ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೀನಲ್ಲವೇ ಗಾಲಿಬ್

ಜಬೀವುಲ್ಲಾ. ಎಂ ಅಸದ್ ಅವರು ಗಾಲಿಬ್ ಜೀವನಗಾಥೆಯ ಬಗ್ಗೆ ಬರೆದ ನೀಳ್ಗವಿತೆ ಹಾಗೂ ಅವರೇ ಬರೆದ ಗಾಲಿಬ್ ನ ಕಲಾತ್ಮಕ ಚಿತ್ರ...
ಜಬೀವುಲ್ಲಾ ಎಂ. ಅಸದ್
ಇತ್ತೀಚಿನ ಬರಹಗಳು: ಜಬೀವುಲ್ಲಾ ಎಂ. ಅಸದ್ (ಎಲ್ಲವನ್ನು ಓದಿ)

(೧)

ಮನುಷ್ಯನ ಮನಸ್ಸು ಇಳಿಜಾರಿನ ಹಾಗೆ
ಬಯಕೆ ಹರಿವ ನೀರಿನ ಬಗೆ
ಬಾಚಿ ಮೊಗೆದು ಹೊರಚೆಲ್ಲಿದಷ್ಟು
ತುಂಬುಕೊಳ್ಳುತ್ತಲೆ ಇರುವುದು
ನೋಡು ಗಾಲಿಬ್!

ಬೆಳಕಿಗೆ ಕಲ್ಲು ತೂರಿ
ಕತ್ತಲಲ್ಲುಳಿದವನು ನೀನು!
ಪ್ರಯಾಣಿಸುತ್ತಿದ್ದ ಬಾಳಿನ ನಾವೆಗೆ
ರಂಧ್ರಗಳ ಕೊರೆದುಕೊಂಡು ಮುಳುಗಿ ಮತ್ತೆ
ತೇಲಿದವನು ನೀನಲ್ಲವೇ ಗಾಲಿಬ್ !

(೨)

ಮೊದಲೇ ತಂದೆಯನ್ನು ಕಳೆದುಕೊಂಡಿದ್ದವನು, ಚಿಕ್ಕಪ್ಪನ ಅಸರೆಯಲ್ಲಿ ಬದುಕುತ್ತಿದ್ದವನು
ಜನ್ಮವಿತ್ತ ತಾಯಿಯನ್ನು
ಆಗ್ರಾದ ತಾಯ್ನೆಲವನ್ನು ಬಿಟ್ಟವನು
‘ವಿಧಿ’ಯಾದ ಕಪ್ಪು ನಿಲುವಂಗಿಯ
ನೀಳ ಗಡ್ಡದ ಇರಾನಿ ಅಲೆಮಾರಿ ಫಕೀರನ
ಕೈಹಿಡಿದು ಷಾಗಿರ್ದಾಗಿ
ಗುರುವಿನ ಗುಲಾಮನಾಗಿ
ಮುಕ್ತಿಗಾಗಿ ಎಂಬಂತೆ
ಪಾರ್ಸಿ ಗಝಲ್ಗಳ ಜೋಳಿಗೆ ಹೊತ್ತಿಕೊಂಡು
ಪುರಾನಿ ದಿಲ್ಲಿಗೆ ಬಂದವನು
ನೀನಲ್ಲವೇ ಗಾಲಿಬ್?

ಗುರುವಾದವನು ಬದುಕನ್ನಾದರು ಕಲಿಸಿದನೆ?
ಛೇ… ಇಲ್ಲ! ಎರಡು ವರ್ಷ ಜೊತೆಯಲ್ಲಿರಿಸಿಕೊಂಡು
ಕೇವಲ ಹನ್ನೆರಡು ವರ್ಷದವನಾದ ನಿನಗೆ
ಪರ್ಷಿಯನ್ ಕವಿಗಳ ಅಧ್ಭೂತ ಮೋಡಿಗೆ ಇಡುಮಾಡಿದನು, ಮಾಯಾವಿನೇ ಇರಬೇಕವನು!
ಆಗ್ರಾದಿಂದ ದಿಲ್ಲಿಗೆ ಕರೆತಂದು ರಸ್ತೆಯ ಮಧ್ಯೆ
ನಿನ್ನ ನಿರ್ಗತಿಕನಾಗಿಸಿ, ಕೈ ಬಿಡಿಸಿಕೊಂಡು
ಹಿಂದೂಸ್ಥಾನವನ್ನೇ ಬಿಟ್ಟು ಬಂದ ದಾರಿಯಲ್ಲೇ ಹೊರಟುಹೋದನು; ಇರಲಿ ಬಿಡು!
ಎಷ್ಟೇ ಆದರೂ ಅವನು ದರ್ವೇಷಿ, ಅಲೆಮಾರಿ, ಫಟಿಂಗ ಹೋದರೆ ಹೋಗಲಿ ಬಿಡು
ಆದರೆ, ನೀನು ಗಾಲಿಬ್?!

ತಾಜ್ ಮಹಲ್ಲಿನ ಅಮೃತಶಿಲೆಗಳ ತಂಪಿನ
ಬಿಳಿಯ ನೆರಳನ್ನು ಬಿಟ್ಟು
ಒರಟು ಕೆಂಪು ಕಲ್ಲಿನ ಕರಿ ನೆರಳಿನ ದಿಲ್ಲಿಗೇಕೆ ಬಂದೆ?
ಕೊನೆಗೆ ನಿನ್ನ ನೆರಳು ಸಹ ಸಾಥ್ ಕೊಡದಷ್ಟು ಒಬ್ಬಂಟಿಯಾದೆ,
ಆತಂತ್ರಗೇಡಿ ನೀನು ಗಾಲಿಬ್!

(೩)

ಆ ವೈಭವಕಾಲ ಸರಿದ ಮೊಘಲರ
ಪೂರಾನಿ ದಿಲ್ಲಿಯ ಮೋಹಲ್ಲ
‘ಬಲ್ಲೇಮಾರಾನ್’ ಗಲ್ಲಿಯಲ್ಲಿ
ಅಂದು ನಾನೂ ಇದ್ದಿದ್ದರೆ(?!)
ನಾವಿಬ್ಬರು ಪ್ರಾಣ ಸ್ನೇಹಿತರಾಗಿರುತ್ತಿದ್ದೆವು ಗಾಲಿಬ್
‘ಇನ್ಷಾಅಲ್ಲಾಹ್’

ದಿನ ಬೀದಿಯಲ್ಲಿ, ಎಪ್ಪತ್ತೆರಡು ವರ್ಷಗಳ ಕಾಲ
ತಣ್ಣಗಿನ ಹೃದಯದೊಂದಿಗೆ ಬೆಂಕಿ ಉಗುಳುತ್ತಾ
ಹೊಟ್ಟೆಗೆ ಹಿಡಿ ಹಿಟ್ಟಿಲ್ಲದಿದ್ದರು
ಯಾರಿಗೂ ಕರ ಚಾಚದೆ
ರೇಷ್ಮೆಯ ಷೇರುವಾನಿ, ಸುರುವಾಲು
ಜುಬ್ಬಾ ಪೈಜಾಮಗಳಲ್ಲಿ ತೂರಿಕೊಂಡು
ಮಕ್ಹ್ಮಲ್ ಟೋಪಿ ಕಿರಿಟದಂತೆ ಧರಿಸಿ
ಹೆಮ್ಮೆಪಟ್ಟಿಕೊಂಡು ನಿನಗೆ ನೀನೇ
ಬಿಕನಾಸಿ ರಾಜನಂತೆ ಬದುಕಿದ್ದು
ನೀನಲ್ಲವೇ ಗಾಲಿಬ್?

(೪)

ಕಾವ್ಯವಾಚನದ ಸಭೆಗಳಲ್ಲಿ ನೀನು
ಎದ್ದು ನಿಂತರೆ ಸಾಕಿತ್ತು…
ಕೆಂಪುಕೋಟೆಯ ಕವಿಗಳ
ಗಂಟಲು ಪಸೆ ಆರುತ್ತಿತ್ತು!
ಬ್ರಿಟಿಷ್ ಪ್ರಭುತ್ವ ನಿನ್ನ ಚಿಕ್ಕಪ್ಪನ ಸಾವಿನ ಪರಿಹಾರವಾಗಿ ವರ್ಷಕ್ಕೆ
ಏಳುನೂರೈವತ್ತು ರೂಪಾಯಿಗಳ
ಪಿಂಚಣಿಯ ಜೊತೆಗೆ
ಪಡೆದ ಇನಾಮುಗಳನ್ನೆಲ್ಲ
ಶರಾಬಿಗೆ ಸುರಿದು, ಜೂಜಿನಲ್ಲಿ ಕಳೆದು
ಮೈತುಂಬಾ ಸಾಲ ಮಾಡಿಕೊಂಡು
ಸಾಕಿಯ ನಶೆಯಲ್ಲಿ ಧುತ್ತನಾಗಿ
ಮೈಖಾನೆಗಳಲ್ಲಿ ಧ್ಯಾನೋತ್ಮಕ್ತನಾದವನು
ನೀನಲ್ಲವೇ ಗಾಲಿಬ್?

‘ನಿನ್ನ ಕೈಯಲ್ಲಿ ಮಧುಬಟ್ಟಲೊಂದು ಇರದಿದ್ದರೆ ಈ ಲೋಕ ನಿನ್ನನ್ನು ಯಾವತ್ತೋ ಸಂತನೆಂದು ಒಪ್ಪಿಕೊಳ್ಳುತ್ತಿತ್ತಂತೆ’
ಆದರೆ ಅದಾವುದು ಬೇಕಿರಲಿಲ್ಲ ಬಿಡು ನಿನಗೆ
ಷರಾಬು ತುಂಬಿದ ಬಟ್ಟಲು, ಶಾಯಿ ತುಂಬಿದ ಕುಡಿಕೆ, ಜೊತೆಗೊಂದು ಹಕ್ಕಿಯ ಗರಿ
ಸಾಕಿತ್ತಲ್ಲವೆ ಹೇಳು ಗಾಲಿಬ್?

(೫)

ಮಡದಿ ಮಕ್ಕಳು, ನಿತ್ಯವೂ ಬರಿಗೈಯಲ್ಲಿ ವಾಪಾಸಾಗುತ್ತಿದ್ದ ನಿನ್ನನು ನೋಡಿ
ಸುಮ್ಮನೆ ಮಲಗುತ್ತಿದ್ದರಲ್ಲ…(?!)
ನಿನಗೇನೊ ಆಗ್ರಾದಲ್ಲಿ ಅನುಕೂಲಸ್ಥ ಮನೆತನದ
ನಿನ್ನ ತಾಯಿ ನಿನ್ನ ಪಾಲಿಗೆ ಉಳಿದಿದ್ದಳು;
ನೀನು ಹಸಿವು ಎಂದಾಗಲೆಲ್ಲ
ನಿನ್ನ ಹೊಟ್ಟೆ ತುಂಬಿಸಿ ಕಳಿಸುತ್ತಿದ್ದಳು
ತಾಯಿಯ ಧರ್ಮ ಪಾಲಿಸಿದಳು
ಅವಳು ಮಣ್ಣಾಗುವವರೆಗೂ….
ಹೆತ್ತ ತಾಯಿಯ ಋಣವ ತೀರಿಸಲಾದೀತೆ?
ನೀನು ನಿನ್ನ ಧರ್ಮ ಪಾಲಿಸಿದ್ದಾದರು ಎಂದು?
ಆದರೆ ನಿನ್ನ ಸಂಸಾರಕ್ಕೆ ನಿನಲ್ಲವೇ ದಿಕ್ಕು?
ಕೇಳಬಹುದೆ? ಹೇಳು ಗಾಲಿಬ್

ಖಾಯಿಲೆಯ ನೆಪಕ್ಕೆ ಒಂದಾದಮೇಲೊಂದರಂತೆ,
ದತ್ತು ಪಡೆದ ಮಗನನ್ನು ಸೇರಿದಂತೆ
ಒಟ್ಟು ಎಂಟು ಮಕ್ಕಳು
ಶವಗಳಾಗಿ ನಿನ್ನ ಹೆಗಲಿಗೇರಿದಾಗ
ನಿಜಕ್ಕೂ ಕಲ್ಲಂತೆಯೇ ಆಗಿಬಿಟ್ಟದ್ದು
ನನೀನಲ್ಲವೇ ಗಾಲಿಬ್?

(೬)

ಬ್ರಿಟಿಷರ ಗುಲಾಮನಾಗಿ ಬದುಕಿದ್ದರೆ
ರಾಜನಾಗಿಯೇ ಬಾಳುತ್ತಿದ್ದೆ
ಬಾದಷಾ ‘ಜಫರ್’ನ ಹುಕುಂ ಗೆ ಶಿರಬಾಗಿ ಬದುಕನ್ನು ಮಾರಿಕೊಂಡಿದ್ದಾರೆ, ಸತ್ತರು ಸವೆಯದಷ್ಟು ಗಳಿಸುತ್ತಿದ್ದೆ

‘ಕವಿಯನ್ನು ಕವಿಯನ್ನಾಗಿ ಉಳಿಸುವುದೇ
ಅವನ ಉದ್ಧಟತನವಂತೆ’
ಯಾರಿಗೂ, ಎಂದಿಗೂ ಸೋಲದ
ನಿನ್ನ ಅಹಂ’ಗೊಂದು ನನ್ನ ಸಲಾಂ ಗಾಲಿಬ್

(೭)

ಪ್ರಕಾಶಕರು ನಿನ್ನ ಗಝಲ್ಗಳಿಗಾಗಿ
ಸಾಲುಸಾಲಾಗಿ ನಿನ್ನ ಮನೆಯ ಬಾಗಿಲಲ್ಲಿ ನಿಂತು
ಕೇಳಿದಾಗಳೆಲ್ಲ….
ನಿನ್ನ ಬಳಿ ಒಂದೂ ಹಸ್ತಪ್ರತಿ ಇರುತ್ತಿರಲಿಲ್ಲವಲ್ಲ
ಅದೇ ಅಚ್ಚರಿ ನನಗೆ!

ಅಷ್ಟಕ್ಕೂ… ನಿನ್ನ ಮನೆ ಎಂಬ ಆ ಕೊಂಪೆಯಲಿ
ಇದ್ದದಾದರು ಏನು?
ಖಾಲಿ ಷರಾಬಿನ ಸೀಸೆಗಳು ಹಾಗೂ
ಕವಿದ ಕಾರ್ಮೋಡದ, ಎಂದೂ ಮಳೆಯಾಗಿ
ಸುರಿದು ಹಗುರಗೊಳ್ಳದ ದಟ್ಟ ಮೌನ….
ಜೊತೆಗೆ ಹೃದಯದಲ್ಲಿ ಜಲಧಿಯಂತೆ
ಉಕ್ಕುತ್ತಿದ್ದ ವಿಷಾದ ಪ್ರೇಮ ಅಷ್ಟೆ!

(೮)

ಜಗದ ಕಾವ್ಯಲೋಕಕ್ಕೆ
ಸಿಹಿಯಾದ ‘ಗಝಲ್’ ಎಂಬ ಪ್ರೇಮಯುಕ್ತ
ಮಧುರ ನೋವಿನ ಮದಿರೆ ಹಂಚಿದವನು…
ಅಜ್ಞಾತ ಪ್ರೇಯಸಿಯೊಂದಿಗೆ ಮಧುಚಂದ್ರದ
ಕನಸುಗಳ ಹೆಣೆದವನು…
ಆಕೆಯ ಹೆಜ್ಜೆಗೆ ಕಟ್ಟಿದ ಗೆಜ್ಜೆಯ ನಿನಾದ ನಿಂತಾಗ
ನಿನ್ನ ಹೃದಯದ ಸಂಗೀತ ನಿಲ್ಲಲಿಲ್ಲ!
ಅವಳ ವಿರಹವೇದನೆಯಲ್ಲಿ ಪರಿತಪಿಸಬೇಕಾಗಿತ್ತಲ್ಲ
ಕೊನೆಗೆ ಬಯಸಿದ ಏನನ್ನೂ ಗಳಿಸದ
ನತದೃಷ್ಟ ನೀನಲ್ಲವೇ ಗಾಲಿಬ್?

(೯)

ನಿನ್ನ ಕಷ್ಟಗಳು ದೇವರಿಗೆ ಪ್ರೀತಿ!
ನಶೆಗಾಗಿ ಮನೆಯನ್ನೆ ಜೂಜಿನ ಅಡ್ಡೆಯನ್ನಾಗಿಸಿದೆ
ಸಾಲಗಳನ್ನೂ ತೀರಿಸಿದೆ
ಮಾಡಿದ ತಪ್ಪಿಗೆ ಶಿಕ್ಷೆಯಾಗಿ
ಸೆರೆಮನೆಯನ್ನು ಸೇರಿದೆ

ಆ ನಾಲ್ಕು ಗೋಡೆಗಳ ನಡುವಿನ ಕತ್ತಲಲ್ಲೆ ಅಲ್ಲವೇ
ನೀನು ನಿನ್ನ ಪ್ರೇಮ, ದುಃಖ, ಹತಾಷೆ, ನೋವು
ಹಾಗೂ ಸಂಕಷ್ಟಗಳ ಬಣ್ಣಿಸುವ ದ್ವಿಪದಿಗಳನ್ನು ರಚಿಸಿದ್ದು ನಿನಲ್ಲವೇ ಗಾಲಿಬ್?

ಕಾವ್ಯಜಗತ್ತನ್ನೆನೊ ಶ್ರೀಮಂತಗೊಳಿಸಿದೆ
ಆದರೆ ಖುದ್ದು ನೀನೇ ಬಡತನದ ಬೇಗೆಯಲ್ಲಿ
ಉರಿದುರಿದು ಬೆಂದುಹೋದೆಯಲ್ಲ ಗೆಳೆಯ
ಅತಂತ್ರಗೇಡಿ ನೀನು! ಮಹಾನ್ ಸ್ವಾಭಿಮಾನಿ
ಅನ್ನ, ಪ್ರೇಮ, ಪದವಿ ಯಾವೊಂದೂ ಒಲಿಯಲಿಲ್ಲ
ಒಲಿದ ಕಾವ್ಯ ಮಾತ್ರ ಎಂದಿಗೂ ನಿನ್ನ ಕೈ ಬಿಡಲಿಲ್ಲ
ಇಂದಿಗೂ, ಎಂದಿಗೂ ನೀನು ಅಮರ ಗಾಲಿಬ್

(೧೦)

ಮುರಾದಾಬಾದ್ ಬಳಿಯ ಸೇತುವೆ
ರಾಮಗಂಗಾವನ್ನು ನೀ ದಾಟುವಾಗಲೆ
ಅದು ಮುರಿದು ಬಿದ್ದು
ನೀನು ಬದುಕುಳಿದೆಯಾದರೂ… ಅದೆಷ್ಟು ದಿನ?
ಅದೊಂದು ಮಧ್ಯಾಹ್ನ, ಹತ್ತಿರದ ಮಸೀದಿಯಲ್ಲಿ
ಜೋಹರ್ ನ ಅಜಾನ್ ಕೂಗುವ ಹೊತ್ತಿಗೆ
‘ದೇವರ ಗೊಡವೆ ಕೂಡ ನನಗೆ ಬೇಡ’
ಎಂದು, ಮಧುಬಟ್ಟಲು ಪಿಡಿದು
ಅದೆಲ್ಲಿ ಅರಸಿ ಹೊರಟೆ ನೀನು ಒಬ್ಬಂಟಿಯಾಗಿ
ಅಲ್ಲಾಹ್ ಇಲ್ಲದ ಜಾಗವನ್ನು?!
ಅಂಥ ಜಾಗ ಯಾವುದು ಇಲ್ಲವೇ ಇಲ್ಲ, ಹಾಗಾಗಿ ಮಸೀದಿಯಲ್ಲಿ ಕುಳಿತು ಮಧು ಕುಡಿಯಲು ಇಜಾಝತ್ ಕೇಳಿದವನು ನೀನಲ್ಲವೇ
“ಅಸಾದುಲ್ಲ ಬೇಗ್ ಗಾಲಿಬ್”

“ಅಸಾದುಲ್ಲ ಬೇಗ್ ಗಾಲಿಬ್”

(೧೧)

ಇಂದಿಗೂ ಈ ಕಾವ್ಯಲೋಕ ನಿನ್ನನು
ಕೋಟ್ಯಂತರ ಹೃದಯ ಸಿಂಹಾಸನಗಳಲ್ಲಿಟ್ಟು ಮೆರೆಸುತ್ತಿದೆ, ಪ್ರೀತಿಸುತ್ತಿದೆ…
ನೊಂದವರ, ಪ್ರೇಮಕವಿಗಳ ಪಾಲಿನ
ದೇವರೆಂದು ಆರಾಧಿಸುತ್ತಿದೆ…

(೧೨)

ಅಲ್ಲಿ ಅಲ್ಲಾಹನ ಸ್ವರ್ಗವೆಂಬ ಮೈಖಾನೆಯಲ್ಲಿ
ಮಧು ಎಂಬ ಪ್ರೇಮ ತುಂಬಿದ
ಬಟ್ಟಲು ಎಂಬ ಹೃದಯವನ್ನ ಹಿಡಿದು
ನಿನಗಾಗಿ ಕಾಯುತ್ತಿದ್ದಾಳೆ ಸಾಕಿ
ಹೊರಡು ಗಾಲಿಬ್!

(೧೩)

ಅದೇ ಪುರಾನಿ ದಿಲ್ಲಿಯ ಬಲ್ಲೇಮಾರಾನ್
ಗಲ್ಲಿಯಾ ಯಾವುದಾದರೊಂದು ತಿರುವಿನಲ್ಲೊ,
ಮುರಾದಾಬಾದ್ ನ ಮುರಿದ ಸೇತುವೆಯ ಮೇಲೊ
ಅಥವಾ ನಿನ್ನದೆ ಗಝಲ್ಗಳ ಉದ್ಯಾನವನದಲ್ಲೊ
ಎಲ್ಲಾದರೂ ಒಂದು ಕಡೆ, ಭೇಟಿಯಾಗೋಣ; ಅಲ್ಲಿಯವರೆಗೆ…

ಅಲ್ ಹಾಫ್ಹೀಜ್ ಗಾಲಿಬ್.

ಜ಼ಬಿ