ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ದಾಕ್ಷಾಯಣಿ ಯಡಹಳ್ಳಿ
ಇತ್ತೀಚಿನ ಬರಹಗಳು: ಡಾ. ದಾಕ್ಷಾಯಣಿ ಯಡಹಳ್ಳಿ (ಎಲ್ಲವನ್ನು ಓದಿ)

ಹಾರ್ದಿಕ ಮನೆಯೆಡೆಗೆ ಬರುತ್ತಿದ್ದ. ಅವನ ಕೈಯಲ್ಲೊಂದು ನಾಯಿ ಮರಿ. ಅದರ ತಲೆಯ ಮೇಲೆ ಕೈಯಾಡಿಸುತ್ತಿದ್ದ. ಸಿಳ್ಳು ಹಾಕುತ್ತಿದ್ದುದರಿಂದ ಬಹಳ ಖುಷಿಯಲ್ಲಿರುವಂತೆ ಕಾಣುತ್ತಿತ್ತು. ಆಗ ಸಂಜೆ ಐದು ಗಂಟೆಯ ಸಮಯ. ಅವನನ್ನು ನೋಡಿದ, ಅಲ್ಲಿ ಆಟವಾಡುತ್ತಿದ್ದ ಬಿಡಾರದ ಮಕ್ಕಳ ಗಮನವೆಲ್ಲ ಅವನೆಡೆಗೆ ಹೋಯಿತು. ಕುಂಯ್ಗುಡುತ್ತಿದ್ದ ಕುನ್ನಿ ಅವರನ್ನು ಸೆಳೆಯಿತು. ಆಟವನ್ನು ನಿಲ್ಲಿಸಿ ಅವನೆಡೆಗೆ ಬಂದರು. ಅಣ್ಣಾ ಎಂದೆ ಅವನನ್ನು ಕರೆಯುವವರು. ಅವನಿಗಿಂತ ಸಣ್ಣವರು. ಏನೊ ಅಣ್ಣಾ ಅದು ಪುಷ್ಪಕ ಕೇಳಿದ. ನಾಯಿ ಕುನ್ನಿ ಕಾಣೂದಿಲ್ಲಾ ಹೇಳುತ್ತ ತನ್ನ ಮನೆಯ ಮುಂದೆ ಬಂದು ನಿಂತ. ಅಯ್ಯ! ಅಳಾಕ್ಹತ್ತೇತಲ್ಲ ಪ್ರತೀಕ ಕೇಳಿದ. ಮರಿಯನ್ನು ಕೆಳಗಿಡುತ್ತ ಹಾರ್ದಿಕ ಕುಳಿತುಕೊಂಡು ಅದರ ತಲೆ ಬೆನ್ನು ಸವರತೊಡಗಿದ. ನಾಯಿ ಅಳತ್ತೇನೋ ನಿನ್ನಂಗ ರಾಜೀವ ಕೇಳಿದ. ನಾನ್ಯಾವ್ಯಾಗ ಅತ್ತೀನಿ? ಪ್ರತೀಕನ ಉತ್ತರ. ಅವತ್ತ ಅಳಾಕ್ಹತ್ತಿದ್ದಿಲ್ಲೇನು?'ಯಾವತ್ತ’, ಮನ್ನೆ'ಬಿದ್ದಿದ್ಯಾ ಅಳಾಕ್ಹತ್ತಿದ್ದ್ಯಾ,’ ನೀ ಅಳಂಗಿಲ್ಲೇನು ಬಿದ್ರ?'ನಾ ಬಿಳ್ಳಂಗಿಲ್ಲ ನಿನ್ನಂಗ, ಬಿದ್ರೂ ಅಳಂಗಿಲ್ಲ” ಅವರಿಬ್ಬರ ನಡುವೆ ಸುರುವಾಯಿತು.

ಸುಮ್ನಿರ‍್ರೋ, ಇದಕ ಪೆಟ್ಟಾಗೇತಿ ಅದೂ ಅಳಾಕ್ಹತ್ತೇತಿ, ನಾಯಿ ಅಳೋದು ಹಿಂಗ „. ಹೋಗಿ ನಮ್ಮ್ ಮಮ್ಮಿ ಕಡಿಂದ ಡೆಟಾಲು ಮತ್ತ ಅಳ್ಳಿ ಇಸ್ಗೊಂಬಾ ಗಾಯಕ್ಕ ಹಚ್ಚೂಣು. ಪ್ರತೀಕನಿಗೆ ಹೇಳಿದ.ತಡಿ ಸಲ್ಪು, ಇದ್ನ್ ಮುಟ್ಲಿ?' ಬಾಗಿಲಲ್ಲಿ ಮಕ್ಕಳ ಗದ್ದಲವನ್ನು ಕೇಳಿದ ಸೀಮಾ ಹೊರಬಂದಳು. ಅವರೆಲ್ಲಾ ಅದರ ಅಂದ ಚೆಂದ ನೋಡುತ್ತಾ ಮೈಮೇಲೆ ಕೈಯಾಡಿಸುತ್ತಾ ಕುಳಿತುಕೊಂಡಿದ್ದರು. ಬಿಳಿ ಬಣ್ಣದ ಮುದ್ದಾದ ಮರಿ.ಯಾರೊ ಕಲ್ಲಿನಿಂದ ಹೊಡೆದಿದ್ದರು ಪಕ್ಕಡಿಯಲ್ಲಿ ಗಾಯವಾಗಿತ್ತು.ಚಿಕ್ಕ ಮರಿ;ತಾಯಿ ಎಲ್ಲಿತ್ತೊ ಏನೋ, ರಸ್ತೆಯ ಪಕ್ಕದಲ್ಲಿ ಬಿದ್ದಿತ್ತು ಅದನ್ನೆತ್ತಿಕೊಂಡು ಬಂದಿದ್ದ.

ಸೀಮಾ ಕೇಳಿದಳು. ಏನು ಹಾರ್ದಿಕ್ ಎಲ್ಲಿಂದ್ ತಂದೊ ಈ ಕುನ್ನಿ? ಇದ್ಕ್ ಗಾಯ ಆಗೇತಿ ಮಮ್ಮಿ, ರಸ್ತಾದಾಗ ಬಿದ್ದ‍್ಕೊಂಡಿತ್ತು ಅದರಮ್ಮಾ ಎಲ್ಲೂ ಕಾಣಲಿಲ್ಲಾ ಅದ್ಕ„ ತೋಂಬದೀನಿ. ಅವಳೆಡೆಗೆ ನೋಡುತ್ತಾ ಸಲ್ಪು ಡೆಟಾಲ್ ಕೊಡಲ್ಲಾ ಮಮ್ಮಿ. ಅಂದ.ಡೆಟಾಲ್ ಯಾಕ „? ‘ ಗಾಯಕ್ಕ್ ಹಚ್ಚ‍್ತೀನಿ ಪಾಪ ! ನೋಡು ಹ್ಯಾಂಗ್ ಅಳಾಕ್ಹತ್ತೇತಿ'. ಮರಿ ಒಂದೇ ಸವನೆ ಕುಯ‍್ಗುಡುತ್ತಲಿತ್ತು. ಡೆಟಾಲ್ ತಂದು ಕೊಟ್ಟಳು.ಅಳ್ಳಿ’. ಅಳ್ಳಿಲ್ಲಪಾ, ಅದ್ನ್ ಎಲ್ಲಿಂದ್ ತಂದೀದಿ ಹೋಗಿ ಅಲ್ಲೆ ಬಿಟ್ಬಾ, ಅದರವ್ವ ಹುಡಿಕ್ಯಾಡಿಕೊಂಡ ಬಂದ್ರ ಕಡಿತೇತಿ ನೋಡು ನಿನ್ನ' ಎಚ್ಚರಿಕೆ ಕೊಟ್ಟು ಒಳಹೋದಳು.ಮತ್ತ್ಯಾರರ„ ಕಲ್ಲ್ ಹೊಡ್ದು ಗಾಯಾ ಮಾಡ್ತಾರಾ ಇಲ್ಲೆ ಇರ‍್ಲಿ’ ಅಂದ. `ಯಾರ ಮನ್ಯಾಗರ ಅಳ್ಳಿ ಐತೆನ್ರೊ.?’

`ನಮ್ಮನ್ಯಾಗ ಐತಿ ನಾ ತೊಂಬರ್ತಿನಿ ರಾಜೀವ ಓಡಿದ. ಕ್ಷಣ ಹೊತ್ತಿನಲ್ಲಿ ಅರಳೆಯನ್ನು ತಂದ. ನಮ್ಮ್ಯನ್ಯಾಗ ಯಾವಾಗೂ ಅಳ್ಳಿ ಇರತ್ತ. ತೇಕುತ್ತ ಹೇಳಿದ. ಹಾರ್ದಿಕ ಅರಳೆಯಿಂದ ಡೆಟಾಲ್ ಹಚ್ಚಿದ.

ಹೊರಬಂದ ಸೀಮಾ ಕೇಳಿದಳು, ತಿನ್ನಾಕೇನ್ ಕೊಡ್ತೀಯೊ?'ಚಪಾತಿ ತಿಂತೈತದು, ತಿಂತೀಯಿಲ್ಲ ಟಾಮಿ ಕೇಳಿದ. ಎಲ್ಲ್ಯದಾವ ಚಪಾತಿ?ನೀ ಮಾಡ್ತೀಯಲ್ಲಾ ಅವಾಗ ಇದಕೊಂದ್ ಮಾಡು’.

ಆಕೆ ಒಳ ಸರಿದಳು. ಮಗನ ಈ ದಯಾಗುಣ ಆಕೆಗೆ ಕಷ್ಟದಾಯಕವಾಗಿತ್ತು. ಮೂರು ಜನರ ಹೊಟ್ಟೆ ಹೊರೆಯುವದು ಸುಲಭವಾಗಿರಲಿಲ್ಲ. ನಾಲ್ಕನೇ ಜೀವ ಭಾರವೇ. ಆಕೆಯ ಗಂಡ ಇಬ್ಬರು ಮಕ್ಖಳನ್ನು ಬಿಟ್ಟು ಸ್ವರ್ಗಸ್ಥನಾಗಿದ್ದ. ಒಂದು ದಿನ ಕೆಲಸಕ್ಕೆಂದು ಹೋದವನು ಹಿಂದುರುಗಿ ಬರಲೇ ಇಲ್ಲ. ರೇಲ್ವೆ ಆಘಾತದಲ್ಲಿ ಮೃತನಾಗಿದ್ದ. ಸರಕಾರವು ಮೃತರ ಕುಟುಂಬಕ್ಕೆ ಒಂದು ಲಕ್ಷ ರೂ.ಕೊಡುವದಾಗಿ ಘೋಷಿಸಿತ್ತು. ಆ ಹಣ ಬರುವವರೆಗೆ ಆಕೆಗೆ ಅಷ್ಟು ಸಾಲವೆ ಆಗಿತ್ತು. ಬಂದ ಹಣ ಯಾವ ಮೂಲೆಗೂ ಸಾಲಲಿಲ್ಲ. ಮಕ್ಕಳ ಶಿಕ್ಷಣ, ಕಾಯಿಲೆ ಕಸಾಲೆಗಳಿಗೆ ಹಣ ಹೊಂದಿಸುವದು ಡೊಂಬರಾಟದಂತಾಗಿತ್ತು. ಕೇವಲ ಎಸ್ ಎಸ್ ಎಲ್ ಸಿ. ಪಾಸಾದವಳಿಗೆ ಎಲ್ಲಿಯೂ ನೌಕರಿ ಅನ್ನುವಂತಹದ್ದು ಸಿಗಲಿಲ್ಲ. ಚಿಕ್ಕ ಮಕ್ಕಳನ್ನು ಬಿಟ್ಟು ಹೋಗುವದು ಸಾಧ್ಯವೂ ಇರಲಿಲ್ಲ. ಅವರಿವರ ಮನೆಗಳಲ್ಲಿ ಅಡುಗೆ ಮಾಡಿ ಹೊಟ್ಟೆ ಹೊರೆಯತೊಡಗಿದ್ದಳು. ಈಗ ಕೆಲವು ತಿಂಗಳ ಹಿಂದೆ ಮಗಳಿಗೆ ನೌಕರಿ ಸಿಕ್ಕಿತ್ತು. ಮಗ ಇನ್ನೂ ಕಾಲೇಜಿನಲ್ಲಿದ್ದ.

ಮಕ್ಕಳು ಮಂಜಿನಂತಹ ಅದರ ಬಿಳಿ ಬಣ್ಣವನ್ನು ನೋಡಿ ಅದರ ಮೈಮೇಲೆ ಕೈಯಾಡಿಸಿ ಸಂತೋಷಿಸುತ್ತಿದ್ದರು. ಅಳಬ್ಯಾಡಾ ನಿಂಗ್ ಔಷ್ಧಿ ಹಚ್ಚತಿನಿ„ ಈಗ ನಾಳ್ಗೆ ಎಲ್ಲಾ ಗಾಯ ಮಾಯತ್ತ ಏನ್ ಟಾಮಿ ಎನ್ನುತ್ತ ಅದರೊಂದಿಗೆ ಸಂಭಾಷಿಸುತ್ತಿದ್ದರು ಮಕ್ಕಳು. ಹೌದಲ್ಲ ಅಣ್ಣಾ ಎಂದು ಅವನ ಕಡೆಗೆ ನೋಡುವರು. ಆತ ಹುಂ ಎನ್ನುವ. ಕೆಲ ಮಕ್ಕಳು ತಾಯಂದಿರ ಕರೆಗೆ ಎದ್ದು ಹೋದರು. ಹಾರ್ದಿಕ ತನ್ನ ಪ್ಯಾಂಟಿನ ಹಳೆಯ ಪಟ್ಟಾ ತೆಗೆದುಕೊಂಡು ನಾಯಿಮರಿಯ ಕೊರಳಿನ ಅಳತೆಗೆ ಸರಿಯಾಗಿ ಕತ್ತರಿಸಿದ. ಅದರ ಕೊರಳಿಗೆ ಪಟ್ಟಿ ಹಾಕಿದ. ತಾಯಿ ಇತ್ತೀಚೆಗೆ ಒಂದು ಪ್ರೆóಶರ್ ಕುಕ್ಕರ್ ಕೊಂಡಿದ್ದಳು. ಅದರ ಡಬ್ಬ ಮನೆಯಲ್ಲಿ ಇತ್ತು. ಅದನ್ನು ತಂದ.

ಆ ಡಬ್ಬಕ್ಕೆ ನಾಲ್ಕೂ ಬದಿಗಳಲ್ಲಿ ಒಂದೊಂದು ಇಂಚಿನಷ್ಟು ರಂಧ್ರವನ್ನು ಮಾಡಿದ. ಸಂಜೆ ಏಳು ಗಂಟೆಯಾಗುತ್ತಲಿತ್ತು. ಸಿದ್ಧಾರ್ಥ, ಪುಷ್ಪಕ ರಾಜೀವ, ಪ್ರತೀಕ ಇವನ ಕೆಲಸವನ್ನು ನೋಡುತ್ತ ನಡು ನಡುವೆ ಪ್ರಶ್ನೆ ಕೇಳುತ್ತಾ ಇನ್ನೂ ಕುಳಿತೇ ಇದ್ದರು. ಆಗ ಮುನ್ಸಿಪಾಲಿಟಿಯ ನೀರು ಪೂರೈಕೆಯಾಗುವ ಸಮಯ. ಎಲ್ಲ ತಾಯಂದಿರಿಗೂ ನೀರು ತುಂಬುವ ಅವಸರ. ಅಣ್ಣಾ ನಾನಿವತ್ತ ನಮ್ಮನಿಗೆ ಒಯ್ಲೀ ಇದ್ನ್' ಪ್ರತೀಕ ಕೇಳಿದ. ಒಯ್ದ್ ಏನ್ಮಾಡ್ತಿ ರಾಜೀವನೆಂದ, ನಮ್ಮವ್ವಗ ತೋರಸ್ತೀನಿ.ನಿಮ್ಮವ್ವ ಎಂದೂ ನಾಯಿನ್ನ ನೋಡಿಲ್ಲೇನು? ರಸ್ತಾದಾಗ ರಗಡ ನಾಯಿ ಇರ್ತಾವಲ್ಲ. ನೋಡಿರ್ಬೆಕು, ಆದ್ರ ಇದು ಸಾ„ಣ್ದ ಐತಿ, ಚೆಂದೈತಿ ಅದ್ಕ„ ಮತ್ತ್ ನಮ್ಮವ್ವ ಅದ್ಕ್ ಚಪಾತಿನೂ ಕೊಡ್ತಾಳಾ, ಒಯ್ಲಿ ಅಣ್ಣಾ,?ನಮ್ಮವ್ವನೂ ಕೊಡ್ತಾಳಾ ಹಾಲುನೂ ಕೊಡ್ತಾಳಾ ನಾ ಒಯ್ತೀನಿ. ಅಣ್ಣಾ ಒಯ್ಲೀ.’

ಇಬ್ಬರದೂ ವರಸೆ ಪ್ರಾರಂಭವಾಗಲು ಸುಮ್ಕಿರ‍್ರೋ ಎಂದ ಹಾರ್ದಿಕ . ಯಾರೂ ಒಯ್ಯದ್ ಬ್ಯಾಡಾ, ಅದ್ರ್ ಗಾಯ ಮಾಯ್ಲಿ ಮದ್ಲ್„. ಆ ಮ್ಯಾಕ ಒಯ್ಯೀರಂತ. ಚಪಾತಿ ನಮ್ಮವ್ವ ಮಾಡ್ಯಾಳೀಗ. ಮನೀಗ್ಹೋಗಿ ನಿಮ್ಮ್ ಹೋಂ. ವರ್ಕ ಮಾಡ್ಕೋರಿ. ಮಮ್ಮೀ, ಒಳಗೆ ಮುಖ ಮಾಡಿ ತಾಯಿಯನ್ನು ಕರೆದ, ಚಪಾತಿ ಮಾಡಿದ್ರ ಕೋಡಲ್ಲಾ. ಚಪಾತಿ ಇನ„ ಮಾಡಿಲ್ಲಾ ತೊ, ಈ ಹಾಲಿಡು. ಒಂದು ಪ್ಲಾಸ್ಟಿಕ್ ಬಟ್ಟಲನ್ನು ಕೈಯಲ್ಲಿಟ್ಟಳು. ಅದರಲ್ಲಿ ಅರ್ಧ​ಕ್ಕಿಂತಲೂ ಕಡಿಮೆ ಹಾಲಿತ್ತು. `ಇಷ್ಟ „? ‘ ಈಗ ಇಷ್ಟ್ ಸಾಕು ನೀರ್ ತುಂಬಿದ ಮ್ಯಾಲೆ ಚಪಾತಿ ಮಾಡ್ತೀನಿ. ಅವಾಗ ಹಾಕಿ„ಯಂತ. ನೀ ಏನ್ ಅದ್ರ್ ಜೋಡೀನ „ ಕುಂದ್ರತೀಯೊ ಅಭ್ಯಾಸ ಏನಿಲ್ಲಾ,?’ ನಯವಾಗಿ ಅವನನ್ನು ಗದರಿದಳು.

ಬಟ್ಟಲನ್ನು ಕುನ್ನಿಯ ಎದುರು ಇಟ್ಟ. ಲೊಚಲೊಚನೆ ಕುಡಿಯತೊಡಗಿತು. `ಪಾಪ !, ಬಾಳಾ ಹಸು ಆಗೇತಿ ನಮ್ಮನ್ಯಾಗಿಂದ ಸಲ್ಪ್ ಹಾಲ್ ತರ್ಲಿ? ರಾಜೀವ ಕೇಳಿದ. ಬ್ಯಾಡಾ ಇಷ್ಟ್ಕಾಕು ನೀವ್ ಹೋಗ್ರೀಗ ಇಲಾಂದ್ರ್ ನಿಮ್ಮವ್ವ ನನ್ನ್ ಬೆಯ್ಯತಾಳ. ಮಕ್ಕಳು ಹೋದ ಮೇಲೆ ಮರಿಯನ್ನು ರಟ್ಟಿನ ಡಬ್ಬದಲ್ಲಿಟ್ಟು ಒಳಬಂದ.

ಅಷ್ಟರಲ್ಲಿ ಹಾರ್ದಿಕನ ಅಕ್ಕ ಶಲಾಕಾ ಬಂದಳು. ಬಾಗಿಲೆದುರಿಗೆ ಇರುವ ಡಬ್ಬವನ್ನು ನೋಡಿದ ಕೂಡಲೆ ಇಲ್ಯಾಕೈತಿದು ಎನ್ನುತ್ತ ಅದನ್ನು ಕಾಲಿನಿಂದ ಬದಿಗೆ ಸರಿಸಿದಳು. ಇನ್ನೇನು ಎತ್ತಿ ಬಿಸುಡಬೇಕು ಹಾರ್ದಿಕ ಏ ಏ ಏ, ಎನ್ನುತ್ತ ಧಾವಿಸಿ ಹೊರಬಂದ. ನಾಯಿ ಮರಿ ಐತಿ ಅದ್ರಾಗ ಮುಟ್ಟಬಾಡಾ ಅಂದ. ಹೌದಾ, ಎಲ್ಲಿಂದ ತಂದಿ, ಇದ್ರ್ ತಾಯೆಲ್ಲೆ ?ಗೊತ್ತಿಲ್ಲ.’ ಹುಡಿಕ್ಯಾಡಿಕೊಂಡ ಬಂದ್ರ ನಿನ್ನ ಕಡಿತೇತಿ ನೋಡು, ಎನ್ನುತ್ತ ಒಳಹೋದಳು.ನಾಯಿ ಎಲ್ಲೂ ಇರ್ಲಿಲ್ಲ ಅದ್ಕ್ ತೊಂಬಂದ್ಯಾ. ಅಂದ ಅವನು ಆಗೀಗ ಗಾಯಗೊಂಡಿರುವ ನಾಯಿ ಇಲ್ಲವೇ ಬೆಕ್ಕಿನ ಮರಿಗಳನ್ನು , ಪಾರಿವಾಳಗಳ​ನ್ನು ತರುತ್ತಿದ್ದ. ತುಸು ದಿನ ಔಷಧೋಪಚಾರ ಮಾಡಿದ ಮೇಲೆ ತಾಯಿಯ ಗದರಿಕೆಯಿಂದಾಗಿ ದೂರದ ರಸ್ತೆಗೆ ಒಯ್ದು ಬಿಟ್ಟು ಬರುತ್ತಿದ್ದ. ಬೆಕ್ಕುಗಳು ಪಾರಿವಾಳಗಳು ತಾವಾಗಿಯೇ ಹೋಗುತ್ತಿದ್ದವು.

ಸೀಮಾ ಚಪಾತಿಯನ್ನು ಮಾಡಿದಳು, ನಾಯಿಮರಿಗಾಗಿ ಒಂದು ಚಿಕ್ಕ ಚಪಾತಿಯನ್ನು ಮಾಡಿ ಮೆತ್ತಗೆ ಬೇಯಿಸಿ ಮಗನ ಕೈಯಲ್ಲಿಟ್ಟಳು. ಸಣ್ಣ್ ಚೂರ್ಮಾಡಿ ಹಾಕದ್ಕ.' ಬಟ್ಟಲಲ್ಲಿ ಚಪಾತಿಯನ್ನು ಹಾಕಿ ನಾಯಿಯನ್ನು ಹೊರತೆಗೆದ. ಬಟ್ಟಲನ್ನು ಅದರ ಎದುರಿಗೆ ಇಟ್ಟ. ತಿನ್ನತೊಡಗಿತು. ಮತ್ತೊಮ್ಮೆ ಗಾಯಕ್ಕೆ ಡೆಟಾಲ್ ಹಾಕಿ ಸೊಫ್ರೊಮೆಷಿನ್ ಕೂಡ ಹಚ್ಚಿದ. ಶಲಾಕಾ ಹೊರಬಂದಳು. ಯಾರ್ದೊ ಇದು ಎಲ್ಲಿಂದ್ತಂದಿ? ಮರಿಯನ್ನು ನೋಡಿ ಕೇಳಿದಳು. ಅಲ್ಲೇ ಕೇಳ್ಕರ ರೋಡ್ನಾಗಿತ್ತು ತೋಂಬದೀನಿ.ಯಾರರ ಸಾಕಿದ್ ನಾಯೇನ? ಅವ್ರು ಹುಡಿಕ್ಯಾಡಿಕೊಂಡ್ ಬಂದ್ರ„ ಹೊಡಿತಾರ ನೋಡ್ ನಿನ್ನ.’ಎಚ್ಚರಿಸಿದಳು.

ಸಾಕ್ದವ್ರು ರಸ್ತಾದಾಗ್ಯಾಕ ಒಕ್ಕೊಡ್ತಾರಾ ಬೀದಿ ನಾಯಿನ„ ಇದು ಅಂದ. ಚೆಂದೈತಿ ಅದರ ತಲೆಯ ಮೇಲೆ ಕೈಯಾಡಿಸುತ್ತ ಹೇಳಿದಳು. ತಾಯಿ ಕರೆದಳು ಉಣ್ಣಾಕ ಬಾರೋ. ನಾ ಉಂಡ್ ಬರ್ತಿನಿ ನೀ ಚಪಾತಿ ತಿನ್ನು ಎಂದು ನಾಯಿಗೆ ಹೇಳಿ ಅದರ ತಲೆಯ ಮೇಲೆ ಕೈಯಾಡಿಸಿ ಒಳ ಹೋದ. ಆತ ಹೊರಬಂದಾಗ ಅದು ಮಲಗಿಕೊಂಡಿತ್ತು. ಬಟ್ಟಲಲ್ಲಿ ಚಪಾತಿಯ ಒಂದು ಚಿಕ್ಕ ತುಂಡಿತ್ತು. ಬಟ್ಟಲನ್ನು ಪಕ್ಕಕ್ಕೆ ಸರಿಸಿ ಮರಿಯನ್ನು ಡಬ್ಬದಲ್ಲಿರಿಸಿದ, ದಿನ ಸರಿಯಿತು.

ಬೆಳಿಗ್ಗೆ ಎದ್ದವನೆ ಡಬ್ಬದಿಂದ ಮರಿಯನ್ನು ಹೊರತೆಗೆದ. ಅದರಲ್ಲಿ ಹೊಲಸು ಮಾಡಿತ್ತು. ಡಬ್ಬವನ್ನೊಯ್ದು ಕಸದ ಡಬ್ಬದಲ್ಲಿ ಹಾಕಿ ಬಂದ, ಅಲ್ಹೋಗಿ ಮಾಡ್ಬಕು ಕಸದ ಡಬ್ಬದೆಡೆಗೆ ಕೈ ತೋರಿಸಿದ. ಕಾಲೇಜಿಗೆ ಹೋಗುವ ಮೊದಲು ಅದರ ಗಾಯಕ್ಕೆ ಮತ್ತೊಮ್ಮೆ ಔಷಧಿ ಹಚ್ಚಿದ. ಬಟ್ಟಲಲ್ಲಿ ಬಿಸ್ಕೀಟು ಮತ್ತು ಹಾಲು ಹಾಕಿದ. ಇಲ್ಲೆ ಹೊಲ್ಸ್ ಮಡ್ಬಾಡಾ ಅಲ್ಹೋಗಿ ಮಾಡ್ಬಾ. ದೂರದಲ್ಲಿದ್ದ ಕಸದ ಡಬ್ಬದೆಡೆಗೆ ಕೈ ತೋರಿಸುತ್ತ ಹೇಳಿದ. ಮಕ್ಕಳೆಲ್ಲಾ ಶಾಲೆಗೆ ಹೋಗುವ ಮೊದಲು ಅದನ್ನೊಮ್ಮೆ ಮಾತಾಡಿಸಿ ಅದರ ಮೈ ಮೇಲೆ ಕೈಯಾಡಿಸಿ ಹೊದರು. ಎಲ್ಲೂ ಹೋಗ್ಬಾಡಾ ಎಂದು ಹೇಳಲು ಮರೆಯಲಿಲ್ಲ.

ಮಮ್ಮೀ ಅದ್ಕ್„ ಚಪಾತಿ ಕೊಡ್ತೀ ಆ ಮ್ಯಾಕ„ ತಾಯಿಯನ್ನು ಕೇಳಿದ. ಹೂಂ. ಹೋಗು ಅದ್ನೂ ತೋಂಡ್ ಹೊಕ್ಕಿಯೇನ ಕೇಳಿದಳು. ಇಲ್ಲಾ ನಿಂಗ್ ನೆಪ್ಪ್ ಮಾಡ್ದ್ಯಾ ಅಂದ. ಎರಡು ದಿನದಲ್ಲಿ ಹಾರ್ದಿಕನ ಆರೈಕೆ ಹಾಗೂ ಮಕ್ಕಳ ಪ್ರೇಮಸ್ಪರ್ಶದಿಂದಾಗಿ ನಾಯಿ ಮರಿ ಅತ್ತಿತ್ತ ಓಡಾಡತೊಡಗಿತು. ಹಾರ್ದಿಕ ಹೇಳಿದಂತೆ ಕೇಳತೊಡಗಿತು. ಮಕ್ಕಳಿಗೆ ಅದನ್ನು ನೋಡಿ ಖುಷಿಯೋ ಖುಷಿ. ಶಾಲೆಗೆ ಹೋಗುವಾಗ, ಬಂದ ಕೂಡಲೆ, ಸಂಜೆ ಆಟಕ್ಕೆ ಹೋಗುವಾಗ ಅದನ್ನು ಮಾತಾಡಿಸಿಯೇ ಹೋಗುವರು. ಅದು ಹಾರ್ದಿಕನ ಮನೆಯಿಂದ ನಾಲ್ಕಾರು ಫೂಟು ಅಂತರದಲ್ಲಿಯೇ ಓಡಾಡಿಕೊಂಡಿತ್ತು. ಹಾರ್ದಿಕ ಇಲ್ಲಿ ಹೊಲಸು ಮಾಡಬಾರದೆಂದು ಹೇಳಿದ ಮೇಲೆ ಮಾಡಿರಲಿಲ್ಲ. ಬೇರೆಯವರ ಮನೆಯ ಮುಂದೆ ಮಾಡುತ್ತಿತ್ತು. ತಕರಾರುಗಳು ಆದವು. ಜಗಳಗಳಾದವು ಸೀಮಾಳಿಗೆ ಅದನ್ನು ಸ್ವಚ್ಛ ಮಾಡಬೇಕಾಗುತ್ತಿತ್ತು. ಆ ಕಸ್ದ ಡಬ್ಬಿ ಹತ್ರ ಹೋಗಿ ಮಾಡ„ ಆಕೆ ಗದರಿಸಿದಳು. ಮೂರು ದಿನ ಆಕೆ ಜೋರು ಮಾಡಿದ ಮೇಲೆ ನಾಕನೆ ದಿನ ಅದು ಕಸದ ಡಬ್ಬಿಯ ಹತ್ತಿರ ಹೋಗಿತ್ತು. ಅದನ್ನು ಸ್ವತಂತ್ರವಾಗಿ ಓಡಾಡಲು ಬಿಟ್ಟಿದ್ದರಿಂದ ಸೀಮಾ ಆ ಕಡೆಗೆ ಗಮನ ಕೊಟ್ಟಿರಲಿಲ್ಲ.

ಕಾಲೇಜಿನಿಂದ ಮನೆಗೆ ಬಂದ ಹಾರ್ದಿಕ ತನ್ನ ಜಾಗೆಯಲ್ಲಿ ಮರಿ ಇಲ್ಲದ್ದು ನೋಡಿ ತಾಯಿಗೆ ಕೇಳಿದ ಮಮ್ಮಿ ನಾಯಿ ಮರಿ ಎಲ್ಹೋಗೇತಿ, ಅಲ್ಲೆ ಇರ್ಬಕು ನೋಡಪಾ, ಈಗ ಇಲ್ಲಿತ್ತಲ್ಲಾ, ಕಸ್ದ ಡಬ್ಬಿ ಹತ್ರ ಹೋಗೆತೇನ ನೋಡು.' ಅಂದಳು. ಪುಸ್ತಕಗಳನ್ನು ಇಟ್ಟು ಅದನ್ನು ಹುಡುಕಲು ಹೋದ. ಎಲ್ಲಿಯೂ ಇಲ್ಲ. ಅದನ್ನು ಎಲ್ಲಿಂದ ಎತ್ತಿಕೊಂಡು ಬಂದಿದ್ದನೊ ಅಲ್ಲಿಯವರೆಗೆ ಹೋಗಿ ಬಂದ. ತಾಯಿಯ ಒತ್ತಾಯಕ್ಕೆ ಊಟ ಮಾಡಿದ.ಅದ್ಕ„ ಚಪಾತಿ ಕೊಟ್ಟಿದ್ದಿ ಮಮ್ಮಿ’ `ಕೊಟ್ಟಿದ್ನೆಲ್ಲಾ, ಐತೇನು ಅದ್ರಾಗ್.’ ಬಟ್ಟಲಲ್ಲಿ ಒಂದು ಸಣ್ಣ ತುಣುಕು ಇತ್ತು. ಪುನಃ ಒಂದು ಸಾರೆ ಎಲ್ಲಾ ಕಡೆ ನೋಡಿ ಬಂದ. ಸಂಜೆಗೆ ಮಕ್ಕಳೆಲ್ಲ ಬಂದರು. ಅಣ್ಣಾ ನಾಯಿ ಎಲ್ಲಿಟ್ಟೀ? ಎಲ್ಲರೂ ಕೇಳಿದರು. ಮದ್ಯಾನದಾಗೂ ಇರ್ಲಿಲ್ಲ ಪ್ರತೀಕ ಹೇಳಿದ. ಅವರೂ ಆಚೀಚೆ ನೋಡಿ ಬಂದರು.

ಸಂಜೆಯಾದರೂ ಮರಿಯ ಪತ್ತೆಯಾಗಲಿಲ್ಲ. ಸಂಜೆಗೆ ಹಾರ್ದಿಕನ ಗೆಳೆಯ ಬಂದ. ಮಾರೀ ಹಿಂಗ್ಯಾಕ್ ಮಾಡೀದ್ಯೋ ಬಾ ಒಂದ್ ರೌಂಡ್ ಹಾಕ್ಕೊಂಡ್ ಬರೂಣು ಅಂದ. ಹಾರ್ದಿಕ ನಾಯಿಯ ಕತೆಯನ್ನು ಹೇಳಿದ. `ನೋಡುಣ ಬಾ, ದಾರ್ಯಾಗ ಎಲ್ಲೆರ ಐತೇನ’ ಇಬ್ಬರೂ ಸಮೀಪದ ರಸ್ತೆಗಳಲ್ಲಿ ಹತ್ತು ನಿಮಿಷ ತಿರುಗಾಡಿದರು. ಮನೆಗೆ ಬಂದರೂ ಮರಿ ಬಂದಿರಲಿಲ್ಲ. ಚಿಂತಿ ಮಾಡ್ಬಾಡ ಇನ್ನೊಂದ್ ಮರಿ ಸಿಗತ್ತ್ ತಗೊ ನಿಂಗ್’, ಎಂದು ಚೇಷ್ಟೆ ಮಾಡುತ್ತ ತನ್ನ ಹೊಂಡಾ ತೆಗೆದುಕೊಂಡು ಹೋದ.

ಮನೆಯಲ್ಲಿ ಹಾರ್ದಿಕ ಟಿ.ವಿ. ನೋಡುತ್ತಾ ಕುಳಿತುಕೊಂಡಿದ್ದ. ನಾಲ್ಕೆ ದಿನಗಳಲ್ಲಿ ಅವನ ಮಾತು ಕೇಳುತ್ತ ಸ್ನೇಹ ಸಂಪಾದಿಸಿತ್ತು ಎಲ್ಲ ಮಕ್ಕಳಿಗೂ ಪ್ರಿಯವಾಗಿತ್ತು. ಈಗ ಎಲ್ಲರಿಗೂ ಬೇಸರವಾಯಿತು. ಅದರದೆ ನೆನಪು ಮನದಲ್ಲಿ. ಟಿ.ವಿ.ಮಾಲಿಕೆ ಕೂಡ ರುಚಿಸದಾಗಿತ್ತು. ಓದಲು ಬೇಕಾದಷ್ಟು ಇತ್ತು..ತಾನಾಗಿಯೇ ಎಲ್ಲಿಗೊ ಹೋಯಿತೇನೊ ಅಂದುಕೊಂಡರೂ ಯಾಕೊ ಬಹಳ ಬೇಸರವಾಗಿತ್ತು. ನಿನ್ನೆಯಿಂದ ನಾಯಿ ಕಾಣೆಯಾಗಿತ್ತು. ಬಾಗಿಲಲ್ಲಿ ರಾಜೀವ ಕಾಣಿಸಿದ. ಅಣ್ಣಾ ಇಲ್ಬಾ ಅಂದ, ಕಣ್ಸನ್ನೆಯಿಂದ ಅವನನ್ನು ಹೊರಗೆ ಕರೆದ. ಏನು ಎಂಬಂತೆ ಹಾರ್ದಿಕ ಹೊರ ಬಂದ.ಪ್ರತೀಕ್ನವ್ವ „ನಾಯಿ ಮರಿ ತೋಂಡ ಹೋದ್ಲು.’ ತೋಂಡ ಹೋದ್ಲು ಯಾವಾಗ?'ನಿನ್ನೆ ನಾ ಸಾಲೀಗ್ಹೊಂಟಿದ್ನೆಲ್ಲಾ ಅವಾಗ’ ಖರೇ ಹೇಳ್ತೀ?'ಹುಂ ಖರೇವಂದ್ರ್ ನಾ ನೋಡೀನಿ, ಅಕಿ„ ಬಗ್ಲಾಗ„
ಇಟ್ಕೊಂಡ್ ಹೋದ್ಲು.’ ನೀ ಮತ್ಯಾರ ಮುಂದೂ ಹೇಳ್ಬಡಾ.' ಹಾರ್ದಿಕ ಹೇಳಿದ.ಊಹು ಯಾರ್ ಮುಂದೂ ಹೇಳಿಲ್ಲ.’

ಆರು ಗಂಟೆಯ ಹೊತ್ತಿಗೆ ಮಕ್ಕಳೆಲ್ಲಾ ಆಡುತ್ತಿರುವಾಗ ಪ್ರತೀಕನ ಮನೆಗೆ ಹೋದ ಹಾರ್ದಿಕ. ಮನೆಯಲ್ಲಿ ಅವಳೊಬ್ಬಳೆ ಇದ್ದಳು.ಆಂಟೀ,ಎಂದು ಕರೆದ. ಏನು ಎನ್ನುತ್ತ ಹೊರಬಂದಳು.ನನ್ನ್ ನಾಯಿ ಮರಿ ಎಲ್ಲಿಟ್ಟೀರಿ ಕೊಡ್ರೀ’. ನಿಂದ್ಯಾವಾದೊ ನಾಯಿ ಮರಿ, ನನಗೇನ್ಗೊತ್ತು.' ಭುಜ ಹಾರಿಸಿದಳಾಕೆ.ನಂಗ್ಗೊತ್ತು, ನೀವ„ ತೋಂಡೀರಿ, ಎಲ್ಲೊ ಮುಚ್ಚೀಟ್ಟೀರಿ. ನಂಗ್ ಬೇಕದು’. ಅವನ ಮಾತಿನಲ್ಲಿ ಖಚಿತತೆ ಇತ್ತು.`ನೀ ಏನ್ ಖರೀದಿ ಮಾಡಿ ತಂದಿದ್ದೇನ್ ನಂದ್ ಅನ್ನಾಕ. ರಸ್ತಾದಾಗ ಬಿದ್ದ್ ಬೀದಿ ನಾಯಿ ಇತ್ತದು. ಇಲ್ಲೋಡಾಡಾಕ ಹತ್ತಿತ್ತು, ಯಾರ್ ತೋಂಡಾರನ„ ಯಾರಿಗ್ಗೊತ್ತು, ನಂಗ್ಯಾಕ್ ಕೇಳ್ತಿ ಹೋಗು ಅಂದಳು. ನೀವ„ ತೋಂಡೀರಿ ನಂಗೊತ್ತು ವಾಪಸ್ಸ್ ಕೊಡ್ರಿ, ನೀವದ್ನ ಕೊಡ„ತನ್ಕ್ ನಾ ಇಲ್ಲೆ ಕುಂಡ್ರ„ತೀನಿ ಎನ್ನುತ್ತ ಮನೆಯೆದುರು ಕುಳಿತೇ ಬಿಟ್ಟ. ಸಾಕವ್ರೀಗಿ ಕೊಟ್ಟೀನಿ, ಹೋಗ್ಹೋಗ್ ನಂದಂತ ಬಂದಾ.’ ಅಂದಳಾಕೆ. ಅವನ ಮಾತನ್ನಾಕೆ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ನಾ ಖರೀದಿ ಮಾಡಿದ್ದೊ ಇಲ್ಲೊ ಅದು ನಿಮ್ಗ್ ಬ್ಯಾಡಾ, ಅದ್ನ್ ನಾ ಕಾಳ್ಜಿ ಮಾಡ್ತಿದ್ಯಾ ಅದ್ಕ„ ಅದು ನಂದು. ನಿಮ್ಮಗಾ ಇಲ್ಲೆ ರಸ್ತಾದಾಗ ಅಡ್ಡ್ಯಾಡತಿರ್ತಾನಲ್ಲಾ ಒಯ್ದು ಯಾರ್ಗೆರ ಕೊಟ್ರ ನಡೀತೈತಿ? ' ನಯವಾಗಿ ಕೇಳಿದ.ಆ ಮರಿ ನಂಗ್ಬೇಕು ಒಳ್ಳೆ ಮಾತ್ನಾಗ ತಂದ್ ಕೊಡ್ರಿ ಎಂದು ಹೇಳಿ ದಪ ದಪ ಹೆಜ್ಜೆ ಹಾಕುತ್ತಾ ಹಿಂದಿರುಗಿದ. ಆಕೆ ದಂಗಾದಳು. ಅದನ್ನಾಕೆ ಯಾರಿಗೋ ಮಾರಿಕೊಂಡಿದ್ದಳು. ಏನ್ ಮಾಡ್ಕೊಂತಾನ„ ಮಾಡ್ಕೊಳ್ಳಿ ಬಿಡು ಅಂದು ಸಮಾಧಾನ ಹೇಳಿತು ಮನಸ್ಸು.

ಮಾರನೇ ದಿನ ಪ್ರತೀಕ ೧೨.೩೦ಕ್ಕೆ ಶಾಲೆಯಿಂದ ಹೊರಬಿದ್ದ. ಗೇಟಿನ ಸಮೀಪದಲ್ಲಿಯೆ ಹಾರ್ದಿಕ ತನ್ನ ಗೆಳೆಯನೊಡನೆ ನಿಂತುಕೊಂಡಿದ್ದ. ಅವನನ್ನು ನೋಡುತ್ತಲೇ ಪ್ರತೀಕ ಓಡಿಬಂದ. ಅಣ್ಣಾ ಗಾಡಿ ನಿಂದೇನೊ ಕೇಳಿದ. ಉಹುಂ ಇಂವಂದು.'ನನ್ನ್ ಹತ್ಸಿಗೊಳ್ಳಲ್ಲ ಸಲ್ಪ ಅಡ್ಡಾಡ್ಸು’ ಗೆಳೆಯ ಎತ್ತಲೋ ನೋಡುತ್ತ ಫೋನಲ್ಲಿ ಮಾತಾಡುತ್ತಿದ್ದ. ನಿ ಮನೀಗ್ಹೋಗು ನಿಮ್ಮವ್ವ ದಾರಿ ನೋಡತಿರ್ತಾಳ'. ಹಾರ್ದಿಕ ಅಂದಸಲ್ಪ„ ಹತ್ಸಿಗೋಳೊ ಐದ್ ಮಿಂಟು. ಅಲ್ಲಿತಂಕ್ ಕರ್ಕೊಂಡ್ಹೋಗಿ ಬಾರಲಾ’. ಪ್ರತೀಕ ಆಸೆಯಿಂದ ಕೇಳಿದ. ತಡಾ ಆದ್ರ ನಿಮ್ಮವ್ವ ಹೊಡ್ಯಂಗಿಲ್ಲ„ನ ನಂಗ„ ನಿಂಗ„ ಕೂಡೇ, ಅಂವ್ಗ ಬ್ಯಾರೆ ಕೆಲ್ಸ ಐತೆ.'ನಮ್ಮವ್ಗ ಹೇಳಲ್ಲ ನಾನು, ನಿನ್ನ್ ಗೆಳ್ಯಾಗ ಹೇಳಲ್ಲ ಅಣ್ಣಾ’. ಹೇಳಲ್ಲಂದ್ರ ಏನ್ ಮಾಡ್ತೀ'.ನಿನ್ನ್ ಹೆಸ್ರ್ ಹೇಳಲ್ಲ’. ಮತ್ತ್ಯಾರ ಹೆಸ್ರ್ ಹೇಳ್ತಿ ಯಾಕ ತಡಾ ಆತು ಆಂತ ಕೇಳಿದ್ರ ಏನ್ ಹೇಳ್ತಿ.?'ಸಾಲ್ಯಾಗ ಡ್ಯಾನ್ಸ ಮಾಡಾಕ್ಹತ್ತಿದ್ರು ನೋಡ್ಕೊಂತ ಕುಂತಿದ್ಯಾ ಅಂತ ಹೇಳ್ತೀನಿ.’ ತನ್ನನ್ನು ಹತ್ತಿಸಿಗೊಳ್ಳಬೇಕೆಂದು ಪುನಃ ಪುನಃ ಕೇಳಿದ ಮೇಲೆ ಅವನನ್ನು ಎದುರಿಗೆ ಕುಳ್ಳಿರಿಸಿ ಇಬ್ಬರೂ ಅವನ ಹಿಂದೆ ಕುಳಿತರು. ಸ್ವಲ್ಪು ದೂರ ಹೋಗಿ ಇಳಿ ಎಂದರು. ಇನ್ನೂಂದ್ ಸಲ್ಫಾ. . . ಅಂದ ಅವನಿಗೆ ಇಳಿಯುವ ಇಚ್ಛೆ ಆಗಲೊಲ್ಲದು. ಹಾದಿ ಬೀದಿಗಳಲ್ಲೆಲ್ಲಾ ನಿಧಾನವಾಗಿ ತಿರುಗಿದರು.

ಪ್ರತೀಕನ ಮನೆಯಿಂದ ಶಾಲೆ ಹತ್ತು ನಿಮಿಷವೂ ಇರಲಿಲ್ಲ. ತಾನೇ ಮನೆಗೆ ಬರುತ್ತಿದ್ದ. ಬೆಳಿಗ್ಗೆ ತಾಯಿ ಅವನ ಜೊತೆಗೆ ಹೋಗುತ್ತಿದ್ದಳು. ಒಂದು ಗಂಟೆಯಾದರೂ ಅವನು ಬರಲಿಲ್ಲವಾಗಿ ತಾಯಿಗೆ ಆತಂಕವಾಯಿತು. ಶಾಲೆಗೆ ಹೋದಳು. ಗೇಟೂ ಬಂದಾಗಿತ್ತು. ಎಲ್ಲರೂ ಹೋಗಿಯಾಗಿದೆ ವಾಚಮ್ಯಾನ್ ಹೇಳಿದ. ಈಗ ಮದ್ಯಾನ್ಹದ ಶಾಲೆ ಪ್ರಾರಂಭವಾಗಿದೆ. ಯಾರನ್ನು ಕೇಳಬೇಕೆಂದು ತಿಳಿಯದಾಯಿತು. ದಾರಿಯಲ್ಲಿ ಏನನ್ನಾದರೂ ನೋಡುತ್ತ ನಿಂತುಕೊಂಡನೇನೊ ಎಂದುಕೊಂಡು, ಅತ್ತಿತ್ತ ನೋಟ ಹರಿಸುತ್ತಾ ಸಾವಕಾಶವಾಗಿ ಹೆಜ್ಜೆ ಹಾಕತೊಡಗಿದಳು. ಮನೆಯ ಸಮೀಪ ಬರುತ್ತಿರುವಂತೆ ನೆನಪಾಯಿತು. ಆಚೀಚೆ ಇರುವ ಚಾಳ‍್ಗಳಲ್ಲಿ ಕೆಲ ಮಕ್ಕಳು ಅದೇ ಶಾಲೆಗೆ ಹೋಗುತ್ತಿದ್ದರು. ಮೋಹಿತ ಅವನ ತರಗತಿಯಲ್ಲಿಯೆ ಇದ್ದ. ಅವನ ಮನೆಗೆ ಹೋದಳು. ಅಂವಾ ಎಲ್ಯ ಹೋದ್ನನ„ ಆಂಟಿ ನಾ ನೋಡ್ಲಿಲ್ಲ. ಅಲ್ಲೆ ಆಟಾ ಆಡಾಕ್ಹತ್ತಿರಬಕು ಅಂದ. ಪುನಃ ಶಾಲೆಗೆ ಹೋದಳು. ವಾಚಮ್ಯಾನ ಗೇಟಿನ ಬಳಿ ಇರಲಿಲ್ಲ. ಗೇಟಿಗೆ ಬೀಗವಿತ್ತು. ಸ್ವಲ್ಪು ಹೊತ್ತು ನಿಂತುಕೊಂಡಳು. ಅವನ ಸುಳಿವಿಲ್ಲ. ಮನೆಗೆ ಹಿಂದಿರುಗಬೇಕೆನ್ನುವಾಗ ವಾಚಮ್ಯಾನ ಬಂದ. ಮಗ ಇನ್ನೂ ಬರಲಿಲ್ಲವೆಂದು ಅವನಿಗೆ ಹೇಳಿ ಹೆಡ್ ಮಾಸ್ಟರ್ಗೆ ಭೇಟಿಯಾಗಬೇಕೆಂದಳು. ಬಾಗಿಲು ತೆಗೆದ. ಆಫೀಸಿಗೆ ಹೋಗಿ ಮುಖ್ಯ ಶಿಕ್ಷಕರಿಗೆ ಹೇಳಿದಳು. ೩ನೇ ತರಗತಿಯಲ್ಲಿ ಮಗು ಇರುವಾಗ ನೀವು ಸ್ವತಃ ಬಂದು ಕರೆದೊಯ್ಯಬೇಕು. ಯಾರಾದರೂ ಸ್ನೇಹಿತರೊಂದಿಗೆ ಹೋಗಿರಬೇಕು ಎಂದರವರು.ಯಾವಾಗಲೂ ಹೀಗೆ ಮಾಡಿಲ್ಲ, ಮನೆ ಬಹಳ ಸಮೀಪದಲ್ಲಿಯೆ ಇದೆ ಅಂದಳು. ಐದು ನಿಮಿಷದ ದಾರಿಯಾಗಿತ್ತು. ಪೋಲೀಸರ ಕಡೆಗೆ ಹೋಗಿ, ಸಲಹೆ ಇತ್ತರು. ಕಣ್ಣಲ್ಲಿ ನೀರು ಬಂತು. ಮನೆಯತ್ತ ಹೆಜ್ಜೆ ಹಾಕಿದಳು. ಮಗುವನ್ನು ಅಪಹರಿಸಿರಬಹುದೇ,ಸಂಶಯ ಇಣುಕಿತು. ಯಾಕಾಗಿ, ಚಿಂತಿಸಿದಳು ಬಡವರ ಮಕ್ಕಳನ್ನು ಒಯ್ದು ಏನು ಮಾಡಿಯಾರು? ಕೈ ಕಾಲುಗಳನ್ನು ಊನ ಮಾಡಿ ಭಿಕ್ಷೆ ಬೇಡಲು ಹಚ್ಚುತ್ತಾರೆಂದು ಯಾರೊ ಹೇಳಿದ ನೆನಪು. ಮೈ ಜುಮ್ಮೆಂದು ಮೈಯ ಕೂದಲೆಲ್ಲಾ ನಿಮಿರಿ ನಿಂತವು. ಹಾರ್ದಿಕ ಕರೆದೊಯ್ದನೇನೊ, ನಿನ್ನೆ ಹೇಳಿ ಹೋಗಿದ್ದನಲ್ಲ. ಅವನಷ್ಟು ಗುಂಡಾ ಇದ್ದಾನೆಂದು ಅನಿಸಲಿಲ್ಲ. ಮನೆಗೆ ಬಂದಳು.

ಹಾರ್ದಿಕನ ಮನೆಗೆ ಹೋದಳು. ಸೀಮಾಳನ್ನು ಕೇಳಿದಳು. ಹಾರ್ದಿಕ ಇಲ್ಲನು ಭಾಭೀ. ಇಲ್ಲಲ್ಲ ಅವಾ ದಾದರ್ಕ ಹೋಗ್ಯಾನಾ ಮುಂಜೆಲೆ, ಆಟ ಅದಾವಂತ„ ಅದೇನ ಫುಟ್ ಬಾಲಂತ„ ಅಲ್ಲೆ, ಹೇಳೆ ಹೋಗ್ಯಾನ ತಡಾ ಆಗತ್ತ ಮಮ್ಮೀ ಅಂತ, ಅಂದಳು ಯಾಕೆನಾಗೇತಿ ಕೇಳಿದಳು. ಪ್ರತೀಕ ಬರ್ಲಿಲ್ಲ್ಲ ಇನ„ ಇಷ್ಟು ಹೇಳುವಾಗಲೇ ಆಕೆಯ ಕಣ್ಣಲ್ಲಿ ನೀರಾಡಿತು. ಹಾರ್ದಿಕ ಇದ್ರ„ ಹುಡ್ಯಕ್ಯಾಡಾಕ ಬರ್ತಿದ್ನೇನೊ ಅನಿಸ್ತು. ಪೋಲೀಸ್ರ್ ಕಡೆ ಹೋಗಾಕ„. ಹೌದಲ್ಲ, ಅವ ಸಂಜಿ ಆರಕ್ಕ್ ಬರ„ವದನಾ. ನಾನ„ ಬರ್ಲ್ಯಾ. ಕೇಳಿದಳು. ಅಗ ತಾನೆ ಆಕೆ ಮನೆಗೆ ಬಂದಿದ್ದಳು. ಬ್ಯಾಡ್ ಬಿಡ್ರಿ. ಎಂದಳು ಸಪ್ಪೆ ಮುಖದಿಂದ. ಬರ್ತಾನ್ ತಗೋರಿ, ಸಾಲ್ಯಾಗೆಲ್ಲರ„ ಆಡ್ಕೊಂತ ಕುಂತಿರ್ಬಕು, ಯಾಕ್ ಚಿಂತಿ ಮಾಡ್ತೀರಿ.ಸಾಲೀಗ್ಹೋಗಿ ನೋಡ್ಬಕು ಎಂದಳು. ನೋಡ್ಬಂದ್ಯಾ ಅವಾ ಅಲ್ಲಿಲ್ಲ. ಕ್ಲಾಸ್ ಟೀಚರ್ಗೆ ಕೇಳಿದ್ರ್ಯಾ, ಒಂದೊಂದ ಸರೆ ಶಿಕ್ಷಾ ಕೊಟ್ಟಿರ್ತಾರಾ, ಅಲ್ಲೆ ನಿಂದಿರ್ಸಿರ್ತಾರಾ ಹೋಂ ವರ್ಕ ಮಾಡ್ಲಿಲ್ಲಂದ್ರ, ಏ„ನರ ಗಲಾಟಿ ಮಾಡಿದ್ರ„, ನಿಮ್ಮ„ ವ ಏನ್ ತುಂಟಲ್ಲ ಬಿಡ್ರಿ ಹೋಂ ವರ್ಕ ಮಾಡಿದ್ನಾ ಕೇಳಿದಳು. ಹೂಂ ದಿನಾ ಮನೀಗ್ಬಂದ ಕೂಡ್ಲೆ ಮಾಡಸ್ತೀನಿ.

ಹಂಗರ„ ಅವ ಎಲ್ಲೆರ ಆಡ್ಕೊಂತ ಕುಂತಿರ್ಬಕ್ ತೋರಿ, ಸೀಮಾ ಸಮಾಧಾನ ಮಾಡಲು ಪ್ರಯತ್ನಿಸಿದಳು. ಕಾಲೆಳೆಯುತ್ತ ಮನೆಗೆ ಬಂದಳು ರಾಧಾ. ಬೀಗ ತೆಗೆಯಲಿಲ್ಲ ಗಂಡನಿಗೆ ಫೋನ್ ಮಾಡಿದರೆ ಹೇಗೆ ವಿಚಾರಿಸಿದಳು. ಅವನಿಗೆ ಮತ್ತ್ಯಾರು ಸ್ನೇಹಿತರಿದ್ದಾರೆ. ನೆನಪಿಸಿಕೊಂಡಳು. ರವಿ ಒಬ್ಬನಿದ್ದ. ಅವನು ಶಾಲೆಗೆ ಇನ್ನೂ ಹತ್ತಿರದಲ್ಲಿದ್ದ. ಅವನ ಮನೆಗೆ ಓಡಿದಳು. ಅವನ ಮನೆಗೆ ಬೀಗವಿತ್ತು. ಹಣೆ ಹಣೆ ಜಜ್ಜಿಕೊಳ್ಳುವಂತಾಯಿತು.ತಿರುಗಿ ತನ್ನ ಮನೆಯತ್ತ ಹೆಜ್ಜೆ ಹಾಕಿದಳು.

ದೇವರನ್ನು ನೆನೆಯುತ್ತಾ ಇದರಲ್ಲಿ ಹಾರ್ದಿಕನ ಕೈವಾಡವಿರಬಹುದೆ ಎಂದು ಚಿಂತಿಸುತ್ತಾ ಕುಳಿತುಕೊಂಡಳು. ಕೈಯಲ್ಲಿ ಮೊಬೈಲ ಇತ್ತು ಗಂಡನ ನಂಬರನ್ನು ತಿರುಗಿಸಿದಳು.ಅ ಕಡೆಯಿಂದ ಏನೂ ಉತ್ತರ ಬರಲಿಲ್ಲ. ಮತ್ತೊಮ್ಮೆ ಮಾಡಿದಳು. ಫೋನ್ ರಿಂಗ್ ಆಗಲಿಲ್ಲ. ಪೋನ್ ಬಂದ್ ಮಾಡಿದಳು ಧೈರ್ಯವೆಲ್ಲ ಉಡುಗಿ ಹೋದಂತಾಗಿತ್ತು. ಕಣ್ಣಿರು ತಡೆಯುವದಾಗುತ್ತಿಲ್ಲ. ಎಲ್ಲಿ ಹುಡುಕಲಿ ಮಗುವನ್ನು.

ಪ್ರತೀಕ ಮನೆ ಮುಟ್ಟಿದಾಗ ೩ಗಂಟೆ ೩೦ ನಿಮಿಷವಾಗುತ್ತಿತ್ತು. ಚಿಂತೆಯಲ್ಲಿ ಕುಳಿತ ಆಕೆಗೆ ಜೀವ ಬಂದಂತಾಯಿತು ಅಷ್ಟೆ ಕೋಪವುಕ್ಕಿತು. ಸಮಾಧಾನಿಸಿಕೊಂಡಳು. ಅವನು ಸುರಕ್ಷಿತವಾಗಿದ್ದ. ಹಸನ್ಮುಖನಾಗಿದ್ದ. ಕೋಪದಿಂದ ಕೇಳಿದಳು ಎಲ್ಯ್ಹೋಗಿದ್ದೊ ಯಾಕ ಇಷ್ಟ್ ತಡಾ ಆತು.'ನನ್ನ ಗೆಳ್ಯಾನ ಅಣ್ಣ ಬಂದಿದ್ದ ಅವ್ನ್ ಗಾಡೀ ಮ್ಯಾಲೆ ಅವ್ರ ಮನೀಗ್ಹೋಗಿ ಬಂದ್ಯಾ. ಇನ್ನಮ್ಮಿ ಹೋಗಲ್ಲಾ ಮಮ್ಮಿ.’ ಅವ್ನ„ ಕರ್ಕೊಂಡ್ ಹೋದ್ನಾ?'ಇಲಾ ನಾನ„ ಹೋದ್ಯಾ ಅವಾ ಕುಂತಾ ನನಗೂ ಕುಂದ್ರಬಕನಿಸ್ತು ಮನಿ ಬಾಳ„ ದೂರೈತಿ ಅದ್ಕ್ ತಡಾ ಆತು.’ ತಿನ್ನಾಕ ಏನರ ಕೊಟ್ರಾ?' ಕೊಟ್ರು ನಾ ತೋಳ್ಳಿಲ್ಲ’ . ಇನ್ನಮ್ಮಿ ಹಿಂಗ್ ಮಾಡಲ್ಲಾ ಮಮ್ಮಿ ಎನ್ನುತ್ತಾ ತಾಯಿಯ ಕೊರಳಿಗೆ ಬಿದ್ದ.ನಾಳ್ಗಿ ಅಂವಾ ಬಂದ್ರ ನಾಳ್ಗಿನೂ ಹೋಗವ„ನ್ನೀ?’ `ಇಲ್ಲಾ ಮಮ್ಮಿ ನಾ ಎಂದೂ ಗಾಡಿ ಮ್ಯಾಲ ಕುಂತಿದ್ದಿಲ್ಲಾ ಅದ್ಕ„ ಕುಂದ್ರಬಕನಿಸ್ತು. ಮತ್ತ್ಯಾರ ಗಾಡಿ ಬಂದ್ರೂನೂ ಹೋಗಲ್ಲ.’

ಇನ್ನೊಮ್ಮಿ ಹಿಂಗ್ ಮಾಡ್ದೆಂದ್ರ ಪೋಲೀಸರ ಕಡೆ ಹೋಗ್ಬಕಾಗತ್ತ ನೋಡು, ಅಂಜಿಸಿದಳು. `ಹಾರ್ದಿಕ ಕರ್ಕೊಂಡ್ ಹೋಗಿದ್ನಾ? ಕೇಳಬೇಕೆಂದು ತುದಿ ನಾಲಗೆಯ ವರೆಗೆ ಬಂದಿತ್ತು. ಆದರೆ ಅದನ್ನು ತಡೆದಳು. ಹೊಟ್ಟಿ ಹಸ್ದೈತಿ ಮಮ್ಮಿ ಉಣ್ಣಾಕ್ ಕೊಡು ಎನ್ನುತ್ತ ಸಮವಸ್ತ್ರವನ್ನು ಬಿಚ್ಚಿ ಒಗೆದ. ತಾಯಿ ಮಗ ಇಬ್ಬರೂ ಊಟ ಮಾಡಿದರು. ಪ್ರತೀಕ ಮಲಗಿದ. ಆಕೆ ವಿಚಾರದ ಸುಳಿಯಲ್ಲಿ ಸಿಲುಕಿದಳು. ಹಾರ್ದಿಕನೆ ಪುನಃ ಪುನಃ ನೆನಪಾಗತೊಡಗಿದ. ತನ್ನ ಮಗ ಸತ್ಯ ಹೇಳುತ್ತಿಲ್ಲವೆಂದು ಆಕೆಗೆ ಖಚಿತವಿತ್ತು. ಹಾರ್ದಿಕನಾದರೂ ತನ್ನ ತಾಯಿಗೆ ಸತ್ಯವನ್ನು ಹೇಳಿರಲಾರ. ಪ್ರತೀಕನಿಗೆ ಗಾಡಿಯ ಮೇಲೆ ಬಹಳ ಆಸೆಯಿತ್ತು. ಹೊರಗಡೆಗೆ ಹೋದಾಗ ಪರಿಚಯದವರಾರಾದರೂ ಗಾಡಿಯೊಂದಿಗೆ ಭೇಟಿಯಾದರೆ ಕೇಳುವವ, ಅಪ್ಪಾ ನೀವು ಯಾವಾಗ ಗಾಡಿ ತೋಂತೀರಿ? ತೋಳ್ಳೋಣ ತೋಳ್ಳೋಣ, ತಂದೆ ಅವನನ್ನು ಸಮಾಧಾನಿಸುತ್ತಿದ್ದ.

ಹಾರ್ದಿಕನಿಗೆ ಹೀರೊಹೊಂಡಾ ಇದ್ದ ಒಂದಿಬ್ಬರು ಸ್ನೇಹಿತರಿದ್ದರು. ಶ್ರೀಮಂತರೂ ಇದ್ದಿರಬಹುದು. ಒಳ್ಳೆ ಸ್ಟೈಲಾಗಿ ಅವನ ಮನೆಗೆ ತಮ್ಮ ಗಾಡಿಯಲ್ಲಿ ಬರುತ್ತಿದ್ದರು. ಯಾವಾಗಲೊ ಒಮ್ಮೆ ಆಕೆ ಹಾರ್ದಿಕನೊಂದಿಗೆ ಅವರನ್ನು ನೋಡಿದ್ದಳು. ಹಾರ್ದಿಕ ಆ ಸ್ನೇಹಿತರ ಸಹಾಯವನ್ನು ತೆಗೆದುಕೊಂಡಿರಬಹುದೆ, ತನಗೆ ಸೂಚನೆಯನ್ನು ಕೊಟ್ಟಿರಬಹುದೆ, ಈಗ ಮಗನನ್ನು ಸುರಕ್ಷಿತವಾಗಿ ಮನೆಗೆ ಬಿಟ್ಟಿದ್ದಾನೆ. ನಾಳೆ ಇದೇ ರೀತಿಯಾದರೆ ಮಗ ಮನೆಗೆ ಬರದೆ ಹೋದರೆ. . . ಮಗ ಕೈತಪ್ಪಿ ಹೋದರೆ. . . ಆಕೆಯ ಎದೆ ಝಲ್ಲೆಂದಿತು. ಪೋಲೀಸರ ಕಡೆಗೆ ಹೋಗುವದು ನಂತರದ ಮಾತು, ಆದರದು ಭಯಾನಕವಾಗಿ ಕಾಣಿಸತೊಡಗಿತು. ಆದರೆ ಮಗ ಸುರಕ್ಷಿತವಾಗಿ ಇರದೆ ಹೋದರೆ, ಆತನ ಜೀನದಲ್ಲೊಂದು ಏನಾದರೂ ಆಗಬಾರದ ಘಟನೆ ಘಟಿಸಿದರೆ ಜೀವನ ಪೂರ್ತಿ ಕೊರಗುವಂತಾದರೆ. . . ಬೇಡ ಎಂದಿತು ಮನಸ್ಸು. ಗಂಡನಿಗೆ ನಾಯಿಯ ಸಂಗತಿ ತಿಳಿದಿರಲಿಲ್ಲ. ಮಗನಿಗೆ ಏನೂ ಆಗುವದು ಬೇಡ ಈ ವಿಷಯ ಇಲ್ಲಿಗೆ ಸಮಾಪ್ತವಾದರೆ ಸಾಕು ಎನಿಸಿತು.

ಆರು ಗಂಟೆಯ ಹೊತ್ತಿಗೆ ಹಾರ್ದಿಕ ತನ್ನ ಮನೆಗೆ ಬಂದ. ತುಸು ಹೊತ್ತಿನಲ್ಲಿ ಪ್ರತೀಕನ ತಾಯಿ ನಾಯಿ ಮರಿಯನ್ನು ತಂದು ಅವನ ಕೈಯಲ್ಲಿಟ್ಟಳು.