- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಶರಣಾರ್ಥಿಯಲಿ ನನ್ನ ಪಾಲಿಗೆ ಅಪರಿಚಿತನಂತೆ ತೂಗಾಡುತ್ತಿದ್ದ ದೊಡ್ಡ ಪರದೆಯ ಸ್ಮಾರ್ಟ್ ಟಿ.ವಿ. ಕಳೆದ ಒಂದು ವಾರದಿಂದ ತುಂಬಾ ಹತ್ತಿರವಾಯಿತು.
ಅದಕ್ಕೆ ನೆಟ್‌ಫ್ಲಿಕ್ಸ್ ಎಂಬ ಮಾಯಾಜಾಲದಲ್ಲಿ ಹುದುಗಿದ್ದ ‘ವೈಲ್ಡ್ ವೈಲ್ಡ್ ಕಂಟ್ರಿ’ ಎಂಬ ಅದ್ಭುತ ಸಾಕ್ಷ್ಯಚಿತ್ರ.
ಎಂಬತ್ತರ ದಶಕದಿಂದ, ಪದವಿ ಓದಲು ಆರಂಭಿಸಿ, ಇಂಗ್ಲಿಷ್ ಕಲಿಯುವ ಹೊತ್ತಿಗೆ ಮೊದಲು ಆಲಿಸಿದ ಆಡಿಯೋ ಟೇಪ್, ಅದು ಪುಟ್ಟ ವಾಕ್ ಮ್ಯಾನ್ ಮೂಲಕ ಓಶೋನ ‘ಲವ್’ ಎಂಬ ಮಾತುಗಳು. ನಂತರ ತುಂಬಾ ಕಷ್ಟಪಟ್ಟು ‘ಫ್ರೀಡಂ’ ಎಂಬ ಟೇಪ್ ಕೊಂಡುಕೊಂಡೆ. ಇಂಗ್ಲಿಷ್ ಸಾಹಿತ್ಯ ಓದುತ್ತಿದ್ದ ದಡ್ಡ ವಿದ್ಯಾರ್ಥಿ, ಅದು ಇಂಗ್ಲಿಷ್ ಕಲಿಯುವ ಮೊದಲ ಹಂತ ಬೇರೆ!
ಕ್ಲಾಸ್ ರೂಮಿನಲ್ಲಿ ಪ್ರಾಧ್ಯಾಪಕರ ಇಂಗ್ಲಿಷಿಗಿಂತ ಸುಲಭ ಮತ್ತು ಆಕರ್ಷಕ ಭಾಷೆ ಓಶೋನದು.ಆಗ ಓಶೋ ಇನ್ನೂ ಅಮೆರಿಕದ ಒರೆಗಾನ್ ವಾಸಿ. ಕೊಂಚ ವಿವಾದ ಕೂಡ ಶುರುವಾಗಿತ್ತು. ಆದರೆ ನಮಗದರ ಅರಿವಿರಲಿಲ್ಲ, ಏಕೆಂದರೆ ಅದು ಇಂಟರ್ನೆಟ್ ಯುಗವಲ್ಲ. ಏನಿದ್ದರೂ ಪುಸ್ತಕ ಮತ್ತು ಪತ್ರಿಕೆಗಳಲ್ಲಿ ವಿಷಯ ತಿಳಿದುಕೊಳ್ಳುವ ಅನಿವಾರ್ಯತೆ. ಮುಂದೆ ನಾನು ಉಪನ್ಯಾಸಕ ಆಗುವ ಹೊತ್ತಿನಲ್ಲಿ ಓಶೋ ಸಾವಾಯಿತು. ಆದರೆ ಓಶೋ ವ್ಯಾಮೋಹ ಕಡಿಮೆಯಾಗಲಿಲ್ಲ.
ಗೆಳೆಯರ ಸಹಾಯದಿಂದ ಅವನ ಇಂಗ್ಲಿಷ್ ಪುಸ್ತಕ, ನಂತರ ನೌಕರಿ ದೊರೆತ ಮೇಲೆ ಅನುವಾದಿತ ಕೃತಿಗಳನ್ನೂ ಕೊಂಡುಕೊಂಡೆ. ಉಹೂಂ ಓಶೋ ತೆಕ್ಕೆಗೆ ಬೀಳಲಿಲ್ಲ, ಕೈಗೆ ನಿಲುಕಲಿಲ್ಲ. ಕಳೆದ ದಶಕದಿಂದ YouTube ಬಂದ ನಂತರ ಓಶೋ ತುಂಬಾ ಹತ್ತಿರವಾದ. ಓದಿಗಿಂತ ಇದೇ ಅಪ್ಯಾಯವೆನಿಸಿತು. ಫೇಸ್ ಬುಕ್ ಮೂಲಕ ಕೆಲವು ಗೆಳೆಯರು ಪುಟ್ಟ ಲೇಖನಗಳನ್ನು ಕಳಿಸುತ್ತಿದ್ದರು.
ಅದಾದ ನಂತರ ಕರೋನ ಸಂದರ್ಭದಲ್ಲಿ Empty space ನ ಪ್ರೇಮ್ ಹಾಗೂ ನಸುಕು ಡಾಟ್ ಕಾಮ್ ನ ವಿಜಯ್ ದಾರಿಹೋಕ ಓಶೋ ಕುರಿತು ಆನ್‌ಲೈನ್ ಉಪನ್ಯಾಸ ಮಾಡಲು ಹೇಳಿದರು. ಅದರ ಭರ್ಜರಿ ಯಶಸ್ಸು ಉತ್ಸಾಹ ಇಮ್ಮಡಿಸಿತು.
ಇದಕ್ಕೆ ಮೊದಲು ಮೈಸೂರಿನ ವಿದ್ಯಾಧರ ವೇಣುಗೋಪಾಲ ಅವರ ಅಲ್ಲಮ – ಓಶೋ ಫೌಂಡೇಶನ್ ಆಯೋಜನೆ ಮಾಡಿದ್ದ ಧ್ಯಾನ ಶಿಬಿರದಲ್ಲಿ ಭಾಗವಹಿಸಿದ್ದೆ. ಇದು ಓಶೋ ಮತ್ತು ನನಗೆ ಇರುವ ಭಾವನಾತ್ಮಕ ಅನುಬಂಧ. ನನ್ನ ಭಾಷಣ ಮತ್ತು ಬರಹ ಅರಿತವರು ‘ಓಶೋ ಸಿದ್ದಾಂತಗಳಿಂದ ಪ್ರಭಾವಿತರಾಗಿದ್ದೀರಿ’ ಎಂಬ ಹಿಮ್ಮಾಹಿತಿಯನ್ನು ನಿರಾಕರಣೆ ಮಾಡಲಿಲ್ಲ.
ಅಮೆರಿಕದ ಸರ್ಕಾರ ಓಶೋನ ಕೈಗೆ ಬೇಡಿ ತೊಡಿಸಿದ್ದರ ನಿಜವಾದ ಕಾರಣ ಮತ್ತು ಅದರ ವಿವರ ತಿಳಿದಿರಲಿಲ್ಲ.ಅಮೆರಿಕ ಸರಕಾರ ತನ್ನನ್ನು ಕೊಲೆ ಮಾಡಲು ಪ್ರಯತ್ನ ಮಾಡಿತು ಎಂಬುದನ್ನು ಓಶೋ ಬರಹಗಳಲ್ಲಿ ಅಸ್ಪಷ್ಟವಾಗಿ ಓದಿದ್ದೆ. ಆದರದು ಅಥೆಂಟಿಕ್ ಎನಿಸಿರಲಿಲ್ಲ.
ಓಶೋನ ಅದ್ಭುತ ವಿಚಾರಧಾರೆಯನ್ನು ಯಾವುದೇ ಕಾರಣದಿಂದ ನಿರಾಕರಿಸಲಾಗದು. ಅವನಿಗೆ ಅವನೇ ಸಾಟಿ. ಸಾವಿರಾರು ಪುಸ್ತಕಗಳ ಪ್ರಕಟಣೆ, ಅಷ್ಟೇ ಪ್ರಮಾಣದ ವಿಡಿಯೋಗಳ ಮೂಲಕ ಓಶೋ ಇನ್ನೂ ಅಜರಾಮರ. ‘ನೆವರ್ ಬಾರ್ನ್ ನೆವರ್ ಡಾಯ್’ ಎಂಬ ಮಾತು ಅಕ್ಷರಶಃ ಸತ್ಯ. ಅಮೆರಿಕದ ಘಟನೆಗಳು ಕೇವಲ ವೈಯಕ್ತಿಕ ಬದುಕಿನ ಮಿತಿ. ಅದಕ್ಕೂ ಮತ್ತು ಅವನ ಪ್ರಖರ ವಿಚಾರಧಾರೆಗಳಿಗೆ ಯಾವುದೇ ರೀತಿಯ ಸಂಬಂಧ ಕಲ್ಪಿಸಲಾಗದು; ಕಲ್ಪಿಸಬಾರದು ಕೂಡ. ನಮ್ಮ ನೆಮ್ಮದಿಗೆ ಓಶೋ ವಿಚಾರಧಾರೆಗಳೇ ಮುಖ್ಯ.
ಮುಖ್ಯವಾಗಿ ನನಗೆ ಮಾ ಶೀಲಾ ಆನಂದ ಕುರಿತು ಯಾವುದೇ ವಿವರಗಳು ಗೊತ್ತಿರಲಿಲ್ಲ. ಆದರೆ ಸದರಿ ಸಾಕ್ಷ್ಯಚಿತ್ರ ಅವಳ ಸಾಮರ್ಥ್ಯ, ದೌರ್ಬಲ್ಯ, ಅವಕಾಶ ಮತ್ತು ಸವಾಲುಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗಿ, ನಿಜವಾಗಿಯೂ ಬೆರಗು ಮೂಡಿಸಿತು.
ಓಶೋನ ಸೆಕ್ರೆಟರಿ, ಕೇವಲ ಸೆಕ್ರೆಟರಿ ಆಗದೇ ಎಲ್ಲವೂ ಆಗಿ ಇಡೀ ಅಮೆರಿಕ ಸರಕಾರವನ್ನು ನಿದ್ದೆಗೆಡಿಸಿದ್ದು ಸಾಮಾನ್ಯ ಸಂಗತಿಯಲ್ಲ. ಓಶೋನ ಎಲ್ಲಾ ಮಹತ್ವಾಕಾಂಕ್ಷೆ ಮತ್ತು ಆಸೆಗಳನ್ನು ಪೂರೈಸುವ ಅವಳ ತಾಕತ್ತು unbelievable.
ಓಶೋನ ಪ್ರಭಾವವನ್ನು ಜಾಣ್ಮೆಯಿಂದ ಬಳಸಿಕೊಂಡು, ಒಂದೇ ವರ್ಷದಲ್ಲಿ ಅರವತ್ತು ಸಾವಿರ ಎಕರೆಯ ಬಂಜರು ಭೂಮಿಯನ್ನು ಸ್ವರ್ಗವನ್ನಾಗಿ ನಿರ್ಮಿಸಿದ ಮಹಾನ್ ಛಲಗಾರ್ತಿ. ರಜನೀಶಪುರಂ ಕೇವಲ ಆಶ್ರಮವಾಗದೆ ಒಂದು ನಗರವಾಗಿ ಎಲ್ಲಾ ಸೌಲಭ್ಯ ಪಡೆದುಕೊಂಡಾಗ ಅಮೆರಿಕ ಸರ್ಕಾರ ಬೆಚ್ಚಿ ಬೀಳುತ್ತದೆ. ಧರ್ಮ ಮತ್ತು ರಾಜಕಾರಣವನ್ನು ಪ್ರಶ್ನೆ ಮಾಡಿದ ವಿಧಾನ ಅವರನ್ನು ಕೆರಳಿಸುತ್ತದೆ. ಒಂದು ವೈಭವೋಪೇತ, ಐಷಾರಾಮಿ ಸ್ವರ್ಗದಲ್ಲಿ ಮೈಮರೆತ ಓಶೋಗೆ ತನ್ನ ಆಪ್ತೆಯ ಚಟುವಟಿಕೆಗಳ ಮಾಹಿತಿ ದೊರಕಲೇ ಇಲ್ಲ. ಅದೇ ಓಶೋಗೆ ಮುಳುವಾಯಿತು. ಶ್ರೀಮಂತರ ಸಂತ ಎಂದು ಹೇಳಿಕೊಂಡ ಅವನಿಗೆ ಅಸಂಖ್ಯ ರೋಲ್ಸ ರಾಯ್ ಕಾರುಗಳು, ಚಾರ್ಟರ್ ವಿಮಾನಗಳು ಅಬ್ಬಾ! ಅಂತರರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿಗಳು ಓಶೋಗೆ ಹತ್ತಿರವಾದದ್ದು ಮತ್ತು ಸರಕಾರ ಇವರ ರಾಜಕೀಯ ಹಸ್ತಕ್ಷೇಪ ಸಹಿಸದ ಕಾರಣದಿಂದ ಶೀಲಾ ಆತಂಕಕ್ಕೆ ಒಳಗಾದಳು. ಅರಿವಿಲ್ಲದಂತೆ ತಪ್ಪು ಮಾಡುತ್ತಲೇ ಹೋಗುತ್ತಾಳೆ.
ಈ ಸಾಕ್ಷ್ಯಚಿತ್ರದ ವಿಶೇಷತೆಯೆಂದರೆ ಪ್ರತಿಯೊಂದು ಘಟನೆಗಳ ವಿಡಿಯೋ ದಾಖಲೆಗಳ ಸಂಗ್ರಹ ಮತ್ತು ಜೋಡಣೆ. ಎಂಬತ್ತರ ದಶಕದ ಪ್ರತಿಯೊಂದು ಘಟನೆಗಳ ವ್ಯವಸ್ಥಿತ ವಿಡಿಯೋ ಸಾಕ್ಷ್ಯಗಳು ನಾಶವಾಗದೇ ಉಳಿಸಿಕೊಂಡದ್ದು. ಈಗಿನ ಮತ್ತು ಅಂದಿನ ವಿಡಿಯೋ ಕ್ಲಿಪ್ಪಿಂಗ್ಸ್ ಮತ್ತು ವರ್ತಮಾನದ ಸಂದರ್ಶನಗಳು ನಮ್ಮನ್ನು ಕಟ್ಟಿ ಹಾಕುತ್ತವೆ. ಇಡಿಯಾಗಿ ಒಟ್ಟು ಆರು ತಾಸುಗಳ ಸಾಕ್ಷ್ಯಚಿತ್ರ ನೋಡಿಸಿಕೊಂಡು ಹೋಗುತ್ತದೆ. ಅಷ್ಟೇ ಪಟ್ಟು ಹಿಡಿದು ನೋಡಿದ್ದು ನನಗೆ ವಿಸ್ಮಯ. ಪುಸ್ತಕದಷ್ಟೇ ಪ್ರಭಾವವನ್ನು, ಒಂದು ಗುಣಮಟ್ಟದ ಸಾಕ್ಷ್ಯಚಿತ್ರ ಸಾಧ್ಯವಾಗಿಸುತ್ತದೆ ಎಂಬುದಕ್ಕೆ ನೆಟ್‌ಫ್ಲಿಕ್ಸ್ ಪರಿಶ್ರಮ ಸಾಕ್ಷಿ.
ಇಡೀ ಚಿತ್ರ ಓಶೋನ ಬದುಕಿಗೆ ಸಂಬಂಧಿಸಿದ್ದರೂ ಇದರ ದುರಂತ ನಾಯಕಿ ಮಾತ್ರ ‘ಮಾ ಶೀಲಾ ಆನಂದ’. ಅವಳ ಧೈರ್ಯ, ಆತ್ಮವಿಶ್ವಾಸ ಮತ್ತು ಜೀವನೋತ್ಸಾಹ ಮನುಕುಲಕ್ಕೆ ಖಂಡಿತವಾಗಿ ಪ್ರೇರಣೆ. ಆದರೆ ಅವಳು ಅದನ್ನು ಬಳಸಿಕೊಂಡ ರೀತಿ ಮತ್ತು ವಿಧಾನ ತಪ್ಪಿರಬಹುದು. ಅದರಂತೆ ಅಮೆರಿಕ ಸರ್ಕಾರ ಬಳಸಿದ ಕಾನೂನು ಎಂಬ ಅಸ್ತ್ರದ ಕುರಿತು ಮಾತನಾಡಲಾಗದು. ಏನೇ ಇರಲಿ ಎಲ್ಲ ತಂತ್ರಜ್ಞರ ಕುಶಲತೆ ಮತ್ತು ಸಹನೆಗೆ ನೂರಾರು ನಮನಗಳು.
ಕೊನೆ ಮಾತು – ನೋಡಿ ಭಾವುಕನಾಗಿ ಹಾಸಿಗೆ ಸೇರಿದಾಗ ಅನಿಸಿದ್ದು- ‘ಸಾಧಕರು ಸಾಮ್ರಾಜ್ಯ ಕಟ್ಟಬಾರದು.’
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ