- ಅಪಾರ್ಥ ಮತ್ತು ಇತರ ಕವಿತೆಗಳು - ಜುಲೈ 31, 2021
ಅಪಾರ್ಥ
ಛಿದ್ರಗೊಳಿಸದಿರಿ ಒಳಗಿನ ದೇವರನ್ನು
ರೇಶಿಮೆಯ ನುಣುಪು ನಕಲಿಯಲ್ಲ
ಮಮತೆ ನೀಡಿ ಮಗುವಿನಂತೆ ಮೋಹಿಸಿ
ನರಳಿ ನೊಂದೀತು ಆ ಸುಮನ
ಅವರಷ್ಟಕ್ಕೇ ಇರಲಿ ಬಿಡಿ ಹಾಗೇನೇ…
ಅಭಿಷೇಕ ಅರ್ಚನೆ ಬೇಕಾಗಿಲ್ಲ
ಸಹಸ್ರನಾಮಕ್ಕೆ ಅವರು ಮಣಿವವರಲ್ಲ
ಪೂಜಿಸದಿದ್ದರೂ ನೋಯುವುದಿಲ್ಲ
ಸುಮ್ಮನೇ ಕಿರೀಟ ತೊಡಿಸದಿರಿ ‘ಪ್ರಭಾವೀ’ ದೇವರೆಂದು
ವಿನಾಕಾರಣ ಸಂಶಯ ಭೂತಕ್ಕೆ ಆಗಾಗ
ಸಿಡಿಸುವ ಪ್ರಳಯ ತಾಂಡವ ಜ್ವಾಲಾಮುಖಿ
ಒಮ್ಮೊಮ್ಮೆ ನಲುಗುತ್ತಾರೆ ಅವರು
ಯಾರ ಅರಿವಿಗೂ ಬಾರದೆ
ಮೇಲ್ನೋಟಕ್ಕಷ್ಟೇ ಜಗದ ನಮನ
ಅಂಧ, ನಿಷ್ಕರುಣಿ ತಪ್ಪದ ಗೊಣಗಾಟ
ವರ ಕೊಡುವ ದೇವರಲ್ಲ
ಬರೀ ಶಿಲೆಕಲ್ಲೆಂಬ ಜರವಣಿಗೆ
ತನ್ನಷ್ಟಕ್ಕೇ ತಾನಿದ್ದರೂ ಅಪವಾದ ಖಾತ್ರಿ
ಹಳಿದು ಹಿಂಸಿಸಿದ ಘಾಸಿಯ ಕಲೆ
ತಮ್ಮದೆಂದು ಆರಾಧಿಸುವ ದೈವದ ಕೊಲೆ
-2-
ಇಲ್ಲಿ ಯಾರಿಗೂ ಖಚಿತವಿಲ್ಲ
ಹೂಮನ ಹೂಬನ ಅವರದೆಂದು
ನಶಿಸಿ ನೂರಾದರೂ ಪ್ರಾಕೃತಿಕ ನೈಜತೆಗೆ
ಘನಚೇತನಗೊಳುವ ಸನ್ನಾಹ ವಿಗ್ರಹಕ್ಕೆ
ನಿಷ್ಕಾರಣ ಅವರಿಗಂತೂ
ಕ್ಲೇಶವಿಲ್ಲದ ಜಗಕೊಲಿವ ಹಂಬಲ ಹವಣಿಕೆ
ಪ್ರೀತಿ-ಸಾಂಗತ್ಯಕ್ಕೆ ತೋಳ ಚಾಚದ ಮಂದಿಗೆ
ಒಳಗಿನ ದೇವರಂತೂ ಬರೀ ಅಪಹಾಸ್ಯ ಅಪಾರ್ಥ.
***
ಭಾವ ಕುಸುಮ
ಜೀನಿಯಾ ಡೇಲಿಯಾ ತಾಜಾ ರೋಜಾ
ಬಣ್ಣದ ಲೋಕದ ಮಾಧುರ್ಯ ಪುಷ್ಪ
ಶುಭಾಶಯ ಕೋರುವ ಸುಮಧುರ ಭಾವ
ಹೃನ್ಮನಕೆ ಹಾರೈಸುವ ಕಣ್ಣಕೋರೈಸುವ
ಹೂಗುಚ್ಛದ ತುಂಬಾ ಹೊಂಬಣ್ಣದ ಕನಸು
ನವಿಲಗರಿಯಂದದಲಿ ನಲಿವಿನ ಕ್ಷಣಗಳಲಿ
ನಗುವಿನ ಮೊಗದಲಿ ಬೆರೆಯುವ ಮನಗಳಲಿ
ತಣ್ಣನೆಯ ಗಾಳಿಯಲಿ ದೇವತಾರಾಧನೆಯಲಿ
ಎಲ್ಲೆಲ್ಲೂ ಹರಡಿಹುದು ನಿಮ್ಮದೇ ಕಂಪು
ನೋವಲೂ ನಲಿವಲೂ ಮಾಸದಿಹ ಛಾಪು
ರಂಗಿನ ಹೊಂಗನಸ ಹೊಮ್ಮಿಸುವ ಕುಸುಮ
ಪನ್ನೀರ ಸಿಂಪಡಿಸಿ ಸೀಮೆಯನೆ ಸರಿಸಿ
ಬಾಳ ಪರಿಧಿಯಲಿ ಮೂಡುವ ಹೊಂಗಿರಣ
ಕಾಡುವ ದುಗುಡವ ನಿರಾಳವಾಗಿ ನೀಗಿಸುವ
ಶ್ರೀಗಂಧÀ ಲೋಕದ ಸೌಗಂಧಿಕ ಪುಷ್ಪವೇ
ಸಂತಸ ಸಂದೇಶ ಸಾಂತ್ವನÀದ ಸಂಕೇತ
ಜನುಮದಿನಕೆ ಹರಸುವ ವರ್ಣಮಯ ಹೂವೇ
ಸಾಧನೆಯ ಹೆಜ್ಜೆಯಲಿ ಗುರುತಾದ ಗುಚ್ಛ
ಅರಿವಿನಾಚೆಗೂ ಮೀರಿ ಬೆಳೆದಿಹ ಭಾವಸುಮ
ಒಲವ ರಂಗೋಲಿ ರಚಿಸಿಹ ರಮಣೀಯ ದಳ
ಭಾವಲೋಕದ ಹೂಗಳ ಛಾಯೆ
ವಿಸ್ಮಯ ಲೋಕಕು ನಿಮ್ಮದೆ ಮಾಯೆ
***
ನಸುನಗು
ನಗುವಿಗಿಲ್ಲ ಇಲ್ಲಿ ಪರಾಶ್ರಯ
ನಗಬಹುದಿಲ್ಲಿ ಎಲ್ಲರೂ ಹೂಬಿರಿವಂತೆ
ಮುದದಿ ನಸುನಗುವ ಹಸುಳೆಯಂತೆ
ಹಸಿವು, ನೋವಿಗೆ ಅತ್ತು ಅರೆಕ್ಷಣ
ಮೌನವಾಗಿ ಸುಖನಿದ್ರೆಗೆ ಜಾರುವ ಮುಗ್ಧನಂತೆ
ಕೊರೆವ ತಂಪಿನಲಿ ನಡುಗಲೂ ಇಲ್ಲಿ ನಗಬೇಕು
ಸಂಭ್ರಮಿಸಿ ಪ್ರಕೃತಿಯ ನವಿರು ಅಪ್ಪುಗೆಗೆ
ಸುಡುಬಿಸಿಲ ಬೇಗೆಯಲಿ ಕಂಗೆಡುವ ಕತ್ತಲಲಿ
ಬಂದದ್ದು ಬರಲೆಂದು ನಗಬೇಕಿಲ್ಲಿ ಎಲ್ಲರೂ
ಅಮೃತ ಘಳಿಗೆಯ ಪನ್ನೀರ ಘಮ್ಮನೆಯ ಸಿಂಚನಕೆ
ಹೊಗಳಿಕೆಗೆ ಹಾಯಾಗಿ ತೆಗಳಿಕೆಗೆ ಮುನಿಸಾಗಿ
ಅಟ್ಟದಿಂದೆಸೆಯುವರು ತಕರಾರು ತೆಗೆದರೆ
ಪರರ ಜರೆದು ಭರದಿ ಮುನ್ನಡೆದು
ಕಟ್ಟುವರಿಲ್ಲಿ ಸೆಳೆತ ಸ್ವಾರ್ಥದ ಸೌಧಗಳ
ತೋರುವರು ಅವರೆದೆಯ ಗುಂಡಿಗೆಯ ಆಳವ
ತೂಗುವ ತಕ್ಕಡಿಯ ತಳಹದಿಯೆ ತೂತಂತೆ
ಲಾಸ್ಯವಾಡೀತೆಂದು ನೈಜತೆಯ ನಗೆಹಬ್ಬ ಮೊಗದಲಿ
ವನಮಾಲಿ ನುಡಿಸಿಹ ಕೊಳಲಿನಲಿ ಅಪಸ್ವರವೇ?
ಬಿರುಕಿಹುದೆ ಆ ಬಿದಿರ ನಾದದಲಿ
ತಳಮಳದ ಮುನಿಸೇಕೆ ಚಂದಿರನ ಮೊಗದಲಿ
ಜನುಮವಿದು ಭಾಗ್ಯದ ಬಾಗೀನವಂತೆ
***
ಪ್ರೇಮಸುಧೆ
ಯಾರೂ ಬಾರದ ಮನದಲಿ ಬಿರಿದರಳಿ
ಕನಸಗೊಂಚಲಿಗೊಂದು ಚೆಂಗುಲಾಬಿ ಚಿಗುರಿಸಿ
ಅರಿಯದೆ ಇಳಿದಳು ಮೆಲುನಗೆ ಬೀರಿ ಅವನೆಡೆಗೆ
ಅನೂಹ್ಯ ವರ್ಷಧಾರೆ ಸೋಕಿ ಸುಫಲ ಸಂಧ್ಯಾರಾಗ
ಕನವರಿಕೆ ಕಣ್ಣಿಗೆ ಇವರು ಕಾಣಿಸಲಿಲ್ಲ
ಮೌನ ತಾವರೆಕೆರೆಯಲ್ಲಿ ಸುಳಿವಿರಲಿಲ್ಲ
ಶೂನ್ಯ ಮಂದಿರದ ಸುತ್ತ ಇರವಿರಲಿಲ್ಲ
ಸ್ವರ ತಂಬೂರದಲಿ ಲಯ ಝೇಂಕರಿಸಲಿಲ್ಲ
ಚಿತ್ರ-ಗೀತೆಗಳಲೂ ಚಹರೆ ಮೂಡಿರಲಿಲ್ಲ
ಚಂದ್ರಮಗೂ ಇಲ್ಲಿದೆ ಸಪ್ತವರ್ಣದ ಛಾಪು
ಸುಮ್ಮನೆ ಸೆಳೆದಿಹ ರಾಶಿ ಅಕ್ಕರೆ ಸುರಿದು
ತೆಂಗಿನ ಗರಿಯ ಸಂಧಿಯೊಳು ಮಿನುಗಿ
ಲಕ್ಷ್ಯಲಹರಿಯ ನಗು ಮಂದಾರ ಹೊಮ್ಮಿಸಿಹ
ಒಲವಿನ ಸಾಕ್ಷಾತ್ಕಾರ ಮೇಳೈಸಿ ಸರಿಗಮ
ಸ್ವಪ್ನದರಸಿಯ ತೋಳಿಗೆ ಹೊಂಬೆಳಕ ಆವರಣ
ಕತ್ತಲಿನ ಇರುಳ ದನಿ ಕೈಹಿಡಿದು ನಡೆಸೀತು
ಹಸುರೆಲೆಯ ಇಬ್ಬನಿ ಮಿಸುಕೀತು ಮುಂಜಾವಿನಲಿ
ಮೊನಚು ಹಿಮಶಿಖರಕೆ ಬಾನಂಚಿನ ಚುಂಬನ
ಮುಸ್ಸಂಜೆ ಧರಿಸುವಳು ಶರಧಿ ಸೂರ್ಯಕಿರೀಟ
ಗಾಳಿ ಊದಿಹ ಶಂಖನಾದಕೆ ಭೃಂಗನಾಟ್ಯ
ಸಿಹಿ-ಕಹಿಯ ಸಹಿ ಅಗಣಿತ ಪ್ರೇಮ ವಿಸ್ಮಯಕೆ
ಅಮೃತಶಿಲೆಯಲಿ ಪ್ರೇಮಸುಧೆ ಸ್ವರ ಮಾರ್ದನಿ
ಹೆಚ್ಚಿನ ಬರಹಗಳಿಗಾಗಿ
ಗೌರವ ಸಂಪಾದಕರ ಮಾತು – ಡಾ. ಜಿ. ಎನ್. ಉಪಾಧ್ಯ
ಬರ್ಮಾ ದೇಶದ ರಾಮಾಯಣ
ಕಣಗಿಲೆಯ ಫಿರ್ಯಾದು