ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇಟಲಿಯ ಹಿಮಾಚ್ಚಾದಿತ ಶಿಖರಗಳ ಮಂಜು ಕರಗಿದಾಗ ಮಾಡಿದ್ದೇನು? ಒಂದು ಅಪಾಯಕಾರೀ ಬೆಳವಣಿಗೆಯ ಬಗ್ಗೆ ವೀರೇಂದ್ರ ನಾಯಕ್ ಬರೆಯುವ "ಮಂಜು ಕರಗುವ ಸಮಯ".
ವೀರೇಂದ್ರ ನಾಯಕ್ ಚಿತ್ರಬೈಲು
ಇತ್ತೀಚಿನ ಬರಹಗಳು: ವೀರೇಂದ್ರ ನಾಯಕ್ ಚಿತ್ರಬೈಲು (ಎಲ್ಲವನ್ನು ಓದಿ)


ಕೆಲವು ದಿನಗಳ ಹಿಂದೆ ಒಂದು ಮುಂಜಾನೆ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದವನಿಗೆ ಆಸಕ್ತಿದಾಯಕ ಸುದ್ದಿಯೊಂದು ಕಾಣಿಸಿತು. “ಇಟೆಲಿಯ ಪ್ರೆಸೆನಾ ಗ್ಲೇಸಿಯರ್ ಎಂಬ ಹಿಮಚ್ಛಾದಿತ ಪರ್ವತ ಶ್ರೇಣಿಯ ಮೇಲಿರುವ ಹಿಮ ಅತ್ಯಂತ ವೇಗವಾಗಿ ಕರಗುತ್ತಿದ್ದು, ಅದನ್ನು ತಡೆಗಟ್ಟಲು ಅಲ್ಲಿನ ಸರಕಾರ ಪ್ರತೀ ಬೇಸಿಗೆಯಲ್ಲಿಯೂ ಪರ್ವತವನ್ನು ಟರ್ಪಾಲಿನ್ ನಿಂದ ಮುಚ್ಚುವ ಕೆಲಸ ಮಾಡುತ್ತಿದೆ”, ಎನ್ನುವುದು ಸುದ್ದಿಯ ಸಾರಾಂಶ. 1993 ಕ್ಕೆ ಹೋಲಿಸಿದರೆ ಕಳೆದ ಇಪ್ಪತ್ತಾರು ವರ್ಷಗಳಲ್ಲಿ ಈ ಪರ್ವತದ ಮೇಲಿದ್ದ ಮೂರನೆಯ ಒಂದು ಭಾಗದಷ್ಟು ಹಿಮ ಕರಗಿ ಹೋಗಿದೆಯಂತೆ! ಈ ಹಿಮ ಕರಗುವಿಕೆಯನ್ನು ತಡೆಯುವ ನಿಟ್ಟಿನಲ್ಲಿ 2008 ರಲ್ಲಿ ಅಲ್ಲಿನ ಸರಕಾರ ಪ್ರತಿ ಬೇಸಿಗೆಯಲ್ಲೂ ಪರ್ವತದ ಮೇಲೆ ಟರ್ಪಾಲಿನ್ ಮುಚ್ಚುವ ಯೋಜನೆಯನ್ನು ಆರಂಭಿಸಿತು. 30,000 ಚದರ ಕಿಲೋಮೀಟರ್ ವಿಸ್ತೀರ್ಣದಷ್ಟು ಜಾಗವನ್ನು ಮುಚ್ಚುವುದರೊಂದಿಗೆ ಆರಂಭವಾದ ಈ ಯೋಜನೆ, ಪ್ರಸ್ತುತ ಒಂದು ಲಕ್ಷ ಚದರ ಕಿಲೋ ಮೀಟರ್ ಜಾಗವನ್ನು ಮುಚ್ಚುವಷ್ಟು ವಿಸ್ತರಿಸಿದೆ.

ಇಟಲಿಯನ್ ತಂಡ ಹಿಮಾಚ್ಚಾದಿತ ಪ್ರದೇಶವನ್ನು ಟರ್ಪಾಲಿನ್ ಶೀಟ್ ಗಳಿಂದ ಮುಚ್ಚುತ್ತಿರುವ ದೃಶ್ಯ.
ಚಿತ್ರ ಕೃಪೆ: Getty images

ಈ ಸಮಸ್ಯೆ ಕೇವಲ ಇಟೆಲಿಯದ್ದಲ್ಲ. ಜಗತ್ತಿನ ಬಹುತೇಕ ಹಿಮ ಪರ್ವತಗಳ ಕಥೆ ಇದೇ ಆಗಿದೆ. ಅಂಟಾರ್ಟಿಕಾ ಖಂಡ ದಿನೇ ದಿನೇ ಕರಗುತ್ತಿದೆ. ಹಾಗಾದರೆ ಪರ್ವತಗಳ ಮೇಲಿನ ಹಿಮ ಕರಗಲೇಬಾರದೇ? ಖಂಡಿತಾ ಕರಗಬೇಕು. ಜಗತ್ತಿನಲ್ಲಿ ಅನೇಕ ನದಿಗಳ ಉಗಮದ ಕಾರಣವೇ ಈ ಹಿಮಕರಗುವಿಕೆ. ಆದರೆ ಈ ಕರಗುವಿಕೆ ಸಹಜವಾಗಿ ಆಗಬೇಕಾದದ್ದಕ್ಕಿಂತ ಹೆಚ್ಚಾದರೆ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಹಾಗಾದರೆ ಈ ಅಸ್ವಾಭಾವಿಕ ಹಿಮಕರಗುವಿಕೆಗೆ ಕಾರಣವೇನು? ಇದರಿಂದ ಏನೆಲ್ಲಾ ಪರಿಣಾಮಗಳು ಉಂಟಾಗಬಹುದು? ಒಂದೇ ಗಾತ್ರದ ಎರಡು ಮಂಜುಗಡ್ಡೆಯ ತುಂಡುಗಳನ್ನು ತೆಗೆದುಕೊಂಡು, ಒಂದನ್ನು ಮನೆಯೊಳಗೆ ಫ್ರಿಡ್ಜ್ ನಲ್ಲಿಡಿ, ಇನ್ನೊಂದನ್ನು ಬಿಸಿಲಿನಲ್ಲಿಡಿ. ಯಾವ ಮಂಜುಗಡ್ಡೆಯ ತುಂಡು ಬೇಗ ಕರಗುತ್ತದೆ? ಸಹಜವಾಗಿ ಬಿಸಿಲಿನಲ್ಲಿರುವ ತುಂಡು ಬೇಗ ಕರಗಿ ನೀರಾಗುತ್ತದೆ. ಕಾರಣ ಉಷ್ಣಾಂಶದಲ್ಲಿನ ವ್ಯತ್ಯಾಸ. ಅಂತೆಯೇ ಪರ್ವತಗಳ ಮೇಲಿನ ಹಿಮ ಕರಗಲು ಪ್ರಮುಖ ಕಾರಣ ಭೂ ತಾಪ ಏರಿಕೆ.

ಸೂರ್ಯನಿಂದ ಭೂಮಿಗೆ ಬರುವ ಬೆಳಕು ಭೂಮಿಯ ಮೇಲ್ಮೈಗೆ ಬಿದ್ದಾಗ ಸ್ವಲ್ಪ ಪ್ರಮಾಣದ ಉಷ್ಣವನ್ನು ನೆಲ ಹೀರಿಕೊಂಡು, ಉಳಿದ ವಿಕಿರಣಗಳನ್ನು ಪ್ರತಿಫಲಿಸುತ್ತದೆ. ಹೀಗೆ ಪ್ರತಿಫಲಿಸಲ್ಪಟ್ಟ ವಿಕಿರಣಗಳ ತರಂಗದೂರ (wavelength) ಸೂರ್ಯನಿಂದ ನಮಗೆ ಬರುವ ಬೆಳಕಿನ ತರಂಗದೂರಕ್ಕಿಂತ ಭಿನ್ನವಾಗಿರುತ್ತದೆ. ಈ ತರಂಗದೂರದ ಬೆಳಕು ಕಾರ್ಬನ್ (ಇಂಗಾಲದ) ಡೈ ಆಕ್ಸೈಡ್ ಹಾಗೂ ಬೇರೆ ಕೆಲವು ಅನಿಲಗಳ ಮೂಲಕ ಹಾದು ಹೋಗಲಾರದು. ಭೂಮಿಯ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಇರುವ ಕಾರಣ, ಭೂಮಿಯಿಂದ ಪ್ರತಿಫಲಿಸಲ್ಪಟ್ಟ ಈ ವಿಕಿರಣಗಳು ಸಂಪೂರ್ಣವಾಗಿ ವಾತಾವರಣದಿಂದ ಹೊರಹೋಗಲು ಸಾಧ್ಯವಾಗದೇ, ವಾತಾವರಣದಲ್ಲೇ ಉಳಿದುಕೊಂಡು, ವಾತಾವರಣವನ್ನು ಬಿಸಿಯಾಗಿಸುತ್ತವೆ. ಇದನ್ನು ‘ಹಸಿರು ಮನೆ ಪರಿಣಾಮ (green house effect)’ ಎನ್ನುತ್ತಾರೆ. ಇದರ ಪರಿಣಾಮವಾಗಿಯೇ ಭೂಮಿಯ ಮೇಲಿನ ಉಷ್ಣಾಂಶ ಸಮತೋಲನದಲ್ಲಿದ್ದು, ಮನುಷ್ಯನೂ ಸೇರಿ ಹಲವು ಜೀವಿಗಳಿಗೆ ವಾಸಯೋಗ್ಯವಾಗಿದೆ.

ಒಂದು ವೇಳೆ ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಮುಂತಾದ ಗ್ರೀನ್ ಹೌಸ್ ಅನಿಲಗಳು ಮಿತಿಗಿಂತಲೂ ಹೆಚ್ಚಾದರೆ? ಆಗ ಹೆಚ್ಚು ಹೆಚ್ಚು ವಿಕಿರಣಗಳು ನಮ್ಮ ವಾತಾವರಣದಿಂದ ಹೊರಹೋಗಲು ಸಾಧ್ಯವಾಗುವುದಿಲ್ಲ, ಪರಿಣಾಮ ಭೂಮಿಯ ಉಷ್ಣಾಂಶ ಹೆಚ್ಚುತ್ತಾ ಸಾಗುತ್ತದೆ. ಇದನ್ನೇ ‘ಗ್ಲೋಬಲ್ ವಾರ್ಮಿಂಗ್” ಅಥವಾ ‘ಭೂತಾಪ ಏರಿಕೆ’ ಎನ್ನುತ್ತಾರೆ. ನಮಗೆಲ್ಲಾ ತಿಳಿದಿರುವಂತೆ ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಯೂರೋಪಿನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ಕಾಲಕ್ರಮೇಣ ಇಡೀ ಜಗತ್ತನ್ನೇ ವ್ಯಾಪಿಸಿತು. ಇದು ಮಾನವಸ್ನೇಹಿಯಾಗಿ, ಮನುಷ್ಯನ ಕೆಲಸವನ್ನು ಕಡಿಮೆ ಮಾಡಿ, ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದ್ದರ ಜೊತೆಗೆ, ಪರಿಸರಕ್ಕೆ ಮಾರಕವಾಗಿ ಪರಿಣಮಿಸಿತು. ಅತಿಯಾದ ಕಲ್ಲಿದ್ದಲು ಸುಡುವಿಕೆಯಿಂದ ಕೈಗಾರಿಕಾ ಘಟಕಗಳು ಅಪಾರ ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಡಲಾರಂಭಿಸಿದವು. ನಂತರ ಬಂದ ವಾಹನಗಳಂತೂ ಇದರ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿದವು. ಸಂಶೋಧನೆಯೊಂದರ ಪ್ರಕಾರ ಕೈಗಾರಿಕಾ ಕ್ರಾಂತಿಯ ದಿನಗಳಿಂದ ಇಂದಿನವರೆಗೆ ಭೂಮಿಯ ತಾಪಮಾನ ಸರಾಸರಿ 1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿದೆ ಹಾಗೂ 2050 ರ ವೇಳೆಗೆ ಅದು 2 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚುವುದೆಂದು ಅಂದಾಜಿಸಲಾಗಿದೆ.

ಇದರ ಪರಿಣಾಮವಾಗಿ ಅಂಟಾರ್ಟಿಕಾ ಮೊದಲಾದ ಪ್ರದೇಶದಲ್ಲಿರುವ ಹಿಮ ವೇಗವಾಗಿ ಕರಗಲಾರಂಭಿಸಿದೆ. ಹಿಮ ಕರಗಿದ ನೀರು ಸಮುದ್ರವನ್ನು ಸೇರಿ, ಸಮುದ್ರ ಮಟ್ಟ ಹೆಚ್ಚಿ, ಸಮುದ್ರ ರಾಜನಿಗೆ ತನ್ನ ವ್ಯಾಪ್ತಿ ಸಾಲದೇ ಭೂ ಭಾಗವನ್ನು ಆಕ್ರಮಿಸಲು ಪ್ರಾರಂಭಿಸಿದ್ದಾನೆ. ಕಡಲ್ಕೊರೆತ ನಿತ್ಯದ ಸುದ್ದಿಯಾಗಿದೆ. ತಾಪಮಾನ ಹೀಗೆಯೇ ಏರುತ್ತಲೇ ಸಾಗಿದರೆ 2050 ರ ವೇಳೆಗೆ ಜಗತ್ತಿನ ಹಲವು ಸಮುದ್ರ ತೀರದ ಮಹಾನಗರಗಳು ಮುಳುಗುವ ಪರಿಸ್ಥಿತಿ ಇಲ್ಲದಿಲ್ಲ. ಭಾರತದಲ್ಲೂ ಬಹುತೇಕ ಕರಾವಳಿ ಭಾಗ ಮುಳುಗಡೆಯಾಗಿ, ಮುಂಬೈ, ಚೆನ್ನೈನಂತಹ ಮಹಾನಗರಗಳನ್ನು ಸೇರಿಸಿ ಅಂದಾಜು 5 ಕೋಟಿಗೂ ಅಧಿಕ ಜನ ವಲಸೆ ಹೋಗಬೇಕಾಗಿ ಬರಬಹುದೆಂದು ಊಹಿಸಲಾಗಿದೆ.
ಜಾಗತಿಕ ತಾಪಮಾನ ಏರಿಕೆಯ ನೇರ ಪರಿಣಾಮ ಆಹಾರ ಬೆಳೆಗಳ ಮೇಲೂ ಆಗಲಿದೆ. ಹೆಚ್ಚಿದ ತಾಪಮಾನದಲ್ಲಿ ಹಲವು ಆಹಾರ ಬೆಳೆಗಳ ಇಳುವರಿ ಕುಂಠಿತಗೊಂಡು ಅಥವಾ ಗಿಡಗಳು ಬದುಕುವುದೇ ಕಷ್ಟವಾಗಿ ಆಹಾರ ಕ್ಷೋಭೆ ಉಂಟಾಗಬಹುದಾದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಲವು ಜೀವಿಗಳ ಬದುಕೂ ದುಸ್ತರವಾಗಿ, ಜೀವ ಸರಪಳಿಯಲ್ಲಿ ಅಲ್ಲೋಲಕಲ್ಲೋಲವಾಗಲೂಬಹುದು. ತಣ್ಣಗಿನ ಹಿಮದಲ್ಲಿ ನಿಶ್ಚಿಂತೆಯಿಂದ ಜೀವಿಸುತ್ತಿದ್ದ ಹಿಮಕರಡಿಗಳ ಸಂತತಿ ಕ್ಷಿಣಿಸುತ್ತಿರುವುದು ಇದಕ್ಕೊಂದು ಉದಾಹರಣೆ. ಸಂಶೋಧನೆಗಳ ಪ್ರಕಾರ ವರ್ಷ ವರ್ಷ ಹೆಚ್ಚುತ್ತಿರುವ ಚಂಡಮಾರುತಗಳಿಗೆ ತಾಪಮಾನ ಏರಿಕೆಯೂ ಒಂದು ಕಾರಣ. ಉಷ್ಣಾಂಶ ಹೆಚ್ಚಾದಾಗ ಭೂಮಿಯ ಮೇಲ್ಮೈಯಲ್ಲಿ ಗಾಳಿಯ ಒತ್ತಡದಲ್ಲಿ ವ್ಯತ್ಯಯ ಉಂಟಾಗಿ ಚಂಡಮಾರುತ ಹುಟ್ಟಿಕೊಳ್ಳುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನದ ಏರಿಕೆಯ ವಿರುದ್ಧದ ಕೂಗು ಬಲವಾಗಿ ಕೇಳಲಾರಂಭಿಸಿದೆ. 2015 ರಲ್ಲಿ ನಡೆದ ಪ್ಯಾರಿಸ್ ಒಪ್ಪಂದದ ಪ್ರಕಾರ ಭಾರತವೂ ಸೇರಿ ಸುಮಾರು ಇನ್ನೂರು ರಾಷ್ಟ್ರಗಳು ವಾತಾವರಣಕ್ಕೆ ಬಿಡುವ ಗ್ರೀನ್ ಹೌಸ್ ಅನಿಲಗಳ ಪ್ರಮಾಣವನ್ನು ತಗ್ಗಿಸುವ ಸಂಕಲ್ಪ ಮಾಡಿವೆ. ಇದರ ಪರಿಣಾಮ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಪರಿಸರದ ಮೇಲಿನ ಬದ್ಧತೆ, ಕಾಳಜಿಗಳು ಕಾಗದದ ಮೇಲಿನ ಒಪ್ಪಂದಗಳಿಗೆ ಸೀಮಿತವಾಗದಿರಲಿ ಎಂದು ಹಾರೈಸೋಣ.

ನಮ್ಮ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವೂ ಕೂಡ. ನಾವು ನಿತ್ಯ ಪ್ರಯಾಣಕ್ಕೆಂದು ಬಳಸುವ ಕ್ಯಾಬ್ ವಾರ್ಷಿಕ ಸರಾಸರಿ 4.6 ಮೆಟ್ರಿಕ್ ಟನ್ (4,600 Kg) ಕಾರ್ಬನ್ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಡುತ್ತದಂತೆ. ಅದೇ ಒಂದು ಮರ ವಾರ್ಷಿಕ ಒಂದು ಮೆಟ್ರಿಕ್ ಟನ್ ನಷ್ಟು ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳಲು ಮಾತ್ರ ಸಾಧ್ಯ. ನಮ್ಮ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ. ತೇಜಸ್ವಿಯವರು ಹೇಳಿದಂತೆ, “ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಭಾಗ”, ಅಲ್ಲವೇ?