- ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ - ಅಕ್ಟೋಬರ್ 30, 2024
- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
ಪ್ರಸ್ತಾವನೆ
ಆಂಟನಿ ಏಂಡ್ ಕ್ಲಿಯೋಪಾತ್ರ” (Antony and Cleopatra) ಶೇಕ್ಸ್‍ಪಿಯರ್ ಕ್ರಿ.ಶ. ಸುಮಾರು 1608ರಲ್ಲಿ ಬರೆದಿರಬಹುದಾದ ಚಾರಿತ್ರಿಕ ದುರಂತ ನಾಟಕ. ಒಂದು ರೀತಿಯಲ್ಲಿ ಇದು 1599ರಲ್ಲಿ ರಚಿತವಾದಜೂಲಿಯಸ್ ಸೀಸರ್” ನಾಟಕದ ಮುಂದುವರಿದ ಭಾಗವೇ ಎಂದು ಹೇಳಬಹುದು. ಕ್ರಿ.ಪೂ. 44ರಲ್ಲಿ ಜೂಲಿಯಸ್ ಸೀಸರನ ಹತ್ಯೆಯಾಯಿತು. ಸೀಸರನ ಮಿತ್ರನಾಗಿದ್ದ ಮಾರ್ಕ್ ಆಂಟನಿ ನಂತರ ಈಜಿಪ್ಟಿಗೆ ಬಂದು ಕ್ಲಿಯೋಪಾತ್ರಳ ಜತೆ ಸೇರಿ ರೋಮಿನಲ್ಲಿ ಸೀಸರನ ಉತ್ತರಾಧಿಕಾರಿಯಾಗಿದ್ದ ಒಕ್ಟೇವಿಯಸ್ ಸೀಸರನ ವಿರುದ್ಧ ಯುದ್ಧ ಮಾಡುತ್ತಾನೆ. ಈ ಯುದ್ಧ ಆಂಟನಿ ಮತ್ತು ಕ್ಲಿಯೋಪಾತ್ರಾಳ ದುರಂತದಲ್ಲಿ ಕೊನೆಗೊಳ್ಳುತ್ತದೆ. ಶೇಕ್ಸ್‍ಪಿಯರ್ ತನ್ನ ರೋಮನ್’ ನಾಟಕಗಳಿಗೆ ಸಾಮಾನ್ಯವಾಗಿ ಬಳಸಿಕೊಳ್ಳುವಂತೆ “ಅಂಟನಿ ಏಂಡ್ ಕ್ಲಿಯೋಪಾತ್ರ” ನಾಟಕಕ್ಕೂ ಬಳಸಿಕೊಂಡುದು ಕ್ರಿ.ಶ. ಮೊದಲನೇ ಶತಮಾನದ ಕೊನೆ ಭಾಗದಲ್ಲಿದ್ದ ಪ್ಲೂಟಾರ್ಕ್ ಎಂಬ ಇತಿಹಾಸಕಾರನು ಬರೆದ ಕೆಲವು ಗ್ರೀಕ್ ಮತ್ತು ರೋಮನ್ ಪ್ರಸಿದ್ಧ ಪುರುಷರ ತೌಲನಿಕ ಜೀವನ ಚರಿತ್ರೆಗಳನ್ನು. ಶೇಕ್ಸ್‍ಪಿಯರನ ಕಾಲಕ್ಕೆ ಈ ಕೃತಿ The Lives of the Noble Grecians and Romans ಎಂಬ ಶೀರ್ಷಿಕೆಯಲ್ಲಿ ಇಂಗ್ಲೆಂಡಿನಲ್ಲಿ ಪ್ರಕಟವಾಗಿತ್ತು (1579); ಇದನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದವನು ಸರ್ ಥಾಮಸ್ ನಾರ್ತ್ ಎಂಬ ಸಾಹಿತ್ಯಾಸಕ್ತನಾಗಿದ್ದ ಒಬ್ಬ ವೈದ್ಯ. ಈ ಭಾಷಾಂತರ ಕೂಡಾ ಝಾಕ್ ಅಮ್ಯೋಟ್‍ನ (Jacques Amyot) ಫ್ರೆಂಚ್ ಭಾಷಾಂತರದಿಂದ ಮಾಡಿದ್ದು. ಪ್ಲೂಟಾರ್ಕ್ ತನ್ನ ಕೃತಿಯನ್ನು ರಚಿಸಿದ್ದು ಎಟಿಕ್ ಗ್ರೀಕ್‍ನಲ್ಲಿ (ವಿದ್ಯಾವಂತರು ಆ ಕಾಲದಲ್ಲಿ ಬರೆಯಲು ಬಳಸುತ್ತಿದ್ದ ಗ್ರೀಕ್ ಪ್ರಭೇದ). ಶೇಕ್ಸ್‍ಪಿಯರ್ ಈ ಆಧಾರವನ್ನು ಉಪಯೋಗಿಸಿಕೊಂಡಿದ್ದರೂ, ತನ್ನ ಸ್ವಂತ ಪ್ರತಿಭೆಯನ್ನು ಮೆರೆದಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಪ್ಲೂಟಾರ್ಕನ ಚರಿತ್ರೆ ಕೂಡಾ ನೂರಕ್ಕೆ ನೂರರಷ್ಟು ಸತ್ಯಘಟನೆಗಳನ್ನೇ ಆಧರಿಸಿದೆ ಎನ್ನುವಂತಿಲ್ಲ; ದಂತಕತೆಗಳನ್ನೂ ವದಂತಿಗಳನ್ನೂ ಅವನು ತನ್ನ ಬರಹದಲ್ಲಿ ಬಳಸಿಕೊಳ್ಳುತ್ತಾನೆ. “ಆಂಟನಿ ಏಂಡ್ ಕ್ಲಿಯೋಪಾತ್ರ”ದಲ್ಲಿ ಆಂಟನಿ ಮತ್ತು ಕ್ಲಿಯೋಪಾತ್ರರೇ ನಾಯಕ ನಾಯಕಿಯರು. ಆಂಟನಿಯ ಜೀವಿತ ಕಾಲಾವಧಿ ಕ್ರಿ.ಪೂ. 83-30 (ಒಟ್ಟು 53 ವರ್ಷ); ಕ್ಲಿಯೋಪಾತ್ರಳದು ಕ್ರಿ.ಪೂ. 69-30 (ಒಟ್ಟು 39 ವರ್ಷ). ಕ್ಲಿಯೋಪಾತ್ರ ಆಂಟನಿಗಿಂತ ಸುಮಾರು 14 ವರ್ಷ ಸಣ್ಣವಳು. ಕ್ರಿ.ಪೂ. 41ರಲ್ಲಿ ಅವರಿಬ್ಬರು ಭೇಟಿಯಾಗುತ್ತಾರೆ; ಕ್ರಿ.ಪೂ. 36ರಲ್ಲಿ ಮದುವೆಯಾಗುತ್ತಾರೆ. ಇಬ್ಬರೂ ಸತ್ತುದು ಒಂದೇ ವರ್ಷ. ಆಂಟನಿ ಮೂಲತಃ ಒಬ್ಬ ರೋಮನ್. ಆದರೆ ಕ್ಲಿಯೋಪಾತ್ರ ಈಜಿಪ್ಶಿಯನಳೇ? ಅವಳು ಈಜಿಪ್ಟಿನ ರಾಣಿಯಾಗಿದ್ದಳು ಎನ್ನುವುದು ನಿಜ, ಅದರೆ ಮೂಲತಃ ಈಜಿಪ್ಶಿಯನ್ ಆಗಿರಲಿಲ್ಲ. ಮೂಲತಃ ಆಕೆ ಮೆಸಿಡೋನಿಯನ್ ಗ್ರೀಕಳು. ಈ ಕೆಳಗಿನ ಕೆಲವು ಇಸವಿಗಳು (ಎಲ್ಲವೂ ಕ್ರಿ.ಪೂರ್ವಕ್ಕೆ ಸಂಬಂಧಿಸಿದವು) ಮತ್ತು ವಿವರಗಳು ಕ್ಲಿಯೋಪಾತ್ರಳ ಕುರಿತು ತಿಳಿದುಕೊಳ್ಳಲು ಸಹಾಯಕವಾಗಬಹುದು.
332. ಅಲೆಕ್ಝಾಂಡರ್ ದ ಗ್ರೇಟ್ ತನ್ನ ಮಹಾ ದಂಡಯಾತ್ರೆಯ ಭಾಗವಾಗಿ ಈಜಿಪ್ಟನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುತ್ತಾನೆ. 323. ಪೌರಾತ್ಯ ದೇಶಗಳನ್ನು ಗೆದ್ದು ಮರಳುತ್ತ ಬ್ಯಾಬಿಲೋನಿನಲ್ಲಿ ಅಲೆಕ್ಝಾಂಡರ್ ಅಕಾಲ ಮರಣದಲ್ಲಿ ತೀರಿಕೊಳ್ಳುತ್ತಾನೆ. ಅವನು ಥಟ್ಟನೇ ತೀರಿಕೊಂಡುದರಿಂದ ಅವನ ವಿಸ್ತಾರವಾದ ಸಾಮ್ರಾಜ್ಯದ ಆಢಳಿತದ ಕುರಿತು ಗೊಂದಲ ಉಂಟಾಗುತ್ತದೆ. ಕೆಲವೇ ಕಾಲದಲ್ಲಿ ಈಜಿಪ್ಟಿನ ಆಢಳಿತ ಅಲೆಕ್ಝಾಂಡರಿನ ಸೇನಾನಾಯಕರಲ್ಲಿ ಒಬ್ಬನಾಗಿದ್ದ ಟಾಲೆಮಿಯ (Ptolemy) ಕೈಗೆ ಬರುತ್ತದೆ; ಆರಂಭದಲ್ಲಿ ಸತ್ರಪನಾಗಿ ಅಧಿಕಾರ ವಹಿಸಿದ ಟಾಲೆಮಿ ನಂತರ ತಾನೇ ಈಜಿಪ್ಟಿನ ಫೇರೋ (ರಾಜ) ಆಗುತ್ತಾನೆ. ಮುಂದೆ ಎರಡು ಶತಮಾನಗಳ ಕಾಲ ಈಜಿಪ್ಟನ್ನು ಆಳುವುದು ಟಾಲೆಮಿಯ ವಂಶಸ್ಥರೇ. ಕ್ಲಿಯೋಪಾತ್ರ ಇದೇ ವಂಶಕ್ಕೆ ಸೇರಿದವಳು.
331ರ ಸುಮಾರಿಗೆ ಅಲೆಕ್ಝಾಂಡರ್ ಈಜಿಪ್ಟಿನ ಉತ್ತರ ಮಧ್ಯದ ದಂಡೆಯಲ್ಲಿ ಹೊಸ ನಗರವೊಂದನ್ನು ಕಟ್ಟಿ ಅದಕ್ಕೆ ಅಲೆಕ್ಝಾಂಡ್ರಿಯಾ ಎಂದು ಹೆಸರನ್ನಿಡುತ್ತಾನೆ. ಅಲೆಕ್ಝಾಂಡರ್ ಬ್ಯಾಬಿಲೋನಿನಲ್ಲಿ ತೀರಿಕೊಂಡಾಗ ಟಾಲೆಮಿ ಅವನ ಮೃತ ದೇಹವನ್ನು ತಂದು ಸಮಾಧಿ ಮಾಡಿದುದು ಇದೇ ನಗರದಲ್ಲಿ. ಅಂದಿನಿಂದ ಹಲವಾರು ವರ್ಷಗಳ ಕಾಲ ಈಜಿಪ್ಟಿನ ರಾಜಧಾನಿಯಾಗಿ ಪ್ರಸಿದ್ಧ ವಾಣಿಜ್ಯ ನಗರಿಯಾಗಿಯೂ ಬೆಳೆದುದು ಅಲೆಕ್ಝಾಂಡ್ರಿಯಾವೇ; ಕ್ಲಿಯೋಪಾತ್ರ ಕೂಡ ಈಜಿಪ್ಟನ್ನು ಆಳಿದ್ದು ಇದೇ ನಗರದಿಂದ. 168. ಗ್ರೀಸಿನ ಪ್ರಾಬಲ್ಯ ಕುಗ್ಗಿ ರೋಮನ್ ಸಾಮ್ರಾಜ್ಯ ಬೆಳೆಯುತ್ತಿದ್ದಂತೆ ಈಜಿಪ್ಟ್ ರೋಮಿನ ಅಧೀನಕ್ಕೆ ಒಳಗಾಗುತ್ತದೆ. 69. ಈಜಿಪ್ಟಿನಲ್ಲಿ ಕ್ಲಿಯೋಪಾತ್ರಳ ಜನನ. ಟಾಲೆಮಿ ವಂಶದಲ್ಲಿ ಈ ಹೆಸರು ಹೊಂದಿದವರಲ್ಲಿ ಕ್ಲಿಯೋಪಾತ್ರ ಏಳನೆಯವಳು. Cleopatra = glory of the father, ಪಿತೃಕೀರ್ತಿ. ಈಕೆ ಹನ್ನೆರಡನೇ ಟಾಲಮಿಯ (Ptolemy XII) ಎರಡನೇ ಮಗಳು. 58. ಹನ್ನೆರಡನೇ ಟಾಲೆಮಿ ಪದಚ್ಯುತಗೊಂಡು ಈಜಿಪ್ಟಿನಿಂದ ಹೊರ ಹಾಕಲ್ಪಡುತ್ತಾನೆ.
51. ರೋಮನ್ ಸೇನೆಯೊಂದರ ಸಹಾಯದಿಂದ ಹನ್ನೆರಡನೇ ಟಾಲೆಮಿ ಮತ್ತೆ ಅಧಿಕಾರ ಗಳಿಸಿ ಈಜಿಪ್ಟಿಗೆ ಮರಳುತ್ತಾನೆ. ಆದರೆ ಅದೇ ವರ್ಷ ಅವನು ಸಾಯುತ್ತಾನೆ, ಹಾಗೂ ಅವನ ಆಶಯದಂತೆ ಹದಿಮೂರನೇ ಟಾಲೆಮಿ ಈಜಿಪ್ಟಿನ ಗದ್ದುಗೆಯೇರುತ್ತಾನೆ. ಈ ಹದಿಮೂರನೇ ಟಾಲೆಮಿ ಹನ್ನೆರಡನೇ ಟಾಲೆಮಿಯ ಮಗ, ಮತ್ತು ಕ್ಲಿಯೋಪಾತ್ರಳ ತಮ್ಮ. ಆಗ ಅವನ ವಯಸ್ಸು 10 ವರ್ಷ, ಕ್ಲಿಯೋಪಾತ್ರಳದು 18. ಕ್ಲಿಯೋಪಾತ್ರ ಈಗಾಗಲೇ ತಂದೆಯ ಸಹಭಾಗಿತ್ವದಲ್ಲಿ ರಾಜ್ಯಭಾರ ಮಾಡಿದ್ದವಳು. ಫೇರೋ ಪದ್ಧತಿಯಂತೆ ರಾಜ್ಯಾಧಿಕಾರವನ್ನು ಕುಟುಂಬದೊಳಗೇ ಇರಿಸಿಕೊಳ್ಳಲು ಕ್ಲಿಯೋಪಾತ್ರ ಮತ್ತು ಅವಳ ತಮ್ಮ ಟಾಲೆಮಿಯ ನಡುವೆ ಮದುವೆಯ ಶಾಸ್ತ್ರ ನಡೆಯುತ್ತದೆ. ಇಬ್ಬರ ಮಧ್ಯೆ ಪ್ರೀತಿಯೇನೂ ಇರುವುದಿಲ್ಲ; ಕ್ಲಿಯೋಪಾತ್ರ ರಾಜ್ಯಾಢಳಿತವನ್ನು ತಾನೊಬ್ಬಳೇ ವಹಿಸಿಕೊಳ್ಳಲು ಸಂಕಲ್ಪ ಮಾಡಿರುತ್ತಾಳೆ. ಹದಿಮೂರನೇ ಟಾಲೆಮಿಯ ರಕ್ಷಕರು ಒಟ್ಟು ಸೇರಿ ಕ್ಲಿಯೋಪಾತ್ರಳ ವಿರುದ್ಧ ಬಂಡಾಯವೆಬ್ಬಿಸಿ ಅವಳನ್ನು ಅಲೆಕ್ಝಾಂಡ್ರಿಯಾದಿಂದ ಹೊರ ಹಾಕುತ್ತಾರೆ.
48. ರೋಮಿನಲ್ಲಿ ಜೂಲಿಯಸ್ ಸೀಸರ್ ಅಂತರ್ಯುದ್ಧವನ್ನು ಎದುರಿಸುತ್ತಿದ್ದ ಕಾಲ. ಸೀಸರನ ವಿರುದ್ಧ ನಿಂತ ಪೋಂಪಿ ಯುದ್ಧವೊಂದರಲ್ಲಿ ಸೋತು ಈಜಿಪ್ಟಿಗೆ ಓಡಿಹೋಗುತ್ತಾನೆ. ಸೀಸರ್ ತನ್ನ ಸೇನೆಯೊಂದಿಗೆ ಅವನನ್ನು ಬೆಂಬೆತ್ತಿಹೋಗುತ್ತಾನೆ; ಆದರೆ ಅವನು ಅಲೆಕ್ಝಾಂಡ್ರಿಯಾ ತಲಪುವ ಮೊದಲೇ ಪೋಂಪಿ ಅಲ್ಲಿ ಹತ್ಯೆಗೊಳಗಾಗಿರುತ್ತಾನೆ. ಎಷ್ಟಾದರೂ ಈಜಿಪ್ಟ್ ಇನ್ನೂ ರೋಮಿನ ಪರಮಾಧಿಕಾರದಲ್ಲಿದ್ದ ದೇಶ. ಈಗ ಅಲ್ಲಿನ ನಾಯಕನೇ ಈಜಿಪ್ಟಿಗೆ ಬಂದಿದ್ದಾನೆ. ಎಂದ ಮೇಲೆ ಕ್ಲಿಯೋಪಾತ್ರ ಅವನನ್ನು ಭೇಟಿಯಾಗಬೇಕಾದ್ದು ಸಹಜವೇ. ಅಲ್ಲದೆ ಸೀಸರನ ಸಹಾಯದಿಂದ ಟಾಲೆಮಿಯನ್ನು ಒತ್ತರಿಸುವ ಇರಾದೆಯೂ ಅವಳಲ್ಲಿ ಇದ್ದಿರಬೇಕು. ಇದನ್ನು ಸಾಧಿಸಲು ಅವಳು ಕಂಡುಕೊಂಡ ಮಾರ್ಗ ಮಾತ್ರ ಅತ್ಯಂತ ರೋಚಕವಾದುದು. ಅವಳು ತನ್ನನ್ನು ರತ್ನಗಂಬಳಿಯೊಂದರಲ್ಲಿ ಸುತ್ತಿಸಿಕೊಂಡು ಸೀಸರನ ಪಾಳಯದಲ್ಲಿ ಅವನ ಮುಂದೆ ಉರುಳಿಸಿಕೊಳ್ಳುವ ಏರ್ಪಾಡು ಮಾಡಿದಳು! ರತ್ನಗಂಬಳಿ ಬಿಡಿಸಿಕೊಂಡಾಗ ಎದ್ದು ಬಂದುದು 21 ವರ್ಷ ವಯಸ್ಸಿನ ಈಜಿಪ್ಶಿಯನ್ ರಾಜ್ಞಿ! ಜೂಲಿಯಸ್ ಸೀಸರಿಗೆ ಆಗ 52 ವರ್ಷ ವಯಸ್ಸು.
47. ಸೀಸರ್ ಅವಳ ಕಡೆಗೆ ಆಕರ್ಷಿತನಾದ್ದಕ್ಕೆ ಕಾರಣ ಬಹುಶಃ ಅವಳ ಈ ಧೈರ್ಯ, ಅಥವಾ ಅವಳಲ್ಲಿದ್ದ ಅಪಾರ ಸಂಪತ್ತು, ಅಥವಾ ಎರಡೂ. ಅಂತೂ ಕ್ಲಿಯೋಪಾತ್ರ ಸೀಸರನ ಉಪಪತ್ನಿಯಾಗುತ್ತಾಳೆ. ಅವರಿಬ್ಬರ ನಡುವೆ ಔಪಚಾರಿಕ ವಿವಾಹ ವಿವಾಹ ನಡೆಯುವುದಿಲ್ಲ. ಸೀಸರ್ ಕ್ಲಿಯೋಪಾತ್ರಳ ವಿರೋಧಿಗಳನ್ನು, ಮುಖ್ಯವಾಗಿ ಟಾಲೆಮಿಯನ್ನು, ಅಣಗಿಸುವುದಕ್ಕೆ ತನ್ನ ಸೇನೆಯನ್ನು ಬಳಸುತ್ತಾನೆ. ಓಡಿಹೋಗುವ ಯತ್ನದಲ್ಲಿ ಟಾಲೆಮಿ ನೀರಿನಲ್ಲಿ ಮುಳುಗಿ ಸಾಯುತ್ತಾನೆ. ಕ್ಲಿಯೋಪಾತ್ರ ಮತ್ತು ಅವಳ ಇನ್ನೊಬ್ಬ ತಮ್ಮ (ಹದಿನಾಲ್ಕನೇ) ಟಾಲೆಮಿಯನ್ನು ಈಜಿಪ್ಟಿನ ಸಹ ಸಾಮ್ರಾಟರನ್ನಾಗಿ ಮಾಡಿ ಸೀಸರ್ ರೋಮಿಗೆ ಮರಳುತ್ತಾನೆ. ಮರಳುವಾಗ ಕ್ಲಿಯೋಪಾತ್ರಾಳ ತಂಗಿಯೊಬ್ಬಳನ್ನು (ಆರ್ಸಿನೋ) ಜತೆಯಲ್ಲಿ ಒಯ್ದು ರೋಮಿನ ಜೈತ್ರಯಾತ್ರೆಯಲ್ಲಿ ಅವಳನ್ನು ಪ್ರದರ್ಶಿಸುತ್ತಾನೆ. 46. ಸೀಸರನ ಸಂಬಂಧದಲ್ಲಿ ಕ್ಲಿಯೋಪಾತ್ರ ಮಗನೊಬ್ಬನಿಗೆ ಜನ್ಮವೀಯುತ್ತಾಳೆ; ಅವಳ ಮೊದಲ ಸಂತಾನ. ಸಿಸೇರಿಯೋನ್ ಎನ್ನುವುದು ಇವನ ಜನಪ್ರಿಯ ಹೆಸರು. 45. ಕ್ಲಿಯೋಪಾತ್ರ (ಹದಿನಾಲ್ಕನೇ ಟಾಲೆಮಿಯ ಜತೆಯಲ್ಲಿ) ರೋಮಿಗೆ ಹೋಗುತ್ತಾಳೆ. ಸೀಸರ್ ಈ ಇಬ್ಬರನ್ನೂ ತನ್ನದೊಂದು ವಿಲ್ಲಾದಲ್ಲಿ ಇಳಿಸಿಕೊಳ್ಳುತ್ತಾನೆ.
44. ಸೀಸರನ ಹತ್ಯೆ–ಆತ ಸೆನೇಟ್ ಪ್ರವೇಶಿಸುವ ಸಂದರ್ಭದಲ್ಲಿ. ಆತನಲ್ಲಿ ಸರ್ವಾಧಿಕಾರಿ ಪ್ರವೃತ್ತಿ ಬೆಳೆಯುತ್ತಿತ್ತು ಎನ್ನುವುದು ಅವನ ವಿರೋಧಿಗಳ ಆರೋಪವಾಗಿತ್ತು. ಈ ವೇಳೆ ಮತ್ತು ನಂತರವೂ ಸೀಸರನ ಪರವಾಗಿದ್ದವನೇ ಅವನ ಪರಮ ಮಿತ್ರ ಮಾರ್ಕ್ ಆಂಟನಿ. ಸೀಸರನ ಹತ್ಯೆಯ ಸಂದರ್ಭದಲ್ಲಿ ಕ್ಲಿಯೋಪಾತ್ರ ಕೂಡ ರೋಮಿನಲ್ಲಿದ್ದಳು. ಒಂದು ತಿಂಗಳ ನಂತರ ಅವಳು ಅಲೆಕ್ಝಾಂಡ್ರಿಯಾಕ್ಕೆ ಮರಳುತ್ತಾಳೆ. ಹದಿನಾಲ್ಕನೇ ಟಾಲೆಮಿ (ಕ್ಲಿಯೋಪಾತ್ರಳ ತಮ್ಮ, ಹಾಗೂ ಅವಳ ಜತೆ ಅಧಿಕಾರದಲ್ಲಿ ಭಾಗಿಯಾಗಿದ್ದವನು) ವಿಷ ಸೇವನೆಯಿಂದ ತೀರಿಹೋಗುತ್ತಾನೆ. ಬಹುಶಃ ಇದರಲ್ಲಿ ಕ್ಲಿಯೋಪಾತ್ರಳ ಕೈವಾಡ ಇದ್ದಿರಲೂ ಬಹುದು. ತನ್ನ ಮಗ ಸಿಸೇರಿಯೋನ್ ಸಹಭಾಗಿಯಾಗಿ ಮಾಡಲ್ಪಡಬೇಕು ಎನ್ನುವುದು ಅವಳ ಆಕಾಂಕ್ಷೆಯಾಗಿತ್ತು.
42. ಸೀಸರನನ್ನು ವಿರೋಧಿ ಬಣವನ್ನು ಆಂಟನಿ ಫಿಲಿಪ್ಪಿಯಲ್ಲಿ ಸೋಲಿಸಿ ಸೀಸರನನ್ನು ಬೆಂಬಲಿಸಿದವರ ನಾಯಕನಾಗಿ ಮೂಡಿಬರುತ್ತಾನೆ. ಅದೇಕೋ ಪಾರ್ಥಿಯನ್ (ಪರ್ಶಿಯನ್) ಸಾಮ್ರಾಜ್ಯವನ್ನು ಆಕ್ರಮಿಸಬೇಕೆನ್ನುವ ವಿಚಾರವೊಂದು ಆಂಟನಿಯ ತಲೆಯನ್ನು ಕೊರೆಯಲು ಸುರುಮಾಡುತ್ತದೆ. ಇದಕ್ಕೆ ಕ್ಲಿಯೋಪಾತ್ರಾಳ ಸೈನಿಕ ಮತ್ತು ಆರ್ಥಿಕ ಸಹಾಯ ಅಗತ್ಯವಾಗುತ್ತದೆ. ಈ ಕುರಿತು ಮಾತುಕತೆ ನಡೆಸುವುದಕ್ಕಾಗಿ ಅವನು ಆಕೆಯನ್ನು ಭೇಟಿಗೆಂದು ಟಾರ್ಸಸ್‍ಗೆ (ಆಗ ರೋಮನ್ ಪ್ರಾಂತವಾಗಿದ್ದ ಸಿಲೀಸಿಯದ ಒಂದು ಜಾಗ, ಇಂದು ದಕ್ಷಿಣ-ಮಧ್ಯ ಟರ್ಕಿಯಲ್ಲಿದೆ) ಆಮಂತ್ರಿಸುತ್ತಾನೆ. ಆಂಟನಿ ಅವಳನ್ನು 13 ವರ್ಷಗಳ ಹಿಂದೆ, ಅವಳಿನ್ನೂ 14 ವರ್ಷದವಳಾಗಿದ್ದಾಗ ಒಮ್ಮೆ ಭೇಟಿಯಾಗಿದ್ದ; ಆದರೆ ಅದಕ್ಕೇನೂ ಮಹತ್ವವಿರಲಿಲ್ಲ. ಆದರೆ ಟಾರ್ಸಸ್‍ನ ಭೇಟಿ ಐತಿಹಾಸಿಕವಾಗಿತ್ತು: ಆಂಟನಿ ಕ್ಲಿಯೋಪಾತ್ರಾಳ ಪ್ರೇಮಪಾಶದಲ್ಲಿ ಒಡನೆಯೇ ಬಿದ್ದುಬಿಟ್ಟ. ಪಾರ್ಥಿಯನ್ ವಿಚಾರವನ್ನು ಕೈಬಿಟ್ಟು ಅವನು ಅವಳ ಜತೆಯಲ್ಲಿ ಅಲೆಕ್ಝಾಂಡ್ರಿಯಾಕ್ಕೆ ತೆರಳುತ್ತಾನೆ. ರೋಮಿನಲ್ಲಿದ್ದ ಆರ್ಸಿನೋಳ ಹತ್ಯೆಯಾಗುತ್ತದೆ; ಇದು ಕ್ಲಿಯೋಪಾತ್ರಾಳ ಪ್ರೇರಣೆಯಿಂದ ಆಂಟನಿ ತನ್ನ ಜನರ ಮೂಲಕ ಮಾಡಿಸಿದ್ದು ಆಗಿರಬಹುದು. ಯಾಕೆಂದರೆ ಕ್ಲಿಯೋಪಾತ್ರ ಈ ತಂಗಿಯನ್ನು ತನ್ನ ಪ್ರತಿಸ್ಪರ್ಧಿಯಂತೆ ಕಾಣುತ್ತಿದ್ದಳು. ಈಗ ಅವಳು ದಾರಿಯಿಂದ ತೊಲಗಿದಂತಾಯಿತು.
40. ಈ ಮಧ್ಯೆ ಸೀಸರ್ ತನ್ನ ಉತ್ತರಾಧಿಕಾರಿಯಾಗಿ ಮಾಡಿದ್ದ ಒಕ್ಟೇವಿಯನ್ ಜತೆ (ಮುಂದೆ ಇವನೇ ಒಕ್ಟೇವಿಯಸ್ ಆಗಸ್ಟಸ್ ಸೀಸರ್ ಎಂದು ಖ್ಯಾತನಾದವನು) ಆಂಟನಿಗೆ ವಿರಸ ಬೆಳೆಯುತ್ತಲೇ ಇರುತ್ತದೆ. ಒಕ್ಟೇವಿಯನ್ ಜತೆ ಒಪ್ಪಂದವೊಂದನ್ನು ಮಾಡಿಕೊಳ್ಳುವುದಕ್ಕೋಸ್ಕರ ಅಂಟನಿ ಇಟೆಲಿಗೆ ತೆರಳುತ್ತಾನೆ. ಈ ಒಪ್ಪಂದದ ಭಾಗವಾಗಿ ಅವನು ಒಕ್ಟೇವಿಯನನ ಸೋದರಿ ಒಕ್ಟೇವಿಯಾಳನ್ನು ಮದುವೆಯಾಗಬೇಕಾಗುತ್ತದೆ. ಕ್ಲಿಯೋಪಾತ್ರಾಳಿಗೆ ಅಂಟನಿಯಿಂದ ಅವಳಿ ಜವಳಿ ಮಕ್ಕಳು ಜನಿಸುತ್ತಾರೆ: ಗಂಡು ಮಗುವಿನ ಹೆಸರು ಅಲೆಕ್ಝಾಂಡರ್ ಹೆಲಿಯೋಸ್, ಹೆಣ್ಣು ಮಗುವಿನ ಹೆಸರು ಕ್ಲಿಯೋಪಾತ್ರ ಸೆಲೀನೆ.
37. ಒಕ್ಟೇವಿಯನ್ ಮತ್ತು ಆಂಟನಿ ನಡುವಣ ಒಪ್ಪಂದ ಕುಸಿದು ಬಿದ್ದು ಇಬ್ಬರೂ ಪರಸ್ಪರ ದೂರ ಸರಿಯುತ್ತಾರೆ. ಆಂಟನಿ ಪಾರ್ಥಿಯನ್ ಸಾಮ್ರಾಜ್ಯದ ವಿರುದ್ಧದ ತನ್ನ ಆಕ್ರಮಣ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಕ್ಲಿಯೋಪಾತ್ರ ಆಂಟಿಯೋಖ್‍ನಲ್ಲಿ (ಈಗಿನ ದಕ್ಷಿಣ ಮಧ್ಯ ಟರ್ಕಿ) ಆಂಟನಿಯನ್ನು ಸೇರಿಕೊಳ್ಳುತ್ತಾಳೆ; ಅವರು ಮದುವೆಯಾಗುತ್ತಾರೆ. ಇದರಿಂದ ಒಕ್ಟೇವಿಯಸ್ ಸೀಸರ್ ಇನ್ನಷ್ಟು ಕುಪಿತನಾಗುತ್ತಾನೆ, ಯಾಕೆಂದರೆ ಆಂಟನಿಯ ಈ ಮದುವೆ ಕ್ಟೇವಿಯಾಳಿಗೆ ಎಸಗಿದ ದ್ರೋಹವೆಂದು ರೋಮಿನಲ್ಲಿ ಪರಿಗಣಿಸಲ್ಪಡುತ್ತದೆ.
36-35. ಪಾರ್ಥಿಯನ್ ಕಾರ್ಯಾಚರಣೆಯಿಂದ ದೊರೆತ ರಾಜ್ಯಲಾಭ ಅಲ್ಪವಾದುದು. ದೊರಕುವುದು ಮುಖ್ಯವಾಗಿ ಆರ್ಮೇನಿಯಾ. ಆಂಟನಿಯಿಂದ ಕ್ಲಿಯೋಪಾತ್ರಳಿಗೆ ಇನ್ನೊಬ್ಬ ಮಗ ಹುಟ್ಟುತ್ತಾನೆ, ಟಾಲೆಮಿ ಫಿಲಡೆಲ್ಫಸ್ ಎಂದು ಅವನಿಗೆ ಹೆಸರಿಡಲಾಗುತ್ತದೆ. 34. ಅಂಟನಿ ಅಲೆಕ್ಝಾಂಡ್ರಿಯಾದಲ್ಲಿ ಜೈತ್ರಯಾತ್ರೆ (Triumph) ನಡೆಸುತ್ತಾನೆ. ಇದು ಇದುವರೆಗೆ ರೋಮಿಗೆ ವಿಶಿಷ್ಟವಾದ ಆಚರಣೆಯಾಗಿತ್ತು; ರಾಜರೋ ದಂಡನಾಯಕರೋ ಯುದ್ಧದಲ್ಲಿ ಗೆದ್ದು ಮರಳಿದಾಗ ರೋಮಿನ ರಸ್ತೆಗಳಲ್ಲಿ ನಡೆಸುವ ಪಥಚಲನ–ಗೆದ್ದು ತಂದ ವಸ್ತುಗಳನ್ನು, ವಶಪಡಿಸಿಕೊಂಡ ವಿರೋಧಿ ಜನರನ್ನು ಪ್ರದರ್ಶಿಸಿಕೊಂಡು. ರೋಮಿನ ಈ ವೈಶಿಷ್ಟ್ಯವನ್ನು ಆಂಟನಿ ಈಗ ಮುರಿದುದು ಒಂದು ತಪ್ಪಾದರೆ, ಅಲೆಕ್ಝಾಂಡ್ರಿಯಾದ ಮೆರವಣಿಗೆಯಲ್ಲಿ ಅವನು ತಾನು ಪಾರ್ಥಿಯನ್ ಕಾರ್ಯಾಚರಣೆಯಲ್ಲಿ ಗೆದ್ದ ಭೂಭಾಗಗಳನ್ನು ಕ್ಲಿಯೋಪಾತ್ರಳಿಗೆ ನೀಡುತ್ತಾನೆ. ಸಿಸೇರಿಯೋನನ್ನು ಜೂಲಿಯಸ್ ಸೀಸರನ ಮಗನೆಂದು ಸಾರ್ವಜನಿಕವಾಗಿ ಘೋಷಿಸುತ್ತಾನೆ. ಅವನಿಗೆರಾಜರ ರಾಜ’ ಎಂಬ ಬಿರುದು ಕೊಡುತ್ತಾನೆ. ಇದೆಲ್ಲವೂ ಒಕ್ಟೇವಿಯನನ್ನು ಕೆರಳಿಸುತ್ತವೆ, ಹಾಗೂ ರೋಮನರನ್ನು ಸಿಟ್ಟಿಗೆಬ್ಬಿಸುತ್ತದೆ. ಅಂಟನಿ ಭೂಭಾಗವನ್ನು ವಶಪಡಿಸಿಕೊಂಡವರಲ್ಲಿ ಜೂಡಿಯಾದ ಹೆರೋಡ್ ಕೂಡ ಒಬ್ಬ; ಆತ ರೋಮನ್ ಸಾಮ್ರಾಜ್ಯದ ಅಧೀನದಲ್ಲಿ ಜೆರುಸಲೇಮಿನಲ್ಲಿ ಆಳುತ್ತಿದ್ದವನು. ಅವನಿಗೆ ಸೇರಿದ್ದ ಜೆರಿಕೋ ಎಂಬ ಪ್ರಾಂತವನ್ನು ಆಂಟನಿ ತೆಗೆದುಕೊಂಡು ಅದನ್ನು ಕ್ಲಿಯೋಪಾತ್ರಳಿಗೆ ಕೊಡುತ್ತಾನೆ. ಆಗ ಹೆರೋಡ್ ಅದಕ್ಕೆ ವಿರೋಧಿಸದೆ, ಆಂಟನಿಗೆ ವಿಧೇಯತೆ ತೋರಿದ್ದರೂ, ಮುಂದೆ ಒಕ್ಟೇವಿಯನ್ ಆಂಟನಿಯ ವಿರುದ್ಧ ಯುದ್ಧ ಸಾರಿದಾಗ ಹೆರೋಡ್ ತನ್ನ ನಿಷ್ಠೆಯನ್ನು ಸೀಸರನ ಕಡೆಗೆ ಬದಲಾಯಿಸುತ್ತಾನೆ.
32-31. ಆಂಟನಿ ಮತ್ತು ಕ್ಲಿಯೋಪಾತ್ರ ಸ್ವಲ್ಪ ಕಾಲ ಗ್ರೀಸಿನಲ್ಲಿ ಜೀವಿಸುತ್ತಾರೆ.
31. ಒಕ್ಟೇವಿಯನ್ ಆಂಟನಿಯ ವಿರುದ್ಧ ಸೇನಾ ಕಾರ್ಯಾಚರಣೆ ಸುರುಮಾಡುತ್ತಾನೆ. ಇದರಲ್ಲಿ ಆಖ್ಟಿಯಮ್ ಎಂಬಲ್ಲಿ (ಗ್ರೀಸಿನ ಪಶ್ಚಿಮ ಮಧ್ಯ ಸಮುದ್ರದಲ್ಲಿ) ನಡೆಯುವ ನೌಕಾ ಯುದ್ಧವೇ ನಿರ್ಣಾಯಕವಾದುದು. ಆಂಟನಿಗೆ ಕ್ಲಿಯೋಪಾತ್ರಾಳ ನೌಕಾದಳದ ಸಹಾಯ ಬೇಕಾಗುತ್ತದೆ. ಕ್ಲಿಯೋಪಾತ್ರ ಆರಂಭದಲ್ಲಿ ತನ್ನ ನೌಕಾದಳವನ್ನು ಯುದ್ಧಕ್ಕೆ ಇಳಿಸುತ್ತಾಳೆ; ಆದರೆ ತಾನು ಸೆರೆಸಿಕ್ಕುತ್ತೇನೆ ಎಂಬ ಭಯದಲ್ಲಿ ದಳವನ್ನು ಹಿಂತೆಗೆಯುವಂತೆ ಮಾಡುತ್ತಾಳೆ. ಆಂಟನಿಯ ಬಲ ಒಕ್ಟೇವಿಯನ್ ಸೇನೆಯನ್ನು ಸರಿಗಟ್ಟುವಂತೆ ಇರುವುದಿಲ್ಲ. ಆಂಟನಿಯ ಸೋಲು ಇನ್ನೇನು ಖಚಿತ ಎಂಬ ಅನುಮಾನ ಬರುತ್ತಲೇ ಅವನ ಸೈನಿಕರು ಒಕ್ಟೇವಿಯನ್ ಜತೆ ಸೇರಿಕೊಳ್ಳುತ್ತಾರೆ. ಹೀಗೆ ಅಂಟನಿ ಯುದ್ಧದಲ್ಲಿ ಸೋಲುತ್ತಾನೆ–ಆದರೆ ಸೆರೆ ಸಿಕ್ಕುವುದಿಲ್ಲ. ಅವನು ಕ್ಲಿಯೋಪಾತ್ರಾಳ ಹಡಗ ಸೇರುತ್ತಾನೆ. ಕ್ಲಿಯೋಪಾತ್ರಳ ಜತೆ ಜಗಳ ತೆಗೆಯುತ್ತಾನೆ–ಅವಳು ಯುದ್ಧದಿಂದ ತನ್ನ ದಳವನ್ನು ಹಿಂತೆಗೆದುದಕ್ಕೆ. ಸೋಲನ್ನು ಬರಮಾಡಿಕೊಂಡದ್ದು ಅವಳೇ ಎನ್ನುವುದು ಅವನ ವಾದ. ಕೆಲವು ಸಮಯದ ನಂತರ ಅವರು ರಾಜಿಯಾಗಿ ಇಬ್ಬರೂ ಅಲೆಕ್ಝಾಂಡ್ರಿಯಾದಲ್ಲಿ ಒಟ್ಟಿಗೇ ವಾಸಿಸುತ್ತಾರಾದರೂ, ಸ್ಥಿತಿ ಮೊದಲಿನಂತೆ ಇರುವುದಿಲ್ಲ.
30. ಒಕ್ಟೇವಿಯನ್ ಈಜಿಪ್ಶಿಯನ್ ಕಾರ್ಯಾಚರಣೆಯನ್ನು ಕೈಬಿಟ್ಟಿರುವುದಿಲ್ಲ. ಆಂಟನಿಯನ್ನು ಒಂದೋ ಕೊಲ್ಲಿಸುವುದು, ಇಲ್ಲವೇ ಸೆರೆಹಿಡಿಯುವುದು, ಮತ್ತು ಈ ರೀತಿ ಈ ಬಂಡಾಯವನ್ನು ಕೊನೆಗೊಳಿಸುವುದು ಅವನ ಗುರಿಯಾಗಿರುತ್ತದೆ. ಅವನು ಕ್ಲಿಯೋಪಾತ್ರಳ ಜತೆ ಸಂಪರ್ಕ ಸಾಧಿಸುತ್ತಾನೆ. ಆಂಟನಿಯನ್ನು ಕೊಲ್ಲಿಸಿದರೆ ತಾನು ಅವಳ ಹಿತವನ್ನು ಕಾಪಾಡುತ್ತೇನೆ ಎಂಬ ಸಂದೇಶ ತಲಪಿಸುತ್ತಾನೆ. ಕ್ಲಿಯೋಪಾತ್ರ ಬೇಕೆಂದರೂ ಆಂಟನಿಯನ್ನು ಕೊಲ್ಲಿಸುವುದು ಅವಳಿಂದ ಸಾಧ್ಯವಿರಲಿಲ್ಲ. ಆದ್ದರಿಂದ ಅವಳೊಂದು ಉಪಾಯ ಮಾಡುತ್ತಾಳೆ: ತಾನು ಆತ್ಮಹತ್ಯೆ ಮಾಡಿಕೊಂಡೆ ಎಂಬ ಸುದ್ದಿಯೊಂದನ್ನು ಆಂಟನಿಯ ಕಿವಿಗೆ ಬೀಳುವಂತೆ ನೋಡಿಕೊಳ್ಳುತ್ತಾಳೆ. ಆಂಟನಿ ಈ ವಾರ್ತೆಯಿಂದ ತಾನೇ ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುವನೆಂದು ಅವಳ ಯೋಚನೆ. ಆಂಟನಿ ಹಾಗೆಯೇ ಮಾಡುತ್ತಾನೆ; ಆದರೆ ಕ್ಲಿಯೋಪಾತ್ರಳಲ್ಲಿಗೆ ತನ್ನ ದೇಹವನ್ನು ಒಯ್ಯುವ ತನಕ ಅವನ ಪ್ರಾಣ ಹೋಗಿರುವುದಿಲ್ಲ. ಒಕ್ಟೇವಿಯನ್ ಜತೆ ರಾಜಿ ಮಾಡಿಕೊಳ್ಳುವಂತೆ ಅವಳಿಗೆ ಹೇಳಿ ಅವನು ಸಾಯುತ್ತಾನೆ.
ಒಕ್ಟೇವಿಯನ್‍ನ ಮನಸ್ಸಿನೊಳಗೇನಿದೆ ಎನ್ನುವುದರ ಕುರಿತು ಕ್ಲಿಯೋಪಾತ್ರಳಿಗೆ ಬಲವಾದ ಸಂದೇಹವಿರುತ್ತದೆ. ತನ್ನನ್ನು ಖೈದಿಯಾಗಿ ಮಾಡಿ ರೋಮಿಗೆ ಕರೆದೊಯ್ದು ಅಲ್ಲಿ ರಥಕ್ಕೆ ಕಟ್ಟಿ ಜೈತ್ರ ಘೋಷದಲ್ಲಿ ಎಳೆಸುವ ಅವಮಾನವನ್ನು ಅವಳು ಸಹಿಸಳು. ಆದ್ದರಿಂದ ಈಗ ನಿಜಕ್ಕೂ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸುತ್ತಾಳೆ. ಸಿಸೆರೋನಿಯನನ್ನು ನಂಬಿಕಸ್ತ ರಕ್ಷಕರೊಂದಿಗೆ ಪೂರ್ವ ಈಜಿಪ್ಟಿನ ಕೆಂಪು ಸಮುದ್ರದ ಕರಾವಳಿಗೆ ಆಡಗಿರಲು ಕಳಿಸುತ್ತಾಳೆ. ಅವಳ ಮೊದಲ ಯೋಜನೆಯಿದ್ದುದು ತನ್ನೆಲ್ಲ ಸಂಪತ್ತನ್ನು ಹುಗಿದಿಟ್ಟಿದ್ದ ತನ್ನ ಸ್ಮಾರಕಸ್ಥಳದಲ್ಲಿ ಬೆಂಕಿಹಾಕಿಕೊಂಡು ಎಲ್ಲದರ ಜತೆ ತನ್ನನ್ನೂ ಸುಟ್ಟುಕೊಳ್ಳುವುದು. ಆದರೆ ಒಕ್ಟೇವಿಯನನ ಸೈನಿಕರು ಅದಕ್ಕೆ ಮುನ್ನವೇ ಅವಳನ್ನು ಬಂಧಿಸಿ ಈ ಯೋಜನೆಗೆ ಭಂಗವೊಡ್ಡುತ್ತಾರೆ. ಕ್ಲಿಯೋಪಾತ್ರ ತನ್ನ ಅರಮನೆಯಲ್ಲೇ ಬಂಧನದಲ್ಲಿರುತ್ತಾಳೆ. ಆಗ ಅವಳಿಗೆ ಹೊಳೆಯುವುದು ಇನ್ನೊಂದು ತಂತ್ರ: ಈಜಿಪ್ಟಿನಲ್ಲಿ ಲಭ್ಯವಿದ್ದ ಒಂದು ತರದ ಕಡು ವಿಷದ ಚಿಕ್ಕ ಜಾತಿಯ ಹಾವಿನಿಂದ ಕಡಿಸಿಕೊಂಡು ಸಾಯುವುದು. ಇದಕ್ಕೋಸ್ಕರ ತಾನಿರುವಲ್ಲಿಗೆ ಇಂಥ ಹಾವನ್ನು ಅವಳು ಗುಪ್ತವಾಗಿ ತರಿಸಿಕೊಳ್ಳುತ್ತಾಳೆ. ಅದನ್ನು ತನ್ನ ಎದೆಯ ಮೇಲಿರಿಸಿ ಕಡಿಸಿಕೊಂಡು ಸಾಯುವುದರಲ್ಲಿ ಅವಳು ಸಫಲಳಾಗುತ್ತಾಳೆ. ಈಜಿಪ್ಟನ್ನು ಒಕ್ಟೇವಿಯನ್ ವಶಪಡಿಸಿಕೊಂಡರೂ ಆ ದೇಶದ ರಾಣಿಯನ್ನು ಹಿಡಿಯುವುದರಲ್ಲಿ ಅವನು ಸೋಲುತ್ತಾನೆ. ಪೂರ್ವಪ್ರದೇಶದಲ್ಲಿ ಅಡಗಿದ್ದ ಸಿಸೆರೋನಿಯನನ್ನು ತನ್ನ ಜನರನ್ನು ಕಳಿಸಿ ಹುಡುಕಿ ಹಿಡಿದು ಕೊಲ್ಲಿಸಲು ಅವನು ಏರ್ಪಾಡು ಮಾಡುತ್ತಾನೆ.
ಹೀಗೆ ಕ್ಲಿಯೋಪಾತ್ರಳ ದುರಂತ ಜೀವನ ಅವಳ 39ನೇ ವಯಸ್ಸಿನಲ್ಲಿ ದಾರುಣವಾಗಿ ಕೊನೆಗೊಳ್ಳುತ್ತದೆ. ಅವಳ ಸಾವಿನೊಂದಿಗೆ ಟಾಲೆಮಿ ರಾಜವಂಶವೂ ಅವಸಾನವಾಗುತ್ತದೆ. ಈಜಿಪ್ಟು ಪೂರ್ಣವಾಗಿ ರೋಮಿನ ಅಧಿಪತ್ಯಕ್ಕೆ ಒಳಗಾಗುತ್ತದೆ. ಹಾಗೂ ಅಂಟನಿಯನ್ನು ಇಲ್ಲದೆ ಮಾಡಿದ ಒಕ್ಟೇವಿಯನ್ ಈಗ ರೋಮಿನ ಸಾಮ್ರಾಟನಾಗುತ್ತಾನೆ. ಅದರೆ ಆತ ಮಾತ್ರ ತನ್ನನ್ನು ಎಂದಿಗೂ ಸಾಮ್ರಾಟನೆಂದು ಕರೆಸಿಕೊಳ್ಳಲು ಇಚ್ಫಿಸಲಿಲ್ಲ. ಅದರೂ ಸೆನೇಟ್ ಅವನಿಗೆ `ಆಗಸ್ಟಸ್’ ಎಂಬ ಬಿರುದು ಕೊಟ್ಟು ಗೌರವಿಸಿತು. ಒಕ್ಟೇವಿಯಸ್ ಅಗಸ್ಟಸ್ ಸೀಸರ್ ಎಂದು ಇತಿಹಾಸದಲ್ಲಿ ಇವನು ಖ್ಯಾತನಾದ. ರೋಮನ್ ಕ್ಯಾಲೆಂಡರಿನ (ಹಳೆಯ) ಅರನೇ ತಿಂಗಳಿಗೆ (ಈಗಿನ ಎಂಟನೇ ತಿಂಗಳಿಗೆ) ಇವನ ಹೆಸರನ್ನು ಇರಿಸಲಾಯಿತು; ಇದಕ್ಕೂ ಮೊದಲು (ಹಳೆಯ) ಐದನೇ ತಿಂಗಳಿಗೆ (ಈಗಿನ ಏಳನೇ ತಿಂಗಳಿಗೆ) ಜೂಲಿಯಸ್ ಸೀಸರನ ಹೆಸರನ್ನು ಇರಿಸಲಾಗಿತ್ತು: ಹೀಗೆ ಜುಲೈ ಎಂಬುದು ಜೂಲಿಯಸ್‍ನ ನೆನಪಿಗೆ, ಆಗಸ್ಟ್ ಎಂಬುದು ಒಕ್ಟೇವಿಯಸ್‍ನ ನೆನಪಿಗೆ. ಈ ಎರಡೂ ತಿಂಗಳುಗಳಿಗೆ 31 ದಿನಗಳು.
ಆಂಟನಿ ಮತ್ತು ಕ್ಲಿಯೋಪಾತ್ರಳ ನೆನಪಿಗೆ ಏನೂ ಸ್ಮಾರಕವಿಲ್ಲವೇ? ಇದೆ–ಶೇಕ್ಸ್‍ಪಿಯರನ ನಾಟಕ! ಇದಕ್ಕಿಂತ ಹೆಚ್ಚಿನ ಸ್ಮಾರಕವೊಂದು ಬೇಕೇ? ಇಡೀ ಶೇಕ್ಸ್‍ಪಿಯರ್ ಕೃತಿಗಳಲ್ಲಿ ಅತ್ಯಂತ ಜನಪ್ರಿಯವಾದ ನಾಟಕಗಳಲ್ಲಿ “ಅಂಟನಿ ಏಂಡ್ ಕ್ಲಿಯೋಪಾತ್ರ” ಕೂಡಾ ಒಂದು. ತನ್ನನ್ನು ರೋಮಿಗೆ ಸೆರೆಹಿಡಿದು ಒಯ್ದರೆ ಅಲ್ಲಿ ನಡೆಯುವ ಜೈತ್ರಯಾತ್ರೆಯ ಮನರಂಜನಾ ಕಾರ್ಯಕ್ರಮಗಳಲ್ಲಿ ಒಬ್ಬಾನೊಬ್ಬ ಬಾಲ ನಟ ತನ್ನ (ಕ್ಲಿಯೋಪಾತ್ರಳ) ವೇಷ ಹಾಕಿ ಕಿರುಚಲು ಕಂಠದಲ್ಲಿ ಬಸವಿಯಂತೆ ಅಣಕಿಸಿ ಪ್ರದರ್ಶಿಸುವ ಅವಮಾನವನ್ನು ತಾನು ನೋಡಬೇಕಾಗುತ್ತದೆ ಎಂದು ಕ್ಲಿಯೋಪಾತ್ರ ಕೊರಗುತ್ತಾಳೆ, ಶೇಕ್ಸ್‍ಪಿಯರನ ನಾಟಕದಲ್ಲಿ ಒಂದು ಕಡೆ. ಆದರೆ ಅಂಥ ಪ್ರಸಂಗವೇ ಬರುವುದಿಲ್ಲ. ಅದಕ್ಕೆ ಬದಲು ಶೇಕ್ಸ್‍ಪಿಯರ್ ಕ್ಲಿಯೋಪಾತ್ರಾಳನ್ನು ಅತ್ಯಂತ ಸೂಕ್ಷ್ಮವಾಗಿ ಸಕಲ ಪ್ರೀತಿ ಗೌರವಗಳೊಂದಿಗೆ ಚಿತ್ರಿಸಿದ್ದಾನೆ–ಸರ್ವಕಾಲಕ್ಕೆ ಸಲ್ಲುವ ಹಾಗೆ. ಹಾಗೂ ಅವಳನ್ನು ಕೆಟ್ಟುದಾಗಿ ನಾಟಕೀಕರಣಗೊಳಿಸುವುದನ್ನು ಈ ಮೂಲಕ ಅಲ್ಲಗಳೆದಿದ್ದಾನೆ.
ಶೇಕ್ಸ್‍ಪಿಯರ್ ಎಂದಿನಂತೆ ತನಗೆ ಬೇಕಾದ ವಿವರಗಳನ್ನು ಮಾತ್ರ ಚರಿತ್ರೆಯಿಂದ ಎತ್ತಿಕೊಳ್ಳುತ್ತಾನೆ, ಮತ್ತು ಕೆಲವೊಂದು ವಿವರಗಳನ್ನು ಮಾರ್ಪಡಿಸಿಕೊಳ್ಳುತ್ತಾನೆ. ಐತಿಹಾಸಿಕ ಕ್ಲಿಯೋಪಾತ್ರ ಬಹುಶಃ ಈನೋಬಾರ್ಬಸ್ (ಶೇಕ್ಸ್‍ಪಿಯರ್ ನಿರ್ಮಿಸುವ ಒಂದು ಕಾಲ್ಪನಿಕ ಪಾತ್ರ) ವರ್ಣಿಸುವಷ್ಟು ಸುಂದರಿಯಾಗಿದ್ದಳೋ ಇಲ್ಲವೋ ತಿಳಿಯದು; ಆದರೆ ಅವಳ ವ್ಯಕ್ತಿತ್ವದಲ್ಲೊಂದು ಆಕರ್ಷಣೆ ಇದ್ದಿರಲೇ ಬೇಕು. ವಿದ್ಯಾವಂತಳೂ ವಿವೇಕಿಯೂ ಛಲವಾದಿಯೂ ಅಗಿದ್ದಳು. ಆದರೆ ತನ್ನ ದಾರಿಗೆ ಅಡ್ಡ ಬಂದವರನ್ನು ನಿಷ್ಠುರವಾಗಿ ಇಲ್ಲದೆ ಮಾಡಲೂ ಕೂಡ ಅವಳು ಹೇಸುತ್ತಿರಲಿಲ್ಲ. ಆದ್ದರಿಂದಲೇ ತನ್ನ ಒಡಹುಟ್ಟಿದವರನ್ನೆಲ್ಲ ಒಬ್ಬೊಬ್ಬರನ್ನಾಗಿ ನಾಶಪಡಿಸಲು ಕಾರಣವಾಗುತ್ತಾಳೆ. ಶೇಕ್ಸ್‍ಪಿಯರ್ ಅವಳ ಛಲವನ್ನು ಬಿಂಬಿಸುತ್ತಾನೆ, ಆದರೆ ತನ್ನ ಒಡಹುಟ್ಟಿದವರನ್ನು ನಾಶಗೊಳಿಸಿದ ಕುರಿತು ಹೇಳುವುದಿಲ್ಲ. ಆಂಟನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಕ್ಲಿಯೋಪಾತ್ರ (ತಾನು ಸತ್ತಿದ್ದೇನೆ ಎಂದು) ಹಬ್ಬಿಸಿದ ಸುಳ್ಳು ಸುದ್ದಿ ಎಂಬ ಪ್ರಸ್ತಾಪ ನಾಟಕದಲ್ಲಿ ಬರುತ್ತದೆ; ಆದರೆ ನಾಟಕದ ಪ್ರಕಾರ ಅದಕ್ಕೆ ಕಾರಣ, ತನ್ನನ್ನು ಆಂಟನಿ ಎಷ್ಟು ಪ್ರೀತಿಸುತ್ತಾನೆ ಎಂದು ಕ್ಲಿಯೋಪಾತ್ರ ಪರೀಕ್ಷೆ ಮಾಡಲು ಬಯಸುವುದಲ್ಲದೆ, ಹೇಗಾದರೂ ಮಾಡಿ ಅವನನ್ನು ಸಾಯಿಸಬೇಕೆಂದು ಅವಳು ಬಯಸುವುದಲ್ಲ. ಹೀಗೆ ಈ ನಾಟಕವನ್ನು ಚಾರಿತ್ರಿಕ ನಾಟಕವೆಂದು ನಾವು ಕಾಣಬೇಕಲ್ಲದೆ, ಚರಿತ್ರೆಯೆಂದು ಪರಿಗಣಿಸಬಾರದು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ