- ಮೈಖೇಲ್ ಜಾಕ್ಸನ್ ಎಂಬ ಲೋಕ ಕಂಡ ಮಾಂತ್ರಿಕ - ಡಿಸಂಬರ್ 21, 2021
- ಪ್ರೀತಿ ಹಂಚುತ ಸಾಗು - ನವೆಂಬರ್ 24, 2021
- ನನ್ನ ಕವಿತೆಗಳಿಗೊಂದಷ್ಟು ಜಾಗ ನೀಡಿ - ನವೆಂಬರ್ 3, 2021
ರಾಮನು ನಾನೇ, ರಾವಣನು ನಾನೇ!
ಜಬಿ ಯವರ ಈ ಕವಿತೆಯಿಂದ
ನಾನು ರಾಮ, ರಹೀಮನು ಹೌದು!
ನಾನೇ ಜೀಸಸ್, ಮತ್ತೊಂದು ಅಹುದು…
ಒಪ್ಪುವುದು ಬಿಡುವುದು
ನಿಮಗೆ ನಾನಿತ್ತ ಸ್ವಾತಂತ್ರವದು
ವಿಶ್ವದಲಿ ಈ ಧರೆಯನು ಸೃಷ್ಟಿಸಿದೆ
ಸಕಲ ಜೀವಚರಚರಗಳಲ್ಲಿ ನಿಮ್ಮನ್ನು ಒಂದಾಗಿಸಿದೆ
ಇಡೀ ಭೂಮಿಯೆ ನನ್ನದಾಗಿರುವಾಗ
ನನ್ನ ಹೆಸರಿನಲಿ ತುಂಡು ಭೂಮಿಗಾಗಿ
ಕಾದಾಡುವ ನರರು ನೀವು ಯಾರು?
ಸರ್ವಾಂತರ್ಯಾಮಿಯಾದ ನನ್ನನ್ನು
ಕತ್ತಲಕೂಪವಾದ ನಾಲ್ಕು ಗೋಡೆಯ ನಡುವೆ ಬಂಧಿಸಿ
ದೀಪ ಬೆಳಗಿಸಿ ಆರಾಧಿಸಲು ನೀವು ಯಾರು?
ನನ್ನ ಗರ್ಭಗುಡಿಗಿಂತ, ನಿಮ್ಮ ಹಜಾರ
ದೇಗುಲದ ಬಾಗಿಲು ಬೀಗಗಳೆ ದೊಡ್ಡದಾಗಿವೆಯಲ್ಲ!
ನನ್ನ ಇರುವಿಕೆ ಏಕಿಷ್ಟು ಸಂಕುಚಿತವಾಗಿದೆಯಲ್ಲ!
ನನ್ನ ಹೆಸರಿನಲ್ಲಿ ಅರ್ಚನೆಮಾಡಿ
ನೀವೇ ಎಲ್ಲಾ ಭುಜಿಸುವಿರಿ
ಇದು ಸಮಂಜಸವೆ? ಹಸಿದವರಿಗೆಲ್ಲಿ ಕೊಟ್ಟಿರಿ?
ನಿಮ್ಮ ಮನದಲ್ಲಿ ಈ ರಾಮನಿಗೆ
ಚೂರು ಜಾಗ ಕೊಟ್ಟಿದ್ದರೆ ಸಾಕಿತ್ತೇನಗೆ;
ಎಲ್ಲೆಲ್ಲೂ ನಾನೇ ನೆಲೆಸಿರುವಾಗ
ಮಂದಿರ, ಮಸೀದಿ, ಇಗರ್ಜಿನ ಅಗತ್ಯ ನನಗಿಲ್ಲ
ಅದೇನಿದ್ದರು ನಿಮ್ಮ ಸ್ವಾರ್ಥಸಾಧನೆಗಷ್ಟೆ ಸೀಮಿತವಾಗಿರುವಾಗ..
ಅಣು-ರೇಣು ತೃಣ-ಕಾಷ್ಠಗಳೆಲ್ಲ ನನ್ನದಾಗಿರುವಾಗ
ನಿಮ್ಮಂಥ ಕೇವಲರಲ್ಲಿ ನಾನೇನು ಬೇಡಲಿ?
ನೀವು ಬೇಡದ ಮುಂಚೆಯೆ ನಿಮಗೆಲ್ಲಾ ಕೊಟ್ಟಿಯಾಗಿದೆ..
ನಿಮ್ಮ ಪಾಲಿನದೆಲ್ಲಾ ಈಗಾಗಲೆ ಹಂಚಿಯಾಗಿದೆ
ಅದನ್ನೆ ನೀವು ವಿಧಿ ಎನ್ನಬಹುದೇನೊ?!
ಮನುಷ್ಯನ ಮನಸ್ಸು ಒಂಥರಾ… ಇರಬಹುದು ಅದೇ!
ರಾಮನು ನಾನೇ, ರಾವಣನು ನಾನೇ!
ನನ್ನಲ್ಲಿದ್ದ ರಾವಣನನ್ನು ಕೊಂದು ನಾನು ರಾಮನಾದೆ
ಅದಕ್ಕಾಗಿಯೇ ರಾಮಯಣವ ಪುರಾವೆಯಾಗಿಸಿದೆ
ಹಗಲಿರುಳು ರಾಮನಾಮ ಜಪಿಸುವ ನೀವು
ರಾಮಚರಿತೆ ಓದಿ ಕಲಿತದ್ದಾದರು ಏನು?
ನಿಮ್ಮೊಳಗಿನ ರಾವಣನನ್ನು ಕೊಂದುಕೊಳ್ಳುವುದು ಯಾವಾಗ?
ನೀವು ನನ್ನ ಹಾಗೆ ರಾಮನಾಗುವುದು ಯಾವಾಗ?
ಎಲ್ಲರೂ ರಾಮನಾಗದೆ ರಾವಣರಾದರೆ ರಾಮರಾಜ್ಯದ ಸೃಷ್ಟಿಸುವುದಾದರು ಹೇಗೆ?
ನಿಮ್ಮ ದ್ವೇಷಕ್ಕಾಗಿ ನನ್ನನ್ನು ಆಯ್ಕೆಮಾಡಿಕೊಂಡಿರಿ
ಶಾಂತಿಭಂಗ ಅರಾಜಕತೆ ಸೃಷ್ಟಿಸಿದಿರಿ
ಒಂದಾಗಿ ಬಾಳಬೇಕಿದ್ದ ನೀವೆಲ್ಲ ವೈರತ್ವದ ಬೆಂಕಿ ಹಚ್ಚಿ ಭಾರತ್ ಬಂದ್ ಎಂದಿರಿ
ಧರ್ಮದ ಹೆಸರಿನಲ್ಲಿ ಅಧರ್ಮ ಎಸಗಿದಿರಿ
ನೀವೆಲ್ಲರೂ ನನ್ನ ಮಕ್ಕಳೆ ಎಂಬುದನ್ನು ಮರೆಯದಿರಿ
ನಿರಾಕಾಯನಾದ ನನಗೆ ಸುಂದರ ದೇಹ ಕೊಟ್ಟಿರಿ
ಜಗನ್ನಾಥನಾದ ನನಗೆ ಚಂದದ ರೂಪ ಕೊಟ್ಟಿರಿ
ಕೋಟಿ ನಾಮ ಕೊಟ್ಟು, ಅದಕ್ಕೆಲ್ಲ ವಿವರಣೆಯನ್ನು ನೀಡಿದಿರಿ
……………………………………………………ಭೇಷ್!
ನನ್ನನ್ನೆ ಹರಿದು ಹಂಚಿ ಹಲವು ಧರ್ಮಗಳ ಸೃಷ್ಟಿಸಿಕೊಂಡಿರಿ
ಕಟ್ಟುಪಾಡು ಆಚರಣೆ ನಿಯಮಗಳ ವಿಧಿಸಿಕೊಂಡಿರಿ
ಇಷ್ಟು ಸಾಲದೆಂಬಂತೆ ಜಾತಿ ಎಂಬ ಮತಿಹಿನತೆಯನ್ನು ಬೆಳೆಸಿಕೊಂಡಿರಿ
ಧರ್ಮದ ಹೆಸರಿನಲ್ಲಿ ನೀವು ಮಾಡುವ ತಪ್ಪುಗಳನ್ನೆಲ್ಲ ನನ್ನ ತಲೆಗೆ ಕಟ್ಟಿದಿರಿ
ನಿಮ್ಮ ಪಾಪ ಪುಣ್ಯಗಳನ್ನೆಲ್ಲ ತೀರ್ಪುಗಾರನಾದ ನನ್ನನ್ನು
ನಿಮ್ಮ ನ್ಯಾಯಾಲಯದ ಕಟಕಟೆಯಲ್ಲಿ ಅಸಹಾಯಕನನ್ನಾಗಿಸಿ ನಿಲ್ಲಿಸಿದಿರಿ
ಪರಮ ನ್ಯಾಯಾಧೀಶನಾದ ನಿಮ್ಮ ರಾಮನನ್ನೆ ನ್ಯಾಯ ಕೇಳುವಂತೆ ಮಾಡಿದಿರಿ ನನ್ನನ್ನೆ!
ಇದು ಮನುಷ್ಯ ದೇವರಿಗೆ ಮಾಡಿದ ಅನ್ಯಾಯ!!
(ಕವಿತೆ ಅಷ್ಟೆ ಅಲ್ಲದೇ ಚಿತ್ರವನ್ನು ಸಹ ಬರೆದವರು ಜಬೀವುಲ್ಲಾ. ಎಂ ಅಸದ್)
ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಸ್ನೇಹ ಸೌರಭ
ಹುಣ್ಣಿಮೆ ರಾತ್ರಿ ದೇವರಾಡುವನು