ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾಗ್ನಿ ಕಾರ್ಲ್ಸನ್ ಎಂಬ ಸೂಪರ್ ಸ್ಫೂರ್ತಿ

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಮೊನ್ನೆ ಮೊನ್ನೆ ಮಾರ್ಚ್ ಇಪ್ಪತ್ನಾಲ್ಕಕ್ಕೆ  ಸ್ಟಾಕ್ ಹೋಂ ನ  ಓರ್ವ ಮಹಿಳೆ ತೀರಿಕೊಂಡಳು. ಅದರಲ್ಲೇನು ವಿಶೇಷ ಅಂತೀರಾ.. ಆಕೆಗೆ ಬರೋಬ್ಬರಿ ನೂರಾ ಒಂಬತ್ತು ವರ್ಷ ವಯಸ್ಸಾಗಿತ್ತು. ಆಕೆ ಓರ್ವ ಬ್ಲಾಗರ್ ಆಗಿದ್ದಳು. ಅದೆಲ್ಲ ಸರಿ. ಅಚ್ಚರಿಯ ವಿಷಯ ಏನು ಗೊತ್ತೇ .. ? ಆಕೆ ಬ್ಲಾಗ್ ಶುರು ಮಾಡಿದ್ದು ತನ್ನ ನೂರನೇ ವಯಸ್ಸಿಗೆ. ಕಂಪ್ಯೂಟರ್ ಕೋರ್ಸ್ ಗೆ ಸೇರಿಕೊಂಡಿದ್ದು ತನ್ನ ೯೯ ನೆ ವಯಸ್ಸಿಗೆ..!. ಈಗ ನಿಧಾನವಾಗಿ ನಿಮ್ಮ ಪರಿಚಿತ, ಸಂಬಂಧಿ ಹಿರಿಯರನ್ನು ಕಣ್ಣು ಮುಂದೆ ತಂದುಕೊಳ್ಳಿ. ಅವರೆಲ್ಲ ಖಂಡಿತ ಡ್ಯಾಗ್ನಿ ಗಿಂತ ವಯಸ್ಸಲ್ಲಿ ತುಂಬಾ  ಚಿಕ್ಕವರೇ ಆಗಿರುತ್ತಾರೆ. ಆದರೆ, ಹೊಸದು ಕಲಿಯಲು, ಆರಂಭಿಸಲು ಈಗ ತುಂಬಾ  ಲೇಟ್ ಆಯ್ತು,  ವಯಸ್ಸಾಯ್ತು ಬಿಡ್ರೀ ಅಂತೇನಾದ್ರೂ ಎಂದರೆ ಕೂಡಲೇ ಈ ಡ್ಯಾಗ್ನಿ ಕಾರ್ಲ್ಸನ್ ಬಗ್ಗೆ ಕೊಂಚ ತಿಳಿಸಿ ಬಿಡಿ.

ಆಕೆ ತನ್ನ  ಬ್ಲಾಗ್ ನಲ್ಲಿ ಸುತ್ತ ಮುತ್ತ ಕಂಡ ವಿಷಯಗಳ ಬಗ್ಗೆ ಆಸಕ್ತಿಕರವಾಗಿ, ಅಚ್ಚುಕಟ್ಟಾಗಿ ಬರೆಯುತ್ತಾಳೆ. ಜಗತ್ತಿನ ಅತ್ಯಂತ ಹಿರಿಯ ಬ್ಲಾಗರ್ ಖ್ಯಾತಿಯ ಈಕೆಗೆ ಪ್ರಪಂಚದಾದ್ಯಂತ  ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರಿದ್ದಾರೆ.  ಅಭಿಮಾನಿ ಓದುಗರಿಂದ ಆಕೆಗೆ ಅಸಂಖ್ಯ ಪತ್ರಗಳು, ಹೂಗುಚ್ಛಗಳು, ಉಡುಗೊರೆಗಳ ಮಹಾಪೂರವೇ ಹರಿದು ಬರುತಿತ್ತು. ತನ್ನ ನೂರಾ ಆರನೇ ವಯಸ್ಸಿನ ಹುಟ್ಟಿದ ಹಬ್ಬಕ್ಕೆ ಹಂಗೇರಿಗೆ ಪ್ರವಾಸ ಹೋಗಿ ಬಂದಿದ್ದಳು. ತೀರಾ ಇತ್ತೀಚಿಗೆ ಕಿವಿ ಕೇಳುವ ಮಷೀನ್ ಉಪಯೋಗಿಸಿದ್ದು ಬಿಟ್ಟರೆ  ಹೇಳಿಕೊಳ್ಳುವಂತ ಕಾಯಿಲೆ ಕಸಾಲೆಗಳಿಲ್ಲ.  ಒಂಟಿಯಾಗಿ ತನ್ನ ವಿಶಾಲವಾದ ಫ್ಲಾಟ್ ನಲ್ಲಿ ವಾಸ ಮಾಡುತ್ತಿದ್ದಳು. ತುರ್ತು ಸಹಾಯಕ್ಕಾಗಿ ಅಲಾರ್ಮ್ ಬ್ರೇಸ್ ಲೆಟ್  ಕೈಗೆ ಧರಿಸಿರುತ್ತಿದ್ದಳು. ಮನೆ ಸ್ವಚ್ಚ ಗೊಳಿಸುವುದು ಒಂದು ಬಿಟ್ಟರೆ ಹೆಚ್ಚು ಕಮ್ಮಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ರೂಢಿ ಇಟ್ಟುಕೊಂಡಿದ್ದಳು. ಒಂದು ವರ್ಷದ ಹಿಂದಷ್ಟೇ ನರ್ಸಿಂಗ್ ಹೋಂ ಗೆ ವಾಸ್ತವ್ಯವನ್ನು ಬದಲಿಸಿದ್ದಳು.

 ಪ್ರತಿ ರಾತ್ರಿ ಆಕೆ ಬ್ಲಾಗ್ ನಲ್ಲಿ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಳು. ಸ್ಪೂರ್ತಿಯ ಸೆಲೆಯಾಗಿ, ಮಾದರಿಯಾಗಿ,ಪ್ರಭಾವ ಬೀರುವಲ್ಲಿ ಆಕೆ ಸ್ವೀಡನ್ ಉದ್ದಕ್ಕೂ  ಜನಪ್ರಿಯಳಾಗಿದ್ದಳು. ಸ್ವೀಡನ್ನಿನ ಅರಸ ಕುಟುಂಬ  ಈಕೆಯನ್ನು ತಮ್ಮ  ಅರಮನೆಗೆ ವಿಶೇಷ ಅತಿಥಿಯಾಗಿ ಆಹ್ವಾನಿಸಿತ್ತು.. ಅನೇಕ  ಟಿವಿ ಕಾರ್ಯಕ್ರಮಗಳಲ್ಲಿ, ಸಾಕ್ಷ್ಯ ಚಿತ್ರಗಳಲ್ಲಿ ಅಷ್ಟೇ ಏಕೆ ತನ್ನ ನೂರಾ ಒಂದನೇ ಇಸವಿಯಲ್ಲಿ ಚಲನ ಚಿತ್ರದ ಒಂದು ಚಿಕ್ಕ ಪಾತ್ರದಲ್ಲಿ ಕೂಡ ನಟಿಸಿದ್ದಾಳೆ. 

ಸಾಮಾಜಿಕ ಸಂದೇಶಗಳಿಗೆ, ವಿಶೇಷವಾಗಿ ವೃದ್ಧಾಪ್ಯ ಶಾಪವಲ್ಲ ಎಂಬುದಕ್ಕೆ ದೃಷ್ಟಾಂತವಾಗಿರುವ ಆಕೆ ಮೀ ಟೂ ಅಂದೋಲನ ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಗಳಿಗೆ  ಬೆಂಬಲಿಸಿ ಬರೆದಿದ್ದಳು.

ತನ್ನ ಒಡ ಹುಟ್ಟಿದವರೊಂದಿಗೆ ಬಲ ತುದಿಯಲ್ಲಿ ಡ್ಯಾಗ್ನಿ ಕಾರ್ಲಸನ್   

   ನಿಮ್ಮ ದೀರ್ಘಾಯುಷ್ಯದ ಗುಟ್ಟೇನು ಎಂದು ಕೇಳಿದರೆ ಅದು ಅನುವಂಶಿಕತೆಯ ಜೊತೆಗೆ ಮುಖ್ಯವಾಗಿ ತನಗೆ ಜೀವನದ ಬಗ್ಗೆ ಸದಾ ಇರುವ ಕುತೂಹಲ ಹಾಗೂ ಧನಾತ್ಮಕ ಆಗುಹಗಳಿಗೆ ಎದುರು ನೋಡುವ ಪ್ರವೃತ್ತಿ ಎನ್ನುತ್ತಾಳೆ. ಆಕೆ ಪ್ರಸ್ತುತ ಕ್ಷಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜೀವಿಸಲು ಇಷ್ಟಪಡುತ್ತಾಳೆ. 

 ಡ್ಯಾಗ್ನಿ ಕಾರ್ಲ್ಸನ್ ಹುಟ್ಟಿದ್ದು ಇಸವಿ ೧೯೧೨ ರಲ್ಲಿ. ಅವಳು ಹುಟ್ಟಿದ ವರ್ಷ ಟೈಟಾನಿಕ್ ಮುಳುಗಿತ್ತು.  ಎರಡು ಜಾಗತಿಕ  ಮಹಾ ಯುದ್ಧಗಳನ್ನು ಕಂಡಿದ್ದಾಳೆ. ಮಾನವ ಚಂದ್ರ ಗೃಹಕ್ಕೆ ಹೋದದ್ದು. ಗುದ್ದಲಿಯಿಂದ ಯಂತ್ರದವರೆಗೆ ತಂತ್ರಜ್ಞಾನ ಕ್ರಾಂತಿ ಹಾಗೂ ಇತ್ತೀಚಿನ ಇನ್ಸ್ಟಾ ಗ್ರಾಂ ವರೆಗೂ ಕಾಲ ಕ್ರಮೇಣ ಬದಲಾದದ್ದೂ ಗೊತ್ತು. ಕೋವಿದ್ ಯುಗವನ್ನೂ ನೋಡಿದ್ದಾಳೆ. ಸ್ವೀಡನ್ ನಲ್ಲಿ ಆಗಿ ಹೋದ ೨೬ ಪ್ರಧಾನಿಗಳನ್ನು ಕಂಡಿದ್ದಾಳೆ.   

 ಸಾಮಾನ್ಯ ಬಾಲ್ಯ ಕಳೆದ ಆಕೆಗೆ ಅಜ್ಜಿ ಮರ್ಲಿನ್ ಸದಾ  ಆದರ್ಶ. ಅವಳ ಅಜ್ಜಿ ತನ್ನ  ಮೂವತ್ತನೇ  ವಯಸ್ಸಿನಲ್ಲಿ ಐದು ಮಕ್ಕಳ ವಿಧವೆ ಆಗಿದ್ದವಳು. ಯಾವುದೇ ಬಾಹ್ಯ ಸಹಕಾರ ಇಲ್ಲದೇ ಒಂಟಿಯಾಗಿ  ತಾನೇ ದುಡಿದು ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಿದ ದಿಟ್ಟ ಮಹಿಳೆ ಅವಳ ಅಜ್ಜಿ. ಆಕೆ ಹೇಳುತ್ತಿದ್ದ ಜೀವನ  ಮಂತ್ರಗಳನ್ನು  ಡ್ಯಾಗ್ನಿ  ನೆನೆಸಿಕೊಳ್ಳುತ್ತಾಳೆ. ಜೀವನದಲ್ಲಿ ಸದಾ ಸಂತಸದಲ್ಲಿರು,ಅತ್ಯಂತ ಕುತೂಹಲಿಯಾಗಿರು ಮತ್ತು ನಿರ್ಭೀತವಾಗಿರು. ಒಂದು ವೇಳೆ ದೊಡ್ಡ ಕಷ್ಟ, ಬಿಕ್ಕಟ್ಟು ಎದುರಾದರೆ ಒಮ್ಮೆಲೇ ಆಘಾತಕ್ಕೊಳಗಾಗುವ  ಬದಲು ಮುಂದೆ ಏನು ಮಾಡಬಹುದು ಎಂಬ ಯೋಚಿಸುವ ನಿಟ್ಟಿಗೆ ಗಮನ ಕೊಡು ಎಂಬುದು.

   ಡ್ಯಾಗ್ನಿ  ಮೊದಲು ಒಂದು ಶರ್ಟ್ ಕಾರ್ಖಾನೆಯಲ್ಲಿ ಹೊಲಿಗೆ ಕೆಲಸಕ್ಕೆ ಸೇರಿಕೊಂಡಿದ್ದಳು. ನಂತರ ಸಾಮಾಜಿಕ ವಿಮಾ ಕಚೇರಿಯಲ್ಲಿ ಬಹುಕಾಲ ಕೆಲಸ ಮಾಡಿ ನಿವೃತ್ತಿ ಹೊಂದಿದವಳು. ಮೊದಲ ಗಂಡನ ಜೊತೆಗೆ ಬದುಕು ಸುಖದಾಯಕವಾಗಿರಲಿಲ್ಲ. ಆತನ ಕುಡಿತ, ಗ್ಯಾಂಬ್ಬ್ಲಿಂಗ್ ಇತ್ಯಾದಿಗಳಿಂದ ರೋಸಿ ಪ್ರತ್ಯೆಕಗೊಂಡಿದ್ದಳು. ತನ್ನ ಮೂವತ್ತೊಂಬತ್ತನೆಯ ವಯಸ್ಸಿನಲ್ಲಿ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿ ಅಂಗಡಿಯಿಟ್ಟುಕೊಂಡಿದ್ದ  ಹ್ಯಾರಿಯನ್ನು ಮದುವೆಯಾಗಿ ಸುಮಾರು ೫೩ ವರ್ಷ ಒಟ್ಟಿಗೆ ನೆಮ್ಮದಿಯ ಸಂಸಾರ ನಡೆಸಿದವಳು.  ಈಕೆಯ ಗಂಡ ಹ್ಯಾರಿ ತನ್ನ ತೊಂಬತ್ತೊಂದನೆಯ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ  ತೀರಿಕೊಂಡಿದ್ದ. ಹ್ಯಾರಿ ತೀರಿಕೊಂಡಾಗ ತಾನು ಕೂಡ ಮೂರು ದಿನಗಳಲ್ಲಿ ಸಾಯಬಹುದು ಅನ್ನಿಸಿದವಳಿಗೆ ಬದುಕು ಮತ್ತೆ ಮುನ್ನಡೆಸಿತು. ಅಂದ ಹಾಗೆ ಆಕೆಗೆ ಮಕ್ಕಳಿರಲಿಲ್ಲ.

     ದಿನಚರಿಯಲ್ಲಿ ಸಾಮಾನ್ಯವಾಗಿ ಊಟವಾದ ಮೇಲೆ ನಲವತ್ತು ನಿಮಿಷ ನಡೆಯುತ್ತಾಳೆ. ದಿನಪತ್ರಿಕೆಯತ್ತ ಕಣ್ಣು ಹಾಯಿಸುತ್ತಾಳೆ. ಕ್ರಾಸ್ ವರ್ಡ್ ಪರಿಹರಿಸುವುದು ಅವಳ ಹವ್ಯಾಸ. ಸಾಹಿತ್ಯ ಓದುವುದರಲ್ಲಿ ಅತೀವ ಆಸಕ್ತಿ. ತಾನು ಈ ವರೆಗೆ  ಬರೆದ ಒಂದು ಪುಸ್ತಕದಿಂದ ಬಂದ ದುಡ್ಡನ್ನು ಕ್ಯಾನ್ಸರ್ ಫೌ೦ಡೇಷನ್ ಗೆ ದಾನವಾಗಿ ಕೊಟ್ಟಿದ್ದಳು.  ‘104 ರಲ್ಲಿ  ಡ್ಯಾಗ್ನಿ ಕಂಡಂತೆ ಬದುಕು’ ಎಂಬ ಪುಸ್ತಕ ಒಬ್ಬ ಪತ್ರಕರ್ತ ಬರೆದು 2004ರಲ್ಲಿ ಪ್ರಕಟವಾಗಿತ್ತು.  ಅಷ್ಟೇ ಅಲ್ಲ ತನ್ನ ಮನೆ ಹಾಗೂ ಬೆಲೆ ಬಾಳುವ ಪೇಂಟಿಂಗ್ ಗಳನ್ನೂ ಆಕೆ ಫೌಂಡೇಶನ್ ಹೆಸರಿಗೆ ಬರೆದಿದ್ದಾಳೆ.

   ನೀವು ಕೂಡ ಸಮಯ ಇದ್ದರೆ ಆಕೆಯ ಬ್ಲಾಗ್ ಗೆ ಭೇಟಿ ಕೊಡಿ. (https://www.123minsida.se/Bojan/) ಆನ್ಲೈನ್  ಇಂಗ್ಲಿಷ್ ಗೆ ಅನುವಾದಿಸಿ ಆಕೆಯ ಪೋಸ್ಟ್ನ ಗಳನ್ನು  ಓದಬಹುದು. ಈ ವರ್ಷದ ಜನವರಿ ಯಲ್ಲಿ ಮುಂಬರುವ ನೂರಾ ಹತ್ತನೆಯ ಹುಟ್ಟು ಹಬ್ಬದ ಪಾರ್ಟಿಯ ಬಗ್ಗೆ ಬರೆದಿದ್ದಳು.  ಆಕೆಯ ಪೋಸ್ಟ್ ಇತ್ತು. ನಂತರ ಆಕೆಗೆ ಹತ್ತಿರವಾಗಿದ್ದ ಕಿರಿಯ ಗೆಳತಿ ಎಲೆನಾ ಕೆಲವು ಪೋಸ್ಟ್ ಹಾಕಿದ್ದಳು. 

ಜೀವನ ಅಸ್ಥೆಯ ಬಗ್ಗೆ ನಾವು ಹೇಗಿರಬೇಕು ಎಂಬುದಕ್ಕೆ ಡ್ಯಾಗ್ನಿ ಒಂದು ಪ್ರಾಯೋಗಿಕ ಮಾದರಿ ಹಾಗೂ ಸ್ಫೂರ್ತಿ.