- ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ - ಅಕ್ಟೋಬರ್ 30, 2024
- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
ಅಂಕ 1
ದೃಶ್ಯ 1
ಈಜಿಪ್ಟ್, ಆಸ್ಥಾನ
ಡಿಮಿಟ್ರಿಯಸ್ ಮತ್ತು ಫಿಲೋ ಪ್ರವೇಶ…
ಫಿಲೋ. ಅಣ್ಣ, ಮಿತಿಮೀರಿಹೋಯಿತು ನಮ್ಮ ದಂಡನಾಯಕರ ಮರುಳು. ದಂಡಿನ ಸಾಲುಗಳ ಮೇಲೆ ಕವಚಧಾರಿ ರಣದೇವತೆಯಂತೆ ಬೆಳಗಿದ ಅವನ ಕಣ್ಣುಗಳು ಈಗ ಬಗ್ಗಿಸುತ್ತಿವೆ, ಪರಿತಪಿಸುತ್ತಿವೆ.
ತಮ್ಮ ದೃಷ್ಟಿಯ ಗುರಿಯನ್ನು ಒಂದು ಶ್ಯಾಮಲವರ್ಣದ ಮುಖದ ಮೇಲೆ. ಮಹಾ ಹಣಾಹಣಿಗಳಲ್ಲಿ ಎದೆಗಟ್ಟುಗಳನ್ನು ಒಡೆದ ಅವನ ಕಪ್ತಾನ ಹೃದಯ ಎಲ್ಲ ಸಂಯಮವ ಕಳೆದುಕೊಂಡು ಜಿಪ್ಸಿಯೊಬ್ಬಳ ಲಾಲಸೆಯ ತಣಿಸಲು ತಿದಿಯಾಗಿಬಿಟ್ಟಿದೆ.
ಬಾಜಾಬಜಂತ್ರಿ. ಆಂಟನಿ, ಕ್ಲಿಯೋಪಾತ್ರ, ಆಕೆಯ ಸಖಿಯರಾದ ಚಾರ್ಮಿಯಾನ್ ಮತ್ತು ಇರೋಸ್, ಮತ್ತು ಉಳಿದವರು, ಖೋಜಾಗಂಡುಗಳು ಕ್ಲಿಯೋಪಾತ್ರಳಿಗೆ ಗಾಳಿಹಾಕುತ್ತ, ಪ್ರವೇಶ
ನೋಡು ಬರುತ್ತಿದ್ದಾರೆ. ಚೆನ್ನಾಗಿ ನೋಡು, ಜಗತ್ತಿನ ಮೂರು ಸ್ತಂಭಗಳಲ್ಲಿ ಒಂದು ಗುಡಿಸೆಟ್ಟಿಯೊಬ್ಬಳ ಕೈಗೊಂಬೆಯಾದ್ದನ್ನು ನೀನವನಲ್ಲಿ ಕಾಣುವಿ. ಕಣ್ಣೆತ್ತಿ ನೋಡು.
ಕ್ಲಿಯೋ. ಅದು ಪ್ರೀತಿಯೇ ಆಗಿದ್ದರೆ, ಎಷ್ಟೆಂದು
ಹೇಳಿ.
ಆಂಟನಿ. ಎಣಿಸಬಹುದಾದ ಪ್ರೀತಿಯಲ್ಲಿ ಯಾಚಕತನ
ಇರುತ್ತದೆ.
ಕ್ಲಿಯೋ. ನಿಮ್ಮ ಪ್ರೀತಿಗೆ ನಾನು ನಿಗದಿ ನಿರ್ಣಯಿಸುವೆ.
ಆಂಟನಿ. ಹಾಗಾದರೆ ನೀನು ಹೊಸ ಆಕಾಶ ಹೊಸ ಭೂಮಿ ಹುಡುಕಬೇಕಾಗುತ್ತದೆ.
ದೂತನೊಬ್ಬನ ಪ್ರವೇಶ
ದೂತ. ಸುದ್ದಿ, ಮಹಾಪ್ರಭೂ, ರೋಮಿನಿಂದ.
ಆಂಟನಿ. ತಲೆಶೂಲೆ! ಆಯ್ತು, ಒಂದು ಮಾತಿನಲ್ಲಿ ಹೇಳು.
ಕ್ಲಿಯೋ. ಇಲ್ಲ, ಎಲ್ಲಾ ಕೇಳಿ, ಆಂಟನಿ.
ಫುಲ್ವಿಯಾ ಬಹುಶಃ ಸಿಟ್ಟಾಗಿದ್ದಾಳೆ. ಅಥವಾ ಯಾರಿಗೆ
ಗೊತ್ತು ಇನ್ನೂ ಮೀಸೆ ಮೊಳೆತಿರದ ಸೀಸರ್ ಕಟ್ಟಪ್ಪಣೆ-
ಯೊಂದನ್ನು ಕಳಿಸಿರಬಹುದು, `ಅದು ಮಾಡು, ಇದು ಮಾಡು;
ಈ ದೇಶ ಕಬಳಿಸು, ಈ ದೇಶ ಬಿಡುಗಡೆಗೊಳಿಸು,
ಮಾಡು ಇಲ್ಲವೇ ಮಡಿ.’
ಆಂಟನಿ. ಏನು ಹೇಳ್ತ ಇದ್ದೀಯ?
ಕ್ಲಿಯೋ. ಬಹುಶಃ? ಅಲ್ಲ, ಖಂಡಿತ. ನೀವಿಲ್ಲಿ
ಇನ್ನು ನಿಲ್ಲಬಾರದು; ಸೀಸರನಿಂದ ಕರೆ ಬಂದಿದೆ ನಿಮಗೆ.
ಆದ್ದರಿಂದ ಅದೇನೆಂದು ಕೇಳಿ, ಆಂಟನಿ, ಎಲ್ಲಿ ಫುಲ್ವಿಯಾಳ ಆಜ್ಞೆ? — ಅದು ಸೀಸರನದ್ದೆಂದು ನನ್ನ ಲೆಕ್ಕ. ಎರಡೂ?
ಓಲೆಕಾರರ ಕರೆಯಿರಿ. ಈ ಈಜಿಪ್ಟಿನ ರಾಣಿ ನಾನಾಗಿದ್ದರೆ,
ನೀವು ನಾಚುತ್ತೀರಿ, ಆಂಟನಿ, ನಿಮ್ಮ ಮುಖದ ಮೇಲಿನ ಆರಕ್ತ ಸೀಸರನ ಮಾಂಡಲಿಕ; ಅಥವಾ ಕೀರುಗಂಟಲಿನ ಫುಲ್ವಿಯಾ ಬಯ್ಯುತ್ತಿರುವಾಗ ನಿಮ್ಮ ಕದಪು ತೆರುತ್ತಿರಬಹುದು ತಪ್ಪುಕಾಣಿಕೆ ಈ ರೀತಿ. ಎಲ್ಲಿ ಓಲೆಕಾರರು?
ಆಂಟನಿ. ರೋಮು ಕರಗಲಿ ಟೈಬರಿನಲ್ಲಿ, ಪಸರಿಸಿದ
ಸಾಮ್ರಾಜ್ಯದ ಮಹಾಕಮಾನು ಮುರಿದು ಬೀಳಲಿ! ನನ್ನ
ಜಾಗವಿರುವುದು ಇಲ್ಲಿ. ಅರಸೊತ್ತಿಗೆ ಆವೆಮಣ್ಣು, ನಮ್ಮೀ ಲದ್ದಿ ನೆಲ ಮನುಷ್ಯನ ಬೆಳೆಸುವಂತೆಯೇ ಮೃಗವನ್ನೂ ಬೆಳೆಸುತ್ತದೆ. ಜೀವನದ ಉದಾತ್ತತೆಯೆಂದರೆ ಇದು, ಯಾವಾಗ ಈ ಇಂಥ ಸರಿಸಮಾನ ಜೊತೆ ಈ ಇಂಥ ಅವಳಿ ಮಾಡಬಹುದಾದಂಥದು — ಇದರಲ್ಲಿ ನಾವು
ಉಪಮಾತೀತರೆನ್ನುವುದನ್ನು ಜನ ತಿಳಿಯುವಂತೆ ನಾನು
ನಿರ್ಬಂಧಿಸುವೆ, ಉಲ್ಲಂಘಿಸಿದರೆ ಶಿಕ್ಷಿಸುವೆ.
ಕ್ಲಿಯೋ. ಘನವಾದ ಸುಳ್ಳು! ಇವರು ಫುಲ್ವಿಯಾಳನ್ನು
ಮದುವೆಯಾದ್ದು ಯಾಕೆ, ಪ್ರೀತಿಸದಿದ್ದುದು ಯಾಕೆ? ನಾನು ಮೂರ್ಖಳಲ್ಲ. ಆದರೂ ಮೂರ್ಖಳಂತೇ ಇರುವೆ. ಆಂಟನಿ ತಾವು ತಾವಾಗಿಯೇ ಇರುತ್ತಾರೆ.
ಆಂಟನಿ. ಆದರೆ ಸ್ಫೂರ್ತಿ ಕ್ಲಿಯೋಪಾತ್ರ. ಈಗ, ಪ್ರೀತಿಯ ಪ್ರೀತಿ ಕಾರಣ ಹಾಗೂ ಅದರ ಮಿದು ಸಮಯ ಕಾರಣ, ಒರಟು ಸಂಭಾಷಣೆಗಳಿಂದ ನಾವು ವೇಳೆ ಹಾಳುಮಾಡದೆ ಇರೋಣ. ಈಗಿನ್ನು ನಮ್ಮ ಬದುಕಿನ ಒಂದು ಕ್ಷಣ ಕೂಡ ಸಂತೋಷದಿಂದಲ್ಲದೆ ವಿಸ್ತರಿಸಬಾರದು. ಏನು ಕಾರ್ಯಕ್ರಮ ಈ ರಾತ್ರಿ?
ಕ್ಲಿಯೋ. ದೂತರ ಸಂದೇಶ ಆಲಿಸುವುದು.
ಆಂಟನಿ. ಛೀ, ಜಗಳಗಂಟಿ ರಾಜ್ಞಿಯೇ, ನಿನಗಾದರೆ
ಎಲ್ಲವೂ ಶೋಭೆ, ಬಯ್ಯುವುದು, ನಗುವುದು, ಅಳುವುದು, ಪ್ರತಿಯೊಂದು ಭಾವೋದ್ವೇಗವೂ ಹೆಣಗುತ್ತದೆ ನಿನ್ನಲ್ಲಿ ಸುಂದರ ಮತ್ತು ಶ್ಲಾಘ್ಯವಾಗುವುದಕ್ಕೆ!
ನಿನ್ನ ದೂತನ ಹೊರತು ಬೇರೆ ದೂತನಿಲ್ಲ, ಮತ್ತು ನಾವಿಬ್ಬರೇ ಈ ರಾತ್ರಿ ರಸ್ತೆಗಳ ಸುತ್ತೋಣ, ಜನಜೀವನವ
ಅವಲೋಕಿಸೋಣ. ಬಾ, ನನ್ನ ರಾಣಿ, ನಿನ್ನೆ ರಾತ್ರಿ ನೀನಿದನ್ನೇ ಬಯಸಿದ್ದಿ.
[ದೂತನಿಗೆ] ನನ್ನ ಹತ್ತಿರ ಮಾತಾಡಬೇಡ.
[ಆಂಟನಿ ಮತ್ತು ಕ್ಲಿಯೋಪಾತ್ರ, ಚಾರ್ಮಿಯಾನ್, ಇರೋಸ್, ಮತ್ತು ನಪುಂಸಕರ ಜತೆ ನಿಷ್ಕ್ರಮಣ]
ಡಿಮಿಟ್ರಿಯಸ್. ಸೀಸರನೆಂದರೆ ಆಂಟನಿಗೆ ಇಷ್ಟೆಯೇ?
ಫಿಲೋ. ಸ್ವಾಮಿ, ಆತ ಆಂಟನಿಯಾಗಿರದಿದ್ದ ಕೆಲವು ವೇಳೆ ಆಂಟನಿಯ ಕೂಡೆ ಇರಬೇಕಾದ ಆ ದೊಡ್ಡ ಗುಣಕ್ಕಿಂತ ಬಹಳ ಕಮ್ಮಿ ಬೀಳುವುದುಂಟು ಆಂಟನಿ.
ಡಿಮಿಟ್ರಿಯಸ್. ದುರದೃಷ್ಟದ ಸಂಗತಿಯೆಂದರೆ, ರೋಮಿನಲ್ಲಿ ಅವನ ಬಗ್ಗೆ ಹೀಗೆ ಮಾತಾಡುವ ಸುಳ್ಳರಿಗೂ ಅವನು ಸಮರ್ಥನೆ ಒದಗಿಸುವುದು; ಆದರೆ, ನಾಳೆ ಎಲ್ಲಾ ಸರಿಯಾಗುತ್ತದೆ ಎಂದುಕೊಳ್ಳುತ್ತೇನೆ. ಸಮಾಧಾನವಾಗಿರು!
[ಇಬ್ಬರೂ ನಿಷ್ಕ್ರಮಣ]
ದೃಶ್ಯ 2
ಸ್ಥಳ ಹಿಂದಿನದೇ. ಮರುದಿನ
ಈನೋಬಾರ್ಬಸ್, ಲಂಪ್ರಿಯಸ್, ಒಬ್ಬ ಕಣಿಕಾರ, ರನ್ನಿಯಸ್, ಲೂಸಿಲಿಯಸ್, ಚಾರ್ಮಿಯಾನ್, ಇರೋಸ್, ನಪುಂಸಕ ಮಾರ್ಡಿಯಾನ್, ಮತ್ತು ಅಲೆಕ್ಸಾಸ್ ಪ್ರವೇಶ
ಚಾರ್ಮಿ. ಶ್ರೀಮಾನ್ ಅಲೆಕ್ಸಾಸ್, ಮುದ್ದು ಅಲೆಕ್ಸಾಸ್,
ಸರ್ವಶ್ರೇಷ್ಠ ಅಲೆಕ್ಸಾಸ್, ಸಕಲ ಶ್ರೇಷ್ಠ ಅಲೆಕ್ಸಾಸ್, ರಾಣಿಯ ಮುಂದೆ ನೀನು ತಾರೀಫುಮಾಡಿದ ಕಣಿಕಾರನೆಲ್ಲಿ? ಕೊಂಬಿಗೆ ಮಾಲೆಯೇರಿಸಲು
ಸಿದ್ಧನಾಗಿದ್ದಾನೆಂದು ನೀನು ಹೇಳುವ ಈ ಗಂಡ ನನಗೆ ಗೊತ್ತಿದ್ದರೆ ಎಷ್ಟು ಚೆನ್ನ!
ಅಲೆಕ್ಸಾಸ್. ಕಣಿಕಾರ!
ಕಣಿಕಾರ. ಏನಪ್ಪಣೆ?
ಚಾರ್ಮಿ. ಇವನೇ ಮನುಷ್ಯ! — ನೀನೇ ಏನು ಎಲ್ಲಾ
ತಿಳಿದವನು?
ಕಣಿಕಾರ. ಪ್ರಕೃತಿಯ ಅನಂತ ರಹಸ್ಯದ ಗ್ರಂಥದಲ್ಲಿ
ನಾನು ಸ್ವಲ್ಪ ಓದಬಲ್ಲೆ.
ಅಲೆಕ್ಸಾಸ್. [ಚಾರ್ಮಿಯಾನ್‍ಗೆ] ಅವನಿಗೆ ನಿನ್ನ ಕೈ ತೋರಿಸು.
ಈನೋ. ಔತಣದೂಟ ಬೇಗನೆ ತನ್ನಿ; ದ್ರಾಕ್ಷಾರಸ ಸಾಕಷ್ಟಿರಲಿ ಕ್ಲಿಯೋಪ್ರಾತ್ರಾಳ ಆರೋಗ್ಯ ಸ್ವಸ್ತಿಗೆ.
ಚಾರ್ಮಿ. [ಕಣಿಕಾರನಿಗೆ ಕೈ ನೀಡುತ್ತ] ಅಯ್ಯಾ, ನನಗೆ ಒಳ್ಳೇ ಭಾಗ್ಯವನ್ನೇ ಕೊಡು.
ಕಣಿಕಾರ. ನಾನು ಕೊಡುವುದಿಲ್ಲ, ನೋಡುತ್ತೇನೆ ಅಷ್ಟೆ.
ಚಾರ್ಮಿ. ಸರಿ ಹಾಗಿದ್ದರೆ, ಒಳ್ಳೇದನ್ನೇ ನೋಡು.
ಕಣಿಕಾರ. ನೀನೀಗ ಇರುವುದಕ್ಕಿಂತಲೂ ಚೆನ್ನಾಗುವಿ.
ಚಾರ್ಮಿ. ಅವನು ಉದ್ದೇಶಿಸುವುದು ಮೈ ಗಾತ್ರ.
ಇರೋಸ್. ಅಲ್ಲ, ಮುದುಕಿಯಾದಾಗ ಬಣ್ಣ ಬಳಿಯುವಿ ಅಂತ.
ಚಾರ್ಮಿ. ಸುಕ್ಕು ಬರದಿರಲಿ, ದೇವರೇ!
ಅಲೆಕ್ಸಾಸ್. ಅವನ ಮತಿಯನ್ನು ಕೆಣಕಬೇಡಿ. ಹುಷಾರಾಗಿರಿ.
ಚಾರ್ಮಿ. ಶ್ಶ್!
ಕಣಿಕಾರ. ನೀನು ಪ್ರೀತಿ ಪಡೆಯೋದಕ್ಕಿಂತ ಕೊಡೋದೇ
ಜಾಸ್ತಿ.
ಚಾರ್ಮಿ. ಅದಕ್ಕಿಂತಲೂ ಒಳ್ಳೇದು ಕುಡಿದು ಪಿತ್ಥ
ಕಾಯಿಸೋದು.
ಅಲೆಕ್ಸಾಸ್. ಸುಮ್ಮನೆ ಅವನು ಹೇಳೋದನ್ನು ಕೇಳಿ.
ಚಾರ್ಮಿ. ಒಳ್ಳೇದು, ಸ್ವಲ್ಪ ಉತ್ತಮ ಭಾಗ್ಯ! ಒಂದೇ
ಮುಂಜಾನೆ ನನಗೆ ಮೂರು ಮೂರು ರಾಜರುಗಳ ಜತೆ ಮದುವೆ, ಆಮೇಲೆ ವಿಧವೆ, ಐವತ್ತಕ್ಕೆ ನನಗೊಂದು ಮಗು, ಆ ಮಗುವಿಗೆ ಯೆಹೂದಿಗಳರಸ ಹೆರೋಡ್ ಕಾಣಿಕೆ ತೆರಲಿ. ಒಕ್ಟೇವಿಯಸ್ ಸೀಸರನ ನಾನು ಮದುವೆಯಾಗುವುದಾಗಿ ಕಾಣು, ಮತ್ತು
ನನ್ನೊಡತಿಗೆ ನಾನು ಸಮಾನಳಾಗಬೇಕು.
ಕಣಿಕಾರ. ನಿನ್ನ ಪ್ರತಿಯೊಂದು ಆಸೆಗೂ ಗರ್ಭವಿರುತ್ತಿದ್ದರೆ ಮತ್ತು ಪ್ರತಿಯೊಂದು ಆಸೆಯೂ ಫಲಪ್ರದವಾದರೆ, ಮೂರು ಸಾವಿರ ಮಕ್ಕಳು ನಿನಗೆ.
ಚಾರ್ಮಿ. ಹೋಗು ಹೋಗಯ್ಯ, ಮೂರ್ಖ. ಮಾಟಗಾರನಿಗೆ ನನ್ನ ಕ್ಷಮೆ.
ಅಲೆಕ್ಸಾಸ್. ನಿನ್ನ ಹಾಸಿಗೆಬಟ್ಟೆಗಲ್ಲದೆ ಇನ್ನು ಯಾರಿಗೂ ಗೊತ್ತಿಲ್ಲ ನಿನ್ನ ಆಸೆಗಳು ಅಂದುಕೊಂಡಿಯಾ?
ಚಾರ್ಮಿ. ಇಲ್ಲ, ಬೇಡ, ಇರೋಸ್‍ಗೆ ಹೇಳು ಅವಳ ಅದೃಷ್ಟ.
ಅಲೆಕ್ಸಾಸ್. ನಮಗೆಲ್ಲಾ ಗೊತ್ತಾಗುತ್ತದೆ ನಮ್ಮ ನಮ್ಮ ಅದೃಷ್ಟ.
ಈನೋ. ನನ್ನದು, ಹಾಗೂ ನಮ್ಮಲ್ಲಿ ಅನೇಕರದು, ಕುಡಿದು ಮಲಗೋ ಅದೃಷ್ಟ ಈ ರಾತ್ರಿ.
ಇರೋಸ್. [ಕಣಿಕಾರನಿಗೆ ಕೈ ನೀಡುತ್ತ] ಕನ್ಯತ್ವ ಸೂಚಿಸುವ ಕೈ ಇದು, ಇನ್ನೇನೇ ಇರದಿದ್ದರೂ.
ಚಾರ್ಮಿ. ನೈಲ್ ನದಿಯ ನೆರೆ ಕ್ಷಾಮ ಸೂಚಿಸುವ ಹಾಗೆ.
ಇರೋಸ್. ಹೋಗೇ, ನಿನಗೆ ಕಣಿ ಗೊತ್ತಿಲ್ಲ.
ಚಾರ್ಮಿ. ಜಿಗುಟು ಕೈ ಫಲವಂತಿಕೆಯ ಲಕ್ಷಣವಲ್ಲದಿದ್ದರೆ, ನನ್ನ ಕಿವಿ ಹಿತ್ತಾಳೆಯದೆಂದು ಲೆಕ್ಕ. ಆಯ್ತು, ಈಕೆಗೊಂದು ಐನಾತಿ ಅದೃಷ್ಟ ಹೇಳು.
ಕಣಿಕಾರ. ನಿಮ್ಮಿಬ್ಬರ ಅದೃಷ್ಟಗಳೂ ಒಂದೇ.
ಇರೋಸ್. ಅದು ಹೇಗೆ, ಅದು ಹೇಗೆ? ವಿವರಿಸಿ ಹೇಳು.
ಕಣಿಕಾರ. ನಾನು ಹೇಳಿಯಾಯ್ತು.
ಇರೋಸ್. ಇವಳಿಗಿಂತ ನಾನು ಅದೃಷ್ಟದಲ್ಲಿ ಒಂದಿಂಚೂ ಹೆಚ್ಚಿಲ್ಲವಾ?
ಚಾರ್ಮಿ. ಸರಿ, ಅದೃಷ್ಟದಲ್ಲಿ ನೀನು ನನಗಿಂತ ಒಂದಿಂಚು ಹೆಚ್ಚಿದ್ದರೆ ಅದನ್ನು ಎಲ್ಲಿ ಆರಿಸಿಕೊಳ್ಳುವಿ?
ಇರೋಸ್. ನನ್ನ ಗಂಡನ ಮೂಗಿನಲ್ಲಂತೂ ಅಲ್ಲ.
ಚಾರ್ಮಿ. ದೇವರೇ ಗತಿ ಈ ನಮ್ಮ ಪೋಲಿ ವಿಚಾರಗಳಿಗೆ!
ಅಲೆಕ್ಸಾಸ್ — ಎಲ್ಲಿ, ಇವನ ಅದೃಷ್ಟ, ಇವನ ಅದೃಷ್ಟ! ಇವ ನಡೀಲಾರದವಳನ್ನ ಮದುವೆಯಾಗಲಿ, ಐಸಿಸ್ ದೇವಿ, ನಿನ್ನಲ್ಲಿ ಪ್ರಾರ್ಥನೆ, ಆಮೇಲೆ ಅವಳು ಸತ್ತೂ ಹೋಗಲಿ, ಆಮೇಲೆ ಅದಕ್ಕಿಂತಲೂ ಕೆಟ್ಟವಳೊಬ್ಬಳನ್ನು ಅವನಿಗೆ ಕೊಡು, ಕೆಟ್ಟವಳ ಮೇಲೆ ಕೆಟ್ಟವಳನ್ನು, ಕೆಟ್ಟಾತಿಕೆಟ್ಟವಳು ಅವನನ್ನು ಗಹಗಹಿಸಿ ನೋಡಿ ಗೋರಿಯತನಕ ಹಿಂಬಾಲಿಸುವ ವರೆಗೆ, ಹಾದರಗಿತ್ತೀ
ಗಂಡ ಐವತ್ತು ಸರ್ತಿ! ಒಳ್ಳೇ ಐಸಿಸ್, ಈ ನನ್ನ ಪ್ರಾರ್ಥನೆ
ಕೇಳು, ನನ್ನ ಗುರುತರವಾದ ಭಾಗ್ಯ ನೀನು ಕೊಡದಿದ್ದರೂ
ಪರವಾಯಿಲ್ಲ; ಒಳ್ಳೇ ಐಸಿಸ್, ನಿನ್ನ ಬೇಡಿಕೊಳ್ಳುತ್ತೇನೆ.
ಇರೋಸ್. ಆಮೆನ್, ಪ್ರಿಯ ದೇವತೆಯೆ, ಜನರ ಪ್ರಾರ್ಥನೆ ಕೇಳು!
ಯಾಕೆಂದರೆ, ಒಬ್ಬ ಲಕ್ಷಣವಂತನಿಗೆ ಜಾರೆ ಹೆಂಡತಿಯಿರೋದು
ಎಷ್ಟು ಹೃದಯವಿದ್ರಾವಕವೋ, ಅಷ್ಟೇ ಭಯಂಕರ ದುಃಖ
ಒಬ್ಬ ಕೆಟ್ಟ ದಗಾಕೋರನ ಹೆಂಡತಿ ಪತಿವ್ರತೆಯಾಗಿರೋದು ಕೂಡ.
ಆದ ಕಾರಣ, ಪ್ರಿಯ ಐಸಿಸ್, ಮರ್ಯಾದೆ ಉಳಿಸು, ಹಾಗೂ
ಅದಕ್ಕನುಗುಣವಾಗಿ ಅವನ ಅದೃಷ್ಟ ನಿರ್ಣಯಿಸು!
ಚಾರ್ಮಿ. ಆಮೆನ್.
ಅಲೆಕ್ಸಾಸ್. ನೋಡಿದಿರಾ ಈಗ, ನನ್ನ ಹಾದರಗಿತ್ತೀ ಗಂಡನ್ನ
ಮಾಡೋದು ಅವರ ಕೈಯಲ್ಲಿರುತ್ತಿದ್ದರೆ, ತಾವು
ಜಾರೆಯರಾಗುವುದಕ್ಕೂ ಅವರು ತಯಾರು!
ಕ್ಲಿಯೋಪಾತ್ರಳ ಪ್ರವೇಶ
ಈನೋ. ಶ್ಶ್, ಆಂಟನಿ ಬರುತ್ತಿದ್ದಾರೆ.
ಚಾರ್ಮಿ. ಅವರಲ್ಲ, ರಾಣಿ ಬರುತ್ತಿದ್ದಾಳೆ.
ಕ್ಲಿಯೋ. ನನ್ನ ಸ್ವಾಮೀನ ನೋಡಿದಿರಾ?
ಚಾರ್ಮಿ. ಇಲ್ಲ, ಮಹಾರಾಣಿ.
ಕ್ಲಿಯೋ. ಅವರಿಲ್ಲಿ ಇರಲಿಲ್ವೆ?
ಚಾರ್ಮಿ. ಇಲ್ಲ, ಮಹಾರಾಣಿ.
ಕ್ಲಿಯೋ. ಮಜಾಮಾಡುವ ಮನಸ್ಸಿನಲ್ಲಿದ್ದರು, ಆಮೇಲೆ
ರೋಮನ್ ವಿಚಾರವೊಂದು ಅಚಾನಕ ಅವರಿಗೆ ಬಡಿಯಿತು.
ಈನೋ. ಮಹಾರಾಣಿ?
ಕ್ಲಿಯೋ. ಹುಡುಕಿ ತನ್ನಿ ಅವರನ್ನು ಇಲ್ಲಿಗೆ. ಅಲೆಕ್ಸಾಸ್ ಎಲ್ಲಿ?
ಅಲೆಕ್ಸಾಸ್. ಇಲ್ಲೇ ಇದ್ದೇನೆ. — ಬರುತ್ತಿದ್ದಾರೆ ದನಿಗಳು.
ದೂತನೊಂದಿಗೆ ಆಂಟನಿಯ ಪ್ರವೇಶ
ಕ್ಲಿಯೋ. ನಾವು ಅವರ ಕಡೆ ನೋಡೋದೇ ಬೇಡ. ಬನ್ನಿ
ನನ್ನ ಜತೆ.
[ಆಂಟನಿ ಮತ್ತು ದೂತನನ್ನುಳಿದು ಇನ್ನೆಲ್ಲರ ನಿಷ್ಕ್ರಮಣ]
ದೂತ. ತಮ್ಮ ಮಡದಿ ಫುಲ್ವಿಯಾ ಬಯಲಿಗೆ ಬಂದರು.
ಆಂಟನಿ. ನನ್ನ ಸೋದರ ಲೂಸಿಯಸ್ ವಿರುದ್ಧ?
ದೂತ. ಹೌದು; ಆದರೆ ಬೇಗನೆ ಆ ಯುದ್ಧ ಕೊನೆಗೊಂಡಿತು,ಕಾಲದ ಪರಿಸ್ಥಿತಿ ಅವರನ್ನು ಮಿತ್ರರನ್ನಾಗಿ ಮಾಡಿತು, ಸೀಸರನ ವಿರುದ್ಧ ಅವರ ದಂಡುಗಳನ್ನು ಜೋಡಿಸಿ. ಮೊದಲ
ಮುಖಾಮುಖಿಯಲ್ಲೆ ಸೀಸರನಿಗೊದಗಿದ ಗೆಲುವು ಇಟೆಲಿಯಿಂದ ಅವರನ್ನು ಹೊರಗಟ್ಟಿತು.
ಆಂಟನಿ. ಸರಿ, ಆಮೇಲೇನಾಯಿತು?
ದೂತ. ಕೆಟ್ಟ ಸುದ್ದಿಯ ಗುಣ ಹೇಳುವವನಿಗೆ ತಟ್ಟುತ್ತದೆ.
ಆಂಟನಿ. ಅದು ಮೂರ್ಖರ ಅಥವಾ ಹೇಡಿಗಳ ಕುರಿತು.
ಹೇಳು. ಒಮ್ಮೆ ಆಯಿತೆಂದರೆ ನನ್ನ ಮಟ್ಟಿಗೆ ಮುಗಿಯಿತು.
ಹೇಗೆಂದರೆ, ನನ್ನಲ್ಲಿ ನಿಜ ಹೇಳುವವ ಅವನ ಹೇಳಿಕೆಯಲ್ಲಿ
ಸಾವೇ ಅಡಗಿದ್ದರೂ ನನ್ನನ್ನು ಸ್ತುತಿ ಮಾಡಿದ ಹಾಗೆ ನಾನು
ಕೇಳಿಸಿಕೊಳ್ಳುವವ.
ದೂತ. ಲಿಬಿಯೆನಸ್ — ಇದು ತೀರಾ ಕೆಟ್ಟ ಸುದ್ದಿ —
ಲಿಬಿಯೆನಸ್ ತನ್ನ ಬಲದೊಂದಿಗೆ ಏಶ್ಯಾವನ್ನು ಆಕ್ರಮಿಸಿ-
ಕೊಂಡಿದ್ದಾನೆ; ಯುಫ್ರೆಟಿಸ್ ನದಿಯಿಂದ ಅವನ ವಿಜಯಪತಾಕೆ
ಹಾರಿತು, ಸಿರಿಯಾದಿಂದ ಲಿಡಿಯಾಕ್ಕೆ ಮತ್ತು ಅಯೋನಿಯಾಕ್ಕೆ,
ಇತ್ತ —
ಆಂಟನಿ. ಇತ್ತ ಆಂಟನಿ, ಎಂದಲ್ಲವೆ ನೀನು ಹೇಳಲಿರುವುದು?
ದೂತ. ಓ ನನ್ನ ದೊರೆಯೆ!
ಆಂಟನಿ. ನನ್ನ ಹತ್ತಿರ ನೇರ ಮಾತಾಡು; ಬಿನ್ನಾಣ ಬೇಡ
ಸಾಮಾನ್ಯ ಮಾತಿನಲ್ಲಿ. ಕ್ಲಿಯೋಪಾತ್ರಾಳ ಹೆಸರು ಹೇಳು
ರೋಮಿನಲ್ಲಿ ಹೇಳುವಂತೆ; ಫುಲ್ವಿಯಾಳ ಶಬ್ದಗಳಲ್ಲಿ ನನ್ನ
ತೆಗಳು, ಸತ್ಯಕ್ಕು ದ್ವೇಷಕ್ಕು ಶಕ್ತಿಯಿರುವಷ್ಟು ಸ್ವಾತಂತ್ರ್ಯದಿಂದ
ನನ್ನ ತಪ್ಪುಗಳ ಜರೆ. ಓ, ನಮ್ಮ ತೀವ್ರಮತಿ ಒರಗಿದಾಗ ನಾವು
ಕಳೆ ಬೆಳೆಯುತ್ತೇವೆ, ಮತ್ತು ನಮ್ಮ ತಪ್ಪುಗಳ ಹೇಳುವುದೇ
ಉತ್ತು ಕಳೆ ತೆಗೆಯುವುದು. ಸದ್ಯಕ್ಕೆ ನಿನಗೆ ವಿದಾಯ.
ದೂತ. ಅಪ್ಪಣೆ. [ದೂತನ ನಿಷ್ಕ್ರಮಣ]
ಎರಡನೆ ದೂತನ ಪ್ರವೇಶ, ಮೂರನೆ ದೂತ ಬಾಗಿಲಲ್ಲಿ
ಆಂಟನಿ. ಸೈಕೋನಿನಿಂದ, ಹೋ, ಸುದ್ದಿ! ಅದೇನು ಗೊತ್ತಾಗಲಿ.
ಎರಡನೆ ದೂತ. ಸೈಕೋನಿನಿಂದ ಬಂದವ — ಅಂಥವನೊಬ್ಬ
ಇದ್ದಾನೆಯೆ!
ಮೂರನೆ ದೂತ. ಅಪ್ಪಣೆಗಾಗಿ ಕಾಯುತ್ತಿದ್ದಾನೆ.
ಆಂಟನಿ. ಆತ ಬರಲಿ —
[ಎರಡನೆ ಮತ್ತು ಮೂರನೆ ದೂತರ ನಿಷ್ಕ್ರಮಣ]
ಈ ಕಠಿಣ ಈಜಿಪ್ಶಿಯನ್ ಸಂಕಲೆಗಳ ನಾನು ಒಂದೋ
ತುಂಡರಿಸಬೇಕು, ಇಲ್ಲವೇ ಮೋಹದಲ್ಲಿ ಮತಿಹೀನನಾಗಬೇಕು.
ನಾಲ್ಕನೆ ದೂತ ಪತ್ರದೊಂದಿಗೆ ಪ್ರವೇಶ
ಯಾರು ನೀನು?
ನಾಲ್ಕನೆ ದೂತ. ತಮ್ಮ ಪತ್ನಿ ಫುಲ್ವಿಯಾ ತೀರಿಹೋದರು.
ಆಂಟನಿ. ಎಲ್ಲಿ ತೀರಿಹೋದಳು?
ನಾಲ್ಕನೆ ದೂತ. ಸೈಕೋನಿನಲ್ಲಿ. ಅವರ ದೀರ್ಘಕಾಲದ
ಅನಾರೋಗ್ಯ, ಮತ್ತು ನಿಮಗೆ ಸಂಬಂಧಿಸಿ ಅದಕ್ಕಿಂತಲೂ
ಗಂಭೀರವಾದ ಸಂಗತಿಗಳು ಈ ಪತ್ರದಲ್ಲಿವೆ. [ಪತ್ರ ಕೊಡುತ್ತಾನೆ]
ಆಂಟನಿ. ಸರಿ, ನೀನು ಆಚೆಗಿರು. [ದೂತನ ನಿಷ್ಕ್ರಮಣ]
ಒಂದು ಮಹಾಚೈತನ್ಯ ಉಡುಗಿಹೋಯಿತು! ಅಷ್ಟೊಂದು ನಾನು
ಬಯಸಿದ್ದು. ನಮ್ಮ ತಿರಸ್ಕಾರ ನಮ್ಮಿಂದ ಹೊರ ಒಗೆದುದನ್ನು ಮತ್ತೆ
ನಮ್ಮದಾಗಿಸಲು ನಾವು ಹಾತೊರೆಯುತ್ತೇವೆ. ಸದ್ಯದ ಖುಷಿ,
ಆವರ್ತ ಕೆಳಗಿಳಿಯುತ್ತ, ಅದರ ವಿರುದ್ಧವೇ ಆಗಿಬಿಡುತ್ತದೆ.
ಹೊರಟುಹೋಗಿರುತ್ತ ಅವಳು ಚೆನ್ನಾಗುತ್ತಾಳೆ; ಹೊರಹಾಕಿದ
ಕೈಯೇ ಹೆಕ್ಕಲೂ ತಯಾರಾಗುವುದು.
ಈ ಮಾಟಗಾತಿ ರಾಣಿಯಿಂದ ನಾನು ಬಿಡಿಸಿಕೊಳ್ಳಲೇ ಬೇಕು.
ನನ್ನೀ ಆಲಸ್ಯ ನನಗೆ ತಿಳಿದಿರುವ ಕೆಡುಕುಗಳಿಂದ
ಹತ್ತು ಸಾವಿರ ಪಟ್ಟು ಅಪಾಯಗಳ ಹುಟ್ಟುಹಾಕುವುದು. —
ಎಲ್ಲಿ, ಈನೋಬಾರ್ಬಸ್!
ಈನೋಬಾರ್ಬಸ್ ಪ್ರವೇಶ
ಈನೋ. ಏನಪ್ಪಣೆ, ಮಹಾಸ್ವಾಮಿ?
ಆಂಟನಿ. ನಾನೀಗಲೇ ಇಲ್ಲಿಂದ ಹೋಗಬೇಕಾಗಿದೆ.
ಈನೋ. ಹಾಗೆ ಮಾಡಿದರೆ ಈ ಹೆಂಗಸರನ್ನು
ಕೊಂದಂತೆಯೇ ಸರಿ. ಕಠಿಣ ಸ್ವಭಾವವೆಂದರೆ ಅವರಿಗೆ
ಮಾರಕ; ನಾವಿಲ್ಲಿಂದ ತೆರಳಿದರೆ, ಅವರಿಗೆ ಸಾವು ನಿಶ್ಚಿತ.
ಆಂಟನಿ. ನಾನು ಹೋಗಲೇಬೇಕು.
ಈನೋ. ಸಂದರ್ಭದ ಒತ್ತಾಯವಿದ್ದರೆ, ಹೆಂಗಸರು
ಸಾಯಲಿ. ಯಾವ ಕಾರಣವೂ ಇಲ್ಲದೆ ಅವರನ್ನು ಕೈಬಿಡುವುದು
ಸರಿಯಲ್ಲ, ಮಹೋದ್ದೇಶ ಮತ್ತು ಹೆಂಗಸರನ್ನು ಹೋಲಿಸಿದಾಗ,
ಹೆಂಗಸರು ಏನೂ ಅಲ್ಲವೆನ್ನುವುದು ಸರಿಯಾದರೂ. ಆ ಸುದ್ದಿಯ
ಕಿಂಚಿತ್ತು ಕಿವಿಗೆ ಬಿದ್ದರೂ ಸಾಕು, ಕ್ಲಿಯೋಪಾತ್ರ ಕೂಡಲೇ
ಸತ್ತುಬಿಡುತ್ತಾಳೆ; ಇದಕ್ಕಿಂತಲೂ ಸಣ್ಣ ಕಾರಣಕ್ಕೆ ಅವಳು
ಸಾಯುವುದನ್ನು ನಾನು ಹಲವು ಸಲ ಕಂಡಿದ್ದೇನೆ. ಮರಣದಲ್ಲಿ
ಮಸ್ತಿದೆಯೆಂದು ಅಂದುಕೊಂಡಿದ್ದೇನೆ, ಅದು ಅವಳ ಮೇಲೆ
ಅದೆಂಥದೋ ಪ್ರೀತಿಯ ಕೆಲಸ ಮಾಡುತ್ತದೆ, ಸಾಯೋದರಲ್ಲಿ
ಅವಳಿಗೆ ಅಂಥ ಚುರುಕಿದೆ.
ಆಂಟನಿ. ನಾವು ಯೋಚಿಸುವುದಕ್ಕಿಂತಲೂ ಚತುರೆ ಅವಳು.
ಈನೋ. ಛೇ, ಛೇ, ಇಲ್ಲ, ಶುದ್ಧ ಪ್ರೀತಿಯ ಉತ್ತಮಾಂಶದಿಂದ
ಮಾಡಿದ್ದು ಅವಳ ಭಾವಾತಿರೇಕಗಳು. ಅವಳ ನಿಟ್ಟುಸಿರು
ಮತ್ತು ಕಂಬನಿಗಳನ್ನು ಗಾಳಿ ನೀರೆಂದು ನಾವು ಕರೆಯುವಂತಿಲ್ಲ;
ಪಂಚಾಂಗ ಸೂಚಿಸುವ ಬಿರುಗಾಳಿ, ಸುಂಟರಗಾಳಿಗಿಂತಲೂ
ಹೆಚ್ಚಿನವು ಅವು. ಇದು ಅವಳ ಚತುರತೆಯಲ್ಲ; ಆಗಿದ್ದರೆ
ದೇವರು ಸುರಿಸುವ ಮಳೆಯನ್ನೇ ಅವಳು ಕರೆಯುತ್ತಿದ್ದಳು.
ಆಂಟನಿ. ಅವಳು ನನ್ನ ಕಣ್ಣಿಗೆ ಬಿದ್ದಿರದಿದ್ದರೇ ಚೆನ್ನಾಗಿತ್ತು.
ಈನೋ. ಓ, ಸ್ವಾಮಿ, ಹಾಗಿದ್ದಿದ್ದರೆ, ಒಂದು ಅಮೂಲ್ಯ
ಕಲಾಕೃತಿಯನ್ನು ನೀವು ನೋಡದೆ ಹೋಗುತ್ತಿದ್ದಿರಿ, ನಿಮ್ಮ
ಪ್ರವಾಸಕ್ಕೆ ಅದೊಂದು ಕುಂದೆನಿಸುತ್ತಿತ್ತು.
ಆಂಟನಿ. ಫುಲ್ವಿಯಾ ಸತ್ತಳು.
ಈನೋ. ಸ್ವಾಮಿ?
ಆಂಟನಿ. ಫುಲ್ವಿಯಾ ಸತ್ತಳು.
ಈನೋ. ಫುಲ್ವಿಯಾ?
ಆಂಟನಿ. ಸತ್ತಳು.
ಈನೋ. ಯಾಕೆ, ಸ್ವಾಮಿ, ದೇವರುಗಳಿಗೊಂದು ಕೃತಜ್ಞತೆಯ
ಬಲಿ ಕೊಡಿ. ಒಬ್ಬ ಮನುಷ್ಯನ ಹೆಂಡತಿಯನ್ನು ಅವರು
ಎತ್ತಿಕೊಂಡು ಹೋಗಬೇಕಾದರೆ, ಅದರರ್ಥ ಅವರು ಭೂಮಿ ಮೇಲೆ
ಸಿಂಪಿಗರ ತರ ಎಂದು; ಹಳೆ ಅಂಗಿಗಳು ಚಿಂದಿಯಾದಾಗ,
ಹೊಸತು ಹೊಲಿಯೋದಕ್ಕೆ ಜನರಿದ್ದಾರೆ ಎನ್ನುವುದು
ಸಮಾಧಾನಕರ ಸಂಗತಿ. ಫುಲ್ವಿಯಾ ಅಲ್ಲದೆ ಬೇರೆ ಹೆಂಗಸರೇ
ಇಲ್ಲ ಎಂದಿದ್ದರೆ, ನಿಮಗೊಂದು ಕಡಿತ, ದುಃಖಿಸುವುದಕ್ಕೊಂದು
ಕಾರಣ ಇರುತ್ತಿತ್ತು. ಈ ದುಃಖಕ್ಕೆ ಸುಖದ ಕವಚವಿದೆ; ನಿಮ್ಮ
ದೊಗಲೆ ಅಂಗಿ ಹೋಗಿ ಹೊಸ ಲಂಗ ಬರುತ್ತದೆ, ಇಂಥ
ಸಂತಾಪಕ್ಕೆ ಕಣ್ಣೀರು ಸುರಿಸಲು ಈರುಳ್ಳಿಯೇ ಗತಿ.
ಆಂಟನಿ. ರಾಜ್ಯದಲ್ಲಿ ಅವಳು ಆರಂಭಿಸಿದ ಕಾರ್ಯ ನನ್ನ
ನಿರುಪಸ್ಥಿತಿಯನ್ನು ತಾಳಲಾರದು.
ಈನೋ. ಆದರೆ ತಾವಿಲ್ಲಿ ಆರಂಭಿಸಿದ ಕಾರ್ಯ ತಾವಿಲ್ಲದೆ
ನೆರವೇರುವುದಿಲ್ಲ, ಮುಖ್ಯವಾಗಿ ಕ್ಲಿಯೋಪಾತ್ರಳಿಗೆ ಸಂಬಂಧಿಸಿ —
ಅದು ಪೂರ್ತಿ ತಮ್ಮ ಉಪಸ್ಥಿತಿಯ ಮೇಲೆ ಅವಲಂಬಿಸಿದೆ.
ಆಂಟನಿ. ಹಗುರಾದ ಉತ್ತರಗಳು ಬೇಡ. ನಮ್ಮ
ಮನೋಭಿಪ್ರಾಯ ನಮ್ಮ ಕಾರ್ಯನಿರ್ವಾಹಕರಿಗೆ ಗೊತ್ತಾಗಲಿ.
ರಾಣಿಗೆ ನಾನು ತಿಳಿಸುತ್ತೇನೆ ಮತ್ತು ಅದಕ್ಕವಳ ಒಪ್ಪಿಗೆಯನ್ನೂ
ಪಡೆಯುತ್ತೇನೆ. ಯಾಕೆಂದರೆ, ಫುಲ್ವಿಯಾಳ ಸಾವು ಒಂದೇ ಅಲ್ಲ
ನಮ್ಮನ್ನು ತಟ್ಟಿ ತ್ವರಿತಗೊಳಿಸುತ್ತಿರುವುದು, ರೋಮಿನಲ್ಲಿರುವ
ನಮ್ಮ ಅನೇಕ ಹಿತೈಷಿ ಮಿತ್ರರ ಪತ್ರಗಳೂ ಕೂಡ. ಸೆಕ್ಸ್ಟಸ್
ಪಾಂಪಿಯಸ್ ಸೀಸರನಿಗೆ ಸವಾಲೆಸೆದಿದ್ದಾನೆ ಹಾಗೂ ಸಮುದ್ರದ
ಒಡೆತನವ ಸಾಧಿಸಿಕೊಂಡಿದ್ದಾನೆ. ನಮ್ಮ ಚಂಚಲ ಜನತೆಯಾದರೋ
ಯೋಗ್ಯತೆ ಮುಗಿಯುವ ತಮ್ಮ ಪ್ರೀತಿಯನ್ನು ಯೋಗ್ಯನಿಗೆ
ನೀಡಿದವರು, ಅವರೀಗ ಶ್ರೇಷ್ಠ ಪಾಂಪಿಯನ್ನು ಮತ್ತು ಅವನ
ಗುಣಗಳನ್ನು ಅವನ ಮಗನ ಮೇಲೆ ಸುರಿಯುತ್ತಿದ್ದಾರೆ. ಹೆಸರಲ್ಲೂ
ಬಲದಲ್ಲೂ ಉನ್ನತನು ಈತ, ಹುಟ್ಟುರಕ್ತಕ್ಕಿಂತಲು ಬದುಕಿಗಿಂತಲು
ಜಾಸ್ತಿ, ಮುಖ್ಯ ಯೋಧನೆನಿಸುವ ಇವನೇ, ಇವನ ಮಹಿಮೆ ಹೀಗೇ
ಮುಂದುವರಿದರೆ ಅದು ಲೋಕದ ಪ್ರದೇಶಗಳಿಗೆ ಅಪಾಯವೇ ಸರಿ.
ಬೆಳೆಯುವುದರಲ್ಲೇ ಇರುವುದು, ಕುದುರೆಯ ಕೂದಲ ಹಾಗೆ,
ಸರಿಯುವುದು, ಆದರೆ ಇನ್ನೂ ಸರ್ಪದ ವಿಷ ಬೆಳೆಸಿರದು.
ನಮ್ಮ ಕೈಕೆಳಗಿರುವ ಎಲ್ಲರಿಗೂ ಹೇಳು, ಆದಷ್ಟು ಬೇಗನೆ
ನಾವು ಇಲ್ಲಿಂದ ತೆರಳಬೇಕೆಂದು.
ಈನೋ. ಹಾಗೇ ಮಾಡುತ್ತೇನೆ.
[ಇಬ್ಬರೂ ನಿಷ್ಕ್ರಮಣ]
ದೃಶ್ಯ 3
ಸ್ಥಳ ಮೊದಲಿನದೇ. ಕಾಲ ಮುಂದರಿದುದು
ಕ್ಲಿಯೋಪಾತ್ರ, ಚಾರ್ಮಿಯಾನ್, ಅಲೆಕ್ಸಾಸ್, ಮತ್ತು ಇರೋಸ್ ಪ್ರವೇಶ
ಕ್ಲಿಯೋ. ಎಲ್ಲಿದ್ದಾರೆ ಅವರು?
ಚಾರ್ಮಿ. ನಾನು ಲಾಗಾಯ್ತಿನಿಂದ ನೋಡಿಲ್ಲ.
ಕ್ಲಿಯೋ. [ಅಲೆಕ್ಸಾಸ್‍ಗೆ] ಅವರೆಲ್ಲಿದ್ದಾರೆ, ಯಾರ ಜತೆ ಇದ್ದಾರೆ,
ಏನು ಮಾಡುತ್ತಿದ್ದಾರೆ ಎಂದು ನೋಡು. ನಾ ನಿನ್ನ ಕಳಿಸಿಲ್ಲ. ಅವರು
ಬೇಸರದಲ್ಲಿದ್ದರೆ, ನಾನು ನರ್ತಿಸುತ್ತಿದ್ದೇನೆಂದು ಹೇಳು,
ಖುಷಿಯಲ್ಲಿದ್ದರೆ, ನನಗೆ ಅಚಾನಕ ಜಡ್ಡಾಗಿದೆಯೆಂದು ಹೇಳು.
ಬೇಗನೆ, ಮತ್ತು ವಾಪಸು ಬರಬೇಕು.
[ಅಲೆಕ್ಸಾಸ್ ನಿಷ್ಕ್ರಮಣ]
ಚಾರ್ಮಿ. ಅಮ್ಮ, ನೀವವರನ್ನು ತುಂಬಾ ಪ್ರೀತಿಸೋದಾದರೆ,
ಅವರ ಪ್ರೀತಿ ಗಳಿಸಲು ಜುಲುಮೆ ಮಾಡುವ ಈ ಕ್ರಮ
ಸರಿಯಲ್ಲ.
ಕ್ಲಿಯೋ. ನಾನೇನು ಮಾಡಬೇಕು ಈಗಾಗಲೇ ಮಾಡದ್ದು?
ಚಾರ್ಮಿ. ಪ್ರತಿಯೊಂದೂ ಅವರು ಹೇಳಿದಂತೇ ಆಗಲಿ.
ಯಾವುದಕ್ಕೂ ಅಡ್ಡ ನುಡಿಯುವುದು ಬೇಡ.
ಕ್ಲಿಯೋ. ಮೂರ್ಖಳ ಹಾಗೆ ನಿನ್ನ ಉಪದೇಶ ಪಾಠ:
ಅವರನ್ನು ಕಳಕೊಳ್ಳುವುದಕ್ಕೆ ಅದುವೇ ಸರಿ.
ಚಾರ್ಮಿ. ಅವರಿಗೆ ಹೆಚ್ಚು ತರಲೆಕೊಡುವುದು ಬೇಡ,
ತಾಳ್ಮೆಯಿಂದಿರಿ; ನಾವು ಯಾವುದಕ್ಕೆ ಬೆದರುತ್ತೇವೋ
ಕಾಲಕ್ರಮೇಣ ಅದನ್ನು ದ್ವೇಷಿಸುತ್ತೇವೆ.
ಆಂಟನಿ ಪ್ರವೇಶ
ಅದೇ ಆಂಟನಿ ಈ ಕಡೆಗೆ ಬರುತ್ತಿದ್ದಾರೆ.
ಕ್ಲಿಯೋ. ನನಗೆ ಹುಷಾರಿಲ್ಲ.
ಆಂಟನಿ. ಕ್ಷಮಿಸು, ನಾನು ನನ್ನ ಉದ್ದೇಶಕ್ಕೆ ಮಾತು
ಕೊಡಬೇಕಾಗಿದೆ —
ಕ್ಲಿಯೋ. ನನ್ನನ್ನು ಕರಕೊಂಡು ಹೋಗು, ಚಾರ್ಮಿಯಾನ್.
ತಲೆ ತಿರುಗಿ ಬಿದ್ದೇನು. ಈ ತರ ನಾನು ಬದುಕಲಾರೆ ಹೆಚ್ಚು
ಕಾಲ; ಇದನ್ನೆಲ್ಲ ತಡಕೊಳ್ಳಲಾರದು ನನ್ನ ದೇಹ.
ಆಂಟನಿ. ನನ್ನ ಪ್ರಿಯ ರಾಜ್ಞಿ —
ಕ್ಲಿಯೋ. ದಯವಿಟ್ಟು, ನನ್ನಿಂದ ದೂರ ನಿಲ್ಲಿ.
ಆಂಟನಿ. ಯಾಕೆ, ಏನಾಯಿತು?
ಕ್ಲಿಯೋ. ಆ ಕಣ್ಣನೋಟದಿಂದ ಗೊತ್ತಾಗುತ್ತದೆ ನನಗೆ
ಯಾವುದೋ ಒಳ್ಳೆ ಸುದ್ದಿಯಿದೆ ಎನ್ನುವುದು.
ಏನು ಹೇಳುತ್ತಾಳೆ ನಿಮ್ಮ ಮದುವೆಯಾದವಳು ನೀವು
ಹೋಗಬೇಕೆಂದೆ! ನೀವೀ ಕಡೆ ಬರುವುದಕ್ಕೆ ಅವಳೆಂದೂ
ಒಪ್ಪಿಗೆ ಕೊಡದಿದ್ದರೇ ಚೆನ್ನಾಗಿರುತ್ತಿತ್ತು! ನಿಮ್ಮನ್ನು ಇಲ್ಲಿ
ಇರಿಸಿಕೊಂಡದ್ದು ನಾನೆಂದು ಅವಳು ಹೇಳದಿದ್ದರೆ ಸಾಕು.
ನನಗೆ ನಿಮ್ಮ ಮೇಲೇನೂ ಅಧಿಕಾರವಿಲ್ಲ: ನೀವು ಅವಳವರು.
ಆಂಟನಿ. ದೈವಗಳಿಗೆ ಗೊತ್ತು —
ಕ್ಲಿಯೋ. ಓಹ್, ಇಷ್ಟು ದೊಡ್ಡಕೆ ವಂಚನೆಗೊಳಗಾದ
ರಾಜ್ಞಿಯೊಬ್ಬಳು ಹಿಂದೆಂದೂ ಇರಲಿಲ್ಲ! ಆದರೂ ಮೊದಲಿಗೇ
ನಾನು ಗಮನಿಸಿದೆ ರಾಜದ್ರೋಹದ ಬೀಜ ಬಿತ್ತಿದ್ದು.
ಆಂಟನಿ. ಕ್ಲಿಯೋಪಾತ್ರ —
ಕ್ಲಿಯೋ. ನಾನು ಯಾಕೆ ಯೋಚಿಸಬೇಕು ನೀವು
ನನ್ನವರಾಗುವಿರಿ ಮತ್ತು ನನಗೆ ನಿಷ್ಠರಾಗುವಿರಿ ಎಂದು,
ಫುಲ್ವಿಯಾಳನ್ನು ವಂಚಿಸಿದವರು ನೀವು, ಆಣೆಮಾಡುವುದರಲ್ಲಿ
ದೇವತೆಗಳನ್ನೇ ಅಲುಗಾಡಿಸ ಬಲ್ಲವರಾಗಿದ್ದರೂ ಕೂಡ.
ತುಟಿಯಲ್ಲಿ ಆಡಿದ ವಚನಗಳು ಆಣೆಹಾಕುತ್ತಲೇ
ಮುರಿದುಬಿಡುವಂಥವು. ಅವುಗಳ ಬಲೆಯಲ್ಲಿ ಬೀಳುವುದೆಂದರೆ
ತೀರಾ ಮೂರ್ಖತನ.
ಆಂಟನಿ. ಪ್ರೀತಿಯ ರಾಣಿ —
ಕ್ಲಿಯೋ. ಬೇಡ, ನಿಮ್ಮ ದಮ್ಮಯ್ಯ, ಹೋಗುವುದಕ್ಕೆ ನೆಪ
ಹುಡುಕುವುದು ಬೇಡ. ವಿದಾಯ ಹೇಳಿ ಹೋದರೆ ಸಾಕು.
ಇರುತ್ತೇನೆಂದು ನೀವು ಬೇಡಿದಾಗ, ಆಗ ಮಾತಿನ ಕಾಲ.
ಆಗ ಹೋಗುವುದು ಬೇಕಿರಲಿಲ್ಲ. ಅನಂತತೆಯಿತ್ತು ನನ್ನ
ತುಟಿಗಳಲ್ಲಿ ಮತ್ತು ಕಣ್ಣುಗಳಲ್ಲಿ, ಸುಖ ನನ್ನ ಹುಬ್ಬುಗಳ
ಡೊಂಕಿನಲ್ಲಿ; ನನ್ನ ಅತಿ ನಿಕೃಷ್ಟ ಅಂಗಗಳೂ ಸ್ವರ್ಗದಿಂದ
ಬಂದಿದ್ದುವು. ಅವು ಹಾಗೇ ಇವೆ ಈಗಲೂ, ಅಥವಾ ಜಗತ್ತಿನ
ಅತಿ ಶ್ರೇಷ್ಠ ವೀರರು ನೀವು ಅತ್ಯಂತ ಸುಳ್ಳುಗಾರರಾಗಿ
ಬದಲಾಗಿರುವಿರಿ.
ಆಂಟನಿ. ಅದು ಹೇಗೆ, ರಾಣಿ?
ಕ್ಲಿಯೋ. ನಿಮ್ಮ ಎತ್ತರ ನನಗೆ ಇರುತ್ತಿದ್ದರೆ
ಅಂದುಕೊಳ್ಳುತ್ತೇನೆ! ಈಜಿಪ್ಟಿನ ರಾಣಿಯಲ್ಲಿ
ಎದೆಗಾರಿಕೆಯಿದೆಯೆನ್ನುವುದು ಗೊತ್ತಾಗುತ್ತಿತ್ತು ನಿಮಗೆ.
ಆಂಟನಿ. ಇಲ್ಲಿ ಕೇಳು, ರಾಣಿ: ಕಾಲದ ಬಲವಾದ ತುರ್ತು
ಈಗ ನನ್ನ ಸೇವೆಯನ್ನು ಅಪೇಕ್ಷಿಸಿದೆ ಸ್ವಲ್ಪ ಸಮಯಕ್ಕೆ,
ಆದರೆ ನನ್ನ ಸಂಪೂರ್ಣ ಹೃದಯ ನಿನ್ನ ಸೇವೆಯಲ್ಲಿರುತ್ತದೆ.
ನಮ್ಮ ಇಟೆಲಿ ಅಂತರ್ಯದ ಬಿಚ್ಚುಗತ್ತಿಗಳಿಂದ ಜ್ವಲಿಸುತ್ತಿದೆ;
ಸೆಕ್ಸ್ಟಸ್ ಪಾಂಪಿಯಸ್ ರೋಮಿನ ಬಂದರಿನತ್ತ ಕ್ರಮಿಸುತ್ತಿದ್ದಾನೆ;
ಎರಡು ಅಂತರ್‍ಶಕ್ತಿಗಳ ಸರಿಸಮಾನತೆ ಸಣ್ಣ ಕಾರಣಗಳ
ದೊಡ್ಡದು ಮಾಡುತ್ತಿದೆ; ತಾತ್ಸಾರಕ್ಕೆ ಒಳಗಾಗಿದ್ದವರು ಈಗ
ಬಲಿತು ಹೊಸ ಆದರ ಗಳಿಸಿರುವರು; ಒಮ್ಮೆ ದೇಶಭ್ರಷ್ಟನಾಗಿದ್ದ
ಪಾಂಪಿ, ತಂದೆ ಸಂಪಾದಿಸಿದ ಪ್ರತಿಷ್ಠೆಯ ವಾರಸುದಾರ,
ಪ್ರಚಲಿತ ರಾಜ್ಯಾಡಳಿತದಲ್ಲಿ ಅಭಿವೃದ್ಧಿ ಹೊಂದದವರ ಹೃನ್ಮಣಿ,
ಅಂಥವರ ಸಂಖ್ಯೆ ಭಯಂಕರವಾಗಿ ಬೆಳೆದಿದೆ; ಮತ್ತು
ಕೆನೆಗಟ್ಟಿದ ಶಾಂತಿ, ವಿಶ್ರಾಂತಿಯಿಂದ ಜಡ್ಡಾಗಿ, ಯಾವುದೇ ಹತಾಶ
ಬದಲಾವಣೆಯಿಂದಲೂ, ವಾಂತಿ ಮಾಡಲು ಸಜ್ಜಾಗಿದೆ. ನನ್ನ ಅತಿ
ನಿಕೃಷ್ಟ ತುರ್ತು ಫುಲ್ವಿಯಾಳ ಸಾವು, ನನ್ನ ತೆರಳುವಿಕೆಯಿಂದ
ನೀನೇನೂ ಆತಂಕಪಡಬಾರದ್ದು ಅದು.
ಕ್ಲಿಯೋ. ವಯಸ್ಸು ನನಗೆ ಮೂರ್ಖತನದಿಂದ ಮುಕ್ತಿ
ಕೊಡದಿದ್ದರೂ ಬಾಲಿಶತನದಿಂದ ಕೊಟ್ಟಿದೆ.
ಫುಲ್ವಿಯಾ ಸಾಯೋದು ಸಾಧ್ಯವೇ?
ಆಂಟನಿ. ನನ್ನ ರಾಣಿಯೆ, ಅವಳು ಸತ್ತಿದ್ದಾಳೆ.
[ಪತ್ರಗಳನ್ನು ತೋರಿಸುತ್ತಾನೆ]
ಇಲ್ಲಿ ನೋಡು, ಬಿಡುವಿದ್ದಾಗ ಓದು ಅವಳೆಬ್ಬಿಸಿದ
ಗಲಾಟೆಗಳನ್ನು; ಕೊನೆಯದು ಮತ್ತು ಎಲ್ಲಕ್ಕಿಂತ ಖುಷಿಯದು,
ಯಾವಾಗ ಎಲ್ಲಿ ಸತ್ತಳೆನ್ನುವುದನ್ನು ನೋಡು.
ಕ್ಲಿಯೋ. ಹಾ! ಅತಿ ಹುಸಿಯಾದ ಪ್ರೇಮವೇ!
ನಿನ್ನ ಕಂಬನಿ ತುಂಬುವ ಪವಿತ್ರ ಕರಂಡಕಗಳೆಲ್ಲಿ?
ನನಗೀಗ ಗೊತ್ತು, ಗೊತ್ತು, ಫುಲ್ವಿಯಾಳ ಸಾವಿನಲ್ಲಿ
ನನ್ನದೇ ಹೇಗೆ ಸ್ವೀಕೃತವಾದೀತು ಎನ್ನುವುದು.
ಆಂಟನಿ. ಜಗಳಮಾಡಿದ್ದು ಸಾಕು, ನಾನು ವಹಿಸಿರುವ
ಕಾರಣಗಳನ್ನು ಕೇಳಲು ತಯಾರಾಗು — ಅವು ನಿನ್ನ
ಸಲಹೆಯ ಮೇಲೆ ಉಳಿಯುತ್ತವೆ ಅಥವಾ ಅಳಿಯುತ್ತವೆ.
ನೈಲಿನ ಮಣ್ಣನ್ನು ಸಾರವತ್ತಾಗಿಸುವ ಸೂರ್ಯನ ಆಣೆ,
ನಿನ್ನ ಸೈನಿಕ, ನಿನ್ನ ಸೇವಕ, ನಾನು ಇಲ್ಲಿಂದ ತೆರಳುವೆ —
ಶಾಂತಿ ಅಥವಾ ಯುದ್ಧಕ್ಕೆ, ನಿನ್ನ ಮನಸ್ಸಿನ ಹಾಗೆ.
ಕ್ಲಿಯೋ. ಚಾರ್ಮಿಯಾನ್, ಬಾ, ನನ್ನೀ ದಾರವ
ಕತ್ತರಿಸು! ಬೇಡ, ಇರಲಿ ಬಿಡು; ಆಂಟನಿ ನನ್ನ ಪ್ರೀತಿಸುವ
ಹಾಗೆ, ನಾನು ಬೇಗನೇ ಕುಸಿಯುತ್ತೇನೆ, ಬೇಗನೇ ಸರಿಯಾಗುತ್ತೇನೆ.
ಆಂಟನಿ. ನನ್ನ ಅನಘ್ರ್ಯ ರಾಣಿಯೇ, ತಡೆದುಕೋ,
ಯಾವುದೇ ಗೌರವಯುತ ವಿಚಾರಣೆಗೂ ಸಿದ್ಧನಾದವನ ಪ್ರೀತಿಗೆ
ನಿಜವಾದ ಸಾಕ್ಷಿ ನೀಡು.
ಕ್ಲಿಯೋ. ಫುಲ್ವಿಯಾ ಹಾಗಂದಳು ನನಗೆ. ನಾನು
ಬೇಡಿಕೊಳ್ಳುತ್ತೇನೆ, ಬದಿಗೆ ಸರಿದು ಅವಳಿಗೋಸ್ಕರ ಕಣ್ಣೀರು
ಸುರಿಸಿ, ಆಮೇಲೆ ನನಗೆ ವಿದಾಯ ಹೇಳಿ, ಆ ಕಣ್ಣೀರು
ಈಜಿಪ್ಟಿನ ರಾಜ್ಞಿಗೋಸ್ಕರ ಅನ್ನಿ. ಸರಿ, ಹಾಗಿದ್ದರೆ,
ಅತ್ಯುತ್ತಮ ನಟನೆಯ ಒಂದು ದೃಶ್ಯ ನಟಿಸಿ, ಮತ್ತು ಅದು
ಪರಿಪೂರ್ಣ ಗೌರವದ ಹಾಗೆ ತೋರಲಿ.
ಆಂಟನಿ. ನೀನು ನನ್ನ ರಕ್ತ ಕುದಿಸುವಿ. ಇನ್ನೇನೂ ಅಲ್ಲ.
ಕ್ಲಿಯೋ. ಇದಕ್ಕಿಂತಲೂ ಚೆನ್ನಾಗಿ ಮಾಡಬಲ್ಲಿರಿ ನೀವು;
ಆದರೆ ಇದೂ ಚೆನ್ನಾಗಿದೆ.
ಆಂಟನಿ. ನನ್ನ ಖಡ್ಗ —
ಕ್ಲಿಯೋ. ಮತ್ತು ಗುರಾಣಿ. ಆಹಾ, ಚೆನ್ನಾಗಿ ಮಾಡುತ್ತಿದ್ದಾರೆ.
ಆದರೆ ಇದು ಅತ್ಯುತ್ತಮವಲ್ಲ. ನೋಡೆ, ಚಾರ್ಮಿಯಾನ್, ಈ
ಹಕ್ರ್ಯೂಲಿಯನ್ ರೋಮನ್ ಹೇಗೆ ತನ್ನ ಸಿಟ್ಟಿನ
ಸಂಹಾರಕನಾಗಿರುವುದು.
ಆಂಟನಿ. ನಾನು ನಿನ್ನನ್ನು ನಿನ್ನಷ್ಟಕ್ಕೇ ಬಿಡುವೆ.
ಕ್ಲಿಯೋ. ವಿನಯವಂತ ದೊರೆಯೆ, ಒಂದು ಮಾತು.
ಸ್ವಾಮಿ, ನೀವು ಮತ್ತು ನಾನು ಬೀಳ್ಕೊಡಬೇಕು, ಆದರೆ
ಮಾತು ಅದಲ್ಲ; ಸ್ವಾಮಿ, ನೀವು ಮತ್ತು ನಾನು ಪ್ರೀತಿಸಿದ್ದೇವೆ,
ಆದರೆ ಅದೂ ಅಲ್ಲ; ನಿಮಗದು ಚೆನ್ನಾಗಿ ಗೊತ್ತು. ನಾನು
ನೆನಪಿಸುವ ಅದೇನೋ — ಓ, ನನ್ನ ಮರೆವು ಆಂಟನಿಯೇ
ಸ್ವತಃ, ಆಹಾ ನಾನೀಗ ಪೂರ್ತಿ ಮರೆತುಹೋದೆ.
ಆಂಟನಿ. ಮದಾಲಸ್ಯ ಅರಸೊತ್ತಿಗೆಯ ಸೊತ್ತೆಂದು ನನಗೆ
ಗೊತ್ತಿಲ್ಲದಿರುತ್ತಿದ್ದರೆ, ಅರಸೊತ್ತಿಗೆಯೆ ಮದಾಲಸ್ಯವೆಂದು
ಅಂದುಕೊಳ್ಳುತ್ತಿದ್ದೆ ನಾನು.
ಕ್ಲಿಯೋ. ಕ್ಲಿಯೋಪಾತ್ರಾಳ ಹಾಗೆ ಹೃದಯದ ಸಮೀಪ
ಈ ಮದಾಲಸವ ಹಡೆಯುವುದೆಂದರೆ ಅದು ಬೆವರು ಹರಿಸುವ
ಕೆಲಸ. ಆದರೆ ಕ್ಷಮಿಸಿ, ನನ್ನ ಗುಣಗಳು ಚೆನ್ನೆನಿಸದಿರುತ್ತ, ಅವು
ನನ್ನ ಕೊಲ್ಲುತ್ತವೆ. ನಿಮ್ಮ ಕಾರ್ಯಭಾರ ನಿಮ್ಮನ್ನು ಇಲ್ಲಿಂದ
ಕರೆಯುತ್ತಿದೆ; ಆದ ಕಾರಣ ನೀವು ಕನಿಕರಿಸದ ನನ್ನ ಮೂರ್ಖತನಕ್ಕೆ
ಕಿವುಡರಾಗಿರಿ, ಎಲ್ಲಾ ದೈವಸಹಾಯ ನಿಮಗಿರಲಿ! ನಿಮ್ಮ ಕತ್ತಿಯ
ಮೇಲೆ ಜಯಮಾಲೆ ಕುಳಿತಿರಲಿ, ಮತ್ತು ನಿಮ್ಮ ಪಾದಗಳ ಮುಂದೆ
ಗೆಲುವು ಹರಡಲಿ!
ಆಂಟನಿ. ಬಾ, ಹೋಗೋಣ ಇಬ್ಬರೂ; ನಮ್ಮ ಅಗಲಿಕೆ ಹೇಗೆ
ಉಳಿಯುತ್ತದೆ ಹೇಗೆ ತೆರಳುತ್ತದೆ ಒಟ್ಟಿಗೇ ಎಂದರೆ
ನೀನಿಲ್ಲಿ ಉಳಿದೂ ನನ್ನ ಜತೆ ಬರುವಿ, ನಾನಿಲ್ಲಿಂದ ಸರಿದರೂ,
ಇಲ್ಲಿ ನಿನ್ನ ಜತೆ ಇರುವೆ. ಹೋಗುವ ಬಾ.
[ಎಲ್ಲರೂ ನಿಷ್ಕ್ರಮಣ]
ದೃಶ್ಯ 4
ರೋಮ್. ಸಭಾಸದನ
ಒಕ್ಟೇವಿಯಸ್ ಸೀಸರ್ ಒಂದು ಪತ್ರ ಓದುತ್ತ, ಲೆಪಿಡಸ್ ಮತ್ತು
ಹಿಂಬಾಲಕರ ಪ್ರವೇಶ
ಸೀಸರ್. ಲೆಪಿಡಸ್, ನೀವು ನೋಡುವಿರಿ ಮತ್ತು ಇನ್ನು
ಮುಂದೆ ತಿಳಿದುಕೊಳ್ಳುವಿರಿ. ನಮ್ಮ ಮಹಾಪ್ರತಿಸ್ಪರ್ಧಿಯನ್ನು
ದ್ವೇಷಿಸುವುದು ಸೀಸರನ ಸಹಜ ಚಾಳಿಯಲ್ಲ. ಅಲೆಕ್ಝಾಂಡ್ರಿಯಾ-
ದಿಂದ ಬಂದ ವಾರ್ತೆ ಇದು: ಅವನು ಮೀನು ಹಿಡಿಯುತ್ತಾನೆ,
ಕುಡಿಯುತ್ತಾನೆ, ಮತ್ತು ರಾತ್ರಿಯ ದೀಪಗಳನ್ನು ಮೋಜಿನಲ್ಲಿ
ಪೋಲುಮಾಡುತ್ತಾನೆ; ಕ್ಲಿಯೋಪಾತ್ರಳಿಗಿಂತ ಮಿಗಿಲಾದ ಪುರುಷನೂ
ಅಲ್ಲ, ಟಾಲೆಮಿಯ ರಾಣಿ ಅವನಿಗಿಂತ ಮಿಗಿಲಾದ ಸ್ತ್ರೀಯೂ ಅಲ್ಲ;
ನಮ್ಮ ದೂತರ ಮಾತು ಕೇಳಿಸಿಕೊಳ್ಳಲಿಲ್ಲ, ಅಥವಾ ತನಗೆ
ಸಹಭಾಗಿಗಳಿದ್ದಾರೆಂದು ಯೋಚಿಸಲೂ ಇಲ್ಲ. ಎಲ್ಲ ಮನುಷ್ಯರೂ
ಎಸಗುವ ತಪ್ಪಿನ ಪೃಥಕ್ಕರಣವೊಂದನ್ನು ನೀವು ಅವನಲ್ಲಿ ಕಾಣುವಿರಿ.
ಲೆಪಿಡಸ್. ಅವನ ಸಕಲ ಗುಣಗಳನ್ನೂ ಮರೆಯಿಸುವ
ದುರ್ಗುಣಗಳಿವೆಯೆಂದು ನನಗನಿಸುವುದಿಲ್ಲ. ತಪ್ಪುಗಳು ಅವನಲ್ಲಿ
ಆಕಾಶದ ಬೊಟ್ಟುಗಳಂತೆ ಕಾಣಿಸುತ್ತವೆ, ರಾತ್ರಿಯ ಕಪ್ಪಿಗೆ
ಮತ್ತಷ್ಟು ಉಜ್ವಲವಾಗಿ, ಅವನು ಬೇಕೆಂದೇ ಗಳಿಸಿದುದಲ್ಲ,
ಆನುವಂಶಿಕವಾಗಿ ಪಡೆದುದು, ಅವನು ಆರಿಸಿದ್ದಲ್ಲ,
ಬದಲಾಯಿಸಲಾರದ್ದು.
ಸೀಸರ್. ನೀವು ಬಹಳ ಉದಾರಿ. ಒಪ್ಪೋಣ
ಟಾಲೆಮಿಯ ಹಾಸಿಗೆಗೆ ಉರುಳಿದ್ದು ತಪ್ಪಲ್ಲ, ಖುಷಿಗೆಂದು
ಒಂದು ರಾಜ್ಯವ ನೀಡಿದ್ದು ತಪ್ಪಲ್ಲ, ಒಬ್ಬ ಆಳಿನೊಂದಿಗೆ
ಕೂತು ಕುಡಿಯುವುದು ತಪ್ಪಲ್ಲ, ಮತ್ತು ಬೆವರ ವಾಸನೆ
ಬರುವ ಧೂರ್ತರ ಜತೆ ಕೈ ಮಿಸಲಾಯಿಸುವುದು ತಪ್ಪಲ್ಲ.
ಇವೆಲ್ಲ ಅವನಿಗೆ ಭೂಷಣ ಎನ್ನೋಣ — ಇಂಥ ಸಂಗತಿಗಳು
ಕಳಂಕಗೊಳಿಸದವನ ನಿರಾಳತೆ ನಿಜಕ್ಕೂ ಅತಿ ವಿರಳವೇ ಸರಿ —
ಆದರೂ ಆಂಟನಿ ಯಾವ ಕಾರಣಕ್ಕೂ ತನ್ನ ತಪ್ಪುಗಳನ್ನು
ಕ್ಷಮಿಸಲಾಗದು, ಅದೂ ಅವನ ಈ ಲಾಘವದ ವಿರುದ್ಧ ನಾವು
ಇಷ್ಟೊಂದು ಭಾರ ಸಹಿಸುತ್ತಿರುವಾಗ. ತನ್ನ ಬಿಡುವನ್ನು ಅವನು
ಮೈತೀಟೆಯಿಂದ ತುಂಬಿಕೊಂಡಿದ್ದರೆ, ಅದು ವಾಂತಿಯಾಗಿ,
ಮೂಳೆ ಮುರಿತವಾಗಿ ಅವನನ್ನು ಕಾಡೀತು. ಆದರೆ ಅವನನ್ನು
ಮೋಜಿನಿಂದೆಬ್ಬಿಸುವ ತಮ್ಮಟೆ ಬಾರಿಸುತ್ತಿದೆ ಕಾಲ, ಅವನ
ಹಾಗೂ ನಮ್ಮ ಸ್ಥಿತಿಗಳ ಬಗ್ಗೆ ಎಚ್ಚರಿಸುತ್ತಿದೆ, ಅದನ್ನು
ಪೋಲು ಮಾಡುವುದೆಂದರೆ, ಅದು ಛೀಮಾರಿಗೆ ಅರ್ಹವಾಗುತ್ತದೆ,
ಬುದ್ಧಿ ಬಂದಿದ್ದೂ, ತತ್ಕಾಲೀನ ಸುಖಕ್ಕೆ ದೀರ್ಘಾನುಭವವನ್ನು
ಒತ್ತೆಯಿಡುವ, ಹಾಗೂ ವಿವೇಕದ ವಿರುದ್ಧ ಬಂಡೇಳುವ ಹುಡುಗರನ್ನು
ನಾವು ಬಯ್ಯುವ ಹಾಗೆ.
ದೂತನೊಬ್ಬನ ಪ್ರವೇಶ
ಲೆಪಿಡಸ್. ಇನ್ನೂ ಸುದ್ದಿಗಳು ಬರುತ್ತಿವೆ.
ದೂತ. ನಿಮ್ಮ ಆಜ್ಞೆಗಳನ್ನು ಪಾಲಿಸಲಾಗಿದೆ; ಸೀಸರ್
ಮಹಾಪ್ರಭೂ, ಗಂಟೆ ಗಂಟೆಗೂ ವಿದೇಶದಿಂದ ನಿಮಗೆ
ವರದಿ ತಲುಪುವುದು. ಸಮುದ್ರ ಪ್ರದೇಶದಲ್ಲಿ ಪಾಂಪಿ
ಬಲಿಷ್ಠರಿದ್ದಾರೆ, ಸೀಸರಿಗೆ ಬರೀ ಭಯಪಟ್ಟವರ ಆರಾಧ್ಯಮೂರ್ತಿ
ಅವರೀಗ ಆಗಿರುವ ಹಾಗೆ ಕಾಣಿಸುತ್ತದೆ. ಅತೃಪ್ತರೆಲ್ಲ ಬಂದರುಗಳ
ಕಡೆಗೆ ಸಾಗುತ್ತಿದ್ದಾರೆ, ಜನರ ಅಭಿಪ್ರಾಯದಲ್ಲಿ ಪಾಂಪಿಗೆ
ಅನ್ಯಾಯವಾಗಿದೆ.
[ದೂತನ ನಿಷ್ಕ್ರಮಣ]
ಸೀಸರ್. ಇಷ್ಟು ನಾನು ತಿಳಿಯಬೇಕಿತ್ತು. ಅನಾದಿ ಕಾಲದಿಂದಲೂ
ಬಂದ ಪಾಠ: ಇರುವ ವ್ಯಕ್ತಿಯನ್ನು ಜನ ಬಯಸಿದ್ದು ಆತ
ಇದ್ದ ವರೆಗೆ; ಮತ್ತು ನತದೃಷ್ಟ ಮನುಷ್ಯ, ಪ್ರೀತಿಗೆ ಕಿಮ್ಮತ್ತಿರದ
ತನಕ ಪ್ರೀತಿ ಕಾಣದವ, ಇರದಿದ್ದ ಕಾರಣಕ್ಕೇ ಬರುತ್ತಾನೆ
ಜನರ ಕಣ್ಮಣಿಯಾಗಿ. ಈ ಸಾಮಾನ್ಯ ಜನತೆ, ನೀರ ಮೇಲಣ
ಅಲೆಮಾರಿ ಬಳ್ಳಿಯ ಹಾಗೆ, ಮುಂದಕ್ಕೂ ಹಿಂದಕ್ಕೂ
ಚಲಿಸುತ್ತಲೇ ಇರುತ್ತದೆ, ಬದಲಾಗುವ ತೆರೆಯ ಏರಿಳಿತಕ್ಕೆ
ಪ್ರವಾಹದ ಜತೆ ಕೊಳೆಯುವುದಕ್ಕೆ.
ಎರಡನೆ ದೂತನ ಪ್ರವೇಶ
ದೂತ. ಸೀಸರ್ ಮಹಾಪ್ರಭೂ, ನಾನು ತಂದಿರುವ ಸುದ್ದಿ
ಮೆನಿಕ್ರೇಟಿಸ್ ಸತ್ತು ಮೆನಾಸ್, ಕುಪ್ರಸಿದ್ಧ ಕಡಲ್ಗಳ್ಳರು,
ಎಲ್ಲಾ ವಿಧದ ನೌಕೆಗಳಿಂದಲೂ, ಸಮುದ್ರವನ್ನು ಗುಳೆಹೊಡೆದು
ಘಾಸಿಗೊಳಿಸುತ್ತಿದ್ದಾರೆ. ಇಟೆಲಿಯಲ್ಲಿ ಅವರು ನಡೆಸಿದ
ಮಿಂಚಿನ ಆಕ್ರಮಣಗಳು ಹಲವು; ಕರಾವಳಿಯ ಪ್ರದೇಶಗಳು
ಇವರ ಚಿಂತೆಯಿಂದಲೆ ಪೇಲವವಾಗಿವೆ, ಮತ್ತು ಬಿಸಿರಕ್ತದ
ತರುಣರು ದಂಗೆಯೇಳುತ್ತಿದ್ದಾರೆ. ಯಾವುದೇ ಹಡಗ
ಹೊರಗಿರುವಂತಿಲ್ಲ, ಕಣ್ಣಿಗೆ ಬಿದ್ದರೆ ಅದು ಹೋದಂತೆಯೇ;
ಪಾಂಪಿಯ ಹೆಸರು ಉಂಟುಮಾಡುವ ನಷ್ಟ
ಪಾಂಪಿಯ ಜತೆ ನಡೆಸುವ ಯುದ್ಧಕ್ಕಿಂತ ಜಾಸ್ತಿ.
[ಎರಡನೆ ದೂತನ ನಿಷ್ಕ್ರಮಣ]
ಸೀಸರ್. ಆಂಟನಿ, ನಿಮ್ಮ ಪಾನಕೂಟಗಳನ್ನು ತ್ಯಜಿಸಿರಿ.
ಯಾವ ಮೊಡೆನ್ನಾದಲ್ಲಿ ನೀವು ರಾಯಭಾರಿಗಳಾದ ಪರ್ಶಿಯಸ್
ಮತ್ತು ಪನ್ಸರನ್ನು ಕೊಂಡಿರಿ, ಆ ಮೊಡೆನ್ನಾದಿಂದ ನಿಮ್ಮನ್ನು
ಹಿಮ್ಮೆಟ್ಟಿಸಿದಂದು, ನೀವು ಹೋದಲ್ಲೆಲ್ಲ ಹಿಂಬಾಲಿಸಿದ
ಕ್ಷಾಮದಾಮರವ ಎದುರಿಸಿದಿರಿ, ನಾಜೂಕಿನಿಂದ ಬೆಳೆದರೂ,
ಕಾಡುಜನರಿಗಿಂತಲು ಜಾಸ್ತಿ ಶಕ್ತಿ ತೋರಿದಿರಿ. ಕಂಡರೆ ಪ್ರಾಣಿಗಳೂ
ಕಕ್ಕುವಂಥ ಕುದುರೆಗಳ ಉಚ್ಚೆ ಮತ್ತು ಹೊಂಡಗಳ ಕೊಳಕು
ನೀರನ್ನು ಕುಡಿದಿರಿ. ನಿಮ್ಮ ಜಿಹ್ವೆಗೆ ಆವತ್ತು ಎಂಥ ಬೇಲಿಯಲ್ಲಿ
ಬೆಳೆದ ಎಂಥ ನೆಲ್ಲಿಯೂ ಸಾಕಾಗಿತ್ತು. ಹೌದು, ಹುಲ್ಲಿಗೆ ಹಿಮ
ಹೊದೆಸಿದ ಸಮಯ ಮರದ ತೊಗಟೆಗಳನ್ನು ಜಿಂಕೆ ಮೇಯುವ
ಹಾಗೆ ಮೇದಿರಿ. ನಾವು ಕೇಳಿದ ಪ್ರಕಾರ ಆಲ್ಪ್ಸ್ ಪರ್ವತಗಳ ಮೇಲೆ
ನೀವು ಸಿಕ್ಕ ಸಿಕ್ಕ ಮಾಂಸವ ತಿಂದಿರಿ — ಕೆಲವರು ಅದನ್ನು ಕಂಡರೇ
ಸತ್ತುಹೋಗುತ್ತಿದ್ದರು. ಇದೆಲ್ಲಾ — ಈಗ ನಾನು ಹೇಳಬೇಕಾಗಿ
ಬಂದುದು ನಿನ್ನ ಘನತೆಯ ದುರದೃಷ್ಟ — ಇದೆಲ್ಲಾ ನೀವು
ಸೈನಿಕ ಸಹಜರೀತಿಯಲ್ಲಿ ಅದೆಂತು ಸಹಿಸಿದಿರಿ, ಆದರೂ ನಿಮ್ಮ
ಕೆನ್ನೆ ಆಳಕ್ಕೆ ಇಳಿಯಲಿಲ್ಲ.
ಲೆಪಿಡಸ್. ಇದೊಂದು ದುರಂತ.
ಸೀಸರ್. ಇಂಥ ಲಜ್ಜೆಗಳೇ ಅವನನ್ನು ರೋಮಿಗೆ ಶೀಘ್ರ
ಕರೆತರಲಿ. ಈಗ ನಾವಿಬ್ಬರೂ ರಣರಂಗದಲ್ಲಿ ಕಾಣಿಸಿಕೊಳ್ಳ-
ಬೇಕಾಗಿದೆ, ಆದ್ದರಿಂದ ಕೂಡಲೇ ಸಭೆ ಕರೆಯುತ್ತೇನೆ. ನಮ್ಮ
ನಿಷ್ಕ್ರಿಯತೆಯಲ್ಲಿ ಪಾಂಪಿ ಕೊಬ್ಬುತ್ತಾನೆ.
ಲೆಪಿಡಸ್. ಪ್ರಭೂ, ನಾಳೆ ನಾನು ನಿಮಗೆ ಸರಿಯಾಗಿ
ಹೇಳಲು ಸಾಧ್ಯ ಸಮುದ್ರದಲ್ಲೂ ನೆಲದಲ್ಲೂ ಸದ್ಯದ
ಪರಿಸ್ಥಿತಿಯನ್ನು ನಾನು ಹೇಗೆ ಎದುರಿಸಬಲ್ಲೆ ಎಂಬ ವಿಷಯ.
ಸೀಸರ್. ಆ ಮುಖಾಮುಖಿಯ ವರೆಗೆ ಅದು ನನ್ನ ಚಿಂತೆ
ಕೂಡ. ವಿದಾಯ ನಿಮಗೆ.
ಲೆಪಿಡಸ್. ವಿದಾಯ, ಮಹಾಪ್ರಭೂ. ಈ ನಡುವೆ
ವಿದೇಶದಲ್ಲಿ ಏನಾಗುತ್ತಿದೆ ಎಂದು ನಿಮಗೆ ಗೊತ್ತಿರುವ
ಸುದ್ದಿಯನ್ನು ದಯವಿಟ್ಟು ನನಗೂ ತಿಳಿಸಿ.
ಸೀಸರ್. ಸಂದೇಹ ಬೇಡ, ಅದು ನನ್ನ ಬಾಧ್ಯತೆಯೆಂದು ಗೊತ್ತು.
[ಪ್ರತ್ಯೇಕವಾಗಿ ಇಬ್ಬರೂ ನಿಷ್ಕ್ರಮಣ]
ದೃಶ್ಯ 5
ಈಜಿಪ್ಟ್, ಮೂರನೇ ದೃಶ್ಯದಲ್ಲಿರುವ ಹಾಗೆ, ಆಸ್ಥಾನ
ಕ್ಲಿಯೋಪಾತ್ರ, ಚಾರ್ಮಿಯಾನ್, ಇರೋಸ್, ಮತ್ತು
ನಪುಂಸಕ ಮಾರ್ಡಿಯಾನ್ ಪ್ರವೇಶ
ಕ್ಲಿಯೋ. ಚಾರ್ಮಿಯಾನ್!
ಚಾರ್ಮಿಯಾನ್. ಅಮ್ಮ?
ಕ್ಲಿಯೋ. ಹ, ಹಾ! ಕುಡಿಯುವುದಕ್ಕೆ ನನಗೆ
ಮಾಂಡ್ರಗೋರಾ ಕೊಡು.
ಚಾರ್ಮಿ. ಯಾಕಮ್ಮಾ?
ಕ್ಲಿಯೋ. ನನ್ನ ಆಂಟನಿಯಿಲ್ಲದ ಭಾರೀ ಕಾಲಾವಧಿಯನ್ನು
ನಿದ್ರಿಸಿ ಮುಗಿಸುವುದಕ್ಕೆ.
ಚಾರ್ಮಿ. ಅವರ ಬಗ್ಗೆ ಅಗತ್ಯಕ್ಕಿಂತ ಜಾಸ್ತಿ ಯೋಚಿಸುತ್ತೀರಿ
ನೀವು.
ಕ್ಲಿಯೋ. ಓ, ಇದು ರಾಜದ್ರೋಹ!
ಚಾರ್ಮಿ. ನನಗೆ ಹಾಗೆ ಅನಿಸುವುದಿಲ್ಲಮ್ಮ.
ಕ್ಲಿಯೋ. ನೀನೋ, ಖೋಜಾ ಮಾರ್ಡಿಯಾನ್?
ಮಾರ್ಡಿ. ಏನಪ್ಪಣೆ, ಮಹಾರಾಣಿ?
ಕ್ಲಿಯೋ. ನಿನ್ನ ಹಾಡು ಕೇಳುವುದಕ್ಕಲ್ಲ ಈಗ. ಷಂಡರಿಂದ
ನನಗೇನೂ ಸುಖವಿಲ್ಲ. ನಿರ್ವೀರ್ಯ ನಿನ್ನ ಮನಸ್ಸು
ಈಜಿಪ್ಟಿನಿಂದ ಆಚೆಗೆ ಹೋಗದಿರೋದು ನಿನಗೆ ಒಳ್ಳೇದೇ.
ಕಾಮನೆಗಳಿವೆಯೇ ನಿನಗೆ?
ಮಾರ್ಡಿ. ಇವೆ, ಮಹಾರಾಣಿ.
ಕ್ಲಿಯೊ. ನಿಜಕ್ಕೂ?
ಮಾರ್ಡಿ. ನಿಜದಲ್ಲಿ ಅಲ್ಲ, ಮಹಾರಾಣಿ. ಯಾಕೆಂದರೆ
ನಿಜವಾಗಲೂ ಅಪ್ಪಟವಾದ್ದಲ್ಲದೆ ನಾನು ಇನ್ನೇನೂ
ಮಾಡಲಾರೆ. ಆದರೂ ನನಗೆ ಉತ್ಕಟ ಕಾಮನೆಗಳಿವೆ, ಮತ್ತು
ಮಾರ್ಸ್‍ನ ಜತೆ ವೀನಸ್ ಏನು ಮಾಡಿದಳು ಎಂಬ ಬಗ್ಗೆ
ಯೋಚಿಸುತ್ತೇನೆ.
ಕ್ಲಿಯೋ. ಓ ಚಾರ್ಮಿಯಾನ್, ಅವರೀಗ ಎಲ್ಲಿರಬಹುದು
ಅನ್ನುವಿ? ನಿಂತಿರುವರೆ, ಕೂತಿರುವರೆ? ಅಥವ ನಡೆಯುತ್ತಿರುವರೆ?
ಅಥವ ಕುದುರೆಮೇಲಿರುವರೆ? ಓ ಅದೃಷ್ಟಶಾಲಿ ಕುದುರೆಯೆ,
ಆಂಟನಿಯ ಭಾರ ಹೊರುವುದಕ್ಕೆ! ಚೆನ್ನಾಗಿ ಮಾಡು, ಕುದುರೆಯೆ,
ನಿನಗೆ ಗೊತ್ತೇ ನೀನು ಸಾಗಿಸುತ್ತಿರುವುದು ಯಾರನ್ನೆಂದು?
ಧರೆಯ ಆರಾಧ್ಯ ದೈವ, ಮನುಷ್ಯರ ಆತ್ಮರಕ್ಷಣೆಯ ಆಯುಧ
ಮತ್ತು ಶಿರಸ್ತ್ರಾಣ. ಈಗವರು ನುಡಿಯುತ್ತಿದ್ದಾರೆ ಅಥವ
ಮೆಲುನುಡಿಯುತ್ತಿದ್ದಾರೆ, `ಎಲ್ಲಿ ನನ್ನ ನೈಲ್ ನದಿಯ ಸರ್ಪ?’
ಎಂದು. ಅವರು ನನ್ನನ್ನು ಕರೆಯುವುದು ಹಾಗೇ. ಈ ಅತಿಮಧುರ
ವಿಷವೇ ನನ್ನ ಆಹಾರ. ಯಾಕೆ ಯೋಚಿಸಬೇಕು ನನ್ನ ಕುರಿತು,
ಬಿಸಿಲ ಪ್ರೇಮಚೇಷ್ಟೆಗೆ ನಾನು ಕಾಲಾಂತರದಲ್ಲಿ ಕಪ್ಪಗಾಗಿದ್ದೇನೆ,
ಚರ್ಮ ನಿರಿಗಟ್ಟಿದೆ. ಅಗಲ ಹಣೆಯ ಜೂಲಿಯಸ್ ಸೀಸರ್,
ನೀವಿಲ್ಲಿ ಬಂದು ನಿಂತಿದ್ದಾಗ ನಾನು ಸಾಮ್ರಾಟನಿಗೊಂದು
ಕೈತುತ್ತು ಆಗಿದ್ದೆ. ಮತ್ತು ಕ್ನೇಯಸ್ ಪಾಂಪಿ ಸುಮ್ಮನೆ ನಿಂತು
ನನ್ನ ಹುಬ್ಬುಗಳ ನೋಡುವನು; ಅಲ್ಲೇ ಅವನು ತನ್ನ ಸ್ವರೂಪದ
ಲಂಗರು ಇಳಿಸುವನು, ಹಾಗೂ ತನ್ನ ಜೀವನ ಅವಲೋಕಿಸುತ್ತ
ಸಾಯುವನು.
ಆಂಟನಿಯ ಕಡೆಯಿಂದ ಅಲೆಕ್ಸಾಸ್‍ನ ಪ್ರವೇಶ
ಅಲೆಕ್ಸಾಸ್. ಈಜಿಪ್ಟಿನ ಸಾಮ್ರಾಜ್ಞಿಗೆ ಜಯವಾಗಲಿ!
ಕ್ಲಿಯೋ. ಆಂಟನಿಗಿಂತ ನೀನೆಷ್ಟು ಭಿನ್ನ! ಆದರೂ
ಅವರಲ್ಲಿಂದ ಬರುತ್ತ, ಆ ಪರುಷಮಣಿ ನಿನ್ನನ್ನೂ ಹೊಳೆಯಿಸಿದೆ.
ನನ್ನ ಧೀರ ಮಾರ್ಕ್ ಆಂಟನಿ ಹೇಗಿದ್ದಾರೆ?
ಅಲೆಕ್ಸಾಸ್. ಅವರು ಮಾಡಿದ ಕೊನೆ ಸಂಗತಿಯೆಂದರೆ,
ಮಹಾರಾಣಿ, ಈ ವಿಶೇಷವಾಗಿ ಹೊಳೆವ ಮುತ್ತನ್ನು ಚುಂಬಿಸಿದ್ದು —
ಇಮ್ಮಡಿ ಮುತ್ತುಗಳ ಕೊನೆಯ ಮುತ್ತನ್ನು. ಅವರ ಮಾತು ಇನ್ನೂ
ನನ್ನ ಗಂಟಲಲ್ಲಿ ಸಿಲುಕಿದೆ.
ಕ್ಲಿಯೋ. ಅದನ್ನಲ್ಲಿಂದ ಕಿತ್ತುಕೊಳ್ಳಬೇಕು ನನ್ನ ಕಿವಿ.
ಅಲೆಕ್ಸಾಸ್. ಪ್ರಿಯ ಮಿತ್ರನೇ,' ಎಂದರು,
ಈಜಿಪ್ಟಿನ ರಾಣಿಗೆ
ನಿಷ್ಟಾವಂತ ರೋಮನ್ ಈ ಮುತ್ತಿನ ನಿಧಿಯನ್ನು ಕಳಿಸುತ್ತಿದ್ದಾನೆ
ಎಂದು; ಈ ಪುಟ್ಟ ಕಾಣಿಕೆಯನ್ನು ತುಂಬಿಕೊಳ್ಳಲು ಅವಳ
ಪದತಲದಲ್ಲಿ, ಅವಳ ಸಮೃದ್ಧ ಸಿಂಹಾಸನಕ್ಕೆ ಸಾಮ್ರಾಜ್ಯಗಳ
ಪೋಣಿಸುವೆನು. ಸಮಸ್ತ ಪೌರಾತ್ಯರು ಅವಳನ್ನು ರಾಣಿಯೆಂದು
ಕರೆಯುವರು.’ ಹೀಗೆಂದು ತಲೆದೂಗಿ ಯುದ್ಧಾಶ್ವವನ್ನೇರಿದರು —
ಆ ಅಶ್ವ ಎಷ್ಟೆತ್ತರಕ್ಕೆ ಕೆನೆಯಿತೆಂದರೆ, ನಾನು ಉತ್ತರಿಸಿದ್ದರೆ ಅದು
ಕೇಳಿಸದೆ ಹೋಗುತ್ತಿತ್ತು.
ಕ್ಲಿಯೋ. ಅವರು ಬೇಸರದಿಂದ್ದರೇ, ಸಂತೋಷದಿಂದಿದ್ದರೇ?
ಅಲೆಕ್ಸಾಸ್. ಬೇಸರದಿಂದಲೂ ಅಲ್ಲ, ಸಂತೋಷದಿಂದಲೂ
ಅಲ್ಲ, ಪರಮಾವಧಿ ಸೆಕೆ ಮತ್ತು ಪರಮಾವಧಿ ಚಳಿಯ ನಡುವಣ
ಋತುಮಾನದಂತೆ.
ಕ್ಲಿಯೋ. ಆಹಾ ಸಮಭಾಗದ ಸಮಚಿತ್ತವೇ! ಗಮನಿಸಿಕೊ,
ಗಮನಿಸಿಕೊ, ಚಾರ್ಮಿಯಾನ್, ಪುರುಷನೆಂದರೆ ಅವನೆ;
ಗಮನಿಸಿಕೊ. ಆತ ಬೇಸರದಿಂದಿರಲಿಲ್ಲ, ಆತನ ಮಾದರಿ
ನೋಡಿ ವರ್ತಿಸುವವರಿಗೆ ಆತ ಬೆಳಕು ನೀಡುವಾತ;
ಸಂತೋಷದಿಂದಿರಲಿಲ್ಲ, ತನ್ನ ನೆನಪು ಈಜಿಪ್ಟಿನ ರಾಣಿಯ
ಜತೆ ಖುಷಿಯಲ್ಲಿದೆ ಎನ್ನುವುದನ್ನದು ಸೂಚಿಸುತ್ತಿತ್ತು; ಆದರೆ
ಎರಡರ ನಡುವೆ. ಆಹಾ ಸ್ವರ್ಗಸಮಾನ ಮಿಶ್ರಣವೆ! ನೀವು
ಬೇಸರದಿಂದಿರಿ ಅಥವಾ ಸಂತೋಷದಿಂದಿರಿ, ಎರಡರ
ಹಿಂಸೆಯೂ ನಿಮಗೆ ಒಪ್ಪುವುದೆ, ಬೇರೆ ಯಾರಿಗೂ ಒಪ್ಪದ
ಹಾಗೆ. — ನಮ್ಮ ದೂತರನ್ನು ನೋಡಿದಿಯ?
ಅಲೆಕ್ಸಾಸ್. ಹೌದು, ಮಹಾರಾಣಿ, ಇಪ್ಪತ್ತು ಜನ ಬೇರೆ
ಬೇರೆ ದೂತರನ್ನು. ಅಷ್ಟೊಂದು ಜನರನ್ನು ಮೇಲಿಂದ ಮೇಲೆ
ಯಾಕೆ ಕಳಿಸುತ್ತೀರಿ?
ಕ್ಲಿಯೋ. ಆಂಟನಿಗೆ ಕರೆಕಳಿಸಲು ನಾನು ಮರೆತ ದಿನ
ಹುಟ್ಟಿದವರೆಲ್ಲ ಭಿಕಾರಿಗಳಾಗಿ ಸಾಯುತ್ತಾರೆ. ಮಸಿ ಮತ್ತು
ಕಾಗದ, ಚಾರ್ಮಿಯಾನ್. ಸ್ವಾಗತ ನಿನಗೆ, ಅಲೆಕ್ಸಾಸ್. ನಾನು
ಸೀಸರನನ್ನು ಎಂದಾದರೂ ಇಷ್ಟೊಂದು ಪ್ರೀತಿಸಿದ್ದುಂಟೆ,
ಚಾರ್ಮಿಯಾನ್?
ಚಾರ್ಮಿ. ಓ, ಎಂಥಾ ಸೀಸರ್!
ಕ್ಲಿಯೋ. ಆ ಮಾತು ಇನ್ನೊಮ್ಮೆ ಹೇಳಿದರೆ ನಿನ್ನ ಗಂಟಲು
ಕಟ್ಟಲಿ! `ಧೀರ ಆಂಟನಿ’ ಎಂದು ಹೇಳು.
ಚಾರ್ಮಿ. ಶೂರ ಸೀಸರ್!
ಕ್ಲಿಯೋ. ಐಸಿಸ್ ದೇವತೆಯ ಆಣೆ, ಇನ್ನೊಮ್ಮೆ ನೀನು
ಸೀಸರನೊಂದಿಗೆ ಪುರುಷರ ಪುರುಷ ಆಂಟನಿಯನ್ನು ಹೋಲಿಸಿದರೆ
ನಿನ್ನ ಹಲ್ಲು ಮುರಿದೇನು.
ಚಾರ್ಮಿ. ದಯವಿಟ್ಟು ಕ್ಷಮಿಸಿಬಿಡಿ,
ನಿಮ್ಮ ಪಲ್ಲವಿಗೆ ನನ್ನ ಚರಣ.
ಕ್ಲಿಯೋ. ನನ್ನ ಎಳೆದಿನಗಳು ಅವು, ಯುಕ್ತಾಯುಕ್ತ
ಗೊತ್ತಿರದ ಕಾಲ, ರಕ್ತ ಇನ್ನೂ ಬಿಸಿಯಾಗಿರಲಿಲ್ಲ:
ಆದ್ದರಿಂದಲೇ ಅಂದು ಹಾಗೆಲ್ಲ ಅಂದೆ. ಆದರೆ ಬಿಡು,
ಈಗ ಹೋಗಿ ಮಸಿ ಮತ್ತು ಕಾಗದ ತೆಗೆದುಕೊಂಡು ಬಾ.
ಒಂದೊಂದು ದಿನವೂ ಅವರಿಗೆ ಪ್ರತ್ಯೇಕ ಸಂದೇಶ,
ಇಲ್ಲದಿದ್ದರೆ ನಾನು ಈಜಿಪ್ಟನ್ನು ನಿರ್ಜನ ಮಾಡಿಯೇನು.
[ಎಲ್ಲರೂ ನಿಷ್ಕ್ರಮಣ]
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ