ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ನಿಜಾ಼ರ್ ಖಬ್ಬಾನಿ ಅವರ ಕವಿತೆಗಳನ್ನು ಡಾ. ಗೋವಿಂದ ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

೧.
ಬೆಳಕು ಕಂದೀಲಿಗಿಂತ ಮುಖ್ಯ
ಕವಿತೆ ಟಿಪ್ಪಣಿ ಪುಸ್ತಕಕ್ಕಿಂತ
ಮತ್ತು- ಚುಂಬನ ತುಟಿಗಳಿಗಿಂತ ಮುಖ್ಯ

ನಿನಗೆ ನಾ ಬರೆದ ಪತ್ರಗಳು
ನಮ್ಮಿಬ್ಬರಿಗಿಂತ ಹೆಚ್ಚು ಶ್ರೇಷ್ಠ ಮತ್ತು
ಮುಖ್ಯ
ಅವು ಮಾತ್ರ ದಾಖಲೆಗಳು-
ಜನ ತಿಳಿಯಲು,
ನಿನ್ನ ಚೆಲುವನ್ನು ಮತ್ತು
ನನ್ನ ಮರುಳನ್ನು

–0-0-0–

೨.
ಗಂಡಸೊಬ್ಬ ಪ್ರೇಮಿಸುವಾಗ
ಹಳೆಯ ನುಡಿಗಳನ್ನೇ
ಹೇಗೆ ಬಳಸಬಲ್ಲ?
ಹೆಣ್ಣೊಬ್ಬಳು,
ತನ್ನ ನಲ್ಲನನ್ನು ಬಯಸುವವಳು,
ವ್ಯಾಕರಣ ತಜ್ಞನ, ಭಾಷಾವಿದನ
ತೆಕ್ಕೆಗೆ ಸಿಗಬೇಕೇನು?

ನಾನು ಪ್ರೀತಿಸುವ ಹೆಣ್ಣಿಗೆ
ಏನೂ ಹೇಳಲಿಲ್ಲ ನಾನು
ಆದರೆ
ಪ್ರೇಮದ ಎಲ್ಲ ವಿಶೇಷಣಗಳನ್ನು
ಪೆಟ್ಟಿಗೆಯೊಳಗೆ ತುಂಬಿದೆ
ಮತ್ತು
ಎಲ್ಲ ಭಾಷೆಗಳಿಂದ ಓಡಿ ಹೋದೆ.

–0-0-0–

೩.
ಬೇಸಿಗೆಯಲ್ಲಿ

ಬೇಸಿಗೆಯಲ್ಲಿ
ನಾನು ದಡದಲ್ಲಿ ಮೈಚಾಚಿ
ನಿನ್ನ ನೆನೆಯುತ್ತೇನೆ

ನಿನ್ನ ಬಗ್ಗೆ ಅನಿಸುವುದನ್ನು
ಕಡಲಿಗೆ ಹೇಳಿದರೆ ನಾನು
ಅದು ತನ್ನ ದಡಗಳ ಬಿಟ್ಟು
ಕಪ್ಪೆ ಚಿಪ್ಪುಗಳ ಬಿಟ್ಟು
ಮೀನುಗಳ ಬಿಟ್ಟು

ನನ್ನ ಬೆನ್ನಿಗೆ ಬರಬಹುದು!

–0-0-0–

೪.
ಸುದೀರ್ಘ ಅಗಲುವಿಕೆಯ
ನಂತರ
ಪ್ರತಿಸಲವೂ
ನಿನ್ನ ಚುಂಬಿಸುವಾಗ
ಅನಿಸುವುದು

ಒಂದು ಅವಸರದ
ಪ್ರೇಮ ಪತ್ರವನ್ನು
ನಾನು
ಕೆಂಪು ಅಂಚೆ ಡಬ್ಬಿಗೆ
ಹಾಕುತ್ತಿರುವೆ.

–0-0-0–

೫.
ನನ್ನ ಪ್ರೀತಿ ಕೇವಲ ಉಂಗುರ
ಅಥವಾ ಕಂಕಣ ಎನ್ನಬೇಡ
ಅದೊಂದು ಆವೇಗ
ದುಸ್ಸಾಹಸ, ಮೊಂಡುತನದ್ದು
ಅನಾಯಾಸವಾಗಿ ಸಾವನ್ನೂ
ಎದುರಿಸುವಂಥದ್ದು

ನನ್ನ ಪ್ರೀತಿಯೊಂದು
ಚಂದಿರ ಎನ್ನಬೇಡ
ಅದೊಂದು ಕಿಡಿಗಳ ವಿಸ್ಫೋಟ

–0-0-0–

೬.
ಶಬ್ದಗಳು

ನಾನು ಜಗವನ್ನು ಗೆಲ್ಲುವೆ ಶಬ್ದಗಳಿಂದ
ತಾಯ್ನುಡಿಯ ಗೆಲ್ಲುವೆ
ಕ್ರಿಯಾಪದ ನಾಮಪದ ವ್ಯಾಕರಣ ಎಲ್ಲ
ನಾನು ಸಂಗತಿಗಳ ಆರಂಭವನ್ನು
ಗುಡಿಸಿ ಹಾಕುವೆ
ನೀರಿನ ನಾದ ಬೆಂಕಿಯ ಸಂದೇಶವಿರುವ
ಒಂದು ಹೊಸ ಭಾಷೆಯಿಂದ

ನಾನು ಬರುವ ಯುಗವನ್ನು ಬೆಳಗುವೆ
ಕಾಲವನ್ನು ನಿಲ್ಲಿಸುವೆ-
ನಿನ್ನ ಕಣ್ಣುಗಳಲ್ಲಿ.
ಮತ್ತು
ಕಾಲ ಮತ್ತು ಈ ಕ್ಷಣದ ನಡುವಿನ
ಗಡಿಗೆರೆಯನ್ನು ಅಳಿಸಿಬಿಡುವೆ.

–0-0-0–

೭.
ನಾನು ಪ್ರೇಮಿಸುವಾಗ
ಅನಿಸುತ್ತದೆ- ನಾನು ಕಾಲದ ಒಡೆಯ
ಭೂಮಿ ಮತ್ತು ಇಲ್ಲಿರುವ ಎಲ್ಲವೂ ನನ್ನದು
ಮತ್ತು ಕುದುರೆ ಏರಿ ನಾನು ಸೂರ್ಯನನ್ನೇ ಹೊಗುವೆ

ನಾನು ಪ್ರೇಮಿಸುವಾಗ
ನಾನಾಗುವೆ ದ್ರವಿಸಿದ ಬೆಳಕು
ಕಣ್ಣಿಗೆ ಕಾಣದಂಥದ್ದು
ನನ್ನ ಟಿಪ್ಪಣಿ ಪುಸ್ತಕದಲ್ಲಿನ ಕವಿತೆಗಳು
ಗಸಗಸೆಯ ಹೊಲಗಳಾಗುತ್ತವೆ

ನಾನು ಪ್ರೇಮಿಸುವಾಗ
ನನ್ನ ಬೆರಳುಗಳಿಂದ ನೀರು ಧುಮುಕುತ್ತದೆ
ನನ್ನ ನಾಲಗೆಯ ಮೇಲೆ ಹುಲ್ಲು ಬೆಳೆಯುತ್ತದೆ
ಪ್ರೇಮಿಸುವಾಗ ನಾನು
ಎಲ್ಲ ಕಾಲಗಳ ಆಚೆಯ ಕಾಲವಾಗುವೆ

ಹೆಣ್ಣೊಬ್ಬಳನ್ನು ನಾನು ಪ್ರೇಮಿಸುವಾಗ
ಎಲ್ಲ ಮರಗಳು
ಬರಿಗಾಲಲ್ಲಿ ನನ್ನತ್ತ ಓಡಿ ಬರುತ್ತವೆ.

–0-0-0–

೮.
ಕೊನೆಗೂ ಪ್ರೇಮ ಉಂಟಾಯಿತು
ನಾವು ದೇವರ ಸ್ವರ್ಗವನ್ನು ಹೊಕ್ಕೆವು
ಜಾರುತ್ತ
ನೀರಿನ ಪದರದ ಕೆಳಗೆ
ಮೀನಿನಂತೆ
ನಾವು ಕಡಲಿನ ಅನರ್ಘ್ಯ ಮುತ್ತುಗಳ
ಕಂಡೆವು, ಚಕಿತರಾದೆವು

ಕೊನೆಗೂ ಪ್ರೇಮ ಆಯಿತು
ಯಾವ ಬೆದರಿಕೆ ಇಲ್ಲದೆ, ಬಯಕೆಯ ಏಕರೂಪತೆಯಲ್ಲಿ
ಹಾಗೆ…ನಾನು ಕೊಟ್ಟೆ.. ನೀನೂ ಕೊಟ್ಟೆ
ನ್ಯಾಯವೇ
ಅದು ಅದ್ಭುತ ಸರಳತೆಯಲ್ಲಿ ಆಯ್ತು
ಮಲ್ಲಿಗೆಯ ನೀರಿನಿಂದ ಬರೆದಂತೆ
ಚಿಲುಮೆಯೊಂದು ನೆಲದಿಂದ ಉಕ್ಕಿ ಹರಿದಂತೆ

–0-0-0–