- ನೆನಪಿನಂಗಳದಿಂದ - ಜುಲೈ 31, 2021
ಮಂಗಳೂರಿನ ಅತ್ಯಂತ ಪ್ರಾಚೀನ ದೇವಸ್ಥಾನವೆಂದರೆ ಕದ್ರಿಯ ಮಂಜುನಾಥ ದೇವಸ್ಥಾನ. ಇದು ಸುಮಾರು 10ನೆಯ ಅಥವಾ 11ನೆಯ ಶತಮಾನದಲ್ಲಿ ಕಟ್ಟಿರಬಹುದು ಎನ್ನಲಾಗಿದೆ. ದೇವಸ್ಥಾನದ ಎದುರುಗಡೆ ಎತ್ತರದಲ್ಲಿ 9 ಕೆರೆಗಳಿವೆ. ಇಲ್ಲಿ ನೈಸರ್ಗಿಕವಾಗಿ ಇರುವ ನೀರಿನ ಬುಗ್ಗೆಗೆ ಕಾಶಿ ಭಗೀರಥಿ ತೀರ್ಥ’ ಎಂದೇ ಹೆಸರು. ಕದ್ರಿ ದೇವಸ್ಥಾನದ ಬಗ್ಗೆ ಬರೆಯಲು ಹೊರಟ ಕಾರಣ, ಕದ್ರಿ ನನ್ನ ತಾಯಿಯ ತವರು.ನಾನು ಹುಟ್ಟಿ ಬೆಳೆದು ಓಡಾಡಿದ ಜಾಗ.ದೇವಸ್ಥಾನದಿಂದ ಬರೀ ಹತ್ತು ನಿಮಿಷ ನಡೆದರೆ ನನ್ನ ಅಜ್ಜಿ ಮನೆ. ಹಾಗಾಗಿ ಕದ್ರಿ ದೇವಸ್ಥಾನಕ್ಕೆ ಹೋಗುವ ದಾರಿಯ ಸುತ್ತಮುತ್ತಲಿನ ಓಣಿಗಳು, ಅಲ್ಲಿಯ ಗೂಡಂಗಡಿಗಳು, ಮುಖ್ಯರಸ್ತೆಯ ಬಲಗಡೆಯಿರುವ ತಾವರೆಕೆರೆ ಇವೆಲ್ಲಾ ಎಂದಿಗೂ ಮರೆಯಲಾಗದ ಚಿತ್ರಗಳು. ಈಗಿನವರು ಯಾರಾದರೂ ಈ ಲೇಖನವನ್ನು ಓದಿದರೆ ಅಲ್ಲಿ ಯಾವುದೇ ತಾವರೆಕೆರೆ ಇಲ್ಲ ಎಂದು ಹೇಳಬಹುದು. ಯಾಕೆಂದರೆ ಅಲ್ಲಿ ಈಗ ಕೆರೆಗೆ ಮಣ್ಣು ಮುಚ್ಚಿ ಯಾವುದೋ ಕಟ್ಟಡ ಎದ್ದಿದೆ ಅಂತ ಕೇಳಿದ್ದೆ.ಆದರೆ ನನಗೆ ಈ ತಾವರೆಕೆರೆಯ ಕಥೆ ಮರೆಯಲಸಾಧ್ಯ. ನಾವು ಸಣ್ಣವರಿದ್ದಾಗ ಅಜ್ಜಿ ಮನೆಯಲ್ಲಿ ಎಲ್ಲರೂ ಅಂದರೆ ಸೋದರ ಮಾವಂದಿರು, ಚಿಕ್ಕಮ್ಮ,ಅಮ್ಮ ಒಟ್ಟಾದಾಗ ಈ ತಾವರೆಕೆರೆಯ ಪ್ರಸ್ತಾಪ ಬಂದೇ ಬರುತ್ತಿತ್ತು. ಇದು ನನ್ನ ಅಮ್ಮ ಕಾಲೇಜಿನಲ್ಲಿ ಓದುತ್ತಿದ್ದಾಗ ನಡೆದ ಘಟನೆ.
ಒಂದು ಸಂಜೆ ನನ್ನ ಅಜ್ಜ,ಅಜ್ಜಿಯನ್ನು, ಮಕ್ಕಳನ್ನು ಅಂದರೆ ನನ್ನ ತಾಯಿ ಹಾಗೂ ಹಿರಿಯ ಸೋದರಮಾವ ಇವರನ್ನು ಕಾರಿನಲ್ಲಿ ಕೂರಿಸಿಕೊಂಡು ಅದೆಲ್ಲಿಗೋ ಹೊರಟಿದ್ದರು. ತಾವರೆಕೆರೆಯ ಹತ್ತಿರ ಬಂದಾಗ ಗಾಡಿ ರಿವರ್ಸ್ ತೆಗೆಯಬೇಕಾದ ಪ್ರಸಂಗ ಬಂತು. ಗಾಡಿ ರಿವರ್ಸ್ ಮಾಡಿದ ಜಾಗ ಇಳಿಜಾರು ಆಗಿದ್ದುದರಿಂದ ಅದು ಕೆರೆಯೊಳಗೆ ಬಿದ್ದು ದಡದಿಂದ ಸುಮಾರು ನಡುವಿಗೆ ತೇಲತೊಡಗಿತು.ವಾಸ್ತವಿಕತೆಯ ಅರಿವಾದಾಗ ನಮ್ಮ ಅಜ್ಜ ಹಾಗೂ ಸೋದರಮಾವ ಕಿಟಕಿಯ ಮೂಲಕ ಹೊರಬಂದು ಗಾಡಿಯ ಮೇಲ್ಭಾಗ ಹತ್ತಿ ಅಮ್ಮನನ್ನು ಎಳೆದರು. ಈ ಮೂರು ಜನರ ತೂಕದಿಂದ ಗಾಡಿ ಮತ್ತೂ ಮುಳುಗಿ ಒಳಗಡೆ ಕೂತಿದ್ದ ಅಜ್ಜಿಯ ಕುತ್ತಿಗೆ, ಕಿವಿಯವರೆಗೂ ನೀರು ತುಂಬಲು ಶುರುವಾಯಿತು. ಅಷ್ಟರಲ್ಲಿ ಅಲ್ಲೇ ಹಿಂಬದಿಯಲ್ಲಿದ್ದ ಗ್ಯಾರೇಜಿನ ಜನರು ಅವರ ಸಹಾಯಕ್ಕೆ ಧಾವಿಸಿ ಬಂದರು. ಕಾರಿನ ಮೇಲೆ ನಿಂತವರನ್ನು ದಡಕ್ಕೆ ತಂದರು.ಕಾರಿನ ಬಾಗಿಲು ಮತ್ತಷ್ಟು ಭದ್ರವಾದ ಕಾರಣ ಅವರಿಗೆ ಅಜ್ಜಿಯನ್ನು ಹೊರತರಲಾಗಲಿಲ್ಲ.ಕೊನೆಗೆ ಓಣಿ ಪಕ್ಕದ ಅಂಗಡಿಯ ಮಾಲಿಕರೊಬ್ಬರು ನೀರೊಳಗೆ ಹಾರಿ ಅದ್ಹೇಗೋ ಅಜ್ಜಿಯನ್ನು ಹೊರಗೆಳೆದರು. ಆದರೆ ಅಜ್ಜಿಯ ದಪ್ಪ ಮೈಕಟ್ಟಿನ ದೆಸೆಯಿಂದಲೋ ಅಥವಾ ತೂಕಕ್ಕೋ ಅವರನ್ನು ಎಳೆಯುತ್ತಿದ್ದವರ ಕೈ ತಪ್ಪಿ ಹೋಯಿತು.ನೆರೆದವರೆಲ್ಲಾ ಗಾಬರಿಗೊಳ್ಳುತ್ತಿರುವಾಗ ಸ್ವತಹ ಅಜ್ಜಿನೇ ಈಜಿಕೊಂಡು ದಡ ಸೇರಿದರು.ಅಂತಹ ಗಟ್ಟಿಗಿತ್ತಿ ನಮ್ಮ ಅಜ್ಜಿ.
ಅಂತೂ ಈ ಘಟನೆ ಸುಖಾಂತ್ಯಗೊಂಡಿತು. ಹಾಗಾಗಿ ದೇವಸ್ಥಾನಕ್ಕೆ ಹೋದಷ್ಟು ಸಲವೂ ತಾವರೆಕೆರೆಯನ್ನು ದಾಟಿ ಹೋದಾಗಲೆಲ್ಲಾ ನಾವು ನೋಡದೇ ಇದ್ದ ಘಟನೆಯು ನಮ್ಮ ಕಣ್ಣೆದುರಿಗೆ ನಡೆಯಿತೇನೋ ಅನ್ನುವ ಹಾಗೆ ಸ್ಪಷ್ಟವಾಗಿ ಕಾಣುತ್ತಿತ್ತು.ಈ ವಿಷಯ ಸುತ್ತಮುತ್ತಲಿನ ಹಳೆ ತಲೆಯರಿಗೆ ಯಾರಿಗಾದರೂ ನೆನಪಿದ್ದರೂ ಇರಬಹುದೇನೋ ಗೊತ್ತಿಲ್ಲ. ಇನ್ನು ಅಜ್ಜಿಯ ಬಗ್ಗೆ ಹೇಳುವುದಾದರೆ ನಮ್ಮ ಅಜ್ಜಿಯದು ಗಟ್ಟಿಮುಟ್ಟಾದ ದೇಹ. ಕಳೆದ ನವಂಬರ್ 2020ರಲ್ಲಿ ತನ್ನ 97ನೇ ಹುಟ್ಟುಹಬ್ಬವನ್ನು ಆಚರಿಸಿದರು.ಅವರದು ನಾಲ್ಕು ಗಂಡು ಹಾಗೂ ಎರಡು ಹೆಣ್ಣು ಮಕ್ಕಳ ತುಂಬು ಸಂಸಾರ. ಅಜ್ಜಿ ಈಗ ಮಂಗಳೂರು ಬಿಟ್ಟು ತನ್ನ ಕೊನೆಯ ಮಗನ ಮನೆಯಲ್ಲಿ ಚಾರ್ಮಾಡಿಯ ಕಕ್ಕಿಂಜೆಯಲ್ಲಿ ವಾಸಿಸುತ್ತಿದ್ದಾರೆ. ಕಕ್ಕಿಂಜೆ ನಮ್ಮ ಅಜ್ಜನ ಊರು. ಅಂದರೆ ಅವರ ತಾತ-ಮುತ್ತಾತಂದಿರು ಅಲ್ಲಿ ಜಮೀನ್ದಾರರಾಗಿ ಬಾಳಿದವರು. ಅಜ್ಜಿಗೆ ಈಗ ಓಡಾಡಲು ಸ್ವಲ್ಪ ಕಷ್ಟವೆನಿಸಿದರೂ ನೆನಪಿನ ಶಕ್ತಿ ಚೆನ್ನಾಗಿಯೇ ಇದೆ. ನಾನಾದರೋ ಈ ವಯಸ್ಸಿನಲ್ಲಿ ಎಂ.ಎ. ಮಾಡಲು ಹೊರಟರೆ ನನ್ನ ಅಜ್ಜಿಯು ಆಗಿನ ಕಾಲದಲ್ಲೇ ಧಾರವಾಡ ವಿಶ್ವವಿದ್ಯಾಲಯದಲ್ಲಿ ಹಿಂದಿ ವಿಷಯದಲ್ಲಿ ಎಂ.ಎ. ಮಾಡಿ ಮಂಗಳೂರಿನ ಬಲ್ಮಠದ ಜ್ಯೋತಿ ಸರ್ಕಲ್ ಬಳಿಯಿರುವ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ನಿವೃತ್ತಿಯಾದವರು.
ಮೊನ್ನೆ ದೀಪಾವಳಿಗೆ ಊರಿಗೆ ಹೋದಾಗ ಅಜ್ಜಿಯನ್ನು ನೋಡಲು ಹೋಗಿದ್ದೆ. ನಾನು ಕನ್ನಡದಲ್ಲಿ ಎಂ.ಎ. ಮಾಡಲು ಹೊರಟಿರುವುದನ್ನು ಕೇಳಿ ತುಂಬಾ ಹರ್ಷಪಟ್ಟರು.ಜೊತೆಗೆ ತಲೆಬಿಸಿನೂ ಮಾಡಿಕೊಂಡ್ರು. ನೀನು ಶಾಲಾ ದಿನಗಳಲ್ಲಿ ಹಿಂದಿ ವಿಷಯ ತಗೊಂಡಿದ್ದಿಯಲ್ವಾ, ನಿನಗೆ ಕನ್ನಡ ವ್ಯಾಕರಣ , ತ್ರಿಪದಿ, ಷಟ್ಪದಿಗಳ ಬಗ್ಗೆ ಏನೂ ಗೊತ್ತಿಲ್ಲ. ಜೊತೆಗೆ ನೀನು ವಿಜ್ಞಾನದ ವಿದ್ಯಾರ್ಥಿ. ಕನ್ನಡ ವಿಷಯದಲ್ಲಿ ಹೇಗೆ ಎಂ.ಎ. ಮಾಡ್ತಿ? ಅಂತೆಲ್ಲಾ ಅವರೇ ನನಗಿಂತ ಜಾಸ್ತಿ ತಲೆಕೆಡಿಸಿಕೊಂಡ್ರು. ಕೊನೆಗೆ ‘ಕನ್ನಡ ಕೈಪಿಡಿ’ ಅಂತ ಒಂದು ಪುಸ್ತಕ ಇದೆ. ನೀನು ಅದನ್ನು ಓದಿಕೋ. ವ್ಯಾಕರಣಗಳನ್ನೆಲ್ಲಾ ಅದರಲ್ಲಿ ವಿವರಿಸಿದ್ದಾರೆ’ ಅಂತ ಅಜ್ಜಿ ಹೇಳಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಕನ್ನಡ ಕೈಪಿಡಿ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೆ ಇರುವ ಒಂದು ಪಠ್ಯಪುಸ್ತಕ. ಅಜ್ಜಿ ಓದಿದ ವಿಷಯ ಹಿಂದಿ. ಹಾಗಿರುವಾಗ ಈ ಪುಸ್ತಕದ ಬಗ್ಗೆ ಅಜ್ಜಿಗೆ ಹೇಗೆ ಗೊತ್ತು ಅಂತ ಕೇಳಿದಾಗ ಆಜ್ಜಿ ಹೇಳಿದ್ದನ್ನು ಕೇಳಿ ನಾನು ನಿಜವಾಗಿಯೂ ವಿಸ್ಮಯ ಪಟ್ಟೆ. ಆ ದಿನಗಳಲ್ಲಿ ಸ್ಟಾಫ್ ರೂಮ್‍ನಲ್ಲಿ ಹಿಂದಿ, ಕನ್ನಡ ಹಾಗೂ ಇಂಗ್ಲಿಷ್ ಪಾಠದ ಬಗ್ಗೆ ಎಲ್ಲಾ ಪ್ರಾಧ್ಯಾಪಕರು ಒಟ್ಟಿಗೆ ಕೂತು ಚರ್ಚೆ ಮಾಡುತ್ತಿದ್ದರಂತೆ. ಹಾಗಾಗಿ ಎಲ್ಲರಿಗೂ ಎಲ್ಲರ ಪುಸ್ತಕದ ಜ್ಞಾನವೂ ಇತ್ತಂತೆ. ಅಕಸ್ಮಾತ್ ಆಗಿ ಕನ್ನಡ ಪ್ರಾಧ್ಯಾಪಕರು ರಜೆಯಲ್ಲಿದ್ದರೆ ಅವರ ಎಲ್ಲಾ ತರಗತಿಯ ಪಾಠವನ್ನು ನಮ್ಮ ಅಜ್ಜಿಯೇ ತೆಗೆದುಕೊಳ್ಳುತ್ತಿದ್ದರಂತೆ! ಅಜ್ಜಿ ಬಗ್ಗೆ ಎಲ್ಲಾ ಗೊತ್ತಿದೆ ಅಂತ ಅಂದುಕೊಂಡಿದ್ದ ನಾನು ಈ ವಿಷಯಗಳನ್ನು ಕೇಳಿ ಚಕಿತಳಾದೆ. ಅವರೇ ಸಣ್ಣಪುಟ್ಟ ಪದಗಳನ್ನು ಕಟ್ಟಿ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಡಿಸುತ್ತಿದ್ದ ನಳದಮಯಂತಿ ನಾಟಕ, ಶಾಕುಂತಲೆಯ ನಾಟಕ ಮತ್ತಿನ್ನೇನೋ ವಿಚಾರಗಳು ಅವರ ನೆನಪಿನ ಬುತ್ತಿಯಿಂದ ಹೊರಬರುತ್ತಿದ್ದರೆ ನನಗೋ ಸಾಗರದಾಳದಿಂದ ಮುತ್ತುಗಳೇ ಹೊರಬರುತ್ತಿವೆಯೇನೋ ಅಂತ ಅನ್ನಿಸುತ್ತಿತ್ತು.
ಈ ಇಳಿವಯಸ್ಸಿನಲ್ಲೂ `ಕನ್ನಡದ ಕೈಪಿಡಿ’ ಅವರಿಗೆ ನೆನಪಿರಬೇಕಾದರೆ ಅದನ್ನು ಅವರು ಎಷ್ಟು ಅಧ್ಯಯನ ಮಾಡಿರಬೇಕು. ಅದರ ನೆನಪಿರುವುದು ಒಂದು ಸೋಜಿಗವೇ ಸರಿ. ಅವರ ಪ್ರೀತಿಯ ಆಶೀರ್ವಾದ ನನ್ನ ಮೇಲಿರುವುದು ನನ್ನನ್ನು ಭಾಗ್ಯವಂತಳನ್ನಾಗಿ ಮಾಡಿದೆ. ಅಂದ ಹಾಗೆ ನನ್ನ ಅಜ್ಜಿಯ ಹೆಸರು ಎಚ್. ಪದ್ಮಾವತಿ. ಅವರಿಗೆ ನನ್ನ ತುಂಬು ಹೃದಯದ ನಮನಗಳು.
ಹೆಚ್ಚಿನ ಬರಹಗಳಿಗಾಗಿ
ಗೌರವ ಸಂಪಾದಕರ ಮಾತು – ಡಾ. ಜಿ. ಎನ್. ಉಪಾಧ್ಯ
ಬರ್ಮಾ ದೇಶದ ರಾಮಾಯಣ
ಕಣಗಿಲೆಯ ಫಿರ್ಯಾದು