ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಲ್ಲದ ಓಟವೇ ಆಟವಾದ ಸಾಗೋಲ್ ಕಂಜೈ..

ಸಂತೋಷಕುಮಾರ ಮೆಹೆಂದಳೆ

ಅದರ ಹೆಸರು ಕಾಂಗ್ಲಾ ಕೋಟೆ. ಜಗತ್ತಿನ ಅತ್ಯಂತ ಪುರಾತನ ಕೋಟೆ ಅದು. ಅದರೊಳಗೇ ಒಂದು ಯುದ್ಧಾಭ್ಯಾಸದ ಅಂಗಳವಿತ್ತು. ಅಲ್ಲೆಲ್ಲ ಮೊದಲು ಸೈನಿಕರ ಶಸ್ತ್ರಾಭ್ಯಾಸ ನಡೆಯುತ್ತಿತ್ತು. ನಂತರ ಯುದ್ಧ. ಅದೂ ಆದ ಮೇಲೆ..? ರಾಜನಿಗೆ ಈ ಸೈನಿಕರನ್ನು ಹೀಗೆ ಬಿಟ್ಟರೆ ಆಗುವುದಿಲ್ಲ ಎನ್ನಿಸಿದ್ದೆ ತಡ. ಆಗೀಗ ಸಣ್ಣಪುಟ್ಟ ಯುದ್ಧಕ್ಕೆ ದಂಗೆಗಳಿಗೆ ತೆರಳುತ್ತಿದ್ದ ಸೈನಿಕರಿಗೆ ಶತ್ರುಗಳ ರುಂಡವನ್ನೆ ಹೊತ್ತು ತರಲು ಹೇಳಿದ. ಹಾಗೆ ತಂದ ತಲೆಗಳನ್ನು ಶಸ್ತ್ರಾಂಗಣದ ಮಧ್ಯಕ್ಕೆ ಎಸೆಯುತ್ತಾ ಕುದುರೆಯ ಮೇಲೆ ಕೂತು ಆಡಲು ತಿಳಿಸಿ ಅವರನ್ನು ನಿರಂತರ ಪಾತಕದ ಮೂಡ್‍ನಲ್ಲೇ ಕಾಯ್ದುಕೊಳ್ಳುತ್ತಿದ್ದ. ಎರಡು ತಂಡಗಳ ಮಧ್ಯೆ ಶತ್ರುಗಳ ರುಂಡಗಳು ವಿರುದ್ಧ ದಿಕ್ಕಿಗೆ ಚೆಲ್ಲಾಪಿಲ್ಲಿಯಾಗುತ್ತಿದ್ದವು. ಇದೆಲ್ಲ ನಡೆಯುತ್ತಿದ್ದುದು ಕ್ರಿ.ಪೂ.33 ರ ಆಸುಪಾಸಿಗೆ. ಬಹುಶ: ಆಟವನ್ನು ಮೊದಲಿಗೆ ಕೇವಲ ಯುದ್ಧದಾಹಿಗಳನ್ನು ಸಂತೃಪ್ತಿಗೊಳಿಸಲು ಬಳಸಲಾಗುತ್ತಿತ್ತು. ಸತತ ಯುದ್ಧಗಳಂತೂ ಇರಲೇ ಇಲ್ಲ. ಅದರಲ್ಲೂ ಮಣಿಪುರದ ಪಾಳೆಯಗಾರರಿಗೆ ಸೈನ್ಯವನ್ನು ಸಾಕಿಕೊಳ್ಳಲು, ಯುದ್ಧದ ದಾಹ ತೀರಿಸುವಂತಹ ವ್ಯವಸ್ಥೆಯನ್ನು ದಿನವೂ ಕಲ್ಪಿಸಲೇಬೇಕಿತ್ತು. ಕಾಂಗ್ಲಾ ಕೋಟೆಯೊಳಗಿನ ಯುದ್ಧದಂಗಣ ತದನಂತರದಲ್ಲಿ ಅದೆಷ್ಟು ರಕ್ತದಾಟವಾಡಿದೆಯೋ ಗೊತ್ತಿಲ್ಲ. ಕಾರಣ ಸೆರೆಸಿಕ್ಕ ಶತ್ರುಸೈನಿಕರನ್ನು ಓಡಿಸುತ್ತಾ ತಲೆ ಉರುಳಿಸುವವರೆಗೂ ಆಟ ನಡೆಯುತ್ತಿತ್ತಂತೆ. ಹೀಗೆ ಮಣಿಪುರದ ಪಾಳೆಗಾರನಿಗೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಆಗ ದಕ್ಕಿದ್ದ ಉಪಾಯವೇ ಈಗಿನ ಪೋಲೊ.

ಆಗ ಕದ್ದು ಬರುತ್ತಿದ್ದ ಶತ್ರು ಬೇಹುಗಾರರು ಈ ಆಟ ನೋಡಿಯೇ ತಮ್ಮ ಯೋಜನೆ ಬದಲಾಯಿಸಿ ಬಿಡುತ್ತಿದ್ದರಂತೆ. ಹಾಗೆ ಯುದ್ಧದ ಆಮೋದಕ್ಕೆಂದು ಆರಂಭವಾದ ಆಟ ಆಗಿನ ಕಾಲಕ್ಕೆ ಎಷ್ಟೂ ಜನಕ್ಕೆ ಒಲ್ಲದ ಆಟೋಟವೂ ಆಗಿತ್ತು. ಕಾರಣ ಉಳಿದದ್ದೇನೆ ಇರಲಿ ಮನುಷ್ಯನಾದವ ಸತ್ತ ಮೇಲೆ ಆ ಬಗ್ಗೆ ಹೇವರಿಕೆ ಸಹಜವೇ. ಕೊನೆಗೆ ತಲೆಯಾಟದ ಬದಲಿಗೆ ಚೆಂಡಿನ ರೂಪದ ಮುದ್ದೆ ಆಸ್ತಿತ್ವಕ್ಕೆ ಬಂತು. ಹಾಗೆ ಮುಂದುವರೆದ ಆಟ ಇವತ್ತು ಜಗತ್ತಿನ ಮೂವತ್ತಾರು ದೇಶಗಳಲ್ಲಿ ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇರಾನ್ 1ನೇ ಶತಮಾನದಲ್ಲಿಯೇ ಇದನ್ನು ತನ್ನ ರಾಷ್ಟ್ರೀಯ ಆಟವಾಗಿ ಅಂಗೀಕರಿಸುವುದರೊಂದಿಗೆ ರಾಜಮಾನ್ಯತೆ ಪಡೆದರೆ, ಭಾರತದ ಮಟ್ಟಿಗೆ ಜಗತ್ತಿನ ಅತ್ಯಂತ ಪುರಾತನ ಕ್ರೀಡೆ ಮತ್ತು ಕ್ರಿಡಾಂಗಣ ಎರಡನ್ನು ಉಳಿಸಿದ ಹೆಮ್ಮೆಗೂ ಪಾತ್ರವಾಗಿದೆ. ಕೇವಲ ರಾಜ ಪರಿವಾರಕ್ಕೆ ಇರಾನ್‍ನಲ್ಲಿ ಸೀಮಿತವಾಗಿದ್ದ ಆಟ ಕ್ರಮೇಣ ಉತ್ತರ ಪರ್ಷಿಯಾ, ಚೀನಾ, ಆಸ್ಟ್ರೀಯ ಇತ್ಯಾದಿಗಳ ಕಡೆಗೆ ಪಸರಿಸಿ ಜಾಗತಿಕವಾಗಿ ಪೊಲೊ ಪ್ರಸಿದ್ಧಿಗೆ ಬಂದಿದ್ದು ಇತಿಹಾಸ.

ನಾನು ಇಂಫಾಲದಲ್ಲಿ ಸುತ್ತುವುದಕ್ಕೆಂದೇ ಅರ್ಧ ತಿಂಗಳು ಠಿಕಾಣಿ ಹೂಡಿದ್ದೇನಲ್ಲ, ಆಗ ಚಳಿಗಾಲದ ಆರಂಭದಲ್ಲಿ ಸಂಜೆಯ ಐದಕ್ಕೂ ಮೊದಲೇ ಅಡರುವ ಕುಳಿರ್ಗಾಳಿಗೆ ನರಗಳೂ ಕಂಪಿಸುತ್ತಿದ್ದವು. ಹಾಗಾಗಿ ಸಂಜೆಯ ನಾಲ್ಕೂವರೆ ಹೊತ್ತಿಗೆ ನಾನು ಹಿಂದಿರುಗುತ್ತಿದ್ದಂತೆ ಕೂಗಳತೆಯ ದೂರದಲ್ಲಿ ಕೇಳಿಸುತ್ತಿದ್ದ, ಧಿಡಿಲ್ಲನೆ ಮದ್ದೊಂದು ಸಿಡಿದ ಸದ್ದು ಮತ್ತು ಒಂದ್ನಾಲ್ಕು ಮತಾಪು ಹಾರಿಸಿ ಶಬ್ದಿಸುತ್ತಿದ್ದರೆ, ಅ ಶಬ್ದಕ್ಕೆ ಪಕ್ಕಾಗಿದ್ದ ಕುದುರೆಗಳು ಕಾಲೆತ್ತಿ ಒಮ್ಮೆಲೆ ಕೆನೆಯುತ್ತಾ ಸವಾರರನ್ನು ನೋಡುತ್ತಾ ಹಿಂಗಾಲನ್ನು ಟಕಟಕ ಎನ್ನಿಸುತ್ತವೆ.

ಆ ಬಗ್ಗೆ ಸಣ್ಣ ಮಾಹಿತಿ ಇತ್ತಾದರೂ ನೇರವಾಗಿ ನಾನ್ಯಾವತ್ತೂ ನೋಡಿರಲಿಲ್ಲ. ಅದು ಮಣ್ಣಿನ ಕುಡಿಕೆಯಲ್ಲಿ ಬಿಸಿಬಿಸಿ ಚಹ ಮತ್ತು ಮೌಮೌಗಳ ಘಾಟು ಅಬ್ಬರಿಸುವ ಹೊತ್ತು ಬೇರೆ. ಎರಡನ್ನೂ ಎತ್ತಿಕೊಂಡು ನಾನೂ ಕ್ರೀಡಾಂಗಣಕ್ಕೆ ಧಾವಿಸುತ್ತಿದ್ದೆ. ವಿಶ್ವವಿಖ್ಯಾತ ಪೋಲೊ ಆಟವನ್ನು ನಾಡಿಗೆ ಪರಿಚಯಿಸಿದ ಜಗತ್ತಿನ ಅತ್ಯಂತ ಪುರಾತನ ಐತಿಹಾಸಿಕ ಮತ್ತು ಮೊಟ್ಟ ಮೊದಲ ಪೊಲೊ ಕ್ರೀಡಾಂಗಣ ಇಂಫಾಲ ಹೃದಯಭಾಗದಲ್ಲಿದೆ. ಮೂಲ ಕಾಂಗ್ಲಾ ಕೋಟೆಯ ಅಗ್ರಸ್ಥಾನದಲ್ಲಿ.

ಪ್ರವಾಸಿಗರಿಗಾಗಿ ಮತ್ತು ಸ್ಥಳೀಯ ನಿತ್ಯ ಅಭ್ಯಾಸದಂತೆ (ವಾರಣಾಸಿಯ ಘಾಟ್ ಒಂದರ ದಂಡೆಯ ಮೇಲೆ ದಿನವೂ ಬೆಳಿಗ್ಗೆ ಒಂದು ತಾಸು ಕುಸ್ತಿ ನಡೆಯುತ್ತದೆ. ಈ ಬಗ್ಗೆ ಮತ್ತೊಮ್ಮೆ ಬರೆದೇನು) ವರ್ಷದ ಅಷ್ಟೂ ದಿನಗಳೂ ಪೋಲೊ ಆಟಗಳು ರೋಚಕವಾಗಿ ನಡೆಯುತ್ತವೆ. ಇದು ಫ್ರೀ ಶೋ. ಜನವಿರಲಿ, ಇಲ್ಲದಿರಲಿ ಅಥವಾ ಹಣ ಹೂಡಿರಲಿ, ಹೂಡದಿರಲಿ ಇಂಫಾಲದ ಸೊಂಟದ ತಿರುವಿನ ಮೇಲಿನ ಪುರಾತನ ಬಯಲಿನಲ್ಲಿ(ಈಗ ಸ್ಟೇಡಿಯಂ)ರೋಚಕ ಪೋಲೊ ನಡೆಯುತ್ತದೆ. ಅಕ್ಷರಶ: ಎರಡು ತಂಡಗಳು ಇದಕ್ಕಾಗಿಯೇ ತರಬೇತುಗೊಳಿಸಲಾಗಿರುವ ಕುದುರೆ ಏರಿ ಸರಿಯಾಗಿ ಸಂಜೆಯ ಐದು ಗಂಟೆಗೆ ಪ್ರವೇಶಿಸುತ್ತವೆ. ಒಟ್ಟಾರೆ ದಿನವೊಂದಕ್ಕೆ ನಾಲ್ಕು ತಂಡಗಳು ಏಳು ಸುತ್ತಿನ ಎರಡು ಆಟವಾಡುತ್ತವೆ. ಇತ್ತ ಮನರಂಜನೆಯೂ ಹೌದು. ಅತ್ತ ಪೊಲೊ ಕ್ಲಬ್ಬಿಗೆ ಆದಾಯವೂ ಹೌದು.

ಸಾಂಪ್ರದಾಯಿಕ ಪದ್ಧತಿಯಂತೆ ಕೊಂಬು ಊದಿ, ಮೂಲೆಯೊಂದರಲ್ಲಿ ಮದ್ದು ಸಿಡಿಸಿ ಪರಂಪರಾಗತ ಅಭ್ಯಾಸ ಕಾಯ್ದುಕೊಂಡೆ ಆಟಗಳನ್ನು ಆರಂಭಿಸಲಾಗುತ್ತದೆ. ಎರಡೂ ತಂಡಗಳು ಅದೇ ಗತ್ತಿನಲ್ಲಿ ಕುದುರೆಯನ್ನು ಅಪಾಯದಿಂದ ಕಾಯ್ದುಕೊಳ್ಳುವ ಸಲುವಾಗಿ, ತಯಾರಿ ಮಾಡಿಕೊಂಡು ನಿಗದಿತ ಸಮಯದಲ್ಲಿ ರಂಗಕ್ಕಿಳಿಯುತ್ತಾರೆ. ಕಹಳೆ, ನಗಾರಿ ಬಾರಿಸಿ ಸೂಚನೆ ಕೊಡುತ್ತಿದ್ದಂತೆ ಕುದುರೆಗಳು ಕೆನೆಯುತ್ತಾ ರಂಗದ ಮಧ್ಯದ ಗೆರೆ ತಲುಪುತ್ತವೆ. ಅಭ್ಯಾಸ ಬಲದಿಂದ ಕುದುರೆಗಳು ದೌಡಾಯಿಸಲು ಹಾತೊರೆಯುತ್ತಿದ್ದಂತೆ ರೆಫರಿಯೊಬ್ಬ ಬಣ್ಣದ ಚೆಂಡನ್ನು ಮಧ್ಯದ ಭಾಗಕ್ಕೆ ಸೇರಿಸಿ ಸೂಚನೆ ಕೊಡುತ್ತಾನೆ.

ಅಷ್ಟೇ.. ಮೊದಲ ಹೊಡೆತಕ್ಕೆ ಅವಕಾಶ ಪಡೆದ ಮೊದಲ ಸಾಲಿನ ಸವಾರ ಚೆಂಡನ್ನು ಎದುರಾಳಿ ಕ್ಷೇತ್ರದಲ್ಲಿ ತಿರುಗಿಸುತ್ತಿದ್ದಂತೆ ಸವಾರನ ಬೆರಳ ಸೂಚನೆ ಮತ್ತು ಚಾಬೂಕಿನ ಸೆಳಕಿಗೆ ಕುದುರೆಗಳು ದೌಡಾಯಿಸುವ ಪರಿ, ವೇಗ, ತೆಗೆದುಕೊಳ್ಳುವ ಅಪಾಯಕಾರಿ ತಿರುಗುವಿಕೆಗಳು ನಮ್ಮ ಉಸಿರು ಮೇಲಕ್ಕೇರಿಸುತ್ತವೆ. ಅಪರಿಮಿತ ವೇಗದಿಂದ ನುಗ್ಗುವಷ್ಟು ವೇಗದಲ್ಲಿ ಝಿರೋ ವೇಗಕ್ಕೆ ಹಿಂದಿರುಗುವ ಮತ್ತು ದಿಕ್ಕು ಬದಲಿಸುವ ಕುದುರೆಗಳನ್ನು ಅದರ ಜಾಕಿ ಬೆರಳ ತುದಿಯಲ್ಲೇ ನಿಯಂತ್ರಿಸುವ ಪರಿ ಸೋಜಿಗ. ಸ್ಟೇಡಿಯಂನಲ್ಲಿ ಕೂತ ಜನರಲ್ಲಿ ಅಲ್ಲಲ್ಲೆ ಬೆಟ್ಟಿಂಗ್ ಕೂಡಾ ನಡೆಯುತ್ತಿರುತ್ತದೆ. ವೈಯಕ್ತಿಕ ಪ್ರತಿ ಸವಾರನ ನಡೆಯಿಂದ ಹಿಡಿದು ಗೆಲ್ಲುವ ತಂಡದವರೆಗೂ ವಿವಿಧ ಹಂತದಲ್ಲಿ ಬೆಟ್ಟಿಂಗ್ ಅವರವರ ಶಕ್ತ್ಯಾನುಸಾರ ನಡೆಯುತ್ತಿರುತ್ತದೆ. ಇವರೆಲ್ಲಾ ಹಿಂದಿನ ಸಾಲಿನಲ್ಲಿ ಕೂತು ಮುಂದಿನ ನಾಲ್ಕಾರು ಸಾಲನ್ನು ಪ್ರವಾಸಿಗರಿಗೆ ಬಿಟ್ಟು ಕೊಟ್ಟಿರುತ್ತಾರೆ.

ಕುದುರೆಗಳ ಬಾಲ, ಕಾಲಿನ ಮುಂಗಟ್ಟು, ಕೈಗೆ ಧರಿಸುವ ಕವಚ, ಕೋಲಿನ ಹಿಡಿಕೆ, ಜೀನ್ ಮೇಲಿನ ಹೊದಿಕೆ, ಜಾಕೆಟ್ಟಿನ ಚಿತ್ತಾರ ಹೀಗೆ ಪ್ರತಿ ತಂಡವೂ ಎಲ್ಲದರಲ್ಲೂ ತನ್ನದೇ ರಂಗು, ಸಮವಸ್ತ್ರದ ಹಿಡಿತ ಮತ್ತು ಬಿಗು ಕಾಯ್ದುಕೊಳ್ಳುವುದಲ್ಲದೆ ಕುದುರೆಗಳನ್ನೂ ಅತೀವ ಪ್ರೀತಿಯಿಂದ ಸಲುಹಿ ಕರೆತರುವುದರ ಆಮೋದ ನೋಡುವುದೇ ಚೆಂದ.

ಆ ವೇಗ, ಈ ತುದಿಯಿಂದ ಆ ತುದಿಗೆ ಚಲಿಸುವ ಶರವೇಗದ ಸವಾರಿ, ಮಧ್ಯೆ ಮಧ್ಯೆ ಉದ್ದನೆಯ ಬಿದಿರ ಹಿಡಿಯಿಂದ ಮಾಡಲಾಗಿರುವ ಕೋಲಿನಿಂದ ಚೆಂಡನ್ನು ಹೊಡೆಯುವಾಗ ಉಂಟು ಮಾಡುವ ರೋಚಕವಾದ ರಣಕೂಗು, ಬರುಬರುತ್ತಾ ಹೆಚ್ಚುವ ಆವೇಶಭರಿತ ಕೆಚ್ಚಿನ ಆಟ ಅಂಗಣವನ್ನು ಅಕ್ಷರಶ: ರಣಾಂಗಣವನ್ನಾಗಿ ಮಾರ್ಪಡಿಸುತ್ತದೆ. ಒಂದು ತಾಸಿನಲ್ಲಿ ಏಳು ಸುತ್ತಿನ ಆಟದಲ್ಲಿ ಆ ವೇಗಕ್ಕೂ ಮತ್ತು ಗುರಿಗೂ ಮಧ್ಯೆ ತಾಕಲಾಡುವ ಕುದುರೆ ಮತ್ತು ಸವಾರರ ಹಿಡಿತ ನಮ್ಮ ಹೃದಯದ ಹಿಡಿತ ತಪ್ಪಿಸುತ್ತದೆ. ಏಳೆಳು ಜನರ ತಂಡ ಕೆಲವೊಮ್ಮೆ ರೋಚಕತೆಯ ಘಟ್ಟದಲ್ಲಿ ಒಂಬತ್ತು ಹನ್ನೊಂದನ್ನು ತಲುಪುವುದೂ ಇದೆ.

ಕ್ರಿ.ಪೂ. 33 ರಲ್ಲಿ ಮಣಿಪುರದಲ್ಲಿ ಈ ಆಟದ ಕಥಾನಕದ ಉಲ್ಲೇಖ ಲಭ್ಯವಾಗುವುದರೊಂದಿಗೆ ರಾಯಲ್ ಕ್ರಾನಿಕಲ್ ಮತ್ತು ಚೈತ್ರೋಲ್ ಕುಬಾಂಬಾದಲ್ಲಿ ಈ ಬಗ್ಗೆ ಅಧಿಕೃತ ದಾಖಲೆ ಇದ್ದು ಕ್ರಮೇಣ ಇದು ಜಾಗತಿಕವಾಗಿ ವಿಸ್ತರಿಸಿದ ಕುರುಹುಗಳು ಲಭ್ಯವಾಗುತ್ತವೆ. ಭಾರತವನ್ನಾಳಿದ ಮುಸ್ಲಿಂ ದೊರೆ ಕುತುಬುದಿನ್ ಐಬಕ್ ಇದೇ ಆಟದ ವೇಳೆ ಕುದುರೆ ಮೇಲಿಂದ ಬಿದ್ದು ಸಾಯುವುದರೊಂದಿಗೆ ದುರಂತವಾಗಿದ್ದ ಬಗ್ಗೆ ದಾಖಲೆ ಇದೆ. ಇವತ್ತು ಜಗತ್ತಿನ ಮೂವತ್ತಾರು ದೇಶಗಳಲ್ಲಿ ಇದು ಅಧಿಕೃತ ಆಟವಾಗಿ ಗಣಿಸಲ್ಪಟ್ಟಿದೆ. ಭಾರತದ ಮೂಲವಾದರೂ ಇದಕ್ಕೆ ಪಿತಾಮಹನಾಗಿ ಗುರುತಿಸಿಕೊಂಡಿದ್ದು ಇಂಗ್ಲೆಂಡಿನ ಲೆಫ್ಟನಂಟ್ ಗವರ್ನರ್ ಶ್ರೇರರ್, 1800 ರ ಸುಮಾರಿಗೆ ಇದಕ್ಕಾಗೇ ಭಾರತಕ್ಕೆ ಆಗಮಿಸುತ್ತಾನೆ.

ಕ್ರಮೇಣ ಅಲ್ಲಲ್ಲಿ ರೋಚಕವಾಗಿ ಮುಖಾಮುಖಿಯಾದ ಕ್ರೀಡೆ 1924 ರ ಒಳಿಪಿಂಕ್‍ಗೂ ಪ್ರವೇಶ ಪಡೆಯಿತು. ಅಜೈರ್ಂಟಿನಾ ಅದರ ಮೊದಲ ಪದಕ ಪಡೆದರೆ ಮಣಿಪುರಿಗಳ ರೋಚಕತೆಯನ್ನೂ ಆವೇಶವನ್ನೂ ಅದರ ಯುದ್ಧಾಸಕ್ತ ರೀತಿಯ ನಡೆಗಳನ್ನು ಹೊಂದುವಲ್ಲಿ ಜಾಗತಿಕ ಪೊಲೊ ದೇಶಗಳು ವಿಫಲವಾಗುವುದರೊಂದಿಗೆ, ಮಣಿಪುರದಲ್ಲಿ ಮೂಲ ಪೊಲೊಗೆ ಜನ ಮರಳತೊಡಗಿದರು. ಇವತ್ತಿಗೂ ಅತ್ಯಂತ ರೋಚಕ ಮತ್ತು ವೇಗದ ನಡೆಗಳ ಪೊಲೊವನ್ನು ಆಡುವಲ್ಲಿ ಮಣಿಪುರಿಗಳ ಸವಾರರೇ ಜಾಗತಿಕವಾಗಿ ಖ್ಯಾತರು.

ನಾನು ಮಣಿಪುರದಲ್ಲಿ ಇದ್ದಷ್ಟೂ ದಿನವೂ ಸಂಜೆ ಆಟದ ವೇಳೆಯನ್ನು ತಪ್ಪಿಸದೆ ಸ್ಥಳೀಯ ಹುಡುಗರ ಉತ್ಸಾಹದ ಆವೇಶಕ್ಕೆ ಇಂಬು ನೀಡುತ್ತಾ, ಕಿರುಚುತ್ತಾ ಸ್ಟೇಡಿಯಮ್ ಸ್ಟಾಲ್‍ನಲ್ಲಿ ಕೂತು ನೋಡಿದ್ದೇನೆ. ಪ್ರಸ್ತುತ ಜಗತ್ತಿನಲ್ಲಿ ಪ್ರತಿದಿನ ನಡೆಯುವ ಕ್ರೀಡೆಯಾಗಿ ಮತ್ತು ಅತ್ಯಂತ ಪುರಾತನ ಅಂಗಣದಲ್ಲೇ ಆಡುವ ಕ್ರೀಡೆಯಾಗಿ ಪೊಲೊ ಗುರುತಿಸಲ್ಪಟ್ಟಿದ್ದರೆ ಇಂಫಾಲದ ಒಂದು ಸಂಜೆಯನ್ನು ಅಲ್ಲಿನ ಬಿಸಿಬಿಸಿ ಮೌಮೌಗಳ ಜೊತೆಯಲ್ಲಿ ಮಣ್ಣಿನ ಕಪ್ಪಿನಲ್ಲಿ ಚಹ ಹೀರುತ್ತಾ ರೋಚಕತೆಯ ಅನುಭವ ನೋಡಿಯೇ ಅನುಭವಿಸಬೇಕು. ಬರಹ ಮಾಧ್ಯಮವಾಗಲಾರದು.

ಮೈಥೆಯೀ ಭಾಷೆಯಲ್ಲಿ “ಸಾಗೋಲ್ ಕಾಂಜೈ” ಎಂದೇ ಪ್ರಚಲಿತದಲ್ಲಿರುವ ಆಟದಲ್ಲಿ ಸಾಗೋಲ್ ಎಂದರೆ ಕುದುರೆ ಮತ್ತು ಚೆಂಡು ಹೊಡೆಯುವ ಉದ್ದನೆಯ ಬಿದಿರಿನ ದಂಡಕ್ಕೆ ಕಂಜೈ ಎನ್ನುವ ಕಾರಣಕ್ಕೆ ಸಾಗೋಲ್ ಕಾಂಜೈ ಎಂದಾಗಿದ್ದು, ಪೊಲೊ ಎಂದು ಬಳಸುವವರು ಅಪರೂಪ. ವಾರಗಟ್ಟಲೇ ನಾನೂ ಹಳದಿ ಜೆರ್ಸಿಗಳ ತಂಡದ ಅಭಿಮಾನಿಯಾಗಿ ರೋಚಕವಾಗಿ ಕೂಗುತ್ತ ಎದ್ದು ನಿಲ್ಲುತ್ತಿದ್ದ ಅನುಭವಕ್ಕೆ ಕಂಜೈ ಕೈಯಲ್ಲಿದ್ದರೆ ಮಜವೇ ಬೇರೆಯಾಗಿರುತ್ತಿತ್ತು.