ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಬದುಕಿನ ಎಲ್ಲ ರೀತಿಯ ಜಂಜಾಟಗಳಿಂದ ತಪ್ಪಿಸಿಕೊಂಡು ದೂರ ಓಡಿಹೋಗಲು ಬಯಸಿದ್ದೆ. ಆ ಕರೆಂಟ್ ಇಲ್ಲದ ರಾತ್ರಿಗಳಿಂದ, ಕಿವಿಗಳಲ್ಲಿ ಅಸಹನೀಯವಾಗಿ ಗುಂಯ್ ಗುಡುವ ಸೊಳ್ಳೆಗಳಿಂದ, ಎರಡೊಪ್ಪತ್ತಿನ ಅವೇ ಊಟದ ತಟ್ಟೆಗಳಿಂದ, ಜೋರು ಮಳೆಗೆ ಮನೆಯೊಳಕ್ಕೇ ನುಗ್ಗುವ ಪ್ರವಾಹ, ಹಸಿಯ ನೆಲ,ಮಾಡುಗಳಿಂದ …ಹೀಗೆ ಎಲ್ಲದರಿಂದ ..ಎಲ್ಲಾದರೂ ದೂರ..!

ಪಾಪ ಅಪ್ಪ, ಅಮ್ಮ..! ಅವರಿಂದ ಅದೆಷ್ಟು ಕಠಿಣ ಬದುಕಿನ ಜತೆ ಹೆಣಗಲಾದೀತು..? ಅಪ್ಪ ಒಬ್ಬ ರಿಕ್ಷಾ ಎಳೆಯುವವ ..ಅಮ್ಮ ಅಲ್ಲಲ್ಲಿ ಮನೆಗೆಲಸ ಮಾಡುತ್ತಿದ್ದಳು.

ಅಂದ ಹಾಗೆ, ನನ್ನ ಮನೆಯ ಬಳಿಯೇ ಒಂದು ಹಾಕಿ ಆಟದ ತರಬೇತಿ ಶಿಬಿರ(ಅಕಾಡೆಮಿ)ವೊಂದಿತ್ತು. ಅಲ್ಲಿಗೆ ತರಬೇತಿಗೆ ಬಂದ ಆಟಗಾರರು ಆಡುವುದನ್ನು ನಾನು ತದೇಕ ಚಿತ್ತಳಾಗಿ ಗಂಟೆ ಗಟ್ಟಲೆ ನೋಡುತ್ತ ನಿಲ್ಲುತ್ತಿದ್ದೆ.
ಕೆಲವೇ ದಿನಗಳಲ್ಲಿ ಹಾಕಿ ನನ್ನ ಮೈ ಮನಸ್ಸನ್ನು ಪೂರ್ತಿಯಾಗಿ ಆವರಿಸಿ ಬಿಟ್ಟಿತ್ತು.
ನನಗೆ ಬ್ಯಾಟ್ ಹಿಡಿದು ಅವರ ಹಾಗೆ ಆಡುವ, ಕಲಿಯುವ ಅದಮ್ಯ ಆಸೆ. ಆದರೆ, ಪಾಪ ಅಪ್ಪ ತಿಣುಕಾಡಿ ದುಡಿಯುವ ಎಂಬತ್ತು ರೂಪಾಯಿಯಲ್ಲಿ ಅಕಾಡೆಮಿ ಸೇರುವದಂತೂ ಕನಸಿನ ಮಾತೇ ಸರಿ.
ಅಲ್ಲಿನ ಕೋಚ್ ಗೆ ನನ್ನ ಮನದಿಂಗಿತದ ಬಗ್ಗೆ ಹೇಳಿ ತರಬೇತಿ ಕೊಡಿಸುವಂತೆ ಅವಕಾಶ ಸಿಕ್ಕಾಗಲೆಲ್ಲ ಬೇಡಿಕೊಳ್ಳುತ್ತಿದ್ದೆ. ಆತ ಪ್ರತಿ ಬಾರಿಯೂ ಒಪ್ಪುತ್ತಿರಲಿಲ್ಲ .
ನಿನ್ನದು ಬಡಕಲು ಜೀವ.. ಒಂದು ಚಿಕ್ಕ ಪ್ರಾಕ್ಟೀಸ್ ಮ್ಯಾಚ್ ಕೂಡ ಮುಗಿಸಲು ನಿನ್ನಿಂದ ಸಾಧ್ಯ ಆಗದು ಬಿಡು ಅಂದು ಬಿಟ್ಟ.
ಒಂದು ದಿನ ಮೈದಾನದ ಮೂಲೆಯಲ್ಲಿ ಒಂದು ಮುರುಕಲು ಹಾಕಿ ಬ್ಯಾಟ್ ಸಿಕ್ಕಿತು. ಅದನ್ನೇ ಹಿಡಿದು ನನ್ನ ಪ್ರಾಕ್ಟೀಸ್ ಆರಂಭಿಸಿದೆ. ನನ್ನ ಬಳಿ ಆಟಕ್ಕೆ ಬೇಕಾದ ಉಡುಗೆ ಇರಲಿಲ್ಲ. ಗಾಳಿಗೆ ಹಿಂದಕೆ ಹಾರುವ ಸಲ್ವಾರ್ ಕಮೀಜ್ ಮತ್ತು ಮುಂದಕೆ ತಳ್ಳುವ ಎಚ್ಚರದ ಕನಸು… ಇವಿಷ್ಟೇ ನನ್ನೊಂದಿಗೆ..
ಒಬ್ಬಳೇ ನನ್ನ ಪ್ರಾಕ್ಟೀಸ್ ಮುಂದುವರೆಸಿದೆ. ಹಾಕಿಯ ಬಗ್ಗೆ ನನ್ನ ಪ್ರೀತಿ, ಆಸಕ್ತಿ ದೃಢ ವಿಶ್ವಾಸಗಳಿಗೆ ಕಿಂಚಿತ್ತೂ ಧಕ್ಕೆ ಬಂದಿರಲಿಲ್ಲ.

ಮತ್ತೆ ಕೋಚ್ ಬಳಿ ಅಂಗಲಾಚಿ ಬೇಡತೊಡಗಿದೆ.ಕೊನೆಗೂ ನನಗೆ ಕೋಚಿಂಗ್ ಕೊಡಿಸಲು ಒಪ್ಪಿಕೊಂಡ.
ಈ ವಿಷಯ ಕೂಡಲೇ ನಾನು ಮನೆಗೆ ಬಂದು ತಿಳಿಸಿದೆ ..” ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಮಾಡಿದರೇ ಚೆಂದ .. ನಿನ್ನನ್ನು ಸ್ಕರ್ಟ್ ತೊಟ್ಟು ಆಡಲು ಬಿಡುವುದಿಲ್ಲ. ..” ಅಂದರು ಅಪ್ಪ,ಅಮ್ಮ.
ಒಮ್ಮೆ ನನ್ನನ್ನು ಹೋಗ ಬಿಡಿ.. ನಾನೇನಾದರೂ ವಿಫಲಳಾದರೆ ನೀವು ಹೇಳಿದ ಹಾಗೆ ಕೇಳ್ತೀನಿ.
ಆರ್ದ್ರ ಕಣ್ಣುಗಳಿಂದ ನಾನು ಮತ್ತೆ ಅವಲತ್ತು ಕೊಂಡೆ. ಮನಸಿಲ್ಲದ ಮನಸಿನಿಂದ ಮನೆಯವರು ಒಪ್ಪಿಕೊಂಡರು.
ತರಬೇತಿ ಬೆಳ್ಳಂಬೆಳಗ್ಗೆ ಶುರು ಆಗುತ್ತಿತ್ತು. ನಮ್ಮ ಮನೆಯಲ್ಲಿ ಒಂದು ಗಡಿಯಾರಕ್ಕೂ ಗತಿಯಿರಲಿಲ್ಲ. ಹಾಗಾಗಿ ಅಮ್ಮ ಮೊದಲೇ ಎಚ್ಚರಗೊಂಡು ಮುಂಜಾವದ ಆಕಾಶ ನೋಡಿ ವೇಳೆ ತಿಳಿದು ನನ್ನನ್ನು ಎಬ್ಬಿಸುತ್ತಿದ್ದಳು.
ತರಬೇತಿ ವೇಳೆಯಲ್ಲಿ ಎಲ್ಲಾ ಆಟಗಾರರೂ ಮನೆಯಿಂದ ಅರ್ಧ ಲೀಟರ್ ಹಾಲು ತರುವುದು ಕಡ್ಡಾಯವಾಗಿತ್ತು. ಹಾಗೆ ಹೀಗೆ ನಮಗೆ ಇನ್ನೂರು ಮಿಲಿ ಲೀಟರ್ ಹಾಲಷ್ಟೇ ಸಾಧ್ಯವಾಗಿದ್ದು. ಯಾರಿಗೂ ತಿಳಿಯದಂತೆ ಅದಕ್ಕೆ ಮತ್ತೆ ಮುನ್ನೂರು ಮಿಲಿ ಲೀಟರ್ ನೀರು ಬೆರೆಸಿ ಅದನ್ನೇ ಕುಡಿಯುತ್ತಿದ್ದೆ. ಆಟದ ಬಗ್ಗೆ ನನ್ನಲ್ಲಿದ್ದ ಉತ್ಕಟ ಧ್ಯಾನದ ಮುಂದೆ ಇವೆಲ್ಲ ನನಗೆ ನಗಣ್ಯ ವಾಗಿತ್ತು.

ನಂತರದ ದಿನಗಳಲ್ಲಿ ನನ್ನ ಕೋಚ್ ಕೂಡ ನನಗೆ ಪ್ರೋತ್ಸಾಹ ನೀಡಿದರು. ಆಡಲು ಬೇಕಾದ ಹಾಕಿ ಕಿಟ್ಸ್ ಮತ್ತು ಬೂಟುಗಳನ್ನು ಕೊಡಿಸಿದ್ದರು. ತರಬೇತಿಯ ಕಾಲದಲ್ಲಿ ಪೌಷ್ಟಿಕ ಆಹಾರದ ದೃಷ್ಟಿಯಿಂದ ಕೂಡ ಕೋಚ್ ರ ಕುಟುಂಬದ ಸಹಕಾರ ದೊರೆಯಿತು.
ಆಟದ ವಿಷಯದಲ್ಲಿ ನಾನು ತುಂಬಾ ಕಠಿಣ ಪರಿಶ್ರಮ ಪಡುತ್ತಿದ್ದೆ. ಒಂದು ದಿನ ಕೂಡ ತರಬೇತಿಯನ್ನು ಮಿಸ್ ಮಾಡುತ್ತಿರಲಿಲ್ಲ. ಒಂದು ಟೂರ್ನಮೆಂಟ್ ಗೆದ್ದಾಗ ನನಗೆ ಮೊದಲ ಬಾರಿ ದೊರೆತ ೫೦೦ ರೂಪಾಯಿ ಇವತ್ತಿಗೂ ನೆನಪಿದೆ. ಅದನ್ನು ಪೂರ್ತಿ ನನ್ನ ಅಪ್ಪನಿಗೆ ಕೊಟ್ಟು ಬಿಟ್ಟೆ. ಅಷ್ಟು ಹಣ ಮೊದಲ ಬಾರಿ ಅಪ್ಪ ತನ್ನ ಕೈಯಲ್ಲಿ ಹಿಡಿದು ಅಚ್ಚರಿಯಲ್ಲಿ ಮೂಕನಾದದ್ದು ಇಂದಿಗೂ ನೆನಪಿದೆ. ಒಂದು ದಿನ ನಮಗೊಂದು ಪಕ್ಕಾ ಮನೆ ಆಗಲಿದೆ ಎಂದು ಉತ್ಸಾಹದಲ್ಲಿ ಹೇಳಿದ್ದೆ.
ಆ ನಿಟ್ಟಿನಲ್ಲಿ ನಾನು ನನ್ನ ಶಕ್ತಿ ಮೀರಿ ಪ್ರಯತ್ಸಿದೆ.
ನನ್ನ ರಾಜ್ಯವನ್ನು ಪ್ರತಿನಿಧಿಸಿ ಅನೇಕ ಪಂದ್ಯಗಳನ್ನು ಆಡಿದ ಬಳಿಕ ನನಗೆ ರಾಷ್ಟ್ರೀಯ ತಂಡ ಸೇರಲು ಆಹ್ವಾನ ಬಂದಾಗ ನನಗೆ ಕೇವಲ ಹದಿನೈದು ವರ್ಷ.. ಆಗ ಕೂಡ ನನ್ನ ಸಂಬಂಧಿಕರು ಕೇಳುತ್ತಿದ್ದು ಒಂದೇ.. ಏನೇ ನಿನ್ನ ಮದ್ವೆ ಯಾವಾಗ? ಅಪ್ಪ ಮಾತ್ರ, ಮಗಾ ನೀನು ನಿನ್ನ ಹೃದಯ ತಣಿಯುವವರೆಗೂ ಆಡುತ್ತಿರು ಅನ್ನುತ್ತಿದ್ದರು.

ನನ್ನ ಕುಟುಂಬದ ಆಪ್ತ ಬೆಂಬಲದೊಂದಿಗೆ ನಾನು ನನ್ನೆಲ್ಲಾ ಏಕಾಗ್ರತೆ, ಶಕ್ತಿಯೊಂದಿಗೆ ಆಟ ಆಡುತ್ತಾ ಹೋದೆ. ಅನೇಕ ಚಾಂಪಿಯನ್ ಶಿಪ್ ಗಳನ್ನ ಗೆದ್ದೆವು. ಕ್ರಮೇಣ ಭಾರತದ ಹಾಕಿ ತಂಡದ ನಾಯಕತ್ವ ವಹಿಸಿಕೊಳ್ಳುವವರೆಗೆ ನನ್ನ ಪಯಣ ಮುಂದುವರೆಯಿತು.

ಒಮ್ಮೆ ನಾನು ಮನೆಯಲ್ಲಿದ್ದಾಗ, ನನ್ನ ಅಪ್ಪನ ಸ್ನೇಹಿತರೊಬ್ಬರು ತಮ್ಮ ಮೊಮ್ಮಗಳೊಂದಿಗೆ ಮನೆಗೆ ಬಂದಿದ್ದರು.ನನ್ನ ಮೊಮ್ಮಗಳು ನಿಮ್ಮಿಂದ ಪ್ರಭಾವಿತರಾಗಿದ್ದಾಳೆ. ಆಕೆಗೆ ತಾನೂ ಒಬ್ಬ ಹಾಕಿ ಆಟಗಾರಳಾಗುವ ಕನಸು ಎಂದರು. ನಾನು ಅತೀವ ಸಂಭ್ರಮ ಪಟ್ಟೆ. ನನ್ನ ಕಣ್ಣಲ್ಲಿ ಆಗ ಧಾರಾಕಾರ ನೀರು.. ಏನೋ ನೆನೆಸಿಕೊಂಡು ಅತ್ತಿದ್ದೆ..

ಇಸವಿ 2017.ಕೊನೆಗೂ ಮನೆಯವರಿಗೆ ನನ್ನ ಭರವಸೆಯಂತೆ ಹೊಸ ಮನೆಯನ್ನು ಕೊಂಡು ಕೊಂಡೆ. ಆ ದಿನ ನಾವೆಲ್ಲ ಒಬ್ಬರಿಗೊಬ್ಬರು ತಬ್ಬಿಕೊಂಡು ಅತ್ತೇವು. ನನ್ನನ್ನು ಹಾಕಿ ಕನಸಿನ ದಾರಿಯಲ್ಲಿ ಜತೆಯಾದವರಿಗೆ ಏನನ್ನು ಕೊಡಬಲ್ಲೆ…. ಈ ವರ್ಷ ನನ್ನ ಮನೆಯವರು ಮತ್ತು ನನ್ನ ಕೋಚ್ ಎಲ್ಲರಿಗೂ ಕೃತಜ್ಞತೆ ತೀರಿಸುವುದು ಇನ್ನೂ ಬಾಕಿ ಇದೆ. ಟೋಕಿಯೋ ಒಲಿಂಪಿಕ್ಸ್ ನಿಂದ ಮೆಡಲ್ ಬೇಕು..!

ಈ ಹುಡುಗಿ ಬೇರಾರೂ ಅಲ್ಲ, ರಾಣಿ ರಾಮ್ ಪಾಲ್ … ಅತೀ ಚಿಕ್ಕ ವಯಸ್ಸಲ್ಲೇ ರಾಷ್ಟ್ರೀಯ ಹಾಕಿ ತಂಡಕ್ಕೆ ಸೇರ್ಪಡೆಯಾಗಿ ದಾಖಲೆ ನಿರ್ಮಿಸಿದ ರಾಣಿ ರಾಮ್ ಪಾಲ್. ಈಗ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸುತ್ತಿರುವ ಹೆಮ್ಮೆಯ, ಹರ್ಯಾಣದ ಹುಡುಗಿ ರಾಣಿ ರಾಮ್ ಪಾಲ್ ಗೆ ದೇಶದ ಉನ್ನತ ಪದ್ಮಶ್ರೀ , ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕಾರ ದೊರೆತಿದೆ..ಆಗಲೇ ಈಕೆ ಬರೋಬ್ಬರಿ ಆರು ಮಿಲಿಯನ್ ಡಾಲರ್ ಗೂ ಹೆಚ್ಚಿನ ಬೆಲೆ ಬಾಳುವ ಆಟಗಾರ್ತಿ.. ದೇಶದ ಅಸಂಖ್ಯಾತ ಹುಡುಗಿಯರಿಗೆ ಎವರ್ ಗ್ರೀನ್ ಸ್ಪೂರ್ತಿ.

ಟಿಪ್ಪಣಿ: ಇಂದು ನಡೆದ ಇಂಗ್ಲೆಂಡ್ ನ ವಿರುದ್ಧದ ಪಂದ್ಯದಲ್ಲಿ ೪-೩ ರಲ್ಲಿ ವೀರೋಚಿತ ವಾಗಿ ಪರಾಭವ ಗೊಂಡರೂ, ಭಾರತ ಮಹಿಳಾ ಹಾಕಿ ಯ ಈ ಬಾರಿಯ ಪ್ರದರ್ಶನ ಜನಮನ ಗೆದ್ದಿದೆ. ಭಾರತದಂಥ ದೇಶದಲ್ಲಿ ಎಲ್ಲಾ ಅಡೆ ತಡೆ ಗಳ ಮಧ್ಯೆ ರಾಣಿ ರಾಮ್ ಪಾಲ್ ನೇತೃತ್ವದ ತಂಡ ಮಾಡಿರುವ ಸಾಧನೆ ಮುಂದಿನ ದಿನಗಳಲ್ಲಿ ಅತೀ ದೊಡ್ಡ ಸಫಲತೆಗೆ ಕಾರಣವಾಗಲಿದೆ. ಮತ್ತೆ ಕನಸುಗಳನ್ನು ಬೆಂಬತ್ತುವುದು ಎಲ್ಲಕ್ಕಿಂತ ದೊಡ್ಡ ಯಶಸ್ಸು.. success is not a destination but the journey itself..!