- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಅಮ್ಮಂದಿರ ದಿನದ ಹಿನ್ನೆಲೆಯಲ್ಲಿ….
ನಡುಗನ್ನಡ ಕಾಲಘಟ್ಟದ ಪ್ರಮುಖ ಕವಿ ರಾಘವಾಂಕ. ಕರುಣಾರಸಕ್ಕೇ ಮೀಸಲಿರಿಸಿದ ಹಾಗೆ ಈತ ರಚಿಸಿದ ಕಾವ್ಯ ಲೋಕೋತ್ತರವಾದದ್ದು. ಇದರ ಹೆಸರು ಷಟ್ಪದಿ ಕಾವ್ಯಗಳ ರಾಜನೆಂಬ ಖ್ಯಾತಿಗೆ ಒಳಗಾಗಿರುವ “ಹರಿಶ್ಚಂದ್ರ ಕಾವ್ಯ”. ಕಾವ್ಯದೊಳಗಣ ಕಾವ್ಯ ಎಂದೇ ಕರೆಯಬಹುದಾದ “ಚಂದ್ರಮತಿಯ ಪ್ರಲಾಪ” ಎಂಬ ಇಲ್ಲಿಯ ಕಾವ್ಯಭಾಗ ಅಮ್ಮ ಮಕ್ಕಳ ಸಂಬಂಧವನ್ನು ಅನನ್ಯವಾಗಿ ವಿವರಿಸುತ್ತಾ ಎಂಥ ಭಾವಹೀನರನ್ನೂ ಭಾವುಕರನ್ನಾಗಿ ಮಾಡುತ್ತದೆ. ವಿಶ್ವ ಅಮ್ಮಂದಿರ ದಿನದ ಈ ಸಂದರ್ಭದಲ್ಲಿ ಹರಿಶ್ಚಂದ್ರ ಕಾವ್ಯದ ಎಳೆಯನ್ನೇ ಆಕರವಾಗಿಟ್ಟುಕೊಂಡು ಅಮ್ಮಂದಿರಿಗೆ ವಂದಿಸುವ ಆಲೋಚನೆ ನನ್ನದು.
ಬ್ರಾಹ್ಮಣರ ಮನೆಯ ಆಳಾಗಿ ಹುಲು-ಹುಳ್ಳಿಗಳನ್ನು ತರಲು ಕಾಡಿಗೆ ಹೋಗಿದ್ದ ಮಗ ಲೋಹಿತಾಶ್ವ ಇನ್ನೂ ಬಂದಿಲ್ಲವೆಂದು ತನುವನು ಮರೆದು ಹೊರಗನಾಲಿಸಿ ಮಂದಮತಿಯಾಗಿದ್ದ ಚಂದ್ರಮತಿಗೆ ಬಾಲನೊಬ್ಬ ಬಂದು “ ನಿನ್ನ ಕಂದನನೊಂದುಗ್ರ ಫಣಿ ತಿಂದು ಜೀವಂಗಳೆದನೆಂದು” ಹೇಳುವಾಗ ಚಂದ್ರಮತಿಯ ಪರಿಸ್ಥಿತಿ ಏನಾಗಿರಬಹುದು ಊಹೆಗೂ ನಿಲುಕದು. “ಬೇಕಾದಡೀಗ ಹೋಗಲ್ಲದಿರ್ದಡೆ ಬಳಿಕನೇಕ ಭಲ್ಲುಕ, ಜಂಭುಕಂ ಘೂಕ ವೃಕಗಳೆಳೆಯದೆ ಬಿಡವು” ಎಂದಾಗ ಹೆತ್ತ ತಾಯಿಯ ಮನಸ್ಸಿನಲ್ಲಿ ಎಂಥ ಸಂಚಲನವಾಗಿರಬಹುದು?ಯಾವ ರೀತಿಯ ಆಘಾತ ಉಂಟಾಗಿರಬಹುದು ಊಹಿಸಲೂ ಅಸಾಧ್ಯ. ಮಗನ ಶವ ಕಾಡು ಪ್ರಾಣಿಗಳ ಪಾಲಾಗುತ್ತದೆ ಎಂದಾಗ ಅವಳ ಒಡಲಿನ ಬೆಂಕಿ ಯಾವ ತೆರನಾಗಿ ಹೊತ್ತಿ ಉರಿದಿರಬಹುದು ಎಂತಹ ಸಂದಿಗ್ಧತೆಯಲ್ಲಿ ಆಕೆ ಇದ್ದಿರಬಹುದು ಅನ್ನಿಸುತ್ತದೆ.
ಒಡೆಯನಾದವನು ಲೋಹಿತಾಶ್ವನ ಸಾವಿನ ವಿಷಯ ಕೇಳಿ ಸಾಂತ್ವನ ಹೇಳುವ ಬದಲು” ಲೇಸಾಯ್ತು ಮಡಿದಡೆ” ಎನ್ನುತ್ತಾನೆ. “ಭಂಟರನು ಕೊಟ್ಟು ಅರಸಿಸೈ ತಂದೆ” ಎಂದು ಚಂದ್ರಮತಿ ಒರಲಿದರೆ “ ನಡುವಿರುಳು ಬಂಟರುಂಟೇ ನಿದ್ದಗೈಯಬೇಕು ಕಾಡದಿರು” ಎಂದು ಬಿಡುತ್ತಾನೆ ಉಳ್ಳವರ ಸಾಮಾಜಿ ಮೌಲ್ಯಗಳು ಹೀಗೆನೆ. ಅಂತೂ “ನರಿಗಳೆಳೆಯದ ಮುನ್ನ ದಹಿಸಬೇಡವೇ ತಂದೆ” ಎಂದು ಒಡೆಯನ ಎಲ್ಲ ಷರತ್ತುಗಳಿಗೆ ಬದ್ಧಳಾಗಿ ಮನೆಯಿಂದ ಹೊರಹೊರಟು “ಬಿಟ್ಟತಲೆಯಂ ಬಿಚ್ಚಿದುಡುಗೆಯಂ ಮರೆದು ಗೋಳಿಟ್ಟು” ಎಂದಾಗ ಮಕ್ಕಳನ್ನು ಕಳೆದುಕೊಂಡ ಹೆಣ್ಣುಮಕ್ಕಳೇ ಕಂಡಿತ ಕಣ್ಣೆದುರು ಬರುತ್ತಾಳೆ. ಹಸಿದವನೇ ಬಲ್ಲ ಹಸಿವಿನ ಶೂಲಿ ಸಂಕಟವನ್ನು ಅನುಭವಿಸಿದವರಿಗೆ ಮಾತ್ರ ಅದರ ತೀವ್ರತೆ ಅರಿವಾಗುತ್ತದೆ.
ಅಡವಿಯೊಳು ಹೊಲಬುಗೆಟ್ಟನೋ ಗಿಡುವಿನೊಳಗೆ ಹುಲಿ
ಹಿಡಿದುದೋ ಕಳ್ಲರೊಯದ್ರೋ ಭೂತಸಂಕುಲಂ
ಹೊಡೆದುವೋ ನಿರೊಳದ್ದನೋ ಮರದ ಕೊಂಬೇರಿ
ಬಿದ್ದನೋ ಫಣಿ ತಿಂದುದೋ
ಕಡುಹಸಿದು ನಡೆಗೆಟ್ಟು ನಿಂದನೋ ಎಂದಿಂತು
ಮಡದಿ ಹಲವಂ ಹಲಬುತಂಗಣದೊಳಿರೆ
ಎನ್ನುತ್ತಾ ಕವಿ ರಾಘವಾಂಕ ಮಗನ ನರೀಕ್ಷೆಯಲ್ಲಿದ್ದ ತಾಯಿಗೆ ಬರಬಹುದಾದ ಆಲೋಚನೆಗಳನ್ನು ತಾನೆ ಅನುಭವಿಸಿ ಬರೆದಂತಿದೆ.ಕಾಡಿನಲ್ಲಿ ದಾರಿತಪ್ಪಿರಬಹುದೆ,ಹುಲಿ ಹಿಡಿದಿರಬಹುದೆ?,ಕಳ್ಳರು ಅಪಹರಣ ಮಾಡಿರಬಹುದೆ? ಭೂತ ಸಂಕುಲಗಳು ಹೊಡೆದವೋ?, ನೀರು ಕುಡಿಯಹೋಗಿ ನೀರಲ್ಲಿ ಮುಳಿಗಿದನೆ? ಮರವನ್ನು ಏರಿ ಇಳಿಯಲಾರದೆ ಆಯತಪ್ಪಿ ಬಿದ್ದನೇ? ಹಾವೇನಾದರೂ ಕಚ್ಚಿದೆಯೇ? ಕಡುಹಸಿದು ಒಂದು ಹೆಜ್ಜೆಯನ್ನೂ ಮುಂದೆ ಇರಿಸಲಾರದೆ ಕಂಗೆಟ್ಟು ನಿಂತುಬಿಟ್ಟನೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಒಮ್ಮೆಗೆ ಹಾಕುತ್ತಾನೆ. ಮಗನ ನಿರೀಕ್ಷೆಯಲ್ಲಿದ್ದ ತಾಯಿಯ ತಲ್ಲಣಗಳು ಇಲ್ಲಿ ಸಹಜವಾಗಿ ಮೂಡಿಬಂದಿವೆ. ಮಗವನ್ನು ಕುರಿತ ತಹತಹ ಅವಳದ್ದೆ ಇನ್ಯಾರಾದರೂ ಅದನ್ನು ಸರಿಗಟ್ಟಲು ಸಾಧ್ಯವೇ? ಇಲ್ಲ ಅಲ್ವ!
ಲೋಹಿತಾಶ್ವ ಕಾಡಿನಲ್ಲಿ ಕಾಣದಿದ್ದಾಗ “ಪೇಳಾವ ಠಾವೊಳಕೊಂಡುದಯ್ಯ ….. ಎನ್ನನೊಲ್ಲದಡೆ ಸಾಯೆಂಬುದೇನುಸುರದಿರಲೇಕೆ “ ಎಂದು ಸತ್ತ ಮಗನ ಸಂಗಡವೇ ಸಂಭಾಷಿಸುತ್ತಾಳೆ. ಒರಲುತ್ತಾಳೆ. ನನ್ನ ಮೇಲೆಯೇ ನಿನಗೆ ಜಿಗುಪ್ಸೆ ಬಂತೆ ಎನ್ನುವಂತೆ ಮಾತನಾಡುತ್ತಾಳೆ.
ವಿಷದ ಕಾರಣದಿಂದ ಹಸುರಾಗಿರುವ ಮೈ, ನೊರೆಸೂಸಿದ ಗಲ್ಲ , ಕಂದಿದ ಉಗುರು ,ಅರ್ಧಂಬರ್ಧ ಮುಚ್ಚಿದ ಕಣ್ಣು, ಮುಷ್ಟಿ ಹಿಡಿದ ಕೈ,ಹಸಿದು ಬೆನ್ನಿಗೆ ಅಂಟಿದ ಹೊಟ್ಟೆ ಬಾಗಿದ ಕತ್ತು ಈ ಸ್ಥಿತಿಯಲ್ಲಿದ್ದ ಮಗನನ್ನು ಕಂಡ ಚಂದ್ರಮತಿ ಅಲ್ಲಿಯೇ ಕುಸಿದು ಹೋಗುತ್ತಾಳೆ. ಮುಖದ ಮೇಲೆ ಮುಖವಿಟ್ಟು ಮುಂಡಾಡುತ್ತಾಳೆ. ಮತ್ತೆ ಮತ್ತೆ ಮುದ್ದಿಸಿ ಲಲ್ಲೆ ಗರೆದು ಅತ್ತು ಬಸವಳಿಯುತ್ತಾಳೆ.
ಲಲನೆ ಮೂಗಿನೊಳುಸುರನಳ್ಳೆಯೊಳು ಹೊಯ್ಲುನುಗು
ರೊಳು ರಜವನೆದೆಯೊಳಲ್ಲಾಟಮಂ ಕೈಯ ಮೊದ
ಲೊಳು ಮುಡುಕನಂಗದೊಳು ನೋವನಕ್ಷಿಯೊಳು ಬೆ
ಳ್ಪಂ ಭಾಳದೊಳು ಬೆಮರನು
ಲಲಿತಕಂಠದೊಳುಲುಕನಂಘ್ರಿಯೊಳು ಬಿಸಿಯನಂ
ಗುಳಿಗಳೊಳು ಚಿಟುಕನುಂಗುಟದೊಳರುಣಾಂಬುವಂ
ಸಲೆ ನಾಲಗೆಯೊಳಿಂಪ ರೋಮದಲಿ ಬಲ್ಪನಾ
ರಯ್ದು ಕಾಣದೆ ನೊಂದಳು
ಎಂದು ರಾಘವಾಂಕ ಬರೆದಿರುವಲ್ಲಿ ಮಗ ಬದುಕಿದ್ದಾನೆ ಎಂಬ ಧನಾತ್ಮಕತೆಯಿಂದಲೇ ಇದ್ದ ಚಂದ್ರಮತಿಯ ಪರಿಚಯವಾಗುತ್ತದೆ. ಮಗನಿಗೆ ಜೀವನವಿರಬಹುದೆ ಎಂಬ ಆಸೆಯಿಂದ ಮೂಗಿನಲ್ಲಿ ಉಸಿರಾಡುತ್ತಿರುವನೆ ಎಂದು ಪರೀಕ್ಷಿಸಿ, ಹೃದಯವು ಮಿಡಿಯುವುದೆ ಎಂದು ನೋಡಿತ್ತಾಳೆ. ಉಗುರಲ್ಲಿ ರಕ್ತವಿದೆಯೆ ಎಂದು ಬೆರಳುಗಳ ತುದಿಗಳನ್ನು ಪರೀಕ್ಷಿಸುತ್ತಾಳೆ. ಕಡೆಗೆ ಅಂಗದಲ್ಲಿ ಸಂವೇದನಾಶಕ್ತಿಯನ್ನೂ , ಕಣ್ಣಲ್ಲಿ ಬಿಳುಪನ್ನೂ ಹಣೆಯಲ್ಲಿ ಬೆವರನ್ನೂ ಕಂಠದಲ್ಲಿ ಅದರುವಿಕೆಯನ್ನೂ ಅಂಗಾಲಿನಲ್ಲಿ ಬಿಸಿಯನ್ನೂ ಕಾಣಲು ಯತ್ನಿಸಿ . ಬೆರಳನ್ನೂ ನಾಲಗೆಯನ್ನೂ ಕೂದಲನ್ನೂ ನಿರೀಕ್ಷಿಸಿದಳು. ಜೀವಿತದ ಯಾವ ಚಿಹ್ನೆಯೂ ಕಾಣಲಿಲ್ಲ ಎಂದು ಸೋತು ಮತ್ತೆ ರೋಧಿಸಲು ಆರಂಭಿಸುತ್ತಾಳೆ. ವಾಸ್ತವತೆಯನ್ನು ಮೀರಿ ಚಿಂತಿಸುವ ಶಕ್ತಿ ತಾಯಿಗೆ ಮಾತ್ರ ಎಂಬುದಿಲ್ಲಿ ವೇದ್ಯವಾಗುತ್ತದೆ.
“ಸಮಯ ನೋಡಿ ನನ್ನ ಗೋಣನ್ನು ಕತ್ತರಿಸಿಬಿಟ್ಟೆ ನಿನಗಾಗಿರಾಜ್ಯ ಕೋಶ ಎಲ್ಲ ಹೋದರೂ ಕಡೆಗೆ ಗಂಡ ದೂರವಾದರೂ ಸಹಿಸಿದೆ ಈಗ ನೀನೆ ಹೀಗಾದರೆ ಇನ್ಯಾರ ಮುಖವನ್ನು ನೋಡಿ ನನ್ನ ದುಃಖವನ್ನು ಮರೆಯಲಿ, ಹರಿಶ್ಚಚಂದ್ರ ಬಂದು ಕೇಳಿದರೆ ನಿನ್ನ ಮಗನನ್ನು ಉಗ್ರ ಫಣಿಯೊಂದು ಅಗಿಯಿತು ಎನ್ನಲೇ ಯಾರನ್ನ ತೋರಿಸಿ ಆ ರಾಯನ ದುಃಖವನ್ನು ಮರೆಯಿಸಲಿ’’ ಎಂದು ಚೀತ್ಕರಿಸುತ್ತಾಳೆ. ಇಲ್ಲಿ ತಾಯಿ ಮಕ್ಕಳ ನಡುವಿನ ಭಾಂಧವ್ಯ ಹೇಗಿರುತ್ತದೆ ಎಂಬುದನ್ನು ಕವಿ ಅನನ್ಯವಾಗಿ ವಿವರಿಸಿದ್ದಾನೆ . ಎಲ್ಲಕ್ಕಿಂತ ಕರುಳ ಸಂಬಂಧ ಮಿಗಿಲು ತಾನಿಟ್ಟ ತತ್ತಿ ತನ್ನೆದುರುಗೆ ನಾಶವಾದರೆ, ತಾ ಬೆಳೆದ ಫಲ ತನ್ನೆದುರೆ ರಣಹದ್ದಿಗೆ ಆಹುತಿಯಾಗಿ ಹೋದರೆ ಯಾವ ಮಾತೃ ಹೃದಯ ತಾನೆ ಸಹಿಸೀತು…? ಮುಂದೆ ಮಾತುಗಳು, ಶಬ್ದಗಳು ಬರಲಾರವು.ಅಂತಹುದೆ ಸ್ಥಿತಿ ಇಲ್ಲಿ ಚಂದ್ರಮತಿಯದ್ದು.
ಮಾತೃಹೃದಯ ಹೊತ್ತ ಪ್ರೀತಿಯನ್ನು ವಿವರಿಸಲು ಸಾಧ್ಯವೇ? ಹರಿಶ್ಚಂದ್ರ ತನ್ನ ಕಾವ್ಯದಲ್ಲಿ ಆ ಮಮತಾಮಯಿಯ ಕನವರಕೆಯನ್ನು ಇನ್ನೊಂದು ಪದ್ಯದಲ್ಲಿ ಹೀಗೆ ವಿವರಿಸಿದ್ದಾನೆ.
ಹಡೆದೊಡಲು ಹುಡಿಯಾಯ್ತು ಮಗನೆ ಮಗನುಂಟೆಂದು
ಕಡಗಿ ಹೆಚ್ಚುವ ಮನಂ ಹೊತ್ತಿ ಹೊಗೆಯಿತ್ತು ಬಿಡ
ಮಗನೆ ಹೊತ್ತೊಡಲು ಹುಡಿಯಾಗುತ್ತದೆ ಮಗನೊಬ್ಬನಿರುವನೆಂದು ಉಬ್ಬಿದ ಮನಸ್ಸು ಹೊತ್ತಿ ಹೊಗೆಯಿತು. ನಿನ್ನನ್ನು ನೋಡಿ ನಲಿಯುತ್ತಿದ್ದ ಕಣ್ಣು ಇಂಗಿತು. ಮೈಸವರಿ ರೋಮಾಂಚನಗೊಳ್ಳುತ್ತಿದ್ದ ಕೈ ಮುರಿಯಿತು ‘ಲೋಹಿತಾಶ್ವ….!’ ಎಂದು ಕರೆದು ಸಂತೋಷಿಸುತ್ತಿದ್ದ ನಾಲಗೆಯ ಕುಡಿ ಮುರುಟಿತು ಎಂದು ಗೋಳಾಡುತ್ತಾಳೆ.
ಕದ್ದು ಸುಡಬಂದೆ ನಿನ್ನ ನಿಟ್ಟೆಲುವ ಮುರಿವೆನೆಂದು
ಹುಡಿದಿರ್ದ ಕಿಚ್ಚಂ ಕೆದರಿ
ಮೇಲಿರ್ದ ಸುತನ ಹಿಂಗಾಲ್ವಿಡಿದು
ಹರಿಶ್ಚಂದ್ರ ಮಗನನ್ನು ಉರಿಗಿಟ್ಟ ಚಂದ್ರಮತಿಯನ್ನು ಕುರಿತು ಆಡುವ ಮಾತುಗಳು ಆತನ ಸ್ವಾಮಿನಿಷ್ಟೆಯನ್ನು ತೋರಿದರೆ ಚಂದ್ರಮತಿ ಸತ್ತ ಮಗನನ್ನು ಕುರಿತು ಹೀಗೆ ಬೇಡಿಕೊಳ್ಳುತ್ತಾಳೆ
ಬಿಸುಡದಿರು ಬಿಸುಡದಿರು ಬೇಡಬೇಡಕಟಕಟ
ಹಸುಳೆ ನೊಂದಹೆನೆಂದು ಬೀಳ್ವವನನೆತ್ತಿ ತ
ಕ್ಕಿಸಿಕೊಂಡು ಕುಲವ ನೋಡದೆ ಬೇಡಿಕೊಂಬೆನಿವ
ಮಗ ಜೀವಂತವಾಗಿಲ್ಲ ಎಂದು ತಿಳಿದ ಮೇಲೂ ಶವದ ಹಿಂಗಾಲನ್ನು ಹಿಡಿದು ಎಸೆಯುವ ಹರಿಶ್ಚಂದ್ರನನ್ನು ತಡೆದು ಬಿಸಾಡಬೇಡ ಹಸುಳೆಗೆ ನೋವಾಗುವುದಿಲ್ಲವೆ ಎಂದು ಕೇಳುವುದು ಎಂಥ ಕಟುಕರ ಕಣ್ಣನ್ನೂ ಆರ್ದ್ರಗೊಳಿಸುತ್ತದೆ.
ತಾಯಿ ಅಂದರೆ ಮಮತೆಯ ಸಾಕಾರಮೂರ್ತಿ ಈ ಸಂದರ್ಭದಲ್ಲಿ ರಾಘವಾಂಕ ‘ಹರಿಶ್ಚಂದ್ರಕಾವ್ಯ’. ಪ್ರಸ್ತುತ ‘ಸೀಗೆಯೊಳಗಣ ಬಾಳೆಗೆಣೆ’ಯಾದುದು ವಾಕ್ಯವನ್ನು ಹೇಳುತ್ತಾನೆ.ಸೀಗೆ ಸ್ವಭಾವತಃ ಮುಳ್ಳುಗಳನ್ನು ಹೊಂದಿರುತ್ತದೆ. ಇದು ಇರುವಿಕೆಯ ಜಾಗವನ್ನು ಪೊದೆ ಎಂದು ಕರೆಯುತ್ತಾರೆ. ಮೊದಲೆ ಮುಳ್ಳು ಅದೂ ಪೊದೆಯಾಗಿರುವುದು ಅದರ ನಡುವೆ ಬಾಳೆಗಿಡ ಗೊನೆಬಿಟ್ಟು ಎಡರು ತೊಡರುಗಳಿಲ್ಲದೆ ಹಣ್ಣಾಗಲು ಸಾಧ್ಯವೇ ಇಲ್ಲ ಎಂಬ ಅರ್ಥ ಇಲ್ಲಿ ಬರುತ್ತದೆ. ಹಾಗೆ ಚಂದ್ರಮತಿಯ ಪ್ರಲಾಪದ ಸಂದರ್ಭದಲ್ಲಿ ಚಂದ್ರಮತಿಯ ಸಂಕಟವು ಒಳಹೊಕ್ಕ ಬಾಣದಂತೆ ಹೊರಗೆ ಕಾಣಿಸದೆ ಇದ್ದರೂ ಮನಸ್ಸಿನಲ್ಲೆ ಸಂಕಟವನ್ನು ಅನುಭವಿಸುತ್ತಿರುತ್ತಾಳೆ. ಅವಳ ಸಂಕಟವನ್ನು ಓದುಗರಿಗೆ ಪರಿಣಾಮಕಾರಿಯಾಗಿ ವಿವರಿಸಲು ರಾಘವಾಂಕ ಇಂಥದ್ದೊಂದು ವಾಕ್ಯನ್ನು ನಿಬದ್ಧಗೊಳಿಸಿದ್ದಾನೆ ಎನ್ನಬಹುದು. ಹರಿಶ್ಚಂದ್ರ ಕಾವ್ಯದ ಚಂದ್ರಮತಿಯ ರೋಧನೆ ಕಾವ್ಯದಲ್ಲಿ ಮಾತ್ರ ಎನ್ನಲು ಹೇಗೆ ಸಾಧ್ಯ? ಬದಲಾದ ದಿನಮಾನಗಳಲ್ಲಿ ಇದು ರೂಪಾಂತರಿಯಾಗಿರಬಹುದು, ಸಂದರ್ಭಗಳು ವಿಭಿನ್ನವೇ ಆಗಿರಬಹುದು ಆದರೆ ಮಾತೃ ಪ್ರೇಮ ಒಂದೇ ಎಂದು ನನ್ನನಿಸಿಕೆ.
ಬ್ರಹ್ಮಾಂಡದ ಇನ್ನೊಂದು ಹೆಸರು ‘ಅಮ್ಮಾ’ . ಅಮ್ಮ ಈ ಪದವನ್ನು ಎಷ್ಟೇ ಅರ್ಥೈಸಿದರೂ ನಮ್ಮ ಅಳತೆಯ ತೆಕ್ಕೆಗೆ ಸಿಗುವುದಿಲ್ಲ. ತನುಬಾಗಿ ,ಧ್ವನಿ ತಗ್ಗಿದರೂ ಮಕ್ಕಳನ್ನು ಕಂಡಾಗ ಈಗಷ್ಟೆ ಹೆತ್ತ ಸುಖವನ್ನು ಅನುಭವಿಸುತ್ತಾಳೆ ಅಮ್ಮ. ನಿಸ್ಸೀಮ ಅಕ್ಕರೆಯ ಸವಿಯನ್ನು ಕೊಡುತ್ತಾಳೆ. ಇಂಥ ಅಮ್ಮನಿಗೆ ವಿಶ್ವಅಮ್ಮಂದಿರ ದಿನದಂದು ಸಹಸ್ರ ಪ್ರಣಾಮಗಳು.
–ಸುಮಾವೀಣಾ
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ತೆಲುಗು ಸಾಹಿತ್ಯ ನಡೆದು ಬಂದ ದಾರಿ
ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ/ ವಸಾಹತೋತ್ತರ ಸಾಮಾಜಿಕ ಚಲನೆಗಳು…