ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಬ್ಳಿ ಹೆಗಡೆಯವರ ಹನಿಗವಿತೆಗಳು

ಅಬ್ಳಿ ಹೆಗಡೆ
ಇತ್ತೀಚಿನ ಬರಹಗಳು: ಅಬ್ಳಿ ಹೆಗಡೆ (ಎಲ್ಲವನ್ನು ಓದಿ)

ಇಂದು-ನಿನ್ನೆ

ನಿತ್ಯ ಕೃತ್ರಿಮದಾಟ
ಸಹಜತೆಯು ಸೊನ್ನೆ.
ನೆನಪೇ ಸಂಜೀವಿನಿಯು
ನೆಮ್ಮದಿಯ ನಿನ್ನೆ.

*******

ನನ್ನಿಷ್ಟ

ನನ್ನಿಷ್ಟ ನನಗಷ್ಟೇ
ಬೇಡ ತಕರಾರು.
ನಾ ರಾಜ ನನ್ನೊಳಗೆ
ನಂದೇ ದರ್ಬಾರು

*******

ಅಭೇದ್ಯ

‘ಪುಗಸಟ್ಟೆ’ ದೊರೆಯುವುದು
ನಿತ್ಯ ಉಪದೇಶ.
ಬದುಕ ರಂಗಸ್ಥಳದಿ
ವಿಧ,ವಿಧದ ವೇಷ.
ತೊಡಿಸಿ ಕುಣಿಸುವರಾಗ
ನೋಡಲಿಕೆ ಚೋದ್ಯ.
ನಮ್ಮರಿವು ನಮಗಿರಲು
ನಾವು ಅಭೇದ್ಯ

*******

ಇಷ್ಟ,ಕಷ್ಟ

ಬಾನ ಅಟ್ಟದ ಮೇಲೆ
ನೀರಿನಾ  ಮಡಕೆ.
ತೂತು ಮಾಡಿದವರ‍್ಯಾರು
ಆ…ಮಡಕೆ ತಳಕೆ?

ಮುಗಿಲ ಹರ್ಷದ ವರ್ಷ
ಕಾದ ನೆಲದಿಷ್ಟ.
ಇತಿ,ಮಿತಿಯ ಮೀರಿದರೆ
ಇಷ್ಟವೂ ಕಷ್ಟ.

*******

ಕವಿತೆಗೆ…

ರಾತ್ರಿ ಕತ್ತಲೆಯಲ್ಲಿ
ಸುರಿವ ಮಳೆಯಂತೆ
ನೆನೆಯದಿದ್ದರೆ ಅದುವೇ
ಬರಿ ಶಬ್ದ ಸಂತೆ.

ಸಖೀ ನೀ ನನ್ನಲ್ಲಿ
ಎಂದೂ ಜೀವಂತ
ಆದರೂ ಆಗದಿಹೆ
ನೀ..ನನ್ನ ಸ್ವಂತ.

*******