ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶರೀಫ: ಜನರೆದೆಯಲ್ಲಿ ಬದುಕಿರುವ ತತ್ವಕವಿ

ರಹಮತ್ ತರೀಕೆರೆ
ಇತ್ತೀಚಿನ ಬರಹಗಳು: ರಹಮತ್ ತರೀಕೆರೆ (ಎಲ್ಲವನ್ನು ಓದಿ)

ಸೂಫಿಗಳ ಅಧ್ಯಯನ ಮಾಡುತ್ತ 25 ವರ್ಷಗಳ ಹಿಂದೆ ಶಿಶುನಾಳದ ಜಾತ್ರೆಗೆ ಹೋಗಿದ್ದೆ. ಶರೀಫರ ಗದ್ದುಗೆ ಊರಹೊರಗಿನ ಎರೇಹೊಲದ ಬಯಲಲ್ಲಿರುವ ಒಂದು ದಿಬ್ಬದ ಮೇಲಿದೆ. ಸುತ್ತಲಮುತ್ತಲ ಹಳ್ಳಿಗಳಿಂದ ಜನ ಚಕ್ಕಡಿ-ಟ್ಯಾಕ್ಟರುಗಳಲ್ಲಿ ಬಂದಿದ್ದರು. ಅಡುಗೆಗೆ ಪಾತ್ರೆ ದಿನಸಿ ಕಟ್ಟಿಗೆಗಳನ್ನೂ ಹಾಡಲು ಪೇಟಿ ತಬಲ ತಾಳಗಳನ್ನೂ ತಂದಿದ್ದರು. ಜಾತ್ರೆಯ ಇನ್ನೊಂದು ತುದಿಯಲ್ಲಿ ಭಂಗಿ ಸೇದುತ್ತ ಸಾಧುಗಳು ಹೊಗೆ ಎಬ್ಬಿಸಿದ್ದರು. ನೂರಾರು ತಂಡಗಳು ತಮ್ಮ ಕುಟುಂಬ ಬೀಡುಬಿಟ್ಟ ಕಡೆ ರೌಂಡಾಗಿ ಕುಳಿತು ಹಾಡುತ್ತಿದ್ದವು. ಕರ್ನಾಟಕದಲ್ಲಿ ಶಿಶುನಾಳದಂತೆ ಸಂತನ ಜಾತ್ರೆಯೊಂದು ಹಾಡಿನ ಹಬ್ಬವಾಗುವ ಇತರೆ ತಾಣಗಳೆಂದರೆ ನಾರೇಯಣಪ್ಪನವರ ಕೈವಾರ, ಮಡಿವಾಳಪ್ಪನವರ ಕಡಕೋಳ, ಚಿದಾನಂದ ಅವಧೂತರ ಅಂಬಾಮಠ. ಪ್ರತಿಯೊಂದು ತಂಡದ ಮುಂದೆ ಕೂತು ಒಂದೊಂದು ಹಾಡು ಕೇಳಿದರೂ ಒಂದು ರಾತ್ರಿ ಸಾಲುವುದಿಲ್ಲ. ಶರೀಫರ ಬಿದಿರೂ ನೀನಾರಿಗಲ್ಲದವಳು’ ಹತ್ತಾರು ಕಂಠಗಳಿಂದ ಆಲಿಸಿರುವೆ. ಒಂದೊಂದೂ ವಿಭಿನ್ನ, ಸುಂದರ. ಇವುಗಳಲೆಲ್ಲ ಯಲಬುರ್ಗಾದ ಮಾರೆಪ್ಪದಾಸರ ಹಾಡಿಕೆ ಅಪರ್ವ. ಜಾತ್ರೆಯಲ್ಲಿ ಒಂಟಿಯಾಗಿದ್ದ ತಿರುಗುತ್ತಿದ್ದ ನನ್ನನ್ನು ಗಮನಿಸಿದ ಒಬ್ಬರುಊಟವಾಯಿತೇ?’ ಎಂದರು. ಇಲ್ಲವೆಂದೆ. ಕೈಹಿಡಿದು ತಮ್ಮವರು ಬೀಡುಬಿಟ್ಟಲ್ಲಿಗೆ ಕರೆದೊಯ್ದರು. ಎರಡು ಅಗಲವಾದ ಕಟುಕಲ ಜೋಳದರೊಟ್ಟಿಯ ಮೇಲೆ ಕರಿಹಿಂಡಿ ಮೊಸರು ಹಾಕಿಕೊಟ್ಟರು. ಮೇಲೊಂದು ಉಳ್ಳಾಗಡ್ಡಿಯನ್ನು ಇಟ್ಟರು. ಈಗಲೂ ಶಿಶುನಾಳಕ್ಕೆ ಹೋದರೆ ತತ್ವಕಾವ್ಯ, ಹಾಡಿಕೆ, ಅನುಭಾವ ದರ್ಶನ ಮಾತ್ರವಲ್ಲ, ಊಟವೂ ಧಾರಾಳ.

ಶರೀಫ ಸಾಹೇಬರು

ಕರ್ನಾಟಕ ಸಂಸ್ಕೃತಿ ಸೃಷ್ಟಿಮಾಡಿದ ವಿಶಿಷ್ಟ ವ್ಯಕ್ತಿತ್ವಗಳಲ್ಲಿ ಶರೀಫ ಸಾಹೇಬರದೂ ಒಂದು. ಅವರೊಬ್ಬ ಜನತೆಯ ಕವಿ-ದಾರ್ಶನಿಕ. ನಿಜಗುಣರಿಂದ ಶುರುವಾಗುವ ತತ್ವ ಸಾಹಿತ್ಯದಲ್ಲಿ ಕಡಕೋಳ ಮಡಿವಾಳಪ್ಪ, ಕೈವಾರ ನಾರೇಯಣ, ಕೂಡಲೂರ ಬಸವಲಿಂಗಪ್ಪ, ಖೈನೂರ ಕೃಷ್ಣಪ್ಪ, ಶಂಕರಾನಂದರ ಹಾಗೆ, ಒಬ್ಬ ಪ್ರತಿಭಾವಂತ ಕವಿ. ಅವರಿಗೆ ಜನಪದ ಹಾಡು ಪರಂಪರೆಯಲ್ಲಿ ಇದ್ದಷ್ಟೆ ಪ್ರವೇಶವು ಅಕ್ಷರಸ್ಥ ಕಾವ್ಯ ಸಂಪ್ರದಾಯದಲ್ಲೂ ಇತ್ತು. ಎಂತಲೇ ಅವರು ಕನ್ನಡವನ್ನು ತಮ್ಮ ರಚನೆಗಳಲ್ಲಿ ಸೂರೆಹೊಡೆದರು; ಹಲವು ಛಂದೋ ಪ್ರಯೋಗಗಳನ್ನು ಮಾಡಿದರು. ಹಾಗೆಂದು ಅವರ ಕಾವ್ಯ ಸರಳವಲ್ಲ. ಸೋರುತಿಹುದು ಮನೆಯ ಮಾಳಿಗೆ’,ಮೋಹದ ಹೆಂಡತಿ’ ಇವೆಲ್ಲ ಕೇಳಿಕೇಳಿ ನಮಗೆ ಕಂಠಪಾಠ ಆಗಿರಬಹುದು. ಆದರೆ ಸುಲಭವಾಗಿ ಅರ್ಥ ದಕ್ಕುವುದಿಲ್ಲ. ಪಂಪ-ಅಡಿಗರ ಕಾವ್ಯಕ್ಕಿಲ್ಲದ ಸವಾಲು ಅಲ್ಲಮ-ಶರೀಫರ ಕಾವ್ಯಕ್ಕಿದೆ. ಯೌಗಿಕ ಅನುಭವವನ್ನು ಬೆಡಗಿನಲ್ಲಿ ಭಾಷೆಯಲ್ಲಿ ಹೊಮ್ಮಿಸುವ ಯಾವ ಕಾವ್ಯವೂ ಸುಲಿದ ಬಾಳೆಹಣ್ಣಲ್ಲ. ಸಿಗುರು ಕಳೆದ ಕಬ್ಬಲ್ಲ.

ಮೂಲತಃ ಶರೀಫರೊಬ್ಬ ಬೀದಿಕವಿ. ಅವರ ಆಳವಾದ ಜನಪದ ಪ್ರಜ್ಞೆಯ ಫಲವಾಗಿ ಇಡೀ ಧಾರವಾಡ ಸೀಮೆಯ ಜನಪದ ಸಂಸ್ಕೃತಿಯು ಅವರ ತತ್ವಕಾವ್ಯದಲ್ಲಿ ಪ್ರವೇಶ ಪಡೆಯಿತು. ಇದು ಬೇಂದ್ರೆ ಧಾರವಾಡದ ಬೇಸಾಯ ಸಂಸ್ಕೃತಿಯನ್ನೂ , ಕುವೆಂಪು ಮಲೆನಾಡ ಬದುಕಿನ ಕೋಲಾಹಲಗಳನ್ನೂ ತಮ್ಮ ಕಲಾಕೃತಿಗಳಲ್ಲಿ ಮರುಸೃಷ್ಟಿಸಿದಂತೆ. ಶರೀಫರು ಜನಬದುಕಿನ ಚಿತ್ರಗಳನ್ನು ಎತ್ತಿಕೊಂಡು ಗುರುತತ್ವ ಪ್ರಕಟಿಸುವ ಪರಿಣಾಮಕಾರಿ ರೂಪಕ-ಪ್ರತಿಮೆಗಳಾಗಿಸಿದರು. ಬ್ರಿಟಿಶರು ಭಾರತವನ್ನು ಕಬ್ಜಾ ಮಾಡಿಕೊಳ್ಳುವುದನ್ನು ಕಂಗಾಲಾಗಿ ವಿಸ್ಮಯದಿಂದ ನೋಡಿದರು; ಪಾಶ್ಚಿಮಾತ್ಯ ಯಂತ್ರ ನಾಗರಿಕತೆಯ ಗಿರಣಿ ಇತ್ಯಾದಿ ವಿವರಗಳನ್ನೂ ಗೂಢ ರೂಪಕವಾಗಿಸಿದರು. ಶಕ್ತಲೇಖಕರು ತಮ್ಮ ಕಾಲದ ನುಡಿಯನ್ನೊ ಬದುಕಿನ ವಿವರಗಳನ್ನೊ ದುಡಿಸಿಕೊಳ್ಳುವುದು ಎಂದರೆ, ಅವಕ್ಕೆ ಅಲೌಕಿಕವಾದ ಅರ್ಥಶಕ್ತಿಯನ್ನು ಧರಿಸುವಂತಹ ಬಲವನ್ನು ತುಂಬುವುದು ಎಂದೇ ಅರ್ಥ.

ಶರೀಫರನ್ನು ಕೆಲವರು `ಮುಸ್ಲಿಂಕವಿ’ ಎನ್ನುವುದುಂಟು. ಇದೊಂದು ವಿಲಕ್ಷಣ ವಿವರಣೆ. ಅವರು ಧಾರ್ಮಿಕವಾಗಿ ಮುಸ್ಲಿಂ ಹಿನ್ನೆಲೆಯಿಂದ ಬಂದವರು ದಿಟ. ಆದರೆ ಎಲ್ಲ ಸಾಂಸ್ಥಿಕ ಧರ್ಮಗಳ ಬಗ್ಗೆ ಕಟುವಿಮರ್ಶೆ ಮಾಡುತ್ತಿದ್ದ ಅವರೊಬ್ಬ ಗುರುಪಂಥೀಯ ಕವಿ. ಹಾಗೆ ಅವರು ಸೂಫಿ ಸಂತರೂ ಅಲ್ಲ. ಅದ್ವೈತ ಪ್ರಸ್ಥಾನದಿಂದ ಮತ್ತು ಶಾಕ್ತೇಯ ಹಿನ್ನೆಲೆಯಿಂದ ಬಂದ ಒಬ್ಬ ಯೋಗಿ. ಅವರ ಮತ್ತು ಗೋವಿಂದಭಟ್ಟರ ಗುರುಶಿಷ್ಯತ್ವವನ್ನು ಒಂದು ಸಾಂಸ್ಕøತಿಕ ವಿಸ್ಮಯದಂತೆ ಕರ್ನಾಟಕದಲ್ಲಿ ನೋಡಲಾಗುತ್ತದೆ. ಗುರುಮಾರ್ಗಗಳಲ್ಲಿ ಇದೊಂದು ಹೊಸ ಸಂಗತಿಯೇ ಅಲ್ಲ. ಶಿಶುನಾಳಕ್ಕೆ ಸಮೀಪವಿರುವ ಶಿರಹಟ್ಟಿಯ ಫಕೀರೇಶರು ಬಿಜಾಪುರದ ಅಮೀನುದ್ದೀನ್ ಚಿಸ್ತಿಯ ಶಿಷ್ಯರು; ಸಿದ್ಧಾರೂಢರ ಪ್ರಿಯಶಿಷ್ಯ ಕಬೀರಾನಂದರೂ ಮುಸ್ಲಿಂ ಹಿನ್ನೆಲೆಯವರು. ಶಿಲವೇರಿ ಶಿವಪ್ಪನವರ ಗುರು ಗುಡೇಕಲ್ ಅಲ್ಲೀಪೀರಾ. ಇಂತಹ ಹಲವಾರು ಧರ್ಮಾತೀತ ಗುರುಶಿಷ್ಯರ ಜೋಡಿಗಳಿವೆ.


ಹುಬ್ಬಳ್ಳಿ ಸೀಮೆಯ ಮನೆಗಳಲ್ಲಿ ಒಂದು ಗ್ರೂಫ್‍ ಪೋಟೋ ಕಾಣಸಿಗುತ್ತದೆ. ಅದರಲ್ಲಿ ಸಿದ್ಧಾರೂಢರು, ಶರೀಫ, ಕಬೀರಾನಂದ, ಗರಗದ ಮಡಿವಾಳಪ್ಪ, ನವಲಗುಂದದ ನಾಗಲಿಂಗಪ್ಪ ಮುಂತಾದವರೊಡನೆ ಆಸೀನರಾಗಿದ್ದಾರೆ. ಕರ್ನಾಟಕದ ಅವಧೂತರು-ಆರೂಢರು ತಮ್ಮ ದಾರ್ಶನಿಕ ಭಿನ್ನಮತಗಳನ್ನು ಇಟ್ಟುಕೊಂಡು ವಾಗ್ವಾದ ಮಾಡಿದ್ದಾರೆ. ಆದರೆ ಸಂದರ್ಭ ಬಂದಾಗ, ಆ ಭಿನ್ನಮತಗಳನ್ನು ಬದಿಗಿಟ್ಟು ಒಟ್ಟಿಗೆ ಕೂತು ಸತ್ಸಂಗವನ್ನೂ ಮಾಡಿದ್ದಾರೆ. ಹೀಗೆ ಜತೆಯಲ್ಲಿ ಕೂರುವುದು ಸಾಧ್ಯವಿದ್ದ ಪರಂಪರೆಯನ್ನು ಈ ಚಿತ್ರಪಟ ಪ್ರತಿಬಿಂಬಿಸುತ್ತದೆ. ಇಂತಹ ಪರಂಪರೆಯಲ್ಲಿ ರೂಪುಗೊಂಡ ಯಾರಾದರೂ ಸಹಜವಾಗಿಯೇ ಧರ್ಮಾತೀತರಾಗಿರುತ್ತಾರೆ. ಜ್ಞಾನ ಅನುಭವ ಅನ್ನ ಪ್ರೀತಿಗಳನ್ನು ಎಲ್ಲ ಮನುಷ್ಯರಿಗೂ ಭೇದವಿಲ್ಲದೆ ಬಗೆದುಕೊಡುವ ಇಂತಹ ಲೋಕಗಳು ನಾಡಿನಲ್ಲಿ ಹಿಂದೆಯೂ ಇದ್ದವು. ಈಗಲೂ ಇವೆ. ಅವನ್ನು ಹುಶಾರಾಗಿ ಕಾಪಿಡಬೇಕಿದೆ. ಮಾತ್ರವಲ್ಲ ಜಿನುಗುತ್ತಿರುವ ಅವುಗಳ ಒರತೆಯನ್ನು ಹೊಳೆಯಾಗಿಸಬೇಕಿದೆ. ಅಂತಹದೊಂದು ಹೊಳೆ ನಾಡಿನಲ್ಲಿ ಹರಿಯುವುದಾದರೆ, ದಶಕಗಳಿಂದ ಮತೀಯ ರಾಜಕಾರಣವು ಸಂಚಯ ಮಾಡಿರುವ ಕಿಲುಬು ತೊಳೆದುಹೋದೀತು. ಕೊರೊನಾ ಎಂಬ ಯಾವುದೊ ದೇಶದಿಂದ ಬಂದ ಸಾಂಕ್ರಾಮಿಕ ಬೇನೆಯೊಂದು, ನಮ್ಮೊಳಗಿದ್ದ ಮಾನವೀಯ ಅನುಕಂಪೆಯನ್ನು ಹೊರಹಾಕಿದೆ. ಜತೆಗೆ ನಮ್ಮೊಳಗಿದ್ದ ಧಾರ್ಮಿಕ ಸಾಮಾಜಿಕ ರೋಗಗಳನ್ನೂ ಬಹಿರಂಗಗೊಳಿಸಿದೆ. ಜಾತಿಭೇದವೂ ಧರ್ಮದ್ವೇಷವೂ ಇರುವ ಸಮಾಜದಲ್ಲಿ ಶರೀಫ ಬದುಕು-ಕಾವ್ಯ-ದರ್ಶನ ಮದ್ದಿನಂತೆ ತೋರುವುದು ಸಹಜ. ನಮಗೆ ಕಾಯಿಲೆ ಇದ್ದಾಗ ಪ್ರಕೃತಿ ಸಹಜವಾಗಿ ಬೆಳೆದ ಬಳ್ಳಿಯು ಗಿಡಮೂಲಿಕೆಯಾಗಿ ಕಾಣತೊಡಗುತ್ತದೆ. ಶರೀಫರು ಸಿದ್ಧಾರೂಢರು ಅಂತಹ ಬಳ್ಳಿಗಳು.

ಸಿದ್ಧಾರೂಢರೂ ಶರೀಫರೂ ತಮ್ಮ ಸಮಕಾಲೀನರಲ್ಲೆಲ್ಲ ಬಹಳ ಜನಪ್ರಿಯರು. ಇವರ ಮೇಲಿನ ಕಂಪನಿ ನಾಟಕಗಳ, ಸಿನಿಮಾಗಳ ಹಾಗೂ ಅಶ್ವತ್-ಸುಬ್ಬಣ್ಣ ಜೆನ್ನಿ-ಪಿಚ್ಚಳ್ಳಿ ಶ್ರೀನಿವಾಸ-ಬಸವಲಿಂಗಯ್ಯ ಹಿರೇಮಠ ಮುಂತಾದವರ ಹಾಡಿಕೆಗಳ ಪಾತ್ರವೂ ಇದರಲ್ಲಿದೆ. ಮುಖ್ಯವಾಗಿ ರೈತರು ಹೊಲದಲ್ಲಿ ಬೀಜ ಬಿತ್ತಿ ಬಂದಂತೆ ಹೋದಲ್ಲೆಲ್ಲ ಶರೀಫರನ್ನು ಹರಡಿದ ಅಲೆಮಾರಿ ಭಜನಾ ತಂಡಗಳ ಪಾತ್ರವಿದೆ. ಒಮ್ಮೆ ನನ್ನ ಕಿರಿಯಕ್ಕ ವಾಸವಾಗಿದ್ದ ಚಿಕ್ಕಜಾಜೂರಿನಲ್ಲಿದ್ದೆ. ರಾತ್ರಿಯ ತಂಪುಹೊತ್ತು. ದೂರದಲ್ಲಿ ಭಜನೆ ಕೇಳಿತು. ಹೋದೆ. ಬನಶಂಕರಿ ಗುಡಿ. ಹತ್ತುಜನ ಹಿರೀಕರು ಶರೀಫರ ದೇವೀಸ್ತುತಿಗಳನ್ನು ಹಾಡುತ್ತಿದ್ದರು. ಶಾಕ್ತೇಯರು ಇರುವಲ್ಲೆಲ್ಲ ಪಾರಮಾರ್ಥಿಕ ಅರ್ಥವುಳ್ಳ ಶರೀಫರ ದೇವೀಸ್ತುತಿಗಳು ವಿಶೇಷವಾಗಿ ವಲಸೆ ಮಾಡಿದವು. ಹಾಸನ ಜಿಲ್ಲೆಯ ಚವೇನಹಳ್ಳಿಯಲ್ಲಿ ಗಾಯಕ ರಾಜಪ್ಪನವರ ಬಾಯಲ್ಲಿ ನಾನು ಅವನ್ನು ಕೇಳಿದೆ. ತತ್ವಕವಿಗಳಲ್ಲಿ ನಿಜಗುಣ-ಸರ್ಪಭೂಷಣರನ್ನು ಬಿಟ್ಟರೆ ವ್ಯಾಪಕವಾದ ಚಲನೆ ಮಾಡಿದ ಪಠ್ಯಗಳೆಂದರೆ ಶರೀಫರವು. ವಿಶೇಷವೆಂದರೆ ಜನಪದ ಕವಿಗಳು ಅವರ ಮೇಲೆ ಲಾವಣಿಗಳನ್ನು ಕಟ್ಟಿದರು. ಟಿಪ್ಪು, ಸಂಗೊಳ್ಳಿ ರಾಯಣ್ಣ, ಕಿತ್ತೂರ ಚೆನ್ನಮ್ಮ, ಶರೀಫ, ಸಿದ್ಧಾರೂಢ ಯಾರೇ ಆಗಲಿ, ಸಮುದಾಯಗಳ ಮಾನಸದಲ್ಲಿ ಸಾಂಸ್ಕೃತಿಕ ನಾಯಕರಾಗಿ ರೂಪಾಂತರ ಪಡೆಯದಿದ್ದರೆ, ಲಾವಣಿಗೆ ವಸ್ತುವಾಗುವುದಿಲ್ಲ.
ಕಳೆದ ವರ್ಷ. ಶರೀಫರ ದ್ವಿಶತಮಾನೋತ್ಸವ ಕಾರ್ಯಕ್ರಮವಿತ್ತು. ನನ್ನನ್ನು ಶಿಶುನಾಳಕ್ಕೆ ಕರೆದಿದ್ದರು. ಹೋದೆ. ಐದಾರು ಸಾವಿರ ಜನ ಕೂರಬಲ್ಲ ವಿಶಾಲವಾದ ಪೆಂಡಾಲು. ಕೂಡಿದ್ದವರು ನಲವತ್ತಕ್ಕೂ ಕಮ್ಮಿ. ಸ್ಥಳೀಯರು ಕಾಣಲಿಲ್ಲ. ನಿರಾಶೆಯಾಯಿತು. ವಿಚಾರಿಸಿದೆ. ಹಿಂದಿನ ರಾತ್ರಿ ಹದವಾದ ಮಳೆ ಬಿದ್ದಿತ್ತು. ಜನವೆಲ್ಲ ಹೊಲದ ಮೇಲೆ ಬಿದ್ದಿತ್ತು. ಇದು ಶರೀಫರಿಗೆ ತೋರಿದ ಅವಜ್ಞೆಯಲ್ಲವೆಂದು ಅರಿವಾಯಿತು. ಜನ ಅಮಾವಾಸ್ಯೆಗೆ ಜಾತ್ರೆಗೆ ಸ್ವತಃ ಕಷ್ಟಬಿದ್ದು ಬರುತ್ತಾರೆ. ಅದು ಅವರ ಸಾಂಸ್ಕೃತಿಕ ಕ್ಯಾಲೆಂಡರು. ಇದುವೊ ಸರ್ಕಾರಿ ಕಾರ್ಯಕ್ರಮ. ಜನರಿಗೆ ಉಳುವ-ಬಿತ್ತುವ ಹಂಗಾಮೆಂದರೆ, ಶರೀಫರ ಗುರುತತ್ವ ಮತ್ತು ಹಾಡಿನಷ್ಟ್ಟೇ ಮುಖ್ಯ.

ಲೌಕಿಕದ ಬುನಾದಿಯಿಲ್ಲದ ಪಾರಮಾರ್ಥಕ್ಕೆ ಕಿಮ್ಮತ್ತಾದರೂ ಏನು? ಪ್ರಭುತ್ವದ ಆಶ್ರಯವಿಲ್ಲದೆ ಸ್ವಯಂ ಪ್ರೇರಣೆಯಿಂದ ಒಬ್ಬ ದಾರ್ಶನಿಕ ಕವಿಗೆ ಕೊಡುವ ಆತ್ಯಂತಿಕ ಗೌರವದಂತೆ, ಜನ ಶರೀಫರನ್ನು ಎರಡು ಶತಮಾನಗಳಿಂದ ಎದೆಯಲ್ಲಿ ಇಟ್ಟುಕೊಂಡು ಬಂದಿದ್ದಾರೆ. ಇದು ಶರೀಫರ ಕಸುವನ್ನು ಮಾತ್ರವಲ್ಲ, ತಮ್ಮ ಆಶೋತ್ತರಗಳನ್ನು ಪ್ರತಿನಿಧಿಸುವ ಕವಿಯನ್ನು ಸಂಭಾಳಿಸುವ ಸಮುದಾಯ ಸಂಸ್ಕೃತಿಯ ಚಹರೆಯನ್ನೂ ಕಾಣಿಸುತ್ತದೆ. ಕರ್ನಾಟಕದ ಭಾಗ್ಯ-ಇಂತಹ ಸಮುದಾಯ ಸಂಸ್ಕೃತಿ ಇನ್ನೂ ಉಳಿದುಕೊಂಡಿದೆ- ಬೇಸಗೆಯ ಹೊಡೆತಕ್ಕೆ ಬತ್ತಿದ ಕೆರೆಯ ಮೂಲೆಯ ಮಡುವಿನಲ್ಲಿ ನೀರು ನಿಂತಿರುವಂತೆ.