ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವೀರೇಂದ್ರ ನಾಯಕ್ ಬರೆದ ಜೇನು ಗೂಡಿನ ಕತೆ.
ವೀರೇಂದ್ರ ನಾಯಕ್ ಚಿತ್ರಬೈಲು
ಇತ್ತೀಚಿನ ಬರಹಗಳು: ವೀರೇಂದ್ರ ನಾಯಕ್ ಚಿತ್ರಬೈಲು (ಎಲ್ಲವನ್ನು ಓದಿ)

“ಜೇನಿನ ಗೂಡು ನಾವೆಲ್ಲಾ, ಬೇರೆಯಾದರೆ ಜೇನಿಲ್ಲ”
ಈ ಹಾಡನ್ನು ಎಲ್ಲರೂ ಕೇಳಿಯೇ ಇರುತ್ತೀರಿ. ಸಹಬಾಳ್ವೆಯ ವಿಷಯಕ್ಕೆ ಜೇನು ಒಂದು ಉತ್ತಮ ಉದಾಹರಣೆ. ಒಂದು ರಾಣಿ ಹುಳು, ನೂರಾರು ಡ್ರೋನ್ ಗಳು (ಗಂಡು ನೊಣಗಳು) ಹಾಗೂ ಸಾವಿರಾರು ಕೆಲಸಗಾರ ಹೆಣ್ಣು ನೊಣಗಳಿಂದ ಕೂಡಿರುವ ಜೇನ್ನೊಣಗಳ ಗುಂಪು ಅದೆಷ್ಟು ಒಗ್ಗಟ್ಟಾಗಿ ಬದುಕುತ್ತದೆಂದರೆ, ಸಂಘಜೀವಿ ಎಂದು ಕರೆಯಲ್ಪಡುವ ಮನುಷ್ಯನೂ ಅದನ್ನು ಕಂಡು ತಲೆಬಾಗಬೇಕು. ತಮ್ಮ ಒಡತಿಯ ರಕ್ಷಣೆಗೆ, ಅವಳ ಆರೈಕೆಗೆ ಈ ಕೆಲಸಗಾರ ಹೆಣ್ಣು ಹುಳುಗಳು ಸದಾ ಕಟಿಬದ್ಧವಾಗಿರುತ್ತವೆ. ಸಮಯ ಬಂದರೆ ತಮ್ಮ ಪ್ರಾಣವನ್ನು ತೆತ್ತಾದರೂ ರಾಣಿಯನ್ನು ರಕ್ಷಿಸುತ್ತವೆ.
ಜೇನುಗೂಡಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಹೆಣ್ಣು ಹುಳುಗಳ ಆಯುಷ್ಯ ಕೇವಲ ನಲ್ವತ್ತೈದು ದಿನಗಳು ಮಾತ್ರ. ಇಷ್ಟು ಕಡಿಮೆ ಜೀವಿತಾವಧಿಯಲ್ಲಿಯೇ ಈ ಹುಳುಗಳು ಸಾಕಷ್ಟು ಪಾತ್ರಗಳನ್ನು ನಿರ್ವಹಿಸುತ್ತವೆ. ಲಾರ್ವಾ ಹಂತದಲ್ಲಿರುವ ಮರಿಗಳ ರಕ್ಷಣೆ, ಅವುಗಳಿಗೆ ಆಹಾರ ಸರಬರಾಜು, ಗೂಡಿನ ಸ್ವಚ್ಛತಾ ಕೆಲಸ, ಆಹಾರ ಸಂಗ್ರಹಣೆ, ಗೂಡಿನ ಪಹರೆ ಕಾಯುವ ಕೆಲಸ, ಹೀಗೆ ಒಂದು ಜೇನುಗೂಡು ನಡೆಯುವುದೇ ಈ ಕೆಲಸಗಾರ ಹುಳುಗಳ ಕಾರಣದಿಂದಾಗಿ. ಇಷ್ಟೆಲ್ಲಾ ಮುಖ್ಯ ಪಾತ್ರಗಳನ್ನು ನಿರ್ವಹಿಸುವ ಕೆಲಸಗಾರ ಹುಳುಗಳು, ಶತ್ರುವಿನ ಆಕ್ರಮಣವಾದಾಗ ತಾವೇ ಮುಂದೆ ನಿಂತು ಪ್ರತಿಭಟಿಸುತ್ತವೆ. ನೀವು ಜೇನು ಸಂಗ್ರಹಣೆಗೆ ಹೋದಾಗ ನೊಣಗಳಿಂದ ಪೆಟ್ಟು ತಿಂದಿರುವ ನೆನಪಿರಬಹುದು. ಸಾಮಾನ್ಯವಾಗಿ ಹೀಗೆ ಪೆಟ್ಟು ಕೊಡುವ ನೊಣಗಳು ಒಂದು ಪುಟ್ಟ ಕೊಕ್ಕೆಯಂತಹ ರಚನೆಯನ್ನು ನಮ್ಮ ದೇಹದಲ್ಲೇ ಬಿಟ್ಟು ಹೋಗುತ್ತವೆ. ಹೀಗೆ ಪೆಟ್ಟು ಕೊಡುವವು ಈ ಕೆಲಸಗಾರ ಹುಳುಗಳೇ. ಆ ಕೊಕ್ಕೆ ಸ್ವಲ್ಪ ಪ್ರಮಾಣದ ವಿಷವಾಗಿದ್ದು, ಅದನ್ನು ಹೊರ ತೆಗೆಯುವವರೆಗೆ ಅಸಾಧಾರಣ ನೋವಿನ ಅನುಭವವಾಗುತ್ತಿರುತ್ತದೆ. ಹೀಗೆ ತಮ್ಮ ದೇಹದಿಂದ ಕೊಕ್ಕೆಯನ್ನು ಬೇರ್ಪಡಿಸಿ ಶತ್ರುವಿನ ದೇಹಕ್ಕೆ ಚುಚ್ಚಿದ ಕೆಸಗಾರ ಹುಳುಗಳು ಕೆಲವೇ ಕ್ಷಣಗಳಲ್ಲಿ ಸತ್ತು ಹೋಗುತ್ತವೆ. ತಮ್ಮ ಗೂಡನ್ನು ರಕ್ಷಿಸಿಕೊಳ್ಳುವಲ್ಲಿ ಇವಕ್ಕಿರುವ ನಿಷ್ಠೆ ಯಾವ ಸೈನಿಕನ ನಿಷ್ಠೆಗೂ ಕಮ್ಮಿ ಇಲ್ಲ!!

ಜೇನುಗೂಡಿನ ಇನ್ನೊಂದು ಪಂಗಡ ಡ್ರೋನ್ ಗಳು ಅಥವಾ ಗಂಡು ಹುಳುಗಳು. ಇವು ಜನ್ಮತಃ ಸೋಮಾರಿಗಳು. ಇವುಗಳ ಜೀವಿತಾವಧಿ ತೊಂಬತ್ತು ದಿನಗಳು. ಅವಕಾಶ ಸಿಕ್ಕರೆ ರಾಣಿ ಹುಳುವಿನೊಂದಿಗೆ ಸಮಾಗಮ ಹೊಂದಿ, ಸಂತಾನೋತ್ಪತ್ತಿಯಲ್ಲಿ ಸಹಾಯ ಮಾಡುವುದಷ್ಟೇ ಇವುಗಳ ಕೆಲಸ. ಒಂದು ವೇಳೆ ರಾಣಿ ಹುಳುವಿನೊಂದಿಗೆ ಇವುಗಳ ಸಮಾಗಮವಾದರೆ ಮರುಕ್ಷಣವೇ ಇವು ಸತ್ತು ಹೋಗುತ್ತವೆ. ಪಾಂಡು ಮಹಾರಾಜನಿಗೆ ಕಿಂದಮ ಋಷಿಯ ಶಾಪವಿದ್ದಂತೆ ಈ ಹುಳುಗಳಿಗೆ ಯಾರ ಶಾಪವಿದೆಯೋ ಯಾರಿಗೆ ಗೊತ್ತು!!

“ಊರಿಗೊಬ್ಳೇ ಪದ್ಮಾವತಿ” ಎಂಬ ಹಾಡಿನಂತೆ, ಗುಂಪಿಗೊಬ್ಬಳು ರಾಣಿ ಇರುತ್ತಾಳೆ. ಸಾವಿರಾರು ಹುಳುಗಳಿರುವ ಗುಂಪಿಗೆ ಒಬ್ಬಳೇ ರಾಣಿ, ಮತ್ತು ಅವಳು ಮಾತ್ರ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವುಳ್ಳವಳು! ಈ ಹುಳುಗಳ ಜೀವಿತಾವಧಿ ನಾಲ್ಕರಿಂದ ಏಳು ವರ್ಷಗಳು. ಇದು ವಸಂತಕಾಲದಲ್ಲಿ ದಿನವೊಂದಕ್ಕೆ ಸರಾಸರಿ 1,500 ಮೊಟ್ಟೆಗಳನ್ನಿಡುತ್ತದೆ.
ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಜೇನುಹುಳಗಳು ತುಂಬಾ ಅದ್ಭುತವಾದ ಸಂವಹನ ಶಕ್ತಿಯನ್ನು ಹೊಂದಿವೆಯಂತೆ. ಶತ್ರುವಿನ ಆಕ್ರಮಣದ ಸಂದೇಶವನ್ನು ತನ್ನ ಸಹಚರರಿಗೆ ನೀಡಬೇಕಾದರೆ, ಅಥವಾ ತನಗಾದ ಸಂತೋಷವನ್ನು ಬೇರೆಯವರ ಜೊತೆ ಹಂಚಿಕೊಳ್ಳಬೇಕೆಂದರೆ ಕೆಲಸಗಾರ ಹುಳುಗಳು ಸುಗಂಧ ಭರಿತ ಹಾರ್ಮೋನ್ ಗಳನ್ನು ಬಿಡುಗಡೆಗೊಳಿಸುತ್ತವಂತೆ. ಆ ಸುಗಂಧದ ಆಧಾರದ ಮೇಲೆ ಇತರ ಹುಳುಗಳು ಸಂದೇಶವನ್ನು ಗ್ರಹಿಸಿ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತವಂತೆ. ಯಾವುದಾದರೂ ಒಂದು ಕೆಲಸಗಾರ ಹುಳುವಿಗೆ ಉತ್ತಮ ಮಕರಂದವಿರುವ ಹೂವಿನ ಗಿಡ ಸಿಕ್ಕರೆ, ಉಳಿದ ಕೆಲಸಗಾರರಿಗೆ ಆ ಗಿಡವಿರುವ ಸ್ಥಳವನ್ನು ಸೂಚಿಸಲು ಅದು ನೃತ್ಯ ಮಾಡುತ್ತದಂತೆ! ನೃತ್ಯದ ಮೂಲಕ ದೊರೆತ ಸಂದೇಶವನ್ನು ಉಳಿದ ಹುಳುಗಳು ಹೇಗೆ ಗ್ರಹಿಸುತ್ತವೆಯೋ! ಆದರೆ ಅವು ಸರಿಯಾದ ಗುರಿಯನ್ನೇ ತಲುಪುತ್ತವೆ. ಸಂವಹನದಲ್ಲಾಗುವ ಸಣ್ಣ ಪುಟ್ಟ ವ್ಯತ್ಯಾಸಗಳಿಂದಲೇ ಏನೇನೋ ಅನಾಹುತಗಳನ್ನು ಸೃಷ್ಠಿಸುವ ಮನುಷ್ಯ ಈ ಹುಳುಗಳ ಮುಂದೆ ಯಕಶ್ಚಿತ್ ‘ಹುಳು’ವಲ್ಲವೇ?!

ಇಷ್ಟೆಲ್ಲಾ ಒಗ್ಗಟ್ಟಾಗಿ ದುಡಿಯುವ ಈ ಜೇನ್ನೊಣಗಳಿಂದ ಯಾರಿಗೇನು ಲಾಭ? ಎಂದು ನೀವು ಕೇಳಬಹುದು. ಈ ಜೇನುಹುಳಗಳು ಪರೋಕ್ಷವಾಗಿ ಇಡೀ ಭೂಮಿಯ ಜೀವ ಸಂಕುಲಗಳಿಗೆ ಆಹಾರ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರೆ ನೀವು ನಂಬಲೇಬೇಕು. ಜೇನ್ನೊಣಗಳು ಹೂವಿಂದ ಹೂವಿಗೆ ಹಾರುವಾಗ ಹೂವುಗಳಿಗೆ ಪರಾಗಸ್ಪರ್ಷವಾಗುತ್ತದೆ. ಅದರ ಕಾರಣದಿಂದಾಗಿಯೇ ಕಾಯಿ, ಹಣ್ಣು, ತರಕಾರಿ ಎಲ್ಲವೂ ದೊರೆಯುವುದು. ನಮ್ಮ ಹಾಗೂ ಇತರ ಪ್ರಾಣಿಗಳ ಹೊಟ್ಟೆ ತುಂಬುವುದು. ಸಂಶೋಧನೆಯೊಂದರ ಪ್ರಕಾರ ಅಮೇರಿಕಾವೊಂದರಲ್ಲೇ ಜೇನ್ನೊಣಗಳು ಮಾಡುವ ಪರಾಗಸ್ಪರ್ಷದ ಕಾರಣದಿಂದಾಗಿ ಕೃಷಿಯಲ್ಲಿ ವಾರ್ಷಿಕ ಸರಾಸರಿ ಇಪ್ಪತ್ತು ಬಿಲಿಯನ್ ಡಾಲರ್ ಲಾಭ ದೊರೆಯುತ್ತದೆ. ಒಂದು ವೇಳೆ ಈ ಜೇನ್ನೊಣಗಳು ಭೂಮಿಯ ಮೇಲಿಂದ ನಿರ್ನಾಮವಾದರೆ ಆಹಾರಕ್ಕೆ ತತ್ವಾರವುಂಟಾಗುವುದು ಖಂಡಿತಾ.

ಜೇನ್ನೊಣಗಳು ಜೇನನ್ನು ಸಂಗ್ರಹಿಸುವ ಕ್ರಿಯೆಯೂ ಸ್ವಾರಸ್ಯಕರವಾದುದು. ಈ ಹುಳುಗಳಲ್ಲಿ ಮಕರಂದ ಸಂಗ್ರಹಕ್ಕೆ ಪ್ರತ್ಯೇಕ ಜಠರದಂತಹ ಚೀಲವಿದೆ. ಹೂವಿನಿಂದ ಹೀರಿದ ಮಕರಂದವು ಈ ಚೀಲದಲ್ಲಿ ಸಂಗ್ರಹಗೊಳ್ಳುತ್ತದೆ. ಚೀಲ ತುಂಬಿದ ಮೇಲೆ ಹುಳುಗಳು ಗೂಡಿಗೆ ಹೋಗಿ ಅದನ್ನು ಬಾಯಿಯ ಮೂಲಕ ಹೊರತೆಗೆದು (ಒಂದು ರೀತಿಯ ವಾಂತಿ) ಅಲ್ಲಿ ಗೂಡು ಕಾಯುತ್ತಿರುವ ಬೇರೆ ಕೆಲಸಗಾರ ಹುಳುಗಳ ಬಾಯಿಗೆ ವರ್ಗಾಯಿಸುತ್ತವೆ. ಹೀಗೆ ಮಕರಂದ ಹುಳುಗಳ ಬಾಯಿಯಿಂದ ಬಾಯಿಗೆ ಹೋಗಿ, ಒಂದಷ್ಟು ತೇವಾಂಶ ಹೀರಿಕೊಂಡಮೇಲೆ ಜೇನಾಗಿ ಬದಲಾಗುತ್ತದೆ. ಆನಂತರ ಅದನ್ನು ತಮ್ಮ ಗೂಡಿನಲ್ಲಿ ಸಂಗ್ರಹಿಸಿ ಇಡುತ್ತವೆ. ಜೇನ್ನೊಣಗಳು ಒಂದು ಚಮಚದಷ್ಟು ಜೇನುತುಪ್ಪವನ್ನು ಸಂಗ್ರಹಿಸಲು ಸುಮಾರು ನಾಲ್ನೂರು ಹೂವುಗಳಿಂದ ಮಕರಂದವನ್ನು ಹೀರುತ್ತವಂತೆ. ಸಿಹಿಯಾದ ಜೇನು ಈ ನಿಟ್ಟಿನಲ್ಲಿ ದುಬಾರಿಯೂ ಹೌದು. ಕವಿಗಳು ಮುತ್ತನ್ನು ಜೇನಿಗೆ ಹೋಲಿಸಿ, ‘ಸಿಹಿ ಮುತ್ತು’ ದುಬಾರಿ ಎಂದೆಲ್ಲಾ ವರ್ಣಿಸಿದ್ದಾರೆ. ಈಗೀಗ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ಮುತ್ತು ಬಹಳ ಅಗ್ಗವಾಗಿದೆ. ಹೀಗಿರುವಾಗ ಮುತ್ತನ್ನು ಜೇನಿಗೆ ಹೋಲಿಸುವುದು ಹೇಗೆಂದು ಯೋಚನೆ ಮಾಡಬೇಡಿ!! ವ್ಯಾಪಾರಿಗಳ ಅಧಿಕ ಲಾಭದ ಆಸೆಯಿಂದಾಗಿ ಜೇನೂ ಕಲಬೆರಕೆಯಾಗಿದೆ!!