ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಾಸ್ತ್ರೀಜೀ ಮತ್ತು ಜೈ ಜವಾನ್ ಜೈ ಕಿಸಾನ್

ಪ್ರೊ.ಸಿದ್ದು ಯಾಪಲಪರವಿ


ಅಕ್ಟೋಬರ್ 2 ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ದಿನವೂ ಹೌದು.ದೇಶದ ಇಬ್ಬರು ಅತ್ಯಂತ ಗೌರವಾನ್ವಿತರ ಜನ್ಮ ದಿನಾಚರಣೆ ಎಂಬ ಸಡಗರ ನಮ್ಮದು.ದೇಶ ಕಂಡ ಪ್ರಾಮಾಣಿಕ ಮತ್ತು ಸರಳ ರಾಜಕಾರಣಿಗಳಲ್ಲಿ ಶಾಸ್ತ್ರಿಗಳು ಪ್ರಮುಖರು.ಪ್ರಧಾನಿ ಪಟ್ಟಕ್ಕೇರಿದರೂ ತಮ್ಮ ಪ್ರಾಮಾಣಿಕತೆಯನ್ನು ಮೆರೆದರು.ನೈತಿಕ ಹೊಣೆಗಾರಿಕೆ ಎಂಬುದು ಅವರ ಧೇಯತೆಯಾಗಿತ್ತು.


ಗೆಳೆಯರೊಬ್ಬರು ಶಾಸ್ತ್ರೀಜಿ ಅವರ ಬಳಿ ಸಾಲ ಕೇಳಲು ಬಂದಿರುತ್ತಾರೆ.ನೆರವು ನೀಡಲಾಗದ ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ ಆದರೆ ಅವರ ಶ್ರೀಮತಿ  ಮನೆಯ ಖರ್ಚಿಗೆ ಕೊಟ್ಟ ಹಣ ಉಳಿಸಿ ಕೂಡಿಟ್ಟಿರುವ ಹಣವನ್ನು ಕೊಡುತ್ತಾರೆ.ಆಗ ಗೆಳೆಯನಿಗೆ ಸಹಾಯ ಮಾಡಲು ಹೆಂಡತಿಯ ಕೂಡಿಟ್ಟ ಹಣ ನೆರವಾಯಿತು ಎಂದು ಖುಷಿಯಾದರೂ ತಾವು ಅಗತ್ಯಕ್ಕಿಂತ ಹೆಚ್ಚು ವೇತನ ಪಡೆಯುತ್ತೇನೆ ಎಂಬ ಅಳುಕು ಕಾಡಲಾರಂಭಿಸಿತು. ನಂತರ ಅವರು ಕಾಂಗ್ರೆಸ್ ಕಚೇರಿಗೆ‌ ಪತ್ರ ಬರೆದು ವೇತನ ಕಡಿಮೆ ಮಾಡಲು ನಿವೇದಿಸಿಕೊಂಡಾಗ ಇಡೀ ದೇಶವೇ ಬೆರಗಾಗುತ್ತದೆ. 
ಇಂತಹ ಹತ್ತಾರು ಘಟನೆಗಳನ್ನು ಉದಾಹರಿಸಬಹುದಾಗಿದೆ.

ಯುದ್ಧದ ಸಂದರ್ಭದಲ್ಲಿ ಆಹಾರ ಕೊರತೆ ಎದುರಿಸುವ ಭೀತಿ ಕಾಡುವಾಗ ವಾರಕ್ಕೆ ಒಂದು ಹೊತ್ತು ಉಪವಾಸ ಇರಲು ದೇಶದ ಜನತೆಗೆ ಕರೆ ಕೊಡುತ್ತಾರೆ.ಶಾಸ್ತ್ರಿ ಅವರ ಸರಳ ಮತ್ತು ಪ್ರಾಮಾಣಿಕ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದ ಜನ ಅವರ ಮಾತನ್ನು ನಿಷ್ಠೆಯಿಂದ ಪಾಲಿಸುತ್ತಾರೆ.
ಭಾರತ ಕೃಷಿ ಪ್ರಧಾನ ರಾಷ್ಟ್ರ, ಇಲ್ಲಿ ರೈತರೇ ದೇಶದ ಬೆನ್ನೆಲುಬು ಎಂಬುದನ್ನು ಅವರು ಅರಿತವರಾಗಿದ್ದರು.ನೆಹರು ವಿದೇಶಿ ನೀತಿಗಳು ನಮ್ಮ ನೆಲದ ಸಂಸ್ಕೃತಿಗೆ ಸರಿ ಹೊಂದುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ವಿಶೇಷ ಕೃತಿ ನೀತಿ ಜಾರಿಗೊಳಿಸಲು ಉತ್ಸುಕರಾಗಿದ್ದರು.ಅವರ ಜೈ ಕಿಸಾನ್ ಘೋಷಣೆ ದೇಶದ ರೈತರನ್ನು ಉತ್ತೇಜಿಸಿತು. 

ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶಕ್ಕೆ ಗಡಿ ವಿವಾದ ಕಾಡುತ್ತಿತ್ತು ಇಂತಹ ಸಂದರ್ಭದಲ್ಲಿ ಯೋಧರ ತ್ಯಾಗ ಬಲಿದಾನದ ಮಹತ್ವವನ್ನು ಅವರು ಅರ್ಥ ಮಾಡಿಕೊಂಡಿದ್ದರು.ದೇಶದ ಗಡಿ ಕಾಯುವ ಯೋಧ ಮತ್ತು ಹೊಟ್ಟೆ ತುಂಬಿಸುವ ರೈತ ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂದು ಮನದಟ್ಟು ಮಾಡಲು  “ಜೈ ಜವಾನ್ ಜೈ ಕಿಸಾನ್” ಘೋಷಣೆ ಮೊಳಗಿಸಿದರು.
ಇಂದಿಗೂ ಈ ಘೋಷಣೆ ಅರ್ಥಪೂರ್ಣ ಎನಿಸಿ ರಾಷ್ಟ್ರ ಪ್ರೇಮ ನೂರ್ಮಡಿಸುತ್ತದೆ. ಸೀಮಿತ ಕಾಲಾವಧಿಯಲ್ಲಿ ಅತ್ಯುತ್ತಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರ ಪ್ರಾಮಾಣಿಕತೆ ಮತ್ತು ಸರಳತೆ ಜಗತ್ತಿನ ಗಮನ ಸೆಳೆಯಿತು.’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ಮಾತಿಗೆ ನಿದರ್ಶನರಾದರು.  ಅವರ ಸಾವು ಅನೇಕ ನಿಗೂಢಗಳಿಗೆ ಕಾರಣವಾಯಿತಾದರೂ ಸೂಕ್ತ ಉತ್ತರ ದೊರಕಲಿಲ್ಲ.


ಅವರ ಸಾವಿನ ನಂತರ ಅವರ ಕುಟುಂಬದ ಸದಸ್ಯರು ಅದೇ ಬದ್ಧತೆಯನ್ನು ತೋರಿದರು.ಬ್ಯಾಂಕ್ ಸಾಲ ಪಡೆದು ಕಾರು ತೆಗೆದುಕೊಂಡಿದ್ದರು, ಶಾಸ್ತ್ರೀ ಅವರ ಪ್ರಾಮಾಣಿಕತೆಗೆ ಮನಸೋತ ಬ್ಯಾಂಕ್ ಆಡಳಿತ ಮಂಡಳಿ ಸಾವಿನ ನಂತರ ಸಾಲ ಮನ್ನಾ ಮಾಡಲು ನಿರ್ಧಾರ ಮಾಡಿತು.ಆದರೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪತ್ನಿ ಪತಿಯ ಪೆನ್ಷನ್ ಹಣದಲ್ಲಿ ಸಾಲ ತೀರಿಸುವೆ ಎಂದು ಬ್ಯಾಂಕ್ ನಿರ್ಧಾರವನ್ನು ಸೌಜನ್ಯದಿಂದ ನಿರಾಕರಿಸಿದರು. 


ಇಂದು ಹಳ್ಳಿಯಿಂದ ದಿಲ್ಲಿಯವರೆಗೆ ಒಂದು ಪುಟ್ಟ ಅಧಿಕಾರ ಸಿಕ್ಕರೆ ಸಾಕು ಹಣ ಬಾಚುವ ಭ್ರಷ್ಟ ರಾಜಕಾರಣಿಗಳನ್ನು ನೋಡುವ ನಮಗೆ ಶಾಸ್ತ್ರೀಯವರ ಬದುಕಿನ ಘಟನೆಗಳು ದಂತ ಕತೆ ಎನಿಸುವುದು ಸಹಜ.ಆದರೂ ‘ಹೀಗಿದ್ದರು ನೋಡಿ ನಮ್ಮ ಶಾಸ್ತ್ರೀಜಿ’ ಎಂದು ಸ್ಮರಿಸುವುದು ಭಾರತೀಯರ ಅಭಿಮಾನ, ಗೌರವ ಮತ್ತು ಹೆಮ್ಮೆ.ಅವರ ಬದುಕಿನ ಬದ್ಧತೆಗೆ ಸಾವಿರದ ನಮನಗಳು.