- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
‘ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರೆ ಚಂದ್ರನವರೆಗೆ’ ಎಂದು ಮನುಷ್ಯನ ಮಿತಿಯನ್ನು ತನ್ನದೇ ಧಾಟಿಯಲ್ಲಿ ಹೇಳಿದ ಕವಿ ಚೆನ್ನವೀರಕಣವಿ. ‘ಸಮನ್ವಯ ಕವಿ’ ಎಂದೇ ಲೋಕಪ್ರಸಿದ್ಧಿಯಾದ ಕಣವಿ ಇನ್ನಿಲ್ಲ ಎಂದ ಕೂಡಲೆ ಥಟ್ ಎಂದು ಹೊಳೆದ ಕವಿತೆ ‘ಕಾಲ ನಿಲ್ಲುವುದಿಲ್ಲ’ ಈ ಕವಿತೆ ನೆಲ-ಮುಗಿಲು ಕವನ ಸಂಕಲನದಲ್ಲಿದೆ. ಕಾಲನ ಕರೆಗೆ ಓಗೊಟ್ಟು ಯಾರೂ ನಿಲ್ಲುವುದಿಲ್ಲ…. ನಾನೂ ಹೆಚ್ಚು ನಿಲ್ಲುವುದಿಲ್ಲ ಎನ್ನುತ್ತಲೇ ಕಾಲವಾದ ಚೆನ್ನವೀರ ಕಣವಿಗೆ ಭಾವಪೂರ್ಣ ವಿದಾಯ ಈ ಮೂಲಕ.
ಕಾಲ ನಿಲ್ಲುವುದಿಲ್ಲ ಹೆಸರನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕಿವಿಯಲ್ಲಿ ರಿಂಗಣಿಸಿದಂತಾಗುತ್ತದೆ. ಕಾಲ ಮತ್ತು ಮನುಷ್ಯನಿಗೆ ಇರುವ ನಂಟನ್ನು, ಮನುಷ್ಯನ ಸೋಲನ್ನು ಇಲ್ಲಿ ಕವಿ ಅನುಸಂಧಾನಿಸಿದ್ದಾರೆ. ಕಾಲವನ್ನು ಮೀರಿ ಮುಂದೆ ಹೋಗುವೆ ಎಂಬ ಮೊಂಡತನ ಮನುಷ್ಯರಲ್ಲಿ ಇದ್ದೇ ಇದೆ ಆದರಿದು ತಪ್ಪು ಗ್ರಹಿಕೆ ಎಂಬುದನ್ನು ಕವಿ ಕಣವಿಯವರು ಪ್ರಸ್ತುತ ಕವಿತೆಯ ಮೂಲಕ ಹೇಳಿದ್ದಾರೆ
ಕಾಲದ ನಿರಂತರತೆಯಲ್ಲಿ ಮನುಷ್ಯ ಇದ್ದರೂ ಕೂಡ ಕಾಲದ ಶಕ್ತಿ ಮಹಿಮೆ ಮನುಷ್ಯನಿಗೆ ಎಂದೂ ಅರ್ಥವಾಗಿಲ್ಲ ಅದು ಅಗೋಚರವಾಗಿಯೇ ಇರುತ್ತದೆ. ಮನುಷ್ಯ ನಾಗರೀಕತೆ, ನಗರೀಕರಣ ಉನ್ನತ ಮಟ್ಟದ ಜೀವನ ಸೊಗಸು ಎಂದೆಲ್ಲಾ ನಾಗಾಲೋಟದಿಂದ ಸಾಗಿದರೂ ಕಣ್ಣಿಗೆ ಕಾಣದ ಕೊರೊನಾ ವೈರಸ್ಗೆ ಕಳೆದೆರಡು ವರುಷಗಳಿಂದ ಹೇಗೆ ಮಂಡಿಯೂರಿ ಕುಳಿತಿದ್ದಾನೆ ಅದರ ಕಬಂಧ ಬಾಹುಗಳಿಂದ ಬಿಡಿಸಿಕೊಂಡೆ ಎನ್ನುವಾಗಲೆ ಇನ್ನೊಂದು ರುಪಾಂತರಿ ವೈರಸ್ಗೆ ತಲೆಯೊಡ್ಡಬೇಕಾದ ಸನ್ನಿವೇಶ ಇಂದಿನ ನಗ್ನಸತ್ಯ ಎನ್ನಬಹುದು( ವಿಶ್ವ ಆರೋಗ್ಯ ಸಂಸ್ಥೆ ಓಮಿಕ್ರಾನ್ ಮತ್ತಷ್ಟು ರೂಪಾಂತರಿಗಳಿಗೆ ಕಾರಣವಾಗಬಹುದು ಎಂದು ಹೇಳಿರುವ ಹಿನ್ನೆಲೆಯಲ್ಲಿ) ಕಾಲದೊಂದಿಗಿನ ಸಮ್ಮಿಲನ ಮನುಷ್ಯನಿಗೆ ಎಂದಿಗೂ ಸಾಧ್ಯವಿಲ್ಲವೆಂಬುದೇ ಈ ಕವಿತೆ ಹೇಳುವ ಅಂತಿಮ ಸತ್ಯ.
ಈ ಕಾಲನೆಂಬ ಪ್ರಾಣೀ
ಕೈಗೆ ಸಕ್ಕರೆ ಚೆನ್ನಾಗಿ ಥಳಿಸಬೇಕೆಂದಿದ್ದೆ
ಎಲ್ಲೋ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ… ಎಂಬ ಸಾಲುಗಳ ಮೂಲಕ ಆರಂಭವಾಗುವ ಕವಿತೆ ಹುಸಿಮುನಿಸಿನಿಂದ . ಮೃದುಹಾಸ್ಯದಿಂದ ಕೂಡಿದೆ ಎನ್ನಿಸುತ್ತದೆ. ಸೃಷ್ಠಿಯ ಸಮಸ್ತ ಚಟುವಟಿಕೆಗಳಿಗೂ ಕಾಲವೇ ಸಾಕ್ಷಿಯಾಗಿರುತ್ತದೆ. ಪ್ರಪಂಚದಲ್ಲಿ ಯಾವುದೇ ಚಟುವಟಿಕೆ ನಡೆದರೂ ನಾವು ಕಾಲದ ಮೂಲಕವೇ ನೋಡುತ್ತೇವೆ. ಹುಟ್ಟಿದ್ದು ಎಷ್ಟು ಗಂಟೆಗೆ? ತರಗತಿ ಎಷ್ಟು ಗಂಟೆಗೆ? ಮೀಟಿಂಗ್ ಎಷ್ಟು ಗಂಡೆಗೆ? ಮುಹೂರ್ತ ಎಷ್ಟು ಗಂಟೆಗೆ?, ರೈಲು,ಬಸ್ಸು ವಿಮಾನ ಎಷ್ಟು ಗಂಟೆಗೆ? ಇತ್ಯಾದಿ ಇತ್ಯಾದಿ. ಬೇಂದ್ರೆಯವರ ‘ಹಕ್ಕಿ ಹಾರುತಿದೆ ನೋಡಿದಿರ’ ಕವಿತೆಯೂ ಇದೇ ವಸ್ತುವನ್ನು ಒಳಗೊಂಡಿರುವಂಥದ್ದು.
‘ಕಾಲ ನಿಲ್ಲುವುದಿಲ್ಲ’ ಕವಿತೆ ಮುಕ್ತ ಛಂದಸ್ಸಿನ ಧಾಟಿಯಲ್ಲಿದ್ದು ಮೂರು ಭಾಗಗಳಲ್ಲಿ ನಿಬದ್ಧವಾಗಿದೆ. ಕಾಲವನ್ನು ಮನುಷ್ಯ ಹಿಡಿಯಲಾರ ಎಂದು ತಿಳಿದಿದ್ದರೂ ‘ಹಿಡಿಯಿರೋ ಅವನ’ ಎಂದು ಹೇಳಿ ಕಾಲವನ್ನು ಹಿಡಿಯಲಾರದೆ ಸೋತ ನೋವನ್ನು ಕಣವಿಯವರು ಅನನ್ಯವಾಗಿ ಇಲ್ಲಿ ವಿವರಿಸಿದ್ದಾರೆ.
ಗಡಿಯಾರದಲ್ಲಿವನ ಹಿಡಿದು ಗಾಣವಾಗಿಸಲು
ಹೆಣಗಿದ್ದೇವೆ
ಹೊತ್ತು ಬಂದಾಗ ಕತ್ತೆಯ ಕಾಲು ಹಿಡಿದು ಒದೆಸಿಕೊಂಡಿದ್ದೇವೆ
………………………………………………
…………………………………………………
ನಮ್ಮೆದೆಯ ಮೆಲೇಯೇ ಕಾಲಿಟ್ಟು ಓಡಿಹೋಗುವುದ
ನಾವೆಷ್ಟು ಸಲ ಅನುಭವಿಸಿಲ್ಲ?
ಸೆಕೆಂಡು ,ಮಿನಟು, ತಾಸುಗಳ ಹಾಸುಕೊಕ್ಕಿನಲಿ
-ಕಾಲ ಲನಿಲ್ಲುವುದಿಲ್ಲ
ಕಾಲವನ್ನು ಬಂಧಿಸಲೆಂದೇ ಮನುಷ್ಯ ಗಡಿಯಾರದ ವ್ಯವಸ್ಥೆ ಮಾಡಿಕೊಂಡಿದ್ದಾನೆ. ಆದರೆ ಕಾಲ ಗೋಡೆ ಗಡಿಯಾರದಲ್ಲಿ,ಕೈಗಡಿಯಾರದಲ್ಲಿ ಡಿಜಿಟಲ್ ವಾಚುಗಳಲ್ಲಿ ಬಂಧಿಯಾಗಿದೆಯೇ? ಖಂಡಿತಾ ಇಲ್ಲ! ಇತಿಹಾಸವನ್ನು ನಿರ್ಮಿಸುತ್ತಾ ಕೆಲವೊಮ್ಮೆ ಮಂದಹಾಸವನ್ನು ಕೆಲವೊಮ್ಮೆ ದುಃಖಹಾಸವನ್ನು ಬೀರುತ್ತಾ ಮುಂದೆ ಹೋಗುತ್ತಲೇ ಇದೆ ಹೋಗುತ್ತಲೇ ಇದೆ. ಮನುಷ್ಯ ತನ್ನದೇ ಮಾನದಂಡವನ್ನು ಇರಿಸಿಕೊಂಡು ಕಾಲವನ್ನು ಅಳೆಯಲು, ಇಲ್ಲವೆ ಕಟ್ಟಿಹಾಕಲು ಸಾಧ್ಯವಿಲ್ಲ. ಕಾಲ ಯಾರ ಕೈಗೂ ಸಿಗದ ಮಾಯೆ ಇದರೆದಿರು ಮನುಷ್ಯ ಯಕಃಶ್ಚಿತ್ ಅಲ್ಲವೇ…! ಇಂಥ ಕಟು ಸತ್ಯವನ್ನು ಕವಿ ಇಲ್ಲಿ ಕಾವ್ಯವಾಗಿಸಿದ್ದಾರೆ.
ಸದಾ ಅದೇ ಸೂರ್ಯ ಚಂದ್ರರ ಸುಪರಿಚಿತ ಮೋರೆ,
ನಮ್ಮಂತೆಯೇ ಅವರಿಗೂ ತಿರುಗುವುದೊಂದೇ ಹೋರೆ,
ಆದರೂ ಆಗೀಗ ಆಚೆಯ ದಡಕ್ಕೂ ಹಾಯುವುದು ಬೆಳಕಿನ ತೆರೆ,
ಎಂಬ ಕವಿತೆಯ ಎರಡನೆ ಬಾಗದ ಸಾಲುಗಳೂ ಕೂಡ ಕಾಲ ಮನುಷ್ಯನ ಮಿತಿಗಿ ಸಿಲುಕಲಾರವು ಎನ್ನುವುದನ್ನೇ ಹೇಳುತ್ತವೆ.
ಸೂರ್ಯ- ಚಂದ್ರ ತಿರುಗುವುದಕ್ಕೆ ಸಮಾನವಾಗಿ ನಾವೂ ತಿರುಗುತ್ತೇವೆ. ಕಾಲಕ್ಕೆ ಸರಿಯಾಗಿ ಪರಿಭ್ರಮಿಸುವುದು ಕೂಡ ಸೂರ್ಯ- ಚಂದ್ರರಿಗೆ ಹೋರೆ ಅಥವಾ ಅದೃಷ್ಟ ದಂತೆ ಅದರೂ ಮನುಷ್ಯ ಸೂರ್ಯ ಚಂದ್ರರ ನಡೆಯನ್ನೂ ಮೀರಿ ಬೇರೆಡೆಗೆ ತನ್ನ ದೃಷ್ಟಿ ಹಾಯಿಸಲು ಹವಣಿಸುತ್ತಾನೆ ಆದರೆ ಫಲಿತ ಮನುಷ್ಯನ ಪಾಲಿಗೆ ಶೂನ್ಯವೇ ಸರಿ! ಕಾಲ ತನ್ನಷ್ಟಕ್ಕೆ ಹೋಗುತ್ತಿರುತ್ತದೆ ಅದರೂ ಹುಂಬತನದಿಂದ ಮನುಷ್ಯ ಇನ್ನೊಂದು ಸವಾಲನ್ನು ಎಸೆಯಲು ಪ್ರಯತ್ನಿಸುತ್ತಿರುತ್ತಾನೆ ಮನುಷ್ಯ ಎಷ್ಟು ಹಠಮಾರಿ ಅಲ್ಲವೆ!
ಎತ್ತಿನಿ ಬಂಡಿಯಿಳಿದು, ಬಸ್ಸಿನ ದಾರಿ ಕಾಯ್ದು, ಕಾರಲ್ಲಿ ಕೂತೂ
ಹಡಗ ಬಿಟ್ಟು ವಿಮಾನದಲಿ ಹಾರಿ
ಗೋಲಗಳ ಮೇಲೆ ದಾಳಿ ಮಾಡಿದ್ದೇವೆ.
ನೈವೇದ್ಯಕ್ಕೆ ಪಾಕವೇ ಸಿದ್ಧವಾಗಿಲ್ಲ, ಆಗಲೆ
ಪ್ರಸಾದ ಹಂಚಿದ್ದೇವೆ
ಎದುರಿಗಿದ್ದೆಲ್ಲ ಅದಲು-ಬದಲು ಕಂಚೀ ಬದಲು
ಹುಡುಕುತ್ತಿದ್ದೇವೆ ಕಣ್ಮುಚ್ಚಿ
ಮೊದಲಾದ ಸಾಲುಗಳನ್ನು ಕಣವಿಯವರು ಅತ್ಯಂತ ಧ್ವನಿಪೂರ್ಣವಾಗಿ ಬರೆದಿದ್ದಾರೆ , ವೈಜ್ಞಾನಿಕವಾಗಿ ಅದೆಷ್ಟೇ ಪ್ರಗತಿ ಸಾಧಿಸಿದರೂ ಕಾಲನ ಎದುರು ಅವುಗಳ ಅಂದರೆ ಸಾಧನೆಗಳ ಮೂಲೆಗಳು ಮುಕ್ಕಾಗಿವೆ( ಮನುಷ್ಯ ವೈಜ್ಞಾನಿಕ ಸಾಧನೆಗಳನ್ನು ಉಪಯೋಗಕ್ಕಿಂತ ದುರುಪಯೋಗಪಡಿಸಿಕಳ್ಳುವುದು ಹೆಚ್ಚು) ಎಂದೆನ್ನಬಹುದು. ಕಾಲನನ್ನು ಅಳೆಯಲು ಹೋಗಿ ನಾವು ಕಳೆದು ಹೋಗುತ್ತಿದ್ದೇವೆ ಅನ್ನುವ ಭಾವವನ್ನು ಕವಿ ಇಲ್ಲಿ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕಣವಿಯವರು ಕಾಲವನ್ನು ಹಿಡಿಯುವುದು ಮನುಷ್ಯನ ಭ್ರಮೆ ಎಂದು ಭಾವುಕತೆಗೆ ಒಳಗಾಗದೆ, ನೈರಾಶ್ಯತೆಗೂ ಒಳಗಾಗದೆ ವಾಸ್ತವಿಕತೆಯನ್ನು ಹೇಳುತ್ತಾರೆ.
ದಿನವು ಬಿಸಿ ಬಿಸಿ ಅನ್ನ ದೇಹಕ್ಕೆ ಹಿತ
ಮುಂಜಾವದ ಡಿಗೆ ಸಂಜೆಗಾಗಲೆ ತಂಗೂಳು
ಹಳಸಿದನ್ನವ ನಾಯಿ ಕೂಡ ಮೂಸುವುದಿಲ್ಲ ಅದೆ
ಅಕ್ಕಿ, ಜೋಳ, ಗೋಧಿಗಳಿಂದ ವಿಧವಿಧದ ಪಕ್ವಾನ್ನ
ಗಮಗಮಿಸುವುದು,ಉಪ್ಪು ,ಕಾರ, ಹುಳಿ, ಸಿಹಿ
ತಕ್ಕಷ್ಟು . ಬದಲಾವಣೆಯೇ ಬಾಳಿನೊಗ್ಗರಣೆ
ಎಂದು ಎಷ್ಟು ಅದ್ಭುತವಾಗಿ ಮನುಷ್ಯ ಕಾಲಕ್ಕೆ ಹೇಗೆ ಹೊಂದಿಕೊಂಡಿದ್ದಾನೆ ಎಂಬುದನ್ನು ಹೇಳಿದ್ದಾರೆ. ಎಲ್ಲವನ್ನು ಹದಗೊಳಿಸಿಕೊಂಡು ನಿರಂತರ ಬದಲಾವಣೆಗೆ ಒಳಗಾಗುವುದೇ ‘ಬಾಳಿನ ಒಗ್ಗರಣೆ ಎನ್ನುತ್ತಾರೆ. ಇದೆ ಭಾಗದಲ್ಲಿ ‘ಕದ ತಿನ್ನುವವನಿಗೆ ಹಪ್ಪಳ ಈಡೆ’ ಎಂದು ಪ್ರಕೃತಿಯ ಸಮಸ್ತವನ್ನು ಮನುಷ್ಯ ಹೇಗೆ ತನ್ನ ಅವಶ್ಯಕತೆಗಳನ್ನೂ ಮೀರಿ ಬಳಸಿಕೊಳ್ಳುತ್ತಾನೆ ಎನ್ನುತ್ತಾರೆ. ಅಪಾಯದ ಸುಳಿವಿದ್ದರೂ ಮನುಷ್ಯ ಎಚ್ಚೆತ್ತುಕೊಂಡಿಲ್ಲ ಎನ್ನುವ ಅಭಿಪ್ರಾಯವಿಲ್ಲಿದೆ.
ಥಂಡಿಯ ಮುಸುಗಿನಲ್ಲಿ ಬೆಚ್ಚನೆ ಕನಸು ಕಂಡಿಲ್ಲ?
ಬೆಂಗಾಡಿನಂಗಾಂಗದಲು ತುಂಗಭದ್ರೆ ತುಂಬಿ ಹರಿದಿಲ್ಲ ?
ಮೊದಲಾದ ಸಾಲುಗಳನ್ನು ಮನುಷ್ಯನ ದುಂಡಾವರ್ತೆನೆಗೆ ಪ್ರಕೃತಿ ನಲುಗಿ ಹೋಗಿದೆ ಎಂಬುದನ್ನು ಸಂಕೇತಿಸಿ ಬರೆಯುತ್ತಾರೆ.
ಮಾಡಿ ಉಂಡಿದ್ದೇವೆ ನಮಗೆ ಸೇರಿದೆ ಅಡುಗೆ
ಇರಬಹುದು ಇದರಲ್ಲಿ ಕೆಲಭಾಗ ಜೀವನಸತ್ವ ಕಡಿಮೆ
……………………………………
………………………………………………..
ರೂಢಿಯಾಗಿದೆ ಒಬ್ಬಬ್ಬರಿಗೂ ಒಂದೊಂದು ಬಗೆಯ ನಡಿಗೆ
ಮುಖ್ಯ ಬೇಕಾದ್ದು ಜೀವಂತ ಗತಿ,ಹೊಸ ನೆತ್ತರಿನ ಕೊಡುಗೆ,
ಎನ್ನುತ್ತಾ ಕಾಲ ನಿಸರ್ಗ,ಮನುಷ್ಯರ ನಿಕಟ ಸಂಬಂಧವನ್ನು ವರ್ಣಿಸಿ ಮನುಷ್ಯ ಕಾಲವನ್ನು ದುರುಪಯೋಗ ಮಾಡಿಕೊಂಡ ಎನ್ನುವ ನಿಲುವಿಗೆ ಬಂದು ಏನೇ ಆದರೂ ಕಾಲ ನಿಲ್ಲುವುದಿಲ್ಲ
ನಾವೂ ಕೂಡುವುದಿಲ್ಲ
………………….
……………………………..
ನಿಂತವರಿಗೂ ಉಂಟು ಸಂತಸ ಪಡುವ ಭಾಗ್ಯ
ಗೆದ್ದವರಿಗಿದ್ದೆ ಇದೆ ಬೆಳ್ಳಿಯ ಢಾಲು
ಸೋತವರ ಸೊತ್ತು
ಗೆದ್ದವರನೆಳೆವ ಜಗದೆಲ್ಲ ಅನುಭವ ಪಾಲು
ಎನ್ನುತ್ತಾ ಜೀವನ ಎಂದರೆ ಹೋರಾಟದ ರಂಗಭೂಮಿ ಈ ಹೋರಾಟದಲ್ಲಿ ಎಲ್ಲರೂ ಭಾಗಿಗಳೆ ಕೆಲವರಿಗೆ ಸೋಲು, ಕೆಲವರಿಗೆ ಗೆಲುವು . ಈ ಪರಿಭಾಷೆಗಳು ಮನುಷ್ಯನಿಗೆ ಅನುಭವವನ್ನು ಒದಗಿಸಿಕೊಡುತ್ತವೆ. ಹೀಗೆ ಕಾಲ ನಿರಂತರವಾಗಿ ಸಾಗುತ್ತದೆ ಅದನ್ನು ಬೆನ್ನಟ್ಟುವ ಬದಲು ಅದರೊಂದಿಗೆ ಮಾಗುವ ಕುಶಲತೆ ,ನಿರುದ್ವಿಘ್ನತೆ ಇರಬೇಕು. ಮನುಷ್ಯ ಎಂದಿಗೂ ಕಾಲಪೀಡಕನಾಗಬಾರದು ಕಾರ್ಯ ಸಾಫಲ್ಯನಾಗಬೇಕು ಎಂಬ ತಾತ್ವಿಕೆಯೊಂದಿಗೆ ಕವಿತೆ ಮುಕ್ತಾಯವಾಗುತ್ತದೆ.
ಉತ್ತರ ಕರ್ನಾಟಕದ ಆಡುಭಾಷೆಯ ಸೊಗಸು ಇಲ್ಲಿದ್ದರೂ ಕವಿತೆ ಶಿಷ್ಟವರ್ಗದ ಗ್ರಾಂಥಿಕತೆಯನ್ನು ಉಳಿಸಿಕೊಂಡಿದೆ. ಕಾಲವನ್ನು, ಮನುಷ್ಯ ಸಂಬಂಧಗಳನ್ನು ಹೇಳುವಾಗ ವ್ಯಂಗ್ಯವನ್ನು ಅಲ್ಲಲ್ಲಿ ಬಳಸಿದರೂ ಗೇಯತೆಯನ್ನು ಕಳೆದುಕೊಳ್ಳದೆ ಇರುವುದು ಕವಿಯ ವಿಶಿಷ್ಟತೆಯಾಗಿದೆ. ತಮ್ಮ ಅಗಾಧ ಜೀವನದ ಅನುಭವದ ಅಭಿವ್ಯಕ್ತಿಗೆ ಕಣವಿಯವರು ಭಾಷೆಯನ್ನು ಇಲ್ಲಿ ಸಮರ್ಥವಾಗಿ ದುಡಿಸಿಕೊಂಡು ಓದುಗರಿಗೆ ಕಾಲನನ್ನು ಮೀರಿಸುವ ಹುಂಬತನಬೇಡ ಅದರ ಜೊತೆಗೆ ಸಾಗುವ ಸುಖಭಾವದ ಹಂಬಲವಿರಬೇಕು ಎನ್ನುವ ಮೌಲ್ಯವನ್ನು ಅರುಹಿದ್ದಾರೆ.
ಇಂಥ ಕಣವಿಯವರಿಗೆ ಭಾವಪೂರ್ಣ ವಿದಾಯ……..
-ಸುಮಾವೀಣಾ
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ