- ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! - ನವೆಂಬರ್ 22, 2023
- ಕನ್ನಡ ನಾಟ್ಯ ರಂಗ - ನವೆಂಬರ್ 21, 2023
- ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು - ನವೆಂಬರ್ 1, 2023
” ಇಲ್ಲಿಂದ ಮುಂದೆ ನಿನಗೆ ಸಿಗುವ ಬಹುತೇಕ ಜನರು ಭಾರತವನ್ನು ದ್ವೇಷಿಸುವಂತವರು.. ಹಾಗಾಗಿ ಅಲ್ಲೆಲ್ಲೂ ಒಬ್ಬ ಮುಸ್ಲಿಂ ಮನೆಯಲ್ಲಿ ವಾಸ್ತವ ಹೂಡುವ ಬಗ್ಗೆ ಎಚ್ಚರದಿಂದಿರು..”
ನನ್ನನ್ನೇ ದಿಟ್ಟಿಸಿ ನೊಡುತ್ತ ಕಾಶ್ಮೀರದಿಂದ ನೂರಾ ನಲ್ವತ್ತು ಕಿಲೊಮಿಟರ್ ಈಚೆಯ ಒಂದು ಹಳ್ಳಿಯಲ್ಲಿ ಕೊರೆವ ಚಳಿಯ ರಾತ್ರಿ ಹಳ್ಳಿಯ ಪಂಚಾಯತಿ ಕಟ್ಟೆಯ ಮೇಲೆ ಒಂಟಿಯಾಗಿ ಮಲಗಿದ್ದ ನನ್ನನ್ನು ಜಾಕಿರ್ ಅನ್ನುವ ಒಬ್ಬ ಮುಸ್ಲಿಂ ಮೇಷ್ಟ್ರು ಕಳಕಳಿಯಿಂದ ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿದ್ದರು… ಕಾರ್ಗಿಲ್ ಇನ್ನೂ ದೂರವಿತ್ತು..ಕನ್ಯಾಕುಮಾರಿ ಯಿಂದ ಕಾಶ್ಮೀರದ ನಾಲ್ಕೂವರೆ ಸಾವಿರ ಕಿಲೋಮೀಟರ್ ಸೈಕಲ್ ತುಳಿದೇ ಬಂದಿದ್ದೆ.. ಕಾಶ್ಮೀರದ ಕೆಲವು ನೂರು ಕಿಲೊಮಿಟರ್ ನನ್ನ ಪಾಲಿಗೆ ಒಂದು ಸವಾಲಾಗಿತ್ತು. ಒಂದು ಸೈಕಲ್, ಮುಂದೆ ವಿವೇಕಾನಂದರ ಭಾವಚಿತ್ರ,ತಿರಂಗಾ ಹಾಗೂ ಹಿಂದೆ ನನ್ನ ಸವಾರಿಯ ಉದ್ದೇಶ ಕನ್ನಡದಲ್ಲಿ ಬರೆದುಕೊಂಡಿದ್ದೆ. ಅಂದಿಗೆ ಭಾರತ ಪಾಕ್ ಅರವತ್ತೈದರ ಯುದ್ಧಕ್ಕೆ ಐವತ್ತು ತುಂಬಿದ ಹಿನ್ನೆಲೆಯಲ್ಲಿ ಕಾರ್ಗಿಲ್ ಅನ್ನು ಅಲ್ಲಿನ ಸೈನಿಕರನ್ನು ಕಣ್ಣಾರೆ ನೋಡುವ ಅವರ ಮೇಲಿನ ಗೌರವ , ಕೃತಜ್ಞತಾ ಭಾವ ನನ್ನನ್ನು ಈ ಸಾಹಸಕ್ಕೆ ಕೈ ಹಾಕಿಸಿತ್ತು.
ಆ ರಾತ್ರಿ ಊಟ ಮುಗಿಸಿದ ನಾನು ಜಾಕಿರ್ ಸರ್ ಜತೆ ತುಸು ಹೊತ್ತು ಮಾತನಾಡಿದೆ.. ಆಗಷ್ಟೇ ಶಾರುಕ್ ದೇಶದ ಅಸಹಿಷ್ಣುತೆ ಬಗ್ಗೆ ಹೇಳಿಕೆ ಕೊಟ್ಟಿದ್ದ. ಸರ್ ಇದನ್ನೆಲ್ಲ ನೀವೂ ನಂಬುತ್ತೀರಾ ? ದಪ್ಪ ಬೆಡ್ ನಂತಹುದೇ ಚಾದರವನ್ನು ಹೊದಿಕೆಗೆ ಕೊಡುತ್ತಾ ಒಮ್ಮೆ ನಕ್ಕರು ಜಾಕಿರ್ ಸರ್.
‘ಆಗೇ ಕಾಶ್ಮೀರ್ ಕೆ ಲೋಗ್ ಮಿಲೇಂಗೆ ವೋ ಬಹುತ್ ಅಚ್ಚೆ ನಹಿ ಹೋತೆ ಹೈ.. ಹಿಂದೂಸ್ತಾನ್ ಸೆ ನಫರತ್ ಕರನೆ ವಾಲೆ ಲೋಗ್ ಹೈ, ತಿರಂಗಾ ಕೆ ಸಾತ್ ಅಕೇಲೇ ಹೊ.. ರುಕೊಗೆ ತೋ ಆರ್ಮೀ ಕ್ಯಾಂಪ್ ಮೇ ಹಿ ರುಕನಾ.. ‘
ಅವರ ಮಾತಿನಲ್ಲಿ ನನ್ನ ಬಗ್ಗೆ ಅತೀವ ಕಳಕಳಿಯಿತ್ತು. ಅವರು ಕೊಟ್ಟ ದಪ್ಪನೆಯ ರಜಾಯಿಯಲ್ಲಿ ಬೆಚ್ಚನೆ ಮಲಗಿದ್ದೆ. ಬೆಳಗೆದ್ದು ನೋಡಿದರೆ ಜಾಕಿರ್ ಸರ್ ನೆಲದ ಮೇಲೆ ಹೊದಿಕೆ ಇಲ್ಲದೆ ಕೊರೆವ ಚಳಿಯಲ್ಲಿ ಹಾಗೆಯೇ ಮಲಗಿದ್ದರು.
ಮುಂದೆ ಶ್ರೀನಗರದ ಬೀದಿಗಳಲ್ಲಿ ಅನೇಕರು ಈ ಸೈಕಲ್ ಸವಾರನನ್ನು ನೋಡಿ ಆಶ್ಚರ್ಯಗೊoಡು ಮೊಬೈಲಿನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಲಾಲ್ ಚೌಕ್ ನಲ್ಲಿ ಕೆಲವರು ಸ್ವಾಗತಾರ್ಹ ನೋಟ ಬೀರುವದನ್ನೂ ಕಂಡೆ.. ವಿವೇಕಾನಂದ ಹಾಗೂ ಧ್ವಜದ ಜತೆ ಒಂಟಿ ಸವಾರ ಅನೇಕರಿಗೆ ಜೀವ ಕೈಲಿ ಹಿಡಿದು ಹೋಗುತ್ತಿರುವ ಪಾಪದವನಂತೆ ಕಂಡಿರಬೇಕು.. ಕಾರ್ಗಿಲ್ ನತ್ತ .ನಡೆದಂತೆಲ್ಲ ಹಿಮದ ಜೋರು ಶುರುವಾಯ್ತು. ಸುರಂಗ ರಸ್ತೆಗಳಲ್ಲೆಲ್ಲ ಹಿಮ, ಕುತ್ತಿಗೆ ಹಿಚುಕುವಂತಹ ಚಳಿ. ಒಮ್ಮೆ ನನ್ನ ದೇಶ ಕಾಯುವ ಸೈನಿಕರ ನೆನಪಾಯ್ತು.. ಅವರದೇನೂ ಕಟ್ಟಿಗೆ ಚರ್ಮ ಅಲ್ಲ ತಾನೇ?
ಕಾಶ್ಮೀರ ಸ್ವರ್ಗ ಸದೃಶ ನಿಸರ್ಗ ಸುಂದರಿ. ಪ್ರವಾಸಿ ಕ್ಷೇತ್ರದಲ್ಲಿ ಕ್ರಾಂತಿಯೆನ್ನಿಸುವ ಕ್ಷೇತ್ರ ಇದಾಗಬಹುದಿತ್ತು. ಬಿಳಿಯ ನೆಲದ ಮೇಲೆ ಅಲ್ಲಲ್ಲಿ ಕೆಂಪು ರಕ್ತದೋಕುಳಿ ನಿಲ್ಲವವರೆಗೆ ಅದು ಸಾಧ್ಯವಿಲ್ಲ ಎಂಬ ನೋವು ಕಾಡಿತು. ಹೆಚ್ಚು ಕಮ್ಮಿ ಐದು ಸಾವಿರ ಕಿಲೊಮಿಟರ್ ಬರಿಯ ಸೈಕಲ್ ತುಳಿದೆ ಬಂದಿದ್ದರಿಂದ ಕಾಲುಗಳು ಕಬ್ಬಿಣವೇನೋ ಎಂದು ಅನ್ನಿಸಿತೊಡಗಿತು..
ಆದರೆ ಮುಂದೆ ಹೋದಂತೆಲ್ಲ ಭಯಂಕರ ಹಿಮದ ಆರ್ಭಟ ಸಿ.ಆರ್.ಪಿ.ಎಫ್ ಜವಾನರು ಮುಂದಿನ ದಾರಿ ಖಡಾಖಂಡಿತ ಕಷ್ಟ ಸಾಧ್ಯ ಎನ್ನುವ ತೀರ್ಮಾನಕ್ಕೆ ಬoದು ಬಿಟ್ಟಿದ್ದರು. ಕೊನೆಗೂ ಕಾರ್ಗಿಲ ನ ತಲುಪಲಾಗಲಿಲ್ಲ, ರೈಲು ಹತ್ತಿ ದಿಲ್ಲಿಗೆ ಹಿಂತಿರುಗಬೇಕಾಯ್ತು . ಈಗಲೂ ಅಲ್ಲಿನ ಪ್ರತಿಕೂಲ ಪರಿಸ್ಥಿತಿ ಇದಕ್ಕೂ ಹಲವು ಪಟ್ಟು ಹೆಚ್ಚು ಕಷ್ಟದ ಸಿಯಾಚಿನ್..! ಈಚೆಗೆ ಸೈನಿಕ ಹನುಮಂತಪ್ಪ ಸಿಯಾಚಿನ್ ನಲ್ಲಿ ಪ್ರಾಣ ತ್ಯಾಗ ಮಾಡಿದ ಸುದ್ದಿ ಕೇಳಿ ಮೈ ಮನ ಕಂಪಿಸಿತು. ಕನ್ಯಾಕುಮರಿಯಿoದ ಕಾಶ್ಮೀರದ ವರೆಗೂ ದಾರಿಯುದ್ದಕ್ಕೂ ಎಲ್ಲ ತರದ ಜನರೂ ಸಂಧಿಸುತ್ತಿದ್ದರು. ಬಡವ ಶ್ರೀಮಂತ ಹಿಂದೂ ಮುಸಲ್ಮಾನ ಎಲ್ಲ ತರದ ಪ್ರೀತಿ ಸ್ಫುರಿಸುವ ಜನರೇ ಅನೇಕ.
ಭಾರತ ದರ್ಶನದಿಂದ ನಿಜಕ್ಕೂ ಈ ದೇಶ ಎಂತಹ ವಿಸ್ಮಯಕಾರಿ ದೇಶ ಅಂತ ಅನ್ನಿಸಿತು. ತಮ್ಮ ರಜಾಯಿ ಕೊಟ್ಟು ತಾವು ನೆಲದ ಮೇಲೆ ಕೊರೆವ ಚಳಿಯಲ್ಲಿ ಮಲಗಿದ ಜಾಕಿರ್ ಅಂತವರ ಹೃದಯ ದಲ್ಲಿರುವ ಭಾರತ.. ದೂರದೂರಿನಲ್ಲಿ ಯಾವೊದೋ ಸೈಕಲಿನಲ್ಲಿ ಯಾರೂ ಕೇಳದ ಹಳ್ಳಿಯ ಯುವಕ ಸಿಲುಕಿಸಿದ ತಿರಂಗಾ ಕಂಡಾಗ ಹೊಳೆವ ಕಣ್ಣುಗಳಲ್ಲಿಯ ಭಾರತ.. ಬೆಚ್ಚನೆ ದೇಶದಲ್ಲಿ ಕುಳಿತು ದೇಶದ ಬಗ್ಗೆ ಕೆಸರೆರುಚುವ ಮಂದಿಯಸುದ್ದಿ ಕೇಳಿ ಕೂಡ ಎದೆ ಗುಂದದೆ ಹಿಮದಲ್ಲಿ ನಡುಗುತ್ತಾ ಕುಳಿತ ಸೈನಿಕನ ರೋಮಗಳಲ್ಲಿನ ಭಾರತ.. ಮಣ್ಣು ಗಾಳಿಗಳಲ್ಲಿ ಬೆರೆತ ಪ್ರೀತಿಯ ಭಾರತ ಕಾಲ ವಿರುವವರೆಗೂ ಅವ್ಯಾಹತ, ನಿರಂತರ, ನಿತ್ಯ ನೂತನ..
ಹೆಚ್ಚಿನ ಬರಹಗಳಿಗಾಗಿ
ಡಾಗ್ನಿ ಕಾರ್ಲ್ಸನ್ ಎಂಬ ಸೂಪರ್ ಸ್ಫೂರ್ತಿ
ಮುಂಬಯಿ ಆಕಾಶವಾಣಿಯಲ್ಲಿ ನನ್ನ ಪಯಣ..
ರಾಣಿ…