ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಲಾವೈಭವದ ಸಿರಿ ಭಂಡಾರ ಎಲಿಫೆಂಟಾ ಗುಹಾಲಯ

ಲತಾ ಸಂತೋಷ ಶೆಟ್ಟಿ

ಮುಂಬಯಿಯ ಮಡಿಲಲ್ಲಿ ಅದೆಷ್ಟೋ ಸುಂದರ ವಿಸ್ಮಯ, ವರ್ಣನೆಗೆ ನಿಲುಕದ ತಾಣಗಳಿವೆ. ಪ್ರತಿಯೊಂದು ತಿರುವಿನಲ್ಲೂ ಒಂದೊಂದು ವಿಹಂಗಮ   ನೋಟವಿದೆ. ಕಲಾವೈಭವದ ಸಿರಿ ಭಂಡಾರವನ್ನೆ ಒಡಲಲ್ಲಿ ತನ್ನದಾಗಿರಿಸಿಕೊಂಡಿರುವ ತಾಣಗಳ ಸೊಬಗು , ಐತಿಹಾಸಿಕ ಸ್ಮಾರಕಗಳು, ಶಿಲ್ಪಕಲೆಯ, ವೈಭವವಿದೆ. ವಿಶ್ವದ ಗಮನ ಸೆಳೆದ ಭಾರತೀಯ ವಾಸ್ತು ಶಿಲ್ಪದ ಪ್ರತಿಭೆ, ಜಾಣ್ಮೆಗೆ ಒಂದು ನಿದರ್ಶನ ಎಂಬಂತೆ ದೇಶ- ವಿದೇಶದೆಲ್ಲೆಡೆಯಿಂದ  ಪ್ರವಾಸಿಗರನ್ನು‌ ತನ್ನತ್ತ‌ ಸೆಳೆಯುತ್ತಿರುವ ಎಲಿಫೆಂಟಾ ಗುಹಾಲಯ ಭಾರತದ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದು.

ಇಲ್ಲಿ ಶ್ರೀಮಂತ ಕಲಾವೈಭವ, ಇತಿಹಾಸ, ಸಂಸ್ಕೃತಿ, ಆಧ್ಯಾತ್ಮಿಕ‌ ಕುರುಹುಗಳು ಒಂದಕ್ಕಿಂತ ಒಂದು ಭಿನ್ನವಾದ ಶೈಲಿಯ ದೇವಾಲಯ, ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಸೆಳೆಯುವ ಕಲಾ ಕಣಜವಿದ್ದು ಹೆಜ್ಜೆ ಇಟ್ಟಲೆಲ್ಲ ನೋಡುಗರನ್ನು ಅಚ್ಚರಿಗಳು ಬೆನ್ನು ಹತ್ತುತ್ತವೆ. ಶಿಲಾಮೂರ್ತಿಗಳ ವಿಶಿಷ್ಟ ಸಂಗಮ ಒಟ್ಟು ಚೆಲುವಿಗೆ ಮಾಹಿತಿ ಪೂರಕ ಎನ್ನ ಬಹುದಾದ ಪ್ರವಾಸಿಗರ ಪಾಲಿಗೆ ಬರಿಯ ವಿಹಾರಧಾಮ ಎನ್ನಲಾಗದ ರೋಚಕ, ಕಲಾವೈಭವ ಇಲ್ಲಿದೆ.  ಕೂತೂಹಲಗಳನ್ನು  ಒಳಗೊಂಡಿರುವ ಅಚ್ಚರಿಗಳು ಅನಾವರಣಗೊಳ್ಳುತ್ತವೆ. ಯಾವ ಶಿಲ್ಪಿ ಕೆತ್ತಿದ್ದನೋ ಇನ್ನಾರ ಕಲಾ ಚಾಕಚಕ್ಯತೆಯೊ ಎಂಬಂತೆ ರಚನಾತ್ಮಕ‌ ರೀತಿಯ ಕಲೆಗಾರಿಕೆಗೆ  ‌ಬೆರಗಾಗಲೇಬೇಕು.1970 ರಲ್ಲಿ ಭಾರತ ಸರ್ಕಾರ ಇಲ್ಲಿನ ಸ್ಮಾರಕಗಳ ಪುನರುತ್ಥಾನ ‌ನಡೆಸಿ ಸಾಂಸ್ಕೃತಿಕ ಪ್ರವಾಸಿ ಕೇಂದ್ರವಾಗಿ ಪ್ರಾರಂಭಿಸಿ ನಂತರ 1987 ರಲ್ಲಿ ಯುನೆಸ್ಕೊ ಇದನ್ನು ಗುಹಾಲಯವನ್ನಾಗಿ ದಾಖಲಿಸಿತು.

       ಮುಂಬಯಿ ಗೇಟ್‌ವೇ ಆಫ್ ಇಂಡಿಯಾದಿಂದ ಅರಬ್ಬೀ ಸಮುದ್ರದಲ್ಲಿ ಈಶಾನ್ಯ ದಿಕ್ಕಿಗೆ 10 ರಿಂದ 12  ಕಿಮೀ ಕ್ರಮಿಸಿದರೆ 5 ಗುಹೆಗಳ ಸಮೂಹವಿದ್ದ ದ್ವೀಪ ಸಿಗುತ್ತದೆ. ಅದಕ್ಕೆ ಮೊದಲು ಶ್ರೀ ಹರಿ ಎಂಬ ಹೆಸರಿದ್ದು, ನಂತರ ಅಗ್ರಹಾರಿ ಪುರಿ ಎಂದು, ತದನಂತರ ಘೂರಾಪುರಿ ಯೆಂದು, ಮತ್ತೆ  ಕೆಲಸಮಯದ ನಂತರ ‌ಪೋರ್ಚುಗೀಸರು ಇಲ್ಲಿನ ಬೃಹತ್ ಕಲ್ಲಿನ ಆನೆಯನ್ನು ಕಂಡು ಈ ಸ್ಥಳಕ್ಕೆ  ಎಲಿಫೆಂಟಾ ಕೇವ್ಸ್ ಎಂದು ಹೆಸರಿಟ್ಟರು ಎನ್ನಲಾಗುತ್ತದೆ. ದಾಖಲೆಗಳ ಪ್ರಕಾರ ಈ ದ್ವೀಪಕ್ಕೆ ಘರಾಪುರಿ ಎಂಬ ಹೆಸರಿದೆ. ಘರಿಗಳೆಂದರೆ ಶೈವ ದೇವಾಲಯದ ಪೂಜಾರಿಗಳು ಹಾಗೂ ಪುರಿ ಎಂದರೆ ನಗರ  ಅಥವಾ ಊರು. ಆದರೆ ಯಾರು ಕೂಡ ಇದನ್ನು ಘರಾಪುರಿ ಎನ್ನದಿರುವುದುದೊಂದು ಆಶ್ಚರ್ಯ. ಇದು ಎಲಿಫೆಂಟಾ ಕೇವ್ಸ್ ಎಂದೆ ಪ್ರಚಲಿತ.
       

ಅರುಣೋದಯದ ವೇಳೆ ನಮ್ಮ ಪಯಣದ ಶುಭಾರಂಭವಾಗಿತ್ತು. ಗೇಟ್ ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ  ಬೆಳಿಗ್ಗೆ 9.10 ರಿಂದ ಮಧ್ಯಾನ್ಹ 2.20 ರ ತನಕ ಬೋಟ್ ಗಳು ಸಾಗುತ್ತದೆ.  ಗೇಟ್ ವೇ ಯಿಂದ ಅರಬ್ಬೀ ಸಮುದ್ರದಲ್ಲಿ 10 ಕಿಲೋ ಮೀಟರ್ ದೂರದ ಎಲಿಫೆಂಟಾ ದ್ವೀಪಕ್ಕೆ ಹೋಗಲು ಬೋಟ್ ನಲ್ಲಿ ಒಂದು ಗಂಟೆ ಪಯಣಿಸ ಬೇಕು. ಸಮುದ್ರ ಕಿನಾರ(ದಕ್ಕೆ) ಯಿಂದ ಗುಹಾಲಯಕ್ಕೆ ಹೋಗಲು ಪುಟಾಣಿ ರೈಲು ಇದೆ. ಇಲ್ಲಿ ಇಳಿದು ದೂರದ ಗುಡ್ಡಗಳೆಡೆಗೆ ಕಣ್ಣುಹಾಯಿಸಿದಾಗ ನಾವು ಏರಿ ಸಾಗಲಿರುವ ಬೆಟ್ಟ ಕಣಿವೆಗಳ  ಲೋಕದೆಡೆಗೆ ಮನಸ್ಸು ಜಾರುತ್ತದೆ. ಮೇಲೆ ಏರುತ್ತಿದಂತೆ ಸೂರ್ಯೋದಯದ ಎಳೆ‌ಬಿಸಿಲು , ಹದವಾಗಿ ಬೀಸುವ ತಂಗಾಳಿ ರವಿ ಮೇಲೆರುತ್ತಿದ್ದಂತೆ ಬಿಸಿಲ ಶಾಖಕ್ಕೆ ಇಲ್ಲಿನ ವಾತಾವರಣ ಸೆಖೆಯಿಂದ ಕೂಡಿರುತ್ತದೆ. ಎಲ್ಲಾ ಗುಹೆಗಳಲ್ಲಿ  ಸಂಚರಿಸಲು 5 ಗಂಟೆಗಳಾದರೂ ಬೇಕು. ಸಾಧಾರಣ 2 ಕಿಮೀ ಆದರೂ ನಡೆದು ಸಾಗಲೇ ಬೇಕು .ಕೆಲವೊಮ್ಮೆ ಹೋಗಬೇಕಿರುವ ಸ್ಥಳಕ್ಕಿಂತ‌ ಕ್ರಮಿಸುವ ದಾರಿಯೇ ಆಸಕ್ತದಾಯಕವಾಗಿರುತ್ತದೆ‌ ಎಂಬಂತ ಪಯಣ ಇಲ್ಲಿಯದು. ಬೋಟ್ ನಲ್ಲಿ ಸಮುದ್ರ ಮಧ್ಯ ಸಾಗುವಾಗ ಬೀಸುವ ತಂಗಾಳಿ, ಎತ್ತ ನೋಡಿದರೂ ನೀಲ ಜಲ, ಕಣ್ಣು ಮನಸ್ಸು ದಣಿಯುವಷ್ಟು ನೋಡಿದರು ಮುಗಿಯದ ಸಮುದ್ರ .

ಎಲಿಫೆಂಟಾ ಗುಹಾಲಯಗಳ ಪ್ರಾಂಗಣವನ್ನು‌ ಪ್ರಧಾನ ಗುಹೆಯ ಮೂಲಕ ಪ್ರವೇಶಿಸಿದಾಗ  ಶಿವನ ತ್ರಿಮೂರ್ತಿ ಕಾಣಸಿಗುತ್ತದೆ.  ಇಲ್ಲಿರುವ ಶಿಲ್ಪಗಳಲ್ಲಿ ಅತೀ ದೊಡ್ಡ ದಾಗಿರುವ ರಚನೆ ಇದು .ಕಲ್ಲು ಗೋಡೆಯಲ್ಲಿನ ಉಬ್ಬುಶಿಲ್ಲಾ ಕಲಾನೈಪುಣ್ಯತೆಯನ್ನು ಸಾರುವ ಸದಾಶಿವ ವಿಗ್ರಹ ಇನ್ನೊಂದು ಆಕರ್ಷಣೆ. ಮುಖ ಮಂಟಪ ಹಜಾರ, ಕಂಬಸಾಲು, ಗರ್ಭಗುಡಿ ಹೊಂದಿದ ಕಗ್ಗಲಿನ ದೊಡ್ಡ ಗವಿ ಇದ್ದು ಗುಹೆಯಲ್ಲಿ ದೊಡ್ಡ ಆಕಾರದ ಮಹೇಶ ಮೂರ್ತಿ ಇದ್ದು ಇದರ ಶಿಲ್ಪ ಕೆತ್ತನೆಯ ಬಗ್ಗೆ ಅನೇಕರು ವಿಶೇಷ ಅಧ್ಯಯನದಲ್ಲಿ ತೊಡಗಿದ್ದು ಇದೆ. ಮೂರು ಮುಖಗಳನ್ನು ಹೊಂದಿದ್ದು ಸೃಷ್ಟಿ ಸ್ಥಿತಿ ಮತ್ತು ಲಯಗಳ ಸೂಚಕವೆಂದು ದಾಖಲೆ ಇದೆ.  ಮೂರು ಮುಖಗಳು ವಿಭಿನ್ನ ಭಾವವನ್ನು ಹೊರಸುಸುತ್ತದೆ. ಮಧ್ಯದ ಮುಖ ಶಾಂತ ,ಗಂಭೀರ, ನಿರ್ವಿಕಾರ ಮತ್ತು ನಾರಾಯಣ ಸ್ವರೂಪ ದರ್ಶನವಾದರೆ  ಎಡ ಮತ್ತು ಬಲಗಡೆ ಮುಖಗಳು ಒಂದೊಂದು ಅಕ್ಕ ಪಕ್ಕ ತಿರುಗಿ ಕೊಡಂತೆ ಇದೆ. ಬಲ ಬದಿಯ ಶಿವನ ಮುಖ ಅಘೋರ ಅಥವಾ ಭೈರವತ್ವದ ಪ್ರತಿ ರೂಪ. ತಿರುವಿದ ಮೀಸೆ ಕೋಪದಿಂದ ಊದಿದಂತಿರುವ ಕಣ್ಣು ಗಡ್ಡ ಹಾಗೂ ಸರ್ಪ ಮತ್ತು ರುಂಡ ದಿಂದ ಅಲಂಕೃತವಾದ ದಪ್ಪ ಜಟ್ಟಿ ಗಳಿಂದ  ಹೆಣೆಯಲಾಗಿರುವ ಮುಕುಟ ಸರ್ಪಭರಣ, ಬಹುಉಗ್ರನಂತೆ ಕಾಣುವ ಮೂರ್ತಿ ಗುಂಗುರು ಕೂದಲು, ಮಣಿಹಾರ ವಿಶಾಲ ಎದೆ ತುಂಬು ದೇಹ ,ನೀಳವಾದ ಸೌಷ್ಠತೆಯಿಂದ ಕೂಡಿದ ಅಂಗಾಗಗಳು ಮುಖಚರ್ಯ ಮತ್ತು ಅಂಗ ಭಂಗಿಯ ಸೃಷ್ಟಿ ಗೋಚರ ವಿದ್ದು ಎದೆಯಿಂದ ಮೇಲ್ಭಾಗದವರೆಗೆ ಮಾತ್ರ ಕೆತ್ತಲಾಗಿದೆ. ಉಬ್ಬು ಶಿಲ್ಪ ಕೆತ್ತನೆಗಳ ಸೊಬಗು ಕಲೆ ಹಾಗೂ ವಾಸ್ತು ಶಿಲ್ಪದ ಶ್ರೀಮಂತಿಕೆ ಎತ್ತಿತೋರಿಸುತ್ತದೆ. ಇಲ್ಲಿರುವ ತ್ರಿಮೂರ್ತಿ ಸದಾಶಿವ ವಿಗ್ರಹ ‌ಬ್ರಹ್ಮ, ವಿಷ್ಣು, ಮತ್ತು ಮಹೇಶ್ವರನನ್ನು  ಹೋಲುವಂತಿದ್ದು ರಾಷ್ಟ್ರಕೂಟರ ರಾಜಲಾಂಚನದಂತಿದೆ.

ಎಲಿಫೆಂಟಾ ಗುಹಾಲಯ ಪೂರ್ವ ಭಾಗದ  ಗುಡಿಯಲ್ಲಿ ಕಾರ್ತಿಕೇಯ, ಮಾತೃಕೇಯರು ,ಗಣೇಶ, ದ್ವಾರಪಾಲಕರ ಮೂರ್ತಿಗಳಿವೆ.  ಪಶ್ಚಿಮ ಭಾಗದ ಗುಡಿಯಲ್ಲಿ ಯೋಗಿಶ್ವರ  ಮತ್ತು ನಟರಾಜನ ಮೂರ್ತಿ ಇರಿಸಲಾಗಿದೆ.  ಗುಹೆಗಳ ನಿರ್ಮಾಣ, ವಾಸ್ತುರಚನೆ, ಗುಹೆಯ ವಿವಿಧ ಭಾಗಗಳ ವಿಂಗಡಣೆ, ಸರ್ವತೋಭದ್ರ, ಗರ್ಭಗೃಹದ ವಾಸ್ತು ಎಲ್ಲವೂ ಗುಹಾದೇವಾಲಯದ‌ ನಿರ್ಮಾಣದ ಪರಿಷ್ಕೃತ ಮಾದರಿಗಳಾಗಿದೆ. ಆದರೆ ಹೆಚ್ಚಿನೆಲ್ಲಾ ಶಿಲಾ ಮೂರ್ತಿಗಳು ವಿರೂಪಗೊಂಡಿದ್ದು. ಅರ್ಧನಾರೀಶ್ವರ ಮತ್ತು ಗಂಗಾಧರ ಶಿಲ್ಪಗಳು ಅನೇಕ ಕಥೆಗಳ ಸಾರುವಂತೆಯೂ  ಎಲ್ಲಾ ಸೊಬಗಿನ ನಡುವೆಯೂ ಹೆಚ್ಚಿನ ಶಿಲ್ಪಗಳು ಭಗ್ನವಾಗಿದೆ. ಪೋರ್ಚುಗೀಸರು ಸಿಡಿಮದ್ದಿನಿಂದ ಗುಹೆಗಳಿಗೆ ಧಕ್ಕೆ‌ಮಾಡಿದ್ದಾರೆ ಎನ್ನುತ್ತಾರೆ ಗೈಡ್ .ಆದರೆ ಸ್ಪಷ್ಟ ಮಾಹಿತಿ ಇಲ್ಲಾ. ಅದು  ಅಲ್ಲದೆ ಶಿಲೆಗಳನ್ನು ಭಗ್ನಗೊಳಿಸಿದ್ದು ಪೋರ್ಚುಗೀಸ್ರೇ ಅಥವಾ ಬೇರೆಯವರೇ ಎಂಬ ದಾಖಲೆಯು ಇಲ್ಲ.ಒಂದೆಡೆ ಈ ಕಲಾ ವೈಭವ ಮನಸ್ಸಿಗೆ ಮುದ ನೀಡಿದರೆ ಇನ್ನೊಂದೆಡೆ ಅನ್ಯಾಯವಾಗಿ ಹಾಳುಗೆಡವಿದ್ದಾರಲ್ಲಾ ಎಂಬ ಕೊರಗು ಆವರಿಸುತ್ತದೆ.

     ಭಗ್ನಗೊಂಡ ನಟರಾಜನ  ಶಿವನ ಗಣಗಳು ಅಷ್ಟ ಭುಜದ ಶಿವ  ಮತ್ತು ವಿವಿಧ ದಿಶೆಗೆ ಕಾಲವೆತ್ತಿ ರಾಕ್ಷಸ ಸಂಹಾರದ ಹಲವಾರು ಭಂಗಿಯ ಶಿವನ ಕಲಾಕೃತಿ ಶಿಲ್ಪಿಯ ‌ಕಲ್ಪನೆಗೆ ಮಾರು ಹೋಗಲೇಬೇಕು. ರಾವಣ ಕೈಲಾಸ ಎತ್ತುತ್ತಿರುವ ದೃಶ್ಯ, ರಾವಣನ ಶಕ್ತಿ ಸಾಮರ್ಥ್ಯ ನೋಡಿ ಬೆಚ್ಚು ಬಿದ್ದು ಶಿವನ  ತಬ್ಬಿಹಿಡಿದ ಪಾರ್ವತಿ ಯನ್ನು ಬಿಂಬಿಸುವ ಶಿಲ್ಪ ಕೆತ್ತನೆಗಳು ಅಲಂಕಾರದ ವೈಖರಿ ಶಿಲ್ಪ ‌ಕೆತ್ತನೆ ದಖನ್ರಸಜರು ನಿರ್ಮಿಸಿದ್ದಂತಿದೆ ಎನ್ನುವ  ಮಾಹಿತಿ ಇದೆ.  ಬ್ರಿಟಿಷ್ ಸರಕಾರದ  ಬಳಿಕ ಭಾರತೀಯ ಪುರಾಣ ಇಲಾಖೆ  ಎಲಿಫೆಂಟಾ ಗುಹಾಲಯಗಳನ್ನು  ಸಂರಕ್ಷಣೆಯ ಹೊಣೆ ಹೊತ್ತಿತ್ತು.  ಮೌನವಾಗಿ  ಮೈಮರೆತು ನಿಂತು ನೋಡಿದರೆ .ಅನೇಕ ಪುರಾಣ ಕಥೆ ಗಳ ಸೂಕ್ಷ್ಮ ಮಾಹಿತಿ ನಮ್ಮೊಳಗಿದ್ದರೆ ಆ ಕಥೆಗಳಿಗೆ ಅನುಸಾರವೇ ಶಿಲೆಯಲ್ಲಿ ಮೂಡಿದ ಶಿಲ್ಪಗಳ ಕಥೆಯು ಹೊಂದಾಣಿಕೆಯ ಇನ್ನೊಂದು ಮಗ್ಗುಲು ಎನ್ನವುದು ಅರಿವಿಗೆ ಬರುತ್ತದೆ.
ಎಲಿಫೆಂಟಾ ಗುಹಾಲಯದಲ್ಲಿ ಏಳು ಗುಹೆಗಳಿದ್ದು 5 ಹಿಂದೂ ಮತ್ತು 2 ಬೌದ್ಧ ಧರ್ಮಕ್ಕೆ ಸೇರಿದ್ದು ಶೈವ ಪಂಥದ ಗುಹಾಲಯವೂ ವಿದೆ. ಒಂದು ಗುಡ್ಡದ ಮೇಲೆ ಬುದ್ದ ಸ್ತೂಪದ  ಅವಶೇಷಗಳಿವೆ. ಇದು ಬಹಳ ಹಿಂದೆ ಬೌದ್ಧ ಭಿಕ್ಷುಗಳ ಆಶ್ರಯ ತಾಣವಾಗಿತ್ತೆಂದು ಕೆಲವು ಇತಿಹಾಸಕಾರರು ಉಲ್ಲೇಖಿಸಿದ್ದು ಇದೆ. ಆದರೆ ಸರಿಯಾದ ನಿಖರತೆಯಲ್ಲಿ ಕೊರತೆಗಳಿವೆ. ದ್ವೀಪದಲ್ಲಿ ಕ್ರಿಸ್ತಪೂರ್ವ ಎರಡನೆ ಶತಮಾನದ ಬಳಿಕ‌ ಜನವಸತಿಯಿದ್ದ  ಕುರುಹುಗಳಿವೆ. ಆದರೆ ದೇಗುಲವನ್ನು 6 ರಿಂದ 7 ನೇ ಶತಮಾನದಲ್ಲಿ  ನಿರ್ಮಿಸಲಾಯಿತು ಎಂದು ಅಂದಾಜಿಸಲಾಗಿದೆ.

    ಗುಹೆಯ ದೇವಾಲಯದಲ್ಲಿ ಮೆಟ್ಟಿಲುಗಳನ್ನು ಮೇಲೆ ಬಲಗಾಲನ್ನು ಮೇಲೆ ಎತ್ತಿರುವ  ಸಿಂಹದ  ವಿಗ್ರಹವಿದೆ. ಪ್ರಾಂಗಣದ ಹಿಂದೆ ಇಬ್ಬರು ದೈತ್ಯಾಕಾರದ  ದ್ವಾರಪಾಲಕರ ಬೃಹತ್ ವಿಗ್ರಹಗಳಿವೆ. ಪಶ್ಚಿಮ ಗೋಡೆಯಲ್ಲಿ ಅಷ್ಟಮಾತೆಯರ‌ ವಿಗ್ರಹಗಳನ್ನು ಅದಿಬದಿಯಲ್ಲಿ ಕಾರ್ತಿಕೆಯ ಹಾಗೂ ಗಣಪತಿ ಹಾಗೂ ಬ್ರಹ್ಮ ಮಹೇಶ್ವರ, ವೈಷ್ಣವಿ, ಕೂಮಾರಿ, ವರಾಹಿ, ನರಸಿಂಹ ‌ಹೀಗೆ ತಮ್ಮ ತಮ್ಮ ವಾಹನ ಸಮೇತ ಇರುವಂತೆ ಕೆತ್ತಲಾಗಿದೆ. ಗರುಡನ ಸವಾರಿಯಲ್ಲಿ ವಿಷ್ಣು, ಆನೆಯ‌ ಮೇಲೆರಿ ಇಂದ್ರ. ಋಷಿಗಳು‌ ಮತ್ತು ಸೇವಕರುಗಳನ್ನು ಚಿತ್ರಿಸಲಾಗಿದೆ. ತಾಂಡವ ನಾಡುವ ಶಿವನ ಅದ್ಬುತ ಶಿಲ್ಪವಿದೆ. ಪುರಾಣ ಪಾತ್ರಗಳ ದೇವತೆಗಳ  ಅದ್ಬುತ ಶಿಲಾಲೋಕ ಹಾಳು ಗೆಡವಿದ್ದಾರಲ್ಲ ಅನಿಸುತ್ತದೆ. ಇಲ್ಲಿನ ಹೆಚ್ಚಿನೆಲ್ಲಾ ಮೂರ್ತಿ ಮತ್ತು ಶಿಲ್ಪಗಳನ್ನು ವಿರೂಪಗೊಳಿಸಲಾಗಿದೆ. ದೊಡ್ಡ ಶಿವಲಿಂಗವೂ ಹಾನಿಗೊಂಡಿದೆ.

    ಪಶ್ಚಿಮ ಭಾಗದಲ್ಲಿನ ಗುಡ್ಡದ ಮೇಲಿರುವ 5 ಗುಹೆಗಳ ಸಂಕುಲದಲ್ಲಿ ಹಿಂದೂ ದೇವಾಲಯಗಳಿವೆ. ಇವುಗಳಲ್ಲಿ ಮುಖ್ಯ ಗುಹಾ ಶಿವಾಲಯ .‌ಕೈಲಾಸ ಪರ್ವತವನ್ನು ಎತ್ತಿಹಿಡಿದಿರುವ ರಾವಣ, ಕೈಲಾಸದಲ್ಲಿ ಕುಳಿತಿರುವ  ಶಿವ ಪಾರ್ವತಿ ಜೋಡಿಯಾಗಿ ಸೇರಿಕೊಂಡ ಅರ್ಧ ನಾರಿಶ್ವರ ಮೂರ್ತಿ ಸ್ವರ್ಗದಿಂದ  ಧುಮ್ಮಿಕ್ಕುವ ಗಂಗೆಯನ್ನು ಧರಿಸಿಕೊಂಡ ಗಂಗಾಧರ ಮೂರ್ತಿ, ಶಿವ ಪಾರ್ವತಿ ವಿವಾಹ ದೃಶ್ಯ ತೋರಿಸುವ ಕಲ್ಯಾಣ ಸುಂದರಿ ಮೂರ್ತಿ, ರಾವಣನಿಗೆ  ವರ ನೀಡುತ್ತಿರುವ‌ ಅನುಗ್ರಹ ಮೂರ್ತಿ. ನಟರಾಜ ಯೋಗಮುದ್ರೆಯಲ್ಲಿರುವ ಯೋಗೀಶ್ವರ ವಿಗ್ರಹದ ಕೆತ್ತನೆ ಬಹು ಸೊಗಸಾಗಿದೆ.

      ಇಲ್ಲಿ ಮುಂದೆ ಮುಂದೆ ಸಾಗುತ್ತಿದ್ದಂತೆ ಒಂದೊಂದು ಶಿಲಾ ಮೂರ್ತಿಯು ಪ್ರವಾಸಿಗರನ್ನು ತಡೆದು ನಿಲ್ಲಿಸುತ್ತದೆ.  ಕಲ್ಲಿನಲ್ಲಿ ‌ಕೆತ್ತಿದ ಅಸಂಖ್ಯಾತ ದೇವಾನು ದೇವತೆಗಳ ಚಿತ್ರ ಮೈತಳೆದು ನಿಂತಿದ್ದ ನೋಡಿಯೇ  ಮುಂದೆ ಸಾಗಬೇಕಾಗುವ ಆಕರ್ಷಣೆ ಈ ಮೂರ್ತಿ ಗಳಿಗಿವೆ ಅತ್ಯಂತ ಸೂಕ್ಷ್ಮ ತೆಯಿಂದ  ಕಲೆಗಾರಿಕೆಯ ಕೈಚಳಕದಿ ಮೂಡಿಬಂದ ‌ಉಬ್ಬು ಶಿಲ್ಪವಂತು ಈ ಕೋಟೆ ಕೊತ್ತಲಗಳು, ಗುಹಾಲಯದೊಳಗಿನ ಚರಿತ್ರೆಯನ್ನು  ಅರಿಯಲು  ಭವ್ಯತೆಯ ಗತದ ಗತ್ತನ್ನು ಕಲ್ಲಿನಲ್ಲಿ ಮಾಡಿದ  ಶಿಲ್ಪಗಳು ತೆರೆದಿಟ್ಟು ಸಾರುತ್ತಿದೆ. ಆದರೆ ನನಗನಿಸುವುದು ನಮ್ಮ ಜೀವನ ಶೈಲಿಯಲ್ಲಿ ಇಲ್ಲಿನ ಸಾಂಸ್ಕೃತಿಕ ಚರಿತ್ರೆ ಗತಕಾಲದ ವೈಭವವನ್ನು ಸಾರುವ ಎಲಿಫೆಂಟಾ ಕೇವ್ಸ್ ನಂತಹ  ಪ್ರದೇಶಗಳಿಗೆ  ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೇಟಿಕೊಡವ‌ ಅಭ್ಯಾಸ ‌ಸೇರಿಸಿಕೊಳ್ಳಬೇಕು ಪಾಳುಬಿದ್ದ ಇಲ್ಲಿನ ಗೋಡೆಗಳಲ್ಲಿ ಅನೇಕಾನೇಕ ಕಥೆಗಳು ಅಡಕವಾಗಿದೆ. ವಾಸ್ತು ಶಿಲ್ಪ ವೈಭವದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುವ‌ ಚಿತ್ರಣವಿದೆ.

2 ಬೆಟ್ಟಗಳ ನಡುವೆ ಬುದ್ಧ ಸ್ತೂಪಗಳಿರುವ ಕಾರಣ ಸ್ತೂಪಬೆಟ್ಟ ಎಂದು ಕರೆಯುವ ಬೆಟ್ಟ ಇಲ್ಲಿದೆ.  ಪಶ್ಚಿಮ ಭಾಗದಲ್ಲಿ ಪೋರ್ಚುಗೀಸರ ತೋಪು ಇರುವ ಕಾರಣ  ಆ ಬೆಟ್ಟಕ್ಕೆ ತೋಪುಗಳ ಬೆಟ್ಟ ಎಂದು  ಹೆಸರಿದೆ. ದೇವಾಲಯದ ಸಂಕುಲದಲ್ಲಿ  ಪ್ರತಿಯೊಂದು ಗುಹೆಯ ಒಳಗೆ ಗರ್ಭಗುಡಿ, ಒಂದು ಮುಖ್ಯ ಕೋಣೆ, ಅದಕ್ಕೆ ತಾಗಿಕೊಂಡು ಎರಡು ಉದ್ದದ ಕೋಣೆಗಳು ಹೊರಾಂಗಣ ಮತ್ತು ಪುಟ್ಟ ಗುಡಿಗಳಿವೆ.
        ಈ ದ್ವೀಪಗಳಲ್ಲಿ ಎಲಿಫೆಂಟಾ ಸಾಂಸ್ಕೃತಿಕ ಉತ್ಸವ ನಡೆಯುತ್ತದೆ.  ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸುಮಾರು 30  ವರ್ಷಗಳಿಂದ ಪ್ರತಿ ವರ್ಷ ಪೆಬ್ರವರಿ ತಿಂಗಳಲ್ಲಿ ಈ ಉತ್ಸವ ಏರ್ಪಡಿಸುತ್ತದೆ. 1864 ರಲ್ಲಿ ಈ ದ್ವೀಪದಲ್ಲಿನ  ಆನೆಯ ವಿಗ್ರಹವನ್ನು ಬ್ರಿಟಿಷರು  ಲಂಡನ್ ಗೆ ಸಾಗಿಸಲು ಪ್ರಯತ್ನಿಸಿದಾಗ  ಅದು ಶಿಥಲ ಗೊಂಡಿತು. ಅದರ ತುಂಡುಗಳನ್ನು ಜೋಡಿಸಿ  ‌ಮುಂಬೈನ ವಿಕ್ಟೋರಿಯಾ ಉದ್ಯಾನಕ್ಕೆ ಸಾಗಿಸಲಾಗಿದೆ.‌  1661 ರಲ್ಲಿ ಮದುವೆಯ ವರದಕ್ಷಿಣೆ ಯಾಗಿ‌ ಪೋರ್ಚುಗೀಸರು ಮುಂಬಯಿಯನ್ನು ಬ್ರಿಟಿಷ್ ರಿಗೆ ಬಿಟ್ಟುಕೊಟ್ಟಾಗ  ಮುಂಬಯಿಯ ಸುಪ್ರಸಿದ್ಧ ಗುಹಾಲಯ ‌ಎಲಿಫೆಂಟಾ ದ್ವೀಪ ಕೂಡ ಬ್ರಿಟಿಷ್ ರ ವಶವಾಯಿತು.  ಸುಮಾರು 500 ಅಡಿ ಎತ್ತರದ ಎರಡು ಬೆಟ್ಟಗಳು ಸೇರಿ ಹತ್ತು ಕಿಲೋಮಿಟರ್ ವಿಸ್ತೀರ್ಣದ ದ್ವೀಪ ‌ಇದು.
       ಎಲಿಫೆಂಟಾಕ್ಕೆ ‌ಹೋಗಲು ರೋಪ್ ವೇಗೆ ಕೇಂದ್ರ ಸರಕಾರ ಅಂಗಿಕಾರ ನೀಡಿದ್ದು ಯೋಜನೆ ಪೂರ್ಣ ಗೊಂಡ ಬಳಿಕ ಈ ದೂರವನ್ನು ಕೇವಲ 15 ನಿಮಿಷದಲ್ಲಿ  ತಲುಪ ಬಹುದು .ಎಲಿಫೆಂಟಾ ಗುಹಾಲಯಕ್ಕೆ ‌ಪ್ರತಿ‌ ವರ್ಷ 10 ಲಕ್ಷಕ್ಕೂ ಅಧಿಕ ಪ್ರವಾಸಿಗರು ಬೇಟಿ‌ನೀಡುತ್ತಾರೆ. ಇದು ದೇಶದಲ್ಲಿ ಸಮುದ್ರದ ಮೇಲೆ ಹಾದು ಹೋಗುವ‌ ಮೊದಲ ರೋಪ್‌ವೇ ಆಗಲಿದೆ. ಪ್ರವಾಸೋದ್ಯಮವನ್ನು  ಉತ್ತೇಜಿಸುವ ಈ ಯೋಜನೆ ಯನ್ನು ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಅನುಮತಿಗಳನ್ನು ಅನುಸರಿಸಿ  2023 ರ ‌ಕೊನೆಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
       ರೋಪ್ ವೇ‌ ಮುಂಬಯಿ ನಗರದ  ಆಕರ್ಷಣೆ ಗಳಲ್ಲೊಂದು ಆಗಲಿದೆ. ಒಟ್ಟಿನಲ್ಲಿ ರೋಪ್ ವೇ ಅತೀ‌ ಕಡಿವೇ ಸಮಯದಲ್ಲಿ ಪ್ರವಾಸಿಗರನ್ನು ಎಲಿಫೆಂಟಾ ಕೆವ್ಸ್ ತಲುಪಿಸುತ್ತದೆ. ಎಲಿಫೆಂಟಾ ಗುಹಾಲಯದ ವಿಶೇಷತೆ ವೈವಿಧ್ಯತೆ ಬಗ್ಗೆ ತಿಳಿಯಲು ಇನ್ನೂ ಸಾಕಷ್ಟು ವಿಚಾರಗಳು ಆಗೆದಷ್ಟು ಬಗೆದಷ್ಟು  ಅಲ್ಲಿದೆ . ಬಿಡುವಿದ್ದಾಗ ಒಮ್ಮೆ ಈ ಗುಹಾಲಯ ಸುತ್ತಾಡಿ ಬನ್ನಿ…