- ಮಗುಚಿತೊಂದು ಮೀನು ಬುಟ್ಟಿ - ಜುಲೈ 8, 2024
- ಅಟ್ಲಾಸ್ ಪತಂಗ - ಅಕ್ಟೋಬರ್ 29, 2023
- ಅಲೆಯ ಮೇಲೊಂದು ಲಹರಿ - ಆಗಸ್ಟ್ 13, 2022
ಭಾನುವಾರ ಮಧ್ಯಾಹ್ನದ ಸಮಯವೆಂದರೆ ಉಳಿದೆಲ್ಲ ದಿನಗಳ ಮಧ್ಯಾಹ್ನಗಳಿಗಿಂತ ಭಿನ್ನವಾಗಿರುತ್ತದೆ. ಗಡದ್ದಾಗಿ ಬಾರಿಸಿದ ಭರಪೂರ ಊಟದಿಂದ ಜಗತ್ತಿಗೆ ಮಂಪರು ಹತ್ತಿ ತೂಕಡಿಸುವ ಹೊತ್ತು. ಆದರೆ ಅವತ್ತು ಏಕೋ ನನ್ನ ಮನಸ್ಸು ಬೇರೊಂದು ಲೋಕದಲ್ಲಿಯೇ ವಿಹರಿಸುತಲಿತ್ತು. ಮನೆಯ ಹೊರಗಣ ಬಾಗಿಲ ಬಳಿಯ ಚಿಟ್ಟೆಯ ಮೇಲೆ ಕುಳಿತು ಅಂದು ಬೆಳಗ್ಗೆ ನಡೆದುದರ ಕುರಿತೇ ಯೋಚಿಸುತ್ತಿದ್ದೆ. ವಾತಾವರಣದ ತಣ್ಣನೆಯ ಗಾಳಿ ದೇಹಕ್ಕೆ ಮುದ ನೀಡುತ್ತಿದ್ದರೂ, ಮನಸ್ಸಿಗೆ ಮಾತ್ರ ಕಸಿವಿಸಿ. ಅದೆಷ್ಟು ಹೊತ್ತಿನಿಂದ ಮನೆಯ ಎದುರುಗಡೆಯ ಬಿಂಬಲ ಮರವನ್ನೇ ನೋಡುತ್ತಾ ನನ್ನ ಯೋಚನಾ ಲಹರಿಯಲ್ಲಿ ಕಳೆದು ಹೋಗಿದ್ದೆನೋ ಗೊತ್ತಿಲ್ಲ..! ಮತ್ತೆ ನನ್ನನ್ನು ಜಾಗೃತ ಲೋಕಕ್ಕೆ ಕರೆತಂದದ್ದು ಮಾತ್ರ “ಮುನ್ನು”..!
ಮುನ್ನು ನಮ್ಮ ಪಕ್ಕದ ಮನೆಯವರ ನಾಯಿ. ಕಟ್ಟಿ ಹಾಕಿದ ಜಾಗದಲ್ಲಿಯೇ ಬೊಗಳುತ್ತ, ಅತ್ತಿಂದಿತ್ತ ಹಾರುತ್ತ ತನ್ನ ನಾಟ್ಯ ಚಾತುರ್ಯತೆಯನ್ನು ಪ್ರದರ್ಶಿಸುತ್ತಿದ್ದ. ” ಅರೇ… ಇದೇನಾಯಿತಪ್ಪ ಇವನಿಗೆ! ” ಎಂದು ಯೋಚಿಸುತ್ತಿರುವಾಗಲೇ ಬೃಹತ್ ಗಾತ್ರದ ಕಪ್ಪೆಯೊಂದು ಮುನ್ನುವಿನ ಮುಖದ ಮೇಲೆಯೇ ಹಾರಿ ಬಂತು. ಈ ಅನೀರೀಕ್ಷಿತ ದಾಳಿಯಿಂದ ಕಂಗೆಟ್ಟ ಮುನ್ನು ತನ್ನ ಮುಖವನ್ನೆಲ್ಲ ಮಣ್ಣಿನಲ್ಲಿ ಉಜ್ಜಲಾರಂಭಿಸಿದ. ನೋಡ ನೋಡುತ್ತಿದ್ದಂತೆಯೇ ಮುನ್ನುವಿನ ಮುಖ ಸಗಣಿ ಮಿಶ್ರಿತ ಮಣ್ಣಿನಿಂದ ಅಲಂಕೃತವಾಗಿತ್ತು…! ಕಪ್ಪೆಯೂ ಅಷ್ಟೇ ಬದುಕಿದೆಯಾ ಬಡ ಜೀವವೇ ಎಂಬಂತೆ ಒಂದೇ ಜಿಗಿತದಲ್ಲಿ ಅದೇ ಬಿಂಬಲ ಮರದ ಬುಡದ ನೆರಳನ್ನು ಆಶ್ರಯಿಸಿತ್ತು..!
ಐದಾರು ನಿಮಿಷಗಳು ಕಳೆದಿದ್ದವೋ ಇಲ್ಲವೋ, ಮುನ್ನು ತನ್ನ ಕುಂಯ್ ಕುಂಯ್ ರಾಗವನ್ನು ಎಳೆಯುತ್ತ, ಬಾಲವನ್ನು ಬೀಸಣಿಕೆಯಂತೆ ಪಟಪಟನೆ ಅಲ್ಲಾಡಿಸುತ್ತ, ಬಾಯಲ್ಲಿ ಜೊಲ್ಲು ಸುರಿಸುತ್ತ, ಮನೆಯ ಎದುರುಗಡೆಯೇ ಶತಪಥ ಹಾಕಲು ಶುರುವಿಟ್ಟಿದ್ದ. ಅದಕ್ಕೆ ಕಾರಣವಿಷ್ಟೇ, ಪಕ್ಕದ ಮನೆಯವರ ಅಡಿಗೆ ಮನೆಯಿಂದ ಬರುತ್ತಿದ್ದ ಒಣ ಮೀನು ಹುರಿಯುತ್ತಿರುವ ವಾಸನೆ..! ಕತ್ತಿಗೆ ಬಿಗಿದ ಸರಪಳಿಯೊಂದು ಇರಲಿಲ್ಲವೆಂದರೆ ಮುನ್ನು ಸೀದಾ ಒಳಗೆ ನುಗ್ಗಿ ಬಾಣಲಿಗೆ ಬಾಯಿ ಹಾಕಿ ತನ್ನ ಹಸಿವು ನೀಗಿಸಿಕೊಳ್ಳುತ್ತಿದ್ದನೋ ಏನೋ..!
ಮರುಘಳಿಗೆಯೇ ನನ್ನ ಮನಸ್ಸು ಹಿಂದಿನ ಜಾಡನ್ನೇ ಹಿಡಿಯಿತು. ಆ ಯೋಚನೆಯ ಮೂಲ, ಅಂದು ಬೆಳಗ್ಗೆ ವಡೇರ ಮಠದ ಗ್ರೌಂಡಿನಲ್ಲಿ ಕೊಂಬ ಹಾಗು ಬಾಬುವಿನ ಜೊತೆ ನಡೆದ ಜಗಳ. ಬಾಬು ವಯಸ್ಸಿನಲ್ಲಿ ನಮಗಿಂತ ಐದು ವರ್ಷ ದೊಡ್ಡವನಾಗಿದ್ದರೂ ಕಲಿಕೆಯನ್ನು ಮೊಟಕುಗೊಳಿಸಿ ದುಡಿಯುವ ಸಾಹಸಕ್ಕೆ ಕೈ ಹಾಕಿದ್ದ. ಊರ ಮೇಲಿನ ಅಂಗಡಿಗಳಿಗೆಲ್ಲ ಚಕ್ಕುಲಿ, ಅಂಡೆ-ಉಂಡೆ, ಖಾರ ಹೀಗೆ ಮುಂತಾದ ಕುರುಕಲು ತಿಂಡಿಗಳ ಸರಬರಾಜು ಮಾಡುತ್ತಿದ್ದ. ವ್ಯಾಪಾರೀ ಬುದ್ಧಿಯವನಾದ್ದರಿಂದ ಹೋದಲ್ಲೆಲ್ಲ ಜಗಳ ಕರೆಯುವುದು ಬಾಬುವಿಗೆ ಕರಗತವಾಗಿತ್ತು. ಚಿಕ್ಕವನಾದರೂ, ಆತನ ಹರಕು ಬಾಯಿಗೆ ಸಿಲುಕಿ ಸಮಯ ವ್ಯರ್ಥ ಮಾಡುವ ಇಚ್ಛೆಯಿಲ್ಲದೆಯೇ ಹಲವು ವ್ಯಾಪಾರಸ್ಥರು ಬಾಬುವಿನ ಜೊತೆ ಚೌಕಾಸಿ ಮಾಡುವ ಗೋಜಿಗೆ ಹೋಗುತ್ತಿರಲಿಲ್ಲ.
–@–
ಬೆಳಗಿನ ಜಾವ ಹರೀಶನ ಅಂಗಡಿಯಿಂದ ಕಿರಾಣಿ ಸಾಮಾನುಗಳನ್ನು ಖರೀದಿಸಿ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ, ಸೈಕಲ್ಲೇರಿ ಬಂದ ರಾಮನಾಥ ಹಾಗು ಮೋಹನರು ಅಡ್ಡ ಹಾಕಿದರು. ಮೋಹನ ತನ್ನ ಮೂಗಿನಿಂದ ಜಾರುತ್ತಿದ್ದ ಸಿಂಬಳವನ್ನು ಅಂಗಿಯ ತೋಳಿನಿಂದಲೇ ಒರೆಸಿಕೊಂಡು ಹೇಳಿದ, “ಅರೇ.. ನಿಲ್ಲೋ ಮಾರಾಯ! ತಲೆ ಹಣಿಕಂಡ್ ಹೋಗುದೊಂದೇ ಮಾಡ್ತ್ಯಲ! ರಾಶಿ ದಿನ ಆಯ್ತಲಾ ಇವತ್ತು ಕ್ರಿಕೆಟ್ ಆಡ್ವ ಒಂಭತ್ತೂವರೆಗೆ.. ಗ್ರೌಂಡಿಗೆ ಬಂದ್ಬಿಡು ಮತ್ತೆ ಹ್ಞಾ…!”
ಇಷ್ಟು ಹೇಳಿದ್ದೆ ನನ್ನ ಉತ್ತರಕ್ಕೂ ಕಾಯದೆ ಟ್ರಿಣ್ ಟ್ರಿಣ್ ಎಂದು ಸೈಕಲ್ ಬೆಲ್ಲನ್ನು ಖಣಾಯಿಸಿ ಮುಂದೆ ಹೊರಟರು. ದೂರವೆಂದೆನಿಸಿದರೂ “ಅಲ್ವೋ ಎಷ್ಟು ಜನ ಇದಾರೋ ಬರುವವರು” ಎಂದು ಹಿಂದಿನಿಂದಲೇ ಕೂಗಿದೆ.
“ಒಟ್ಟು ಇಕ್ರಾ(ಹನ್ನೊಂದು)” ಎಂದು ರಾಮನಾಥ ಹಿಂದಿರುಗಿ ನೋಡದೆಯೇ ಉತ್ತರವಿತ್ತ.
–*-*-*–
ವಡೇರ ಮಠದ ಗ್ರೌಂಡು ನಮ್ಮ ಪಾಲಿಗೆ ಇಂಗ್ಲೆಂಡಿನ ಲಾರ್ಡ್ಸ್ ಗ್ರೌಂಡಿನಷ್ಟೇ ಪವಿತ್ರವಾಗಿತ್ತು. ಕ್ರಿಕೆಟ್ ಆಡಲು ಹೇಳಿ ಮಾಡಿಸಿದಂತಿತ್ತು. ನಮ್ಮ ಮನೆಯ ಗೇಟ್ ಅನ್ನು ದಾಟಿ ಅಕಸ್ಮಾತ್ ಆಗಿ ಎಡವಿದರೂ ಸಹ ಬೀಳುವುದು ಗ್ರೌಂಡಿನಲ್ಲೇ ಎಂಬಷ್ಟು ಸನಿಹದಲ್ಲಿತ್ತು.
ಅಂಗಡಿಯಿಂದ ಮನೆಗೆ ಬಂದವನೇ ಎರಡು ದೋಸೆ ಹಾಗು ಒಂದು ಲೋಟ ಕಷಾಯ ಕುಡಿದು, ಅರೆ-ಗಲೀಜಾಗಿದ್ದ ಒಂದು ಅಂಗಿಯನ್ನು ಸಿಕ್ಕಿಸಿಕೊಂಡು, ” ಅಮ್ಮ ಊಟದ ಹೊತ್ತಿಗೆ ಬತ್ತೆ..! ” ಎಂದು ಹೇಳಿ ಹೊರಟೆ. ಅಮ್ಮನಿಗೆ ಎಲ್ಲಿಗೆ ಹೋಗುತ್ತೇನೆ ಎಂದು ಹೇಳುವ ಅವಶ್ಯಕತೆ ಇರಲಿಲ್ಲ. ಭಾನುವಾರ ಬೆಳಗಿನ ಸಮಯ ಇವರು ಗ್ರೌಂಡಿನಲ್ಲೇ ಬಿದ್ದಿರುತ್ತಾರೆ ಎಂಬ ವಿಷಯ ಆಕೆಗೆ ಚೆನ್ನಾಗಿಯೇ ತಿಳಿದಿತ್ತು.
ನಾನು ಹೊರಟಿದ್ದ ರಭಸವನ್ನು ನೋಡಿ ಮನೆಯ ಜಗುಲಿಯಲ್ಲಿ ಪೇಪರ್ ಓದುತ್ತ ಕುಳಿತಿದ್ದ ಅಪ್ಪನೂ ಆಶ್ಚರ್ಯ ಚಕಿತರಾಗಿ ಕೇಳಿದರು, “ಇಷ್ಟು ಬೇಗ ಎಲ್ಲಿಗೆ ಹೋಗ್ತ್ಯೋ?”
“ಕ್ರಿಕೆಟ್ ಆಡುಲೆ.. ವಡೇರ ಮಠ ಗ್ರೌಂಡಿಗೆ..” ಎಂದೆ.
ಅಪ್ಪನಿಗೆ ಕ್ರಿಕೆಟ್ ಎಂದರೆ ಅಷ್ಟಕ್ಕಷ್ಟೇ. ಒಂದು ಕಡೆ ಇಂದ ಬಾಲ್ ಎಸೆಯುವುದು, ಇನ್ನೊಂದು ಕಡೆಯಿಂದ ಕುಟ್ಟುವುದು, ಅರ್ಥವಿಲ್ಲದೆ ವಿಕೆಟ್ ಗಳ ನಡುವೆ ಓಡುವುದು, ಇವೆಲ್ಲ ವ್ಯರ್ಥವೆಂದೇ ಅವರ ಭಾವನೆ. ಅವರದೇ ಶೈಲಿಯಲ್ಲಿ ಹೇಳಬೇಕು ಎಂದರೆ ಕ್ರಿಕೆಟ್ ಒಂದು “ಹೋಪ್ ಲೆಸ್” ಆಟ.
ವಿಷಯ ತಿಳಿದ ಕೂಡಲೇ “ಇವರಿಗೆ ಬೇರೆ ಕೆಲಸವಿಲ್ಲ” ಎಂಬ ಅರ್ಥ ನೀಡುವಂತೆ ತಲೆಯನ್ನೊಮ್ಮೆ ಅಲ್ಲಾಡಿಸಿದರು. ನಾನು ನನ್ನೆಲ್ಲ ಹಲ್ಲುಗಳನ್ನು ತೋರಿಸುತ್ತ “ಬೇಗ ಬತ್ತೆ ಪಪ್ಪಾ…” ಎಂಬ ಹುಸಿ ಭರವಸೆಯನ್ನಿತ್ತು ಗ್ರೌಂಡಿನತ್ತ ಧಾವಿಸಿದೆ.
–@–
ತೊಂಭತ್ತರ ದಶಕದಲ್ಲಿ ತಮ್ಮ ಅರೆಯೌವನ ಹಾಗು ತಾರುಣ್ಯ ದೆಸೆಯನ್ನು ತಲುಪಿದ್ದ ಬಹುತೇಕ ಹುಡುಗರಿಗೆ, ಸ್ವಲ್ಪ ಜಾಸ್ತಿಯೇ ಎನ್ನುವಷ್ಟು ಈ ಕ್ರಿಕೆಟ್ ಗೀಳು ಅಂಟಿಕೊಂಡಿತ್ತು. ಅದಕ್ಕೆ ಹಲವಾರು ಕಾರಣಗಳಿದ್ದರೂ, ಅತ್ಯಂತ ಪ್ರಮುಖ ಎನಿಸಿಕೊಂಡಂಥವು ಭಾರತ ೨೦೦೨ ರಲ್ಲಿ ಪಡೆದ ನಾಟವೆಸ್ಟ್ ಸರಣಿ ವಿಜಯ ಹಾಗು ೨೦೦೩ ರ ಕ್ರಿಕೆಟ್ ವಿಶ್ವಕಪ್ ನಲ್ಲಿ ಫೈನಲ್ ತಲುಪಿದ ಸಾಧನೆ. ಸಚಿನ್ ಎಂಬ ಮಾಂತ್ರಿಕನ ಮಂತ್ರದಂಡದ ಪ್ರಭಾವಕ್ಕೆ ಒಳಗಾಗಿ ಕ್ರಿಕೆಟ್ ಲೋಕವೇ ತಲೆದೂಗಿತ್ತು. ಆತನು ಗ್ರೌಂಡಿನಲ್ಲಿ ತೋರಿದ ಸಾಹಸಗಳು, ತರುಣರಲ್ಲಿ ಮಿಂಚನ್ನು ಹರಿಸಿದ್ದವು. ಇಂತಹ ಅಲೆಗೆ ಸಿಲುಕಿದವರಲ್ಲಿ ನಮ್ಮ ಗೆಳೆಯರ ಬಳಗವೂ ಹೊರತಾಗಿರಲಿಲ್ಲ.
ಗಂಗೂಲಿ, ಕೈಫ್ ಅಂಥವರನ್ನು ಅನುಕರಿಸಲು ಹೋಗಿ ಬಲಗೈ ಆಟಗಾರರೆಲ್ಲ ಒಂದೇ ದಿನದಲ್ಲಿ ಎಡಗೈ ಆಟಗಾರರಾಗಿ ಬದಲಾಗಿದ್ದರು. ಸುಮ್ಮ ಸುಮ್ಮನೆ ಗ್ರೌಂಡಿನಲ್ಲಿ ಬಾಲ್ ಹಿಡಿಯುವ ನೆಪದಲ್ಲಿ ಉರುಳಿ ಬೀಳುವುದು, ರಸ್ತೆಯಲ್ಲಿ ನಡೆಯುವಾಗ ಜಹೀರ್, ಹರ್ಭಜನ್ ರ ಬೌಲಿಂಗ್ ಶೈಲಿಯ ಅನುಕರಣೆಯಂತಹ ಹಲವು ಚಟುವಟಿಕೆಗಳು ಈ ತರುಣರಲ್ಲಿ ಕಾಣಸಿಗುತ್ತಿದ್ದವು. ಕೆಲವೊಮ್ಮೆ ಬೀದಿ ನಾಯಿಗಳು ಇವರನ್ನು ಹುಚ್ಚರೆಂದು ಭಾವಿಸಿ ಅಟ್ಟಿಸಿಕೊಂಡು ಹೋಗಿದ್ದು ಉಂಟು..!
–*-*-*–
ನಾನು ಗ್ರೌಂಡನ್ನು ತಲುಪುವ ವೇಳೆಗಾಗಲೇ ರಾಮನಾಥ ತನ್ನ ಸೈಕಲ್ಲಿನ ದಿಕ್ಕು ತಪ್ಪಿದ ಚೈನನ್ನು ಮತ್ತೆ ಸರಿಯಾಗಿ ಜೋಡಿಸುವ ಕಾರ್ಯದಲ್ಲಿ ತಲ್ಲೀನನಾಗಿದ್ದ. ನಾನು ಬಂದಿದ್ದು ಆತನ ಅರಿವಿಗೆ ಬಂದ ಕೂಡಲೇ,
“ಏಯ್ ಸ್ವಲ್ಪ ಸೈಕಲ್ ಎತ್ತಿ ಹಿಡ್ಕಳೋ ಚೈನ್ ಸರಿ ಮಾಡ್ಕೊಳ್ತೇ..!” ಎಂದ.
ಅವನ ಮಾತನ್ನು ಕೇಳಿಯೂ ಕೇಳಿಸದವನಂತೆ ನಟಿಸಿದೆ. ದಿನಕ್ಕೆ ಎರಡು ಬಾರಿಯಾದರೂ ಈತನ ಸೈಕಲ್ ಚೈನು ತಪ್ಪಿ ರಿಪೇರಿಯಾಗಲಿಲ್ಲವೆಂದರೆ, ಸೈಕಲ್ ಗು ಸಮಾಧಾನವಿಲ್ಲ ರಾಮನಾಥನಿಗೂ ಸಮಾಧಾನವಿಲ್ಲ ಎಂದೇ ನನ್ನ ಅನಿಸಿಕೆ. ಹಾಗಾಗಿಯೇ ಆತನು ಯಾರನ್ನೇ ಈ ಕೆಲಸಕ್ಕಾಗಿ ಕರೆಯಲಿ ಬಹುಶ: ಎಲ್ಲರೂ,
“ಏ ಹೋಗ ನಿನ್ ಸೈಕಲ್ ಉಸಾಬರಿಗೆ ನನ್ನ ಕರಿಬೇಡ..!” ಎಂದು ಹೇಳಿ ತಿರಸ್ಕರಿಸುತ್ತಿದ್ದರು.
ಗೆಳೆಯರ ಬಳಗದ ಎಲ್ಲ ಸದಸ್ಯರು ಬಂದು ಸೇರುವ ಸಮಯಕ್ಕೆ ರಾಮನಾಥನ ಸೈಕಲ್ ಸುಸ್ಥಿತಿಗೆ ಬಂದು, ಆತನ ಕೈಗೆ ಮೆತ್ತಿದ ಚೈನಿನ ಗ್ರೀಸು ರಾಮನಾಥನ ಚಡ್ಡಿಯ ಮೇಲೆ ಚಿತ್ತಾರವನ್ನು ಸೃಷ್ಟಿಸಿತ್ತು..! ಆದರೆ ನಮ್ಮೆಲ್ಲರನ್ನೂ ಚಿಂತೆಗೀಡುಮಾಡಿದ್ದು, ಎಲ್ಲರಿಗಿಂತ ಮೊದಲು ಬಂದು ನಿಂತಿದ್ದ ಒಂಟಿ ಸೀಟಿನ ಎಮ್ಮೆಟಿ (M80) ಹಾಗೂ ಅದು ಸಾರಿ ಹೇಳುತ್ತಿದ್ದ ಬಾಬುವಿನ ಆಗಮನ..!
–@–
ವಡೇರ ಮಠದ ಕ್ರಿಕೆಟ್ ಪಿಚ್ ಸಲುವಾಗಿ ಹಲವು ಬಾರಿ ಮಾರಾಮಾರಿಗಳು ನಡೆಯುತ್ತಿದ್ದವು. ಅಂತಹ ಸಮಯದಲ್ಲಿ ಅಲ್ಲಿಯೇ ನಿಂತು ಆಲಿಸಿದರೆ ನಿಮಗೆ ತರಹೇವಾರಿ ಬೈಗುಳಗಳು ಕೇಳ ಸಿಗುತ್ತವೆ.
“ಸಗಣಿ ತಿನ್ನುಕೆ ಹೋಗು ಬೇವರ್ಸಿ..!”
“ಹೆಕ್ಕತಿಂಬವನೇ..! ಹಡಬೆ ತಿರ್ಗ್ಲಿಕ್ಕೆ ಲಾಯಕ್ಕು ನೀನು..!”
ಈ ಪಟ್ಟಿ ಅಲ್ಲಿಗೆ ನಿಲ್ಲುವುದಿಲ್ಲ.
ನಾವು ಊಹಿಸಿದಂತೆಯೇ ಬಾಬು ಜಗಳವಾಡಲೆಂದೇ ಅಂದು ಅಲ್ಲಿಗೆ ಬಂದಿದ್ದ. ಈ ಬಾರಿ ಆತನಿಗೆ ತನ್ನ ಚಡ್ಡಿದೋಸ್ತ್ ಕೊಂಬನ ಸಾಥ್ ಕೂಡ ಸಿಕ್ಕಿತ್ತು. ಕೊಂಬ ಒಬ್ಬ ವಿಚಿತ್ರ ಆಸಾಮಿ. ಸದಾ ತನ್ನ ಕಿಸೆಯಲ್ಲಿ ಒಂದು ಬ್ಲೇಡನ್ನು ಇಟ್ಟುಕೊಂಡು ಓಡಾಡುತ್ತಾನೆ ಎಂಬ ಗುಲ್ಲಿತ್ತು. ಪೇಟೆಯಲ್ಲಿ ಎಲ್ಲೇ ತರುಣರ ಬಡಿದಾಟದ ಸುದ್ದಿ ಕೇಳಿಬಂದರೆ ಅದರಲ್ಲಿ ಒಂದು ಹೆಸರು ಕೊಂಬನದು ಎನ್ನುವಷ್ಟರ ಮಟ್ಟಿಗೆ ಆತ ಹೆಸರು ಗಳಿಸಿದ್ದ.
ನೋಡ ನೋಡ್ದುತ್ತಿದ್ದಂತೆಯೇ ಕೊಂಬ ಹಾಗೂ ನಮ್ಮ ಅಪ್ಪುವಿಗೆ ಮಾತಿಗೆ ಮಾತು ಬೆಳೆದು, ಕೊಂಬ ಅಪ್ಪುವಿನ ಕಾಲರ್ ಹಿಡಿದು ನಿಂತಿದ್ದ. ಮುಖ ಮುಸುಡಿಯೆನ್ನದೆ ಬಡಿದಾಡಲು ಶುರುವಿಟ್ಟರು. ನಡು ನಡುವೆ ಹಿಂದೆಂದೂ ಕೇಳಿರದ ಬೈಗುಳಗಳೂ ಹೊರಬಂದವು. ಇವರ ಜಗಳವನ್ನು ತಪ್ಪಿಸಲೆಂದು ಮೂಗು ತೂರಿಸಿದ ರಾಮನಾಥ-ಮೋಹನರಿಗೂ ತಪರಾಕಿಗಳು ಬಿದ್ದವು. ಕೊನೆಗೂ ಹೋರಾಟ ನಿರತರ ಇಬ್ಬರ ಅಂಗಿಯೂ ಹರಿಯುವುದರೊಂದಿಗೆ, ಹೊಡೆದಾಟಕ್ಕೆ ವಿರಾಮ ಬಿದ್ದಿತು. ಕೊಂಬ-ಬಾಬುವಿನ ಹುಂಬತನವಿನ್ನೂ ಹತೋಟಿಗೆ ಬರುವ ಮೊದಲೇ, ಯಾವುದೋ ಮಾಯೆಯ ವಶದಲ್ಲಿದ್ದ ಮೋಹನ ನಮ್ಮನ್ನು ಪೇಚಿಗೆ ಸಿಲುಕಿಸುವ ಮಾತುಗಳನ್ನು ಆಡಿಬಿಟ್ಟಿದ್ದ,
“ಹಲ್ಕಟ್ ಬೇವರ್ಸಿ ಹೆಕ್ಕತಿಂಬು ಜಾತಿಯವ ನೀನು..! ಧೈರ್ಯ ಇದ್ರೆ ನಮ್ಮೆಲೆ ಒಂದು ಮ್ಯಾಚ್ ಆಡು ನೋಡ್ವ… ಸೋತ್ರೆ ನಾವು ಇಲ್ಲಿಗೆ ಬರುದಿಲ್ಲ ಗೆದ್ರೆ ನೀವು ಇಲ್ಲಿ ಕಾಲಿಡುಕಿಲ್ಲ..!”
ಮೋಹನನ ಚಾಲೇಂಜ್ ಗೆ ಕಿಸಕ್ಕನೆ ನಕ್ಕ ಬಾಬು, “ಅಪ್ಪಂಗೆ ಹುಟ್ಟಿದ ಮಾತು ಆಡಿದೆ ನೋಡು… ಮುಂದಿನ ಆದಿತ್ವಾರ ಇದೆ ಹೊತ್ತಿಗೆ ಬಾ.. ನಿನ್ ಸೊಕ್ಕು ಮುರೀಲಿಲ್ಲ ಅಂದ್ರೆ ನಿಮ್ಮ ಎದುರಿಗೆ ನಾ ಮೀಸೆ ತೆಕ್ಕಂಡ್ ತಿರ್ಗ್ತೆ..!” ಎಂದ.
“ನಿಂಗೆ ಮೀಸೆ ಎಲ್ಲುಂಟಾ? ಹುಟ್ಟಿ ಮೂರು ಸೋಮವಾರ ಆಗಲಿಲ್ಲ.. ಬಾಯಿ ಮಾತ್ರ ಊರ್ ಹಾಳು ಮಾಡ್ತದೆ..! ಹೋಗ ಹೋಗ.. ಮನೆಗ್ ಹೋಗ್ ಸೀರೆ ಉಟ್ಕ ಹೋಗ್..” ಎಂದ. ಮೋಹನನ ಮಾತಿಗೆ ನಮಗೂ ನಗು ಬಂದಿತ್ತು, ಇವನೇನೋ ಹುಟ್ಟಿ ಯುಗಗಳೇ ಕಳೆದಿವೆಯೋ ಎಂಬಂತೆ ಮಾತನಾಡಿದ್ದ..!
ಹೊರಡುವ ಮೊದಲು, ತುಟಿಯಿಂದ ಬಳಬಳನೆ ಸುರಿಯುತ್ತಿದ್ದ ರಕ್ತವನ್ನು ಒರೆಸಿಕೊಳ್ಳುತ್ತ ಮೋಹನನನ್ನು ದುರುಗುಟ್ಟಿ ನೋಡಿದ ಕೊಂಬ, “ನೀ ಪೇಟೆಲಿ ಸಿಗು ಮಗನೆ..!” ಎಂದು ಧಮಕಾಯಿಸಿ ಹೊರಟ. ಒಂಟಿ ಸೀಟಿನ ಎಮ್ಮೆಟಿ ಉಗುಳಿದ ಹೊಗೆ, ಹೊಸ ಹಗೆಯ ಆರಂಭವನ್ನು ಸೂಚಿಸಿತ್ತು..!
ಮರುದಿನ ಶಾಲೆಯಿಂದ ಮರಳುತ್ತಿರುವಾಗ ಮೋಹನನ ಭೇಟಿಯಾಯಿತು. ಆತ ಹೇಳಿದ, “ಮೊನ್ನೆ ಸಂಜೆ ಪೇಟೆಗೆ ಹೋದಾಗ ಬಾಬು ಸಿಕ್ಕಿದ್ದ ಮಾರಾಯ.. ಸಾಯ್ಲಿ ಸರ್ಕಲ್ ಹತ್ರನೇ ಅಡ್ಡ ಹಾಕಿದ್ದ… ಬರುವ ಆದಿತ್ವಾರ ಜನ್ರನ್ನ ಕರ್ಕೊಂಡ್ ಬರ್ತೆ ಗ್ರೌಂಡಿಗೆ ಬಾ ಮಗನೆ ನಿನ್ ಸಂತಿಗೆ ಇರು ಹುಡ್ಗೀರ್ ಗ್ಯಾಂಗ್ ನು ಕರ್ಕೊಂಡ್ ಬಾ.. ನಾವು ನೋಡ್ತ್ರು ನಿಮ್ಮ ಗಂಡಸ್ತನ ಅಂತೆಲ್ಲ ಹೇಳ್ದ.. ಪರಿಸ್ಥಿತಿ ಗಂಭೀರ ಅದೇ ಮಾರಾಯ.. ಎಂತಾರು ಮಾಡ್ಬೇಕು.. ನಾಳೆ ಎಲರಿಗೂ ಒಂದ್ಸಲ ಬರುಕೆ ಹೇಳು..” ಎಂದ. ಈ ಮೋಹನನಿಗೆ ಮೊನ್ನೆ-ನಿನ್ನೆಯ ವ್ಯತ್ಯಾಸವೇ ತಿಳಿಯುತ್ತಿರಲಿಲ್ಲ. ಹಳೆಯ ದಿನಗಳೆಲ್ಲವೂ ಅವನ ಪಾಲಿಗೆ ಮೊನ್ನೆಯೇ..!
“ನಿನ್ ತಲೆ ಬೊಂಡ… ನಿನ್ ಹತ್ರ ಯಾರು ಅಧಿಕ ಪ್ರಸಂಗಿ ಮಾತಾಡ್ಲಿಕ್ಕೆ ಹೇಳದ್ದು ಆ ದಿನ.. ಈಗ ಅನುಭವಿಸು ಮಗನೆ… ಬರಿ ಇದೆ ಆಯಿತು ಯಾವಾಗ್ಲೂ…” ಎಂದು ಹೇಳಿ ಅವನಿಗೆ ಕ್ಯಾರೇ ಎನ್ನದೆ ಮನೆಯತ್ತ ಹೊರಟೆ.
ಮನೆಯನ್ನು ತಲುಪಿದ ಅರ್ಧ ಗಂಟೆಯೊಳಗೆ ರಾಮನಾಥ ಹಾಗು ಗೋಟಿ ಇಬ್ಬರೂ ನನ್ನನ್ನು “ಮೋಹನ ಕರೆಯುತ್ತಿದ್ದಾನೆ ಮಾರಾಯ ಬಾ..” ಎಂದು ಹೇಳಿ ಎಳೆದೊಯ್ದರು. ಬೈಠಕ್ ನಡೆದು, ಹಲವಾರು ಪ್ರತಿವಾದ-ಪ್ರತಿರೋಧಗಳ ನಂತರ ನಮ್ಮ ತಂಡಕ್ಕೊಂದು ಬ್ಯಾಟಿನ ಅವಶ್ಯಕತೆ ಇರುವುದು ಮನಗಂಡೆವು. ಪ್ರತಿಯೊಬ್ಬರೂ ತಮ್ಮ ಕೈಯಿಂದ ೨೫ ರೂಪಾಯಿಗಳನ್ನು ಹಾಕಿ ಬ್ಯಾಟ್ ಖರೀದಿಸುವ ನಿರ್ಣಯವಾಯಿತು. ಅದರ ಜವಾಬ್ದಾರಿ ಬಿದ್ದಿದ್ದು, ಚೌಕಾಸಿಯಲ್ಲಿ ನಮ್ಮೆಲ್ಲರಿಗಿಂತ ಉತ್ತಮ ಎನಿಸಿಕೊಂಡಿದ್ದ ಗೋಟಿಯ ಮೇಲೆ.
ಗೋಟಿ ಎರಡು ದಿನಗಳಲ್ಲಿ ಬ್ಯಾಟ್ ಖರೀದಿಸಿ ಬಿಟ್ಟಿದ್ದ. ಆದರೆ ನನ್ನ ಮನಸ್ಸಿನಲ್ಲಿ ಸ್ವಂತಕ್ಕೆ ಒಂದು ಬ್ಯಾಟ್ ಇದ್ದರೆ ಚಂದವಲ್ಲವೇ? ಕೈಯಲ್ಲಿ ಬ್ಯಾಟ್ ಹಿಡಿದು ಗ್ರೌಂಡಿನಲ್ಲಿ ಕಾಲಿಟ್ಟರೆ, ಸಚಿನ್ ಲಾರ್ಡ್ಸ್ ನಲ್ಲಿ ಕಾಲಿಟ್ಟಂತಹ ಅನುಭವ, ಅದರ ಜೊತೆ ಗುಂಪಿನಲ್ಲಿ ಸಿಗುವ ಮರ್ಯಾದಿಯೇ ಬೇರೆ.. ಆಹಾ ಎಂತಹ ರೋಮಾಂಚನಕಾರಿ ಅನುಭವ ಎಂದು ಬಾಯ್ತೆರೆದು ಅಂತಹ ಕನಸೊಂದನ್ನು ಆಹ್ಲಾದಿಸುತ್ತ ಮನಸ್ಸು ಹಿಗ್ಗಿತ್ತು. ಅನುಕೂಲವಾಗಲೋ ಎಂಬಂತೆ ಭಟ್ಕಳದ ಗಲ್ಲಿಗಳಲ್ಲಿ ರಂಜಾನ್ ಪೇಟೆಯ ಅಂಗಡಿಗಳು ತಲೆಯೆತ್ತಿ ನಿಂತಿದ್ದವು. ಇದೆ ಸೂಕ್ತ ಸಮಯವೆಂದು ಯೋಚಿಸಿ ಅಪ್ಪನಿಗೊಂದು ಬ್ಯಾಟ್ ಕೊಡಿಸುವ ಅರ್ಜಿ ಹಾಕಲೇ ಬೇಕು ಎಂದು ನಿರ್ಧರಿಸುವ ಹೊತ್ತಿಗೆ ಅಂದಿನ ಸೂರ್ಯ ದಿಗಂತವನ್ನು ಚುಂಬಿಸುತ್ತಿದ್ದ..!
–@–
ಭಟ್ಕಳದಂತಹ ಶಹರಿನಲ್ಲಿ ರಂಜಾನಿನ ರಂಗು ನೋಡಿಯೇ ಅನುಭವಿಸಬೇಕು. ಮುಸ್ಸಂಜೆ ವೇಳೆಯಲ್ಲಿ ತರಹೇವಾರಿ ಅಂಗಡಿಗಳು, ಜಗಮಗಿಸುವ ಬೆಳಕಿನ ತೋರಣಗಳು, ಮಸಾಲೆಯಲ್ಲಿ ಬೇಯುತ್ತಿರುವ ಮೀನು-ಕೋಳಿಗಳ ವಾಸನೆ (ಹಲವರ ಪಾಲಿಗೆ ಇದು ದಿವ್ಯ ಸುಗಂಧ) ಎಲ್ಲವೂ ಸೇರಿ ಅಲ್ಲಿನ ಗಲ್ಲಿಗಳಲ್ಲಿ ಹೊಸ ಲೋಕವೊಂದು ಅನಾವರಣಗೊಂಡಿರುತ್ತದೆ. ಯುವಕ-ಯುವತಿಯರನ್ನು, ವಯಸ್ಕರನ್ನು, ವಯೋ ವೃದ್ಧರನ್ನೂ ಆಕರ್ಷಿಸುವ ಬಟ್ಟೆ-ಬಳೆ-ಬಿಂಗಲಾಟಿ ಆಭರಣಗಳಂತಹ ಸಾಲು ಸಾಲು ಅಂಗಡಿಗಳಲ್ಲಿ ತಾಯಂದಿರು-ಅಜ್ಜಿಯಂದಿರು, ಚಿಗುರು ಮೀಸೆಯ ಯುವಕರು-ಮೊಗ್ಗು ಜಡೆಯ ಯುವತಿಯರು ತಾವು ಖರೀದಿಸಬೇಕು ಎಂದುಕೊಂಡ ಸಾಮಾನುಗಳಿಗೆ ಚೌಕಾಸಿ ಮಾಡುತ್ತಿರುವ ದೃಶ್ಯ ಸರ್ವೇಸಾಮಾನ್ಯ.
ಇನ್ನು ಗಿರಾಕಿಗಳೇ ಇಲ್ಲದ ಅಂಗಡಿಗಳ ಕಥೆಯೇ ಬೇರೆ. ಗಿರಾಕಿಗಳನ್ನು ಸೆಳೆಯಲು ತಮ್ಮದೇ ಕಸರತ್ತುಗಳನ್ನು ಪ್ರಯೋಗಿಸುತ್ತಾರೆ.
“ಆಯಿಯೇ… ಆಯಿಯೇ… ಆಯಿಯೇ… ದೇಖಿಯೇ… ದೇಖನೆ ಕೆ ಲಿಯೇ ಪೈಸಾ ನಹಿ…!” ಎಂದು ಹಿಂದಿಯಲ್ಲಿ ಪ್ರಯತ್ನಿಸಿದರೆ, ಇನ್ನೊಬ್ಬಾತ, “ಬನ್ನಿ ಅಣ್ಣ… ಬನ್ನಿ ಅಕ್ಕ…ನೋಡಲಿಕ್ಕೆ ದುಡ್ಡು ಇಲ್ಲ..!” ಎನ್ನುತ್ತಾ ಕನ್ನಡದಲ್ಲಿಯೇ ಗಿರಾಕಿಗಳ ಮನಸೆಳೆಯುವ ಪ್ರಯತ್ನದಲ್ಲಿರುತ್ತಾನೆ. ಸತತ ಒಂದು ತಿಂಗಳುಗಳ ಕಾಲ ತೆರೆದುಕೊಂಡಿರುವ ಈ ಜಗತ್ತಿನಲ್ಲಿ ಕಾಲಿಟ್ಟು ಗಲ್ಲಿ ಗಲ್ಲಿಗಳನ್ನು ತಿರುಗುವ ಮಜವೇ ಬೇರೆ. ದಿನ ನಿತ್ಯದ ಜಂಜಾಟದಲ್ಲಿ ಕಳೆದು ಹೋದ ಚೈತನ್ಯವನ್ನು ತಕ್ಕ ಮಟ್ಟಿಗಾದರೂ ಮರಳಿ ನೀಡುವ ಕ್ರಿಯೆ ಇಲ್ಲಿ ಜರುಗುತ್ತಲೇ ಇರುತ್ತದೆ.
–*-*-*–
ನನ್ನ ಪಾಲಿಗೆ ರಂಜಾನಿನ ಪೇಟೆ ಬ್ಯಾಟು ಖರೀದಿಸಲು ಒಂದು ಅವಕಾಶವಾಯಿತು. ಪೇಟೆಯ ಕಡೆ ಹೊರಡುವ ಮುನ್ನವೇ ಅಪ್ಪನಿಗೆ ಹಾಕಿದ ಅರ್ಜಿ ತಿರಸ್ಕೃತವಾಗಿತ್ತು. ನಿರಾಸೆಯ ಬುತ್ತಿ ಕಟ್ಟಿಕೊಂಡೇ ಅಪ್ಪನ ಕೈ ಹಿಡಿದು ಪೇಟೆಯ ಗಲ್ಲಿಗಳನ್ನು ಹಾಯುತ್ತಿರುವಾಗಲೇ ಬ್ಯಾಟಿನ ರಾಶಿ ಹಾಕಿಕೊಂಡಿದ್ದ ಅಂಗಡಿಯೊಂದು ಕಣ್ಣಿಗೆ ಬಿತ್ತು. ಕಾಲುಗಳು ನಿಂತ ಜಾಗದಿಂದ ಕದಲುವ ಲಕ್ಷಣಗಳೇ ಕಾಣಿಸಲಿಲ್ಲ. ಒಂದೆರಡು ಹೆಜ್ಜೆ ಮುಂದೆ ನಡೆದಿದ್ದ ಅಪ್ಪ ಒಮ್ಮೆಲೇ ಹಿಂತಿರುಗಿ ನೋಡಿದರು. ನಾನು ಅಂಗಡಿಯತ್ತ ದಿಟ್ಟಿಸಿ ನೋಡುತ್ತಿದ್ದೆ. ನಡುರಸ್ತೆಯಲ್ಲೇ ಒಂದೆರಡು ಏಟುಗಳು ಬೀಳುವ ಲಕ್ಷಣಗಳೂ ಗೋಚರವಾಗಿದ್ದವು. ಆದರೆ ನನ್ನ ಯೋಗವೋ ಎಂಬಂತೆ ಅಪ್ಪ ಅಂಗಡಿಯಾತನನ್ನು ವಿಚಾರಿಸಿ, ಸರಿಯಾದ ಬೆಲೆ ಬರುವವರೆಗೂ ಚೌಕಾಸಿ ನಡೆಸಿ ವ್ಯಾಪಾರ ಕುದುರಿಸಿ, ಬ್ಯಾಟಿನ ಬೆಲೆಗೆ ೩ ವಿಕೆಟ್ಟುಗಳು ಬರುವಂತೆ ನೋಡಿಕೊಂಡಿದ್ದರು. ನನ್ನ ಖುಷಿಗೆ ಪಾರವೇ ಇರಲಿಲ್ಲ. ಮನೆಗೆ ಬಂದವನೇ ಬ್ಯಾಟಿನ ಮುಖಕ್ಕೊಂದು “ಎಂ ಆರ್ ಎಫ್“ ಎಂಬ ಅಕ್ಷರಗಳನ್ನು ಬರೆದು ಬ್ಯಾಟಿನ ಹಿಂದುಗಡೆ ದಿನಪತ್ರಿಕೆಯಲ್ಲಿ ಬಂದ ಸಚಿನ್ ತೆಂಡೂಲ್ಕರ್ ರ ಭಾವಚಿತ್ರವೊಂದನ್ನು ಅಂಟಿಸಿ ಧನ್ಯನಾದೆ..!
–*-*-*–
ಯಾವ ದಿನ ಮ್ಯಾಚ್ ನಡೆಯುವುದು ಎಂದು ತೀರ್ಮಾನವಾಗಿತ್ತೋ ಆ ದಿನವೂ ಬಂದೇ ಬಿಟ್ಟಿತ್ತು. ಮೋಹನನ ಪಾಲಿಗಂತೂ ಪ್ರತಿಷ್ಠೆಯ ದಿನ. ಅಂದುಕೊಂಡ ಸಮಯಕ್ಕೆ ಸರಿಯಾಗಿ ಇಬ್ಬದಿಯ ತಂಡಗಳು ಗ್ರೌಂಡಿನಲ್ಲಿ ಸೇರಿಬಿಟ್ಟಿದ್ದೆವು. ಬಾಬುವಿನ ಜನರೋ ಭಯಾನಕವಾಗಿದ್ದರು. ಒಬ್ಬರ ಮುಖವನ್ನೂ ಹಿಂದೆಂದೂ ಕಂಡಿರಲಿಲ್ಲ. ಹನ್ನೊಂದರಲ್ಲಿ ಎಂಟು ಜನ ಕರಿ ದಾಂಡಿಗರೇ. ಅವರಿಗೆ ಹೋಲಿಸಿಕೊಂಡರೆ ನಮ್ಮವರೆಲ್ಲರೂ ನರ ಪೇತಲರೆ..!
ಅವತ್ತು ನಮ್ಮ ಪಾಲಿಗೆ ಎರಡು ವಿಷಾದಕರ ಘಟನೆಗಳು ನಡೆದವು. ಒಂದು ನಮ್ಮ ತಂಡದ ಗಟ್ಟಿ ಬ್ಯಾಟ್ಸಮನ್ ಎನಿಸಿಕೊಂಡಿದ್ದ ಬಾಳಾ, ಹಿಂದಿನ ದಿನ ಹಾಳು-ಮೂಳು ತಿಂದು ಅದರಿಂದಾಗಿ ಹೊಟ್ಟೆ ಕೆಡಿಸಿಕೊಂಡು ಏಳಲಾರದೆ ಮಲಗಿದ್ದು. ಎರಡನೆಯದು ನಮ್ಮೆಲ್ಲರ ಖರ್ಚಿನಿಂದ ಕೊಂಡಿದ್ದ ಬ್ಯಾಟು ಇಲಿಯನ್ನು ಸದೆಬಡಿಯುವ ಕೆಲಸಕ್ಕೆ ವಿನಿಯೋಗವಾಗಿ ಎರಡು ಹೋಳಾಗಿದ್ದು. ಅದಕ್ಕೆ ಸಾಕ್ಷಿ ಎಂಬಂತೆ ಗೋಟಿ ತುಂಡು ತುಂಡಾದ ಬ್ಯಾಟಿನ ಚೂರುಗಳನ್ನು ತಂದು ತೋರಿಸಿದ್ದ. ಎಲ್ಲರ ಹೊಟ್ಟೆಯಲ್ಲೂ ಕಿಚ್ಚಿಟ್ಟ ಅನುಭವ..! ಆ ಸಮಯದಲ್ಲಿ ಕೈ ಹಿಡಿದದ್ದು ಹೊಸದಾಗಿ ಕೊಂಡಿದ್ದ ನನ್ನ ಬ್ಯಾಟು..!
ಬಾಳನ ಬದಲಿ ಆಟಗಾರನಾಗಿ, ಗೋಟಿ ಆತನ ಪರಿಚಯದವನಾದ ಕಿಟ್ಟು ಎಂಬವನನ್ನು ಕರೆತಂದಿದ್ದ. ಆತನ ಪರಿಚಯವೂ ನಮಗ್ಯಾರಿಗೂ ಇರಲಿಲ್ಲ.
ಬಾಬುವಿನ ಠೊಣಪರ ಪಡೆ ಹತ್ತು ಓವರ್ ಗಳಲ್ಲಿ ೮೦ ರನ್ ಪೇರಿಸಿಬಿಟ್ಟಿತ್ತು. ಬಿಸಿಲು ನೆತ್ತಿಗೇರಿತ್ತು. ಉತ್ತರವಾಗಿ ಬ್ಯಾಟಿಂಗ್ ಶುರುಮಾಡಿದ ಕೆಲವೇ ಕ್ಷಣಗಳಲ್ಲಿ ನಮ್ಮ ಸೋಲಿನ ಲಕ್ಷಣಗಳು ಗೋಚರವಾಗಿದ್ದವು. ಯಾಕೆಂದರೆ ಮೊದಲ ಮೂರು ಓವರ್ ಗಳು ಮುಗಿಯುವ ಹೊತ್ತಿಗಾಗಲೇ ನಮ್ಮ ತಂಡದ ೩ ವಿಕೆಟ್ ಗಳು ಉರುಳಿದ್ದವು.
ಹೊಸ ಬ್ಯಾಟಿಗೆ ಮುತ್ತಿಟ್ಟು ಕ್ರೀಸಿಗೆ ಇಳಿದ ನಾನು ೫ ರನ್ ಗಳಿಸುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡಿದ್ದೆ. ನನ್ನ ನಂತರ ಗುಂಡು-ಮೋಹನರು ಜೊತೆಗೂಡಿದ್ದರು. ಈಗ ಕ್ರೀಸಿನಲ್ಲಿ ಇದ್ದಿದ್ದು ರಾಮನಾಥ ಹಾಗು ಹೊಸಬ ಕಿಟ್ಟು. ರಾಮನಾಥ ನಮ್ಮ ಟೀಮಿನ ರಾಹುಲ್ ದ್ರಾವಿಡ್. ಒಂದು ಕಾರಣ ದ್ರಾವಿಡರಂತೆ ಒಂದು ರನ್ ಗಳಿಸಲು ನೂರೆಂಟು ಬಾಲ್ ಗಳನ್ನೂ ತಿನ್ನುತ್ತಿದ್ದ. ಇನ್ನೊಂದು ಕಾರಣ ದ್ರಾವಿಡರಂತೆ ವಿಪರೀತವಾಗಿ ಬೆವರು ಸುರಿಸುತ್ತಿದ್ದ.
ಆದರೆ ಕಿಟ್ಟು ನಮಗೆಲ್ಲರಿಗೂ ತಾನೊಬ್ಬ ಅದ್ಭುತ ಆಟಗಾರನೆಂದು ನಂಬಿಸಿ ಆಡಲು ಇಳಿದಿದ್ದ. ಆಡುವಾಗ ಮಾತ್ರ ಬ್ಯಾಟು ಬಾಲ್ ನ ಸನಿಹಕ್ಕೂ ಸುಳಿಯುತ್ತಿರಲಿಲ್ಲ. ಇದನ್ನು ಕಂಡ ಮೋಹನ ಕೆಂಡಾಮಂಡಲವಾಗಿ, “ಎಂತ ಸಾಯ್ತ್ನೋ ಮಾರಾಯ ಇವ.. ಬರಿ ಬಾಲ್ ತಿಂತಿದ್ದ .. ಕೆಪ್ಪೆ ಹಿಡಿದ ಹಂಗೆ ಮಾಡ್ತ್ನಪ… ಬೋಳಿಗೆ ಎರಡು ಬಿಟ್ಟುಬರ್ತೆ ತಡಿ” ಎಂದು ಕಿಟ್ಟುವಿಗೆ ಹೊಡೆಯಲು ಹೊರಟೇ ಬಿಟ್ಟಿದ್ದ. ಆಗಲೇ ಕಿಟ್ಟು ಇವನಿಗೆ ಹೆದರಿ, ತನಗೆ ಬಿಸಿಲೇರಿದರೆ ಬಾಲ್ ಸರಿಯಾಗಿ ಕಣ್ಣಿಗೆ ಕಾಣಿಸುವುದಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದ. ಅದನ್ನು ತೋರಗೊಡದಂತೆ ಕಂಡಕಂಡಲ್ಲಿ ಬ್ಯಾಟ್ ಬೀಸುವುದು ಎಂದು ನಿರ್ಧರಿಸಿ ಬಿಟ್ಟಿದ್ದ. ಬಾಲ್ ಅಷ್ಟೇ ಅಲ್ಲ ಯಾವ ವಸ್ತುವೂ ಸಂಪೂರ್ಣವಾಗಿ ಗೋಚರಿಸುತ್ತಿರಲಿಲ್ಲವಂತೆ. ಅಂದಾಜಿನ ಮುಖಾಂತರವೇ ಹೊರಗಿನ ಎಲ್ಲ ಕೆಲಸಗಳನ್ನು ಮಾಡುವದನ್ನು ರೂಢಿಸಿಕೊಂಡಿದ್ದನಂತೆ..!
ಅವನ ಮಾತುಗಳನ್ನು ಕೇಳಿ ಹತಾಶನಾದ ಮೋಹನ “ಈ ಬೇವರ್ಸಿ ನಂಬ್ಕೊಂಡ್ ಮ್ಯಾಚ್ ಸೋತ್ಹ್ವಲ್ಲೋ..!” ಎನ್ನುತ್ತಾ ಅಳುವುದೊಂದೇ ಬಾಕಿ. ಆದರೆ ಆಟ ಒಂದು ಕಡೆಯಿಂದ ಮುಂದುವರಿಯುತ್ತಲೇ ಇತ್ತು. ಬದುಕಿನಲ್ಲಿ ಪವಾಡಗಳು ಯಾವ ರೀತಿಯಲ್ಲಾದರೂ ಬರಬಹುದು ಎಂಬುದನ್ನು ಅಂದು ರಾಮನಾಥ ನಮಗೆ ತೋರಿಸಿಕೊಟ್ಟಿದ್ದ. ಅಂದಿನವರೆಗೆ ದ್ರಾವಿಡನಂತಿದ್ದ ರಾಮನಾಥ ಆ ದಿನದಂದು ಮಾತ್ರ ರೊಚ್ಚಿಗೆದ್ದ ಸಚಿನ್ ನಂತಾಗಿದ್ದ..! ಬೌಂಡರಿಗಳ ಸುರಿಮಳೆಗೈದಿದ್ದ. ಒಂದು ಹಂತದಲ್ಲಿ ಕೊಂಬ-ರಾಮನಾಥನಿಗೆ ಮಾತಿನ ಚಕಮಕಿಗಳು ನಡೆದವು.
ನೋಡ ನೋಡುತ್ತಿದಂತೆಯೇ ೯ ಓವರ್ ಗಳು ಮುಗಿಯುವಷ್ಟರಲ್ಲಿ ೭೧ ರನ್ ಗಳಿಸಿಬಿಟ್ಟಿದ್ದೆವು. ಕೊನೆಯ ಓವರ್ ನಲ್ಲಿ ಬೇಕಾಗಿದ್ದು ಕೇವಲ ಹನ್ನೊಂದು ರನ್ ಮಾತ್ರ. ಕೊನೆಯ ಓವರ್ ನ ಮೊದಲ ಎಸೆತದಲ್ಲಿಯ ೪ ರನ್ ಗಳಿಸುವಲ್ಲಿ ರಾಮನಾಥ ಸಫಲವಾಗಿದ್ದ. ಆದರೆ ಮೂರನೇ ಎಸೆತದಲ್ಲಿ ಕಿಟ್ಟು ಸೃಷ್ಟಿಸಿದ ಗೊಂದಲದಿಂದಾಗಿ, ವಿಕೆಟ್ ಉಳಿಸಿಕೊಳ್ಳುವ ಕಾರಣದಿಂದ ರಾಮನಾಥ ಇನ್ನೊಂದು ತುದಿಯನ್ನು ತಲುಪುವ ಹಾಗಾಯಿತು. ಮತ್ತೊಮ್ಮೆ ನಮ್ಮ ಗುಂಪಿನಲ್ಲಿ ಸೋಲಿನ ಕಾರ್ಮೋಡದ ಛಾಯೆ ಕವಿಯಿತು. ನೀರಿಕ್ಷಿಸಿದಂತೆ ಮುಂದಿನ ಎರಡು ಬಾಲ್ ಗಳು ವ್ಯರ್ಥ. ಕೊಂಬ-ಬಾಬು ಇಬ್ಬರು ಕೇಕೆ ಹಾಕಿ ನಗಲು ಶುರುವಿಟ್ಟಿದ್ದರು.
ಈಗ ಕೊನೆಯ ಎಸೆತದಲ್ಲಿ ಬೇಕಾಗಿದ್ದು ೫ ರನ್. ಗೆಲ್ಲಬೇಕೆಂದೆರೆ ಒಂದು ಸಿಕ್ಸರ್ ಅಗತ್ಯವಾಗಿತ್ತು. ಕೊನೆಯ ಎಸೆತವನ್ನೇನೋ ಕಿಟ್ಟು ಕಣ್ಣು ಮುಚ್ಚಿಕೊಂಡಿಯೇ ಆಡಿದ್ದ, ಆದರೆ ಈ ಬಾರಿ ಬಾಲ್ ಬ್ಯಾಟಿನ ತುದಿಯನ್ನು ಚುಂಬಿಸಿ ಎತ್ತರಕ್ಕೆ ಚಿಮ್ಮಿತ್ತು. ಕೆಲವೇ ಕ್ಷಣಗಳಲ್ಲಿ ನಮ್ಮ “ಹೋ….. ಹೋ….” ಎಂಬ ಕೂಗು ಗ್ರೌಂಡನ್ನೇ ತುಂಬಿಬಿಟ್ಟಿತ್ತು.
ಈ ಗೆಲುವಿನ ಸಂಭ್ರಮ ಬಹಳ ಹೊತ್ತು ಉಳಿಯಲಿಲ್ಲ. ನಿಮಿಷಗಳ ಒಳಗಾಗಿ ರಾಮನಾಥನ ತಂದೆ ಕೈಯಲ್ಲಿ ಬಡಿಗೆಯನ್ನು ಹಿಡಿದು ನಮ್ಮತ್ತಲೇ ಧಾವಂತದಲ್ಲಿ ಬರುತ್ತಿರುವುದು ಕಾಣಿಸಿತು. ಇದನ್ನು ಕಂಡ ರಾಮನಾಥ “ಬಪ್ಪ ಕಸ ಜಲರೇ? (ಅಪ್ಪ ಏನಾಯಿತು?)” ಎಂದು ನಿಂತಲ್ಲಿಂದಲೇ ಕೊಂಕಣಿಯಲ್ಲಿ ಕೂಗಿ ಕೇಳಿದ. ಅವನ ಅಪ್ಪ ಕೊಂಕಣಿಯಲ್ಲೇ ಉತ್ತರಿಸಿದರು. ನಮಗೆಲ್ಲರಿಗೂ ಹೌಹಾರಿದಂತೆ ತೋರಿತು.
“ಏನಾಯಿತೋ ರಾಮನಾಥ?” ಎಂದು ಕೇಳಿದೆವು. ರಾಮನಾಥ ಗಡಿಬಿಡಿಯಲ್ಲೇ ಎಲ್ಲವನ್ನು ಸಂಕ್ಷಿಪ್ತವಾಗಿ ಅರುಹಿದ.
ಕಿಟ್ಟು ಹೊಡೆದ ಬಾಲ್, ಗ್ರೌಂಡಿಗೆ ತಾಗಿಕೊಂಡಿದ್ದ ರಾಮನಾಥನ ಅಡಿಗೆ ಮನೆಯ ಮೇಲಿನ ಹೆಂಚನ್ನು ಒಡೆದು, ಅಲ್ಲಿಯೇ ಕುಳಿತುಕೊಂಡಿದ್ದ ರಾಮನಾಥನ ಅಕ್ಕನ ತಲೆಯ ಮೇಲೆ ರಪ್ ಎಂದು ಬಿದ್ದಿತಂತೆ..! ರೊಚ್ಚಿಗೆದ್ದ ರಾಮನಾಥನ ತಂದೆ ಅವನ ಸೊಂಟ ಮುರಿಯುವ ಯೋಜನೆಯೊಂದಿಗೆ ಬಂದಿದ್ದರೆಂದು ಮನಗಂಡು, ಇಲ್ಲಿಯೇ ಉಳಿದರೆ ನಮಗೂ ಬಡಿಗೆಯ ರುಚಿ ತಪ್ಪಿದ್ದಲ್ಲವೆಂದು ಅರಿತು ಸುತ್ತ ಮುತ್ತಲು ಇದ್ದ ಯಾರದೋ ಮನೆಯ ತೋಟಗಳನ್ನು ಹಾರಿ ನಮ್ಮ ಮನೆಗಳತ್ತ ದೌಡಾಯಿಸಿದೆವು..! ನಾನು ನಮ್ಮ ಮನೆಯ ರಸ್ತೆ ತಲುಪುವ ಸಮಯಕ್ಕೆ ಸರಿಯಾಗಿ, ಅನತಿ ದೂರದಲ್ಲಿ ತಾನೇ ಉಗುಳಿದ ಹೊಗೆಯ ನಡುವೆ ಒಂಟಿ ಸೀಟಿನ ಎಮ್ಮೆಟಿ ಅದೃಶ್ಯವಾಯಿತು..!
–@—-@—-@–
ಹದಿನೆಂಟು ವರುಷಗಳ ನಂತರ, ಮೊನ್ನೆ ಹೀಗೆ ಮನೆಯನ್ನು ಒಪ್ಪವಾಗಿರಿಸುವ ಸಂದರ್ಭದಲ್ಲಿ, ಅಪ್ಪ ಕೊಡಿಸಿದ್ದ ಆ ಬ್ಯಾಟು ಕೈಗೆ ತಗುಲಿತು. ನಡೆದ ಘಟನೆ ಚಿಕ್ಕದಾದರೂ ಈ ಬ್ಯಾಟು ಅಂದಿಗೆ ಒಂದು ಅದ್ಭುತ ಕ್ಷಣವೊಂದನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದೇ ಹೇಳಬಹುದು. ಕೈಗೆತ್ತಿಕೊಂಡ ತಕ್ಷಣವೇ ಹಲವಾರು ನೆನಪುಗಳ ಸರಮಾಲೆ ಸ್ಮೃತಿಪಟಲದಲ್ಲಿ ಪುಸ್ತಕದ ಪುಟಗಳಂತೆ ತೆರೆದುಕೊಂಡವು.
ಅಪ್ಪನ ಕೈ ಹಿಡಿದು ತಿರುಗುತ್ತಿದ್ದ ತೇರು ಬೀದಿಗಳು, ಕೈ ಹಿಡಿದು ದಾಟುತ್ತಿದ್ದ ರಸ್ತೆಗಳು, ಅಪ್ಪನನ್ನು ತಬ್ಬಿ ಗಾಡಿಯ ಹಿಂದೆ ಕುಳಿತ ಕ್ಷಣಗಳು, ಬಾಲ್ಕನಿಯಲ್ಲಿ ಕುಳಿತು ನೋಡಿದ ಸಿನಿಮಾಗಳು, ಅಪ್ಪನ ತೊಡೆಯ ಮೇಲೆ ತಲೆಯಿಟ್ಟು ರಾತ್ರಿಯಿಂದ ಬೆಳಗಿನ ಜಾವದ ತನಕ ವೀಕ್ಷಿಸಿದ ಯಕ್ಷಗಾನ-ಪ್ರಸಂಗಗಳು, ಗಣೇಶ ಚತುರ್ಥಿಯ ಸಮಯದಲ್ಲಿ ಭೇಟಿ ನೀಡಿದ ಸಾರ್ವಜನಿಕ ಗಣೇಶೋತ್ಸವಗಳು, ಜಂಬೋ ಸರ್ಕಸ್ ನಲ್ಲಿ ಕಳೆದ ಮೋಜಿನ ಕ್ಷಣಗಳು, ಊರ ಜಾತ್ರೆಯಲ್ಲಿ ಕೊಡಿಸಿದ ಮಿಠಾಯಿಗಳು, ತಪ್ಪಿದ್ದಾಗ ಬೈದು ಹೇಳಿದ ಬುದ್ಧಿ ಮಾತುಗಳು, ಜಾತ್ರೆಯಲ್ಲಿ ಕೊಡಿಸಿದ ಆಟಿಕೆಗಳು, ಊಹಿಸದೇ ಸುರಿದ ಮಳೆಯಿಂದ ತಪ್ಪಿಸಿಕೊಳ್ಳಲು ನಿಂತ ಜಾಗಗಳು, ಗಾಡಿ ಓಡಿಸುವದನ್ನು ಕಲಿಯುತ್ತ ಬಿದ್ದಾಗ ಕೈ ಹಿಡಿದೆತ್ತಿದ ಕ್ಷಣಗಳು, ಹಾಗೆ ಸುಮ್ಮನೆ ಹೆಗಲ ಮೇಲೆ ಕೈಯಿಟ್ಟಾಗ ಮೂಡಿದ ಬೆಚ್ಚಗಿನ ಸ್ಪರ್ಶ, ತಲೆಯ ಮೇಲೆ ಕೈಯಿಟ್ಟು ಹರಸಿದ ಕ್ಷಣಗಳು..! ಹೀಗೆ ಒಂದಾದ ಮೇಲೆ ಒಂದರಂತೆ ವಿರಾಮವಿಲ್ಲದೆ ವಿಜೃಂಭಿಸಿದವು.
ಇಂತಹ ನೂರೆಂಟು ನೆನಪುಗಳ ಮೆರವಣಿಗೆ ಮುಗಿಯುವ ವೇಳೆಗೆ, ಕಣ್ಣಾಲಿಯ ಕಟ್ಟೆಯೊಡೆದು ಚಿಮ್ಮಿದ ಹನಿಗಳು ಕೈಯಲ್ಲಿ ಹಿಡಿದಿದ್ದ ಬ್ಯಾಟಿನ ಮುಖವನ್ನು ತೇವಗೊಳಿಸಿದ್ದವು.
ನೆನಪುಗಳ ಲೋಕದಿಂದ ಜಾರಿ ಹೊರ ಜಗತ್ತಿಗೆ ಹೊಂದಿಕೊಳ್ಳುತ್ತಿರುವಾಗಲೇ, ದೂರದಲ್ಲಿ “ಪೇಟರ್ರ್ರ್” ಎಂಬ ಶಬ್ದ ಬರುತ್ತಿರುವುದು ಕೇಳಿಸಿತು. ಬರಬರುತ್ತ ಜೋರಾಗಿ ಕೇಳಿಸಲು ಶುರುವಿಟ್ಟಿತು. ಕೋಣೆಯ ಕಿಟಕಿಯಿಂದ ಕಣ್ಣರಳಿಸಿ ನೋಡುತ್ತಿರುವಂತೆಯೇ ಖಾಲಿ ರಸ್ತೆಯಲ್ಲಿ ಹಾದು ಹೋಯಿತು ತುಂಬಾ ಹಳೆಯದಾದ,
ಒಂಟಿ ಸೀಟಿನ ಎಮ್ಮೆಟಿ…!
–*-*-*–
ಈ ಜಗತ್ತಿಗೆ ನಮ್ಮನ್ನು ಪರಿಚಯಿಸುವವಳು ಅಮ್ಮನಾದರೂ, ಜಗತ್ತನ್ನು ನಮಗೆ ಪರಿಚಯಿಸುವವನು ಮಾತ್ರ ಅಪ್ಪನೇ..!
ತಮ್ಮ ಸುತ್ತಲಿನ ಲೋಕದ ಭಾರವನ್ನೆಲ್ಲ ಹೊತ್ತು, ಜತನದಿಂದ ಕಾಯುತ್ತಿರುವ ಅಪ್ಪಂದಿರಿಗೆ ಈ ಲೇಖನ ಅರ್ಪಣೆ..!
——-@@@@@@——-
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ