ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಬ್ರಾಗೆ ನುಬ್ರಾ ಮಾತ್ರ ಸಾಟಿ

ಸಂತೋಷಕುಮಾರ ಮೆಹೆಂದಳೆ

ಅಲೆಮಾರಿ ಡೈರಿ..

ದಾರಿಯ ಮೇಲೆ ಸಿಕ್ಕುವ ಎಲ್ಲರನ್ನೂವಿಚಾರಿಸುತ್ತಲೇ ಸಾಗುವಷ್ಟು ದೂರವಿದೆ ಎನ್ನಿಸುವ ದಿಸ್ಕಿತ್, ಲೇಹ್‍ದಿಂದ ಹೊರಟರೆ ಒಂದು ದಿನಕ್ಕೆ ಹಿಂದಿರುಗುವ ದಾರಿಯಲ್ಲ. ಅಕಸ್ಮಾತ ಹಾಗೆ ಯೋಚಿಸಿ ಹೋಗುವುದಾದರೆ ನೀವು ಹೋಗಲೇ ಬೇಡಿ. ಕಾರಣ ಉದ್ದಾನುಉದ್ದದ ಹಸಿರು ಮರೂಭೂಮಿ ಎಂದೇ ಕರೆಯಿಸಿಕೊಳ್ಳುವ ನುಬ್ರಾ ವ್ಯಾಲಿ ದಾಟಲೇ ನಿಮಗೆ ದಿನವಿಡಿ ಸಾಲುವುದಿಲ್ಲ. ಸುಮ್ಮನೆ ಗಾಡಿ ಓಡಿಸಿದರೆ ದಾಟುವುದು ಹೌದಾದರೂ ಹಾಗೆ ಹೋಗುವುದೇ ಆದರೆ ಯಾಕೆ ಹೋಗಬೇಕು..?

ದಿಸ್ಕಿತ್‍ನಿಂದ ಬಲಕ್ಕೆ ತಿರುವು ತೆಗೆದುಕೊಂಡು ಏರಿಳಿಯುವ ಸಮಾನ ಆಕಾಶದೆತ್ತರದ ಪರ್ವತದ ಸೆರಗಿನಲ್ಲಿ ಕೆಳಗಿನ ತುಂಬಾ ವಿಶಾಲ ಒಳಗಿನ ನದಿಗಳ ಬಯಲು ಪ್ರದೇಶ ವಿಕ್ಷಿಸುತ್ತಾ ನಿಂತಲ್ಲಿ, ಕೂತಲ್ಲಿ,ಏರಿಳಿದಲ್ಲಿ ಚಿತ್ರಕ್ಕಾಗಿ ನಿಂತುಬಿಡೋಣ ಎನ್ನಿಸುವ ನುಬ್ರಾವ್ಯಾಲಿ ಲೇಹ್ ನಂತರದ ಆಕರ್ಷಣೆ ಎನ್ನುವುದಕ್ಕಿಂತ ವಿಭಿನ್ನ ಜೀವನಾನುಭವದ ಅನಿರೀಕ್ಷಿತ ವೈಪರೀತ್ಯಗಳ ಕಣಿವೆಯ ಕುತ್ತಿಗೆಯಲ್ಲಿನ ಪ್ರದೇಶ. ಅದಕ್ಕೆ ಕಿರೀಟದಂತೆ ಶೋಯಾಕ್ ಎಂಬ ಜೀವ ಕೊಡುವ ಕಣ್ಣೀರ ನದಿ.

ಹತ್ತಾರು ಕಿ.ಮೀ. ಮರಳು, ಅದಕ್ಕೂ ಎರಡು ಪಟ್ಟು ಅನಾಮತ್ತು ಹನ್ನೆರಡು ಸಾವಿರ ಅಡಿ ಮುಗಿಲೆತ್ತರಕ್ಕೆ ಮುಖ ಮಾಡಿ ನಿಂತಿರುವ ಪರ್ವತಗಳು, ಅದರ ನೆತ್ತಿಯ ಮೇಲೆ ಹಿಮದ ಛಾವಣಿ, ಅದರ ಪಕ್ಕದಲ್ಲೇ ಚೈನಾ ಬಾರ್ಡರ್‍ನ್ನು ಪ್ರತ್ಯೇಕಿಸುವ ಭಾರತೀಯರ ರಹದಾರಿಯನ್ನೇ ಬಂದು ಮಾಡುವ ಕಾರಾ ಕೋರಂ ಹೈವೆ, ಸರಹದ್ದಿಗೂ ಕಾಲಿಡುವ ಮೊದಲೇ ಮರಳು, ಅದರ ಮಧ್ಯದಲ್ಲೆ ಹರಿಯುವ ನದಿಗಳ ಸಂಗಮದಂತಿರುವ ಹುಂಡರ್ ಮೂರು ವಿಭಿನ್ನಗಳನ್ನು ಏಕ ಕಾಲಕ್ಕೆ ಪೂರೈಸುವ ಅದ್ಭುತ. ಅಲ್ಲೆ ತೀರದಲ್ಲಿ ರಾತ್ರಿಯ ಸುವ್ಯವಸ್ಥೆಗೆ ಡೇರೆಗಳ ಸರತಿ. ಹೀಗೆ ಒಮ್ಮೆ ಖಾರಂದುಂಗ್ಲಾ (18,379 ಅಡಿ) ಎನ್ನುವ ಜಗತ್ತಿನ ಅತ್ಯಂತ ಎತ್ತರದ ರಸ್ತೆಯನ್ನು ಏರಿಳಿಯುತ್ತಿದ್ದಂತೆ ಕಣಿವೆಯಲ್ಲಿ ಕಾಲು ಚಾಚುವ ನುಬ್ರಾ ಜಗತ್ತಿನ, ಅದರಲ್ಲೂ ಪಾಶ್ಚಾತ್ಯರ ಪ್ರಿಯ ತಾಣ.

ಇಷ್ಟೆಲ್ಲ ಪ್ರಾದೇಶಿಕ ವಿಶೇಷತೆಯನ್ನು ಅನಾಮತ್ತಾಗಿ ನೂರಾರು ಕಿ.ಮೀ ಉದ್ದಕ್ಕೂ ಸೋಮಾರಿತನವಿಲ್ಲದೇ ಬಳಸಿ ಹರಿಯುತ್ತಿರುವ ನದಿ ಶೋಯಾಕ್. ಅಷ್ಟಕ್ಕೂ ಈ ನದಿಯ ವಿಪರೀತತೆಯಿಂದಾಗೇ ನುಬ್ರಾ ವ್ಯಾಲಿಯ ವಿಬಿನ್ನ ಭೌಗೋಳಿಕ ವೈಪರಿತ್ಯಗಳು ಉಂಟಾಗಿವೆ ಎಂದರೂ ತಪ್ಪಿಲ್ಲ. ಕಾರಣ ವರ್ಷದುದ್ದಕ್ಕೂ ಇದಕ್ಕೆ ಅಪರಿಮಿತ ಸೆಳವುಗಳು ಮೈದೋರುತ್ತದೆ. ಮಳೆಗಾಲದಲ್ಲಿ ಮಳೆ ಬಂದರೆ, ನಂತರದಲ್ಲಿ ಹಿಮ ಕರಗಿ ಬಿಸುಪಿಗೀಡಾಗುವ ಶೋಯಾಕ್ ಹಲವು ಬಾರಿ ಗತಿ ಬದಲಿಸುತ್ತದೆ. ಹಾಗಾಗಿ ಪೂರ್ತಿ ನುಬ್ರಾ ವ್ಯಾಲಿ ಎಡ ಮಗ್ಗುಲಲ್ಲಿ ಶೋಯಾಕ್ ಪಯಣದುದ್ದಕ್ಕೂ ಜೊತೆಗಿರುತ್ತದೆ.

ಹಾಗೆ ನೋಡಿದರೆ ಖಾರದುಂಗದಿಂದ ಕೆಳಗೆ ಇಳಿಯುತ್ತ ನಿರಂತರ ಪರ್ವತದ ಸೆರಗುಗಳಲ್ಲಿ ಕಡೆದ ರಸ್ತೆಗಳಲ್ಲಿ ಪಯಣಿಸುವಾಗ, ಯಾವುದಾದರೂ ಊರು ಸಾಯಲಿ ಅತ್ಲಾಗೆ, ಒಂದೇ ಒಂದು ಮನುಷ್ಯನೂ ಕಾಣುವುದೇ ಇಲ್ಲವಲ್ಲ. ಹಾಗೆ ಖಾಲಿಖಾಲಿ ಚಲನೆಯಲ್ಲಿರುವಾಗಲೇ ಹಠಾತ್ತನೆ ಒಂದು ಸೆಟ್ ಹೆರ್‍ಪಿನ್ ಬೆಂಡ್ ತೆಗೆದುಕೊಳ್ಳುವ ರಸ್ತೆ ಈಗ ನುಬ್ರಾ ಕಣಿವೆ ಪರ್ವತ ಸಮೂಹದ ಎಡ ಮಗ್ಗುಲಿಗೆ ಹೊರಳುತ್ತದೆ. ಅಲ್ಲಿ ಎದುರಿಗೆ ಕಣ್ಣೆವೆಯ ಹತ್ತಿರದಲ್ಲಿ ಚೆಂದದ ಊರು ತಾತ್ಸಿ ಸಿಕ್ಕುತ್ತದಾದರೂ ಅಲ್ಲಿಗೆ ಹೋಗದಂತೆ ಅಡ್ಡ ಹಾಕುವುದೇ ಈ ಶೊಯಾಕ್ ನದಿ.

ಹಾಗೆ ಶೋಯಾಕ್ ಅಚಾನಕ್ ಆಗಿ ಈ ಪಯಣದಲ್ಲಿ ಜೊತೆಯಾಗುತ್ತಿದ್ದರೆ, ಅಲ್ಲಿಂದ ದಿಸ್ಕಿತ್‍ವರೆಗೂ ಊರುಗಳ ಪೈಕಿ ಇರುವ ಏಕೈಕ ಗ್ರಾಮವೆಂದರೆ ಖಾಲ್ಸರ್. ಹೊರತಾಗಿ ಮಧ್ಯದಲ್ಲಿ ಏನಿದ್ದರೂ ಅಲ್ಲೊಂದು ಇಲ್ಲೊಂದು ನರಪಿಳ್ಳೆ ಮತ್ತು ಬರೀ ಜರಿದು ಬಿದ್ದ ಪರ್ವತ ರಾಶಿ. ನಿಂತಲ್ಲಿ ಕೂತಲ್ಲಿ ಒಂದೆರಡು ಸೆಲ್ಫಿ ಎನ್ನಿಸುವ ಮೋಹಕ ಹಿನ್ನೆಲೆ ಇದಕ್ಕಿದ್ದು. ಶೋಯಾಕ್ ಹಸಿರುಮಿಸ್ರಿತ ನೀಲಿ ನದಿ. ಆಗೀಗ ಎಡಭಾಗದ ಕಣಿವೆಯಲ್ಲಿ ಜಾರುತ್ತಿರುತ್ತದೆ.

ನುಬ್ರಾದ ಕೊನೆಯಾದ ಹುಂಡರ್ ಸಿಕ್ಕುವ ಮೊದಲು ದಕ್ಕುವ ಥೇಮ್ಸಾ ಕಾಮನ ಬಿಲ್ಲಿನ ಕಮಾನಿನ ರೀತಿಯ ಪರ್ವತವನ್ನು ಅರ್ಧ ಕೊರೆದ ಭಾಗದಲ್ಲಿ ಮರುಳು ಮರುಳಾಗಿ ಅಚ್ಚರಿ ಹುಟ್ಟಿಸುವ ನಾಡು. ಮೂವತ್ತು ಮನೆಗಳ ಥೇಮ್ಸಾ ದಲ್ಲಿ ಈಗ ಮನೆಗಿಂತಲೂ ಹೆಚ್ಚಿಗೆ ಟೆಂಟುಗಳು ಸಾಲು ಎದ್ದು ನಿಂತಿವೆ. ಆದರೆ ಹುಂಡರ್ ಹೋಗಲು ಇಚ್ಚಿಸುವವರು ಥೇಮ್ಸಾ ಬೈ ಪಾಸ್ ಮಾಡುವುದರಿಂದ ವಿಚಿತ್ರಾಕಾರದ ಈ ಊರು ಮಿಸ್ ಮಾಡಿಕೊಳ್ಳುತ್ತಾರೆ. ಪರ್ವತ ಹಸಿರಿನಿಂದಾವೃತವಾಗಿದ್ದರೆ ನೆಲದ ಮೇಲೆ ಅಚ್ಚ ಬಂಗಾರದ ಮರಳು ಹೊಂದಿರುವ ಥೇಮ್ಸಾ ಸಧ್ಯಕ್ಕೆ ಇಟಾಲಿಯನ್ ರಾಜಧಾನಿ ಎನ್ನಿಸುತ್ತದೆ.

ನಮ್ಮ ಪ್ರವಾಸಿಗರು ಬೆಚ್ಚನೆಯ ರೂಮು ಕೇಳುವವರು. ಅವರೋ ಸಿಕ್ಕ ಟೆಂಟಿನಲ್ಲೇ ಸಂಸಾರ ಹೂಡುತ್ತಾರೆ. ಬೆಳಿಗ್ಗೆ ನೀರು, ನ್ಯೂಸು ಬೇಕಾಗಿಲ್ಲ. ಟಿಶ್ಯೂ ಇದ್ದರೆ ಸಾಕು ಬುಡ ಒರೆಸಿಕೊಳ್ಳಲು. ಅದಿಲ್ಲದ್ದಿದ್ದರೆ ನ್ಯೂಸ್ ಪೇಪರ್ ತುಂಡಾದರೂ ನಡೆಯುತ್ತದೆ. ಎಲ್ಲ ಮರಳಿನಲ್ಲಿ ಹೂತಾಕಿ ಎದ್ದು ಒರೆಸಿಕೊಂಡು ಹೊರಡುತ್ತಾರೆ. ಬೇಕಿರೋದು ಅಪ್ಪಟ ಏಕಾಂತ ಮತ್ತು ಕಿರಿಕಿರಿ ಮಾಡದ ಯಜಮಾನರ ಆತಿಥ್ಯ. ಪ್ರಸ್ತುತ ಭಾರತದ ಪ್ರವಾಸೋದ್ಯಮದಲ್ಲಿ, ಕೈತುಂಬ ದುಡ್ಡಿಗೆ ಇದನ್ನೆಲ್ಲ ಹೇರಳವಾಗಿ ಪೂರೈಸುವ ವ್ಯವಸ್ಥೆ ಇರುವಾಗ ಕಾಮನಬಿಲ್ಲಿನ ಥೇಮ್ಸ್ ಏನು ಲಂಡನ್ನಿನ ಥೇಮ್ಸ್‍ನಲ್ಲೂ ಬೇಕಿದ್ದರೆ ನಮ್ಮವರು ಟೆಂಟ್ ಹಾಕಿಬಿಡುತ್ತಾರೆ. ಹಾಗಾಗಿ ಥೇಮ್ಸ್ ಎಂಬ ಕಾಮನಬಿಲ್ಲಿನ ಸುಂದರಿ ಕೈಗೆಟುವಷ್ಟು ಹತ್ತಿರದಲ್ಲಿದ್ದು ಮಿಸ್ ಆಗುತ್ತಾಳೆ. ಮೇಲಿನಿಂದ ದೃಷ್ಟಿಗೆ ನಿಲುಕುವ ಹಳ್ಳಿ ನೋಡಲು ಚೆಂದ. ಆದರೆ ಗಾಡಿ ಇಳಿಸುತ್ತಾ ಕೆಳಗೆ ಹೋಗಲು ತಾಸೆರಡು ತಾಸು ಬೇಕಾಗುತ್ತದೆ ಎನ್ನುವುದೇ ಪಯಣಿಗರು ಮತ್ತು ಸ್ಥಳೀಯ ಯೋಜಿತ ಪ್ರವಾಸಿಗರು ಅತ್ತ ಸ್ಟೆರಿಂಗ್ ತಿರುಗಿಸದೆ ಇರಲು ಕಾರಣ.

ಬಹುಶ: ವಿದೇಶಿಗರಷ್ಟು ನಮ್ಮವರು ಯಾರೂ ಇಲ್ಲಿ ಬಂದು ಉಳಿಯುತ್ತಿಲ್ಲ. ಇಲ್ಲಿ ದಾರಿ ಮೇಲೆ ಲಭ್ಯವಾಗುವ ಪ್ರತಿ ಟೆಂಟುಗಳ ವಸತಿ ಪ್ರದೇಶದಲ್ಲೊಮ್ಮೆ ಇಣುಕಿ ನೋಡಿದೆ. ಬರೀ ಬಟ್ಟೆಗೆ ಬಡತನವಿರುವ ವಿದೇಶಿಗರದ್ದೆ ಹಡೆ. ಅವರ ಬರ್ಮುಡಾಗಳೆ ಲಾಡಿ ಬಿಚ್ಚಿಕೊಂಡು ನೇತಾಡುತ್ತಿರುತ್ತವೆ. ಉಳಿದವರು ಎಲ್ಲೊ ಒಬ್ಬೊಬ್ಬ ಚಾರಣಿಗರು, ಮೋಟಾರ್ ಸೈಕ್ಲಿಗರು ಕೊನೆಗೆ ಅಲ್ಲೊಬ್ಬ ಇಲ್ಲೊಬ್ಬ ನನ್ನಂಥ ಸವಾರಿಗಳು.

ಟಿಗ್ಗುರ್, ಸುಮೂರ್, ತಿರಿಚ್ಚಾ, ಲಾಲ್ಝಂಗ್, ತಿರೀತ್, ಪಾನಮಿಕ್ ಬಿಸಿನೀರ ಬುಗ್ಗೆ, ತಾಕ್ಸಾ ಇಂಥಾ ಅದ್ಭುತ ಏಕಾಂತ ಮತ್ತು ಚಿನ್ನದ ಮರಳಿನ ಪ್ರದೇಶಗಳನ್ನು ಹುಂಡರ್ ಎಂಬ ಕೇಂದ್ರೀಕೃತ ಪ್ರವಾಸಿ ಸ್ಥಳ ನುಂಗಿ ಹಾಕಿದ ಆರೋಪವೂ ಇದೆ. ಕಾರಣ ಹುಂಡರ್‍ನ ಎದುರಲ್ಲೆ ತಿರುವು ತೆಗೆದುಕೊಳ್ಳುವ ಶೋಯಾಕ್‍ಗೆ ಸವಾಲಾಗುವಂತೆ ಅದರ ಬಲಮಗ್ಗುಲಿಗೆ ಕುಂಚ ದೂರದಲ್ಲೆ ನುಬ್ರಾ ನದಿ ಹೊರಳುತ್ತ ಸಾಗುತ್ತಿರುತ್ತದೆ. ಅದರ ಮಗ್ಗುಲಲ್ಲೆ ಈ ಮೇಲಿನ ಊರುಗಳೆಲ್ಲ ಚಿನ್ನದ ಮರಳಿನ ಮೇಲೆ ಬಣ್ಣದ ಪತಾಕೆ ನೆಟ್ಟು ವಿದೇಶಿಗರಿಗೆ ಕೆಂಪು ಹಾಸು ಹಾಸುತ್ತಿದ್ದಾರೆ.

ಖಾರದುಂಗ್ಲಾದಿಂದ ಖಾರದುಂಗ ಹಳ್ಳಿಯ ಮೂಲಕ ಪೂರ್ತಿ ಕೆಳಕ್ಕಿಳಿಯುವ ಅನಾಹುತಕಾರಿ ರಸ್ಯೆಯ ಮಧ್ಯದಲ್ಲಿ ಪೂರ್ತಿ ವ್ಯಾಲಿಗೆ ದಿಸ್ಕಿತ್ ಒಂಥರಾ ರಾಜಧಾನಿ ಇದ್ದಂತೆ. ಸಂಪೂರ್ಣ ನುಬ್ರಾವ್ಯಾಲಿಯ ಮಧ್ಯದಲ್ಲಿರುವ ದಿಸ್ಕಿತ್ ಇದ್ದುದರಲ್ಲೇ ಕೊಂಚ ವಸತಿ ಮತ್ತು ಅಹಾರ ಹಾಗು ಅಗತ್ಯ ಸೌಕರ್ಯವನ್ನೂ ಪೂರೈಸುತ್ತಿದೆ. ಆದರೆ ಈ ದಾರಿ ಏನಿದ್ದರೂ ಪ್ರವಾಸಿ ದೃಷ್ಟಿಯಿಂದ ನೋಡಬೇಕೆ ಹೊರತಾಗಿ ಸೌಕರ್ಯಗಳ ನಿಟ್ಟಿನಲ್ಲಿ ಯಾವುದೂ ವ್ಯವಸ್ಥಿತವಾಗಿಲ್ಲ. ತೀರ ಹೆಚ್ಚೆಂದರೆ ಮಧ್ಯಮ ತರಗತಿಯ ಸೌಕರ್ಯಗಳು ಎಲ್ಲೆಡೆ ಲಭ್ಯವಿವೆ. ಖಾರದುಂಗದಿಂದ ಖಾಲ್ಸೆರ್, ದಿಸ್ಕಿತ್, ಹುಂಡರ್, ಥೊಯ್ಸೆ, ಚಂಗ್ಮಾರ್, ಬಕ್ಡಾಂಗ್ ಮತ್ತು ಕೊನೆಯಲ್ಲಿ ತುರ್ತುಕ್ ಹೀಗೆ ಹಲವು ಸ್ತರದಲ್ಲಿ ಹಂಚಿ ಸರಹದ್ದಿನವರೆಗೂ ಚಾಚಿಕೊಂಡಿರುವ ನುಬ್ರಾ ತಿರುಗಾಟದ ಹುಚ್ಚಿನವರಿಗೆ ಮತ್ತು ಫೋಟೊಗ್ರಾಫಿಗೆ ಹೇಳಿ ಮಾಡಿಸಿದ ತಾಣ. ದಿಸ್ಕಿತ್‍ನ ಎತ್ತರದ ಬುದ್ಧನ ಮೂರ್ತಿ ಇರುವ ಮೂರ್ನಾಲ್ಕು ಕಿ.ಮೀ ಏರು ರಸ್ತೆಯಲ್ಲಿ ಎರಡೂ ಬದಿಯಲ್ಲಿ ಮ್ಯೂರಲ್ ವರ್ಕ್ ಮಾಡಿರುವುದರ ಜೊತೆಗೆ ಬೌದ್ಧರ ಮಂತ್ರಗಳನ್ನು ಪಸರಿಸುವ ಕೆತ್ತನೆ ಇದೆ. ಇಲ್ಲಿಂದ ಕಣ್ಣು ಹರಿಯುವಷ್ಟು ದೂರದವರೆಗೆ ನುಬ್ರಾ ವ್ಯಾಲಿ ಮೈಚಾಚಿಕೊಂಡಿದ್ದು ಕಾಣಿಸುತ್ತದೆ. ವಿಶಾಲ ಗೆರೆ ಗೆರೆ ಬರೆ ಇಟ್ಟಂತೆ ಕಾಣುವ ಬಿಳಿ ಹೊಯ್ಗೆಯ ಪ್ರದೇಶ ನಮಗೆ ಅಚ್ಚರಿಯ ಬೆರಗು.

ಎಲ್ಲಕ್ಕಿಂತ ಮುಖ್ಯವಾಗಿ ಕಾರಾಕೋರಂ ಮೃಗಾಲಯ ಹತ್ತಾರು ಕಿ.ಮೀ. ಉದ್ದದ ಬಯಲು ಸಂರಕ್ಷಿತ ಪ್ರದೇಶ. ಸ್ಥಳೀಯ ಜಿಂಕೆ ತರಹದ ಸಾರಂಗ ಮತ್ತು ಎರಡು ಭುಜದ ಒಂಟೆಗಳು ಆಕರ್ಷಕ ಎನ್ನುತ್ತಾರೆ. ನಾವು ಉದ್ದಕ್ಕೆ ಕತ್ತು ಚಾಚಿ ಚಾಚಿ ಎಲ್ಲಿಯಾದರೂ ಕಾಣುತ್ತವಾ ಎಂದು ನೋಡಿದ್ದೇ ಬಂತು ಒಂದು ಕಾಗೆಯೂ ಹಾರಲಿಲ್ಲ. ಆ ಮಾತು ಬೇರೆ.

ಅರ್ಧ ದಿನ ಇಲ್ಲಿಯೇ ಕಳೆಯುವ ಪ್ರವಾಸಿಗರು ಹೆಚ್ಚಾಗಿ ಇಲ್ಲಿನ ಟೆಂಟ್ ವಾಸ ಇಷ್ಟಪಡುತ್ತಾರೆ. ಲೇಹ್‍ದಿಂದ ಎರಡು ದಿನದ ಪ್ರವಾಸ ಬೇಡುವ ನುಬ್ರಾ ಒಂದೇ ಹೊಡೆತಕ್ಕೆ ಸುಮ್ಮನೆ ವಾಹನದಲ್ಲಿ ಹೋಗಿ ಬರುವುದಾದರೆ ಮಜ ನೀಡುವ ಸ್ಥಳವಲ್ಲವೇ ಅಲ್ಲ. ಏನಿದ್ದರೂ ಅಲ್ಲಲ್ಲಿ ನಿಂತು ಅದರ ಅಗಾಧ ಪಾತಳಿಯ ವಿಸ್ತಾರ ಪ್ರದೇಶವನ್ನು ಅನುಭವಿಸಿದರೆ ನುಬ್ರಾ ಕೊಂಚವಾದರೂ ಕೈಗೆ ಹತ್ತೋದು. ಅದರಲ್ಲೂ ಹಲವು ಎತ್ತರಗಳ ಪಾಸ್‍ಗಳು ಲೇಹ್‍ದಿಂದ ತುರ್ತುಕ್‍ವರೆಗಿನ ದಾರಿಯಲ್ಲಿ ರೋಚಕ ಅನುಭವಕ್ಕೀಡು ಮಾಡುತ್ತವೆ. ಹಾಗಾಗಿ ಲೇಹ್‍ದಿಂದ ಹೊರಟು ದಿಸ್ಕಿತ್‍ನಲ್ಲಿ ಅಥವಾ ಹುಂಡರ್‍ನಲ್ಲಿ ತಂಗುವ ಪ್ರವಾಸಿಗರಿಗೆ ಎರಡು ದಿನ ಭರ್ತಿ ಖುಷಿ ನೀಡುವ ನುಬ್ರಾ ವ್ಯಾಲಿ ಗೂನು ಬೆನ್ನಿನ ಒಂಟೆಗಳ ಸವಾರಿಗೂ, ರಾತ್ರಿಯಾಗುತ್ತಿದ್ದಂತೆ ಬೀಸುವ ಕುಳಿರ್ಗಾಳಿಗೂ ಚೆಂದ ಚೆಂದ. ಅಲ್ಲಲ್ಲಿ ಹಸಿರು, ನೀರು ಮತ್ತು ಮರಳಿನ ವಿಚಿತ್ರ ಕಾಂಬಿನೇಶನಲ್ಲಿ ಎರಡೂ ಕಡೆಯಲ್ಲೂ ಎದ್ದು ನಿಲ್ಲುವ ಪರ್ವತದ ಸೆರಗನ್ನು ಬಳಸಿ ಬಳಸಿ ಪಯಣಿಸುವ ಮದ ಮತ್ತು ಮುದಕ್ಕೆ ನುಬ್ರಾಗೆ ನುಬ್ರಾ ಮಾತ್ರ ಸಾಟಿ.