ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : https://savaltv.com/araseikere-shiva-temple/

ಅರಸೀಕೆರೆ ಶಿವಾಲಯ​

ಎಂ ಹೆಚ್ ಸುವರ್ಣಲಕ್ಷ್ಮೀ
ಇತ್ತೀಚಿನ ಬರಹಗಳು: ಎಂ ಹೆಚ್ ಸುವರ್ಣಲಕ್ಷ್ಮೀ (ಎಲ್ಲವನ್ನು ಓದಿ)

ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ​, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ​. ಅದು ನಮ್ಮ ಪ್ರಕೃತಿ, ಬದುಕು, ಜನ​, ಸಂಸ್ಕೃತಿಯ ಕತೆ. ಅದು ನೆಲದ ಕತೆ. ಅಂಥ ಹಲವು ಅನುಭವಗಳನ್ನು ದಾಟಿಸಬಲ್ಲ ಅಂಕಣ ಮಾಲಿಕೆ ‘ಟೂರ್ ಡೈರೀಸ್’ನ ಎರಡನೇ ಸಂಚಿಕೆ ನಿಮ್ಮ ಮುಂದೆ…
ಚಿತ್ರ ಕೃಪೆ : https://www.wikiwand.com/kn/%E0%B2%85%E0%B2%B0%E0%B2%B8%E0%B3%80%E0%B2%95%E0%B3%86%E0%B2%B0%E0%B3%86

ಬಂಧುಗಳನ್ನು ಭೇಟಿ ಮಾಡುವ ಸಲುವಾಗಿ ಅರಸೀಕೆರೆಗೆ ಹೋಗಿದ್ದೆ. ವಿಶಿಷ್ಟ ದೇಗುಲಗಳ ಬಗ್ಗೆ ಬರೆಯುವ ಆಸಕ್ತಿ ಇದ್ದ ನಾನು, ಅಲ್ಲಿನ ಬಂಧುಗಳ ಸಲಹೆಯಂತೆ ಅಲ್ಲಿನ ಶಿವಾಲಯಕ್ಕೆ ಭೇಟಿ ನೀಡಿದೆ. ಆ ಶಿವಾಲಯದ ಬಗೆಗಿನ ಪರಿಚಯ ಇಲ್ಲಿದೆ.

ಅರಸೀಕೆರೆಯು ೬ನೇ ಚಾಲುಕ್ಯ ದೊರೆ ತ್ರಿಭುವನಮಲ್ಲ ವಿಕ್ರಮಾದಿತ್ಯ ಕಾಲಕ್ಕಾಗಲೇ ದೊಡ್ಡ ಪಟ್ಟಣವಾಗಿತ್ತು. ಚಾಲುಕ್ಯ ವಂಶದ ಅರಸಿಯೊಬ್ಬಳು ಕಟ್ಟಿಸಿದ ಕೆರೆಯಿಂದ ಈ ಊರಿಗೆ ‘ಅರಸೀಕೆರೆ’ ಎಂಬ ಹೆಸರು ಬಂದಿದೆ.

ಇದು ಅರಸೀಕೆರೆಯಿಂದ ಹುಳಿಯೂರು ರಸ್ತೆಯಲ್ಲಿರುವ ಶಿವಾಲಯ, ಹೊಯ್ಸಳದೊರೆ ತಂದೆ ಎರೆಯಂಗನ ಆಳ್ವಿಕೆ ಕಾಲ. ಇಲ್ಲಿ ಹಾರ‍್ನಹಳ್ಳಿಯಿಂದ ಬಾಣಾವರದ ತನಕ ಆಳ್ವಿಕೆ ಇತ್ತು. ಮುಂದೆ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಅರಸೀಕೆರೆ ತುಂಬ ಅಭ್ಯುದಯ ಹೊಂದಿತು.

ಅರಸೀಕೆರೆಯ ಈ ಶಿವಾಲಯವು ಹೊಯ್ಸಳ ದೊರೆ ಇಮ್ಮಡಿ ಬಲ್ಲಾಳನ ದಂಡನಾಯಕನಾಗಿದ್ದ ರಾಚಿಮಯ್ಯನಿಂದ ೧೨೨೦ರಲ್ಲಿ ನಿರ್ಮಿಸಲ್ಪಟ್ಟಿತು. ಆಗಿನ ಕಾಲದ ಹೊಯ್ಸಳ ವಾಸ್ತು ರಚನೆಗಳಲ್ಲೇ ಇದು ಅತ್ಯಂತ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಇದು ತನ್ನ ವಿಶೇಷ ರಚನೆ ಹಾಗು ಭಿನ್ನತೆಗಳಿಂದ ಗಮನ ಸೆಳೆಯುತ್ತದೆ. ಮೊದಲನೆಯದಾಗಿ ಆ ಕಾಲದ ಎಲ್ಲ ಹೊಯ್ಸಳ ದೇವಾಲಯಗಳಿಗಿರುವಂತೆ ಜಗತಿಯ ಮೇಲೆ ಇದನ್ನು ನಿರ್ಮಿಸಲಾಗಿಲ್ಲ ಬದಲಾಗಿ ಗಟ್ಟಿ ನೆಲದ ಮೇಲೆ ತೊಲೆಗಳನ್ನಿಟ್ಟು ಅದರ ಮೇಲೆ ನಿರ್ಮಿಸಲಾಗಿದೆ. ಎರಡನೆಯದಾಗಿ ಸಾಮಾನ್ಯವಾಗಿ ಇರಬೇಕಾದ ೫ ಅಥವಾ ೬ ಹಂತದ ಚಿತ್ರಪಟ್ಟಿಕೆಗಳಿಲ್ಲ. ಅದರ ಬದಲಾಗಿ ಆ ಸ್ಥಳದಲ್ಲಿ ದೇವಮಾಡುಗಳಿದ್ದು ಒಟ್ಟು ೧೨೦ ದೇವತಾ ಮೂರ್ತಿಗಳ ಕೆತ್ತನೆಯಿದೆ. ಈ ಪ್ರತಿಯೊಂದು ಮೂರ್ತಿಯನ್ನು ಕಪೋತದವರೆಗೆ ಕೆತ್ತಿರುವ ವಿವಿಧ ಮಾದರಿಯ ಅಲಂಕೃತ ಕಂಬಗಳ ಮಾಡುಗಳಲ್ಲಿ ಕೂರಿಸಲಾಗಿದೆ. ಇನ್ನೂ ವಿಶೇಷವೆಂದರೆ ಪ್ರತಿಯೊಂದು ಶಿಲ್ಪದ ಕೆಳಗೆ ಶಿಲ್ಪದ ಹೆಸರು ಮತ್ತು ಅದನ್ನು ಕೆತ್ತಿದ ರೂವಾರಿಯ ಹೆಸರನ್ನು ಕೆತ್ತಲಾಗಿದೆ. ಹೊಯ್ಸಳ ಸಾಮ್ರಾಜ್ಯದ ಹೆಸರಾಂತ ಕಲಾಕೃತಿಗಳನ್ನು ಒಳಗೊಂಡಿರುವ ಶಿವಾಲಯ. ಮೊದಲ ಮೂರು ಅಂದರೆ ಗರ್ಭಗೃಹ , ಸುಕನಾಸಿ ಹಾಗು ನವರಂಗಗಳ ರಚನೆ ನಕ್ಷತ್ರಾಕಾರದಲ್ಲಿದ್ದರೂ ಈ ನಕ್ಷತ್ರಾಕಾರ ಸಮಭುಜಗಳನ್ನು ಹೊಂದಿರದೇ ತುಂಬ ಸಂಕೀರ್ಣವಾಗಿದೆ. ಅಲ್ಲದೇ ಎಲ್ಲಕ್ಕಿಂತ ಹೊರಗಿರುವ ಸಭಾ ಮಂಟಪವೇ ಈ ದೇವಾಲಯದ ಪ್ರಮುಖ ಆಕರ್ಷಣೆ. ಈ ದೇವಾಲಯದ ಪ್ರಮುಖ ಆಕರ್ಷಣೆಯಾದ ಇನ್ನೊಂದು ಮುಖಮಂಟಪವು ೧೬ ಮೂಲೆಗಳನ್ನು ಹೊಂದಿದ್ದು ನಕ್ಷತ್ರಾಕಾರದಲ್ಲಿದೆ. ಇದು ತೆರೆದ ಮಂಟಪವಾಗಿದ್ದು ಮೇಲಿನಿಂದ ನೋಡಿದರೆ ಬೋರಲು ಹಾಕಿದ ಹರಿಗೋಲಿನಂತೆ ಕಾಣುತ್ತದೆ. ಇಂಥ ಸಭಾಮಂಟಪವು ಇನ್ನಾವುದೇ ಹೊಯ್ಸಳ ದೇವಾಲಯಗಳಲ್ಲಿ ಕಂಡುಬರುವುದಿಲ್ಲ. ೨೫ ಅಡಿ ವ್ಯಾಸದ ಅಳತೆ ಹೊಂದಿರುವ ಇದರ ಮಧ್ಯದಲ್ಲಿ ಸ್ವಲ್ಪವೇ ಎತ್ತರಿಸಿದ ಭಾಗವಿದ್ದು ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದನ್ನು ಕುಳಿತು ನೋಡಲು ಮಂಟಪದ ಸುತ್ತಲೂ ಎತ್ತರಿಸಿದ ಕಟ್ಟೆಗಳಿದ್ದು ಈ ಕಟ್ಟೆಗಳನ್ನು ಮುಖಾಮುಖಿಯಾದ ಆನೆಗಳು ಹೊತ್ತು ನಿಂತಂತೆ ಕೆತ್ತಲಾಗಿರುವುದು ತುಂಬ ವಿಶೇಷವಾದದ್ದು. ಇಂಥದೇ ಇನ್ನೊಂದು ಕಕ್ಷಾಸನ ನೋಡಲು ಸಿಗುವುದು ಬೆಳವಾಡಿಯ ವೀರನಾರಾಯಣನ ದೇವಸ್ಥಾನದಲ್ಲಿ. ಈ ಕಟ್ಟೆಯ ಮೇಲೆ ಕುಳಿತು ಒರಗಿಗೊಳ್ಳಲು ಜಾರುಬಂಡಿಯಂಥ ಆಸರೆ ಮಾಡಿರುವುದೊಂದು ವಿಶೇಷ. ಇದರಲ್ಲೂ ಒಟ್ಟು ೨೧ ಕಂಬಗಳಿದ್ದು ಹೊರಗಿನ ೧೩ ಕಂಬಗಳು ಚೌಕಾಕಾರದ್ದಾಗಿದ್ದು ಒಳಗಿನ ೮ ಕಂಬಗಳು ಗಂಟೆಯಾಕಾರದ ರಚನೆ ಹೊಂದಿವೆ. ಈ ಕಂಬಗಳ ಮೇಲಿನ ಮಣಿ-ಮುತ್ತಿನ ಕೆತ್ತನೆ ತುಂಬ ನಯಗಾರಿಕೆಯಿಂದ ಕೂಡಿದೆ. ಇಲ್ಲಿನ ಭುವನೇಶ್ವರಿಯಲ್ಲಿ ಮೂರುವರೆ ಅಡಿ ಉದ್ದದ ಇಳಿ ಬಿದ್ದಿರುವ ಕಮಲದ ಹೂವಿನ ಕೆತ್ತನೆ ಸುಂದರವಾಗಿದೆ. ಗರ್ಭಗುಡಿಯಲ್ಲಿ ಆಕರ್ಷಕ ಶಿವಲಿಂಗವಿದೆ. ಇದು ಚಂದ್ರ ಮೌಳೇಶ್ವರ ಎಂದು ಪ್ರಸಿದ್ಧಿ ಪಡೆದಿದೆ.

ಈ ದೇಗುಲ ೧೬೯೦ರಲ್ಲಿ ಮೈಸೂರು ಅರಸರಿಗೆ ಸೇರಿತು. ಇದು ಜಿಲ್ಲಾ ಕೇಂದ್ರ ಹಾಸನದಿಂದ ೪೫ ಕಿ.ಮೀ ಹಾಗು ತಾಲ್ಲೂಕು ಕೇಂದ್ರದಿಂದ ೧ ಕಿ.ಮೀ ದೂರವಿದೆ. ಈ ದೇವಾಲಯ ಪುರಾತತ್ವ ಇಲಾಖೆಗೆ ಸೇರಿದ್ದು, ಅವರ ಸಂರಕ್ಷಣೆಯಲ್ಲಿ ಇದೆ. ದೇಗುಲದ ಸುತ್ತಲೂ ಸುಂದರ ಹುಲ್ಲಿನ ಹಾಸು ನಿರ್ಮಿಸಲಾಗಿದೆ ಹಾಗೂ ಅಲ್ಲಲ್ಲಿ ದೊರೆತ ಭಿನ್ನವಾಗಿರುವ ಶಿಲ್ಪಗಳನ್ನು ಹಾಗೂ ಶಾಸನಗಳನ್ನು, ವೀರಗಲ್ಲು , ಮಾಸ್ತಿಗಳನ್ನು ಸಂಗ್ರಹಿಸಲಾಗಿದೆ. ಶಿವರಾತ್ರಿಗೆ ಇಲ್ಲಿ ಜನಜಾತ್ರೆಯೇ ನೆರೆಯುತ್ತದಂತೆ. ಈ ಹಾದಿಯಾಗಿ ಬಂದಾಗ ತಪ್ಪದೇ ಈ ದೇಗುಲಕ್ಕೊಂದು ಭೇಟಿ ನೀಡಿ. ಈ ದೇಗುಲ ಬೇಲೂರು, ಹಳೇಬೀಡು ದೇಗುಲಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕದಷ್ಟೇ; ಕೆತ್ತನೆಯಲ್ಲಿ ಅವುಗಳಿಗೆ ಸಮನಾಗಿದೆ.