥದು, ಪ್ರತ್ಯೇಕ ಹಾದರದ ತಪ್ಪೆಸಗಿದಂತೆ, ತನ್ನಿಂದ ಹೊರಬಿದ್ದ ಮಾತಿನ ಅತಿ ಚಿಕ್ಕದೊಂದು ಕಣವನ್ನು ಆತ ಮುರಿದಾಗ.
ಕೇಸಿಯಸ್. ಆದರೆ ಸಿಸಿರೋನ ವಿಷಯವೇನು? ನಾವವನನ್ನು ಮಾತಾಡಿಸಿ ನೋಡೋಣವೇ? ಅವನು ನಮ್ಮ ಜತೆ ಗಟ್ಟಿಯಾಗಿ ನಿಲ್ಲುವನೆಂದು ನನ್ನ ವಿಚಾರ.
ಕಾಸ್ಕಾ. ನಾವವನನ್ನು ಬಿಡುವುದು ಬೇಡ.
ಸಿನ್ನಾ. ಬೇಡ, ಯಾವ ಕಾರಣಕ್ಕೂ ಬೇಡ.
ಮೆಟೆಲಸ್. ಓಹೋ, ಅವನನ್ನೂ ತೆಗೊಳ್ಳೋಣ, ಯಾಕೆಂದರೆ ಅವನ ಬೆಳ್ಳಿ ಕೂದಲು ನಮಗೆ ಒಳ್ಳೇ ಅಭಿಪ್ರಾಯ ಕೊಂಡೀತು: ಜನರ ಧ್ವನಿಯನ್ನು ಖರೀದಿಸೀತು,ನಮ್ಮ ಕಾರ್ಯಗಳನ್ನು ಹೊಗಳುವುದಕ್ಕೆ: ಜನ ಹೇಳುವರು ನಮ್ಮ ಕೈಗಳನ್ನು ಆತನ ವಿವೇಕ ಆಳಿತು ಎಂದು, ನಮ್ಮ 0iÀiËವನವಾಗಲಿ ಪೆಡಸುತನವಾಗಲಿ, ಒಂದು ಚೂರೂ ಕಾಣಿಸದು, ಎಲ್ಲವೂ ಅವನ ಗಾಂಭೀರ್ಯದಲ್ಲಿ
ಕುಸಿದೀತು.
ಬ್ರೂಟಸ್. ಓ! ಅವನ ಹೆಸರೆತ್ತಬೇಡಿ, ಅವನ ಜತೆ ಸೇರುವುದು ಬೇಡ, ಯಾಕೆಂದರೆ ಇತರರು ಸುರುಮಾಡಿದ ಏನನ್ನೂ ಅವನು ಅನುಸರಿಸಲಾರ.
ಕೇಸಿಯಸ್. ಹಾಗಿದ್ದರೆ ಅವನನ್ನು ಬಿಟ್ಟುಬಿಡಿ.
ಕಾಸ್ಕಾ. ನಿಜ, ಅವನು ಯೋಗ್ಯನಲ್ಲ.
ಡೆಸಿಯಸ್. ಬೇರೆ ಯಾರನ್ನೂ ಮುಟ್ಟಬಾರದು, ಸೀಸರನ ಹೊರತು?
ಕೇಸಿಯಸ್. ಡೆಸಿಯಸ್ ಚೆನ್ನಾಗಿ ಹೇಳಿದ: ನನಗನಿಸುತ್ತದೆ ಸೀಸರ್ ಬಹಳಷ್ಟು ಪ್ರೀತಿಸುವ ಮಾರ್ಕ್ ಆಂಟನಿ ಸೀಸರನ ನಂತರ ಬದುಕುಳಿಯಬಾರದು, ಉಳಿದರೆ ಅವನೊಬ್ಬ ಚಾಣಾಕ್ಷ ಕುತಂತ್ರಿಯಾದಾನು ನಮ್ಮ ಮಟ್ಟಿಗೆ.
ಮತ್ತು ನಿಮಗೆ ಗೊತ್ತಲ್ಲ ಅವನ ಸೌಲಭ್ಯಗಳು, ಅವನು ಅವುಗಳಲ್ಲಿ ವರ್ಧಿಸಿದಲ್ಲಿ ನಮ್ಮೆಲ್ಲರನ್ನು ಕೆಣಕುವಷ್ಟು ವಿಸ್ತರಿಸಬಹುದು: ಇದನ್ನು ತಪ್ಪಿಸಲು ಆಂಟನಿ ಮತ್ತು ಸೀಸರ್ ಒಟ್ಟಿಗೇ ನೆಲಕಚ್ಚಲಿ.
ಬ್ರೂಟಸ್. ತಲೆ ಕತ್ತರಿಸಿ ಅಂಗಾಂಗಗಳನ್ನು ಕಡಿಯುವುದೆಂದರೆ, ಕೈಯುಸ್ ಕೇಸಿಯಸ್, ನಮ್ಮ ದಾರಿ ಅನಗತ್ಯ ರಕ್ತಮಯ ಅನಿಸಬಹುದು: ಮರಣದಲ್ಲಿ ರೋಷ ಹಾಗೂ ಆಮೇಲೆ ದ್ವೇಷ ಎಂದ ಹಾಗೆ: ಕಾರಣ ಆಂಟನಿ ಎಂದರೆ ಸೀಸರನ ಒಂದು ಅಂಗವಲ್ಲದೆ ಇನ್ನೇನಲ್ಲ. ಬಲಿ ಕೊಡುವವರಾಗೋಣ ಆದರೆ ಕಸಾಯಿಗಳಾಗೋದು ಬೇಡ, ಕೈಯುಸ್: ನಾವೆಲ್ಲರೂ
ಒಟ್ಟಿಗೇ ನಿಲ್ಲುವುದು ಸೀಸರನ ಪ್ರಾಣದ ವಿರುದ್ಧ, ಹಾಗೂ ಮನುಷ್ಯರ ಪ್ರಾಣದಲ್ಲಿ ರಕ್ತವೆನ್ನುವುದು ಇಲ್ಲ: ಆಹಾ ನನಗೆ ಸೀಸರನ ಪ್ರಾಣ ಮಾತ್ರವೆ ಸಿಕ್ಕಿ, ಅವನನ್ನು ಕಡಿಯುವುದು ತಪ್ಪುತ್ತಿದ್ದರೆ ಎಂದುಕೊಳ್ಳುತ್ತೇನೆ!
ಆದರೆ ದೇವರೆ, ಸೀಸರ್ ಇದಕ್ಕಾಗಿ ರಕ್ತ ಸುರಿಸಲೇ ಬೇಕು. ಮತ್ತು ದಯಾಮಯ ಸ್ನೇಹಿತರೆ, ನಾವವನನ್ನು ಧೈರ್ಯದಿಂದ ಕೊಲ್ಲೋಣ, ಆದರೆ ಕ್ರೋಧದಿಂದ ಬೇಡ.
ಅವನನ್ನು ಛೇದಿಸೋಣ, ದೇವತೆಗಳಿಗೆ ಯೋಗ್ಯವಾದ ಪದಾರ್ಥದ ಹಾಗೆ, ಆದರೆ ಕೊಚ್ಚುವುದು ಬೇಡ
ಬೇಟೆನಾಯಿಗಳಿಗೆ ತಕ್ಕ ಕಳೇಬರದ ಹಾಗೆ. ಹಾಗೂ ನಮ್ಮ ಹೃದಯಗಳಿರಬೇಕು ಚಾಣಾಕ್ಷ ಮಾಲಿಕರು ಮಾಡುವ ಹಾಗೆ,ತಮ್ಮ ಸೇವಕರನ್ನು ಸಿಟ್ಟಿಗೆಬ್ಬಿಸಿ, ಆಮೇಲೆ ಅವರನ್ನು ಬಯ್ಯುವಂತೆ ತೋರುವ ಹಾಗೆ. ಇದರಿಂದ ನಮ್ಮ ಉದ್ದೇಶ ಅಗತ್ಯವೆನಿಸುವುದು, ಅಸೂಯೆಂದಲ್ಲ. ಸಾಮಾನ್ಯರ ಕಣ್ಣಿಗೆ ಹಾಗನಿಸಿದಾಗ, ನಮ್ಮನ್ನು ಜನ ಶುದ್ಧೀಕರಣಿಗಳೆಂದು ಕರೆಯುವರು, ಕೊಲೆಗಡುಕರೆಂದಲ್ಲ. ಇನ್ನು ಮಾರ್ಕ್ ಆಂಟನಿಯ ವಿಷಯ, ಅವನ ಬಗ್ಗೆ ಚಿಂತಿಸಬೇಡಿ: ಯಾಕೆಂದರೆ ಅವನು ಸೀಸರನ ಕೈಗಿಂತ ಹೆಚ್ಚೇನೂ ಮಾಡಲಾರ, ಸೀಸರನ ಶಿರ ಹೋದ ಮೇಲೆ.
ಕೇಸಿಯಸ್. ಆದರೂ ನಾನವನಿಗೆ ಭಯಪಡುತ್ತೇನೆ, ಸೀಸರನ ಕುರಿತು ಅವನಿಗಿರುವ ಆಜನ್ಮ ಪ್ರೀತಿಗಾಗಿ.
ಬ್ರೂಟಸ್. ಅಯ್ಯೋ ಪಾಪ ಕೇಸಿಯಸ್, ಅವನ ಬಗ್ಗೆ ಯೋಚಿಸಬೇಡ: ಅವನು ಸೀಸರನನ್ನು ಪ್ರೀತಿಸುವುದಾದರೆ,
ಅವನೇನು ಮಾಡಬಹುದೋ ಅದು ತನಗೇ; ಚಿಂತೆಗೊಳಗಾಗುವುದು, ಸೀಸರನಿಗೋಸ್ಕರ ಸಾಯುವುದು, ಹೆಚ್ಚೆಂದರೆ ಇದಿಷ್ಟೇ ಅವನು ಮಾಡಬಹುದಾದ್ದು: ಯಾಕೆಂದರೆ ಕ್ರೀಡೆಗಳು, ಸಾಹಸ ಕಾರ್ಯಗಳು, ಹಾಗೂ ಸ್ನೇಹಿತರ ಸಂಗ
ಅವನ ವ್ಯಸನಗಳು.
ಟ್ರೆಬೋನಿಯಸ್. ಅವನ ಬಗ್ಗೆ ಭಯಪಡಬೇಕಾಗಿಲ್ಲ; ಅವನು ಸಾಯುವುದು ಬೇಕಿಲ್ಲ, ಯಾಕೆಂದರೆ ಬದುಕುಳಿದು ಆಮೇಲೆ ಅವನು ನಗಬಹುದು ಈ ಕುರಿತು.
[ಗಂಟೆಯ ಶಬ್ದ]
ಬ್ರೂಟಸ್. ಶ್ಶ್, ಗಂಟೆ ಎಣಿಸಿ.
ಕೇಸಿಯಸ್. ಗಂಟೆ ಮೂರು ಬಡಿಯಿತು.
ಟ್ರೆಬೋನಿಯಸ್. ತೆರಳುವುದಕ್ಕೆ ಸಮಯವಾಯಿತು.
ಕೇಸಿಯಸ್. ಆದರೆ ಸೀಸರ್ ಈವತ್ತು ಹೊರಬರುತ್ತಾನೋ ಇಲ್ಲವೋ ಎನ್ನುವುದು ಇನ್ನೂ ಸಂದೇಹಾಸ್ಪದವೇ. ಯಾಕೆಂದರೆ
ಈಚೆಗೆ ಅವನಿಗೆ ಮೂಢನಂಬಿಕೆಗಳು ಜಾಸ್ತಿಯಾಗಿವೆ, ಇದು ಅವನು ಒಂದು ಕಾಲದಲ್ಲಿ ಭ್ರಮೆ, ಸ್ವಪ್ನ, ಮತ್ತು ಆಚಾರಗಳ ಕುರಿತು ಇರಿಸಿಕೊಂಡಿದ್ದ ಮುಖ್ಯ ವಿಶ್ವಾಸಕ್ಕೆ ವಿರುದ್ಧ:
ಬಹುಶಃ ಈ ಕಾಣಿಸುವ ಭಯಂಕರ ದೃಶ್ಯಗಳು, ಈ ರಾತ್ರಿಯ ಅಸಾಧಾರಣ ಭೀತಿ, ಮತ್ತು ಅವನ ಜ್ಯೋತಿಷಿಗಳ ಒತ್ತಾಸೆ ಈ ದಿನ ಅವನನ್ನು ಸಂಸತ್ತಿನಿಂದ ತಡೆದು ನಿಲ್ಲಿಸಬಹುದು.
ಡೆಸಿಯಸ್. ಆ ಬಗ್ಗೆ ಹೆದರುವುದು ಬೇಡ: ಅವನು ಹಾಗೆ ನಿರ್ಧರಿಸಿದ್ದರೆ, ನಾನವನ ಮನವೊಲಿಸಬಲ್ಲೆ.
ಯಾಕೆಂದರೆ ಅವನಿಗೆ ಕೇಳುವುದಕ್ಕೆ ಖುಷಿ ಪುರುಷಾಮೃಗಗಳನ್ನು ವೃಕ್ಷಗಳಿಂದ, ಸಿಂಹಗಳನ್ನು ಕುಣಿಕೆಗಳಿಂದ, ಹಾಗೂ ಮನುಷ್ಯರನ್ನು ಭಟ್ಟಂಗಿಗಳಿಂದ ಹೇಗೆ ಸೋಲಿಸಬಹುದು ಎನ್ನುವುದು. ಆದರೆ ನಾನು ಹಾಗಂದರೆ ಅವನನ್ನುತ್ತಾನೆ, ತಾನು ಭಟ್ಟಂಗಿಗಳನ್ನು ದ್ವೇಷಿಸುತ್ತೇನೆ ಎಂದು; ತಾನು ಸ್ವತಃ ಆಗ ಹೊಗಳಿಕೆಗೆ ತಲೆದೂಗುತ್ತ. ನಾನು ಪ್ರಯತ್ನಿಸಿ ನೋಡುತ್ತೇನೆ:
ಯಾಕೆಂದರೆ ನನಗೆ ಗೊತ್ತಿದೆ ಮನುಷ್ಯಸ್ವಭಾವಕ್ಕೆ ಅದರ ನಿಜವಾದ ತಿರುವು ಕೊಡುವುದು ಹೇಗೆಂದು;
ಅವನನ್ನು ಪುರಭವನಕ್ಕೆ ಕರೆತರುವ ವಿಷಯ ನನಗೆ ಬಿಡಿ.
ಕೇಸಿಯಸ್. ಬೇಡ, ಅವನನ್ನು ಕರೆತರುವುದಕ್ಕೆ ನಾವೆಲ್ಲರೂ ಅಲ್ಲಿರುತ್ತೇವೆ.
ಬ್ರೂಟಸ್. ಎಂಟು ಗಂಟೆಯ ಹೊತ್ತಿಗೆ, ಅದೇ ತಾನೇ ಅಂತಿಮ ಗಡಿ?
ಸಿನ್ನಾ. ಅಂತಿಮ ಗಡಿ ಅದೇ ಆಗಲಿ, ಆಗ ಬರದೆ ಇರಬೇಡಿ.
ಮೆಟೆಲಸ್. ಕೈಯುಸ್ ಲಿಗೇರಿಯಸ್ಗೆ ಸೀಸರನ ಕುರಿತು ದ್ವೇಷವಿದೆ, ಪಾಂಪಿಯನ್ನು ಆತ ಹೊಗಳಿದನೆಂದು ಸೀಸರ್ ಛೇಡಿಸಿದ್ದಕ್ಕೆ: ನೀವು ಯಾರೂ ಆತನ ನೆನೆಯಲಿಲ್ಲವೆಂದು ನನಗೆ ಆಶ್ಚರ್ಯವಾಗುತ್ತದೆ.
ಬ್ರೂಟಸ್. ಈಗ, ಜಾಣ ಮೆಟಲಸ್, ಅವನ ಬಳಿ ಹೋಗು: ಅವನಿಗೆ ನಾನೆಂದರೆ ತುಂಬಾ ಪ್ರೀತಿ, ನಾನದಕ್ಕೆ ಕಾರಣಗಳನ್ನು ಅವನಿಗೆ ನೀಡಿದ್ದೇನೆ, ಅವನನ್ನು ಇಲ್ಲಿಗೆ ಕಳಿಸು,ನಾನವನನ್ನು ತಯಾರುಗೊಳಿಸುವೆ.
ಕೇಸಿಯಸ್. ಬೆಳಗಾಗುತ್ತಿದೆ ನಮ್ಮ ಮೇಲೆ.
ನಾವು ನಿಮ್ಮನ್ನೀಗ ಬಿಟ್ಟು ಹೊರಟೆವು. ಬ್ರೂಟಸ್, ಹಾಗೂ ಸ್ನೇಹಿತರೆ, ನೀವೂ ಹೊರಡಿ; ಆದರೆ ಎಲ್ಲರಿಗೂ ನೆನಪಿರಲಿ ನೀವು ಹೇಳಿದ್ದು, ಮತ್ತು ನೀವೆಲ್ಲರೂ ನೀವೆಂದ ನಿಜ ರೋಮನರೆನ್ನುವುದನ್ನು ತೋರಿಸಿಕೊಡಿ.
ಬ್ರೂಟಸ್. ಮಹನೀಯರೇ, ಪ್ರಸನ್ನರಾಗಿ ಕಾಣಿಸಿರಿ,
ಮೋದದಿಂದಿರಿ, ನಿಮ್ಮ ಮುಖಚರ್ಯೇ ನಿಮ್ಮ ಉದ್ದೇಶಗಳನ್ನು ತೊಟ್ಟುಕೊಳ್ಳುವುದು ಬೇಡ, ಬದಲು ನಮ್ಮ ರೋಮನ್ ನಟರಂತೆ ಧರಿಸಿರಿ, ಕುಂದದ ಚೈತನ್ಯದೊಂದಿಗೆ, ಮತ್ತು ಗಾಂಭೀರ್ಯ ತಪ್ಪದ ತರ, ಆದ್ದರಿಂದ ಸರ್ವರಿಗೂ ಶುಭೋದಯ.
[ಬ್ರೂಟಸ್ನ ಹೊರತು ಉಳಿದವರ ನಿಷ್ಕ್ರಮಣ
ಹುಡುಗಾ: ಲೂಸಿಯಸ್: ಗಾಢನಿದ್ರೆ? ಪರವಾಯಿಲ್ಲ, ಆಳ ನಿದ್ದೆಯ ಮಧುಭರಿತ ಮಂಜನ್ನು ಸವಿದುಕೋ: ನಿನಗೆ ಭೂತಪ್ರೇತಗಳಿಲ್ಲ, ಭ್ರಮೆಗಳಿಲ್ಲ, ಮನುಷ್ಯರ ಮಿದುಳುಗಳಲ್ಲಿ ಕಾರ್ಯಭಾರಗಳು ಎಬ್ಬಿಸುವಂಥವು ಏನೂ ಇಲ್ಲ; ಆದ್ದರಿಂದ ನೀನಿಷ್ಟು ಚೆನ್ನಾಗಿ ನಿದ್ರಿಸುತ್ತಿ.
ಪೋರ್ಶಿಯಾ ಪ್ರವೇಶ
ಪೋರ್ಶಿಯಾ . ಬ್ರೂಟಸ್, ನನ್ನ ಸ್ವಾಮಿ!
ಬ್ರೂಟಸ್. ಪೋರ್ಶಿಯಾ , ಏನಿದು ಹೀಗೆ? ಯಾಕೆ ಎದ್ದಿದ್ದೀ? ಈ ನಸುಕಿನ ಥಂಡಿ ಹವೆಗೆ ನಿನ್ನ ನಾಜೂಕು ಪ್ರಕೃತಿಯನ್ನು
ಬಿಟ್ಟುಕೊಡುವುದು ಒಳ್ಳೆಯದಲ್ಲ.
ಪೋರ್ಶಿಯಾ . ನಿಮಗೂ ಅಲ್ಲ. ನೀವು ನಿರ್ದಾಕ್ಷಿಣ್ಯವಾಗಿ ಬ್ರೂಟಸ್ನನ್ನು ನನ್ನ ಹಾಸಿಗೆಯಿಂದ ಕದ್ದಿದ್ದೀರಿ: ಮತ್ತೆ ನಿನ್ನೆ
ರಾತ್ರಿಯೂಟದ ವೇಳೆ ಥಟ್ಟನೆ ಎದ್ದಿರಿ, ಅತ್ತಿತ್ತ ನಡೆದಿರಿ, ಯೋಚಿಸುತ್ತ, ನಿಟ್ಟುಸಿರು ಬಿಡುತ್ತ, ಕೈಗಳನ್ನು ಎದೆಗಪ್ಪಿಹಿಡಿದು ಹಾಗೂ ವಿಷಯವೇನೆಂದು ನಾನು ವಿಚಾರಿಸಿದಾಗ, ನಿಷ್ಕರುಣೆಯ ನೋಟದಿಂದ ನೀವು ನನ್ನನ್ನು ದಿಟ್ಟಿಸಿ ನೋಡಿದಿರಿ, ನಾನು ಮತ್ತಷ್ಟು ಒತ್ತಾಯಿಸಿದೆ, ಆದರೆ ನೀವು ಉತ್ತರಿಸಲಿಲ್ಲ, ಬದಲು ಸಿಟ್ಟಿನಿಂದ ಕೈಯಾಡಿಸಿ ನಿಮ್ಮನ್ನು ಬಿಟ್ಟುಹೋಗುವಂತೆ ನನಗೆ ಸಂಜ್ಞೆ ಮಾಡಿದಿರಿ.
ಅಂತೆಯೇ ಮಾಡಿದೆ ನಾನು, ಈಗಾಗಲೇ ಬಹಳ ಉರಿಹತ್ತಿದ ಆ ಅಸಹನೆಯನ್ನು ಇನ್ನಷ್ಟು ಬಲಪಡಿಸುವುದು ಬೇಡವೆಂದು; ಮಾತ್ರವಲ್ಲ, ಇದು ಬರೇ ಚಿತ್ತವೃತ್ತಿಯ ಪರಿಣಾಮವಿರಬಹುದೆಂದು ಆಶಿಸುತ್ತ, ಯಾಕೆಂದರೆ ಪ್ರತಿಯೊಬ್ಬ ಮನುಷ್ಯನನ್ನೂ
ಅದು ಬಾಧಿಸುವ ಗಳಿಗೆಯಿದೆ.
ಉಣ್ಣಲು ಬಿಡದು, ಮಾತಾಡಲು ಬಿಡದು, ಅಥವ ನಿದ್ರಿಸಲೂ ಬಿಡದು; ಹಾಗೂ ಅದು ನಿಮ್ಮ ಸ್ಥಿತಿಯ ಮೇಲೆ ಧಾಳಿಮಾಡಿದ ಹಾಗೆ ಚಹರೆಯ ಮೇಲೂ ಆಕ್ರಮಿಸಿದರೆ, ನನಗೆ ನಿಮ್ಮ ಗುರುತೇ ಸಿಗದು, ಬ್ರೂಟಸ್.
ನನ್ನ ಪ್ರೀತಿಯ ದೊರೆಯೇ, ನಿಮ್ಮ ಕೊರಗಿನ ಕಾರಣ ನನಗೆ ತಿಳಿಸಿ.
ಬ್ರೂಟಸ್. ನನ್ನ ಆರೋಗ್ಯ ಸರಿಯಿಲ್ಲ ಅಷ್ಟೆ.
ಪೋರ್ಶಿಯಾ . ಬ್ರೂಟಸ್ ಬುದ್ಧಿವಂತರು, ಅವರಿಗೆ ಆರೋಗ್ಯ ಸರಿಯಿಲ್ಲದಿದ್ದರೆ ಅದನ್ನು ಸರಿಪಡಿಸುವ ವಿಧಾನ ಕಂಡುಕೊಳ್ಳುತ್ತಾರೆ.
ಬ್ರೂಟಸ್. ನಾನದನ್ನೇ ಮಾಡುತ್ತಿದ್ದೇನೆ. ಜಾಣೆ ಪೋರ್ಶಿಯಾ ,ಹೋಗಿ ಮಲಕ್ಕೋ.
ಪೋರ್ಶಿಯಾ . ಬ್ರೂಟಸ್ಗೆ ಅನಾರೋಗ್ಯವೇ? ಹಾಗಿದ್ದರೆ ಹೊದ್ದುಕೊಳ್ಳದೆ ನಡೆದಾಡುವುದು, ಈ ಶೀತಲ ಮುಂಜಾವದ
ಹವೆಯನ್ನು ಸೇವಿಸುವುದು ಔಷಧಿಯಾ? ಏನು, ಬ್ರೂಟಸ್ಗೆ ಅನಾರೋಗ್ಯವೇ? ಹಾಗಿದ್ದರೆ ಅವರು ತಮ್ಮ ಬೆಚ್ಚನೆಯ
ಹಾಸಿಗೆಯಿಂದ ಸದ್ದಿಲ್ಲದೆ ಎದ್ದು ರಾತ್ರಿಯ ಕೆಟ್ಟ ಸೋಂಕಿಗೆ ತೆರೆದುಕೊಳ್ಳುವ ಧೈರ್ಯ ಮಾಡುವರೆ? ಹಾಗೂ ವಾತಮಯ,ಅಶುದ್ಧ ಗಾಳಿಯನ್ನು ತಮ್ಮ ಅನಾರೋಗ್ಯಕ್ಕೆ ಆಹ್ವಾನಿಸುವರೇ? ಇಲ್ಲ, ನನ್ನ ಬ್ರೂಟಸ್, ನಿಮ್ಮ ಮನಸ್ಸಿನಲ್ಲೇನೋ ಅನಾರೋಗ್ಯಕರ ಉದ್ದೇಶವಿದೆ, ನನ್ನ ಸ್ಥಾನಮಾನಗಳ ಕಾರಣ ನನಗದನ್ನು ತಿಳಿಯುವ ಹಕ್ಕಿದೆ: ಮಂಡಿಯೂರಿ ನಿಮ್ಮ ಮನವೊಲಿಸುತ್ತಿದ್ದೇನೆ, ಒಂದು ಕಾಲದಲ್ಲಿ ಪ್ರಶಂಸೆಗೆ ಒಳಗಾಗಿದ್ದ ನನ್ನ ಸೌಂದರ್ಯದಿಂದ, ನಿಮ್ಮ ಪ್ರೀತಿಯ ಸಕಲ ವಚನಗಳಿಂದ, ಮತ್ತು ನಮ್ಮಿಬ್ಬರ ದೇಹ ಮತ್ತು ಮನಸ್ಸುಗಳನ್ನು ಒಂದು ಮಾಡಿದ ಆ ಬಹುದೊಡ್ಡ ವಚನದಿಂದ, ನನ್ನ ಮುಂದೆ ಬಿಚ್ಚಿಡಿ, ನೀವೇಕೆ ದುಃಖಿತರು ಎನ್ನುವುದನ್ನು, ನನ್ನ ಮುಂದೆ, ನಿಮ್ಮ ಮುಂದೆ, ನಿಮ್ಮ ಅರ್ಧಾಂಗಿಯ ಮುಂದೆ: ನಿಮ್ಮನ್ನು ಈ ರಾತ್ರಿ ಬಂದು ಕಂಡ ಮನುಷ್ಯರು ಯಾರು: ಯಾಕೆಂದರೆ ಕತ್ತಲಲ್ಲಿ ಸಹಾ ಮುಖ ಮರೆಸಿದ ಆರೇಳು ಮಂದಿ ಮನುಷ್ಯರಿದ್ದರು ಇಲ್ಲಿ.
ಬ್ರೂಟಸ್. ಮಣಿಯಬೇಡವೆ, ಮಿದು ಪೋರ್ಶಿಯಾ.
ಪೋರ್ಶಿಯಾ . ಮಣಿಯುವ ಅಗತ್ಯವಿರಲಿಲ್ಲ ನೀವು ಮಿದು ಬ್ರೂಟಸ್ ಆಗಿರುತ್ತಿದ್ದರೆ. ವಿವಾಹದ ಬಂಧದೊಳಗೆ, ನನಗೆ ಹೇಳಿ ಬ್ರೂಟಸ್, ನಿಮಗೆ ಸಂಬಂಧಿಸಿದ ರಹಸ್ಯಗಳನ್ನು ನಾನು ತಿಳಿಯಬಾರದೇ? ನಾನು ನೀವೇ, ಆದರೆ ಒಂದು ಬಗೆಯಲ್ಲಿ, ಅಥವಾ ಒಂದು ಮಿತಿಯಲ್ಲಿ? ಊಟದಲ್ಲಿ ನಿಮ್ಮ ಜತೆಯಿರುವುದಕ್ಕೆ, ಹಾಸಿಗೆಯಲ್ಲಿ ನಿಮಗೆ ಸುಖ ನೀಡುವುದಕ್ಕೆ, ಮತ್ತು ಕೆಲವು ಸಲ ನಿಮ್ಮೊಡನೆ ಮಾತಾಡುವುದಕ್ಕೆ? ನಿಮ್ಮ ಮನಸ್ಸೇಚ್ಛೆಯ ಹೊರವಲಯದಲ್ಲಿ ಮಾತ್ರವೇ ನನ್ನ ವಸತಿಯೇ? ಅದಕ್ಕಿಂತ ಹೆಚ್ಚಲ್ಲ ಎಂದಾದರೆ ಪೋರ್ಶಿಯಾ ಬ್ರೂಟಸ್ನ ಬೆಲೆವೆಣ್ಣು, ಅವರ ಪತ್ನಿಯಲ್ಲ.
ಬ್ರೂಟಸ್. ನೀನು ನನ್ನ ನಿಜವಾದ ಮತ್ತು ಗೌರವಯುತ ಪತ್ನಿ, ನನ್ನ ದುಃಖೀ ಹೃದಯಕ್ಕೆ ಭೇಟಿ ನೀಡುವ ರಕ್ತ ಬಿಂದುಗಳಷ್ಟೇ ನನಗೆ ಪ್ರಿಯಳು.
ಪೋರ್ಶಿಯಾ . ಇದು ನಿಜವಾಗಿದ್ದರೆ, ನನಗೀ ರಹಸ್ಯ ಗೊತ್ತಿರಬೇಕಿತ್ತು. ಒಪ್ಪಿದೆ ನಾನೊಬ್ಬ ಹೆಂಗಸು. ಆದರೆ ದೊರೆ ಬ್ರೂಟಸ್ ಪತ್ನಿಯಾಗಿ ಸ್ವೀಕರಿಸಿದ ಹೆಂಗಸು.ಕೇಟೋವಿನ ಮಗಳು. ಈ ರೀತಿಯ ಮಗಳಾಗಿ, ಈ ರೀತಿಯ ಪತ್ನಿಯಾಗಿ, ನಾನು ಇತರ ಸ್ತ್ರೀಯರಿಗಿಂತ ಶಕ್ತಳೆಂದು ನಿಮಗೆ ಅನಿಸುವುದಿಲ್ಲವೇ? ನಿಮ್ಮ ಮನೋಗತವನ್ನು ನನಗೆ ಹೇಳಿ, ನಾನದನ್ನು ಯಾರಿಗೂ ತಿಳಿಸುವುದಿಲ್ಲ: ನಾನು ನನ್ನ ನಿಷ್ಠೆಯ ಪ್ರಬಲ ಸಾಕ್ಷಿಯನ್ನು ನೀಡಿದ್ದೇನೆ, ಇಲ್ಲಿ ಈ ತೊಡೆಯಲ್ಲಿ ನನ್ನ ಸ್ವೇಚ್ಛೆಯ ಗಾಯ ಮಾಡಿಕೊಳ್ಳುವ ಮೂಲಕ, ನಾನದನ್ನು ತಾಳ್ಮೆಯಿಂದ ತಡೆದುಕೊಳ್ಳುವೆನೇ, ನನ್ನ ಪತಿಯ ರಹಸ್ಯಗಳನ್ನು ತಡೆದುಕೊಳ್ಳದೆ?
ಬ್ರೂಟಸ್. ಓ ದೈವಗಳೇ! ಈ ಪತ್ನಿಗೆ ನನ್ನ ಯೋಗ್ಯನ ಮಾಡಿ.
[ಬಾಗಿಲ ಬಡಿತ]
ಅದೋ, ಅದೋ, ಯಾರೋ ಬಾಗಿಲು ಬಡಿಯುತ್ತಿದ್ದಾರೆ:
ಪೋರ್ಶಿಯಾ , ಸ್ವಲ್ಪ ಹೊತ್ತು ಒಳಗೆ ಹೋಗು, ನಿಧಾನವಾಗಿ ನನ್ನ ಹೃದಯದ ರಹಸ್ಯಗಳು ನಿನಗೆ ಗೊತ್ತಾಗುತ್ತವೆ.
ನನ್ನೆಲ್ಲಾ ಕಾರ್ಯಗಳನ್ನೂ ನಾನು ನಿನಗೆ ತಿಳಿಸುವೆ, ನನ್ನೀ ಹಣೆಯ ಸಕಲ ಬರಹಗಳನ್ನೂ: ತ್ವರೆಯಿಂದ ತೆರಳು.
[ ಪೋರ್ಶಿಯಾ ನಿಷ್ಕ್ರಮಣ)
ಲೂಸಿಯಸ್ ಮತ್ತು ಲಿಗೇರಿಯಸ್ ಪ್ರವೇಶ….
ಲೂಸಿಯಸ್, ಯಾರು ಬಾಗಿಲು ಬಡಿಯುತ್ತಿರೋದು ನೋಡು?
ಲೂಸಿಯಸ್. ಇಲ್ಲೊಬ್ಬ ಮೈ ಹುಷಾರಿಲ್ಲದ ಮನುಷ್ಯನಿದ್ದಾನೆ, ನಿಮ್ಮ ಜತೆ ಮಾತಾಡಬೇಕಂತೆ.
ಬ್ರೂಟಸ್. ಕೈಯುಸ್ ಲಿಗೇರಿಯಸ್, ಮೆಟೆಲಸ್ ಹೇಳಿದ ವ್ಯಕ್ತಿ. ಹುಡುಗಾ, ನೀನು ಆಚೆಗೆ ನಿಲ್ಲು.
ಕೈಯುಸ್ ಲಿಗೇರಿಯಸ್, ಏನು ವಿಷಯ?
ಲಿಗೇರಿಯಸ್. ಶುಭೋದಯ ಹೇಳುವೆ, ನನ್ನ ನಿಶ್ಶಕ್ತ ನಾಲಿಗೆಯಿಂದ.
ಬ್ರೂಟಸ್. ಓ ಎಂಥಾ ಸಮಯ ಕಂಡುಕೊಂಡಿದ್ದೀ, ಧೀರ ಕೈಯುಸ್, ಶಾಲು ಹೊದ್ದುಕೊಳ್ಳುವುದಕ್ಕೆ?
ನಿನಗೆ ಅಸುಖ ಇಲ್ಲದಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!
ಲಿಗೇರಿಯಸ್. ನನಗೆ ಅಸುಖವಿಲ್ಲ, ಗೌರವ ತರುವ ಕಾರ್ಯವೇನಾದರೂ ಬ್ರೂಟಸ್ನ ಕೈಯಲ್ಲಿದ್ದರೆ.
ಬ್ರೂಟಸ್. ಅಂಥದೊಂದು ಕಾರ್ಯ ನನ್ನ ಕೈಯಲ್ಲಿದೆ, ಲಿಗೇರಿಯಸ್, ನಿನಗದನ್ನು ಕೇಳುವಂಥ ಆರೋಗ್ಯಕರ
ಆಸಕ್ತಿಯಿದ್ದರೆ.
ಲಿಗೇರಿಯಸ್. ರೋಮನರು ತಲೆಬಾಗುವ ಎಲ್ಲಾ ದೇವತೆಗಳ ಆಣೆ, ನಾನಿದೋ ನನ್ನ ಅನಾರೋಗ್ಯವನ್ನು ಬಿಟ್ಟುಬಿಟ್ಟೆ. ರೋಮಿನ ಆತ್ಮವೇ, ಧೀರ ಪುತ್ರರೇ, ಧೀಮಂತ ಕುಲೀನರೇ, ಮಾಂತ್ರಿಕನ ಹಾಗೆ ನೀವು ನನ್ನ ಸತ್ತ ಚೇತನವನ್ನು ಎಬ್ಬಿಸಿರುವಿರಿ. ಈಗ ನನಗೆ ಓಡಲು ಹೇಳಿ, ನಾನು ಅಸಾಧ್ಯ ಸಂಗತಿಗಳ ಜತೆ ಸೆಣಸುವೆ, ಹೌದು, ಅವುಗಳ ಮೇಲೆ ಮೇಲುಗೈ
ಸಾಧಿಸುವೆ. ಹೇಳಿರಿ, ಏನು ಮಾಡುವುದಿದೆ?
ಬ್ರೂಟಸ್. ಒಂದು ಕೆಲಸ,ರೋಗಿಗಳನ್ನು ನಿರೋಗಿಗಳನ್ನಾಗಿ ಮಾಡುವುದು.
ಲೆಗೇರಿಯಸ್. ಆದರೆ ಕೆಲವು ನಿರೋಗಿಗಳಿದ್ದಾರೆ, ನಾನವರನ್ನು ರೋಗಿಗಳನ್ನಾಗಿ ಮಾಡಬೇಕಲ್ಲ?
ಬ್ರೂಟಸ್. ನಾವು ಅದನ್ನೂ ಮಾಡಬೇಕು. ಅದು ಏನು ಮತ್ತು ಯಾರಿಗೆ ಎನ್ನುವುದನ್ನು, ಕೈಯುಸ್,
ನಾವು ಹೋಗುತ್ತ ನಿನಗೆ ತಿಳಿಸುವೆ.
ಲಿಗೇರಿಯಸ್. ನೀವು ಅಡಿಯಿಡಿರಿ, ನಾನು ನಿಮ್ಮನ್ನು ಅನುಸರಿಸುವೆ, ಹೊಸದಾಗಿ ಹೊಸೆದ ಹೃದಯದೊಂದಿಗೆ,
ಏನು ಮಾಡಬೇಕೋ ನನಗೆ ಗೊತ್ತಿರದ ಅದನ್ನು ಮಾಡುವುದಕ್ಕೆ: ಬ್ರೂಟಸ್ ನನ್ನ ಮುಂದಾಳು ಎನ್ನುವುದು
ಮಾತ್ರ ನನಗೆ ಸಾಕು.
[ಗುಡುಗಿನ ಸದ್ದು]
ಬ್ರೂಟಸ್. ಬಾ ಹಾಗಿದ್ದರೆ.
[ಇಬ್ಬರೂ ನಿಷ್ಕ್ರಮಣ
ದೃಶ್ಯ 2
ಸೀಸರನ ಮನೆ.
ಗುಡುಗು ಮಿಂಚು. ಜೂಲಿಯಸ್ ಸೀಸರ್ ರಾತ್ರಿಯ ನಿಲುವಂಗಿ ತೊಟ್ಟು
ಪ್ರವೇಶ
ಸೀಸರ್. ದಿವವಾಗಲಿ ಪೃಥ್ವಿಯಾಗಲಿ ಶಾಂತಿಯಿಂದಿಲ್ಲ ಈ ರಾತ್ರಿ: ಮೂರು ಸಲ ಕಲ್ಪೂರ್ನಿಯಾ ನಿದ್ದೆಯಲಿ ಚೀರಿದಳು,
ಕಾಪಾಡಿ ಯಾರಾದರೂ: ಸೀಸರನ ಕೊಲ್ಲುತಿದ್ದಾರೆ ಎಂಬುದಾಗಿ.
ಯಾರಿದ್ದಾರೆ ಒಳಗೆ?
ಒಬ್ಬ ಸೇವಕನ ಪ್ರವೇಶ
ಸೇವಕ. ಸ್ವಾಮಿ.
ಸೀಸರ್. ಹೋಗಿ ಪುರೋಹಿತರಿಗೆ ಹೇಳು ಬಲಿ ಕೊಡುವುದಕ್ಕೆ, ಅದರ ಸಫಲತೆಯ ಬಗ್ಗೆ ಅವರ ಅಭಿಪ್ರಾಯ ಕೇಳಿ ಬಾ.
ಸೇವಕ. ಹಾಗೇ ಆಗಲಿ, ಸ್ವಾಮಿ. [ನಿಷ್ಕ್ರಮಣ
ಕಲ್ಪೂರ್ನಿಯಾ ಪ್ರವೇಶ
ಕಲ್ಪೂರ್ನಿಯಾ. ಏನಿದರ ಅರ್ಥ ಸೀಸರ್, ಈ ತರ ಓಡಾಡುವುದೆಂದರೆ? ಈದಿನ ನೀವು ಮನೆಯಿಂದ ಹೊರ ಹೋಗಬಾರದು.
ಸೀಸರ್. ಸೀಸರ್ ಹೊರಹೋಗುವುದು ಖಂಡಿತ: ನನ್ನನ್ನು ಬೆದರಿಸುವ ಸಂಗತಿಗಳು ಕಂಡದ್ದು ನನ್ನ ಬೆನ್ನನ್ನು ಮಾತ್ರ:
ಸೀಸರನ ಮುಖ ಕಂಡಾಗ ಅವು ಮಾಯವಾಗುತ್ತವೆ.
ಕಲ್ಪೂರ್ನಿಯಾ. ಸೀಸರ್, ನಾನೆಂದೂ ಶಕುನಗಳನ್ನು ಅವಲಂಬಿಸಿದ್ದಿಲ್ಲ, ಆದರೆ ಈಗ ನನಗವು ಭಯ ಉಂಟುಮಾಡುತ್ತಿವೆ. ಒಳಗೊಬ್ಬ ಮನುಷ್ಯನಿದ್ದಾನೆ, ನಾವು ಕಂಡು ಕೇಳಿದ ಸಂಗತಿಗಳಲ್ಲದೆ, ಕಾಪಿನವರು ಕಂಡ ಅತಿ ಘೋರ ದೃಶ್ಯಗಳನ್ನು ವರ್ಣಿಸುತ್ತಿದ್ದಾನೆ.
ಸಿಂಹಿಣಿಯೊಂದು ನಡುಬೀದಿಯಲ್ಲಿ ಪ್ರಸವಿಸಿದೆಯಂತೆ,
ಗೋರಿಗಳು ಬಾಯ್ರೆದೆರೆದು ಸತ್ತವರ ಹೊರಗೆಸೆದಿವೆಯಂತೆ;
ಮೋಡಗಳ ಮೇಲೆ ಅಗ್ನಿಯೋಧರು ಹಣಾಹಣಿ ನಡೆಸಿದ್ದಾರಂತೆ..
ಅಕ್ಷೋಹಿಣೀ ಸಂಖ್ಯೆಗಳಲ್ಲಿ, ರಣದ ನಿಜ ವ್ಯೂಹಗಳಲ್ಲಿ,
ಪುರಭವನದ ಮೇಲೆ ನೆತ್ತರ ಸೋನೆ ಮಳೆ ಸುರಿದದ್ದು
ಅದರಿಂದಲೇ ಅಂತೆ: ಕಾಳಗದ ಕಲಾಪ ಗಾಳಿಯಲಿ
ಬಿದ್ದಿದೆ, ಕುದುರೆಗಳ ಹೇಷಾರವ ಮತ್ತು ಸಾಯುವ
ಮನುಷ್ಯರ ಗೊರಲು ಧ್ವನಿ, ಹಾಗೂ ಆತ್ಮಗಳು ಕಿರುಚಾಡುತ್ತಿವೆ ರಸ್ತೆಗಳಲ್ಲಿ. ಓ ಸೀಸರ್, ಈ ವಿಷಯಗಳು ತೀರಾ ಅಸಾಮಾನ್ಯ,ನನಗೆ ಭಯವಾಗುತ್ತಿದೆ.
ಸೀಸರ್. ಮಹಾದೇವತೆಗಳು ಉದ್ದೇಶ ಕಲ್ಪಿಸಿದ ಏನನ್ನು ತಾನೇ ನಾವು ತಡೆಯುವುದು ಸಾಧ್ಯ?
ಆದರೂ ಸೀಸರ್ ಹೋಗಿಯೇ ಹೋಗುತ್ತಾನೆ:
ಯಾಕೆಂದರೆ ಈ ಶಕುನಗಳು ಸೀಸರನಿಗಿದ್ದಂತೆ ಇವೆ…
ಸಮಸ್ತ ಲೋಕಕ್ಕೆ.
ಕಲ್ಪೂರ್ನಿಯಾ. ಭಿಕ್ಷುಕರು ಸಾಯುವಾಗ ಉಲ್ಕೆಗಳು ಕಾಣಿಸುವುದಿಲ್ಲ, ರಾಜರ ಮರಣವನ್ನು ಆಕಾಶ ಸ್ವತಃ ತೋರಿಸುತ್ತದೆ.
ಸೀಸರ್. ಹೇಡಿಗಳು ಹಲವು ಸಲ ಸಾಯುವರು ತಮ್ಮ ಸಾವಿಗೆ ಮೊದಲು, ಧೈರ್ಯಶಾಲಿಗಳು ಸಾವನ್ನು ಸವಿಯುವುದು ಒಂದೇ ಸಲ, ಮರಣವೆನ್ನುವುದು ಅತ್ಯಗತ್ಯವಾದ ಅಂತ್ಯ, ಅದು ಬರುವಾಗ ಬರುತ್ತದೆ ಎನ್ನುವುದನ್ನು ಕಂಡು ಜನ ಭಯಪಡುತ್ತಿರುವುದು ನನ್ನ ದೃಷ್ಟಿಯಲ್ಲೊಂದು ಅತ್ಯಂತ ಸೋಜಿಗ.
ಸೇವಕನ ಪ್ರವೇಶ
ಏನನ್ನುತ್ತಾರೆ ಶಕುನ ನುಡಿಯುವವರು?
ಸೇವಕ. ನೀವೀ ದಿವಸ ಹೊರ ಹೊರಡುವುದು ಬೇಡ ಎಂದು. ಬಲಿಯೊಂದರ ಕರುಳು ಎಳೆದು ನೋಡಿದರೆ,ಅವರಿಗೆ ದೇಹದಲ್ಲಿ ಹೃದಯವೇ ಕಾಣಿಸಲಿಲ್ಲ.
ಸೀಸರ್. ದೇವತೆಗಳು ಎಸಗುತ್ತಾರೆ ಇದನ್ನು ಪುಕ್ಕಲುತನಕ್ಕೆ ನಾಚಿಕೆ ಹುಟ್ಟಿಸುವುದಕ್ಕೆ: ಹೆದರಿ ಈ ದಿನ ಮನೆಯಲ್ಲಿ ಕುಳಿತರೆ, ಹೃದಯವಿಲ್ಲದ ಮಿಕದಂತಾಗುತ್ತಾನೆ.
ಸೀಸರ್. ಇಲ್ಲ, ಸೀಸರ್ ಹಾಗೆ ಕೂರುವವನಲ್ಲ; ಅಪಾಯಕ್ಕೆ ಗೊತ್ತು ಸೀಸರ್ ಅದಕ್ಕಿಂತ ಹೆಚ್ಚು ಅಪಾಯಕಾರಿಯೆಂದು.
ನಾವಿಬ್ಬರೂ ಒಂದೇ ದಿನ ಜನನಕ್ಕೆ ಬಂದ ಎರಡು ಸಿಂಹದ ಮರಿಗಳು, ಹಾಗೂ ಹಿರಿಯವನು ನಾನು, ಹೆಚ್ಚು ಭೀಕರನು, ಸೀಸರ್ ಹೊರಡುತ್ತಾನೆ.
ಕಲ್ಪೂರ್ನಿಯಾ. ಅಯ್ಯೋ ನನ್ನ ದೊರೆಯೇ, ನಿಮ್ಮ ಆತ್ಮಸ್ಥೈರ್ಯದಲ್ಲಿ ನಾಶವಾಯಿತು ನಿಮ್ಮ ವಿವೇಕ: ಈ ದಿನ ಹೊರ ಹೊರಡಬೇಡಿ: ಬೇಕಾದರೆ ನಿಮ್ಮನ್ನು ಮನೆಯೊಳಗೆ ಇರಿಸುವುದು ನನ್ನ ಹೇಡಿತನವೆಂದು ಕರೆಯಿರಿ, ನಿಮ್ಮದಲ್ಲ. ಪುರಸಭೆಗೆ ನಾವು ಮಾರ್ಕ್ ಆಂಟನಿಯನ್ನು ಕಳಿಸೋಣ, ಅವನು ತಿಳಿಸುತ್ತಾನೆ ಈ ದಿನ ನಿಮಗೆ ಹುಷಾರಿಲ್ಲ ಎಂದು, ನಾನವನ ಕಾಲಿಗೆ ಬಿದ್ದು ಕೇಳಿಕೊಂಡೇನು.
ಸೀಸರ್. ನನಗೆ ಹುಷಾರಿಲ್ಲವೆಂದು ಮಾರ್ಕ್ ಆಂಟನಿ ಹೇಳಲಿ, ಹಾಗೂ ನಿನ್ನ ತೃಪ್ತಿಗೆ ನಾನು ಮನೆಯಲ್ಲಿ ಇರುತ್ತೇನೆ, ಸರಿಯೇ ?
ಡೆಸಿಯಸ್ ಪ್ರವೇಶ
ಇಲ್ಲಿ ಡೆಸಿಯಸ್ ಬ್ರೂಟಸ್ ಇದ್ದಾನೆ, ಅವನೇ ಹೇಳಲಿ ಅವರಿಗೆ.
ಡೆಸಿಯಸ್. ಸೀಸರಿಗೆ ಜಯವಾಗಲಿ: ಶುಭೋದಯ, ಶ್ರೇಷ್ಠ ಸೀಸರ್, ನಿಮ್ಮನ್ನು ಪುರಭವನಕ್ಕೆ ಕರೆದೊಯ್ಯಲು
ನಾನು ಬಂದಿದ್ದೇನೆ.
ಸೀಸರ್. ಒಳ್ಳೇ ಸಮಯಕ್ಕೆ ಬಂದಿರುವಿ,ಸಂಸದರಿಗೆ ನನ್ನ ಶುಭಾಶಯಗಳನ್ನು ಕೊಂಡೊಯ್ಯುವುದಕ್ಕೆ,ಹಾಗೂ ಈ ದಿನ ನಾನು ಬರುವುದಿಲ್ಲ ಎನ್ನುವುದಕ್ಕೆ: ಬರಲಾರೆ ಎನ್ನುವುದು ಅಸತ್ಯ: ಮತ್ತು ಬರುವ ಧೈರ್ಯವಿಲ್ಲ ಎನ್ನುವುದು ಇನ್ನಷ್ಟು ಅಸತ್ಯ: ನಾನೀಗ ಬರುವುದಿಲ್ಲ–
ಹಾಗೆಂದು ಅವರಿಗೆ ತಿಳಿಸು ಡೆಸಿಯಸ್.
ಕಲ್ಪೂರ್ನಿಯಾ. ಇವರಿಗೆ ಹುಷಾರಿಲ್ಲವೆಂದು ಹೇಳಿ.
ಸೀಸರ್. ಸೀಸರ್ ಸುಳ್ಳು ಹೇಳಬೇಕೆ?
ಜೈತ್ರಯಾತ್ರೆಯಲ್ಲಿ ನಾನು ನನ್ನ ತೋಳನ್ನು ಅಷ್ಟುದ್ದ ಚಾಚಿದ್ದು ಗಡ್ಡ ಬಿಳಿಯಾದವರಿಗೆ ಸತ್ಯ ಹೇಳುವುದಕ್ಕೆ ಹೆದರಲೆಂದೆ? ಡೆಸಿಯಸ್, ಹೋಗಿ ಹೇಳವರಿಗೆ ಸೀಸರ್ ಬರುವುದಿಲ್ಲ ಎಂದು.
ಡೆಸಿಯಸ್. ಮಹಾಶೂರ ಸೀಸರ್, ನನಗೆ ಏನಾದರೊಂದು ಕಾರಣ ಗೊತ್ತಾಗಲಿ, ಹೇಳಿದಾಗ ನಾನು ನಗೆಪಾಟಲಿಗೆ ಗುರಿಯಾಗದೆ ಇರಬೇಕಾದರೆ.
ಸೀಸರ್. ಕಾರಣ ನನ್ನಿಚ್ಛೆ, ನಾನು ಬರುವುದಿಲ್ಲ, ಅದು ಸಾಕು ಸಂಸತ್ತನ್ನು ತೃಪ್ತಿಪಡಿಸುವುದಕ್ಕೆ. ಆದರೆ ನಿನ್ನ ಖಾಸಗಿ ತೃಪ್ತಿಗೆ, ಯಾಕೆಂದರೆ ನನಗೆ ನಿನ್ನ ಮೇಲೆ ಪ್ರೀತಿಯಿರುವುದರಿಂದ, ನಿನಗೆ ತಿಳಿಸುತ್ತೇನೆ, ಕಲ್ಪೂರ್ನಿಯಾ, ಈ ನನ್ನ ಪತ್ನಿ, ನನ್ನನ್ನು
ಮನೆಯೊಳಗೆ ಇರಿಸಿದ್ದಾಳೆ. ರಾತ್ರಿ ಅವಳಿಗೊಂದು ಕನಸು ಬಿತ್ತಂತೆ, ನನ್ನದೊಂದು ಪ್ರತಿಮೆಯನ್ನು ಕಂಡಳು, ಅದು ಕಾರಂಜಿಯ ತರ ಮೂರು ರಂಧ್ರಗಳಲ್ಲಿ ನಿಜವಾದ ರಕ್ತ ಕಾರುವ ಹಾಗೆ: ಮತ್ತು ಹಲವಾರು ಧಡಿಯ ರೋಮನರು ನಸುನಗುತ್ತ ಬಂದು, ತಮ್ಮ ಕೈಗಳನ್ನು ಅದರಲ್ಲಿ ಅದ್ದಿ ತೊಳೆದರಂತೆ: ಈ ಸಂಗತಿಗಳನ್ನವಳು ಮುನ್ಸೂಚನೆಗಳೆಂದು, ದುಶ್ಶಕುನಗಳೆಂದು, ಸದ್ಯ ಭವನೀಯ ಕೆಡುಕುಗಳೆಂದು ನನ್ನ ಪತ್ನಿ ಭಾವಿಸುತ್ತಾಳೆ, ಮಂಡಿಯೂರಿ ಬೇಡಿಕೊಂಡಿದ್ದಾಳೆ, ಈ ದಿನ ನಾನು ಮನೆಯಲ್ಲೇ ಇರಬೇಕೆಂದು.
ಡೆಸಿಯಸ್. ಈ ಕನಸಿನ ವಿವರಣೆಯೆಲ್ಲಾ ತಪ್ಪು, ಅದೊಂದು ಕಣ್ಕಟ್ಟು, ಸರಿಯಾದ್ದು ಮತ್ತು ಶುಭವಾದ್ದು: ನಿಮ್ಮ ಪ್ರತಿಮೆ ಅನೇಕ ಬಾಯಿಗಳಿಂದ ರಕ್ತ ಕಾರುವುದು, ನಸು ನಗುವ ಅನೇಕ ರೋಮನರು ಅದರಲ್ಲಿ ಮೀಯುವುದು ಸೂಚಿಸುವುದೇನೆಂದರೆ, ನಿಮ್ಮಿಂದ ಈ ಶ್ರೇಷ್ಠ ರೋಮ್ ಪುನರುಜ್ಜೀವನದ ರಕ್ತ ಪಡೆದುಕೊಳ್ಳುವುದೆಂದು, ಹಾಗೂ ಪ್ರತಿಷ್ಠಿತ ಜನರು ಜೀವದ್ರವಗಳನ್ನು, ಕಲೆಗಳನ್ನು,
ಕುರುಹುಗಳನ್ನು ಮತ್ತು ಗುರುತುಗಳನ್ನು ಪಡೆಯಲು ಮುನ್ನುಗ್ಗುವರೆಂದು. ಕಲ್ಪೂರ್ನಿಯಾಳ ಕನಸು ಹೇಳುವುದು ಇದನ್ನು.
ಸೀಸರ್. ಈ ತರದಲ್ಲಿ ನೀನದನ್ನು ಚೆನ್ನಾಗಿಯೇ ವಿವರಿಸಿದ್ದೀ.
ಡೆಸಿಯಸ್. ಹೌದು, ನಾನನ್ನುವುದನ್ನು ನೀವು ಆಲಿಸಿದಾಗ: ಮತ್ತು ಈಗ ತಿಳಕೊಳ್ಳಿ, ಸಂಸದು ನಿರ್ಧರಿಸಿದೆ ಈ ದಿನ ಮಹಾಬಲಶಾಲಿ ಸೀಸರಿಗೆ ಕಿರೀಟ ನೀಡುವುದಕ್ಕೆ.
ನೀವು ಬರುವುದಿಲ್ಲವೆಂದು ಅವರಿಗೆ ಸಂದೇಶ ಕಳಿಸಿದರೆ ಅವರ ಮನಸ್ಸು ಬದಲಾಗಬಹುದು. ಅಲ್ಲದೆ, ಸಂಸದನ್ನು ಇನ್ನೊಂದು ದಿವಸಕ್ಕೆ ಮುಂದೂಡಿರಿ,ಸೀಸರನ ಪತ್ನಿಗೆ ಒಳ್ಳೇ ಕನಸುಗಳು ಬೀಳುವ ಕಾಲಕ್ಕೆ ಎಂದು ಯಾರಾದರೊಬ್ಬ ಅನ್ನುವುದು ದೂರದ ಮಾತಲ್ಲ, ಎಂದರೆ ಅದೊಂದು ತಕ್ಕ ಪರಿಹಾಸ್ಯವಾಗುತ್ತದೆ. ಸೀಸರ್ ಅಡಗಿದರೆ ಅವರು ಪಿಸುಮಾತು ನುಡಿಯುವುದಿಲ್ಲವೇ,
ನೋಡಿದಿರ ಸೀಸರಿಗೆ ಭಯ! ಎಂದು? ಕ್ಷಮಿಸಿ ಸೀಸರ್, ನಿಮ್ಮ ಏಳಿಗೆಯ ಕುರಿತಾದ ನನ್ನ ನಿರ್ಮಲ ಪ್ರೀತಿ ನನ್ನಿಂದ ಈ ಮಾತನ್ನು ನುಡಿಸುತ್ತದೆ: ಅಲ್ಲದೆ ನನ್ನ ಪ್ರೀತಿಗೆ ತರ್ಕ ಬದ್ಧವೂ ಆಗಿದೆ.
ಸೀಸರ್. ನಿನ್ನ ಭಯಗಳೀಗ ಎಷ್ಟು ಟೊಳ್ಳಾಗಿ ಕಾಣಿಸುತ್ತಿವೆ, ಕಲ್ಪೂರ್ನಿಯಾ. ನಾನವಕ್ಕೆ ಮಣಿದೆನೆಂದು ನನಗೇ ನಾಚಿಕೆಯೆನಿಸುತ್ತಿದೆ.
ನನ್ನ ಉಡುಗೆ ತಾ, ನಾನು ಹೊರಡುತ್ತೇನೆ.
ಪುಬ್ಲಿಯಸ್, ಬ್ರೂಟಸ್, ಲಿಗೇರಿಯಸ್, ಮೆಟೆಲಸ್, ಕಾಸ್ಕಾ, ಟ್ರೆಬೋನಿಯಸ್,
ಮತ್ತು ಸಿನ್ನಾ ಪ್ರವೇಶ
ನೋಡಿದಿರಾ, ಪುಬ್ಲಿಯಸ್ ಬರುತ್ತಿದ್ದಾರೆ ನನ್ನನ್ನು ಕರೆದೊಯ್ಯಲು.
ಪುಬ್ಲಿಯಸ್. ವಂದನೆಗಳು, ಸೀಸರ್.
ಸೀಸರ್. ಸ್ವಾಗತ, ಪುಬ್ಲಿಯಸ್. ಏನು ಬ್ರೂಟಸ್, ನೀನು ಸಹಾ ಈವತ್ತು ಇಷ್ಟು ಬೇಗನೆ ಎದ್ದಿದ್ದೀಯಾ? ನಮಸ್ಕಾರ ಕಾಸ್ಕಾ: ಕೈಯುಸ್ ಲಿಗೇರಿಯಸ್, ಸೀಸರ್ ಎಂದೂ ನಿನಗೆ ನಿನ್ನನ್ನಿಷ್ಟು ಕೃಶವಾಗಿಸಿದ ಕಾಯಿಲೆಯಷ್ಟು ವೈರಿಯಾಗಿರಲಿಲ್ಲ.
ಈಗೆಷ್ಟು ಗಂಟೆ?
ಬ್ರೂಟಸ್. ಎಂಟು ಹೊಡೆದಿದೆ, ಸೀಸರ್.
ಸೀಸರ್. ನೀವು ತೆಗೆದುಕೊಂಡ ತೊಂದರೆ ಮತ್ತು ತೋರಿದ ಗೌರವಕ್ಕಾಗಿ ನಾನು ನಿಮಗೆ ಕೃತಜ್ಞ.
ಆಂಟನಿ ಪ್ರವೇಶ
ನೋಡಿ, ರಾತ್ರಿಯೆಲ್ಲಾ ಮೋಜು ಮಾಡುವ ಆಂಟನಿ– ಹಾಗಿದ್ದರೂ ಎದ್ದುಬಿಟ್ಟಿದ್ದಾನೆ! ನಮಸ್ಕಾರ ಆಂಟನಿ.
ಆಂಟನಿ. ಸೀಸರ್ ಮಹಾಶಯರಿಗೂ ನಮಸ್ಕಾರ.
ಸೀಸರ್. [ಕಲ್ಪೂರ್ನಿಯಾಳಿಗೆ} ತಯಾರಿ ನಡೆಸುವಂತೆ ಒಳಗೆ ಹೇಳು: [ಕಲ್ಪೂರ್ನಿಯಾ ನಿಷ್ಕ್ರಮಣ] ಹೀಗೆ ನಿಮ್ಮನ್ನು ಕಾಯಿಸಿದ್ದಕ್ಕೆ ನಾನೇ ಕಾರಣ,
ಸಿನ್ನಾ, ಮೆಟೆಲಸ್: ಏನು ಟ್ರೆಬೋನಿಯಸ್, ನಿಮ್ಮ ಜತೆ ನಾನು ಒಂದು ಗಳಿಗೆ ಮಾತಾಡಬೇಕಿದೆ:
ಈವತ್ತು ಭೇಟಿಯಾಗುವುದಕ್ಕೆ ಮರೆಯಬೇಡಿ: ನಾನು ನೆನಪಿಡುವುದಕ್ಕೆ ನನ್ನ ಹತ್ತಿರವೆ ಇರಿ.
ಟ್ರೆಬೋನಿಯಸ್. ನಾವಿರುತ್ತೇವೆ ಸೀಸರ್, ನಾವೆಷ್ಟು ಹತ್ತಿರ ಇರುತ್ತೇವೆಂದರೆ ನಿಮ್ಮ ಅತ್ಯುತ್ತಮ ಸ್ನೇಹಿತರು
ಅಂದುಕೊಳ್ಳಬೇಕು ನಾವು ದೂರವಿರುತ್ತಿದ್ದರೇ ಒಳ್ಳೇದಿತ್ತು ಎಂದು.
ಸೀಸರ್. ಮಿತ್ರರೇ, ಒಳಕ್ಕೆ ಬಂದು ನನ್ನ ಜತೆ ಸ್ವಲ್ಪ ದ್ರಾಕ್ಷಾರಸ ಸವಿಯಿರಿ. ಮಿತ್ರರಂತೆಯೇ ನಾವು
ಒಂದಾಗಿ ಅಲ್ಲಿಗೆ ತೆರಳೋಣ.
ಬ್ರೂಟಸ್. [ಸ್ವಗತ] ಒಂದಾಗಿ ತೋರುವುದೆಲ್ಲವೂ ಹಾಗಿಲ್ಲ, ಓ ಸೀಸರ್, ಬ್ರೂಟಸಿನ ಹೃದಯ ಚಿಂತಿಸಲು
ಹಾತೊರೆಯುವಂಥದು.
[ಎಲ್ಲರೂ ನಿಷ್ಕ್ರಮಣ
ದೃಶ್ಯ 3
ಕ್ಯಾಪಿಟೋಲ್ (ರೋಮಿನ ಜ್ಯೂಪಿಟರ್ ದೇವಾಲಯ) ಪಕ್ಕದ ಒಂದು ಬೀದಿ. ಆರ್ಟಿಮಿಡೋರಸ್ ಪ್ರವೇಶ..
ಆರ್ಟಿಮಿಡೋರಸ್. [ಒಂದು ಪತ್ರ ಓದುತ್ತ] `ಸೀಸರ್, ಬ್ರೂಟಸಿನ ಬಗ್ಗೆ ಹುಷಾರು, ಕೇಸಿಯಸಿನ ಕುರಿತು ಜಾಗ್ರತೆ, ಕಾಸ್ಕಾನ ಹತ್ತಿರ ಬರುವುದು ಬೇಡ, ಸಿನ್ನಾನ ಮೇಲೊಂದು ಕಣ್ಣಿರಲಿ, ಟ್ರೆಬೋನಿಯಸ್ನನ್ನು ನಂಬುವುದು ಬೇಡ, ಮೆಟಲಸ್
ಸಿಂಬರ್ನನ್ನು ಸರಿಯಾಗಿ ಗಮನಿಸುವುದು, ಡೆಸಿಯಸ್ ಬ್ರೂಟಸ್ ನಿಮ್ಮನ್ನು ಪ್ರೀತಿಸುವುದಿಲ್ಲ: ಕೈಯುಸ್ ಲೆಗೇರಿಯಸಿಗೆ ತಪ್ಪೆಸಗಿದ್ದೀರಿ ನೀವು. ಈ ಎಲ್ಲಾ ಮನುಷ್ಯರಲ್ಲೂ ಇರುವುದು ಒಂದೇ ಮನಸ್ಸು, ಹಾಗೂ ಅದು ಸೀಸರನ ವಿರುದ್ಧ ಹೂಡಿ
ನಿಂತಿದೆ: ನೀವು ಅನಶ್ವರರಲ್ಲದೆ ಇದ್ದರೆ, ಆಚೀಚೆ ನೋಡಿಕೊಳ್ಳಿ. ರಕ್ಷಣೆ ಪಿತೂರಿಗೆ ದಾರಿ ಮಾಡುತ್ತಿದೆ. ಮಹಾ ಬಲಶಾಲಿ ದೇವತೆಗಳು ಕಾಪಾಡಲಿ ನಿಮ್ಮನ್ನು,
ಇತಿ
ನಿಮ್ಮನ್ನು ಪ್ರೀತಿಸುವ,
ಆರ್ಟಿಮಿಡೋರಸ್.’
ಇಲ್ಲಿ ನಿಂತುಕೊಳ್ಳುತ್ತೇನೆ, ಸೀಸರ್ ಸರಿದುಹೋಗುವ ವರೆಗೆ, ಹಾಗೂ ಅಹವಾಲು ನೀಡುವವನಂತೆ ಇದನ್ನು ಸೀಸರಿಗೆ ನೀಡುವೆ.
ನನ್ನ ಹೃದಯ ಪರಿತಪಿಸುತ್ತದೆ, ಸದ್ಗುಣವೆನ್ನುವುದು ಮತ್ಸರಿ ವಿರೋಧಿಗಳ ದಂಷ್ಟ್ರಗಳ ದೆಸೆಯಿಂದ ಬದುಕಲಾರದ್ದಕ್ಕೆ. ನೀವಿದನ್ನು ಓದಿದರೆ, ಓ ಸೀಸರ್,
ನೀವು ಬದುಕುಳಿಯಬಹುದು; ಇಲ್ಲದಿದ್ದರೆ ವಂಚಕರ ಜತೆ ವಿಧಿಯೂ ಸಂಚುಹೂಡುವುದು.
(ನಿಷ್ಕ್ರಮಣ)
ದೃಶ್ಯ 4
ಅದೇ ಬೀದಿಯ ಇನ್ನೊಂದು ಕಡೆ, ಬ್ರೂಟಸ್ನ ಮನೆ ಮುಂದೆ.
ಪೋರ್ಶಿಯಾ ಮತ್ತು ಲೂಸಿಯಸ್ ಪ್ರವೇಶ
ಪೋರ್ಶಿಯಾ . ಹುಡುಗಾ, ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ, ಪುರಭವನಕ್ಕೆ ಓಡು, ನನಗೆ ಉತ್ತರಿಸುವುದಕ್ಕೆ ನಿಲ್ಲುವುದು
ಬೇಡ, ಓಡು. ಮತ್ತೆ ಯಾಕೆ ನಿಂತಿರುವಿ?
ಲೂಸಿಯಸ್. ನನ್ನ ಕೆಲಸ ತಿಳಿಯುವುದಕ್ಕೆ ಅಮ್ಮ.
ಪೋರ್ಶಿಯಾ . ನೀನಲ್ಲಿ ಏನು ಮಾಡಬೇಕೆಂದು ತಿಳಿಸುವ ಮೊದಲು ನೀನಲ್ಲಿಗೆ ಹೋಗಿ ಮತ್ತೆ ಇಲ್ಲಿರಬೇಕಿತ್ತು ಕಣೋ.
ಓ ದೃಢತೆಯೇ, ಗಟ್ಟಿಯಾಗಿರು ನನ್ನ ಪಕ್ಕದಲ್ಲಿ, ಒಂದು ಭಾರೀ ಪರ್ವತವನ್ನು ನಿಲ್ಲಿಸು ನನ್ನ ಹೃದಯ ಮತ್ತು
ನಾಲಿಗೆಯ ನಡುವೆ. ನನ್ನಲ್ಲಿ ಗಂಡಸಿನ ಮನಸ್ಸಿದೆ, ಆದರೆ ಹೆಂಗಸಿನ ದೇಹಬಲ: ಗುಟ್ಟು ನಿಲ್ಲಿಸಿಕೊಳ್ಳುವುದು
ಹೆಂಗಸರಿಗೆಷ್ಟು ಕಷ್ಟ.
ನೀನಿನ್ನೂ ಇಲ್ಲೇ ಇದ್ದೀಯಾ?
ಲೂಸಿಯಸ್. ಅಮ್ಮಾ, ನಾನೇನು ಮಾಡಲಿ?ಪುರಭವನಕ್ಕೆ ಓಡುವುದು, ಮತ್ತೇನೂ ಇಲ್ಲ?
ಪೋರ್ಶಿಯಾ . ಹೌದು, ನೋಡಿಕೊಂಡು ಬಾ, ನಿನ್ನ ಯಜಮಾನರು ಚೆನ್ನಾಗಿದ್ದಾರೆಯೇ ಎಂದು, ಯಾಕೆಂದರೆ
ಇಲ್ಲಿಂದ ಅವರು ಹೊರಟದ್ದು ಕಾಯಿಲೆ ಬಿದ್ದು: ಚೆನ್ನಾಗಿ ನೋಡು ಸೀಸರ್ ಏನು ಮಾಡುತ್ತಿದ್ದಾರೆ, ಜನ ಏನು ಬೇಡುತ್ತಿದ್ದಾರೆ ಎನ್ನುವುದನ್ನು.
ಲೋ, ಆಲಿಸಿ ಕೇಳು, ಅದೇನು ಸದ್ದು?
ಲೂಸಿಯಸ್. ನನಗೇನೂ ಕೇಳಿಸ್ತಾ ಇಲ್ಲ ಅಮ್ಮ.
ಪೋರ್ಶಿಯಾ . ಒಹ್ಹೋ ಚೆನ್ನಾಗಿ ಆಲಿಸು: ಅದೇನೋ ಜಗಳದಂಥಾ ಅಸ್ಪಷ್ಟ ಸದ್ದು ಕೇಳಿಸಿತು ನನಗೆ, ಪುರಭವನದ ಕಡೆಯಿಂದ ಗಾಳಿ ತರುತ್ತಿದೆ ಅದನ್ನು.
ಲೂಸಿಯಸ್. ಸತ್ಯ ಅಮ್ಮ, ನನಗೇನೂ ಕೇಳಿಸ್ತಾ ಇಲ್ಲ.
ಕಾಲಜ್ಞಾನಿಯ ಪ್ರವೇಶ
ಪೋರ್ಶಿಯಾ . ಇಲ್ಲಿ ಬಾರಯ್ಯ, ಯಾವ ಕಡೆಯಿಂದ ನೀನು?
ಕಾಲಜ್ಞಾನಿ. ನನ್ನ ಮನೆಯಿಂದಲೇ ಅಮ್ಮ.
ಪೋರ್ಶಿಯಾ . ಈಗ ಎಷ್ಟು ಗಂಟೆ?
ಕಾಲಜ್ಞಾನಿ. ಸುಮಾರು ಒಂಭತ್ತು ಗಂಟೆ ಅಮ್ಮ.
ಪೋರ್ಶಿಯಾ . ಸೀಸರ್ ಪುರಭವನ ತಲುಪಿ ಆಯಿತೇ?
ಕಾಲಜ್ಞಾನಿ. ಇನ್ನೂ ಇಲ್ಲ ಅಮ್ಮ, ನಾನು ಹೋಗಿ ನನ್ನ ಜಾಗದಲ್ಲಿ ನಿಂತುಕೋಬೇಕು, ಅವರು ಪುರಭವನಕ್ಕೆ ಹೋಗುವುದನ್ನು ನೋಡುವುದಕ್ಕೆ.
ಪೋರ್ಶಿಯಾ . ಸೀಸರ್ನಲ್ಲಿ ನಿನ್ನದೇನೋ ವಿನಂತಿಯಿದೆ, ಅಲ್ಲವೇ?
ಕಾಲಜ್ಞಾನಿ. ಇದೆ ಅಮ್ಮ, ಸೀಸರ್ ಸೀಸರಿಗೇ ಒಳ್ಳೇವರಾದರೆ ನನ್ನ ಮಾತು ಕೇಳುವಷ್ಟು:
ನಾ ಕೇಳೋದು ತನಗೆ ತಾನೇ ಸ್ನೇಹಿತನಾಗೋದಕ್ಕೆ.
ಪೋರ್ಶಿಯಾ . ಯಾಕೆ ಅವರಿಗೆ ಯಾರಿಂದಲಾದರೂ ತೊಂದರೆಯಿರುವುದು ನಿನಗೆ ಗೊತ್ತೇನು?
ಕಾಲಜ್ಞಾನಿ. ನನಗೆ ಗೊತ್ತಿರುವುದು ಏನೂ ಇಲ್ಲ, ಆದರೆ ತೊಂದರೆ ಒದಗೀತೆಂದು ನನ್ನ ಭಯ:
ಶುಭೋದಯ ನಿಮಗೆ: ಇಲ್ಲಿ ರಸ್ತೆ ಇಕ್ಕಟ್ಟಾಗಿದೆ: ಸೀಸರನ ಹಿಂದೇ ಹಿಂಬಾಲಿಸುವ ಸಂಸದರ ಮತ್ತು
ಅಧಿಕಾರಿಗಳ ಮತ್ತು ಸಾಮಾನ್ಯ ಜನತಾದರ್ಶನದವರ ಹಿಂಡು ಒಬ್ಬ ಬಡ ಮನುಷ್ಯನನ್ನು ಜಜ್ಜಿ ಕೊಂದುಬಿಟ್ಟೀತು:
ಸ್ವಲ್ಪ ಜಾಗ ಖಾಲಿಯಿರುವ ಕಡೆ ನಾನು ಹೋಗುತ್ತೇನೆ, ಅಲ್ಲಿ ಸೀಸರ್ ಬರುವಾಗ ಮಾತಾಡಿಸುತ್ತೇನೆ.
[ನಿಷ್ಕ್ರಮಣ
ಪೋರ್ಶಿಯಾ . ನಾನು ಒಳಕ್ಕೆ ಹೋಗಬೇಕು: ಅಯ್ಯೋ ನಾನೇ! ಹೆಣ್ಣು ಹೃದಯ ಅದೆಷ್ಟು ದುರ್ಬಲ! ಓ ಬ್ರೂಟಸ್, ದೇವರು ಸಹಕರಿಸಲಿ ನಿನಗೆ ನಿನ್ನ ಕಾರ್ಯದಲ್ಲಿ. ಹುಡುಗ ಹೇಳಿದ್ದಾನೆ ನನಗೆ: ಸೀಸರ್ ನೀಡಲಾರದ ಕೋರಿಕೆಯೊಂದು ಬ್ರೂಟಸಿನ ಹತ್ತಿರ
ಇದೆಯೆಂದು. ಓ, ನನಗೆ ತಲೆ ಸುತ್ತುತ್ತಿದೆ: ಓಡು ಲೂಸಿಯಸ್, ದೊರೆಗೆ ಹೇಳು, ನಾನು ಖುಷಿಯಾಗಿದ್ದೇನೆ
ಎಂದು; ಅವರೇನು ಹೇಳಿದರೆಂದು ವಾಪಸು ಬಂದು ನನಗೆ ತಿಳಿಸು.
[ಇಬ್ಬರೂ ನಿಷ್ಕ್ರಮಣ
ಹೆಚ್ಚಿನ ಬರಹಗಳಿಗಾಗಿ
ನೈನವೆ
ಜೂಲಿಯಸ್ ಸೀಸರ್ ಅಂಕ -೫
ಜೂಲಿಯಸ್ ಸೀಸರ್ ಅಂಕ ೪