ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ದಾಕ್ಷಾಯಣಿ ಯಡಹಳ್ಳಿ
ಇತ್ತೀಚಿನ ಬರಹಗಳು: ಡಾ. ದಾಕ್ಷಾಯಣಿ ಯಡಹಳ್ಳಿ (ಎಲ್ಲವನ್ನು ಓದಿ)

ನಿನ್ನ ಬಸಿರನು ಹೊತ್ತು
ನಿನ್ನ ಹೆಸರಿನ ತೊತ್ತು
ನಿನ್ನ ಮಾತಿಗೆ ಸೋತುದಕೆ ಯಾವ ಫಲವೊ ||
ಮಡದಿಯಲ್ಲವು ನೀ ಎನ್ನ
ಹೃದಯದ ರಾಜ್ಞಿ
ಎನ್ನಲು ಕಂಡದ್ದು ಯಾವ ನೆಲೆಯೊ ||
ನಿನ್ನಲ್ಲಿ ನಾ ಕಲೆತು
ನನ್ನಲ್ಲಿ ನೀ ಬೆರೆತು
ಜೀವನದ ಹೊಸರಾಗ ಹಾಡಿದಂದು
ಮನೆಯ ಅಂಗಳದಲ್ಲಿ
ನವಿಲು ಕುಣಿದಾಡಿತ್ತು
ಹೃನ್ಮನದಿ ಕಾರಂಜಿ ಪುಟಿಯಿತಂದು ||
ಕೈ ಬೀಸಿ ನಡೆವಂಥ​
ಭಟ್ಟಾರಕ ನೀನಾದೆ
ಕಣ್ಣಲ್ಲಿ ಕಂಡಿತ್ತು ಹೂವ ಸಂತೆ ||
ಮಾತಿನ ಅರ್ಥವು
ಕೈಗೆ ಎಟುಕಲಿಲ್ಲ
ಅಭವನಾಟವೊ ಇಲ್ಲ ನರನ ಗೀತೆ
ಸಪ್ತ ವರ್ಣದ ಕನಸು
ಹಿಂಜಿದರಳೆಯಾಗಿ
ಗಾಳಿಗೆ ಎತ್ತೆತ್ತ ಹಾರುತಿತ್ತು ||
ಹಿಡಿಯಹೋದರೆ ತಂತು
ಅಡಗಿ ಹೋಯಿತು ಎಂತು
ಭ್ರಮೆಯ ಸಾಗರದಿ ಬಳಲುತಿದ್ದೆ ||
ಬಳ್ಳಿಯ ಹೊರೆ ಹೊತ್ತು
ಮೆಲ್ಲಗೆ ನಡೆವಾಗ
ನರಿಯಂತೆ ನೀ ಕೂಗು ಹಾಕುತಿದ್ದೆ ||
ಅಮ್ಮಾ ಎಂಬ ಧ್ವನಿಯು
ಮಗಳೇ ಎಂಬ ಸ್ವರವು
ನೊಗವನ್ನು ಕೊರಳಿಗೆ ಏರಿಸಿದ್ದೆ ||
ತಡವರಿಸುವ ಹೆಜ್ಜೆಗಳ
ಬೀಳದಂತಿರಿಸುತ್ತ
ಗಾಣದ ಸುತ್ತಲೂ ಸವೆಯುತಿದ್ದೆ ||
ಬೆನ್ನ ಹಿಂದಿರುವಾತ
ಕೈಯಲ್ಲಿ ಕೋಲಿರಲು
ಮೆಲ್ಲನೆ ಬೆನ್ನನು ಸವರುತಿದ್ದೆ ||
ಮುಳ್ಳು ಬೇಲಿಯ ಮೇಲೆ
ಹರಿದ ಸೀರೆಯ ತುಂಡು
ಬೆಚ್ಚನೆಯ ಗೂಡೆಂದು ಬೀಗುತಿದ್ದೆ ||
ಪಂಜರದೊಳಗಿನ ಪಕ್ಷಿ
ಧ್ವನಿಯು ಸೋರಿತು ನಿತ್ಯ
ಕೋಲೆ ಬಸವನಂತೆ ಆಡುತಿದ್ದೆ ||
ನೀನು ಬಿಡಿಸಿದ ಚಿತ್ರ
ನಿನ್ನ ಮನಸಿನ ಗಾತ್ರ
ನಾನೆಲ್ಲಿ ಇರುವೆನೋ ಕಾಣದಾದೆ ||
ಸಂತುಲನವಿಲ್ಲದೆ
ಬಂಡಿ ಮುನ್ನಡೆಯುತಿದೆ
ದಾರಿ ಎಂತೋ ಏನೋ ತಿಳಿಯದಾದೆ ||