ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂಬಯಿ ಆಕಾಶವಾಣಿಯಲ್ಲಿ ನನ್ನ ಪಯಣ..

ಸುಶೀಲಾ ದೇವಾಡಿಗ
ಇತ್ತೀಚಿನ ಬರಹಗಳು: ಸುಶೀಲಾ ದೇವಾಡಿಗ (ಎಲ್ಲವನ್ನು ಓದಿ)

‘ಆಕಾಶವಾಣಿ’ ಎಂದಾಕ್ಷಣ ನೆನಪಾಗುವುದು ರೇಡಿಯೋದಲ್ಲಿಯ ಕಾರ್ಯಕ್ರಮಗಳು. ಬುದ್ಧಿ ತಿಳಿದಾಗಿನಿಂದ ಸಾಧಾರಣ 70ರ ದಶಕದಿಂದ ರೇಡಿಯೋ ಕಾರ್ಯಕ್ರಮಗಳನ್ನು ಕೇಳಿ ಖುಷಿ ಪಡುತ್ತಿದ್ದ ನಾನು ಎಂಟು – ಒಂಭತ್ತನೇ ತರಗತಿಗಳಲ್ಲಿರುವಾಗ ಬೈಂದೂರಿನ ರತ್ತುಬಾಯ್ ಗಲ್ರ್ಸ್ ಹೈಸ್ಕೂಲಿನಿಂದ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳಾದ ಬಾಲವೃಂದ–ಸಂಸ್ಕೃತ ರಸಮಂಜರಿ ಕಾರ್ಯಕ್ರಮಗಳಲ್ಲಿ ಹಾಡಿ ಸಂತೋಷಪಟ್ಟಿದ್ದೆ. ಆಗೆಲ್ಲಾ ಕೂಡು ಕುಟುಂಬದವರೆಲ್ಲಾ ಒಟ್ಟಾಗಿರುತ್ತಿದ್ದು ಮನೆಯಲ್ಲಿ ಬೇಕಾದಷ್ಟು ಕೆಲಸಗಳಿರುತ್ತಿದ್ದ ಕಾಲ. ಆದರೆ ರೇಡಿಯೋದಲ್ಲಿ ಬರುತ್ತಿದ್ದ ಕೆಲವೊಂದು ಕಾರ್ಯಕ್ರಮಗಳನ್ನು ಕೇಳಲು ಎಲ್ಲಾ ಕೆಲಸಗಳನ್ನು ಬೇಗ ಬೇಗ ಮುಗಿಸಿ ತಯಾರಾಗಿರುತ್ತಿದ್ದೆವು. ಕಣ್ಣಿಗೇನು ಕಾಣಿಸದಿದ್ದರೂ ರೇಡಿಯೋದಲ್ಲಿ ಬರುತ್ತಿದ್ದ ಆ ಧ್ವನಿಗಳನ್ನು ಕೇಳುತ್ತಿದ್ದಾಗ ಅನಿರ್ವಚನೀಯ ಆನಂದವಾಗುತ್ತಿತ್ತು. ಜೊತೆಗೆ 70-80 ರ ದಶಕದ ಚಿತ್ರಗೀತೆಗಳು, ಭಕ್ತಿಗೀತೆಗಳು. ಅಂದು ರೇಡಿಯೋದಲ್ಲಿ ಕೇಳುತ್ತಿದ್ದ ಹಾಡುಗಳು ಇಂದಿಗೂ ಅವುಗಳ ಸಂಗೀತ, ಸಾಹಿತ್ಯ ಮರೆತು ಹೋಗಿಲ್ಲ. ವಿದ್ಯೆ ಕಲಿಯದಿದ್ದರೂ ಹಾಡುಗಾರರಾಗಬಹುದಿತ್ತು. ಇತ್ತೀಚೆಗೆ ಟಿ. ವಿ. ಕಂಪ್ಯೂಟರ್, ಮೊಬೈಲ್ ಗಳಿಂದಾಗಿ ಆಕಾಶವಾಣಿಯಿಂದ ಪ್ರಸಾರವಾಗುವ ರೇಡಿಯೋ ಕಾರ್ಯಕ್ರಮಗಳನ್ನು ಕೇಳುಗರು ಇಲ್ಲ….. ಎನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿದ್ದಾರೆ.

ಆದರೆ ಗ್ರಾಮೀಣ ಪ್ರದೇಶಗಳಲ್ಲಿ, ಹಳ್ಳಿಗಳಲ್ಲಿ ವಿದ್ಯುತ್ ಕೊರತೆಯಿಂದಾಗಿ ಇಂದಿಗೂ ಕೆಲವರಿಗೆ ರೇಡಿಯೋ ಕೇಳುವ ಹವ್ಯಾಸ ತಪ್ಪಿಲ್ಲ. ಆಕಾಶವಾಣಿಯಿಂದ ಪ್ರಸಾರವಾಗುವ ಅನೇಕ ಕಾರ್ಯಕ್ರಮಗಳು ಅಂದರೆ ಸಂಗೀತ, ಸಾಹಿತ್ಯ, ಸಂದರ್ಶನಗಳು, ಕೃಷಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಇವತ್ತಿಗೂ ಕೇಳಿ ಸಂತೋಷ ಪಡುವವರಿದ್ದಾರೆ. ಪ್ರಾದೇಶಿಕತೆಗಳಿಗನುಸಾರವಾಗಿ ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ದೇಶದ ಯಾವ ಮೂಲೆಯಲ್ಲಿಯೂ ಕೇಳಬಹುದು.
ಮುಂಬಯಿ ಮಹಾನಗರದಲ್ಲಿ ಕನ್ನಡದ ತೇರನ್ನೆಳೆಯಲು ಹಲವಾರು ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಕನ್ನಡ ರಾತ್ರಿ ಶಾಲೆಗಳು, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹೀಗೆ ಲಕ್ಷಾಂತರ ಕನ್ನಡ ಮನಸ್ಸುಗಳು ಜೊತೆಯಾಗಿ ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಅಭಿಮಾನಪಡುವ ಸಂಗತಿ.

ಮದುವೆಯಾದ ಹೊಸತರಲ್ಲಿ ಮುಂಬಯಿಗೆ ಬಂದಾಗ ಕನ್ನಡ ಶಬ್ದಗಳನ್ನು ಕೇಳಲು ಹಪಹಪಿಸುತ್ತಿದ್ದ ನನಗೆ ಇದೀಗ ಮುಂಬಯಿಯೆಲ್ಲ ಕನ್ನಡಮಯವಾಗಿದೆ ಎಂದೆನಿಸುತ್ತದೆ. (ಕರ್ನಾಟಕದ ಸಂಸ್ಕೃತಿಯು ಮುಂಬಯಿಯಲ್ಲೆಡೆ ಪಸರಿಸಿದೆ). ಮುಂಬಯಿಯಲ್ಲಿ ನಡೆಯುವಷ್ಟು ಕನ್ನಡ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲೂ ನಾನು ಕಂಡಿರಲಿಲ್ಲ. ಮುಂಬಯಿ ಆಕಾಶವಾಣಿ ಕನ್ನಡ ವಿಭಾಗದಲ್ಲೂ ಕನ್ನಡದ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದು ಹೆಮ್ಮೆ ಎನಿಸುತ್ತದೆ. ಮುಂಬಯಿ ಆಕಾಶವಾಣಿಯ ಕನ್ನಡ ವಿಭಾಗದಲ್ಲಿ ಉದ್ಘೋಷಕಿಯಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಅವಕಾಶವು ನನಗೆ ಸಿಕ್ಕಿರುವುದು ನನ್ನ ಭಾಗ್ಯವೆಂದೇ ಭಾವಿಸಿರುವೆ.

ಮದುವೆಯ ನಂತರ 1982ರಲ್ಲಿ ಮುಂಬಯಿಗೆ ಬಂದ ನಾನು 2003 ರಲ್ಲಿ ಕರ್ನಾಟಕ ಸಂಘ ಮುಂಬಯಿಯ ಮಹಿಳಾ ವಿಭಾಗದ ವತಿಯಿಂದ ಕಾರ್ಯಕ್ರಮ ಕೊಡಲು ಮುಂಬಯಿ ಆಕಾಶವಾಣಿಗೆ ನಾವೆಲ್ಲರೂ ಹೋಗಿದ್ದೆವು. ನಾನಂತೂ ಮುಂಬಯಿ ಆಕಾಶವಾಣಿಯಲ್ಲಿ ಕನ್ನಡ ವಿಭಾಗ ಇರುವುದನ್ನು ಕಂಡು ಸಂಭ್ರಮ ಪಟ್ಟಿದ್ದೆ. ಅಲ್ಲಿ ಕನ್ನಡ ಕಾರ್ಯಕ್ರಮ ಮಾಡಲು ಕನ್ನಡಿಗರಿಲ್ಲದೇ ಮರಾಠಿಯವರೇ ರೆಕಾರ್ಡ್ ಮಾಡುವುದನ್ನು ನೋಡಿ ಕನ್ನಡ ಕಾರ್ಯಕ್ರಮ ಅಧಿಕಾರಿ ಮಾಲತಿ ಮಾನೆಯವರಿಗೆ ನಾನು ಮೇಡಂ ಕನ್ನಡ ಭಾಷೆ ಬರುವವರು ರೆಕಾರ್ಡಿಂಗ್ ಮಾಡುವುದಿಲ್ಲವೇ’ ಅಂತ ಕೇಳಿದಾಗ “ಯಾರಿಗೆ ಬೇಕು ಈ ಕನ್ನಡ? ಕನ್ನಡದವರಿಗೆ ಬೇಡವಾಗಿದೆ. ಬಂದ್ ಮಾಡಿ ಬಿಡಬೇಕು’ (ಕೋಣಾಲಾ ಪಾಹಿಜೆ ಕನ್ನಡ್, ಕನ್ನಡ್ ಕೋಣಾಲಾ ನಕೋ, ಅತ್ತ ಹೇ ಕಾರ್ಯಕ್ರಮ್ ಬಂದ್ ಕರೂನ್ ಠಾಕಾಯ್‍ಲಾ ಪಾಹಿಜೆ ) ಎಂದು ತಮಗೆ ಅರ್ಥವಾಗದ ಭಾಷೆಯಲ್ಲಿ ಕಾರ್ಯಕ್ರಮ ಮಾಡುವ ಪ್ರಾರಬ್ಧಕ್ಕೆ ತಮ್ಮನ್ನೇ ತಾವು ಹಳಿದುಕೊಂಡರು. ಆಗ ಕನ್ನಡವನ್ನೇ ಉಸಿರಾಗಿರಿಸಿಕೊಂಡ ನನಗೆ ಅವರ ಮಾತುಗಳನ್ನು ಕೇಳಿ ಮನಸ್ಸು ಮಮ್ಮಲ ಮರುಗಿತು. ಹೇಗಾದರೂ ಸರಿ, ಇಲ್ಲಿಯ ಕನ್ನಡ ಕಾರ್ಯಕ್ರಮವನ್ನು ಬಂದ್ ಮಾಡಲು ಬಿಡಬಾರದು ಎನ್ನುವ ಕೆಚ್ಚು ಮನದಲ್ಲಿ ಮೂಡಿತು. ಆದರೆ ಹೇಗೆ? ಈ ಪ್ರಶ್ನೆ ನನ್ನನ್ನು ಕಾಡಿಸಿತು. ಏಕೆಂದರೆ ನನ್ನ ಶಿಕ್ಷಣ ಬರೇ ಎಸ್.ಎಸ್.ಎಲ್.ಸಿ ಯ ತನಕವಾಗಿತ್ತು. ಆದರೂ ಕಾರ್ಯಕ್ರಮ ಅಧಿಕಾರಿ ಮಾಲತಿ ಮಾನೆಯವರಲ್ಲಿ ಧೈರ್ಯ ಮಾಡಿ ಕೇಳಿದೆ. ಇಲ್ಲಿ ಕಾರ್ಯಕ್ರಮ ಉಳಿಯಬೇಕಾದರೆ ಏನು ಮಾಡಬೇಕು? ಮತ್ತು ಕೆಲಸ ಮಾಡುವುದಾದರೆ ಯಾವ ತರಹದ ಕ್ವಾಲಿಫಿಕೆಷನ್ (ಅರ್ಹತೆ) ಬೇಕು ಎಂದು. ಅದಕ್ಕೆ ಅವರು ಹಿಂದು ಮುಂದು ಏನೂ ಯೋಚಿಸದೆ “ನಿನಗಿಷ್ಟವಿದ್ದರೆ ನಾಳೆಯೇ ಬಾ” ಎಂದರು. ಮನೆಗೆ ಬಂದವಳೇ ಪತಿಯವರ ಪರ್ಮಿಶನ್ ತೆಗೆದುಕೊಂಡೆ. ಮುಂಬಯಿಗೆ ಬಂದ ಮೇಲೇ ಒಬ್ಬಳೇ ಹೊರಗೆಲ್ಲೂ ಹೋಗಿ ತಿಳಿಯದ ಕಾರಣ ಮಾರನೆಯದಿನ ಮನೆಯವರಿಂದ ಅವರ ಆಫೀಸಿಗೆ ರಜೆ ಮಾಡಿಸಿ ಅವರನ್ನು ಕರೆದುಕೊಂಡು ಮುಂಬಯಿಯ ಆಕಾಶವಾಣಿಗೆ ಹೋದೆ. ಅಂದು ಮಾಲತಿ ಮಾನೆಯವರು ಬಂದಿರಲಿಲ್ಲ. ಕನ್ನಡ ವಿಭಾಗದ ಮುಖ್ಯಸ್ಥರಾದ ಅಸಿಸ್ಟೆಂಟ್ ಸ್ಟೇಶನ್ ಡೈರೆಕ್ಟರ್ ರೂಪಾಲಿ ಕುಲಕರ್ಣಿ ಮೇಡಂ ಅವರಿಗೆ ಹೋಗಿ ಸಿಕ್ಕಿದೆ. ಅವರು ನಾಳೆಯಿಂದಲೇ ಕೆಲಸಕ್ಕೆ ಬಾ ಎಂದು ಅನುಮತಿ ಕೊಟ್ಟರು. ಮನೆಯವರು ಅಲ್ಲಿಯ ಪರಿಸರವನ್ನು ಅವಲೋಕಿಸಿ ಅಲ್ಲಿ ಕೆಲಸ ಮಾಡಲು ಒಪ್ಪಿಗೆ ನೀಡಿದರು. ಅಲ್ಲಿಂದ ಶುರುವಾಯಿತು ನನ್ನ ಮತ್ತು ಆಕಾಶವಾಣಿಯ ನಂಟು.

ಅಲ್ಲಿಯ ಯಾವುದೇ ನಿಯಮಾವಳಿಯನ್ನು ತಿಳಿಯದ ನಾನು ಮರುದಿನದಿಂದಲೇ ಕೆಲಸಕ್ಕೆ ಹೋಗಲು ಪ್ರಾರಂಭಿಸಿದೆ. ಆವತ್ತು ಮಾಲತಿ ಮಾನೆಯವರು ಬಂದಿದ್ದರು. ನನಗೆ ಆಕಾಶವಾಣಿಯ ಬೇರೆ ಬೇರೆ ವಿಭಾಗಗಳು ಮತ್ತು ಅಲ್ಲಿಯ ಕೆಲವು ಅಧಿಕಾರಿಗಳು ಹಾಗೂ ಉದ್ಘೋಷಕರನ್ನು ಪರಿಚಯಿಸಿದರು. ನಂತರ ರೆಕಾರ್ಡಿಂಗ್ ನಡೆಯುವಲ್ಲಿ ಕರೆದುಕೊಂಡು ಹೋಗಿ ಸಿಟಿಆರ್‍ನ ಎಲ್ಲಾ ಬಟನ್ ಗಳನ್ನು ಹೇಗೆ ಉಪಯೋಗಿಸುವುದು, ಟೇಪ್ ಹೇಗೆ ಜೋಡಿಸುವುದು ಎಂಬುದನ್ನು ತೋರಿಸಿಕೊಟ್ಟು ಹೋದರು. ಅದರ ನಂತರ ಕಾರ್ಯಕ್ರಮ ಮಿಕ್ಸಿಂಗ್, ಮಾಡುವುದು ತಯಾರಿಸುವುದು ಮುಂತಾದ ಎಲ್ಲಾ ಕೆಲಸಗಳನ್ನು ಬೇರೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಉದ್ಘೋಷಕಿಯರಿಂದ, ಇಂಜಿನಿಯರ್ ಅವರಿಂದ ಕೇಳಿ ನೋಡಿ ಕಲಿತುಕೊಂಡೆ. ಮೊದಲು ಡಾ. ಬಿ.ಎ.ಸನದಿ, ಜ್ಯೋತಿ ಯಾಜಿ, ಸವಿತಾ ಕುಲಕರ್ಣಿ ಮೊದಲಾದವರು ಕೆಲಸ ಮಾಡುತ್ತಿದ್ದರೆಂದು ಕೇಳಿದ್ದೆ. ಅವರು ತಯಾರಿಸಿದ ಯಾವುದೇ ಕಾರ್ಯಕ್ರಮಗಳಾಗಲಿ ಅಥವಾ ಫೋನ್ ನಂಬರ್‍ಗಳಾಗಲಿ ಅಲ್ಲಿ ನನಗೆ ಸಿಗಲಿಲ್ಲ. ಮದುವೆಯ ಮೊದಲು ಮೆಟ್ರಿಕ್ ಪಾಸಾದ ನಾನು ಆಕಾಶವಾಣಿಯ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಸಂಯೋಜಿಸುವುದಕ್ಕಾಗಿ ಮತ್ತು ಡಿಗ್ರಿ ಮಾಡಿದವರಿಗೆ ಮಾತ್ರ ಆ ಕೆಲಸ ಮಾಡುವ ಅರ್ಹತೆಯಿರುವುದನ್ನು ತಿಳಿದು 2004ರಲ್ಲಿ ಮೈಸೂರು ಮುಕ್ತ ವಿದ್ಯಾಲಯದಿಂದ ಪಿ. ಯು. ಸಿ. ಬದಲಿಗೆ ಬಿ. ಪಿ. ಪಿ. ಪರೀಕ್ಷೆ ಪಾಸು ಮಾಡಿಕೊಂಡು 2007ರಲ್ಲಿ ಬಿ.ಎ. ಪದವಿ ಪಡೆದುಕೊಂಡೆ. ಮುಂದೆ ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ 2014ರಲ್ಲಿ ಎಂ.ಎ. ಪದವಿ 2019ರಲ್ಲಿ ಎಂ. ಫಿಲ್. ಪದವಿಗಳನ್ನು ಪಡೆದುಕೊಂಡೆ. ಸಾಧಿಸುವ ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಅರಿತುಕೊಂಡೆ.

ಇದೀಗ ಸುಮಾರು 17ವರ್ಷಗಳಿಂದ ನಾನು ಮುಂಬಯಿ ಆಕಾಶವಾಣಿಯ ಕನ್ನಡ ವಿಭಾಗದಲ್ಲಿ ಕನ್ನಡ ಕಾರ್ಯಕ್ರಮ ಆಯೋಜಿಸುತ್ತಿರುವೆ. ಕನ್ನಡದ ಈ ಕೈಂಕರ್ಯ ಮಾಡಲು ನನಗೆ ಬಹಳ ಹೆಮ್ಮೆ ಎನಿಸುತ್ತದೆ.ಆಕಾಶವಾಣಿ’ಯ ಸಂಬಂಧದಿಂದಾಗಿ ನೂರಾರು ಜನರ ಪರಿಚಯವಾಯಿತು. ಮುಂಬಯಿಯಲ್ಲಿಯ ಸಾಹಿತಿಗಳು, ಹಾಡುಗಾರರು, ಕವಿಗಳು, ವಿದ್ವಾಂಸರುಗಳು, ಬೇರೆ ಬೇರೆ ಖಾಯಿಲೆಗಳಿಗೆ ಸಂಬಂಧಪಟ್ಟ ಡಾಕ್ಟರ್‍ಗಳು ಗಣ್ಯಾತಿಗಣ್ಯರನೇಕರು ನನ್ನನ್ನು ಗುರುತಿಸುವಂತಾಯಿತು. ಕೆಲವೊಮ್ಮೆ ಮುಂಬಯಿ ಕನ್ನಡಿಗರೆಲ್ಲರೂ ನನ್ನದೇ ಪರಿವಾರದವರು ಎನ್ನುವಷ್ಟರ ಮಟ್ಟಿಗೆ ಈ ಕಾಯಕದಲ್ಲಿ ಮುಳುಗಿಹೋಗಿರುವೆ.
ಮುಂಬಯಿ ಕರ್ನಾಟಕ ಸಂಘದ ಸಮಿತಿಯಲ್ಲಿದ್ದು ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಬಹುತೇಕ ಜನ ಸಾಹಿತಿಗಳು, ಲೇಖಕರು, ಕವಿಗಳು, ಗಾಯಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಪರಿಚಯ ನನಗಿರುವುದರಿಂದ ಕಾರ್ಯಕ್ರಮ ತಯಾರಿಸಲು ನನಗೆ ಕಷ್ಟವಾಗಲಿಲ್ಲ. ಎಲ್ಲರ ಸಹಕಾರ ಪ್ರೋತ್ಸಾಹಗಳು ದೊರಕಿದವು. ಮರಾಠಿಯಲ್ಲಿ ಸಹದ್ಯೋಗಿಗಳ ಜೊತೆ ಮಾತನಾಡುವುದರಿಂದ ಹೆಚ್ಚಿನವರು ನನಗೆ ಆತ್ಮೀಯರಾದರು.

ಪ್ರಾರಂಭದಲ್ಲಿ ಕೆಲಸದ ಜೊತೆಗೆ ಸತತವಾಗಿ ಮೂರು ತಿಂಗಳು ಕಾಂಟ್ರ್ಯಕ್ಟ್ ಇಲ್ಲದೇ ದಿನಾಲೂ ಆಫೀಸಿಗೆ ಹೋಗಿ ರೆಕಾರ್ಡಿಂಗ್, ಎಡಿಟಿಂಗ್, ಡಬ್ಬಿಂಗ್ ಮಾಡುವುದನ್ನು ಪ್ರಾಕ್ಟೀಸ್ ಮಾಡಿಕೊಂಡೆ. ಸಿಟಿಆರ್ ಬಳಸಿ ಕೆಲಸ ಮಾಡುವಾಗ ಸಿಗ್ನೇಚರ್ ಟ್ಯೂನ್, ಅನೌನ್ಸ್‍ಮೆಂಟ್, ರೆಕಾರ್ಡಿಂಗ್, ಹಾಡುಗಳು ಇವನ್ನೆಲ್ಲಾ ಮಿಕ್ಸ್ ಮಾಡಿ ಕಾರ್ಯಕ್ರಮ ತಯಾರಿಸುವಾಗ ಮೂರು ನಾಲ್ಕು ಸಿಟಿಆರ್ ಮಶೀನ್‍ಗಳನ್ನು ಬಳಸಿ ಒಮ್ಮೆಲೇ ಪ್ರಾರಂಭಿಸ ಬೇಕಾಗುತ್ತಿತ್ತು. ಅರ್ಧ ಗಂಟೆಯ ಕಾರ್ಯಕ್ರಮ ಮಾಡಲು ಒಮ್ಮೊಮ್ಮೆ ಒಂದೆರಡು ದಿನಗಳು ಬೇಕಾಗುತ್ತಿದ್ದವು. ಇದರ ಜೊತೆ ಕಲಾವಿದರನ್ನು ಸಂಪರ್ಕಿಸುವುದು ಅವರಿಗೆ ಸ್ಕ್ರಿಪ್ಟ್ ಬರೆಯಲು ಹೇಳಿ ರೆಕಾರ್ಡಿಂಗ್ ಮಾಡಲು ದಿನ ನಿಗದಿಪಡಿಸುವುದು, ಕ್ಯೂ ಶೀಟಿನಲ್ಲಿ ಕಾರ್ಯಕ್ರಮಗಳ ವಿವರಣೆ ನೀಡುವುದು, ಲೇಔಟ್ ಪುಸ್ತಕದಲ್ಲಿ ಕಾರ್ಯಕ್ರಮಗಳ ವಿವರಣೆ ನೀಡಿ ಅಪ್ರೂವ್ ಮಾಡಿಸಿಕೊಳ್ಳುವುದು, ಕಾಂಟ್ರ್ಯಾಕ್ಟ್ ತುಂಬಿಸುವುದು ಕಾರ್ಯಕ್ರಮ ವಿವರಣೆ ಬರೆದು ಟೇಪ್‍ಗಳನ್ನು ಡ್ಯೂಟಿ ರೂಮ್‍ನಲ್ಲಿರಿಸಿ ಅಲ್ಲಿಯೂ ಆಯಾಯಾ ದಿನಗಳ ಕ್ಯೂ ಶೀಟ್ ತುಂಬಿಸುವುದು, ಕಲಾವಿದರ ಗೌರವ ಧನ ಅವರಿಗೆ ಸರಿಯಾದ ಸಮಯದಲ್ಲಿ ಸಿಕ್ಕಿತೋ ಇಲ್ಲವೋ ವಿಚಾರಿಸುವುದು ಇತ್ಯಾದಿ ಅನೇಕ ಕೆಲಸಗಳಿರುತ್ತಿದ್ದವು. ಈ ಕೆಲಸಗಳನ್ನು ಬಹಳ ಖುಶಿಯಿಂದ ಮಾಡುತ್ತಿದ್ದೆ. ಮೂರು ತಿಂಗಳ ನಂತರ ಈ ಎಲ್ಲಾ ಕೆಲಸಗಳಿಗಾಗಿ ಆರುದಿನಗಳ ಕಾಂಟ್ರ್ಯಾಕ್ಟ್ ಸಿಗಲು ಶುರುವಾಯಿತು.
ಗೃಹಿಣಿಯಾಗಿದ್ದು ಮನೆಯೇ ಜೀವನದ ಸರ್ವಸ್ವ ಎಂದು ಕೊಂಡವಳಿಗೆ ಇದೀಗ ದಿನಾಲೂ ಆಕಾಶವಾಣಿಗೆ ಕೆಲಸಕ್ಕೆ ಹೋಗುವುದು ಅಲ್ಲಿ ಹೊಸ ಹೊಸ ವಿಷಯಗಳನ್ನು ಕಲಿಯುವುದು ಇವೆಲ್ಲದರಿಂದ ಆತ್ಮಸ್ಥೈರ್ಯವೂ ಹೆಚ್ಚುತ್ತಾ ಹೋಯಿತು. ಮೊದಲು ಎಲ್ಲಿಗೂ ಹೊರಗೆ ಹೋಗುವಾಗ ಜೊತೆಯಲ್ಲಿ ಯಾರಾದರೂ ಇರಲೇ ಬೇಕಿತ್ತು. ಒಬ್ಬಳಿಗೆ ಎಲ್ಲಿಯೂ ತಿರುಗಿ ಅಭ್ಯಾಸವಿರಲಿಲ್ಲ. ಇದೀಗ ಒಬ್ಬಳೇ ಹೋಗಲು ಧೈರ್ಯ ಬಂತು. ಒಂದುರೀತಿಯಲ್ಲಿ ಆಕಾಶವಾಣಿಗೆ ಹೋಗಲು ಪ್ರಾರಂಭಿಸಿದ ಮೇಲೆ ನನ್ನ ಜೀವನದ ದಿಕ್ಕೇ ಬದಲಾಯಿತು.
ಪ್ರಾರಂಭದಲ್ಲಿ ಮಾಲತಿ ಮಾನೆಯವರು ನನ್ನನ್ನು ಅವರ ಜೊತೆಯೇ ಇರಲು ಹೇಳುತ್ತಿದ್ದರು. ಮಧ್ಯಾಹ್ನದ ಊಟವೂ ಅವರ ಗ್ರೂಪಿನವರ ಜೊತೆಯಲ್ಲಿಯೇ ಆಗುತ್ತಿತ್ತು. ಅವರ ಗ್ರೂಪಿನಲ್ಲಿ ಹೆಚ್ಚಿನವರು ಕಾರ್ಯಕ್ರಮ ಅಧಿಕಾರಿಗಳು ಒಂದಿಬ್ಬರು ಅಸಿಸ್ಟೆಂಟ್ ಸ್ಟೇಶನ್ ಡೈರೆಕ್ಟರ್ಸ್ ಕೂಡಾ ಇದ್ದರು. ನನಗೆ ಬಹಳ ಮುಜುಗರವಾಗುತ್ತಿತ್ತು. ಆದರೂ ಮಾನೆ ಮೇಡಂ ನಾನು ಊಟಕ್ಕೆ ಬರುವ ತನಕ ಕಾಯುತ್ತಿದ್ದರು. ತಿಂಗಳಲ್ಲಿ ಒಂದೆರಡು ಬಾರಿ ಹೋಟೆಲಿನಲ್ಲಿ ಪಾರ್ಟಿಗಳೂ ಆಗುತ್ತಿದ್ದವು ಯಾರದಾದರೂ ಹುಟ್ಟಿದ ದಿನ, ಮದುವೆ ದಿನ ಮುಂತಾದವುಗಳ ನೆಪದಿಂದ ಪಾರ್ಟಿ ಕೊಡುತ್ತಿದ್ದರು. ಎಷ್ಟು ಬರುವುದಿಲ್ಲವೆಂದರೂ ಎಲ್ಲರೂ ಒತ್ತಾಯಪೂರ್ವಕವಾಗಿ ಕರೆದೊಯ್ಯುತ್ತಿದ್ದರು. ನಾನು ಪಾರ್ಟಿ ಕೊಡುವನೆಂದರೆ ಇಲ್ಲ ನೀನು ಮನೆಯಿಂದ ಇಡ್ಲಿ, ದೋಸೆ, ಚಟ್ನಿ, ಸಾಂಬಾರ್ ಮಾಡಿಕೊಂಡು ಬಾ. ಹೋಟೇಲಿನ ಪಾರ್ಟಿಗಿಂತ ನಮಗೆ ಅದು ರುಚಿಯಾಗುತ್ತದೆ ಅನ್ನುತಿದ್ದರು. ನಮ್ಮನೆಯ ಅಡುಗೆ ಅವರಿಗೆ ತುಂಬಾ ಇಷ್ಟವಾಗುತ್ತಿತ್ತು. ಆದರೆ ಎಲ್ಲದರಲ್ಲೂ ತೆಂಗಿನ ಕಾಯಿಯ ಬಳಕೆ ಕಂಡು ಚಹಾಕ್ಕೆ ಸ್ವಲ್ಪ ತೆಂಗಿನ ಕಾಯಿ ಹಾಕು ಎಂದು ತಮಾಷೆ ಮಾಡುತ್ತಿದ್ದರು. ಕನ್ನಡ ಕಾರ್ಯಕ್ರಮದ ಅಧಿಕಾರಿ ಮಾಲತಿ ಮಾನೆಯವರು ನಿವೃತ್ತಿಯಾಗುವ ತನಕ ಈ ಗ್ರೂಪಿನಿಂದ ನನಗೆ ಹೊರ ಬರಲಾಗಲಿಲ್ಲ. ಸಂಜೆ ಮನೆಗೆ ಬರುವಾಗಲೂ ಮಾನೆ ಮೇಡಂ ಅವರಿಗೆ ಕಾಲು ನೋವಿರುವುದರಿಂದ ಬೊರಿವಲಿ ಟ್ರೈನ್ ನಲ್ಲಿ ಸೀಟು ಹಿಡಿದು ಅವರನ್ನು ಕೂಡಿಸಿ ನಾನು ಫೋರ್ತ್ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದೆ. ಅದನ್ನು ಅವರು ಈಗಲೂ ನೆನಪಿಸಿ ಕೊಳ್ಳುತ್ತಿರುವರು. ಅವರಿಗೆ ನಮ್ಮವರಾದ ಮೊದಲು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಡಾ. ಬಿ. ಎ. ಸನದಿ ಎಂದರೆ ಬಹಳ ಗೌರವ ಕಾರಣ, ಅವರು ನನ್ನ ಹಾಗೆ ಉದ್ಘೊಷಕರಾಗಿ ಅವರು ಕೆಲಸ ಮಾಡುತ್ತಿರುವಾಗ ಪರ್ಮನೆಂಟ್ ಕೆಲಸದ ಆಫರ್ ಬಂದಿತ್ತಂತೆ. ಅದಕ್ಕೆ ಫಾರ್ಮ್ ತುಂಬಿಸಿಕೊಟ್ಟು ಹೋಗಿ ಮಾರನೇ ದಿನ ಏನೋ ಕೆಲಸದ ತೊಂದರೆಯಿಂದ ಕೆಲಸಕ್ಕೆ ಬಾರದೆ ಮನೆಯಲ್ಲೇ ಉಳಿದಿದ್ದರು. ಆಗ ಅವರಿಗಾಗದವರು ಆ ಫಾರ್ಮನ್ನು ಮುದ್ದೆ ಮಾಡಿ ಕಸದ ಬುಟ್ಟಿಗೆ ಎಸೆದಿದ್ದರಂತೆ. ಸನದಿ ಸರ್ ಬಂದವರು ಇವರ ಫಾರ್ಮ್ ಇಲ್ಲದೇ ಇರುವುದನ್ನು ನೋಡಿ ಫಾರ್ಮ್ ಕಳುಹಿಸಲು ಕೊನೆಯದಿನ ಎಂದು ಕಸದ ಬುಟ್ಟಿಯನ್ನು ತರಿಸಿ ಅದರಲ್ಲಿ ಹುಡುಕಾಡಿ ಅವರ ಫಾರ್ಮನ್ನು ಸರಿಯಾದ ರೀತಿಯಲ್ಲಿ ಕಳುಹಿಸಿದರೆಂದು, ಅವರಿಂದಾಗಿಯೇ ತಾನು ಆಕಾಶವಾಣಿಯಲ್ಲಿ ಪರ್ಮನೆಂಟ್ ಎಂಪ್ಲಾಯ್ ಆಗುವಂತಾಯಿತೆಂದು ಸನದಿ ಸರ್ ಅವರನ್ನು ‘ದೇವ್ ಮಾಣುಸ್’ ಎಂದು ನೆನಪಿಸಿಕೊಳ್ಳುತ್ತಿದ್ದರು. ಇದಕ್ಕಾಗಿ ಸನದಿ ಸರ್ ಅವರ ಮಾನವತಾವಾದದ ಈ ಗುಣ ನನಗೆ ಹೆಮ್ಮೆ ಎನಿಸುತ್ತದೆ.

ಮೊದಮೊದಲು ಕಾರ್ಯಕ್ರಮದ ನಿರೂಪಣೆ ಮಾಡುವಾಗ ಬಹಳ ವೇಗವಾಗಿ ಮಾತನಾಡುತ್ತಿದ್ದೆ. ಧ್ವನಿಯ ಏರಿಳಿತಗಳ ಕುರಿತು ಅಷ್ಟೊಂದು ಲಕ್ಷ್ಯವಿರಲಿಲ್ಲ. ನಂತರ ಅನ್ಯ ಭಾಷೆಗಳ ಕಾರ್ಯಕ್ರಮ ಕಂಡು ಕೇಳಿ ಅದನ್ನೆಲ್ಲಾ ಸರಿಪಡಿಸಿಕೊಳ್ಳುತ್ತಾ ಬಂದೆ. ಸುಮಾರು 7-8 ವರ್ಷಗಳ ನಂತರ ಮುಂಬಯಿ ಆಕಾಶವಾಣಿಯಲ್ಲಿ ಹಿಂದಿ ಮರಾಠಿ ಭಾಷೆಯ ವಾಣಿ ಕೋರ್ಸ್ ನಡೆಯುವಾಗ ಕನ್ನಡ ಕಾರ್ಯಕ್ರಮಕ್ಕಾಗಿ ಅಂದಿನ ಸ್ಟೇಷನ್ ಡೈರೆಕ್ಟರ್ ಸ್ಪೆಷಲ್ ಪರ್ಮಿಶನ್ ತೆಗೆದುಕೊಂಡು ಕನ್ನಡದಲ್ಲೂ ಪರೀಕ್ಷೆ ನಡೆಯುಂತೆ ಮಾಡಿದರು.ಅವರು ಈ ಉಪಕಾರವನ್ನು ನಾನೆಂದೂ ಮರೆಯುವಂತಿಲ್ಲ. ನಾನೂ ವಾಣಿಕೋರ್ಸಲ್ಲಿ ಭಾಗವಹಿಸಿ ಉತ್ತೀರ್ಣಳಾದೆ. ನಾವು ಕನ್ನಡದವರು ನಾಲ್ಕು ಜನ ಆ ತರಗತಿಯ ಅನ್ಯ ಭಾಷಿಕದವರೊಡನೆ ವಾಣಿ ಕೋರ್ಸ್ ಪದವಿ ಪಡೆದು ಕೊಂಡೆವು. ವನಿತಾ, ಶೈಲಾ, ಪಲ್ಲವಿ ಮತ್ತು ನಾನು. ವಾಣಿ ಕೋರ್ಸ್ ಅಂದರೆ ಸ್ವರ ಚಾಚಣಿ ಪರೀಕ್ಷೆ ಮತ್ತು ಒಂದು ವಾರ ಪ್ರಾಕ್ಟಿಕಲ್ ಪರೀಕ್ಷೆ. ಅದರಲ್ಲಿ ಸಂದರ್ಶನ ತೆಗೆದುಕೊಳ್ಳುವುದು ಸ್ವರಗಳ ಏರಿಳಿತಗಳೊಂದಿಗೆ ವಿಷಯಕ್ಕೆ ತಕ್ಕ ಹಾಗೇ ಓದುವುದು, ಬರವಣಿಗೆ, ನಾಟಕ, ಹಾಡುವುದು ಎಲ್ಲದರ ಪರೀಕ್ಷೆಯಾಗುತ್ತಿತ್ತು. ಪರೀಕ್ಷೆ ತೆಗೆದುಕೊಂಡ ಅಸಿಸ್ಟೆಂಟ್ ಸ್ಟೇಶನ್ ಡೈರೆಕ್ಟರ್, ಸ್ಟೇಶನ್ ಡೈರೆಕ್ಟರ್, ಅಲ್ಲಿಯ ಪರ್ಮನೆಂಟ್ ಉದ್ಘೋಷಕರು ಎಲ್ಲರೂ ‘ಕನ್ನಡ ಟೀಮ್ ಬೆಸ್ಟ್’ ಎಂದು ಹೇಳಿದಾಗ ನಮಗೆ ಬಹಳ ಆನಂದವಾಯಿತು. ‘ಜಯ್ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೇ’ ನಮ್ಮ ನಾಲ್ವರ ಧ್ವನಿಯೂ ಸ್ಟುಡಿಯೋದಲ್ಲಿ ಮಾರ್ಧನಿಗೊಂಡಿತು. ನೆನಪಿಸಿಕೊಂಡರೆ ಈಗಲೂ ಮೈ ರೋಮಾಂಚನವಾಗುತ್ತದೆ. ನಾನೊಬ್ಬಳೇ ಕೆಲಸ ಮಾಡುವ ಕನ್ನಡ ವಿಭಾಗದ ಕೆಲಸಕ್ಕಾಗಿ ನನಗೆ ವಾಣಿ ಕೋರ್ಸ್ ಪದವಿ ಪಡೆಯುವ ಅವಕಾಶ ಸಿಗುವುದೆಂದು ಊಹಿಸಿಯೇ ಇರಲಿಲ್ಲ. ಈ ಕೋರ್ಸ್ ಪಡೆದುಕೊಂಡ ಮೇಲೆ ನನ್ನ ಕಾರ್ಯಕ್ರಮದ ಶೈಲಿಯೇ ಬದಲಾಯಿತು. ಮೊದಲು ಪ್ರಸಾರವಾದ ಮೌಲಿಕವಾದ ಕಾರ್ಯಕ್ರಮಗಳಲ್ಲಿ ಮಾಡಿದ ಅನೌನ್ಸ್ ಮೆಂಟ್‍ಗಳನ್ನು ಅಳಿಸಿ ಪುನಃ ಅನೌನ್ಸ್‍ಮೆಂಟ್ ಮಾಡಿ ಜೋಡಿಸಿ ಕಾಪಿಟ್ಟೆ. ಅಲ್ಲಿ ಎಷ್ಟು ಹೆಚ್ಚು ಕೆಲಸವಿದ್ದರೂ ಬೇಸರವೆಂಬುದು ಮಾತ್ರ ಬರುತ್ತಲೇ ಇರಲಿಲ್ಲ.

ಆಕಾಶವಾಣಿಯ ಕನ್ನಡ ವಿಭಾಗಕ್ಕೆ ಕಾರ್ಯಕ್ರಮ ಕೊಡಲು ನೂರಾರು ಮಹನೀಯರು ಬಂದು ಹೋಗಿದ್ದಾರೆ. ಅವರಲ್ಲಿ ಕೆಲವರು, ಡಾ. ಜಿ. ಎನ್. ಉಪಾಧ್ಯ, ವ್ಯಾಸರಾವ್ ನಿಂಜೂರು, ಸದಾನಂದ ಸುವರ್ಣ, ಡಾ. ರಂಗನಾಥ್ ಭಾರದ್ವಾಜ್, ಸುಬ್ರಾಯ ಭಟ್, ಡಾ. ಜಿ. ಡಿ. ಜೋಶಿ, ಡಾ. ಸುನೀತಾ ಶೆಟ್ಟಿ, ಶ್ರೀ. ವಿಜಯಕುಮಾರ್ ಶೆಟ್ಟಿ ತೋನ್ಸೆ, ಶ್ರೀ ಚಂದ್ರಶೇಖರ ಪಾಲೆತ್ತಾಡಿ, ಶ್ರೀ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಎಚ್. ಬಿ. ಎಲ್. ರಾವ್, ವೀಣಾ ಬನ್ನಂಜೆ, ಬಿ.ಎಸ್. ಕರ್ಕಾಲ್, ಶಿಮುಂಜೆ ಪರಾರಿ, ಡಾ. ಸುರೇಂದ್ರಕುಮಾರ್ ಹೆಗ್ಡೆ, ಡಾ. ಬಿ. ಎ. ಸನದಿ, ಡಾ. ಬಿ. ಆರ್. ಮಂಜುನಾಥ್,
ಶ್ರೀ ಮಂಜುನಾಥಯ್ಯ, ಶ್ರೀ ಮನೋಹರ್ ಕೋರಿ, ಶ್ರೀ. ರವಿ. ರಾ. ಅಂಚನ್, ಪ್ರೊ. ವೆಂಕಟೇಶ್ ಪೈ, ವಿದ್ವಾನ್ ವಿಶ್ವನಾಥ್ ಭಟ್ ಕೈರಬೆಟ್ಟು, ಡಾ. ಸುನೀತಿ ಉದ್ಯಾವರ, ಡಾ. ಭರತ್ ಕುಮಾರ್ ಪೊಲಿಪು, ಶ್ರೀನಿವಾಸ ಜೋಕಟ್ಟೆ, ಡಾ. ಗೀತಾ ನಿಯೋಗಿ, ಡಾ. ತಾರಾ ಸೋಮಶೇಖರ್, ಡಾ. ಸೋಮಶೇಖರ್, ಡಾ. ಜಿ. ವಿ. ಕುಲಕರ್ಣಿ, ಡಾ. ರಘುನಾಥ್, ಡಾ. ವಿಶ್ವನಾಥ್ ಕಾರ್ನಾಡ್, ಪ್ರಕಾಶ್ ಬುರ್ಡೆ, ವೆಂಕಟ್ರಾಜ್, ಮಿತ್ರಾ ವೆಂಕಟ್ರಾಜ್, ಡಾ. ಗಿರಿಜಾ ಶಾಸ್ತ್ರಿ, ಡಾ. ಎಸ್. ಕೆ. ಭವಾನಿ, ಶ್ರೀ. ಚೆನ್ನವೀರ ಕಣವಿ, ಶ್ರೀ ಅಂಬಾತನಯ ಮುದ್ರಾಡಿ, ಶ್ರೀ. ಜಯರಾಮ್ ರಾವ್, ಡಾ. ಬಿ. ಎಸ್. ಚೌಟ, ಪದ್ಮನಾಭ ಸಸಿಹಿತ್ಲು, ಮಧುಸೂದನ್ ರಾವ್, ರಮಾ ಉಡುಪ, ಡಾ. ಉಮಾ ರಾವ್, ಡಾ. ಪೂರ್ಣಿಮಾ ಶೆಟ್ಟಿ, ಸುಧೀರ್ ಅಮೀನ್, ರೋನ್ಸ್ ಬಂಟ್ವಾಳ್, ಶ್ರೀ. ಬಿ. ಬಾಲಚಂದ್ರ ರಾವ್, ಲತಾ ಶೆಟ್ಟಿ, ಅಕ್ಷತಾ ದೇಶ್‍ಪಾಂಡೆ,
ಡಾ. ಜಿ. ಪಿ. ಕುಸುಮಾ, ಅಡ್ವಕೇಟ್ ರೋಹಿಣಿ ಸಾಲ್ಯಾನ್, ಅಡ್ವಕೇಟ್ ಅಮಿತಾ ಭಾಗ್ವತ್, ಯಶೋದಾ ಶೆಟ್ಟಿ, ಗಾಯತ್ರಿ ರಾಮು, ಅಲಮೇಲು ಅಯ್ಯರ್, ಡಾ. ಸಿರಿರಾಮಾ, ಸರೋಜಾ ಶ್ರೀನಾಥ್, ಓಂದಾಸ್ ಕಣ್ಣಂಗಾರ್, ಡಾ. ಈಶ್ವರ ಅಲೆವೂರು, ಮಹೇಶ್ ಹೆಗ್ಡೆ, ರಮಣ್ ಶೆಟ್ಟಿ ರೆಂಜಾಳ್, ಪುಷ್ಪರಾಜ್ ರೈ ಮೈಲಾರಬೀಡು, ಡಾ. ದಿನೇಶ್ ಶೆಟ್ಟಿ ರೆಂಜಾಳ್, ರಾಜೀವ ನಾಯ್ಕ್, ರಮೇಶ್ ಭಿರ್ತಿ, ಡಾ. ರೇಖಾ ದೇವಾಡಿಗ, ಡಾ. ವಾಣಿ ಉಚ್ಚಿಲ್ಕರ್, ಡಾ. ಸುಮಾ ದ್ವಾರಕನಾಥ್, ವಿದ್ಯಾ ದೇಶ್ ಪಾಂಡೆ, ವಿಜಯ ಪ್ರಕಾಶ್, ಅವಿನಾಶ್ ಕಾಮತ್, ಡಾ. ಅಶೋಕ್ ವಿ. ಕೆರೂರ್, ರಾಮದಾಸ ಉಪಾಧ್ಯಾಯ, ಸುರೇಶ್ ಶೆಟ್ಟಿ ಪನವೇಲ್, ಮನೋಹರ್ ನಾಯ ಕ್, ರಜನಿ ಪೈ, ಅಡ್ವೋಕೇಟ್ ವಿಪುಲ್ ನಾಯ್ಕ್, ಅಡ್ವೋಕೇಟ್ ಗೀತಾ ಎಲ್. ಭಟ್, ಸೋಮನಾಥ್ ಕರ್ಕೇರ, ಗಂಗಾಧರ ಪಣಿಯೂರು, ಗೋಪಾಲ್ ತ್ರಾಸಿ,ಡಾ. ಸತ್ಯನಾರಾಯಣ, ಡಾ. ಕೃಷ್ಣಮೂರ್ತಿ ಕಲುಮಂಗಿ, ಕು. ಪ್ರತಿಮಾ ಭಟ್ ಕಡೂರು, ಸಾ.ದಯಾ, ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ, ಶಿವಗೌಡ ಅಮ್ಮಸಂದ್ರ, ಅಹಲ್ಯಾ ಬಲ್ಲಾಳ್, ತಾರಾ ರಾವ್, ಪ್ರೇಮಾ ರಾವ್, ಸುಮಂಗಲಾ ಶೆಟ್ಟಿ, ಪದ್ಮರೇಖಾ, ಜಿ. ಎಸ್. ನಾಯಕ್, ವಿವೇಕ್ ಶ್ಯಾನ್ ಬಾಗ್, ಸುನಂದಾ ಉಪಾಧ್ಯಾಯ, ಡಾ. ಮಮತಾ ರಾವ್, ಡಾ. ಸುಶೀಲಾ ರಾವ್, ಡಾ. ಶ್ಯಾಮಲಾ ಮಾಧವ್,ಡಾ. ಶ್ಯಾಮಲಾ ಪ್ರಕಾಶ್, ಅಪರ್ಣಾ ರಾವ್, ಅಪರ್ಣಾ ಭಟ್, ಪ್ರಭು ಅಂಗಡಿ, ಸನತ್ ಕುಮಾರ್ ಜೈನ್, ಮಂಜುಳಾ ಭಟ್, ಶ್ಯಾಮಲಾ ಶಾಸ್ತ್ರಿ, ವೀಣಾ ಕಟ್ಟಿ, ವೀಣಾ ರಾವ್, ಸುಮನ್ ಚಿಪ್ಲೂಣ್ಕರ್, ವಿಜಯಾ ರಾವ್, ಜಯಾ ರಾವ್, ವಿಶ್ವನಾಥ್ ಪೇತ್ರಿ, ಜಯಂತಿ ದೇವಾಡಿಗ, ಮನುಶ್ರೀ, ಅಶೋಕ್(ಆಕಾಶವಾಣಿ), ಪಂಡಿತ್ ಜಿ. ಜಿ. ಜೋಶಿ, ಸವಿತಾ ಎಸ್. ಶೆಟ್ಟಿ, ಶಕುಂತಳಾ ಪ್ರಭು ಹೀಗೆ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ಕಲಾವಿದರು ಅನೇಕ ಭಜನಾ ಮಂಡಳಿಗಳು, ಕನ್ನಡ ಭವನ ಶಾಲೆ, ಎನ್. ಕೆ. ಇ. ಎಸ್. ಶಾಲೆ, ಎಸ್. ಎಮ್. ಶೆಟ್ಟಿ ಶಾಲೆ, ಚಿಣ್ಣರ ಬಿಂಬದ ಮಕ್ಕಳು ಭಾಷಣ, ಉಪನ್ಯಾಸ, ಚರ್ಚೆ, ಸಂದರ್ಶನ, ನಾಟಕ, ಸಂಗೀತ ರೂಪಕ, ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದಾರೆ.

ವೀಣಾರಾಯ್ ಸಿಂಘಾನಿಯವರು ಕನ್ನಡ ಕಾರ್ಯಕ್ರಮ ಅಧಿಕಾರಿಯಾಗಿರುವಾಗ ಜೀವನದಲ್ಲಿ ಮಹತ್ವಪೂರ್ಣ ಸಾಧನೆ ಮಾಡಿದ ಹಿರಿಯರ ಬಗ್ಗೆ ಅರ್ಕೈವಲ್ ರೆಕಾರ್ಡಿಂಗ್ ಮಾಡಲು ಎಲ್ಲಾ ವಿಭಾಗಗಳಿಗೂ ಆರ್ಡರ್ ಬಂದಿತ್ತು, ಆದರೆ ನಮ್ಮ ಕನ್ನಡ ವಿಭಾಗದಲ್ಲಿ ತಿಳಿಸಲೇ ಇಲ್ಲ. ಬೇರೆ ವಿಭಾಗದವರ ರೆಕಾರ್ಡಿಂಗ್ ನೋಡಿ ನಾನು ನನ್ನ ಮೇಲಧಿಕಾರಿ ವೀಣಾ ರಾಯ್ ಸಿಂಘಾನಿಯವರಲ್ಲಿ ನಮ್ಮ ಕನ್ನಡಿಗರಲ್ಲೂ ಅನೇಕ ರೀತಿಯ ಸಾಧನೆಗೈದ ಹಿರಿಯ ಗಣ್ಯರಿರುವರು, ಕನ್ನಡ ವಿಭಾಗಕ್ಕೂ ಈ ಅವಕಾಶ ಕೊಡಿಸಬೇಕು ಅಂದಾಗ, ಅವರು ಒಪ್ಪಿ ಅವರ ಮೇಲಧಿಕಾರಿಗಳಿಂದ ಸಹಮತಿ ಪಡೆದು ನನಗೆ ಅರ್ಕೈವಲ್ ರೆಕಾರ್ಡಿಂಗ್ ಮಾಡಲು ಪರವಾನಗಿ ಕೊಟ್ಟರು. ಮೊದಲನೆಯದಾಗಿ ಡಾ. ರಂಗನಾಥ್ ಭಾರದ್ವಾಜ್, ಸದಾನಂದ ಸುವರ್ಣ, ವ್ಯಾಸರಾವ್ ನಿಂಜೂರು, ಡಾ. ಸುನೀತಾ ಶೆಟ್ಟಿ ಇವರೊಂದಿಗೆ ಕ್ರಮವಾಗಿ ಸುಬ್ರಾಯ ಚೊಕ್ಕಾಡಿ, ಡಾ.ಭರತ್ ಕುಮಾರ್ ಪೊಲಿಪು, ಡಾ. ಜಿ. ಎನ್. ಉಪಾಧ್ಯ ಮತ್ತು ಶ್ರೀನಿವಾಸ ಜೋಕಟ್ಟೆಯವರು ಅವರೆಲ್ಲರ ಜೀವನ ಸಾಧನೆಗಳ ಕುರಿತಾಗಿ ಸಂದರ್ಶನ ಕಾರ್ಯಕ್ರಮ ನಡೆಸಿಕೊಟ್ಟರು. ಈ ಹಿರಿಯರೆಲ್ಲರ ಜೀವನ ಸಾಧನೆಗಳ ಪರಿಚಯದ ಜೊತೆಗೆ ದಿನಪೂರ್ತಿ ರೆಕಾರ್ಡಿಂಗ್ ಮಾಡುವಾಗ ಒಟ್ಟಿಗೆ ಇದ್ದು ಬಹಳ ಆತ್ಮೀಯತೆಯೆನಿಸಿತ್ತು. ಈ ಕಾರ್ಯಕ್ರಮಗಳನ್ನು ಮುಂದಿನ ಐನೂರು ವರ್ಷಗಳು ಆಕಾಶವಾಣಿಯಲ್ಲಿ ಸಂರಕ್ಷಿಸಿಡುವುದಾಗಿ ಹೇಳಿದ್ದಾರೆ. ಇನ್ನೂ ಅನೇಕ ಗಣ್ಯರ ಹೆಸರುಗಳು ನನ್ನ ಪಟ್ಟಿಯಲ್ಲಿತ್ತು. ಆದರೆ ಅಷ್ಟರಲ್ಲೇ ಫಂಡ್ ಇಲ್ಲವೆಂದು ಎಲ್ಲಾ ವಿಭಾಗದ ಅರ್ಕೈವಲ್ ರೆಕಾರ್ಡಿಂಗ್ ಬಂದ್ ಮಾಡಿಸಿದರು.

ಮತ್ತೊಮ್ಮೆ ಆಕಾಶವಾಣಿಯ ಅಡಿಟೋರಿಯಂ ನಲ್ಲಿ ಬೇರೆ ಬೇರೆ ಭಾಷೆಗಳ ಲೈವ್ ಗ್ರೂಪ್ ಸಾಂಗ್ಸ್ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲಿಯ ಬಾಕಿ ವಿಭಾಗದವರಿಗೆ ಈ ಕಾರ್ಯಕ್ರಮದ ಕುರಿತು ಮೊದಲೇ ತಿಳಿಸಿದ್ದರು. ಕನ್ನಡ ವಿಭಾಗದಲ್ಲಿ ಅರೇಂಜ್ ಮಾಡುವವರಿಲ್ಲವೆಂದು ಸುಮ್ಮನಾದರಂತೆ, ಹೀಗೆಂದು ಆಗಿನ ಕನ್ನಡ ಕಾರ್ಯಕ್ರಮ ಅಧಿಕಾರಿ ರೆಜಿನಾ ಜೇಕಬ್ ಮೇಡಂ ತಿಳಿಸಿದಾಗ ತಕ್ಷಣ ಚಿಣ್ಣರ ಬಿಂಬಕ್ಕೆ ಸಂಬಂಧಿಸಿದವರಿಗೆ ಫೋನಾಯಿಸಿ ಮಕ್ಕಳಿಂದ ಗ್ರೂಪ್ ಸಾಂಗ್ಸ್ ಹಾಡಿಸಲು ಒಪ್ಪಿಸಿದೆ. ಪದ್ಮನಾಭ ಸಸಿಹಿತ್ಲು ಅವರ ಗ್ರೂಪಿನ ಪಕ್ಕವಾದ್ಯದವರನ್ನೂ ಕರೆಯಿಸಿದೆ. ಕಾರ್ಯಕ್ರಮದ ದಿನ ಬೇರೆಲ್ಲಾ ಭಾಷೆಯ ಮಕ್ಕಳು ಬಣ್ಣ ಬಣ್ಣದ ಬಟ್ಟೆ ಧರಿಸಿ ಮೇಕಪ್ ಮಾಡಿಸಿಕೊಂಡು ಭರ್ಜರಿಯಾಗಿ ಕಾಣಿಸುತ್ತಿದ್ದರು. (ಕಾರಣ ಆ ಕಾರ್ಯಕ್ರಮ ರೆಕಾರ್ಡ್ ಮಾಡಿ ಟಿ.ವಿ.ಯಲ್ಲೂ ಪ್ರಸಾರ ಮಾಡುವುದಿತ್ತು.) ನನಗಿದು ತಿಳಿದಿರಲೂ ಇಲ್ಲ, ಸಮಯದ ಅಭಾವವಿದ್ದುದರಿಂದ ಯಾವುದನ್ನೂ ಚಿಣ್ಣರ ಬಿಂಬದ ಮಕ್ಕಳಿಂದ ಮಾಡಿಸಲಾಗಲಿಲ್ಲ. ನನ್ನ ಕಾರ್ಯಕ್ರಮ ಅಧಿಕಾರಿಯವರು ಒಪ್ಪಿಗೆ ಕೊಟ್ಟಿರುವುದು ಬಿಟ್ಟರೆ ಬೇರೆಲ್ಲಾ ಕೆಲಸ ನನಗೇ ಮಾಡಬೇಕಿತ್ತು. ನಮ್ಮ ಚಿಣ್ಣರಬಿಂಬದ ಮಕ್ಕಳು ಎಸ್. ಎಮ್. ಶೆಟ್ಟಿ. ಶಾಲೆ ಪೊವಾಯಿಯವರಾಗಿದ್ದು, ಶಾಲೆಯಿಂದ ನೇರವಾಗಿ ಯೂನಿಫಾರಂ ಧರಿಸಿಯೇ ಕಾರ್ಯಕ್ರಮ ಕೊಡಲು ಬಂದಿದ್ದರು. ಕನ್ನಡದ ಪ್ರಸಿದ್ಧ ಕವಿಗಳಾದ ಜಿ. ಎಸ್. ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿಯವರ ಭಾವಗೀತೆಗಳನ್ನು ಪಕ್ಕವಾದ್ಯಗಳ ಜೊತೆಗೆ ಬಹಳ ಸುಶ್ರಾವ್ಯವಾಗಿ ಹಾಡಿದರು. ರೆಕಾರ್ಡಿಂಗ್ ಮಾಡಿಕೊಂಡ ಸೀನಿಯರ್ ಇಂಜಿನಿಯರ್ಸ್ ಅವರೆಲ್ಲ ಎಲ್ಲಾ ಭಾಷೆಯ ಹಾಡುಗಳಿಗಿಂತ ಕನ್ನಡ ಸಾಂಗ್ಸ್ ಬಹಳ ಚೆನ್ನಾಗಿ ಆಯ್ತೆಂದಾಗ ನಾನು ಮಾಡಿದ ಕೆಲಸ ಸಾರ್ಥಕವಾಯ್ತೆಂದುಕೊಂಡೆ.

ಇನ್ನೊಮ್ಮೆ ಆಕಾಶವಾಣಿಯ ಸಣ್ಣ ಅಡಿಟೋರಿಯಂನಲ್ಲಿ ಲೈವ್ ಕವಿಗೋಷ್ಟಿ ಕಾರ್ಯಕ್ರಮ ಆಯೋಜಿಸಿದ್ದೆ. ಈ ಕಾರ್ಯಕ್ರಮದಲ್ಲಿ ಆರು ಜನ ಹಿರಿಕಿರಿಯ ಕವಿಗಳು ಭಾಗವಹಿಸಿದ್ದರು. ಬಿ. ಎಸ್. ಕುರ್ಕಾಲ್, ಶಿಮುಂಜೆ ಪರಾರಿ, ಮಧುಸೂದನ್ ರಾವ್, ಸಾದಯಾ, ಪೂರ್ಣಿಮಾ ಶೆಟ್ಟಿ ಮತ್ತು ಅನಿತಾ ಪೂಜಾರಿ ತಾಕೋಡೆ. ಕಾರ್ಯಕ್ರಮದ ನಿರೂಪಣೆಯನ್ನು ರಂಗನಟಿ ಅಹಲ್ಯಾ ಬಲ್ಲಾಳ್ ಅವರು ಬಹಳ ಅರ್ಥಪೂರ್ಣವಾಗಿ ಪ್ರಸ್ತುತ ಪಡಿಸಿದರು. ಈ ಕಾರ್ಯಕ್ರಮದ ಪ್ರೇಕ್ಷಕರಾಗಿ ಬಂದ ರಮಣ್ ಶೆಟ್ಟಿ ರೆಂಜಾಳ್ ಅವರು “ನೆರೆದಿದ್ದ ಕಾವ್ಯಪ್ರೇಮಿಗಳನ್ನು ಎರಡು ಗಂಟೆಗಳ ಅವಧಿಯಲ್ಲಿ ಒಂದು ಭಾವಪ್ರಧಾನವಾದ ಬೇರೆಯೇ ಕಾವ್ಯ ಪ್ರಪಂಚಕ್ಕೆ ಕೊಂಡೊಯ್ದ ಮುಂಬಯಿ ಆಕಾಶವಾಣಿಯ ಈ ಪ್ರಯೋಗ ಯಾವ ಹಂತದಲ್ಲೂ ನೀರಸವೆನಿಸದೇ ಸಾರ್ಥಕತೆ ಪಡೆದಿದೆಯೆಂದು ನನ್ನನಿಸಿಕೆ! ಆದರೂ ಎರಡನೇ ಸುತ್ತಿನ ಗೋಷ್ಟಿಯ ಬದಲು ಒಂದೇ ಆವರ್ತನದ ಗೋಷ್ಟಿಯನ್ನಾಗಿಸಿ ಇದೇ ಅವಧಿಗೆ ಅಧಿಕ ಸಂಖ್ಯೆಯ ಕವಿಗಳನ್ನು ಒಳಗೊಂಡರೆ ಇನ್ನಷ್ಟು ಆಸಕ್ತಿದಾಯಕವೂ ವೈವಿಧ್ಯಮಯವೂ ಆದೀತೆಂದು ನನ್ನ ಅಭಿಪ್ರಾಯ” ವೆಂದು ತಮ್ಮ ಅಭಿಪ್ರಾಯದ ಜೊತೆ ಕಾರ್ಯಕ್ರಮದ ಸುಂದರವಾದ ವರ್ಣನೆಯನ್ನು ತಮ್ಮ ಲೇಖನದ ಮೂಲಕ ಕರ್ನಾಟಕ ಮಲ್ಲ ಪತ್ರಿಕೆಯ ಮುಖಾಂತರ ಕನ್ನಡಿಗ ಓದುಗರಿಗೆಲ್ಲ ತಿಳಿಯುವಂತೆ ಮಾಡಿದರು. ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಕೂಡಾ ನನಗೆ ಆಕಾಶವಾಣಿಯಲ್ಲಾದ ಅಪೂರ್ವ ಅನುಭವ. ಕಾರ್ಯಕ್ರಮವನ್ನು ಆಯೋಜಿಸಲು ಮೇಲಧಿಕಾರಿಗಳಿಂದ ಒಪ್ಪಿಗೆ ಪಡೆದು ಸಮ್ಮತಿಸಿದ ವೀಣಾ ರಾಯ್ ಸಿಂಘಾನಿ ಮೇಡಂ ಅವರನ್ನು ಈ ಹೊತ್ತಿನಲ್ಲಿ ನೆನೆಯಲೇ ಬೇಕು.

ಬೇರೆಲ್ಲ ವಿಭಾಗದವರು ಹೊರಗಿನ ಧ್ವನಿಮುದ್ರಿತ (ಓ.ಬಿ. ರೆಕಾರ್ಡಿಂಗ್) ಕಾರ್ಯಕ್ರಮಗಳನ್ನು (ಸಂದರ್ಶನ, ಉಪನ್ಯಾಸ ಇತ್ಯಾದಿ) ಪ್ರಸಾರ ಮಾಡಲು, ಒಬ್ಬರು ಕಾರ್ಯಕ್ರಮ ಅಧಿಕಾರಿ ಮತ್ತು ಇಂಜಿನಿಯರ್ಸ್ ಜೊತೆ ರೆಕಾರ್ಡಿಂಗ್ ಮಾಡುವ ಜಾಗಕ್ಕೆ ಆಕಾಶವಾಣಿಯ ಗಾಡಿಯಲ್ಲೇ ಹೋಗುತ್ತಿದ್ದರು. ಹಾಗೇ ನಾನೂ ಕೂಡಾ ಕಾರ್ಯಕ್ರಮ ಅಧಿಕಾರಿಯವರ ಅನುಮತಿ ಪಡೆದುಕೊಂಡು ಮುಂಬಯಿ ಯೂನಿವರ್ಸಿಟಿಯ ಕನ್ನಡ ವಿಭಾಗದ ಕಾರ್ಯಕ್ರಮವನ್ನು ಅಲ್ಲಿಯ ಸಭಾಂಗಣದಲ್ಲಿ, ಮೈಸೂರು ಅಸೋಸಿಯೇಶನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಗಳನ್ನು ಅಲ್ಲಿಗೇ ಹೋಗಿ ಧ್ವನಿಮುದ್ರಿಸಿಕೊಂಡು ಬಂದು ಅನೇಕ ಕಂತುಗಳಲ್ಲಿ ಪ್ರಸಾರಗೊಳಿಸಿರುವೆ. ಹೊರಗಿನ ಕಾರ್ಯಕ್ರಮಗಳನ್ನು ರೆಕಾರ್ಡಿಂಗ್ ಮಾಡಲು ಹೋಗುವಾಗ ನಾನೊಬ್ಬಳೇ ಇಬ್ಬರು ಇಂಜೀನಿಯರ್ಸ್ ಅವರ ಜೊತೆ ಅಲ್ಲಿ ರೆಕಾರ್ಡಿಂಗ್ ಮಾಡಲು ಬೇಕಾಗುವ ಸಲಕರಣೆಗಳನ್ನೆಲ್ಲಾ ಸಂಯೋಜಿಸಿಕೊಂಡು ಆಕಾಶವಾಣಿಯ ಗಾಡಿಯಲ್ಲೇ ಹೋಗಿದ್ದೆ. ಆ ಸಮಯದಲ್ಲಿ ಬೆಳಗಿನಿಂದ ಸಂಜೆಯವರೆಗೂ ಅದೇ ಕೆಲಸವಾಗುತ್ತಿತ್ತು. ಮನೆಯಲ್ಲಿ ಬೆಳಿಗ್ಗೆ ಬೇಗ ಎದ್ದು ಎಲ್ಲಾ ಜವಾಬ್ದಾರಿಗಳನ್ನೂ ಮುಗಿಸಿ ಏಳು ಗಂಟೆಗೆ ಆಫೀಸಿಗೆ ಹೋಗುತ್ತಿದ್ದೆ. ಎಷ್ಟೇ ಕಷ್ಟವಾಗಲಿ ಕೆಲಸದ ಮೇಲಿನ ಆಸಕ್ತಿ ಕಿಂಚಿತ್ತೂ ಕಡಿಮೆಯಾಗಲಿಲ್ಲ.

2009, ಎಪ್ರಿಲ್ ತಿಂಗಳಲ್ಲಿ ಮಾಲತಿ ಮಾನೆ ಮೇಡಂ ನಿವೃತ್ತಿಯಾದರು. ಅದರ ನಂತರ ಅವರ ಗ್ರೂಪಿನವರ ಜೊತೆ ಬೆರೆಯುವುದನ್ನು ಕಡಿಮೆ ಮಾಡುತ್ತಾ ನನ್ನ ಜೊತೆ ಕೆಲಸ ಮಾಡುವ ಉದ್ಘೋಷಕಿಯರ ಜೊತೆ ಸೇರಿಕೊಂಡೆ. ಈ ಗ್ರೂಪಿನವರು ಸ್ವಚ್ಛಂದವಾಗಿ ಇದ್ದು, ಇಡೀ ಆಕಾಶವಾಣಿಯವರು ನಮ್ಮನ್ನು ಗಮನಿಸುವಂತಾಯಿತು. ಪ್ರತೀ ಮಂಗಳವಾರ ಗ್ರೂಪಿನವರೆಲ್ಲ ಒಟ್ಟಿಗೆ ಸೇರುತ್ತಿದ್ದೆವು. ಕೆಲಸಕ್ಕಾಗಿ ಬೇರೆ ದಿನಗಳಲ್ಲಿ ಬಂದರೂ ಮಂಗಳವಾರ ಎಲ್ಲರೂ ಸೇರುವುದು ಫಿಕ್ಸ್ ಆಗಿತ್ತು. ನಮ್ಮ ಪರಿಚಯದವರು ಮಂಗಳವಾರದ ದಿನ ಕೆಲವರು ಕಾಣಿಸದಿದ್ದರೆ ‘ಗ್ರೂಪ್ ಪೂರ್ಣ ನಾಹಿ ಝಾಲಿ’ ಅಂತ ತಮಾಷೆ ಮಾಡುತ್ತಿದ್ದರು. ನಮ್ಮ ಗ್ರೂಪಿನವರ ಜೊತೆ ಸೇರಿ ಮುಂಬಯಿಯ ಆಸುಪಾಸಿನ ಹಲವಾರು ಸ್ಥಳಗಳಿಗೆ ಭೇಟಿ ನೀಡಿದೆವು. ನಮ್ಮ ಊರಿಗೂ ಎಲ್ಲರೂ ಜೊತೆಯಾಗಿ ಬಂದಿದ್ದರು. ಏಳೆಂಟು ದಿವಸಗಳು ಇದ್ದು ಮುರ್ಡೇಶ್ವರ, ಶಿರಾಲಿ, ಇಡಗುಂಜಿ, ಕೊಲ್ಲೂರು, ಕೊಡಚಾದ್ರಿ, ಹೊರನಾಡು, ಉಡುಪಿ, ಮಲ್ಪೆ, ಕುಂದಾಪುರ, ಬೈಂದೂರಿನ ಆಸುಪಾಸುಗಳೆಲ್ಲಾ ಸುತ್ತಾಡಿ ಬಹಳ ಸಂಭ್ರಮಿಸಿದ್ದರು. ಅವರಿಗೆಲ್ಲ ಧರ್ಮಸ್ಥಳ, ಸುಬ್ರಮಣ್ಯಕ್ಕೂ ಹೋಗಲಿಕ್ಕಿದ್ದು, ಸಮಯ ಸಾಕಾಗದೇ ನಂತರ ನನ್ನ ಮಗನ ಮದುವೆಗೆ ಬಂದವರು ಅಲ್ಲಿಗೆಲ್ಲ ಹೋಗಿ ಬಂದರು. ಅವರಿಗೆಲ್ಲ ನಮ್ಮೂರು ಬಹಳ ಇಷ್ಟವಾಯಿತು. ಈ ಈ ಗುಂಪು ನನಗೆ ಮನೆಯ ಸದಸ್ಯರಷ್ಟೇ ಆಪ್ತವಾಗಿದೆ. ಒಬ್ಬರಿಗೊಬ್ಬರು ಕಷ್ಟ, ಸುಖ ಹಂಚಿಕೊಳ್ಳುತ್ತಿರುವುದರಿಂದ ಕೊರೋನಾ ಹರಡಿ ಲಾಕ್ಡೌನ್ ಆದ ಈ ಸಂದರ್ಭದಲ್ಲೂ ನಂಟು ಬಿಡದೇ ಅಂಟಿಕೊಂಡಿರುವಂತಾಗಿದೆ. ಹೀಗೆ ಬರೆಯುತ್ತಾ ಹೋದರೆ ಆಕಾಶವಾಣಿಯ ನೂರಾರು ಅನುಭವಗಳಿವೆ. ಆಕಾಶವಾಣಿಯಲ್ಲಿ ಕೆಲಸ ಮಾಡಿದ ಕ್ಷಣಗಳೆಲ್ಲ ನನ್ನ ಜೀವನದ ಸುಂದರ ಕ್ಷಣಗಳು.

ಹಚ್ಚೇವು ಕನ್ನಡದ ದೀಪ… ಕರುನಾಡ ದೀಪ… ಸಿರಿ ನುಡಿಯ ದೀಪ… ಒಲವೆತ್ತಿ ತೋರುವ ದೀಪ… ಎಂಬ ಡಿ. ಎಸ್. ಕರ್ಕಿಯವರ ಈ ಸಾಲುಗಳು ಎಷ್ಟೇ ವರ್ಷಗಳು ಕಳೆದರೂ ನಿತ್ಯವೂ ನವನವೀನವಾಗಿರುವ ಶಬ್ದಗಳಾಗಿವೆ. ಎಲ್ಲೇ ಇರು ಹೇಗೇ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ… ಎಂಬ ಕುವೆಂಪು ಅವರ ಮಾತುಗಳನ್ನು ಆಲಿಸುತ್ತಾ ಬಂದಿರುವ ನಾವೆಲ್ಲ ಕನ್ನಡಿಗರು ನಮ್ಮಿಂದಾದಷ್ಟು ಕನ್ನಡತನವನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವೆವು. ಹೊರನಾಡಾದ ಮುಂಬಯಿಯಲ್ಲಿ ನೂರಾರು ಸಂಘ ಸಂಸ್ಥೆಗಳಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ, ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ ಮುಂತಾದೆಡೆಗಳಲ್ಲಿ ಕನ್ನಡ ಸಂಸ್ಕೃತಿಯು ನಳನಳಿಸುತ್ತಿದೆ. ಹಾಗೆಯೇ ಸುಮಾರು ಎಪ್ಪತ್ತು ವರ್ಷಗಳಿಂದ ಮುಂಬಯಿ ಆಕಾಶವಾಣಿಯಲ್ಲಿ ಕನ್ನಡ ವಿಭಾಗದ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತಿತ್ತು. ಹೋದ ವರ್ಷ ಬಂದ ಮಹಾಮಾರಿ ಕೊರೋನಾದಿಂದಾಗಿ ಎಲ್ಲ ಚಟುವಟಿಕೆಗಳು ಲಾಕ್ ಡೌನ್ ಆದಾಗ ಎಪ್ರಿಲ್ ತಿಂಗಳು 2020ರಿಂದ ಆಕಾಶವಾಣಿಯ “ಸಂವಾದಿತ ವಾಹಿನಿ”ಯಲ್ಲಿ ಪ್ರಸಾರವಾಗುತ್ತಿರುವ ಹಿಂದಿ, ಗುಜರಾತಿ, ಕನ್ನಡ , ಸಿಂಧಿ, ಉರ್ದು… ಮುಂತಾದ ಭಾಷೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಕ್ಟೋಬರ್ ತಿಂಗಳು 2020 ನಂತರ ಜನಜೀವನ ನಿಧಾನವಾಗಿ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಮತ್ತೆ ನವೆಂಬರ್ ತಿಂಗಳು 2020 ರಂದು 2ನೇ ತಾರೀಖು ಶುರುವಾದ ಸಂವಾದಿತ ವಾಹಿನಿಯಲ್ಲಿ ಕನ್ನಡ, ಸಿಂಧಿ ಭಾಷೆಗಳ ಕಾರ್ಯಕ್ರಮಗಳನ್ನು ಹೊರತುಪಡೆಸಿ ಉಳಿದೆಲ್ಲಾ ಕಾರ್ಯಕ್ರಮಗಳು ಪ್ರಸಾರವಾಗಲಿದೆ ಎಂದು ಆಕಾಶವಾಣಿಯವರು ತಿಳಿಸಿದರು. ನಾನು 29.10.2020 ರಂದು ನಮ್ಮ ಕಾರ್ಯಕ್ರಮ ಅಧಿಕಾರಿಗಳಿಗೆ ಫೋನ್ ಮಾಡಿದಾಗ ಕನ್ನಡ ಕಾರ್ಯಕ್ರಮ ಬಂದ್ ಆಗಿದೆ ಎಂದು ತಿಳಿಸಿದರು. ಫೋನಲ್ಲಿ ಕೇಳಿದ ವಿಷಯ ಪ್ರತ್ಯಕ್ಷವಾಗಿ ಮನದಟ್ಟು ಮಾಡಲು 2.11.2020ರಂದು ಗುರುವಾರ ಆಕಾಶವಾಣಿಗೆ ಹೋಗಿ ಸಂವಾದಿತ ವಾಹಿನಿ ಕಾರ್ಯಕ್ರಮ ನೋಡಿಕೊಳ್ಳುತ್ತಿರುವ ಎಡಿಪಿ ಸರ್ ಅವರಲ್ಲಿ ವಿಚಾರಿಸಿದಾಗ ದೆಹಲಿಯಿಂದ ಆರ್ಡರ್ ಬಂದಿದೆ. ನಮಗೇನೂ ಮಾಡಲು ಸಾಧ್ಯವಿಲ್ಲ. ಪುನಃ ಪ್ರಾರಂಭ ಮಾಡಲು ಅನುಮತಿ ಸಿಕ್ಕಿದರೆ ತಿಳಿಸುವೆ ಎಂದರು.

ಕಳೆದ 17 ವರ್ಷಗಳ ಆಕಾಶವಾಣಿಯ ನಂಟು, ಕನ್ನಡ ಭಾಷೆಯ ಮೇಲಿನ ಪ್ರೀತಿ ನನ್ನನ್ನು ಸುಮ್ಮನಿರಗೊಡಲಿಲ್ಲ. ಅಲ್ಲಿಂದಲೇ ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ಜಿ. ಎನ್. ಉಪಾಧ್ಯ ಸರ್, ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಡಾ. ಭರತ್ ಕುಮಾರ್ ಪೊಲಿಪು ಇವರೆಲ್ಲರನ್ನೂ ಫೋನ್ ಮುಖಾಂತರ ಸಂಪರ್ಕಿಸಿ ಈ ವಿಷಯವನ್ನು ತಿಳಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಉಪಾಧ್ಯ ಸರ್ ಅವರು ಎಲ್ಲಾ ವಿದ್ಯಾರ್ಥಿ ಮಿತ್ರರಿಗೂ, ಮಾಧ್ಯಮದವರಿಗೂ ಕೆಲವು ಸಂಘ, ಸಂಸ್ಥೆಗಳಿಗೂ ತಿಳಿಸಿ ಎಲ್ಲರೂ ಒಟ್ಟಾಗಿ ಮುಂಬಯಿ ಆಕಾಶವಾಣಿಯಲ್ಲಿ ಕನ್ನಡ ವಿಭಾಗದ ಕಾರ್ಯಕ್ರಮ ಉಳಿಸುವ ಸಲುವಾಗಿ ಹೋರಾಡಬೇಕು. ಒಮ್ಮೆ ಬಂದ್ ಮಾಡಿದ ಕನ್ನಡ ವಿಭಾಗವನ್ನು ಪುನಃ ಅವರೇ ಪ್ರಾರಂಭಿಸುವುದಿಲ್ಲ ಎಂದು ಎಲ್ಲರಿಗೂ ತಿಳಿಸಿ ತಾವೇ ಮೊದಲು ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖಾಂತರ ಪತ್ರವನ್ನು ಕಳುಹಿಸುವ ವ್ಯವಸ್ಥೆಯನ್ನು ಮಾಡಿದರು. ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ ಹೊಂದಿರುವ ವಿದ್ಯಾರ್ಥಿ ಮಿತ್ರರಾದ ಡಾ. ದಿನೇಶ್ ಶೆಟ್ಟಿ ರೆಂಜಾಳ್ ಅವರು ಉದಯವಾಣಿ ಪತ್ರಿಕೆಯ ಸಂಪಾದಕರಾಗಿದ್ದು ಈ ಅಭಿಯಾನವನ್ನು ಮುಂದುವರಿಸಲು ಟೊಂಕ ಕಟ್ಟಿದರು. ಆಗಿನಿಂದಲೇ ನನಗೆ ಫೋನ್ ಮಾಡಿ ಕನ್ನಡ ವಿಭಾಗದ ಕಾರ್ಯಕಲಾಪಗಳ ಕುರಿತು ಕೂಲಂಕುಷವಾಗಿ ವಿಚಾರಿಸಿ, ಆಕಾಶವಾಣಿಯ ನಂಟಿರುವ ಹಿರಿಯರನೇಕರಿಗೆ ಕರೆ ಮಾಡಿ ಅವರಿಂದಲೂ ಮಾಹಿತಿಗಳನ್ನು ಪಡೆದುಕೊಂದು ಮರುದಿನದ ಉದಯವಾಣಿ ಪತ್ರಿಕೆಯಲ್ಲಿ ಸವಿಸ್ತಾರವಾಗಿ ಪ್ರಕಟಿಸಿದರು. ಅಲ್ಲದೇ ಕನ್ನಡ ವಿಭಾಗದ ವಿದ್ಯಾರ್ಥಿ ಮಿತ್ರರು, ಕನ್ನಡ ಪ್ರೇಮಿಗಳಾದ ಅನೇಕರು ಪತ್ರ ಮುಖೇನ, ಇಮೇಲ್, ಟ್ವಿಟ್ಟರ್, ಫೆÇೀನ್ ಮುಖಾಂತರ ಮುಂಬಯಿ ಆಕಾಶವಾಣಿಯ ಮುಖ್ಯಸ್ಥರಿಗೆ, ದೆಹಲಿಯ ಕೆಲವು ಅಧಿಕಾರಿಗಳೊಡನೆ ಈ ವಿಷಯವಾಗಿ ಸ್ಪಂದಿಸಿದರು. ಇವುಗಳನ್ನೆಲ್ಲ ಅವಲೋಕಿಸಿದಾಗ ಇನ್ನೇನು ಕನ್ನಡ ವಿಭಾಗದ ಕಾರ್ಯಕ್ರಮ ಶುರುವಾಗಬಹುದು ಎಂದು ನಿರೀಕ್ಷಿಸಿದರೆ ಇಂದಿನವರೆಗೂ ಕನ್ನಡ ವಿಭಾಗದ ಕಾರ್ಯಕ್ರಮ ಪುನಃ ಪ್ರಸಾರವಾಗುವ ಸೂಚನೆ ಕಾಣುತ್ತಿಲ್ಲ. ಕಳೆದ ಎಪ್ಪತ್ತು ವರ್ಷಗಳಿಂದಲೂ ಹೆಚ್ಚು ಸಮಯದಿಂದ ಮುಂಬಯಿ ಆಕಾಶವಾಣಿಯಲ್ಲಿ ಕನ್ನಡ ಕಾರ್ಯಕ್ರಮ ಪ್ರಸಾರವಾಗುತ್ತಿರುವುದು ಈಗ ಇತಿಹಾಸವಾಗಿದೆ. ಕನ್ನಡವನ್ನು ಉಳಿಸಲೋಸುಗ ಮುಂಬಯಿ ಕನ್ನಡಿಗರು, ಸಂಘ ಸಂಸ್ಥೆಗಳು ಎಲ್ಲಾ ನಿಟ್ಟಿನಲ್ಲಿ ಶ್ರಮಿಸುತ್ತಿರುವಾಗ ಮುಂಬಯಿ ಆಕಾಶವಾಣಿಯಲ್ಲಿ ಕನ್ನಡ ಕಾರ್ಯಕ್ರಮ ಪುನಃ ಪ್ರಾರಂಭವಾಗಿ, ನಿರಂತರ ಮುಂದುವರಿಯಲಿ ಇದಕ್ಕಾಗಿ ತಾವೆಲ್ಲ ಕನ್ನಡ ಪ್ರೇಮಿಗಳ ಪೆÇ್ರೀತ್ಸಾಹವಿರಲಿ ಎಂದು ವಿನಂತಿಸುತ್ತೇನೆ.