ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಹಾಭಾರತದ ಮನೋಹರ ಮಿಥಕಗಳು

ಉಮಾ ರಾಮರಾವ್
ಇತ್ತೀಚಿನ ಬರಹಗಳು: ಉಮಾ ರಾಮರಾವ್ (ಎಲ್ಲವನ್ನು ಓದಿ)

ಮಿಥ್ ಎನ್ನುವ ಇಂಗ್ಲಿಷ್ ಪದಕ್ಕೆ ಸಂವಾದಿಯಾಗಿ ಮಿಥಕ ಎನ್ನುವ ಪದವನ್ನು ಕನ್ನಡದ ಸಾಹಿತಿಗಳಾದ ಎ. ಎನ್. ಮೂರ್ತಿರಾಯರು ಪ್ರಚಾರಕ್ಕೆ ತಂದರು. ಮಿಥ್ ಎಂದರೆ ಪುರಾಣ. ಪುರಾಣದಲ್ಲಿ ಬರುವ ಅಲೌಕಿಕ ಸಂಗತಿಗಳನ್ನು ನಾವು ಮಿಥಕಗಳು ಎನ್ನಬಹುದು. ಮಿಥಕಗಳು ಪವಾಡಗಳಿಂದ ಬೇರೆಯಾದವು. ಪವಾಡವು ಯಾವುದೋ ಒಂದು ಸಂದರ್ಭದಲ್ಲಿ ಒಂದು ಸ್ಥಳದಲ್ಲಿ ಒಬ್ಬ ಅಥವಾ ಕೆಲವು ಜನರಿಗೆ ಸಂಬಂಧಿಸಿದಂತೆ ನಡೆಯುವ ಅಲೌಕಿಕ ಘಟನೆ. ಮಿಥಕವು ಸಾಂಪ್ರದಾಯಿಕವಾದ ಆದರೆ ಅಲೌಕಿಕದ ಹೊಳಪುಳ್ಳ ಒಂದು ಕಥೆ. ತುಂಬಿದ ಸಭೆಯಲ್ಲಿ ವಸ್ತ್ರಾಪಹರಣಕ್ಕೆ ಒಳಗಾಗುವ ದ್ರೌಪದಿಯ ಸೀರೆಯು ಕೃಷ್ಣನ ವರದಿಂದ ಅಕ್ಷಯವಾಗುವುದು ಒಂದು ಪವಾಡ. ಆದರೆ ತನ್ನ ಪೂರ್ವ ಜನ್ಮದ ತಪಸ್ಸಿನಲ್ಲಿ ದೇವರನ್ನು “ಪತಿಂ ದೇಹಿ” ಎಂದು ಐದು ಬಾರಿ ಪ್ರಾರ್ಥಿಸಿಕೊಂಡುದರಿಂದ ಅವಳಿಗೆ ಪಂಚಪಾಂಡವರು ಗಂಡಂದಿರಾದರು ಎನ್ನುವುದು ಒಂದು ಮಿಥಕ.

ಪುರಾತನ ಸಾಹಿತ್ಯದಲ್ಲಿ ಸಾಕಷ್ಟು ಮಿಥಕಗಳನ್ನು ಕಾಣಬಹುದು. ತನ್ನ ಸುತ್ತಲಿನ ಸೋಜಿಗಗಳಿಗೆ ಮನುಷ್ಯನ ಕಲ್ಪನಾಮಯವಾದ ಮನಸ್ಸು ಸ್ಪಂದಿಸಿದಾಗಲೆಲ್ಲ ಮಿಥಕಗಳು ಸೃಷ್ಟಿಯಾಗುತ್ತವೆ. ಕಾಲಕ್ರಮೇಣ ಇವು ಜನರ ನಂಬಿಕೆಗಳಲ್ಲಿ ನೆಲೆಯೂರಿ ಬಿಡುತ್ತವೆ. ಯುಗಗಳು ಉರುಳಿದಂತೆ ಮತ್ತೆ ಮತ್ತೆ ಹೊಸ ಹುಟ್ಟನ್ನು ಪಡೆದು ಎದ್ದು ನಿಲ್ಲುತ್ತವೆ. ಭಾರತೀಯರಂತೆಯೇ ಅತ್ಯಂತ ಕಲ್ಪನಾಮಯವಾದ ಸೃಜನಶೀಲ ಮನಸ್ಸನ್ನು ಹೊಂದಿದ ಪುರಾತನ ಗ್ರೀಕರು ಕೂಡ ಅಸಂಖ್ಯವಾದ ಮಿಥಕಗಳನ್ನು ಸೃಷ್ಟಿಸಿದ್ದಾರೆ. ಅವರ ದೇವಾನುದೇವತೆಗಳ ಕಥೆಗಳೆಲ್ಲವೂ ಇಂತಹ ಪೌರಾಣಿಕ ಕಥೆಗಳೇ. ಅಲ್ಲಿನ ಪಾತ್ರಗಳಿಗೆ, ಘಟನೆಗಳಿಗೆ ನಮ್ಮಲ್ಲಿನ ಪುರಾಣದ ಪಾತ್ರಗಳ, ಘಟನೆಗಳ ಹೋಲಿಕೆಗಳು ಎಷ್ಟೋ ಬಾರಿ ಕಂಡುಬರುತ್ತವೆ.

ಭಾರತದಲ್ಲಿ ಕಾವ್ಯ ಇತಿಹಾಸಗಳೆಂದು ಪ್ರಸಿದ್ಧವಾಗಿರುವ ಕೃತಿಗಳೆಂದರೆ ರಾಮಾಯಣ ಮಹಾಭಾರತಗಳು. ರಚಿತವಾಗಿ ಸಾವಿರಾರು ವರ್ಷಗಳು ಸಂದು ಹೋಗಿದ್ದರೂ ಇಂದಿಗೂ ನಿತ್ಯನೂತನವೆನ್ನುವಂತೆ ಇವು ಭಾರತೀಯ ಮನಸ್ಸುಗಳನ್ನು ಆಕರ್ಷಿಸುತ್ತಿವೆ, ನಮ್ಮ ದೇಶದ ಎಲ್ಲ ಭಾಷೆಗಳ ಸಾಹಿತ್ಯ ಕೃತಿಗಳಿಗೂ ಆಕರ ಗ್ರಂಥಗಳಾಗಿ ಮೆರೆದಿವೆ. ಭಾರತೀಯ ಸಾಹಿತ್ಯವು ಬೆಳೆದು ಬಂದ ಹಾದಿಯನ್ನು ಅವಲೋಕಿಸಿದಾಗ ನಮ್ಮ ನೆಲದ ವಾಙ್ಮಯವನ್ನು ಅಭಿವೃದ್ಧಿ ಪಡಿಸುವಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥೆಗಳಿಗೆ ಸಿಂಹಪಾಲಿರುವುದು ಎದ್ದು ಕಾಣುತ್ತದೆ.

ಪುರಾತನ ಸಾಹಿತ್ಯದ ಇತರ ಪ್ರಕಾರಗಳಲ್ಲಿ ಇರುವಂತೆಯೇ ಮಹಾಭಾರತದಲ್ಲಿಯೂ ಮಿಥಕಗಳು ಸಮೃದ್ಧಿಯಾಗಿ ಸೇರಿಕೊಂಡಿವೆ. ಮೂಲದಲ್ಲಿ ವೇದವ್ಯಾಸರು ಬರೆದಿರುವವಲ್ಲದೆ ಕಾಲಪ್ರವಾಹದಲ್ಲಿ ಬಂದು ಸೇರಿಕೊಂಡ ಇತರ ನೆರೆತೊರೆಗಳಿಗೂ ಬರವೇನಿಲ್ಲ. ಮಿಥಕಗಳ ಸಂದರ್ಭಗಳನ್ನು ನಾವು ನೋಡಿದಾಗ ಮನುಷ್ಯ ಪ್ರಯತ್ನಗಳು ನಿಭಾಯಿಸಲಾಗದಂತಹ ಸನ್ನಿವೇಶಗಳಲ್ಲಿ ಅಲೌಕಿಕವಾದ ಶಕ್ತಿಯೊಂದು ಮುಂದೆ ಬಂದು ಈ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಉದಾಹರಣೆಗಳು ನಮಗೆ ದೊರೆಯುತ್ತವೆ. ಕೆಲವೊಮ್ಮೆ ಇಂತಹ ಅಲೌಕಿಕವಾದ ಶಕ್ತಿಯನ್ನು ಮಾನವಮಾತ್ರರಿಗೂ ಆರೋಪಿಸಿರುವುದನ್ನು ಕಾಣುತ್ತೇವೆ. ತರ್ಕಕ್ಕೆ ಮಣಿಯದ ಎಷ್ಟೋ ಸಮಸ್ಯೆಗಳನ್ನು ಶಾಪಾನುಗ್ರಹದ ಮಿಥಕಗಳು ಲೀಲಾಜಾಲವಾಗಿ ಬಗೆಹರಿಸಿರುವುದನ್ನು ನೋಡುತ್ತೇವೆ.

ಮಹಾಭಾರತದ ಹಲವಾರು ಮಿಥಕಗಳು “ಇದು ಅಸಾಧ್ಯ” ಎನ್ನುವ ಪ್ರಜ್ಞೆಯನ್ನು ಓದುಗರಲ್ಲಿ ಉದ್ದೀಪಿಸಿ ಅವರಿಂದ ಅಸಮ್ಮತಿಯನ್ನೇ ದೊರಕಿಸಿಕೊಳ್ಳುತ್ತವೆ. ಮನುಷ್ಯರು ಸಾವಿರಾರು ವರ್ಷಗಳ ಕಾಲ ಜೀವಿಸುವುದು, ಸಂತಾನಾರ್ಥಿಯಾದ ರಾಜನಿಗೆ ನೂರಾರು ಮಕ್ಕಳು ಜನಿಸುವುದು, ದೇವಾನುದೇವತೆಗಳು ಭೂಮಿಗಿಳಿದು ಬಂದು ಮನುಷ್ಯರೊಡನೆ ವ್ಯವಹರಿಸುವುದು ಮುಂತಾದ ಮಿಥಕಗಳು ಓದುಗರ ಮನಸ್ಸನ್ನು ಅಷ್ಟಾಗಿ ತಟ್ಟುವುದಿಲ್ಲ. ಆಂಗ್ಲ ಕವಿ ಕೋಲರಿಜ್ ಹೇಳಿರುವಂತೆ “ವಿಲ್ಲಿಂಗ್ ಸಸ್ಪೆಂಶನ್ ಅಫ್ ಡಿಸ್‍ಬಿಲೀಫ್” ಅನ್ನು ಓದುಗರು ಸಾಧಿüಸದೇ ಹೋದರೆ ಕಾವ್ಯಾಸ್ವಾದನೆಯೇ ಅಸಾಧ್ಯವಾಗಿ ಬಿಡುತ್ತದೆ. ಆದರೆ ಮಹಾಭಾರತದ ಕೆಲವು ಮಿಥಕಗಳು ಅದೆಷ್ಟು ಮನೋಹರವಾಗಿವೆ ಯೆಂದರೆ ಓದುಗರಿಗೆ ಅವು ನೈಜವಲ್ಲವೆಂಬ ಯೋಚನೆಗಿಂತಲೂ ಅವುಗಳ ಹಿಂದಿರುವ ಭಾವವನ್ನು ಈ ಮಿಥಕಗಳು ಅದೆಷ್ಟು ಸಮರ್ಥವಾಗಿ ನಿರೂಪಿಸುತ್ತಿವೆಯಲ್ಲ ಎನ್ನುವ ಮೆಚ್ಚುಗೆಯೇ ಹೆಚ್ಚಾಗಿ ಬಿಡುತ್ತದೆ. ಇಂತಹ ಕೆಲವು ಮಿಥಕಗಳನ್ನು ಈ ಲೇಖನದಲ್ಲಿ ವರ್ಣಿಸಲಾಗಿದೆ.
ಮಹಾಭಾರತ ಪಾತ್ರಗಳಲ್ಲೆಲ್ಲ ಶರೀರಸಾಮಥ್ರ್ಯಕ್ಕೆ ಹೆಸರಾದವನು ಭೀಮ. ಅವನೆಷ್ಟು ಶಕ್ತಿಶಾಲಿಯೆಂದರೆ ಇಂದಿಗೂ ದೇಹಬಲವನ್ನು ವರ್ಣಿಸುವಾಗ ಅವನ ಹೆಸರೇ ಒಂದು ವಿಶೇಷಣವಾಗಿಬಿಟ್ಟಿದೆ. ಅತಿಯಾದ ಬಲವೆಂದರೆ ಅದು ಭೀಮಬಲ. ಇಂತಹ ಬಲಶಾಲಿಯನ್ನು ಹೇಗೆ ವರ್ಣಿಸುವುದು? ಇದಕ್ಕೆ ಸಂಬಂಧಿಸಿ ವೇದವ್ಯಾಸರು ಬಹು ಸುಂದರವಾದ ಒಂದು ಮಿಥಕವನ್ನು ಸೃಷ್ಟಿಸಿದ್ದಾರೆ. ಹಸುಗೂಸಾಗಿದ್ದ ಭೀಮನನ್ನು ಎತ್ತಿಕೊಂಡು ವನದಲ್ಲಿ ವಿಹರಿಸುತ್ತಿದ್ದ ಕುಂತಿಯು ಅನಿರೀಕ್ಷಿತವಾಗಿ ಕೇಳಿಬಂದ ಹುಲಿಯೊಂದರ ಘರ್ಜನೆಯಿಂದ ಭೀತಳಾಗಿ ರಕ್ಷಣೆಗಾಗಿ ಮಗುವಿನೊಡನೆ ಒಂದು ಮರವನ್ನೇರುತ್ತಾಳೆ. ಆ ಸಮಯದಲ್ಲಿ ಕೂಸು ಅವಳ ಕೈಯಿಂದ ಜಾರಿ ಬೀಳುತ್ತದೆ. ತಾಯ ಹೃದಯ ಕಳವಳಗೊಂಡು ಕೆಳಗೆ ನೋಡಿದರೆ ಬಿದ್ದ ಮಗು ಕಿಲಕಿಲನೆ ನಕ್ಕು ಕೈಕಾಲುಗಳನ್ನು ಆಡಿಸುತ್ತಿರುತ್ತದೆ. ಮಗು ಬಿದ್ದ ರಭಸಕ್ಕೆ ಕೆಳಗಿನ ಬಂಡೆ ಸೀಳಿ ಒಡೆದು ಹೋಗಿರುತ್ತದೆ. ಹಸುಗೂಸಾಗಿದ್ದಾಗಲೇ ತಾನು ಬಿದ್ದ ಬಂಡೆಯನ್ನೇ ಸೀಳಿಬಿಡುವ ಭೀಮ ಯುವಕನಾದಾಗ ಅದೆಷ್ಟು ಬಲಶಾಲಿಯಾಗಿರಬೇಡ! ಇದೊಂದು ಮಿಥಕದಿಂದ ವ್ಯಾಸರು ನೂರು ಮಾತುಗಳಲ್ಲಿಯೂ ಕಟ್ಟಿಕೊಡಲಾಗದ ಭೀಮಬಲದ ಚಿತ್ರವನ್ನು ಸಂದೇಹಾತೀತವಾಗಿ ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿಸಿ ಬಿಡುತ್ತಾರೆ.

ಮಹಾಭಾರತದಲ್ಲಿ ಅತ್ಯಂತ ಧಾರ್ಮಿಕ ಪ್ರಜ್ಞೆಯುಳ್ಳ ವ್ಯಕ್ತಿಯೆಂದರೆ ಧರ್ಮರಾಜ. ಅವನು ಸಾಕ್ಷಾತ್ ಯಮಧರ್ಮನ ವರದಿಂದಲೇ ಜನಿಸಿದವನಾದುದರಿಂದ ಅವನ ಬುದ್ಧಿಯು ಯಾವಾಗಲೂ ಧರ್ಮದಲ್ಲಿಯೇ ನೆಲೆಸಿರುವುದು. ಅವನು ಜೂಜಾಡುವುದು ಕೂಡಾ ರಾಜನಾದವನು ಜೂಜಿಗಾಗಲಿ ಯುದ್ಧಕ್ಕಾಗಲಿ ಕರೆ ಬಂದಾಗ ಹಿಂದೆಗೆಯುವುದು ರಾಜಧರ್ಮವಲ್ಲ ಎನ್ನುವ ನಂಬಿಕೆಯಿಂದ. ಅವನ ಧರ್ಮಪ್ರಜ್ಞೆಯನ್ನು ವರ್ಣಿಸಲು ಮಹಾಭಾರತದಲ್ಲಿ ಯಕ್ಷಪ್ರಶ್ನೆ ಅಜಗರಮೋಕ್ಷ ಮೊದಲಾದ ಕಥೆಗಳಿವೆ. ಅವನು ಎಂದಿಗೂ ಅಸತ್ಯವನ್ನು ನುಡಿಯುವವನೇ ಅಲ್ಲ. ಅವನ ಧರ್ಮನಿಷ್ಠೆಯನ್ನು ಓದುಗರಿಗೆ ತಲುಪಿಸಲು ವೇದವ್ಯಾಸರು ಸುಂದರವಾದ ಮಿಥಕವೊಂದನ್ನು ಬಳಸಿಕೊಂಡಿದ್ದಾರೆ. ಧರ್ಮರಾಯನ ಋಜುಪ್ರವೃತ್ತಿಯಿಂದಾಗಿ ಅವನೇರುವ ರಥವು ಯಾವಾಗಲೂ ಭೂಸ್ಪರ್ಶವನ್ನೇ ಮಾಡದೇ ನೆಲದಿಂದ ಒಂದಡಿ ಮೇಲಿರುತ್ತಿತ್ತಂತೆ. ದ್ರೋಣರನ್ನು ವಧಿಸುವ ಸಮಯದಲ್ಲಿ ಅವನು “ಅಶ್ವತ್ಥಾಮೋ ಹತಃ ಕುಂಜರಃ” ಎನ್ನುವ ಗೊಂದಲದ ವಾಕ್ಯವನ್ನು ಉಸುರುತ್ತಾನೆ. ಅಶ್ವತ್ಥಾಮನೆನ್ನುವ ಆನೆ ಸತ್ತಿರುವುದು ನಿಜ ಆದರೆ ಅವನ ಘೋಷಣೆಯ ಉದ್ದೇಶ ಅದನ್ನು ತಿಳಿಸುವುದಲ್ಲ. ದ್ರೋಣಪುತ್ರ ಅಶ್ವತ್ಥಾಮನು ಸತ್ತನೆಂದು ದ್ರೋಣರಿಗೆ ತಪ್ಪು ತಿಳುವಳಿಕೆ ಆಗಬೇಕೆನ್ನುವುದೇ ಅವನ ಉದ್ದೇಶ. ಬಾಯಿಂದ ಹೊರಟ ಮಾತು ಸುಳ್ಳಲ್ಲವಾದರೂ ಆ ಮಾತಿನ ಹಿಂದೆ ಮನಸ್ಸಿನಲ್ಲಿದ್ದ ಉದ್ದೇಶವಂತೂ ಸುಳ್ಳನ್ನು ಸಮರ್ಥಿಸುವಂತಹದೇ. ಧರ್ಮಜನು ಹೀಗೆ ಹೇಳಿದ ಕೂಡಲೇ ಅವನ ಸತ್ಯಸಂಧತೆಯ ಪುಣ್ಯವು ತುಸು ನಷ್ಟವಾಗಿ ಅವನ ರಥವು ನಾಲ್ಕಿಂಚು ಕೆಳಗಿಳಿಯಿತಂತೆ. ಇದೊಂದು ಅತಿ ಮನೋಹರವಾದ ಚಿತ್ರಣ.
ಬಿಲ್ಲುವಿದ್ಯೆಯಲ್ಲಿ ಅರ್ಜುನನಿಗಿದ್ದ ಚಾತುರ್ಯ, ಗುರುಹಿರಿಯರಲ್ಲಿ ಅವನಿಗಿದ್ದ ಅಸೀಮವಾದ ಶ್ರದ್ಧಾಭಕ್ತಿಗಳು ಇವುಗಳನ್ನು ಮಹಾಭಾರತದಲ್ಲಿ ವ್ಯಾಸರು ಸಾಕಷ್ಟು ವಿವರವಾಗಿಯೇ ಬರೆದಿದ್ದಾರೆ. ಅವನ ಈ ಸದ್ಗುಣಗಳ ಅತ್ಯಂತ ಯಥಾರ್ಥವಾದ ಚಿತ್ರಣವನ್ನು ಅವರು ಯುದ್ಧ ಸಮಯದ ಮಿಥಕವೊಂದರಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಹತ್ತನೆಯ ದಿನದ ಕುರುಕ್ಷೇತ್ರ ಕದನದ ನಂತರ ಭೀಷ್ಮರು ಶಿಖಂಡಿಯನ್ನು ಎದುರಿಸಲಾಗದೆ ಶಸ್ತ್ರ ಸನ್ಯಾಸವನ್ನು ಮಾಡಿ ಶರಶಯ್ಯೆಯಲ್ಲಿ ಮಲಗಿರುತ್ತಾರೆ. ಕುಲಕ್ಕೆ ಹಿರಿಯರೂ ಕೌರವಪಾಂಡವರಿಬ್ಬರಿಗೂ ವಾತ್ಸಲ್ಯವನ್ನುಣ್ಣಿಸಿದವರೂ, ಕುರುಸಿಂಹಾಸನದ ರಕ್ಷಕರೂ ಆದ ಅವರು ಆ ರೀತಿಯಾಗಿ ಮಲಗಿರುವುದು ಸುತ್ತ ನೆರೆದವರಿಗೆಲ್ಲಾ ವಿಷಾದವನ್ನೇ ತಂದಿರುತ್ತದೆ. ಅವರು ಕೋರಿದುದನ್ನೆಲ್ಲ ನಡೆಸಲು ಎಲ್ಲರೂ ಕಾತರರಾಗಿದ್ದಾರೆ. ಯುದ್ಧಮಾಡಿ ಬಳಲಿದ ಆ ವಯೋವೃದ್ಧರು ಕೇಳುವುದು ಬೇರೇನೂ ಅಲ್ಲ, ಒಂದು ಬೊಗಸೆ ನೀರು. ತಡವೇನು? ಅವರ ದಾಹವನ್ನು ತಣಿಸಲು ಬಂಗಾರದ ಪಾತ್ರೆಗಳಲ್ಲಿ ದುರ್ಯೋಧನನು ನೀರನ್ನು ತರಿಸುತ್ತಾನೆ. ಭೀಷ್ಮರು ಅದನ್ನು ಸ್ವೀಕರಿಸುವುದಿಲ್ಲ. ಅರ್ಜುನನತ್ತ ನೋಡುತ್ತಾರೆ. ಅವರ ಮನದಿಂಗಿತವನ್ನು ಅರಿತ ಪಾರ್ಥನು ಅವರ ತಲೆ ದಿಸೆಯಲ್ಲಿ ಬಾಣವೊಂದನ್ನು ನೆಟ್ಟು ಅಂತರ್ಜಲವನ್ನು ಚಿಮ್ಮಿಸುತ್ತಾನೆ, ಅವರಿಗೆ ನೀರುಣಿಸುತ್ತಾನೆ. ಒಂದೇ ಬಾಣದಿಂದ ತಿಳಿನೀರು ಕಾರಂಜಿಯಂತೆ ಚಿಮ್ಮಲಾರದು. ಆದರೆ ಈ ಮಿಥಕವು ವೀರಯೋಧನಿಗೆ ಇನ್ನೊಬ್ಬ ವೀರಯೋಧನು ಅರ್ಪಿಸಬಹುದಾದ ಅಂತಿಮ ಗೌರವ ಎನ್ನುವ ಭಾವವು ಮಿಥಕದಲ್ಲಿ ಅದೆಷ್ಟು ನವಿರಾಗಿ ಹೆಣೆದುಕೊಂಡಿದೆ ಎಂದರೆ ಓದಿದವರ ಕಣ್ಣಾಲಿಗಳು ಆದ್ರ್ರವಾಗಿ ಬಿಡುತ್ತವೆ. ಅರ್ಜುನನ ಸಾಮಥ್ರ್ಯವನ್ನು ಕಂಡು ಮೆಚ್ಚುಗೆ ಮೂಡುತ್ತದೆ.

ತ್ರೇತಾಯುಗ ದ್ವಾಪರಯುಗಗಳಿಗೆ ಸೇತುವೆಯನ್ನು ನಿರ್ಮಿಸಿದ ಇನ್ನೊಂದು ಮಿಥಕವು ಮಹಾಭಾರತದಲ್ಲಿ ಬಲು ಸುಂದರವಾಗಿದೆ. ಅದು ಹನುಮಂತ ಮತ್ತು ಭೀಮಸೇನರ ಭೇಟಿಯ ಸಂದರ್ಭ. ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿಯು ಗಾಳಿಯಲ್ಲಿ ತೇಲಿ ಬಂದ ಸೌಗಂಧಿüಕಾ ಪುಷ್ಪವನ್ನು ನೋಡಿ ಮೋಹಿಸಿ ತನಗೆ ಅಂತಹ ಹೂಗಳು ಮತ್ತೂ ಬೇಕೆಂದು ಭೀಮನಲ್ಲಿ ಕೇಳಿಕೊಳ್ಳುತ್ತಾಳೆ. ಹೂವನ್ನು ಅರಸಿಕೊಂಡು ಭೀಮ ಹೊರಡುತ್ತಾನೆ. ಬಕ, ಹಿಡಿಂಬ ಮೊದಲಾದ ರಾಕ್ಷಸರನ್ನು ಕೊಂದ ಭೀಮನಿಗೆ ಈಗ ಸ್ವಲ್ಪ ಜಂಬ ಬಂದಿರುತ್ತದೆ. ತನಗಿಂತಲೂ ಬಲಶಾಲಿಗಳು ಇಲ್ಲವೆಂಬ ಹೆಮ್ಮೆಯ ಕೋಡೂ ತಲೆಯ ಮೇಲೆ ಮೂಡಿರುತ್ತದೆ. ದಾರಿಯಲ್ಲಿ ಆಂಜನೇಯನು ಮುದಿ ಕಪಿಯ ರೂಪದಲ್ಲಿ ಬಿದ್ದುಕೊಂಡಿರುತ್ತಾನೆ. ಅವನ ಬಾಲ ಭೀಮನಿಗೆ ಅಡ್ಡಲಾಗಿದೆ. ಅದನ್ನು ದಾಟಿ ಹೋಗಲು ಭೀಮನ ಮನಸ್ಸು ಒಪ್ಪುವುದಿಲ್ಲ ಬಾಲವನ್ನು ಅತ್ತ ಸರಿಸಿ ತನಗೆ ದಾರಿ ಬಿಡುವಂತೆ ಕೇಳುತ್ತಾನೆ. ಆಂಜನೇಯನು ಮನದಲ್ಲಿಯೇ ನಸುನಗುತ್ತಾ ವೃದ್ಧನಾದ ತನಗೆ ಅಷ್ಟು ಶಕ್ತಿ ಇಲ್ಲದಿರುವುದರಿಂದ ಭೀಮನೇ ಬಾಲವನ್ನೆತ್ತಿ ಅತ್ತ ಇಡಬೇಕೆಂದು ಕೋರುತ್ತಾನೆ. ಒಂದು ಕೈಯಿಂದ ಬಾಲವನ್ನು ಎತ್ತುವುದು ಭೀಮನಿಗೆ ಸಾಧ್ಯವಾಗುವುದಿಲ್ಲ. ಅಚ್ಚರಿಯಿಂದ ಎರಡು ಕೈಗಳಿಂದಲೂ ಬಾಲವನ್ನು ಹಿಡಿದು ತನ್ನೆಲ್ಲ ಬಲವನ್ನು ಪ್ರಯೋಗಿಸಿ ಎತ್ತಲು ಯತ್ನಿಸಿದರೂ ಬಾಲವು ಸ್ವಲ್ಪವೂ ಮಿಸುಕುವುದಿಲ್ಲ. ಅಷ್ಟಾಗುವಾಗ ಭೀಮನಿಗೆ ಜ್ಞಾನೋದಯವಾಗುತ್ತದೆ. ಇದು ಸಾಮಾನ್ಯವಾದ ಕಪಿಯಲ್ಲ ಎಂದು ಅರಿವಾಗಿ ಆಂಜನೇಯನಿಗೆ ಶರಣಾಗುತ್ತಾನೆ. ತನ್ನ ಸಮಾನರಿಲ್ಲವೆನ್ನುವ ಅವನ ಅಹಂಕಾರವು ಕರಗಿಹೋಗುತ್ತದೆ. ಇಬ್ಬರೂ ವಾಯುಪುತ್ರರೇ. ಅಣ್ಣತಮ್ಮಂದಿರು ಗಾಢಾಲಿಂಗನವನ್ನು ಮಾಡಿಕೊಂಡು ಆನಂದಿಸುತ್ತಾರೆ. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಧ್ವಜದಲ್ಲಿ ತಾನು ನೆಲೆಸುವುದಾಗಿ ಮಾರುತಿ ವರವೀಯುವುದರೊಂದಿಗೆ ಭೇಟಿಯು ಸುಖಾಂತವಾಗುತ್ತದೆ. ಈ ಸಂದರ್ಭವನ್ನು ಓದುವಾಗ ‘ಕಪಿಯೊಂದರ ಬಾಲವನ್ನು ಭೀಮ ಎತ್ತಲಾರನೇ? ಇದು ಅಸಂಭವ’ ಎಂದು ಓದುಗನಿಗೆ ಅನ್ನಿಸುವುದೇ ಇಲ್ಲ. ಆಂಜನೇಯನ ಶಕ್ತಿಯನ್ನು ಊಹಿಸಿಕೊಂಡು ವಾಚಕ ಆ ಸಂದರ್ಭದ ಸವಿಯನ್ನು ಆಸ್ವಾದಿಸುತ್ತಾನೆ. ರಾಮಾಯಣದ ಹನುಮ ಇಲ್ಲಿಗೆ ಹೇಗೆ ಬಂದ ಎನ್ನುವ ಸಂದೇಹವೂ ಮನಸ್ಸನ್ನು ಸೋಕುವುದಿಲ್ಲ. ಭೂತ ವರ್ತಮಾನಗಳಿಗೆ ಓದುಗ ತನಗರಿಯದಂತೆ ಸಮ್ಮತಿಯ ಸೇತುವೆಯೊಂದನ್ನು ಕಟ್ಟಿಕೊಂಡು ಬಿಡುತ್ತಾನೆ. ವೇದವ್ಯಾಸರು ಚಿತ್ರಿಸಿರುವ ಅತಿ ಸುಂದರ ದೃಶ್ಯಕಾವ್ಯಗಳಲ್ಲಿ ಇದೊಂದು ಎನ್ನಬಹುದು.

ಪುತ್ರ ಪ್ರೇಮದ ಅಂತಃಶಕ್ತಿ ಎಷ್ಟು ಬಲವಾದುದೆನ್ನುವುದನ್ನು ವೇದವ್ಯಾಸರು ಧೃತರಾಷ್ಟ್ರನಿಗೆ ಸಂಬಂಧಿಸಿದ ಮಿಥಕವೊಂದರಿಂದ ಕಟ್ಟಿಕೊಡುತ್ತಾರೆ. ಕುರುಕ್ಷೇತ್ರದ ಯುದ್ಧಾನಂತರ ಕರುಳಿನ ಕುಡಿಗಳನ್ನೆಲ್ಲಾ ಕಳೆದುಕೊಂಡು ಧೃತರಾಷ್ಟ್ರ ಕಂಗಾಲಾಗಿರುತ್ತಾನೆ. ಅವನ ಅಳಲಿಗೆ ಪಾರವಿದೆಯೇ? ಜಯಶಾಲಿಗಳಾದ ಪಾಂಡವರು ಕೃಷ್ಣನ ಹೇಳಿಕೆಯ ಮೇರೆಗೆ ಈ ನತದೃಷ್ಟ ದೊಡ್ಡಪ್ಪನನ್ನು ಕಂಡು ಅವನ ಆಶೀರ್ವಾದವನ್ನು ಪಡೆಯುವುದಕ್ಕಾಗಿ ಬರುತ್ತಾರೆ. ಮೊದಲು ಧರ್ಮಜನ ಸರದಿ. ದಾಯಾದಿಗಳನ್ನು ಕೊಲ್ಲಬೇಕಾದ ಅನಿವಾರ್ಯ ಅವನಲ್ಲಿಯೂ ದುಃಖವನ್ನೇ ತಂದಿದೆ. ದೊಡ್ಡಪ್ಪನಿಗೆ ಬಾಗಿ ನಮಿಸಿ ಕ್ಷಮೆಯನ್ನು ಯಾಚಿಸುತ್ತಾನೆ. ನಂತರದ ಸರದಿ ಭೀಮನದು. ಸಮೀಪಕ್ಕೆ ಬಂದ ಭೀಮನನ್ನು ಪಕ್ಕಕ್ಕೆ ದೂಡಿ ಕೃಷ್ಣ ಭೀಮನ ಉಕ್ಕಿನ ಪ್ರತಿಮೆಯೊಂದನ್ನು ಮುಂದೆ ನೂಕುತ್ತಾನೆ. ಅದನ್ನು ಕುರುಡ ದೊರೆಯು ಆಲಂಗಿಸಿ ಅದುಮಿದ ರಭಸಕ್ಕೆ ಅದು ಪುಡಿಪುಡಿಯಾಗಿ ಬಿಡುತ್ತದೆ. ಎಂಭತ್ತನ್ನೂ ಮೀರಿದ ಕುರುಡ ವೃದ್ಧನಲ್ಲಿ ಭೀಮನ ಕುರಿತಾಗಿ ಎಂತಹ ಆಕ್ರೋಶವಿತ್ತು ಎನ್ನುವುದನ್ನು ಇದಕ್ಕಿಂತಲೂ ಸಶಕ್ತವಾಗಿ ಬಿಂಬಿಸುವುದು ಸಾಧ್ಯವೇ ಇಲ್ಲ. ಮಗನ ಮರಣದ ನಂತರ ಧೃತರಾಷ್ಟ್ರನ ಎದೆಯ ಪುತ್ರವ್ಯಾಮೋಹದ ಜ್ಯೋತಿ ಭೀಮದ್ವೇಷದ ದಳ್ಳುರಿಯಾಗಿ ಪರಿವರ್ತನೆಯಾಗುವುದರ ಭಾವವನ್ನಂತೂ ಯಾರೂ ಅಲ್ಲಗಳೆಯಲಾರರು. ವ್ಯಾಸರ ಲೆಕ್ಕಣಿಯಿಂದ ಹೊರ ಬಂದಿರುವ ಒಂದು ಸುಂದರ ಪ್ರತಿಮೆ ಇದು.

ಇಂತಹ ಹಲವಾರು ಮನೋಹರವಾದ ಮಿಥಕಗಳನ್ನು ಮಹಾಭಾರತದಲ್ಲಿ ಗಮನಿಸಬಹುದು. ಇಂತಹ ಕೆಲವು ಮಿಥಕಗಳನ್ನು ಮೂಲದ ಸ್ವಾರಸ್ಯವು ಕೆಡದಂತೆ ನೈಜತೆಯ ಎರಕದಲ್ಲಿ ಹುಯ್ದು ಪೌರಾಣಿಕ ಕಥನವನ್ನು ಐತಿಹಾಸಿಕ ಕಾದಂಬರಿಯನ್ನಾಗಿ ನಾಡಿನ ಹೆಸರಾಂತ ಕಾದಂಬರಿಕಾರರಾದ ಶ್ರೀ. ಎಸ್. ಎಲ್. ಭೈರಪ್ಪನವರು ಬರೆದಿದ್ದಾರೆ. ಮೂಲದಲ್ಲಿ ಈ ಮಿಥಕಗಳು ಅದೆಷ್ಟು ಸಶಕ್ತವಾಗಿ ಮನೋಹರವಾಗಿ ಮೂಡಿವೆಯೋ ಅಷ್ಟೇ ಸಶಕ್ತವಾಗಿ ಭೈರಪ್ಪನವರು ತಮ್ಮ ಕಾದಂಬರಿ ಪರ್ವದಲ್ಲಿ ಇವುಗಳನ್ನು ಒಡೆದಿದ್ದಾರೆ. ರಸಾನ್ವೇಷಣೆಯನ್ನು ಮಾಡ ಹೊರಟಿರುವ ಸಹೃದಯನನ್ನು ವ್ಯಾಸಭಾರತ ಮತ್ತು ಪರ್ವಗಳೆರಡೂ ಹದವಾಗಿ ತಟ್ಟುತ್ತವೆನ್ನುವುದರಲ್ಲಿ ಸಂದೇಹವೇ ಇಲ್ಲ.