- ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! - ನವೆಂಬರ್ 22, 2023
- ಕನ್ನಡ ನಾಟ್ಯ ರಂಗ - ನವೆಂಬರ್ 21, 2023
- ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು - ನವೆಂಬರ್ 1, 2023
ಹೊರನಾಡಿನಲ್ಲಿ ಕನ್ನಡದ ಕುಸುಮಕ್ಕೆ ಇರುವ ಕಂಪು, ಒಳನಾಡಿಗಿಂತ ಒಂದು ತೂಕ ಹೆಚ್ಚೇ. ಹೀಗೆ ನೆಲೆಸಿದ ಕನ್ನಡಿಗರಲ್ಲಿ ಕೆಲವರು ಕೈಗೊಂಡ ಭಾಷೆ ಹಾಗೂ ಕಲಾ ಕ್ಷೇತ್ರದ ಕೈಂಕರ್ಯ ಮುಂದುವರೆದು ಒಂದು ಹೊಸ ಪರಂಪರೆಯನ್ನೂ ಜೊತೆಗೆ ದಂತಕಥೆಯನ್ನೂ ಹುಟ್ಟಿಹಾಕುತ್ತದೆ. ಅಂತಹ ಒಂದು ವಿದ್ಯಮಾನಕ್ಕೆ ಸಾಕ್ಷಿಯಾದದ್ದು ಹೈದರಾಬಾದಿನ ಜನನಿಬಿಡ, ಕೋಟಿ ಎಂಬಲ್ಲಿರುವ ಬ್ಯಾಂಕ್ ಸ್ಟ್ರೀಟ್ ನಲ್ಲಿದ್ದ,ಮಧ್ಯಮ ವರ್ಗದ ಹಳೇ ಕಾಲದ ಹದಿನಾರನೇ ನಂಬರ್ ಮನೆ. ಆ ಪರಂಪರೆಯ ಹೆಸರು ಹೈದರಾಬಾದಿನ ಕನ್ನಡ ನಾಟ್ಯ ರಂಗ.
ಐವತ್ತು ವರ್ಷಗಳ ಹಿಂದೆ ಇಲ್ಲಿ ಉಡುಪಿಯಿಂದ ಹೈದರಾಬಾದಿಗೆ ಉದ್ಯೋಗಕ್ಕೆಂದು ವಲಸೆ ಬಂದ ಅಧ್ಯಾಪಕ ಕುಟುಂಬ ವಾಸವಾಗಿತ್ತು.ಅವರೇ ಕೆರೋಡಿ ಗುಂಡುರಾವ್ ಮತ್ತು ಸುಕನ್ಯ ದಂಪತಿಗಳು. ಒಮ್ಮೆ ಅಕಸ್ಮಾತ್ ಮನೆಗೆ ಬಂದಿದ್ದ ಸ್ನೇಹಿತರೊಬ್ಬರ ಜೊತೆ ಮಾತಾಡುತ್ತಿದ್ದ ಅವರು ಮೂಲ ಊರಿನ ಹಾಗೂ ತಮ್ಮ ತಂದೆಯ ರಂಗಭೂಮಿಯ ನಂಟನ್ನು ನೆನೆಸಿಕೊಂಡು ಮಾತಾಡುವಾಗ, ಇಲ್ಯಾಕೆ ಕನ್ನಡ ನಾಟಕ ಆಡಬಾರದು ಎಂದ ಸ್ನೇಹಿತನ ಸಲಹೆಯ ಮೇರೆಗೆ ಕೆಲಸ ಆರಂಭಿಸಿಯೇ ಬಿಟ್ಟರು. ಕೂಡಲೇ ಸ್ಥಳೀಯ ಕನ್ನಡ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಲಾಯ್ತು. ಆ ದಿನಗಳಲ್ಲಿ ಸುಮಾರು ಇಪ್ಪತ್ತು, ಇಪ್ಪತ್ತೈದು ಸ್ಥಳೀಯ ಕನ್ನಡಿಗರು ಸಂಜೆ ಹೊತ್ತು ಕಾಲೇಜು, ಆಫೀಸು ಮುಗಿಸಿ ಗುಂಡು ರಾವ್ ರ ಮನೆಯ ಚಿಕ್ಕ ರೂಮಿನಲ್ಲೇ ತಾಲೀಮು ನಡೆಸುತ್ತಿದ್ದುದನ್ನು ಕಾಣಬಹುದಿತ್ತಂತೆ. ಇವೆಲ್ಲ ನಡೆದಿದ್ದು ೧೯೬೮ ರಲ್ಲಿ ಅಂದರೆ ಬರೋಬ್ಬರಿ ಐವತ್ತು ಐದು ವರ್ಷಗಳಿಗೂ ಹಿಂದೆ ಎಂದರೆ ಅಚ್ಚರಿಯಾದೀತು. ಹೈದರಾಬಾದಿನ ಕನ್ನಡಿಗರ ದಂತ ಕಥೆ ಕನ್ನಡ ನಾಟ್ಯ ರಂಗ ಹುಟ್ಟಿದ್ದು ಹಾಗೆ.
ಮೂರು ತಿಂಗಳುಗಳ ಅಭ್ಯಾಸದ ಬಳಿಕ ಆರಂಭಗೊಂಡ ನಾಟ್ಯ ರಂಗದ ಮೊದಲ ನಾಟಕ ೧೯೬೮ ರಲ್ಲಿ ‘ರವೀಂದ್ರ ಭಾರತಿ’ ಯ ಹಾಲ್ನಲ್ಲಿ ಪ್ರದರ್ಶಿತಗೊಂಡಿತು. ಪರ್ವತವಾಣಿ ವಿರಚಿತ ನಾಟಕದ ಹೆಸರು ಬಹಾದ್ದೂರ್ ಗಂಡ. ಮೊದಲ ಪ್ರದರ್ಶನದಲ್ಲಿ ಅತಿಥಿಯಾಗಿ ಬಂದವರು ತೆಲುಗಿನ ಮೇರು ನಟರಾಗಿದ್ದ ಅಕ್ಕಿನೇನಿ ನಾಗೇಶ್ವರರಾವ್.
ನೊಂದಾಯಿತ ಸಂಸ್ಥೆಯಾಗಿ ಬೆಳೆದ ನಾಟ್ಯ ರಂಗಕ್ಕೆ ಹೈದರಾಬಾದಿನ ಅಬಿದ್ ನ ತಾಜ್ಮಹಲ್ ಹೋಟೆಲ್ ಉದ್ಯಮಿಗಳಾದ ರಾವ್ ಸಹೋದರರು ಒತ್ತಾಸೆಯಾಗಿ ನಿಂತಿದ್ದರು. ಅಲ್ಲಿಂದ ಮುಂದೆ ನಾಟ್ಯರಂಗ ಹಿಂದಿರುಗಿ ನೋಡಿದ್ದೇ ಇಲ್ಲ. ಸ್ವತಃ ಗುಂಡುರಾವರೇ ಬರೆದು ನಿರ್ದೇಶಿಸಿದ ವಿಷ ಕನ್ಯೆ ಎಂಬ ಚಾರಿತ್ರಿಕ ನಾಟಕ ಹೈದರಾಬಾದು ಅಷ್ಟೇ ಅಲ್ಲದೇ, ಬೆಂಗಳೂರು ಮೈಸೂರು ರಾಯಚೂರು, ಪುಣೆಗಳಲ್ಲೂ ಪ್ರಚಂಡ ಯಶಸ್ಸು ಕಂಡಿತು.
ನಾಟ್ಯ ರಂಗದ ಕಡೆಯಿಂದ ಹೊಯ್ಸಳ ವೀರ ಎರೆಯಂಗ,ಕುಮಾರರಾಮ,ಅಮೋಘವರ್ಷ ನೃಪತುಂಗ , ಎಚ್ಚೆಮ ನಾಯಕ, ಟಿಪ್ಪು ಸುಲ್ತಾನ,ಕಂಠೀರವ,ಕಿತ್ತೂರ ಹುಲಿ,ಹೊಯ್ಸಳೇಶ್ವರ ವಿಷ್ಣುವರ್ಧನ,ನೃಪತುಂಗ ಇತ್ಯಾದಿ ಸಂಗೀತ ಪ್ರಧಾನ ಚಾರಿತ್ರಿಕ ನಾಟಕಗಳಲ್ಲದೆ ಇತರ ಪೌರಾಣಿಕ, ಸಾಮಾಜಿಕ ನಾಟಕಗಳನ್ನೂ ಯಶಸ್ವಿಯಾಗಿ ಪ್ರದರ್ಶಿಸಲಾಯ್ತು. ಅಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸುಕನ್ಯಾ ಗುಂಡುರಾವ್ ಅವರ ‘ರಾಜ ಮುಕುಟ’ ಎಂಬ ಎಲ್ಲ ಮಹಿಳೆಯರೇ ನಿರ್ದೇಶಿಸಿ,ನಟಿಸಿದ ನಾಟಕ ಕೂಡ ಆಡಲಾಗಿತ್ತು ಎಂಬುದು ಮೆಚ್ಚುಗೆಗೆ ಅರ್ಹವಾದದ್ದು. ತಮ್ಮ ನಾಟಕಗಳಲ್ಲಿ ಸಂಗೀತ ಸಂಯೋಜನೆಗಳನ್ನು ಸ್ವತಃ ಗುಂಡುರಾಯರೇ ಮಾಡಿದ್ದರು. ನಾಟ್ಯ ರಂಗದ ಪ್ರದರ್ಶನಗಳೆಲ್ಲ ನಡೆಯುತ್ತಿದ್ದುದು ಲಕಡಿ ಕಾ ಪೂಲ್ ಬಳಿಯಿರುವ ರವೀಂದ್ರ ಭಾರತಿಯಲ್ಲಿ.
೨೦೧೦ ರಲ್ಲಿ ‘ಸನ್ಮಾನ ಸುಖ’ ಎಂಬ ನಾಟಕ ನಿರ್ದೇಶಿಸುವಾಗ ಗುಂಡುರಾಯರ ವಯಸ್ಸು ೮೮. ಅದಾಗಿ ಆರುತಿಂಗಳಲ್ಲಿ ಅವರು ದೈವಾಧೀನರಾದರು. ನಂತರ ನಾಟ್ಯರಂಗವನ್ನು ಅವರ ಕುಟುಂಬ, ಇತರ ಸಂಸ್ಥೆಯ ಸದಸ್ಯರು, ಹಾಗೂ ಆಡಳಿತ ಮಂಡಳಿ ಮುಂದುವರೆಸಿಕೊಂಡು ಹೋಗುತ್ತಿದೆ. ಇದೀಗ ಅದಕ್ಕೆ ಹೊಸ ಪೀಳಿಗೆ ಸೇರಿ ಕೆಲಸ ಮಾಡುವ ಅವಶ್ಯಕತೆ ಇದೆ. ಪ್ರಸ್ತುತ ಸಂಘದ ನೇತೃತ್ವ ವಹಿಸಿದವರು ಸುಪ್ರಭಾತ ಹೋಟೆಲ್ ಉದ್ಯಮಿಗಳಾದ ಮಾರನಕಟ್ಟೆ ಕೃಷ್ಣ ಮೂರ್ತಿಯವರು.
ನಿಮಗೆ ಇನ್ನೊಂದು ವಿಷಯ ಹೇಳಬೇಕು. ಕನ್ನಡ ನಾಟ್ಯ ರಂಗ ಹೇಗೆ ರಂಗಭೂಮಿಯ ವಿಷಯದಲ್ಲಿ ನಿಸ್ವಾರ್ಥ ವಾಗಿ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಒಂದು ಅಂಶ ಗಮನಿಸಬೇಕು. ಮುಂಚಿನಿಂದಲೂ ತಾವು ಆಡಿದ ನಾಟಕ ಅಷ್ಟೇ ಅಲ್ಲದೇ, ನೀನಾಸಂ,ಪ್ರಭಾತ್,ರಂಗಾಯಣ ಸೇರಿದಂತೆ ನಾಡಿನ ಇತರ ಹವ್ಯಾಸಿ ಹಾಗೂ ವೃತ್ತಿಪರ ನಾಟಕ ಮಂಡಳಿಗಳನ್ನೂ, ಸಂಗೀತ ಕಾರರನ್ನೂ, ಕೆರೆಮನೆ, ಕಟೀಲು, ಯಕ್ಷರಂಗ,ಧರ್ಮಸ್ಥಳ ಮುಂತಾದ ಯಕ್ಷಗಾನ,ಬಯಲಾಟ ಮಂಡಳಿಗಳನ್ನೂ ಆಹ್ವಾನಿಸಿ ಹೈದರಾಬಾದಿನಲ್ಲಿ ಪ್ರದರ್ಶನಕ್ಕೆ ಆಸ್ಪದ ಕೊಟ್ಟದ್ದು. ಹೀಗೆ ೧೯೬೮ ರಿಂದ ನಡೆದು ಬಂದ ನಾಟ್ಯ ರಂಗದ ಚಟುವಟಿಕೆಗಳಲ್ಲಿ ತೀರಾ ಇತ್ತಿಚಿನದ್ದು ಅಂದರೆ ಮೊನ್ನೆ ಶನಿವಾರ ನವೆಂಬರ್ 18 ರಂದು ಅದೇ ಮಹೋನ್ನತ ರವೀಂದ್ರ ಭಾರತಿ ಕಲಾಕ್ಷೇತ್ರದಲ್ಲಿ ನಡೆದ ನಾಟಕ ಮಲ್ಲಿಗೆ ಪ್ರದರ್ಶನದಲ್ಲಿ ನಾನು ಕೂಡ ಪ್ರೇಕ್ಷಕನಾಗಿ ಪಾಲ್ಗೊಂಡಿದ್ದು ಅವಿಸ್ಮರಣೀಯ. ಅದಕ್ಕಾಗಿ ನಾಟ್ಯ ಮಂಡಳಿಯಲ್ಲಿ ಸಕ್ರಿಯರಾಗಿರುವ ಕೆರೋಡಿ ಗುಂಡುರಾವ್ ಅವರ ಸೊಸೆ ಸುಮತಿ ನಿರಂಜನ ಹಾಗೂ ಮಿತ್ರ ಮಹಾದೇವ ಭಟ್ ಕಾನತ್ತಿಲ ಅವರಿಗೆ ಆನಂತ ಧನ್ಯವಾದಗಳು. ಕನ್ನಡ ನಾಟ್ಕ ಇನ್ ತೆಲುಗು ದೇಶಂ ? ಸಾಧ್ಯವೇ ಎಂಬ ಸಂದೇಹಕ್ಕೆ ಉತ್ತರವಾಗಿರುವ ಕನ್ನಡ ನಾಟ್ಯ ರಂಗ ಇನ್ನಷ್ಟು ಬೆಳೆಯಲಿ ಹಾಗೂ ಎಲ್ಲ ಸಹೃದಯಿಗಳು ಕೈಜೋಡಿಸುವಂತಾಗಲಿ ಎಂಬ ಆಶಯಗಳೊಂದಿಗೆ.
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಪು.ತಿ.ನ.ರಿಗೆ ನುಡಿ ನಮನ