- ನುಬ್ರಾಗೆ ನುಬ್ರಾ ಮಾತ್ರ ಸಾಟಿ - ಜೂನ್ 26, 2022
- ಲೈ ಹರೋಬಾ ಎಂಬ ಪವಿತ್ರ ನೃತ್ಯದ ನೌಬತ್ತುಗಳು.. - ಜೂನ್ 12, 2022
- ಒಲ್ಲದ ಓಟವೇ ಆಟವಾದ ಸಾಗೋಲ್ ಕಂಜೈ.. - ಮೇ 22, 2022
“ನೀನು ಲೈಹರೋಬಾ ನೋಡಿದಿಯಾ..?” ತಾಂಗ್ಬಿ ಕೇಳುತ್ತಿದ್ದರೆ ನಾನು ಹಲ್ಕಿರಿದ್ದಿದ್ದೆ. ಹಾಗೆಂದರೆ ಏನೆಂದು ಅರ್ಥವಾಗದೇ ಹುಬ್ಬೇರಿಸಿದ್ದೆ. ಚುಚಾರ್ಂಡ್ಪುರ್ ರಸ್ತೆಯಲ್ಲಿ ಹೆದ್ದಾರಿ ದಾಟಿ.. ವಿಂಥಾಪೈನಲ್ಲಿ “ಅಸ್ಸಾಂ ರೈಫಲ್ಸ್” ಕೈಗೆ ಸಿಕ್ಕಿ ವಾಪಸ್ಸು ಕಳಿಸುವಾಗ ನನ್ನನ್ನು ಟೀ ಶಾಪಿನಲ್ಲಿ ಕೂರಿಸಿಕೊಂಡು ಚಹ ಮಾಡಿಕೊಟ್ಟವಳು. ಆವತ್ತು “ತಾಂಗ್ಬಿ” ನನ್ನನ್ನು ತನ್ನ ಅಂಗಡಿಯ ಹುಡುಗನ ಜೊತೆಗೆ ಸೇರಿಸಿ ಕದ್ದದಾರಿಯಲ್ಲಿ ಕಳುಹಿಸದಿದ್ದರೆ ಮುಚ್ಚಿ ಹೋಗಿರುವ, ರಾಜಕೀಯಕ್ಕೆ ತುತ್ತಾಗಿರುವ ಖುಗಾ ಡ್ಯಾಂ ನೋಡಲೇ ಆಗುತ್ತಿರಲಿಲ್ಲ. ಅಲ್ಲಿನ ಯಾವ ನಾನ್ವೆಜ್ ಐಟಂನ್ನೂ ನಾನು ತಿನ್ನುವುದಿಲ್ಲ ಎಂದು ಗೊತ್ತಾದಾಗ ಬಟಾಟೆ ಬೇಯಿಸಿ ಅದಕ್ಕಿಷ್ಟು ಹಿಟ್ಟು ಸವರಿ ಕರಿದುಕೊಟ್ಟಿದ್ದಳು. ಕೆಂಪು ಮೆಣಿಸಿನ ಕಾಳು ಪುಡಿ ಉದುರಿಸಿ.
“ಪುಂಗಾ ಚೊಲೆಂ ಕುಣಿತಿಯಾ…” ಎನ್ನುತ್ತಿದರೆ, ಕೋಲೆ ಬಸವನಂತೆ ಅಡ್ಡಡ್ಡಕ್ಕೂ ಉದ್ದುದ್ದಕ್ಕೂ ತಲೆ ಆಡಿಸಿದೆ. ಹೌದೂ ಅಲ್ಲ ಎನ್ನುವಂತೆ. “ಹೋಗಲಿ ರಾಧಾ ಕ್ರಿಷ್ಣ ಗೊತ್ತಾ..?” ಎನ್ನುತ್ತಿದ್ದರೆ ಅದಕ್ಕೆ ಮಾತ್ರ “ಅದ್ಯಾಕೆ ಗೊತ್ತಿಲ್ಲ ನನಗೆಲ್ಲಾ ಗೊತ್ತು..” ಎನ್ನುವಂತೆ, ಅವಳಿಗೆ ಅರ್ಥವಾಗುವಂತೆ ಉತ್ತರಿಸಲು ಎದ್ದು ನಿಂತು ಗುಜರಾತಿನಲ್ಲಿ ಕಲಿತಿದ್ದ ದಾಂಡಿಯಾದ ನಾಲ್ಕಾರು ಹೆಜ್ಜೆ ಸೇರಿಸಿ “ಹೆಂಗೇ..” ಎನ್ನುವಂತೆ ಕುಣಿದರೆ ಆಕೆ ಕೆಂಪು ಹಲ್ಲು ಬಿಟ್ಟು ನಗತೊಡಗಿದ್ದಳು.
“… ನಿನಗೆ ಗೊತ್ತಾ ನಾವು ಮೀಥೀಸ್ಗಳು ಇರೋದೆ ರಾಸ್ಲೀಲಾದ ಸಂಸ್ಕೃತಿಯಲ್ಲಿ. ನಮ್ಮನ್ನೆಲ್ಲ ಹಿಡಿದಿಟ್ಟಿರೊದೆ ಕೃಷ್ಣರಾಧೆಯರ ನೃತ್ಯದಲ್ಲಿ” ಎನ್ನುತ್ತಾ ತಾಂಗ್ಬಿ ವಿವರಿಸುತ್ತಿದ್ದರೆ, ಅದರಲ್ಲಿ ಮಣಿಪುರಿಗಳ ಜೀವನದ ಖುಷಿ ಉಲ್ಲಾಸ ಮತ್ತು ಉತ್ಸಾಹದ ಚಿಲುಮೆ ಎಲ್ಲ ಎದ್ದು ಕಾಣುತ್ತಿತ್ತು. ಮುಖ್ಯವಾಗಿ ರಾಸಲೀಲಾ ಎನ್ನುವ ಪ್ರೀತಿಯ ವಿವಿಧ ಮುಖವನ್ನು ಪರಿಚಯಿಸುವ ಸಂಗೀತ ನೃತ್ಯದಲ್ಲಿ ರಾಜ್ಯದ ಇಪ್ಪತ್ತೊಂಬತ್ತು ಅಧಿಕೃತ ಬುಡಕಟ್ಟುಗಳನ್ನು ಸಾಮೂಹಿಕವಾಗಿ ಆವರಿಸಿಕೊಂಡಿದೆ. ಅಷ್ಟೂ ಬುಡಕಟ್ಟುಗಳು ಒಳಗೊಳಗೇ ಏನೇ ಸಂಪ್ರದಾಯ, ಮಡಿ-ಮೈಲಿಗೆ ಎಂದು ಬಡಿದಾಡಿಕೊಂಡರೂ, ಒಬ್ಬರಿಗೊಬ್ಬರು ಮುಟ್ಟದೆ ಓಡಾಡಿದರೂ ಈ ರಾಸ್ಲೀಲಾ ಬಂದಾಗ ಮಾತ್ರ ಪುಕ್ಕ ಕೆದರಿಕೊಂಡ ಕೊಂಬೂತಗಳ ತರಹ ರಂಗಕ್ಕಿಳಿಯುತ್ತಾರೆ.
ಒಳನಾಡುಗಳ ಬುಡಕಟ್ಟಿನ ಹಳ್ಳಿಗಳಲ್ಲಿ ಸಂಚರಿಸುವಾಗ ಇಂತಹದ್ದೇ ಒಂದು ಮಾತುಕತೆಗೆ ಚಹ ಕುಡಿಯುವ ನೆಪದಲ್ಲಿ ಕೂತಿದ್ದೆ. ಆವತ್ತೂ ಅಲ್ಲಿದ್ದುದು ಚಾರ್ಮಿ ಎನ್ನುವಾಕೆ. ಏನೇ ಹೇಳಿ ಮಣಿಪುರಿ ಹೆಂಗಸರು ಸುಂದರಿಯರು. ದೇವರು ಇಲ್ಲಿನ ನಿಸರ್ಗದ ಜೊತೆಗೆ ಇವರನ್ನು ಒಂದು ಹಿಡಿ ಹೆಚ್ಚೆ ಟೈಮು ತೆಗೆದುಕೊಂಡು ರೂಪಿಸಿದ್ದು ಹೌದೇ ಎನ್ನುವಂತಿದ್ದಾರೆ. ಆಂಡ್ರೆ ಹಳ್ಳಿಯ ಹೊರಭಾಗದ ಗೌಡಿಪಾಡ ಎನ್ನುವ ಸಾಮೂಹಿಕ ಜಾಗದಲ್ಲಿದ್ದುದು ಆಕೆ. ಮಾತಿಗೆ ಸಿಕ್ಕಿದರೆ ಅಪ್ಪಟ ಗಿಣಿಗಳೇ. ತಮ್ಮ ಸಂಸ್ಕೃತಿ
ಮತ್ತು ಸಮಾಜಿಕ ರಿವಾಜುಗಳ ಬಗ್ಗೆ ಇರುವ ಹೆಮ್ಮೆಯ ರೆಂಜೇ ಬೇರೆ.
“ನೋಡು ಒಂದೆರಡು ಗುಟುಕು ವೈನು, ಎರಡು ರಿದಂ ಮ್ಯೂಜಿಕ್ಕು ಇದ್ದರೆ ಸ್ವರ್ಗ ಇಲ್ಲೆ. ಇದಕ್ಕಿಂತ ಚೆಂದದ ಜೀವನ ಅನುಭವಿಸಿದಿಯಾ?” ಎನ್ನುವ ಆಂಡ್ರೆಯ ವಾಸಿ, ಸುಂದರ ಮೂಗುತಿಯ “ಸಾರ್ಮಿ”ಯ(“ಚಾರ್ಮಿ”ಎನ್ನುತ್ತಾರೆ) ಮಾತಿನಲ್ಲಿ ತಮ್ಮ ಜೀವನ ಶೈಲಿಯ ಬಗ್ಗೆ ಹೆಮ್ಮೆ ಎದ್ದು ಕಾಣುತಿತ್ತು.
“ನೋಡು ಸ್ಯಾಮ್. ಖುಲ್ಲಾಂಗ್ ಇಶಾಯಿ ಹಾಡುತ್ತಾ “ಲೈ ಹರೋಬಾ” ಡಾನ್ಸ್ ಮಾಡುತ್ತಾ ಇದ್ರೆ ಬಹುಶ: ದೇವರೂ ಗೊತ್ತಾಗದಂತೆ ಹೆಜ್ಜೆ ಹಾಕಿ ಕುಣಿಯುತ್ತಾನೆ. ಅದಕ್ಕೆ ಸೌಂದರ್ಯ ಇಲ್ಲಿ ಜೀವಂತ. ಎಲ್ಲಿ ಸಂಗೀತ ಇರುತ್ತದೋ ಅಲ್ಲಿ ಜೀವನ ನಳನಳಿಸುತ್ತದೆ…” ಚಾರ್ಮಿ ವಾದಕ್ಕೆ ಬೀಳುವ ಲಕ್ಷಣದಲ್ಲಿದ್ದಳು. ಅದಕ್ಕಾಗಿ ಅತ್ಯುತ್ತಮವಾದ ಮಸಾಲೆ ಚಹದ ಲಂಚ ಕೊಡುತ್ತಿದ್ದಳು. ಆಕೆಗೆ ಹೀಗೆ ದೂರದ ಬೆಂಗಳೂರು ಪ್ರವಾಸಿಯೊಬ್ಬ ಅನಾಮತ್ತಾಗಿ, ತನ್ನ ಅಂಗಡಿಯ ಅಡ್ಡಣಿಗೆ ಮೇಲೆ ಕಾಲು ನೀಡಿಕೊಂಡು ದಿವೀನಾಗಿ ಕೂತು ಹಲ್ಕಿರಿಯುತ್ತಿದ್ದುದು ಸೋಜಿಗವೂ, ಆಪ್ತ ಖುಷಿಗೂ ಕಾರಣವಾಗಿತ್ತು.
ಕಾರಣ ಹೆಚ್ಚಿನ ಪ್ರವಾಸಿಗರು ಹೀಗೆ ಸ್ಥಳೀಯ ಇತಿಹಾಸ ಎಲ್ಲಾ ಹರವಿಕೊಂಡು ಕೂತು ಚರ್ಚೆಗಿಳಿಯುವುದಿಲ್ಲ. ಮನೆಯ ಅಪ್ಪಟ ವಾಸನೆಯನ್ನು ಗಲೀಜು ಎನ್ನದೆ, ಅದೇ ಆಗಷ್ಟೇ ಹಂದಿ ಮೈ ಹೊಸೆದು ಹೋದ ಚಾಪೆಯ ಮೇಲೆ ನನ್ನಂತೆ ಮಾವನ ಮನೆಯಲ್ಲಿ ಕೂರುವಂತೆ ಅಂಡು ಊರುವುದಿಲ್ಲ. ನನ್ನ ಪ್ರವಾಸಗಳ ಯಶಸ್ಸೇ ಅದು. ನೆಟಿವಿಟಿಯ ಯಾವ ರಿವಾಜೂ ನಾನು ಮುರಿಯುವುದಿಲ್ಲ. ಅದರಲ್ಲೂ ಕೆಲವರು ಎನೋ ತಿಳಿದದ್ದು ಮಾತಾಡಿ ಎದ್ದು ಹೋಗ್ತಾರೆ ಎನ್ನುವುದು ಆಕೆಯ ವಾದ. ಅದಕ್ಕಾಗಿ ನಾನು ಪಟ್ಟಾಗಿ ಕೂತು “..ಇದೆಂಗೆ..? ಇದು ಯಾಕೆ ಹಿಂಗೆ..?”ಎನ್ನುತ್ತಾ ಊರ ಉಸಾಬರಿಗಳನ್ನೆಲ್ಲ ಪ್ರಶ್ನಿಸುವ ಉಮೇದಿಗೆ, ಆಕೆಗೂ ಹುರುಪು ಬರತೊಡಗಿತ್ತು.
ಮಣಿಪುರಿಗಳ ಮಾತಿನ ವಿಶೇಷವೆ ಅದು. ಸರಿಯಾದ ಭಾಷೆಯಲ್ಲಿ ಲಯಕ್ಕೆ ಬಿದ್ದರೆ ಮಾತು ನಿಲ್ಲುವುದೇ ಇಲ್ಲ. ಅವಳೂ ಹಾಗೇಯೆ. ಅದಕ್ಕೆ ಬಿಟ್ಟರೆ, ಎಲ್ಲಿ ಇವನಂಥ ಇನ್ನೊಬ್ಬ ಗಿರಾಕಿ ಈ ಹಳ್ಳಿಯ ಮೂಲೆಗೆ ಇನ್ಯಾಕಾದರೂ ಬಂದಾನು ಎನ್ನುವ ಹುಕಿಯಾ ಗೊತ್ತಿಲ್ಲ. ಕಾರಣ ನಾನು ಆಕೆ ತೋರಿಸುತ್ತಿದ್ದ ಅಪ್ಪಟ ಸ್ಥಳೀಯ ಚಿತ್ರಗಳಿಗೆಲ್ಲಾ “..ಹಾ ಇದು ನಿಮ್ಮ ಮೂಲ ಕಿಂಗ್ ಪಕಾಂಗ್ಬಾ,ಇದು ನಿಮ್ಮ ದೋಣಿ,ಇದು ನಿಮ್ಮ ಇನ್ನಾಪಿ..” ಎಂದು ಎಲ್ಲ ಅರಿತುಕೊಂಡ ವಿದ್ವಾಂಸನಂತೆ ಗುರುತಿಸತೊಡಗಿದ್ದೇನಲ್ಲ. ಇನ್ನೇನು ಬೇಕಿತ್ತು ಆಕೆ ಶುರುವಿಟ್ಟುಕೊಳ್ಳುತ್ತಿದ್ದಳು ಕಥೆಗಳನ್ನು.
ಸಂಜೆಯ ಹೊತ್ತಿಗೆ ಆಂಡ್ರೆ ಹಳ್ಳಿಯ ಸಮಾನ ಮನಸ್ಕರೆಲ್ಲಾ ಆಗಲೇ ಗುಂಪಾಗುತ್ತಿದ್ದರು. ಸಂಜೆಯ ಅಮಲು ಅಡರುತ್ತಿಂತೆ ಅಲ್ಲಿ ಸಂಗೀತ ಮತ್ತು ಸ್ಥಳೀಯ ದಟ್ಟವಾದ ಗಾಂಜಾ ಶೈಲಿಯ ತಂಬಾಕು “ಮುಸಾಯಿ ಸಾವ್ಝೆಯ” ಘಾಟು ಏರತೊಡಗಿತ್ತು. ಹೌದು ಹೌದು ಎನ್ನುತ್ತಾ ತಲೆ ಅಲ್ಲಾಡಿಸಿದ್ದೆ. ಆಗಲೇ ಆಕೆ “ಪೇನಾ” ತೆಗೆದು ನುಡಿಸಲು ಆರಂಭಿಸಿದ್ದಳು. ಆ ಒಂದು ಸಂಗೀತದ “ರಿದಮ್ಮೇ” ಸಾಕು ಜನರನ್ನು ಇನ್ನಿಲ್ಲದಂತೆ ಒಂದು ಮಾಡಲು ಮತ್ತು ಕುಣಿಯಲು, ಈಗಲೂ ಅಲ್ಲಿ ಸಮುದಾಯದ ಹೆಚ್ಚಿನ ಸುಧಾರಣೆ, ಒಮ್ಮತಗಳು, ಕುಟುಂಬ, ಇತರೆ ವ್ಯಾಜ್ಯೆಗಳೂ ಮತ್ತು ವಿವಾದಗಳು ಸಮುದಾಯದ ನಡುವಿನ ತಪ್ಪು ತಿಳುವಳಿಕೆಗಳು ಬಗೆಹರಿಯುತ್ತವೆ. ಕೆಲವೊಮ್ಮೆ ಹೆಚ್ಚಿನ ಅನಾಹುತಕ್ಕೂ ಕಾರಣವಾಗುತ್ತದೆ ಕೂಡಾ.
ಸುತ್ತಲೂ ಮಂಪರು ಕವಿಯುತ್ತಿದ್ದರೆ, ಕಟ್ಟೆಗಳ ಮೇಲೆ ನಿಧಾನಕ್ಕೆ ಆವರಿಸಿಕೊಳ್ಳುವ ಬೀಡಿಯ ಧೂಮದೊಂದಿಗೆ ಮಾಂಸಾಹಾರದ ಅಡುಗೆಯ ಜೊತೆಗೆ “ಪೇನಾ ಶಾಹಿ”ಯ ಸಂಗೀತ ಅಡರಿಕೊಳ್ಳತೊಡಗುತ್ತದೆ. ನಾನು ಇವೆಲ್ಲದಕ್ಕೂ ಮಿಕಮಿಕ ಎನ್ನುತ್ತಾ ಕುಳಿತುಕೊಳ್ಳುತ್ತಿದ್ದರೆ ಅವರ ಪಾಲಿಗೆ ನಾನೊಂದು ಶೋಪೀಸ್. ಅಪ್ಪಟ ಕಪಾಟಿನಲ್ಲಿದ್ದ ಎದುರು ಬೆದುರು ಬೊಂಬೆ.
ಬಿದಿರಿನ(ಕೆಲವೊಮ್ಮೆ ಲೋಹದ್ದೂ ಮಾಡಿ ಇರಿಸಿಕೊಳ್ಳುವುದೂ ಇದೆ) “ಹರೋಬಾ ಇಷಾಯಿ , ಪೇನಾ ಇಷಾಯಿ” ಸ್ಥಳೀಯ ಸಂಗೀತ ಉಪಕರಣಗಳು. ಎಂಥವರನ್ನು ಕುಣಿಯಲು ಪ್ರೇರೇಪಿಸುವ ಸಂಗೀತ ಮತ್ತು ನೃತ್ಯವೆಂದರೆ “ಖುಬೈ ಶಾಯಿ…”. ಪಾಶ್ಚಾತ್ಯರ “ಪೆಟಲ್ ಮ್ಯೂಸಿಕ್” ನ್ನು ನೆನಪಿಸುವ ಈ ಖುಬೈ ನಿಜಕ್ಕೂ ಅರ್ಧ ಗಂಟೆಗಟ್ಟಲೇ ಕಾಲ “ರಿದಂ” ತಪ್ಪದೆ ಚಪ್ಪಾಳೆ ನುಡಿಸುವಾಗ ಅಚ್ಚರಿಯಾಗುತ್ತದೆ. ಎಂಥಾ ಅರಸಿಕನೂ ನಾಚಿಕೆ ಸ್ವಭಾವದವನಿದ್ದರೂ ಈ ಲಯಕ್ಕೆ ಕಾಲು ಕುಣಿಸದೇ ಇರಲಾರ. ನಿರಂತರವಾಗಿ ಚಪ್ಪಾಳೆಯಲ್ಲಿ ಸರದಿಯ ಮೇರೆಗೆ ಬೇರೆ ಬೇರೆ ರೀತಿಯಲ್ಲಿ ಧ್ವನಿ ಹೊರಡಿಸುವ ತಂಡಗಳು ಕೊನೆ ಕೊನೆಗೆ ಒಮ್ಮೆಲೆ ತಾರಕ್ಕೇರಿಸುತ್ತಾ ದೇಹದ ಹಲವು ಭಾಗಗಳಲ್ಲಿ ಚಪ್ಪಾಳೆ ತಟ್ಟಿಕೊಳ್ಳುತ್ತಾ ಕುಣಿಯಲು ಪ್ರೇರೇಪಿಸುವ ನಾದ ಅದ್ಭುತ. ಅಲ್ಲಲ್ಲಿ ಗುಂಪಾಗಿ ಜನ ಮನರಂಜನೆಗಾಗಿ ನಡೆಯುತ್ತಿರುವ ಈ ಚಪ್ಪಾಳೆ ಕ್ಲಬ್ ಈಗೀಗ ಉದ್ಯಮವಾಗಿ ಪ್ರವಾಸೋದ್ಯಮ ಆಕರ್ಷಣೆಯೂ ಆಗುತ್ತಿದೆ.
ಹೆಚ್ಚಿನಂಶ ನಾನು ಅವರೊಂದಿಗೆ ಸುಲಲಿತವಾಗೇ ಈ ನಾದಕ್ಕೆ ಕೈ ಜೋಡಿಸುತ್ತಿದ್ದೆ. ಕೇವಲ ಎರಡ್ಮೂರು ಬಾರಿ ಮತ್ತು ಹಲವು ಏರಿಳಿತಗಳ ಚಪ್ಪಾಳೆಯಲ್ಲಿ ಮಾತ್ರ ನನ್ನ ಕೈ ಹದ ತಪ್ಪುತ್ತಿತ್ತು. ಆದರೂ ಲುಕ್ಸಾನು ಏನೂ ಇರಲಿಲ್ಲ. ಯಾಕೆಂದರೆ ಈ “ಖುಬೈ ಶಾಯಿ” ಯಲ್ಲಿ ಮೊದಲಿಗೆ ನಿಮ್ಮನ್ನು ಗೈಡ್ ಮಾಡುವ ಅಂದರೆ ನಿರ್ದೇಶಕ ಅಂತಿಟ್ಟುಕೊಳ್ಳಿ. ಆತ ಒಂದು ಹಂತದವರೆಗೆ ಚಪ್ಪಾಳೆಯಲ್ಲಿ ನಿಮ್ಮನ್ನು ಏರುಗತಿ ಕರೆದೊಯ್ಯುವಾಗಲೇ ಅವರ ಹದಕ್ಕೆ ಬರುವಂತೆ ತರಬೇತಿಗೀಡು ಮಾಡಿಬಿಡುತ್ತಾನೆ. ನಂತರ ಏನಿದ್ದರೂ ಅವನ ಕೈಗಳ ತಾಳಕ್ಕೆ ನಾವು ಚಪ್ಪಾಳೆಯ ಶಬ್ಧ ಸೇರಿಸುವುದಷ್ಟೇ.
ಹಾಗಾಗಿ “ಖುಬೈ ಶಾಯಿ”ಯಲ್ಲಿ ಒಮ್ಮೆ ನಾವು ನಾದಕ್ಕೆ ಬಿದ್ದರೆ ಅದರ ಏರುಗತಿಯಿಂದಾಚೆಗೆ ಬರುವುದೇ ಇಲ್ಲ. ಇದು ಯಾವುದೇ ಇತರೆ ಸಂಗೀತ ಉಪಕರಣದ ಹಂಗಿಲ್ಲದೆ ಕೇವಲ ಮಧ್ಯದಲ್ಲಿ ನಮ್ಮ ಚಪ್ಪಾಳೆಗಳ ಹದಕ್ಕೆ, “ಪೇನಾ” ದನಿಯ ರಿದಮ್ಮಿನ ಆಚೆಗೆ ಹೋಗದಂತೆ ನಿಯಂತ್ರಿಸಬಲ್ಲ ಡ್ರಮ್ಮಿಸ್ಟ್ ತಹದವನೊಬ್ಬನಿದ್ದರೆ ಸಾಕೇ ಸಾಕು. ಸಂಜೆಯ ಅಮಲಿಗೆ ಅದ್ಭುತ ಅನುಭವ ನೀಡಬಲ್ಲದಾಗುತ್ತದೆ.
ಹಾಗೆ ಆಂಡ್ರೆಯಿ ಹಳ್ಳಿಯಲ್ಲಿ ಆವತ್ತು ಕುಳಿತು “ಖುಬೈ ಶಾಯಿ” ಹಾಡುತ್ತಾ ಚಪ್ಪಾಳೆ ಶಬ್ದಕ್ಕೆ ನಾನು ತಲೆದೂಗುತ್ತಿದ್ದರೆ, ಅಚ್ಚರಿಗೆ ದೂಡಿದ್ದು ಸಾಮೂಹಿಕ ನೃತ್ಯವಿದ್ದರೂ, ಅಮಲಿನಲ್ಲೂ ಮಹಿಳೆಯರನ್ನು ಅತ್ಯಂತ ಸಭ್ಯವಾಗಿಯೂ, ಗೌರವ ಪೂರ್ವಕವಾಗಿಯೂ ಸೇರಿಸಿಕೊಳ್ಳುವ ತಂಡ ಕಾರ್ಯಾಚರಣೆ ಇತರ ಡಾನ್ಸ್ ಧಮಾಕಗಳ ಧುಮಡಿಗಳು ತುರ್ತಾಗಿ ಅರಿಯಬೇಕಾದ ಸಂಗತಿ. ಸುಖಾಸುಮ್ಮನೆ ಮೈ ಕೈ ತಾಗಿಸುವ ಇತ್ತಿಚಿನ ಗುಂಪು ನೃತ್ಯಗಳ ಹೇವರಿಕೆಗಳು, ಅಲ್ಲಲ್ಲೆ ಕೈಯ್ಯಾಡಿಸುವ ಹವಣಿಕೆಗಳು ಇರುವುದೇ ಇಲ್ಲ. ಮಣಿಪುರದ ಸಂಗೀತ ಮತ್ತು ಸಾಮೂಹಿಕ ನೃತ್ಯದ ಪ್ರಕಾರಗಳಿಗೆ ಪಾವಿತ್ರ್ಯತೆ ಇದೆ. ಅದನ್ನೊಂದು ಸಾಮಾಜಿಕ ಬಂಧದ ಕುರುಹಾಗಿ, ಸೌಹಾರ್ದಕ್ಕಾಗಿ ಮನರಂಜನೆ ಮತ್ತು ಒತ್ತಡ ನಿವಾರಣೆಗಾಗಿ ಬಳಸಿಕೊಳ್ಳುತ್ತಾರೆಯೇ ವಿನ: ನಗರಗಳಲ್ಲಿನ ಸಭ್ಯತೆ ಮೀರಿದ ನೃತ್ಯದ ಗೌಜಿಗಳ ಹೇವರಿಕೆಯ, ದರ್ದಿಗೆ ಈಡಾಗುವ ನೌಬತ್ತಿನ ಕೊಸರಾಟಗಳು ಅದರಲ್ಲಿರುವುದೇ ಇಲ್ಲ. ಅದೆಲ್ಲ ಸಮಾಜ ನಿಷಿದ್ಧವೆ. ಹಲವು ಬುಡಕಟ್ಟುಗಳ ಇಂತಹ ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡೆನಾದರೂ ಎಲ್ಲೂ ಹವಣಿಕೆಗಳು ಕಂಡುಬರಲೇ ಇಲ್ಲ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್