- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ಕನ್ನಡ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ (ಜನನ ಡಿಸೆಂಬರ್ 1-1933 ,ಮರಣ ಜೂನ್ 5-1985)
ಈ ದಿನ ಡಿಸೆಂಬರ್ 1 ‘ಚಿತ್ರಬ್ರಹ್ಮ’ ಎಂದೇ ಕರೆಸಿಕೊಂಡಿರುವ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನ. ಪ್ರಮುಖತಃ ಪುಟ್ಟಣ್ಣ ಪ್ರತಿಭಾಸಂಪನ್ನತೆಯ ಮೇರು ಪರ್ವತ ಮೈಸೂರು ಜಿಲ್ಲೆ , ಪಿರಿಯಾಪಟ್ಟಣ ತಾಲೂಕಿನ ಕುಗ್ರಾಮ ಕಣಗಾಲ್ನವರು . ಇದೇ ಗ್ರಾಮಕ್ಕೆ ಸೇರಿದ ಮೇರು ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಪುಟ್ಟಣ್ಣವರ ಸಹೋದರ.
“ಬುಲ್ ಬುಲ್ ಮಾತಾಡಕ್ಕಿಲ್ವ”, ನಾ ಬಂದೇ ನಾ ನೋಡ್ದೆ ನಾಗೆದ್ದೆ..”, “ನೀನೇ ಸಾಕಿದಾ ಗಿಣಿ…” ಮುಂತಾದ ಸಂಭಾಷಣೆಗಳ ಮೂಲಕ ಕನ್ನಡಿಗರ ನಡುವೆ ಅಚ್ಚಳಿಯದೆ ಉಳಿದಿರುವವರು ಪುಟ್ಟಣ್ಣ ಕಣಗಾಲ್. ‘ಪುಟ್ಟಣ್ಣ’ ಎಂಬ ವ್ಯಕ್ತಿ ನಮ್ಮ ನಡುವೆ ಇಲ್ಲ ಆದರೆ ಅವರು ನಿರ್ದೇಶಿಸಿದ ಚಲನಚಿತ್ರಗಳು ನಿತ್ಯ ನೂತನವಾಗಿ ನಮ್ಮ ನಡುವೆ ಇವೆ. ಅವರು ನಿರ್ದೇಶಿಸಿದ ಚಿತ್ರಗಳೆಲ್ಲವೂ ಸಾಹಿತ್ಯ ಕೃತಿ ಆಧಾರಿತವಾಗಿವೆ. ಮಹಿಳಾ ಪ್ರಧಾನ ಮತ್ತು ದುಃಖಾಂತ್ಯ ಸಿನಮಾಗಳನ್ನು ನಿರ್ದೇಶಿಸಿ ಹೊಸ ಟ್ರೆಂಡನ್ನು ಹುಟ್ಟು ಹಾಕಿದ್ದು ಪುಟ್ಟಣ್ಣರವರ ವಿಶೇಷತೆಗಳಲ್ಲಿ ಒಂದು. ಸಾಹಿತ್ಯ ಕೃತಿಗಳನ್ನು ಚಲನಚಿತ್ರಗಳಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಕರಗತಮಾಡಿಕೊಂಡ ನಿರ್ದೇಶಕ ಎಂದರೆ ಪುಟ್ಟಣ್ಣರವರೆ. ಕೇವಲ ಕಾದಂಬರಿಗಳಲ್ಲ, ಕಥೆಗಳಲ್ಲ, ಕವಿವರೇಣ್ಯರ ಗೀತೆಗಳೂ ಇವರ ಚಿತ್ರಗಳಲ್ಲಿ ಹೂವಾಗಿ ಅರಳಿವೆ ನವಿಲಾಗಿ ನರ್ತಿಸಿವೆ.
ಪುಟ್ಟಣ್ಣ ಕಣಗಾಲ್ ರವರು ಚಿತ್ರಿಸಿರುವ 24 ಚಿತ್ರಗಳಲ್ಲಿ 18 ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳು. ತ್ರಿವೇಣಿಯವರ ‘ಬೆಳ್ಳಿಮೋಡ’,’ಶರಪಂಜರ’ , ತರಾಸುರವರ ‘ನಾಗರಹಾವು’, ‘ಮಸಣದ ಹೂ’, ಎಂ.ಕೆ ಇಂದಿರಾ ಅವರ ‘ಗೆಜ್ಜೆಪೂಜೆ’, ಆರ್ಯಾಂಭ ಪಟ್ಟಾಭಿಯವರ ‘ಕಪ್ಪು ಬಿಳುಪು’, ಅನುಪಮಾ ನಿರಂಜನಾರವರ (‘ಋಣ’) ‘ಋಣಮುಕ್ತಳು’, ಭಾರತೀಸುತರವರ’ ಎಡಕಲ್ಲುಗುಡ್ಡದ ಮೇಲೆ’, ಅಶ್ವತ್ಥರವರ ‘ರಂಗನಾಯಕಿ’, ದೇವಕೀ ಮೂರ್ತಿಯವರ ‘ಉಪಾಸನೆ’ ಮೊದಲಾದ ಕಾದಂಬರಿಗಳನ್ನು ಇಲ್ಲಿ ಹೆಸರಿಸಬಹುದು.
ಪುಟ್ಟಣ ಕಣಗಾಲ್ ಅವರ ಚಲನಚಿತ್ರಗೀತೆಗಳಲ್ಲಿ ಕರ್ನಾಟಕ
ವರಕವಿ ಬೇಂದ್ರೆಯ ‘ಬೆಳಗು’ ಶೀರ್ಷಿಕೆಯ ಪದ್ಯದ “ಮೂಡಲ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ” ಸಾಲುಗಳು ‘ಬೆಳ್ಳಿ ಮೋಡ’ ಚಿತ್ರದಲ್ಲಿ ಅರಳಿದ ದೃಶ್ಯಕಾವ್ಯವೇ ಸರಿ! ಯಾರಾದರೂ ನಿಮ್ಮ ಕರ್ನಾಟಕವನ್ನು ದೃಶ್ಯದ ಮೂಲಕ, ಹಾಡಿನ ಮೂಲಕ ವರ್ಣಿಸಿ ಎಂದರೆ ಸಾಕು ನಾವು ಕನ್ನಡಿಗರು ಪುಟ್ಟಣ್ಣರವರು ತಮ್ಮ ಚಿತ್ರಗಳಲ್ಲಿ ಅಳವಡಿಸಿರುವ ಗೀತೆಗಳನ್ನು ನಿರರ್ಗಳವಾಗಿ ಹಾಡುತ್ತಲೇ ನಮ್ಮ, ನಾಡನ್ನು ವರ್ಣಿಸಿಬಿಡಬಹುದು. ಹಾಗಾಗಿ ಸೃಜನಾತ್ಮಕತೆ ಹಾಗು ಕ್ರಿಯಾಶೀಲತೆಯೇ ಮೈವೆತ್ತಂತೆ ಇದ್ದ ಪುಟ್ಟಣ್ಣನವರನ್ನು “ಕನ್ನಡ ಚಲನಚಿತ್ರ ರಂಗದ ದೈತ್ಯ ಪ್ರತಿಭೆ” ಎನ್ನಬಹುದು. ಪುಟ್ಟಣ್ಣನವರಲ್ಲಿದ್ದ ಅನನ್ಯ ದೃಶ್ಯಹಾಗು ಶ್ರವ್ಯಪ್ರಜ್ಞೆಯಿಂದಲೇ ಇವರ ನಿರ್ದೇಶನದ ಹಾಡುಗಳು ಇವತ್ತಿಗೂ ಕೇಳುಗರ ಅಚ್ಚು ಮೆಚ್ಚಿನ ಗೀತೆಗಳಾಗಿವೆ.
“ಕಾವೇರಿ ಜೀವನದಿ” ಎಲ್ಲರಿಗೂ ಗೊತ್ತಿರುವುದೇ….! ಅಂಥ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ, ಭಾಗಮಂಡಲ,ತ್ರಿವೇಣಿಸಂಗಮ ಮೊದಲಾದವುಗಳನ್ನು ‘ಶರಪಂಜರ’ ಚಲನ ಚಿತ್ರದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ . ಇವತ್ತಿಗೂ ಮಡಿಕೇರಿಯ ಚಿತ್ರಮಂದಿರಗಳಲ್ಲಿ ಮೊದಲಿಗೆ ಹಾಕುವ ಹಾಡು ಇದು. “ಕಾವೇರಿ … ಕಾವೇರಿ… ಎನ್ನುತ್ತಲೇ ಕಾವೇರಿ ನದಿ ಹುಟ್ಟಿ ಬಯಲು ಸೀಮೆಗೆ ಹರಿದು ಮೊದಲ ಜಲಪಾತ ಸೃಷ್ಟಿಸುವ ಚುಂಚನಕಟ್ಟೆ ಯನ್ನೂ, ಮುಂದುವರೆದು ಹರಿಯುವ ಮಂಡ್ಯ ಜಿಲ್ಲೆಯ ಭತ್ತ ಹಾಗು ಕಬ್ಬಿನ ಗದ್ದೆಯ ದೃಶ್ಯಗಳನ್ನೂ ಔಚಿತ್ಯವರಿತು ಬಳಸಿಕೊಂಡಿದ್ದಾರೆ. ಇದು ಕೊಡಗು, ಮೈಸೂರು ಮಂಡ್ಯ ಜಿಲ್ಲೆಯ ಚಿತ್ರಣವಾದರೆ, ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟವನ್ನು ಇದೇ ‘ಶರಪಂಜರ’ ಚಿತ್ರದ “ಬಿಳಿ ಗಿರಿ…. ರಂಗಯ್ಯ… ನೀನೇ ಕೇಳಯ್ಯ..” ಎಂಬ ಹಾಡಿನ ಮೂಲಕ ಚಿತ್ರಿಸಿದ್ದಾರೆ.
ಬೇಂದ್ರೆಯವರ ಇನ್ನೊಂದು ಗೀತೆ “ಉತ್ತಧ್ರುವದಿಂ ಧಕ್ಷಿಣಧ್ರುವಕೂ ಚುಂಬಕ ಗಾಳಿಯೂ ಬೀಸುತ್ತಿದೆ” ಈ ಗೀತೆಯನ್ನು ಮಡಿಕೇರಿಯ ರಾಜಸೀಟ್ ಮತ್ತು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರಿಸಿರುವುದು ಸೊಗಸಾಗಿ ಮೂಡಿ ಬಂದಿದೆ. ನವರಾತ್ರಿ ಸಂದರ್ಭದಲ್ಲಿ ಗೊಂಬೆಗಳನ್ನು ಇಡುವುದು ಕರ್ನಾಟಕದ ವಿಶಿಷ್ಟ ಸಂಪ್ರದಾಯ ಇದನ್ನು ಪುಟ್ಟಣ್ಣ ಕಣಗಾಲ್ ಅವರು ‘ಶರಪಂಜರ’ ಚಲನಚಿತ್ರದ “ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ…” ಎಂಬ ಹಾಡಿನ ಮೂಲಕ ಸಮಯೋಚಿತವಾಗಿ ಅಳವಡಿಸಿಕೊಂಡಿರುವುದು ಅನನ್ಯವಾಗಿದೆ. ‘ಶರ ಪಂಜರ’ ಮತ್ತು ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರಗಳಲ್ಲಿ ಕೊಡವರ ವಿಶಿಷ್ಟ ಉಡುಗೆ – ತೊಡುಗೆಯನ್ನು ಜನತೆಗೆ ಪರಿಚಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
‘ಎಡಕಲ್ಲು ಗುಡ್ಡದ ಮೇಲೆ’ ಚಲನಚಿತ್ರವಾಗಿ, ಕಾದಂಬರಿಯಾಗಿ ಬಹಳ ಹೆಸರು ಮಾಡಿದ ಕೃತಿ. ಇದು ಪುಟ್ಟಣ್ಣನವರ ಕೈಯಿಂದ ಇನ್ನೂ ಮಹತಿಯನ್ನು ಪಡೆದುಕೊಂಡಿತು ಎಂದರೆ ತಪ್ಪಿಲ್ಲ. “ವಿರಹ ನೂರು ನೂರು ತರಹ” ಗೀತೆ ಮಡಿಕೇರಿಯ ಮಾಂದಲಪಟ್ಟಿ ಗಿರಿಧಾಮಗಳಲ್ಲಿ ಚಿತ್ರೀಕರಿಸಲ್ಪಟ್ಟಿರುವುದು. “ನಿಲ್ಲು ನಿಲ್ಲೆ ಪತಂಗ ಬೇಡ ಬೇಡ ಬೆಂಕಿಯ ಸಂಗ” ಹಾಡಂತೂ ಹದಿಹರೆಯದ ಮನಸ್ಸುಗಳಿಗೆ ಹೇಳಿಕೊಟ್ಟ ನೀತಿ ಪಾಠದಂತಿದೆ. ಮಲೆನಾಡಿನ ಪುಣ್ಯಕ್ಷೇತ್ರ ಶೃಂಗೇರಿಯಲ್ಲಿಯೂ ಚಿತ್ರೀಕರಣವಾದ ಚಿತ್ರ ‘ಉಪಾಸನೆ’ ಇನ್ನು ಪುಟ್ಟಣ್ಣ ಕಣಗಾಲ್ ಅವರ ಕೊನೆಯ ಚಿತ್ರ ‘ಮಸಣ ಹೂವು’ ಚಿತ್ರದ “ಕನ್ನಡ ನಾಡಿನ ಕರಾವಳಿ … ಕನ್ನಡ ದೇವಿಯ ಪ್ರಭಾವಳಿ…” ಎಂಬ ಅರ್ಥವತ್ತಾದ ಸಾಲುಗಳನ್ನು ಧರ್ಮಕ್ಷೇತ್ರ, ವೈಕುಂಠ. ಕೈಲಾಸಗಳ ಅನುಭೂತಿಯನ್ನು ಕೊಡುವ ಧರ್ಮಸ್ಥಳ, ಉಡುಪಿ, ಗೋಖರ್ಣ ಮೊದಲಾದ ಸ್ಥಳಗಳನ್ನು, ಸುಂದರ ಕರಾವಳಿ ತೀರಗಳನ್ನು ಅಳವಡಿಸಿಕೊಂಡು ಚಿತ್ರೀಕರಿಸಿರುವುದರ ಮೂಲಕ ದಕ್ಷಿಣ ಕನ್ನಡ,ಉಡುಪಿ ಮತ್ತು ಕಾರವಾರ ಜಿಲ್ಲೆಗಳನ್ನು ತೋರಿಸಿರುವ ಶೈಲಿ ಸುಂದರವಾಗಿದೆ.
ಚಿತ್ರದುರ್ಗದ ಕಲ್ಲಿನ ಕೋಟೆ ಎಂದ ಕೂಡಲೆ ಚಿತ್ರರಸಿಕರಲ್ಲಿ ‘ನಾಗರಹಾವು’ ಚಿತ್ರದ “ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರನಾರಿಯ” ಗೀತೆಯಲ್ಲಿ ಚಿತ್ರದುರ್ಗದ ಕೋಟೆಯನ್ನು , ಅದೇ ಚಿತ್ರದ “ಬಾರೇ .. ಬಾರೇ… ಚೆಂದದ ಚೆಲುವಿನ ತಾರೆ” ಗೀತೆಯಲ್ಲಿ ಚಿತ್ರದುರ್ಗದ ಜೋಗಿನಮಟ್ಟಿ ಅರಣ್ಯದ ಬೆಟ್ಟಸಾಲಿನ ಹುಲ್ಲುಗಾವಲನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ‘ರಂಗನಾಯಕಿ’ ಚಿತ್ರದಲ್ಲಿ “ಕನ್ನಡ ನಾಡಿನ ರಸಿಕರ ಮನವ” ಎಂಬ ಹಾಡಿನಲ್ಲಿ ಇತ್ತೀಚೆಗಷ್ಟೇ ಕರ್ನಾಟಕ ಸರಕಾರ ಘೋಷಣೆ ಮಾಡಿರುವ ವಿಜಯನಗರ ಜಿಲ್ಲೆಯ ಹಂಪಿ ಮೊದಲಾದ ಐತಿಹಾಸಿಕ ಸ್ಥಳಗಳನ್ನು ತೋರಿಸಿದ್ದಾರೆ. ವಿಜಯನಗರ ಜಿಲ್ಲೆ ಎಂದರೆ ಬಳ್ಳಾರಿ ಜಿಲ್ಲೆಯ ಸಂಡೂರು ಗಣಿಗಳ ಸಾಲು ನೆನಪಿಗೆ ಬಂದೇ ಬರುತ್ತದೆ. ಅಲ್ಲಿ ಚಿತ್ರೀಕರಣವಾದ ಹಾಡು ಜಿ. ಎಸ್. ಶಿವರುದ್ರಪ್ಪನವರ ರಚನೆಯ ‘ವೇದಾಂತಿ ಹೇಳಿದನು’ ಹಾಡು ಅಮೋಘವಾಗಿ ಚಿತ್ರೀಕರಣಗೊಂಡಿದೆ.. ಬರೆ ಕರ್ನಾಟಕವೇ ಪುಟ್ಟಣ್ಣನವರಿಂದ ದೃಶ್ಯಕಾವ್ಯವಾಗಿರುವುದು ಅಂದರೆ ಅದೂ ತಪ್ಪೇ…! ಕನ್ಯಾಕುಮಾರಿಯನ್ನು “ಭಾರತ ಭೂಶಿರ ಮಂದಿರ ಸುಂದರಿ…..” ಎಂಬ ಗೀತೆಯಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ.
ನನ್ನ ಇಷ್ಟದ ಶರಪಂಜರ
ನನಗೆ ಇಷ್ಟವಾದ ಪುಟ್ಟಣ್ಣನವರು ನಿರ್ದೇಶಿಸಿದ ಮನೋವೈಜ್ಞಾನಿಕ ಹಿನ್ನೆಲೆಯುಳ್ಳ ತ್ರಿವೇಣಿಯವರ ‘ಶರಪಂಜರ’ ಕಾದಂಬರಿ ಇಲ್ಲಿ ಉಲ್ಲೇಖಾರ್ಹ. ಈ ಬರಹದ ಮೊದಲಿನಲ್ಲಿ ಈ ಚಿತ್ರದ ಗೀತೆಗಳನ್ನು ಉಲ್ಲೇಖಿಸಿದೆ. ಆ ಹಿನ್ನಲೆಯಿಂದಲೂ ‘ಶರಪಂಜರ’ ಚಿತ್ರಬ್ರಹ್ಮ ಪುಟ್ಟಣ್ಣಕಣಗಾಲ್ ರವರಿಂದ ಅದ್ಭುತವಾಗಿ ಕೆತ್ತಲ್ಪಟ್ಟ ದೃಶ್ಯ ಶಿಲ್ಪ ಎನ್ನಬಹುದು. ಅಲ್ಲದೆ ತ್ರಿವೇಣಿಯವರ ಸ್ತ್ರೀ ಕೇಂದ್ರಿತ ಹಾಗು ಮನೋವೈಜ್ಞಾನಿಕ ಕಾದಂಬರಿಗಳು ಇವತ್ತಿಗೂ ಹೆಚ್ಚು ಪ್ರಸ್ತುತ ಅನ್ನಿಸುತ್ತವೆ. ಪುಟ್ಟಣ್ಣನವರು ಚಿತ್ರಿಸಲ್ಪಟ್ಟ ಸ್ತ್ರೀತ್ವದ ಅನೇಕ ಒಳಗುಗಳು ದರ್ಶಿಸಲ್ಪಟ್ಟಿವೆ. ಹೆಣ್ಣಿನ ತಲ್ಲಣಗಳು ಅದಕ್ಕೆ ಕಾರಣವಾಗುವ ಕುರುಡು ಸಮಾಜ ಹಾಗು ಅವೇ ಸಂಕೋಲೆಯಲ್ಲಿಯೇ ಬಂಧಿಯಾದ ಮೌಲ್ಯಗಳು, ಮನಸ್ಸುಗಳನ್ನು ಧಿಕ್ಕರಿಸುವ ರೀತಿ ಅತ್ಯಂತ ಹೃದಯಸ್ಪರ್ಶಿ ಹಾಗು ಮಾನವೀಯ ಡಾಕ್ಯುಮೆಂಟರಿಗಳಾಗಿವೆ. ಇದಕ್ಕೆ ಸಾಕ್ಷಿಯಾದ ಮಿನುಗು ತಾರೆ ಕಲ್ಪನಾ ನಟಿಸಿದ ‘ಶರಪಂಜರ’ದ ಕಾವೇರಿಯನ್ನು ನಾವಿಲ್ಲಿ ನೆನಪಿಸಿಕೊಳ್ಳಲೇಬೇಕು. ಸಮಾಜ ಮತ್ತು ಹೆಣ್ಣು ಇಲ್ಲಿಯ ವಸ್ತು. ಅತ್ಯಂತ ಪ್ರೀತಿಸುವ ಗಂಡನೊಂದಿಗೆ ಸಂಸಾರವೆಂಬ ಹಾಯಿ ದೋಣಿಯನ್ನು ತಂಗಾಳಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದ ಕಾವೇರಿಗೆ ಬಿರುಗಾಳಿಯಂತೆ ಬಂದದ್ದೆ ಹಿಸ್ಟೀರಿಯಾ ಕಾಯಿಲೆ. ಕಾಯಿಲೆಯ ಸಂಕೋಲೆಯನ್ನು ಈಕೆ ಬಿಡಿಸಿಕೊಂಡರೂ ಸಮಾಜ ಆಕೆಯನ್ನು ಸಾಮಾನ್ಯ ವ್ಯಕ್ತಿ ಎಂದು ಒಪ್ಪಿಕೊಳ್ಳುವುದಿಲ್ಲ. ಇದು ಅನುವಂಶೀಯವಾಗಿ ಬರುತ್ತದೆ ಎಂದು ಆಕೆಯ ಸಹೋದರಿ ಚಂದ್ರಿಯ ಮದುವೆ ಸಹ ಮುರಿದು ಬೀಳುತ್ತದೆ. ಹುಚ್ಚು ಹಿಡಿದ ಸಮಾಜ ಅವಳ ಪರ ನಿಲ್ಲುವುದಿರಲಿ ಸ್ವತಃ ಗಂಡನೇ ಅವಳ ಪರ ನಿಲ್ಲುವುದುಲ್ಲ. “ಸಮಾಜ ಒಂದು ಅವಕಾಶ ಕೊಟ್ಟಿದ್ದರೆ” ಎಂದು ತನ್ನ ಭಾವನೆಯನ್ನು ಬಸಿದು ಭಿನ್ನವಿಸಿಕೊಂಡರೂ ಕಿವುಡ ಸಮಾಜ ಆಕೆಯನ್ನು ಮತ್ತೆ ಮಾನಸಿಕ ಅಸ್ವಸ್ಥತೆಗೆ ತಳ್ಳುತ್ತದೆ. ಕಾವೇರಿಯ ಕೂಗು ಇಂದಿಗೂ ನಮ್ಮ ಕಿವಿಗಳಲ್ಲಿ “ ನಾ ಬಂದೆ , ನಾ ನೋಡ್ದೆ, ನಾ ಗೆದ್ದೇ” ಎಂಬ ಮಾತುಗಳು ಮಾರ್ಧನಿಸುತ್ತವೆ . ಮನೆಯಲ್ಲಿ ಒಬ್ಬರಿಗೆ ಈ ರೀತಿಯ ಮಾನಸಿಕ ಏರು ಪೇರುಗಳಾದರೆ ಮನೆ ಮಂದಿಗೆಲ್ಲಾ ಹಾಗೆ ಆಗುತ್ತೆ ಎಂಬುದು ಫೂರ್ವಾಗ್ರಹಪೀಡಿತತನ. ಅದನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಅವರನ್ನು ಸಾಮಾನ್ಯರಂತೆ ಬದುಕಲು ಬಿಡಬೇಕು. ಬರೇ ಮಾನಸಿಕ ಅಲ್ಲ ದೈಹಿಕ ಕಾಯಿಲೆಗಳ ಸಂದರ್ಭದಲ್ಲೂ ಹೀಗೆ ಆಗುತ್ತದೆ ಇದರಿಂದ ಅದೆಷ್ಟೋ ಹೆಣ್ಣುಗಳು ನಿರಂತರ ತಲ್ಲಣಗಳನ್ನು ಅನುಭವಿಸುತ್ತಿದ್ದಾರೆ. ಇದನ್ನೆಲ್ಲಾ ಕೇವಲ ಹೆಣ್ಣು ಮಕ್ಕಳು ಅನುಭವಿಸುತ್ತಾರೆ ಎಂದಲ್ಲ ಗಂಡು ಮಕ್ಕಳಿಗೂ ಹೀಗೆ ಆಗುವ ಉದಾಹರಣೆಗಳಿವೆ. ಆ ಉದಾಹರಣೆಯನ್ನು ತ್ರಿವೇಣಿಯವರ ಕಾದಂಬರಿಯಲ್ಲಿಯೇ ತಿಳಿಯಬಹುದು.
‘ಈಡಿಪಸ್ ಕಾಂಪ್ಲೆಕ್ಸ್’ ಛಾಯೆಯನ್ನು ಹೊಂದಿರುವ ಚಿತ್ರ ‘ರಂಗನಾಯಕಿ’. ಈ ಚಿತ್ರದಲ್ಲಿ ವಸ್ತುವನ್ನು ಅಳವಡಿಸಿಕೊಂಡ ತಂತ್ರಗಾರಿಕೆಯಂತೂ ಅನನ್ಯವಾಗಿದೆ. ಇವಿಷ್ಟಲ್ಲದೆ ಹಿಂದಿಭಾಷೆಯಲ್ಲಿ (1978) ‘ಜಹ್ರೀಲಾ ಇನ್ಸಾನ್’, (1981) ‘ಹಮ್ ಪಾಂಚ್’,’, ಮಲೆಯಾಳಮ್ನ ‘ಕಳಜು್ಙಕಿಟ್ಟಿಯ ತಂಗಂ’, ‘ಮೇಯರ್ ನಾಯರ್’, ‘ಸ್ವಪ್ನಭೂಮಿ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತ್ರಿವೇಣಿಯವರ ‘ಬೆಕ್ಕಿನ ಕಣ್ಣು’ ಕಾದಂಬರಿಯನ್ನು ಮಲೆಯಾಳಂನಲ್ಲಿ ‘ಪೂಚಾಕ್ಕಣ್ಣಿ’ ಎಂಬ ಹೆಸರಿನಲ್ಲಿ ನಿರ್ದೇಶಿಸಿದ್ದಾರೆ. ಅಲ್ಲದೆ ‘ಬೆಂಕಿಯಲ್ಲಿ ಅರಳಿದ ಹೂ’ ,’ಮೌನಗೀತೆ’ ಮೊದಲಾದ ಚಿತ್ರಗಳು ತಮಿಳಿಗೆ ರಿಮೇಕ್ ಆಗಿವೆ. ಸೂರ್ಯೋದಯ, ಸೂರ್ಯಾಸ್ತ, ಮರಗಳು, ಮೋಡಗಳು ಒಟ್ಟಾರೆಯಾಗಿ ಪ್ರಕೃತಿಯ ಪರಿಭಾಷೆಗಳನ್ನು ಪ್ರತಿಮೆಗಳನ್ನಾಗಿ ಸಮರ್ಥವಾಗಿ ಬಳಸಿಕೊಂಡ ಅನನ್ಯ ನಿರ್ದೇಶಕ ಜೊತೆಗೆ ವಿಶ್ವ ಮಟ್ಟದಲ್ಲಿ ಕನ್ನಡ ಚಿತ್ರರಂಗ ಗುರುತಿಸಿಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ಪುಟ್ಟಣ್ಣ ಕಣಗಾಲ್ ಅವರಿಗೆ ಸಲ್ಲುತ್ತದೆ. ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರನ್ನು ಕುರಿತು ನನಗಿರುವ ಅಲ್ಪ ಮಾಹಿತಿಯನ್ನು ಹಂಚಿಕೊಂಡಿದ್ದೇನೆ . ಈ ಮೂಲಕ ಪುಟ್ಟಣ್ಣ ಕಣಗಾಲ್ ಅವರಿಗೆ ನನ್ನ ಅಕ್ಷರ ನಮನಗಳು.
ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಚಿತ್ರಗಳು
ನಾಗರ ಹಾವು (೧೯೭೨)
ಸಾವಿರ ಮೆಟ್ಟಿಲು (೧೯೬೮)
ಮಲ್ಲಮ್ಮನ ಪವಾಡ (೧೯೬೯)
ಕಪ್ಪು ಬಿಳುಪು (೧೯೬೯)
ಗೆಜ್ಜೆ ಪೂಜೆ (೧೯೭೦)
ಕರುಳಿನ ಕರೆ (೧೯೭೦)
ಶರಪಂಜರ (೧೯೭೧)
ಸಾಕ್ಷಾತ್ಕಾರ (೧೯೭೧)
ಎಡಕಲ್ಲು ಗುಡ್ಡದ ಮೇಲೆ (೧೯೭೩)
ಉಪಾಸನೆ (೧೯೭೪)
ಶುಭಮಂಗಳ (೧೯೭೫)
ಬಿಳಿ ಹೆಂಡ್ತಿ (೧೯೭೫)
ಕಥಾಸಂಗಮ (೧೯೭೬)
ಕಾಲೇಜು ರಂಗ (೧೯೭೬)
ಫಲಿತಾಂಶ (೧೯೭೬)
ಪಡುವಾರಳ್ಳಿ ಪಾಂಡವರು (೧೯೭೮)
ಧರ್ಮಸೆರೆ (೧೯೭೯)
ರಂಗನಾಯಕಿ (೧೯೮೧)
ಮಾನಸ ಸರೋವರ (೧೯೮೨)
ಧರಣಿ ಮಂಡಲ ಮಧ್ಯದೊಳಗೆ (೧೯೮೩)
ಅಮೃತ ಘಳಿಗೆ (೧೯೮೪)
ಋಣಮುಕ್ತಳು (೧೯೮೪)
ಮಸಣದ ಹೂವು (೧೯೮೫)
ಬೆಳ್ಳಿಮೋಡ – (1966)
ಹಿಂದಿ
ಹಮ್ ಪಾಂಚ್ (೧೯೮೧)
ಜಹ್ರೀಲಾ ಇನ್ಸಾನ್ (೧೯೭೪)
ಮಲಯಾಳಂ
ಸ್ಕೂಲ್‍ಮಾಸ್ಟರ್ ೧೯೬೪
ಕಳಜ್ಞು ಕಿಟ್ಟಿಯ ತಂಗಂ ೧೯೬೪
ಮೇಯರ್ ನಾಯರ್ ೧೯೬೬
ಪೂಚಕಣ್ಣಿ ೧೯೬೬
ಸ್ವಪ್ನ ಭೂಮಿ.೧೯೬೮
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ