- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
ಚೆಂದ ಚೆಂದ ಎನುವರಲ್ಲ, ಚೆಂದ ಎಂದರೇನು ?
ಚೆಂದವಾಗಿ ಬರೆಯುವದಷ್ಟೇ ಕವಿತೆಯೇನು ?
ಪದಗಳ ಹೆಕ್ಕಬೇಕು, ಮುತ್ತಂತೆ ಪೋಣಿಸಬೇಕು
ಮಾಲೆಯಂತೆ ಹಗೂರ,ಹಗೂರ ಕಟ್ಟಬೇಕು.
ಕಟ್ಟಿದರೆ ಆಯಿತೇ,ಎದೆ ತಟ್ಟಬೇಡವೇ
ಒಳಮನದ ಒಳಗುದಿ ಮನವ ಮುಟ್ಟಬೇಡವೇ
– ಮಾರಿಬಿಡಿ – ಕವನ ಸಂಕಲನದಿಂದ ಎಂ.ಆರ್. ಕಮಲ
ನೆನಪುಗಳು ನುಗ್ಗುವ ಕ್ರಮವೂ ವಿಚಿತ್ರವೇ ! ಅದಕ್ಕೆ ಮೌನದ, ಧ್ಯಾನದ ಹಂಗಿಲ್ಲ. ಇವತ್ತು ಇಂಥದೆಲ್ಲವನ್ನು ನೆನಪಿಸಿಕೊಂಡು,ಮಾಡುತ್ತೇನೆ ಎಂದಾಗ ಎಲ್ಲವೂ ಮರೆತು ಹೋಗಿರುತ್ತದೆ. ಅಡುಗೆ ಮನೆಯಲ್ಲಿ ಮತ್ತೇನೋ ಕೆಲಸದಲ್ಲಿ ತೊಡಗಿರುವಾಗ ನಲ್ಲಿಯಲ್ಲಿ ಬಿಟ್ಟ ನೀರಿನಂತೆ ನೆನಪುಗಳು ಸುರಿಯುತ್ತಿರುತ್ತವೆ. ಅರ್ಧಕ್ಕೆ ಬಿಟ್ಟು ಹೋಗಲು ಸಾಧ್ಯವಾಗದ್ದರಿಂದ, ಬಂದು ಬರೆಯುತ್ತೇನೆ ಎಂದು ಕೊಂಡರೆ ಒಂದಕ್ಷರವೂ ಹೊಳೆಯುವದಿಲ್ಲ ‘ ಎನ್ನುತ್ತಾರೆ,ಲೇಖಕಿ, ಕವಿಯತ್ರಿ,ಅನುವಾದಕಿ ಶ್ರೀಮತಿ ಎಂ.ಆರ್.ಕಮಲಾ ಅವರ “ಕಸೂತಿಯಾದ ನೆನಪು ” ಕೃತಿಯ ಪ್ರಬಂಧದಲ್ಲಿ.
ನೆನಪುಗಳು ಕಸೂತಿಯಾದಾಗಲೇ ಪದಪುಂಜಗಳಿಗೆ ರಹದಾರಿ.ದೈನಂದಿನ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ,ದೈನಂದಿನ ಜೀವನದ ಅತೀ ಸರಳ ಸಂಗತಿಗಳನ್ನು,ಬರಹ ರೂಪಕ್ಕೆ ಇಳಿಸುವ ಇವರ ಈ ಕಲೆ ನನಗಂತೂ ಒಂದು ರೀತಿಯ ಮಾತ್ಸರ್ಯ. ಇದರಲ್ಲಿರುವ ಪ್ರತಿ ಸಂಗತಿ. ನೋಡಿದ್ದು,ಅನುಭವಿಸಿದ್ದು,ಮತ್ತೆ ಏಕೆ ಬರೆಯಲಿಲ್ಲ ಎನಿಸಿತು. ಬಾಲ್ಯದ ಬದುಕು, ಮಹಿಳೆ,ಮನ:ಸ್ಥಿತಿ, ವೃತ್ತಿ, ಫೇಸಬುಕ್,ಯಾತ್ರೆ,ಕಾಶಿ,ಆಧ್ಯಾತ್ಮ, ಹೀಗೆ ೫೧ ಪ್ರಭಂದಗಳನ್ನು,ವಿಂಗಡಿಸಬಹುದು.ಒಟ್ಟಾಗಿ,ಬಿಡಿಯಾಗಿ ಹೇಗೆ ಓದಿದರೂ ಯಾವ ಹಂಗು,ಮುಲಾಜಿಲ್ಲದ ಬರಹಗಳು.ಇವುಗಳನ್ನು ಪ್ರಭಂದಗಳು ಎನ್ನುವುದಕ್ಕಿಂತ ೫೧ ಚಿತ್ರ ಗಳು ಎನ್ನಬಹುದು ಎನಿಸಿತು.
೫೧ ರ ಸಂಖ್ಯೆ, ಅಟಲ ಬಿಹಾರಿ ವಾಜಪೇಯಿ ಯವರ ‘ಮೇರಿ ಇಕ್ಕಾವನ್ ಕವಿತಾಂಯೆ’ ನೆನಪಿಗೆ ಬಂದದ್ದು . ಗದ್ಯ ಬರಹಗಳಿಗೆ ಅದರಲ್ಲಿಯೂ ಪ್ರಭಂಧಗಳಿಗೆ ವಸ್ತು, ವಿಷಯಗಳೆ ಇಲ್ಲವೇನೋ ಎನ್ನುವ ನಮ್ಮ ಇಂದಿನ ಸಾಹಿತ್ಯ ಸಂದರ್ಭದಲ್ಲಿ, ಯಾವ ವಿಷಯವೂ ಪ್ರಬಂಧವಾಗಬಹುದು ಎಂದು ಲೇಖಕಿ ನಿರೂಪಿಸುತ್ತಾರೆ.
ಇಲ್ಲಿ ನನಗೆ ಕವಿ ತಿರುಮಲೇಶ ನೆನಪಿಗೆ ಬರುತ್ತಾರೆ ಅವರ ಕವನ ಸಂಕಲನ ಗಳನ್ನು ಓದಿರುವ ಮತ್ತೆ ಮತ್ತೆ ಮಲುಕು ಹಾಕುತ್ತಿರುವ ನನಗೆ (ಅವರೂ,ನಾನೂ ಹೈದರಾಬಾದ್ ನಿವಾಸಿಗಳು. ಅವರ ಸಾಮೀಪ್ಯ ನನ್ನ ಅದೃಷ್ಟ ) ಕವಿತೆ ಬರೆಯಲು ವಸ್ತುಗಳೇ ಇಲ್ಲವೆಂದುಕೊಂಡಾಗ,ಅವರು,ಕಲ್ಲಂಗಡಿ ಹಣ್ಣು, ಬೆಕ್ಕು, ಪೆಂಟಯ್ಯನ ಅಂಗಿ,ಆಬಿದರಸ್ತೆ,,ತಾರನಾಕ ಚೌಕ, ಅಲ್ಬು ಕ್ಲರ್ಕ್,ಕೇರಳದ ಹುಡುಗಿಯರು,ಮೂನ್ ಮೂನ್ ಸೇನ್ ಹೀಗೆ ಅತೀ ಸಣ್ಣ ಸಂಗತಿಗಳು ಅವರಿಗೆ ಕವಿತೆಗಾದವು. ಈ ೫೧ ಚಿತ್ರಗಳನ್ನು ಓದುವಾಗ ಅವರೂ ಸಹ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಎದ್ದು ನಿಲ್ಲುತ್ತಾರೆ. ಅವರ ಓದಿನ ವಿಸ್ತಾರ, ಹರವು,ಕುವೆಂಪು ಬೇಂದ್ರೆ, ಕೆ.ಎಸ್.ನ,ಶಿವರುದ್ರಪ್ಪ, ಗಿರಡ್ಡಿ ಮುಂತಾದವರ,ಉದ್ಧರಣೆ, ಅವರೇ ಅನುವಾದಿಸಿದ ಪಾಶ್ಚಾತ್ಯ ಕವಿತೆಗಳು, ನಮ್ಮನ್ನು ಬೆರಗುಗೊಳಿಸುತ್ತವೆ.ಚಲನಚಿತ್ರದ ತುಣುಕುಗಳು, ಮಿನುಗುತಾರೆ ಕಲ್ಪನ ಹಾದುಹೋಗುತ್ತಾರೆ.
ಅವರ ೫೧ ಚಿತ್ರಗಳ ವಿಶ್ಲೇಷಣೆ ಮಾಡುವುದು ಸುದೀರ್ಘ ಬರಹವಾಗುತ್ತದೆ.ವಿಮರ್ಶೆಗೂ ಇತಿ ಮಿತಿಗಳು ಇವೆಯಲ್ಲ.ತಿರುಮಲೇಶ ರೊಂದಿಗೆ ಮಾತಾಡುವಾಗ,ಈ ವಿಷಯ ಸಾಕಷ್ಟು ನಮ್ಮ ನಡುವೆ ಚರ್ಚೆಗೆ ಒಳಗಾಗುತ್ತದೆ.ವಿಮರ್ಶೆಯ ಪರಿಭಾಷೆ ಇಲ್ಲದೆ,ಅನಿಸಿಕೆಗಳನ್ನು ದಾಖಲಿಸುವುದು, ಶೀರ್ಷಿಕೆ ಇಲ್ಲದೆ ಕವಿತೆ ಬರೆಯುವುದು,ಗದ್ಯ ಬರೆಯುವುದು ಎಂದುಕೊಳ್ಳುತ್ತ, ಸಾಹಿತ್ಯದ ಅನೇಕ ಮಗ್ಗುಲುಗಳನ್ನು, ಸಾಧ್ಯತೆ ಗಳನ್ನು ಅಲೋಚಿಸುವುದು. ಕಮಲಾ ಅವರು ಎಲ್ಲ ವಿಷಯಗಳಲ್ಲೂ ಯೋಚಿಸುತ್ತಾರೆ ಎನಿಸಿತು.ಇರಲಿ.
ಅವರ ಒಂದು ಪ್ರಭಂದ.’ ದೇಹ ಮತ್ತು ಮನಸಿಗೇಕೆ ತಾಳೆಯಾಗುವದಿಲ್ಲ ‘ ಸುಮ್ಮನೆ ಓದುವಾಗ ಇದ್ದೀತು ಎನಿಸಿತು. ಆಳವಾಗಿ ವಿಚಾರ ಮಾಡಿದಾಗ ದೊಡ್ಡ ಆಧ್ಯಾತ್ಮಿಕ ಚಿಂತನೆ ಇರುವುದು ಕಂಡೀತು.
ಇನ್ನೂ ಹೇಳಬೇಕೆಂದರೆ ದ್ವೈತ, ಅದ್ವೈತ ಎರಡೂ ಬೇರೆಲ್ಲೂ ಇಲ್ಲ ನಿನ್ನ ಒಳಗೇ ಇವೆ ನಿನ್ನ ವಯಸ್ಸು ನಲವತ್ತು ದಾಟುವ ವರೆಗೆ ನೀನು ಅದ್ವೈತಿ ನಿನ್ನ ಮನಸ್ಸಿನ ತಾಳಕ್ಕೆ ದೇಹ ಕುಣಿಯುತ್ತದೆ ‘ಅಹಂ ಬ್ರಹ್ಮಾಸ್ಮಿ ‘ ನಲವತ್ತು ದಾಟಿದರೆ ಇನ್ನೇನಿದೆ ?ಏನೆಲ್ಲವನ್ನು ಮಾಡಲು ಮನಸು ಬಯಸಿದರೂ ದೇಹ ಒಪ್ಪುವದಿಲ್ಲ.ಆಗ ಜೀವಾತ್ಮ-ಪರಮಾತ್ಮ. ದ್ವೈತಿ !!. ದೇಹ ಮನಸ್ಸುಗಳು ತಾಳೆಯಾದರೆ, ಉಳಿಯವದೇನು; ಮೋಕ್ಷದ ಬಾಗಿಲೇ ! ಧರ್ಮರಾನಂತೆ ಜೀವಂತವಾಗಿ ಸ್ವರ್ಗಕ್ಕೆ ಪ್ರವೇಶ !
ಅವರ ಅನೇಕ ಪ್ರಭಂಧಗಳಲ್ಲಿ,(19 ರಿಂದ 29)
ಹೆಣ್ಣು,ಒಂದಲ್ಲ ಒಂದು ರೀತಿಯಿಂದ ವಿಷಯವಾಗುತ್ತಾಳೆ. ಸಹನಾ ಮೂರ್ತಿಯಾಗಿ,ಸಿಡುಕಿನ ಸ್ಚಭಾವದವಳಾಗಿ,ಸಮಾನತೆ ಬಯಸುವ ಆಕಾಂಕ್ಷಿಯಾಗಿ,ವಿದ್ಯಾರ್ಥಿಗಳಿಗೆ, ಮಾರ್ಗದರ್ಶಿಯಾಗಿ. ಅದನ್ನು ಅವರು ಆಚರಣೆಯಲ್ಲಿಯೂ ತರುತ್ತಾರೆ.ತಂಗಿಯನ್ನು ಕರೆದು ತಂದರೇನೇ, ಅಣ್ಣನಿಗೆ, ಶೈಕ್ಷಣಿಕ ಪ್ರವಾಸಗಳಲ್ಲಿ,ಅರ್ಹತೆ,ಮೇಜುಗುದ್ದಿ ಮಾತಾಡುವುದು,ಬಾಲಕಿಯರಿಗೆ ಕಡ್ಡಾಯ, ಹಂದೆಯಲ್ಲ…. ನಾನು ಇಡೀ ಹೊತ್ತಿಗೆಯ ಎದ್ದು ನಿಲ್ಲವ ಪ್ರಭಂದ ಆದೀತು. ‘ ಜೀವ ಸೃಷ್ಟಿಯ ಹರ್ಷ,ಸ್ಪರ್ಶ, ಗಂಡಿಗೆಲ್ಲಿ ದಕ್ಕಬೇಕು ‘ ಎನ್ನುವುದನ್ನು ಘಂಟಘೋಷವಾಗಿ ಸಾರುವ ಲೇಖಕಿ,ಇಡೀ ಸ್ತ್ರೀ ಸಮುದಾಯದ ದನಿಯಾಗುತ್ತಾರೆ.
ಆಧುನಿಕ ಜಾಲತಾಣಗಳ ಫೇಸ್ಬುಕ್ ಅವರ ಕೈಯಲ್ಲಿ ‘ ಮೊಗ ಹೊತ್ತಿಗೆ ‘ ಯಾಗುತ್ತದೆ.ಕನ್ನಡಕ್ಕೊಂದು ಹೊಸಪದ.ಮುಖಪುಸ್ತಕಕ್ಕೊಂದು ಪರ್ಯಾಯ ಪದ. ಹೊಸಪದಗಳ ಸೇರ್ಪಡೆ, ಭಾಷೆಗೆ ಒಂದು ಗರಿ !
ಕುವೆಂಪು ಅವರ ಕವಿತೆ ಪಾಠ ಮಾಡುವಾಗ ‘ ‘ಕದ್ದಿಂಗಳು’ (ವರ್ಷ ಭೈರವ) ಪದ ಪ್ರಯೋಗ ನೋಡಿದಾಗ ಆದ ಖುಷಿ ಮೊಗ ಹೊತ್ತಿಗೆ ನೋಡಿದಾಗಲೂ ಆಯಿತು ಎನ್ನುವುದು ಸುಳ್ಳೇನಲ್ಲ.
ಅವರ ಬಾಲ್ಲದ ನೆನಪುಗಳ ಸರಮಾಲೆ ಪುಸ್ತಕದ ಜೀವಾಣುಗಳು.ಬಯಲು ಸೀಮೆಯ ಬಗ್ಗೆ ಬರೆಯುತ್ತಾ ಲೇಖಕಿ, ಬಯಲು ಸೀಮೆಗೆ,ಮಳೆಯ ಸುಖ ಎಲ್ಲಿ ಎನ್ನತ್ತಾರೆ. ಬಯಲು ಸೀಮೆಯಲ್ಲಿ ಮಳೆ ಇಲ್ಲದೇ ಇರಬಹುದು.ಆದರೆ ಚಕ್ಕೆ ತುಂಬಿದ ಮನೆ ಖಂಡಿತಾ ಇವೆ.ನೋಡಿ ಕಮಲಾ ಅವರು ಹೇಗೆ ನಮ್ಮ ನೆನಪುಗಳಿಗೂ ಲಗ್ಗೆ ಹಾಕುತ್ತಾರೆ.ನಾನು ಅದನ್ನು ನನ್ನ ಬಾಲ್ಲದಿಂದಲೂ ನೊಡಿದ್ದರೂ ಬರೆಯಬೇಕು ಎಂದು ಯಾಕೆ ಅನ್ನಿಸಲಿಲ್ಲ ? ಚಕ್ಕೆ ಮನೆಗಳ ಮಾದರಿಯ ಬಾಣಂತಿ ಕೋಣೆ ಇಲ್ಲಿಯೂ ಇವೆ.ನೀವು ನಂಬಲೇಬೇಕಾದ ಒಂದು ಸಂಗತಿ ಹೇಳಲೇಬೇಕು.ನನ್ನ ತಾತನಿಗೆ ಹದಿನಾಲ್ಕು ಮಕ್ಕಳು ! ನನ್ನ ಅಮ್ಮ ಚೊಚ್ಚಿಲು. ನನ್ನ ಚಿಕ್ಕಮ್ಮಂದಿರುಗಳಲ್ಲಿ ಹಲವರು ನನಗಿಂತ ವಯಸ್ಸಿನಲ್ಲಿ ಅದೆಷ್ಟೋ ವರ್ಷಗಳ ಚಿಕ್ಕವರು !!ನಾನು ಸರಿ ಸುಮಾರು ವಯಸ್ಸಿಗೆ ಬರುವ ವರೆಗೆ ಈ ಬಾಣಂತಿ ಕೋಣೆ ಖಾಲಿ ಇದ್ದಿದ್ದನ್ನು ನೋಡಿಯೇ ಇಲ್ಲ. ಲೊಬಾನ, ಬಜಿಪುಡಿಯ ವಾಸನೆಯಿಂದ ಅದು ಸದಾ ಘಾಟು,ಘಾಟಾಗಿಯೇ ಇರುತ್ತಿತ್ತು. ಮತ್ತು ನನ್ನ ಕಿರಿಯ ಚಿಕ್ಕಮ್ಮಂದಿರ ಮದುವೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ !!! ನಮ್ಮ ತಾಯಿ ಸಹ ಹೆತ್ತಿದ್ದು ಎಂಟು ಕೂಸುಗಳನ್ನು. ಅದೇ ಕೋಣೆಯಲ್ಲಿ.( ನಮ್ಮ ದುರ್ದೈವ ನಾವು ಉಳಿದದ್ದು ಮೂರೆ) ಇಷ್ಟೆಲ್ಲ ವಿವರಣೆ ಅಗತ್ಯ ಇತ್ತೇ ? ಅಥವಾ ನನ್ನೊಳಗಿನ ಬಯಲು ಸೀಮೆಯ ಅಭಿಮಾನ ಕಾಡಿತ್ತೇ ? ಲೇಖಕಿ ನಮ್ಮೆಲ್ಲರ ಮನೋಭಾವಗಳ ಮೇಲೆ ಪ್ರಭಾವ ಬೀರುತ್ತಿರುವುದೇ ಸಂತಸದ ಸಂಗತಿ.
ಅಸಹಾಯಕ ಹೆಣ್ಣು,ಸತ್ಯ ಹೇಳಿದರೂ ನಂಬದೇ ಇದ್ದರೆ ಗುಪ್ತಗಾಮಿನಿಯರಾಗದೆ ಏನಾಗಲು ಸಾದ್ಯ ? ಬ್ರಾಹ್ಮಣ, ಸೀತೆಯ ವಿರುದ್ಧ ಹೇಳಿದ್ದು ಸರಿಯಾದರೆ, ಫಲ್ಗುಣಿ,ತುಳಸಿ ಹಸು ಸತ್ಯವನ್ನೇಕೆ ಬಯಲು ಮಾಡಲಿಲ್ಲ. ಅದೇನೆ ಇರಲಿ ಫಲ್ಗುಣಿ ಗುಪ್ತಗಾಮಿನಿಯಾಗಿದ್ದು ಲೇಖಕಿಯನ್ನು ಕಾಡಿದ್ದು ಕಥೆಗೊಂದು ಹೊಸ ಆಯಾಮ. ಗುಪ್ತ ಗಾಮಿನಿಯರು ಮನವನಾವರಿಸುತ್ತಾರೆ. ತುಳಸಿ ಇಂದಿಗೂ ಪೂಜನೀಯಳು.ಹಸು ನಮ್ಮ ಬ್ರಾಂಡ್ ಇಕ್ವಿಟಿ. ಹಲವಾರು ವರ್ಷಗಳ ಹಿಂದೆ ಫಲ್ಗುಣಿಯನ್ನು ನೋಡಿದಾಗ ಮೂಡಿದ್ದ ಸಮಾನ ಯೋಚನೆಗಳಿಂದಲೇ ಇದು ಉದ್ದವಾಗಿದ್ದು.
ಯಾವ ಸಣ್ಣಪುಟ್ಟ ವಿಷಯ ಅವರಿಂದ ನುಸುಳಲು ಸಾಧ್ಯವಿಲ್ಲ. ಅವರ ದೃಶ್ಯ ವೈವಿಧ್ಯ, ವೃತ್ತಿ ಯನ್ನು ಗೌರವಿಸುವ ಎಂತಹ ಕಠಿಣ ಸಂದರ್ಭದಲ್ಲಿ ಸಮಚಿತ್ತದಿಂದ ಸಮತೂಕದ ಪರಿಹಾರ ಕಂಡು ಹಿಡಿಯುವ ಪರಿ, ಒಲ್ಲದ್ದನ್ನು ಸ್ವೀಕರಿಸಿಯೂ ಅದಕ್ಕೆ ಒದಗಿಸುವ ನಿಷ್ಟೆ ಬಿ.ಜೆ.ಎಲ್ ಸ್ವಾಮಿಯವರ ‘ಕಾಲೇಜು ರಂಗ ‘ ನೆನಪಿಸಿತು.
ಕಸೂತಿಯಾದ ನೆನಪು
ಪ್ರಬಂಧಗಳು
ಎಂ.ಆರ್ ಕಮಲ
ಕಥನ ಪ್ರಕಾಶನ
ನಾಗರಭಾವಿ ಬೆಂಗಳೂರು ೫೬೦ ೦೭೨
ಎಂ.ಆರ್.ಕಮಲ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮೇಟಿಕುರ್ಕೆಯವರು.ಎಂ.ಎ.ಎಲ್.ಎಲ್.ಬಿ ಪದವೀಧರೆ.ಸ್ನಾತಕೋತ್ತರ ದಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನ ಕ್ಕಾಗಿ ‘ಬಿ.ಎಂ.ಶ್ರೀ.’ ಸ್ವರ್ಣ ಪದಕ. ಕನ್ನಡ ಸಾಹಿತ್ಯ ಲೋಕದಲ್ಲಿ ಕಮಲ ಅವರ ಹೆಸರು ಚಿರಪರಿಚಿತ. ಶಕುಂತಲೋಪಾಖ್ಯಾನ,ಜಾಣೆ ಮತ್ತು ಇತರ ಕವಿತೆಗಳು,ಹೂ ಚೆಲ್ಲಿದ ಹಾದಿ, ಮಾರಿಬಿಡಿ ಇವರ ಕವನ ಸಂಕಲನಗಳು.
ಅನುವಾದ ಸಾಹಿತ್ಯದಲ್ಲಿ ಇವರದು ಮಹತ್ವಪೂರ್ಣ ಕೊಡುಗೆ. ಆಫ್ರಿಕನ್ – ಅಮೆರಿಕನ್ ಹಾಗೂ ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮ.ಕತ್ತಲ ಹೂವಿನ ಹಾಡು ಇವರು ಕನ್ನಡಿಸಿರುವ ಕಪ್ಪು ಲೇಖಕಿಯರ ಕವನ ಸಂಗ್ರಹ. ಅದೇ ಸರಣಿಯ ಕಪ್ಪ ಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ, ರೋಸಾ ಪಾರ್ಕ್ಸ ಮತ್ಉ ಸೆರೆ ಹಕ್ಕಿ ಹಾಡುವುದು ಏಕೆಂದ ಬಲ್ಲೆ, ಕವನ ಸಂಕಲನಗಳು ಅವರಿಗೆ ಬಹಳಷ್ಟು ಪ್ರಸಿದ್ಧಿ, ಹೆಸರು ತಂದು ಕೊಟ್ಟಿವೆ. ಅವರ ಅರಬ ಮಹಿಳಾ ಕಾವ್ಯ, ‘ ನೆತ್ತರದಲ್ಲಿ ನೆಂದ ಚಂದ್ರ ‘ ಬಂಗಾಲಿ ಭಾಷೆಯ ಮಹತ್ಬದ ಕವಿ ಜೀವಾನಂದರ ಅನುವಾದ ಕವಿತೆಗಳು ಜೀರೋ ಪಾಯಿಂಟ್ ಉಲ್ಲೇಖನೀಯ.ಅವರ ಇತ್ತೀಚಿಗೆ ಪ್ರಕಟಗೊಂಡ,
ಕ್ವಾರಂಟೈನ್,ಗದ್ಯಗಂಧಿ ಕವಿತೆಗಳು,ಊರ ಬೀದಿಯ ಸುತ್ತು ಸಹ ಸಾಕಕಷ್ಟು, ಗಮನ ಸೆಳೆದಿವೆ. ಸದಾ ಹಸನ್ಮುಖಿ ಕಮಲಾ ಅವರ ಪರಿಚಯ ವಾಗಿದ್ದು ಲೇಖಕ ವಿಮರ್ಶಕ ಎಚ್.ಎಸ್.ಸತ್ಯನಾರಾಯಣ ಅವರ ಮೂಲಕ.ಬಹುಬೇಗ ಆತ್ಮೀಯರಾಗಿಬಿಡುವ ಸ್ನೇಹಮಯಿ.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ