ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಶಾಂತಲಾ ಹೆಗಡೆ
ಇತ್ತೀಚಿನ ಬರಹಗಳು: ಡಾ. ಶಾಂತಲಾ ಹೆಗಡೆ (ಎಲ್ಲವನ್ನು ಓದಿ)

ನಾನು ಮಲೆನಾಡಿನ ಕಡೆಯವಳು. ಯಲ್ಲಾಪುರ ಹತ್ತಿರದ ಕಂಪ್ಲಿ ಮಂಚಿಕೇರಿ ನನ್ನ ಊರು. ಮದುವೆಯಾಗಿ ಮುಂಬಯಿಯಲ್ಲಿ ನೆಲೆಸಿದ್ದೇನೆ. ನಾನು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದದ್ದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗೌಳಿಗ ಮಹಿಳೆಯರ ಸ್ಥಿತ್ಯಂತರಗಳು (ಉತ್ತರ ಕನ್ನಡ ಜಿಲ್ಲೆಯನ್ನು ಅನುಲಕ್ಷಿಸಿ)' ಎನ್ನುವ ವಿಷಯದ ಮೇಲೆ ಡಾ. ಹಿ. ಚಿ. ಬೋರಲಿಂಗಯ್ಯನವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದೇನೆ. ಸಾಹಿತ್ಯದಲ್ಲಿ ನನಗಿರುವ ಆಸಕ್ತಿಯನ್ನು ಪೋಷಿಸಿಕೊಳ್ಳಲು ಒಂದು ಸೂಕ್ತ ಮಾರ್ಗದರ್ಶನದ ಅಧ್ಯಯನವು ಬೇಕೆಂಬ ಉದ್ದೇಶದಿಂದ ಈಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಓದುತ್ತಿದ್ದೇನೆ.

ನಾನೇಕೆ ಓದುತ್ತೇನೆ’ ಎಂಬ ಪ್ರಶ್ನೆಯನ್ನು ಎಷ್ಟೋ ಬಾರಿ ಕೇಳಿಕೊಳ್ಳುತ್ತೇನೆ. ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಹೊರಟಾಗ ಮನಸ್ಸಿನಾಳದಲ್ಲಿ ನೆನಪಿನ ತರಂಗಗಳು ಬಿಚ್ಚಿಕೊಳ್ಳುತ್ತವೆ. ನನ್ನಲ್ಲಿ ಓದುವ ಹವ್ಯಾಸ ಪ್ರಾರಂಭವಾದದ್ದು ಹೇಗೆ? ಎಲ್ಲಿ? ಯಾವಾಗ? ಇತ್ಯಾದಿ. ನನ್ನ ಅಮ್ಮನ ಮನೆಯಲ್ಲಿ ಎಲ್ಲರಿಗೂ ಓದುವ ಹುಚ್ಚು. ನಮ್ಮದು ಮಲೆನಾಡಿನ ಪ್ರದೇಶವಾದುದರಿಂದ ಮನೆಗಳು ಒಂದಕ್ಕೊಂದು ಕೂಡಿಕೊಂಡು ಇವೆ. ನೆರೆಹೊರೆಯವರಲ್ಲಿಯೂ ಓದುವ ಹುಚ್ಚು. ಹೊಸ ವಿಷಯಗಳನ್ನು ಕುರಿತು ಚರ್ಚೆ ಮಾಡುವುದೆಂದರೆ ಎಲ್ಲಿಲ್ಲದ ಉತ್ಸಾಹ. ಯಾವುದೇ ಪುಸ್ತಕವು ದೊರೆತರೂ ಎಲ್ಲರಿಂದಲೂ ಬೇಡಿಕೆ. ಅದರಲ್ಲಿಯೂ ಭೈರಪ್ಪನವರ ಕಾದಂಬರಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಯಾಕೆಂದರೆ ಅದರಲ್ಲಿ ಹೊಸತನ ಇರುತ್ತದೆ. ನಮಗಿದ್ದ ಒಂದು ಸಾಮಾನ್ಯ ದೃಷ್ಟಿಕೋನದಲ್ಲಿಯೂ ಕಾದಂಬರಿಯನ್ನು ಕುರಿತು ಚರ್ಚಿಸಲು ಆಸ್ಪದವಿರುತ್ತದೆ ಎಂದು. ಆವರಣ' ಕಾದಂಬರಿಯನ್ನಂತೂ ಎಲ್ಲರೂ ಓದಿ ನಮ್ಮ ಇತಿಹಾಸದ ಬಗ್ಗೆ ಮಾತನಾಡಿದ್ದೇ ಆಡಿದ್ದು.ಇದರಲ್ಲಿ ಭೈರಪ್ಪನವರ ಕಾದಂಬರಿಗಳು ಸಾಮಾನ್ಯ ಜನರನ್ನೂ ಚಿಂತನೆಗೆ ಒಳಪಡಿಸುವ ಪರಿಯನ್ನು ಕಾಣಬಹುದು.

ಈ ರೀತಿಯಾಗಿ ಓದುವ ವಾತಾವರಣದಲ್ಲಿ ಬೆಳೆದ ನಾನು ಡಿಗ್ರಿಯನ್ನು ಮುಗಿಸಿ ಉದ್ಯೋಗಕ್ಕೆಂದು ಕಾಲೇಜು ಸೇರಿದಾಗ ಅಲ್ಲಿನ ಗ್ರಂಥಾಲಯ ನನ್ನನ್ನು ಬಹಳವಾಗಿ ಆಕರ್ಷಿಸಿತು. ಅಲ್ಲಿನ ಪುಸ್ತಕಗಳನ್ನು ನೋಡುತ್ತಾ ಹೋಗುವಾಗ ಭೈರಪ್ಪನವರ ಕಾದಂಬರಿಗಳು ಸಾಲು ಸಾಲಾಗಿ ಇದ್ದುದನ್ನು ಕಂಡೆ. ನನಗಂತೂ ಖುಷಿಯೋ ಖುಷಿ. ಮುಖ್ಯ ಲೈಬ್ರರಿಯನ್ ಕೂಡಾ ಭೈರಪ್ಪನವರ ಕಾದಂಬರಿಗಳನ್ನು ಓದಿ, ಚೆನ್ನಾಗಿವೆ’ ಎಂದು ಪುಸ್ತಕಗಳನ್ನು ಕೊಟ್ಟರು. ಹೀಗೆ ನಾನು ಭೈರಪ್ಪನವರ ಕಾದಂಬರಿಗಳನ್ನು ಸಾಲು ಸಾಲಾಗಿಯೇ ಓದಿದೆ. ಅವರ ಕಾದಂಬರಿಯ ಪದ ಪದಗಳಲ್ಲಿಯೂ ಅರ್ಥವಿರುತ್ತದೆ. ಅದು ನಮ್ಮನ್ನು ಚಿಂತನೆಗೆ ಈಡು ಮಾಡುತ್ತದೆ. ಕಾದಂಬರಿಯ ಕಥಾವಸ್ತು ನಮ್ಮ ಜೀವನದಲ್ಲಿಯೇ ನಡೆದಿರುವುದೇನೋ ಎನ್ನಿಸುತ್ತದೆ, ವಾಸ್ತವತೆಗೆ ತೀರಾ ಹತ್ತಿರದಲ್ಲಿ ನಿಂತಿರುವ ಹಾಗೆ. ಅವರ ಪ್ರತಿಯೊಂದು ಕಾದಂಬರಿಯ ಬಗ್ಗೆಯೂ ಹೇಳುತ್ತಾ ಹೊರಟರೆ ನನ್ನಲ್ಲಿ ಪದಗಳ ಕೊರತೆಯಾಗಬಹುದು. ಅವರ ಒಂದು ಕಾದಂಬರಿಯು ಒಂದು ನೊಂದ ಜೀವಕ್ಕೆ ಹೇಗೆ ಸಾಂತ್ವನವನ್ನು ನೀಡಿತು ಎನ್ನುವುದರ ಬಗ್ಗೆ ನಾನಿಲ್ಲಿ ಹೇಳುತ್ತೇನೆ. ಭೈರಪ್ಪನವರ ಕಾದಂಬರಿಯ ಓದಿನಿಂದ ಒಬ್ಬ ವ್ಯಕ್ತಿಯ ಜೀವನವನ್ನು ಕುರಿತಾದ ದೃಷ್ಟಿಕೋನವೇ ಹೇಗೆ ಬದಲಾಯಿತೆನ್ನುವುದನ್ನು ತಿಳಿಸುತ್ತೇನೆ.

ನನ್ನ ಗೆಳತಿಯೊಬ್ಬಳು ಬಹಳ ಸಾಂಪ್ರದಾಯಿಕವಾದ ವೈದಿಕ ಮನೆತನಕ್ಕೆ ಸೇರಿದವಳು. ಮನೆಯಲ್ಲಿ ವಿಪರೀತ ಮಡಿವಂತಿಕೆ. ಅವಳ ತಂದೆ ಅತ್ಯಂತ ಸಂಪ್ರದಾಯ ಶರಣರು. ಅವರು ನನ್ನ ಗೆಳತಿಯನ್ನು ಡಿಗ್ರಿಯವರೆಗೆ ಓದಿಸಿದ್ದೇ ಬಹಳ ಹೆಚ್ಚಿನದು. ಡಿಗ್ರಿ ಮುಗಿದ ಕೂಡಲೇ ಅಲ್ಲಿಯೇ ಹತ್ತಿರದಲ್ಲಿದ್ದ ಹುಡುಗನನ್ನು ಹುಡುಕಿ ಮದುವೆಯನ್ನು ಮಾಡಿಬಿಟ್ಟರು. ಆ ಹುಡುಗನಿಗೆ ಮೂತ್ರಪಿಂಡದ ರೋಗವಿತ್ತು. ಗಂಡಿನ ಕಡೆಯವರು ಈ ವಿಷಯವನ್ನು ಮುಚ್ಚಿಟ್ಟು ಮದುವೆ ಮಾಡಿಸಿಕೊಂಡಿದ್ದರು. ಇವಳಿಗೆ ಮದುವೆಯಾದ ನಂತರ ಇದು ಗೊತ್ತಾಯಿತು. ಆದರೆ ಬಿಟ್ಟು ಬರುವಂತಿರಲಿಲ್ಲ. ಮನೆಯ ಮರ್ಯಾದೆಯ ಪ್ರಶ್ನೆ. ಒಂದು ಮಗುವೂ ಆಯಿತು. ಮಗುವಿಗೆ ಮೂರು ವರ್ಷ ತುಂಬುವಾಗ ಗಂಡ ತೀರಿ ಹೋದ. ಅವಳಿಗೆ ಇನ್ನೂ ಚಿಕ್ಕ ವಯಸ್ಸು. ತವರಿನಲ್ಲಿ ಮನೆಯ ತುಂಬ ಜನ. ಇವಳನ್ನು ಆದರಿಸುವವರು ಯಾರೂ ಇಲ್ಲ. ಆದರೂ ಗಂಡನ ಮನೆಯಲ್ಲಿ ಇರಲಾಗದೇ ತವರಿಗೆ ಬಂದಳು. ನಾನು ಅವಳ ಮನೆಗೆ ಹೋಗಿ ಅವಳನ್ನು ಭೇಟಿಯಾಗುತ್ತಿದ್ದೆ. ಅವಳನ್ನು ನೋಡಿದಾಗಲೆಲ್ಲ ನನ್ನನ್ನು ಕಾಡುತ್ತಿದ್ದ ಪ್ರಶ್ನೆಯೆಂದರೆ ಇವಳೇಕೆ ಮರು ಮದುವೆಯಾಗಬಾರದು ಎನ್ನುವುದು. ಒಂದು ಶನಿವಾರ ನಾನು ಅವಳ ಮನೆಗೆ ಹೋಗುವಾಗ ವಂಶವೃಕ್ಷ' ಕಾದಂಬರಿಯನ್ನು ತೆಗೆದುಕೊಂಡು ಹೋದೆ. ಬ್ಯಾಗಿನಲ್ಲಿ ಜಾಗವಿದ್ದರೂ ಕೈಯಲ್ಲಿ ಹಿಡಿದುಕೊಂಡು ಹೋಗಿ ಎಲ್ಲರಿಗೂ ಕಾಣುವಂತೆ ಇಟ್ಟೆ. ನನ್ನ ಗೆಳತಿಯ ತಂದೆ ಅದನ್ನು ನೋಡಲಿ ಎಂಬುದು ನನ್ನ ಆಸೆಯಾಗಿತ್ತು. ಅವರು ಅದನ್ನು ನೋಡಿದರು. ನಾನು ಅವರಿಗೆ ಇದನ್ನು ಓದಿ, ತುಂಬಾ ಚೆನ್ನಾಗಿದೆ’ ಎಂದೆ. ಓದುವ ಹವ್ಯಾಸ ಅವರಿಗೆ ಸ್ವಲ್ಪಮಟ್ಟಿಗೆ ಇತ್ತು. ಸರಿ ಎಂದು ತೆಗೆದುಕೊಂಡರು. ಒಂದು ತಿಂಗಳಿನಲ್ಲಿ ಓದಿದರು.

ಒಮ್ಮೆ ನಾನು ಊರಿಗೆ ಹೊರಟಿದ್ದಾಗ ಬಸ್‍ಸ್ಟಾಪಿನಲ್ಲಿ ಸಿಕ್ಕರು. ಮನೆಗೆ ಬಾ, ನಿನ್ನೊಡನೆ ಮಾತನಾಡಬೇಕು' ಎಂದರು. ನಾನು ಮುಂದಿನ ಶನಿವಾರ ಬರುವುದಾಗಿ ತಿಳಿಸಿದೆ. ನಂತರದ ಶನಿವಾರ ಮತ್ತೆ ನನ್ನೂರಿಗೆ ಹೋದಾಗ ಅವರ ಮನೆಗೆ ಹೋದೆ. ಅವರು ನನ್ನೊಡನೆ ಮಾತನಾಡಿದ ರೀತಿಯಿಂದ ನನಗೆ ಅತ್ಯಂತ ಆಶ್ಚರ್ಯವಾಯಿತು. ಅವರು ವಂಶವೃಕ್ಷ’ ಕಾದಂಬರಿಯನ್ನು ಓದಿ, ತಮ್ಮ ಮಗಳಿಗೆ ಮರು ಮದುವೆಯನ್ನು ಮಾಡಲು ತಯಾರಾಗಿದ್ದರು. ಒಂದು ಕಾದಂಬರಿಯನ್ನು ಓದಿದುದರಿಂದ ಇವರಲ್ಲಿ ಇಷ್ಟೊಂದು ಬದಲಾವಣೆ ಸಾಧ್ಯವಾಯಿತಲ್ಲ ಎಂದು ನನಗೆ ಒಳಗೊಳಗೆ ಬಹಳ ಸಂತೋಷವಾಯಿತು. ನನ್ನಿಂದ ಒಬ್ಬರ ಜೀವನವು ಸುಖರೂಪದಲ್ಲಿ ಬದಲಾಯಿತೆಂದು ಆನಂದಿಸಿದೆ. ನನ್ನ ಗೆಳತಿಗೆ ಮರುಮದುವೆಯಾಯಿತು. ಇದು 2013ರಲ್ಲಿ. ಅವಳ ತಂದೆ ಈಗ ಇಲ್ಲ. ಆದರೆ ಅವಳು ತನ್ನ ಮಗಳು ಮತ್ತು ಪತಿಯೊಂದಿಗೆ ಆರಾಮವಾಗಿ ಇದ್ದಾಳೆ.

ವಂಶವೃಕ್ಷವನ್ನು ಓದಿದ ನಂತರ ನೀನು ಕಾಲೇಜಿನಿಂದ ಬರುವಾಗ ಭೈರಪ್ಪನವರ ಎಲ್ಲ ಕಾದಂಬರಿಗಳನ್ನೂ ತಾ, ನಾನು ಓದಬೇಕು' ಎಂದು ನನ್ನ ಗೆಳತಿಯ ತಂದೆಯವರು ಹೇಳಿ ಅದರಂತೆ ಎಲ್ಲ ಪುಸ್ತಕಗಳನ್ನೂ ಓದಿದ್ದರು. ಈ ಮೂಲಕವಾಗಿ ಒಬ್ಬ ಗಂಭೀರ ಓದುಗನನ್ನು ಸೃಷ್ಟಿಸಿದ ಖುಷಿ ನನಗಾಯಿತು. ಬದಲಾವಣೆಯ ಗಾಳಿಯನ್ನು ಬೀಸುವ ತಾಕತ್ತು ಭೈರಪ್ಪನವರ ಬರಹಗಳಿಗೆ ಇದೆ.ಭೈರಪ್ಪನವರಲ್ಲಿ ಪುರೋಗಾಮಿ ಮನೋಭಾವವಿಲ್ಲ. ಆದ್ದರಿಂದಲೇ ಅವರು ವಂಶವೃಕ್ಷ ಕಾದಂಬರಿಯಲ್ಲಿ ಈ ವಿಧವಾ ವಿವಾಹವು ಅಸಫಲವಾಗುವಂತೆ ಚಿತ್ರಿಸಿದ್ದಾರೆ’ ಎಂದು ಪೂರ್ವಾಗ್ರಹಪೀಡಿತರಾದ ಕೆಲವು ವಿಮರ್ಶಕರು ಹೇಳುವುದನ್ನು ನಾನು ಬಲ್ಲೆ. ಕಾದಂಬರಿಯಲ್ಲಿ ಅಸಫಲವಾದ ವಿಧವಾ ವಿವಾಹ ನಿಜ ಜೀವನದಲ್ಲಿ ಸಫಲವಾಗಿ ಅಬಲೆಯೊಬ್ಬಳ ಬಾಳು ಬೆಳಗುವಂತಾಯಿತಲ್ಲ, ಇದಕ್ಕೆ ಈ ವಿಮರ್ಶಕರು ಏನೆನ್ನುವರು?
ಭೈರಪ್ಪನವರ ಮುಂದಿನ ಕಾದಂಬರಿಯ ಶೀರ್ಷಿಕೆ ಏನು ಎನ್ನುವುದರ ಬಗ್ಗೆ ಎಲ್ಲ ಓದುಗರೂ ಕುತೂಹಲಿಗಳಾಗಿರುತ್ತಾರೆ. ನಮ್ಮ ಸುತ್ತಮುತ್ತಲಿನ ಕಥೆಯೇ ಆದ್ದರಿಂದ ಓದುವಾಗ ನಮ್ಮಲ್ಲಿ ಸ್ಪಂದನೆ ಇರುತ್ತದೆ. ಕಾದಂಬರಿಯ ಪಾತ್ರಗಳು ನಮಗೆ ಹತ್ತಿರವಾಗುತ್ತವೆ.