- ಶ್ರಮದ ಬೆಲೆ - ಮೇ 1, 2022
- ಬಂಗಾರದ ಮನುಷ್ಯ ಎಂಬ ಅದ್ಭುತ ಚಿತ್ರದ ಕುರಿತು - ಏಪ್ರಿಲ್ 24, 2022
- ಶ್ರೀ ಶಿವಕುಮಾರ ಶಿವಯೋಗಿಗಳ ಜನುಮ ದಿನ - ಏಪ್ರಿಲ್ 1, 2022
ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಶಿವಯೋಗಿಗಳ ಹುಟ್ಟು ಹಬ್ಬದ ಶುಭಾಶಯಗಳು.
ಭಕ್ತನಾದರೆ ಬಸವಣ್ಣನಂತಾಗಬೇಕು
ಜಂಗಮವಾದಡೆ ಪ್ರಭುದೇವರಂತಾಗಬೇಕು
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು
ಐಕ್ಯನಾದಡೆ ಅಜಗಣ್ಣನಂತಾಗಬೇಕು
ಇಂತಿವರ ಕಾರುಣ್ಯ ಪ್ರಸಾದವ ಕೊಂಡು
ಸತ್ತಹಾಗಿರಬೇಕಲ್ಲವೇ ತತ್ವದ ಮಾತು ಎನಗೇಕಯ್ಯಾ
ದಾಸಯ್ಯಪ್ರಿಯ ರಾಮಾನಾಥಾ …
– ದುಗ್ಗಳೆ
ಎಂಬ ವಚನವನ್ನು ಓದಿದಾಗ ನಮ್ಮ ಮನದಲ್ಲಿ ಮೂಡುವ ಮತ್ತೊಂದು ಮುತ್ತಿನಂತಹ ನುಡಿಯೆಂದರೆ ದಾಸೋಹಿಯಾದಡೆ ಶ್ರೀ ಶಿವಕುಮಾರ ಶಿವಯೋಗಿಯಂತಾಗಬೇಕು ಎನ್ನುವುದಾಗಿದೆ.
ಅನ್ನ, ಅಕ್ಷರ ,ವಸತಿ ,ಎಂಬ ತ್ರಿವಿಧ ಪುಣ್ಯ ಕಾರ್ಯಗಳ ಹೆಸರು ಬಂದೊಡನೆ ಎಲ್ಲರ ಮನದಲ್ಲಿ ಮೂಡುವ ಸಿದ್ದಗಂಗೆಯ ಪ್ರಜ್ವಲ ಪ್ರಣತಿ ಎಂದರೆ ಅದು ಡಾಕ್ಟರ್ ಶ್ರೀ .ಶ್ರೀ. ಶಿವಕುಮಾರ ಮಹಾಸ್ವಾಮಿಗಳು .
ತ್ರಿವಿಧ ದಾಸೋಹಿಗಳು, ನಡೆದಾಡುವ ದೇವರು, ಶತಾಯುಷಿಗಳು, ಕಾಯಕಯೋಗಿ ,ಜಾತಿ ಮತ ಧರ್ಮಗಳನ್ನು ಮೀರಿದ ಅಜಾತಶತ್ರು, ಸೇವೆಯ ಬದುಕಾಗಿಸಿಕೊಂಡ ಸಿದ್ಧಿಪುರುಷ, ಲಕ್ಷಾಂತರ ಕುಟುಂಬಗಳ ಆಶಾಕಿರಣ, ಜ್ಞಾನ ಪರಂಜ್ಯೋತಿ, ಸಾರ್ಥಕ ಜೀವನ ಸಾಗಿಸಿದ ಜಂಗಮ, ಬಸವ ತತ್ವವ ಜಗಕೆ ಸಾರಿದ ಮಹಾ ಶರಣ, ನಾಡು-ನುಡಿಗೆ ತನ್ನದೇ ಆದ ಸಾಧಕ ಭಕ್ತಸಮೂಹ ನೀಡಿದ ಅಜರಾಮರ, ಪದ್ಮಭೂಷಣ, ಕರ್ನಾಟಕ ರತ್ನ ,ಇಷ್ಟಲಿಂಗ ಪ್ರಿಯ, ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಶಿವಯೋಗಿಗಳು ಜನ್ಮತಳೆದ ಪರಮಪುಣ್ಯ ದಿನವೇ ಏಪ್ರಿಲ್ 1 .
1907 ಎಪ್ರಿಲ್ 1 ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದ ಹೊನ್ನೇಗೌಡ ಮತ್ತು ಗಂಗಮ್ಮನವರ ಕಿರಿಯ ಮಗನಾಗಿ ಜನಿಸಿದ ಇವರು ಶಿವಕುಮಾರ ಎಂಬ ನಾಮ ಪಡೆದು ಎಲ್ಲರ ಅಚ್ಚು ಮೆಚ್ಚಿನ ಶಿವಣ್ಣನಾಗಿದ್ದರು .
ವೀರಪುರದಲ್ಲಿ ಇದ್ದ ಕೂಲಿಮಠದ ಮರಳ ಮೇಲೆ ಅಕ್ಷರ ತಿದ್ದುವ ಮೂಲಕ ಇವರ ಶೈಕ್ಷಣಿಕ ಬದುಕು ಪ್ರಾರಂಭವಾಯಿತು. ಪ್ರಾಥಮಿಕ ಶಿಕ್ಷಣ ಪಾಲನಹಳ್ಳಿಯಲ್ಲಿ ನಡೆಯಿತು. ಆ ದಿನಗಳಲ್ಲಿ ತಾಯಿಯನ್ನು ಕಳೆದು ಕೊಂಡ ಇವರಿಗೆ ಮಾತೃ ಸ್ವರೂಪಿಣಿಯಾದವರು ಇವರ ಅಕ್ಕ. ಇವರು ಮಾಧ್ಯಮಿಕ ಶಿಕ್ಷಣವನ್ನು ಅಕ್ಕನ ಊರಾದ ನಾಗವಲ್ಲಿಯಲ್ಲಿ ಮುಗಿಸಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 1926 ರಲ್ಲಿ ಮೆಟ್ರಿಕ್ಯುಲೇಪನ್ ಮುಗಿಸಿದರು .
1907 ರಲ್ಲಿ ಶ್ರೀಮಠದ ಅಂದಿನ ಮಠಾಧಿಪತಿಗಳಾಗಿದ್ದ ಉದ್ದಾನ ಶಿವಯೋಗಿಗಳೊಡನೆ ಇವರ ಒಡನಾಟ ಬೆಳೆದು ಶ್ರೀಮಠಕ್ಕೆ ತುಂಬಾ ಆಪ್ತರಾದರು. ನಂತರ ಬೆಂಗಳೂರಿನ ತೋಟದಪ್ಪನ ಛತ್ರದಲ್ಲಿ ಇದ್ದುಕೊಂಡು ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು .
ಶಿಸ್ತುಬದ್ಧ ಜೀವನ ಹಾಗೂ ಇವರ ಸೇವಾ ಮನೋಭಾವ ಅಂದೇ ಹೆಮ್ಮರವಾಗಿ ಗೋಚರಿಸುತ್ತಿತ್ತು .ಆಗಾಗ ಶ್ರೀಮಠಕ್ಕೆ ಹೋಗಿ ಶ್ರೀಗಳನ್ನು ಭೇಟಿ ಮಾಡಿ ಬರುತ್ತಿದ್ದರು .ಒಮ್ಮೆ ಭೀಕರವಾದ ಪ್ಲೇಗ್ ತಗುಲಿದಾಗಲೂ ಶಿವಣ್ಣ ತನ್ನ ಸೇವೆ ಮಾಡುವುದನ್ನು ಮರೆಯಲಿಲ್ಲ .
1930 ರಲ್ಲಿ ಮಠದ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದಾಗ ಅವರ ಕ್ರಿಯಾ ಸಮಾಧಿ ಕಾರ್ಯದಲ್ಲಿ ಭಾಗಿಯಾದ ಶಿವಣ್ಣನವರ ಕಾರ್ಯತತ್ಪರತೆ ಶ್ರೀಗಳಿಗೆ ಬಹಳ ಮೆಚ್ಚುಗೆಯಾಗಿ ಶಿವಣ್ಣನನ್ನು ಶ್ರೀ ಮಠದ ಉತ್ತರಾಧಿಕಾರಿಯಾಗಿ ಘೋಷಿಸಿ ಶಿವಣ್ಣನನ್ನು ಶಿವಕುಮಾರ ಸ್ವಾಮೀಜಿ ಆಗಿ ರೂಪಿಸಿದರು.
ಸನ್ಯಾಸ ದೀಕ್ಷೆ ಪಡೆದ ನಂತರವೂ ತಮ್ಮ ಶಿಕ್ಷಣವನ್ನು ಮುಂದುವರೆಸಿ ಸ್ನಾತಕೋತ್ತರ ಪದವೀಧರರಾದರು. ವಿದ್ಯಾಭ್ಯಾಸದ ನಂತರ ಮಠದ ಏಳಿಗೆಗಾಗಿ ಹಗಲಿರುಳು ದುಡಿದರು.
ಮುಂದೆ ಉದ್ಧಾನ ಶಿವಯೋಗಿ ಶ್ರೀಗಳು ಲಿಂಗೈಕ್ಯರಾದಾಗ ಮಠದ ಸಂಪೂರ್ಣ ಜವಾಬ್ದಾರಿ ಇವರ ಹೆಗಲ ಮೇಲೆ ಬಿತ್ತು. ಮಠದ ಸಕಲ ಆಡಳಿತ ವಿದ್ಯಾಸಂಸ್ಥೆಗಳ ನಿರ್ವಹಣೆ ದಾಸೋಹದ ಹೊಣೆಗಾರಿಕೆ ಯನ್ನು ಸ್ವತಃ ಹೊತ್ತರು ಆಗ ಶ್ರೀಮಠದಲ್ಲಿ ಕಷ್ಟದ ದಿನಗಳು ಕೃಷಿಯಾಧಾರಿತ ವರಮಾನ ಒಂದೇ ಆದಾಯದ ಮೂಲವಾಗಿತ್ತು. ಅದರಲ್ಲೂ ಆಗಾಗ ಸಂಭವಿಸುತ್ತಿದ್ದ ಪ್ರಕೃತಿ ವಿಕೋಪಗಳು ಮಠದ ನಿರ್ವಹಣೆಗೆ ಸವಾಲಾಗಿದ್ದವು. ಶ್ರೀಗಳು ದೃತಿಗೆಡದೆ ತುಂಬಾ ಆತ್ಮವಿಶ್ವಾಸದಿಂದ ಶ್ರೀ ಸಿದ್ದಲಿಂಗೇಶ್ವರರ ಮೇಲೆ ಎಲ್ಲ ಭಾರವನ್ನು ಹಾಕಿ ತಮ್ಮ ಕಾಯಕವನ್ನು ಪ್ರಾರಂಭಿಸಿದರು. ಭಕ್ತರ ಮನೆಗೆ ಬಿನ್ನಹ ಆದ್ಯತೆ ಮೇರೆಗೆ ಪೂಜೆಗಳಲ್ಲಿ ಪಾಲ್ಗೊಂಡು ಅದರಿಂದ ಬಂದ ದವಸದಾನ್ಯ ಹಣವನ್ನು ಧಾರ್ಮಿಕ ಕಾರ್ಯಗಳು, ವಿದ್ಯಾರ್ಥಿಗಳ ಓದು, ದಾಸೋಹ, ವಿದ್ಯಾರ್ಜನೆಗಾಗಿ ಬಳಸುತ್ತಿದ್ದರು .
ದೇಶ ಸಾವಿರ 1947 ರಲ್ಲಿ ಸ್ವಾತಂತ್ರ್ಯ ಪಡೆದು ಶಿಕ್ಷಣದ ಅರಿವನ್ನು ಹೆಚ್ಚಾಗಿಸುವ ವೇಳೆಗಾಗಲೇ ಶ್ರೀಸಿದ್ದಗಂಗಾ ಸಂಸ್ಥೆಯಲ್ಲಿ ಶಿಕ್ಷಣ ದಾಸೋಹ ನಿರಂತರವಾಗಿ ಸಾಗುತ್ತಿತ್ತು. ಶಿಕ್ಷಣ ನೀಡುವಲ್ಲಿ ಉತ್ತಮ ಛಾಪು ಮೂಡಿಸಿದ್ದರು. ರಾಷ್ಟ್ರಮಟ್ಟದಲ್ಲಿ ಇವರ ಅಕ್ಷರದಾಸೋಹ ಎಲ್ಲರ ಮೆಚ್ಚುಗೆ ಪಡೆದಿತ್ತು.
ಪ್ರತಿದಿನ ಬೆಳಗಿನ ಜಾವ ನಾಲ್ಕಕ್ಕೆ ಎದ್ದು ಸ್ನಾನ ಮುಗಿಸಿ ಒಂದು ತಾಸಿಗೂ ಹೆಚ್ಚು ಸಮಯ ಪೂಜೆಯಲ್ಲಿ ತಲ್ಲೀನರಾಗುತ್ತಿದ್ದರು. ವಿಭೂತಿ ದರಿಸಿ ಲಿಂಗ ಪೂಜೆ ಮಾಡುವುದು ಶ್ರೀಗಳಿಗೆ ಪರಮ ಪ್ರಿಯವಾದ ಸಂತೃಪ್ತಿ ಯಾಗಿತ್ತು.
ಮಠದಲ್ಲಿ ಗೋಶಾಲೆ ನಿರ್ಮಿಸಿ ಮೂಖ ಪ್ರಾಣಿಗಳನ್ನು ಸಾಕಿ ಸಲುಹಿ ಅವುಗಳ ಸೇವೆ ಮಾಡುವುದೆಂದರೆ ಎಲ್ಲಿಲ್ಲದ ಪ್ರೀತಿ ಅವರಿಗೆ.
ಪ್ರತಿದಿನ ಮುಂಜಾನೆ ಮತ್ತು ಸಂಜೆ ಶ್ರೀ ಮಠದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮಕ್ಕಳೊಂದಿಗೆ ಸೇರಿ ಪ್ರಾರ್ಥನೆ ಮಾಡುವುದು ದಿನನಿತ್ಯದ ಪ್ರಮುಖ ಕಾಯಕವಾಗಿತ್ತು .
” ನಾವು ದೇವರನ್ನು ಕಂಡಿದ್ದೇವೆ.ನಿತ್ಯವು ಕಾಣುತಿದ್ದೇವೆ .ಆತನೊಂದಿಗೆ ಮಾತನಾಡುತಿದ್ದೇವೆ . ಮಕ್ಕಳಿಗಿಂತ ದೊಡ್ಡ ದೇವರು ಇನ್ನಾರಿರಲು ಸಾಧ್ಯ . ಕಂದನಲ್ಲಿ ಶಿವನ ಬಂಧನವ ಕಾಣುವುದೇ ಮುಕ್ತಿ ” ಎಂಬ ಶ್ರೀಗಳ ವಾಣಿಯು ನಮಗೆ ಮಕ್ಕಳ ಮೇಲಿನ ಅವರ ದೈವ ಭಾವನೆಯನ್ನು ಪುಷ್ಠಿಕರಿಸುತ್ತದೆ .
ಬೆಳಗಿನಿಂದ ಮಲಗುವವರೆಗೂ ಭಕ್ತರ ದರ್ಶನ, ಮಳೆ ,ಬೆಳೆಗಳ ಚರ್ಚೆ, ವಿಚಾರ ಮಂಥನ, ಮಠದ ಆಡಳಿತ ಕಡತಗಳ ತಪಾಸಣೆ ,ಶೈಕ್ಷಣಿಕ ಸಂಸ್ಥೆಗಳ ಆಡಳಿತ ವೈಖರಿಯ ವೀಕ್ಷಣೆ, ಅನ್ನದಾಸೋಹ, ಶಾಲಾ ಮಕ್ಕಳ ಶಿಕ್ಷಣ ,ವಸತಿ, ಮುಂತಾದವುಗಳನ್ನು ಸ್ವತಃ ತಪಾಸಣೆ ಮಾಡುತಿದ್ದರು.
ಅಂತಹ ಇಳಿವಯಸ್ಸಿನಲ್ಲೂ ಕಾಯಕವೇ ಕೈಲಾಸವೆಂದು ದುಡಿದ ಪುಣ್ಯಪುರುಷರು.
ಶ್ರೀ ಮಠದ ಮಕ್ಕಳೊಂದಿಗೆ ಮಾತನಾಡುವುದು, ಗೋಶಾಲೆಯ ಪ್ರಾಣಿಗಳನ್ನು ಪ್ರೀತಿಸುವುದು, ಪುಸ್ತಕಗಳನ್ನು ಓದುವುದು, ಇಷ್ಟಲಿಂಗಪೂಜೆ ಇವರ ಬಹುಮುಖ್ಯವಾದಂತಹ ಹವ್ಯಾಸಗಳಾಗಿದ್ದವು.
ಇಂತಹ ಪುಣ್ಯ ಪುರುಷನನ್ನು ಪಡೆದ ಈ ಭೂಮಿಯು ಪುಣ್ಯ ಭೂಮಿಯು ಸರಿ. ಇವರದು ಸರಳ ನಡೆ ನುಡಿ, ಅದ್ವಿತೀಯ ಪಾಂಡಿತ್ಯ, ಆಚಾರ-ವಿಚಾರ, ಚಿಂತನ-ಮಂಥನ ,ಜನಪರ ಕಾಳಜಿ ಬಹಳ ಅಮೂಲ್ಯವಾದವು.
ಶ್ರೀ ಮಠದ ಮಕ್ಕಳಿಗೆ ಉತ್ತಮ ಮೌಲ್ಯ ಕಲಿಸುವ ಜೊತೆಗೆ ಶ್ರಮದ ಮೌಲ್ಯವನ್ನು ಬಿತ್ತಿದ್ದಾರೆ .
ತುತ್ತು ಅನ್ನದ ಹಿಂದೆ ಸಾವಿರ ಕೈಗಳ ಪರಿಶ್ರಮವಿದೆ. ನೀವು ಚೆಲ್ಲುವ ಆಹಾರ ಮತ್ತೊಬ್ಬ ಬಡವರ ಪಾಲಿನ ಅಂದಿನ ಜೀವನಾಧಾರ ಎಂಬ ಸಂದೇಶ ಸಾರುವ ಮೂಲಕ ಶ್ರಮ ಜೀವಿಗಳ ಕಾಯಕ ಸೇವೆಗೆ ಬೆಲೆ ದೊರಕಿಸಿಕೊಟ್ಟಿದ್ದಾರೆ .
ಇಂದಿಗೂ ಶ್ರೀಮಠವು ಅನ್ನ ಶಿಕ್ಷಣ ವಸತಿಯ ತ್ರಿವಿಧ ದಾಸೋಹ ಮಾಡುತ್ತ ಕೋಟ್ಯಂತರ ಬಡ ಕುಟುಂಬಗಳ ಬೆಳಕಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಶ್ರೀಮಠದಲ್ಲಿ ವಿದ್ಯೆ ಕಲಿತು ಆಸರೆ ಪಡೆದು ತನ್ನದೇ ಆದ ಸಾಧನೆ ಮಾಡಿ ವಿಶ್ವದ ತುಂಬೆಲ್ಲ ನಾಡಿನ ಕೀರ್ತಿಪತಾಕೆಯನ್ನು ಹಾರಿಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ.
“ರಾಷ್ಟ್ರ ಮುಂದುವರೆಯಬೇಕಾದರೆ ಜನರು ಕ್ರಿಯಾಶೀಲರಾಗಿ ಕಷ್ಟ ಪಟ್ಟು ಕೆಲಸ ಮಾಡಬೇಕು.ದುಡಿಮೆಗೆ ಮಹತ್ತರವಾದ ಸ್ಥಾನ ಉಂಟು.ಸ್ವಾತಂತ್ರ್ಯ ಬಂದ ಮೇಲೆ ಉಂಟಾಗಿರುವ ಒಂದು ತಪ್ಪು ಕಲ್ಪನೆ ಎಂದರೆ ಕಷ್ಟ ಪಡೆದೆ ಆರಾಮ ಜೀವನ ನಡೆಸಬೇಕು. ಸುಖವಾಗಿರಬೇಕೆಂಬ ಆಕಾಂಕ್ಷೆವುಳ್ಳವರ ಸಂಖ್ಯೆ ಹೆಚ್ಚಾಗಿದೆ.ಸರ್ಕಾರವೇ ಎಲ್ಲವನ್ನು ತಾನಾಗಿಯೇ ಕೊಡಬೇಕು ಎಂಬ ಭಾವನೆ ಬೇರೂರಿದೆ .ಇದು ಯಾವ ರಾಷ್ಟ್ರಕೂ ಶುಭ ಸೂಚನೆಯಲ್ಲ” ಎಂಬ ಸಂದೇಶ ನೀಡುವ ಮೂಲಕ ಪ್ರತಿ ನಾಗರೀಕನ ಜವಾಬ್ದಾರಿ ನೆನಪಿದ್ದಾರೆ.
ಇಂದು ಸಾವಿರಾರು ಕುಟುಂಬಗಳು ಶ್ರೀಗಳ ಹೆಸರಿನಲ್ಲಿ ತಮ್ಮ ಮನೆಯಲ್ಲಿ ಜ್ಯೋತಿ ಬೆಳಗಿಸಿ ಅವರಿಗೆ ಜೀವನ ಕೊಟ್ಟ ಬದುಕು ರೂಪಿಸಿದ ಗುರುಗಳಿಗೆ ನಮನ ಸಲ್ಲಿಸುತ್ತಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗಲಾರದು.
ಇಂತಹ ಕಾಯಕಜೀವಿ, ತ್ಯಾಗಮೂರ್ತಿ, ಬುದ್ಧಿಜೀವಿಯನ್ನು ಕಳೆದುಕೊಂಡು ಈ ರಾಷ್ಟ್ರ ಈ ನಾಡು ಬಡವಾಯಿತು ಎನ್ನಬಹುದು.
ಇಂದು ಶ್ರೀಗಳು ಇಲ್ಲದಿರಬಹುದು ಅವರು ಅನ್ನಹಾಕಿ, ಅಕ್ಷರ ಬಿತ್ತಿ, ವಸತಿ ನೀಡಿ ಸಾಕಿ ಬೆಳೆಸಿದ ಭವಿಷ್ಯದ ತಾರೆಗಳು ವಿಶ್ವದ ತುಂಬೆಲ್ಲ ಉಸಿರಾಡುತ್ತಿದ್ದಾರೆ. ಅವರೆಲ್ಲರ ಪ್ರತಿ ಉಸಿರು ಮಿಡಿಯುತ್ತಿದೆ ಶ್ರೀಗಳ ಹೆಸರನು.
ಸಾಧನೆಯ ಹಾದಿಯಲ್ಲಿ ಜನಿಸಿದವರಿಗೆ ಸಿಗುವ ಪ್ರಶಸ್ತಿಗಳು ಅನೇಕ ಅದರಂತೆ ಶ್ರೀಗಳ ಸೇವಾ ಕೈಂಕರ್ಯಕ್ಕೆ ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ದೊರೆತಿದೆ.
ಈ ಕಾಯಕ ಯೋಗಿಗೆ ಸರ್ಕಾರ ಸಂಘ ಸಂಸ್ಥೆಗಳು ನೀಡಿದ ಪುರಸ್ಕಾರಗಳು ಅನೇಕವಿದ್ದರೂ ಅವೆಲ್ಲವನ್ನು ಮೀರಿದ ಪ್ರಶಸ್ತಿ ಒಂದಿದೆ .ಅದು ತನ್ನ ನಾಡಿನ ಜನ ಭಕ್ತ;ಸಮೂಹ ಪ್ರೀತಿಯಿಂದ ನೀಡಿದಂತಹ ಭಕ್ತಿಯ ಸಮರ್ಪಣೆ.
ಇಂದು ಶಿವಕುಮಾರ ಶ್ರೀಗಳು ಪ್ರತಿಯೊಬ್ಬ ಕನ್ನಡಿಗರ ಹೃದಯದಲ್ಲಿ ನಲೆಸಿ ಭಕ್ತಿಯೆಂಬ ಪ್ರೀತಿಯೆಂಬ ಪುರಸ್ಕಾರ ಪಡೆದಿರುವುದು ಅವರ ಧೀಮಂತ ವ್ಯಕ್ತಿತ್ವದ ಹಿರಿಮೆಯಾಗಿದೆ .
ದೈವವನ್ನು ಯಾರು ಕಂಡಿದ್ದಾರೊ ಗೊತ್ತಿಲ್ಲ. ಆದರೆ ಈ ನಡೆದಾಡುವ ದೇವರು ಮಾಡಿದಂತಹ ಸೇವೆ ಮಾತ್ರ ಎಲ್ಲರ ಕಣ್ಣು ಮುಂದೆ ಅಜರಾಮರವಾಗಿ ಉಳಿಯುತ್ತದೆ .
ನಾನು ಇಂತಹ ಪುಣ್ಯ ಪುರುಷರು ಹುಟ್ಟಿ ಬೆಳೆದ ಊರಿನಲ್ಲಿ ಮೂರು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವುದು ಹಾಗೂ ಇವರು ಓದಿದ ಶಾಲೆಯಲ್ಲಿ ನಾನು ಕುಳಿತಿರುವುದು, ಶ್ರೀ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವುದು ನನ್ನ ಪುಣ್ಯವೇ ಸರಿ. ಇದು ನನ್ನ ಪಾಲಿಗೆ ಬಹಳ ಹೆಮ್ಮೆಯೆನಿಸುತ್ತದೆ. ನನ್ನ ಜೀವನವು ಕೂಡ ಸಾರ್ಥಕವಾಯಿತು ಎಂಬ ಭಾವ ನನ್ನದು.
ಇಂತಹ ನಿಷ್ಕಲ್ಮಶ ,ಪರಮ ಪುನೀತ ,ಪುಣ್ಯಜೀವಿ ಮತ್ತೊಮ್ಮೆ ಮಗದೊಮ್ಮೆ ಜನ್ಮ ತಾಳಿ ನಾಡು ನುಡಿಯ ಸೇವೆ ಮಾಡಲಿ ಎಂದು ಎಲ್ಲ ಭಕ್ತಸಮೂಹ ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸದಿರಲು ಸಾಧ್ಯವೇ .
ಶ್ರೀಮಠದ ನಿವೃತ್ತ ಪ್ರಾಂಶುಪಾಲರಾದ ಚಂದ್ರಶೇಖರಯ್ಯನವರು ಶ್ರೀಗಳ ಬಗ್ಗೆ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ ಶ್ರೀಗಳು 88 ವರ್ಷಗಳ ತಮ್ಮ ಸಂನ್ಯಾಸ ಆಶ್ರಮದಲ್ಲಿ 96,426 ಕ್ಕೂ ಹೆಚ್ಚು ಶಿವಪೂಜೆ, 1,89,930 ಗಂಟೆಗೂ ಅಧಿಕ ಸಮಯ ಧ್ಯಾನ ಮತ್ತು ಪೂಜೆ, 4,49,680 ಗಂಟೆಗಳ ಕಾಲ ಸಮಾಜಸೇವೆ, 1000 ಕ್ಕೂ ಅಧಿಕ ವಿದ್ಯಾಸಂಸ್ಥೆಗಳಲ್ಲಿ 6,06,312 ಮಂದಿ ವಿದ್ಯೆ ಕಲಿತಿದ್ದಾರೆ. 23,854 ಮಂದಿ ಶಿಕ್ಷಕ ವರ್ಗ, 23,843 ಬೋದಕೇತರ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ . ಸಿದ್ದಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 6,68,29,300 ಆಗಿದೆ. ಜಾತ್ರೆಯ ಸಮಯದಲ್ಲಿ ಮಠದಲ್ಲಿ 3,62,00,000 ಜನ ದಾಸೋಹ ಸ್ವೀಕರಿಸಿದ್ದಾರೆ ಮತ್ತು ಶ್ರೀಗಳ ಪಾದ ಸ್ಪರ್ಶ ಮಾಡಿದವರ ಸಂಖ್ಯೆ 23,12,64,100 ಆಗಿದೆ.
ದಾಖಲೆಗಳೇ ಏನೇ ಇರಲಿ ಇವೆಲ್ಲವನ್ನೂ ಮೀರಿದ ಅಮೋಘ ,ಅದ್ಭುತ, ರೋಚಕ ,ಸೇವಾ ಕೈಂಕರ್ಯ ಇವರದು. ಶತಮಾನ ಕಂಡ ಶತಾಯುಷಿ ಪ್ರತಿಕ್ಷಣವು ಭಕ್ತರಿಗಾಗಿ, ಮಕ್ಕಳಿಗಾಗಿ, ಬಡವರಿಗಾಗಿ, ಅಸಹಾಯಕರಿಗಾಗಿ, ದೀನ ದಲಿತರ ಏಳಿಗೆಗಾಗಿ ಮಿಡಿದಿದ್ದು ಕನ್ನಡಾಂಬೆಯ ಹೆಮ್ಮೆಯೇ ಸರಿ.
ಶ್ರೀಗಳು ಶಿವನಲ್ಲಿ ಲೀನವಾದ ಸಮಯದಲ್ಲಿ ರಾಷ್ಟ್ರದ ಜನತೆ ಮಿಡಿತ ಕಂಬನಿ ನಾಡ ಜನ ತಮ್ಮ ಮನೆಯ ದೈವವನ್ನು ಕಳೆದುಕೊಂಡಂತೆ ಪರಿತಪಿಸಿದ ಆ ಕ್ಷಣ , ಸಾವಿರಾರು ಮಕ್ಕಳು ತಮ್ಮ ತಮ್ಮ ಮಾತಾ ಪಿತೃ ಸ್ವರೂಪರಾದ ಶ್ರೀಗಳ ಅಗಲಿಕೆಯನ್ನು ಕಂಡು ಗೋಳಾಡಿದ ದೃಶ್ಯ ಎಂತಹ ವರ ಮನಸ್ಸನ್ನು ಕರಗಿಸುವಂತಿತ್ತು.
ಲಕ್ಷಾಂತರ ಜನ ಸಾಗರವೇ ಹರಿದು ಬಂದು ಶ್ರೀಗಳಿಗೆ ಅಂತಿಮ ನಮನ ಸಲ್ಲಿಸುತಿದ್ದರೆ ಅವರ ಗೋಳಾಟ ಚೀರಾಟ ಕಂಡ ಆ ಸಿದ್ದಲಿಂಗೇಶ್ವರ ದೇವರು ಕೂಡ ಅವರಿಗಾಗಿ ಒಂದು ಹನಿ ಕಣ್ಣೀರು ಸುರಿಸದಿರಲು ಸಾಧ್ಯವಿಲ್ಲ. ನಾಡಿನಾದ್ಯಂತ ಸಲ್ಲಿಸಿದ ಗುರುವಂದನೆ ಮಾಡಿದ ಉಚಿತ ಸೇವೆ ಅಮೋಘ. ಅಂದು ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ಭಕ್ತರಿಗಾಗಿ ಎಲ್ಲ ಹೋಟೆಲ್ ಗಳು, ಭಕ್ತ ಸಮೂಹಗಳು ಶ್ರೀಗಳ ಮಹದಾಸೆಯಾದ ಅನ್ನ ದಾಸೋಹ ನಡೆಸಿದ್ದು ಚರಿತ್ಯೆಯ ಸೃಷ್ಟಿಯೇ ಸರಿ.
ಇಂತಹ ಸೇವಾ ಮೂರ್ತಿಗೆ ಜನ್ಮ ನೀಡಿ ಈ ನಾಡಿಗಾಗಿ, ಜನ ಸೇವೆಗಾಗಿ ಸಮರ್ಪಿಸಿದ ಅವರ ಮಾತಾ ಪಿತೃಗಳಿಗೆ ಹೃತ್ಪೂರ್ವಕ ಧನ್ಯವಾದ ಹೇಳಲೇ ಬೇಕು.
“ವಿಜ್ಞಾನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಪ್ರಗತಿ ಸಾಧಿಸಿದ್ದೇವೆ ಸಂತೋಷ , ಆದರೆ ನಿಜವಾದ ಪ್ರಗತಿ ಯಾವುದು ? ಮನುಷ್ಯರಲ್ಲಿ ಬಾಹ್ಯ ಪ್ರಗತಿ ಮಾತ್ರ ಕಂಡುಬರುತ್ತದೆ.ಆಂತರಿಕ ಪ್ರಗತಿ ಮಾತ್ರ ಕಾಣುತಿಲ್ಲ.ಸರ್ವರ ಪ್ರಗತಿ, ಎಲ್ಲ ಸಮುದಾಯಗಳ ಪ್ರಗತಿಯನ್ನು ನಾವು ಸಮಗ್ರ ಪ್ರಗತಿ” ಎನ್ನತ್ತೇವೆ ಎಂಬ ಶ್ರೀ ವಾಣಿಯು ನಮಗೆ ಇವರು ಮಹಾ ಮಾನವತಾವಾದಿ ಎಂದು ನಿರೂಪಿಸುತ್ತದೆ.
ಇಂದು ಇಂತಹ ಪುಣ್ಯ ಪುರುಷರು ಧರೆಗೆ ಬಂದಂತಹ ಭವ್ಯ ದಿನವಾಗಿದೆ .ಇಂದು ನಾವೆಲ್ಲರೂ ಶ್ರೀಗಳಿಗೆ ವಂದಿಸಿ ಅವರ ಕೃಪೆಗೆ ಪಾತ್ರರಾಗೋಣ .
ಪರಮ ಪೂಜ್ಯ ಶ್ರೀ ಶಿವಕುಮಾರ ಶಿವಯೋಗಿಗಳಿಗೆ ನನ್ನ ಈ ತೊದಲು ನುಡಿಗಳನ್ನು ಭಕ್ತಿಯಿಂದ ಸಮರ್ಪಿಸುವೆ.
ಓಂ ನಮಃ ಶಿವಾಯ
ಓಂ ಶಿವಕುಮಾರ ಶಿವಯೋಗಿಯೇ ನಮಃ
ವಂದನೆಗಳೊಂದಿಗೆ
ನಿಮ್ಮ ಭಕ್ತೆ .
ಅನುಸೂಯ ಯತೀಶ್.
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ