- ಇಂದು ಇಲ್ಲದಿದ್ದರೂ ಇಂದು… - ಅಕ್ಟೋಬರ್ 22, 2022
- ಗೋಧ್ರಾ ಇನ್ನೆಷ್ಟು ದೂರ? - ಮೇ 26, 2022
- ಒಂದು ಯುದ್ಧ, ಒಬ್ಬ ಖೈದಿ ಮತ್ತು ಆಕೆ - ಮಾರ್ಚ್ 4, 2022
“ಭಾರತ ತನ್ನ ಗಡಿಯಿಂದಾಚೆಗೆ ಒಬ್ಬನೇ ಒಬ್ಬ ಸೈನಿಕನನ್ನೂ ಕಳುಹಿಸದೆ ಚೀನಾವನ್ನು ಸಾಂಸ್ಕೃತಿಕವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು ಮತ್ತು ಎರಡು ಸಾವಿರ ವರ್ಷಗಳವರೆಗೆ ತನ್ನ ಅಧಿಪತ್ಯ ಸಾಗಿಸಿತು.”
ಕಳೆದ ಶತಮಾನದಲ್ಲಿ ಆಗಿಹೋದ ಗೌರವಾನ್ವಿತ ಚೀನೀ ತತ್ವಜ್ಞಾನಿ ಮತ್ತು ರಾಜತಂತ್ರಜ್ಞ ಹು ಶಿಹ್ (೧೮೯೧-೧೯೬೨) ಹೇಳಿದ ಮಾತಿದು. ತನ್ನ ಏಳೆಂಟು ಸಾವಿರ ವರ್ಷಗಳ ದೀರ್ಘ ಇತಿಹಾಸದಲ್ಲಿ ಭಾರತ ನೆರೆನಾಡುಗಳೊಂದಿಗೆ ವ್ಯವಹರಿಸಿದ ಬಗೆಯ ಸ್ಪಷ್ಟ, ಸುಂದರ ಚಿತ್ರಣವನ್ನು ಈ ಮಾತುಗಳು ನೀಡುತ್ತವೆ. ತನ್ನ ಮೇಲೆ ಅದೆಷ್ಟೋ ಆಕ್ರಮಣಗಳು ನಡೆದರೂ ತಾನು ಮಾತ್ರ ಇತರರ ವಿರುದ್ಧ ಸೇನಾಕ್ರಮಣ ಕೈಗೊಳ್ಳದೇ ಕೇವಲ ಶಾಂತಿ ಮಾರ್ಗದಿಂದಲೇ ತನ್ನ ಸಂಸ್ಕೃತಿ, ಧರ್ಮ, ಜೀವನವಿಧಾನ, ಕಲೆ, ಸಾಹಿತ್ಯಗಳನ್ನು ಭಾರತ ಸುತ್ತಲ ದೇಶಗಳಿಗೆ ಕೊಡುಗೆಯಾಗಿ ನೀಡಿತು. ಮೊದಲಿಗೆ ಹಿಂದೂಧರ್ಮ, ನಂತರ ಬೌದ್ಧಧರ್ಮಗಳು ಹಾಗೂ ಅವುಗಳ ಮೆಲೆ ಆಧಾರಿತವಾದ ಜೀವನಮೌಲ್ಯಗಳು ಮತ್ತು ಕಲೆ, ಸಾಹಿತ್ಯಗಳು ಭಾರತದಿಂದ ಹೊರಟು ಪಶ್ಚಿಮದಲ್ಲಿ ಅಫ್ಘಾನಿಸ್ತಾನದಿಂದ ಹಿಡಿದು ಪೂರ್ವದಲ್ಲಿ ಪೆಸಿಫಿಕ್ ಸಾಗರದ ತೀರದವರೆಗೆ ಹರಡಿಹೋದವು.
ಚೀನಾದ ಬಗ್ಗೇ ವಿಶೇಷವಾಗಿ ಹೇಳುವುದಾದರೆ, “ಪೂರ್ಣವಾಗಿ ಸಿದ್ಧಗೊಂಡ ಸಂಸ್ಕೃತಿಯೊಂದನ್ನು ಚೀನಾ ಹೊರಗಿನಿಂದ ಪಡೆದುಕೊಂಡಿತು, ಅದು ವೈದಿಕ ಸಂಸ್ಕೃತಿಯಾಗಿತ್ತು” ಎಂದು ಪ್ರಖ್ಯಾತ ಇತಿಹಾಸಕಾರರಾದ ಅರ್ನಾಲ್ಡ್ ಟಾಯ್ನ್‌ಬಿ ಮತ್ತು ಸರ್ ಎಲ್. ವೂಲಿ ಅವರುಗಳು ಬರೆಯುತ್ತಾರೆ. ದಕ್ಷಿಣ ಚೀನಾದಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಅನೇಕ ಹಿಂದೂ ದೇವಾಲಯಗಳ ಅವಶೇಷಗಳು ಪ್ರಾಚೀನ “ಹಿಂದೂ ಚೀನಾ”ದ ಬಗ್ಗೆ ನಿರಾಕರಿಸಲಾಗದಷ್ಟು ಹೇರಳ ಆಧಾರಗಳನ್ನೊದಗಿಸುತ್ತವೆ. ನಂತರದ ಶತಮಾನಗಳಲ್ಲಿ ಬೌದ್ಧಧರ್ಮ ಭಾರತದಿಂದ ಚೀನಾವನ್ನು ಪ್ರವೇಶಿಸಿದ್ದಂತೂ ಚೀನೀ ಇತಿಹಾಸದಲ್ಲೊಂದು ಮಹತ್ವದ ಬೆಳವಣಿಗೆ. ಭಾರತೀಯ ಧಾರ್ಮಿಕ ನಂಬುಗೆಗಳನ್ನು ಮುಕ್ತವಾಗಿ ತಮ್ಮದಾಗಿಸಿಕೊಂಡ ಚೀನೀಯರು ಭಾರತವನ್ನು “ಚೀನಾದ ಗುರು” ಎಂದು ಹೃತ್ಪೂರ್ವಕವಾಗಿ ಅಂಗೀಕರಿಸಿದರು. ಚೀನೀ ಬೌದ್ಧ ಯಾತ್ರಿಗಳಿಗೆ ಭಾರತ ಪಶ್ಚಿಮದ ಸ್ವರ್ಗ “ಸುಖವತಿ”ಯಾಯಿತು. ಭಾರತೀಯ ಬೌದ್ಧ ನಂಬಿಕೆಗಳು, ಜೀವನವಿಧಾನಗಳು ಚೀನಿಯರ ಬದುಕನ್ನು ಪ್ರಭಾವಿಸಿದಷ್ಟು ಬೇರಾವುವೂ ಪ್ರಭಾವಿಸಿಲ್ಲ. `
ಪೂರ್ವದ ಇತರ ದೇಶಗಳಾದ ಮ್ಯಾನ್ಮಾರ್, ಥಾಯ್‌ಲ್ಯಾಂಡ್, ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ, ಮಲೇಶಿಯಾ, ಇಂಡೋನೇಶಿಯಾ ದೇಶಗಳು ಇತಿಹಾಸದ ವಿವಿಧ ಘಟ್ಟಗಳಲ್ಲಿ ಸಾಂಸ್ಕೃತಿಕವಾಗಿ ಭಾರತದ ಪ್ರಭಾವಕ್ಕೊಳಗಾದ ಕಾರಣ ಇಡೀ ಆಗ್ನೇಯ ಏಶಿಯಾವನ್ನು ಐತಿಹಾಸಿಕವಾಗಿ “ಸಾಂಸ್ಕೃತಿಕ ಬೃಹದ್ಭಾರತ” ಎಂದು ಗುರುತಿಸಲಾಗಿದೆ ಹಾಗೂ ಅವುಗಳಲ್ಲಿ ಭಾರತೀಯ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಇದರ ಬಗ್ಗೆ ಆ ದೇಶವಾಶಿಗಳಲ್ಲಿ ಹೆಮ್ಮೆ ಇದೆ. ಇದನ್ನು, ಫೆಬ್ರವರಿ ೧೯೫೮ರಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದ ವಿಯೆಟ್ನಾಮೀ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮೊದಲ ಪ್ರಧಾನಮಂತ್ರಿ ಹೊ ಚಿ ಮಿನ್ಹ್ “ಭಾರತೀಯ ಸಂಸ್ಕೃತಿ ಮತ್ತು ಬೌದ್ಧಧರ್ಮಗಳು ಪ್ರಾಚೀನ ಕಾಲದಲ್ಲೇ ವಿಯೆಟ್ನಾಂಗೆ ಕಾಲಿಟ್ಟವು. ಈ ಐತಿಹಾಸಿಕ ಸ್ನೇಹ ನಮ್ಮೆರಡು ನಾಡುಗಳನ್ನು ಯಾವಾಗಳೂ ಒಂದಾಗಿರಿಸಿವೆ.” ಎಂದು ನವದೆಹಲಿಯಲ್ಲಿ ಹೇಳುವ ಮೂಲಕ ವ್ಯಕ್ತಪಡಿಸಿದರು.
ಇಂಥದೇ ಮಾತುಗಳನ್ನು ಇಂಡೋನೇಶಿಯಾದ ಸ್ವಾತಂತ್ರ್ಯ ಹೋರಾಟದ ಮುಂದಾಳು ಮತ್ತು ದೇಶದ ಮೊದಲ ಅಧ್ಯಕ್ಷ ಸುಕರ್ನೋ ಇನ್ನಷ್ಟು ವಿವರವಾಗಿ, ಸ್ಪಷ್ಟವಾಗಿ ಹೇಳುತ್ತಾರೆ. ಜನವರಿ ೪, ೧೯೪೬ರಂದು “ದ ಹಿಂದೂ” ಆಂಗ್ಲ ದೈನಿಕಕ್ಕೆ ಬರೆದ ವಿಶೇಷ ಲೇಖನದಲ್ಲಿ ಅವರು ಹೀಗೆ ವಿವರಿಸುತ್ತಾರೆ: “ನನ್ನ ಜನರಲ್ಲಿ ಪ್ರತಿಯೊಬ್ಬರ ರಕ್ತನಾಳಗಳಲ್ಲೂ ಹರಿಯುತ್ತಿರುವುದು ಭಾರತೀಯ ಪೂರ್ವಜರ ರಕ್ತ… ಎರಡು ಸಾವಿರ ವರ್ಷಗಳ ಹಿಂದೆ ನಿಮ್ಮ ದೇಶದ ಜನ ಸಹೋದರತ್ವದ ಪ್ರೀತಿಯನ್ನು ಹೊತ್ತು ಜಾವಾದ್ವೀಪ ಮತ್ತು ಸುವರ್ಣದ್ವೀಪಕ್ಕೆ ಬಂದರು. ಅವರು ಶ್ರೀವಿಜಯ, ಮಾತರಾಂ ಮತ್ತು ಮಾಯಾಪಹಿತ್‌ನಂತದ ಶಕ್ತಿಶಾಲಿ ಸಾಮ್ರಾಜ್ಯಗಳ ಸ್ಥಾಪನೆಗೆ ಚಾಲನೆ ನೀಡಿದರು. ನೀವು ಈಗಲೂ ಪೂಜಿಸುತ್ತಿರುವ ದೇವರುಗಳನ್ನೇ ಪೂಜಿಸಲು ನಾವಾಗ ಕಲಿತೆವು ಮತ್ತು ಇಂದಿಗೂ ಸಹಾ ನಿಮ್ಮ ಸಂಸ್ಕೃತಿಯ ಪಡಿಯಚ್ಚಿನಂತೇ ಇರುವ ಸಂಸ್ಕೃತಿಯನ್ನು ಸೃಷ್ಟಿಸಿಕೊಂಡೆವು. ಅನಂತರ ನಾವು ಇಸ್ಲಾಂನ ಕಡೆ ತಿರುಗಿದೆವು. ಆ ಧರ್ಮವನ್ನು ಸಹಾ ನಮ್ಮಲ್ಲಿಗೆ ತಂದವರು ಸಿಂಧೂನದಿಯ ಆಚೀಚಿನ ಕಡೆಯವರೇ.”
ಹೊ ಚಿ ಮಿನ್ಹ್ ಸ್ವತಃ ಕಮ್ಯೂನಿಸ್ಟರಾದರೆ, ಸುಕರ್ನೋ ಕಮ್ಯೂನಿಸಂ ಬಗ್ಗೆ ಅಗಾಧ ಒಲವಿದ್ದವರು ಎಂಬ ವಾಸ್ತವಗಳ ಹಿನ್ನೆಲೆಯಲ್ಲಿ ಭಾರತದ ಬಗ್ಗೆ ಆ ಇಬ್ಬರು ನಾಯಕರ ಮಾತುಗಳು ವಿಶೇಷ ಅರ್ಥ ಪಡೆದುಕೊಳ್ಳುತ್ತವೆ. ಇವೆಲ್ಲವೂ ಪೂರ್ವದ ನಾಡುಗಳ ವಿಚಾರವಾಯಿತು. ಈಗ ಸ್ವಲ್ಪ ಪಶ್ಚಿಮದತ್ತಲೂ ತಿರುಗೋಣ.
ಭಾರತೀಯ ತತ್ವಶಾಸ್ತ್ರ ಗ್ರೀಕ್ ತತ್ವಜ್ಞಾ ಪ್ಲೇಟೋನನ್ನು ಪ್ರಭಾವಿಸಿದ ಸಾಧ್ಯತೆ ಇದೆ. ಪ್ಲೇಟೋ ಬದುಕಿದ್ದು ಕ್ರಿ. ಪೂ. ೫೨೭ರಿಂದ ೪೪೭ರ ಸುಮಾರಿಗೆ. ಆತ ಯೌವನದಲ್ಲಿ ಜ್ಞಾನಾರ್ಜನೆಗಾಗಿ ಈಜಿಪ್ಟ್, ಇಸ್ರೇಲ್, ಮ್ಯಾಸಿಡೋನಿಯಾ, ಸಿಸಿಲಿ, ಪರ್ಶಿಯಾ ಮತ್ತು ಭಾರತದಲ್ಲಿ ಸಂಚರಿಸಿದ್ದ ಎಂದು ಹೇಳಲಾಗುತ್ತದೆ. ಈ ಪ್ರವಾಸದಲ್ಲೇ ಅವನಿಗೆ ಭಾರತೀಯ ವರ್ಣಾಶ್ರಮಧರ್ಮದ ಪರಿಚಯವಾಗಿರಬೇಕು. ತನ್ನ ನಲವತ್ತನೆಯ ವಯಸ್ಸಿನಲ್ಲಿ ರಚಿಸಿದ ಮಹಾನ್ ಕೃತಿ “ರಿಪಬ್ಲಿಕ್”ನಲ್ಲಿ ಆತ ತನ್ನ ಕಲ್ಪನೆಯ ಆದರ್ಶ ರಾಜ್ಯದ ಸವಿವರ ಚಿತ್ರಣ ನೀಡುತ್ತಾನೆ. ಅವನ ಪ್ರಕಾರ ಆದರ್ಶರಾಜ್ಯದಲ್ಲಿನ ಜನತೆ ೧. ರಕ್ಷಕರು (ಗಾರ್ಡಿಯನ್), ೨. ಸೈನಿಕರು, ಹಾಗೂ ೩. ರೈತರು ಮತ್ತು ಕರಕುಶಲಗಾರರು ಎಂದು ಮೂರು ವರ್ಗಗಳಾಗಿ ವಿಂಗಡಣೆಯಾಗುತ್ತದೆ. ಜವಾಬ್ದಾರಿ ಮತ್ತು ಅವಕಾಶಗಳ ಆಧಾರದಲ್ಲಿ ಪ್ಲೇಟೋನ ಈ ವರ್ಗಗಳು ಕ್ರಮವಾಗಿ ಭಾರತದ ವರ್ಣವ್ಯವಸ್ಥೆಯ ಬ್ರಾಹ್ಮಣರು, ಕ್ಷತ್ರಿಯರು ಹಾಗೂ ಶೂದ್ರರನ್ನು ಹೋಲುತ್ತವೆ. ವೈಶ್ಯವರ್ಗ ಪ್ಲೇಟೋನ ಆದರ್ಶರಾಜ್ಯದಲ್ಲಿ ಸ್ಥಾನ ಪಡೆಯುವುದಿಲ್ಲ. ಯಾಕೆಂದರೆ ಪ್ಲೇಟೋ ಧನದ ಕಟ್ಟಾದ್ವೇಷಿ. ಅವನ ಪ್ರಕಾರ ವ್ಯಕ್ತಿಯ ಹಾಗೂ ಸಮಾಜದ ಅಧಃಪತನದ ಮೂಲ ಈ ಧನ. ಅದರಿಂದಾಗಿ ಅವನು ತನ್ನ ಆದರ್ಶ ರಾಜ್ಯದಲ್ಲಿ ಹಣಕಾಸು ಮತ್ತು ವ್ಯಾಪಾರವಹಿವಾಟುಗಳನ್ನು ವಿದೇಶೀಯರು ನಿರ್ವಹಿಸಬೇಕೆಂದೂ, ಸ್ಥಳೀಯರು ಅದರಲ್ಲಿ ತೊಡಗಕೂಡದೆಂದೂ ಹೇಳುತ್ತಾನೆ. ಭಾರತೀಯ ವಾಸ್ತುಶಿಲ್ಪಿಗಳು ಪ್ರಾಚೀನ ಕಾಲದಲ್ಲಿ ಪಶ್ಚಿಮ ಏಶಿಯಾದಲ್ಲಿ ವಾಸ್ತುಶಿಲ್ಪದ ಬೆಳವಣಿಗೆ ನೀಡಿದ ಕೊಡುಗೆಗಳು ಇಂದಿನ ಲೆಬನಾನ್‌ನ ಪಠ್ಯಪುಸ್ತಕಗಳಲ್ಲೇ ಉಲ್ಲೇಖಗೊಂಡಿವೆ. ತತ್ವಶಾಸ್ತ್ರದಿಂದ ಗಣಿತ ಹಾಗೂ ವಿಜ್ಞಾನದತ್ತ ಹೊರಳಿದರೆ ಮತ್ತಷ್ಟು ಕುತೂಹಲಕರ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ.
ಈಗ ಅಂತರರಾಷ್ಟ್ರೀಯವಾಗಿ ಉಪಯೋಗಿಸಲ್ಪಡುತ್ತಿರುವ ಅಂಕೆಗಳ ಮೂಲ ಭಾರತ. ಇತ್ತೀಚಿನವರೆಗೂ ಅವುಗಳನ್ನು ಅರೇಬಿಕ್ ಅಂಕೆಗಳು ಎಂದು ತಪ್ಪಾಗಿ ಕರೆಯಲಾಗುತ್ತಿತ್ತು. ಈ ಅಂಕೆಗಳ ಮೂಲ ಭಾರತ, ಅರಬ್ಬರ ಮೂಲಕ ಅದು ಯೂರೋಪ್ ತಲುಪಿತು ಎಂಬ ಸತ್ಯ ಈ ಜಾಗತಿಕವಾಗಿ ಎಲ್ಲರಿಗೂ ಅರಿವಾಗಿದೆ. ಗುಪ್ತರ ಕಾಲದ ಸ್ವರ್ಣಯುಗದಲ್ಲಿ ಭಾರತದಲ್ಲಿ ಅವಿಷ್ಕಾರವಾದ ಗಣಿತೀಯ ಮತ್ತು ವೈಜ್ಞಾನಿಕ ಜ್ಞಾನಗಳು ಅರಬ್ಬರ ಮೂಲಕ ಯೂರೋಪ್ ತಲುಪಿದವು. ಇದಕ್ಕೆ ಪ್ರಮುಖ ಉದಾಹರಣೆ ಆರ್ಯಭಟನ ಸ್ಥಾನ ಮೌಲ್ಯ ಮತ್ತು ದಶಮಾನ ಪದ್ದತಿಗಳು. ವರಾಹಮಿಹಿರನ ಗಣಿತೀಯ ಮತ್ತು ಖಗೋಳಶಾಸ್ತ್ರೀಯ ಜ್ಞಾನಸಂಪತ್ತು, ಸುಶ್ರುತನ ಅರಿವಳಿಕೆಯಿಲ್ಲದ ಶಸ್ತ್ರಚಿಕಿತ್ಸಾವಿಧಾನಗಳೂ ಸೇರಿದಂತೆ ಅನೇಕ ಹೊಸವಿಚಾರಗಳು ಸಹಾ ಇದೇ ಮಾರ್ಗದಲ್ಲಿ ಜಾಗತಿಕ ರಂಗಕ್ಕೆ ತಲುಪಿದವು. ಇತ್ತೀಚಿನ ದಿನಗಳಲ್ಲಂತೂ ಭಾರತೀಯ ಆಯುರ್ವೇದ, ಯೋಗ ಮತ್ತು ಪ್ರಾಣಾಯಾಮಗಳು ವಿಶ್ವದ ಎಲ್ಲೆಡೆ ಮನೆಮಾತಾಗಿವೆ.
ಇಂತಹ ವಿಷಯಗಳ ಬಗ್ಗೆ ಮೂಗುಮುರಿಯುತ್ತಿದ್ದ ಕಮ್ಯೂನಿಸ್ಟ್ ರಶಿಯನ್ನರೂ ಸಹಾ ೧೯೮೬ರಲ್ಲಿ ಘಟಿಸಿದ ಚೆರ್ನೋಬಿಲ್ ಅಣುವಿಕಿರಣ ದುರಂತದ ಸಂತ್ರಪ್ತರ ಆರೋಗ್ಯವನ್ನು ಸುಧಾರಿಸಲು ಯೋಗ ಮತ್ತು ಪ್ರಾಣಾಯಾಮಗಳನ್ನು ಬಳಸಿಕೊಂಡದ್ದು ಈ ಭಾರತೀಯ ಪೂರ್ಣಸ್ವಾಸ್ತ್ಯ ವಿಧಾನಗಳ ಪ್ರಾಯೋಗಿಕ ಉಪಯುಕ್ತತೆಯನ್ನು ಸಾರುತ್ತದೆ. ಇಲ್ಲಿ ನಮ್ಮ ಕುತೂಹಲವನ್ನು ಮತ್ತಷ್ಟು ಕೆರಳಿಸುವುದು ಆಫ್ರಿಕಾ. ಪ್ರಾಚೀನ ಕಾಲದಲ್ಲೇ ಭಾರತದಿಂದ, ಮುಖ್ಯವಾಗಿ ಕರ್ನಾಟಕದಿಂದ ಆಫ್ರಿಕಾಗೆ ಜನ ವಲಸೆ ಹೋದ ಕುರುಹುಗಳಿವೆ. ಆಫ್ರಿಕಾದ ಪೂರ್ವ ಕರಾವಳಿಯ ಮೊಜಾಂಬಿಕ್, ದಕ್ಷಿಣ ಆಫ್ರಿಕಾಗಳ ಕೆಲವು ಬುಡಕಟ್ಟು ಭಾಷೆಗಳಲ್ಲಿ ಕನ್ನಡ ಪದಗಳಿವೆ. ಅಲ್ಲದೇ ಜಿಂಬಾಬ್ವೆಯ ಪುರಾತನ ಕೋಟೆಯೊಂದರಲ್ಲಿ ಕಾಣಬರುವ ವಿಗ್ರಹಗಳ ಮುಖಲಕ್ಷಣಗಳು ಹೋಲುವುದು ಕರ್ನಾಟಕದ ಕರಾವಳಿಯ ಜನರನ್ನು! ಇದರರ್ಥ ಆ ಕೋಟೆಯ ನಿರ್ಮಾತೃಗಳು ಕನ್ನಡಿಗರಾಗಿದ್ದಿರಬಹುದು ಮತ್ತು ಇತಿಹಾಸದ ಯಾವುದೋ ಒಂದು ಕಾಲದಲ್ಲಿ ಕನ್ನಡಿಗರು ಆ ನೆಲದ ಸಂಸ್ಕೃತಿಯನ್ನು ಪ್ರಭಾವಿಸಿದ್ದಿರಬಹುದು! ಕನ್ನಡ ಭಾಷೆ ಮತ್ತು ಕನ್ನಡ ಜನ ಅರಬ್ಬೀ ಸಮುದ್ರ ಮತ್ತು ಉತ್ತರ ಹಿಂದೂಮಹಾಸಾಗರದ ಸುತ್ತಮುತ್ತಲಿನ ನಾಡುಗಳ ಜನರಿಗೆ ಪರಿಚಿತರಾಗಿದ್ದರೆನ್ನುವುದಕ್ಕೆ ಇನ್ನೂ ಒಂದು ಉದಾಹರಣೆಯಿದೆ. ಕ್ರಿ. ಶ. ಎರಡನೆಯ ಶತಮಾನದಲ್ಲಿ ರಚಿತವಾದ ಗ್ರೀಕ್ ನಾಟಕವೊಂದರ ವಸ್ತುವಿಷಯ ಕಡಲ್ಗಳ್ಳರ ಚಟುವಟಿಕೆ. ಈ ಕಡಲ್ಗಳ್ಳರು ಮಾತಾಡುವ ಭಾಷೆ ಕನ್ನಡ! ಹಲವು ಕನ್ನಡ ಪದಗಳು ಆ ನಾಟಕದಲ್ಲಿವೆ. ಪ್ರಾಚೀನ ಕಾಲದಲ್ಲಿ ಅರಬ್ಬೀ ಸಮುದ್ರ ಕನ್ನಡಿಗರ ಸರೋವರವಾಗಿತ್ತು ಮತ್ತು ಅದರಾಚೆಯ ನಾಡುಗಳಲ್ಲಿ ಕನ್ನಡಿಗರು ಕೋಟೆಕೊತ್ತಲಗಳನ್ನು ಕಟ್ಟಿ ರಾಜ್ಯವಾಳುವುದೂ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು ಎಂದು ಈ ಎಲ್ಲಾ ಉದಾಹರಣೆಗಳು ಸೂಚಿಸುತ್ತವೆ.
ಈ ಬಗ್ಗೆ ಇತಿಹಾಸಕಾರರಿಂದ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಹೀಗೆ, ಪೂರ್ವ ಪಶ್ಚಿಮಗಳ ನೆರೆನಾಡುಗಳೊಂದಿಗೆ ಸಂಸ್ಕೃತಿ, ಧರ್ಮ, ಭಾಷೆ, ಕಲೆ ಮತ್ತು ಶಿಲ್ಪಕಲೆ, ಗಣಿತ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ವ್ಯವಹರಿಸಿದ ಭಾರತೀಯರು ಸೇನಾಕ್ರಮಣಗಳ ಮೂಲಕ ಭಾರತದ ಭೌಗೋಳಿಕ ಗಡಿಗಳಾಚೆ ತಮ್ಮ ರಾಜಕೀಯ ಅಧಿಕಾರ ಸ್ಥಾಪಿಸಿದ ಉದಾಹರಣೆಗಳಿಗಾಗಿ ಇತಿಹಾಸದಲ್ಲಿ ಹುಡುಕಿದರೆ ಅವು ಸಿಗುವುದು ಅಲ್ಲೊಮ್ಮೆ ಇಲ್ಲೊಮ್ಮೆ ಮಾತ್ರ. ಪೂರ್ವ ಭಾರತದ ಕ್ಷತ್ರಿಯ ರಾಜವಂಶಸ್ಥರು ಕ್ರಿ. ಪೂ. ನಾಲ್ಕನೆಯ ಶತಮಾನದಲ್ಲಿ ಸಯಾಂ, ಲಾವೋಸ್‌ಗಳನ್ನು ದಾಟಿ ಯುನಾನ್ ಸೇರಿದಂತೆ ದಕ್ಷಿಣ ಚೀನಾದ ಬಹುಪಾಲು ಪ್ರದೇಶಗಳಲ್ಲಿ ಹಿಂದೂ ರಾಜ್ಯಗಳನ್ನು ಸ್ಥಾಪಿಸಿದ್ದ ವಿವರಗಳು ಆ ದಿನಗಳ ಚೀನೀ ಗ್ರಂಥಗಳಲ್ಲಿ ಉಲ್ಲೇಖಗೊಂಡಿವೆ.
ಇಂದಿನ ಕಾಂಬೋಡಿಯಾ ದೇಶ ಕ್ರಿಸ್ತಶಕದ ಆರಂಭದ ಶರಮಾನಗಳಲ್ಲಿ ಕಂಬು ಎಂಬ ಹೆಸರಿನ ಭಾರತೀಯ ರಾಜಕುಮಾರನೊಬ್ಬ ಸ್ಥಾಪಿಸಿದ “ಕಾಂಭೋಜ” ಎಂಬ ನಾಡೇ ಎಂದು ಸಾಂಪ್ರದಾಯಿಕ ಆಖ್ಯಾಯಿಕೆಗಳು ಹೇಳುತ್ತವೆ. ಹನ್ನೊಂದನೆಯ ಶತಮಾನದಲ್ಲಿ ದಕ್ಷಿಣ ಭಾರತದ ಚೋಳ ಸಾಮ್ರಾಟ ಒಂದನೆಯ ರಾಜೇಂದ್ರ ಇಂಡೋನೇಶಿಯಾದ ಶೈಲೇಂದ್ರ ಸಾಮ್ರಾಜ್ಯದ ಮೇಲೆ ದಾಳಿಯೆಸಗಿ ಸುಮಾತ್ರಾ ದ್ವೀಪವನ್ನು ಆಕ್ರಮಿಸಿಕೊಂಡ. ಆ ಪ್ರದೇಶದಲ್ಲಿ ಚೋಳ ಶಾಸನ ಸರಿಸುಮಾರು ಒಂದು ಶತಮಾನದಷ್ಟು ಕಾಲ ಸಾಗಿತು. ಭಾರತೀಯರು ನೌಕಾಸೇನೆ ಕಟ್ಟಿ, ಸಾಗರದಲೆಗಳ ಮೇಲೆ ಸಾಗಿ, ದೂರದ ನಾಡೊಂದರ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಿದ ಉದಾಹರಣೆ ಬಹುಶಃ ಇದೊಂದೇ. ಇತಿಹಾಸದುದ್ದಕ್ಕೂ ಭಾರತೀಯರ ಆಕ್ರಮಣಶೀಲತೆಗೆ ಸಿಗುವ ಉದಾಹರಣೆಗಳು ಇವಿಷ್ಟೇ. ಇದರರ್ಥ ಭಾರತೀಯರು ಸ್ವಭಾವತಃ ಶಾಂತಿಪ್ರಿಯರೇ? ಅಹಿಂಸಾವಾದಿಗಳೇ? “ಸತ್ಯ ಮತ್ತು ಅಹಿಂಸೆ ಬಲು ಪುರಾತನವಾದುವು” (Truth and non-violence are as old as Hills) ಎನ್ನುವುದು ಮಹಾತ್ಮಾ ಗಾಂಧಿಯವರ ಒಂದು ಬಹುಉಲ್ಲೇಖಿತ ಹೇಳಿಕೆ. ಇಲ್ಲಿ ಸತ್ಯವನ್ನು ಪಕ್ಕಕ್ಕಿರಿಸಿ, ಅಹಿಂಸೆ ಮತ್ತದರ ಅವಳಿಯಾದ ಶಾಂತಿ ಭಾರತದಲ್ಲಿ ಎಷ್ಟು ಪುರಾತನವಾಗಿದ್ದಿರಬಹುದು ಎಂಬುದನ್ನು ಶೋಧಿಸಹೊರಟರೆ ಅದರ ಪ್ರಥಮ ಕುರುಹುಗಳು ಉಪಖಂಡದ ಪ್ರಪ್ರಥಮ ನಾಗರೀಕತೆಯ ತೊಟ್ಟಿಲಾದ ಸಿಂಧೂಕಣಿವೆಯಲ್ಲೇ ದೊರೆಯುತ್ತವೆ. ಸಿಂಧ್ ಕೊಳ್ಳದ ಯಾವುದೇ ಉತ್ಖನನ ಸ್ಥಳದಲ್ಲಿ ಆಯುಧಗಳು ಅಥವಾ ಮಾರಕಾಸ್ತ್ರಗಳು ಪತ್ತೆಯಾಗಿಲ್ಲ. ಯಥೇಚ್ಛವಾಗಿ ದೊರಕಿರುವುದು ದೈನಂದಿನ ಬದುಕಿಗೆ ಅಗತ್ಯವಾದ ಉಪಕರಣಗಳು. ಐತಿಹಾಸಿಕವಾಗಿ ಮೆಡಿಟರೇನಿಯನ್ ತೀರದ ಟರ್ಕಿಯಿಂದ ಹಿಡಿದು ಪರ್ಶಿಯಾ (ಇರಾನ್), ಅಫ್ಘಾನಿಸ್ತಾನ್ ಹಾಗೂ ಭಾರತದ ನಿವಾಸಿಗಳು ಆರ್ಯ ಜನಾಂಗಕ್ಕೆ ಸೇರಿದವರು ಅಂದರೆ ಇವರೆಲ್ಲರೂ ದಾಯಾದಿಗಳೇ.
ಆದರಿಲ್ಲಿ ಕುತೂಹಲದ ವಿಷಯವೆಂದರೆ ಭಾರತದ ಆರ್ಯರು ಆಕ್ರಮಣಶೀಲತೆಯಲ್ಲಿ ಆಸಕ್ತಿಯನ್ನೂ, ಶಸ್ತ್ರಸಂಘರ್ಷದಲ್ಲಿ ಪರಿಣಿತಿಯನ್ನೂ, ಒಟ್ಟಾರೆ ಕ್ಷಾತ್ರಗುಣವನ್ನೇ ಕಳೆದುಕೊಂಡರೆ ಟರ್ಕ್, ಇರಾನಿಯನ್ ಮತ್ತು ಅಫ್ಘನ್ ಆರ್ಯರು ತಮ್ಮ ಕ್ಷಾತ್ರಗುಣ ಹಾಗೂ ಯುದ್ಧೋತ್ಸಾಹಗಳನ್ನು ಉಳಿಸಿಕೊಂಡೇ ಬಂದರು. ಇದಾದದ್ದೇಕೆ? ಈ ಪ್ರಶ್ನೆಗೆ ಸಮರ್ಪಕ ಉತ್ತರಗಳು ದೊರೆಯುವುದು ಭೂಗೋಳ ಮತ್ತು ಅರ್ಥಶಾಸ್ತ್ರಗಳಲ್ಲಿ. ಟರ್ಕಿ, ಇರಾನ್ ಹಾಗೂ ಅಫ್ಘಾನಿಸ್ತಾನಗಳು ಭೌಗೋಳಿಕವಾಗಿ ಹಿಮಾಚ್ಛಾದಿತ ಉನ್ನತ ಪರ್ವತಗಳ, ಬರಡು ಬೆಟ್ಟಗುಡ್ಡಗಳ ಪ್ರದೇಶಗಳು. ಪ್ರಾರಂಭದಲ್ಲಿ ತುರುಗಾಹಿಗಳಾಗಿದ್ದ ಆರ್ಯರಿಗೆ ತಮ್ಮ ವೃದ್ಧಿಸುತ್ತಿದ್ದ ಜನಸಂಖ್ಯೆಗೆ ಅಗತ್ಯವಿರುವಷ್ಟು ಅನ್ನ, ನೀರು, ಹುಲ್ಲು ಆ ಪರ್ವತಮಯ ದೇಶಗಳಲ್ಲಿ ದೊರೆಯಲಿಲ್ಲ.
ಆದರೆ ಭಾರತದ ಭೌಗೋಳಿಕ ಸ್ಥಿತಿ ಆರ್ಯರ ಉಳಿದೆಲ್ಲಾ ವಾಸಥಾನಗಳಿಗಿಂತಲೂ ಭಿನ್ನವಾಗಿತ್ತು. ಇಲ್ಲಿನ ನೆಲ ವರ್ಷಪೂರ್ತಿ ತುಂಬಿ ಹರಿಯುವ ಸಿಂಧೂ ಮತ್ತದರ ಉಪನದಿಗಳು, ಸರಸ್ವತಿ, ಗಂಗಾ ಮತ್ತವುಗಳ ಹಲವು ಉಪನದಿಗಳಿಂದ ಗಿಡಿದಿದ್ದು ಇಲ್ಲಿ ಅಗಾಧ ಸಿಹಿನೀರಿತ್ತು, ಲಕ್ಷಾಂತರ ಚದರ ಮೈಲು ವಿಸ್ತಾರದ ಫಲವತ್ತಾದ ನೆಲವಿತ್ತು. ಇವೆರಡರಿಂದ ತಮಗೆ ಬೇಕಾದ್ದನ್ನೆಲ್ಲಾ ಬೆಳೆದುಕೊಳ್ಳುವ ವಿಪುಲ ಅವಕಾಶ ಇಲ್ಲಿನ ಜನರಿಗಿತ್ತು. ಹೀಗಾಗಿಯೇ ಭಾರತದ ಆರ್ಯ ಜನಾಂಗ ಬಂಗಾಲವನ್ನು ದಾಟಿ ಮುಂದೆ ಹೋಗಲಿಲ್ಲ. ಹೋಗುವ ಅಗತ್ಯವೇ ಅವರಿಗಿರಲಿಲ್ಲ. ಒಂದುವೇಳೆ ಟರ್ಕಿ, ಇರಾನ್ ಮತ್ತು ಅಫಘಾನಿಸ್ತಾನಗಳಂತೆ ಉತ್ತರ ಭಾರತವೂ ಹೆಚ್ಚಿನ ಜನವಸತಿಗೆ ಯೋಗ್ಯವಲ್ಲದ ಬರಡು ನೆಲವಾಗಿದ್ದರೆ ಆರ್ಯರು ಬಂಗಾಲವನ್ನೂ ದಾಟಿ ಈಗಿನ ಪೂರ್ವೋತ್ತರ ರಾಜ್ಯಗಳು, ಬರ್ಮಾ, ಥಾಯ್‌ಲ್ಯಾಂಡ್ ಮಂತಾದ ಆಗ್ನೇಯ ಏಶಿಯಾದ ದೇಶಗಳಲ್ಲೆಲ್ಲಾ ಖಂಡಿತಾ ಹರಡಿಹೋಗಿರುತ್ತಿದ್ದರು ಎಂದು ನಾನು ದೃಢವಾಗಿ ನಂಬುತ್ತೇನೆ. ಯಾರಿಗೆ ಗೊತ್ತು, ಮುಂದೆ ಹೋಗಿ ಚೀನಾದ ವಿಶಾಲ ಹ್ವಾಂಗ್‌ಹೋ-ಯಾಂಗ್ಟ್‌ಝೆ ನದೀಬಯಲಲ್ಲೂ ಹರಡಿಹೋಗಿರುತ್ತಿದ್ದರೇನೋ.
ಹೀಗೆ, ಭಾರತೀಯರು ತಮ್ಮ ಆಕ್ರಮಣಶೀಲತೆ ಹಾಗೂ ಅದಕ್ಕೆ ಅಡಿಪಾಯವಾದ ಕ್ಷಾತ್ರಗುಣ ಅಂದರೆ martial spirit ಅನ್ನು ಕಳೆದುಕೊಂಡು ಶಾಂತಿಯುತ ಮಾರ್ಗಗಳಿಂದಲೇ ತಮ್ಮ ಸಂಸ್ಕೃತಿ, ಮೌಲ್ಯಗಳು ಹಾಗೂ ಜ್ಞಾನವನ್ನು ನೆರೆನಾಡುಗಳಿಗೆ ಹರಡುವಂತಾಗಲು ಕಾರಣ ಇಲ್ಲಿನ ಅಗಾಧ ಸಿಹಿನೀರು ಹಾಗೂ ಫಲವತ್ತಾದ ವಿಶಾಲ ಭೂಮಿಗಳೇ. ಇದಕ್ಕೆ ಸ್ವಲ್ಪ ವಿವರಣೆ ಅಗತ್ಯವೆನಿಸುತ್ತದೆ. ಸಂಪನ್ಮೂಲಗಳ ಕೊರತೆ ಇರುವಾಗ, ಸೀಮಿತ ಸಂಪನ್ಮೂಲಗಳ ಸಮಾನ ಹಂಚಿಕೆಯನ್ನು ನಿರ್ವಹಿಸುವ ವಿಶ್ವಾಸಾರ್ಹ ಖಾಯಂ ರಾಜಕೀಯ ಹಾಗೂ ಕಾನೂನು ವ್ಯವಸ್ಥೆ ಇಲ್ಲದಿದ್ದಾಗ ತಮ್ಮಲ್ಲಿರುವ ವಸ್ತುಗಳನ್ನು ಕಾಪಾಡಿಕೊಳ್ಳುವುದು, ಅವಕಾಶ ಸಿಕ್ಕಿದಾಗ ಇತರರ ವಸ್ತುಗಳನ್ನು ಕಸಿದುಕೊಳ್ಳುವುದು ಮನುಷ್ಯನ ಸ್ವಭಾವವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಜನ ಅನುಕ್ಷಣವೂ ತಮ್ಮ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಜಾಗರೂಕತೆಯನ್ನು ಕಾಪಾಡಿಕೊಂಡಿರಬೇಕಾಗುತ್ತದೆ.
ಹಾಗಿಲ್ಲದಿದ್ದ ಪಕ್ಷದಲ್ಲಿ ತಮ್ಮ ವಸ್ತುಗಳನ್ನೂ, ಜೀವವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಸಂಪನ್ಮೂಲಗಳ ತೀವ್ರ ಕೊರತೆ ಇದ್ದ ಪಶ್ಚಿಮ ಮತ್ತು ಮಧ್ಯ ಏಶಿಯಾದ ನಾಡುಗಳ ಆರ್ಯರು ಸ್ವಾಭಾವಿಕವಾಗಿಯೇ ತಮ್ಮ ಜೀವ ಹಾಗೂ ವಸ್ತುಗಳ ರಕ್ಷಣೆಗಾಗಿ ಕ್ಷಾತ್ರಗುಣವನ್ನು ಉಳಿಸಿಕೊಂಡರು. ಪ್ರತಿದಿನದ ಬದುಕೂ ಒಂದು ಸಂಘರ್ಷವಾಗಿದ್ದ ಆ ದಿನಗಳಲ್ಲಿ ಅದು ಅಗತ್ಯವಾಗಿತ್ತು. ಆದರೆ ಸಂಪನ್ಮೂಲಗಳು ಯಥೇಚ್ಛವಾಗಿದ್ದ ಉತ್ತರ ಭಾರತದಲ್ಲಿ ಜೀವಕ್ಕಾಗಲೀ, ಆಸ್ತಿಪಾಸ್ತಿಗಾಗಲೀ ಯಾವ ಅಪಾಯವೂ ಇರಲಿಲ್ಲ. ಎಲ್ಲರಿಗೂ ಎಲ್ಲವೂ ಸಿಗುವಾಗ ಮತ್ತೊಬ್ಬನನ್ನು ಕೊಂದು ಅವನ ಆಸ್ತಿಯನ್ನು ಕಸಿಯುವ ಮನೊಭಾವದ ಅಗತ್ಯವಿರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಅನುಕ್ಷಣವೂ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಚಾಗರೂಕತೆಯನ್ನು ಕಾಪಾಡಿಕೊಳ್ಳುವ ಅಗತ್ಯವೂ ಇರುವುದಿಲ್ಲ. ಹೀಗಾದಾಗ ತಲೆಮಾರುಗಳು ಉರುಳಿದಂತೆ ಕ್ಷಾತ್ರಗುಣವೂ ಕ್ರಮೇಣ ನಶಿಸಿಹೋಗುತ್ತದೆ. ಇದರ ತಾರ್ಕಿಕ ಮುಂದುವರಿಕೆಯಾಗಿ ‘ಶಾಂತಿ’ಯ ಮನೋಭಾವನೆ ಸಾರ್ವತ್ರಿಕವಾಗಿ ಜನಮನದಲ್ಲಿ, ಸಂಸ್ಕೃತಿ ಸಂಪ್ರದಾಯಗಳಲ್ಲಿ ಹಾಸುಹೊಕ್ಕಾಗುತ್ತದೆ. ಕ್ಷಾತ್ರಗುಣ ಕಡಿಮೆಯಾದಂತೆ ಶಾಂತಿ ‘ಸಾಮುದಾಯಿಕ ಅಗತ್ಯ’ವಾಗುವುದು ಸ್ವಾಭಾವಿಕ. ದೈನಂದಿನ ಬದುಕಿನಲ್ಲಿ ಆಕ್ರಮಣಶೀಲತೆ ಕಡಿಮೆಯಾದಂತೆ ಧಾರ್ಮಿಕ ಮೌಲ್ಯಗಳು ಮತ್ತು ಆಚರಣೆಗಳು ಆಕ್ರಮಣಶೀಲತೆಯನ್ನು ದೂರವಿರಿಸುತ್ತವೆ, ಅಂದರೆ ಶಾಂತಿಯುತವಾಗುತ್ತದೆ. ಹಿಂದೂಧರ್ಮ ಒಳಗಾದದ್ದು ಈ ಬದಲಾವಣೆಗೆ. ಈ ‘ಶಾಂತಿಪ್ರಿಯತೆ’ ಈ ನೆಲದಲ್ಲಿ ಕಾಲಾಂತರದಲ್ಲಿ ಉದ್ಭವವಾದ ಹೊಸ ನಂಬಿಕೆಗಳ ಮೂಲಮಂತ್ರವೂ ಆಯಿತು. ಆಸಕ್ತಿಕರ ವಿಷಯವೆಂದರೆ ಅನಿವಾರ್ಯವಾಗಿ ಶಸ್ತ್ರ ಹಿಡಿದು ಕಾಳಗಕ್ಕಿಳಿಯಬೇಕಾದ ಸಂದರ್ಭ ಒದಗಿದಾಗಲೂ ಶಾಂತಿಯುತ ಧಾರ್ಮಿಕ ಮೌಲ್ಯಗಳೇ ಭಾರತೀಯರ ಯುದ್ಧದ ನಿಯಮಗಳನ್ನು ನಿರ್ಣಯಿಸತೊಡಗಿದವು. ನಮಗೆ ಐತಿಹಾಸಿಕವಾಗಿ ವಿವರವಾಗಿ ಪರಿಚಯವಿರುವ ಪೋರಸ್ – ಅಲೆಕ್ಸಾಂಡರ್ ಮುಖಾಮುಖಿ, ಪೃಥ್ವಿರಾಜ್ ಚೌಹಾನ್ – ಮಹಮದ್ ಘೋರಿ ಕದನಗಳು ಎತ್ತಿ ತೋರುವುದು ಇದನ್ನೇ. ಹೀಗೆ, ಭಾರತದ “ಹಿಂದೂ ಆರ್ಯರು” ಕ್ಷಾತ್ರಗುಣವನ್ನು ಕಳೆದುಕೊಂಡು ಟರ್ಕಿ, ಇರಾನ್ ಹಾಗೂ ಅಫ್ಘಾನಿಸ್ತಾನಗಳ “ಮುಸ್ಲಿಂ ಆರ್ಯ”ರ ಎದುರು ರಣರಂಗದಲ್ಲಿ ಪರಾಭವಗೊಂಡಂತೇ, ವಿಜಯೀ ಮುಸ್ಲಿಂ ಆರ್ಯರೂ ನಂತರ ಇದೇ ಪ್ರಕ್ರಿಯೆಗೊಳಗಾಗಿ ಅವರೂ ಸಹಾ ತಮ್ಮ ಕ್ಷಾತ್ರಗುಣಗಳನ್ನು ಕಳೆದುಕೊಂಡರು ಮತ್ತು ನಂತರದ ದಿನಗಳಲ್ಲಿ ಹೊರಗಿನ ಆಕ್ರಮಣಕಾರರ ವಿರುದ್ಧ ಅವರ ಸಾಧನೆಗಳು ಅತ್ಯಲ್ಪವಾಗಿಹೋದದ್ದು ಇತಿಹಾಸದ ವಿಶ್ಲೇಷಣೆಯಲ್ಲಿ ನಿಚ್ಚಳವಾಗಿ ಗೋಚರವಾಗುತ್ತದೆ. ಕ್ರಿ. ಶ. ೭೧೧-೧೨ರಲ್ಲಿ ಘಟಿಸಿದ ಅರಬ್ಬರ ಸಿಂಧ್ ಆಕ್ರಮಣದ ಬಗ್ಗೆ ನಮಗೆ ವಿವರಗಳು ದೊರೆಯುವುದು ೧೨೧೬ರಲ್ಲಿ ಆಲಿ ಬಿನ್ ಹಮೀದ್ ಅಲ್ ಕೂಫಿಯಿಂದ ರಚಿತವಾದ, ಕಳೆದುಹೋಗಿರುವ ಅರಬ್ ಕೃತಿಯೊಂದರ ಅನುವಾದವೆಂದು ನಂಬಲಾಗಿರುವ “ಚಾಚ್‌ನಾಮಾ”ದಲ್ಲಿ.
ಅರಬ್ ಸೇನೆಯ ಯಶಸ್ಸಿಗೆ ಮುಖ್ಯ ಕಾರಣ ಸಿಂಧ್‌ನ ಹಿಂದೂಗಳು ಮತ್ತು ಬೌದ್ಧರ ನಡುವಿನ ಅವಿಶ್ವಾಸ ಮತ್ತು ‘ಅಹಿಂಸಾವಾದಿ’ಗಳಾದ ಬೌದ್ಧರು ಯುದ್ಧ ಮಾಡಲು ಹಿಂದೆಗೆದದ್ದು ಎಂದು ಚಾಚ್‌ನಾಮಾ ಹೇಳುತ್ತದೆ. ನಂತರ ಭಾರತದ ಹೃದಯಭಾಗದಲ್ಲಿ ಮುಸ್ಲಿಂ ಶಾಸನವನ್ನು ಸ್ಥಾಪಿಸಿ ಈ ನೆಲದಲ್ಲಿ ಮುಸ್ಲಿಂ ಸಾಮ್ರಾಜ್ಯವಾದಕ್ಕೆ ಬುನಾದಿ ಹಾಕಿದ್ದು ಟರ್ಕೋ-ಅಘ್ಘನ್ ಅರಸ ಮಹಮದ್ ಘೋರಿ. ಕ್ರಿ. ಶ. ೧೧೯೧ರಲ್ಲಿನ ತನ್ನ ಮೊದಲ ವಿಫಲ ಪ್ರಯತ್ನದ ನಂತರ ಆತ ಮರುವರ್ಷವೇ ಎರಡನೆಯ ಪ್ರಯತ್ನಕ್ಕೆ ಮುಂದಾಗಿ ಅದರಲ್ಲಿ ಯಶಸ್ವಿಯಾದ. ನಂತರ ಇಡೀ ಉತ್ತರ ಭಾರತ ಟರ್ಕೋ-ಅಫ್ಟನ್ ಮುಸ್ಲಿಂ ಶಾಸನಕ್ಕೆ ಒಳಗಾಗಲು ತಗಲಿದ್ದು ಕೇವಲ ಹನ್ನೊಂದು ವರ್ಷಗಳು! ೧೨೦೨-೦೩ರಲ್ಲಿ ಗಂಗಾ ಬಯಲಿನಲ್ಲಿ ವಾಯುವೇಗದಲ್ಲಿ ಸಂಚರಿಸಿದ ಬಕ್ತಿಯಾರ್ ಖಿಲ್ಜಿ ಕೇವಲ ಹದಿನೆಂಟು ಅಶ್ವಾರೋಹಿಗಳೊಂದಿಗೆ ಬಂಗಾಲವನ್ನು ಗೆದ್ದುಕೊಂಡ. ನಂತರದ ಮೂರು ಶತಮಾನಗಳವರೆಗೆ ಭಾರತ ಕಂಡದ್ದು ಟರ್ಕೋ-ಅಫ್ಟನ್ ಮುಸ್ಲಿಂ ಸೇನಾ ಪ್ರಾಬಲ್ಯ. ಪಂಜಾಬ್‌ನಿಂದ ಮಧುರೈವರೆಗಿನ ವಿಶಾಲ ಪ್ರದೇಶದಲ್ಲಿ ಸತತ ಸೇನಾ ಕಾರ್ಯಾಚರಣೆಗಳನ್ನು ನಡೆಸಿ ಮತ್ತೆಮತ್ತೆ ಜಯಶೀಲರಾದ ಅಫ್ಟನ್ ಮುಸ್ಲಿಂ ಆರ್ಯರು ಉಪಖಂಡದ ಆಚೆಗಿನ ಜನಾಂಗಗಳ ಮೇಲೆ ರಣಾಂಗಣದಲ್ಲಿ ವಿಜಯ ಸಾಧಿಸಿದ ಉದಾಹರಣೆಗಳು ಅಪರೂಪ. ಹದಿನೆಂಟು ಅಶ್ವಾರೋಹಿಗಳೊಂದಿಗೆ ಬಂಗಾಲವನ್ನು ಕೈವಶ ಮಾಡಿಕೊಂಡ ಬಕ್ತಿಯಾರ್ ಖಿಲ್ಜಿ ಮೂರು ವರ್ಷಗಳ ನಂತರ ಟಿಬೆಟ್‌ನಲ್ಲಿ ವಿಫಲನಾದ. ಆ ವೈಫಲ್ಯವೇ ಅವನಿಗೆ ಮಾರಣಾಂತಿಕವೂ ಆಯಿತು. ಮಲಿಕ್ ಕಾಫರ್‌ನ ಮೂಲಕ ದೇವಗಿರಿ, ವಾರಂಗಲ್, ದ್ವಾರಸಮುದ್ರ, ಮಧುರೈಗಳ ಮೇಲೆ ಅಭೂತಪೂರ್ವ ವಿಜಯ ಸಾಧಿಸಿದ ಅಲ್ಲಾವುದ್ದೀನ್ ಖಿಲ್ಜಿಗೆ ಉಪಖಂಡದ ಹೊರಗೆ ದಕ್ಕಿದ ಏಕಮಾತ್ರ ಮಹತ್ವದ ವಿಜಯವೆಂದರೆ ಘಾಜಿ ಖಾನ್‌ನ ನೇತೃತ್ವದ ಗಡಿಸೇನೆ ಹೂಣರನ್ನು ಖೈಬರ್‌ನಾಚೆಗಿನ ಅಫ್ಘಾನಿಸ್ತಾನಕ್ಕೆ ಅಟ್ಟಿದ್ದು. ಮಂಗೋಲರ ವಿರುದ್ಧ ಭಾರತದ ಮುಸ್ಲಿಂ ಅರಸರ ಪರಾಕ್ರಮ ಅಲ್ಲಿಗೆ ನಿಂತುಹೋಯಿತು. ಕೊನೆಗೆ ಅದೆಲ್ಲಿಗೆ ತಲುಪಿತೆಂದರೆ ಮಂಗೋಲ್-ಟರ್ಕಿಷ್ ಮಿಶ್ರರಕ್ತದ ಮೊಗಲರು ೧೫೨೬-೫೬ರಲ್ಲಿ ಉತ್ತರ ಭಾರತದ ಸಾರ್ವಭೌಮರಾದರು. ಬಾಬರ್‌ನ ನಂತರ ಅಫ್ಘಾನಿಸ್ತಾನದಲ್ಲಿ ನೆಲೆ ಕಳೆದುಕೊಂಡ ಮೊಗಲರು ತಮ್ಮ ಸೇನಾಸಾಮರ್ಥ್ಯವನ್ನು ಪ್ರದರ್ಶಿಸಿದ್ದೆಲ್ಲವೂ ಉಪಖಂಡದ ಎಲ್ಲೆಯೊಳಗೇ. ಅದರಾಚೆಗೆ ಅವರ ಆಟ ನಡೆಯಲಿಲ್ಲ.
ಇದರರ್ಥವೇನೆಂದರೆ ಹನ್ನೆರಡು-ಹದಿಮೂರನೆಯ ಶತಮಾನಗಳ ಸಂಧಿಕಾಲದಲ್ಲಿ “ಭಾರತದ ಹಿಂದೂ ಆರ್ಯ”ರನ್ನು ಸೋಲಿಸಿ ಈ ದೇಶವನ್ನು ಗೆದ್ದು ಆಳತೊಡಗಿದ “ಟರ್ಕೋ-ಅಫ್ಘನ್ ಮುಸ್ಲಿಂ ಆರ್ಯ”ರು ಮೂರು ಶತಮಾನಗಳು ಉರುಳುವಷ್ಟರಲ್ಲಿ ತಮ್ಮ ಕಲಿತನವನ್ನು ಕಳೆದುಕೊಂಡು ಮಧ್ಯಏಶಿಯಾದಿಂದ ಬಂದ ಮೊಗಲರಿಗೆ ಸೋತು ಶರಣಾದರು ಮತ್ತು ಎರಡು ಶತಮಾನಗಳ ನಂತರ ಮೊಗಲರೂ ಸಹಾ ಉಪಖಂಡದೊಳಗೆ ಹಿಂದೂ ಮತ್ತು ಸಿಖ್ ಪ್ರತಿರೋಧವನ್ನು ನಿಗ್ರಹಿಸುವುದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದರೂ ಇರಾನಿಯನ್ ಮುಸ್ಲಿಂ ಆರ್ಯರ ಮುಂದೆ ಸೋಲೊಪ್ಪಿದರು. ಹೀಗೆ ಹೊರಗಿನಿಂದ ದಾಳಿಯ ಮೂಲಕ ಭಾರತವನ್ನು ಗೆದ್ದುಕೊಂಡ ಜನಾಂಗಗಳು, ಹಿಂದೂ ಆಗಿರಲಿ ಅಥವಾ ಮುಸ್ಲಿಂ ಆಗಿರಲಿ, ಕೆಲವು ತಲೆಮಾರುಗಳ ನಂತರ ಈ ನೆಲದ ಭೌಗೋಳಿಕ ಅಂಶಗಳು ಮತ್ತು ಅವು ಒದಗಿಸಿದ ಆರ್ಥಿಕ ಅನುಕೂಲತೆ, ತತ್ಪರಿಣಾಮವಾಗಿ ದಕ್ಕಿದ ನಿರಾಳತೆಯಿಂದಾಗಿ ತಮ್ಮ ಕಲಿತನವನ್ನು ಕಳೆದುಕೊಂಡು ಹೊಸ ದಾಳಿಕಾರರ ಮುಂದೆ ಮಂಡಿಯೂರಿದವು. ಆದರೆ ಬದುಕೊಂದು ಸಂಘರ್ಷವಾಗಿದ್ದ ಪಶ್ಚಿಮ ಏಶಿಯಾದ ಜನಾಂಗಗಳು ಆದಿಕಾಲದಿಂದಲೂ ತಂತಮ್ಮ ಕ್ಷಾತ್ರಗುಣಗಳನ್ನು ಉಳಿಸಿ ಬೆಳೆಸಿ ಯುದ್ಧಕಲೆಯನ್ನು ಕರಗತಗೊಳಿಸಿಕೊಳ್ಳುತ್ತಾ ಸಾಗಿದವು.
ಕಾಲಕಾಲಕ್ಕೆ ಆ ನೆಲದಲ್ಲಿ ಪ್ರಭಾವಶಾಲಿಯಾಗಿದ್ದ ಯೆಹೂದಿ, ಹಿಂದೂ, ಪಾರ್ಸೀ ಮತ್ತುಅಂತಿಮವಾಗಿ ಮುಸ್ಲಿಂ ಜನತೆಗಳೆಲ್ಲವೂ ಆ ನಿರ್ವಾಹವಿಲ್ಲದೇ ಆ ಪ್ರಕ್ರಿಯೆಗೆ ಒಳಗಾದವು. ಹೊರಗಿನಿಂದ ಬಂದ ಮುಸ್ಲಿಂ ಜನಾಂಗಗಳ ಕ್ಷಾತ್ರಗುಣ ಕೆಲ ತಲೆಮಾರುಗಳ ನಂತರ ಅದೆಷ್ಟು ಕ್ಷೀಣಿಸಿತೆಂದರೆ ತಾವು ಬಿಟ್ಟುಬಂದಿದ್ದ ಪ್ರದೇಶಗಳಲ್ಲಿ, ಕೊನೇಪಕ್ಷ ಭಾರತಕ್ಕೆ ಭೌಗೋಳಿಕವಾಗಿ ಹತ್ತಿರವಾಗಿದ್ದ ಅಫ್ಘಾನಿಸ್ತಾನದಲ್ಲಿಯೂ ಸಹಾ, ತಮ್ಮ ಪರಾಕ್ರಮವನ್ನು ಮತ್ತೊಮ್ಮೆ ಮೆರೆಯುವಲ್ಲಿ ವಿಫಲರಾದವು ಮತ್ತು ತಮ್ಮ ಸೇನಾಪ್ರಾಬಲ್ಯವನ್ನು, ಶಾಸನವನ್ನು ಕೇವಲ ಭಾರತದ ಎಲ್ಲೆಯೊಳಗಷ್ಟೇ ಸೀಮಿತಗೊಳಿಸುವ ಹಣೆಬರಹಕ್ಕೊಳಗಾದವು.
ಇದರಿಂದ ವಿಶದವಾಗುವುದೇನೆಂದರೆ, ಭಾರತವನ್ನು ತಮ್ಮ ನಿವಾಸವನ್ನಾಗಿ ಮಾಡಿಕೊಂಡ ಹಿಂದೂಗಳ ಹಣೆಬರಹಕ್ಕೂ ಮುಸ್ಲಿಮರ ಹಣೆಬರಹಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಹೀಗಾಗಿಯೇ ಪಶ್ಚಿಮ, ಮಧ್ಯ ಏಶಿಯಾಗಳಲ್ಲಿ ಕ್ರೂರತನವನ್ನು ಮೆರೆದು ಅನ್ಯಧರ್ಮಗಳನ್ನು ಸಂಪೂರ್ಣವಾಗಿ ನಾಶ ಮಾಡಿದ ಇಸ್ಲಾಂ ಭಾರತದಲ್ಲಿ ಇತರ ಧರ್ಮಗಳ ಜತೆ ಸಹಬಾಳ್ವೆಯ ಮಾರ್ಗ ಹಿಡಿಯಿತು. ಹಾಗೆಯೇ ಇಸ್ಲಾಂನ ಶಾಂತಿಪ್ರಿಯ ರೂಪವಾದ ಸೂಫಿ ನಂಬಿಕೆ ಭಾರತದ ಹೊರಗೆ ಜನ್ಮತಾಳಿದರೂ ಅದು ಜನಮಾನ್ಯವಾಗಿ ಪ್ರವರ್ಧಮಾನಕ್ಕೆ ಬಂದದ್ದು ಮತ್ತು ಹಲವು ಪ್ರಮುಖ ಮುಸ್ಲಿಂ ಅರಸರಿಂದ ಪೋಷಿಸಲ್ಪಟ್ಟದ್ದು ಭಾರತದಲ್ಲಿ. ಕಾಲಕಾಲಕ್ಕೆ ಭಾರತದ ಅಧಿಪತಿಗಳಾಗಿ ಮೆರೆದ ಹಿಂದೂ ಅಥವಾ ಮುಸ್ಲಿಂ ಅರಸುಮನೆತನಗಳ ಅಸ್ತಿತ್ವಕ್ಕೆ ತೀವ್ರತರದ ಅಪಾಯ ಎದುರಾಗುತ್ತಿದ್ದುದು ಹೊರಗಿನಿಂದ ಮಾತ್ರ. ಹೀಗಾಗಿ ಹೊರಗಿನ ಶತೃಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು ಅಸ್ತಿತ್ವದ ಪ್ರಶ್ನೆಯಾದ ಕಾರಣ ಅಂತರಿಕ ಕ್ಷೇತ್ರದಲ್ಲಿ ಪರಸ್ಪರ ರಾಜಿ ಸಹಿಷ್ಟುತೆ, ಶಾಂತಿ ಮುಖ್ಯವೆನಿಸಿದವು. ಸಿಂಧ್‌ನ ಮುಸ್ಲಿಂ ಅರಸರು ರಾಷ್ಟ್ರಕೂಟರಿಗೆ ಕಪ್ಪ ಒಪ್ಪಿಸಿದ್ದಕ್ಕೂ, ಮೊಗಲರು ರಜಪೂತರನ್ನು ಓಲೈಸಿದ್ದಕ್ಕೂ ಇದು ಕಾರಣ. ಇದೇ ನೆಲೆಯಲ್ಲಿ ಇತಿಹಾಸದ ಯಾವುದೇ ಹಂತದಲ್ಲೂ ಉಪಖಂಡದಲ್ಲಿ ಸಾರಾಸಗಟು ಮತಾಂತರ ನಡೆಯದೇ ಹೋದುದನ್ನೂ ವಿವರಿಸಬಹುದು. ಭಾರತದ ಭೌಗೋಳಿಕ ಹಾಗೂ ಆರ್ಥಿಕ ಕಾರಣಗಳು ಜೀವನಮೌಲ್ಯಗಳನ್ನೂ, ಧಾರ್ಮಿಕ ರೀತಿರಿವಾಜುಗಳನ್ನೂ ಬದಲಾಯಿಸುವುದು ಹಿಂದೂಗಳಿಗಷ್ಟೇ ಸೀಮಿತವಾಗಿರಲಿಲ್ಲ. ಆ ಪ್ರಕ್ರಿಯೆಗೆ ಮುಸ್ಲಿಮರೂ ಸಹಾ ಒಳಗಾಗಿದ್ದಾರೆ. ಸಂಪನ್ಮೂಲಗಳ ಕೊರತೆ ಇರುವಲ್ಲಿ ಪಕ್ಕದಲ್ಲಿ ‘ಅನ್ಯ’ನ ಅಸ್ತಿತ್ವ ಆರ್ಥಿಕ ಪ್ರಶ್ನೆಗಳನ್ನು ಜಟಿಲಗೊಳಿಸುತ್ತದೆ. ಹೀಗಾಗಿ ಅಲ್ಲಿ ಅಸಹನೆ ಒಡಮೂಡುತ್ತದೆ. ಎಲ್ಲರನ್ನೂ ‘ತಮ್ಮವ’ರನ್ನಾಗಿ ಮಾಡಿಕೊಳ್ಳುವುದರಿಂದ ಆ ಪ್ರಶ್ನೆಗಳನ್ನು ನಿವಾರಿಸಬಹುದೆಂಬ ನಿರೀಕ್ಷೆಯೇ ಇರಾನ್, ಟರ್ಕಿ, ಮಧ್ಯ ಏಶಿಯಾಗಳಲ್ಲಿ ಸಾರಾಸಗಟಾಗಿ ಎಲ್ಲರನ್ನೂ ಇಸ್ಲಾಂಗೆ ಮತಾಂತರಗೊಳಿಸುವ ಪ್ರಕ್ರಿಯೆಗೆ ಕಾರಣವಾಯಿತು. ಈ ಮತಾಂತರವೇ ಆ ಪ್ರದೇಶದಲ್ಲಿ ಹಿಂದಿನ ಎಲ್ಲಾ ಧರ್ಮಗಳಿಗಿಂತಲೂ ಇಸ್ಲಾಂ ಹೆಚ್ಚು ಪ್ರಬಲವಾಗಲು, ವ್ಯಾಪಕವಾಗಲು ಹಾಗೂ ದೀರ್ಘಾಯುವಾಗಲು ಕಾರಣವಾಯಿತು.
ಭೌಗೋಳಿಕ ಹಾಗೂ ಆರ್ಥಿಕ ವಾಸ್ತವಗಳನ್ನು ನಿರ್ಲಕ್ಷಿಸಿದ್ದೇ ಹಿಂದಿನ ಯೆಹೂದೀ, ಪಾರ್ಸೀ, ಹಿಂದೂ, ಬೌದ್ಧ ಧರ್ಮಗಳಿಗೆ ಮುಳುವಾಯಿತು. ಆದರೆ ಉಪಖಂಡದ ಪರಿಸ್ಥಿತಿ ಬೇರೆ. ತೀವ್ರತರದ ಅರ್ಥಿಕ ಸವಾಲುಗಳಿಲ್ಲದ ಭಾರತ ಉಪಖಂಡದಲ್ಲಿ ‘ನಾವು’ ಮತ್ತು “ಅವರು’ಗಳ ನಡುವಿನ ವ್ಯತ್ಯಾಸ ಕಣ್ಣಿಗೆ ರಾಚುವಂತೆ ಬೆಳೆದು ನಿಲ್ಲಲಿಲ್ಲ. ಪರಿಣಾಮವಾಗಿ ಪರಸ್ಪರ ಸಹನೆ, ಸಹಿಷ್ಟುತೆ ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ಹಾಸುಹೊಕ್ಕಾದವು. ಹೀಗಾಗಿಯೇ, ಮೂರು ಸಹಸ್ರಮಾನಗಳ ಹಿಂದೆ ಇಲ್ಲಿನ ಆಡಳಿತಗಾರರಾದ ಹಿಂದೂಗಳಿಗೂ, ಒಂದು ಸಹಸ್ರಮಾನದ ಹಿಂದೆ ಈ ನೆಲವನ್ನು ಆಳತೊಡಗಿದ ಮುಸ್ಲಿಮರಿಗೂ ಸಾರಾಸಗಟು ಬಲವಂತದ ಮತಾಂತರದ ಅಗತ್ಯ ಕಾಣಲಿಲ್ಲ. ನನ್ನೀ ಮಾತುಗಳ ಅರ್ಥವನ್ನು ಗ್ರಹಿಸಬೇಕಾದರೆ ಒಬ್ಬ ಪುಷ್ಯಮಿತ್ರ ಶುಂಗ, ಒಬ್ಬ ಶಶಾಂಕ, ಒಬ್ಬ ಔರಂಗಜೇಬ್, ಒಬ್ಬ ಟಿಪ್ಪು ಸುಲ್ತಾನ್‌ನಂತಹ ಅಪವಾದಗಳನ್ನು ಆಧಾರವಾಗಿಟ್ಟುಕೊಂಡು ಇತಿಹಾಸವನ್ನಾಗಲೀ, ವರ್ತಮಾನವನ್ನಾಗಲೀ ಪುನರ್ರಚಿಸುವ ಅವಿವೇಕಕ್ಕೆ ಕೈಹಾಕದಿರಬೇಕಷ್ಟೇ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ