ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ಕವಿ ಓದುಗರನ್ನು ಹುಡುಕಿಕೊಂಡು ಹೋಗಬಾರದು.ಓದುಗ ಕವಿಯನ್ನು ಹುಡುಕಿಕೊಂಡು ಬರಬೇಕು

ಡಾ.ಕೆ.ವಿ.ತಿರುಮಲೇಶ

ಸಂದರ್ಶನ :- ಗೋನವಾರ ಕಿಶನ್ ರಾವ್.

ನಾಡಿನ ಹೆಮ್ಮೆಯ ಸಾಹಿತಿ ಡಾ.ಕೆ.ವಿ.ತಿರುಮಲೇಶ
ಸಂದರ್ಶನ : ಗೋನವಾರ ಕಿಶನ್ ರಾವ್

ಕಾಸರಗೋಡು ಜಿಲ್ಲೆಯ ಕಾರಡ್ಕ ಸಮೀಪ ಇರುವ ಹಳ್ಳಿಯಲ್ಲಿ 12-09 – 1940 ರಲ್ಲಿ ಜನಿಸಿದ, ಡಾ. ಕೆ.ವಿ. ತಿರುಮಲೇಶರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ, ಗುರುತಿಸಬಹುದಾದ, ಪ್ರಮುಖ ಕವಿಗಳಲ್ಲಿ ಒಬ್ಬರು. ಬಹುಮುಖ ಪ್ರತಿಭೆಯ — ಕಾವ್ಯ,ಮಹಾಕಾವ್ಯ,ಕಾದಂಬರಿ, ಕಥಾ ಸಕಲನಗಳು, ವೈಚಾರಿಕ ಕೃತಿಗಳು, ಅಂಕಣ ಬರಹಗಳು, ನಾಟಕ ಇತ್ಯಾದಿ ಸಮೃದ್ಧ ಸಾಹಿತ್ಯ ನೀಡಿದ ಅವರನ್ನು ಕವಿ ಎಂದೇ ಗುರುತಿಸುವುದು. ಎಳೆಯತನದಿಂದಲೇ, ಅವರಿಗಿರುವ ಪುಸ್ತಕ ಪ್ರೀತಿ, ಜ್ಞಾನವನ್ನು ಅರಸಿಕೊಂಡು ಹೋಗುವ ಅವರ ಹಂಬಲವನ್ನು ಈ ಇಳಿವಯಸ್ಸಿನಲ್ಲಿಯೂ ಮುಂದುವರಿಯುತ್ತಿರುವುದನ್ನು ಕಾಣುತ್ತೇವೆ.ಪ್ರಕೃತಿ ಪರಿಸರದ ವಿದ್ಯಮಾನಗಳ ಕುರಿತಂತೆ, ಅವರಿಗೆ ಇರುವ ವಿಸ್ಮಯ, ಕುತೂಹಲಗಳು ಬೆರಗು ಮೂಡಿಸುತ್ತವೆ.ನೀರ್ಜಾಲು, ಕಾಸರಗೋಡು ಮತ್ತು ತಿರುವನಂತಪುರಗಳಲ್ಲಿ ವಿದ್ಯಾಭ್ಯಾಸ ಪೂರೈಸಿದ ಅವರು ಕೇರಳದ ಶಿಕ್ಷಣ ಇಲಾಖೆಯಲ್ಲಿ 1967-74 ರ ಅವಧಿಯವರೆಗೆ,ಇಂಗ್ಲಿಷ್ ಪ್ರಾಧ್ಯಾಪಕ ರಾಗಿ ವೃತ್ತಿ ಜೀವನ ಆರಂಭಿಸಿದ ಅವರು, 1975 – 76 ರ ವರೆಗೆ ಹೈದರಾಬಾದ್ ನ CIEFL (ಇಂದಿನ IFLU) ನಲ್ಲಿ ಎಂ.ಲಿಟ್ ವಾಸಂಗ ನಂತರ PhD ಪೂರ್ಣ ಗೊಳಿಸಿದ ಮೇಲೆ, ಅಲ್ಲಿಯೇ,1977 ರಲ್ಲಿ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡು,ಮೇಲೇರುತ್ತ ಅಸೋಸಿಯೇಟ್ ಫೆಲೋ , ರೀಡರ್,ಪ್ರೊಫೆಸರ್, ಆಗಿ 2002 ರಲ್ಲಿ ವೃತ್ತಿಯಿಂದ ವಿರಮಿಸಿದರು. ಅಮೇರಿಕೆಯ ರೆಡಿಂಗ ವಿಶ್ವ ವಿದ್ಯಾಲಯದಿಂದ ಅನ್ವಯಿಕ, ಭಾಷಾ ವಿಜ್ಞಾನದಲ್ಲಿ ಎಂ.ಎ. ಮತ್ತು CIEFL ನಲ್ಲಿ, Reordering Rules in English and Kannada ವಿಷಯದ ಮೇಲೆ PhD ಪಡೆದದ್ದು ವಿಶೇಷತೆ.

2002-03 ಮತ್ತು 2006 – 11 ಅವಧಿಯಲ್ಲಿ ಅಮೇರಿಕೆಯ ಅಯೋವಾ ವಿಶ್ವವಿದ್ಯಾಲಯ ಮತ್ತು ಕೊಲ್ಲಿ ರಾಷ್ಟ್ರಗಳ ಯಮೆನ್ ನಲ್ಲಿ ಸಹ ಇಂಗ್ಲಿಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಹಿರಿಮೆ ಅವರದು.
ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಪತ್ನಿ ನಿರ್ಮಲಾ ಅವರೊಂದಿಗೆ ಹೈದರಾಬಾದ್ ನಲ್ಲಿ ವಾಸಿಸುತ್ತಿರುವ ಅವರಿಗೆ ಮೂರು ಜನ ಹೆಣ್ಣುಮಕ್ಕಳು. ಪ್ರೀತಿ ಸಂಯುಕ್ತ, ಸಿಂಧು ಅವಲೋಕಿತ,ಅಪೂರ್ವ ಅಪರಿಮಿತ.ನಾಲ್ಕು ಮೊಮ್ಮಕ್ಕಳ ತಾತ ತಿರುಮಲೇಶರದು ಸಂತೃಪ್ತ ಕುಟುಂಬ.

“ಒಂದು ದಶಕದ ಕನ್ನಡ ಕಾವ್ಯ ತಿರುಮಲೇಶರಿಗೆ ಸಲ್ಲುತ್ತದೆ ” ಎಂದು ವಿಮರ್ಶಕರು, ಸ್ನೇಹಿತರು ಮತ್ತು ಅವರ ಆಪ್ತವಲಯ ನಂಬುತ್ತದೆ. ತಿರುಮೇಶರ ಕೃತಿಗಳ ಅಧ್ಯಯನ, ಎಂದರೆ ಓದುಗರಿಗೆ ಇಂಗ್ಲೀಷ್ – ಕನ್ನಡ , ಉಭಯ ಭಾಷೆಗಳ, ಎನ್ಸೈಕ್ಲೋಪೀಡಿಯಾ.ಅವರದೇ ವಿಶಿಷ್ಟ ಶೈಲಿಯ ಕವಿತೆಗಳು, ಕವಿತೆ ಹೇಗೆ ಬರೆಯಬಹುದು ಎಂದು ತೋರಿಸುವ ಪಾಠ ಪ್ರವಚನಗಳ ಹಾಗೆ.ಅವರ ಪ್ರತಿ ಬರಹಗಳೂ ಒಂದು ಅನಿರ್ವಚನೀಯ ಅನುಭವ.

ಕವಿತೆ ಬರೆಯಲು ಒಂದು ‘ ರಹಸ್ಯ ರೆಸಿಪಿ’ ಎನ್ನುವುದು ಇದೆ ಎಂದು ನಾನು ನಂಬುವದಿಲ್ಲ ಎಂದು ಅವರೇ ಒಂದೆಡೆ ಹೇಳಿದ್ದನ್ನು ಉಲ್ಲೇಖಿಸುತ್ತ, ಅವರೊಂದಿಗಿನ ಸಂದರ್ಶನದ, ಆಯ್ದ ಭಾಗಗಳು :

ಇದೊಂದು ಅಪರೂಪದ ಸಂದರ್ಶನ . ಸಂದರ್ಶನ ಎನ್ನುವದಕ್ಕಿಂತ ಬಹಳ ಕಾಲದಿಂದ ಸ್ನೇಹಿತರು, ಮಾರ್ಗದರ್ಶಿ, ಗುರು,ಎಲ್ಲವೂ ಆಗಿರುವ,ನನಗೆ, ಇದೊಂದು, ಆತ್ಮೀಯವಾದ ಮಾತು- ಕತೆಯೇ, ಸರಿಯಾದ ಪದ ಎಂದುಕೊಳ್ಳುತ್ತೇನೆ.
ಬಾಗಿಲು ತಟ್ಟಿದಾಗ, ಅವರೇ ಎದುರುಗೊಂಡರು.


ಕಿಶನ್ ರಾವ ಬನ್ನಿ ಬನ್ನಿ .

ಆರಾಮವಾಗಿ ಕುಳಿತಾದ ಮೇಲೆ,

‘ಪ್ರಾರಂಭಿಸೋಣವೇ’ ಎಂದು ಅವರೇ ಕೇಳಿದರು.ಅದು ಅವರ ಶಿಸ್ತು.

ನಾನು : ಸರ್. ನಿಮ್ಮ ಬಾಲ್ಯಜೀವನದ ಬಗ್ಗೆ ಹೇಳುತ್ತ , ನಂತರದ ದಿನಗಳಲ್ಲಿ ಸಾಹಿತ್ಯದ ಕಡೆಗೆ ನಿಮ್ಮ ಆಸಕ್ತಿ ಹೇಗೆ ಬೆಳೆಯುತ್ತ ಹೋಯಿತು ? ಹೇಳಬಹುದೆ ?

ತಿರುಮಲೇಶ್ : ಬಾಲ್ಯ ಜೀವನದ ಬಗ್ಗೆ ನನ್ನ ಹಲವು ಲೇಖನಗಳಲ್ಲಿ ಅಲ್ಲಲ್ಲಿ ಬರೆದಿದ್ದೇನೆ.’ಕೆಂಡ ಸಂಪಿಗೆ’ ಯಲ್ಲಿ ಈ ವಿಷಯದ ಲೇಖನಗಳಿವೆ ನೀವೂ ಓದಿರಬಹುದು.

ನಾ: ಹುಂ ಸರ್ ಓದಿರುವೆ.

ತಿ : ಜೀವನ ಚರಿತ್ರೆ ಬರೆಯಬೇಕು ಎನ್ನುವ ಉದ್ದೇಶ ಹೊಂದಿ, ಟಿಪ್ಪಣಿ ಪುಸ್ತಕ ಇಟ್ಟುಕೊಂಡು ಬರೆದವನಲ್ಲ. ಪ್ರತಿ ವರುಷ ಡೈರಿ ಗಳು ಕಾಣಿಕೆಯಾಗಿ ಬರುತ್ತಿದ್ದವು.ಅದರಲ್ಲಿ ಕೆಲ ಸಂಗತಿ ಗಳನ್ನು ನಮೂದಿಸಿದ್ದೆ.ಆದರೆ ಅವುಗಳನ್ನ ಸಹ ಪದ್ಯ ರೂಪದಲ್ಲಿ ಬರೆದಿದ್ದೆ.ಹೆಚ್ಚು ಚಿಕ್ಕ ಚಿಕ್ಕ‌ ತುಣುಕುಗಳು. ಅವು ಪದ್ಯ/ಕವಿತೆಯ ರೂಪ ಪಡೆದಿವೆ. ಬಾಲ್ಯದ ಬಗ್ಗೆ ಹೇಳುವದಾದರೆ, ಕೇರಳದ, ಕಾರಡ್ಕ ( ಆಗ ಅದು ದಕ್ಷಿಣ ಕನ್ನಡದ ಒಂದು ಭಾಗವಾಗಿತ್ತು) ಎನ್ನುವ ಒಂದು ಊರು.ಕಾಸರಗೋಡು-ಮಡಿಕೇರಿಯ ರಸ್ತೆಯಲ್ಲಿ 10-12 ಕಿ.ಮೀ ಅಂತರದಲ್ಲಿ ಬರುತ್ತದೆ.ಇದು ನಾನು ಹುಟ್ಟಿದ1940ರ ಆಸುಪಾಸಿನ ಸಮಯದ ಸಂಗತಿ.ಕುಗ್ರಾಮ. ಕುಗ್ರಾಮ ಪದ ಬಳಸುವದು ನನಗೆ ಇಷ್ಟವಿಲ್ಲ. ಆದರೂ ಒಂದು ಪದ ಬೇಕಲ್ಲ ! ಅದು ಯಾವದೇ ನಾಗರಿಕ ಸೌಲಭ್ಯಗಳನ್ನು ಹೊಂದಿರದ ಹಳ್ಳಿ.ವಿದ್ಯುತ್ ಇರಲಿಲ್ಲ.ಮಡ್ ರೋಡು. ಬಸ್ ನಂತರ ಬಂದವು –
ಕಾಲ್ನಡಿಗೆಯೇ ಪ್ರಧಾನ ಸಂಚಾರ ಸಾಧನ.ಕೆಲವರು ಎತ್ತಿನಗಾಡಿ ಬಳಸುತ್ತಿದ್ದರು. ಈ ಊರಿನ ಪ್ರಧಾನ ಲಕ್ಷಣಗಳು ಎಂದರೆ ರೋಗಗಳು.ಮಲೇರಿಯಾ, ಟೈಫಾಯಿಡ ಮತ್ತು ನನ್ನ ಜೀವನಕ್ಕೆ ಅಂಟಿ ಕೊಂಡು ಬಂದಿರುವ ಅಸ್ತಮಾ (ಇಂಗ್ಲಿಷ್ ನಲ್ಲಿ,ಇದರ ನಿಜವಾದ ಉಚ್ಚಾರಣೆ ಅಸ್ಮಾ. ತಿರುಮಲೇಶರು ಅಸ್ಮಾ ಎಂದೇ ಉಚ್ಚರಿಸುತ್ತಾರೆ ನಾವೆಲ್ಲ ಅಸ್ತಮಾ ಎಂದೇ ಉಚ್ಚರಿಸುವುದು ವಾಡಿಕೆ ).ವರುಷದಲ್ಲಿ ಆರು ತಿಂಗಳು ಮಳೆ. ಪಟ್ಟಣ ಪ್ರದೇಶಗಳಲ್ಲಿ ಹುಟ್ಟಿ ಬೆಳೆದವರಿಗೆ, ಹಳ್ಳಿ ಜೀವನದ ಹಿನ್ನೆಲೆಯಾಗಲಿ,ಪರಿಚಯವಾಗಲಿ ಇರಲಾರದು.ಗಂಜಿ ಎಂದರೇನು ಎಂದರೆ ಗೊತ್ತಿಲ್ಲ ಅವರಿಗೆ.ಬ್ರೆಡ್ ಇಡ್ಲಿ ದೋಸೆಗಳ ಹಾವಳಿ ಹೆಚ್ಚು.
ಗಂಜಿ ಎಂದರೆ ಗೊತ್ತಾಗುವ ಸಾಧ್ಯತೆಗಳು ಕಡಿಮೆ.ರಾತ್ರಿ ಎಲ್ಲರ ಗಂಜಿಯೂಟವಾದ ಮೇಲೆ ಉಳಿದ ಗಂಜಿ, ಮರುದಿನ ಬೆಳಿಗ್ಗೆ ಹುಳಿಯಾಗಿರುತ್ತಿತ್ತು. ನಮ್ಮ ತಾಯಿ ಅದನ್ನೇ ಉಣ್ಣುತ್ತಿದ್ದರು. ಅದು ಪೌಷ್ಟಿಕಾಂಶ ಎಂದು ಹೇಳುತ್ತಿದ್ದರು. ಗಂಜಿ ಊಟದ ಅನುಭವ ಇದ್ದಿರಬೇಕು, ದೀರ್ಘಾಯುವಿನ ರಹಸ್ಯ. ಆದರೂ ಕಷ್ಟದ ದಿನಗಳು ಅವು.ಇಂತಹ ಪರಿಸರದಲ್ಲಿ ನನ್ನ ಬಾಲ್ಯ ಜೀವನ ಕಳೆಯಿತು. ರೋಗ ರುಜಿನ ಸೊಳ್ಳೆಗಳು ಜಿಗಣೆ ಇಂಬುಳಗಳು. ಬ್ರಾಹ್ಮಣ ಒಕ್ಕಲಿಗರು ನಾವು. ಬ್ರಾಹ್ಮಣರಾಗಿದ್ದು ನಾವು ಗೇಣಿ(Lease) ಎಂದರೆ, – ವರುಷಕ್ಕೆ ಇಂತಿಷ್ಟು ಎಂದು, ಭೂ ಮಾಲೀಕನಿಗೆ, ದುಡ್ಡು,ದವಸ ಧಾನ್ಯ ಕೊಡುವ ವ್ಯವಸ್ಥೆ. – ಗೇಣಿ ಒಕ್ಕಲುಗಳು ನಾವು.ಈ ಸ್ಥಳದ ಬಗ್ಗೆ ಹೇಳುವದಾದರೆ, ಮೂಡು ಪಡುಗು,ಬಡಗು ಬೆಟ್ಟಗಳು. ಮೂರು ದಿಕ್ಕಿಗೂ ಬೆಟ್ಟ ಗುಡ್ಡಗಳು. ಉಳಿದ ಒಂದು ದಿಕ್ಕಿಗೆ ಕಣಿವೆ. ಅದೇ ನಮ್ಮ ಊರು. ಹೇಗೆ ಹೊರ ಬೀಳಬೇಕಾದರೂ ಬೆಟ್ಟ ಹತ್ತಿ ಇಳಿಯಲೇ ಬೇಕು.ಪುರಾತನ ಮನೆ.ನನಗಿಂತ ಮೊದಲು ಹುಟ್ಟಿದವರು, ನನಗಿಂತ ಹಿರಿಯರು ಅಣ್ಣಂದಿರು ಅಕ್ಕ. ನಾನು ಏಕಾಂಗಿ.
ನನ್ನ ಅಣ್ಣ ಮುಂತಾದ ಹಿರಿಯರು ಮತ್ತು ವಿಶೇಷವಾಗಿ ನನ್ನ ಭಾವ(ಅಕ್ಕನ ಗಂಡ) ಜೈಮಿನಿ,ಕುಮಾರವ್ಯಾಸ ಭಾರತ ಓದುತ್ತಿದ್ದರು. ಅದೂ ಲಹರಿ ಬಂದಾಗ. ಶಾಲೆ ಸೌಲಭ್ಯ ಇರಲಿಲ್ಲ.ಹತ್ತಿರದ ಮಲೆಯಾಳಿ ಮಾಧ್ಯಮದ ಶಾಲೆಗೆ ಹೋಗಲು ಇಷ್ಟ ವಿರಲಿಲ್ಲ. ಹೀಗಾಗಿ ನನ್ನ ಮಾವನ ಮನೆಗೆ ಹೋಗಿ ಅಲ್ಲಿ ಎಲಿಮೆಂಟರಿ, ಪ್ರೌಢಶಾಲೆ ಓದಿದ್ದು.ಊರಿನಿಂದ ಹದಿನೈದು ಮೈಲು ಪಡು.ನಡೆದುಕೊಂಡೇ ಹೋಗುತ್ತಿದ್ದೆ. ಐದನೆಯ ವರ್ಷ ಶಾಲೆಗೆ ಸೇರಿದ್ದು. ತಂದೆ ತಾಯಿಗಳಿಂದ ದೂರ ಹೋಗುತ್ತಿರುವುದೇ ಬೇಜಾರಿನ ಸಂತಿಯಾಗಿತ್ತು.ಅರಂಭದ ಶಾಲೆ ಅಂದರೆ ವಿನಾಕಾರಣ ಹೊಡೆಯುವದು ಬೈಯ್ಯುವದು ಚಿಗುಟುವುದು.‌ಮುಂದೆ ಪ್ರೌಢಶಾಲೆ ಉತ್ತಮವಾಗಿತ್ತು. ಓದಿನ ಜೊತೆಗೆ ಹಲವು ಸ್ಪರ್ಧೆಗಳು ಆಟೋಟ ಮೊದಲಾದವು.ದೈಹಿಕ ಸ್ಪರ್ಧೆಗಳಿಗೆ ನಾನು ಯಾವಾಗಲೂ ಗೈರುಹಾಜರಿ. ನನ್ನ ಅಸ್ತಮಾ ಅದಕ್ಕೆ ಕಾರಣ.ತಿಂಗಳಿಗೆ ಒಮ್ಮೆಯಾದರೂ ಸೀರಿಯಸ್ ಅಟ್ಯಾಕ್. ಇದೆಲ್ಲ ಅನುಭವಿಸಿ, ಓದುತ್ತ ಮುಂದುವರಿದದ್ದು,ಪ್ರೌಢ ಶಾಲೆ ಎಂದು ಹೇಳಿದೆನಲ್ಲ. ನನ್ನ ಮಾವನ ಮನೆಯಿಂದ, ಮೂರು ಮೈಲಿ ದೂರದಲ್ಲಿತ್ತು. ಒಳ್ಳೆಯ ಶಾಲೆ. ಹೇಳಬಾರದು —- ಎಂದುಕೊಂಡಿದ್ದೆ. ಆದರೆ ಈ ಸಂದರ್ಭದಲ್ಲಿ ಹೇಳುವುದು ಸರಿ ಎನಿಸುತ್ತದೆ.

ಸಾಹಿತ್ಯ ಅಕಾಡೆಮಿ ನನಗೆ ನೀಡಿದ ಒಂದು ಲಕ್ಷ ರೂಪಾಯಿಗಳನ್ನು ಈ ಶಾಲೆಗೆ ಉಡುಗೊರೆಯಾಗಿ ನೀಡಿದ್ದೇನೆ. ಈ ಶಾಲೆಯೊಂದಿಗಿನ ಸಂಬಂಧಗಳಲ್ಲಿ, ಅಲ್ಲಿದ್ದ, ಒಂದೇ ಒಂದು ಸಮಸ್ಯೆ ಎಂದರೆ ತಾರತಮ್ಯ ಭಾವನೆ.ವರ್ಗದಲ್ಲಿ ನೋಡುವಾಗ ನಾನು ಬ್ರಾಹ್ಮಣ. ಆದರೆ ಈ ಬ್ರಾಹ್ಮಣ ವರ್ಗದಲ್ಲಿಯೂ ಒಂದು ತಾರತಮ್ಯ. ಬಲಾಢ್ಯರು – ಗುಣಾಢ್ಯರು – ದೊಡ್ಡವರು – ಉಳ್ಳವರು ಮತ್ತು ಪಾಪದ ನಮ್ಮಂಥವರು. ಉದಾಹರಣೆಗೆ ಹೋಗಲಿ ಬಿಡಿ. ಅದು ಬೇಡ.ಅಲ್ಲಿ ನನಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿದ್ದು ಎಸ್.ವಿ.ಎಲ್.ಎನ್. ಶರ್ಮ ಎನ್ನುವ ತರುಣರಿಂದ ಇದು ಬೆಳೆಯಿತು.ಅವರು ಏನು ಕಲಿಸುತ್ತಿದ್ದರು ನೆನಪಿಲ್ಲ. ಕನ್ನಡ, ಹಿಂದಿ ಏನೋ ಇದ್ದಿರಬೇಕು. ಆದರೆ ನನಗೆ ನೆನಪಿಗೆ ಬರುವುದು, ಅವರು ತರಿಸುತ್ತಿದ್ದ ಪುಸ್ತಕಗಳು. ಡಿವಿಜಿಯವರ ಮಂಕುತಿಮ್ಮನ ಕಗ್ಗ, ಬೇಂದ್ರೆ,ಕುವೆಂಪು ಮತ್ತು ಕೆ.ಎಸ್.ನರಸಿಂಹ ಸ್ವಾಮಿಯವರ ಪದ್ಯಗಳನ್ನು ರಾಗಬದ್ಧವಾಗಿ ಓದುತ್ತಿದ್ದರು. ಅದು ಆಗ ನನಗೆ ಆಹಾ ! ಎನಿಸುತ್ತಿತ್ತು.ಅದೂ ಅಲ್ಲದೆ, ಅವರು ‘ ಜಯಂತಿ ‘ ಎನ್ನುವ ಮಾಸ ಪತ್ರಿಕೆ ತರಿಸುತ್ತಿದ್ದರು.ನಾನು ಆಗಾಗ ಕಡ ಪಡೆದು ಅದನ್ನು ಓದುತ್ತಿದ್ದೆ. ‘ಜಯಂತಿ’ ಅಲ್ಲದೆ ಶಾಲೆಗೆ ‘ಜಯ ಕರ್ನಾಟಕ’ ‘ ಜೀವನ ‘ ಪತ್ರಿಕೆಗಳೂ ಬರುತ್ತಿದ್ದವು. ಶಾಲೆಯಲ್ಲಿ ಸಾಹಿತ್ಯ ಸ್ಪರ್ಧೆ ಇರುತ್ತಿತ್ತು. ನನ್ನ ಮಿತ್ರರು ಕೆಲವರು ಮಕ್ಕಳ ಪದ್ಯಗಳನ್ನು ಬರೆಯುತ್ತಿದ್ದರು. ಹೀಗಾಗಿ ನಾನು ಯಾಕೆ ಬರೆಯಬಾರದು ? ಎಂದುಕೊಂಡು ,ನಾನೂ, ಕವಿತೆ ಬರೆಯುವ ಪ್ರಯತ್ನಮಾಡಿದೆ. ನನ್ನ ಆರಂಭದ ಪ್ರವೇಶ ಈ ತರದಲ್ಲಿತ್ತು. ಹೇಳುತ್ತ ಹೋದರೆ ಸಾಕಷ್ಟು ಇದೆ.ಅದೇ ಉದ್ದವಾಗುವುದು ಬೇಡ.

ನಾ : ಪ್ರಾಧ್ಯಾಪಕ ವೃತ್ತಿ ಬಿಟ್ಟು ಹೈದರಾಬಾದಿಗೆ ಬಂದು ಓದು, ಎಡೆಬಿಡದ ಅಧ್ಯಯನ, ‘ಅಮೇರಿಕೆ ‘ ‘ಯಮನ್ ‘ ಗಳ ತಿರುಗಾಟ. ಹೀಗೆ ಬಹುಮುಖಿ – ಸಂಸ್ಕೃತಿ ಅಥವಾ ನೀವೆ ಒಂದೆಡೆ ಹೇಳಿದ ಹಾಗೆ ಬಹುಮುಖಿತ್ವ. ಪೂರ್ವಾತ್ಯ- ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ನಿಮ್ಮ ಮೇಲೆ ಸಾಕಷ್ಟು ಆಯಿತು.ಅದರೆ ಅದು ನಿಮ್ಮನ್ನು ಅಷ್ಟಾಗಿ ಬಾಧಿಸಲಿಲ್ಲ. ಯಾಕೆ ? ನಾನು ತಪ್ಪು ಇರಬಹುದು.

ತಿ: ಪಾಶ್ಚಾತ್ಯ ಸಂಸ್ಕೃತಿ ನನಗೆ ಮೂರು ವಿಧದಲ್ಲಿ ಪ್ರಭಾವ ಮಾಡಿದ್ದು ಇದೆ. ಎಸ್.ಎಸ್.ಎಲ್.ಸಿ ಆದ ಮೇಲೆ, ಹಲವು ಸಮಸ್ಯೆ ಗಳಿಂದಾಗಿ ಎರಡು ವರ್ಷ ಓದು ಮುಂದುವರಿಸಲಾಗಲಿಲ್ಲ . ಪುನಃ ಓದಿಗೆ ಕಾಸರಗೋಡು ಸೇರಿ, ಒಂದು ವರ್ಷ ಪಿ.ಯು.ಸಿ ಆದ ಮೇಲೆ, ಬಿ.ಎ. ಸೇರುವಾಗ, ನನಗೆ ಗಣಿತದಲ್ಲಿ ಆಸಕ್ತಿ ಇತ್ತು .ನನ್ನ ಶೈಕ್ಷಣಿಕ ಹಿನ್ನೆಲೆಯಿಂದಾಗಿ ಗಣಿತ ತೆಗೆದುಕೊಳ್ಳಲಿಲ್ಲ. ಅರ್ಥಶಾಸ್ತ್ರ ನನಗೆ ಅಷ್ಟು ಆಕರ್ಷಕ ವಲ್ಲದ ವಿಷಯ.ಹೀಗಾಗಿ, ಆಗತಾನೆ ಅಲ್ಲಿ ಇಂಗ್ಲಿಷ್ ಮೇಜರ್ ಆರಂಭವಾಗಿತ್ತು ನಾನು ಸಾಹಿತ್ಯ ಆಯ್ಕೆ ಮಾಡಿಕೊಂಡು, ಇಂಗ್ಲಿಷ್ ಮೇಜರ್ ಇಂಗ್ಲಿಷ್ ವಿಮರ್ಶೆ, ಇಂಗ್ಲಿಷ ಚರಿತ್ರೆ ಆಯ್ಕೆ ಮಾಡಿದೆ. ಪ್ರಾರಂಭದಲ್ಲಿ ಭಯ ಇತ್ತು.ಪ್ರಯತ್ನದಿಂದ ಯಶಸ್ವಿಯಾದೆ. ಹೀಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರವೇಶಾರಂಭವಾಯಿತು ಎಂದು ಹೇಳಬಹುದು. ಆ ಮೇಲೆ, ತಿರುವನಂತಪುರಕ್ಕೆ ಹೋಗಿ ಅಲ್ಲಿ ಇಂಗ್ಲಿಷ್ ನಲ್ಲಿ ಎಂ. ಎ.ಮಾಡಿದೆ. ಮನೆಯಿಂದ ಅಷ್ಟು ಪ್ರೋತ್ಸಾಹ ಇರಲಿಲ್ಲ. ಅವರು ನನ್ನನ್ನು ನನ್ನಷ್ಟಕ್ಕೆ ಬಿಟ್ಟು ಬಿಟ್ಟರು. ಕಾಲೇಜಿನಲ್ಲಿ ಒಬ್ಬರು ಯೇಟ್ಸ ಕಲಿಸುತ್ತಿದ್ದರು ಇನ್ನೊಬ್ಬರು ಎಲಿಯಟ್. ಇವೆಲ್ಲವೂ ಹೊಸ ಹೆಸರುಗಳು ನನಗೆ. ಆನಂತರ ಕೇರಳದಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿ ಐದಾರು ವರ್ಷ ಕೆಲಸ ಮಾಡಿದೆ. ಕಾಸರಗೋಡು ಸೇರಿದಂತೆ, ಬೇರೆ ಬೇರೆ ಕಾಲೇಜುಗಳಲ್ಲಿ. ಕನ್ನಡ ಅಲ್ಲದೆ ಇಂಗ್ಲಿಷ್ ನಲ್ಲಿ ಆಸಕ್ತಿ ಇತ್ತು. ವಿಷಯ ಅಲ್ಲದೆ, ಬೇರೆ ವಿಷಯಗಳು ಆಸಕ್ತಿ ಮೂಡಿಸುವ ಸಂಗತಿಗಳಾಗಿದ್ದವು. ಸಾಹಿತ್ಯ; ಯಾಕೋ ಗೊತ್ತಿಲ್ಲ ಆಕರ್ಷಣೀಯ ಎನಿಸಿತು. ಇವೆಲ್ಲ 1960 ರ ದಶಕದ ಸಂಗತಿಗಳು. ಸಾಹಿತ್ಯ ಯಾಕೆ ಓದಬೇಕು ? ನನಗೆ ಅನೇಕರು ಈ ರೀತಿಯ ಪ್ರಶ್ನೆ ಕೇಳಿದ್ದಾರೆ ಕೀಟಲೆಗಾಗಿ‌ ಅಲ್ಲ. ಗಂಭೀರವಾಗಿಯೇ !
ಕಿಶನ್ ರಾವ್ ನೀವು ಓದುವವರು ಬರೆಯುವವರು, ಈ ಪ್ರಶ್ನೆ ನೀವು ಕೇಳಬೇಕಾದ್ದೆ. ಹಾಗೆ ನೋಡಿದರೆ ಇದು ಒಂದು ರೀತಿ ಬಹಿರಂಗವಾಗಿ‌ ಕೇಳುವ ಪ್ರಶ್ನೆ ಅಲ್ಲದೇ ಇರಬಹುದು.ಹಲವರು ಹಲವು ರೀತಿಯ ಉತ್ತರಗಳನ್ನು ಕೊಡಬಹುದು. ಇಷ್ಟಕ್ಕೂ ಓದುವದರಿಂದ ನಮಗೆ ಒಂದು ಹೊಸದಾದ ದೃಷ್ಟಿಕೋನ ಬರುತ್ತದೆ.ನಾವು ಕಲ್ಪಿಸಿದ ಹಲವು ಸಂಗತಿಗಳು ಅದರಲ್ಲಿ ಬರುತ್ತವೆ.ಇನ್ನೊಬ್ಬನ ಜೊತೆ ಮಾತನಾಡಿದ ಅನುಭವ ಉಂಟಾಗುತ್ತದೆ. ಬೇರೆಯದೇ ಆದ ಒಂದು ಭಾಷೆಯೋ, ರಾಜ್ಯವೋ, ಅರ್ಥವೋ ಒಂದು ಕಥನವೋ ನಮಗೆ ಸಿಗುತ್ತದೆ. ಈಗ,ನನಗೆ ಈಗ ದೃಷ್ಟಿ ಮಾಂದ್ಯ ಇದೆ.ಓದಲಿಕ್ಕೆ ಕಷ್ಟ ಅಗುತ್ತದೆ.ಆದರೂ ನೋಡಿ ಪ್ರತಿನಿತ್ಯ ಒಂದು ಪ್ಯಾರಾನಾದರೂ ಓದದೇ ಇದ್ದರೆ,ಲೆಕ್ಕ ಹಾಕಿ ಅಂತ ಅಲ್ಲ ನಾನು ಓದದೇ ಇದ್ದರೆ ಅಪಸೆಟ್ ಆಗ್ತೇನೆ.ನನಗೆ ಬೇರೆ ಯಾವುದು ಅಂದರೆ ಇನ್ನಾವುದೇ ಕುಶಲ ಕಲೆ ಗೊತ್ತಿಲ್ಲವಲ್ಲ!! ಹೀಗಾಗಿ ಓದೋದು. ಓದಿಯಾದ ಮೇಲೆ ಅದನ್ನು ಯಾರೊಂದಿಗಾದರೂ ಹೇಳುವುದು. ನೀವೇ ಹೇಳಿದಿರಲ್ಲ. ನಾನು ತುಂಬಾ ಲೇಖನಗಳನ್ನು ಬರೆದಿದ್ದೇನೆ ಎಂದು. ಹೌದು ಬರೆದಿದ್ದೇನೆ. ಓದಿಯಾದ ಮೇಲೆ ನನಗೆ ಖುಷಿ ಕಂಡ ಸಂಗತಿಗಳನ್ನು ನನ್ನದೇ ಆದ ರೀತಿಯಲ್ಲಿ ಬರೆದಿದ್ದೇನೆ. ಅಂಕಣ ಬರಹಗಳು ಇತರ ಲೇಖನಗಳನ್ನು ಬರೆಯುವಾಗ.
ನಾನು ಓದಿದ ಸಂಗತಿಗಳು ಇತರರಿಗೆ ತಿಳಿಯಲಿ ಎಂದು ಬರೆದಿದ್ದೇನೆ. ಕೆಲವರಿಗೆ ಓದಲು ಕಷ್ಟವಾಗಿರಬೇಕು ಇನ್ನೂ ಕೆಲವರು ಯಾಕೆ ಬರೆದದ್ದು ಎಂದುಕೊಂಡಿದ್ದೂ ಇದೆ. ಒಂದು ಅನುಮಾನವನ್ನು, ಮನುಷ್ಯ ಇಟ್ಟುಕೊಳ್ಳಬೇಕು.ನೆಗೆಟಿವ್ ಯೋಚನೆಯಿಂದ ಏನೂ ಸಿಗುವದಿಲ್ಲ.ಯಾಕೆ ? ಎಂದು, ನೆಗೆಟಿವ್ ಆಗಿ ಯೋಚಿಸಿದರೆ ಯಾವ ಸಾಧ್ಯತೆಗಳು ಇಲ್ಲ.

ಪೂರ್ತಿಯಾಗಿ ಸ್ವೀಕರಿಸಿ ಎಂದು ನಾನೇನೂ ಹೇಳುವದಿಲ್ಲ.ಈಗ ಡಾರ್ವಿನ್ ನ ವಿಕಾಸವಾದ ಇದೆ.ನಾನು ಓದಿದ್ದೇನೆ.ದೈವ ಪ್ರೇರಿತ ಸಂಗತಿಗಳ ಬಗ್ಗೆ ಆಸಕ್ತಿ ಇಲ್ಲ ಮತ್ತು ನನಗೆ ಏನೂ‌ ಗೊತ್ತಿಲ್ಲ.ದೇವರ ವಿಷಯದಲ್ಲಿ ನಾನು ಖಂಡಿತವಾದಿ ಅಲ್ಲ.ನನಗೆ ಅನುಮಾನಗಳಿವೆ.ಯಾಕೆ ಹೇಳುತ್ತಿದ್ದೇನೆಂದರೆ ನಾನು ಇಂತಹ ಸಂಗತಿಗಳನ್ನು ಇಂಗ್ಲಿಷ್ ನಿಂದ ಪಡೆದೆ. ತಿರುವನಂತಪುರದಲ್ಲಿರುವಾಗ ಮತ್ತು ನಂತರವೂ. ಈ ಇಂಗ್ಲಿಷ ಸಾಹಿತ್ಯ ಇದೆ ನೋಡಿ, ಇದು ಬಹಳ ದೊಡ್ಡ ಸಂಗತಿ.ಮತ್ತು ಅದು ಮುಕ್ತವಾದ ಸಂಗತಿ.ಈ ಜಗತ್ತಿಗೆ ನನಗೆ ಇದರಿಂದ ಪ್ರವೇಶ ಸಿಕ್ಕಿತು.ಆನಂತರ ಫಿಲಾಸಫಿ,ವಿಮರ್ಶೆ, ಚರಿತ್ರೆ. ಚರಿತ್ರೆ ನನಗೆ ಬಹಳ ಆಸಕ್ತಿ ಕರವಾದ ಸಂಗತಿಯಾಗಿತ್ತು.ಈ ಚರಿತ್ರೆ ಸಹ ದಾಖಲೆ ಪೂರ್ವಕ ಸಿಗುತ್ತದೆ ಎಂದೇನೂ ಅಲ್ಲ ಅಲ್ಲಿ ಕೂಡ ನಿರೂಪಣೆ ಇರುತ್ತದೆ.ಒಬ್ಬ ಚರಿತ್ರೆಕಾರ ಇರುತ್ತಾನೆ.ಅವನು ತಾನು ತಿಳಿದುಕೊಂಡದ್ದೆಲ್ಲವನ್ನು ತನ್ನ ದೃಷ್ಟಿಕೋನದಿಂದ ನಿರೂಪಣೆ ಮಾಡುತ್ತಾನೆ. ಆಗೂ ಇದೂ ಒಂದು ರೀತಿಯ ಕಥನ . ನಿಮ್ಮ ಪ್ರಶ್ನೆಯಿಂದ ದೂರ ಹೋದೆ ಎನಿಸುತ್ತದೆ. ನಿಮ್ಮ ಪ್ರಶ್ನೆಗೆ ವಾಪಸ್ ಬಂದರೆ,ನಾನು ಯಾವುದೇ ಇಸಂಗಳಿಗೆ ಬದ್ಧವಾಗಿಲ್ಲ. ಯಾವ ಇಸಂ ನನ್ನನ್ನು ಕೊಂಡುಕೊಂಡಿಲ್ಲ.ಅಥವಾ ನಾನು ಮಾರಾಟವಾಗಿಲ್ಲ.

ನಾ : ನನ್ನ ಮುಂದಿನ ಪ್ರಶ್ನೆ ಅದೇ ಇತ್ತು. ನೀವೇ ಆರಂಭಿಸಿದಿರಿ.ಮುಂದುವರಿಸಿ ಸಾರ್.

ತಿ : ಅಮೆರಿಕನ್ ಸಂಸ್ಕೃತಿ, ಬ್ರಿಟಿಷ್ ಸಂಸ್ಕೃತಿ ಇವುಗಳ ಬಗ್ಗೆ ಓದಿದ್ದೇನೆ.ನನ್ನ ದೃಷ್ಟಿಯಲ್ಲಿ ತಿಳಿದುಕೊಂಡದ್ದು ಕಡಿಮೆ. ಈಗಾಗಲೇ ಹೇಳಿದಂತೆ ನನ್ನದೇ ಆದ ಅನುಮಾನಗಳಿರುವಾಗ, ನಾನು ಯಾವುದೇ ಒಂದು ನಿರ್ಣಯಕ್ಕೆ ಬರಲು ಹೇಗೆ ಸಾಧ್ಯ.. ಅಮೆರಿಕನ್ ಬಂಡವಾಳಶಾಹಿಯನ್ನೇ ತೆಗೆದುಕೊಳ್ಳಿ ಅದು ತಪ್ಪು ಎಂದು ಹೇಳಿಕೆ ನೀಡಿಬಿಡುತ್ತೇವೆ. ಇರಬಹುದು. ಆದರೆ ಯೋಚಿಸಿ.ಕ್ಯಾಪಿಟಲಿಸಂ ಇಲ್ಲದೆ ಉತ್ಪಾದನೆ ಹೇಗೆ ಸಾಧ್ಯ. ಇಲ್ಲಿ ಸೇರಿಸಬಹುದಾದ ಸಂಗತಿ ಎಂದರೆ, ನನಗೆ ಅ್ಯಂತ್ರಾಪಾಲಜಿ ಇಷ್ಟ. ಮನುಷ್ಯ ಬೇಟೆಯಾಡುತ್ತ ಜೀವನ ಪ್ರಾರಂಭಿಸಿದ. ಗಡ್ಡೆ ಗೆಣಸುಗಳನ್ನು ತಿಂದು ಬದುಕಿದ. ಈ ಹಂತದವರೆಗೆ ಬೆಳೆದ ಎಂದು.ಕೆಲವರ ಪ್ರಕಾರ ನಾವು ಅಧಿಕ ಪ್ರಸಂಗಿತನ ಮಾಡುತ್ತಿದ್ದೇವೆ. ಕ್ಯಾಪಿಟಲಿಸಂ ನಿಂದ ಭೂಮಿಯನ್ನು ಹಾಳುಮಾಡುತ್ತೇವೆ ಎಂದು.ನಾನು ಒಪ್ಪುತ್ತೇನೆ.ನನಗೂ ಆ ಬಗ್ಗೆ ಚಿಂತೆ ಇದೆ.ಆದರೆ ಅದೇನು‌ ಇಲ್ಲದೆ ಇದ್ದರೆ ನಾವು ಎಲ್ಲಿರುತ್ತಿದ್ದೆವು. ಈಗ ನಾನು ನನಗಿರುವ ತೊಂದರೆ ಅಸ್ತಮಾದ ಬಗ್ಗೆ ಹೇಳುತ್ತೇನೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿದ್ದು ಇದೆ.ಆಗ ಸರಿಯಾದ ಔಷಧಿ ಇರಲಿಲ್ಲ. ಈಗ ಇನ್ ಹೇಲರ್, ನೆಬುಲೈಸರ್ ಮೊದಲಾದವು ಕಂಡು ಹಿಡಿಯಲ್ಪಟ್ಟಿವೆ.ಇಂತಹ ಸಂದರ್ಭಗಳಿಗೆ ಬೇಕಲ್ಲ! ಮನೆ ಮದ್ದು ಇದೆ ಆದರೆ ತುರ್ತು ಪರಿಸ್ಥಿತಿಯಲ್ಲಿ ಅಲೋಪತಿ ಬೇಕಾಗುತ್ತದೆ. ಆಯುರ್ವೇದದಲ್ಲಿ ಶಕ್ತಿ ಇದೆ ಚಿಕಿತ್ಸೆ ಇದೆ. ನನಗೂ ಗೊತ್ತು .ಅದು ದೀರ್ಘಕಾಲೀನ. ಆದರೂ‌ ಅಲೋಪತಿಯ ಅಗತ್ಯ ಕಡೆಗಣಿಸುವುದು ಹೇಗೆ ? ಇಂತಹ ಅನುಮಾನಗಳಿಂದ ಓದು ಸಾಗುತ್ತದೆ. ಈ ರೀತಿಯ ಅನುಮಾನಗಳಿದ್ದೇ ಬ್ರಿಟಿಶ್ ಅಮೆರಿಕನ್ ಸಂಗತಿಗಳು, ಕುತೂಹಲದಿಂದ ನೋಡುವ ಸಂಗತಿಗಳು. ಏನೇ ಹೇಳಿದರೂ ಎಷ್ಟೇ ಟೀಕಿಸಿದರೂ , ಇವುಗಳೆಲ್ಲ ಉತ್ಪಾದನೆಗೊಂಡದ್ದು ನಾಗರಿಕತೆಯ ತಂತ್ರಜ್ಞಾನದ ಹಿನ್ನೆಲೆಯಲ್ಲಿ . ಇಲ್ಲಿಗೆ ತಲುಪಿದ್ದೇವೆ.ಮುಂದೆ ಎಲ್ಲಿಗೆ ಹೋಗುತ್ತೇವೆ ಗೊತ್ತಿಲ್ಲ.ಆದರೂ ಅವುಗಳ ಗುಣಾವಗುಣಗಳ ಕುರಿತಂತೆ ಯೋಚನೆ ಮಾಡಬೇಕು. ಇವೆಲ್ಲವೂ ಚಿಂತನೆಗಳ ಭಾಗಗಳಾಗಿಬಿಡುತ್ತವೆ.

ನಾ: ನಿಮ್ಮ ಲೇಖನ ವ್ಯವಸಾಯ ಅನೇಕ ಪ್ರಕಾರಗಳಲ್ಲಿ ಮೂಡಿಬಂದಿದ್ದರೂ ಮುಖ್ಯವಾಗಿ ನಿಮ್ಮನ್ನು ಕವಿ ಎಂದೇ ಗುರುತಿಸಲಾಗಿದೆ.1968 ರಲ್ಲಿ ಪ್ರಕಟಗೊಂಡ ಮುಖವಾಡಗಳ ನಂತರ, ಇತ್ತೀಚಿಗೆ ಬಂದ ‘ಅವ್ಯಯ ಕಾವ್ಯ’ ದ ವರೆಗೆ ನಿಮ್ಮ ಕವಿತೆಗಳು ಸಾಧಾರಣ ಸಂಗತಿಗಳೆ ವಸ್ತುಗಳಾಗಿ, ಕವಿತೆಗೆ ಸರಕು ಮುಗಿದು ಹೋಗಿದೆ ಏನು ಬರೆಯುವದು ಎನ್ನುವ ಕನ್ನಡ ಕಾವ್ಯದ ಸಂದಿಗ್ಧ ಸಂದರ್ಭದಲ್ಲಿ ನೀವು ಕವಿತೆಗಳನ್ನು ಬರೆದಿರಿ. ಹೇಗೆ ಬರೆಯಬಹುದು ಎಂದು ತೋರಿಸಿ‌ಕೊಟ್ಟಿರಿ. ಹೀಗಾಗಿ,ಸಾರಸ್ವತ ಲೋಕ,ವಿದ್ವಾಂಸರು, ವಿಮರ್ಶಾಲೋಕ, ಸ್ನೇಹಿತರ ವಲಯ ” ಒಂದು ದಶಕದ ಕನ್ನಡ ಕಾವ್ಯ ತಿರುಮಲೇಶರಿಗೆ ಸಲ್ಲುತ್ತದೆ ” ಎನ್ನುವ ಅಭಿಪ್ರಾಯ ಇದೆ. ಇದರ ಬಗ್ಗೆ ಏನಾದರೂ ಹೇಳಲಿಕ್ಕಿದೆಯೇ ?

ತಿ:- ಅಂತಹ ಒಂದು ಧಾರ್ಷ್ಟ್ಯ ನನಗೂ ಇತ್ತು.ಇಂತಹದು ಒಂದು ವಯಸ್ಸಿನಲ್ಲಿ ಎಲ್ಲರಿಗೂ ಇರುತ್ತದೆ.ಯೌವ್ವನದ ಭರಾಟೆ ಅದು.ಕಿಶನ್ ರಾವ್ ನಾನೂ ಯಾವಾಗಲೂ ಒಂದೇ ವ್ಯಕ್ತಿ ಅಲ್ಲ. ಹಲವು ವ್ಯಕ್ತಿ ಗಳ ಹಲವು ಭಾವನೆಗಳ ಸಂಕೀರ್ಣ ಈ ಮನುಷ್ಯ.ನಿನ್ನೆ ಇದ್ದ ಹಾಗೆ ಇವತ್ತು ಇದ್ದೇನೆ ಎಂದು ಹೇಳಲು ಸಾಧ್ಯ ಇಲ್ಲ. ಅಪ್ರಾಮಾಣಿಕತೆ ಎಂದೂ ಹೇಳಲಾಗದು.ಮನುಷ್ಯ ಇರೋದೆ ಹಾಗೆ.ಹೊಸ ಆಧಾರಗಳು, ಹೊಸ ಪುಸ್ತಕ, ಹೊಸ ಮಾತು. ಅದರಿಂದ ಕಲ್ಪನೆಗಳು ಬದಲಾಗುತ್ತ ಹೋಗುತ್ತವೆ. ಬದಲಾಗಬೇಕು.ಇಲ್ಲದಿದ್ದರೆ ಮನುಷ್ಯ ಕೇವಲ ಮಣ್ಣು ಅಷ್ಟೇ. ಕಾವ್ಯದ ಬಗ್ಗೆ ಕೇಳಿದಿರಿ.ಹೊಸದು ಮನಸ್ಸಿನಲ್ಲಿ ಯಾವಾಗಲೂ ಸ್ಫುರಿಸುತ್ತದೆ.ಅದು ಏನು ಉಂಟು‌ಮಾಡುತ್ತದೆ. ಅದೊಂದು ವೈಬ್ರೇಶನ್.ಕೆಲವು ವರ್ಷ ಗಳ ಹಿಂದೆ ‘ತೂತಂಕಮನ್’ ಬರೆದಿದ್ದೆ. ಇಜಿಪ್ಷಿಯನ್ ಬಾಯಕಿಂಗ್ ಫೆರೋ(Biyking phero) ಮರಣಹೊಂದಿದ. ಅವನ ಮಮ್ಮಿ ಅಂದರೆ ಮೃತದೇಹವನ್ನು ರಕ್ಷಿಸಿಟ್ಟರು.ಇಪ್ಪತೊಂದನೆಯ ಶತಮಾನದಲ್ಲಿ ಬೆಳಕಿಗೆ ಬಂತು.ಅದರ ಬಗ್ಗೆ ಕೆಲವು ಕಥೆಗಳಿವೆ. ಅದರ ಬಗ್ಗೆ ಇರುವ ಆಸಕ್ತಿ ಯಿಂದಾಗಿ ಇಂಗ್ಲಿಷ್ ಅಲ್ಲ. ಇಂಗ್ಲೀಷ್ ಮೂಲಕ ಬೇರೆ ಯಾವುದಾದರ ಮೂಲಕ ಸಾಮೀಪ್ಯ ಪಡೆಯುವಿಕೆ. ತೂತಂಕಮನ್ ಪ್ರಜಾವಾಣಿಯಲ್ಲಿ ಪ್ರಕಟವಾಯಿತು. ಅನೇಕ ಪ್ರತಿಕ್ರಿಯೆಗಳು. ಇದು ನನ್ನ ಕಾಸರಗೋಡಿನ ಅನುಭವ . ನನ್ನ ಮಿತ್ರರು ‘ ಇದೇನಿದು ? ಇದೆಲ್ಲ ? ಹೀಗೆಲ್ಲ ಬರಿತೀರಿ ಎಂದು ದನಿ ಎತ್ತಿದ್ದರು.ನಾನು ಯಾವಾಗಲೂ ಹೀಗೆ ಅಗೋಚರ(Alean) ಸಂಗತಿಗಳ ಬಗ್ಗೆ ಬರೆಯುತ್ತೇನೆ. ಇದೆಲ್ಲ ಯಾಕೆ ಬರೆಯುತ್ತೀರಿ ಎಂದರೆ ಏನು ಹೇಳುವುದು. ಈಗ, ಗೂಗಲ್ ಇದೆ. ಹುಡುಕಿದರೆ ತೂತಂಕಮನ್ ಯಾರು ಗೊತ್ತಾಗುತ್ತದೆ. ಗೊತ್ತಾಗಬೇಕು ಸಹ.ನಮ್ಮ ಸೀತೆ, ದ್ರೌಪದಿ ಅಲ್ಲದೆ ಬೇರೆ ಬೇರೆ ಸ್ತ್ರೀಯರು ಇದ್ದಾರಲ್ಲ ! ಅವರನ್ನು ತಲುಪಬೇಕು ಎನ್ನುವುದು ನನ್ನ ಹಂಬಲ ಮತ್ತು ಕುತೂಹಲ.ಹೀಗೆಲ್ಲ ಮಾಡಿದರೆ ನಮ್ಮ ಸಂಸ್ಕೃತಿ ಹಾಳಾಗುತ್ತದೆ ಎಂದು ಹೇಳುವವರೂ ಇದ್ದಾರೆ.ಅದು ಹೇಗೆ ಹಾಳಾಗುತ್ತದೆ ? ನನ್ನ ಓದಿನ ಬಗ್ಗೆ ಹೇಳುವದಾದರೆ – ನೀವು ಹೆಚ್ಚು ಓದುತ್ತಿದ್ದರೆ – ನಿಮ್ಮನ್ನು ಗುಮಾನಿಯಿಂದ ನೋಡುವವರು ಇದ್ದಾರೆ. ಕೆಲವರು ಗೌರವದಿಂದಲೂ ನೋಡುತ್ತಾರೆ ಆ ಮಾತು ಬಿಡಿ.ಓದುವದರಿಂದ ಸಂಸ್ಕೃತಿ ಹಾಳಾಗುತ್ತದೆ ಎಂದು ಇವರ ಅಭಿಪ್ರಾಯ. ಹಾಗೆ ನೋಡಿದರೆ ಹಾಳಾಗುವದಿಲ್ಲ. ಪ್ರಭಾವ ಉಂಟಾಗುತ್ತದೆ.ಈ ಮನುಷ್ಯ ನೋಡಿ ಪ್ರಭಾವದಿಂಲೇ ಬೆಳೆಯುವುದು.ಅದಿಲ್ಲದಿದ್ದರೆ ಬೆಳೆಯಲಾರ.ಸತ್ತ ಹಾಗೆ ಲೆಕ್ಕ. ಹೀಗಾಗಿ‌ ಈಜಿಪ್ಷಿಯನ್ ವಿರೋಧಾಭಾಸದ ಬಗ್ಗೆ ಟಿಪ್ಪಣಿ ಕೊಡುವದಿಲ್ಲ.ಓದುಗರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಆಶೆಯಿಂದ.

ನಾ:- ಆದರೂ ಸರ್, ಏನು ಬರೆಯಬೇಕು ಎಂದು ಎಲ್ಲರೂ ಯೋಚಿಸುವ ಸಂಕ್ರಮಣ ಕಾಲದಲ್ಲಿ ತಿರುಮಲೇಶರು ಕವಿತೆಗಳನ್ನು ಬರೆದರು. ಮೂನ್ ಮೂನ್ ಸೇನ್, ತಾರನಾಕದ ಚೌಕ, ಮಾಯಾವಿ.ಕೇರಳದ ಹುಡುಗಿಯರು,ಶ್ವಾನ ಮೀಮಾಂಸೆ ಇತ್ಯಾದಿ. ಅದೇನು ಸಾಮಾನ್ಯ ಸಂಗತಿ ಅಲ್ಲ. ಗಂಭೀರ ವಿಷಯಗಳನ್ನು ಸಾಮಾನ್ಯ ನಿರೂಪಣೆಗಳ ಮೂಲಕ ಹೇಳಿಬಿಡುತ್ತೀರಿ.ಎಂದು ನಾನೂ ಸೇರಿದಂತೆ ಅನೇಕರೂ ತಿಳಿದುಕೊಂಡಿದ್ದಾರುವ ಸಾಧ್ಯತೆಗಳಿವೆ. ಉದಾ: ನಿಮ್ಮ ಪೆಂಟಯ್ಯನ ಅಂಗಿ ಬಹಳ ಪ್ರಭಾವಿ ಕವಿತೆ .
“ವೈವಿಧ್ಯಮಯ ಎಂದರೆ ತಿರುಮಲೇಶ ! “. ಏನು ಹೇಳುವಿರಿ ?

ತಿ :- ಅದು ಸರಿ ಇರಬಹುದು.ನಾನು ಬರೆಯುತ್ತೇನೆ.ಆದರೆ ಬೇರೆಯವರೂ ಬರೆಯುತ್ತಾರೆಂದು ಹೇಗೆ ಹೇಳಲು ಸಾಧ್ಯ ? ಅವರವರ ಅಸಕ್ತಿ ಅವರಿಗಿದೆ.ಬರೆಯಲಿ.ಹಾಗೆ ಬರೆದಾಗ ವೈವಿಧ್ಯತೆ ಸಾಧ್ಯ. ನಾನು ನನ್ನ ರೀತೀಲಿ ಬರೆಯಬೇಕು.ಎಲ್ಲರೂ ಅಂತಹ ಹಂಬಲ‌ ಹೊಂದಿರುತ್ತಾರೆ. ಪ್ರಭಾವ ಬೇಕು. ಉದಾ: ಜಯಂತ ಕಾಯ್ಕಿಣಿ ಇದ್ದಾರೆ. ಅವರು ಅವರಿಗೆ ಹಿಡಿಸಿದ ಹಾಗೆ ಬರೀತಾರೆ. ಚನ್ನಾಗಿ ಇವೆ ವೈವಿಧ್ಯಮಯವಾಗಿಯೂ ಇರುತ್ತವೆ. ಹೊಸತನವೂ ಕಾಣಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದೃಷ್ಟವಶಾತ್, ಕನ್ನಡದಲ್ಲಿ ಇಂತಹ ಇನ್ನಷ್ಟು ಜನ ಇದ್ದಾರೆ. ಅನೇಕ ಸಾಧ್ಯತೆಗಳು ಕಾಣುತ್ತಿವೆ. ನಾನು ಮಾತ್ರ ನನಗೆ ಖುಶಿ ಬಂದಾಗ ಮಾತ್ರ ಬರೆಯುತ್ತೇನೆ.ಅದು‌ ನನ್ನ ನಿರ್ಧಾರವೂ ಹೌದು.

ನಾ: ಹೊಸತನದ ಅನ್ವೇಷಣೆಯ ಹಾದಿ ಅದು ಅಲ್ಲವೇ ಸರ್. ಬೇಂದ್ರೆಯವರು ಅಂತಹ ಅನೇಕ ಪ್ರಯೋಗಗಳನ್ನು ಮಾಡಿದರು ಅದು ತಿಳಿದ ಸಂಗತಿ. ನೀವು ಸಹ ಅಂತಹ ಪ್ರಯೋಗ ನಿರತರು

ತಿ: ನೋಡಿ ಕಿಶನ್ ರಾವ್. ಈಗ ಜಯಂತ ಕಾಯ್ಕಿಣಿ, ಎಂ.ಎಸ್ ಶ್ರೀರಾಮ, ವಿವೇಕ ಶಾನುಭೋಗ, ಕೇಶವ ಮಳಗಿ ಇವರ ಅಭಿಪ್ರಾಯ ಗಳನ್ನು ನೋಡುವಾಗ; ತಿರುಮಲೇಶರಲ್ಲಿ ಏನೋ ಇದೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ನಾನೂ ಒಪ್ಪಿದ್ದೇನೆ ಎಂದುಕೊಳ್ಳಿ.ಇವನೇನು ಮಹಾ ಎಂದುಕೊಂಡರೂ ಚಿಂತೆ ಇಲ್ಲ.

ನಾ: ಇವರ ಜತೆ ನಾನೂ ದನಿಗೂಡಿಸುತ್ತೇನೆ ಸರ್.ಏನು ಬರಿಬೇಕಾದರೂ ಉದಾಹರಣೆಗೆ, ಕುಮಾರವ್ಯಾಸ ಭಾರತದ ಮೇಲೆ ಅಂಕಣ ಬರಹದಲ್ಲಿ ತೊಡಗಿಸಿಕೊಂಡಾಗ, ಬರೆಯುತ್ತ ಬರೆಯುತ್ತ ಎಲ್ಲೋ ಒಂದು ಕಡೆ, ತಿರುಮಲೇಶರು ಪ್ರಭಾವ ಬೀರುತ್ತಿದ್ದಾರೆ ಎಂದು ಅನಿಸುತ್ತಲೇ ಇರುತ್ತದೆ.ಅದರಿಂದ ಉಂಟಾಗುವ ಖುಷಿಯ ಮಜಲೇ ಬೇರೆ.

ತಿ : ಅದು ನಿಜ ಇದ್ದಿರಬೇಕು.ಇಂದು ಯಾರು ಯಾವ ರೀತಿ ಪ್ರಭಾವ ಪಡೆದಿರಬಹುದು ಎಂದು ಹೇಳಲಿಕ್ಕಿಲ್ಲ.ಅದು ಕವಿತೆ ಇರಬಹುದು.ಇಡೀ ಸಾಲು ಇರಬಹುದು ಒಂದು ಚರಣ ಇರಬಹುದು.ಒಂದು ನುಡಿಗಟ್ಟೂ ಇರಬಹುದು. ಗೋಪಾಲ ಕೃಷ್ಣ ಅಡಿಗರ ನುಡಿಗಟ್ಟುಗಳನ್ನೇ ನೋಡಿ.’ವರ್ಧಮಾನ ‘ಚಂಡೆ ಮದ್ದಳೆ’ ಮುಂತಾದ ಅವರ ಕವಿತೆಗಳಲ್ಲಿ ನುಡಿಗಟ್ಟುಗಳು ತುಂಬಿವೆ.

ನಾ : ಸರ್ ಅಡಿಗರ ಪ್ರಭಾವ ನಿಮ್ಮ ಮೇಲೆ ಇತ್ತು. ಇನ್ನೂ ಇದೆಯಾ ? ಅದರಿಂದ ನೀವೀಗ ಹೊರಬಂದಿರಬೇಕಲ್ಲವೇ ?

ತಿ : ಇತ್ತು. ಅದು ನಿಜ. ಬಹಳ ಇದೆ ಇನ್ನೂ ಇದೆ. ಇಲ್ಲ ಎನ್ನಲಾರೆ.ಆದರೆ ಬಹಳ ಪ್ರಯತ್ನದಿಂದ ಹೊರ ಬಂದಿದ್ದೇನೆ ಎನಿಸುತ್ತಿದೆ.

ನಾ : ಸರ್ ಈಗ ಒಂದು ಮಹತ್ವಪೂರ್ಣ ಪ್ರಶ್ನೆ ಗೆ ಬರುತ್ತಿದ್ದೇನೆ. ನಿಮಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಅಕ್ಷಯಕಾವ್ಯದ ಬಗ್ಗೆ . ಅದೊಂದು ಮಹಾಕಾವ್ಯ ಎಂದೇ ಅಭಿಪ್ರಾಯ ಇದೆ. ಸ್ವಲ್ಪ ವಿವರವಾಗಿ ಹೇಳಬಹುದೆ ?

ತಿ : ನಾನು ಪ್ರಾಯೋಗಿಕವಾಗಿ ಎರಡು ನೀಳ್ಗವಿತೆಗಳನ್ನು ಬರೆದೆ. ಒಂದು ‘ಅಕ್ಷಯ ಕಾವ್ಯ’ ಇನ್ನೊಂದು ‘ ಅವ್ಯಯ ಕಾವ್ಯ’ . ಅಕ್ಷಯ ಕಾವ್ಯ ಬರೆದಾಗ ಜನ ಏನು ಹೇಳಬಹುದು ಎನ್ನುವ ಕುತೂಹಲ ಇತ್ತು.ಜನ ಗಮನಿಸಿಲ್ಲ ಅಥವಾ ಆಳವಾಗಿ,ಹದವಾಗಿ ಗಮನಿಸಿಲ್ಲ ಎನಿಸಿದ್ದು ಇದೆ.ಎರಡು ನೂರು ಚಿಲ್ಲರೆ ಪುಟಗಳು ! ಅಬ್ಬ ! ಯಾರು ಓದಬೇಕು ಎಂದು ಬಿಟ್ಟಿರಲೂ ಬಹುದು.ಸಣ್ಣ ಸಣ್ಣವು.ಜನರಿಗೆ,ಇತ್ತೀಚಿಗೆ, ಮೊಬೈಲ್ ಫೋನಗಳಲ್ಲಿ ಬರುವ ಕವಿತೆಗಳು ಸಾಕು.ಇದರಲ್ಲಿ ಯಾವುದು ಒಂದೇ ಎನ್ನುವುದು ಇಲ್ಲ. ಈ ಐಡಿಯಾ ಯಾವಾಗ ಬಂತು ಅಂದರೆ, ಇಂಗ್ಲೀಷ್ ನಲ್ಲಿ ಎಝ್ರಾ ಪೌಂಡ್ ಇದ್ದಾನಲ್ಲ. ಟಿ.ಎಸ್.ಇಲಿಯಟ್ ನ ಗುರು.ಕ್ಯಾಂಟೋಸಗಳನ್ನು ಬರೆದ. ಅವುಗಳನ್ನು ಖಂಡಗಳು ಅಥವಾ ಖಾಂಡಗಳು ಎಂದು ಏನು ಬೇಕಾದರೂ ಹೇಳಿ. ಸುಮಾರು ನೂರಕ್ಕೂ ಹೆಚ್ಚು ಕ್ಯಾಂಟೋಗಳನ್ನು ಬರೆದಿದ್ದಾನೆ. ಸುದೀರ್ಘ ಅವಧಿಯಲ್ಲಿ ಬರೆದಿದ್ದಾನೆ. ಬರಿತಾ ಇದ್ದ.ಎಲ್ಲವೂ ಪುಸ್ತಕ ರೂಪದಲ್ಲಿ ಬಂದಿವೆ.ಅದರಲ್ಲಿ ಹಾಗೆಯೇ.ಒಂದು ಥೀಮು ಇಲ್ಲ. ಏನೂ ಇಲ್ಲ. ಎಲ್ಲಾ ವರ್ಣಮಯವಾಗಿ ವೈವಿಧ್ಯಮಯ ಇರುವಂತಹ ಕಾವ್ಯ.ಎಝ್ರಾ ಪೌಂಡ್‌ ಗೆ ಈ ಕ್ಯಾಂಟೋಸ್ ಗಳ ಕುರಿತಂತೆ ಬಹಳಷ್ಟ ಅ್ಯಂಬಿಷನ್ ಇತ್ತು. ಆದರೆ ಅವನ ಈ ಕ್ಯಾಂಟೋಸ್ಗಳನ್ನು ಯಾರೂ ಗುರುತಿಸಲಿಲ್ಲ. ಅವನಿಗೆ ಬಹಳ ಬೇಜಾರು ಇತ್ತು. ನನ್ನ ಟ್ಯಾಲೆಂಟ್‌ ಪದ ಇದರಲ್ಲಿ ಹಾಳು ಮಾಡಿದೆ ಎಂದು ಅವನು ಒಂದೆಡೆ ಹೇಳುತ್ತಾನೆ. ವಿಚಿತ್ರ ನೋಡಿ. ಇದೆಲ್ಲ ಸಂಗತಿಗಳು ನನಗೆ ಆಕರ್ಷಣೀಯ ಎನಿಸಿತು.’ ಹಾಳಾಗಿ ಹೋಗುವದಾದರೆ ಹೀಗೆ ಹಾಳಾಗಿ ಹೋಗಲಿ ‘!! ಕವನ ಎಂದರೆ ಒಂದು ದೊಡ್ಡ ಕೋಟೆಯ ಹಾಗೆ. ಚೈನಾ ಗೋಡೆಯ ಹಾಗೆ. ಅಲ್ಲಲ್ಲಿ ಮುರಿದದ್ದು ಮತ್ತೆ ಕಟ್ಟಿದ್ದು ಇದು ಎಂದು ಕೊಂಡ, ಒಂದು ಪ್ರಯತ್ನ ಇದು. ‘ಅಕ್ಷಯ ಕಾವ್ಯ’ ಬರೆದಾದ ಹಲವು ವರುಷಗಳ ನಂತರ ಅವ್ಯಯ ಕಾವ್ಯ ಬರೆದೆ. ಈ ಮಧ್ಯಂತರದಲ್ಲಿ ‘ಅರಬ್ಬಿ ‘ ಕವನಸಂಕಲನವೂ ಬಂದಿದೆ.ಇನ್ನೂ ಬರೆಯಬಹುದಿತ್ತು‌.ಆದರೆ ಚೈತನ್ಯ ಇರಲಿಲ್ಲ. ಬೆಟ್ಟ ಕಟ್ಟುವ ಕೆಲಸ ಅದು. Alexis de Tocqueville ಎನ್ನುವ ಫ್ರೆಂಚ ಬರಹಗಾರ , ಚರಿತ್ರಕಾರ. ಅವನ ಒಂದು ಕೃತಿ ‘ಡೆಮಾಕ್ರಸಿ ಇನ್ ಅಮೇರಿಕಾ’ ಎರಡು ಸಂಪುಟಗಳು. ಅದರಲ್ಲಿ ಎರಡು ಅಧ್ಯಾಯಗಳು ಕಾವ್ಯದ ಕುರಿತು ಇವೆ. ಆಧುನಿಕ ಕಾವ್ಯ/ಕವಿತೆ, ಏನೆಲ್ಲ ಸಾಧ್ಯತೆಗಳನ್ನು ಹೊಂದಿರುತ್ತದೆ ಎಂದು ಅವನು ವಿವರಿಸಿದ್ದಾನೆ.ಅವನ ಪ್ರಕಾರ ನಾಯಕ- ನಾಯಕಿ,
ದೊಡ್ಡ ಸಂಗತಿಗಳು, ಇನ್ನಿತರ ಯಾವ ಪರಿಕರಳೇನೂ ಇಲ್ಲ. ಎಲ್ಲಾ ಸಾಮಾನ್ಯ ಸಂಗತಿಗಳೇ.ಇವುಗಳ ಬಗ್ಗೆ ಕಾವ್ಯ ಬರೆದರೆ ಹೇಗಿರುತ್ತೆ ? ಅದೇ ಆಧುನಿಕ‌ ಕಾವ್ಯ. ಈ ಎಲ್ಲ ಹಿನ್ನೆಲೆಯನ್ನು ಇಟ್ಟುಕೊಂಡು ನಿಮಗೆ ಹೇಳುತ್ತಿದ್ದೇನೆ.ನಾನು ಕೂಡ ಆರಂಭದಲ್ಲಿ ಬಿಡಿ ಬಿಡಿ ಪದ್ಯಗಳನ್ನು ಬರೆದದ್ದು.ಆಮೇಲೆ ಜೋಡಿಸಿದ್ದು.ಹೀಗೆ ಜೋಡಿಸಿದಕ್ಕೆ ಯಾವ ಕ್ತಮಬದ್ಧತೆ ಇಲ್ಲ.ಮನಸ್ಸಿಗೆ ಬಂದ ಹಾಗೆ, ಖುಷಿ ಕಂಡಹಾಗೆ ಜೋಡಿಸಿದ್ದು.(Random)ಯಾಚ್ಛಿದ್ರತೆ. ಇದನ್ನೆಲ್ಲ ಕೂಡಿಹಾಕಿದ್ದು. ಇದನ್ನು ಎಲ್ಲಿಂದ ಬೇಕಾದರೂ ಓದಬಹುದು. ಕೊನೆಯಿಂದ ಓದಬಹುದು.ಮಧ್ಯದ ಪುಟಗಳಿಂದ ಓದಬಹುದು.ಆರಂಭದಿಂದಲೂ ಓದಬಹುದು.ನಿಮಗೆ ನಷ್ಟ ಇಲ್ಲ. ಲಾಭವೂ ಇಲ್ಲ.ಓದುತ್ತಾರೆನ್ನುವುದು ಮುಖ್ಯ ಅಲ್ಲ.ಯಾರು ಓದುತ್ತಾರೆ, ಅದರಿಂದ ಏನು ಕಂಡುಕೊಳ್ಳುತ್ತಾರೆ ಎನ್ನುವುದು ಮುಖ್ಯ. ಒಂದು‌ಮಾತು ಕಿಶನ್ ರಾವ್, ” ಕವಿ ಅಥವಾ ಲೇಖಕ ಓದುಗರನ್ನು ಹುಡುಕಿಕೊಂಡು ಹೋಗಬಾರದು.ಓದುಗರು ಕವಿಯನ್ನು/ಲೇಖಕನನ್ನು ಹುಡುಕಿಕೊಂಡು ಹೋಗಬೇಕು ಅದು ನನ್ನ ನಿರೀಕ್ಷೆ.ಅದು ಇಂದು ಅಲ್ಲ ವಾದರೆ ನಾಳೆಯಾದರೂ ಆದೀತು.ಬಿಡಿ ಬಿಡಿ.
ಕವಿತೆ ತೋಚಿದಾಗ ಬರಿತೀನಿ.ಕೆಲವೊಮ್ಮೆ ಥೀಮುಗಳು, ಸಾಲುಗಳು,ಶೀರ್ಷಿಕೆಗಳು ರಿಪೀಟು ಆದದ್ದು ಇದೆ.ಕವಿತೆಗಳು ಆಗಲಿಕ್ಕಿಲ್ಲ.ಥೀಮು ರಿಪೀಟ್ ಆಗುವುದು ಇದೆ. ಇದನ್ನೆಲ್ಲ ನಾನು ಮನುಷ್ಯತ್ವ ಅಥವಾ ಮನುಷ್ಯರು ಇರೋದೇ ಹೀಗೆ ಎಂದು ತಿಳಿದು ಕೊಂಡಿದ್ದೇನೆ.ಸಾಹಿತ್ಯ ಕೂಡ ಹೀಗೆ ಇರುತ್ತದೆ.ಎಷ್ಟೊಂದು ಆಕಸ್ಮಿಕಗಳು, ಎಷ್ಟೊಂದು ವಿಸ್ಮಯಗಳು ಇವೆ ಎಂದರೆ ಆಶ್ಚರ್ಯ ಆಗುತ್ತದೆ.ಹಸ್ತಪ್ರತಿಗಳನ್ನು ಕಳೆದುಕೊಂಡವರು ಇದ್ದಾರೆ.ಮತ್ತೆ ಪುನಃ ಕುಳಿತು ಬರೆಯುವಾಗ ಹೊಸದೇನೋ ಆಗಿಬಿಡುತ್ತದೆ.ಇನ್ನೇನಾದರು ಬರಿತಾ ಇರುವಾಗ ತಲೆ ನೋವು ಬರಬಹುದು(ನಗು) ಇದೊಂದು ರೀತಿಯ ಅಘಾಧತೆ.

ನಾ:- ಸರ್ ನೀವು ಹೈದರಾಬಾದ್ ನಲ್ಲಿ ಇರುವುದರಿಂದ, ನೀವು ನಿಮ್ಮ ಹೈದರಾಬಾದಿನ ಕವಿತೆಗಳು,ಆಬಿದ ರಸ್ತೆ,ತಾರನಾಕಾದ ಚೌಕ,ಭೂಲಚಂದನ ಲೈಟುಗಳು, ಅಲ್ಬುಕರ್ಕ,ಪೆಂಟಯ್ಯನ ಅಂಗಿ ಬಹಳಷ್ಟು ಚರ್ಚಿತವಾದ,ಜಿಜ್ಞಾಸೆಗೆ ಒಳಗಾದ ಕವಿತೆಗಳು ಎಂದು ನನ್ನ ಅನಿಸಿಕೆ.ನಾನು ಬೇರೆ ಬೇರೆ ಊರು,ಸಾಹಿತ್ಯ ಕಾರ್ಯಕ್ರಮ, ವಿಚಾರಸಂಕಿರಣಗಳಿಗೆ ಹೋದಾಗೆಲ್ಲ ಹೈದರಾಬಾದ್ ಪದ್ಯಗಳ ಮಾತು ಇದ್ದೇ ಇರುತ್ತದೆ.
ನಿಮಗೆ ಇವುಗಳು ಬರೆಯಲು ಕಾರಣ ಪ್ರಾಂತೀಯತೆಯ ಪ್ರಭಾವ, ನೆಲೆನಿಂತ ಪ್ರದೇಶದ ಮೇಲಿನ ಅಭಿಮಾನ ಅಥವಾ………?

ತಿ:-ನೋಡಿ ಕಿಶನ್ ರಾವ್, ನಾನು ಇಲ್ಲಿ ಹುಟ್ಟಿ ಬೆಳೆದವನಲ್ಲ! ನೀವೂ ಹುಟ್ಟಿ ಬೆಳೆದವರಲ್ಲ! ನಲ್ವತ್ತು ವರುಷಗಳ ಹೈದರಾಬಾದ್ ನೆನಪಿನಲ್ಲಿ ಇದೆ.ಎಂದರೆ,1975 ರಲ್ಲಿ ಸಂಶೋಧನೆಗೆಂದು ಇಲ್ಲಿ ಬಂದೆ.ಈಗ ಅದು ಹಾಗಿಲ್ಲ. ಬದಲಾಗಿದೆ. ಇಲ್ಲಿಯೇ ಕೆಲಸ ಸಿಕ್ಕಿತು. ಭಾಷಾ ವಿಜ್ಞಾನ ವಿಭಾಗ ಸೇರಿದೆ. ಆಗ ಇಷ್ಟು ಬೆಳೆದಿರಲಿಲ್ಲ. ಜನಸಂಖ್ಯೆ ಕಡಿಮೆ ಇತ್ತು. ವಾಹನಗಳು ಕಡಿಮೆ . ನಾನು ಆ ಕಾಸರಗೋಡಿನ ವ್ಯಕ್ತಿ. ಸಹ್ಯಾದ್ರಿ ಬೆಟ್ಟದ ಕೆಳಗಿನ ಪ್ರದೇಶದ ಕರಾವಳಿಯ ವ್ಯಕ್ತಿ.ಏರು ತಗ್ಗುಗಳ,ಮೂರು ಬೆಟ್ಟ ಒಂದು ಕಣಿವೆ.ಎಲ್ಲಿ ಹೋಗ ಬೇಕಾದರೂ ಗುಡ್ಡ ದಾಟಬೇಕು.ಹತ್ತಬೇಕು, ಇಳಿಯಬೇಕು.ಬೆಂಗಳೂರು ಮೈಸೂರು ನನಗೆ ಅಪರಿಚಿತ.ಕೆಲವು ವ್ಯಕ್ತಿ ಮತ್ತು ರಸ್ತೆಗಳ ಪರಿಚಯ ಅಷ್ಟೇ.1975 ರಲ್ಲಿ ಹೈದರಾಬಾದ್ ಗೆ, ಬಂದಾಗ ಇದು ದಕ್ಷಿಣದ ಮುಖಜ ಭೂಮಿ /ದಕ್ಖಣಿ ಪೀಠ ಭೂಮಿ.ಆಶ್ಚರ್ಯಕರವಾದ ಲ್ಯಾಂಡ್ ಸ್ಕೇಪ್. ನಾನು ಪುಸ್ತಕದಲ್ಲಿ ಓದಿರದೇ ಇದ್ದರೂ ನಿಜ ಜೀವನದಲ್ಲಿ ಕಂಡು ಅನುಭವಿಸಿದ್ದು.ಇದು ಹೊಸತು. ಇದೊಂದು ರೀತಿಯ(ಶಬ್ದ ಸಿಗುತ್ತಿಲ್ಲ) Reordered or disoriented .ದಿಕ್ಕು ತಪ್ಪಿದ ಹಾಗೆ ಅನಿಸಿದರೂ ಒಂದು ರೀತಿಯ ಸುಖದ ಭಾವನೆ ಇತ್ತು.ಬೇರೆಯದೇ ಆದ ಸ್ಥಳ. ನನ್ನ ‘ಮುಖಾಮುಖಿ’ ಕವಿತಾ ಸಂಕಲನ ಬರೆದದ್ದು ಇಲ್ಲಿಯೆ.ಅದರಲ್ಲಿ ಮೂರು ಭಾಗಗಳಿವೆ. ಒಂದು ಹಳ್ಳಿ – ಒಂದು ಪೇಟೆ – ಒಂದು ಪಟ್ಟಣ. ಪಟ್ಟಣದ ಕವಿತೆಗಳು ಹೈದರಾಬಾದಿನ ಕವಿತೆಗಳು.ನೀವು ಅಡಿಗರಿಂದ ಬಿಡುಗಡೆ ಹೊಂದಿರುವ ಕುರಿತು ಕೇಳಿದಿರಲ್ಲ! ನಾನು ಈ ಮುಖಾಮುಖಿಯ ಮೂಲಕ ಬಿಡುಗಡೆಯನ್ನು ಅನುಭವಿಸಿದೆ. ಮೂರನೆಯ ಭಾಗದ ಹೆಚ್ಚಿನ ಕವಿತೆಗಳು ಹೈದರಾಬಾದ್ ಗೆ ಸೇರಿದ್ದು. ವ್ಯಕ್ತಿಗಳು,ರಸ್ತೆಗಳು.ನನಗನಿಸುತ್ತದೆ, ಮನುಷ್ಯ ಸ್ಥಳ ಬದಲಾಯಿಸಿದಾಗ, ಹೊಸ ಮನುಷ್ಯ ರ ಸಂಪರ್ಕ ಬಂದಾಗ, ವ್ಯಕ್ತಿಯ ದೃಷ್ಟಿಕೋನದ ಮೇಲೆ ಪ್ರಭಾವ ಬೀರುತ್ತದೆ. ಆ ಪ್ರಭಾವ ನೀವು ಇಲ್ಲಿ ಕಾಣುವಿರಿ.ಇವೆಲ್ಲ ನಾನು ಓಡಾಡಿದ ಸ್ಥಳಗಳು.ದೂರದ ಜಾಗಗಳಿಗೆ ಸೈಕಲ್ ರಿಕ್ಷಾದ ಮೇಲೆ ಹೋಗುತ್ತಿದ್ದೆ ಆಬಿಡ್ಸ,ಸಿಕಂದರಾಬಾದ್ ಗಳಿಗೆ ನಡೆದುಕೊಂಡು ಹೋಗುತ್ತಿದ್ದೆ. ಪುಸ್ತಕಗಳನ್ನು ಹುಡುಕಿ ಕೊಂಡು. ಭಾನುವಾರ ಅಲ್ಲಿ ಬರೀ ಸೆಕೆಂಡ್ ಹ್ಯಾಂಡ್ ಪುಸ್ತಕಗಳದೇ ದರ್ಬಾರ !ಅಂತಹ ಪುಸ್ತಕಗಳು ನನ್ನ ಸೆಲ್ಫನಲ್ಲಿ ಇವೆ. ಹೀಗಾಗಿ ವಸ್ತುಗಳ ಕುರಿತಾದ ನನ್ನ ದೃಷ್ಟಿಕೋನ ಸಿದ್ಧ ಇತ್ತು. ಇಲ್ಲಿ ನಾನು ಹೊಸ-ಬಿಡುಗಣ್ಣಿನಿಂದ ನೋಡಲು ಸಾಧ್ಯವಾಯಿತು ಎಂದು ಅನಿಸುತ್ತದೆ.ಹೊಸ ದೃಷ್ಟಿಕೋನ,ನನಗಿರುವ ಅಸಕ್ತಿ.
ನಾ :- ಸರ್ ನಿಮ್ಮ ಕವನ ಸಂಕಲನಗಳಲ್ಲಿ ‘ಪಾಪಿಯೂ’ ಕಥನಕವನಗಳ ಸಾಲಿಗೆ ಸೇರುತ್ತದೆ.ಅದು ಯಾಕೋ ನಿರೀಕ್ಷಿತ/ಆಪೇಕ್ಷಿತ ಓದುಗರನ್ನು ತಲುಪಲಿಲ್ಲ ಎಂದೆನಿಸಿತು ಯಾಕೆ ?(ತಿರುಮಲೇಶರ ನಗು) ಯಾರೂ ಓದಿಲ್ಲ ಎಂದು ಯಾರಾದರೂ ಹೇಳಿದರೆ ನನಗೆ ಕೋಪ ಬರುವದಿದೆ. ಓದುಗರ ಒಂದು ಒಳ್ಳೆಯ ಓದಿನಿಂದ ವಂಚಿತರಾಗಿದ್ದಾರೆ ಎನ್ನಬಹುದು.’ಪಾಪಿಯು ‘ ವಿನ ಬಗೆಗೂ ಒಂದೆರಡು ಮಾತು ಹೇಳಬಹುದೇ ಸರ್?

ತಿ :- ಆದುನಿಕ ಶೈಲಿಯಲ್ಲಿ ಕಥನ ಕವನಗಳನ್ನು ಕವಿತೆ ಯಾಗಿ ಹೇಗೆ ಬರೆಯಲು ಸಾಧ್ಯ ಎನ್ನುವುದು ಒಂದು ಪ್ರಶ್ನೆ. ಅದಕ್ಕೆ ನಾನು ಇವುಗಳ ಮೂಲಕ ಹೇಳಲು ಪ್ರಯತ್ನಿಸಿದೆ. ಬುದ್ಧನ ಕವಿತೆಗಳು, ಬೋರೆಸ್ ನ ಕಥೆಗಳು.

ನಾ :- ಚೇಗುವೇರಾ ?

ತಿ :- ಚೇಗುವೇರಾನ ಬಗ್ಗೆ ಬಹಳ ಸರಳವಾಗಿ ನನ್ನದೇ ರೀತಿಯಲ್ಲಿ ಬರೆಯಲಿಕ್ಕೆ ಪ್ರಯತ್ನಿಸಿದ್ದೆ. ಸೋ ನೀವು ಹೇಳಿದ ಹಾಗೆ, ಯಾಕೋ ಯಾರೂ ನೋಡಲೇ ಇಲ್ಲ.ಅದಕ್ಕೆ ಹಲ ಕೆಲವು ಕಾರಣಗಳಿರುತ್ತವೆ.ಅವರಿಗೆ ಅವರದೇ ಆದ, ಚಾರಿತ್ರಿಕ ಕಾರಣಗಳಿರುತ್ತವೆ.ನನಗಿಂತ ಚನ್ನಾಗಿ ಬರೆದವರಿದ್ದಾರೆ.ಸು.ರಂ.ಎಕ್ಕುಂಡಿ ಬರೆದಿದ್ದಾರೆ.

ನಾ:- ಓದಿದ್ದೇನೆ ಸರ್. ಅವು ಏನಿದ್ದರೂ ನವೋದಯ ಕಾಲಘಟ್ಟದಲ್ಲಿ ಬರೆದ ಕಥನಕವನಗಳು .ನವ್ಯ- ನವ್ಯೋತ್ತರ ದ ಸಂಧಿ ಕಾಲದಲ್ಲಿ, ಆಧುನಿಕ ಕಥನ ಕವನಗಳನ್ನು ಬರೆದ ಕವಿಗಳಲ್ಲಿ ನೀವೇ ‌ಮೊದಲಿಗರು ಎಂದುಕೊಳ್ಳುತ್ತೇನೆ. ಅಡಿಗರು, ನೀವು. ಈಗ ಬೇಂದ್ರೆಯವರನ್ನೇ ನೋಡಿ.ನವೋದಯದಲ್ಲಿದ್ದೂ, ನವೋದಯದಿಂದ ಕಳಚಿಕೊಂಡು ಹೊಸ ಹೊಸ ಪ್ರಯೋಗ ಮಾಡಿದರು.

ತಿ:- ಪ್ರಯೋಗಾತ್ಮಕ ಕವಿತೆಗಳು ಯಶಸ್ವಿ ಆಗದೇ ಇರುವ ಸಾಧ್ಯತೆಗಳನ್ನು ಹೊಂದಿರುತ್ತವೆ. ಯಶಸ್ವಿ ಆಗಿಲ್ಲ ಎಂದರೆ, ಜನ ನೋಡದೇ ಇರೋದು.ಯಾಕೆಂದರೆ, ಎಕ್ಸಪೆರಿಮೆಂಟಲ್ ಸಂಗತಿಗಳು, ಓದುಗರಿಗೆ ಕಸಿವಿಸಿ ಉಂಟು ಮಾಡುತ್ತವೆ.’ಅರೆ ಏನಿದು ಏನೇನೋ ಬರೆದಿದ್ದಾರೆ,’ ‘ಓಹ್ ಇದು ನನಗೆ ಗೊತ್ತಿಲ್ಲದ ಸಂಗತಿ ಇದು.’ ಹೀಗೆ ಎರಡು ಮನೋಭಾವಗಳು ಉಂಟಾಗಲು ಸಾಧ್ಯ. ತಿರಸ್ಕೃತ ಮತ್ತು ಕುತೂಹಲ ಗಳನ್ನು ನಿಶ್ಚಯಿಸುವರು ಯಾರು ? ಏನು ?

ನಾ :- ಸರ,ನಿಮ್ಮ, ಕವಿತೆಗಳಲ್ಲಿ,ಲೇಖನಗಳಲ್ಲಿ, ಅಂಕಣಬರಹಗಳಲ್ಲಿ ಒಂದಿಲ್ಲೊಂದು ಒಂದು ವಿಧದಲ್ಲಿ ಬುದ್ಧ ಕಾಣಿಸಿಯೇ ಇರುತ್ತಾನೆ.ನಿಮಗೆ ಈ ಬುದ್ಧ ಸ್ಫೂರ್ತಿಯ ಸೆಲೆಯೇ ?

ತಿ :- ಒಂದು ದೃಷ್ಟಿಯಿಂದ ನಿಜ.ಬುದ್ಧ-ಮಹಾವೀರರು,ಶಾಂತಿ, ತ್ಯಾಗ, ನಿಸ್ವಾರ್ಥತೆಯ, ಪ್ರತೀಕಗಳು.ಇಂತಹ ಸಂಗತಿಗಳನ್ನು ಪ್ರತಿಪಾದಿಸುವ ಪ್ರವಾದಿಗಳು ಇಷ್ಟ. ಆದರೆ ನಾನು,ಅದನ್ನು ಎಂದೂ ‘ಇಸಂ’ ಆಗಿ ಸ್ವೀಕರಿಸಲಿಲ್ಲ.

ನಾ:- ಸ್ವೀಕರಿಸಲಿಲ್ಲ ಸರ್. ಆದರೆ ಒಲವು……

ತಿ :- ಹೌದು ಒಲವು ಜಾಸ್ತಿ.

ನಾ:- ಸರ್ ನಿಮ್ಮ ಎಲ್ಲಾ ಗದ್ಯ ಪ್ರಕಾರಗಳಲ್ಲಿ,ಹೆಚ್ಚಾಗಿ ವೈಚಾರಿಕತೆಗೆ ಪ್ರಾಧಾನ್ಯ.ಆಳ- ನಿರಾಳ,ವ್ಯಕ್ತಿ ಮತ್ತು ಪರಂಪರೆ, ವಾಚನಶಾಲೆ,ವಾಗರ್ಥವಿಲಾಸ,ನಮ್ಮ ಕನ್ನಡ,ಸಮೃದ್ಧ ಕನ್ನಡ ಹೀಗೆ ಯಾವುದೇ ಪುಸ್ತಕ ತೆಗೆದುಕೊಂಡರೂ, ಭಾಷಾಭಿಮಾನದ ಚೌಕಟ್ಟನ್ನು ಮೀರಿ ನಿಲ್ಲುತ್ತವೆ.ಉದಾಹರಣೆಗೆ ಹೇಳುವದಾದರೆ,ಅದರಲ್ಲಿ ಒಂದೆಡೆ ಹೇಳುತ್ತೀರಿ ‘ಛಂದವನ್ನು ಮುರಿಯುತ್ತ, ಛಂದೋಗಂಧ ಸುರಿಸುವುದು ‘ ಅದು ಪರಿಣಾಮಕಾರಿಯಾದ ಹೇಳಿಕೆ.ಮಾರ್ಗಸೂಚಿ. ಭಾಷಾ ವಿದ್ವಾಂಸರು ತಾವು ಈ ದೃಷ್ಟಿಯಿಂದ ಏನನ್ನಾದರೂ ಹೇಳಬಹುದೆ ? ಒಂದು ರೀತಿ ಯಲ್ಲಿ ಹೊಸ ಛಂದಸ್ಸಿನ ಅವಿಷ್ಕಾರವೇ ?

ತಿ:- ನನಗೆ ಇದು ಶಬ್ದಾಲಂಕಾರ ಎಂದು ಹೇಳುತ್ತಾರಲ್ಲ ಅದು.ಪ್ರಾಸ,ಲಯ,ಇವೆಲ್ಲ ಶಬ್ದಾಲಂಕಾರಗಳು. ಇವುಗಳನ್ನು ಮೀರಿ ನಿಂತ, ಅರ್ಥಾಲಂಕಾರಕ್ಕೆ ಸಮೀಪ ಇರುವ ಒಂದು ಲಯವೂ ಇರುತ್ತದೆ.ಭಾಷೆಗೆ ಒಂದು ಅರ್ಥವೂ ಇರುತ್ತದೆ.ಅದು ಮುಂದೆ ತೆಗೆದುಕೊಂಡು ಹೋಗುವುದು ಎಂದರೆ ಓದಿನ ಜೊತೆಗೆ ಹೊಗುವುದು. ಅದನ್ನು‌ ಏನೆಂದು ಹೇಳುವುದು ? ‘ ಗದ್ಯ ಲಯ ‘ ಎಂದು ಕರೆಯಬಹುದು. ಅದು ಸುಲಭವಾಗಿ ಗ್ರಹಿಕೆಗೆ ದಕ್ಕಲಾರದು ಅದನ್ನು ನಮ್ಮ ಓದು ನಿರ್ದರಿಸಬೇಕು.ಓದು ಅರ್ಥ ಸ್ಪಂದನೆ ಹೊಂದಿದ್ದರೆ,ಹೊಸ ಸಾಧ್ಯತೆ ಉಂಟುಮಾಡುತ್ತದೆ.ಅದಕ್ಕಿಂತ ಹೆಚ್ಚಿಗೆ ಯೊಚಿಸಲು ಸಾಧ್ಯವಿಲ್ಲ.ಅನುಭವಕ್ಕೆ ಬರುವುದು ಅದು.ಟಿ.ಎಸ್ ಎಲಿಯಟ್ ಹೇಳುವಹಾಗೆ, Poetry should be effective before it is understood. ಆ ಅರ್ಥದಲ್ಲಿ ನಾನು ಹೇಳತೇನೆ. ‘ ಕವಿತೆ ಅರ್ಥವಾಗುವ ಮೊದಲು ನಮ್ಮನ್ನು‌ ತಟ್ಟಬೇಕು’ ಆ ಲಯದ ಬಗ್ಗೆ ನಾನು ಹೇಳಿದ್ದು.

ನಾ:- ಬಿಡಿಸಿ ಹೇಳಿದಿರಿ ಮನತಟ್ಟಿತು.

ತಿ :- ನನ್ನ ಮಟ್ಟಿಗೆ ಎರಡೂ ಒಂದರ ಜೊತೆ ಒಂದು ಹೋಗುತ್ತವೆ.ಅಲ್ಲದೆ ಕವಿತೆ ಬರೆಯವಾಗ ಇದನ್ನೆಲ್ಲ ಎದುರು ಇಟ್ಟುಕೊಂಡು ಮಾಡುವದಲ್ಲ. ಇರುತ್ತೆ ಆಗಲಿ ಪ್ರಜ್ಞಾ ಪುರ್ವಕವಾಗಿ ಇರುವದಿಲ್ಲ.

ನಾ:- ಅರ್ತಪೂರ್ಣ ಮಾತು ಸರ್. ಕಾವ್ಯ/ಕವಿತೆ ಮೊದಲು, ಆಮೇಲೆ ಛಂದಸ್ಸು /ಮೀಮಾಂಸೆ. ಬರೆದಾದ ಮೇಲೆ ಈ ಕವಿತೆಯಲ್ಲಿ ಯಾವ ಛಂದಸ್ಸು, ಯಾವ ಲಯ ಯಾವ ಪ್ರಾಸ ಮುಂತಾದ ಸಂಗತಿಗಳನ್ನು ಛಂದಸ್ಸು ವಿದ್ವಾಂಸಕಾರರು ಕಂಡುಕೊಳ್ಳಬೇಕು.ಅಂತಹ ಸಾದ್ಯತೆಗಳು, ನಿಮ್ಮ ಕವಿತೆಗಳನ್ನು ನೋಡುವಾಗಸಾಕಷ್ಟು ಇವೆ. ಅಲ್ಲವೇ ?ಪದ ಯಾವುದೇ ಕಟ್ಟುಪಾಡಿಗೆ ಒಳಗಾಗದೆ ಅಂದರೆ,ಸಾಲು ಮಿತಿ, ಇಷ್ಟೇ ಅಕ್ಷರಗಳು, ಇದೇ ಪ್ರಾಸ ಎಂದು ನೀವು ಯೊಚಿಸಿರಲಿಕ್ಕಿಲ್ಲ ಎನಿಸಿತು.ನಾನು ಸರಿಯೇ ?

ತಿ:- ಹೌದು . ಪೂರ್ವಭಾವಿಯಾಗಿ ಅಷ್ಟೊಂದು ಆಲೋಚನೆ ಇರುವದಿಲ್ಲ. ಕವಿತೆಯ ವಸ್ತು ಅದರ ಧ್ಯಾನ(Meditate) ಆಮ್ಯಾಲೆ ಒಂದು ಸಾಲು ಅರ್ಥ, ಸ್ಫುರಿಸುತ್ತದೆ.ಅದನ್ನು ಟಿಪ್ಪಣಿ ಮಾಡದೇ ಇದ್ದರೆ ಅದು ಹೋಗಿಯೇ ಬಿಡುವ ಸಾಧ್ಯತೆಗಳಿರುತ್ತವೆ.ಚಿತ್ರ ಕಲೆಯಲ್ಲಿ ಚಿತ್ರಗಾರ ಅತಿಯಾಗಿ ಬಣ್ಣಗಳನ್ನು ಬಳಸಿದರೆ ಚಿತ್ರವೇ ಹಾಳಾಗಿ ಹೋಗುತ್ತದೆ. ಹದ ಬೇಕು. ಅದು ಅನುಭವದಿಂದ ಬರುತ್ತದೆ. ಇಲ್ಲವಾದರೆ Painting never complete. ಪದ್ಯವೂ ಹಾಗೆ.ಎಲ್ಲೋ ಇಂದು ಕಡೆ ನಿಲ್ಲಿಸಿರುತ್ತೇವೆ.

ನಾ:- ನಿಜ ಸರ್.ಅದು ಇನ್ನೆಲ್ಲೋ ಒಂದು ಕಡೆ ಮುಂದುವರಿಯವ ಸಾಧ್ಯತೆ ಉಳಿಸಿರುತ್ತೀರಿ.ನಿಮ್ಮ ಕತೆಗಳಿಗೂ ಈ ಮಾತು ಅನ್ವಯಿಸುತ್ತದೆ.ನಿಮ್ಮ ಕಥಾ ಸಂಕಲನಗಳನ್ನು ನೋಡುವಾಗ,ಅನೇಕ ಸಾಧ್ಯತೆಗಳನ್ನು ಇಟ್ಟು ಮುಕ್ತಾಯಗೊಳಿಸಿರುತ್ತೀರಿ. ಅಂತಹ ಕಥೆಗಳು ಪರಿಣಾಮಕಾರಿಯಾಗಿರುತ್ತವೆ.ಈ ರೀತಿಯ ಉದ್ದೇಶಗಳು ಇರಬಹದೇ ? ನಿಮ್ಮ ಚಿತ್ರಕಲೆಯ ಉದಾಹರಣೆಯನ್ನು, ನಾನು ಕಥೆಗೆ ಅನ್ವಯಿಸಿ ಕೊಂಡೆ ಅಷ್ಟೆ.

ತಿ :- ಸರಿ. ನೀವು ನಿಲ್ಲಿಸಿದಿರಿ ಎಂದು ಹೇಳಿದಿರಿ. ಅದು End of the journey ಮಾತ್ರ.ಇವತ್ತು ಇಲ್ಲಿ ಉಳಿಯುತ್ತೇವೆ. ಇಂದಿನ ಪಯಣ ಮುಗಿಯಿತು.ಇನ್ನು ನಾಳೆಯದು.ಅದು ಓದುಗರಿಗೆ ಬಿಟ್ಟ ಸಂಗತಿ.ಊಹಿಸಿಕೊಳ್ಳಲಿ.

ನಾ :- ಉದ್ದೇಶ ಪೂರ್ವಕವಾಗಿ ಎನ್ನಲಾರೆ.ಯಾರು ಬೇಕಾದರೂ ಹೇಗೆ ಬೇಕಾದರೂ ಊಹಿಸಿಕೊಳ್ಳಲಿ ಎಂದು ಇರಬಹುದಲ್ಲ ಸರ್ ?

ತಿ:- ವಿವೇಕ ಶಾನುಭೋಗರ ಇತ್ತೀಚಿನ ಕಾದಂಬರಿ, ‘ ‘ಸಕೀನಾಳ ಮುತ್ತು ‘ ಅದರಲ್ಲಿ ಅವರು ಈ ತಂತ್ರ ಬಳಸುತ್ತಾರೆ.ಅವರು ಮುಗಿಸುವುದೇ ಇಲ್ಲ.ಹಾಗೇ ಬಿಟ್ಟು ಬಿಡುತ್ತಾರೆ.

ನಾ:- ಹೌದು ಸರ್.ನಿಮ್ಮ ಮಾತು ನಿಜ. ಅವರ ಕೆಲವು ಕಾದಂಬರಿಗಳಲ್ಲಿ ಮುಗಿಯಿತು ಎನ್ನುವದನ್ನು ಕಾಣಲಾರೆವು.

ತಿ:- ಹಳೆಯ ಕಾಲದಲ್ಲಿ ಸಂದರ್ಶನ ಮಾಡುವವರ ಪ್ರಶ್ನೆ ಹೀಗೆ ಇರುತ್ತಿದ್ದವು. ಏನೀ ಕಾದಂಬರಿ ? ಇದರ ಉದ್ದೇಶ ಏನು ? ಇದರ ಸಂದೇಶ ಏನು ?

ನಾ :- ಈ ಮಾದರಿಯ ಪ್ರಶ್ನೆ ಗಳು ಕಳೆದ ಒಂದು ದಶಕದಿಂದೀಚೆಗೆ ಇಲ್ಲ ವಾಗಿವೆ.

ತಿ:- ಹೌದು.

ನಾ:- ಸರ್, ಆದರೂ ಇನ್ನೂ ಒಂದಷ್ಟು ಓದುಗ ಬಳಗವಂತೂ, ಇದು ಯಾಕೋ ಅರ್ಥ ಆಗಲಿಲ್ಲ. ಪಾಪ ನಾಯಕನ ಗತಿ ಏನಾಯಿತು ? ಸುಖಾಂತ್ಯ ಇರಬೇಕಿತ್ತು. ಎನ್ನುವ ನಿರೀಕ್ಷೆ ಹೊಂದಿರುತ್ತಾರೆ. ಎನು ಹೇಳುತ್ತೀರಿ ?.

ತಿ:- ನಿಜ. ಹಳೆಯ ಸಿನೆಮಾಗಳಲ್ಲಿ ಈ ಮಾದರಿಯ ಮುಕ್ತಾಯಗಳು ಇರುತ್ತಿದ್ದವು.

ನಾ:- ಹೀಗೆ ಆಗಬೇಕು ಎನ್ನುವುದು ಎಷ್ಟರ ಮಟ್ಟಿಗೆ ಸರಿ. ಗೊತ್ತಿಲ್ಲ ಸರ್. ನಿಮ್ಮ ಹಾಗೂ ,ಶ್ರೀರಾಮ್, ಜಯಂತ ಕಾಯ್ಕಿಣಿ,ವಿವೇಕ ಶಾನುಭೋಗ ಇವರುಗಳ ಕಥೆ,ಕಾದಂಬರಿ ಗಳನ್ನು ಓದುವಾಗ ಇದು ಇಂದಿನ ಪಯಣ. ಇಂದಿಗೆ ಮುಗಿಯಿತು. ಅಷ್ಟೇ!! ಅಲ್ಲವೇ ?

ತಿ:- ಸರಿ.

ನಾ:- ಸರ್ ವಿವೇಕ ಶಾನುಭೋಗ ಅವರು ನಿಮ್ಮಿಂದ ಪ್ರಭಾವಿತರಾಗಿರ ಬಹುದೇ ? ನಾನು ತಪ್ಪೂ ಇರಬಹುದು.

ತಿ:-ಅವರನ್ನೇ ಕೇಳಬೇಕು.

ನಾ:- ಸರ್, ಹೈದರಾಬಾದ್ ನಲ್ಲಿದ್ದುಕೊಂಡು, ಇಷ್ಟೆಲ್ಲ, ಸಮೃದ್ಧವಾದ ಸಾಹಿತ್ಯ,ಏನೆಲ್ಲ ಪ್ರಶಸ್ತಿ ಗಳು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರೂ ಒಳನಾಡು ಒಪ್ಪಿಕೊಳ್ಳಲು ಒಂದು ರೀತಿಯ ಮನೋಭಾವನೆ ಹೊಂದಿದೆ . ಹೀಗೆಂದು, ಯಾವಾಲಾದರೂ ಅಸಮಧಾನ ಆಗಿದೆಯೇ ?

ತಿ:- ಆದದ್ದು ಇದೆ. ಸರಿಯಾದ ಅಭಿಪ್ರಾಯ ಹೊಂದಿರುವದಿಲ್ಲ.ಹಲವು ವಿಧದಲ್ಲಿ ಅಂದರೆ,ಅನ್ಯ ಭಾವದಲ್ಲಿ ನೋಡುತ್ತಾರೆ. ಇದು ಬೇಜಾರಿನ ಸಂಗತಿ ನಿಜ.ಆದರೆ ಅದಕ್ಕೆ ಕಾರಣ ಅವರ ಕೈಯಲ್ಲಿ ಇಲ್ಲ.ಬೆಂಗಳೂರು, ಮೈಸೂರು ಮತ್ತು ಧಾರವಾಡದಂತಹ ಶಕ್ತಿ ಕೇಂದ್ರಗಳಿವೆಯಲ್ಲ.ಅಲ್ಲಿ ಪ್ರತಿನಿತ್ಯ ಸಂಪರ್ಕ ದಲ್ಲಿರುವ ಜನಗಳೆ ಮುಖ್ಯ ಆಗುತ್ತಾರೆ.ಕನ್ನಡದ ಕವಿಗಳು ಎಂದರೆ, ಅಲ್ಲಿಯೇ ಇರುವವರು. ಹೆಸರುಗಳು ಬೇಡ.
ನಾ:- ಸರಿ ಸರ್.
ತಿ :- ಪ್ರಶಸ್ತಿ ನೀಡುವ ಸಂದರ್ಭಗಳಲ್ಲಿ ಅವರ ದೃಷ್ಟಿಯಲ್ಲಿ ಇರುವದು ಅದೇ ಪಟ್ಟಿ.ಅದು ಸಹಜ ಕ್ರಿಯೆ.
ನಾ :- ಒಂದು ರೀತಿಯ ಒತ್ತಡಗಳು ಇಲ್ಲದೇ ಇಲ್ಲ.
ತಿ :- ಇರಬಹುದು.ನಾನೂ ಕೇಳಿದ್ದೇನೆ ಆದರೆ ಅದರ ಬಗ್ಗೆ ಚಿಂತಿಸಬಾರದು.
ನಾ:- ಆಯಿತು ಸರ್.
ತಿ:- ನಾನು ಹೇಳಿದಂತೆ, ಒಂದು ಪುಸ್ತಕ ಎಷ್ಟು ಜನ ಓದಿದರು ಎನ್ನುವದಕ್ಕಿಂತ, ಯಾರು, ಯಾರು ಓದಿದರು ಎನ್ನುವುದು ಮುಖ್ಯ ವಾಗುತ್ತದೆ.ನಾನು ಮೇಲೆ ಹೇಳಿದಂತೆ, ಬರಹಗಾರ,ಓದುಗರನ್ನು ಹುಡುಕಿ ಹೋಗಬಾರದು. ಓದುಗರನ್ನು ಮೆಚ್ಚಿಸಲು ಬರೆಯಬಾರದು. ಅದು ಬರವಣಿಗೆಯ ಭಾಗವಾಗಿ ಬರಬೇಕು.ಯುವ ಜನಾಂಗಕ್ಕೆ,ಮಹಿಳೆಯರಿಗಾಗಿ,ಹೀಗೆ ಉದ್ದೇಶಗಳನ್ನು ಇಟ್ಟುಕೊಂಡು, ಬರೆಯಬಾರದು.ಮಹಿಳೆಯರಿಗಾಗಿ ಬರೆಯಿರಿ ಆದರೆ ಅವರಿಗೋಸ್ಕರ ಬರೆಯುವದು ಎನ್ನುವದು ಇದೆಯೇ? ಅದು ತಂತಾನೆ ಬಂದರೆ ಒಳ್ಳೆಯದಲ್ಲವಾ ? ಹುಡುಕಿಕೊಂಡು ಹೋಗಬೇಕು ಎಂದೆನಲ್ಲ! ಹುಡುಕಿಕೊಂಡು ಹೋಗುವ ಓದುಗ,ಇದು ಯಾರು ? ಇವರ ಕತೆ ಚನ್ನಾಗಿದೆ. ಅವರು,ಇಂತಹವುಗಳನ್ನು ಇನ್ನೂ ಬರೆದಿರಬೇಕಲ್ಲ ?
ಎಂದೆನ್ನುವ ಕುತೂಹಲ ಮೂಡಬೇಕು. ಅದು ಸಾಹಿತ್ಯದ ಗುಣ.

ನಾ:- ಸರ್, ಒಂದು ಮಾತು. ದಲಿತ ಸಾಹಿತ್ಯ ದಲಿತರೇ ಬರೆದರೆ ಅದು ಸಶಕ್ತ, ಸ್ತ್ರೀಯರು ಬರೆದಾಗ ಮಾತ್ರ ಅದು ಸ್ತ್ರೀ ಸಂವೇದನಾ ಸಾಹಿತ್ಯ.ಉಳಿದವರಿಗೆ ಆ ನಿಟ್ಟಿನ ಆಲೋಚನೆ ಇರಲಾರದು ಎನ್ನುವ ಒಂದು‌ ಚೌಕಟ್ಟು ಇದೆ . ದಲಿತರನ್ನು ಅತೀ ಹತ್ತಿರದಿಂದ ನೋಡಿದ,ದಲಿತರಲ್ಲದವರು, ಬರೆದರೆ ಗುರುತಿಸುವುದು ಬಹಳ ಕಮ್ಮಿ.ಕಾರಣಗಳೇನು ಇರಬಹುದು ?

ತಿ :- ಒಂದು ಕಾರಣ ಅಲ್ಲ. ಹಲವಾರು ಕಾರಣಗಳು ಇರಬಹುದು.ದಲಿತ ಸಾಹಿತ್ಯ ದಲಿತ ರಿಂದಲೇ ಬರಲಿ. ಆ ಸಾಹಿತಿ ಜನಾನುರಾಗಿಯೂ ಆಗಲಿ. ಅದೂ ಸರಿ. ಆದರೆ ಆ ಬರಹಗಾರ ಬರೆದಿದ್ದು ಪೂಜಾಭಾವನೆ(Worship) ಯಿಂದ ನೋಡುತ್ತಾರೆ.

ನಾ:- ನನ್ನನ್ನು ಆಗಾಗ ಕಾಡುವ ಒಂದು ಪ್ರಶ್ನೆ ಇದೆ.ಹೊರನಾಡಿನಲ್ಲಿದ್ದು, ಏನಾದರು ಒಳ್ಳೆಯ ಸಾಹಿತ್ಯ ರಚಿಸಿದ್ದರೆ, ಅದನ್ನು ಒಂದು ರೀತಿಯ Patronizing ದನಿಯಲ್ಲಿ ಕಾಣುತ್ತಾರೆ. ‘ ಅವರು ಪರವಾ ಇಲ್ಲ ಬಿಡಿ.ಏನೋ ಬರೆದಿದ್ದಾರೆ ‘ ಎನ್ನುವ ಮನೋಭಾವ ಯಾಕೆ ?

ತಿ:- ನೀವು ಹೇಳುತ್ತಿರುವುದು ಸರಿ.
ಈ ಪ್ರಶಸ್ತಿ ಗಳು ಇವೆಯಲ್ಲ. ಹೊರನಾಡ ಕನ್ನಡಿಗರ ಪ್ರಶಸ್ತಿ, ಒಳನಾಡ ಕನ್ನಡಿಗರ ಪ್ರಶಸ್ತಿ, ಇವುಗಳೆಲ್ಲ ಮುಜುಗರ ಉಂಟು ಮಾಡಿದ್ದು ಇದೆ.

ನಾ:- ನಿಜ ಸರ್, ನೀವು ಒಂದು ಸಂದರ್ಭದಲ್ಲಿ ಹೇಳಿದ ಒಂದು ಮಾತು ಇಲ್ಲಿ ನೆನಪು ಬಂತು.
“ನಾವು ಹೊರನಾಡ ಕನ್ನಡಿಗರಲ್ಲ ಒಡನಾಡ ಕನ್ನಡಿಗರು “

ತಿ :- ಈ ಧೋರಣೆ ತಪ್ಪು. ಇಂಗ್ಲಂಡ್ ಕನ್ನಡಿಗರಿಗೆ ಪ್ರಶಸ್ತಿ, ಅಮೆರಿಕನ್ ಕನ್ನಡಿಗರಿಗೆ ಪ್ರಶಸ್ತಿ, ದೆಹಲಿ ಕನ್ನಡಿಗರಿಗೆ ಪ್ರಶಸ್ತಿ,ಮುಂಬಯಿ ಕನ್ನಡಿಗರಿಗೆ ಪ್ರಶಸ್ತಿ. ಇತ್ಯಾದಿ ಗಳಿಗಿಂತ ಒಳ್ಳೆಯ ಸಾಹಿತ್ಯ ಬರೆದವರು, ಪ್ರಪಂಚದ ಎಲ್ಲಿಯೇ ಇದ್ದರೂ,ಅವರಿಗೆ ಪ್ರಶಸ್ತಿ ಬರಬೇಕು.

ನಾ:- ನೀವೇ ‘ನಮ್ಮ ಕನ್ನಡ’ ದಲ್ಲಿ‌ ಹೇಳಿದ್ದೀರಿ.
” ಕನ್ನಡಿಗರು ಎಲ್ಲಿಯೇ ಇರಲಿ. ಭಾವನಾತ್ಮಕವಾಗಿ ಕನ್ನಡಿಗರಾಗಿದ್ದರೆ ಸಾಕು “

ತಿ:- ನೆನಪಿಸಿಕೊಂಡು ಹೇಳಿದಿರಿ.ಒಳ್ಳೆಯದಾಯಿತು.

ನಾ:- ಅನುಮಾನ ಎಂದರೆ, ‘ ಭಾನಾತ್ಮಕ ಕನ್ನಡ ‘ ಪದ, ಪರಿಣಾಮ ಬೀರುವದರ ಕುರಿತು ಯೊಚಿಸಬೇಕಾಗಿದೆ.

ತಿ :- ಹೌದು. ನಾವು ಯಾವ ದಿಕ್ಕಿನಲ್ಲಿ ಹೋಗುತ್ತ ಇದ್ದೇವೆ ತಿಳಿಯುತ್ತಿಲ್ಲ. ಗಾಬರಿ. ಈಗ ನೋಡಿ, ಒಂದು ಮೆರವಣಿಗೆ ಸಾಗಿದೆ.ಜನ ಹೋಗುತ್ತಿದ್ದಾರೆ.
ಎಲ್ಲಿಗೆ ಹೊಗುತ್ತೇವೆ ಎಂದು ಅವರಿಗೆ ಗೋತ್ತಿರುವದಿಲ್ಲ ! ಎಂತಹ ಸಾಹಿತ್ಯಿಕ ಘಟ್ಟ ಕಾದಿದೆಯೋ ಏನೋ ಗೊತ್ತಿಲ್ಲ.

ನಾ :- ಒಂದು ಸಂಗತಿ ನನಗೆ ತಿಳಿಯಬೇಕಾಗಿದೆ.
ಇತ್ತೀಚಿಗೆ ಹಲ ಕೆಲವು ಸಾಮಾಜಿಕ ಜಾಲ ತಾಣಗಳಲ್ಲಿ, ವಚನಗಳು, ಕಂದಪದ್ಯಗಳು, ಷಟ್ಪದಿ ಗಳು ಬರುತ್ತಿವೆ.ಎಂದರೆ ನಮ್ಮ ಬರಹಗಾರರು ಆ ಆ ಕಾಲಘಟ್ಟದಿಂದ ಹೊರಬರಲು ಇಷ್ಟ ಪಡುತ್ತಿಲ್ಲ ಎಂದು ತಿಳಿಯಬೇಕೆ ? ನಾನೇ ಈಗ ಒಂದು ಷಟ್ಪದಿ,ಕಂದಪದ್ಯ ತ್ರಿಪದಿ ಬರೆದರೆ ನಾನೂ ಪಂಪ ರನ್ನ, ಕುಮಾರವ್ಯಾಸ, ಸರ್ವಜ್ಞ ರ ಹಾಗೆ ಬರೆಯುವ ಪ್ರತಿಭೆ ಇದೆ ಎಂದು ತೋರಿಸಿಕೊಂಡಂತೆ. ಇದರಿಂದ ಸಾಹಿತ್ಯದ ಬೆಳವಣಿಗೆಯಾವ ಪ್ರಯೋಜನ ?

ತಿ : ತಪ್ಪು ಎಂದು ಹೇಳಲಾರೆ. ಆದರೆ ಹಿಂದಿನ ಕಾವ್ಯಗಳನ್ನು ಓದಬೇಕು.ಅವು ತಾಯಿ ಬೇರು.

ನಾ : ಓದಬೇಕು ಸರಿ. ಎಲ್ಲಾ ಹಳೆಯ ಕಾವ್ಯಗಳನ್ನು ಓದಲು ಅರ್ಥೈಸಲು ಬರಬೇಕು.ಆದರೆ ನಾನು‌ ಚಂಪು ವಿನಲ್ಲಿ ಇಂದು ಕಾವ್ಯ ಬರೆದರೆ ?

ತಿ :- ಯಾವ ಪ್ರಯೋಜನವೂ ಇಲ್ಲ. ನೀವು ಹೇಳಿದ ಹಾಗೆ ಅದು ಪಾಂಡಿತ್ಯ ಪ್ರದರ್ಶನವೇ ಆದೀತು.

ನಾ :- ಹೀಗೆ ಬರೆದ ಯಾವುದೇ ವೃತ್ತ, ಕಂದ ಪದ್ಯ, ಷಟ್ಪದಿ ಆ ಕಾಲಘಟ್ಟಗಳ ಹೊಲಿಕೆಗೆ ಸಾಧ್ಯವೇ ?

ತಿ ;- ಇಲ್ಲ.ಖಂಡಿತ ಸಾಧ್ಯ ಇಲ್ಲ.

ನಾ :- ಸರ್ ಸಂದೇಶ ಎಂದು ಕೇಳಲಾರೆ.ಕೊನೆಯದಾಗಿ ಏನನ್ನಾದರೂ ಹೇಳಬಯಸುವಿರ ?

ತಿ :- ಯಾವ ಸಂದೇಶವೂ ಬೇಡ.ಯಾರು ಓದುತ್ತಾರೆ ? ಯಾರು ಕೇಳುತ್ತಾರೆ ? ಅದೊಂದು ವೃಥಾ ಆಲಾಪವಾದೀತು.ನಾನು ಕೆಲವು ಪುಸ್ತಕಗಳನ್ನು ಬರೆದಿದ್ದೇನೆ.ಆಸಕ್ತಿ ಇದ್ದರೆ ಓದಿ. ಇಲ್ಲವಾದರೆ ಬೇಡ.
ಈ ಸಾಹಿತ್ಯ ಇದೆ‌ ನೋಡಿ , ಒಂದು ಕಾದಂಬರಿ,ಒಂದು ಕಥೆ ಅಥವಾ ಇನ್ನೇನು ಇದ್ದರೂ ಅದನ್ನು ಓದುಗರಿಗೆ ತಲುಪಿಸುವ ವ್ಯವಸ್ಥೆ ಆಗಬೇಕು. ಬರಿ ಒಂದು ಟೆಕ್ಟ್ ಕೊಟ್ಟು ಓದಿ ಎಂದರೆ ಸಾಲದು.ಅದರ ಬಗ್ಗೆ ಯಾರು ಏನು ಹೇಳಿದ್ದಾರೆ.ಅದರ ಸುತ್ತಣ ಭೂಮಿಕೆ ಏನು ? ಎನ್ನುವುದನ್ನು ಹೇಳುವವರೂ ಬೇಕು. ಅದು ಕೂಡ ಬಹಳ ಮುಖ್ಯ. ಕಿಶನ್ ರಾವ್ ಇದನ್ನೆಲ್ಲ ನೀವು‌ ಮಾಡಿದ್ದೀರಿ ನನಗೆ ಗೊತ್ತು.ಇದನ್ನು ನಾನು ಸಾಹಿತ್ಯದ Support System ಎಂದು ಎಂದು ಕೊಳ್ಳುತ್ತೇನೆ.ಈ ಸಪೋರ್ಟ್ ವ್ಯವಸ್ಥೆ ಬೇಕೇ ಬೇಕಾಗುತ್ತದೆ.ಒಂದು ಆಸ್ಪತ್ರೆಯಲ್ಲಿ ಬರೀ ವೈದ್ಯರು ಇದ್ದರೆ ಸಾಲದು. ದಾದಿಯರು ಬೇಕು ಯಂತ್ರಗಳು, ಅದರಲ್ಲಿ ತರಬೇತು‌ಪಡೆದ, ಪ್ರಯೋಗಾಲಯ ಸಿಬ್ಬಂದಿ, ಎಕ್ಸ್- ರೇ ತೆಗೆಯುವ ಜನ, ಹೀಗೆ ಏನೆಲ್ಲ ಬೇಕಾಗುತ್ತದೆ. ನಾನು ಒಂದು ಒಳ್ಳೆಯ ಪುಸ್ತಕ ಓದಿದಾಗ ಅದಕ್ಕೆ ಸಂಬಂಧಿಸಿದ, ವಿವರ, ಅದರಿಂದ ಬಂದ ಅನಿಸಿಕೆ, ಚರ್ಚೆ, ಸಂವಾದ ಮೊದಲಾದ ವಿವರಗಳನ್ನು ಹಲವು ಕಡೆ ,ನನ್ನ ಬರಹಗಳಿಂದ ನೀಡಲು ಪ್ರಯತ್ನ ಮಾಡುತ್ತೇನೆ. ಇದು ಒಂದು ಕೊಂಡಿ(Link). ಈ ಲಿಂಕ್ ಕೊಡುವ ಕೆಲಸ ನಾನು ಮಾಡುತ್ತಿದ್ದೇನೆ..ನನ್ನ ಆಳ-ನಿರಾಳ ದಂತಹ ಪುಸ್ತಕಗಳಲ್ಲಿ.
ಎಲ್ಲರೂ ಈ ಕೆಲಸ ಮಾಡಬೇಕು ಎಂದು ನನ್ನ ಆಪೇಕ್ಷೆ

               ೦-೦-೦-೦

ಆಭಾರ. :
ಇಷ್ಟು ವಿಸ್ತೃತವಾದ ಸಂದರ್ಶನ ನೀಡಲು ಅವಕಾಶ ಮಾಡಿಕೊಟ್ಟ ಕವಿ ತಿರುಮಲೇಶರಿಗೆ,
ಕವಿ ಸಾಹಿತಿ ‘ಸಂಗಾತ’ ಪತ್ರಿಕೆ ಯ ಸಂಪಾದಕ ಸ್ನೇಹಿತ, ಟಿ.ಎಸ್.ಗೊರವರ ಅವರಿಗೆ ಇದನ್ನು ಕಿಶನ್ ನೀನೇ ಮಾಡಬೇಕು ಎಂದು‌ ಒತ್ತಾಯ ಮತ್ತು ಒತ್ತಾಸೆಯಾಗಿ ನಿಂತ ಆಪ್ತ ಮಿತ್ರ ಕೇಶವ ಮಳಗಿ ಕೃತಜ್ಞತೆಗಳು.