- ಕನ್ನಡ ವಿಭಾಗದಲ್ಲಿ ಅರಳಿರುವ ಗ್ರಂಥ ಕುಸುಮಗಳು - ಸೆಪ್ಟೆಂಬರ್ 10, 2021
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಅಧ್ಯಯನ, ಸಂಶೋಧನೆ, ಅಧ್ಯಾಪನದೊಂದಿಗೆ ಪ್ರಕಟಣೆಯ ಕಾರ್ಯದಲ್ಲಿಯೂ ಮುಂಚೂಣಿಯಲ್ಲಿದೆ. ಸಾಹಿತ್ಯ ರಚನೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದರ ಜೊತೆಜೊತೆಗೆ ಸಮಕಾಲೀನ ಕನ್ನಡ ಸಾಹಿತ್ಯಕ್ಕೆ ಸ್ಪಂದಿಸುತ್ತ ಬಂದ ಕನ್ನಡ ವಿಭಾಗ ಅನೇಕ ಮಹತ್ವದ ಶೋಧ ಕೃತಿಗಳನ್ನು ಪ್ರಕಟಿಸಿ ಮುಂಬಯಿಯ ಸಾಹಿತ್ಯ ವಲಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇಲ್ಲಿ ಪ್ರಕಟವಾದ ಪ್ರತಿಯೊಂದು ಕೃತಿಗಳು ಅನೇಕ ಕಾರಣಗಳಿಂದ ಮೌಲಿಕವಾಗಿವೆ.
ಕನ್ನಡ ವಿಭಾಗದ ಪ್ರಕಾಶನದ ಆದ್ಯಕರ್ತರು ಶ್ರೀನಿವಾಸ ಹಾವನೂರರು. 1986ರಲ್ಲಿ ಶ್ರೀ ರಂಗರ ‘ಭಾರತೀಯ ರಂಗಭೂಮಿ’ ವಿಭಾಗ ಪ್ರಕಟಿಸಿದ ಮೊಟ್ಟ ಮೊದಲನೆಯ ಕೃತಿ. ತದನಂತರದಲ್ಲಿ ಅನೇಕ ಮಹತ್ವದ ಕೃತಿಗಳು ಬೆಳಕು ಕಂಡಿದ್ದು ಇದುವರೆಗೆ ವೈವಿಧ್ಯಮಯವಾದ 76 ಕೃತಿಗಳು ಕನ್ನಡ ವಿಭಾಗದಿಂದ ಪ್ರಕಟಗೊಂಡಿವೆ.
ಸಂಶೋಧನ ಕೃತಿಗಳು:– ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಿಭಿನ್ನ ವಿಷಯಗಳ ಕುರಿತು ಮಹತ್ವದ ಸಂಶೋಧನೆಗಳು ನಡೆದಿವೆ. ಇಲ್ಲಿ ಪ್ರಕಟವಾದ ಸಂಶೋಧನ ಗ್ರಂಥಗಳನ್ನು ಎರಡು ರೀತಿಯಲ್ಲಿ ವಿಭಾಗಿಸಬಹುದು. ಒಂದು ಪಿಎಚ್.ಡಿ ಮಹಾಪ್ರಬಂಧಗಳು ಹಾಗೂ ಇನ್ನೊಂದು ಇತರ ಸಂಶೋಧನ ಕೃತಿಗಳು.
ಮಹಾಪ್ರಬಂಧಗಳು:-ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಸದಾ ಕ್ರಿಯಾಶೀಲವಾಗಿದ್ದು ಸಾಹಿತ್ಯವಲಯದಲ್ಲಿ ಇದು ಮಹತ್ತರವಾದ ಕಾರ್ಯನಿರ್ವಹಿಸುತ್ತಾ ಬಂದಿದೆ. ಪಿಎಚ್.ಡಿ ಎನ್ನುವುದು ಕೇವಲ ಪದವಿಗಾಗಿ ಮಾತ್ರವಾಗಿರದೇ ವಿದ್ಯಾರ್ಥಿಗಳು ಕಷ್ಟ ಪಟ್ಟು ಸಿದ್ಧಪಡಿಸಿದ ಅದೆಷ್ಟೋ ಮಹಾಪ್ರಬಂಧಗಳು ಮೂಲೆಗುಂಪಾಗುವುದನ್ನು ಕಾಣುತ್ತೇವೆ. ಅಂತಹುದರಲ್ಲಿ ಕನ್ನಡ ವಿಭಾಗದ ಮಹತ್ವದ ಮಹಾಪ್ರಬಂಧಗಳು ಪ್ರಕಟಗೊಂಡು ಸಾರಸ್ವತ ವಲಯದಲ್ಲಿ ವಿದ್ವಾಂಸರ, ಸಂಶೋಧಕರ ಮೆಚ್ಚುಗೆಯನ್ನು ಪಡೆದಿದೆ ಎನ್ನುವುದು ಹೆಮ್ಮೆಯ ವಿಷಯ.
ಹೊಸಗನ್ನಡ ಸಾಹಿತ್ಯದ ಆದ್ಯ ಕಾದಂಬರಿಕಾರರಾದ ಕೆರೂರ ವಾಸುದೇವಾಚಾರ್ಯರ ಬದುಕು ಮತ್ತು ಬರಹಗಳ ಸಂಶೋಧನ ಮಹಾಪ್ರಬಂಧವನ್ನು ಡಾ.ಪಿ.ಜಿ.ಮುದ್ಗಲ್ ಅವರು ರಚಿಸಿದ್ದಾರೆ. ಡಾ.ವಿಶ್ವನಾಥ ಕಾರ್ನಾಡರ “ತುಳುವರ ಮುಂಬಯಿ ವಲಸೆ”, ಡಾ.ಸುಬ್ಬಣ್ಣ ರೈ ಅವರ ‘ದಕ್ಷಿಣ ಕನ್ನಡ ಜಿಲ್ಲೆಯ ಐತಿಹ್ಯಗಳು”, ಡಾ ಮಣಿಮಾಲಿನಿ ಅವರ ” ದ್ರೌಪದಿ ಸಮೀಕ್ಷೆ”, ಡಾ.ಸುನೀತಾ ಶೆಟ್ಟಿ ಅವರ “ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ”, ಡಾ.ಜಿ.ಎನ್.ಉಪಾಧ್ಯ ಅವರ ‘ಗೋದಾವರಿವರಂ ಇರ್ದ ಕನ್ನಡ ನಾಡು’, ಡಾ. ಸುನೀತಿ ಉದ್ಯಾವರ ಅವರ ” ವಾಗ್ಮಯ ಆರಾಧಕ ಕಡೆಂಗೋಡ್ಲು ” ಡಾ.ಭರತ್ ಕುಮಾರ್ ಪೊಲಿಪು ಅವರ “ಕನ್ನಡ ರಂಗಭೂಮಿ ತೌಲನಿಕ ಅಧ್ಯಯನ”, ಡಾ. ಈಶ್ವರ ಅಲೆವೂರು ಅವರ ” ಕನ್ನಡ ವಾಗ್ಮಯಕ್ಕೆ ವಿಶುಕುಮಾರ ಕೊಡುಗೆ”, ಡಾ. ಮಮತಾ ರಾವ್ ಅವರ ” ಮುಂಬಯಿ ಕಥಾ ಸಾಹಿತ್ಯ”, ‘ಡಾ.ಮೇಧಾ ಕುಲಕರ್ಣಿ ಅವರ ‘ಮಹಾರಾಷ್ಟ್ರ ಕರ್ನಾಟಕದ ದೇವಾನುದೇವತೆಗಳು’ ,ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ‘ಮುಂಬಯಿ ಕನ್ನಡಿಗರ ಸಿದ್ಧಿ ಸಾಧನೆಗಳು’, ಡಾ. ದಾಕ್ಷಾಯಣಿ ಯಡಹಳ್ಳಿ ಅವರ ‘ಮೀರಾಬಾಯಿ ಹಾಗೂ ಅಕ್ಕಮಹಾದೇವಿ-ಒಂದು ತೌಲನಿಕ ಅಧ್ಯಯನ’, ಡಾ.ಸಿ.ಆರ್. ಶ್ಯಾಮಲಾ ಅವರ ‘ಪೂರ್ವ ಕರ್ನಾಟಕದ ಪಾಳಯಗಾರರು’, ಡಾ.ರಾಜೇಶ್ವರಿ ಎಂ. ಆರ್ ಅವರ ‘ಶ್ರೀನಿವಾಸ ಹಾವನೂರು ಅವರ ಬದುಕು ಬರಹ’, ಡಾ. ಮನೋನ್ಮನಿ ಅವರ ‘ವಚನ ಸಾಹಿತ್ಯದ ಓದಿನ ವಿಭಿನ್ನ ನೆಲೆಗಳು’ ಮೊದಲಾದ ಮೌಲಿಕ ಕೃತಿಗಳು ಪಿಎಚ್.ಡಿ ಸಂಶೋಧನ ಮಹಾಪ್ರಬಂಧಗಳು. ಇವು ಕೃತಿರೂಪದಲ್ಲಿ ಬೆಳಕು ಕಂಡಿದ್ದು ಪ್ರತಿಯೊಂದು ಕೃತಿಗಳು ಮಹತ್ವದ್ದಾಗಿದ್ದು ಉತ್ತಮ ಆಕರಗ್ರಂಥಗಳೂ ಆಗಿವೆ.
ಇತರ ಸಂಶೋಧನ ಗ್ರಂಥಗಳು:- ಇನ್ನು ಕೆಲವು ಶೋಧ ಕೃತಿಗಳು ಭಿನ್ನತೆಯಿಂದ ಕೂಡಿದ್ದು ಆ ಕೃತಿಗಳು ಕನ್ನಡ ವಿಭಾಗದ ಪ್ರಕಟಣೆಯಾಗಿದೆ ಎನ್ನಲು ಅಭಿಮಾನವೆನಿಸುತ್ತದೆ. ಡಾ.ಎಂ.ಎಂ.ಕಲಬುರ್ಗಿ ಅವರ ಮಹಾರಾಷ್ಟ್ರದ ಕನ್ನಡ ಶಾಸನಗಳು’, ಡಾ.ತಾಳ್ತಜೆ ವಸಂತ ಕುಮಾರ್ ಅವರ ‘ ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ’, ಡಾ.ಜ್ಯೋತ್ಸ್ನಾ ಕಾಮತ್ ಅವರ ‘ಕರ್ನಾಟಕ ಶಿಕ್ಷಣ ಪರಂಪರೆ’, ಡಾ.ಹಂಪನಾ ಅವರ ‘ಶಾಸನಗಳಲ್ಲಿ ಎರಡು ವಂಶಗಳು’, ಡಾ. ತಾಳ್ತಜೆ ವಸಂತ ಕುಮಾರ್ ಅವರ ‘ಸಂಶೋಧನ ರಂಗ’ ಡಾ.ಜಿ.ಎನ್.ಉಪಾಧ್ಯ ಅವರ ‘ಗೋದಾವರಿವರಂ ಇರ್ದ ಕನ್ನಡನಾಡು’, “ಸಿದ್ಧರಾಮನ ಸೊನ್ನಲಿಗೆ”, ‘ಮಹಾರಾಷ್ಟ್ರ ಕರ್ನಾಟಕ ಆದಾನ-ಪ್ರದಾನ”, ಅನುಭಾವ ಸಾಹಿತ್ಯದ ವಿಭಿನ್ನ ನೆಲೆಗಳು”. ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು, ‘ಕನ್ನಡ ವೃತ್ತಾಂತ’, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ‘ಕನ್ನಡ ಕಾರಣ ಪುರುಷರು’ ಡಾ.ನೀಲಾಂಬಿಕಾ ಪೋಲಿಸ್ ಪಾಟೀಲ ಅವರ ‘ ಜನಪದ ಜ್ಯೋತಿ ಶರಣಬಸವ’ ಹೀಗೆ ಸಂಶೋಧನೆಗೆ ಸಂಬಂಧಿಸಿದ ಮಹತ್ವದ ಗ್ರಂಥಗಳು ಕನ್ನಡ ವಿಭಾಗದಿಂದ ಬೆಳಕಿಗೆ ಬಂದಿರುವುದು ಅಭಿಮಾನದ ಸಂಗತಿ.
ವಿಮರ್ಶಾ ಕೃತಿಗಳು:-
ಕನ್ನಡ ವಿಭಾಗ ಹಲವು ವಿಮರ್ಶಾ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಸಿ.ಎನ್.ರಾಮಚಂದ್ರನ್ ಅವರ “ಸ್ವರೂಪ ವಿಮರ್ಶೆ”, ಡಾ. ತಾಳ್ತಜೆ ವಸಂತ ಕುಮಾರ್ ಅವರ “ಮುತ್ತಿನ ಸತ್ತಿಗೆ” ವಿಮರ್ಶಕರ ಗಮನ ಸೆಳೆದ ಮಹ್ಜತ್ವದ ವಿಮರ್ಶಾ ಕೃತಿಗಳಾಗಿವೆ.
ಡಾ.ಜಿ.ಎನ್.ಉಪಾಧ್ಯ ಅವರ , ” ಬೊಗಸೀ ತುಂಬಾ ಭಕ್ತಿ ಹಿಡಿದು”, “ಅನುಭಾವ ಸಾಹಿತ್ಯದ ವಿಭಿನ್ನ ನೆಲೆಗಳು, ಕರ್ನಾಟಕ ಸಂಸ್ಕೃತಿ ಹೆಜ್ಜೆ ಹಾದಿ, ಹೊಸಗನ್ನಡ ವಾಗ್ಮಯ ವಿಹಾರ, ‘ಜೀವಿ’ ಸಮಗ್ರ ಸಾಹಿತ್ಯ ಇತ್ಯಾದಿ ಮಹತ್ವದ ಕೃತಿಗಳನ್ನು ರಚಿಸಿ ವಿಮರ್ಶೆಯ ವಿಭಿನ್ನ ಆಯಾಮಗಳನ್ನು ಸೊಗಸಾಗಿ ನಿರೂಪಿಸಿದ್ದಾರೆ.
ವ್ಯಕ್ತಿ ಚಿತ್ರಗಳು:- ಮುಂಬಯಿಯಲ್ಲಿ ಕನ್ನಡ ಕಟ್ಟಿ ಬೆಳೆಸುವಲ್ಲಿ ಮಹತ್ತರವಾದ ಯೋಗದಾನವನ್ನು ನೀಡಿದ ಸಾಧಕರ ಸಾಧನೆಯನ್ನು ಕೃತಿರೂಪದಲ್ಲಿ ಕನ್ನಡ ವಿಭಾಗ ಪ್ರಕಟಗೊಳಿಸಿದೆ. ಅದರಲ್ಲಿ ಪ್ರಮುಖವಾದವುಗಳು ಹರಸಾಹಸ ಸಂಘಟಕರಾದ ಎಚ್,ಬಿ.ಎಲ್.ರಾವ್ ಅವರ ಕುರಿತಾದ ಕಲಾತಪಸ್ವಿ ಎಚ್.ಬಿ.ಎಲ್.ರಾವ್, ‘ಅಂಕಣ ಸಾಹಿತ್ಯದ ಅಂದ ಹೆಚ್ಚಿಸಿದ ಎಂ.ಬಿ.ಕುಕ್ಯಾನ್”, ‘ಜೀವಿ ಸಮಗ್ರ ಸಾಹಿತ್ಯ’, ‘ಕ್ರಿಯಾಶೀಲ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆ’, ಡಾ.ಎಸ್.ಎಂ.ಹೀರೇಮಠ ಜೀವನ ಸಾಧನೆಯನ್ನು ಬಿಂಬಿಸುವ ‘ಹಿಂದಣ ಹೆಜ್ಜೆಯನರಿದಲ್ಲದೆ ಇಂದಿನ ಹೆಜ್ಜೆಯ” ಮೊದಲಾದ ಕೃತಿಗಳು ಡಾ.ಜಿ.ಎನ್.ಉಪಾಧ್ಯ ಅವರ ಲೇಖನಿಯಿಂದ ಬಹಳ ಸೊಗಸಾಗಿ ನಿರೂಪಿಸಲ್ಪಟ್ಟಿದೆ. ಮರಾಠಿ ಲೇಖಕರಲ್ಲಿ ಮಹತ್ವದ ಲೇಖಕರಾದ ಪು.ಲ.ದೇಶಪಾಂಡೆ ಅವರ ಜೀವನ ಸಾಧನೆ, ಡಾ ರಮಾ ಉಡುಪ ಅವರು ರಚಿಸಿರುವ ಮುಂಬಯಿಯ ಹಿರಿಯ ವಿಜ್ಞಾನಿ, ಸಾಹಿತಿ ಡಾ.ವ್ಯಾಸರಾವ್ ನಿಂಜೂರು ಅವರ ಬದುಕು ಬರಹ ‘ಸಾಹಿತ್ಯ ವಿಜ್ಞಾನ ಸಮನ್ವಯಕ ಡಾ.ನಿಂಜೂರು’, ಗೀತಾ ಮಂಜುನಾಥ್ ಅವರು ಬರೆದಿರುವ ‘ಕಲಾ ಸೌರಭ ಸರೋಜಾ ಶ್ರೀನಾಥ್’, ಡಾ.ಜಿ.ಎನ್.ಉಪಾಧ್ಯ ಹಾಗೂ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ರಚಿಸಿರುವ’ ಬಣ್ಣದ ಮಾಂತ್ರಿಕ ದೇವುದಾಸ ಶೆಟ್ಟಿ’ ಹೀಗೆ ಆಯಾಯ ಕ್ಷೇತ್ರದಲ್ಲಿ ಸಾಧಕರು ಮಾಡಿರುವ ಸಾಹಸ, ಸಾಧನೆಯನ್ನು ಬಿಂಬಿಸುವ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ.
ಅನುವಾದಿತ ಕೃತಿಗಳು:-
ಕನ್ನಡ ವಿಭಾಗ ಮರಾಠಿಯ ಉತ್ತಮ ಕೃತಿಗಳನ್ನು ಅನುವಾದಿಸಿ ಅದನ್ನು ಪ್ರಕಟಿಸಿದೆ. ಈ ಮೂಲಕ ಮರಾಠಿ ಕನ್ನಡ ಭಾಷೆಯ ಸ್ನೇಹ ಸೇತುವಾಗಿ ಕೆಲಸ ಮಾಡುತ್ತಿದೆ. ಪು.ಲ ದೇಶಪಾಂಡೆ ಅವರ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದೆ. ಈ ಕೃತಿಯನ್ನು ಅ.ರಾ.ತೋರೋ ಮತ್ತು ವಿರೂಪಾಕ್ಷ ಕುಲಕರ್ಣಿ ಇವರಿಬ್ಬರೂ ಕನ್ನಡಕ್ಕೆ ಅನುವಾದಿಸಿದ್ದಾರೆ.
ಅಲ್ಲದೆ ಐತಿಹಾಸಿಕವಾಗಿ ಶಿವಾಜಿಯ ಬದುಕಿನ ಘಟನೆಗಳ ಬಗ್ಗೆ ಬೆಳಕು ಚೆಲ್ಲುವ ಅಪೂರ್ವವಾದ ಮರಾಠಿ ಗ್ರಂಥವನ್ನು ಕನ್ನಡ ವಿಭಾಗ ಪ್ರಕಟಿಸಿದೆ. ‘ದೀಪ ಉಜಳೆ ಅಮ್ಚಾಘರಿ’ ಇದು ಕನ್ನಡ ವಿಭಾಗದ ಮಹತ್ವದ ಪ್ರಕಟಣೆ. ಮರಾಠಿ ಓದುಗರಿಗೆ ಅನುವಾಗಲೆಂದು ಹಾಮನಾ ಅವರ ‘ನಮ್ಮ ಮನೆಯ ದೀಪ’ ಎಂಬ ಈ ಕೃತಿಯನ್ನು ಎಸ್.ಪಿ.ಪಾಟೀಲ ಅವರು ಮರಾಠಿಗೆ ಅನುವಾದಿಸಿದ್ದಾರೆ
ಕನ್ನಡ ವಿಭಾಗದ ಸಾಧನೆಯನ್ನು ಬಿಂಬಿಸುವ ಕೃತಿಗಳು:-
ಕನ್ನಡ ವಿಭಾಗ ಈಗ 42ರ ಹರೆಯವನ್ನು ದಾಟಿ ನಿಂತಿದೆ. ಈ 42 ವರ್ಷದಲ್ಲಿ ಕಾಲಕಾಲಕ್ಕೆ ವಿಭಾಗದ ಸಾಧನೆಗಳು ಕೃತಿ ರೂಪದಲ್ಲಿ ದಾಖಲಾಗುತ್ತಾ ಬಂದಿದೆ. ತನ್ನ ಹತ್ತನೆಯ ವರ್ಷದ ಸವಿನೆನಪಿಗಾಗಿ 1927ರಲ್ಲಿ ‘ದಶಮಾನ’ ಎಂಬ ಕೃತಿಯನ್ನು ಹೊರತಂದಿತ್ತು. ಡಾ. ಜಿ.ಡಿ.ಜೋಶಿ ಅವರು ಈ ಕೃತಿಯ ಸಂಪಾದಕರು. ಕನ್ನಡ ವಿಭಾಗ ತನ್ನ ಮೂವತ್ತರ ಹರೆಯದ ಸಂದರ್ಭದಲ್ಲಿ ‘ಅವಲೋಕನ’ ಎಂಬ ಕೃತಿಯನ್ನು ಡಾ.ಜಿ.ಎನ್.ಉಪಾಧ್ಯ ಅವರು ಸಂಪಾದಿಸಿಕೊಟ್ಟಿದ್ದಾರೆ. ಅದೇ ರೀತಿ 35ರ ಸಂಭ್ರಮದಲ್ಲಿಯೂ ಉಪಾಧ್ಯ ಅವರ ಸಂಪಾದಕೀಯದಲ್ಲಿ ‘ಅರಬ್ಬೀ ಕಡಲ ತೀರದಲ್ಲಿ ಕನ್ನಡ ಕಲರವ’, ನಲವತ್ತರ ಸಂಭ್ರಮದಲ್ಲಿ ಕನ್ನಡ ವಿಭಾಗ ಹೀಗೆ ಕಾಲಕಾಲಕ್ಕೆ ಕನ್ನಡ ವಿಭಾಗದ ಸಾಧನೆಯನ್ನು, ಕಾಲಕಾಲದ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡುವ ಈ ಕೃತಿಗಳು ಕನ್ನಡ ವಿಭಾಗದ ಕೈದೀವಿಗೆಯಾಗಿವೆ.
ಆಂಗ್ಲ ಕೃತಿಗಳು:-
ಕಿರ್ಲೋಸ್ಕರ್ ಮನೆತನದವರಾದ ಡಾ. ಮೃದುಲಾ ಕಿರ್ಲೋಸ್ಕರ್ ಅವರು ರಚಿಸಿದ “Aesthetics of Karnataka Kashida” ” ಎಂಬ ಕೃತಿ ಕನ್ನಡ ವಿಭಾಗದಿಂದ ಪ್ರಕಟಗೊಂಡಿದೆ. ಉತ್ತರ ಕರ್ನಾಟಕದ ಕಸೂತಿ ಕಲೆಯ ಬಗ್ಗೆ ಮಾಹಿತಿ ಇರುವ ಈ ಪುಸ್ತಕ ಕನ್ನಡ ವಿಭಾಗದ ಮಹತ್ವದ ಪ್ರಕಟಣೆ. 2010ರಲ್ಲಿ ಡಾ. ಜಿ.ಎನ್.ಉಪಾಧ್ಯ ಅವರು ಸಂಪಾದಿಸಿಕೊಟ್ಟ ‘ಅವಲೋಕನ’ ಈ ಕೃತಿಯು ಆಂಗ್ಲ ಭಾಷೆಯಲ್ಲಿದ್ದು ಕನ್ನಡೇತರರಿಗೆ ಕನ್ನಡ ವಿಭಾಗದ ಸಾಧನೆಯನ್ನು ಅರ್ಥಮಾಡಿಕೊಳ್ಳಲು ಬಹಳ ಅನುಕೂಲವಾಗುವಂತಹ ಕೃತಿಯಾಗಿದೆ. Aurobindo influence on Dr. Gokak ಡಾ ಜೀವಿ ಕುಲಕರ್ಣಿ ಅವರ ಪಿಎಚ್.ಡಿ ಮಹಾಪ್ರಬಂಧವನ್ನು ಕನ್ನಡ ವಿಭಾಗ ಪ್ರಕಟಿಸಿದೆ.
ಸ್ವತಂತ್ರ ಕೃತಿಗಳು:- ನಾಡಿನ ಹಿರಿಯ ವಿದ್ವಾಂಸರ, ಕವಿಗಳ, ಲೇಖಕರ ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಕನ್ನಡ ವಿಭಾಗಕ್ಕೆ ಸಲ್ಲುತ್ತದೆ. ಶಾಕುಂತಲ ನಾಟಕವು ಕನ್ನಡದ ಮೊಟ್ಟ ಮೊದಲನೆಯ ಅನುವಾದಿತ ಕೃತಿ. ಆ ವರೆಗೆ ನಾಲ್ಕು ಬಾರಿ ಪ್ರಕಟಿತಗೊಂಡಿದ್ದ ಈ ಕೃತಿಯನ್ನು 1995ರಲ್ಲಿ ಕನ್ನಡ ವಿಭಾಗವು ಪ್ರಕಟಿಸಿದೆ. ಈ ಕೃತಿಯನ್ನು ಡಾ.ಪ್ರಹ್ಲಾದ್ ಮುದ್ಗಲ್ ಅವರು ಸಂಪಾದಿಸಿಕೊಟ್ಟಿದ್ದಾರೆ. ಇದು ಕನ್ನಡ ವಿಭಾಗದ ವಿಶಿಷ್ಟ ಕೊಡುಗೆ ಎಂದೇ ಹೇಳಬಹುದು. ಶ್ರೀ ರಂಗ, ರಂ.ಶ್ರೀ ಮುಗಳಿ, ಪ್ರೊ.ಎಸ್.ವಿ.ಪರಮೇಶ್ವರ ಭm್ಟ ಅವರ ಸ್ವತಂತ್ರ ಕೃತಿಗಳನ್ನು ಪ್ರಕಟಿಸಿ ಕನ್ನಡ ವಿಭಾಗ ಪ್ರಕಟಣೆಯಲ್ಲಿ ಮಹತ್ವದ ಕಾರ್ಯವೆಸಗಿದೆ. ಕವಿತಾಕೃಷ್ಣ ಮೂರ್ತಿ ಅವರ ಶಿಶು ಸಾಹಿತ್ಯ ‘ಚಿಣ್ಣರ ಚಿಲುಮೆ’ ಕೃತಿಯನ್ನು ಕೂಡ’ ಕನ್ನಡ ವಿಭಾಗ ಹೊರತಂದಿದೆ. ಮಾನವ್ಯ ಕವಿ ಎಂದೇ ಜನಪ್ರಿಯರಾದ ಬಿ.ಎ.ಸನದಿ ಅವರ ‘ಮಾಯಾನಗರಿ’ ಕವನ ಸಂಕಲನ ವಿಭಾಗದ ಮೂಲಕ ಬೆಳಕು ಕಂಡಿದೆ.
ಇತರ ಕೃತಿಗಳು:-
ಕನ್ನಡ ವಿಭಾಗದಿಂದ ಪ್ರತಿವರ್ಷ ಬಿಡುಗಡೆ ಗೊಳಿಸುವ ಕೃತಿಗಳು ಮುಂಬಯಿ ನಗರದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಅಹರ್ನಿಶಿ ಹೋರಾಡುತ್ತಿರುವುದಕ್ಕೆ ಉತ್ತಮ ಸಾಕ್ಷಿ. ಪ್ರೊ.ಎಂ.ರಾಜಗೋಪಾಲಾಚಾರ್ಯರು ಬರೆದ ‘ಶುದ್ಧಾಶುದ್ಧ ಕನ್ನಡ’ ಎಂಬ ಕೃತಿ. ಇದು ಭಾಷಾ ವಿಜ್ಞಾನ ಆಧಾರಿತ ಕೃತಿ. ಹಿರಿಯ ಸಂಶೋಧಕರಾದ ಡಾ ಶ್ರೀನಿವಾಸ ಹಾವನೂರರ ‘ಪತ್ರಗಳು ಚಿತ್ರಿಸಿದ ಗೋವಿಂದ ಪೈ’ ಕೃತಿ ಕನ್ನಡ ವಿಭಾಗದಿಂದ ಪ್ರಕಾಶಗೊಂಡಿದೆ. ಇದು ಗೋವಿಂದ ಪೈ ಅವರ 130 ಪತ್ರಗಳನ್ನೊಳಗೊಂಡ ಸಂಪಾದಕೀಯ ಕೃತಿ. ಡಾ ತಾಳ್ತಜೆ ವಸಂತಕುಮಾರ ಅವರು ತನ್ನ ಮೂರು ದಶಕಗಳಿಗಿಂತಲೂ ಹೆಚ್ಚಿನ ಸಂಶೋಧನೆಯ ಕುರಿತು ಭೋಧನಾನುಭವದಿಂದ ರಚಿಸಿದ ಕೃತಿ “ಸಂಶೋಧನಾ ರಂಗ’ ಸಂಶೋಧಕರಿಗೆ ಉತ್ತಮ ಮಾರ್ಗದರ್ಶನವನ್ನು ನೀಡಬಲ್ಲ ಕೃತಿ. ಇವರ ‘ಭೌದ್ಧಾಯನ’ ಇನ್ನೊಂದು ಮಹತ್ವದ ಕೃತಿ. ಐತಿಹಾಸಿಕ ಕಾಲಘಟ್ಟದ ಬಾಳಿಬೆಳಗಿದ ಭೌದ್ಧ ಧರ್ಮದ ಕುರಿತು ಬರೆದ ಈ ಗ್ರಂಥ ಕನ್ನಡ ವಿಭಾಗದ ಪ್ರಕಟಣೆ. ಮುಂಬಯಿ ಮಹಾನಗರದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಂಭುಲಿಂಗ ಮಸಳಿ ಅವರ ಸಂಪಾದಕೀಯದಲ್ಲಿ ‘ಕನ್ನಡ ಸಂಶೋಧನ ರಂಗ’ ಎಂಬ ಕೃತಿಯೂ, ಡಾ.ವಿಶ್ವನಾಥ ಕಾರ್ನಾಡ್ ಅವರ ಲೇಖನಗಳ ಸಂಗ್ರಹ ‘ಸಮಚಿಂತನ’ವೂ ಕನ್ನಡ ವಿಭಾಗದಿಂದ ಪ್ರಕಟಗೊಂಡಿದೆ.
ಪ್ರಶಸ್ತಿ ಪುರಸ್ಕೃತ ಕೃತಿಗಳು:- ಹೊರನಾಡಿನಲ್ಲಿರುವ ಕನ್ನಡ ವಿಭಾಗಗಳಲ್ಲಿ ಅತಿಹೆಚ್ಚು ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಕನ್ನಡ ವಿಭಾಗಕ್ಕೆ ಸಲ್ಲುತ್ತದೆ. ಇಲ್ಲಿ ಪ್ರಕಟವಾದ ಕೃತಿಗಳು ಪ್ರಶಸ್ತಿಗಳಿಗೂ ಭಾಜನವಾಗಿರುವುದು ಹೆಮ್ಮೆಯ ಸಂಗತಿ.
ಡಾ.ಜ್ಯೋತ್ಸ್ನಾ ಕಾಮತ್ ಅವರ ‘ಕರ್ನಾಟಕ ಶಿಕ್ಷಣ ಪರಂಪರೆ’ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ. ತಾಳ್ತಜೆ ವಸಂತ ಕುಮಾರ್ ಅವರ ‘ಮುತ್ತಿನ ಸತ್ತಿಗೆ’ ಕೃತಿಗೆ 2002 ಗೋರೂರು ಸಾಹಿತ್ಯ ಪ್ರಶಸ್ತಿ, ಭೌದ್ಧಾಯನ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕವಿತಾ ಕೃಷ್ಣ ಅವರ ‘ಚಿಣ್ಣರ ಚಿಲುಮೆ’ ಕವನ ಸಂಕಲನಕ್ಕೆ ‘ಜಿ. ಪಿ. ರಾಜರತ್ನಂ ಪುರಸ್ಕಾರ, ಡಾ.ಜಿ.ಎನ್ ಉಪಾಧ್ಯ ಅವರ ‘ಮಹಾರಾಷ್ಟ್ರ ಕರ್ನಾಟಕ ಆದಾನ ಪ್ರದಾನ ಕೃತಿಗೆ ರತ್ನಾಕರ ಮುದ್ದಣ ಅನಾಮಿಕ ದತ್ತಿ ಬಹುಮಾನ, ಅನುಭಾವ ಸಾಹಿತ್ಯದ ವಿಭಿನ್ನ ನೆಲೆಗಳು ಗ್ರಂಥಕ್ಕೆ ಬೆಟ್ಟದೂರು ಪ್ರತಿಷ್ಠಾನ ಪ್ರಶಸ್ತಿ , ಕರ್ನಾಟಕ ಸಂಸ್ಕೃತಿ ಚಿಂತನ’ ಕೃತಿಗೆ 2013ರ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ದೊರೆತಿರುವುದು ಕೃತಿಕಾರರ ಹಾಗೂ ವಿಭಾಗದ ಪ್ರಕಟಣೆಗೆ ಕಳಸಪ್ರಾಯವಾಗಿದೆ.
ಹೆಚ್ಚಿನ ಬರಹಗಳಿಗಾಗಿ
ಎಸಳು 3 ಮುಂಬಾ ಆಯಿಯ ಮಡಿಲಲ್ಲಿ
ಗೌರವ ಸಂಪಾದಕರ ಮಾತು – ಡಾ. ಜಿ. ಎನ್. ಉಪಾಧ್ಯ
ಬರ್ಮಾ ದೇಶದ ರಾಮಾಯಣ