ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಣ್ಣೀರಾದ ಕೆರೆ

ರೋಹಿಣಿ ಸತ್ಯ
ಇತ್ತೀಚಿನ ಬರಹಗಳು: ರೋಹಿಣಿ ಸತ್ಯ (ಎಲ್ಲವನ್ನು ಓದಿ)

ತೆಲುಗು ಮೂಲ : ಎಂ ವಿ ರಾಮಿರೆಡ್ಡಿ  ಅನುವಾದ : ರೋಹಿಣಿ ಸತ್ಯ   


ಮಧ್ಯಾಹ್ನ…ಬೆಂಕಿಯಲ್ಲಿ ಸುಡುತ್ತಿರುವ ಮಡಕೆಯಂತೆ, ಹಬೆಯಾಡುತ್ತಿರುವ ದೋಸೆಯ ಕಾವಲಿಯಂತೆ ಇದೆ. ಆಷಾಡಮಾಸವನ್ನು ಆಹ್ವಾನಿಸುವ ಮುನ್ನವೇ ಜೇಷ್ಟ್ಯ ಉಗ್ರರೂಪ ತೋರುತ್ತಿದೆ. ಊರು ಊರೆಲ್ಲಾ ಬಾಯಾರಿ ಕಂಗೆಟ್ಟಿದೆ. ನಾಲಕ್ಕು ಮೈಲಿ ನಡೆದು, ಬಿಂದಿಗೆ ನೀರನ್ನು ತಲೆಯ ಮೇಲೆ ಹೊತ್ತು ತರುವಷ್ಟರಲ್ಲಿ ನಿತ್ರಾಣ ಆವರಿಸುತ್ತಿದೆ. ಹಿರಿ ಜೀವಗಳು ಹಾರಿಹೋಗುತ್ತಿವೆ.

ಇಸವಿ ನೆನಪಿದೆ, ೧೮೨೬ ಪಟ್ಟಣಕ್ಕೆ ದೂರದಲ್ಲೇ ಇದ್ದ ಈ ಕುಗ್ರಾಮದ ಮೇಲೆ ಮೊಘಲಾಯಿಗಳ ಕರುಣೆ ಬೀಳುವ ಅವಕಾಶವಿಲ್ಲದ ದುರ್ಭರ ಕಾಲ. ಅಂದರೇ, ಸರಿ ಸುಮಾರು ಎರಡು ಶತಾಬ್ದಗಳ ಹಿಂದೆ ಸಿದ್ಧಪ್ಪ ತಲೆಗೆ ತುಂಡು ಸುತ್ತಿ ಇಲ್ಲಿ ಮೊದಲ ಹಾರೆ ಏಟು ಹಾಕಿದ. ಊರಿನ ಜನರೆಲ್ಲಾ ಒಟ್ಟಾಗಿ ಬಂದು ಅವನನ್ನು ಹುಚ್ಚನನ್ನು ನೋಡುವಂತೆ ನೋಡಿದರು. “ಸಾಯ್ತಿರಾ? ಗುಟುಕು ನೀರಿಲ್ಲದೇ ಗುಂಪು ಗುಂಪಾಗಿ ಸ್ಮಶಾನಕ್ಕೆ ಹೋಗ್ತೀರಾ”? ಇನ್ನು ವಾರ ಹತ್ತು ದಿನಗಳಲ್ಲಿ ಮಳೆ ಶುರುವಾಗುತ್ತೆ. ಚಿಕ್ಕ ಹೊಂಡವನ್ನು ಅಗೆದರೇ ಕನಿಷ್ಠಪಕ್ಷ ಮಳೆಗಾಲದಲ್ಲಾದರೂ ನೀರಿನ ಬರ ಇರುವುದಿಲ್ಲ. ತಮಾಷೆ ನೋಡೋದು ಬಿಟ್ಟು, ಹಾರೆ ಸನಿಕೆ ಹಿಡೀರಿ” ಆಜ್ಙಾಪಿಸುವಂತೆ ಹೇಳಿದ.

ಒಬ್ಬೊಬ್ಬರಾಗಿ, ಪಡ್ಡೆ ಹುಡುಗರು ಅಗೆಯುತ್ತಿದ್ದರೆ, ಗಂಡಸರು ಮಣ್ಣನ್ನು ತೆಗೆಯುತ್ತಿದ್ದರು. ಹೆಂಗಸರು ಅದನ್ನು ದಂಡೆಗೆ ಹೊರುತ್ತಿದ್ದರೆ ಕೆಲಸಮಾಡಿ ಸುಸ್ತಾದವರಿಗೆ ಮಕ್ಕಳು ಜಜ್ಜಿಹೋದ ಲೋಟಗಳಲ್ಲಿ ಕುಡಿಯುವ ನೀರನ್ನು ಕೊಡುತ್ತಿದ್ದರು.

ಸುಡುವ ಬಿಸಿಲನ್ನು ಕಡೆಗಾಣಿಸಿ ಅಗೆಯುತ್ತಲೇ ಇದ್ದರು. ವಾರವಾಯಿತು. ದೊಡ್ಡ ಹೊಂಡವೊಂದು ಸಿದ್ಧವಾಯಿತು. ಹನ್ನೊಂದನೇ ದಿನ ಮೋಡಗಳು ಆರ್ಭಟಿಸಿದವು. ಸಣ್ಣಗೆ ಶುರುವಾದ ಮಳೆ ನೋಡ ನೋಡುತ್ತಿದ್ದಂತೆ ರಭಸವಾಯಿತು. ಎಲ್ಲರು ಜನಪದ ಹಾಡುಗಳನ್ನ ಹಾಡುತ್ತಾ ಕುಣಿದಾಡಿದರು. ಮಳೆಯಲ್ಲಿ ತೋಯ್ದು ಮುದ್ದೆಯಾದರು. ಬಿಡುವಿಲ್ಲದೇ ಒಂದು ವಾರ ಸುರಿದ ಮಳೆಗೆ ಆ ಹೊಂಡ ತುಂಬಿತು. ಸಿದ್ಧಪ್ಪನ ಸಂಕಲ್ಪ ಈಡೇರಿ ಊರಿನ ಬಾಯಾರಿಕೆ ನೀಗಿತು. ಮುಂದಿನ ವರುಷ ಮತ್ತಷ್ಟು ಅಗೆದರು.

ಹಾಗೆ ಆ ಜನ ಸಮೂಹ ಮೂರು ನಾಲಕ್ಕು ವರುಷ ಬೆವರು ಬಸಿದ ಫಲವಾಗಿ ನಾನು ಹುಟ್ಟಿದೆ. ಕಣ್ಣೆದುರು ಪ್ರತ್ಯಕ್ಷವಾದ ಆ ಜಲರಾಶಿಯನ್ನು ಕಂಡು ಜನ ಹಿರಿಹಿರಿ ಹಿಗ್ಗಿದರು. ಸಿದ್ದಪ್ಪನ ಕೆರೆಯೆಂದು ನಾಮಕರಣ ಮಾಡಿದರು.

ನನ್ನನ್ನು ನಂಬಿ ನನಗೆ ಜನ್ಮ ನೀಡಿದ ಜನರ ಬಾಯಾರಿಕೆಯನ್ನು ನೀಗಿಸಿದೆ. ಹೆಂಗೆಳೆಯರು ಸೊಂಟದಿ ಬಿಂದಿಗೆಯಲ್ಲಿ, ಗಂಡಸರು ಕಾವಡಿಯಲ್ಲಿ ಕೆಲವರು ಕುದುರೆಯ ಗಾಡಿಗಳಮೇಲೆ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು. ಸ್ನಾನ ಮಾಡಲೂ ಸಹ ನೀರನ್ನು ಒದಗಿಸುವಷ್ಟು ಗಟ್ಟಿಯಾದೆ. ನನ್ನ ದೇಹವನ್ನು ಸುತ್ತುವರಿದ ದಂಡೆಯನ್ನು ಮತ್ತಷ್ಟು ಭದ್ರಪಡಿಸಿದರು ಗಿಡಗಳನ್ನು ನೆಟ್ಟಿದರು ಕಲ್ಲು ಬೆಂಚುಗಳನ್ನು ಹಾಕಿದರು.
ಸಂಜೆಯಾದರೇ ಹಿರಿಯರು ಕೂತು ವಿಶ್ರಮಿಸಿದರೇ ಮಕ್ಕಳು ಆಟವಾಡುತ್ತಿದ್ದರು.
ನೋಡುತ್ತಿದ್ದಂತೆ ವರುಷಗಳು ಉರುಳಿದವು. ದಶಾಬ್ದಗಳು ಕಳೆದವು. ಪೀಳಿಗೆಗಳು ಬದಲಾದವು. ಒಂದು ಶತಾಬ್ದ ಕಾಲಗರ್ಭದಲ್ಲಿ ಸೇರಿಹೋಯಿತು. ಬಿಳಿಯರನ್ನು ಓಡಿಸುವ ಹೋರಾಟಗಳು ದೇಶವ್ಯಾಪ್ತವಾಗಿ ವೇಗವನ್ನು ಪಡೆದುಕೊಂಡವು.

ನನಗೆ ಚೆನ್ನಾಗಿ ನೆನಪಿದೆ. ಅವ ದಿನವೂ ಸಂಜೆ ೫ ಗಂಟೆಗೆ ನನ್ನ ಬಳಿ ಬರುತ್ತಿದ್ದ. ದಂಡೆಯಮೇಲೆ ಕುಳಿತು ನನ್ನ ಒದ್ದೆಯಾದ ದೇಹವನ್ನು ತದೇಕಚಿತ್ತದಿಂದ ನೋಡುತ್ತಾ ಕಾವ್ಯವನ್ನು ಬರೆಯುತ್ತಿದ್ದ. ತಾನು ಬರೆದ ಕವನವನ್ನು ಮೈದುಂಬಿ ಹಾಡುತ್ತಿದ್ದ. ಗಾಳಿಯಲ್ಲಿ ತೇಲಿ ಬಂದು ಆ ಸ್ವರ ನನ್ನನ್ನು ಪುಳಕಿತಗೊಳಿಸುತ್ತಿತ್ತು.

ಕತ್ತಲು ಕವಿಯುತ್ತಿದ್ದಂತೇ ಎಲ್ಲಿಂದ ಬರುತ್ತಿದ್ದವೋ ನೂರಾರು ಹಕ್ಕಿಗಳು ನನ್ನ ಮೇಲೆ ಕಾಲೂರುತ್ತಿದ್ದವು. ಮೊಲಗಳು ಹುರುಪಿನಿಂದ ಓಡುತ್ತಿದ್ದರೆ, ಅಳಿಲು ಬೆಕ್ಕುಗಳು ಸದ್ದು ಮಾಡುತ್ತಿದ್ದವು. ಹಸುಗಳು ನನ್ನ ಸುತ್ತ ಸುತ್ತುತ್ತಿದ್ದವು.
ನನ್ನ ಪಕ್ಕದಲ್ಲೇ ಇದ್ದ ಹೊಲದ ಯಜಮಾನ ಕಬ್ಬಿನ ತೋಟವನ್ನು ಹಾಕುತ್ತಿದ್ದ. ಪ್ರಾಣಿಗಳು ಬಂದರೇ ನಿದ್ದೆಯಿಂದೆದ್ದು ತಗಡಿನ ಡಬ್ಬವನ್ನು ಕುಟ್ಟುತ್ತಿದ್ದ.

ಪ್ರೀತಿಸುತ್ತಿರುವ ಒಂದು ಜೋಡಿ ದಿನವೂ ಇಲ್ಲಿ ಬಂದು ಹರಟುತ್ತಾ ಕುಳಿತುಕೊಳ್ಳುತ್ತಿದ್ದರು. ಒಬ್ಬರೆಂದರೆ ಒಬ್ಬರಿಗೆ ಪ್ರಾಣ. ಆದರೇ, ಬ್ರಾಹ್ಮಣರ ಹುಡುಗ ಸಾಬರ ಹುಡುಗಿಯನ್ನು ಮದುವೆಯಾಗುವುದಾ? ಅಂತ ಇಬ್ಬರ ಪೋಷಕರೊಂದಿಗೆ ಬಂಧು-ಬಾಂಧವರೂ ಆಕ್ಷೇಪ ವ್ಯಕ್ತಪಡಿಸಿದರೆಂದು ಅವರ ಮಾತುಗಳಿಂದ ಗ್ರಹಿಸಿದೆ. ಒಂದು ದಿನ ತಡ ರಾತ್ರಿ ಬಂದರು. ಅಕ್ಕರೆಯ ಮಾತುಗಳು, ಅಪ್ಪುಗೆ, ಮುತ್ತುಗಳ ವಿನಿಮಯ, ನಗು ಅಳು, ಕಡೆಗೆ “ಇಬ್ಬರೂ ಒಟ್ಟಾಗಿ ಸಾಯೋಣ” ಅಂದನಾ ಪ್ರೇಮಿ. ಆ ಮಾತು ಕೇಳಿದಾಕ್ಷಣ ಬೆಚ್ಚಿಬಿದ್ದೆ.
“ಬೇಡ…ಬೇಡ… ಎದುರಿಸಿ ಹೋರಾಡಿ ಸಾಧಿಸಿ, ಒಪ್ಪಿಸಿ…” ನನಗೆ ಮಾತುಗಳು ಬರದೇ ಇದ್ದುದಕೆ ಮೊತ್ತಮೊದಲ ಬಾರಿ ನೋವುಂಟಾಯಿತು.
ಆ ರಾತ್ರಿ ಹೊತ್ತು ನನ್ನ ಘೋಷ ನೀರ ಮೇಲೆ ಬರಹವಾಯಿತು. ಆ ಇಬ್ಬರೂ ಒಬ್ಬರಲ್ಲಿ ಒಬ್ಬರು ಒಂದಾಗಿ, ಅನಂತದಲ್ಲಿ ಐಕ್ಯವಾದರು.
ಬೆಳಗಾಯಿತು ಇಬ್ಬರ ಕಡೆ ಮನುಷ್ಯರು ಬಂದರು ಹೆಣಗಳನ್ನ ಬೇರ್ಪಡಿಸಿದರು. ಒಬ್ಬರನ್ನೊಬ್ಬರು ಬೈದರು ತಳ್ಳಿಕೊಂಡರು, ಕಡೆಗೆ ಇಬ್ಬರನ್ನು ಮಣ್ಣುಮಾಡಿದರು. “ಇಷ್ಟಕ್ಕೂ ನೀವು ಸಾಧಿಸಿದ್ದಾದರೂ ಏನು? ನನ್ನಲ್ಲಿ ನಾನು ಗೊಣಗಿದೆ.


ಸ್ವಾತಂತ್ರ್ಯ ಬಂದ ನಂತರ ಪರಿಸ್ಥಿತಿಗಳ ಬದಲಾವಣೆ ವೇಗಪಡೆದುಕೊಂಡಿತು. ನಗರ ನಿಧಾನವಾಗಿ ವಿಸ್ತರಿಸುತ್ತಾ ಬಂತು. ಇಪ್ಪತ್ತನೆಯ ಶತಾಬ್ದದ ಕಡೆಯ ದಶಕ… ಊರು ಬೆಳೆಯಿತು ಪಶು ಪಕ್ಷಿಗಳ ಬರುವಿಕೆ ಇಳಿಮುಖವಾದರೂ, ನನ್ನ ಅಸ್ತಿತ್ವಕ್ಕೆ ಭಂಗವುಂಟಾಗಲಿಲ್ಲ. ಅದೇ ಪ್ರಶಾಂತತೆ, ಅದೇ ಆಹ್ಲಾದಕರ ವಾತಾವರಣ.

ಇಪ್ಪತ್ತೊಂದನೆಯ ಶತಾಬ್ದ ಕಾಲಿಡುತ್ತಲೇ.. ಅಭಿವೃದ್ಧಿ ಎನ್ನುವ ನಿನಾದವನ್ನು ಹೊತ್ತು ತಂದಿತು. ಮಾಯೆಯೆನ್ನುವ ಮೋಹವನ್ನು ಜನಗಳಮೇಲೆ ಸುರಿಸಿತು.
ಊರಿಗೊಂದು ವಾಟರ್ ಟ್ಯಾಂಕ್ ಹುಟ್ಟಿಕೊಂಡಿತು. ಮನೆ ಮನೆಗೆ ನಲ್ಲಿಗಳು ಬಂದವು. ನೀರು ಸೀದಾ ಅಡುಗೆಮನೆಗೆ ನುಗ್ಗಿತು.
ನನ್ನ ಆವಶ್ಯಕತೆ ಕಡಿಮೆ ಆಯಿತು. ನನ್ನ ಮಡಿಲಲ್ಲಿ ವಿಶ್ರಾಂತಿ ಪಡೆಯುವವರು ಇಲ್ಲವಾದರು. ಅಷ್ಟೆತ್ತರ ಬೆಳೆದ ರಾಕ್ಷಸರಂತೆ ಸೆಲ್ ಫೋನ್ ಟವರ್ ಗಳು ನಿಂತವು. ಹಕ್ಕಿಗಳು ಹಸುಗಳು ನನ್ನನ್ನು ಮಾತನಾಡಿಸುವುದ ಬಿಟ್ಟವು.
ನಗರ ಶರವೇಗವಾಗಿ ಮೈ ಮುರಿದು ಅಡ್ಡಿ ಆತಂಕವಿಲ್ಲದೆ ಎಲ್ಲ ಕಡೆಗೂ ಬೆಳೆಯಿತು. ಅದು ನನ್ನ ಹತ್ತಿರಕ್ಕೂ ನುಗ್ಗಿ ಬಂತು. ಕಾರ್ಖಾನೆಗಳು ಬೆಳೆದವು. ಉಪಾಧಿಯನ್ನು ಹುಡುಕುತ್ತಾ ವಲಸೆ ಹಕ್ಕಿಗಳು ಗುಂಪು ಗುಂಪಾಗಿ ಕಾಲೂರಿದವು. ಗುಬ್ಬಿ ಗೂಡಿನಂತಹ ಅಪಾರ್ಟ್ಮೆಂಟ್ ಗಳ ಸಂಖ್ಯೆ ಒಂದಕ್ಕೆ ಹತ್ತರಷ್ಟು ಬೆಳೆದವು. ನನ್ನ ಅಪ್ಪಿಕೊಂಡು ಮಲಗಿದ ಹಳ್ಳಿಯ ಪಕ್ಕದಲ್ಲೇ ವಿಮಾನಾಶ್ರಯ ಪ್ರತ್ಯಕ್ಷವಾಯ್ತು.
ನನ್ನ ಸುತ್ತೂ ಹರಡಿದ ಎರಡು ಬೆಳೆ ಬೆಳೆಯುವ ಹಸಿರು ಹೊಲಗಳು ಏನಾದವೋ, ಹೇಗೆ ಮಾಯವಾದವೋ ಈಗಲೂ ಅರ್ಥವಾಗುತ್ತಿಲ್ಲ. ನೋಡ ನೋಡುತ್ತಿದ್ದಂತೇ ಊರು ವೇಷ ಬದಲಾಯಿಸಿತು. ಗುಡಿಸಲು ಹೆಂಚಿನ ಮನೆಗಳು ನೆಲ ಕಚ್ಚಿದವು.
ಮಣ್ಣ ಹಾದಿಗಳು ಸಿಮೆಂಟ್ ನಿಂದ ಸಿಂಗಾರಗೊಂಡವು. ಹತ್ತಾರು ಅಂತಸ್ತಿನ ಕಟ್ಟಡಗಳು ಅಲಂಕರಿಸಿಕೊಂಡವು.

೨೦೨೦ ಅಕ್ಟೋಬರ್…ದಿನಗಳ ಕಾಲ ಸುರಿದ ಕುಂಭವೃಷ್ಟಿಯಿಂದ ಪ್ರವಾಹ ನುಗ್ಗಿತು. ನಗರ ಅಲ್ಲಕಲ್ಲೋಲವಾಯಿತು. ಕಾಲೊನಿಗಳು ಮುಳುಗಿದವು. ಗುಡಿಸಿಲುಗಳು ತೇಲಾಡಿದವು.ಬೀದಿಗಳೆಲ್ಲಾ ನದಿಗಳಾದವು ದೋಣಿಗಳೇ ವಾಹನಗಳಾದವು.
ಆಡಳಿತ ಪಕ್ಷದಮೇಲೆ ಮುಗಿಬಿತ್ತು ಪ್ರತಿಪಕ್ಷ. ಪತ್ರಿಕೆಗಳು ವಿಶ್ಲೇಷಣಾತ್ಮಕ ಕಥನಗಳನ್ನು ಮಂಡಿಸಿದವು. ಛಾನೆಲ್ ಗಳು ಚರ್ಚೆಯ ವೇದಿಕೆಗಳಾಗಿ ಮಾರ್ಪಟ್ಟವು. ನಗರದಲ್ಲಿ, ಹೊರವಲಯಗಳಲ್ಲಿ ನೂರಾರು ಕೆರೆಗಳು ಆಕ್ರಮಣಕ್ಕೆ ಗುರಿಯಾಗಿರುವುದೇ ಈ ದುಸ್ಥಿತಿಗೆ ಕಾರಣವೆಂದು ಡಂಗೂರ ಸಾರಿದವು.
ನನ್ನ ಸೋದರ ಸೋದರಿಯರು ಹೇಗೆ ಕಾಣೆಯಾದೆರೆಂದು ತಿಳಿದು ಕುಗ್ಗಿಹೋದೆ.
ಸ್ವಯಂ ಸೇವಾ ಸಂಘ ಸಂಸ್ಥೆಗಳು ಅವರಿಗಾದ ನೆರವನ್ನು ನೊಂದವರಿಗೆ ನೀಡುತ್ತಾ ಕೈಜೋಡಿಸಿದವು.
ಕೈಗಾರಿಕೋದ್ಯಮಿಗಳು ದೇಣಿಗೆಯ ಚೆಕ್ ಅನ್ನು ನೀಡುತ್ತಾ ಫೋಟೋಗಳನ್ನು ಪ್ರಕಟಿಸಿದವು.
ಸಿನೆಮಾ ನಟರು ತಮ್ಮ ಹೃದಯವಂತಿಕೆಯನ್ನು ಲೋಕದ ದೃಷ್ಟಿಗೆ ತರುವ ಪ್ರಯತ್ನ ಮಾಡಿದರು.
ಸರ್ಕಾರ ಪರಿಹಾರವನ್ನು ಪ್ರಕಟಿಸಿತು. ಅಕ್ರಮ ಕಟ್ಟಡಗಳಮೇಲೆ ಕೆಂಗಣ್ಣಾಯಿತು. ಆಕ್ರಮಣಕಾರರನ್ನು ಮಟ್ಟುಹಾಕಿ ಕೆರೆಗಳ ಸಂರಕ್ಷಣೆ ಮಾಡುತ್ತೇವೆಂದು ಕಂಕಣ ತೊಟ್ಟಿತು.

ನನ್ನ ದೇಹದೆಡೆಗೆ ನೋಡಿಕೊಂಡೆ. ಎರಡು ವರುಷಗಳ ಹಿಂದೇ ಪೂರ್ವದಲ್ಲಿ ೨೫ ಪ್ರತಿಶತ ಮಣ್ಣಿನಿಂದ ಹೂಳಿ, ನೆಲವನ್ನು ಒಬ್ಬ ರಾಜಕಾರಣಿ ಬಡವರಿಗೆ ಪತ್ರಗಳು ಹಂಚಿದ. ಈಶಾನ್ಯದಲ್ಲಿ ೨೦ ಪ್ರತಿಶತ ಕಳೆದುಕೊಂಡು ಅಲ್ಲೊಂದು ಅಕ್ರಮ ಕಟ್ಟಡವನ್ನು ಹೊರುತ್ತಿದ್ದೇನೆ.
ಅರೆ ದೇಹ ಅರೆ ಪ್ರಾಣವಾಗಿ ಬದುಕುತ್ತಿರುವ ನನಗೆ ಸರಕಾರದ ನಡೆ ಒಂದಿಷ್ಟು ಭರವಸೆ ನೀಡಿತು.
ಆ ಭರವಸೆ ಅಷ್ಟೇ ಸ್ಥಿರವಾಗಿ ಜಾರಿಗೊಂಡಿದ್ದರೇ, ಈಗ ನಿಮಗೆ ನನ್ನ ಕಥೆ ಹೇಳುವ ಅವಶ್ಯಕತೆ ಇರುತ್ತಿರಲಿಲ್ಲ.
ಕೊನೆಯುಸಿರಿನೊಂದಿಗೆ ತೋಳುಗಳಲ್ಲಿ ನೀರನ್ನು ಬರಸೆಳೆದು ಹಾಗೇ ಇರುತ್ತಿದ್ದೆ. ಭೂಗರ್ಭ ಜಲಮಟ್ಟವನ್ನು ಕಾಯ್ದುಕೊಂಡು ನನ್ನ ಪಾಲಿನ ಸೇವೆಯನ್ನು ಮುಂದುವರಿಸಿಕೊಂಡುಹೋಗುತ್ತಿದ್ದೆ.

ಎರಡು ತಿಂಗಳು ಕಳೆಯುವ ಮುನ್ನವೇ…
ಆತ ಹೇಗೆ ನಿಭಾಯಿಸಿದನೋ…ಎಷ್ಟು ಪತ್ರಗಳು ಸೃಷ್ಟಿಸಿದನೋ…ಎಷ್ಟು ಲಂಚವನ್ನು ನೀಡಿದನೋ…ಎಷ್ಟು ನಾಯಕರನ್ನ ಪ್ರಸನ್ನ ಮಾಡಿಕೊಂಡನೋ…ಅದೆಷ್ಟು ಅಧಿಕಾರಿಗಳನ್ನು ತನ್ನ ದಾರಿಗೆ ತಂದುಕೊಂಡನೋ ತಿಳಿಯದು!
ಒಟ್ಟಾರೆ ನನ್ನ ಅಸ್ತಿತ್ವವನ್ನು ಇಲ್ಲವಾಗಿಸಲು ಅಧಿಕಾರಿಗಳ ಅನುಮತಿಯಿಂದ ನನ್ನ ಹತ್ತಿರ ಬರುತ್ತಿದ್ದಾನೆ.
ಅದೋ… ಬುಲ್ಡೋಜರ್ ಪೊಕ್ಲೈನ್! ಅದೋ ಅಲ್ಲಿ ಕೆಲಸಗಾರರು!
‘ಕಾಪಾಡಿ…ಕಾಪಾಡಿ… ನನ್ನನ್ನು ಕಾಪಾಡಿ…ಅಲ್ಲ ಅಲ್ಲ ಕಾಪಾಡಿಕೊಳ್ಳಿ…
‘ಪ್ಲೀಸ್…’
‘ಬಂದರು… ಬಂದೇಬಿಟ್ಟರು ಕಾಪಾಡಿ…
‘ಅಯ್ಯೋ! ಬುಲ್ಡೋಜರ್ ನನ್ನ ನೆತ್ತಿಯನ್ನು ಸೀಳಿತು. ಪೊಕ್ಲೈನ್ ನನ್ನ ಪಕ್ಕೆಲುಬುಗಳನ್ನು ತಿವಿಯಿತು.
ಅದೋ ಆತ ಬೆಂಜ್ ಕಾರಿನಿಂದಿಳಿದ. ೨೫ ವರುಷ ಕಳೆದರೂ ಆತನನ್ನು ನಾನು ಗುರುತು ಹಿಡಿದೆ.
ಈಗ ಆತ ದೊಡ್ಡ ಕಂಟ್ರಾಕ್ಟರ್! ಹೆಸರು ಆದಿನಾರಾಯಣ!